ಕನಸಿನ ರೆಕ್ಕೆಗಳನ್ನು ಹಚ್ಚಿಕೊಂಡು ಅಮೆರಿಕಕ್ಕೆ ಹಾರುವ ಭಾರತೀಯರು ಅಲ್ಲಿನ ಅಪರಿಚಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ತಾವು ಹೊಸ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಅನಿವಾರ್ಯವಾಗಿ ರೂಢಿಸಿಕೊಂಡಿರುವ ಆಡಂಬರ, ಒಣಪ್ರತಿಷ್ಠೆಗಳ ಜೀವನಶೈಲಿ ಹಾಗೂ ಅವರ ಮಾನಸಿಕ ತುಮುಲಗಳನ್ನುಕಥೆಗಾರರು   ಸೆರೆಹಿಡಿದಿದ್ದಾರೆ. ಇತ್ತ ಭಾರತದ ತೆಲಂಗಾಣದಲ್ಲಿ ಕಂಡ ಸಾಮಾಜಿಕ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಮ್ಮ ನಾಡಿನ ಜನರ ಕಥೆಗಳೆಂಬಂತೆ ಶುಭಮಂಗಳ ಅವರು ಕನ್ನಡೀಕರಿಸಿದ್ದಾರೆ.
ತೆಲುಗಿನ ಕಥೆಗಾರ ನಕ್ಷತ್ರಂ ವೇಣುಗೋಪಾಲ್‌ ಬರೆದ “ಮೌನಸಾಕ್ಷಿ” ಕಥಾಸಂಕಲನದ ಹನ್ನೊಂದು ಕತೆಗಳನ್ನು ಎಂ.ಜಿ. ಶುಭಮಂಗಳ ಕನ್ನಡಕ್ಕೆ ತಂದಿದ್ದು, ಈ ಸಂಕಲನಕ್ಕೆ ರೂಪದರ್ಶಿ ಜಿ. ವೆಂಕಟೇಶ್‌ ಬರೆದ ಮುನ್ನುಡಿ ಇಲ್ಲಿದೆ

ಕನ್ನಡದಲ್ಲಿ ಸಣ್ಣಕಥೆಯ ಪರಂಪರೆಗೆ ನೂರು ವರ್ಷಗಳು ತುಂಬಿದೆ. ಹಿರಿಯ ಲೇಖಕರಾದ ದಿ. ಗಿರಡ್ಡಿಗೋವಿಂದರಾಜರವರು ತಮ್ಮ “ಸಾತತ್ಯ” (1992) ಪುಸ್ತಕದಲ್ಲಿ ‘ಕನ್ನಡ ಕಥಾಪರಂಪರೆ ಮತ್ತು ಮಾಸ್ತಿ’ ಎಂಬ ಅಧ್ಯಾಯದಲ್ಲಿ “1920ರಲ್ಲಿ ಪ್ರಕಟವಾದ ‘ಕೆಲವು ಸಣ್ಣ ಕತೆಗಳು’ ಎಂಬ ತಮ್ಮ ಮೊದಲ ಸಂಕಲನದ ಮೂಲಕ ಸಣ್ಣಕತೆಗಳಿಗೊಂದು ಗಟ್ಟಿ ತಳಪಾಯವನ್ನು ಒದಗಿಸಿ, ನಂತರದ ಕಥೆಗಳ ಮೂಲಕ ಅದನ್ನು ಭದ್ರಪಡಿಸುತ್ತ ಹೋದ ಶ್ರೇಯಸ್ಸು ಮಾಸ್ತಿಯವರಿಗೆ ಸಲ್ಲಬೇಕು. ಹೀಗೆ ಕನ್ನಡದಲ್ಲಿ ಹೊಸದಾಗಿ ಆರಂಭವಾದ ಸಣ್ಣಕತೆ ಪಶ್ಚಿಮದ ದೇಶಗಳಲ್ಲಿ ಆಗಲೇ ಸಿದ್ಧವಾಗಿದ್ದ ರೂಪದ ಪ್ರಭಾದಿಂದಾಗಿಯೇ ನಮ್ಮಲ್ಲಿ ಬಂದಿತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾ ಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ. ಪಶ್ಚಿಮದ ಆಧುನಿಕ ಸಣ್ಣಕತೆಯ ಸಂಪರ್ಕಕ್ಕೆ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ ಎಂಬ ಅಂಶವನ್ನು ನಾವು ಮರೆಯಬಾರದು. ಆದರೆ ಪಶ್ಚಿಮದ ಸಣ್ಣಕತೆ ನಮ್ಮಲ್ಲಿಗೆ ಬಂದಾಗ ಅದು ಅಲ್ಲಿಯ ಪೂರ್ಣ ಅನುಕರಣೆಯಾಗಿ, ನಮ್ಮಲ್ಲಿ ಕತೆಗಳ ಒಂದು ಪರಂಪರೆಯೇ ಇರಲಿಲ್ಲವೆಂಬಂತೆ, ತೀರ ಹೊಸದಾಗಿಯೇ ಬರಲಿಲ್ಲವೆಂಬುದೂ ಕೂಡ ಅಷ್ಟೇ ಮುಖ್ಯವಾದ ಅಂಶವಾಗಿದೆ. ಹೊಸ ಸಾಹಿತ್ಯಪ್ರಕಾರವೊಂದನ್ನು ಆಮದು ಮಾಡಿಕೊಳ್ಳುವಾಗ ಅದರ ಕೆಲವೊಂದು ಗುಣಧರ್ಮಗಳನ್ನು ನಮ್ಮ ಕಥಾಪರಂಪರೆಯಲ್ಲಿ ಗುರುತಿಸುವ, ನಮ್ಮ ಕಥಾಪರಂಪರೆಗೆ ವಿಶಿಷ್ಟವಾದ ಕೆಲವು ಅಂಶಗಳನ್ನು ಹೊಸ ಕಥೆಯಲ್ಲಿ ಅಳವಡಿಸಿಕೊಳ್ಳುವ ಮಹತ್ವದ ಕೆಲಸವೂ ಆ ಕಾಲದಲ್ಲಿ ನಡೆಯಿತು. ಎಂದರೆ ಸಣ್ಣಕತೆಯ ಹೊಸ ಪ್ರಕಾರವನ್ನು ಭಾರತೀಯ ಕಥಾಪರಂಪರೆಯ ಮುಖ್ಯಪ್ರವಾಹಕ್ಕೆ ಜೋಡಿಸಿದ್ದು ಒಂದು ಮಹತ್ವದ ಬೆಳವಣಿಗೆಯಾಗಿತ್ತು. ಈ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದವರು ಮಾಸ್ತಿಯವರು” ಎಂದು ಪ್ರಸ್ತಾಪಿಸಿದ್ದಾರೆ.

(ಎಂ.ಜಿ. ಶುಭಮಂಗಳ)

ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಈ ‘ಮೌನಸಾಕ್ಷಿ’ ಕಥಾಸಂಕಲನದ ಕಥೆಗಳು ಪೂರ್ವ ಮತ್ತು ಪಶ್ಚಿಮ ಸಂಸ್ಕೃತಿಯ ಪ್ರಭಾವದ ಸಂಗಮ. ಇಲ್ಲಿಯ ಕೆಲವು ಕಥೆಗಳು ಅಮೆರಿಕದ ನಗರಗಳಲ್ಲಿ ಜರುಗಿದರೆ, ಉಳಿದವು ನಮ್ಮ ತೆಲಂಗಾಣದ ಸೀಮೆಗಳಲ್ಲಿ ನಡೆಯುತ್ತವೆ. ಹಾಗಾಗಿ ಈ ಸಣ್ಣಕಥೆಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವ ಇದೆ. ನಕ್ಷತ್ರಂ ವೇಣುಗೋಪಾಲ್ ಅವರ ‘ಮೌನಸಾಕ್ಷಿ’ ಸಂಕಲನದ ಹನ್ನೊಂದು ತೆಲುಗು ಕಥೆಗಳನ್ನು ಎಂ.ಜಿ. ಶುಭಮಂಗಳ ಅವರು ಕನ್ನಡಕ್ಕೆ ತಂದಿದ್ದಾರೆ. ಇಲ್ಲಿನ ಒಂದೊಂದು ಕಥೆಯೂ ಮೆಲ್ಲಮೆಲ್ಲನೆ ಮನಸನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ.

ಕನಸಿನ ರೆಕ್ಕೆಗಳನ್ನು ಹಚ್ಚಿಕೊಂಡು ಅಮೆರಿಕಕ್ಕೆ ಹಾರುವ ಭಾರತೀಯರು ಅಲ್ಲಿನ ಅಪರಿಚಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ತಾವು ಹೊಸ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಅನಿವಾರ್ಯವಾಗಿ ರೂಢಿಸಿಕೊಂಡಿರುವ ಆಡಂಬರ, ಒಣಪ್ರತಿಷ್ಠೆಗಳ ಜೀವನಶೈಲಿ ಹಾಗೂ ಅವರ ಮಾನಸಿಕ ತುಮುಲಗಳನ್ನು ಸೆರೆಹಿಡಿದಿರುವ ಕಥೆಗಾರರು, ಇತ್ತ ಭಾರತದ ತೆಲಂಗಾಣದಲ್ಲಿ ಕಂಡ ಸಾಮಾಜಿಕ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಮ್ಮ ನಾಡಿನ ಜನರ ಕಥೆಗಳೆಂಬಂತೆ ಶುಭಮಂಗಳರವರು ಕನ್ನಡೀಕರಿಸಿದ್ದಾರೆ.

ಅಮೆರಿಕಾದ ಅನಿವಾಸಿ ಭಾರತೀಯರ ‘ನಾತಿಚರಾಮಿ’ ಕಥೆಯಲ್ಲಿ ಗಂಡನೊಂದಿಗೆ ಜೀವನ ಪಯಣದ ಹೊಸ ಕನಸು ಕಟ್ಟಿಕೊಂಡು ಅಮೆರಿಕಕ್ಕೆ ತೆರಳುವ ಮಧ್ಯಮವರ್ಗದ ನವವಿವಾಹಿತೆ ಕಥಾನಾಯಕಿ ಪಾವನಿ ತನ್ನ ಜೀವನದಲ್ಲಿ ಹಠಾತ್ತನೆ ಎದುರಾದ ಕ್ಲಿಷ್ಟ ಸನ್ನಿವೇಶದಲ್ಲಿ ಮೊದಲಿಗೆ ಕಂಗಾಲಾದರೂ ನಂತರ ಆತ್ಮಸ್ಥೈರ್ಯದಿಂದ ಸಮಸ್ಯೆಯನ್ನು ಮೆಟ್ಟಿನಿಲ್ಲುವ ರೀತಿ ಸಶಕ್ತವಾಗಿ ಮೂಡಿಬಂದಿದೆ. ವೈವಾಹಿಕ ಜೀವನದ ಆರಂಭದಲ್ಲಿ ನವಜೋಡಿಗಳು ಸುಮಧುರ ಕ್ಷಣಗಳನ್ನು ಸವಿಯುತ್ತ ಆನಂದದಲ್ಲಿ ತೇಲಾಡುತ್ತಾರೆ. ಇಂಥ ಸಮಯದಲ್ಲಿ ಪಾವನಿಗೆ ಗರ್ಭಧಾರಣೆ ಅಸಾಧ್ಯತೆಯ ಕಾರಣವಾಗಿ ಸುಖಸಂಸಾರದಲ್ಲಿ ಒಡಕು ಮೂಡುತ್ತದೆ. ಈ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಅನುಭವಿಸುವ ಎಲ್ಲ ಮಾನಸಿಕ ಯಾತನೆ ಈಕೆ ಅನುಭವಿಸುತ್ತಾಳೆ. ರಮೇಶನಂಥ ಪಾತ್ರಗಳು ಎಲ್ಲೆಡೆ ಕಾಣುತ್ತಾರೆ. ಹೆಣ್ಣಿಗೆ ಹೆಣ್ಣು ಶತ್ರು ಎಂಬ ರೀತಿಯ ಅತ್ತೆ. ಮದುವೆಯಲ್ಲಿ “ಧರ್ಮೇಚ ಅರ್ಥೇಚ ಕಾಮೇಚ.. ನಾತಿಚರಾಮಿ” ಎಂದು ಪ್ರಮಾಣಿಸಿದ ಗಂಡನೇ ಎರಡನೆಯ ಮದುವೆಗೆ ಸಿದ್ಧನಾಗುತ್ತಾನೆ. ಎಲ್ಲ ಕ್ಷೇತ್ರದಲ್ಲಿ ಮುಂದುವರೆದ ಅಮೆರಿಕದಲ್ಲಿದ್ದರೂ ಮಾನಸಿಕವಾಗಿ ಬೆಳೆಯದ ಗಂಡ. ಆದರೆ ಕಥೆಯ ಅಂತ್ಯ ಆಶಾದಾಯಕ. ಪಾವನಿಯ ದೃಢಸಂಕಲ್ಪ ಮತ್ತು ತನ್ನಂತೆ ಇನ್ನೊಂದು ಹೆಣ್ಣು ಬಲಿಯಾಗದಂತೆ ತೆಗೆದುಕೊಳ್ಳುವ ನಿರ್ಧಾರದಿಂದ ಇಂದಿನ ಕಾಲಘಟ್ಟದಲ್ಲಿ ಅಬಲೆಯ ಸಬಲೀಕರಣಕ್ಕೆ ಇಂಬು ನೀಡುವ ಕಥೆ ‘ನಾತಿಚರಾಮಿ’. ಈ ಕಥೆಯ ನಾಯಕಿ ತೆಗೆದುಕೊಳ್ಳುವ ನಿರ್ಧಾರ ಇತ್ತೀಚೆಗೆ ಅಮೆರಿಕದ ಪ್ರಖ್ಯಾತ ನಟಿ ಅಂಜೆಲಿನಾ ಜೋಲಿಯ ಹೇಳಿಕೆ, “When men earn more money they need more women. But when women earn more money they need No Men” ನೆನಪಿಗೆ ಬರುತ್ತದೆ.

ಅದೇ ರೀತಿ ಅಮೆರಿಕದ ಆಧುನಿಕ ಸಮಾಜದಲ್ಲಿ ನವದಂಪತಿಗಳ ಕೆಲಸದ ಒತ್ತಡ, ಮನೆ, ಕಾರುಗಳ ಮೇಲಿನ ಸಾಲ, ಅದನ್ನು ತೀರಿಸಲು ಅನಿವಾರ್ಯವಾಗಿ ದುಡಿಯಲೇಬೇಕಾದ ಪರಿಸ್ಥಿತಿ. ಅದಕ್ಕೆ ಹುಟ್ಟಲಿರುವ ಮಗುವನ್ನು ಭಾರತದಲ್ಲಿರುವ ಅಜ್ಜಿ ತಾತನ ಹತ್ತಿರ ಬಿಡುವ ಯೋಚನೆ. ಅಪ್ಪ ಅಮ್ಮ ಇದ್ದರೂ ಸಹ ಬರೀ ಗೊಂಬೆಗಳೊಂದಿಗೆ ಆಟವಾಡಿಕೊಳ್ಳುವ ಮಗು. ಈ ಚಿತ್ರಣ ನಿಜವಾಗಿಯೂ ಮನಕಲಕುತ್ತದೆ. ಸ್ವಯಂ ಅರಿವೇ ಇದಕ್ಕೆ ಪರಿಹಾರ. ಇದು ‘ವಾತ್ಸಲ್ಯ’ ಕಥೆಯಲ್ಲಿದೆ.

ಅಮೆರಿಕದಲ್ಲಿ ಅಪ್ಪ ಅಮ್ಮನ ಪೊಳ್ಳು ಪ್ರತಿಷ್ಠೆಗಾಗಿ ಮತ್ತು ಭವಿಷ್ಯದ ಭ್ರಮೆಗಳ ಬೆನ್ನೇರಿ ಮಕ್ಕಳನ್ನು ಬಾಲ್ಯದ ಸಹಜ ಆಟೋಟಗಳಿಗೆ, ಹವ್ಯಾಸಗಳಿಗೆ ಬಿಡದೆ ಸದಾ ರ್ಯಾಂಕ್, ಕ್ರೆಡಿಟ್ ಅಂತ ಮಕ್ಕಳ ಮೇಲೆ ಹೇರುವ ಒತ್ತಡ ಮತ್ತು ಅದರಿಂದಾಗುವ ಮಕ್ಕಳ ಮೇಲಿನ ಮಾನಸಿಕ ಏರುಪೇರುಗಳು, ಅದರ ಪರಿಣಾಮಗಳನ್ನು ತಿಳಿಸುವ ಕಥೆ ‘ವೇಕ್ ಅಪ್’. ಕಥೆಯನ್ನು ಓದಿದ ನಂತರ ಶೀರ್ಷಿಕೆ ‘ವೇಕ್ ಅಪ್’ ನಮ್ಮನ್ನು ‘ಎಚ್ಚೆತ್ತುಕೊಳ್ಳಿ’ ಎನ್ನುತ್ತದೆ.

ರಮೇಶನಂಥ ಪಾತ್ರಗಳು ಎಲ್ಲೆಡೆ ಕಾಣುತ್ತಾರೆ. ಹೆಣ್ಣಿಗೆ ಹೆಣ್ಣು ಶತ್ರು ಎಂಬ ರೀತಿಯ ಅತ್ತೆ. ಮದುವೆಯಲ್ಲಿ “ಧರ್ಮೇಚ ಅರ್ಥೇಚ ಕಾಮೇಚ.. ನಾತಿಚರಾಮಿ” ಎಂದು ಪ್ರಮಾಣಿಸಿದ ಗಂಡನೇ ಎರಡನೆಯ ಮದುವೆಗೆ ಸಿದ್ಧನಾಗುತ್ತಾನೆ. ಎಲ್ಲ ಕ್ಷೇತ್ರದಲ್ಲಿ ಮುಂದುವರೆದ ಅಮೆರಿಕದಲ್ಲಿದ್ದರೂ ಮಾನಸಿಕವಾಗಿ ಬೆಳೆಯದ ಗಂಡ. ಆದರೆ ಕಥೆಯ ಅಂತ್ಯ ಆಶಾದಾಯಕ.

ಡಿ.ವಿ.ಜಿ ರವರ “ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ” ಎನ್ನುವ ಹಾಗೆ, ಅಮೆರಿಕದಲ್ಲಿ ಸಕಲಸೌಕರ್ಯಗಳನ್ನು ಹೊಂದಿದ್ದರೂ ಅಲ್ಲಿ ಸಿಗದಿರುವ ನೆಮ್ಮದಿಯ ಬದುಕನ್ನು ಹುಡುಕುವ ಕಥೆ ‘ಆಂತರ್ಯ’. ಅಮೆರಿಕದಲ್ಲಿರುವ ಕಥಾನಾಯಕ ಮೋಹನ ತನ್ನ ಬಾಲ್ಯ ಸ್ನೇಹಿತ ರಾಜು ತೆಲಂಗಾಣದಲ್ಲಿಯೇ ರೈತನಾಗಿ ಉಳಿದು, ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಿ ನೆಮ್ಮದಿಯ ಬದುಕನ್ನು ಕಂಡುಕೊಂಡಿರುವುದನ್ನು ಕೇಳಿ ತಾನು ಸಹ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗುವುದು ಹಣ, ಕೀರ್ತಿ, ಪ್ರತಿಷ್ಠೆಗಳನ್ನು ಮೀರಿದ ನೆಮ್ಮದಿ ಅರಸುವ ದರ್ಶನವನ್ನು ನೀಡುತ್ತದೆ. ರಾಜು ರೈತನಾಗಿಯೇ ಉಳಿಯಲು ಉತ್ತೇಜನಗೊಳ್ಳುವ ಸಂದರ್ಭದಲ್ಲಿ ಡಾ. ರಾಜ್‍ಕುಮಾರ್ ರವರ ಬಂಗಾರದ ಮನುಷ್ಯ ಚಿತ್ರದ ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಹಾಡನ್ನು ಬಳಸುವ ಮೂಲಕ ಶುಭಮಂಗಳರವರು ಅನುವಾದದಲ್ಲಿ ಭಾಷೆಯನ್ನು ಎಷ್ಟು ಆಪ್ತವಾಗಿ ಬಳಸಿಕೊಳ್ಳುತ್ತಾರೆ ಎಂಬುದು ಅರ್ಥವಾಗುತ್ತದೆ.

‘ರೈಲ್ವೆ ಸತ್ಯಂ’ ಕಥೆಯಲ್ಲಿ ಪ್ರಾಮಾಣಿಕ ಕಾರ್ಮಿಕನ ದುಡಿಮೆ, ಆ ದುಡಿಮೆಗೆ ದೊರಕುವ ಪ್ರಶಸ್ತಿಗಳೆಲ್ಲ ಅಧಿಕಾರಿಗಳ ದರ್ಪ(ಈಗೋ) ದಲ್ಲಿ ಬೆಲೆ ಕಳೆದುಕೊಂಡು ನೀರಿನಲ್ಲಿ ಹೋಮವಾಗುವ, ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಏಳಿಗೆಗೆ ಅಪ್ಪ ಮಾಡುವ ತ್ಯಾಗದ ಮನಕಲಕುವ ಚಿತ್ರಣವಿದೆ. ಈ ತ್ಯಾಗಕ್ಕೆ ಸಾಕ್ಷಿಯಾಗುವ ಕಥಾನಿರೂಪಕ ಕೃಷ್ಣ ಆಡುವ, “ಹೆತ್ತು ಬೆಳೆಸಿದ ತಂದೆ ತಾಯಿಯರನ್ನು ವೃದ್ಧಾಶ್ರಮಗಳಿಗೆ ದೂಡುತ್ತಾ, ಪ್ರಾಣ ಹೋದ ತಂದೆತಾಯಿಯರ ಶವಗಳನ್ನು ನೋಡಲು ಮಾತ್ರ ಬರುತ್ತಿರುವ ಮಕ್ಕಳಿರುವ ಈ ಸಮಾಜದಲ್ಲಿ ಇಂತಹ ತ್ಯಾಗವನ್ನು ಹೇಗೆ ಅರ್ಥೈಸುವುದು? ಹೆತ್ತವರಿಗೆ ಅವರ ಮಕ್ಕಳ ಮೇಲಿನ ಪ್ರೀತಿಯ ಮುಂದೆ, ಪ್ರಪಂಚದಲ್ಲಿ ಎಲ್ಲವೂ ತೃಣವೇ, ಕೊನೆಗೆ ತಮ್ಮ ಪ್ರಾಣವನ್ನೂ ಲೆಕ್ಕಮಾಡುವುದಿಲ್ಲ ಎನ್ನುವುದಕ್ಕೆ ನಗ್ನಸತ್ಯ ಈ ಸತ್ಯಂ ತ್ಯಾಗ” ಎನ್ನುವ ಮಾತು ಮಾರ್ಮಿಕವಾಗಿ ನಮ್ಮಲ್ಲಿ ಮಾರ್ದನಿಸುತ್ತದೆ.

ಸಂಕಲನದ ಶೀರ್ಷಿಕೆ ‘ಮೌನಸಾಕ್ಷಿ’ ಕಥೆಯಲ್ಲಿ ಸಮಾಜದಲ್ಲಿ ಕೆಳಸ್ತರದ, ಅಸ್ಪøಶ್ಯರ, ಕೂಲಿಕಾರ್ಮಿಕರ, ಬಡವರ, ಭಿಕ್ಷುಕರ ಜೀವಕ್ಕೆ ಬೆಲೆಯಿಲ್ಲದಿರುವುದು ಅಭಿವ್ಯಕ್ತವಾಗಿದೆ. ‘ಸೂರಿಲ್ಲದ, ಹೊತ್ತಿನ ಕೂಳಿಲ್ಲದವರ ಮೇಲೆ ಕನಿಕರ ತೋರದ ಒರಟು ಲೋಕದಲ್ಲಿ ರೈಲು ಓಡುತ್ತಿದೆ ಅದರೊಂದಿಗೆ ಮನುಷ್ಯರೂ’ ಎನ್ನುವ ಮಾತುಗಳು ಅಸಮಾನತೆ, ಅನ್ಯಾಯಗಳನ್ನು ನೋಡಿಯೂ ಮೂಕಪ್ರೇಕ್ಷಕರಾಗಿರುವ ನಮ್ಮ ಕ್ರೂರ ಮನಸ್ಥಿತಿಗೆ ಹಿಡಿಯುವ ಕನ್ನಡಿಯಾಗಿದೆ.

1992ರ ಡಿಸೆಂಬರ್ ನಲ್ಲಿ ನಡೆದ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಕೆಡವಿದ ಹಿನ್ನೆಲೆಯ ಕೋಮುಗಲಭೆಯ ಸಂದರ್ಭದಲ್ಲಿ ನಡೆಯುವ ಕಥೆ ‘ಮೃಗಗಳ ನಡುವೆ’. ಕಥಾನಾಯಕಿ ಕಾಂತಮ್ಮ. ಪಕ್ಷವಾತವಾಗಿ ಹಾಸಿಗೆ ಹಿಡಿದ ಗಂಡ, ಹೆಂಡತಿಯ ಮಾತಿಗೆ ಹೆದರಿ ಅಪ್ಪನನ್ನು ನೋಡಲು ಬಾರದ ಮಗ. ಅನ್ನ ನೀಡಿದ ಅನ್ಯಧರ್ಮೀಯರ ಮನೆಯಲ್ಲಿ ಕೆಲಸಮಾಡಿದ್ದಕ್ಕೆ ಧರ್ಮಭ್ರಷ್ಟತೆಯ ಕಾರಣವಾಗಿ ಸ್ವಜಾತಿಯವರಿಂದ ಅವಳಿಗೆ ಬಹಿಷ್ಕಾರ. “ಅಗತ್ಯ ಇದ್ದಾಗ ಒಂದಿಷ್ಟು ಕೂಳು ನೀರು ಕೊಡದವ್ರು, ಅವರ ಧರ್ಮ! ನಂಗ್ಯಾಕೆ? ಅಷ್ಟಕ್ಕೂ ಯಾವ ಜಾತಿ, ಧರ್ಮ ಯಾಕೆ ಸಾಮಿ? ಕಷ್ಟ ಬಂದಾಗ ಆ ಜಾತಿ ದ್ಯಾವ್ರನ್ನ ‘ದ್ಯಾವ್ರೇ ನೀನೇ ರಕ್ಷಿಸಬೇಕು’ ಅಂತ ಕೈ ಮುಗಿಯೋಕೆ ಅಲ್ವಾ? ಚೆನ್ನಾಗಿರೋವಾಗ ಎಷ್ಟು ಜನಕ್ಕೆ ದ್ವಾವ್ರು ಗ್ಯಾಪ್ನ ಬರ್ತಾನೆ? ನನಗೆ ದ್ಯಾವ್ರಂತೋರು ಅನ್ನ ಕೊಟ್ಟ ನೀವೇ ಇದ್ದೀರಲ್ವಾ! ಇನ್ನು ಬ್ಯಾರೆ ದ್ಯಾವ್ರು ಯಾಕೆ?” ಎನ್ನುವ ಸಮಾಜವನ್ನೇ ಪ್ರಶ್ನಿಸುವಂತ ಕಾಂತಮ್ಮನ ಮಾತು ಜೀವನ ತತ್ವದಂತೆ ಭಾಸವಾಗುತ್ತದೆ. ಅದಲ್ಲದೆ ಕೋಮುಗಲಭೆಯ ಸಂದರ್ಭದಲ್ಲಿ ಕಾಂತಮ್ಮನಿಗೆ ಕತ್ತಿ ತಿವಿಯುವ ಮುನ್ನ ಬಾಡಿಗೆ ಹಂತಕರು ಆಡುವ ‘ತೋ ಕ್ಯಾ.. ಓ ಔರತ್ ಹುಯೇ ತೋ ಕ್ಯಾ? ಹಿಂದು ಹುಯೇ ತೋ ಕ್ಯಾ? ಮುಸಲ್ಮಾನ್ ಹುಯೇ ತೋ ಕ್ಯಾ? ಹಮ್ ಕು ತೋ ಕೌಂಟ್ ಹೋನಾ ಪೈಸಾ ಹೋನಾ’ ಎನ್ನುವ ಮಾತು ಕೋಮುಗಲಭೆಗಳ ಹಿಂದಿರುವ ಶಕ್ತಿಗಳ ಬಗ್ಗೆ ಅನುಮಾನ ಮೂಡಿಸುವುದಲ್ಲದೆ ಅದರ ಹಿಂದಿರುವ ರಾಜಕೀಯ ಕ್ರೌರ್ಯಗಳನ್ನು ಅನಾವರಣಗೊಳಿಸಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಬೇರೊಬ್ಬರ ಸ್ವಾರ್ಥಸಾಧನೆಗೆ ಅಮಾಯಕರು ಈ ದಾರುಣ ಮಾರಣ ಹೋಮಕ್ಕೆ ಸಮಿತ್ತುಗಳಾಗದೆ ತಪ್ಪುವುದಿಲ್ಲವೇ? ಈ ರಾಜಕೀಯ ಘೋರಗಳಿಗೆ ಅಂತ್ಯವಿಲ್ಲವೇ ಎಂದು ಗಂಭೀರವಾಗಿ ಯೋಚಿಸುವ ಕಥಾನಾಯಕನ ಸ್ಥಿತಿ ನಮ್ಮದಾಗುತ್ತದೆ.

ನಮ್ಮ ಪ್ರಜಾಪ್ರಭುತ್ವದಲ್ಲಿ ಸ್ವಸ್ಥ್ಯ ಸಮಾಜವನ್ನು, ಸಮಾನತೆಯನ್ನು ಎತ್ತಿಹಿಡಿಯುವ ಬದಲು ಸಾಮಾಜಿಕ ಹೋರಾಟಗಾರರನ್ನು ಹತ್ತಿಕ್ಕುವ ಕಥೆ ಪರ್ಯವಸಾನ. ಭೂಹೋರಾಟಗಾರ, ಸಮಾಜಸುಧಾರಕ, ಅನ್ಯಾಯದ ವಿರುದ್ಧ ಹೋರಾಡುವವರಿಗೆ ಅಜ್ಞಾತ ಆತಂಕವಾದಿ ಪಟ್ಟಿಕಟ್ಟಿ ಎನ್ ಕೌಂಟರ್ ನೆಪದಲ್ಲಿ ಬಲಿಪಡೆಯುವ ಮಾಫಿಯಾಗಳ ಕೃಪಾಪೋಷಿನ ಸರ್ಕಾರ. ಅದಕ್ಕೆ ಪೂರಕವಾದ ಪೊಲೀಸರ ದೌರ್ಜನ್ಯ. ಇದನ್ನು ಕಂಡು ಸಾಕ್ಷ್ಯನುಡಿದ ಶಿಕ್ಷಕಿಯನ್ನು ಸಹ ಸದೆಬಡಿಯಲು ಅಧಿಕಾರದ ದುರುಪಯೋಗವನ್ನು ಬಳಸಿ ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನೋಡಿ ‘ರಕ್ಷಕರಾಗಿರಬೇಕಾದ ಪೊಲೀಸ್ ವ್ಯವಸ್ಥೆ ಮತ್ತು ಸರ್ಕಾರ’ದ ಮೇಲಿನ ನಂಬಿಕೆ ಹುಸಿಯಾಗುತ್ತದೆ.

(ರೂಪದರ್ಶಿ ಜಿ. ವೆಂಕಟೇಶ್‌)

ಒಂದು ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಸರಿಯಾದ ಪ್ರತಿಪಕ್ಷವಿರಬೇಕು. ಅದರ ಜೊತೆಗೆ ಇತರ ಸಂಘಟನೆಗಳು ಮುಖ್ಯ. ಭಾರತೀಯ ಸಂದರ್ಭದಲ್ಲಿ ಮಾಕ್ರ್ಸ್ ಮತ್ತು ಮಾವೋ ಪ್ರೇರಿತ ಕ್ರಾಂತಿಕಾರಿ ಸಂಘಟನೆಗಳು ಮುಖ್ಯವಾಗಿವೆ. ಇಂಥ ಒಂದು ಕ್ರಾಂತಿಕಾರಿ ಸಂಘಟನೆಯ ಒಳತೋಟಿಯ ಕಥೆ ಅಶ್ರುಬಿಂದು. ‘ಶತೃ’ ಎಂದರೆ ಪೊಲೀಸ್ ಅಥವಾ ತಮ್ಮದೇ ಇತರ ಬಣಗಳ ವಿರುದ್ಧ ಹೋರಾಡಲು ಸಂಘಕಟ್ಟುವ ಸಲುವಾಗಿ ಕಥಾನಾಯಕ ಪ್ರಕಾಶ್ ತನ್ನ ಐವತ್ತು ವರ್ಷಗಳ ಅನುಭವದಲ್ಲಿ ನಾನಾ ಪರಿಪಾಡಲು ಪಟ್ಟು ಕಾಡಿ ಬೇಡಿ ಸಂಗ್ರಹಿಸಿದ ಸಂಪನ್ಮೂಲಗಳನ್ನು ಸಂಘದ ಯುವ ಸದಸ್ಯರು ದುರುಪಯೋಗ ಪಡಿಸಿಕೊಳ್ಳುವುದು, ಸಂಘದ ಆಶಯ, ಧ್ಯೇಯ ಕಣ್ಣಮುಂದೆಯೇ ಮಣ್ಣುಪಾಲಾಗುತ್ತಿರುವುದು ಕಂಡು ಮರಗುವ ಕಥೆ, ವ್ಯಥೆ ಅಶ್ರುಬಿಂದು. ಇಲ್ಲಿ ‘ಶತೃ’ವಿಗೆ ಹೊಸ ವ್ಯಾಖ್ಯಾನ ಸಿಗುತ್ತದೆ. ಕೊನೆಯಲ್ಲಿ “ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಸಾಕಿಸಲಹಿದ ಹೆತ್ತವರನ್ನು ಬಿಟ್ಟಾಗ ಬಾರದ, ಬುಲೆಟ್ ಗಾಯಗಳಿಂದ ಬಿದ್ದಾಗ ಬಾರದ, ದಳದಲ್ಲಿ ನನ್ನ ತಂದೆ, ತಾಯಿ, ಗುರು ಎಲ್ಲವೂ ತಾನಾಗಿ ಕ್ರಾಂತಿಗೆ ಅರ್ಥಹೇಳಿದ ನಾಯಕ ಹೋದಾಗಲೂ ಬಾರದ ಅಶ್ರುಬಿಂದು, ಈಗ ತಂತಾನೆ ತುಂಬಿ ಬರುತ್ತಿದೆ ಅದಕ್ಕೆ ಮಾತ್ರ ತಿಳಿದಂತೆ ನನ್ನ ಆತ್ಮಘೋಷ!” ಎನ್ನುವ ಮಾತು ಕ್ರಾಂತಿಕಾರಿ ಸಂಘಟನೆಗಳ ಈ ಪರಿಸ್ಥಿತಿಯನ್ನು ತಿಳಿಸುತ್ತದೆ.

ಒಟ್ಟಾರೆ, ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಕಥೆಗಳಲ್ಲಿ ಮಾನಸಿಕ ತುಮುಲಗಳ ಅನಾವರಣ ಮಾಡುತ್ತಲೇ ಸುಖಾಂತ್ಯ ಕಾಣಿಸುವ ಕಥೆಗಾರರು, ನಮ್ಮ ದೇಶದಲ್ಲಿ ನಡೆಯುವ ಪ್ರಾದೇಶಿಕ ಕಥೆಗಳಲ್ಲಿ ಸಾಮಾಜಿಕ ಕ್ರೌರ್ಯವನ್ನು ಚಿತ್ರಿಸಿ ದುರಂತಗಳನ್ನು ಕಾಣಿಸುತ್ತಾರೆ. ಇದು ವಾಸ್ತವಕ್ಕೆ ಹಿಡಿದ ಕನ್ನಡಿಯಾದರೂ, ಅರಗಿಸಿಕೊಳ್ಳುವುದು ಕಷ್ಟವೇ ಆಗಿದೆ.

ಕನ್ನಡದ ಗಜಲ್ ಕವಯಿತ್ರಿ ಮುಕ್ತಾಯಕ್ಕರವರು, “ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಳ್ಳಬೇಕಾದರೆ ಅನುವಾದಕರಿಗೆ ಎರಡೂ ಭಾಷೆಯ ಪ್ರೌಢಿಮೆ, ಪಾಂಡಿತ್ಯವಿರಬೇಕು. ಹಾಗಾದರೆ ಮಾತ್ರ ಅನುವಾದವು ಮೂಲಕ್ಕೆ ನ್ಯಾಯೊದಗಿಸುತ್ತವೆ” ಎನ್ನುತ್ತಾರೆ. ಅದಕ್ಕೆ ಪೂರಕವೆಂಬಂತೆ ಶುಭಮಂಗಳರವರು ಬಳಸಿರುವ ಶಬ್ದಭಂಡಾರ, ಆಡುಭಾಷೆ, ನಿರೂಪಣಾ ಶೈಲಿಯಿಂದ ಅನುವಾದದ ಕಥೆ ಎಂಬ ಕುರುಹೇ ಇಲ್ಲದೆ ಕಥೆಗಳು ಸಾರ್ವತ್ರಿಕವಾಗಿ ತಟ್ಟುತ್ತವೆ. ಇಲ್ಲಿ ಬಳಸಿರುವ ಭಾಷೆ, ಉಪಮೆಗಳು ಕಥೆಗಳ ಹೂರಣಕ್ಕೆ ಗಾಢತೆಯನ್ನು ನೀಡಿ ಅದರ ಪರಿಣಾಮವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಎಲ್ಲಾ ಕಥೆಗಳು ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ.

(ಕೃತಿ: ಮೌನಸಾಕ್ಷಿ (ಅನುವಾದಿತ ಕಥಾ ಸಂಕಲನ), ತೆಲುಗು ಮೂಲ: ನಕ್ಷತ್ರಂ ವೇಣುಗೋಪಾಲ್‌, ಕನ್ನಡಕ್ಕೆ: ಎಂ.ಜಿ. ಶುಭಮಂಗಳ, ಪ್ರಕಾಶಕರು: ವಂಶಿ ಪಬ್ಲಿಕೇಷನ್ಸ್‌, ಪುಟಗಳು:120, ಬೆಲೆ: 120/-)