ಎರಡು ತಲೆ ಹಾವು

ಎರಡು ತಲೆ ಹಾವು
ಅಂತ ಅವಳಂದಾಗ
ನಕ್ಕುಬಿಟ್ಟೆ.

ಕತ್ತಲಿನ ದೂರದಲಿ
ಹೆಜ್ಜೆಸಪ್ಪಳಕೆ ಬೆಚ್ಚಿದ
ಮುದುಡು ಸಿಂಬಿಗೆ
ಕೇದಗೆಯ ಮುಡಿಸಿ
ಸಿಂಗರಿಸಿದ ಮಡಿಲ
ತುಂಬಿ ವಿಷತುಂಬಿದೆ.

ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.

ಒಳ್ಳೆಯವ, ಚಟವಿಲ್ಲ
ಕಾಫಿ, ಟೀ ಕೂಡ ಇಲ್ಲ
ಸಕ್ಕರೆ ರಹಿತ ಹಾಲು
ಬೆಳ್ಳಿಗಿಂಡಿಯಲಿ ಕೊ
ಎನುವಾಗ ನಾಲಿಗೆಯ
ಚಾಚಿ ತುಟಿ ಸವರುವ
ಚಣದಲಿ ಗೊಣಗುವಳು
ಎರಡು ತಲೆ ಹಾವು! –

ಸಿಂಡರೆಲಾ

ಕನಸಿನ ಗಾತ್ರದಿಂದ
ವಾಸ್ತವಕ್ಕೆ ಕುಗ್ಗಿದ
ನೀ ಬಿಟ್ಟುಹೋದ
ಚಪ್ಪಲಿಯ ಹೊತ್ತು
ಹಾದಿ ಬೀದಿಯಲೆದೆ
ಸರಿ ಪಾದದಳತೆಗೆ,
ಸಿಗಲೇ ಇಲ್ಲ ನೀನು
ವಾಸ್ತವದ ಜೋಡಿಗೆ
ವಿಧಿ ತಾರದ ವಧು
ಸಿಂಡರೆಲಾ!

ಎಲ್ಲಿದ್ದೀಯ
ಸಿಂಡರೆಲಾ

 

ರಘು ವೆಂಕಟಾಚಲಯ್ಯ ಅವರು ಸದ್ಯ ಬೆಂಗಳೂರಿನ ‘ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್’ ನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಪ್ರಾಧ್ಯಾಪಕರೂ ಆಗಿ ಕಾರ್ಯನಿರ್ವಹಿಸಿರೋ ರಘು ಅವರು ವಿವೇಕ ಹಂಸ ಮಾಸಿಕ ಪತ್ರಿಕೆಯ ಗೌರವ ಸಂಪಾದಕರೂ ಆಗಿದ್ದಾರೆ.
“ಬಿದಿರಿನ ಗಳ” ಇತ್ತೀಚೆಗೆ ಪ್ರಕಟಗೊಂಡ ಇವರ  ಕಾದಂಬರಿ
ಅನುವಾದಕರೂ ಆದ ರಘು ಅವರು ಹಲವು ಪುಸ್ತಕ ಹಾಗೂ ಲೇಖನಗಳನ್ನು ಭಾಷಾಂತರಿಸಿದ್ದಾರೆ.