ಸಾರ್ಥಕ್ಯ

ಬೀದಿ ಬದಿಯ ಸಾರ್ವಜನಿಕ
ನಿಯೋನ್ ದೀಪ ಪ್ರಜ್ವಲಿಸಲು
ಕತ್ತಲೆಯ ಇರುಳಿಗೆ ಸೂರ್ಯನಾಗಿ

ಅದೆಲ್ಲಿಂದಲೋ ಬಂದ ರಾಶಿ ರಾಶಿ
ಪತಂಗಗಳು ದೀಪಕ್ಕೆ ಮುತ್ತಿಕ್ಕಲು
ಬೆಳಕಿನಡಿಯಲ್ಲಿ ಮಿಂಚುಹುಳುಗಳಂತೆ

ಮೇಲೆ, ಕೆಳಗೆ ಸುತ್ತಲೂ
ಗಿರಕಿ ಹೊಡೆಯುತ್ತ, ಬೆಳ್ಳನೆಯ
ದೀಪಗಳೇ ಆಗಿ ದೀಪ ಬುಡದಲ್ಲಿ

ಮುತ್ತಿಕ್ಕುವ ಕ್ಷಣ ಕಂಡು
ಸ್ವರ್ಗಕ್ಕೆ ಹೋಗುತ್ತವೆಂಬಂತೆ
ಬುಗುರಿಯಂತೆ ತಿರು ತಿರುಗಿ

ಮೆರವಣಿಗೆಯಂತೆ ಕಂಡ
ಪತಂಗಗಳ ಸಂಖ್ಯೆ, ಒಂದೊಂದೇ
ಕಡಿಮೆಯಾಗಿ ನೆಲಕ್ಕುರುಳಲು

ಒಂದು, ಮತ್ತೊಂದು ಮಗದೊಂದು
ರೊಯ್ಯನೇ ಕೆಳಗೆ ಬಿದ್ದು
ಅಲ್ಲೋ, ಇಲ್ಲೋ ಎರಡೇ ಉಳಿದು

ಅರೆ! ಎಂದು ಕೆಳಗೆ ನೋಡಿ
ಇರುಳಾದರೂ ಮನೆ ಸೇರದ
ಹಕ್ಕಿಯೊಂದು ಬಿದ್ದ ಪತಂಗಗಳ ಕುಕ್ಕುತಿರಲು

ಹಕ್ಕಿ ನೋಡಿ ಮತ್ತೆರಡು ಬಂದು
ಮೊನಚಾದ ಚುಂಚಿನ ತುಂಬ ಪತಂಗಗಳು
ಸಾವಿನಲ್ಲೂ ಸಾರ್ಥಕ್ಯ!!!

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ