ಪ್ರಾಯದಲ್ಲಿ ಸ್ಪರ್ಶವೇ ಸ್ವರ್ಗಸುಖ. ಮುಪ್ಪಾದಾಗ ಕೈಗೆಟುಕದೆ ಕಳೆದು ಹೋದದ್ದರ ನೆನಪೇ ನರಕ. ಅಶ್ವಥ್ ಅವರ ಮುಂದೆ ತಣ್ಣಗೆ ಹೊಂಗೆ ಮರದ ಕೆಳಗೆ ಮಧ್ಯೆ ಮಧ್ಯೆ ಚಹಾ ಕುಡಿಯುತ್ತ ಸಾಕಷ್ಟು ಹೊತ್ತು ಮಾತಾಡಿದ್ದೆ. ಪೋಲಂಕಿ ಅವರು ಹೇಳಿದ್ದನ್ನೆಲ್ಲ ನನಗೆ ಬೇಕಾದಂತೆ ಮರು ಸೃಷ್ಟಿ ಮಾಡಿಕೊಂಡಿದ್ದೆ. `ವುಮೆನ್ ಇನ್ ಲವ್’ ಹಾಗೂ `ಲೇಡಿ ಚಾಟೆರ್‍ಲೀಸ್ ಲವರ್’ ಹೆಸರಿನ ಲಾರೆನ್ಸ್‌ ಕಾದಂಬರಿಗಳ ತಿರುವಿ ಹಾಕಿದ್ದೆ. ಇಡೀಯಾಗಿ ಓದಿರಲಿಲ್ಲ. ಆಗ ಅಷ್ಟು ಪ್ರಬುದ್ಧತೆಯು ಇರಲಿಲ್ಲ. ಯಾರಾದರು ಬಲ್ಲವರು ಒಂದು ಅಪರೂಪದ ಸಂಗತಿಯ ಹೇಳಿದ ಕೂಡಲೆ ಅದನ್ನು ಅರೆದು ಕುಡಿದು ನನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುತ್ತಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂವತ್ತನೆಯ ಕಂತು

ಅಶ್ವಥ್ ನಾರಾಯಣ್ ಅವರ ಕೊಠಡಿಗೆ ಬಂದು ಸೇರಿದ್ದೆ. ಅದು ನ್ಯೂ ಪಿ.ಜಿ. ಹಾಸ್ಟೆಲು. ಸಂಶೋಧನಾ ವಿದ್ಯಾರ್ಥಿಗಳೆ ಅಲ್ಲಿ ಹೆಚ್ಚಿದ್ದರು. ಹುಡುಗಾಟಿಕೆಗೆ ಅವಕಾಶ ಇರಲಿಲ್ಲ. ಅನೇಕರು ಕಾವಿಕೋಳಿಯಂತೆ ಕೂತು ತಮ್ಮ ಪಿಎಚ್.ಡಿ ಅಧ್ಯಯನ ಬರಹಗಳಲ್ಲಿ ಮುಳುಗಿರುತ್ತಿದ್ದರು. ಸಂಜೆ ಮುಂಜಾವಿನಲ್ಲಿ ವಾಕಿಂಗಿಗೆ ಕರೆದೊಯ್ಯುತ್ತಿದ್ದ ಅಶ್ವಥ್ ಅವರಿಂದ ಎಷ್ಟೋ ಪಾಠಗಳ ಆಲಿಸುತ್ತಿದ್ದೆ. ನನ್ನ ಕಿರು ಓದಿನ ಅನುಭವವನ್ನು ಹಂಚಿಕೊಂಡಾಗ ಬೇಷ್ ಎಂದು ಬೆನ್ನು ತಟ್ಟುತ್ತಿದ್ದರು. ಆರ್ನಾಲ್ಡ್ ಟಾಯ್ನಬೀ ಅವರು ವಿಶ್ವಚರಿತ್ರೆಯ ಬಗ್ಗೆ ಬರೆದಿರುವ ರೀತಿಯನ್ನು ನನ್ನ ಮಟ್ಟದ ಗ್ರಹಿಕೆಯಲ್ಲಿ ಹೇಳಿದಾಗ ಬೆರಗಾಗಿದ್ದರು.

`ಅಲ್ಲೋ ನಾವಿನ್ನೂ ನಾಲ್ವಡಿ ಕೃಷಲ್ಣರಾಜ ಒಡೆಯರ್, ಟಿಪ್ಪುಸುಲ್ತಾನ್ ಬಗ್ಗೆ ತಲೆ ಕೆಡಿಸಿಕೊಂಡು ಓದುತ್ತಿದ್ದರೆ ನೀನು ಯಾವಾಗೊ ಟಾಯ್ನಬಿಯ ಓದಿಕೊಂಡೇ… ಯಾವ ಅವರ ಪುಸ್ತಕ ಗೊತ್ತೊ…’

`ಎ ಸ್ಟಡಿ ಆಫ್ ಹಿಸ್ಟ್ರೀ ಅಂತಾ ಹನ್ನೆರಡು ಸಂಪುಟಗಳು ನಮ್ಮ ಲೈಬ್ರರಿಯಲ್ಲೇ ಇದ್ದಾವಲ್ಲಾ ಸಾರ್… ಸುಮ್ನೆ ಇಂಟ್ರುಡಕ್ಷನ್ಸ್ ಓದಿದ್ದೀನಿ ಅಷ್ಟೆ ಸಾರ್’
`ಅವರು ಎಲ್ಲಿಯವರು ಗೊತ್ತೇನೊ…’

`ಗೊತ್ತು ಸಾರ್. 1975ರಲ್ಲಿ ಇಂಗ್ಲೆಂಡಲ್ಲಿ ತೀರಿಕೊಂಡರು. ಚರಿತ್ರೆಯ ಕಾಲ ನಿರ್ಣಯವನ್ನು ತತ್ವಶಾಸ್ತ್ರಜ್ಞನಾಗಿ ನಿರೂಪಿಸಿದ್ದಾರೆ.’
`ನೀನ್ಯಾಕೊ ಇತಿಹಾಸ ಎಂ.ಎ.ಗೆ ಸೇರಲಿಲ್ಲಾ…’

`ನಮ್ಮ ದೇಶದ ಚರಿತ್ರೆಲಿ ಏನಿದೆ ಸಾರ್… ಜಾತಿಗೀತಿ ಕೋತಿ ಕತೆ ಇವೆ ಅಷ್ಟೇ’
`ಅಹಾsss ಅಂಗನ್ನಬಾರದು. ಹನುಮಂತನೂ ಒಬ್ಬ ಮಿಥಿಕ್ ಪರ್ಸನ್ಯಾಲಿಟಿ. ನೋಡುವ ಕ್ರಮವ ಸರಿಪಡಿಸಿಕೊ. ಡಿ.ಡಿ. ಕೊಸಾಂಬಿ ಅವರ `ಮಿಥ್ ಅಂಡ್ ರಿಯಾಲಿಟಿ’ ಪುಸ್ತಕದ ಜೊತೆಗೆ `ರಿಡಲ್ಸ್ ಆಫ್ ರಾಮಕೃಷ್ಣ’ ಓದಿಕೊ. ಅಂಬೇಡ್ಕರ್ ಇಂಡಿಯನ್ ಹಿಸ್ಟ್ರಿಯನ್ನು ಮರು ಸೃಷ್ಟಿಸಿರುವುದ ತಿಳಿದಿಕೊ…’

`ಓಕೆ ಸಾರ್… ಸ್ವಲ್ಪ ಸ್ವಲ್ಪ ಗೊತ್ತು. ಇಂಡಿಯನ್ ಹಿಸ್ಟ್ರಿಯ ಪುಟ ಪುಟಗಳಲ್ಲು ಜಾತಿಯ ನೆರಳಿದೆಯಲ್ಲಾ; ಅದಕ್ಕೆ ಸ್ವಲ್ಪ ಎಡವಿ ಮಾತಾಡಿದೆ;
`ನೀನೇಳೂದು ಸರಿ. ಅದ್ರಲ್ಲಿ ತಪ್ಪಿಲ್ಲ. ನಮ್ಮ ವಿರೋಧಿಗಳೂ ಒಪ್ಪಿಕೊಳ್ಳುವಂತಹ ಬರಹ ಓದು ಮಾತು ನಡತೆ ತರ್ಕ ಸಕಾರಣವಾಗಿ ಇರಬೇಕು. ಇಲ್ಲ ಎಂದರೆ ಅವರ ಪೂರ್ವಗ್ರಹಗಳು ಇನ್ನಷ್ಟು ಬಲಿಷ್ಟವಾಗುತ್ತವೆಯೇ ವಿನಃ ಅವು ನಾಶವಾಗುವುದಿಲ್ಲ.’

`ನಾಗರೀಕತೆಗಳು ನಾಶವಾಗುವುದು ಎದುರಾದ ಚಾರಿತ್ರಿಕ ಬಿಕ್ಕಟ್ಟುಗಳನ್ನು ಎದುರಿಸಲಾರದೆ ಅವು ಸಾಯುತ್ತವೆ. ತಮ್ಮನ್ನು ತಾವೆ ಹತ್ಯೆ ಮಾಡಿಕೊಂಡು ಲಯವಾಗುತ್ತವೆ ಎಂದು ಟಾಯ್ನಬಿ ಹೇಳಿದ್ದಾನಲ್ಲಾ… ನಮ್ಮ ದೇಶದಲ್ಲಿ ಯಾವ ತರದ ನಾಗರೀಕತೆ ಇತ್ತು ಸಾರ್? ಮನುಷ್ಯ ಸಮೂಹಗಳನ್ನು ಜಾತಿಗಳಾಗಿ ಬೇರ್ಪಡಿಸಿ; ಒಬ್ಬರನ್ನೊಬ್ಬರು ಕೊಂದು ಬದುಕುವ ನಂಬಿಕೆ, ಸಂಪ್ರದಾಯ, ಕಟ್ಟಳೆ, ಮೇಲುಕೀಳು… ಇವೆಲ್ಲ ಸಿವಿಲಿಯನ್ ಕಲ್ಚರ್ ಆಗಿದ್ದವೇನು ಸಾರ್…’
`ಆಯ್ತಪ್ಪಾ… ನಿನ್ನ ಪ್ರಕಾರ ಅನ್‌ಸಿವಿಲೈಜ್ಡ್ ಆಗಿದ್ದರು ಎಂದೇ ಒಪ್ಪುವ. ಆದರೆ ಯಾಕೆ ಈ ಅನಾಗರೀಕ ಸಮಾಜಗಳು ಲಯವಾಗದೆ ಈ ತನಕ ಅದೇ ಬದುಕಿನಲ್ಲಿ ಉಳಿದುಕೊಂಡು ಬಂದಿವೆ… ವಿಚ್ ಈಸ್ ದಿ ಕೋರ್ ಎಲಿಮೆಂಟ್ ಟು ಸರ್ವೈವ್ ದೆಮ್ ಇನ್ ದಿ ಪ್ರೋಸೆಸ್ ಆಫ್ ಎಗ್ಸಿಸ್ಟೆನ್ಸ್…’

`ಯೋಚ್ನೆ ಮಾಡಿ ಹೇಳ್ತಿನಿ ಸಾರ್.’

`ಒಂದು ವಿಷ್ಯ ಹೇಳ್ತಿನಿ ಸುಮ್ನೆ ಕೇಳಿಸ್ಕೋ… ನಾಗರೀಕತೆಗಳು ಸ್ಫೋಟಗೊಂಡಿವೆ. ಹಾಗೆ ಆಸ್ಫೋಟಿಸುವ ಪೂರ್ವದಲ್ಲಿ ಮನುಷ್ಯ ಏನೆಲ್ಲ ಸಿದ್ಧತೆಗಳ ಮಾಡಿಕೊಂಡಿದ್ದ? ಅನ್ನ ನೀರು ನೆರಳಿಗಾಗಿ ಎಷ್ಟೊಂದು ಯುಗಗಳ ದಾಟಿ ಬಂದಿದ್ದ? ಹೋರಾಡಿದ್ದ? ಏನೇನು ಯೋಚಿಸಿದ್ದ? ಎಂತೆಂತಹ ಉಪಕರಣ ಉಪಾಯಗಳ ಕಂಡುಕೊಂಡಿದ್ದ? ಇವಕ್ಕೆಲ್ಲ ವಿವರ ಬೇಡ… ಅರ್ಥ ಮಾಡಿಕೋ ಇತಿಹಾಸದಲ್ಲಿ ಗತವನ್ನು ಕೇವಲ ಗತಿಸಿದ್ದು ಎಂದಷ್ಟೇ ಭಾವಿಸಬಾರದು. ಅದು ನಿರಂತರವಾಗಿ ಘಟಿಸುತ್ತಲೇ ನಮ್ಮ ಜೊತೆಯೆ ಬಂದಿರುತ್ತದೆ. ಟಾಯ್ನಬಿ ಕೂಡ ಇದೇ ನಿಲುವಿಗೆ ಬರುತ್ತಾನೆ. ಚರಿತ್ರೆಯು ಸತತವಾಗಿ ಗತ ಮತ್ತು ವರ್ತಮಾನ ಕಾಲಗಳ ಜೊತೆಗಿನ ಸಂವಾದ ಎನ್ನುವುದು ಆ ಕಾರಣಕ್ಕಾಗಿಯೇ…

ನಿನಗೆ ಅನ್ನ ಹೇಗೆ ಸಿಕ್ಕಿತು? ಸಿಕ್ಕ ಕೂಡಲೆ ನಿನ್ನ ವಿಕಾಸ ಏನಾಯಿತು? ಮನುಷ್ಯ ಒಂದೇ ಸಲಕ್ಕೆ ಜಿಗಿದ. ನೆಗೆದ. ಓಡಿದ. ಏನನ್ನೊ ಹಿಡಿದ. ಪಡೆದೆ ಎಂದು ಬೀಗಿದ. ಸುಭದ್ರ ಎಂದು ತೇಗಿದ. ಸೋ ದಿಸ್ ಈಸ್ ವಾಟ್… ಅವನು ಈ ಮನುಷ್ಯ ನಿಸರ್ಗದ ಸಹಜ ವ್ಯವಸ್ಥೆಯ ಮೇಲೆ ಸಾಧಿಸಿದ ಪುಟ್ಟ ದಿಗ್ವಿಜಯ. ಆನಂತರ ಸಾಮ್ರಾಜ್ಯಗಳು ಬಂದವು. ನಾಗರೀಕತೆಗಳು ಕೊಬ್ಬಿದವು. ತನ್ನ ಅಸ್ತಿತ್ವ ವಿಸ್ತರಣೆಗಾಗಿ ಯುದ್ಧ ತಂತ್ರಗಳ ಕರಗತ ಮಾಡಿಕೊಂಡ. ಧರ್ಮಗಳು ಉದಯವಾದವು. ಅವು ಕೂಡ ದೇವ ಸಾಮ್ರಾಜ್ಯಗಳ ಎಗ್ಗಿಲ್ಲದೆ ಎಲ್ಲೆ ಮೀರಿ ಆಕ್ರಮಿಸಿಕೊಂಡವು. ಹೊಸ ಅನ್ವೇಷಣೆಗಳಾದವು. ಮಾರ್ಗಗಳು ಸಿದ್ಧವಾದವು. ಕಡಲ ದಂಡೆಗಳು ಸಂಗಮಿಸಿದವು. ಸಂಪತ್ತು ಹರಿದಾಡಿ ಲೂಟಿಯಾಯಿತು. ನಾಗರೀಕತೆಗಳು ಮತ್ತೆ ಘರ್ಜಿಸಿದವು. ಯುದ್ಧಗಳ ಸಾರಿದವು. ಮನುಷ್ಯನಿಗೆ ಅನ್ನ ನೀರು ನೆರಳು ಸಾಕಾಗಿದ್ದ ಕಾಲವ ದಾಟಿದ ಮೇಲೆ ಭೂಮಿಯನ್ನು ನುಂಗುವ ಮಟ್ಟಕ್ಕೆ ಹೋದ. ಸಮುದ್ರಗಳಿಗೆ ಲಂಗರು ಹಾಕಿದ. ಮರುಭೂಮಿಗಳನ್ನೂ ಅತಿಕ್ರಮಿಸಿ ನದಿಗಳೆಲ್ಲವಕ್ಕೂ ತನ್ನ ಹೆಸರಿಟ್ಟುಕೊಂಡ.

ಇವೆಲ್ಲ ಯಾಕೆ ಹೇಳುತ್ತಿರುವೆ ಗೊತ್ತೇ… ಮನುಷ್ಯರಿಗೆ ಯಾಕೆ ಇಂತಹ ದಾಹ ಉಂಟಾಯಿತು ಎಂದು ವಿವರಿಸಲು. ನೀನು ಹೋರಾಟದ ದಾರಿಯಲ್ಲಿ ಬಂದವನು. ಕಾರ್ಲ್‌ಮಾರ್ಕ್ಸ್‌ನ ದಾಸ್‌ಕ್ಯಾಪಿಟಲ್ ಪುಸ್ತಕ ಹಿಡಿದು ತಿರುಗುತ್ತಿದ್ದವನು. ಬಡವರ ಅನ್ನದ ಪರದಾಟ… ಸಂಪತ್ತಿನ ಯಜಮಾನರ ಮೆರೆದಾಟ ಇವೆರಡೂ ಮನುಷ್ಯರ ಪಾಡಿನ ಎರಡೂ ಕೈಗಳ ಇತಿಹಾಸವನ್ನೇ ಹೇಳುತ್ತಿವೆ. ಒಂದು ಕೈ ದುಡಿಯುತ್ತಲೇ ಹಸಿದು ಬಿದ್ದಿದೆ; ಇನ್ನೊಂದು ಕೈ ಉಣ್ಣುತ್ತಲೇ ಆದೇಶಿಸುತ್ತಲೇ ಬಂದಿದೆ. ಮನುಷ್ಯ ತನ್ನ ವಿರುದ್ಧವೆ ತಾನೇ ದಂಗೆ ಏಳಬೇಕಾಯಿತು. ಆ ದಂಗೆಗೆ ದೇವರ ಕೃಪೆ ಬೇಡ ಎಂದು ಮುನ್ನುಗ್ಗಿ ಗೆದ್ದರೂ ಅವರ ಆ ತತ್ವ ಸಿದ್ಧಾಂತವೇ ದೇವರಾಗಿಬಿಟ್ಟಿದ್ದು ಚರಿತ್ರೆಯ ವ್ಯಂಗ್ಯ.

ಹಳೆಯ ವಿಷಯಕ್ಕೆ ಬರುವೆ… ಆದಿ ಮಾನವನಿಗೆ ತನ್ನದೇ ಸ್ವಂತ ಕುಟುಂಬದ ಒಂದು ಪುಟ್ಟ ಗುಂಪು ಸಾಕಾಗಿತ್ತು; ಬದುಕಿ ಉಳಿಯಲು. ಇವತ್ತು ಏನಾಗಿದೆ? ವಿಶ್ವದ ಕಲ್ಪನೆ ಬಂದಿದೆ. ಅವರವರ ರೀತಿಯಲ್ಲಿ ಅದನ್ನು ಭಾವಿಸಿದ್ದಾರೆ. ಒಂದು ಪುಟ್ಟ ಸ್ವಕುಟುಂಬ ಕುಲ ಮೂಲ ಸಮಾಜ ಬೃಹತ್ತಾಗಿ ವ್ಯವಸ್ಥೆ ಮಾಡಿಕೊಂಡಿದೆ. ಅದಕ್ಕೆಂದೇ ಸರ್ಕಾರವಿದೆ. ಪ್ರಭುತ್ವ ಇದೆ. ಹೈಯರಾರ್ಕಿ ಇದೆ ಮಿಲಿಟರಿ ಇದೆ… ಸಂಕೋಲೆಗಳಿಗೆ ಏನಿಲ್ಲ ಹೇಳೂ? ಆದರೆ ಈ ವ್ಯವಸ್ಥೆಯನ್ನು ನಾವು ಸುಶೀಕ್ಷಿತ ಪ್ರಜ್ಞಾವಂತ ಸ್ಥಿತಿ ಎಂದು ಹೇಳಿಕೊಳ್ಳುತ್ತೇವೆ. ಮನುಷ್ಯ ಹುಟ್ಟಿನಿಂದ ಸ್ವಯಂ ಪೂರ್ಣ ಸ್ವಾತಂತ್ರ್ಯ ಜೀವಿ; ಆದರೆ ಬೆಳೆಯುತ್ತ ಸಾಗಿದಂತೆಲ್ಲ ಅವನು ಹಂತ ಹಂತವಾಗಿ ಎಲ್ಲ ಸ್ವಾತಂತ್ರ್ಯಗಳನ್ನು ಕೊನೆಗೆ ತನ್ನ ವ್ಯಕ್ತಿತ್ವ, ಅಸ್ತಿತ್ವಗಳನ್ನೂ ಕಳೆದುಕೊಳ್ಳುತ್ತಾನೆ… ನೆನಪಿದೆಯಾ ಯಾರು ಇದನ್ನು ಹೇಳಿದವರೆಂದೂ…

`ಗೊತ್ತು ಸಾರ್… ಪ್ರೆಂಚ್ ಕ್ರಾಂತಿಗೆ ಕಾರಣಾದ ರೂಸೊ ಹೇಳಿದ ಮಾತು… ಮನುಷ್ಯ ನಿರಂತರವಾಗಿ ಸಂಕೋಲೆಗಳನ್ನು ಬೆಳೆಸಿಕೊಳ್ಳುತ್ತಲೆ ಬಂದಿದ್ದಾನೆ. ನಿಸರ್ಗ ನಿಷ್ಟವಾಗಿದ್ದ ಮಾನವ ಗುಂಪುಗಳ ಅಪೇಕ್ಷೆಗಳು ನೈತಿಕವಾಗಿದ್ದವು. ಹೊಂದಾಣಿಕೆಯ ದಾರಿಯಲ್ಲಿದ್ದವು. ಆಸೆಬುರುಕತನವಿರಲಿಲ್ಲ. ಆದಿಮಾನವ ಒಂದು ಬಗೆಯಲ್ಲಿ `ನೋಬಲ್ ಸ್ಯಾವೇಜ್’ ಆಗಿದ್ದ. ಕೃತಕ ಸಾಮಾಜಿಕ ರಕ್ಷಣೆಗೆ ಬದಲಾಗಿ ಸಹಜ ನೈಸರ್ಗಿಕ ರಕ್ಷಣೋಪಾಯಗಳ ಕಂಡುಕೊಂಡಿದ್ದ. ಆಗ ಅವನು ಹುಟ್ಟಿನಿಂದ ಮುಕ್ತ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದ. ಅದು ನಿಸರ್ಗದಲ್ಲಿ ಸಹಜವಾಗಿತ್ತು. ಆದರೆ ಬೆಳೆಯುತ್ತ ನಡೆದಂತೆಲ್ಲ ಎಲ್ಲೆಡೆ ಸಂಕೋಲೆಗಳ ಸರಪಳಿಗಳ ಸಭ್ಯತೆಯ ಹೆಸರಲ್ಲೇ ಬಿಗಿದುಕೊಂಡ…’

`ಹೇ ಚೆನ್ನಾಗಿಯೆ ಓದಿಕೊಂಡಿದ್ದೀಯಲ್ಲೊ’

`ಹೌದು ಸಾರ್. ಪಶ್ಚಿಮ ಜಗತ್ತಿನ ತತ್ವ ಮೀಮಾಂಸೆಗಳು ನನ್ನನ್ನು ಪ್ರಭಾವಿಸಿವೆ. ಕಲಿಸಿ ಬೆಳೆಸಿವೆ… ನನ್ನ ಬಾಲ್ಯ ಕಾಲದ ಮಾನವ ಸಂಬಂಧಗಳನ್ನು ಅರ್ಥಪಡಿಸಿವೆ. ಯುರೋಪಿನ ಪುನರುಜ್ಜೀವನ ಯುಗದ ರೋಚಕ ಜ್ಞಾನ ಪರಂಪರೆಗಳು ಎಷ್ಟೊಂದು ಅದ್ಭುತ ಅಲ್ಲವೇ ಸಾರ್…’

`ನಾನು ಏನು ಹೇಳುತ್ತಿದ್ದೆ; ಎಲ್ಲಿಗೆ ನಿಲ್ಲಿಸಿದ್ದೆ ನೆನಪಿಸು…’

`ಮನುಷ್ಯರ ದಾಹ, ಅತಿಕ್ರಮಣ, ಅಸ್ವಾಭಾವಿಕ ಸಾಮಾಜಿಕತೆಯ ಬಗ್ಗೆ ಹೇಳ್ತಾ ಇದ್ರಿ. ನಾನು ಏನೇನೊ ಕನೆಕ್ಟ್ ಮಾಡ್ಕೊತಾ ಇದ್ದೆ. ಡಾರ್ವಿನ್ನನ ವಿಕಾಸವಾದ, ಮಾರ್ಕ್ಸ್‌ನ ಬಡವ ಶ್ರೀಮಂತರ ವರ್ಗಕ್ರಾಂತಿ, ಸಾಮಾಜಿಕ ವ್ಯವಸ್ಥೆಯ ರೂಢಿಗತ ಮೌಲ್ಯಗಳು… ಅದೇ ನಾಗರೀಕತೆ… ರಾಜಕೀಯ ಅರ್ಥಶಾಸ್ತ್ರ… ಅದೇ ಗೆಲಿಲಿಯೋನ ಸೂರ್ಯ ಕೇಂದ್ರ ಸಿದ್ಧಾಂತ… ಚರ್ಚುಗಳ ಯಜಮಾನಿಕೆ…’

`ಸಾಕು ಸಾಕು ನಿಲ್ಸೋ ನನಗೂ ಎಲ್ಲ ಗೊತ್ತಿದೆ ಎಂದು ಪ್ರದರ್ಶನ ಮಾಡಬೇಡ, ತಾಳೊ… ಏನೊ ಇಂಪಾರ್ಟೆಂಟ್ ಪಾಯಿಂಟ್ ಮಿಸ್ಸಾಯಿತು ಕಣೊ… ಏನದೂ…?ʼ
`ಮನುಷ್ಯ ಅನಾರ್ಕಿಯಾಗಿ ಇದ್ದಿದ್ದೆ ಸರಿ ಅಂತಲಾ; ಅಸಂಗತನಾಗಿರಬೇಕಿತ್ತು ಅಂತಲಾ’

`ಛೇ ಹೋಯ್ತು ಕಣಯ್ಯ ಪಾಯಿಂಟು’

`ಯಾಕೆ ಸಾರ್… ಆ ಹುಡ್ಗೀರು ನಿಮ್ಮನ್ನು ನೋಡ್ಕಂಡು ನಕ್ಕಂಡು ಹೋದ್ರಲ್ಲಾ; ಅದಕ್ಕೆ ಮಿಸ್ಸಾಯ್ತಾ’

`ಏನಾರ ಸೀರಿಯಸ್ ಡಿಬೇಟ್ ನಡೀತಿರೊವಾಗ ಯೀ ಹುಡ್ಗೀರು ಎದುರಾದ್ರೆ ಯಡವಟ್ಟಾಯ್ತದಲ್ಲಾ ಯಾಕೊ…’

`ಇದು ಕೂಡ ಸಾಮಾಜಿಕ ಲಿಂಗಸಂಬಂಧಿ ಪ್ರಾಬ್ಲಮ್ಮು ಸಾರ್’

`ಹೇಯ್ ಅದು ಪ್ರಾಬ್ಲಮ್ ಅಲ್ಲಾ… ಇಂಟರ್ಯಾಕ್ಸನ್… ನಾಟ್ ಆ್ಯನ್ ಇಂಟರಪ್ಸನ್’

`ಲವ್ಲಿ ಸಾರ್… ಪವರ್ ಆಫ್ ಸೆಕ್ಸ್ ಸಾರ್ ಅದು.’

`ಮೆಲ್ಲಗೆ ಹೇಳೊ; ಕೇಳಿಸ್ಕಂಡು ಯಾವಳಾರು ಕೆನ್ನೆಗೆ ಬಾರಿಸಾಳೂ…’

`ಅದೂ ಕೂಡ ಜೆಂಡರ್ ಪವರ್ ಸಾರ್… ಒಂಥರಾ ಹಾಟ್ ಕಿಸ್ಸಿದ್ದಂಗೆ’

`ಲೇ; ನೀನು ಸ್ಪಾಂಟೇನಿಯಸ್ ಜೋಕರ್ ಕಣೊ’

`ಎರಡು ಮಹಾಯುದ್ಧಗಳಲ್ಲಿ ಬೆಂದು ನರಳಿ ನಗೋದನ್ನೆ ಮರೆತಿದ್ದ ಯುರೋಪಿಯನ್ ವೂಂಡೆಡ್ ಸೊಸೈಟಿಗಳಿಗೆ ಚಾರ್ಲಿ ಚಾಪ್ಲಿನ್ ನಗೋದನ್ನು ಮತ್ತೆ ಸ್ಪಾಂಟೀನಿಯಸ್ಸಾಗೇ ಕಲಿಸಿದ್ದ ಅಲ್ಲವಾ ಸಾರ್…’

`ಯಸ್ ಯಸ್… ಆಬ್ಸ್ಯುಲೂಟ್ಲಿ ಯು ಆರ್ ರೈಟ್. ಮಿಸ್ಸಾದ ಪಾಯಿಂಟು ಸಿಕ್ತು ಕಣಯ್ಯಾ…’

`ನೋಡಿದ್ರಾ… ನಾನಾಗ್ಲೆ ಹೇಳ್ಲಿಲ್ಲವಾ… ಜಂಡರ್ ಪವರ್ ಅಂತಾ… ಗರ್ಲ್ಸ್‌ ಆರ್ ಸ್ಪಾಂಟೇನಿಯಸ್ ಪವರು ಟು ಎನ್‍ರಿಚ್ ದಿ ಮೆನ್ ಐಡಿಯಾಲಜಿ…’

`ಹೇ ಎಲ್ಲೆಲ್ಲೊ ಹೋಗ್ಬೇಡಾ… ತಥ್ ಎಲ್ಲಾ ಗೊಂದಲ ಮಾಡಿ ದಾರಿ ತಪ್ಪಿಸಿಬಿಟ್ಟೆ ಕಣಯ್ಯಾ… ಎಂಥಾ ಲಾಯರ್ನಾದ್ರೂ ನೀನು ಬೀಳ್ಸಿ ಅವನ ವಾದನೇ ಬುಡಮೇಲು ಮಾಡ್ತಿಯೆ ಕಣೊ… ಮನುಷ್ಯನ ನಾಗರೀಕತೆಯ ಸಂಕೋಲೆಗಳ ಬಗ್ಗೆ ತಾನೆ ನಾನು ವಿಚಾರ ಮಾಡ್ತಿದ್ದುದು… ನಾವೀಗ ಎಲ್ಲಿಗೆ ಬಂದಿದ್ದೀವೊ. ಎಂತಹ ಭ್ರಷ್ಟ ಸಮಾಜದಲ್ಲಿ ಬದುಕಿದ್ದೀವೊ… ನಾವಿನ್ನೂ ಅನಾರ್ಕಿಸ್ಟ್‍ಗಳಾಗಿಯೇ ಬದುಕಿದ್ದೇವೆ. ಅಸಂಗತವಾಗಿದ್ದೇವೆ. ಒಬ್ಬ ಮನುಷ್ಯ ಇನ್ನೊಬ್ಬ ಸಹ ಮಾನವನ ಬೇಟೆ ಆಡ್ತಾನೆ.

`ಕ್ಯಾನಿಬಾಲಿಸಂ’ ಹಿಂದೆ ಇತ್ತು. ಎಷ್ಟೋ ಟ್ರೈಬ್‌ಗಳು ಎದುರಾಳಿ ಬುಡಕಟ್ಟುಗಳ ರುಂಡ ಬೇಟೆ ಆಡಿ ತಿಂದು ತಲೆ ಬುರುಡೆಗಳ ಶೌರ ಪದಕಗಳಂತೆ ಅಲಂಕಾರಿಕವಾಗಿ ಜೋಡಿಸಿ ಇಟ್ಟುಕೊಳ್ಳುತ್ತಿದ್ದರಂತೆ. ಆ ನೈಜೀರಿಯಾದ ಇದಿ ಅಮೀನ್ ಅನ್ನೊ ಸರ್ವಾಧಿಕಾರಿಗೆ ನರ ಮಾಂಸವೇ ಪ್ರಿಯವಾದ ಔತಣವಾಗಿತ್ತಂತೆ… ಆ ಮತ್ತೆ ಸಿಕ್ತು ಕಣೋ ಪಾಯಿಂಟು… ಆ ಹಿಟ್ಲರ್ ಇದ್ದನಲ್ಲಾ… ಅವನು ಜನಾಂಗ ದ್ವೇಷಿ. ಲಕ್ಷಾಂತರ ಯಹೂದಿಗಳ ಕೊಂದುಬಿಟ್ಟ. ಆ ಚರಿತ್ರೆ ನಿನಗೆ ಗೊತ್ತಿದೆ ಎಂದು ಭಾವಿಸುವೆ. ಮನುಷ್ಯ ಅತ್ಯುನ್ನತ ಪ್ರಜ್ಞೆಯ ಮಟ್ಟವ ಮುಟ್ಟಿದ್ದಾನೆ ಎಂದುಕೊಳ್ಳುತ್ತಿರುವಾಗಲೇ ಅವನೊಬ್ಬ ಹೇಯ ನರಭಕ್ಷಕನಾಗಿಬಿಟ್ಟಿದ್ದ. ರೂಸೊ ಬಗ್ಗೆ ಮಾತಾಡ್ತಿದ್ವಿ. ರಿನೈಸಾಸ್ಸ್ ಬಗ್ಗೆ ಹೇಳ್ತಿದ್ದಿ. ಆ ಹಂತಗಳ ದಾಟಿ ಬಂದಿದ್ದರೂ ಯಾಕೆ ಮನುಷ್ಯನಿಗೆ ಯುದ್ಧಗಳು ಬೇಕಾದವು… ಅನ್ನ ನೀರು ನೆರಳು ಯಥೇಚ್ಛವಾಗಿದ್ದರೂ ಅವನ ದಾಹ ತೀರಿರಲಿಲ್ಲ. ಸಹಜ ದಾಹವ ತೀರಿಸಬಹುದು; ಅಸಹಜ ದಾಹ ಇದೆಯಲ್ಲಾ… ಯಾವ ದೇವರಿಂದಲೂ ಪರಿಹರಿಸಲು ಸಾಧ್ಯವಿಲ್ಲ ಕಣೊ… ನಾಗರೀಕತೆ ಮನುಷ್ಯನನ್ನು ಇನ್ನಷ್ಟು ಮತ್ತಷ್ಟು ಬ್ರೂಟಲ್ ಆಗಿಸುತ್ತಿದೆ. ಆತ ಬೀಸ್ಟ್ ಆಗಿಯೆ ಉಳಿದಿದ್ದಾನೆ. ನೋಡಲು ಮಾತ್ರ ಅತ್ಯುನ್ನತ ನಾಗರೀಕ. ಪಶುತ್ವ ಇಡಿಯಾಗಿ ಒಬ್ಬನಲ್ಲಿ ಹುಟ್ಟುತ್ತದೆ. ಅದಕ್ಕಾಗಿಯೆ ಚಾರಿತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿಕೊಳ್ಳುತ್ತದೆ. ಸಮಾಜದಲ್ಲಿ ಸಮೂಹ ಸನ್ನಿಯನ್ನು ಹಬ್ಬಿಸುತ್ತದೆ. ವ್ಯಕ್ತಿಗಳ ಬಿಡಿ ಅನನ್ಯತೆಗಳ ನಾಶಪಡಿಸಿರುತ್ತದೆ. ಆ ಒಬ್ಬ ಯಾವನೊ ಸರ್ವಾಧಿಕಾರಿಗಾಗಿ ತಮ್ಮೆಲ್ಲ ಸಮಷ್ಟಿ ವ್ಯಕ್ತಿತ್ವಗಳ ಮೊತ್ತವನ್ನು ಅರ್ಪಿಸಿಬಿಟ್ಟಿರುತ್ತಾರೆ. ಅಧೋಗತಿಯೆ ವರ್ತಮಾನವೂ ಆಗಿ ಗತವೂ ಆಗಿರುತ್ತದೆ. ನೀನು ಹೇಳಿದ ನೋಬಲ್ ಸ್ಯಾವೇಜ್‌ಗಿಂತಲು ಭಯಾನಕ ಒಬ್ಬ ಸರ್ವಾಧಿಕಾರಿ. ಅಂತಹ ವಿಕಾರಿಯನ್ನು ಸಮೂಹ ಹೇಗೆ ವಿವೇಚನೆ ಇಲ್ಲದೆ ಒಪ್ಪಿಕೊಳ್ಳುತ್ತದೆ. ಜೊತೆಗಿದ್ದ ಎಚ್ಚರ ಎಲ್ಲಿಗೆ ಹಾರಿ ಹೋಗಿರುತ್ತದೆ. ಸರ್ವಾಧಿಕಾರಿ ಹುಟ್ಟುವುದು ನಮ್ಮ ಒಳಗಿಂದಲೇ… ಯಾಕೆಂದರೆ ನಾವು ಗೌಪ್ಯವಾಗಿ ಪಶುತ್ವವನ್ನು ಜೋಪಾನಮಾಡಿ ಸಾಕಿಕೊಂಡಿರುತ್ತೇವೆ. ನಮ್ಮ ಸುಪ್ತ ಬಯಕೆಗೆ ತಕ್ಕಂತೆ ದುತ್ತೆಂದು ಅದು ಯಾವಾಗಲಾದರೂ ಬಂದು ಬಿಡಬಹುದು…

ನಿನ್ನ ಮಾತಿಗೇ ಬಂದೆ. ಸಿವಿಲೈಸ್ಡ್ ಅನ್ನೊದಿಕ್ಕೆ ನಾವು ಕಂಡುಕೊಂಡಿರುವ ಉತ್ತರ ತಪ್ಪಾಗಿದೆ. ಅನ್‍ಟೇಮ್ಡ್ ಸೊಸೈಟಿಗಳಲ್ಲಿ ಬದುಕೋದು ಬಹಳ ಕಷ್ಟ ಕಣಯ್ಯ. ಸೇನ್ಸಿಟೀವ್ ಆದಂತೆಲ್ಲ ಇರುವೆ ಹರಿದಾಡಿದ್ದರಲ್ಲು ತಪ್ಪು ಕಾಣತೊಡಗುತ್ತದೆ. ಕುಣಿಯೋಕೆ ಬರದೇ ಇರೋರು ನೆಲಡೊಂಕು ಅಂದರಂತೆ ಎಂದು ನಮ್ಮಜ್ಜಿ ಹೇಳ್ತಿದ್ಲು. ಅದೇ ಒಂದು ಫಿಲಾಸಫಿ ಕಣೋ… ಹಾಗಂತ ಸುಮ್ನೆ ಇರೋಕಾಗಲ್ಲ. ಬದಲಿ ವ್ಯವಸ್ಥೆಗಳೂ ದಿನಕಳೆದಂತೆಲ್ಲ ಸಂಕೋಲೆಗಳಾಗಿ ರೂಪಾಂತರಗೊಳ್ಳುತ್ತವೆ. ಆದರೆ ಒಂದು ವಿಶ್ವಾಸ ವಿಶ್ವವನ್ನೇ ಬದಲಿಸಬಹುದು. ಸಮುದ್ರದ ಅಲೆಗಳು ಯಾವತ್ತು ನಿಂತು ಹೋಗುತ್ತವೊ; ಅವತ್ತಿಗೆ ಈ ಸಮಾಜಗಳೂ ಸತ್ತು ಹೋಗುತ್ತವೆ. ಹಾಗೆ ಆಗದಿರಲಿ… ಅಲ್ಲವೇನೊ…’

ಅವನು ಈ ಮನುಷ್ಯ ನಿಸರ್ಗದ ಸಹಜ ವ್ಯವಸ್ಥೆಯ ಮೇಲೆ ಸಾಧಿಸಿದ ಪುಟ್ಟ ದಿಗ್ವಿಜಯ. ಆನಂತರ ಸಾಮ್ರಾಜ್ಯಗಳು ಬಂದವು. ನಾಗರೀಕತೆಗಳು ಕೊಬ್ಬಿದವು. ತನ್ನ ಅಸ್ತಿತ್ವ ವಿಸ್ತರಣೆಗಾಗಿ ಯುದ್ಧ ತಂತ್ರಗಳ ಕರಗತ ಮಾಡಿಕೊಂಡ. ಧರ್ಮಗಳು ಉದಯವಾದವು. ಅವು ಕೂಡ ದೇವ ಸಾಮ್ರಾಜ್ಯಗಳ ಎಗ್ಗಿಲ್ಲದೆ ಎಲ್ಲೆ ಮೀರಿ ಆಕ್ರಮಿಸಿಕೊಂಡವು.

ಹಾಗೇ ಮಾತಾಡುತ್ತ ಕಲ್ಪವಲ್ಲಿಗೆ ಬಂದೆವು. ಮಸಾಲೆ ದೋಸೆ ತಿಂದೆವು. ವಿಷಯಾಂತರ ಮಾಡಿದ್ದೆವು. ತಾನು ಸೀನಿಯರ್ ಎಂಬ ಅಹಂ ಅಶ್ವಥ ಅವರಿಗೆ ಇರಲಿಲ್ಲ. ಕೊಠಡಿಯಲ್ಲೆ ಸಾಕಷ್ಟು ಪುಸ್ತಕ ಇಟ್ಟಿದ್ದರು. ನನ್ನ ಹಿನ್ನೆಲೆ ಅವರಿಗೆ ಗೊತ್ತಿತ್ತು. ಆಗ ತಾನೆ ಸಣ್ಣ ಪುಟ್ಟ ಏನೇನೊ ಕದ್ದು ಮುಚ್ಚಿ ಬರೆಯುತಿದ್ದೆ. ಆ್ಯಂಟನ್ ಚೆಕಾವ್ ಹಾಗು ಗಾರ್ಕಿ ಕತೆಗಳ ಓದೊ ಎಂದಿದ್ದರು. ಓದಿದ್ದೀನಿ… ಗೋಗೋಲ್‌ನ ಒವರ್ ಕೋಟ್ ಕತೆಯನ್ನು ಹಲವು ಸಲ ಮನನ ಮಾಡಿಕೊಂಡಿರುವೆ ಎಂದೆ. ಕಲ್ಪವಲ್ಲಿ ನಮಗೆ ಆಗ ಒಂದು ಉನ್ನತ ಹರಟೆ ಕಟ್ಟೆಯಾಗಿತ್ತು. ಜಗತ್ತಿನ ಅಸಾಮಾನ್ಯ ಲೇಖಕರೆಲ್ಲ ನಮ್ಮ ಮನದಲ್ಲಿ ಸುಳಿದು ಬಂದು ಹೋಗುತ್ತಿದ್ದರು. ಟಾಲ್‍ಸ್ಟಾಯ್, ದಾಸ್ತೋವಸ್ಕಿ, ಕಮೂ, ಕಾಫ್ಕಾ, ಲಾರೆನ್ಸ್, ಎಲಿಯಟ್, ಎಜ್ರಾಪೌಂಡ್, ವೊಲೆಸೋಯಿಂಕಾ, ಚಿನುವಾ ಅಚಿಬೆ ಒಬ್ಬರೇ ಇಬ್ಬರೇ ಫ್ರಾಯ್ಡ್, ಯೂಂಗ್, ಮ್ಯಾಕ್ಸ್‌ಮುಲ್ಲರ್… ಅವರನ್ನೆಲ್ಲ ನೆನೆಯದೆ ಇದ್ದರೆ ನಮಗೆ ಹಳ್ಳಿಗುಗ್ಗು ಎಂಬ ಪದವಿ ಪ್ರಾಪ್ತರಾಗಬೇಕಾಗುತ್ತಿತ್ತು. ಆ ಭಯದಿಂದಾಗಿ ಜೋರಾಗಿ ಅವರ ಬಗ್ಗೆ ವದರುತ್ತಿದ್ದೆವು. ಆ ಕಲ್ಪವಲ್ಲಿಯಲ್ಲೆ ಮೊದಲು ನನಗೆ ಪೋಲಂಕಿ ರಾಮ ಮೂರ್ತಿ ಅವರು ಪರಿಚಯವಾದದ್ದು. ಲವ್ ಅಂಡ್ ಟಚ್ ಎಂಬ ಆಕರ್ಷಕ ವಿಷಯವನ್ನು ಅವನು ಡಿ.ಎಚ್. ಲಾರೆನ್ಸನ ವಿಚಾರಗಳ ಮೂಲಕ ವರ್ಣಿಸುವಾಗ ನಮಗೆ ಅನೂಹ್ಯ ಪುಳಕವಾಗುತಿತ್ತು. ಇಂಗ್ಲೆಂಡಿನ ಆ ಕವಿ ಕಾದಂಬರಿಕಾರನ ಬರಹದ ಪ್ರೇಮ ಮೋಹ ಕಾಮ ಮಿಲನ ಸ್ಪರ್ಶ ಸಂಗತಿಗಳನ್ನು ಮೈ ಮರೆತು ವ್ಯಾಖ್ಯಾನಿಸುತ್ತಿದ್ದರು. ಆದರೆ ಅವರ ಗಹನವಾದ ಆ ಚಿಂತನೆಗಳ ನೆಪಕ್ಕೆ ಕಿವಿ ಮೇಲೆ ಹಾಕಿಕೊಂಡು ನಮ್ಮ ಕಲ್ಪಿತ ಸ್ಪರ್ಶ ಸುಖದಲ್ಲಿ ಪೋಲಿಯಾಗಿದ್ದೆವು.

ತಮ್ಮ ಮಾತಿನ ಮೋಡಿಗೆ ತಾವೇ ಪರವಶವಾಗಿ `ಟಚ್’… ಅಂದರೆ ಮುಟ್ಟು… ಮುಟ್ಟು ಎಂದರೆ ಏನನ್ನು ಮುಟ್ಟಬೇಕು? ಮನಸ್ಸನ್ನು ಮುಟ್ಟುವುದೇ? ಹೆಣ್ಣ ಚೆಲುವನ್ನು ಸ್ಪರ್ಶಿಸುವುದೇ; ಯಾರು ಯಾರನ್ನು ಹೇಗೆ ಮುಟ್ಟಬೇಕು… ಮುಟ್ಟಿಸಿಕೊಳ್ಳಲಾರದ ಸಮಾಜ. ಹೆಣ್ಣನ್ನು ಹಗಲಲ್ಲಿ ಈ ಗಂಡಸರು ಬೆತ್ತಲೆಯಾಗಿ ಕಣ್ಣಲ್ಲಾದರೂ ದಿಟ್ಟಿಸಿ ಮುಟ್ಟಿದ್ದಾರೆಯೇ… ಬರೀ ಕತ್ತಲೆಯಲ್ಲಿ ದಿಟ್ಟಿಸಿದ್ದಾರೆ. ಸೌಂದರ್ಯವನ್ನು ಮುಟ್ಟಲು ಆನಂದಿಸಲು ನಮಗೆ ಇರುವ ಮಾನದಂಡಗಳು ಯಾವುವು? ಕತ್ತಲನ್ನು ಮುಟ್ಟಿದ್ದೇವೆ ಅಷ್ಟೇ… ಬೆಳಕಲ್ಲಿ ಮುಟ್ಟಿಲ್ಲ ಮುದ್ದಿಸಿಲ್ಲ. ಲವ್ ಎಂದರೇನು? ಸೆಕ್ಸ್ ಎಂದರೇನು? ಟಚ್ ಎಂದರೇನು? ಮುಕ್ತಿ ಎಂದರೆ ಏನು? ನಮಗೆ ಇವೇನೂ ಗೊತ್ತಿಲ್ಲಾ… ಕತ್ತಲಲ್ಲಿ ಏನನ್ನು ಮುಟ್ಟಿದೆವೊ ಅದು ಕಾಣಲೆ ಇಲ್ಲಾ… ದೇವರನ್ನು ಕಂಡಿದ್ದಾರಂತೆ… ಮುಟ್ಟಿದ್ದಾರಂತೆ! ನನಗಂತು ದೇವರನ್ನು ಹೇಗೆ ಮುಟ್ಟುವುದೊ ಗೊತ್ತಿಲ್ಲ. ಆಕಾಶವನ್ನು ಮುಟ್ಟುವುದು ಉಂಟೇ… ಜೊತೆಗೆ ಮಲಗಿರುವ ಹೆಂಡತಿಯನ್ನೆ ಪೂರ್ಣ ಬೆತ್ತಲಾಗಿ ನೋಡಲಾರದಷ್ಟು ಭಯಗ್ರಸ್ಥ ಗಂಡಸರನ್ನು ನಾನು ಕಂಡಿದ್ದೇನೆ. ಯಾಕೆ ಬೆತ್ತಲೆಯ ಬಗ್ಗೆ ಇಷ್ಟೊಂದು ಸಂಕೋಚ ಭಯ… ಒಬ್ಬರನ್ನೊಬ್ಬರು ಮುಟ್ಟಿಸಿಕೊಳ್ಳುವುದಿಲ್ಲ… ಅಸ್ಪೃಶ್ಯ ಎಂದರೆ ಏನು… ಸ್ಪರ್ಶಕ್ಕೆ ಅನರ್ಹನಾದವನು ಎಂದೇ ನಿಮ್ಮ ಅರ್ಥ? ಆದರೆ ಅವನಿಗೂ ಅದೇ ಪಂಚಭೂತಗಳು ಅಂಟಿಕೊಂಡೆ ಬೆರೆತುಕೊಂಡೆ ಬಂದಿರುತ್ತವಲ್ಲಾ… ಸ್ಪರ್ಶ ಎಂದರೆ ಅದು ಒಂದು ಮಾಂತ್ರಿಕ ಶಕ್ತಿ. ಹೆಣ್ಣನ್ನು ಮುಟ್ಟಿದ ಕೂಡಲೆ ದೇಹ ಯಾಕೆ ಹಾಗೆ ಬೇರೆ ಆಗಿಬಿಡುತ್ತದೆ? ಮನಸ್ಸು ಕಾಮನ ಬಿಲ್ಲಾಗಿ ಚಿಮ್ಮುತ್ತದಲ್ಲ ಏಳೂ ಬಣ್ಣಗಳಲ್ಲಿ ಮುಳುಗಿ…

ಸ್ಪರ್ಶವೂ ಒಂದು ದೈವಿಕ ಶಕ್ತಿ. ಅದು ಸೃಷ್ಟಿ ಕ್ರಿಯೆಗೆ ಬೇಕಾದ ಉತ್ಕಟತೆ. ಜೈವಿಕತೆ, ನೈಸರ್ಗಿಕ ಒತ್ತಾಸೆ. ಗಂಡಸು ಎಂದಾಗಿರುವುದು ಹೆಣ್ಣಿನಿಂದಾಗಿ. ಅವಳ ಮುಟ್ಟಿನಿಂದಾಗಿ ಹುಟ್ಟು ಪಡೆಯುತ್ತೇವೆ. ಅವಳ ಇಡೀ ದೇಹವೇ ಸ್ಪರ್ಶದ ಪಾರಮಾರ್ಥಿಕ ಮಾಂತ್ರಿಕತೆ. ನಾವು ಗಂಡಸರು ಮುಟ್ಟಾಗುವುದಿಲ್ಲ. ಮುಟ್ಟುತ್ತೇವೆ ಅಷ್ಟೇ ಕುರುಡು ಸುಖದಲ್ಲಿ… ಕಾಮನೆಯ ವಕ್ರವಿಕೃತಿಯಲ್ಲಿ/ ದೇವರನ್ನು ಹೇಗೆ ಭಕ್ತಿಯಿಂದ ಧ್ಯಾನಿಸುತ್ತೇವೊ ಅದರಂತೆಯೆ ಹೆಣ್ಣನ್ನು ಮೋಹಿಸಬೇಕು. ಅದೇನೆ ದಿವ್ಯ ಕಾಮನೆ… ಡಿವೈನ್ ಸೆಕ್ಸ್… ದೆವ್ವದಂತೆ ಎರಗುವುದಲ್ಲ ಸ್ಪರ್ಶ, ಅದು ಮನುಷ್ಯನನ್ನು ಪಶುತ್ವದಿಂದ ಬೇರ್ಪಡಿಸಿ ಪ್ರೇಮವನ್ನು ಸೃಷ್ಟಿಸುತ್ತದೆ. ಒಲುಮೆ ಇಲ್ಲದ ಸ್ಪರ್ಷದಿಂದಾಗಿಯೆ ಹೆಣ್ಣಿನ ನಿಜವಾದ ದರ್ಶನ ಗಂಡಸಿಗೆ ಆಗಿಲ್ಲ… ಒಂದು ಕಾಲಕ್ಕೆ ಯೋನಿ ಪೂಜೆ ಇತ್ತು. ಶಿವಲಿಂಗ ಸಂಗಮದಲ್ಲಿ ಸಮನಾಗಿ ಹೆಣ್ಣು ಗಂಡಿನ ಮಿಲನ ಸ್ಪರ್ಶ ಇದೆ.

ಸ್ಪರ್ಶದ ಯಜಮಾನ ನಾನೇ ಎಂದುಕೊಂಡಿದ್ದಾನೆ ಗಂಡಸು. ಅಹಾ ನಮ್ಮ ಗಂಡಸರು ಎಂತೆಂತಹ ಪರಾಕ್ರಮಿಗಳೆಂದು ಗೊತ್ತಿದೆ. ಹೆಣ್ಣಿನ ಇಡೀ ದೇಹದಲ್ಲಿ ಸ್ಪರ್ಷದ ಮಾಂತ್ರಿಕ ಚಿಲುಮೆಗಳಿವೆ… ಬುಗ್ಗೆಗಳಿವೆ. ಜಿನುಗುವ ಎದೆ ಮೊಗ್ಗುಗಳಿವೆ. ಎಷ್ಟೊಂದು ತರತರದ ಸ್ಪರ್ಶ ಕಣಗಳಿವೆ… ರೋಮ ರೋಮದಲ್ಲು ಸ್ಪರ್ಶದ ಬೆವರು ಒಸರುತ್ತದೆ. ಹಾಲೂಡಿಸುವ ತಾಯ ಎದೆಯ ಸ್ಪರ್ಶ ಸುಖವೇ ಬೇರೆ. ನಲ್ಲನ ತೋಳ ತೆಕ್ಕೆಯ ಮಿಥುನದ ಅಪ್ಪುಗೆಯ ಸಮರಸವೆ ಬೇರೆ. ತಾಯ ಗರ್ಭದಿಂದಲೆ ಸ್ಪರ್ಶದ ಮೊದಲ ಮಾತೃತ್ವವನ್ನು ಪಡೆದು ಬಂದಿರುತ್ತೇವೆ. ತುಂಬು ಗರ್ಭಿಣಿಯ ಹೊಟ್ಟೆಯ ಮುಟ್ಟಿದ್ದು ತಾಯಿಯೇ ಎಂದು ಮಗುವಿಗೆ ತಿಳಿಯುತ್ತದೆ. ಮುಟ್ಟುವುದು ಎಂದರೆ ಮನುಷ್ಯರ ಕ್ಷುದ್ರತೆಗಳ ಆಚೆಗಿನ ವಿಶ್ವಾತ್ಮಕ ಶಕ್ತಿ. ಅದನ್ನು ಭಾರತೀಯ ಸಮಾಜಗಳು ಸರಿಯಾಗಿ ಅರಿತುಕೊಂಡಿಲ್ಲ. ಒಂದು ಹಂತಕ್ಕೆ ಮಕ್ಕಳು ಬೆಳೆದ ಮೇಲೆ ತಾವೇ ಹೆತ್ತು ಹೊತ್ತು ಬೆಳೆಸಿದ ಮಕ್ಕಳನ್ನು ಅಸ್ಪೃಶ್ಯರನ್ನಾಗಿ ದೂರ ನಿಲ್ಲಿಸಿ ಬಿಡುತ್ತೇವೆ. ಈಡಿಪಸ್ ಕಾಂಪ್ಲೆಕ್ಸ್ ಬಗ್ಗೆ ಸೈಕಾಲಜಿ ಏನೇನೊ ಹೇಳಿದೆ. ಆ ವಿಚಾರಗಳೀಗ ಬೇಡ… ಸಿನ್ ಎಂಬ ಒಂದು ಪದ ಕ್ರಿಶ್ಚಿಯಾನಿಟಿಯಲ್ಲಿ ಬಲವಾಗಿದೆ ಹಾಗೆಯೆ ಉದಾರವಾಗಿ ಅದರಿಂದ ಪಶ್ಚಾತ್ತಾಪ ಪಟ್ಟು ಸಿನ್ ಕಾಂಪ್ಲೆಕ್ಸ್‌ನಿಂದ ಹೊರ ಬರುವುದಿದೆ.

ಬೈಬಲ್‌ನಲ್ಲಿ ಆ್ಯಡಂ ಅಂಡ್ ಈವ್ ಸೇಬು ಹಣ್ಣು ತಿಂದು ಪಾಪ ಮಾಡುತ್ತಾರೆ. ಹಾಗೆ ನೋಡಿದರೆ ಅದು ದೇವರ ಆಟ. ಮನುಷ್ಯನ ಪರದಾಟ… ಅದು ಅವನ ಡೆಸ್ಟಿನಿ ಕೂಡ. ಆ ಸಿನ್ ಮೂಲಕವೆ ಅವನು ಪವಿತ್ರನಾಗಬೇಕು. ಒಬ್ಬರಿಗೊಬ್ಬರು ಸ್ಪರ್ಶಿಸಿಕೊಳ್ಳಲು ಹಣ್ಣು ತಿನ್ನಿಸಿ ಪಾಪ ಮಾಡಿದೆ ಎಂದರೆ ಹೇಗೆ? ಇದು ನಾವೆ ಮಾಡಿಕೊಂಡಿರುವ ದೇವರ ಹೆಸರಿನ ಸಿನ್. ನಿಯಂತ್ರಿಸಿಕೊಳ್ಳುವ ಒಂದು ಉಪಕ್ರಮ. ಸಿನ್… ಅಂದರೆ ಮಿಲನದ ಅನಿಯಂತ್ರಿತ ಸ್ಥಿತಿ. ಆದರೆ ಅದನ್ನು ಪಳಗಿಸಿಲು ಅನೇಕ ದಾರ್ಶನಿಕ ದಾರಿಗಳಿವೆ. ಹೆಣ್ಣಿನ ಜೊತೆ ಮಲಗಿದರೆ ಮಕ್ಕಳಾಗುತ್ತವೆ ಸರಿ; ಆದರೆ ಸ್ಪರ್ಶದಿಂದ ಜ್ಞಾನೋದಯ ಆಯಿತೇ ಎಂದು ಕೇಳಿದರೆ ಹಾಗೆಂದರೇನು ಎಂದು ಪೆಚ್ಚಾಗಿ ಕೇಳೋರೆ ಹೆಚ್ಚು. ತೆವಲು ಸ್ಪರ್ಶ ಅಲ್ಲ. ಯಜಮಾನಿಕೆ, ಗಂಡಸ್ತನ ಸ್ಪರ್ಶ ಅಲ್ಲ. ಹಾಗಾದರೆ ಯಾವುದು ಸ್ಪರ್ಶ? ಗಂಡ ತನ್ನಿಂದ ಸ್ಪರ್ಶ ಸುಖ ಅವಳಿಗೆ ಸಿಕ್ಕಿದೆ ಎಂದು ಮೀಸೆ ತಿರುಗುತ್ತಾನೆ. ಹೆಣ್ಣಿಗೆ ಮೀಸೆ ಇಲ್ಲ! ಆದರೆ ಮೀಸೆ ಬರುವ ಗಂಡು ಮಕ್ಕಳ ಹೆರುತ್ತಾಳೆ. ಕೈ ಮೀರಿದರೆ ಅವನ ಮೀಸೆಯನ್ನೆ ಬೋಳಿಸಿ ಬಿಡುತ್ತಾಳೆ. ಸ್ಪರ್ಶ ಹೆಣ್ಣಿನಿಂದ ಉಂಟಾಗುವ ಜೀವಕ್ರಿಯೆ. ಅವಳೇ ಸ್ಪರ್ಷದ ಒಡತಿ. ಅವಳಿಂದಲೆ ಗಂಡಿನ ಕಾಮನೆಗೆ ಅರ್ಥ ಸುಖ ಸಂಸಾರ ಸಮಾಜ… ಇತ್ಯಾದಿ.

ಮೀರಾಬಾಯಿ ಆರಾಧ್ಯ ದೈವ ಕೃಷ್ಣನನ್ನು ದೈವಿಕವಾಗಿ ಮುಟ್ಟಿದ್ದಾಳೆ. ಮೋಹಿಸಿದ್ದಾಳೆ. ಅಕ್ಕಮಹಾದೇವಿ ಬೆತ್ತಲೆಯಾಗಿ ನಿಲ್ಲುತ್ತಾಳೆ. ಅವಳಿಗೆ ಸಿನ್ ಎಂದರೆ ಏನೆಂದು ಗೊತ್ತು. ಅದು ಮನುಷ್ಯರು ಬೆತ್ತಲೆ ಸ್ಥಿತಿಯನ್ನು ಮೀರಲಾರದ ನಡೆ ಎಂದು ತಿಳಿದಿದ್ದಾಳೆ. ಗೊಮ್ಮಟ ಪಾಪ ಪ್ರಜ್ಞೆಗೆ ಸವಾಲಾಗಿ ವೈರಾಗಿಯಾಗಿ ಬೆತ್ತಲಾಗಿ ನಿಂತಿದ್ದಾನೆ. ಅದೊಂದು ಘನವಾದ ಸ್ಥಿತಿ. ಮನುಷ್ಯ ಆದಿಯಲ್ಲಿ ಬೆತ್ತಲೆಯಾಗಿಯೆ ಇದ್ದ. ನಿಸರ್ಗದ ಒತ್ತಡದಂತೆ ಬೆದೆಗೆ ಬಂದು ಕೂಡುತ್ತಿದ್ದ. ಅವೆಲ್ಲ ಸುಧಾರಿಸಿಕೊಂಡು ಬಂದಿವೆ. ಉತ್ಕಟ ಪ್ರೇಮ ಕಾಮದಲ್ಲಿ ಬೆತ್ತಲಾಗುವುದೆ ಆ ಕ್ಷಣದ ವಿಮೋಚನೆ. ಹೆಣ್ಣನ್ನು ಮುಟ್ಟಿಸಿಕೊಳ್ಳದೆ ಬ್ರಹ್ಮಚರ್ಯ ಮಾಡಿದವರು ಇದ್ದಾರಂತೆ. ಅದು ನನ್ನ ಪ್ರಕಾರ ಸ್ವಯಂದಂಡನೆ ಮತ್ತು ಹೆಣ್ಣ ದೇಹವನ್ನು ಕೀಳಾಗಿ ಕಂಡ ನಿರಾಕರಿಸುವ ಗಂಡಸಿನ ದುರ್ಬಲ ಸ್ಥಿತಿ.

ಬೆತ್ತಲೆ ಎಂದರೆ ಏನು? ಬರುವಾಗಲು ಬೆತ್ತಲೆ ಹೋಗುವಾಗಲು ಬೆತ್ತಲೆ. ಆ ನಡುವೆ ಮೈಗೆ ಮರೆ ಇರುವುದು ಸರಿ… ಆದರೆ ಹೆಣ್ಣನ್ನು ಬಚ್ಚಿಟ್ಟು ಬಂಧಿಸಿ ಬಿಡುತ್ತೇವಲ್ಲಾ… ಮನಸ್ಸಿನ ಒಳಗೆ ವಿಕೃತ ಬೆತ್ತಲೆ… ಬಾಹ್ಯ ನೋಟದಲ್ಲಿ ಧೀಮಂತ ಮಾನವಂತ ಉಡುಗೆ ತೊಡುಗೆ ಕವಚಗಳಲ್ಲಿ ಕಟ್ಟಿಹಾಕಿ ಬಿಟ್ಟಿರುತ್ತೇವೆ. ಬೆತ್ತಲಾಗಿರುವುದು ಭಯಾನಕ ಸ್ಥಿತಿ… ನಮ್ಮ ಆಲೋಚನೆಗಳು ಇನ್ನೂ ಎಲ್ಲೊ ಸಿಲುಕಿವೆ. ಮನಸ್ಸಾದರೂ ಈ ಆಕಾಶದಂತೆ ಬೆತ್ತಲಾಗಿದೆಯೇ… ಡಿ.ಎಚ್.ಲಾರೆನ್ಸ್ ಇಂಗ್ಲೆಂಡಿನ ಸಮಾಜದ ನೆಲೆಯಲ್ಲಿ ಈ ಬಗ್ಗೆ ಕಾದಂಬರಿಗಳ ಬರೆಯುತ್ತಾನೆ. ನಮ್ಮಲ್ಲಿ ಒಬ್ಬನೆ ಒಬ್ಬ ಕಾಮಿ ಕವಿ ಇಲ್ಲ. ಬೆತ್ತಲೆ ಪದ್ಯಗಳಿಲ್ಲ. ಚುಂಬಕ ಸ್ಪರ್ಶದ ಭಾಷೆಯೂ ಇಲ್ಲ… ಕಾಳಿದಾಸನ ಮೇಘ ಸಂದೇಶವೇ ಎಷ್ಟೋ ವಾಸಿ. ಸಮಾಜಗಳು ಮುಕ್ತವಾಗಿ ಹೆಣ್ಣಿಗೆ ಆಯ್ಕೆಯ ಸ್ವಾತಂತ್ರ್ಯ ಬಂದಾಗ ಸ್ಪರ್ಶದ ಜ್ಞಾನೋದಯವಾಗುತ್ತದೆ.

ಪ್ರಾಯದಲ್ಲಿ ಸ್ಪರ್ಶವೇ ಸ್ವರ್ಗಸುಖ. ಮುಪ್ಪಾದಾಗ ಕೈಗೆಟುಕದೆ ಕಳೆದು ಹೋದದ್ದರ ನೆನಪೇ ನರಕ. ಅಶ್ವಥ್ ಅವರ ಮುಂದೆ ತಣ್ಣಗೆ ಹೊಂಗೆ ಮರದ ಕೆಳಗೆ ಮಧ್ಯೆ ಮಧ್ಯೆ ಚಹಾ ಕುಡಿಯುತ್ತ ಸಾಕಷ್ಟು ಹೊತ್ತು ಮಾತಾಡಿದ್ದೆ. ಪೋಲಂಕಿ ಅವರು ಹೇಳಿದ್ದನೆಲ್ಲ ನನಗೆ ಬೇಕಾದಂತೆ ಮರು ಸೃಷ್ಟಿ ಮಾಡಿಕೊಂಡಿದ್ದೆ. `ವುಮೆನ್ ಇನ್ ಲವ್’ ಹಾಗೂ `ಲೇಡಿ ಚಾಟೆರ್‍ಲೀಸ್ ಲವರ್’ ಹೆಸರಿನ ಲಾರೆನ್ಸ್‌ ಕಾದಂಬರಿಗಳ ತಿರುವಿ ಹಾಕಿದ್ದೆ. ಇಡೀಯಾಗಿ ಓದಿರಲಿಲ್ಲ. ಆಗ ಅಷ್ಟು ಪ್ರಬುದ್ಧತೆಯು ಇರಲಿಲ್ಲ. ಯಾರಾದರು ಬಲ್ಲವರು ಒಂದು ಅಪರೂಪದ ಸಂಗತಿಯ ಹೇಳಿದ ಕೂಡಲೆ ಅದನ್ನು ಅರೆದು ಕುಡಿದು ನನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುತ್ತಿದ್ದೆ. ಆ ಪೋಲಂಕಿಯವರೋ ಇಡೀ ಕೃತಿಯೊಂದರ ಪರಕಾಯ ಪ್ರವೇಶ ಮಾಡುತ್ತಿದ್ದರು. ಅತ್ಯುತ್ಕಟವಾಗಿ ಇಂಗ್ಲೀಷ್ ಸಾಹಿತ್ಯವನ್ನು ಸಾಮಾಜಿಕ ಸ್ಥಿತಿಗಳಿಗೆ ಅನ್ವಯಿಸಿ ಬೇರೆ ಬೇರೆ ಆಯಾಮಗಳಿಗೆ ಕೊಂಡೊಯ್ಯುತ್ತಿದ್ದರು. ಇಂಗ್ಲೀಷ್ ಪ್ರಾಧ್ಯಾಪಕರು ಪಶ್ಚಿಮ ಸಾಹಿತ್ಯದ ನಕಲಾಗಿದ್ದಾಗ ಪೋಲಂಕಿ ಅವರು ಆ ಪಶ್ಚಿಮ ಸಾಹಿತ್ಯವನ್ನು ನಮ್ಮ ಕಾಲದ ಬಿಕ್ಕಟ್ಟುಗಳ ಜೊತೆ ಬೆರೆಸಿ ನಮ್ಮನ್ನು ಯಾವುದೊ ಲೋಕಕ್ಕೆ ಕರೆದೊಯ್ಯುತ್ತಿದ್ದರು. ಇಂಗ್ಲೀಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ನಮ್ಮ ಹೋರಾಟಗಳ ಹಿಂದೆ ಬಂದು ನಿಲ್ಲುತ್ತಿದ್ದರು. `ಸೀತಾಯಣ’ ಖ್ಯಾತಿಯ ಅವರ ಮೇಲೆ ಸನಾತನಿಗಳು ದಾಳಿ ಮಾಡಲು ಕಾಯುತ್ತಿದ್ದರು. ದಾರ್ಶನಿಕನಿಗೆ ಇದ್ದ ಮಾತಿನ ಶೈಲಿ ಅವರಿಗಿತ್ತು. ಅಲ್ಲಲ್ಲೆ ಪದ ಪದಗಳ ಬಿಡಿಸಿ ಬಿಡಿಸಿ ಅರ್ಥೈಸುವ ಕ್ರಮದ ರಾಮದಾಸ್, ರಾಮಲಿಂಗಮ್ ಅವರಿಗಿಂತಲೂ ಬಲು ನವೀನವಾಗಿತ್ತು. ಅನಂತಮೂರ್ತಿ ಅವರು ಅದೇ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಸಾಹಿತ್ಯಲೋಕದ ತಾರೆಯಾಗಿದ್ದರು. ಅವರ ಪ್ರಭಾವಲಯದಲ್ಲಿ ಪೋಲಂಕಿ ಅವರು ಮಸುಕಾಗಿದ್ದರೂ ವಿದ್ವತ್ತಿನಲ್ಲಿ ಅನಂತಮೂರ್ತಿ ಅವರಿಗಿಂತ ಬೇರೆ ಮಟ್ಟದವರಾಗಿದ್ದರು. ಮೋಡಿ ಮಾಡಿಬಿಡುತ್ತಿದ್ದರು. ಅವರ ಜೊತೆ ಒಳ್ಳೆಯ ಸಮಯ ಕಳೆದಿದ್ದೆ. ಕೊನೆ ಕೊನೆಗೆ ಒಂಟಿಯಾಗಿದ್ದರು. ಒಥೆಲೊ ನಾಟಕದ ದುರಂತ ನಾಯಕ ಒಥೆಲೊ ತರವೆ ಕಾಣುತ್ತಿದ್ದರು. ಧ್ವನ್ಯಾಲೋಕದಲ್ಲಿ ಅವರು `ಸೆಲಬರೇಷನ್ ಆಫ್ ಡೆತ್’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಲೆ ಎದೆ ನೋವಿನಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದರು. ಸಾವನ್ನು ಹಾಗೆ ಅದೊಂದು ದೈವಿಕ ಸ್ಪರ್ಶ ಎಂಬಂತೆ ಸಾವಿನ ಆಳಕ್ಕೆ ಇಳಿದು ಮಾತಾಡುತ್ತಲೇ ಉಸಿರು ಬಿಟ್ಟಿದ್ದಂತು ನನಗೆ ಇವತ್ತಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಜೈನ ಮುನಿಗಳು ಸಲ್ಲೇಖನ ವ್ರತದ ಮೂಲಕ ಜೀವ ಬಿಡುತ್ತಿದ್ದರು. ತನ್ನನ್ನು ತಾನು ದೇವರಿಗೆ ಅರ್ಪಿಸಿಕೊಳ್ಳುವ ಕ್ರಮವೇ… ಅಂತಹ ಸಾವು ತಲುಪಬೇಕಾದ ತಾವನ್ನು ಅದು ಹೇಗೆ ಮುಟ್ಟುತ್ತದೆ. ಯಾವ ಅನ್ಯೂನ್ಯ ನಿಸ್ತಂತು ತರಂಗ ರಹದಾರಿಗಳಿವೆ. ದೇಹ ನಶ್ವರ. ಆತ್ಮ ಅನಂತ! ಏನಿದು ವಿಚಿತ್ರ ತರ್ಕ. ಇಲ್ಲಿ ಈ ಕ್ಷಣ ಇರುವುದಷ್ಟೆ ಸತ್ಯ ಅಲ್ಲವೆ? ಇಲ್ಲದ್ದು ಎಂದು ನಿರಾಕರಿಸಲಾರೆ. ನನ್ನ ಅನುಭವಕ್ಕೆ ಬಂದಿಲ್ಲ; ಹಾಗಾಗಿ ನಾನದನ್ನು ನಂಬಲಾರೆ ಎನ್ನುವುದು ಎಷ್ಟು ಸರಿ? ಇಹದ ಅನುಭವ ಪ್ರಮಾಣಗಳಿಗೂ ಪರದ ಮಾನದಂಡಗಳಿಗೂ ತರ್ಕವೆ ಇಲ್ಲ. ತರ್ಕಾತೀತ ಸತ್ಯಗಳನ್ನು ಎಲ್ಲರೂ ಎಲ್ಲಿ ಎಟುಕಿಸಿಕೊಳ್ಳಲು ಸಾಧ್ಯ? ಮನುಷ್ಯ ಅದೊಂದೆ ಘನ ಉದ್ದೇಶದಿಂದ ಜನ್ಮಿಸಿ ಬಂದಿದ್ದಾನೆಯೆ? ಹುಟ್ಟಿನ ಉದ್ದೇಶ ಕಾರಣ ಪರಿಣಾಮಗಳು ಏನು? ಹಾಗೆ ಸಾವನ್ನು ಆರಾಧಿಸಿ ಆನಂದಿಸಿ ಸಂಭ್ರಮಿಸಿದರೆ ಹೋದ ಜೀವಕ್ಕೆ ಏನು ಗ್ಯಾರಂಟಿ? ಅಶ್ವತ್ ಎಚ್ಚರಿಸಿ ಕೇಳಿದರು.

`ಯಾಕೊ ಸೈಲೆಂಟಾದೆ…’

`ಡೆತ್ ಬಗ್ಗೆ ಯೋಚಿಸ್ತಿದ್ದೆ’

`ಹೇಯ್; ಮರ್ತೋಗಿದ್ದೀಯಾ! ನಾವು ಸತ್ತು ಹೋಗಿದ್ದೇವೆ ಕಣೊ’

`ಆದ್ರೆ ಇಲ್ಲಿ ಚಹಾ ಕುಡೀತಿದ್ದೀವಿ. ಸಿಗರೇಟು ಸೇದುತ್ತಿದ್ದೀವಿ. ಹುಡುಗಿಯರ ನೋಡ್ತಾ ಇದ್ದೀವಿ. ಆ ಅಂಗಡಿ ಸಾಲುಗಳಲ್ಲಿ ವ್ಯಾಪಾರ ಮಾಡ್ತಿರೊ ಆಂಟಿಯರ ಹಿಂಬದಿಯ ಫೀಲ್ ಮಾಡ್ತಿದ್ದೀವಿ. ಮನದಲ್ಲಿ ಊರು ಕೇರಿ ನೆನ್ನೆ ಮೊನ್ನೆ ಅವಳು ಇವಳು ಅವರು ಸತ್ತಿದ್ದು ಯಾರಿಗೊ ಹೆರಿಗೆ ಆದದ್ದು… ಟಚ್ ಆದದ್ದು… ಲಿಂಕ್ ಮಿಸ್ಸಾಗಿದ್ದೂ… ಈ ಎಲ್ಲ ಚರಾಚರ ಸಂಗತಿಗಳೆಲ್ಲ ಒಟ್ಟಿಗೇ ಗೊತ್ತಾಗುತ್ತಿವೆಯಲ್ಲ ಸಾರ್? ಸತ್ತವರಿಗೆ ಇವೆಲ್ಲ ಅಪೋರ್ಡಬಲ್ಲಾ…’

`ಸ್ಪಿರುಚ್ಯುವಲೀ ಮ್ಯಾನ್ ಆಲ್‌ರೆಡಿ ಲಾಸ್ಟ್ ಇಸ್ ಡೆಸ್ಟಿನಿ. ಭೌತಿಕವಾಗಿ ಬದುಕಿರಬಹುದೂ. ಇಸ್ ಎಕ್ಸಿಸ್‍ಟೆನ್ಸ್ ಯೀಸ್ ಎ ಟೆಂಪೊರರಿ ಫೆನಾಮೆನನ್… ನೋ ಮೋರ್ ದ್ಯಾನ್ ದಟ್… ವಿಕೆನ್ ಫೀಲ್ ಲೈಕ್ ಬೀಸ್ಟ್ ವೀ ಆರ್ ಅಂಡರ್ ದಿ ಕಂಟ್ರೋಲ್ ಆಫ್ ಮಾನ್ಸ್‍ಸ್ಟರ್ಸ್… ಆಗ್ಲೆ ಸಂಕೋಲೆಗಳ ಬಗ್ಗೆ ಮಾತಾಡ್ತ ಇದ್ದೆವು. ಬದುಕಿದ್ದೀನಿ ಅನ್ನೊದಿಕ್ಕೆ ನೀನು ಈಗ ಒಂದು ದೊಡ್ಡ ಸಾಕ್ಷಿ ಪಟ್ಟಿಯನ್ನೆ ಕೊಟ್ಟೆ. ದಟ್ಸ್ ಆಲ್ ಫಾಲ್ಸ್ ಇಮೇಜಸ್… ದಿಸ್ ಅಗ್ಲಿ ಸಿಸ್ಟಮ್ ಆಫ್ ಲೈಫ್ ಯೀಸ್ ಆ್ಯನ್ ಇಲ್ಯೂಷನ್. ಆದರೆ ಮನುಷ್ಯ ಇದನ್ನೆಲ್ಲ ಸ್ವರ್ಗ ಅಂತ ತಿಳಿದಿದ್ದಾನೆ ಬಹಳ ಕಾಲ ಬದುಕಿ ಉಳಿಯುವೆ ಎಂದು ಮೆರೀತಾನೆ. ಸತ್ತು ಹೋಗಿದ್ದೀವಿ ಕಣೋ… ಅಂತರಂಗದಲ್ಲಿ ಈ ದೇಶದ ನಾಗರೀಕತೆ ಎಷ್ಟೆಷ್ಟು ಬಾರಿ ಸಾಮೂಹಿಕವಾಗಿ ಸತ್ತಿದೆ ಗೊತ್ತಾ… ಸಾಮೂಹಿಕ ಹತ್ಯೆಗಳಿಗೆ ಇತಿಹಾಸದಲ್ಲಿ ಲೆಕ್ಕ ಇದೆಯೇ? ಸದಾ ಉರಿವ ಚಿತಾಗಾರಗಳು ಹಿಟ್ಲರನ ಡೆತ್ ಕ್ಯಾಂಪುಗಳಲ್ಲಿ ಇದ್ದವು. ನಮ್ಮಲ್ಲಿ ಹಿಂದೆಯೆ ಅಂತಹ ಭಯಾನಕಗಳು ನಡೆದು ನಡೆದೂ ಆ ಭೀತಿಯಲ್ಲೇ ಎಷ್ಟೋ ದಮನಿತರೆಲ್ಲ ಸತ್ತಂತೆ ಬದುಕಿದ್ದಾರೆ. ಸರಿಯಾಗಿ ದಿಟ್ಟಿಸಿ ನೋಡಿದ್ದೀಯಾ ಈ ಬಡಪಾಯಿ ಜನರ ಪಾಡಾ? ಆ ಜನ ನಕ್ಕರೂ ಅತ್ತಂತೆ ಕಾಣುತ್ತಾರೆ. ಏಳಿ ಎದ್ದೇಳಿ ಎಂದರೆ ಶವದಂತೆ ಬಿದ್ದಿರುತ್ತಾರೆ. ಭೀತಿಯ ಜನರ ಮುಖದಲ್ಲಿ ಸಾವಿನ ನೆರಳು ತುಂಬಿದೆಯಲ್ಲೊ… ಬದುಕಿರುವ ಕುರುಹುಗಳೇನು ಎಂದು ಯಾರನ್ನಾದರೂ ಕೇಳಿದ್ದೀಯಾ…

ಮನುಷ್ಯರ ನೈತಿಕ ಪ್ರಜ್ಞೆ ಇಷ್ಟೊತ್ತಿಗಾಗಲೆ ಆಕಾಶ ಮುಟ್ಟಬೇಕಿತ್ತು! ಈ ಧೂರ್ತ ಮನುಷ್ಯ ಜಾತಿ ಧರ್ಮಗಳ ಹೆಸರಲ್ಲಿ ಇಷ್ಟೊಂದು ಕಗ್ಗೊಲೆಗೆ ಮುಂದಾಗಿದ್ದಾನೆ ಎಂದರೆ ಮನುಷ್ಯ ಸತ್ತು ಹೋಗಿದ್ದಾನೆ ಎಂದು ಅರ್ಥ. ಇದರ ಇನ್ನೊಂದು ತುದಿ ಏನು ಗೊತ್ತೇ? `ಗಾಡ್ ಯೀಸ್ ಡೆಡ್’ ಅನ್ನೋದು. ಇದನ್ನು ಯಾರೇಳಿದ್ರು ಗೊತ್ತಾ ನಿನಗೆ’

`ಗೊತ್ತಿದೆ ಸಾರ್… ನೀಚೆ ಎಂಬ ಜರ್ಮನಿಯ ಫಿಲಾಸಫರ್ ಹೇಳಿದ್ದು. ಹತ್ತೊಂಬತ್ತನೆ ಶತಮಾನದ ಮಧ್ಯಭಾಗದಲ್ಲಿದ್ದ. ಕ್ರಿಶ್ಚಿಯಾನಿಟಿಯ ಮುಂದೆ ದೇವರು ಸತ್ತ ಎಂದು ಸವಾಲು ಎಸೆದಿದ್ದ. ಐಡಿಯಾಲಿಸಂ ಹಾಗೂ ರ್ಯಾಷನಾಲಿಟಿ ವಿಚಾರಗಳಿಂದ ದಂಗು ಬಡಿಸಿದ್ದ. ಮನುಷ್ಯ ಸಮಾಜಗಳ ಸಾಧ್ಯತೆಯ ಬಗ್ಗೆ ಚಿಂತಿಸಿದ್ದ. ದೇವರು ಸತ್ತಿದ್ದಾನೆ ಎಂದರೆ ಮನುಷ್ಯರೂ ಸತ್ತಿದ್ದಾರೆಂದು ಹೊಸದೊಂದು ರಾಜಕೀಯ ತತ್ವಶಾಸ್ತ್ರವನ್ನೇ ಮಂಡಿಸಿದ್ದ…’

ನನ್ನನ್ನು ಒಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿ ನೋಡಿದ ಅಶ್ವಥ್ ಅವರು… ಸಪ್ಲೈಯರ್‌ನ ಕರೆದು ಬಿಲ್‍ಪೇ ಮಾಡಿ ಬಾರಯ್ಯ ಎಂದು ಸ್ಕೂಟರಲ್ಲಿ ಕೂರಿಸಿಕೊಂಡು ಗ್ರ್ಯಾಂಡ್ ಪಾ ಪಬ್ ಹೌಸಿಗೆ ಕರೆತಂದರು. ಅದು ಆಗ ತಾನೆ ಆರಂಭವಾಗಿತ್ತು. ಕ್ಯಾಂಪಸ್ಸಿಗೆ ಅಂಟಿಕೊಂಡಿತ್ತು. ಗ್ಲಾಸಿನ ದೊಡ್ಡ ಮಗ್ಗುಗಳಲ್ಲಿ ಚೀಲ್ಡ್ ಬಿಯರ್ ಕೊಡುತ್ತಿದ್ದರು. ಕೊಡಗಿನ ಶೈಲಿಯ ಮಾಂಸಾಹಾರಗಳು. ಪಬ್ ಒಳಗೆ ಇಂಗ್ಲೆಂಡಿನ ಕಲ್ಚರ್ ಇತ್ತು. ಹಳ್ಳಿಯ ಆ ಪೆಂಟೆಯ ಎಂಡ, ಆ ಸಾರಾಯಿ ಅಂಗಡಿಗಳ ಸಾಕಷ್ಟು ಕಂಡಿದ್ದ ನನಗೆ ಆ ಪಬ್ ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಎರಡು ಮಗ್ ಬಿಯರನ್ನು ತಂದಿತ್ತ ಸಪ್ಲೈಯರ್. ಚಿಯರ್ಸ್ ಹೇಳಿಕೊಂಡು ಚೆಂದ ಒಗರಿನ ಬಿಯರನ್ನು ಹೀರಿದೆವು. ಮಂದವಾದ ಹಿತ ಮಿತ ನಿಶೆ. ನಮ್ಮ ವಯಸ್ಸಿನವರೆ ಅಲ್ಲಿ ಹೆಚ್ಚು ಇದ್ದಿದ್ದು. ಗದ್ದಲವಿಲ್ಲ. ಸಭ್ಯ ಸುಶೀಕ್ಷಿತ ಕುಡುಗರು. ಹುಡುಗಿಯರೂ ಇದ್ದರು. ಕೊಡಗಿನ ಕಡೆಯವರ ಪಬ್ ಅದಾಗಿದ್ದರಿಂದ ಕೊಡಗಿನ ಚೆಂದದ ಧೈರ್ಯವಂತ ಹೆಣ್ಣು ಹುಡುಗಿಯರು ಬಿಯರ್ ಸವಿಯುತ್ತಿದ್ದರು. ಬೆಚ್ಚಗಾಗಿದ್ದೆ. ಅಶ್ವಥ್ ಅವರು ನೋಡಲು ಒಮ್ಮೆಮ್ಮೆ ಡೇವಿಡ್ ಬೂನ್ ತರಕಾಣುತ್ತಿದ್ದರು. ಆತ ಆಸ್ಟ್ರೇಲಿಯಾದ ಸಮರ್ಥ ಕ್ರಿಕೆಟ್ ಪಟು ಆಗಿದ್ದ. ಅದೇ ಕೆಂಚು ಮೀಸೆಯ ಅಶ್ವಥ್ ದೇಹವೂ ಎತ್ತರವಾಗಿ ಬಲವಾಗಿತ್ತು. ಅವರ ಮುಂದೆ ಕ್ರಿಕೆಟ್ ಲೋಕದ ದಂತ ಕತೆಗಳ ವರ್ಣಿಸುತ್ತಿದ್ದೆ. ಒಂದು ಎಳೆ ಸಿಕ್ಕಿಬಿಟ್ಟರೆ ಸಾಕು; ಅದನ್ನು ಎಲ್ಲದಕ್ಕು ಸುತ್ತಿಬಿಡುತ್ತಿದ್ದೆ.
ಅಶ್ವಥ್‌ಗೆ ಕ್ರಿಕೆಟ್ ಆಟ ಇಷ್ಟ ಇರಲಿಲ್ಲ. ಕುಸ್ತಿ ಪ್ರಿಯರು ಅವರು. ನನಗಂತು ಎಲ್ಲೇ ಹೋದರೂ ಮುಷ್ಠಿ ಕಾಳಗದವರು, ಕುಸ್ತಿಪಟುಗಳು, ಭಾರ ಎತ್ತುವವರು ಬಹಳ ಸಲೀಸಾಗಿ ಗೆಳೆಯರಾಗಿ ಬಿಡುತ್ತಿದ್ದರು. ಅವರ ಮುಂದೆ ನಾನು ಚೀಕಲಾಗಿರುತ್ತಿದ್ದೆ. ಆದರೆ ಧೈರ್ಯದಲ್ಲಿ ಅಂತಹ ಬಲಾಢ್ಯರನ್ನೆ ಮಾತಿಗೆ ಸಿಲುಕಿಸಿ ಗಲಿಬಿಲಿ ಮಾಡಿಬಿಡುತ್ತಿದ್ದೆ. ಗಂಟಲು ಸರಿಪಡಿಸಿಕೊಂಡು ಗಂಭೀರವಾಗಿ ಕೇಳಿದರು…

`ನಾನು ಕಲ್ಪವಲ್ಲಿಯಲ್ಲಿ ಮಾತನ್ನು ಎಲ್ಲಿಗೆ ನಿಲ್ಲಿಸಿದ್ದೆ’

`ಆ ಟಾಪಿಕ್ ಹೆವ್ವಿ ಸಾರ್… ರಿಲ್ಯಾಕ್ಸ್ ಆಗಿರೋಣಾ’

`ನೋಡಿದೆಯಾ ಸುಲಭವಾಗಿ ಸುಖವಾಗಿ ಹಾಯಾಗಿರಲು ಮನುಷ್ಯ ಬಯಸ್ತಾನೆ…’

`ಹೌದು ಸಾರ್… ಯಾಕೆ ಕಷ್ಟ ಪಡೋಕೆ ಮುಂದಾಗೋದಿಲ್ಲಾ’

`ಅವರ್ದೇ ಮಾತಲ್ಲಿ ಹೇಳೋದಾದ್ರೆ ನಾವೆಲ್ಲ ಬೂರ್‍ಜ್ವ ಕಣೋ… ಯಾರೊ ದುಡೀತಾರೆ ಯಾರೊ ತರ್ತಾರೆ ಯಾರೊ ತಿಂತಾರೆ ಯಾರೊ ಸಾಯ್ತಾರೆ… ಈ `ಯಾರೊ’ ಅನ್ನೊ ಪದಾ ಇದೆಯಲ್ಲಾ; ಇದು ಬಹಳ ಅಪಾಯಕಾರಿ ಕಣೋ…’

`ಎಸ್ಕೇಪಿಸಂ ಕೂಡ ಬಾಳ ಈಸಿ ಅಲ್ವ ಸಾರ್… ಊರ್ಗೆ ಊರೆ ಸುಟ್ಟೋದ್ರೆ ಶ್ಯಾನ್ಬೊಗುನ್ ಸ್ಯಾಟ್ಕೆ ಏನಾದದು ಅಂತಾರಲ್ಲಾ ಅಂಗೆ ಇದು ಸಾರ್…’

`ಹೇಯೇ ಆತರ ಡರ್ಟಿ ಪದಗಳ್ನೆಲ್ಲ ಬಳಸಬೇಡ’

`ಸಾರಿ ಸಾರ್. ಪುರೋಹಿತಶಾಹಿ ಬಗ್ಗೆ ಹಳ್ಳಿ ಜನ ಅಷ್ಟು ಕಠಿಣವಾಗಿ ಗಾದೆ ಕಟ್ಟಿದ್ದಾರೆ.’

`ಕಂ ಟು ದಿ ಪಾಯಿಂಟ್… ಫ್ರೆಡ್ರಿಕ್ ನೀಶ್ಚ… ನೀಚೆ ಅಂತನೆಕರಕೊ… ಆತ ದೇವರ ಅಸ್ತಿತ್ವವನ್ನೆ ಅಲ್ಲಗಳೆದ. ಪ್ರತಿಯೊಂದಕ್ಕೂ ಕಾರಣವಿದೆ ಎಂದ. ಇರಲೇ ಬೇಕು. ಇಲ್ಲ ಅಂತ ಅನ್ಸುತ್ತೆ ಮಿಸ್ಟಿಕ್ ಮೈಂಡಲ್ಲಿ. ಬಟ್ ದೇರ್ ಶುಡ್ ಬಿ ಎ ರೀಸನ್ ಅಂಡ್ ರ್ಯಾಷನಾಲಿಟಿ. ಆಗ ತಾನೆ ಸೈಂಟಿಪಿಕ್ ಏಜ್ ಎನ್‍ಲೈಟನ್ ಆಗಿತ್ತು. ಪ್ರತಿಯೊಂದು ಕ್ರಿಯೆಗೂ ಕಾರಣ ಇರುತ್ತೆ. ಕಾರಣಕ್ಕೆ ಕಾರಣಗಳ ನಿರಂತರ ಕೊಂಡಿಗಳಿವೆ. ಆ ಒಂದೊಂದು ಕಾರಣಗಳೆಲ್ಲ ಒಟ್ಟುಗೂಡಿ ಮನುಷ್ಯನ ಅಸ್ತಿತ್ವ ವಿಕಾಸ ಆಗುತ್ತಲೆ ಬಂದಿದೆ. ಧರ್ಮದ ಅವಶ್ಯಕತೆ ಇಲ್ಲ ಎಂದು ಬಿಟ್ಟನಲ್ಲ ನೀಚೆ! ಎಂತಹ ಮಾರ್ಮಿಕ ಚಿಂತಕನೊ ಅವನೂ… ಅವನ ಮಾತುಗಳ ನೆನಪಿಗೆ ಬಂದಷ್ಟು ಹೇಳುವೆ ಸುಮ್ಮನೆ ಕೇಳಿಸಿಕೊ…

`ದೇವರು ಸತ್ತು ಹೋದ. ನಾವೆ ಅವನನ್ನು ಕೊಂದದ್ದು. ಈಗಲೂ ಕೊಲ್ಲುತ್ತಲೇ ಬಂದಿದ್ದೇವೆ. ಇಂತಲ್ಲಿ ಮನುಷ್ಯ ಹೇಗೆ ನೆಮ್ಮದಿಯಿಂದ ಇರಬಲ್ಲ? ಎಲ್ಲ ಪಾತಕಗಳ ಪಾತಕಿಗಳು ನಾವೇ ಆಗಿದ್ದೀವಲ್ಲಾ… ಯಾವುದು ನಮ್ಮ ಪಾವಿತ್ರ್ಯ ಹಾಗೂ ಸಾಮರ್ಥ್ಯ? ನಮ್ಮ ಕತ್ತಿಗಳ ಇರಿತದಿಂದಲೇ ನೆತ್ತರು ಜಿನುಗಿ ಜಿನುಗಿ ಈ ಲೋಕ ಹೆಪ್ಪುಗಟ್ಟುತ್ತ ಬಂದಿದೆ. ಪೈಶಾಚಿಕವಾದ ಈ ನೆತ್ತರ ಒರೆಸಿ ತೊಳೆಯುವವರು ಯಾರು? ಯಾವ ಪವಿತ್ರ ಜಲವಿದೆ ರಕ್ತ ಪಾತದ ಕೈಗಳ ತೊಳೆದುಕೊಳ್ಳಲು… ಪಶ್ಚಾತ್ತಾಪಕ್ಕಾಗಿ ನಾವು ಯಾವ ಮಹಾ ಹಬ್ಬಗಳ ಆಚರಿಸಲು ಸಾಧ್ಯ? ಇದೆಲ್ಲ ಮಾನವ ಘನತೆಯೆ? ದೇವರ ಹೆಸರಲ್ಲಿ ದೇವರನ್ನು ಕೊಲ್ಲುತ್ತಲೆ ಮೆರೆಯುವುದು ಆದರ್ಶವೇ… ತರ್ಕಬದ್ಧವೇ.’

ಇವು ನನ್ನ ಮಾತಲ್ಲ. 1882ರಲ್ಲಿ ಜರ್ಮನಿಯಲ್ಲಿ ಪ್ರೆಡ್ರಿಕ್ ನೀಚೆ `God is Dead’ ಎನ್ನುವ ಕೃತಿಯಲ್ಲಿ ಅಧಿಕೃತವಾಗಿ ಬರೆದ ವಿಚಾರಗಳು. ಆತ ಅಸ್ತಿತ್ವವಾದದ ಪ್ರಬಲ ಪ್ರತಿಪಾದಕನಾಗಿದ್ದ. ಎಕ್ಸಿಸ್‍ಸ್ಟೆನ್ಸಿಯಲಿಸಂ ಬಗ್ಗೆ ನಿನಗೆ ಗೊತ್ತಾಲ್ಲಾ… ತುಂಬ ಜನ ಚಿಂತಕರು ವೈಜ್ಞಾನಿಕವಾಗಿ ವೈಚಾರಿಕವಾಗಿ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಆ ಪಾಠ ಪರಿಪಾಠ ನಮಗೀಗ ಬೇಡ. ಕೆಲವೊಂದು ವಿಷಯಗಳನ್ನು ಪಾಠ ಮಾಡು ಎಂದು ಯಾರಿಗಾದರು ವಹಿಸಿದರೆ ಫ್ರೆಡ್ರಿಕ್ ನೀಚೆಯನ್ನೆ ಕೊಂದು ಬಿಡುತ್ತಾರೆ. ಅಂದರೆ ಅವನ ವಿಚಾರಗಳನ್ನೇ ಸುಟ್ಟು ಭಸ್ಮ ಮಾಡಿ ವಿಭೂತಿ ಮಾಡಿಬಿಡುತ್ತಾರೆ. ನಮ್ಮ ದೇಶದಲ್ಲಿ ಮುನ್ನೂರ ಅರವತ್ತು ಕೋಟಿ ದೇವಾನು ದೇವತೆಗಳು ದೇವರುಗಳು ಇದ್ದಾರಂತೆ. ಯಾವ ಋಷಿ ಮುನಿಗಳಯ್ಯಾ ದೇವಗಣತಿ ಮಾಡಿದವರೂ… ಎಂಗಯ್ಯ ಎಕ್ಸಾಕ್ಟ್ ನಂಬರ್ ಸಿಕ್ತು ಅವರಿಗೇ…’

`ಅದ್ರಲ್ಲಿ ಅನ್‍ಟಚಬಲ್ ಗಾಡ್ಗಗಳು, ಡೀಮನ್ಗಳು ಅವು ಇವು ಭೂತ ಪ್ರೇತಗಳೆಲ್ಲ ಸೇರಿಲ್ಲಾ ಸಾರ್, ಗಣತಿ ತಪ್ಪಾಗಿದೇ… ಇನ್ನು ದೇವ ಮಾನವರು, ಸ್ವಾಮೀಜಿಗಳು…’

`ಹೇಯ್ ಗೇಲಿ ಮಾಡ್ಬೇಡಾ; ಸೀರಿಯಸ್ಸಾಗಿ ಹೇಳೊ…’

ನೀಚೆಗೆ ಸಪೋರ್ಟಾಗಿ ಹೇಳ್ತಿದ್ದೀನಿ ಸಾರ್… ನೀಚೆ ಕ್ಲಿಯರ್ರಾಗಿ ದೇವರು ಇದ್ದಾನೆ; ಅಥವಾ ಇಲ್ಲಾ ಅಂತಾ ಹೇಳ್ತಾ ಇಲ್ಲ. ಡಾರ್ವಿನ್ ಕೂಡ ತನ್ನ `ಆರೀಜಿನ್ ಆಫ್ ದಿ ಸ್ಪೀಷಿಸ್’ ನ ಥೀಸೀಸ್‍ನ ಕೊನೆಯ ವಾಕ್ಯದಲ್ಲಿ ಅನುಮಾನ ಮಂಡಿಸಿದ್ದಾನೆ. `ಇಷ್ಟೆಲ್ಲ ಜೀವ ವೈವಿಧ್ಯದ ಸೃಷ್ಟಿಯ ಸಾಧ್ಯತೆಯನ್ನು ಗಮನಿಸಿದರೆ ಈ ಎಲ್ಲಾ ಜೀವರಾಶಿಯೂ ನಿಸರ್ಗವೂ ಕೇವಲ ದೇವರಿಂದಲೇ ಸೃಷ್ಟಿ ಆಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ… ಸೈಂಟಿಫಿಕ್ ಟ್ರೂಥ್ ಯಾವತ್ತೂ ಪೂರ್ಣವಾಗಿ ಯಾವುದನ್ನು ನಂಬುವುದಿಲ್ಲ. ನೀಚೆ ನಿರೀಶ್ವರವಾದಿಯೇ ಆಗಿದ್ದರು ವೈಜ್ಞಾನಿಕ ತಳಹದಿಯಲ್ಲಿ ಏನಿದೆ ಎಂದು ಹುಡುಕಾಡುತ್ತಾನೆ…’

`ಚರಿತ್ರೆಯು ಹಾಗೆನೇ… ಚರಿತ್ರೆ ಇಲ್ಲಾ. ಚರಿತ್ರೆಯನ್ನು ಕೊಂದು ಬಿಟ್ಟಿದ್ದೇವೆ. ಅದರ ಜೊತೆಯಲ್ಲೆ ಕಗ್ಗೊಲೆಯ ರಕ್ತಪಾತಗಳಲ್ಲಿ ನಮ್ಮನ್ನು ನಾವೆ ಕೊಂದುಕೊಂಡಿದ್ದೇವೆ. ಕಾಲವನ್ನು ಖತಂಗೊಳಿಸಿದ್ದೇವೆ. ಗದ್ದುಗೆಗಳ ಮೆರೆಸಿ ಸುಟ್ಟುಹಾಕಿದ್ದೇವೆ. ಹಿಟ್ಲರ್… ಆಫ್ಟರ್‌ಆಲ್ ಹೀ ವಾಸ್ ಎ ಕಾಮನ್ ಸೋಲ್ಜರ್ ಆಟ್ ದಿ ಫಸ್ಟ್ ವರ್ಲ್ಡ್‌ ವಾರ್. ದೆನ್ ವಾಟ್ ಹ್ಯಾಪನ್ಡ್‌; ಆಪ್ಟರ್ ದಿ ಡಿಫೀಟ್… ದಿ ಏಜ್ ಆಫ್ ಹೆಲ್, ಮ್ಯಾಸಕಾಲ್ಟ್, ಬ್ರೂಟಲ್ ಹಂಟಿಂಗ್ ಅಂಡ್ ಶೇಮ್‌ಲೆಸ್ ವಾರ್ಸ್ ಬಿಕೇಮ್ ದಿ ಡಿಸೈನಿಂಗ್ ಅಥಾರಿಟೀಸ್ ಟು ಕ್ಯಾಪ್ಚರ್ ದ ವರ್ಲ್ಡ್‌ ಪವರ್… ದಿ ಡಿಕ್ಟೇರಿಯಲ್ ಡೀಮನ್ಸ್ ಕಿಲ್ಡ್‌ ಮಿಲಿಯನ್ಸ್ ಆಫ್ ಇನ್ನೊಸೆಂಟಿ ಸಿವಿಲಿಯನ್ಸ್… ಇತಿಹಾಸ ಸಮಾಧಿ ಆದಾಗ ಜೀವನವೇ ಹೊಸದೊಂದು ಚರಿತ್ರೆಯಾಗುತ್ತದೆ. ಈ ಕೃತ್ಯಗಳಿಗಾಗಿ ದೇವರನ್ನು ಮನುಷ್ಯ ಬಳಸಿದ್ದಾನೆ. ದೇವರಿಗೂ ಒಂದು ಎಥಿಕ್ಸ್ ಇದೆ ಅಲ್ಲವೆ? ಅದು ಪರೀಕ್ಷೆ ಮಾಡುತ್ತಿಲ್ಲವೆ. ನ್ಯಾಚುರಲ್ ಬ್ಯಾಲೆನ್ಸ್ ದೇವರಿಗಿಂತಲು ಹೊರತಾದ ಪರಿಹಾರವೆ. ಸಂಸ್ಕೃತಿಗಳನ್ನೂ ಅಪವ್ಯಾಖ್ಯಾನ ಮಾಡಿ ಅವುಗಳಿಗೆ ವಿಷ ಉಣಿಸಿದರು. ಭಾಷೆಗಳ ಅಪವಿತ್ರಗೊಳಿಸಿದರು. ಜಾತಿಬೇಧ ಎಂದರೆ ಕ್ಯಾನಿಬಾಲಿಸಂನ ವ್ಯವಸ್ಥಿತ ಬೇಟೆ ಅಲ್ಲವೆ? ದೇವರಿಲ್ಲ ಧರ್ಮ ಇಲ್ಲ ಸಂಸ್ಕೃತಿ ಭಾಷೆ ಇಲ್ಲ. ಅಪನಂಬಿಕೆಗಳ ಸಂತೆಗಳಲ್ಲಿ ಮನುಷ್ಯ ಹಿಂಸೆಯನ್ನು ಧಾರಾಳ ಬೆಲೆಗೆ ಮಾರುತ್ತಿದ್ದಾನೆ…

ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಷ್ಟೆಲ್ಲ ಸುಳ್ಳುಗಳ ಹೇಳಬೇಕಲ್ಲಾ… ನಂಬಿಕೆಯ ವ್ಯವಸ್ಥೆಯೂ ಸುಳ್ಳಿನ ಆಚರಣೆಗಳಾಗಿವೆ. ಜಾತಿ ವ್ಯವಸ್ಥೆಯನ್ನು ಅಸ್ತಿತ್ವವಾದದಿಂದ ನೋಡಲು ಸಾಧ್ಯವೆ? ಕಪ್ಪು ಜನಾಂಗವು ಉಳಿವಿಗಾಗಿ ಎಷ್ಟೊಂದು ಹೋರಾಡಿತು. ಸರ್ವವೈವಲ್ ಆಫ್ ದಿ ಫಿಟ್ಟೆಸ್ಟ್ ಎಂದ ಡಾರ್ವಿನ್. ನಾವು ಅಸ್ಪೃಶ್ಯರು ಇನ್ನೂ ಪಾತಾಳಕ್ಕೆ ತುಳಿಯಲ್ಪಟ್ಟರೂ ಅಸ್ತಿತ್ವ ಉಳಿಸಿಕೊಂಡೆವು. ಜೀನ್ ಪಾಲ್ ಸಾರ್‍ತ್ರೆ ಮಾನವತಾವಾದಿ ಲೇಖಕ. ಮನುಷ್ಯನ ಅಸ್ತಿತ್ವ ಅವನ ಆಲೋಚನೆ ಪ್ರತಿರೋಧ ಪ್ರೀತಿಗಳಲ್ಲೆ ಇದೆ ಎಂದು ಸಾರಿದ. ನೀಚೆಯ ವಿಸ್ತರಣೆ ಅವನು ಮನುಷ್ಯರ ಅಸ್ತಿತ್ವ ದೇವರ ಅಸ್ತಿತ್ವ ಎರಡೂ ಒಂದೇ ಎಂಬಂತೆ ಶಿವರಾಮ ಕಾರಂತರೂ ಹೇಳಿದ್ದರು. ಮನುಷ್ಯನ ಎಲ್ಲ ಮಿತಿಗಳೂ ಸಾಧ್ಯತೆಗಳೂ ದೇವರ ಸ್ಥಿತಿಗಳೂ ಆಗಿವೆ. ದೇವರ ಮಿತಿಯನ್ನು ಮನುಷ್ಯ ಮೀರಲಾರ. ಮನುಷ್ಯನ ಮಿತಿಗಳನ್ನು ದೇವರೂ ದಾಟಲಾರ. ಯುದ್ಧಗಳು ಧರ್ಮ ವಿಜಯ ಅಲ್ಲ. ಮನುಷ್ಯ ದೇವರ ತಪ್ಪು ಕಲ್ಪನೆಗಳಿಂದಲೆ ಬ್ರೂಟಲ್ ಆದ. ಬೀಸ್ಟ್ ಆದ. ಆತ ದೈವತ್ವಕ್ಕೆ ಎಂದೂ ಏರಿಲ್ಲ. ಯಾವತ್ತೂ ಸಾಧ್ಯವಿಲ್ಲ. ಅಂತಹ ಒಂದು ನಿರ್ದಿಷ್ಟ ಡಿಸೈನ್ ಈಗಾಗಲೆ ಎಲ್ಲೂ ಸಿದ್ಧವಾಗಿಲ್ಲ. ದೇವರು ಇದೇ ಅಂತಿಮ ಎಂದು ಯಾವುದನ್ನೂ ಹೇಳಿಲ್ಲ. ದೇವರು ಹೇಳಿದ್ದೆಂದು ಸೇಕ್ರೆಡ್ ಟೆಕ್ಟ್ಸ್‌ಗಳನ್ನು ಅಂದರೆ ಪವಿತ್ರ ಧರ್ಮ ಗ್ರಂಥಗಳನ್ನು ನಾವೇ ಬರೆದುಕೊಂಡು ಬಂದಿದ್ದೇವೆ. ನಂಬಿಸಲು ಮೈ ಮರೆವ ಮಾಂತ್ರಿಕ ಪವಾಡಗಳ ಸೃಷ್ಟಿಸಿದ್ದೇವೆ. ಹೆದರಿಸಿದ್ದೇವೆ. ಭಕ್ತಿಯ ಉಪಾಯ ತೋರಿದ್ದೇವೆ. ನಾಟಕೀಯ ನೈತಿಕತೆಯನ್ನು ಜಾರಿಗೊಳಿಸಿದ್ದೇವೆ. ನೀನು ಬದುಕಬೇಕೇ; ಅದನ್ನು ನೀನೆ ನಿರ್ಧರಿಸಿಕೊ ರೂಪಿಸಿಕೊ. ಇರಬೇಕೇ… ಇರಬೇಕಾದಂತೆ ಬದುಕು. ಅಂದರೆ ಈ ಅನಂತತೆಯ ಸಾಧ್ಯತೆಗಳನ್ನು ಅರ್ಥಮಾಡಿಕೊಂಡು ನಿನ್ನ ಅಸ್ತಿತ್ವ ಉಳಿಸಿಕೊ…’

`ಯಸ್ ಸರ್. ಮ್ಯಾನ್ ಈಸ್ ಎ ಥಿಂಕಿಂಗ್ ಎನಿಮಲ್. ಹೀ ಕೆನ್ ಎಕ್ಸಿಸ್ಟ್ ಇಸ್ ವೋನ್ ಲೈಫ್ ಇನ್ ದಿ ಕಾಂಟೆಕ್ಸ್ಟ್ ಆಫ್ ಇಸ್ ಎನ್ವಿರಾನ್ಮೆಂಡ್ ವಿತ್ ದಿ ಕೇಪಬಲಿಟೀಸ್. ಅಫ್ ಕೋರ್ಸ್; ದೇರ್ ಈಸ್ ನೋ ಗಾಡ್; ಬಟ್ ದೇರ್ ಈಸ್ ಆ್ಯನ್ ಎನಾರಮಸ್ ಸೂಪರ್‍ನ್ಯಾಚುರಲ್ ಪವರ್ ಇನ್ ದಿಸ್ ಯೂನಿವರ್ಸ್. ಕಾರ್ಲ್‌ ಸೇಗನ್; ಆ್ಯನ್ ಆಸ್ಟ್ರಾನಮರ್ ಸೆಡ್ ದಟ್; `ಮ್ಯಾನ್ ಈಸ್ ಎ ಕ್ರಿಯೇಶನ್ ಆಫ್ ಸ್ಟಾರ್ ಡಸ್ಟ್. ಇಟ್ ಈಸ್ ಟ್ರೂ… ವಾಟ್ ಎ ವಂಡರ್‍ಪುಲ್ ಸೈಂಟಿಫಿಕ್ ಟ್ರೂಥ್ ಈ ಸ್ಫೋಕ್ ವಿಥ್ ಸ್ಪಾಂಟೇನಿಯಸ್ ವಿಷನ್… ಐ ಹೋಪ್ ದಿಸ್ ಇಸ್ ಆ್ಯಬ್ಸ್ಯುಲ್ಯೂಟ್ಲಿ ಕಾಸ್ಮಿಕ್ ರಿಯಾಲಿಟಿ. ದಿ ಎಲಿಮೆಂಟ್ಸ್ ಆಫ್ ಎನಿಸ್ಟಾರ್ ಆರ್ ವಿಥ್ ಇನ್ ಅವರ್ ಬಾಡಿ. ದಿ ಆಟಂ ಆಫ್ ಯೂನಿವರ್ಸ್ ಅಂಡ್ ದಿ ಆಟಮ್ ಆಪ್ ಅವರ್ ಬಾಡಿ ಈಸ್ ಒನ್ ಅಂಡ್ ದಿ ಸೇಮ್. ವಾಟ್ ಈಸ್ ದಿ ಸ್ಟಫ್ ಆರ್ ದಿ ಫಂಡಮೆಂಟಲ್ ಎಲಿಮೆಂಟ್ಸ್ ಆಫ್ ಎ ಸ್ಟಾರ್… ದೇರ್ ಆರ್ ಫೋರ್ ಬೇಸಿಕ್ ಎಲಿಮೆಂಟ್ಸ್ ಆರ್ ದೇರ್ ಇನ್ ಎ ಸ್ಟಾರ್. ದೋಸ್ ಆರ್ ಆ್ಯಕ್ಸಿಜನ್, ಹೈಡ್ರೊಜನ್, ನೈಟ್ರೋಜನ್ ಅಂಡ್ ಕಾರ್ಬನ್. ಸ್ಟಿಲ್ ದೇರ್ ಆರ್ ಮೋರ್ ಎಲಿಮೆಂಟ್ಸ್; ವಿಚ್ ಆರ್. ಈಥೇನ್, ಮೀಥೇನ್, ಈಲಿಯಂ ಅಂಡ್ ಮೇಬಿ ಸಂ ಮೋರ್ ಡಿಂಕ್ಸ್ ಸುಡ್ ಬೀ… ದಿ ಎನರ್ಜಿ, ಗ್ರ್ಯಾವಿಟಿ, ದಿ ಮೋಸನ್… ದೀಸ್ ಆರ್ ಆಲ್ ಫ್ರಂ ದಿ ವೂಂಬ್ ಆಫ್ ದಿ ಗೆಲಾಕ್ಸಿ. ವಿ ಬಿಲಾಂಗ್ ಟು ಎ ಸ್ಮಾಲ್ ಗೆಲಾಕ್ಸಿ ವಿಚ್ ಈಸ್ ಐಡೆಂಟಿಫೈಡ್ ಆಸ್ ಎ ಮಿಲ್ಕಿವೇ… ವಾಟ್ ಎ ಮೆಟಪಾರಿಕಲ್ ಅಂಡ್ ಮೇಟ್ರಿಯಾರ್ಕಿಕಲ್ ನೇಮ್ ಫಾರ್ ಅವರ್ ಬಿಲಾಂಗಿಂಗ್‍ನೆಸ್ ಇನ್ ದಿಸ್ ಸ್ಕೈ…’

`ಹೇಯ್, ಯಾರೊ ನಿನ್ಗೆ ಇಂಗ್ಲೀಷ್ ಕಲಿಸಿಕೊಟ್ಟೋರೂ…’

`ಯಾಕೆ ಸಾರ್… ನನ್ಗೆ ಗೊತ್ತು ಸಾರ್; ನಾನು ತಪ್ಪು ಇಂಗ್ಲೀಷ್ ಮಾತಾಡ್ತಿನಿ ಅಂತಾ… ಆಫ್ರಿಕನ್ ಬ್ಲಾಕ್ ಇಂಗ್ಲೀಷ್ ಇನ್ನೂ ಚೆನ್ನಾಗಿದೆ ಸಾರ್. ಅವರ್ನ ವೋದಿ ಕಲ್ತಿದ್ದೀನಿ… ಆ ಮೇಲೆ ಕೃಷ್ಣಮೂರ್ತಿ ಪುರಂನಿಂದ ಒಬ್ಬ ಸಭ್ಯ ಬ್ರಾಹ್ಮಣರು ಕಲಿಸಲು ಬರ್ತಿದ್ರು… ಅಲ್ಲಿ ಇಲ್ಲಿ ತಿಳಿದಂತೆಲ್ಲ ಬಳಸಿ ಕಲೀತಿದ್ದೀನಿ… ನಿಮ್ಮ ಮುಂದೆ ಟ್ರಯಲ್ ಮಾಡ್ದೆ ಕ್ಷಮಿಸಿ ಸಾರ್…’

`ವೊಕಾಬ್ಲರಿನ ರಿಚ್ ಮಾಡಿಕೊ, ವಾಕ್ಯ ಕೊಂಡಿಗಳ ಸರಿ ಮಾಡಿಕೊ… ಆ್ಯಕ್ಸೆಂಟನ್ನು ಸ್ಟೈಲಿಷ್ ಮಾಡು. ಅಷ್ಟು ಸಾಕು… ಬೈದಬೈ ಫಿಸಿಕ್ಸನ್ನು ಎಲ್ಲಿ ಓದಿದ್ದೊ…’
`ಲೈಬ್ರರೀಲಿ ಸಾರ್. ಎನ್‍ಸೈಕ್ಲೋಪಿಡಿಯಾಗಳು ಜನ ಸಾಮಾನ್ಯರಿಗೆ ಎಂದು ತರತರದಲ್ಲಿ ಜ್ಞಾನ ವಿಜ್ಞಾನಗಳ ಸರಳವಾಗಿ ಬರೆದಿದ್ದಾರೆ ಸಾರ್. ನನ್ನ ಕುತೂಹಲಕ್ಕೆ ಓದಿರೋದು ಅಷ್ಟೇ… ಅದು ಎಷ್ಟು ಫರ್ಪೆಕ್ಟೋ ಕನ್ಫ್ಯೂಸ್ಡೋ ಗೊತ್ತಿಲ್ಲ…’

ಸಮಯ ಮೀರಿತ್ತು. ನಾವು ಏನೇನು ಮಾತಾಡುತ್ತಿದ್ದೆವು ಎಂಬುದೆ ಮರೆತುಹೋಗಿತ್ತು. ತೂರಾಡುತಿದ್ದೋ… ಜೋರಾಗಿಯೆ ಬಿಲ್ಲಾಗಿತ್ತು. ಅಶ್ವಥ್ ಅದನ್ನೆಲ್ಲ ಲೆಕ್ಕಿಸುತ್ತಿರಲಿಲ್ಲ. ಹಾಸ್ಟಲಿಗೆ ಬಂದಾಗ ರಾತ್ರಿ ಒಂದು ಗಂಟೆ. ಕ್ಯಾಂಪಸ್ಸಲ್ಲಿ ಅವೇಳೆಯಲ್ಲಿ ಹಾಗೆ ಅಮಲಾಗಿ ಸುತ್ತುವುದೂ ಮಜವೆ ಆಗಿತ್ತು. ಯಾರೊ ಹೇಳಿದರು. ನಾಳೆ ಸೀಟ್ ಅನೌನ್ಸ್ ಆಗುತ್ತೆ ಎಂದು. ಸಣ್ಣದಾಗಿ ಅಳುಕಾಯಿತು. ಭಂಡ ಧೈರ್ಯ. ಬದುಕಿ ಉಳಿಯಲು ಹೋರಾಡಲೆಬೇಕಿತ್ತು. ತಲೆ ಎತ್ತಿ ಆಕಾಶ ನೋಡಿದೆ. ಬೆಳದಿಂಗಳು ಹಬ್ಬಿತ್ತು. ಚಂದ್ರ ದುಂಡಾಗಿ ನಗುತ್ತಿದ್ದ. ಆ ಸೂರ್ಯ ನನ್ನ ಕಣ್ಣಲ್ಲೂ ಇದ್ದಾನೆ; ಆಕಾಶದಲ್ಲು ತೇಲುತ್ತಿದ್ದಾನೆ. ದಿಟ್ಟಿಸಿದವರ ಕಣ್ಣಲ್ಲೆಲ್ಲ ಕಂಡಿದ್ದಾನೆ ಎಂದುಕೊಂಡೆ.


ರೂಮಲ್ಲಿ ಮಲಗಿದೆವು. ನಿದ್ದೆ ಬಂದಿದ್ದೆ ಗೊತ್ತಿರಲಿಲ್ಲ. ಬೇಗ ಎದ್ದಿದ್ದೆ. ಕಾತರಿಸುತಿದ್ದೆ ರಿಸಲ್ಟಿಗಾಗಿ ಆ್ಯಂಥ್ರೋಪಾಲಜಿ, ಜರ್ನಲಿಸಂ, ಫಿಲಾಸಫಿ, ಫೋಕ್‍ಲೋಕ್ ವಿಭಾಗಗಳಿಗೆ ಅರ್ಜಿ ಹಾಕಿದ್ದೆ. ಎಲ್ಲ ಕಡೆ ಸೀಟು ಸಿಕ್ಕಿತ್ತು. ಆಯಾಯ ವಿಭಾಗಗಳಲ್ಲಿ ಯಾವ ಯಾವ ಜಾತಿಯವರ ಯಜಮಾನಿಕೆ ಇದೆ ಎಂದು ಲೆಕ್ಕಿಸಿದೆ. ಮತ್ತೆ ನನ್ನನ್ನು ಮೂರನೇ ದರ್ಜೆಗೆ ಎಸೆದರೆ ಏನು ಮಾಡುವುದು ಎಂಬ ಭಯವಿತ್ತು. ಕೊನೆಗೆ ಜಾನಪದ ಎಂ.ಎ.ಗೆ ಸೇರಿದ್ದೆ. ಜಾನಪದ ಸುಲಭ; ಬೇರೆ ಉನ್ನತ ಪರೀಕ್ಷೆಗಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗುತ್ತದೆ ಎಂದು ಆಯ್ಕೆ ಮಾಡಿಕೊಂಡಿದ್ದೆ. ಆ ವಿಷಯದಲ್ಲಿ ಎಂ.ಎ. ಮಾಡಲು ವಿದ್ಯಾರ್ಥಿಗಳೇ ಬರುತ್ತಿರಲಿಲ್ಲ. ಗೆಳೆಯ ಮಂಜುನಾಥನೂ ಜಾನಪದ ಸೇರಿದ್ದ. ಸೈಕೋಲಜಿಯಲ್ಲಿ ಬಹಳ ಕಡಿಮೆ ಅಂಕ ನೀಡಿದ್ದರಿಂದ ನನ್ನಂತೆಯೆ ಮರಳಿ ಯತ್ನವ ಮಾಡಿದ್ದ. ಇಬ್ಬರೂ ಜೊತೆಯಾದೆವು. ಗೋವಾದಿಂದ ಒಬ್ಬ ಹುಡುಗಿ ಪುಷ್ಪಾ ಕಾಸ್ಕರ್ ಎಂಬಾಕೆಯು ಸೇರಿದ್ದಳು. ಮೋಹಿನಿ ಎಂಬ ತೀರ್ಥಹಳ್ಳಿಯ ಮುದ್ದಾದ ಮುಗ್ಧ ಹುಡುಗಿಯೂ ಎಂ.ಎ.ಗೆ ಜಾಯಿನ್ ಆಗಿದ್ದಳು. ಮತ್ತೆ ಬೇರೊಂದು ಹೊಸ ಜೀವನಕ್ಕೆ ಪ್ರವೇಶಿಸಿದ್ದೆ.