ಮೊನ್ನೆ ನವರಾತ್ರಿ ಒಳಗ ನಮ್ಮ ಹಳಿಯಾಳದ ಅನಸಕ್ಕಜ್ಜಿ ತಾ ಋಷಿ-ಪಂಚಮಿ ಹಿಡದೇನಿ, ಇದ ಎಂಟನೇ ವರ್ಷ ಉದ್ಯಾಪನಿ ಮಾಡಬೇಕು ಅದಕ್ಕ ಹದಿನಾರ ಮಂದಿ ಬ್ರಾಹ್ಮಣ ಮುತ್ತೈದೆರ ಜೊಡಿ ಬೇಕು, ಇಲ್ಲೆ ಹಳಿಯಾಳದಾಗ ನಮ್ಮಂದಿ ಪೈಕಿ ಅಷ್ಟ ಜೋಡಿ ಇಲ್ಲಾ ಅದಕ್ಕ ನೀ ನಿನ್ನ ಹೆಂಡತಿನ ಕರಕೊಂಡ ಬಾ ಮತ್ತೊಂದ ಎರಡ ಜೋಡಿ ಇದ್ದರ ಜೋಡಿಲೇ ಅವರನು ಕರಕೊಂಡ ಬಾ ಅಂತ ಫೊನ್ ಮಾಡಿದ್ಲು. ನನಗ ಅಕಿ ಮತ್ತೊಂದ ಎರಡ ಜೋಡಿ ಇದ್ದರ ಕರಕೊಂಡ ಬಾ ಅಂದಿದ್ದ ಮತ್ತೊಂದ ಎರಡ ಇದ್ದರ ಅವನ್ನು ಕರಕೊಂಡ ಬಾ ಅಂದಂಗ ಅನಿಸಿ
“ಏ, ಹೋಗ ಅಜ್ಜಿ, ಮತ್ತೊಂದ ಎರಡ ಎಲ್ಲಿದ, ಕಟಗೊಂಡಿದ್ದ ಒಂದ ಸಾಕಲಿಕ್ಕೆ ಆಗವಲ್ತ” ಅಂತ ನಾ ಅಂದ, ಅಮ್ಯಾಲೆ ಅಕಿ ಕಡೆ “ದನಾ ಕಾಯೋವನ ಯಾಕ್ ಹೆಂಗನಸ್ತದ? ಒಬ್ಬೊಕಿನ ಇದ್ದರು ಬಂಗಾರದಂತಾ ಹೆಂಡ್ತಿ ಇದ್ದಾಳ, ಬಾಯಿ ಮುಚಗೊಂಡ ಅಕಿನ್ನ ಒಬ್ಬಕ್ಕಿನ್ನ ಕರಕೊಂಡ ಬಾ ಸಾಕ” ಅಂತ ಬೈಸಿಗೊಂಡಿದ್ದೆ.

ಇನ್ನ ನಮ್ಮ ಅನಸಕ್ಕಜ್ಜಿ ಮನಿ ಪ್ರೊಗ್ರಾಮ್ ಅಂದರ ತಪ್ಪಸಲಿಕ್ಕೆ ಬರಂಗಿಲ್ಲಾ ಅದರಾಗ ದಂಪತ್ತ ಅಂತ ಹೇಳ್ಯಾಳ ಅಂದ ಮ್ಯಾಲೆ ಹೆಂಡ್ತಿನ್ನ್ ಕರಕೊಂಡ ಹೋಗಬೇಕ. ಗಾಡಿ ಖರ್ಚ್ ಮೈಮ್ಯಾಲೆ ಹಾಕ್ಕೊಂಡ ಅಕಿ ಕೊಡೊ ೫೦ ರೂಪಾಯಿ ದಕ್ಷಿಣಿ, ಒಂದ ಶರ್ಟ ಪೀಸ್, ಒಂದ ನೂರ- ನೂರಾಪ್ಪಿತ್ತರದ ಆರವಾರಿ ನೈಲನ್ ಪತ್ಲಾ ಇಷ್ಟರ ಸಂಬಂಧ ಹೋದ್ವಿ. ಮತ್ತ ಸಾಲದ್ದಕ್ಕ ಎರಡ ಜೋಡಿ ಬ್ರಾಹ್ಮಣ ಮುತ್ತೈದಿಯರನ್ನ ತೊರವಿಗಲ್ಲಿಇಂದ ಕರಕೊಂಡ ಹೋಗಿದ್ದಕ್ಕ ಅವರದು ಗಾಡಿ ಖರ್ಚ್ ನಮ್ಮ ಮೈಮ್ಯಾಲೆ. ನಮ್ಮ ಅನಸಕ್ಕಜ್ಜಿ ಮೊದ್ಲಿಂದ ಭಾರಿ ಸಂಪ್ರದಾಯಸ್ಥ ಹೆಣ್ಣಮಗಳು, ಇವತ್ತಿಗೂ ನಮ್ಮ ಇಡಿ ಮನೆತನದಾಗ ಯಾವ- ಯಾವ ಪದ್ಧತಿ ಅವ, ಅವನ್ನ ಹೆಂಗ ಮಾಡಬೇಕು, ಯಾಕ ಮಾಡಬೇಕು ಅನ್ನೊದನ್ನ 24 X 7 ನೀವ ಯಾವಾಗ ಫೋನ ಮಾಡಿದ್ರು ತಾಸ ಗಟ್ಲೆ ಹೇಳ್ತಾಳ. ಹಂಗ ಒಂದಿಷ್ಟ ಪದ್ದತಿ ತಾನ ಹುಟ್ಟ ಹಾಕ್ಯಾಳ ಅಂತ ಅಕಿ ಮಗಾ ಹೇಳ್ತಿರ್ತಾನ ಆದರು ಅಕಿ ಮಾತ್ರ ಒಂದ ಪದ್ಧತಿನ್ನೂ ಬಿಡಲಾರದ ಭಾಳ ಛಂದ ಅಗದಿ ನಾಲ್ಕ ಮಂದಿ ನೋಡಿ ಕಣ್ಣ ತುಂಬಕೊಂಡ ಹೊಟ್ಟಿ ಕಿಚ್ಚ ಪಡಬೇಕ ಹಂಗ ಮಾಡತಾಳ.

ಅದರಾಗ ಅಕಿ ಅಂತು ನೋಡಲಿಕ್ಕೆ ಸಾಕ್ಷಾತ ವರಮಹಾಲಕ್ಷ್ಮೀ ಇದ್ದಂಗ ಇದ್ದಾಳ, ನನಗಂತೂ ಅಕಿನ್ನ ನೋಡಿದಾಗೊಮ್ಮೆ ಆ ಪೌರಾಣಿಕ ಪಿಕ್ಚರನಾಗಿನ ಬಿ.ಸರೋಜಾದೇವಿನ್ನ ನೋಡಿದಂಗ ಆಗೋದ, ಹಣಿ ಮ್ಯಾಲೆ ದೊಡ್ಡ ಕುಂಕಮ, ಒಂಬತ್ತವಾರಿ ಕಚ್ಚಿ ಸೀರಿ, ಮಣಭಾರ ಇರೋ ಮೂಗಬಟ್ಟ ಮ್ಯಾಲೆ ಅಕಿ ಮಾತು, ಕಥಿ, ಆರತಿ ಹಾಡು ಕೇಳಿ ಬಿಟ್ಟರ ಸಾಕ್ಷತ ದೇವಿ ದರ್ಶನ ಆದಂಗ. ಹಂಗ ಅಕಿಗೆ ಸಿಟ್ಟ ಬಂದರ ದುರ್ಗಾದೇವಿ ದರ್ಶನನ ಮತ್ತ, ಕೈಯಾಗ ಏನ ಸಿಗ್ತದ ಅದನ್ನ ತೊಗೊಂಡ ಸಂಹಾರ ಮಾಡಿ ಬಿಡೋಕಿ. ಹಿಂಗಾಗಿ ನನಗ ಅಕಿ ಬಗ್ಗೆ ಬರೇ ಗೌರವ, ಪ್ರೀತಿ,ಭಕ್ತಿ ಇಷ್ಟ ಅಲ್ಲಾ ಹೆದರಕಿನು ಇತ್ತ. ಅದಕ್ಕ ಅಕಿ ಮನಿ ಫಂಕ್ಶನ್ ಅಂದ ಕೂಡಲೇ ಬಿಡಲಿಕ್ಕೆ ಆಗಂಗಿಲ್ಲಾ.

ಇನ್ನ ನಮ್ಮ ಅನಸಕ್ಕಜ್ಜಿ ಋಷಿ-ಪಂಚಮಿ ಉದ್ಯಾಪನಿ ಅಂತೂ ಅಗದಿ ಗ್ರ್ಯಾಂಡ ಆಗಿ ಮಾಡಿದ್ಲು, ೧೬ ಜೋಡಿ ಬ್ರಾಹ್ಮರಿಗೆ ದಂಪತ್ತ ಕರದ ಮನಿ ಮುಂದ ಪೆಂಡಾಲ್ ಹಾಕಿಸಿ ಟೇಬಲ್ ಮ್ಯಾಲೆ ಬಾಳೆ ಎಲಿ ಊಟಾ, ನಾ ಅನ್ಕೊಂಡಂಗ ಐವತ್ತ ರೂಪಾಯಿ ದಕ್ಷಿಣಿ, ಸೀರಿ ಬದ್ಲಿ ಜಂಪರ್ ಪೀಸ್, ಶರ್ಟ ಪೀಸ್ ಬದ್ಲಿ ಹದಿನೈದ ರೂಪಾಯದ ಹೋಲಸೇಲನಾಗ ತಂದಿದ್ದ ಶೆಲ್ಲೆ ಕೊಟ್ಟ ಕಳಸಿದ್ಲು. ಅದರಾಗ ನನ್ನ ಹೆಂಡತಿಗೆ ತಂದ ಒಂದ ಒಂಬತ್ತವಾರಿ ಸೀರಿ ಕೊಟ್ಟ ನೀ ಮನಿ ಮೊಮ್ಮಗಳ್ವಾ, ಕಚ್ಚಿ ಹಾಕಿ ಸೀರಿ ಉಡಬೇಕ ಅಂತ ಹೇಳಿ ತಾನ ಕಚ್ಚಿ ಹಾಕಿ ಸೀರಿ ಉಡಿಸಿ ಒಂದ ತಂದ ಮೂಗಿನಾಗಿನ ಹಳೇ ನತ್ತ್ ಕಡಾ ಕೊಟ್ಟ ಅಗದಿ ಆರ್ಭಾಟ ತಯಾರ ಮಾಡಿದ್ಲು. ನನ್ನ ಹೆಂಡತಿ ತಯಾರಾಗಿದ್ದ ನೋಡಿದರ ನನಗ ಅಕಿ ಬಗ್ಗೆನೂ ಭಯ ಭಕ್ತಿ ಬರಲಿಕತ್ತು. ಅಲ್ಲಾ ಹಂಗ ಭಯಾ ಮೊದ್ಲಿಂದ ಇತ್ತ ಬಿಡ್ರಿ ಈಗ ದೇವಿ ಸ್ವರೂಪದಾಗ ನೋಡಿದ ಮ್ಯಾಲೆ ಭಕ್ತಿನೂ ಬರಲಿಕತ್ತು. ಇಕಿ ಕಚ್ಚಿ ಕಟಗೊಂಡ ಖುಷೀಲೆ ಮನಿ ತುಂಬ ಎಡವಕೋತ ಅಡ್ಡಾಡಿದ್ದ ಅಡ್ಡಾಡಿದ್ದ, ಏನಿಲ್ಲಾ ಅಂದ್ರು ಒಂದ ಹತ್ತ ಸರತೆ ಕಚ್ಚಿ ಬಿಚ್ಚಿ ಬಿಳೋ ಅಷ್ಟ ಅಡ್ಡಾಡಿದ್ಲು. ಆ ಕಚ್ಚಿ ಬಿಚ್ಚಿದಾಗೊಮ್ಮೆ ನಾ ಕಚ್ಚಿ ಸಿಗಸಲಿಕ್ಕೆ ಅಕಿ ಹಿಂದ ರೂಮಿಗೆ ಹೋಗೊದ ಒಂದ ನಂದ ಮೇನ ಕೆಲಸ ಆಗಿಬಿಟ್ಟಿತ್ತ.

ಒಟ್ಟ ಪೂರ್ತಿ ಕಾರ್ಯಕ್ರಮ ಮುಗಿಸಿಕೊಂಡ ವಾಪಸ ಹುಬ್ಬಳ್ಳಿ ಬಸ್ಸ ಹತ್ತಿ ಬರಬೇಕಾರ ನನ್ನ ಹೆಂಡತಿ ಇನ್ನು ನಮ್ಮ ಅನಸಕ್ಕಜ್ಜಿ ಋಷಿ-ಪಂಚಮಿ ಮೂಡನಾಗ ಇದ್ಲ ಕಾಣತದ ಒಮ್ಮಿಂದೊಮ್ಮಿಲೇ ಸೀರಿಯಸ್ ಆಗಿ
“ರ್ರೀ ನಾನು ಋಷಿ-ಪಂಚಮಿ ಹಿಡಿತೇನ್ರಿ” ಅಂದ್ಲು. ನನ್ನ ಎದಿ ಧಸಕ್ಕ ಅಂತ. ಅಲ್ಲಾ, ಈಕಿದ ವಯಸ್ಸರ ವಯಸ್ಸ..ಋಷಿ-ಪಂಚಮಿ ಹಿಡಿಲಿಕ್ಕೆ. ಒಟ್ಟ ಯಾರದರ ಮನ್ಯಾಗ ಏನರ ಒಂದ ಛಂದನ ಕಾರ್ಯಕ್ರಮ ನೋಡಿದ್ಲ ಇಲ್ಲೊ ಸ್ಟಾರ್ಟ…ನಮ್ಮನ್ಯಾಗೂ ಮಾಡೋಣರಿ ಅಂತ
“ಲೇ, ಎಲ್ಲಾ ಬಿಟ್ಟ ಅದನ್ಯಾಕ ತಲ್ಯಾಗ ಹಾಕ್ಕೊಂಡಿ, ನಿಂಗ ಹುಚ್ಚ-ಗಿಚ್ಚ ಹಿಡದದೇನ್?” ಅಂತ ನಾ ಬೈದೆ.

“ರ್ರಿ, ನೀವೇನ ಇಷ್ಟ ಖರ್ಚ ಮಾಡಿ ಉದ್ಯಾಪನಿ ಮಾಡಬೇಕಾಗ್ತದ ಅಂತ ಬ್ಯಾಡ ಅಂತೀರೇನ್, ಉದ್ಯಾಪನಿ ಮಾಡೋದ ಎಂಟ ವರ್ಷ ಋಷಿ-ಪಂಚಮಿ ಮಾಡಿದ ಮ್ಯಾಲೆ ತೊಗೊರಿ, ನೀವೇನ ಗಾಬರಿ ಆಗ ಬ್ಯಾಡರಿ” ಅಂದ್ಲು.
“ಏ, ಹುಚ್ಚಿ, ಋಷಿ-ಪಂಚಮಿ ಅಂದರ ನೀ ಏನ ಹಬ್ಬ-ಹುಣ್ಣಮಿ ಅಂತ ತಿಳ್ಕೊಂಡಿ ಏನ್? ಇದ ವೃತಾಲೇ, ನಿನ್ನ ಕಡೆ ಏನ ತಲಿ ವೃತಾ ಮಾಡಲಿಕ್ಕೆ ಆಗ್ತದ, ತಿಂಗಳಕ್ಕೊಮ್ಮೆ ಸಂಕಷ್ಟಿ ಮಾಡಬೇಕಾರ ಚಂದ್ರೋದಯ ಆಗೊತನಕ ತಡಕೊಳಿಕ್ಕೆ ಆಗಂಗಿಲ್ಲಾ ಅಂತ ಅಂಗಾರಕ ಸಂಕಷ್ಟಿ ಇದ್ದಾಗ ಇಷ್ಟ ಮಾಡಲಿಕತ್ತಿ ಇನ್ನ ಋಷಿ-ಪಂಚಮಿ ಮಾಡ್ತಾಳಂತ ಋಷಿ-ಪಂಚಮಿ” ಅಂತ ನಾ ಅಂದೆ.
“ಅಯ್ಯ ನಂಗೇಲ್ಲಾ ಗೊತ್ತರಿ, ವರ್ಷಕ್ಕ್ ಒಂದ ಸರತೆ ಭಾದ್ರಪದ ಮಾಸದಾಗ ಚತುರ್ಥಿ ಮರದಿವಸ ವೃತಾ ಹಿಡದ ಸಪ್ತ ಋಷಿಗಳ ಧ್ಯಾನಾ ಮಾಡಿದರ ಆತ, ಅದೇನ ಮಹಾ” ಅಂತ ಇಕಿ ತನ್ನ ಪುರಾಣ ಶುರು ಮಾಡಿದ್ಲು.
ಅಲ್ಲಾ ಹಂಗ ವರ್ಷಕ್ಕ ಒಂದs ಸರತೆ ಖರೇ ಆದರೂ ಎಂಟ ವರ್ಷಗಟ್ಟಲೇ ಮಾಡಬೇಕ. ಮ್ಯಾಲೆ ಶುರು ಮಾಡೋಕಿಂತಾ ಮೊದ್ಲ ಸಂಕಲ್ಪ ಮಾಡಲಿಕ್ಕೆ ಒಂದ ಕಾರ್ಯಕ್ರಮ, ಮುಗದ ಮ್ಯಾಲೆ ಮತ್ತೊಂದ ಕಾರ್ಯಕ್ರಮ, ಅದ ಈಗ ನಮ್ಮ ಅನಸಕ್ಕಜ್ಜಿ ಮಾಡಿದ್ಲಲಾ ಉದ್ಯಾಪನಿ ಹಂತಾದ ಒಂದ. ಹಂಗ ನಂಗ ಟೇನ್ಶನ್ ಇದ್ದದ್ದ ಕಾರ್ಯಕ್ರಮ ಮಾಡೋದರ ಬಗ್ಗೆ, ರೊಕ್ಕ ಖರ್ಚ ಆಗೋದರ ಬಗ್ಗೆ ಅಲ್ಲಾ ನನ್ನ ಟೇನ್ಶನ್ ಬ್ಯಾರೆ ಇತ್ತ.

ನನಗ ಗೊತ್ತಿರೋ ಪ್ರಕಾರ ಋಷಿ-ಪಂಚಮಿ ವೃತಾ ಹಿಡಿಯೋರು ಋಷಿಗಳಗತೆ ವೈರಾಗ್ಯದ ಜೀವನ ನಡಸಬೇಕು. ಸರಳ-ಸಾದಾ ಜೀವನ, ಏನು ಆಶಾ ಪಡದ ಎಲ್ಲಾ ಮೊಹ, ಲೌಕಿಕ ಬಿಟ್ಟ ತಮ್ಮಷ್ಟಕ್ಕ ತಾವ ಅಡಗಿ ಮಾಡ್ಕೊಂಡ ಉಂಡ ಯಾವದು ಆಡಂಬರ ಸಡಗರ ಇಲ್ಲದ ಬದಕಬೇಕು. ಇನ್ನ ಹಿಂತಾ ವೃತಾ ನನ್ನ ಹೆಂಡತಿಗೆ ಮಾಡಲಿಕ್ಕೆ ಹೆಂಗ ಸಾಧ್ಯ, ಏನಿಲ್ಲದ ಕಾಂಪ್ಲಿಕೇಟೆಡ್ ಹೆಣ್ಣಮಗಳು, ಸರಳ ಸುಮ್ಮನ ಬದಕೋಕಿ ಅಲ್ಲಾ ಬದಕಲಿಕ್ಕೆ ಬಿಡೋಕಿ ಅಲ್ಲಾ. ಹಂಗ ಹಂತಾಕಿ ಎಲ್ಲಾ ತ್ಯಾಗ ಮಾಡಿ ಇರ್ತೇನಿ ಅಂದರ ಖರೇನ ಖುಷಿ ಪಡೋ ವಿಷಯನ ಆದರ ನಾರ್ಮಲಿ ಈ ವೃತಾ ವಯಸ್ಸಾದ ಹೆಣ್ಣಮಕ್ಕಳ ಮಾಡೋ ವೃತಾ, ಪಾಪ ನನ್ನ ಹೆಂಡತಿಗೆ ಗೊತ್ತಾಗಿಲ್ಲಾಂತ ನಾ ತಿಳಿಸಿ ಹೇಳಿದರಾತು ಅಂತ
“ಲೇ, ನಿಮ್ಮತ್ತಿನ ಇನ್ನು ಋಷಿ-ಪಂಚಮಿ ವೃತಾ ಹಿಡಿಲ್ಯೊ ಬ್ಯಾಡೊ ಅಂತ ವಿಚಾರ ಮಾಡಲಿಕತ್ತಾಳ, ನೀ ಇನ್ನು ಸಣ್ಣೊಕಿ ನಿಂಗ್ಯಾಕ ಬೇಕಲೇ ಹಿರೇಮನಷ್ಯಾರ ವೃತಾ” ಅಂತ ನಾ ತಿಳಿಸಿ ಹೇಳಲಿಕ್ಕೆ ಹೋದರ ಇಕಿ ಮತ್ತ ತಂದ ತಲ್ಯಾಗಿಂದ ಶುರು ಮಾಡಿದ್ಲು
“ರ್ರಿ, ಪಾಪ ಅವರಿಗೆಲ್ಲೆ ಮಾಡಲಿಕ್ಕೆ ಆಗ್ತದ, ಏನಿಲ್ಲದ ವರ್ಷಕ್ಕ ಒಂದ ನೂರ ಉಪವಾಸ ಮಾಡ್ತಾರ. ಮತ್ತ ಇದೊಂದ ಯಾಕ ಸುಮ್ಮನ. ಅವರ ಬೇಕಾರ ನಾಳೆ ಉದ್ಯಾಪನಿ ಮಾಡಬೇಕಾರ ಎಲ್ಲಾ ಜವಾಬ್ದಾರಿ ತೊಗೊಂಡ ಮುಂದ ನಿಂತ ಕಾರ್ಯಕ್ರಮ ಎಲ್ಲಾ ಮಾಡವಲ್ಲರಾಕ” ಅಂತ ಅಂದ್ಲು,
ಹಕ್ಕ್, ಇಕಿ ಋಷಿ-ಪಂಚಮಿ ಮಾಡೊಕಿ ನಮ್ಮವ್ವ ಉದ್ಯಾಪನಿ ಮಾಡ್ಬೇಕಂತ..ಇನ್ನ ಈಕಿಗೆ ಹೆಂಗ ತಿಳಿಸಿ ಹೇಳೋದಂತ ನಂಗ ತಿಳಿವಲ್ತಾತ. ನನ್ನ ಸಂಕಟ ನಂಗ, ಅಕಿಗೆ ನೋಡಿದ್ರ ಋಷಿ-ಪಂಚಮಿ ಅಂದ್ರ ಅದು ಒಂದ ಹಬ್ಬ, ಅದನ್ನ ಮಾಡೋದ ಒಂದ ದೊಡ್ಡಿಸ್ತನ ಅಂತ ತಿಳ್ಕೊಂಡಾಳ ಖರೇ ಅದನ್ನ ಮಾಡಬೇಕಂದರ ಏನೇನ ತ್ಯಾಗ ಮಾಡ್ಬೇಕ ಅನ್ನೋದ ಅಕಿಗೆ ಇಷ್ಟ ಸೂಕ್ಷ್ಮ ಹೇಳಿದರು ಗೊತ್ತಾಗವಲ್ತಾಗಿತ್ತ.

ಹಂಗ ಈ ವೃತಾ ಭಾಳ ಅಂದರ ವಯಸ್ಸಾದ ಹಿರೇ ಹೆಣ್ಮಕ್ಕಳ ಮಾಡ್ತಾರ, ಅದು ಕಡಿಗೆ (menstrual cycle) ನಿಂತವರು, ಮುಂದ ಮಕ್ಕಳಾಗಂಗಿಲ್ಲಾ ಅಂತ ಗ್ಯಾರಂಟೀ ಇದ್ದವರು. ಯಾಕಂದರ ಈ ವೃತದೊಳಗ ಮೋಹ, ಕಾಮ, ಲೋಭ ಎಲ್ಲಾ ಬಿಟ್ಟ ಎಂಟ ವರ್ಷಗಟ್ಟಲೇ ಸಾಧ್ವಿ ಜೀವನ ನಡಿಸಿಗೋತ ನಮ್ಮ ಋಷಿ-ಮುನಿಗಳಗತೆ ಬದುಕಬೇಕಾಗ್ತದ. ಇದು ಭಾಳ ಕಟ್ಟಾ ವೃತಾ, ಶೋಕಿಗೆ ಮಾಡೋದಲ್ಲಾ. ಏಕಾದಶಿ, ಸಂಕಷ್ಟಿ, ಶ್ರಾವಣ ಸೋಮವಾರ ಎಲ್ಲಾ ಮಾಡ್ತಾರಲಾ ಹಂತಾ ಉಪವಾಸದ್ದ ವೃತಾ ಇದ ಅಲ್ಲಾ.
ಋಷಿ ಪಂಚಮಿ ವೃತಾ ಹಿಡದ ಹೆಣ್ಮಕ್ಕಳು ತಮ್ಮ ಗಂಡಂದರ ಜೋಡಿ ದೈಹಿಕ ಸಂಬಂಧ ಇಟಗೊಬಾರದು, ಅವನ ಜೋತಿ ಒಂದ ಹಾಸಿಗೆ ಮ್ಯಾಲೆ ಮಲ್ಕೋಬಾರದು, no sexual activity for rest of the life ಅಂತ ನಾ ಕೇಳಿನಿ. ಹಿಂಗಾಗೆ ವಯಸ್ಸಾದ ಹೆಣ್ಣಮಕ್ಕಳ ಈ ವೃತಾ ಹಿಡಿತಾರ.

ಕಡಿಕೂ ನಂಗ ಇದನ್ನೇಲ್ಲಾ ನನ್ನ ಹೆಂಡತಿಗೆ ಸಮಾಧಾನದ್ಲೆ ತಿಳಿಸಿ ಹೇಳೋದರಾಗ ಏಳು ಹನ್ನೇರಡ ಆತ. ಈಕಿ ಪೂರ್ತಿ ಎಲ್ಲಾ ಕೇಳೊ ಹಂಗ ಕೇಳಿ ಏನ ಅಂದ್ಲ ಗೊತ್ತ..
“ಅಲ್ಲರಿ, ನಂದ ಹೆಂಗಿದ್ದರೂ ಆಪರೇಶನ್ ಅಂತೂ ಆಗೆ ಬಿಟ್ಟದ,ಮುಂದ ಮಕ್ಕಳ ಆಗೋ ಚಾನ್ಸಿಸ್ ಇಲ್ಲಾ, ಮ್ಯಾಲೆ ಇದೇನ ಜೀವನ ಪೂರ್ತಿ ಹಂಗ ಅಂತ ಏನಿಲ್ಲಾ? ಎಂಟ ವರ್ಷದ ಮಾತ, ಹೆಂಗರ ಕಳಿಬಹುದು. ನೀವು ಒಂದ ಸ್ವಲ್ಪ ಕಂಟ್ರೋಲ್ ಇಟಗೋರಿ, ಇಲ್ಲಾ ನೀವು ಒಂದ ಯಾವದರ ಹಿಂತಾ ವೃತಾ ಇದ್ದರ ಹುಡಕಿ ಹಿಡದ ಬಿಡರಿ” ಅಂದ್ಲು. ನಂಗ ತಲಿ ಎದಕ್ಕ ಜಜ್ಜಕೋಳಿ ಅನ್ನೋದ ತಿಳಿಲಾರದಂಗ ಆತ. ಅಲ್ಲಾ ಬರೇ ಎಂಟ ವರ್ಷದ ಮಾತ ಅಂತ.. ಈಕಿ ಮುಂದ ಮತ್ತ ಯಥಾ ಪ್ರಕಾರ ಸಂಸಾರ ಮಾಡೋಕಿ ಅಂತ? ಏನ ಹೇಳ್ಬೇಕ ಇಕಿಗೆ. ಹಂಗ ಇಕಿದ ಆಪರೇಶನ್ ಆಗಿದ್ದಿಲ್ಲಾ ಅಂದರ ಋಷಿ-ಪಂಚಮಿ ಉದ್ಯಾಪನಿ ಮಾಡಿ ಆಮ್ಯಾಲೆ ಮತ್ತೊಂದ ಹಡೇಯೋಪೈಕಿನ.

ಅಲ್ಲಾ, ಇಕಿ ತಾ ಏನರ ಹಾಳ ಗುಂಡಿ ಬಿಳವಳ್ಳಾಕ ನನ್ನ ಬಗ್ಗೆರ ವಿಚಾರ ಮಾಡ್ಬೇಕ ಬ್ಯಾಡ? ದಣೇಯಿನ ನಲವತ್ತ ತುಂಬಿ ನಲವತ್ತೊಂದರಾಗ ಬಿದ್ದಾವ. ಇನ್ನ ಮುಂದ ಎಂಟ ವರ್ಷಗಟ್ಟಲೇ ಉಪವಾಸ. ಹಂಗ ನಾ ಎಂಟ ವರ್ಷ ಇಕಿಗತೆ ಕಟ್ಟಾ ವೃತಾ ಪಾಲಿಸಿ ಬಿಟ್ಟರ ಆ ಸಪ್ತಋಷಿಗಳ ಜೊತಿ ಎಂಟನೇದಂವಾ ಆಗ್ತೇನಿ ಆ ಮಾತ ಬ್ಯಾರೆ. ಕಡಿಕೆ ಮೊನ್ನೆ ಈ ವಿಷಯ ದಿರ್ಘಕ್ಕ ಹೋಗಿ ಅನಸಕ್ಕಜ್ಜಿ ಮಟಾ ಮುಟ್ಟಿ ಅಕಿ ಕಡಿಕೆ ನನ್ನ ಹೆಂಡತಿಗೆ ಫೊನ್ ಮಾಡಿ
“ಏ, ಹುಚ್ಚಿ, ನೀ ಏನರ ಋಷಿ-ಪಂಚಮಿ ಈ ವಯಸ್ಸಿನಾಗ ಹಿಡದರ ನಿನ್ನ ಗಂಡ ಇನ್ನೊಂದ ಲಗ್ನಾ ಮಾಡ್ಕೋತಾನ. ಆಮ್ಯಾಲೆ ನೀ ಸಂಸಾರದಿಂದ ಮೋಕ್ಷ ಹೊಂದೊಕಿಂತಾ ಮುಂಚೆ ಜೀವನದಿಂದ ಮೋಕ್ಷ ಹೊಂದತಿ, ಹಂಗ ಹುಚ್ಚುಚಾಕಾರ ಏನರ ಮಾಡಲಿಕ್ಕೆ ಹೋಗಬ್ಯಾಡ. ಎಲ್ಲಾದಕ್ಕೂ ಒಂದ ವಯಸ್ಸ ಇರತದ. ಆ ಆ ವಯಸ್ಸಿಗೆ ಏನ ಮಾಡಬೇಕ ಅವನ್ನ ಆವಾಗ ಮಾಡಬೇಕು. ನಿಂದ ಇನ್ನು ಉಪ್ಪು ಹುಳಿ ತಿನ್ನೋ ವಯಸ್ಸು, ಏನಿಲ್ಲದ ಮನ್ಯಾಗ ತವಿ ಮಾಡಿದ್ದ ದಿವಸ ಇವತ್ತ ಸಪ್ಪೆ- ಸಪ್ಪೆ ಅಡಗಿ ಮಾಡ್ಯಾರ ಅಂತ ಹೊರಗ ಹೋಗಿ ಪಾನಿ ಪುರಿ ತಿಂದ ಬರ್ತಿ, ಇನ್ನ ಋಷಿ-ಪಂಚಮಿ ಏನ ಹಿಡತಿ ತಲಿ” ಅಂತ ಒಂದ ತಾಸ ತಿಳಿಸಿ ಹೇಳಿದ ಮ್ಯಾಲೆ ಈಗ ಸದ್ಯೇಕ ಆ ವಿಚಾರ ಪೊಸ್ಟಪೋನ್ ಮಾಡೇನಿ ಅಂತ ಹೇಳ್ಯಾಳ. ಇನ್ನ ಮತ್ತ ಯಾವಾಗ ನೆನಪಾಗಿ
“ರ್ರಿ, ನಾನು ಋಷಿ-ಪಂಚಮಿ ಹಿಡಿತಿನಿ” ಅಂತ ಗಂಟ ಬಿಳ್ತಾಳೊ ಆ ಸಪ್ತಋಷಿಗಳಿಗೆ ಗೊತ್ತ. ಹಂಗೇನರ ಅಕಿ ಋಷಿ-ಪಂಚಮಿ ಹಿಡದರ ನಾನು ಒಬ್ಬ ಋಷಿ ಆಗಿ ಯಾವದರ ಅಪ್ಸರೇ ಸಂಬಂಧ ತಪಸ್ಸ ಮಾಡೋದ ಅಂತು ಗ್ಯಾರಂಟಿನ ಮತ್ತ.