ಮೆಜೆಸ್ಟಿಕ್ ಮೇನಕೆಯರು
ತೀಡಿಕೊಳ್ಳುತ್ತಾರವರು ಘಳಿಗೆಗೊಮ್ಮೆ
ಬಾಯಿಬಿಟ್ಟ ವ್ಯಾನಿಟಿ ಬ್ಯಾಗಿನಿಂದ
ತೆಗೆದ ಪುಟ್ಟ ಕನ್ನಡಿಯಲ್ಲಿ
ಸೀಳುದುಟಿ ಕಾಣದಂತೆ
ಹಸಿವೆಗೆ ಕಚ್ಚಿದವನ
ಹಸಿವಾದರೂ ತೀರೀತೆ?
ನೋವಿನಲ್ಲಿ ಕೊನೆಗಾಣುವ ಸುಖ ;
ಸುಖದಗುಂಟ ಹರಿವ ಫಲಿತದ ನೋವು
ಅವಳಿ ಜವಳಿಗಳೆ?
ಸಣ್ಣ ಗಾಯದ ನೋವಿನ ಉರಿಗೆ
ಮೆತ್ತಿದಷ್ಟು ಲಿಪ್‌ಸ್ಟೀಕಿನ ಮುಲಾಮು
ಬಣ್ಣಕೆ ಗುಣವಾಗಿಸುವ ಕಲೆ ಎಲ್ಲಿದೆ?
ಕಂಡೀತೆಷ್ಟು ಬಿಂಬ ಸಂಜೆಗತ್ತಲೆಯಲಿ
ಆದರೂ ತಾನು ಸುಂದರಿಯೆ!
ಸ್ವಗತಕ್ಕೊಂದು ಕಾಮಾs..
ಹುಸಿನಗು ಸುರಿದು
ಹುಡುಕುತ್ತವೆ ಕಣ್ಣುಗಳು
ಹೊಸ ಗಿರಾಕಿಯ ಕಡೆಗೆ
ಕಸಿವಿಸಿಗೊಳ್ಳುತ್ತಾಳವಳು
ಇನ್ನೂ ಸಿಕ್ಕದ ಆ ಭೇಟಿಗೆ
ಕಳೆದುಕೊಂಡಂತೆ ತನ್ನನೇ!
ಎತ್ತಿ ಕಟ್ಟುತ್ತಾಳೆ ಎದೆಯ
ಹೊಸ ತಂತ್ರ ಹೂಡಿದಂತೆ!
ಕಣ್ಕುಕ್ಕುವಂತೆ
ಜಾರಿಸುತ್ತಾಳೊಮ್ಮೊಮ್ಮೆ
ಕಂಗಾಲಾಗುತ್ತಾಳೆ ನೆರಿಗೆಗಳ ಕಂಡರೆ
ವಯಸ್ಸಾಯಿತೇನೊ ತಳಮಳ..
ತಾನೀಗ ರೇಟು ಕುದುರಿದ ಮಾಲು
ಸುಖದ ನಡಿಗೆಯೂ ಇಲ್ಲಿ
ತಾಳ ತಪ್ಪಿದಂತೆ ಜೋಲು
ಅಸಲಿಗೆ ಡೇಟ್ ಆಫೇ ಆದ ಭರ್ತಿಗೆ
ಎಣಿಕೆ ಎಷ್ಟೊಂದು ಸಲೀಸು
ಗಹಗಹಿಸಿ ನಗುತ್ತಾಳೆ ಅವಳು
ನೆರಿಗೆಗೆ,
ಹುಟ್ಟಿಗೆ,
ಲೆಕ್ಕಕ್ಕೆ,
ಮತ್ತೂ
ಹುಟ್ಟಿಸಿದವರೆಂಬ
ಜೀವಗಳಿಗೆ..
ಬದಲಾಯಿಸುತ್ತಾಳೆ ಅವಳು
ಮೂರ್ನಾಲ್ಕು ಭಾಷೆಗಳ ಆಗಿಂದಾಗ್ಗೆ
ಬಲ್ಲವಳಂತೆ ಭಾವದಲಿ ಬಳುಕಿ
ಕೊನೆಗೊಂದು ಕಣ್ಣ ಸನ್ನೆ ಗೆಲ್ಲುತ್ತದೆ
ಎಲ್ಲ ಭಾಷೆಗಳ ಹಿಂದಿಕ್ಕಿ
ಕುಶಲದ ನಗುವಿಲ್ಲದಿದ್ದರೂ
ಆಗಂತುಕನಿಗೆ ರೇಟಿನದೆ ಚಿಂತೆ
ಎಷ್ಟು? ಎಷ್ಟು?
ಬೆರಳಂಕಿಯಲ್ಲೆ ಮಡಚಿ
ಅನುವಾದಿಸಿದ ಸಂಖ್ಯೆ
ಎಂದೂ ನಿಕ್ಕಿಯಾಗುವುದೇ ಇಲ್ಲ
ಅದರಲ್ಲೆರಡು ಸೋತರೆ ಮಾತ್ರ ಗೆದ್ದಂತೆ
ಬದಲಿಸಿಕೊಳ್ಳುತ್ತಾಳೆ ಮಾಮೂಲಿಯಂತೆ
ಗಿರಾಕಿಗೊಮ್ಮೆ ತನ್ನ ಹೆಸರು
ಅಥವಾ
ನಡೆಯುತ್ತಾಳೆ
ಅವರೇ ಕರೆದ ಹೆಸರನುಟ್ಟು
ಹೊಂದಿಕೊಳ್ಳುವುದೆ ಆಕೆಯ ನಿಟ್ಟುಸಿರು
ಶುರುವಿನಿಂದ ಶುಭಂವರೆಗೂ
ಮಲಗಿಬಿಡುತ್ತದೆ ಕ್ಷಣ ಕಾಲದಲ್ಲೆ
ಹಸಿದ ಆರ್ಭಟದ ಆಹಾಃಕಾರ
ಪಡೆದೆನೆಂಬ ಹುಕಿ ಮರೆತು
ಥೇಟ್ ಮಗುವಿನಂತೆಯೇ !
ಮುದ್ದಿಸಲನುವಾಗುತ್ತಾಳವಳು ಆಗ
ನಿತ್ಯ ಹಡೆವ ಆ ಕ್ಷಣದ ಮುಗ್ಧತೆಗೆ
ಶಾಂತ ಸ್ವರೂಪಿ ಬಿಕ್ಕಳಿಕೆಗೆ
ಗಂಡೆಂಬ ಅಂಹಕಾರವ ಬೆತ್ತಲೆ ಮಲಗಿಸಿ
ಎಣಿಸುತ್ತಾಳೆ ಉಂಟೆಷ್ಟು ಹೆಣ್ಣಿಗೆ?
ಕಾಸು ಕೊಟ್ಟ ಆಗಂತುಕರಿಗೆ
ಅವರು ಕೊನೆಗೂ ದಕ್ಕುವುದೇ ಇಲ್ಲ!
ಅರ್ಥವಂತೂ ಬಲುದೂರ..
ಕೊನೆಗೊಂದು ಕಣ್ಣು ಸನ್ನೆ ಗೆಲ್ಲುತ್ತದೆ
ಎಲ್ಲ ಭಾಷೆಗಳ ಹಿಂದಿಕ್ಕಿ
ಭಾವನೆಗಳೇ ಭಾಷೆ …..
ಅತ್ಯುತ್ತಮ ಕವನ, ಉತ್ತಮ ಶೀರ್ಷಿಕೆ 👌👌👌👌
ಮದುವೆ ಆಗಿ ಹೊಸದಾಗ ಮನೆಯವರ ಜೊತೆ ಹೋಗಿದ್ದೆ, ರಾತ್ರಿ ಬೆಂಗಳೂರ ನೋಡಬೇಕು ಅನ್ನೋ ನನ್ನ ಹುಚ್ಚು ಬಯಕೆಗೆ ಮನೆಯವರು ಬೇಡಾ ಅಂದರೂ ಮೆಜೆಸ್ಟಿಕ್ ನೋಡಬೇಕು ಎಂಬ ಹುಚ್ಚುತನಕ್ಕೆ ಹೊರಬಿದ್ದಾಗ ಕಂಡದ್ದು ಈ ಮೇನಕೆಯರೆ, ಅಲ್ಲಿಯವರೆಗೂ ಬರಿಯ ಸಿನೆಮಾದಲ್ಲಿ ಮಾತ್ರ ಈ ರೀತೀ ಸನ್ನಿವೇಶ ನೋಡಿದ ನನಗೆ ಅವರನ್ನು ನೋಡಿ ಅಚ್ಚರಿ ಆಗಿತ್ತು… ದಾವಣಿ ಮೈ ತುಂಬ ಹೊದ್ದುಕೊಂಡು ಮನೆಯವರನ್ನು ಗಟ್ಟಿಯಾಗಿ ಹಿಡಿದುಕೊಂಡು ನಡೀರೀ ಹೋಗೋಣು ಎಂದಿದ್ದೆ… ಇದು ೨೦೦೦ ರ ವಿಷಯ ನಾನು ಹೇಳಿದ್ದು..
Ditta, sundara kavithe!
ಹೊಟ್ಟೆ ಹಸಿವಿಗೆ ಅದೆಷ್ಟು ಆಹುತಿಗಳೋ ಲೆಕ್ಕವಿಟ್ಟವರಾರು?
ಮೆಜೆಸ್ಟಿಕ್ ಮೇನಕೆಯರ ಬದುಕಿನ ಧ್ವನಿಪೂರ್ಣ ಚಿತ್ರಣ. ಧನ್ಯವಾದ ಗಳು. ಮೋಹನ ಕುಂಟಾರ್
ನಡೆಯುತ್ತಾಳೆ
ಅವಳೇ ಕರೆದ ಹೆಸರನುಟ್ಟು..
ವಾಸ್ತವ ಚಿತ್ರಣ ಗಾಢವಾದ ವಿಷಾದ ಭಾವವನ್ನು ಮಡುಗಟ್ಟಿಸುತ್ತದೆ ರಾಘವಾಂಕುರ..