ಆನೆಗಳು ನಮ್ಮ ಊರಿಗೆ ಬಂದಿದ್ದು ನನಗಾಗಲೀ, ನಮ್ಮ ಊರಿನವರಿಗಾಗಲೀ ನೆನಪಿಲ್ಲ. ಆದರೆ, ಕಟ್ಟೆಪುರದಿಂದ ಭದ್ರಾ ಅಭಯಾರಣ್ಯಕ್ಕೆ ಹೋಗುವ ಆನೆಗಳು, ನಮ್ಮ ಮನೆಯಿಂದ ಹನ್ನೆರಡು ಕಿಲೋಮೀಟರ್ ದೂರವಿರುವ ಗೆಂಡೇಹಳ್ಳಿ ಮಾರ್ಗವಾಗಿ ಹೋಗುವುದು ಮುಂಚಿನಿಂದಲೂ ನಡೆದು ಬಂದಿದೆ. ಇನ್ನು ದೇವರ ಮನೆ, ಕುಂದೂರು ಕಡೆ ಆನೆಗಳು ಮೊದಲಿಂದಲೂ ಇವೆ. ಹಾಗಾದರೆ, ಇವು ನಮ್ಮ ತೋಟಕ್ಕೆ ದಾರಿ ತಪ್ಪಿ ಬಂದಿರಬೇಕಷ್ಟೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಮಾಕೋನಹಳ್ಳಿ ವಿನಯ್‌ ಮಾಧವ್ ಬರೆದ ‘ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳುʼ ಪುಸ್ತಕದಿಂದ ಒಂದು ಅಧ್ಯಾಯ

 

ಕಂಡೂ ಕಾಣದೆ ಬದಲಾದ ಜಗತ್ತು…

1997ರ ಸಮಯ. ಚಿಣ್ಣಪ್ಪನವರ ಜೊತೆ ಮೊದಲನೇ ಸಲ ಕಾಡಿಗೆ ಹೋದಾಗ ನಡೆದ ಘಟನೆ ಇದು. ಸ್ವಲ್ಪ ದೂರ ಜೀಪಿನಲ್ಲಿ ಹೋದ ಮೇಲೆ, ‘ನಡೆದುಕೊಂಡು ಹೋಗುವ ಹಾಗಿಲ್ಲವಾ?’ ಅಂತ ಮೆಲ್ಲನೆ ಕೇಳಿದೆ. ಜೀಪನ್ನು ನಿಲ್ಲಿಸಿದವರು, ‘ಮೊದಲೇ ಹೇಳಿದ್ದರೆ, ನಾಗರಹೊಳೆ ಆಫೀಸಿನ ಹತ್ತಿರವೇ ಜೀಪು ಬಿಟ್ಟು ನಡೆದುಕೊಂಡು ಬರಬಹುದಿತ್ತು. ಸ್ವಲ್ಪ ದೂರ ಹೋಗಿ ಬರುವಾ,’ ಎಂದು ಜೀಪಿನಿಂದ ಇಳಿದು, ಕಾಡಿನ ದಾರಿಯಲ್ಲಿ ಸ್ವಲ್ಪ ದೂರ ಸಾಗಿ, ಪಕ್ಕದಲ್ಲಿದ್ದ ಹಡ್ಲುವಿಗೆ (ಹುಲ್ಲುಗಾವಲು) ಇಳಿದೆವು. ಸ್ವಲ್ಪ ದೂರದಲ್ಲಿ ದೊಡ್ಡ ಸಲಗವೊಂದು ನಮಗೆ ಬೆನ್ನು ಹಾಕಿ ನಿಂತಿತ್ತು. ಒಂದೆರಡು ನಿಮಿಷ ಕಳೆದಿರಬಹುದು… ಸಲಗ ತನ್ನ ಸೊಂಡಿಲನ್ನು ಮೇಲೆತ್ತಿ, ಎಲ್ಲಾ ದಿಕ್ಕಿಗೂ ತಿರುಗಿಸಲು ಶುರು ಮಾಡಿತು. “ಗಾಳಿ ಈ ಕಡೆಯಿಂದ ಆ ಕಡೆಗೆ ಬೀಸುತ್ತಿದೆ. ಸಲಗ ನಮ್ಮ ವಾಸನೆ ಹಿಡಿಯುತ್ತಿದೆ,” ಎಂದರು.

ಕಾಡಿನಲ್ಲಿ ನಡೆಯುವಾಗ, ಗಾಳಿ ಯಾವ ದಿಕ್ಕಿನ ಕಡೆ ಬೀಸುತ್ತದೆ ಎನ್ನುವುದನ್ನೂ ಗಮನಿಸುತ್ತಿರಬೇಕು. ನಮ್ಮ ಹಿಂದಿನಿಂದ ಮುಂದಕ್ಕೆ ಬೀಸುತ್ತಿದ್ದರೆ, ನಮಗಿಂತ ಮುಂದಿರುವ ಪ್ರಾಣಿಗಳಿಗೆ ನಮ್ಮ ವಾಸನೆ ಬೇಗ ತಲುಪುತ್ತದೆ. ಆನೆ ಸರಕ್ಕನೆ ನಮ್ಮ ದಿಕ್ಕಿಗೆ ತಿರುಗಿತು. ಏನನ್ನಿಸಿತೋ ಏನೋ… ಬಲಕ್ಕೆ ಹೊರಳಿ ಮರಗಳ ಮಧ್ಯ ಮರೆಯಾಗಿ ಹೋಯಿತು.

ನಾವು ಮೂರೂ ಜನರು ಜೀಪಿನತ್ತ ಹೆಜ್ಜೆ ಹಾಕಿದೆವು. ಅಲ್ಲಿಂದೀಚೆ ಇಪ್ಪತ್ತೆರಡು ವರ್ಷ ಕಾಡಿನಲ್ಲಿ ನಡೆದರೂ, ಕಲಿಕೆ ಎನ್ನುವುದು ಮುಗಿಯುತ್ತಲೇ ಇಲ್ಲ. ಆದರೆ, ಕೆಲವು ದಿನಗಳ ನಂತರ ನಾನು ಕಾಡಿಗೆ ಹೊರಟವರಿಗೆಲ್ಲ ಒಂದು ಮಾತು ಹೇಳುತ್ತಿದ್ದೆ: ಕಾಡಲ್ಲಿ ಛಾಯಾಚಿತ್ರ ಮಾತ್ರ ತೆಗೆದುಕೊಳ್ಳಿ ಮತ್ತು ನಿಮ್ಮ ಹೆಜ್ಜೆಗುರುತು ಮಾತ್ರ ಬಿಟ್ಟು ಬನ್ನಿ. (Inside the forest, take only photographs and leave only foot prints)

ಈ ಎರಡು ದಶಕಗಳಿಂದಲೂ ನಾನು ಚಿಣ್ಣಪ್ಪನ ಹಿಂದೆ ತಲೆ ತಗ್ಗಿಸಿ ನಡೆಯುತ್ತಿದ್ದೇನೆ. ಚಿಣ್ಣಪ್ಪ ಒಂದು ಆಲದ ಮರವಿದ್ದಂತೆ. ನನ್ನಂತಹ ಎಷ್ಟು ಜನರು ಇವರ ನೆರಳಲ್ಲಿ ಕಾಡು ಪ್ರಾಣಿಗಳ ವಿಷಯ ಕಲಿತಿದ್ದಾರೆ ಎನ್ನುವುದು ಲೆಕ್ಕ ಹಾಕುವುದು ಕಷ್ಟ. ಎಷ್ಟೋ ಜನ ಇವರ ಹತ್ತಿರವೇ ಕಲಿತು, ಇವರ ಹಿಂದೆ ಮಾತನಾಡುವುದನ್ನೂ ನೋಡಿದ್ದೇನೆ. ಅದಕ್ಕೆ ಪ್ರತಿಕ್ರಿಯೆ ನೀಡದೆ ಇರುವುದನ್ನೂ ಕಲಿತಿದ್ದೇನೆ.

ಇಪ್ಪತ್ತು ವರ್ಷ ಇವರ ಹತ್ತಿರ ಕಲಿತರೂ ಬೆನ್ನು ತಟ್ಟಿಕೊಳ್ಳುವಂತಹ ಕೆಲಸವನ್ನೇನೂ ಮಾಡಿಲ್ಲ. ಆದರೆ, ಕಾಡಿಗೆ ಹೋದಾಗಲೆಲ್ಲ ಏನಾದರೂ ಹೊಸದು ಕಲಿತು ಬರುತ್ತೇನೆ. ಈ ಕಾಡೆಂಬುದೇ ಒಂದು ಮಾಯೆ… ಹೊರಗಡೆ ಗೆಳೆಯರ ಜೊತೆ ಕಾಡಿನ ಬಗ್ಗೆ ಎಷ್ಟೇ ಆತ್ಮ ವಿಶ್ವಾಸದಿಂದ ಮಾತನಾಡಿದರೂ, ಮತ್ತೆ ಕಾಡಿಗೆ ಹೋಗಿ ಹೊರ ಬರುವಾಗ ತಲೆ ತಗ್ಗಿಸಿಕೊಂಡೇ ಬರುತ್ತೇನೆ. ಕಾಡು, ನನಗೆ ತಿಳಿಯದಿರುವ ಹೊಸ ಆಯಾಮವನ್ನು ಅನಾವರಣಗೊಳಿಸಿರುತ್ತದೆ.

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಕಾಡೇನೂ ಹೊಸದಲ್ಲ. ಆದರೆ, ನನ್ನೆದುರೇ ಆದ ಬದಲಾವಣೆಗಳನ್ನು ಗುರುತಿಸುವ ಹೊತ್ತಿಗೆ, ನಾವೆಲ್ಲ ವಿನಾಶದತ್ತ ಕಾಲಿಡುತಿದ್ದೇವೆ ಅಂತ ಅನ್ನಿಸೋಕೆ ಶುರುವಾಗಿದೆ. ನಾವು ಚಿಕ್ಕಂದಿನಲ್ಲಿ ನೋಡಿದ ಕಾಡಿನ ಬಗ್ಗೆ ಹೇಳಿದರೆ, ಈಗಿನ ಮಕ್ಕಳು ನಂಬುವುದೂ ಇಲ್ಲ. ಹಾಗೆ ನೋಡಿದರೆ, ಪೂರ್ಣಚಂದ್ರ ತೇಜಸ್ವಿಯವರ ಕಥೆಗಳಲ್ಲಿ ಬರುವ ಕಾಡುಗಳ ಎಷ್ಟೋ ಭಾಗಗಳನ್ನು ನಾವು ಸಹ ನೋಡಿಲ್ಲ. ಇನ್ನು ಕುವೆಂಪು, ಕಾರಂತರ ಕಾದಂಬರಿಗಳಲ್ಲಿ ಬರುವ ವರ್ಣನೆ ನೋಡಿದರೆ, ಅದು ನಮ್ಮ ಮುತ್ತಾತಂದಿರ ಅಪ್ಪಂದಿರ ಕಾಲಕ್ಕೆ ಅದು ಕೊನೆಯಾಯಿತು ಅಂತ ಅನ್ನಿಸುತ್ತದೆ. ದುರಂತವೆಂದರೆ, ಮೊದಲು ಕಾಡು ಮತ್ತು ನಾಡು ಎಂಬ ಎರಡೇ ಪ್ರವರ್ಗಗಳಿದ್ದವು. ಈಗ, ಅದು ವನ್ಯಜೀವಿ ಕಾಡು, ಮೀಸಲು ಅರಣ್ಯ, ಗ್ರಾಮ ಅರಣ್ಯ ಅಥವಾ ಇನ್ಯಾವುದೋ ಹೆಸರಿನ ಅರಣ್ಯಗಳಾಗಿ ಮಾರ್ಪಾಡಾಗಿವೆ.

(ಮಾಕೋನಹಳ್ಳಿ ವಿನಯ್‌ ಮಾಧವ್)

ಅದೇ ನಮ್ಮನ್ನು ಕೇಳಿದರೆ, ನಿತ್ಯಹರಿದ್ವರ್ಣ, ಒಣ ಪತನಶೀಲ (deciduous), ಅರೆ ಹಸಿ ಪತನಶೀಲ, ಹಸಿ ಪತನಶೀಲ, ಕುರುಚಲು ಕಾಡು, ಹುಲ್ಲುಗಾವಲು, ಶೋಲಾ, ಹಡ್ಲು… ಹೀಗೇ ಸಾಗುತ್ತದೆ. ಆದರೆ, ಕಳೆದ ಮೂರು ದಶಕಗಳ ಹಿಂದೆ ಇದ್ದ ಕಾಡುಗಳಿಗೆ ಹೋಲಿಸಿದರೆ, ಈಗ ಉಳಿದಿರುವುವು ಪಳೆಯುಳಿಕೆಗಳಂತೆ ಕಾಣುತ್ತವೆ. ಅಷ್ಟೇಕೆ? ನಮ್ಮ ಮಲೆನಾಡಿನ ಕಾಫೀ ತೋಟಗಳು ಕಾಡು ಮರಗಳ ನೆಡುವೆಯೇ ಇದ್ದದ್ದು. ಭತ್ತದ ಗದ್ದೆಗಳು ಹಡ್ಲುಗಳಂತೆ, ನೀರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ಈಗ ಕಾಡುಮರಗಳ ಜಾಗದಲ್ಲಿ ಸಿಲ್ವರ್ ಮರಗಳು ಬಂದಿವೆ ಮತ್ತು ಭತ್ತದ ಗದ್ದೆಗಳು ಕಾಫಿ ಇಲ್ಲವೇ ಅಡಕೆ ತೋಟಗಳಾಗಿ ಮಾರ್ಪಟ್ಟಿವೆ. ಬಯಲುಸೀಮೆಗಳಲ್ಲಂತೂ, ಏನಾದರೂ ಉಳಿದಿವೆಯೇ ಎಂದು ಹುಡುಕಬೇಕಾಗಿದೆ.

ಪರಿಣಾಮವೆಂದರೆ, ನಮ್ಮೂರಲ್ಲಿದ್ದ ಅತ್ತಿ, ಗೋಣಿ, ಆಲೆ, ಬಸುರಿಯಂತಹ ತೋಟದೊಳಗಿದ್ದ ಹಣ್ಣಿನ ಮರಗಳೂ, ದಿಣ್ಣೆಗಳಲ್ಲಿದ್ದ ಚೊಟ್ಟೆ, ನೇರಳೆ, ಈಚಲು ಗುತ್ತಿಗಳೂ ಕಣ್ಮರೆಯಾಗಿವೆ. ಅಷ್ಟೇಕೆ, ನಮ್ಮೆಲ್ಲರ ನೆಚ್ಚಿನ ಕಳ್ಳು (ಶೇಂದಿ) ಇಳಿಸುತ್ತಿದ್ದ ಬೈನೆ ಮರಗಳು ಸಹ ಕಡಿಮೆಯಾಗಿವೆ. ಬಿದಿರು ಕಾಡುಗಳು ಮತ್ತು ಕೆರೆಗಳ ಅಂಚಿನಲ್ಲಿರುತ್ತಿದ್ದ ಕೇದಿಕೆಗಳೂ ಇತ್ತೀಚೆಗೆ ಕಾಣುತ್ತಿಲ್ಲ.

ಮುಂಚೆಲ್ಲ ಮನೆಯ ಹತ್ತಿರ ಗುಬ್ಬಚ್ಚಿ, ಕಾಗೆ, ಪಿಟ್ಟನ ಹಕ್ಕಿಗಳು ಮಾತ್ರ ಕಾಣುತ್ತಿದ್ದವು. ಇನ್ನುಳಿದವು ತೋಟದಲ್ಲಿ ಮರಗಳ ಮಧ್ಯೆ ಕುಳಿತು ಹಾಡುತ್ತಿದ್ದವು. ಅವುಗಳನ್ನು ನೋಡಲು ಹರ ಸಾಹಸ ಮಾಡಬೇಕಿತ್ತು. ಈಗ ಗುಬ್ಬಚ್ಚಿಗಳಿಲ್ಲ. ನೂರಾರು ತರಹದ ಹಕ್ಕಿಗಳು ಮತ್ತು ಅಷ್ಟೇನೂ ಕಣ್ಣಿಗೆ ಬೀಳುವ ಅವಶ್ಯಕತೆ ಇಲ್ಲದ ಬೂದು ಮಂಗಟ್ಟೆ ಸಹ ನಮ್ಮ ಮನೆ ಬಾಗಿಲಿಗೆ ಬರುತ್ತಿವೆ. ನಮ್ಮ ತೋಟಗಳಲ್ಲಿ ಅವುಗಳಿಗೆ ತಿನ್ನಲು ಸಿಗುವುದು ಅಷ್ಟಕಷ್ಟೆ. ನಮ್ಮ ಮನೆಯ ಸುತ್ತ ಹಾಕಿರುವ ಸೀಬೆ, ಸಪೋಟ, ಲಿಚಿಯಿಂದ ಹಿಡಿದು, ಬೆಣ್ಣೆ ಹಣ್ಣನ್ನೂ (Butter fruit or Avocado) ತಿನ್ನುವ ದುರ್ಗತಿಗೆ ಬಂದಿವೆ. ನಾವೂ ಪಾಪ ಅಂತ ಸುಮ್ಮನಾಗುತ್ತೇವೆ. ಮನೆಯ ಹತ್ತಿರ ಬರುವ ಪಕ್ಷಿ ಸಂಕುಲ ನೋಡಿದರೆ ಸಂತೋಷವಾಗುವ ಬದಲು, ಅವುಗಳಿಗೆ ಬದುಕಲು ಒಂದು ವಾಸಸ್ಥಾನವೂ ಇಲ್ಲ, ತಿನ್ನಲೂ ಏನೂ ಸಿಕ್ಕುತ್ತಿಲ್ಲ ಎನ್ನುವುದು ನೆನಪಾಗಿ ಪಿಚ್ಚೆನಿಸುತ್ತದೆ.

ಮೊನ್ನೆ ಅಮ್ಮನಿಗೆ ಫೋನ್ ಮಾಡಿದಾಗ, ‘ತೋಟಕ್ಕೆ ಆನೆಗಳು ಬಂದಿದ್ದವು,’ ಎಂದಾಗ, ನನಗೆ ಆಶ್ಚರ್ಯವಾಯಿತು.

‘ಚಂದ್ರಾಪುರದ ಹತ್ತಿರ ಹೋಗುತ್ತಿತ್ತು ಅಂತ ಕಿರೀಟಣ್ಣ ಹೇಳಿದರು,’ ಅಂತ ಹೇಳಿದೆ.

‘ನಮ್ಮ ಅಡಕೆ ತೋಟಕ್ಕೆ ಬಂದಿತ್ತು. ಒಂದು ತಾಯಿ ಮತ್ತೆ ಅದರ ಮರಿ. ಒಂದು ರಾತ್ರಿ ಇದ್ದು ಹೋಯಿತು. ಗೋಪಾಲ (ತೋಟದ ಮೇಸ್ತ್ರಿ) ಮನೆಯವರೆಗೆ ಬಂದು ಹೋಗಿದೆ. ಏನೂ ಲೂಟಿ ಮಾಡಿಲ್ಲ. ಒಂದು ಬೈನೆ ಮರ ತಿಂದು ಹೋಗಿದೆ ಅಷ್ಟೆ. ಸುಮಾರು ಜನ ನೋಡಿದ್ದರು,’ ಎಂದಾಗ, ಏನೂ ಹೇಳಲು ಗೊತ್ತಾಗದೆ ಸುಮ್ಮನಾದೆ.

ನಾವು ಚಿಕ್ಕವರಾಗಿದ್ದಾಗ, ನರಿ, ಮುಂಗುಸಿ, ಕಾಡು ಕುರಿ, ಅಪರೂಪಕೊಮ್ಮೆ ಕಾಡು ಹಂದಿ, ಚಿರತೆ ಬಿಟ್ಟರೆ, ಬೇರೆ ಪ್ರಾಣಿಗಳು ತೋಟದಲ್ಲಿ ಸಿಗುತ್ತಿದ್ದದ್ದು ಕಡಿಮೆ. ಇತ್ತೀಚೆಗೆ ನರಿ ಸಂತತಿ ಉಳಿದಿಲ್ಲ. ಆದರೆ, ನವಿಲುಗಳ ಸಂಖ್ಯೆ ವಿಪರೀತವಾಗಿ ಬೆಳೆಯುತ್ತಿದೆ. ಹಾವುಗಳು ಕಡಮೆಯಾಗುತ್ತಿದ್ದು, ಇಲಿಗಳು ಸ್ವಲ್ಪ ಜಾಸ್ತಿಯಾಗುತ್ತಿವೆ. ಎಷ್ಟೋ ವರ್ಷಗಳ ನಂತರ ಕಾಟಿಗಳು (ಕಾಡೆಮ್ಮೆ) ನಮ್ಮ ಕಡೆಗೆ ಬರಲು ಆರಂಭಿಸಿವೆ. ಈಗ ನೋಡಿದರೆ, ಆನೆ ಬಂದಿದೆ.

ಆನೆಗಳು ನಮ್ಮ ಊರಿಗೆ ಬಂದಿದ್ದು ನನಗಾಗಲೀ, ನಮ್ಮ ಊರಿನವರಿಗಾಗಲೀ ನೆನಪಿಲ್ಲ. ಆದರೆ, ಕಟ್ಟೆಪುರದಿಂದ ಭದ್ರಾ ಅಭಯಾರಣ್ಯಕ್ಕೆ ಹೋಗುವ ಆನೆಗಳು, ನಮ್ಮ ಮನೆಯಿಂದ ಹನ್ನೆರಡು ಕಿಲೋಮೀಟರ್ ದೂರವಿರುವ ಗೆಂಡೇಹಳ್ಳಿ ಮಾರ್ಗವಾಗಿ ಹೋಗುವುದು ಮುಂಚಿನಿಂದಲೂ ನಡೆದು ಬಂದಿದೆ. ಇನ್ನು ದೇವರ ಮನೆ, ಕುಂದೂರು ಕಡೆ ಆನೆಗಳು ಮೊದಲಿಂದಲೂ ಇವೆ. ಹಾಗಾದರೆ, ಇವು ನಮ್ಮ ತೋಟಕ್ಕೆ ದಾರಿ ತಪ್ಪಿ ಬಂದಿರಬೇಕಷ್ಟೆ.

ಹಾಗಾದರೆ ಈ ಪ್ರಾಣಿಗಳು ಮುಂಚೆ ಮಲೆನಾಡಿನ ಊರುಗಳಲ್ಲಿ ಇರಲಿಲ್ಲವೇ? ಹತ್ತು ವರ್ಷಗಳಿಂದೀಚೆ ಕಾಡು ಪ್ರಾಣಿಗಳ ಉಪಟಳ ಏಕೆ ಹೆಚ್ಚಾಗುತ್ತಿದೆ? ಇರುತ್ತಿದ್ದವು. ಮೊದಲೆಲ್ಲ, ತೋಟಗಳು ಮತ್ತು ಊರುಗಳ ನಡುವೆ ಕಾಡು ಮತ್ತು ಹರಗಳು (ದಿಣ್ಣೆಗಳು) ಇರುತ್ತಿದ್ದವು. ಪ್ರಾಣಿಗಳಿಗೆ ಅಲ್ಲಿ ಸಾಧಾರಣವಾಗಿ ಊಟ ಸಿಗುತ್ತಿತ್ತು. ಅವುಗಳ ಪಾಡಿಗೆ, ಯಾರಿಗೂ ತೊಂದರೆ ಕೊಡದೆ, ಅವುಗಳ ಮಧ್ಯದಿಂದ ದಾಟಿಕೊಂಡು ಹೋಗುತ್ತಿದ್ದವು. ಮನುಷ್ಯರ ಓಡಾಟ ಕಂಡು ಬಂದರೆ, ಮರೆಯಾಗಿ ನಿಲ್ಲಲು ಮರಗಳು, ಪೊದೆಗಳು ಇರುತ್ತಿದ್ದವು.

ಜನಸಂಖ್ಯೆ ಜಾಸ್ತಿಯಾದಂತೆ, ಈ ಹರಗಳು ಮತ್ತು ಕಾಡುಗಳನ್ನು ತೋಟಗಳಾಗಿ ಪರಿವರ್ತನೆ ಮಾಡಲಾಯಿತು. ಒಂದು ಕಡೆಯಿಂದ, ಇನ್ನೊಂದು ಕಡೆಗೆ ಹೋಗುವ ಪ್ರಾಣಿಗಳು ಹೋಗುವ ದಾರಿಗಳಲ್ಲಿ ಬೇಲಿಗಳು ಎದ್ದವು. ದೊಡ್ಡ ಪ್ರಾಣಿಗಳು ಬೇಲಿ ದಾಟಿಯೋ, ಮುರಿದೋ ಮುಂದುವರೆದರೆ, ಸಣ್ಣ ಪ್ರಾಣಿಗಳು ಸುತ್ತ ಮುತ್ತಲೂ ಈ ಹರಗಳಿಗೆ ಹುಡುಕಲು ಪ್ರಾರಂಭಿಸುತ್ತವೆ. ಪ್ರಾಣಿಗಳ ಉಪಟಳ ಎಂದು ದೂರುವ ಜನಗಳು ಯೋಚಿಸದೇ ಇರುವ ವಿಷಯಗಳು ಬಹಳಷ್ಟಿವೆ. ಮೊದಲನೆಯದಾಗಿ, ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಬಹಳಷ್ಟು ಬದಲಿಸಿದ್ದೇವೆ. ಆದರೆ, ಬದಲಾಯಿಸುವುದರ ಮುಂಚೆ ದಿಣ್ಣೆಗಳು, ಕುರುಚಲು ಕಾಡುಗಳು, ಕಾಡುಗಳನ್ನು ಉಪಯೋಗಿಸುತ್ತಿದ್ದ ಪ್ರಾಣಿಗಳ ಬಗ್ಗೆ ಯೋಚಿಸಿರುವುದಿಲ್ಲ. ಇಂತಹ ಜಾಗಗಳನ್ನು ಕೆಲವು ದೊಡ್ಡ ಪ್ರಾಣಿಗಳು ವಲಸೆ ಮಾರ್ಗಗಳನ್ನಾಗಿ ತಲತಲಾಂತರದಿಂದ ಉಪಯೋಗಿಸುತ್ತಿರುತ್ತವೆ. ಇನ್ನು ಸಣ್ಣ ಪುಟ್ಟ ಪ್ರಾಣಿಗಳು ಅಲ್ಲಿಯೇ ತಮ್ಮದೊಂದು ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡಿರುತ್ತವೆ. ಆ ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ಅವಿನಾಭಾವ ಸಂಬಂಧಗಳಿರುತ್ತವೆ.

ನಾವು ಪರಿಸರ ಬದಲಿಸುತ್ತಿದ್ದಂತೆ, ಅಲ್ಲಿದ್ದ ಜೀವರಾಶಿಗಳು ನಿಧಾನವಾಗಿ ಹಿಂದೆ ಸರಿಯಲು ಪ್ರಾರಂಭಿಸುತ್ತವೆ. ಆಗ, ಅವು ಹಿಂದೆ ಸರಿದ ಜಾಗದಲ್ಲಿದ್ದ ಪ್ರಾಣಿಗಳ ಜೊತೆ ಉಳಿವಿಗಾಗಿ ಹೋರಾಟ ನಡೆಸುತ್ತವೆ. ಆ ಹೋರಾಟದಲ್ಲಿ ಯಾರು ಬೇಕಾದರೂ ಉಳಿಯಬಹುದು. ಕೆಲವು ಪ್ರಾಣಿ, ಪಕ್ಷಿ ಮತ್ತು ಕೀಟ ಪ್ರಭೇದಗಳು ಹೊಸ ಪರಿಸರಕ್ಕೆ ಒಗ್ಗಿಕೊಳ್ಳದೆ ಸರ್ವನಾಶವಾಗಿ ಹೋಗಿವೆ. ಅವುಗಳನ್ನು ಲೆಕ್ಕ ಇಟ್ಟಿರುವವರು ಕಮ್ಮಿ. ಆದರೆ, ಗಲಾಟೆ ಶುರುವಾಗುವುದೇ ಈ ಕಾಡುಗಳನ್ನು ವಲಸೆ ಪಥವಾಗಿ ಉಪಯೋಗಿಸುತ್ತಿದ್ದ ಆನೆ, ಕಾಟಿಯಂತಹ ಪ್ರಾಣಿಗಳು ಬಂದಾಗ.

ಸಾಧಾರಣವಾಗಿ, ಆನೆಗಳ ಗುಂಪನ್ನು ನಿಯಂತ್ರಿಸುವುದು ಒಂದು ದೊಡ್ಡಮ್ಮ (Alfa Female). ಗುಂಪಿನ ಪ್ರತೀ ಆನೆಯ ರಕ್ಷಣೆ, ಆಹಾರ ಪೂರೈಕೆ ಮತ್ತು ವಲಸೆ ಹೋಗುವ ದಾರಿಯನ್ನು ಸಹ ಅದು ನಿಯಂತ್ರಿಸುತ್ತದೆ. ಗುಂಪಿನಲ್ಲಿರುವ ಚಿಕ್ಕ ಆನೆಗಳು, ವಲಸೆ ಹೋದ ಪ್ರತಿಯೊಂದು ದಾರಿಯನ್ನೂ ನೆನಪಿಟ್ಟುಕೊಳ್ಳುತ್ತವೆ. ಮುಂದೊಂದು ದಿನ ಈ ಚಿಕ್ಕ ಆನೆ ಗುಂಪಿನ ದೊಡ್ಡಮ್ಮನಾದರೆ, ತನ್ನ ಗುಂಪಿಗೆ ಆಹಾರ ಮತ್ತು ನೀರು ಅರಸುತ್ತಾ, ತಾನು ಸಣ್ಣವಳಾಗಿದ್ದಾಗ ತನ್ನ ದೊಡ್ಡಮ್ಮನೊಡನೆ ಹೋಗಿದ್ದ ಜಾಗಗಳಿಗೆ ಕರೆದುಕೊಂಡು ಹೋಗುತ್ತದೆ. ಆ ದಾರಿಯಲ್ಲಿ ಏನಾದರೂ ಅಡೆತಡೆಗಳು ಬಂದರೆ, ಅದು ದಿಕ್ಕನ್ನು ಬದಲಿಸುತ್ತದೆ. ಹಾಗೆ ನೋಡಿದರೆ, ಶತಮಾನದ ಕೆಳಗಿನ ಆನೆಯ ವಲಸೆ ಪಥವನ್ನು ದಕ್ಷಿಣ ಭಾರತದಲ್ಲಿ ನೋಡಿದರೆ, ತಿರುಪತಿಯಿಂದ ಶುರುವಾಗಿ, ನೆಲ್ಲೂರು, ಕೃಷ್ಣಗಿರಿ, ತಳ್ಳಿ, ಆನೆಕಲ್ ಮಾರ್ಗವಾಗಿ, ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಒಂದು ಸಣ್ಣ ಕವಲು ಮಾಗಡಿ, ಶಿವಗಂಗೆ ಮಾರ್ಗವಾಗಿ ಭದ್ರಾ ಅಭಯಾರಣ್ಯದ ಕಡೆಗೆ ಹೊರಟರೆ, ಇನ್ನುಳಿದ ಆನೆಗಳು ಬನ್ನೇರುಘಟ್ಟ, ಮೇಕೆದಾಟು, ಮಲೈಮಹದೇಶ್ವರ ಬೆಟ್ಟದ ಮೂಲಕ ಬಿಳಿಗಿರಿ ರಂಗನ ಬೆಟ್ಟದ ಕಡೆಗೆ ಹೋಗುತ್ತಿದ್ದವು. ಅಲ್ಲಿಂದ ಮುಂದೆ, ಪಥ ಕವಲಾಗಿ, ಒಂದು ದಾರಿ ನೀಲಗಿರಿ, ಕೇರಳದ ಕಡೆಗೆ ತಿರುಗಿದರೆ, ಇನ್ನೊಂದು ಪಥ, ಬಂಡೀಪುರ, ನಾಗರಹೊಳೆ, ಬ್ರಹ್ಮಗಿರಿ, ಪುಷ್ಪಗಿರಿ, ಸುಬ್ರಹ್ಮಣ್ಯ, ಕುದುರೇಮುಖ ಮಾರ್ಗವಾಗಿ, ಉತ್ತರ ಕನ್ನಡ, ಬೆಳಗಾವಿಯ ಮೂಲಕ, ಮಹಾರಾಷ್ಟ್ರದ ರತ್ನಗಿರಿಗೆ ತಲುಪುತ್ತದೆ. ಈ ಪಥಗಳು ಕಿಲೋಮೀಟರ್‌ ಗಟ್ಟಲೆ ಅಗಲವಿರುತ್ತಿದ್ದವೇ ಹೊರತು, ನಮ್ಮ ರಾಷ್ಟ್ರೀಯ ಹೆದ್ದಾರಿಗಳಷ್ಟು ಅಗಲವಲ್ಲ. ಆಗ ನಿರಂತರವಾಗಿದ್ದ ಆನೆ ಪಥ, ಈಗ ಊರುಗಳು ಮತ್ತು ಅಭಿವೃದ್ಧಿಯ ನಡುವೆ ಕಳೆದು ಹೋಗಿದೆ.

ಶತಮಾನದ ಕೆಳಗೆ ನೀಲಗಿರಿ ವಲಯ ಒಂದರಲ್ಲೇ ಮೂವತ್ತು ಸಾವಿರಕ್ಕಿಂತ ಹೆಚ್ಚು ಆನೆಗಳಿದ್ದವು. ಈಗ ಆರು ಸಾವಿರದಷ್ಟು ಇರುವ ಆನೆಗಳ ಬಗ್ಗೆ ಮನುಷ್ಯರು ಉಪಟಳ ಅಂತ ಮಾತನಾಡುತ್ತೇವೆ. ಇವೆಲ್ಲ ನೋಡಿದಾಗ, ಯಾರು, ಯಾರ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವುದು ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ.

ಎರಡನೆಯದಾಗಿ, ಆನೆಗಳ ವಲಸೆ ನಿಲ್ಲುವಂತಹ ಅನಾಹುತಕಾರಿ ಬೆಳವಣಿಗೆ ಇನ್ನೊಂದಿಲ್ಲ. ಅವು ದಿನಕ್ಕೆ 200-300 ಕಿಲೋ ಸೊಪ್ಪು ತಿನ್ನುತ್ತವೆ. ಅವು ವಲಸೆ ಹೋಗಿ, ಆ ಜಾಗಕ್ಕೆ ಮತ್ತೆ ಬರುವ ಹೊತ್ತಿಗೆ, ಮೊದಲು ತಿಂದ ಗಿಡ, ಮರಗಳು ಮತ್ತೆ ಚಿಗುರಿರುತ್ತವೆ. ಹಾಗೆಯೇ, ಅವುಗಳಿಗೆ ಕುಡಿಯುವ ನೀರು ಸಹ 100 ಲೀಟರ್‌ ಗಿಂತ ಹೆಚ್ಚು ಬೇಕು. ಆನೆಗಳು ವಲಸೆ ಹೋಗದಿದ್ದರೆ, ಆ ಜಾಗದಲ್ಲಿರುವ ಗಿಡ-ಮರಗಳು ಮತ್ತು ನೀರಿನ ಸೆಲೆ ನಿರ್ನಾಮವಾಗಿ ಹೋಗುತ್ತವೆ. ಆ ನಂತರ, ಅವು ನೀರು ಮತ್ತು ಆಹಾರ ಹುಡುಕುತ್ತಾ ಪಕ್ಕದ ಪ್ರದೇಶಕ್ಕೆ ವಲಸೆ ಹೋಗಿಯೇ ತೀರುತ್ತವೆ. ತಮಿಳುನಾಡಿನ ಕೃಷ್ಣಗಿರಿ, ತಳ್ಳಿ, ನಮ್ಮ ಬನ್ನೇರುಘಟ್ಟದಂತಹ ಚಿಕ್ಕ ಪ್ರದೇಶಗಳಲ್ಲಿ ಆನೆಗಳು ನೆಲೆಗೊಂಡಿರುವುದರಿಂದ ಆಗುತ್ತಿರುವ ಅನಾಹುತ ಇದೇ.

ಹಾಗಾಗಿ, ತೊಂಬತ್ತರ ದಶಕದ ಕೊನೆಯವರೆಗೆ ಬೆಂಗಳೂರಿನ ಕೆಂಗೇರಿಯ ಹತ್ತಿರ ಆನೆಗಳು ಬರುವುದು ಸರ್ವೇಸಾಮಾನ್ಯವಾಗಿತ್ತು. ಜೆಪಿ ನಗರದ ಪಕ್ಕದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ನಲ್ವತ್ತು ಆನೆಗಳ ಗುಂಪೊಂದು ಬಂದಿತ್ತು. ಆ ಗುಂಪಿನ ದೊಡ್ದಮ್ಮ ಚಿಕ್ಕಂದಿನಲ್ಲಿ ಆ ಕೆರೆಗೆ ಬಂದಿತ್ತು ಅಂತ ಕಾಣುತ್ತೆ. ಅದರ ಪ್ರಕಾರ, ನಮ್ಮ ಅಡಕೆ ತೋಟಕ್ಕೆ ಬಂದು ಹೋದ ಮರಿ ಆನೆ ಮುಂದೆ ಐವತ್ತು ವರ್ಷಗಳ ನಂತರವೂ ಮತ್ತೆ ಬರುವ ಸಾಧ್ಯತೆಗಳಿವೆ.

ಈ ಸಮಸ್ಯೆ ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮೂರಲ್ಲಿ ನರಿ, ಬರ್ಕ ಮತ್ತು ಕೆಲವು ಸಣ್ಣ ಪುಟ್ಟ ಪ್ರಾಣಿಗಳು ಕಣ್ಮರೆಯಾದಂತೆ, ಬಯಲು ಸೀಮೆಯಲ್ಲಿ ತೋಳ, ಕೃಷ್ಣಮೃಗ ಮತ್ತು ಕೀಟ-ಮಾಟ (Great Indian Bustard)
ನಿಧಾನವಾಗಿ ವಿನಾಶದಂಚಿಗೆ ಹೋಗುತ್ತಿವೆ. ಮಲೆನಾಡಿನ ಕಾಡಿನಂತೆಯೇ, ಬಯಲುಸೀಮೆಯ ಬಯಲು, ಹುಲ್ಲು ಪ್ರಕೃತಿಯ ಸಮತೋಲನ ಕಾಪಾಡುವ ಪ್ರಾಮುಖ್ಯತೆಯನ್ನು ಯಾರೂ ಮಾತನಾಡುವುದಿಲ್ಲ. ಮಲೆನಾಡಿನಿಂದ ಕಾಲುವೆ ಮೂಲಕ ನೀರು ತರುವ ಉಮೇದಿನಲ್ಲಿ, ಹಳ್ಳ, ಬಾವಿ ಮತ್ತು ಕೆರೆಗಳನ್ನೂ ಬತ್ತಿಸಿದ್ದಾರೆ. ಹೇಗೆ ಬಹಳ ವರ್ಷಗಳ ನಂತರ ಮಲೆನಾಡಿನ ಕೆಲವು ಭಾಗದಲ್ಲಿ ಆನೆ ಮತ್ತು ಹುಲಿಗಳ ಕಾಟ ಎಂದು ಜನಗಳು ದೂರುತ್ತಾರೋ, ಹಾಗೆಯೇ ಬಯಲುಸೀಮೆಯಲ್ಲಿ ಕರಡಿ, ಚಿರತೆಗಳ ಕಾಟಕ್ಕೂ ಇದೇ ಕಾರಣ.

ಹಿಂದೊಮ್ಮೆ ನಾನು ತೋಳಗಳನ್ನು ಹುಡುಕಿಕೊಂಡು ಮೇಲುಕೋಟೆಗೆ ಹೋಗಿದ್ದೆ. ಮೇಲುಕೋಟೆಗೆ ಹೊಂದಿಕೊಂಡಂತೆ ಇರುವ ನಲ್ವತ್ತು ಚದರ ಕಿಲೋಮೀಟರ್ ಕಾಡನ್ನು ತೋಳ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿತ್ತು. ನಾನು ಹೋಗಿ ನೋಡಿದಾಗ ಅಲ್ಲಿ ತೋಳಗಳು ಇಲ್ಲದ್ದು ತಿಳಿಯಿತು. ಯಾರನ್ನು ಕೇಳಿದರೂ, ದೊಡ್ಡ ನಾಯಿ (ಚಿರತೆಗೆ ಅಲ್ಲಿನ ಜನ ಕರೆಯುವುದು) ಬಂದ ಮೇಲೆ ತೋಳಗಳು ಇಲ್ಲವಾದವು ಎಂದು ಹೇಳಿದರು.

ನಾನು ನಾಲ್ಕೈದು ದಿನ ಅಲ್ಲೆಲ್ಲ ಸುತ್ತಾಡಿ ನೋಡಿದೆ. ಮೇಲುಕೋಟೆಯಿಂದ ಕೆಳಗೆ, ಚೆನ್ನರಾಯಪಟ್ಟಣಕ್ಕೆ ಹೋಗುವ ದಾರಿಯಲ್ಲಿ ತೋಳದ ಹಿಕ್ಕೆ ಸಿಕ್ಕಿತು. ಅದೂ ಹಳೆಯದು ಮತ್ತು ನಾಯಿಯ ಹಿಕ್ಕೆ ಇದ್ದರೂ ಇರಬಹುದು ಅಂತ ಅನ್ನಿಸಿತು. ಸರಿ, ಹತ್ತಿರದ ಊರಿಗೆ ಹೋಗಿ ಒಬ್ಬ ವಯಸ್ಸಾದವರ ಹತ್ತಿರ ತೋಳಗಳ ಬಗ್ಗೆ ಕೇಳಿದೆ.

‘ನೋಡಪ್ಪಾ… ಮುಂಚೆಗೆಲ್ಲಾ ತುಂಬಾ ಇರ್ತಿದ್ವು. ಒಂದೊಂದೇ ಜಾಗ ನೀರಾವರಿ ಆಗ್ತಿದ್ದಂಗೆ ಅವು ಹಿಂದೆ ಬಂದ್ವು. ಈಗೊಂದು ಇಪ್ಪತ್ ವರ್ಷದ್ ಕೆಳ್ಗೆ, ಮೇಲುಕೋಟೆ-ಚೆನ್ನರಾಯ ಪಟ್ಟಣದ ಮಧ್ಯ ಕುರಿ ತಗಂಡು ಬರಂಗಿಲ್ಲ, ತೋಳಗಳು ಬರ್ತಿದ್ವು. ಆಗೆಲ್ಲ ಈಗಿನಂಗೆ ರಸ್ತೆ, ಇಷ್ಟೊಂದು ಮನೆ ಇರ್ಲಿಲ್ಲ ನೋಡು. ಕುರಿ ಹಿಡ್ದಂಗೆಲ್ಲ ಜನ ಅವುಗಳಿಗೆ ವಿಷ ಹಾಕೋಕೆ ಶುರು ಮಾಡಿದ್ರು. ಈಗ ಅವುಗಳ ಕಾಟ ಇಲ್ಲ. ಅಲ್ಲೊಂದು ಇಲ್ಲೊಂದು ಇರ್ತಾವೆ. ಮುಂಚಿನ ತರ ಹತ್ತು, ಹದಿನೈದು ಇರೋದಿಲ್ಲ. ಒಂದೆರೆಡೋ, ಮೂರೋ ಇರ್ತಾವೆ ಅಷ್ಟೆ. ಅವೂ ಹೆದ್ರುಕೋತಾವೆ,’ ಅಂದರು.

ಅಲ್ಲಿಗೆ ಮಂಡ್ಯ ಜಿಲ್ಲೆಯಲ್ಲಿ ತೋಳಗಳ ಅವಸಾನವಾಗಿದೆ ಎನ್ನುವುದು ನನಗೆ ಅರ್ಥವಾಯಿತು. ಅಲ್ಲಿ ಕೀಟ-ಮಾಟಗಳು (Great Indian Bustards) ಬಹಳಷ್ಟಿವೆ ಅಂತ ನನಗೆ ಉಲ್ಲಾಸ್ ಕಾರಂತರು ಹೇಳಿದ್ದರು. ಅವುಗಳ ಸಂತಾನವೂ ಕಾಣಲಿಲ್ಲ. ಮೇಲುಕೋಟೆಯಲ್ಲಿದ್ದ ಅರಣ್ಯಾಧಿಕಾರಿಯೊಡನೆ ಮಾತನಾಡಿದರೆ, ಅದು ರಕ್ಷಿತಾರಣ್ಯ ಎನ್ನುವ ವಿಷಯ ಅವರಿಗೆ ಗೊತ್ತೇ ಇರಲಿಲ್ಲ. ‘ಸರ್, ಹಾಗಿದ್ದರೆ, ಏನಾದ್ರೂ ಫಂಡ್ಸ್ ಬರುತ್ತಿತ್ತಲ್ಲ?’ ಅಂತ ನನ್ನನ್ನೇ ಪ್ರಶ್ನೆ ಮಾಡಿದರು.

ಬೆಂಗಳೂರಿಗೆ ಬಂದವನೇ, ಅರಣ್ಯ ಭವನದಲ್ಲಿ ಹಿರಿಯ ಅಧಿಕಾರಿಗಳ ಹತ್ತಿರ ವಿಚಾರಿಸಿದೆ. ಅವರಿಗೂ ಸಹ ಗೊತ್ತಿರಲಿಲ್ಲ. ಅವರು ಅರಣ್ಯ ಭವನದಲ್ಲಿ ವಿಚಾರಿಸಿದರೆ, ಯಾರಿಗೂ ಗೊತ್ತಿರಲಿಲ್ಲ. ನಾನು ಅರಣ್ಯ ಇಲಾಖೆ 1985ರಲ್ಲಿ ಪ್ರಕಟಿಸಿದ ವನ್ಯಜೀವಿಗಳ ಬಗೆಗಿನ ಪುಸ್ತಕದಲ್ಲಿ, ಮೇಲುಕೋಟೆಯ ವಿಷಯ ಬರೆದಿರುವುದು ತೋರಿಸಿದೆ. ಆ ಸರ್ಕಾರಿ ಆದೇಶಕ್ಕಾಗಿ ಇಡೀ ಅರಣ್ಯ ಭವನ ಜಾಲಾಡಿದರೂ, ಯಾರಿಗೂ ಸಿಗಲಿಲ್ಲ.

ಪ್ರಾಣಿಗಳು ತಮ್ಮ ಹಳೆ ಪರಿಸರ ಹುಡುಕುತ್ತವೆಯೇ ಹೊರತು, ಅವುಗಳಿಗೆ ಸರ್ವೆ ನಂಬರ್‌ ಗಳು, ಕಾನೂನು, ಇಂಗ್ಲಿಷ್ ಬೋರ್ಡುಗಳು ಅರ್ಥವಾಗುವುದಿಲ್ಲ. ನಾವು ಅವುಗಳಿಗೆ ಬೇಕಾದ ಪರಿಸರವನ್ನು ಬದಲಿಸಿ, ಕೃಷಿ ಅಥವಾ ಬೇರೆ ಆಧುನಿಕ ಬೆಳವಣಿಗೆಗಳನ್ನು ಮಾಡಿದರೆ, ಅವು ಸುತ್ತ ಮುತ್ತಲೂ ತಮ್ಮ ಹಳೇ ಪರಿಸರವನ್ನು ಹುಡುಕಲು ಆರಂಭಿಸುತ್ತವೆ. ಪ್ರಾಣಿಗಳು ಬಯಸುವುದು ಏಕತಾನವನ್ನೇ ಹೊರತು ಬದಲಾವಣೆಯನ್ನಲ್ಲ. ಪ್ರತೀ ಬದಲಾವಣೆಯೂ ಪ್ರಾಣಿಗಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಅವು ವ್ಯಗ್ರವಾಗುತ್ತವೆ. ಅವುಗಳಿಗೆ ಬೇಕಾಗುವುದು ಆಹಾರ ಮತ್ತು ನೀರು ಮಾತ್ರ. ಅದಕ್ಕೆ ಅಡ್ಡಿ ಮಾಡಿದರೆ, ಅವು ತಮ್ಮ ಉಳಿವಿಗೆ ಪ್ರತಿದಾಳಿ ನಡೆಸುತ್ತವೆಯೇ ಹೊರತು ನಮ್ಮ ಮೇಲಿನ ದ್ವೇಷಕ್ಕಲ್ಲ.

ಪ್ರಾಣಿಗಳಿಗೂ ಮನುಷ್ಯರಂತೆ ಯೋಚನಾ ಶಕ್ತಿಯಿದೆ. ಅವು ನಮ್ಮಂತೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಯೋಚಿಸದಿರಬಹುದು. ಅವುಗಳು ಪ್ರತಿಯೊಂದನ್ನೂ ಮನಸ್ಸಿನಲ್ಲಿ ಚಿತ್ರೀಕರಿಸಿಕೊಂಡು ಯೋಚಿಸುತ್ತವೆ. ಅವುಗಳ ಸ್ವಭಾವವು ತಮ್ಮ ತಾಯಂದಿರಿಂದ ಬಂದ ಬಳುವಳಿ. ಹುಲಿ, ಚಿರತೆ, ಸೀಳು ನಾಯಿಗಳು ಸಾಧಾರಣವಾಗಿ ನಾಲ್ಕುಕಾಲಿನಲ್ಲಿ ನಡೆಯುವ ಪ್ರಾಣಿಗಳು ಅಥವಾ ಮಂಗಗಳನ್ನು ಬೇಟೆಯಾಡುತ್ತವೆ. ಎರಡು ಕಾಲಿನಲ್ಲಿ ಎತ್ತರವಾಗಿ ನಿಲ್ಲುವ, ಬಣ್ಣ ಬಣ್ಣದ ಬಟ್ಟೆ ಹಾಕಿರುವ ಮನುಷ್ಯ ಕೂಡ ತಮಗೆ ಊಟವಾಗಬಲ್ಲ ಎಂದು ತಾಯಿ ಹೇಳಿಕೊಟ್ಟಿರುವುದಿಲ್ಲ. ಹಾಗಾಗಿ, ಈ ಪ್ರಾಣಿಗಳಿಗೆ ಮನುಷ್ಯನಲ್ಲಿ ಮಾಂಸವಿರುತ್ತದೆ ಎನ್ನುವ ಅರಿವೂ ಇರುವುದಿಲ್ಲ ಮತ್ತು ಮನುಷ್ಯನನ್ನು ಕಂಡರೆ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತವೆಯೇ ಹೊರತು, ಹೆದರಿಕೆಗಲ್ಲ. ಆದರೆ, ಒಂದು ಸಲ ಮನುಷ್ಯನಲ್ಲಿ ಮಾಂಸವಿದೆ ಮತ್ತು ಅವನನ್ನು ಹಿಡಿಯುವುದು ಸುಲಭ ಎನ್ನುವ ಸತ್ಯ ತಿಳಿದ ಈ ಪ್ರಾಣಿಗಳು, ನರಭಕ್ಷಕಗಳಾಗುವುದು ಖಚಿತ. ಇದೇ ತರಹದ ಎಡವಟ್ಟಾದಾಗ, ಕಡೂರಿನ ಸಮೀಪ ಎರಡು ಚಿರತೆಗಳು ಕೆಲವು ವರ್ಷಗಳ ಕೆಳಗೆ ನರಭಕ್ಷಕಗಳಾಗಿದ್ದವು. ಅವುಗಳನ್ನು ನಿಗ್ರಹಿಸಲು 14 ಚಿರತೆಗಳನ್ನು ಕೊಲ್ಲಲಾಗಿತ್ತು.

ಮೊದಲು ಕಾಡು ಮತ್ತು ನಾಡು ಎಂಬ ಎರಡೇ ಪ್ರವರ್ಗಗಳಿದ್ದವು. ಈಗ, ಅದು ವನ್ಯಜೀವಿ ಕಾಡು, ಮೀಸಲು ಅರಣ್ಯ, ಗ್ರಾಮ ಅರಣ್ಯ ಅಥವಾ ಇನ್ಯಾವುದೋ ಹೆಸರಿನ ಅರಣ್ಯಗಳಾಗಿ ಮಾರ್ಪಾಡಾಗಿವೆ.

ಆನೆಗಳೂ ಅಷ್ಟೆ…. ಮನುಷ್ಯರಿಂದ ದೂರವಿದ್ದು ತಮ್ಮ ಏಕಾಂತತೆಯನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತವೆಯೇ ಹೊರತು, ನಾವು ಮಾಡುವ ಗಲಭೆಗಳನ್ನು ಅವು ಇಷ್ಟಪಡುವುದಿಲ್ಲ. ಒಮ್ಮೆ ಮನುಷ್ಯರ ಮೇಲೆ ದ್ವೇಷ ಸಾಧಿಸಲು ಶುರು ಮಾಡಿದರೆ, ಅವುಗಳನ್ನು ನಿಗ್ರಹಿಸುವುದು ಕಷ್ಟ.

ಇತ್ತೀಚೆಗೆ ಊರಿಗೆ ಹೋದಾಗ, ಕೋಗಿಲೆ, ದೇವರ ಮನೆ ಕಡೆ ಇರುವ ಒಂದು ಆನೆಯ ಕಥೆಯನ್ನು ಯಾರೋ ಹೇಳಿದರು. ಒಂದು ದಿನ ಬೆಳಗ್ಗೆ ಬಸ್ಸಿಗೆ ಹೊರಟ ವಯಸ್ಸಾದವರೊಬ್ಬರು ಮನೆಗೆ ವಾಪಾಸು ಬರಲಿಲ್ಲ. ಮಾರನೇ ದಿನ ಎಲ್ಲರೂ ಅವರನ್ನು ಹುಡುಕಲು ಶುರು ಮಾಡಿದರು. ಬಸ್ ನಿಲ್ದಾಣದ ಸುತ್ತಮುತ್ತ ನೋಡುವಾಗ, ನಿಲ್ದಾಣದ ಹಿಂದೆ ಅವರ ಚಪ್ಪಲಿ ಕಂಡವೇ ಹೊರತು, ಅವರಲ್ಲ. ಬಹಳ ಹೊತ್ತು ಹುಡುಕಿದ ಮೇಲೆ, ಪಕ್ಕದ ಮರಳ ರಾಶಿಯಲ್ಲಿ ಒಂದು ಸಣ್ಣ ಬಟ್ಟೆ ತುಂಡು ಕಂಡಿತಂತೆ. ಆ ಬಟ್ಟೆಯನ್ನು ಎಳೆಯಲು ಹೋದವರಿಗೆ, ಮರಳಿನಲ್ಲಿ ಹೂತಿಟ್ಟ ಅವರ ಶವ ಸಿಕ್ಕಿದೆ. ಸುತ್ತಲೂ ಆನೆಯ ಹೆಜ್ಜೆ ಗುರುತು. ಆನೆಯು ಅವರನ್ನು ಕೊಂದು, ಮರಳಿನಲ್ಲಿ ಗುಂಡಿ ತೋಡಿ, ಹೂತಿಟ್ಟು ಹೋಗಿದೆ.

ಮನುಷ್ಯನನ್ನು ಕೊಂದ ಮೇಲೆ ಗುಂಡಿ ತೋಡಿ ಹೂತಿಟ್ಟ ಆನೆಯ ಈ ನಡವಳಿಕೆ ನನಗೆ ಆಶ್ಚರ್ಯವಾಯಿತು. ಆ ಆನೆಯ ಬಗ್ಗೆ ಸ್ವಲ್ಪ ವಿಚಾರಿಸಿದಾಗ, ಅದು ಆಗಲೇ ನಾಲ್ಕೈದು ಜನರನ್ನು ಕೊಂದಿದೆ ಎಂದು ಗೊತ್ತಾಯಿತು. ಅದು ಜನಗಳನ್ನು ಕೊಲ್ಲುವ ಮೊದಲು, ಹಾಗೇ ತೋಟಗಳಲ್ಲಿ ಓಡಾಡಿಕೊಂಡಿತ್ತಂತೆ. ಅದನ್ನು ಓಡಿಸಲು ಜನಗಳು ಅದರ ಕಾಲಿಗೆ ನಾಲ್ಕೈದು ಕಡೆ ಗುಂಡು ಹೊಡೆದಿದ್ದರಂತೆ. ಮತ್ತೆ, ಅದು ಓಡಾಡುವ ಜಾಗದಲ್ಲಿ ಕೆಸರು ಇದ್ದರೆ, ಹಲಗೆಗೆ ಮೊಳೆಗಳನ್ನು ಹೊಡೆದು ಇಡುತ್ತಿದ್ದರಂತೆ. ಅದರಿಂದಾಗಿ ಅದರ ಕಾಲಿಗೆ ಎಷ್ಟು ಗಾಯಗಳಾಗಿದ್ದವೆಂದರೆ, ಗುಡ್ಡ ಹತ್ತಿ ಇಳಿಯಲು ಸಹ ಕಷ್ಟ ಪಡುತ್ತಿತ್ತಂತೆ. ಅದಾದ ನಂತರ ಮನುಷ್ಯರನ್ನು ಕಂಡರೆ ಬಿಡುತ್ತಿರಲಿಲ್ಲವಂತೆ.

ಅದೇ ಪರಿಸರದಲ್ಲಿ ಗುತ್ತಿಯ ಹತ್ತಿರ ಇರುವ ನನ್ನ ಸಂಬಂಧಿ ನವೀನಣ್ಣನ ಮನೆಯ ಹತ್ತಿರ ದಿನಾ ರಾತ್ರಿ ಒಂದು ಆನೆ ಬಂದು ಇರುತ್ತದಂತೆ. ಇವರು ಯಾವತ್ತೂ ಪಟಾಕಿ ಹೊಡೆಯುವುದಾಗಲೀ, ಗುಂಡು ಹೊಡೆಯುವುದಾಗಲೀ ಮಾಡಿಲ್ಲ. ಹಲಸಿನ ಮರದ ಕೆಳಗೆ ನಿಂತು, ಬೆಳಗ್ಗೆ ಹೊರಟು ಹೋಗಿರುತ್ತದಂತೆ. ರಾತ್ರಿ ಇವರು ಮನೆಯ ಹೊರಗೆ ಓಡಾಡುತ್ತಿದ್ದರೂ ಏನೂ ತೊಂದರೆ ಮಾಡುವುದಿಲ್ಲವಂತೆ. ಇವರ ಮನೆಯ ನಾಯಿಗಳು ಸಹ, ಆ ಆನೆಗೆ ಹೊಂದಿಕೊಂಡಿವೆಯಂತೆ. ಇದೇ ತರಹದ ಇನ್ನೊಂದು ಆನೆ ಕೆಂಜಿಗೆ ಪ್ರದೀಪ್‌ ರವರ ಮನೆಯ ಹತ್ತಿರವೂ ಬರುತ್ತದಂತೆ.

ಈ ಪ್ರಾಣಿಗಳ ಮಾನಸಿಕ ಸ್ಥಿತಿ ಕಾಡಿನಿಂದ ಮಾನವ ವಸತಿ ಪ್ರದೇಶದಲ್ಲಿ ಮಾತ್ರ ಬದಲಾವಣೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ನನ್ನ ನಂಬಿಕೆ ಪ್ರಕಾರ, ಕರಡಿಯನ್ನು ಹೊರತು ಪಡಿಸಿ, ಅಭಯಾರಣ್ಯಗಳಲ್ಲಿನ ಪ್ರಾಣಿಗಳು ಮನುಷ್ಯರ ಸಹವಾಸಕ್ಕೆ ಬರುವುದಿಲ್ಲ. ಕಾಡಿನಲ್ಲಿ ಓಡಾಡುವಾಗ ಎಷ್ಟೋ ಸಲ ಆನೆಗಳ ಹಿಂಡಿನ ಪಕ್ಕದಲ್ಲಿ, ಮಧ್ಯದಲ್ಲಿ ಹಾದು ಹೋಗಿದ್ದೇವೆ.

ಎರಡು-ಮೂರು ವರ್ಷಗಳ ಕೆಳಗೆ ನಾಗರಹೊಳೆಗೆ ಹೋದಾಗ, ಬೆಳಗ್ಗೆ ಬೇಗ ಒಂದು ಸುತ್ತು ಹೋಗಲು ಯೋಚಿಸಿದೆ. ಬೆಳಗ್ಗೆ ಸುಮಾರು ಆರೂವರೆ ಘಂಟೆಗೆಲ್ಲ ಡ್ರೈವರ್ ದುರ್ಗೇಶ್ ಹಾಜರಾದ. ಅಲ್ಲಿನ ವಸತಿ ಗೃಹದಲ್ಲಿದ್ದ ಇನ್ನೊಬ್ಬ ಹುಡುಗ ಸಹ ನನ್ನ ಜೊತೆ ಬರುತ್ತೇನೆ ಎಂದಿದ್ದರಿಂದ, ನಾವು ಮೂರು ಜನ ಹೊರಟೆವು.

ಒಂದೆರಡು ಕಿಲೋಮೀಟರ್ ಹೋಗಿರಬಹುದು-ಎರಡೂ ಕಡೆ ಪೊದೆಗಳು ಬೆಳೆದು ಕಿರಿದಾಗಿದ್ದ ದಾರಿಯಲ್ಲಿ ದುರ್ಗೇಶ್ ಜೀಪು ನಿಲ್ಲಿಸಿದ. ಕ್ಯಾಮೆರಾ ಕಡೆ ನೋಡುತ್ತಿದ್ದ ನಾನು ಮುಂದಕ್ಕೆ ನೋಡಿದರೆ, ಸ್ವಲ್ಪ ದೂರದಲ್ಲಿ, ಮಂಜಿನ ನೆಡುವೆ ಆನೆ ನಿಂತಿದ್ದು ಅಸ್ಪಷ್ಟವಾಗಿ ಕಾಣುತ್ತಿತ್ತು. ನಮ್ಮನ್ನು ನೋಡುತ್ತಲೇ ಆನೆ ಜೀಪಿನ ಕಡೆಗೆ ಸೊಂಡಿಲೆತ್ತಿಕೊಂಡು ನುಗ್ಗಿತು. ಅದೇನೂ ವಿಶೇಷ ಅಂತ ಅನ್ನಿಸಲಿಲ್ಲ.

‘ಇನ್ನೂ ಎರಡಿವೆ,’ ಅಂತ ದುರ್ಗೇಶ್ ಮೆಲ್ಲನೆ ಉಸುರಿದಾಗ, ‘ಮರಿನೂ ಇರಬೇಕು ಅಂತ ಕಾಣುತ್ತೆ. ಅದಕ್ಕೆ ದೊಡ್ಡಮ್ಮ ಚಾರ್ಜ್ ಮಾಡ್ತಿದೆ. ನೋಡೋಣ,’ ಅಂತ ಹೇಳಿ ಸುಮ್ಮನೆ ಆನೆಯ ಫೋಟೋ ತೆಗೆದುಕೊಂಡೆ. ಜೀಪಿನ ಹತ್ತಿರದವರೆಗೆ ಬಂದ ಆನೆ ವಾಪಾಸ್ ಹೋಯಿತು.

ಅದು ವಾಪಾಸ್ ಗುಂಪಿನ ಹತ್ತಿರ ಹೋದ ತಕ್ಷಣ ಇನ್ನೊಂದು ಆನೆ ನಮ್ಮ ಕಡೆಗೆ ನುಗ್ಗಲು ಆರಂಭಿಸಿತು. ನಾನು ಗಲಿಬಿಲಿಗೊಂಡೆ. ಸಾಧಾರಣವಾಗಿ, ಒಂಟಿ ಸಲಗ ಮತ್ತು ಗುಂಪಿನ ದೊಡ್ಡಮ್ಮ ಬಿಟ್ಟರೆ, ಈ ಥರ ಚಾರ್ಜ್ ಮಾಡುವುದು ನಾನು ಕಂಡಿರಲಿಲ್ಲ. ಈ ಆನೆ ಕೂಡ ಜೀಪಿನ ಹತ್ತಿರ ಬಂದು, ವಾಪಾಸ್ ಹೋಯಿತು. ಇದು ವಾಪಾಸ್ ಹೋದ ತಕ್ಷಣ ಮೂರನೇ ಆನೆ ನುಗ್ಗಿದಾಗ ನಾನು ಸ್ವಲ್ಪ ಗಾಬರಿಯಾದೆ. ನನ್ನ ಪಾಡಿಗೆ ಒಂದೆರಡು ಫೋಟೋ ತೆಗೆದುಕೊಂಡು, ‘ಅಲ್ವೋ ದುರ್ಗೇಶ, ಕಾಡಲ್ಲಿ ಇರೋ ಜನಗಳೇನಾದ್ರೂ ಕಳ್ಳ ಭಟ್ಟಿ ಕಾಯಿಸ್ತಾರಾ? ಹುಚ್ಚುಹುಚ್ಚಾಗಿ ಆಡ್ತಿವೆಯಲ್ಲೋ ಈ ಆನೆಗಳು. ಕುಡಿದು ಬಂದಿವೆ ಅಂತ ಕಾಣುತ್ತೆ,’ ಅಂದೆ.

ಸರದಿಯ ಪ್ರಕಾರ ಆನೆಗಳು ಜೀಪಿನತ್ತ ನುಗ್ಗುವುದು ಮತ್ತು ವಾಪಾಸ್ ಹೋಗುವುದು ನಡೆದೇ ಇತ್ತು. ಇಷ್ಟು ಹೊತ್ತಿಗೆ ಮಂಜು ಸ್ವಲ್ಪ ಕಡಿಮೆಯಾಗಿ, ಇರುವುದು ಮೂರೇ ಆನೆ ಅಂತ ಗೊತ್ತಾಯಿತು. ದುರ್ಗೇಶ ಸಹನೆ ಕಳೆದುಕೊಳ್ಳಲು ಪ್ರಾರಂಭಿಸಿದ. ‘ಏನು, ಆಟ ಆಡ್ತಿದ್ದಾವಾ ಇವು? ಇವುಗಳ ಮಧ್ಯ ನುಗ್ಗಿಸಲಾ?’ ಅಂತ ಕೇಳಿದ.

‘ಎಷ್ಟು ದೂರ ರಸ್ತೆ ಚಿಕ್ಕದಾಗಿದೆ? ಅವುಗಳಿಗೆ ಬದಿಗೆ ಹೋಗಲು ಎಷ್ಟು ದೂರ ಹೋಗಬೇಕು?’ ಅಂತ ಕೇಳಿದೆ.

‘ಅರ್ಧ ಕಿಲೋಮೀಟರ್ ಹೀಗೇ ಇದೆ,’ ಅಂದ ದುರ್ಗೇಶ್.

‘ಬೇಡ… ವಾಪಾಸ್ ಹೋಗಿ ಕಾಯ್ತೊಳೆ ಹಳ್ಳದ ಹತ್ತಿರ ಹೋಗೋಣ. ವಾಪಾಸು ಬರೋ ಹೊತ್ತಿಗೆ ಇವು ಹೋಗಿರುತ್ತವೆ. ಇವು ಯಾಕೆ ಹೀಗೆ ಆಡ್ತಿದ್ದಾವೆ ಅಂತ ಅರ್ಥ ಆಗ್ತಿಲ್ಲ,” ಅಂದೆ. ಗೊಣಗುತ್ತಲೇ, ಅರೆ ಮನಸ್ಸಿನಿಂದ ದುರ್ಗೇಶ್ ಜೀಪನ್ನು ಹಿಂದಕ್ಕೆ ತೆಗೆದ.

ಆನೆಗಳ ಈ ನಡವಳಿಕೆ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಮಾರನೇ ದಿನ ಮಧ್ಯಾಹ್ನ, ಚಿಣ್ಣಪ್ಪನವರ ಮನೆಗೆ ಊಟಕ್ಕೆ ಹೋದಾಗ ನಡೆದುದನ್ನು ಹೇಳಿದೆ. ‘ಏನೋಪ್ಪಾ… ಗೊತ್ತಾಗ್ತಾ ಇಲ್ಲ. ಅವುಗಳ ಫೋಟೋ ಇದೆಯಾ?’ ಅಂತ ಕೇಳಿದರು. ಕಾರಿನಲ್ಲಿದ್ದ ಕ್ಯಾಮೆರಾ ತಂದು ಫೋಟೋ ತೋರಿಸಿದೆ. ಸ್ವಲ್ಪ ದೊಡ್ಡದು ಮಾಡಿ ನೋಡಿದವರೇ, ‘ನುಗ್ಗಿಸಬೇಕಿತ್ತು ಜೀಪನ್ನ… ನಿಮ್ಮನ್ನೆಲ್ಲ ಚಟ್ನಿ ಮಾಡುತ್ತಿದ್ದವು. ಕಿವಿ ನೋಡಿ, ಗುಂಡು ಹೊಡೆದ ತೂತುಗಳು. ಇವು ಕಾಡಿನಿಂದ ಹೊರಗೆ ಹೋಗಿ ಬಂದಿವೆ. ಅಲ್ಲಿ ಇವುಗಳಿಗೆ ಯಾರೋ ಗುಂಡು ಹೊಡೆದಿದ್ದಾರೆ. ಇವುಗಳಿಗೆ ಈಗ ಮನುಷ್ಯರನ್ನು ಕಂಡರೆ ಹೆದರಿಕೆ ಇಲ್ಲ. ಹಾಗಾಗಿ ನಿಮ್ಮ ಕಡೆ ನುಗ್ಗಿವೆ, ಅಷ್ಟೆ,’ ಅಂದರು.

ನಾನು ಮರಗಟ್ಟಿ ಹೋದೆ. ಇಪ್ಪತ್ತು ವರ್ಷಗಳಿಗೂ ಮಿಕ್ಕಿ ಆನೆಗಳ ಸ್ವಭಾವದ ಬಗ್ಗೆ ಕಲಿಯುತ್ತಿದ್ದವನು ಯಾಮಾರಿದ್ದೆ. ಮನುಷ್ಯ ಒತ್ತಡದಲ್ಲಿ ಹೇಗೆ ಬದಲಾಗುತ್ತಾನೋ, ಕಾಡಿನಲ್ಲಿದ್ದ ಆನೆಗಳ ಸ್ವಭಾವವೂ ಹಾಗೇ ಬದಲಾಗುತ್ತಿದೆ. ಇಪ್ಪತ್ತೈದು ವರ್ಷಗಳ ಕೆಳಗೆ ಮೋಟಾರ್ ಸೈಕಲ್‌ ನಲ್ಲಿ ಹೋಗುವಾಗ ಅಟ್ಟಿಸಿಕೊಂಡು ಬರದಿದ್ದ ಆನೆಗಳು, ಈಗ ಜೀಪನ್ನೂ ಬಿಡದೆ ಏಕೆ ದಾಳಿ ಮಾಡುತ್ತಿವೆ ಎನ್ನುವುದು ಸ್ವಲ್ಪ ಮಟ್ಟಿಗೆ ಅರ್ಥವಾಯಿತು.

ಈ ಬದಲಾವಣೆ ಆನೆಯೊಂದಕ್ಕೆ ಮೀಸಲಾಗಿಲ್ಲ. ಈ ಬದಲಾವಣೆ ಹುಲಿ, ಚಿರತೆಗಳಲ್ಲೂ ಕಂಡಿದ್ದೇನೆ. ಈಗಿನಂತೆ, ಮುಂಚೆ ಕಾಡುಗಳಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಿತ್ತು. ಕೆಲವು ಸಲ, ಬೆಳಗ್ಗೆ ತಿಂಡಿ ತಿಂದ ಮೇಲೆ, ಸಂಜೆಯವರೆಗೆ ಟವರ್‌ ಗಳಲ್ಲಿ ಕೂರುವುದು ನಮ್ಮ ಅಭ್ಯಾಸವಾಗಿತ್ತು. ನಮ್ಮನ್ನು ಟವರ್‌ ಗೆ ಬಿಟ್ಟು, ಸಾಯಂಕಾಲದ ಹೊತ್ತು ಬಂದು ಕರೆದುಕೊಂಡು ಹೋಗುತ್ತಿದ್ದರು.

ಅದೊಂದು ದಿನ ಟವರ್‌ ನಲ್ಲಿ ವಿಪರೀತ ಮೌನವಿತ್ತು. ಕಾಡೇ ನಿಶಬ್ದವಾಗಿ, ಜಿಂಕೆ, ಕೋತಿ ಸಹ ಕಾಣಲಿಲ್ಲ. ನನಗಂತೂ ಬೋರಾಗಿ, ಒಂದೆರಡು ಸಲ ಟವರ್‌ ನಿಂದ ಕೆಳಕ್ಕೆ ಇಳಿದು ಮತ್ತೆ ಮೇಲಕ್ಕೆ ಹತ್ತಿದೆ. ಐದೂವರೆ ಸುಮಾರಿಗೆ ಡ್ರೈವರ್ ಕುಶಾಲಪ್ಪ ನನ್ನನ್ನು ಕರೆದುಕೊಂಡು ಹೋಗಲು ಬಂದರು. ಕ್ಯಾಮೆರಾ ಬ್ಯಾಗ್ ಹೆಗಲಿಗೆ ಹಾಕಿಕೊಂಡು, ಎರಡು ಮೆಟ್ಟಿಲು ಇಳಿದಿದ್ದೆನಷ್ಟೆ… ಇಡೀ ಕಾಡೇ ನಡುಗುವಂತೆ ‘ವ್ಯಾಂ…ವ್’ ಅನ್ನೋ ಘರ್ಜನೆ ಕೇಳಿ ಬಂತು. ನಾನು ನಿಂತಲ್ಲೇ ಮರಗಟ್ಟಿ ಹೋದೆ. ಜೀಪಿನಿಂದ ಒಂದು ಕಾಲು ಹೊರಗಿಟ್ಟಿದ್ದ ಕುಶಾಲಪ್ಪ ಕೂಡ ಹಾಗೇ ಸ್ತಬ್ದವಾದರು. ಸುಮಾರು ಒಂದು ನಿಮಿಷದವರೆಗೆ ಆ ಘರ್ಜನೆ ವ್ಯಾಪಿಸಿದ್ದು, ಅದು ಮುಗಿದ ನಂತರ ಎರಡು ಸಲ ಸಣ್ಣಗೆ ಗುರುಗುಟ್ಟಿದ ಸದ್ದೂ ಕೇಳಿಸಿತು.

ಅಷ್ಟು ಹೊತ್ತಿಗಾಗಲೇ ಅದು ಹುಲಿಯ ಘರ್ಜನೆ ಮತ್ತು ಸದ್ದು ಬಂದದ್ದು ಟವರ್ ನಿಂದ ಮೂವತ್ತರಿಂದ, ಐವತ್ತು ಮೀಟರ್ ಒಳಗೆ ಎನ್ನುವುದು ಗೊತ್ತಾಗಿತ್ತು. ನನಗೆ ನೆನಪಿದ್ದಂತೆ, ನನ್ನ ಕೈ ರೋಮಗಳೆಲ್ಲ ನಿಮಿರಿ ನಿಂತು, ಅಂಗೈ ಸಹ ಬೆವರಿತ್ತು. ಆಗ ಅರ್ಥವಾಯಿತು… ಕಾಡು ಇಡೀ ದಿನ ಇಷ್ಟು ನಿಶಬ್ದವಾಗಿ ಏಕಿತ್ತು? ಅಂತ. ಹುಲಿ ಊಟ ಮುಗಿಸಿ ಮಲಗಿತ್ತು ಅಷ್ಟೆ. ಸಾಧಾರಣವಾಗಿ, ಇಳಿ ಮಧ್ಯಾಹ್ನದ ಹೊತ್ತಿಗೆ ಹುಲಿ ನೀರು ಕುಡಿಯಲು ಹೋಗುತ್ತವೆ. ನಾನಿದ್ದದ್ದು ನೋಡಿದ್ದರಿಂದ ಹುಲಿ ಹೊರಕ್ಕೆ ಬಂದಿರಲಿಲ್ಲ ಅಷ್ಟೆ. ಹುಲಿ ಅಷ್ಟೊಂದು ಸಂಕೋಚದ ಸ್ವಭಾವದ್ದು. ಜೀಪಿನ ಸದ್ದಿಗೂ ಕಾಡಿನೊಳಗೆ ನುಸುಳುವ ಇವು, ನಾವು ಹೋಗುವ ತನಕ ಅದು ಹೊರಗೆ ಬರುವುದಿಲ್ಲ ಅಂತ ಟವರ್ ನಿಂದ ಇಳಿದು ಜೀಪಿಗೆ ಹೋದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಕಬಿನಿಗೆ ಹೋದಾಗ ನನ್ನ ನಂಬಿಕೆ ಪೂರ್ತಿ ಸುಳ್ಳಾಯಿತು. ಒಂದು ಹುಲಿ ಅಥವಾ ಚಿರತೆ ಕಂಡ ತಕ್ಷಣ, ಪ್ರವಾಸಿಗರನ್ನು ಹೊತ್ತ ಜೀಪುಗಳು ರ‍್ಯಾಲಿ(rally)ಯಲ್ಲಿ ಭಾಗವಹಿಸುವಂತೆ ಆ ಜಾಗ ತಲುಪುತ್ತವೆ. ಕ್ಯಾಮೆರಾಗಳಿಗೆ ಸಹಾಯವಾಗಲು ಜೀಪುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತದೆ. ಹುಲಿ ಅಥವಾ ಚಿರತೆ ಹೊರಗೆ ಬಂದ ತಕ್ಷಣ ಕ್ಯಾಮೆರಾಗಳಿಂದ ಕ್ಲಿಕ್ಕಿಸುವ ಶಬ್ದಕ್ಕೆ ನಾನಂತೂ ಗಾಬರಿಯಾಗಿ ಹೋದೆ. ಆದರೆ, ಹುಲಿ-ಚಿರತೆಗಳು ಅವಕ್ಕೆ ಹೊಂದಿಕೊಂಡಿವೆ ಮತ್ತು ಸಾವಧಾನವಾಗಿ ಪೋಸ್ ಕೊಟ್ಟು ಹೋಗುತ್ತವೆ. ಅಲ್ಲಿಗೆ, ಹೊಸ ಪೀಳಿಗೆಯ ಹುಲಿಗಳಿಗೆ ಮನುಷ್ಯರ ಹೆದರಿಕೆ ಇಲ್ಲ. ಕಬಿನಿಯ ಸುತ್ತಮುತ್ತಲಿನ ಹಳ್ಳಿಗಳಿಗೆ ಹುಲಿಗಳು ಇತ್ತೀಚೆಗೆ ಏಕೆ ಬರುತ್ತಿವೆ ಎಂದರೆ, ಈ ಫೋಟೋಗ್ರಫಿಯ ಹುಚ್ಚಿನಲ್ಲಿ ಅವುಗಳಿಗೆ ಮನುಷ್ಯರು ಅಭ್ಯಾಸವಾಗಿ ಹೋಗಿದ್ದಾರೆ.

ಇದನ್ನು ಕಾಡಂಚಿಗೆ ಬರುವ ಹುಲಿ, ಚಿರತೆಗಳಲ್ಲಿ ನಾನು ಗಮನಿಸಿದ್ದೇನೆ. ಭದ್ರಾ ಕಾಡಿನಂಚಿನಲ್ಲಿರುವ ಕೃಷ್ಣಗಿರಿ ಎಸ್ಟೇಟ್ ಹತ್ತಿರ ಮರಿ ಹಾಕಿದ ಹುಲಿಯೊಂದು, ಒಂದು ಬೆಳೆದ ಮರಿಯನ್ನು ಅಲ್ಲೇ ಬಿಟ್ಟು ಹೋಗಿತ್ತು. ಸರಿಯಾಗಿ ಬೇಟೆಯಾಡಲು ಬರದ ಆ ಮರಿ, ಕಂಡ ಕಂಡ ಕಾರು, ಜೀಪುಗಳ ಹಿಂದೆ ಓಡುತ್ತಿತ್ತು. ಒಮ್ಮೆ ಒಂದು ಹೆಂಗಸನ್ನು ಕೊಂದು ಹಾಕಿದರೂ, ತಿನ್ನಲು ಗೊತ್ತಿಲ್ಲದೆ ಸುಮ್ಮನಾಯಿತು. ಅದನ್ನು ಹಿಡಿದ ಅರಣ್ಯ ಇಲಾಖೆಯವರು, ಬೆಳಗಾವಿಯ ಹತ್ತಿರದ ಖಾನಾಪುರದ ಕಾಡಿನಲ್ಲಿ ಬಿಟ್ಟರು. ಇನ್ನೂ ಗಲಿಬಿಲಿಗೊಂಡ ಆ ಹುಲಿ, ಮನುಷ್ಯರ ವಸಾಹತುಗಳ ಸಮೀಪವೇ ಓಡಾಡುತ್ತಾ, ಇನ್ನೊಂದು ಹೆಂಗಸನ್ನು ಕೊಂದಿತು. ಆಗ, ಆ ಹುಲಿಗೇ ಗುಂಡಿಟ್ಟು ಕೊಲ್ಲಲಾಯಿತು.

ಸಮಸ್ಯೆ ಇಷ್ಟೆ. ನಮ್ಮ ಜನಸಂಖ್ಯೆ ಬೆಳೆದಂತೆ, ನಾವು ಕಾಡು ಮತ್ತು ಪ್ರಾಣಿಗಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಆ ಒತ್ತಡಗಳು ಪ್ರಾಣಿಗಳ ಮೇಲೆ ಬೀರುತ್ತಿರುವ ಮಾನಸಿಕ ಪರಿಣಾಮವನ್ನು ಯಾರೂ ಗಮನಿಸುತ್ತಿಲ್ಲ. ವನ್ಯಜೀವಿಗಳು ಪ್ರವಾಸೋದ್ಯಮದ ಆಸ್ತಿಯಂತೆ ಪರಿಗಣಿಸಲಾಗುತ್ತಿದೆಯೇ ಹೊರತು, ಅವುಗಳ ಏಕಾಂತವನ್ನು ಗೌರವಿಸುತ್ತಿಲ್ಲ. ಅವುಗಳ ಫೋಟೋ ತೆಗೆದು ಪ್ರದರ್ಶನಕ್ಕಿಡುವುದು ಒಂಥರಾ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಪ್ರವಾಸೋದ್ಯಮ ಇಲಾಖೆಗೆ ಪ್ರವೇಶ ನೀಡದ ಕಾಡುಗಳಲ್ಲಿ ಪ್ರಾಣಿಗಳ ನಡವಳಿಕೆ ಹಾಗೇ ಇದೆ ಎಂದುಕೊಂಡಿದ್ದೆ. ಕೆಲವು ವರ್ಷಗಳಿಂದೀಚೆಗೆ ಹುಲಿ ಸಂರಕ್ಷಣಾ ತಾಣಗಳಿಗೆ ಕೇಂದ್ರ ಅನುದಾನ ನೀಡಲು ಶುರು ಮಾಡಿದ ತಕ್ಷಣ, ಅದನ್ನು ಖರ್ಚು ಮಾಡಲೆಂದೇ ಜೆಸಿಬಿ ಕಾಡಿಗೆ ನುಗ್ಗಿಸಿ, ರಸ್ತೆಗಳನ್ನು ಮಾಡಲು ಶುರು ಮಾಡಿದರು. ಈಗ ಅಲ್ಲಿನ ಪ್ರಾಣಿಗಳೂ ಸಹ ಮನುಷ್ಯರ ಈ ಗಲಭೆಗಳಿಗೆ ಒಗ್ಗಿ ಹೋಗಿವೆ.

ಇತ್ತೀಚಿನ ದಿನಗಳಲ್ಲಿ ವನ್ಯಜೀವಿ ತಜ್ಞರ ಸಂಖ್ಯೆ ಹೆಚ್ಚಾಗುತ್ತಿದೆ. ನಾಲ್ಕೈದು ಸಲ ಕಾಡಿಗೆ ಹೋದವರು ಅಥವಾ ಹುಲಿಯ ಫೋಟೋ ತೆಗೆದವರು ವನ್ಯಜೀವಿ ವಿಜ್ಞಾನಿಗಳಿಗಿಂತ ಜ್ಞಾನಿಗಳಾಗುತ್ತಾರೆ. ಕೆಲವರು ಆನೆ, ಹುಲಿ, ಚಿರತೆಯಂತ ಪ್ರಾಣಿಗಳ ಬಗ್ಗೆ ಮಾತನಾಡುವಾಗ ಎಷ್ಟೋ ಸಲ ಗಲಿಬಿಲಿಗೊಂಡಿದ್ದೇನೆ. ಬೆಂಗಳೂರಿನಲ್ಲಿ ಕುಳಿತು, ಟಿವಿಯಲ್ಲಿ ಚರ್ಚೆ ಮಾಡುವುದಕ್ಕೂ, ಕಾಡಿಗಿಳಿದು ಸಮಸ್ಯೆ ಅರ್ಥ ಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅರಣ್ಯ ಇಲಾಖೆಯವರಂತೂ, ಅವರ ವ್ಯಾಪ್ತಿಯಲ್ಲಿ ಎಷ್ಟು ಹುಲಿಗಳಿವೆ ಎನ್ನುವ ಸಂಖ್ಯೆ ಪತ್ತೆ ಹಚ್ಚುವುದು ಮಾತ್ರ ಅವರ ಕೆಲಸ ಎಂದು ತಿಳಿದಿದ್ದಾರೆ.

ಒಂದಂತೂ ನಿಜ… ನಾವು ಕಾಡಿನ ಸಮಸ್ಯೆಯನ್ನು ತುಂಡು ತುಂಡಾಗಿ, ನಮ್ಮ ಅನುಕೂಲಕ್ಕನುಗುಣವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಪ್ರತೀ ಜೀವಿಯೂ ಜೀವಜಾಲದ ಒಂದು ಕೊಂಡಿ ಮತ್ತು ಪರಸ್ಪರ ಅವಲಂಬಿತವಾಗಿರುತ್ತವೆ. ಆ ಅವಲಂಬಿತತೆಯಲ್ಲಿ ಪರಸ್ಪರ ಅಂತರವೂ ಇರುತ್ತದೆ. ವಿವೇಚನೆಯಿಲ್ಲದೆ ಕಾಡು ಪ್ರಾಣಿಗಳನ್ನು ನಾವು ವಿನಾಕಾರಣ ಹತ್ತಿರ ಮಾಡಿಕೊಳ್ಳುತ್ತಿರುವುದಂತೂ ಸತ್ಯ. ನಮ್ಮಿಂದಾದ ಅನಾಹುತಕ್ಕೆ ಕಾಡು ಪ್ರಾಣಿಗಳನ್ನು ದೂರುತ್ತಿರುವುದೂ ಅಷ್ಟೇ ಸತ್ಯ. ಒಂದೆಡೆ ಕಾಡು ನಶಿಸುತ್ತಿದ್ದಂತೆ, ಪ್ರಾಣಿಗಳು ಊಟ ಹುಡುಕುತ್ತಾ ನಾಡಿಗೆ ಬರುತ್ತಿವೆ.

ನಾಡಿನಲ್ಲೂ ಅಷ್ಟೆ. ಮೊದಲಿನ ಕೃಷಿ ಮತ್ತು ಪರಿಸರ ಸಮತೋಲನ ಕಳೆದು ಹೋಗಿ ಬಹಳ ಸಮಯವಾಗಿದೆ. ನಮಗೆ ಕಣ್ಣು ಬಿಟ್ಟು ನೋಡುವ ವ್ಯವಧಾನವಿಲ್ಲ. ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನತ್ತಿ, ಪ್ರತಿ ವಿಷಯಗಳನ್ನೂ ಸಂಖ್ಯಾಶಾಸ್ತ್ರದ ಬಲದಿಂದ ಅಳೆಯುತ್ತಿರುವ ನಾವು, ಕೃಷಿ ವಿಧಾನ ಬದಲಾಯಿಸುವ ಹೆಸರಿನಲ್ಲಿ ಮುಂದಿನ ಪೀಳಿಗೆಗೆ ಮರಣ ಶಾಸನ ಬರೆಯುತ್ತಿದ್ದೇವೆ ಅನ್ನಿಸುತ್ತದೆ.

ಅದರಲ್ಲೂ, ಮಲೆನಾಡಿನಲ್ಲಿ ಭತ್ತ ಬೆಳೆಯುತ್ತಿದ್ದ ನಮ್ಮ ಪದ್ಧತಿಯೂ ಪರಿಸರದ ಮೇಲೆ ಮನುಷ್ಯನ ಒಂದು ದೌರ್ಜನ್ಯ ಎಂದು ಹೇಳಬಹುದು. ಆದರೆ, ಸಾವಿರಾರು ವರ್ಷ ನಾವು ಪರಿಸರಕ್ಕೆ ಸ್ವಲ್ಪ ಪೂರಕವಾಗಿ ಬೆಳೆಯುತ್ತಿದ್ದೆವು. ಆದರೆ, ಇಪ್ಪತ್ತು ವರ್ಷಗಳಿಂದೀಚೆ ಮಾಡುತ್ತಿರುವ ಅನಾಹುತ ನೋಡಿದರೆ, ಮುಂದಿನ ಪೀಳಿಗೆಗೆ ನಾವು ಉಳಿಸಿ ಹೋಗುವುದು ಒಂದು ವಿಷಪೂರಿತ ಜಗತ್ತು ಎನ್ನುವುದರಲ್ಲಿ ಅನುಮಾನವಿಲ್ಲ.

 

(ಕೃತಿ: ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು, ಲೇಖಕರು: ಮಾಕೋನಹಳ್ಳಿ ವಿನಯ್‌ ಮಾಧವ್, ಪ್ರಕಾಶಕರು: ಸಾವಣ್ಣ ಪ್ರಕಾಶನ, ಬೆಲೆ: 200/-)