ಹೀಗೂ ….

ತಿಳಿಯದ ನೀರಿನ ಆಳ
ಅಭೂತ ವಿಸ್ತಾರದ ಆಕಾಶ
ಬೊಗಸೆಯಲ್ಲಿ ನಿಲ್ಲದ ಉಸುಕು
ಎಣಿಸಲು ಬರದ ನಕ್ಷತ್ರಗಳಂತೆ
ನಡುರಾತ್ರಿ ಕಾಡುವ ಕವಿತೆ ಸಾಲುಗಳು
ಅವ್ವಳಿಗಾಗಿ ತಡಕಾಡುವ ಹಸುಗೂಸು
ಎತ್ತಿ, ರಮಿಸಿ, ಮುದ್ದಾಡಿ, ಹಾಲೂಣಿಸಿ,
ಚಪ್ಪಡಿಸಿ ಮಲಗಿಸಬೇಕು ಮತ್ತೆ ಮತ್ತೆ
ಬರುವ ನಿದ್ದೆಯನ್ನು ತಡೆ ತಡೆದು

ದುಃಖ ಸಂಪೂರ್ಣ ಬಸಿಯುವ, ಸೋಸುವ
ಆನಂದ ಘಳಿಗೆ ಹೆಚ್ಚಿಸುವ, ನೆನಪಿಸುವ
ಬೇಸರವ ಬಲುದೂರ ಸಾಗಿಸುವ
ಸಂದರ್ಭ, ಪರಿಸ್ಥಿತಿಗಳಿಗೆ ಮಮ್ಮಲ ಮರಗುವ
ತನ್ನ ಇತರರಿಗೆ ಆತ್ಮದ ಸಾಂತ್ವನ ಕೇಳಿಸುವ
ಅನೂಹ್ಯ ಶಬ್ದಗಳ ಲೋಕ ಕಾವ್ಯ

ಮೋಹಕ ಶಕ್ತಿ ಕವಿತೆಯ
ಪ್ರಾಣಕ್ಕಿಂತಲೂ ಪ್ರೀತಿಸಿದವರೆಷ್ಟೋ?
ರೂಪಕ, ಅಲಂಕಾರ, ಉಪಮೆಗಳ
ಜಾಲಾಡಿಸಿ, ಶ್ರೇಷ್ಠ ಕವನಗಳ
ರಚಿಸಿ, ರುಚಿಸಿ ಹಲವರಿಗೆ
ಭೇಷ್ ಎನಿಸಿಕೊಂಡವರು
ನೆಲೆನಿಂತರು ಜನಮನದಲ್ಲಿ

ಮರ್ಯಾದಾ ಸೆರಗ ಹೊದ್ದು
ಸೂಕ್ಷ್ಮಗಳ ತಿಳಿ ಹೇಳಿ
ಸರಿಪಡಿಸಿದರು ಅಂಕುಡೊಂಕ
ಪರಿಧಿಯ ಒಳಗೇ ಇದ್ದು
ಮೌನವೇ ಮಾತಾಡಿದಂತೆ

ಕೆಲ ಹೀಗೂ ಕವನಗಳು ಜೀವವನ್ನೇ
ಹಾರಾಡಿಸುತ್ತವೆ ನಭದಲ್ಲಿ
ಉಸಿರು ಸ್ತಂಭನ
ತಡಕಾಡಿದರೆ ವೆಂಟಿಲೆಟರ್ ಇಲ್ಲ
ಸೂಕ್ಷ್ಮ ವಿಚಾರಗಳು ಖುಲ್ಲಾ ಖುಲ್ಲಾ
ಅಶ್ಲೀಲ ಶಬ್ದಗಳು ಸಾಮಾನ್ಯ
ಸೆರೆಹಿಡಿದ ಕೈದಿಯಂತೆ ಕವನದಲ್ಲಿ

ಅನುಭವಿ ಕಮಲಾದಾಸ್ ಆಗಲು
ಹೊರಟಿರುವಂತಿದೆ ಬೋಲ್ಡ್ & ಡೇರಿಂಗ್
ಪಾಪ! ಆಕೆಯದು ಇರಬಹುದು
ಶೋಷಿತ ಜೀವನ! ಇದನ್ನೇ
ಬಂಡವಾಳ ಎಂದವರ ಏನೆನ್ನಲಿ?
ಕ್ರೂರ ಅತ್ಯಾಚಾರ ವಿರೋಧಿಸುತ್ತಲೇ
ಅದೇ ದೃಶ್ಯಗಳ ವಿಜೃಂಭಿಸುವ
ಚಲನಚಿತ್ರಗಳಂತೆ ಹೀಗೂ ಕವಿತೆ
ವಿಮರ್ಶೆಗೆ ಬರಬಹುದು
ಪ್ಲಾಕಾರ್ಡ್(placard) ‘ಮಡಿವಂತಿಕೆ’

ರಕ್ತ ಒಸರುವಿಕೆ

ಎತ್ತಿನ ಶ್ರಮ ಒಳಗೂ ಹೊರಗೂ
ಮರಿ ಹಕ್ಕಿಗಳಿಗೆ ಗುಟುಕು ನೀಡಿ
ಭವಿಷ್ಯದ ಚಿಂತೆ ಕುಡಿಕೆಯಲ್ಲಿ
ಇಷ್ಟಿಷ್ಟೇ ಹಣ ಸಂಗ್ರಹಿಸಿ ಬಿಟ್ಟು ಎಲ್ಲಾ ಸೌಖ್ಯ

ಸಾಥ್ ಕೊಡದ ಸಪ್ತ ಹೆಜ್ಜೆಗಳ ಜೊತೆಗಾರ
ಜನದಟ್ಟನೆಯ ಸಿಟಿಯ ಯಾವುದೇ ಮೂಲೆಯಲ್ಲಿ
ಸಿಗದಿದ್ದಾಗ ಇರುವೆಗೆ ಬೇಕಾದಷ್ಟು ಜಾಗ
ಉಸಿರಾಟ ಬಾಡಿಗೆ ಮನೆಯಲ್ಲಿ

ಮರಿಗಳ ಶಿಕ್ಷಣ, ಸೂರಿನ ನೆರಳು ಕನಸಾಗೇ
ಉಳಿಯುವ ಭಯದಲ್ಲಿ ಪಯಣ ಸುಸ್ತು
ಒತ್ತಡದಲ್ಲೇ ಆಸ್ಪತ್ರೆಗಳ ತಿರುಗಾಟ
ಖರೀದಿಸಿ ಗುಳಿಗೆಗಳ ಯಾದಿ

ಮಕ್ಕಳ ಜನ್ಮಕ್ಕಷ್ಟೇ ಬೇಕಾಗಿದೆ ಗಂಡ ಈಗ
ಉಳಿದದ್ದೆಲ್ಲ ಆಕೆ ಹೊತ್ತ ದೊಡ್ಡ ಮುಳ್ಳಿನ ಗುಡ್ಡ
ಕೆಲಸಕ್ಕೆ ತಕ್ಕಂತೆ ಗಳಿಕೆ ಎಲ್ಲ ಕಡೆ
ಈಕೆ ಕೊಡುವುದು ಪುಕ್ಕಟ್ಟೆ ಸೇವೆ

ಸಮಾಧಾನಿಸು, ನಿಧಾನಿಸು, ಸಹಕರಿಸು
ಕಟ್ಟಪ್ಪನೆಯ ಸಮಾಜದ ತತ್ವಗಳಲ್ಲಿ
ರಕ್ತವನ್ನು ಒಸರುತ್ತಲೇ ಇವೆ ಜೀವಗಳು
ದೇಹದ ಮೇಲೆ ಒಂದೇ ಒಂದು ಗಾಯಗಳಾಗದೇ