ಭಾನುವಾರ (6.6.2010) ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣರಿಗೆ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಆ ಸಲುವಾಗಿ ಈ ಬರಹ…

`ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ’ -ಸಿಂಗಲ್ ಕಾಲಂ ಸುದ್ದಿ ನೋಡಿ ನಿಜಕ್ಕೂ ಖುಷಿಯಾಯಿತು. ಸತ್ಯನಾರಾಯಣರಿಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಬೇಕೆನಿಸಿದರೂ, ಫೋನ್ ಮಾಡಿದ್ದು ಎನ್.ಎಸ್.ಶಂಕರ್ ಗೆ, `ಧಣಿ, ಕನ್ನಡಪ್ರಭ ಸತ್ಯ ಅವರಿಗೆ ಖಾದ್ರಿ ಪ್ರಶಸ್ತಿಯಂತೆ, ಏನಾದ್ರು ಬರೀಬಹುದಾ?’ ಎಂದು. ಅತ್ತ ಕಡೆಯಿಂದ, `ಯಾವಾಗ ಬೇಕಿತ್ತು, ಬೇಗ ಅಂದ್ರೆ ಆಗಲ್ಲ…’ ಎಂದು ರಾಗ ಎಳೆದರು. ಅಷ್ಟಕ್ಕೇ ಅವರ ಮಾತನ್ನು ಮೊಟಕುಗೊಳಿಸಿ, `ಒಂದ್ಸಲ ಅವರನ್ನು ಮಾತಾಡ್ಸಿ ಬರದ್ರೆ ಚೆನ್ನಾಗಿರುತ್ತಲ್ವಾ?’ ಎಂದೆ. `ಓ… ನೀವ್ ಬರ್ಯಕಾ, ಏ ಬರೀರಿ, ಬರೀರಿ, ಬರೀಬೇಕಾದ್ದೆ’ ಅಂದು ಅವರ ಬಗ್ಗೆ ಮಾತಾಡತೊಡಗಿದರು.

ಶಂಕರ್ ಮಾತಾಡಿದ್ದು ಸಾಲಲ್ಲ ಎನಿಸಿ, ಸತ್ಯ ಅವರನ್ನು ಏಕಲವ್ಯನಂತಿದ್ದು ಗುರುವಂತೆ ಸ್ವೀಕರಿಸಿದ, ನಮ್ಮ ಪೀಳಿಗೆಗೆ ಹಿರಿಯರೂ ಆದ, ಜೆಸುನಾ ಅವರಿಗೆ ಫೋನ್ ಮಾಡಿ, `ಜೇಸ್ ಮಾಮ್, ಕನ್ನಡಪ್ರಭ ಸತ್ಯ ಅವರಿಗೆ ಖಾದ್ರಿ ಪ್ರಶಸ್ತಿ ಬಂದಿದೆ, ಅವರ ಬಗ್ಗೆ ಬರೆಯೋಣ ಅಂತ…’ ಹೇಳುವುದಕ್ಕೂ ಮೊದಲೇ `ಏ ಬಸು, ಮಾರ್ವಲೆಸ್ ಫೆಲೋ, ಬರೀರಿ, ನಿಜಕ್ಕೂ ಅಂಥವರ ಬಗ್ಗೆ ಬರೀಬೇಕು, ಪತ್ರಕರ್ತ ವೃತ್ತಿಗೆ ಏನಾದ್ರು ಮರ್ಯಾದೆ ಈಗ್ಲೂ ಇದ್ರೆ ಅಂಥವ್ರಿಂದ’ ಎಂದು ಅವರ ಅಗಾಧ ನೆನಪಿನ ಶಕ್ತಿ ಕುರಿತು ಮಾತಾಡತೊಡಗಿದರು. ವೃತ್ತಿಯಿಂದ ನಿವೃತ್ತಿಯಾದರೂ ಇವತ್ತಿಗೂ ಬರವಣಿಗೆಯನ್ನು ಬಿಡದೆ, ಪ್ರತಿದಿನ ಪತ್ರಿಕಾಲಯಗಳಿಗೆ ಪಾದವೂರುವುದನ್ನು ನಿಲ್ಲಿಸದೆ, ಅಪ್ ಡೇಟೆಡ್ ಆಕ್ಟಿವ್ ಜರ್ನಲಿಸ್ಟ್ ಅಂದ್ರೆ ಸತ್ಯ ಅವರೊಬ್ಬರೆ ಎಂದು ಹೇಳತೊಡಗಿದರು.

ಇಷ್ಟೆಲ್ಲ ಆದಮೇಲೆ, ನೇರವಾಗಿ ಸತ್ಯನಾರಾಯಣರನ್ನೇ ಮಾತನಾಡಿಸೋಣ ಎಂದು ಫೋನ್ ನಂಬರಿಗೆ ಹುಡುಕಾಡಿದೆ. ಪ್ರೆಸ್ ಕ್ಲಬ್ ಡೈರಿಯಲ್ಲಿ ಅವರ ಮನೆಯ ವಿಳಾಸ ಮತ್ತು ಲ್ಯಾಂಡ್ ಲೈನ್ ನಂಬರ್ ಇತ್ತು. ಇವರ ಹತ್ತಿರ ಮೊಬೈಲ್ ಇರುವುದಿಲ್ಲ ಎಂದು ನನಗೆ ನಾನೇ ತೀರ್ಮಾನಿಸಿಕೊಂಡು, ಸಿಕ್ಕ ನಂಬರಿಗೆ ಫೋನ್ ಮಾಡಿದೆ. ಅವರೇ ಎತ್ತಿಕೊಂಡರು, `ಹಲೋ, ಯಾರು’ ಎಂದರು, ಮೆಲುಮಾತು, ಒಂಚೂರೂ ಕಸಿವಿಸಿಯಿಲ್ಲ. ನಾನು ನನ್ನ ಪರಿಚಯ ಹೇಳಿಕೊಂಡು `ನಿಮ್ಮ ಜೊತೆ ಒಂದಿಷ್ಟೊತ್ತು ಮಾತಾಡಬೇಕು ಸಾರ್, ನಿಮಗೆ ಯಾವಾಗ ಬಿಡುವಾಗುತ್ತೆ ಹೇಳಿ, ಇವತ್ತಾದ್ರೆ ಇವತ್ತೆ…’ ಎಂದೆ. ಅದಕ್ಕವರು, `ಇವತ್ತು ಆಗಲ್ಲ, ನಾಳೆ ಸಂಜೆ ನಾಲ್ಕು ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ಸಿಕ್ತೀನಪ್ಪ, ಆಗಬಹುದಾ?’ ಅಂದರು. ನನ್ನ ಡೆಡ್ ಲೈನ್ ನೆನಸಿಕೊಂಡು, `ಸಾರ್, ಇವತ್ತಾಗಿದ್ರೆ…’ ಎಂದು ರಾಗ ಎಳೆಯುತ್ತ, `ಮನೆಗೇ ಬಂದ್ಬುಡ್ಲ ಸಾರ್…’ ಎಂದೆ. ಅದಕ್ಕವರು, `ಇವತ್ತಾಗಲ್ಲ, ಸ್ವಲ್ಪ ಕೆಲಸಗಳಿವೆ, ನಾಳೆ ಮನೆ ಕೆಲಸ ಮುಗಿಸ್ಕೊಂಡು, ಆಫೀಸಿಗೆ ಹೋಗಿ ಏನಾದ್ರು ಬರೆಯೋದಿದ್ರೆ ಬರೆದು, ನಾಲ್ಕು ಗಂಟೆಗೆ ಫ್ರೀಯಾಗ್ತೀನಪ್ಪ, ಕ್ಲಬ್ ಕಡೆ ಬಂದ್ರೆ ಸಿಗಬಹುದು’ ಎಂದರು. ಆಗಲಿ ಸಾರ್ ಎಂದು ಹೇಳಿದವನು ಸತ್ಯರನ್ನು ತಲೆತುಂಬಿಕೊಳ್ಳತೊಡಗಿದೆ.

ಕೆ.ಸತ್ಯನಾರಾಯಣ- ಕೆ ಎನ್ನುವ ಇನಿಷಿಯಲ್ ಕನ್ನಡಪ್ರಭವಾಗಿ, ಸತ್ಯನಾರಾಯಣ ಸತ್ಯ ಆಗಿ- ಕನ್ನಡಪ್ರಭ ಸತ್ಯ- ಕುಳ್ಳ ಸತ್ಯ ಎಂದೇ ಎಲ್ಲರಿಗೂ ಪರಿಚಿತರು. ಐದಡಿ ಎತ್ತರ, ಬೆಳ್ಳಿ ಕೂದಲು, ಬೊಚ್ಚು ಬಾಯಿ, ಜುಬ್ಬಾ ಪೈಜಾಮ, ಹೆಗಲಲ್ಲೊಂದು ಬ್ಯಾಗ್- ಅದೂ ಇದ್ರೆ ಇತ್ತು ಇಲ್ಲಾಂದ್ರೆ ಇಲ್ಲ. ರಾಜಕಾರಣಿಗಳಿರಲಿ, ಸಾಂಸ್ಕೃತಿಕ ರಂಗದವರೇ ಇರಲಿ- ಎಲ್ಲರಿಗೂ ಸತ್ಯ ಅವರೆಂದರೆ ಅಚ್ಚುಮೆಚ್ಚು. ಅದಕ್ಕೆ ಕಾರಣ ಅವರ ಸರಳ ಸಜ್ಜನಿಕೆಯ ನಡವಳಿಕೆ. ಹಿರಿಯರು-ಕಿರಿಯರೆನ್ನದ, ಜಾತಿ-ಮತ-ಭೇದವಿಲ್ಲದ ಮುಕ್ತ ಮನೋಭಾವ. ಇನ್ನು ಬರವಣಿಗೆ… ಕಂಡದ್ದನ್ನು ಕಂಡಂತೆ ಕಾಗದಕ್ಕಿಳಿಸದಿದ್ದರೂ, ಹೇಳಬೇಕಾದ್ದನ್ನು ನಾಜೂಕಾಗಿ ಹೇಳುವ, ಹೇಳುವ ಮೂಲಕವೇ ಜನರನ್ನು ಜಾಗೃತರನ್ನಾಗಿಸುವ, ಅಧಿಕಾರಸ್ಥರನ್ನು ಹದ್ದುಬಸ್ತಿನಲ್ಲಿಡುವ, ಪ್ರಶ್ನೆಗಳನ್ನುಟ್ಟು ಹಾಕಿ ಎಚ್ಚರಿಸುವ, ತಿದ್ದುವ ವಿಶಿಷ್ಟ ಶೈಲಿಯದು. ಹಿಂದಿನ-ಇಂದಿನ ರಾಜಕೀಯ ಪಲ್ಲಟಗಳನ್ನು, ಘಟನೆಗಳನ್ನು, ಹಗರಣಗಳನ್ನು, ಏರುಪೇರುಗಳನ್ನು ತಮ್ಮ ನೆನಪಿನಾಳದಿಂದ ಬಗೆದಿಡುವ ಬಗೆ ಬೆರಗುಟ್ಟಿಸುವಂಥದು. ಎಲ್ಲರೂ ಮರೆತದ್ದನ್ನು ದಿನಾಂಕಗಳ ಸಮೇತ ಜನರ ಮುಂದಿಡುವ, ತರ್ಕಬದ್ಧವಾಗಿ ಮಂಡಿಸುವ, ಓದುಗರನ್ನು ಬೌದ್ಧಿಕವಾಗಿ ಬೆಳೆಸುವ ಇವರ ಬರವಣಿಗೆ ಬಹುಜನಪ್ರಿಯ.

ಪತ್ರಕರ್ತ ವೃತ್ತಿಗಿಳಿದು ಇವತ್ತಿಗೆ ಒಂದಲ್ಲ, ಎರಡಲ್ಲ… ಐವತ್ನಾಲ್ಕು ವರ್ಷಗಳಾಗಿದ್ದರೂ, ಸಾಮಾನ್ಯ ವರದಿಗಾರನಿಂದ ಹಿಡಿದು ಪ್ರತಿಷ್ಠಿತ ದಿನಪತ್ರಿಕೆಯ ಸಂಪಾದಕನವರೆಗಿನ ಇರುವ ಅಷ್ಟೂ ಸ್ಥಾನ-ಮಾನಗಳನ್ನು ಒಂದೊಂದೇ ಮೆಟ್ಟಿಲು ಹತ್ತುತ್ತ ಅನುಭವಿಸಿದ್ದರೂ, ಇವರ ಸಮಕಾಲೀನರೆಲ್ಲ ಸದ್ದಡಗಿ ಸುಮ್ಮನಾಗಿದ್ದರೂ ಇವತ್ತು ಕೂಡ ವಿಧಾನಸೌಧ, ಪ್ರೆಸ್ ಕ್ಲಬ್ಬು, ಪತ್ರಿಕಾಲಯ ಎಂದು ಎಳೆಯ ಹುಡುಗನ ಉತ್ಸಾಹದಲ್ಲಿ ಓಡಾಡುವವರು. ಕನ್ನಡಪ್ರಭ ದಿನಪತ್ರಿಕೆಯಲ್ಲಿ ಇಂದಿಗೂ ಪ್ರತಿ ಭಾನುವಾರ ವ್ಯಕ್ತಿ ವಿಚಾರ, ಪ್ರತಿ ಗುರುವಾರ ಸಮಕಾಲೀನ ರಾಜಕೀಯ ವಿಶ್ಲೇಷಣೆ, ಪ್ರತಿ ಸೋಮವಾರ ಷೇರುಪೇಟೆ ಸಮಾಚಾರ… ಹೀಗೆ ಬರೆಯುತ್ತಲೇ ಬದುಕುತ್ತಿರುವವರು.

ನಾಡಿನ ನಡೆಯಲ್ಲಿ ಹಾಗೂ ಜನಜೀವನದಲ್ಲಿ ಪತ್ರಿಕೆಗಳ ಪ್ರಭಾವ ಎಷ್ಟೆಂಬುದನ್ನು ಅನುಭವದಿಂದ ಅರಿತ ಸತ್ಯನಾರಾಯಣ ಅವರು, ಜನತೆಯ ಹಕ್ಕು ಬಾಧ್ಯತೆಗಳನ್ನು ರಕ್ಷಿಸಲು, ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು, ಸಮಾಜದ ಹಿತ ಕಾಪಾಡಲು ನೆರವಾಗುವ ಪ್ರಚಂಡ ಶಕ್ತಿಯ ಸಾಧನಗಳೇ ಪತ್ರಿಕೆಗಳು ಎಂಬುದನ್ನು ಅರ್ಥಮಾಡಿಕೊಂಡವರು. ಇಂತಹ ಅದ್ಭುತ ಶಕ್ತಿಯ ಅಸ್ತ್ರಗಳು ಸರಿಯಾದವರ ಕೈಯಲ್ಲಿರುವುದು ಮತ್ತು ಅವುಗಳ ಸದುಪಯೋಗವಾಗುವುದು ತುಂಬ ಮುಖ್ಯ ಎಂಬ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು, ಆ ನಂಬಿಕೆಯನ್ನು ಜತನದಿಂದ ಉಳಿಸಿಕೊಂಡುಬಂದವರು.

ಸಂಪೂರ್ಣ ಸತ್ಯವನ್ನು ಬರೆಯಲಾಗದಿದ್ದರೂ ಸುಳ್ಳನ್ನು ಬರೆಯದ, ಬಹುಜನರಿಗೆ ಕೆಡುಕನ್ನು ಉಂಟುಮಾಡದ, ಪತ್ರಕರ್ತ ವೃತ್ತಿಗೆ ಕಳಂಕ ತರದ, ಅಂಜಿಕೆ ಅಳುಕುಗಳನ್ನಿಟ್ಟುಕೊಂಡ ಮಾನವಂತ ಪತ್ರಕರ್ತರು ಇವತ್ತಿಗೂ ಇದ್ದಾರೆ. ಪತ್ರಿಕೋದ್ಯಮ ಉದ್ಯಮವಾಗಿ, ಪತ್ರಕರ್ತರು ಬ್ರೋಕರ್ ಗಳಾಗಿ, ಸುದ್ದಿ ಮಾರಾಟದ ಸರಕಾಗಿ, ಅಧಿಕಾರಸ್ಥರ ಅಸ್ತ್ರವಾಗಿ, ಉಳ್ಳವರ ಅನುಕೂಲಕ್ಕೆ ತಕ್ಕಂತೆ ಬದಲಾಗಿ, ದಂಧೆಯಾಗಿ ಮಾಪರ್ಾಡಾಗುತ್ತಿರುವ ಈ ಕಾಲಘಟ್ಟದಲ್ಲೂ… ವೃತ್ತಿಧರ್ಮಕ್ಕೆ ಧೋಖಾ ಬಗೆಯದ, ಜನರಿಟ್ಟ ನಂಬಿಕೆಗೆ ದ್ರೋಹ ಬಗೆಯದ, ಕಾಯಕದಲ್ಲೇ ಕೈಲಾಸ ಕಾಣುವ ತಪ್ತ ಮನದ ತಣ್ಣನೆಯ ಪತ್ರಕರ್ತರು ಈಗಲೂ ಇದ್ದಾರೆ. ಅಂಥವರಲ್ಲಿ ಸತ್ಯರವರೂ ಒಬ್ಬರು.

ಇಂತಹ ಸತ್ಯ ಅವರು, ಅವರ ಕನ್ನಡಪ್ರಭ ದಿನಪತ್ರಿಕೆಯನ್ನು ತಮ್ಮ ಮುತ್ಸದ್ದಿತನದಿಂದ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದು, ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವಂತೆ ಮಾಡಿದ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ ಕೊಡಮಾಡುವ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಇದು ಪ್ರಾಮಾಣಿಕತೆಗೆ, ನೈತಿಕತೆಗೆ, ಮುಕ್ತ ಮನಸ್ಸಿನ ನಿಜಪತ್ರಕರ್ತನಿಗೆ ಸಂದ ಗೌರವ.

ಈ ಸನ್ಮಾನಿತ ಸತ್ಯ ಅವರನ್ನು ಖುದ್ದು ಕಾಣಲು, ಅವರ ಅನುಭವದ ನೆನಪುಗಳನ್ನು ಕೆದಕಲು ಅವರು ಹೇಳಿದ ಟೈಮಿಗೆ ಸರಿಯಾಗಿ ಪ್ರೆಸ್ ಕ್ಲಬ್ ಗೆ ಹೋದರೆ, ಆಗಲೇ ಬಂದು ಶಂಕರ್ ಜೊತೆ ಕೂತು ಬ್ಲ್ಯಾಕ್ ಟೀ ಕುಡಿಯುತ್ತಿದ್ದಾರೆ. ನನ್ನ ನೋಡಿದವರೆ, `ಓ ಮರ್ತೆಹೋಗಿತ್ತಲ್ಲ ಬಸುರಾಜ್, ನಿಮ್ಮನ್ನೋಡಿ ಜ್ಞಾಪಕಕ್ಕೆ ಬಂತು…’ ಎಂದರು. ನಾನು, `ಲೇಟಾಯ್ತ ಸಾರ್…’ ಎಂದೆ. `ನಾನೇನು ಆ ಥರದ ಜರ್ನಲಿಸ್ಟಲ್ಲ, ಕಾರು, ಫೋನುಗಳಲ್ಲಿ ಬ್ಯುಸಿಯಾಗಿರುವ ಮನುಷ್ಯನಲ್ಲ, ಬಸ್ಸಲ್ಲೇ ಹೋಗ್ತೀನಿ ಬರ್ತೀನಿ, ನನಗೆಂತ ಟೈಮು, ಇಲ್ಲೇ ಕೂರೋಣ್ವಾ ಹೇಗೆ…?’ ಎಂದರು. ಪಕ್ಕದಲ್ಲಿದ್ದ ಶಂಕರ್, `ನಾನೂ ಬರಬಹುದಾ, ಯಾವ ಅಭ್ಯಂತರವೂ ಇಲ್ವಾ’ ಎಂದರು. `ಏನೂ ಇಲ್ಲ ಬನ್ನಿ, ಮೂರೂ ಜನ ಕೂತು ಮಾತಾಡೋಣ’ ಎಂದು ಕ್ಲಬ್ ನ ಬಾರ್ ರೂಮಿಗೆ ಹೋದೆವು.

ಮಾತಿಗೆ ಚಾಲ್ತಿ ನೀಡಲೆಂಬಂತೆ ನಾನು, `ಈ ವೃತ್ತಿಗೆ ಬಂದದ್ದು ಹೇಗೆ ಸಾರ್’ ಎಂದೆ. ಕೇಳಿದ್ದಿಷ್ಟೇ, ಇನ್ನುಮುಂದಕ್ಕೆ ಅವರದೇ ಮಾತು. ನನ್ನ ಕಿವಿ ಕೈ ಕೊಡಬಹುದೆಂದು ಐಪಾಡ್ ನ ರೆಕಾರ್ಡರ್ ಮೊರೆಹೋದೆ. ಆದರೆ ಅದು ನಿನ್ನ ಕಿವಿಯೇ ನಿನಗೆ ಗಟ್ಟಿ ಅಂತ ಕೈ ಕೊಡ್ತು. ಹಾಗಾಗಿ ನೆನಪಿರುವಷ್ಟನ್ನು ಮಾತ್ರ ಇಲ್ಲಿ ದಾಖಲಿಸುತ್ತಿದ್ದೇನೆ.

`ನಮ್ಮ ಕಾಲದ, ನನಗಿಂತಲೂ ಹಿಂದಿನವರ ಕಾಲದ ಪತ್ರಕರ್ತರು ಈಗ ಹೇಗಿದಾರೋ ಆಗ್ಲು ಹಾಗೇ ಇದ್ದರು. ದುರಾಸೆಯೂ ಇತ್ತು. ಆದರೆ ಅವರಲ್ಲಿ ವೃತ್ತಿ ಬಗ್ಗೆ ಗೌರವ ಇತ್ತು, ಬದ್ಧತೆ ಇತ್ತು. ಜನರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂಬ ಜವಾಬ್ದಾರಿ ಇತ್ತು. ಆಗೆಲ್ಲ ಸಂಬಳ ಭಾಳ ಕಮ್ಮಿ ಇರ್ತಿತ್ತು. ಪ್ರೆಸ್ ಕಾನ್ಫರೆನ್ಸ್ ಅಂದ್ರೆ- ಹೆಚ್ಚಂದ್ರೆ ಐದು ಜನ ಪತ್ರಕರ್ತರಿರ್ತಿದ್ರು, ಆ ಪ್ರೆಸ್ ಮೀಟ್ ಗಳ್ಹೇಗಿದ್ದೋ… ಬುದ್ಧಿಗೆ ಸಾಣೆ ಹಿಡಿಯುವಂತಹ, ಬೆಳೆಸುವಂತಹ ಪ್ರೆಸ್ ಮೀಟ್ ಗಳು. ಒಳ್ಳೊಳ್ಳೆಯವರ ಪ್ರೆಸ್ ಮೀಟ್ ಗಳೆಂದರೆ, ಅದೊಂಥರ ಬೌದ್ಧಿಕತೆಯ ವಿಚಾರಮಂಚದ ರೀತಿಯಾಗ್ತಿತ್ತು.

`ನಾನು ಪತ್ರಕರ್ತ ವೃತ್ತಿಯನ್ನು ಆಸೆಪಟ್ಟು ಆರಿಸಿಕೊಂಡಿದ್ದಲ್ಲ, ಅಚಾನಕ್ಕಾಗಿ ಸಿಕ್ಕಿದ್ದು ಆಮೇಲೆ ಅನಿವಾರ್ಯವಾಯಿತು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ನನಗೆ, ನನಗ್ಗೊತ್ತಿರೊಬ್ಬರು ಮದ್ರಾಸಿಗೆ ಬಾ, ಬ್ಯಾಂಕಲ್ಲಿ ಕೆಲ್ಸ ಕೊಡಸ್ತಿನಿ ಅಂದ್ರು, ಹೋದೆ. ಅಲ್ಲಿ ಕೆಲ್ಸ ಸಿಗಲಿಲ್ಲ. ಇನ್ಯಾರೋ ಒಬ್ಬರು, ನಿನ್ನ ನೋಡುದ್ರೆ ಪತ್ರಕರ್ತ ವೃತ್ತಿಗೆ ಸರಿಹೊಂದುವಂತೆ ಕಾಣ್ತಿಯ, ಸ್ವತಂತ್ರ ಅಂತ ಒಂದು ಪತ್ರಿಕೆಯಿದೆ, ಅಲ್ಲಿ ಕೆಲಸಕ್ಕೆ ಸೇರಿಕೋ ಅಂದ್ರು. ಅಲ್ಲಿಗೆ ಹೋದೆ, ಸಬ್ ಎಡಿಟರ್ ಆಗಿ ಪ್ರೊಬೆಷನರಿ ಕೆಲಸ ಸಿಕ್ತು. ಅದು 1956-57. ಹಾಗೂ ಹೀಗೂ 1960ರವರೆಗೆ ಅಲ್ಲಿ ಕೆಲಸ ಮಾಡಿದೆ. ಆ ನಂತರ ಬೆಂಗಳೂರಿಗೆ ಬಂದೆ. ಬಂದವನು ಪಿ.ರಾಮಯ್ಯರ `ತಾಯಿನಾಡು’ ಪತ್ರಿಕೆಗೆ ಸೇರಿದೆ. ಅಲ್ಲಿ ಎಲ್ಲಾ ಥರದ ಜವಾಬ್ದಾರಿಗಳನ್ನೂ ನಿಭಾಯಿಸಿ, ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿ ಪಳಗಿದ ಪತ್ರಕರ್ತನಾದೆ.

`1965ರಲ್ಲಿ, ಇಂಡಿಯನ್ ಎಕ್ಸ್ ಪ್ರೆಸ್ ಬೆಂಗಳೂರಿಗೆ ಬಂದಾಗ, ಅಲ್ಲಿಗೆ ಸಬ್ ಎಡಿಟರ್ ಆಗಿ ಕೆಲಸಕ್ಕೆ ಸೇರಿದಾಗ ನನ್ನ ದಿಕ್ಕೇ ಬದಲಾಯಿತು. ಒಳ್ಳೊಳ್ಳೆ ಸ್ಟೋರಿಗಳ್ನ ಮಾಡ್ದೆ, ಒಳ್ಳೆ ಹೆಸ್ರೂ ಬಂತು. ನನ್ನ ಸೀನಿಯರ್ಸ್ ನನಗೆ ತುಂಬಾನೆ ಹೆಲ್ಪ್ ಮಾಡದ್ರು. ಕೆಲವು ಸಲ ಫೈನಾನ್ಷಿಯಲ್ ಎಕ್ಸ್ ಪ್ರೆಸ್ ನೂ ನೋಡ್ಕೋಬೇಕಿತ್ತು. ಅಲ್ಲಿಂದ್ಲೇ ಶುರುವಾಗಿದ್ದು ಈ ಫೈನಾನ್ಷಿಯಲ್ ನ್ಯೂಸ್… ಇವತ್ತಿನ ಷೇರುಪೇಟೆ ಸಮಾಚಾರ…’

ನಡುವೆ ಅವರ ಕಾಲದಲ್ಲಿದ್ದ ಓದಿನ ಹಸಿವು, ಅನ್ನದ ಹಸಿವು, ಪತ್ರಕರ್ತರ ಪಡಿಪಾಟಲುಗಳನ್ನೆಲ್ಲ ಹೇಳಿದರು. ಹಳೆ ಪತ್ರಕರ್ತರ ಹೆಸರುಗಳು- ಒಬ್ಬೊಬ್ಬರ ಹೆಸರನ್ನೂ ನೆನಪಿಟ್ಟುಕೊಂಡು, ಅವರ ಕಾರ್ಯವೈಖರಿಯನ್ನು, ಬರವಣಿಗೆಯ ವಿಧಾನವನ್ನು, ಪತ್ರಿಕೆಗಳ ಧೋರಣೆಗಳನ್ನು ಹೇಳತೊಡಗಿದರು. ಪಟ್ ಅಂತ, `ಇವತ್ತು ನಾವು ಇಷ್ಟೊಂದು ಪತ್ರಿಕೆಗಳಿವೆ, ಅವು ಓಚರ್ ಕಾಪಿ ಪ್ರಿಂಟ್ ಹಾಕ್ತವೆ, ವಸೂಲಿಗಿಳಿತವೆ, ಜಾಹಿರಾತಿಗಾಗಿ ಕ್ಯೂನಲ್ಲಿರ್ತವೆ ಅಂತೆಲ್ಲ ಮಾತಾಡ್ತಿವಲ್ಲ, ದೇವರಾಜ ಅರಸು ಅವರ ಕಾಲದಲ್ಲಿ ಒಂಬೈನೂರ ಚಿಲ್ಲರೆ ಪತ್ರಿಕೆಗಳಿದ್ದವು. ಆಗಲೇ ಅವು ಜಾಹಿರಾತಿಗಾಗಿ ಅರಸು ಮೇಲೆ ಮುಗಿಬೀಳುತ್ತಿದ್ದವು. ಒಂದೇ ಪ್ರೆಸ್ ನಲ್ಲಿ ಮೂವತ್ತು ಪತ್ರಿಕೆಗಳು ಪ್ರಿಂಟಾಗವು. ಅದೂ ಏನು, ನ್ಯೂಸ್ ಎಲ್ಲ ಒಂದೆ, ಮಾಸ್ಟ್ ಹೆಡ್ ಮಾತ್ರ ಬೇರೆ. ಇನ್ನು ಕೆಲವಿದ್ದೊ, ಈ ವಾರ ಪ್ರಿಂಟಾಕಿದ್ದ ನ್ಯೂಸನ್ನೇ ಮುಂದಿನವಾರವೂ ಪ್ರಿಂಟಾಕ್ತಿದ್ದೊ. ಯಾರದ್ರು ಕೇಳಿದರೆ, ಓದುಗರ ಒತ್ತಾಯದ ಮೇರೆಗೆ ಎಂದು ಹೇಳೋರು… ಹಾಗೇ ಇಂಥೋರು ಎಲ್ಲಾ ಕಾಲದಲ್ಲೂ ಇದ್ದರು, ಇರ್ತರೆ ಏನೂ ಮಾಡಕ್ಕಾಗೋದಿಲ್ಲ.’

ಮಧ್ಯೆ ಮಾತನಾಡಿದ ಎನ್.ಎಸ್.ಶಂಕರ್, `ನಿಮಗೆ ತೃಪ್ತಿ ಕೊಟ್ಟ ವರದಿಗಳು ಯಾವುದಾದರೂ ಇವೆಯೇ, ಅಂತಹ ಘಟನೆಗಳು…’ ಎಂದಾಗ `ತುಂಬಾನೇ ಇದಾವೆ, ಕಾಂಗ್ರೆಸ್ ಪಾರ್ಟಿ ಮೇಜರ್ ಬ್ರೇಕ್ ಆಗಿದ್ದು, ಬೆಂಗಳೂರಿಗೆ ಬಾಬು ರಾಜೇಂದ್ರ ಪ್ರಸಾದ್ ಭೇಟಿ, ಕರ್ನಾಟಕದ ಏಕೀಕರಣದ ಸುದ್ದಿಗಳು… ಆಗೆಲ್ಲ ವರದಿಗಳು ಚರ್ಚೆಯಾಗ್ತಿದ್ದೊ, ಜರ್ನಲಿಸ್ಟ್ ಗಳು ಕಡಿಮೆ ಸಂಖ್ಯೆಯಲ್ಲಿರ್ತಿದ್ರು, ಅವರ ವರದಿಗಳ ಬಗ್ಗೆ ಅವರ ಬಗ್ಗೆ ಎಲ್ಲರಿಗೂ ತಿಳಿದಿರ್ತಿತ್ತು. ಆ ವರದಿಗಳನ್ನು ಇವತ್ತು ನೋಡಿದರೆ, ಕೆಟ್ಟದಾಗಿ ಕಾಣಬಹುದು. ಬರೆದ ನಮಗೆ ಪಿಚ್ಚೆನ್ನಿಸಬಹುದು. ಆದರೆ ಅವತ್ತಿನ ಸಂದರ್ಭಕ್ಕೆ ಅವು ಹುಟ್ಟುಹಾಕಿದ ಹವಾ ಜೋರಾಗಿತ್ತು. ಇವತ್ತಿನ ಪತ್ರಕರ್ತರನ್ನು ಅವರ ಬರವಣಿಗೆಯನ್ನು ನೋಡ್ತಿದ್ದೇನೆ… ತುಂಬಾ ಒಳ್ಳೆಯವರು, ಬುದ್ಧಿವಂತರು, ಚುರುಕಾಗಿರೋರು ಬರ್ತಿದ್ದಾರೆ. ಕೆಟ್ಟವರು ಕಿಲಾಡಿಗಳು ವ್ಯವಹಾರಸ್ಥರು ಎಲ್ಲಾ ಕಾಲದಲ್ಲೂ ಇರ್ತರೆ, ಬಿಡಿ. ಆದರೆ ಇವತ್ತು ತುಂಬಾನೆ ಚೆನ್ನಾಗಿ ಬರೆಯುವ ಹೊಸ ಹುಡುಗರು ಬರ್ತಿದ್ದಾರೆ. ಬರವಣಿಗೆ ಒಂದು ಕ್ರಾಫ್ಟು, ಈಗಿನ ಪೀಳಿಗೆಯ ಪತ್ರಕರ್ತರು ಅದನ್ನು ತುಂಬಾನೆ ಚೆನ್ನಾಗಿ ದುಡಿಸಿಕೊಳ್ತಿದ್ದಾರೆ. ಹಿಂದಿಗಿಂತ ಇಂದು ಒಳ್ಳೊಳ್ಳೆ ರೈಟಪ್ ಗಳು ಬರ್ತಿವೆ…’

ಮತ್ತೆ ಶಂಕರ್, `ನಿಮಗಿಷ್ಟವಾದ ರಿಪೋರ್ಟರ್, ಎಡಿಟರ್ ಗಳಾದರೂ ಇದ್ದಾರೆಯೇ?’ ಎಂದರು. `ಕನ್ನಡದ ಮಟ್ಟಿಗೆ, ನನ್ನ ಪ್ರಕಾರ ಭಾಳ ಒಳ್ಳೆ ಎಡಿಟರ್ ಅನ್ನೋರು ಯಾರೂ ಇಲ್ಲ. ಇಂಗ್ಲಿಷಿನಲ್ಲಿ ಪಿ.ಕೆ.ಶ್ರೀನಿವಾಸನ್, ಟಿಜೆಎಸ್ ಜಾರ್ಜ್, ಛಲಪತಿರಾವ್…’ ಎಂದವರು ಕನ್ನಡ ಜರ್ನಲಿಸ್ಟ್ ಗಳನ್ನು ಅಷ್ಟಾಗಿ ಮೆಚ್ಚಲಿಲ್ಲ. ನಾವೇ ಮುಂದಾಗಿ, `ವೈಎನ್ಕೆ ಜೊತೆ ಕೆಲಸ ಮಾಡಿದೋರು ನೀವು… ಅವರ ಸ್ಟೈಲ್ ಆಫ್ ವರ್ಕಿಂಗ್ ಹೇಗಿತ್ತು’ ಎಂದರೆ, ಒನ್ ಲೈನ್ ಉತ್ತರ- `ಅವರ ವಂಡರ್ ಕಣ್ ಅಂಕಣದಂತೆಯೇ… ಸೀರಿಯಸ್ ನೆಸ್ ಇರ್ಲಿಲ್ಲ…’ ಎಂದ ಸತ್ಯ ಅವರು, `ಆದರೆ ಅವರಿಗೆಲ್ಲ ಒಂದು ಜವಾಬ್ದಾರಿಯಿತ್ತು, ಬದ್ಧತೆ ಇತ್ತು, ಜನ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಹಾಳು ಮಾಡಬಾರದೆಂಬ ಹೆದರಿಕೆಯಿತ್ತು…’ ಎಂದವರು `ಇವತ್ತಿನ ಪತ್ರಕರ್ತರು, ಅದರಲ್ಲೂ ಟಿವಿ ಮೀಡಿಯಾ ಯಾಕೋ ಅತಿ ಅನ್ನಿಸುತ್ತಿದೆ. ಬರವಣಿಗೆಗಿದ್ದ ಗಂಭೀರತೆ ಹೋಗಿದೆ, ಎಲ್ಲಾ ಶಾರ್ಟ್- ಎರಡೇ ಪ್ಯಾರಾ, ಪ್ರೆಸ್ ಕಾನ್ಫರೆನ್ಸ್ ಮಾಡೋರಿಗೆ ಇವತ್ತು ಭಾರೀ ಅನುಕೂಲ, ಎರಡೇ ಮಾತು ಹೇಳಿದರೆ ಸಾಕು, ಅದು ಟಿವಿಗಳಲ್ಲಿ ದಿನ ಪೂರ್ತಿ ಕಾಣಿಸಿಕೊಂಡು ಪ್ರಚಾ ರ ಪಡರಿಯುತ್ತದೆ, ಅವರ ಕೆಲಸವನ್ನು ಕಡಿಮೆ ಮಾಡಿಬಿಟ್ಟಿದೆ. ಇನ್ನು ನೈತಿಕತೆ, ಮೌಲ್ಯ, ತತ್ತ್ವ, ಸಿದ್ಧಾಂತಗಳು ಮರೆಯಾಗಿ ವ್ಯವಹಾರ ಮುಖ್ಯವಾಗಿದೆ, ಅಷ್ಟೇ ಅಲ್ಲ ಅದು ದಂಧೆಯಾಗಿ ಮಾರ್ಪಟ್ಟಿದೆ. ಆದರೂ, ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ ಒಳ್ಳೆಯವರು ಇದ್ದಾರೆ, ಅವರ ಬರವಣಿಗೆ, ನಡೆ-ನುಡಿಯನ್ನು ಗಮನಿಸಿದ್ದೇನೆ, ಇದು ಎಲ್ಲಾ ಕಾಲದಲ್ಲೂ ಇದ್ದದ್ದೆ, ಹೀಗಿರಬೇಕು, ಹೀಗೆ ಬರೀಬೇಕು ಅನ್ನೋದೆಲ್ಲ ಅವರವರ ವೈಯಕ್ತಿಕ ಆಯ್ಕೆ…’ ಹೇಳುತ್ತಲೇ ಹೋದವರು ಇದ್ದಕ್ಕಿದ್ದಂತೆ ನಿಲ್ಲಿಸಿ, `ಸಾಕೆನಿಸುತ್ತದೆ…’ ಎಂದು ಮುಖ ನೋಡಿದರು. ನಮಗೂ ಸಾಕೆನಿಸಿತು.

1967ರಲ್ಲಿ ಶುರುವಾದ ಕನ್ನಡಪ್ರಭಕ್ಕೆ ಶುರುವಾದ ದಿನದಿಂದ ಇವತ್ತಿನವರೆಗೆ, ಎಪ್ಪತ್ತರ ಆಸುಪಾಸಿನಲ್ಲೂ ಬರೆಯುತ್ತಲೇ ಬದುಕಿರುವ, ಅಕ್ಷರಗಳಲ್ಲೇ ಆನಂದ ಅನುಭವಿಸುವ, ಬರವಣಿಗೆಯ ಬದುಕಲ್ಲೇ ಧನ್ಯತೆ ಕಂಡುಕೊಂಡಿರುವ ಏಕೈಕ ಪತ್ರಕರ್ತರೆಂದರೆ ಸತ್ಯ ಅವರು. ಸತ್ಯ ಚಾಲ್ತಿಯಲ್ಲಿದೆ, ಇನ್ನು ಮುಂದೆಯೂ ಇರುತ್ತದೆ.
(ಚಿತ್ರಗಳು: ಸಂಗ್ರಹದಿಂದ)