ಆ ವರ್ಷ ಅವನು, ತಾನು ಬಿತ್ತುತ್ತಿರುವ ಉತ್ಕೃಷ್ಟ ಜಾತಿಯ ಜೋಳದ ಕಾಳುಗಳನ್ನು ತನ್ನ ಅಕ್ಕ ಪಕ್ಕದ ಹೊಲಗಳ ರೈತರಿಗೂ ಹಂಚಿದನಂತೆ. ಆ ವರ್ಷ ಅವನ ಹೊಲದಲ್ಲಿ ಬಂಪರ್ ಬೆಳೆ ಅದೂ ಎಲ್ಲ ಸಮೃದ್ಧ ಕಾಳು. ಇಷ್ಟು ವರ್ಷ ವ್ಯಯಿಸಿದ ಹಣದ ಜೊತೆಗೆ ಪುಕ್ಕಟೆಯಾಗಿ ಹಂಚಿದ ಕಾಳಿನ ಹಣವೂ ಹುಟ್ಟಿತಂತೆ. ಅಷ್ಟೇ ಅಲ್ಲ, ಅವನ ಆ ಸುತ್ತಲಿನ ಹೊಲಗಳಲ್ಲೂ ಅದೇ ರೀತಿಯ ಬೆಳೆ. ಅವರಿಗೂ ಸಮೃದ್ಧ ಫಸಲು! ಜೋಳ ಬೆಳೆಯುವುದು ಒಂದು ಹೊಲದಲ್ಲಾದರೂ, ಪರಾಗಸ್ಪರ್ಶ ನಡೆಸುವ ಹಕ್ಕಿ, ದುಂಬಿ ಪಾತರಗಿತ್ತಿಗಳಿಗೇನು ಗಡಿಯ ಹಂಗೆ? ಹಾಗೆಯೇ ಅಲ್ಲವೇ, ನಮ್ಮ ಸುತ್ತಲಿನ ಪರಿಸರ ಕಳಪೆಯಾಗಿದ್ದಲ್ಲಿ ನಮ್ಮ ಬೆಳವಣಿಗೆಯೂ ಕಳಪೆಯೇ.
ವೈಶಾಲಿ ಹೆಗಡೆ ಅಂಕಣ

ಅಮೇರಿಕ ಮತ್ತೆ ನಿಧಾನಕ್ಕೆ ಸಜ್ಜಾಗುತ್ತಿದೆ ಮುಂದಿನ ಅಧ್ಯಕ್ಷೀಯ ಚುನಾವಣೆಗೆ. ಡೆಮೋಕ್ರಾಟ್ ಪಕ್ಷದಿಂದ ಹಲವಾರು ಪ್ರತಿನಿಧಿಗಳು ಪ್ರಥಮ ಸುತ್ತಿನ ಚುನಾವಣೆಗೆ ಕಣಕ್ಕಿಳಿದಿದ್ದಾರೆ. ಟ್ರಂಪ್ ಕ್ಯಾಂಪು ಮತ್ತೆ ಜನರನ್ನು ವಿವಾದಾತ್ಮಕ ಇಮಿಗ್ರೇಶನ್ ನೀತಿಯೆಡೆಗೆ ವಾಲಿಸಲು ಯತ್ನಿಸುತ್ತಿದೆ. ಕಳೆದ ವರ್ಷಗಳೆಲ್ಲ ಸದಾ ಸುದ್ದಿಯಲ್ಲಿರುವ ಮೆಕ್ಸಿಕೋ ಗಡಿ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ. ಅಲ್ಲೆಲ್ಲೊ ವಲಸಿಗರನ್ನು ಹೊರದಬ್ಬಲಾಗುತ್ತಿದೆಯೆಂದುಕೊಂಡರೆ, ಇಲ್ಲೆಲ್ಲೋ… ಹತ್ತಾರು ವರ್ಷಗಳಿಂದ ನೆಲೆಸಿದ್ದ ಭಾರತೀಯರೇ ಗ್ರೀನ್ ಕಾರ್ಡ್ ಆಗದೆ ನೆಲಬಿಟ್ಟರೆಂದು ಕೇಳಿಬರುತ್ತಿದೆ. ವಲಸೆ ನೀತಿ ಬಿಗಿಯಾಗುತ್ತಿದೆ. ಈ ಎಲ್ಲ ವಲಸಿಗರ ಗದ್ದಲದಲ್ಲಿ ನನಗೆ ನಮ್ಮನೆ ಸ್ವಚ್ಛಗೊಳಿಸಲು ಹದಿನೈದು ದಿವಸಕ್ಕೊಮ್ಮೆ ಬರುತ್ತಿದ್ದ ಮಾರ್ಲಿ ನೆನಪಾಗುತ್ತಾಳೆ. ಲಾನ್ ಮೌಇಂಗಿಗೆ ಬರುವ ಡಿಯಾಗೋ ನೆನಪಾಗುತ್ತಾನೆ. ಅವರೇ ಯಾಕೆ ಅಮೇರಿಕಾದ ನ್ಯಾಷನಲ್ ಪಾರ್ಕಿನ ತುಂಬೆಲ್ಲ ತುಂಬಿಕೊಂಡಿರುವ ಬರೀ ಆರು ತಿಂಗಳಿಗಷ್ಟೇ ಇಲ್ಲಿಗೆಂದು ಬಂದು ದುಡಿದು ಹೋಗುವ ಘಾನಾ, ಸ್ಪೇನ್, ವಿಯೆಟ್ನಾಮ್, ತೈವಾನ್, ಇತ್ಯಾದಿ ಜಗತ್ತಿನಾದ್ಯಂತದ ವಿದ್ಯಾರ್ಥಿಗಳು, ಕಾಲೇಜು ಹುಡುಗರು ನೆನಪಾಗುತ್ತಾರೆ.

ಬ್ರೆಜಿಲ್ ದೇಶದ ಮಾರ್ಲಿ ಇಲ್ಲಿ ವಿಸಿಟರ್ ವೀಸಾದ ಮೇಲೆ ತನ್ನ ಬಾಯ್ ಫ್ರೆಂಡಿನ ಜೊತೆ ಬಂದವಳು ವೀಸಾ ಮುಗಿದ ಮೇಲೆ ಇಲ್ಲಿಯೇ ಇದ್ದುಬಿಟ್ಟಳು. ಅವಳೇನೂ ಮೆಕ್ಸಿಕೋ ಗಡಿ ನುಗ್ಗಿ ಬಂದವಳಲ್ಲ. ವಿಮಾನದಲ್ಲಿ ಬಂದಿಳಿದವಳು. ಅವಳು ಹೇಗಾದರೂ ಇಲ್ಲಿಯೇ ಇರುವ ಹುನ್ನಾರದಲ್ಲಿಯೇ ಬಂದವಳು. ಯಾಕೆಂದರೆ ಅವಳ ಮಗ ಆಗ ಹೈಸ್ಕೂಲಿನಲ್ಲಿದ್ದ. ಮೆಡಿಕಲ್ ಓದುವ ಅದಮ್ಯ ಬಯಕೆ ಅವನದ್ದು. ಈಕೆ ಇಲ್ಲಿ ಮನೆಗೆಲಸ ಮಾಡಿ, ಅವನಿಗೆ ದುಡ್ಡು ಕಳಿಸುತ್ತಿದ್ದಳು. ಹತ್ತು ವರ್ಷಗಳಿಂದ ಇಲ್ಲಿಯೇ ಇರುವ ಮಾರ್ಲಿ, ಒಮ್ಮೆಯೂ ಅವನನ್ನು ನೋಡಿಲ್ಲ. ಅವನೀಗ ಬ್ರೆಜಿಲ್ ನಲ್ಲಿ ಮೆಡಿಕಲ್ ಮುಗಿಸುತ್ತಿದ್ದಾನೆ. ಮುಂದೊಂದು ದಿನ ಅವನು ಇಲ್ಲಿಗೆ ಬರಬಹುದು ಅಮ್ಮನನ್ನು ನೋಡಬಹುದು ಎಂಬ ಆಸೆ ಅವಳದ್ದು.

ಅಮೇರಿಕದ ಪ್ರಸ್ತುತ ವಲಸೆ ನೀತಿ ತಮ್ಮ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವುದೇನೆಂದರೆ ಇಲ್ಲಿ ಪ್ರತಿಭೆ, ಕೌಶಲ್ಯಕ್ಕೆ ಮಾತ್ರ ಬೆಲೆ. ನಿಮ್ಮಲ್ಲಿ ಒಂದು ನಿಶ್ಚಿತ ಪ್ರಕಾರದ ಕೌಶಲ್ಯವಿದ್ದಲ್ಲಿ ಮಾತ್ರ ಅಮೆರಿಕಾ ನಿಮಗೆ ಕೆಲಸ ಕೊಡುತ್ತದೆ ಎಂದು. ಅಂದರೆ ನಿಮಗೆ ಕ್ಲೀನರ್, ವೇಟರ್, ಜಾನಿಟರ್ ಇತ್ಯಾದಿ ಕೆಲಸಗಳಿಗೆಲ್ಲ ವೀಸಾ ಕೊಡುವುದಿಲ್ಲ ಎಂದು. ನಿಜ ಹೇಳುತ್ತೇನೆ, ಇದೇನು ರೇಸಿಸಂ ಮಾತಲ್ಲ, ಆದರೆ ಇಷ್ಟು ವರ್ಷಗಳ ಅಮೆರಿಕಾ ವಾಸದಲ್ಲಿ ಮೆನೆಕೆಲಸಕ್ಕಾಗಲೀ, ಆಫೀಸು ಕಟ್ಟಡಗಳಲ್ಲಾಗಲೀ, ಹೋಟೆಲು, ರೆಸಾರ್ಟುಗಳಲ್ಲಾಗಲೀ, ಒಬ್ಬಾನೊಬ್ಬ ಬಿಳಿಯ ಜಾನಿಟರ್ ಒಬ್ಬ/ಳನ್ನು ನಾನು ಇದುವರೆಗೂ ನೋಡಿಲ್ಲ. ಕೆಲಸಕ್ಕೆ ಜನ ಬೇಕು, ಹಲವರಿಗೆ ಇಂಥ ಕೆಲಸವೆಲ್ಲ ಮಾಡುವುದಕ್ಕೆ ಮನಸ್ಸಿಲ್ಲ. ಹಾಗೆಂದು ಇಲ್ಲಿನ ವಲಸೆ ನೀತಿಯಲ್ಲಿ ಇಂಥ ಕೆಲಸಗಳಿಗೊಂದು ಸೂಕ್ತ ವಿಭಾಗವೂ ಇಲ್ಲ. ಅಂದ ಮೇಲೆ ಇವರನ್ನೆಲ್ಲ ಒಳಗೆ ಬಿಟ್ಟುಕೊಳ್ಳುವ, ಕಂಡೂ ಕಾಣದಂತೆ ಮುಖ ತಿರುಗಿಸುವ ಒಂದು ವ್ಯವಸ್ಥೆಯೇ ಇದೆ. ಮೇಲಿಂದ ಪ್ರತಿರೋಧಿಸುವ ನಾಟಕ ಬೇರೆ. ಅದು ಹೋಗಲಿ, ಅಮೆರಿಕಾದ ಪ್ರತಿಷ್ಠಿತ ನ್ಯಾಷನಲ್ ಪಾರ್ಕ್ ವ್ಯವಸ್ಥೆ ಎಂದರೆ ಅದೊಂದು ಅದ್ಭುತ. ಇಲ್ಲಿನ ಪರಿಸರ ಸಂಪತ್ತಿನ ಒಂದೊಂದು ಪ್ರದೇಶವನ್ನೂ ನಿಷ್ಠೆಯಿಂದ ಕಾಯ್ದುಕೊಂಡು ಬಂದ ವ್ಯವಸ್ಥೆಯಿದು. ದುರ್ಗಮ ಪ್ರದೇಶಗಳ ಬಹುತೇಕ ಪಾರ್ಕುಗಳು ತೆರೆದಿರುವುದು ಸುಮಾರು ಮೇ ತಿಂಗಳಿನಿಂದ ಅಕ್ಟೊಬರ್ ವರೆಗೆ.

ಇಲ್ಲಿ ಕೆಲಸಕ್ಕೆಂದು ಹಲವು ಅಮೆರಿಕಾ ರಾಜ್ಯಗಳ ವಿದ್ಯಾರ್ಥಿಗಳು ಬಂದರೂ ಪಾರ್ಕ್ ಒಳಗಿನ ಪ್ರತಿಯೊಂದು ಕೆಲಸಕ್ಕೆ ಜನ ಸಾಲದು. ಅಮೆರಿಕಾದ ವೆಲ್ಫೇರ್ ದುಡ್ಡಿನ ಮೇಲೆ ಬದುಕುವ ಹಲವರಿಗೆ ಯಾವ ಕೆಲಸವೂ ಬೇಕಾಗಿಲ್ಲ. ಪುಕ್ಕಟೆ ಹಣ ದೊರೆಯುವಾಗ ಕೆಲಸ ಯಾರಿಗೆ ಬೇಕು? ಅದರಲ್ಲೂ ವಿರಳ ಜನವಸತಿಯ ವಯೋಮಿನಿಂಗಿನ ಯೆಲ್ಲೋಸ್ಟೋನ್ ಪಾರ್ಕಿಗೋ, ಮೊಂಟಾನಾದ ಗ್ಲೇಶಿಯರ್ ಪಾರ್ಕಿಗೋ ಎಲ್ಲ ಯಾರು ಬಂದು ಬೆಡ್ ಶೀಟ್ ಮಡಿಚುತ್ತಾರೆ? ಪಾತ್ರೆ ತೊಳೆಯುತ್ತಾರೆ? ಹಾಗಾಗಿ ನ್ಯಾಷನಲ್ ಪಾರ್ಕ್ ಮಾನವ ಸಂಪನ್ಮೂಲ ಇಲಾಖೆ ಇದಕ್ಕೊಂದು ಕಣ್ ಕಟ್ಟಿನ ಯೋಜನೆ ರೂಪಿಸಿದೆ. ಇದು ಈ ಕೆಲಸಗಳಿಗೆಲ್ಲ ಜನರನ್ನು ನೇಮಿಸಿಕೊಳ್ಳಲು ಒಂದು ಸ್ಟಾಫಿಂಗ್ ಏಜೆನ್ಸಿಗೆ ಗುತ್ತಿಗೆ ಕೊಡುತ್ತದೆ. ಸ್ಟಾಫಿಂಗ್ ಏಜೆನ್ಸಿ ಜಗತ್ತಿನಾದ್ಯಂತದ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಅಧ್ಯಯನ ಎಂಬಡಿಯಲ್ಲಿ ಇಲ್ಲಿ ನೇಮಿಸಿಕೊಳ್ಳುತ್ತದೆ. ಅವರಿಗೂ ಇದು ನಾಲ್ಕೈದು ತಿಂಗಳಲ್ಲಿ ಒಂದಿಷ್ಟು ಡಾಲರುಗಳನ್ನು ದುಡಿದುಕೊಂಡು ಮುಂದಿನ ವಿದ್ಯಾರ್ಜನೆಗೆ ಅನುವು ಮಾಡಿಕೊಳ್ಳುವ ಅವಕಾಶ. ಇಲ್ಲಿನ ಜೀವನ, ಜನ, ಮೂಲ ಸೌಕರ್ಯ, ವ್ಯವಸ್ಥೆ ಎಲ್ಲವನ್ನು ತಿಳಿದುಕೊಳ್ಳುವ ಅವಕಾಶ. ಅವರು ವಿದ್ಯಾರ್ಥಿಗಳಾದ್ದರಿಂದ, ಏಜೆನ್ಸಿ ಬರೀ ಕನಿಷ್ಠ ವೇತನ ಕೊಟ್ಟು ನಡೆಸಿಕೊಳ್ಳುವ ಎಲ್ಲ ಕೆಲಸಗಳ ಬಗ್ಗೆ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವ ಕಾರಣವೇ ಇಲ್ಲ, ಯಾಕೆಂದರೆ ಇದು ಹೊರಗುತ್ತಿಗೆ! ಇದು ವ್ಯವಸ್ಥಿತ ಕನಿಷ್ಠ ವೇತನ ಗುಲಾಮಿಯೇ ಆದರೂ ಅಕ್ರಮ ವಲಸಿಗ ಎಂಬ ಹಣೆಪಟ್ಟಿಗಿಂತ ಉತ್ತಮ. ಅವರಿಗೆ ವೇತನ ವ್ಯವಸ್ಥೆಯಲ್ಲಿ ದಾಖಲಾಗಲು, ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು, ಕರ್ತವ್ಯ ನಿಭಾಯಿಸಲು ಹಕ್ಕಾದರೂ ಇರುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಯಾಕೆ ಇವರು ಇತರ ಮನೆ ಕೆಲಸಗಳಿಗೂ ಮಾಡುವುದಿಲ್ಲ? ಹೇಗಿದ್ದರೂ ಕಾನೂನುಬಾಹಿರ ನುಸುಳುಕೋರರು ಸಿಗುತ್ತಾರೆಂದೇ?

ಕೆಲಸಕ್ಕೆ ಜನ ಬೇಕು, ಹಲವರಿಗೆ ಇಂಥ ಕೆಲಸವೆಲ್ಲ ಮಾಡುವುದಕ್ಕೆ ಮನಸ್ಸಿಲ್ಲ. ಹಾಗೆಂದು ಇಲ್ಲಿನ ವಲಸೆ ನೀತಿಯಲ್ಲಿ ಇಂಥ ಕೆಲಸಗಳಿಗೊಂದು ಸೂಕ್ತ ವಿಭಾಗವೂ ಇಲ್ಲ. ಅಂದ ಮೇಲೆ ಇವರನ್ನೆಲ್ಲ ಒಳಗೆ ಬಿಟ್ಟುಕೊಳ್ಳುವ, ಕಂಡೂ ಕಾಣದಂತೆ ಮುಖ ತಿರುಗಿಸುವ ಒಂದು ವ್ಯವಸ್ಥೆಯೇ ಇದೆ. ಮೇಲಿಂದ ಪ್ರತಿರೋಧಿಸುವ ನಾಟಕ ಬೇರೆ.

ಇಷ್ಟಕ್ಕೂ ವಲಸೆ ಎಂಬುದು ಸುಲಭವಲ್ಲ. ಯಾರೂ ತಮಾಷೆಗೋ, ಮನರಂಜನೆಗೋ ದೇಶ ಬಿಟ್ಟು ದೇಶ ನುಗ್ಗುವುದಿಲ್ಲ. ಅದೆಲ್ಲ ದೊಡ್ಡವರ ಆಟ. ಹುಟ್ಟಿದ ನೆಲ, ಬೆಳೆದ ಸಂಸ್ಕೃತಿ, ಸುತ್ತಲಿನ ಜನ, ಆಪ್ತ ಪರಿಸರ ಎಲ್ಲ ಹರಿದುಕೊಂಡು ಅಪರಿಚಿತ ನೆಲದ ಬಗ್ಗೆ ಬರೀ ಕನಸೊಂದನ್ನೇ ಇಟ್ಟುಕೊಂಡು ಹೊರಡಬೇಕೆಂದರೆ ಆ ಕನಸು, ಬಿಟ್ಟುಬರುವೆಲ್ಲದನ್ನು ಮೀರಿಸುವಂತಿರಬೇಕು. ಇಲ್ಲವೇ ಬಿಡಲಿರುವ ಪರಿಸರದಲ್ಲಿ ಬರೀ ಅನ್ಯಾಯ, ಹಿಂಸೆಯೇ ತುಂಬಿರಬೇಕು. ತಾನಿರುವ ನೆಲದಲ್ಲಿ ನೆಮ್ಮದಿಯ ಜೀವನವಿದ್ದಲ್ಲಿ ಯಾರೂ ನೆಲೆ ಬಿಡುವುದಿಲ್ಲ. ಅಮೆರಿಕಾ ಇಂದು ಕೆನಡಾದಿಂದ ಬರುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಯಾಕೆ? ಅದಕ್ಕೆ ಚರ್ಮದ ಬಣ್ಣವೇ ಕಾರಣ ಎಂದು ನಾವೆಲ್ಲಾ ಹೇಳಿಕೊಂಡರೆ ಅದರಷ್ಟು ಮೂರ್ಖತನ ಯಾವುದೂ ಇಲ್ಲ. ಒಂದು ದೇಶ ತನ್ನಷ್ಟೇ ಮುಂದುವರಿದ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಹೆಚ್ಚುಕಮ್ಮಿ ಸರಿಸಮನಾಗಿರುವ ನೆರೆಯ ದೇಶವನ್ನು ಎಂದೂ ಅತಿಕ್ರಮಣಕಾರಿ ಎಂದು ಪರಿಗಣಿಸುವುದಿಲ್ಲ. ಯಾಕೆಂದರೆ ಆಗ ಆ ದೇಶಗಳ ನಡುವೆ ಸರಿಸಮನಾದ ವಲಸೆ ಸಾಧ್ಯ ಅದೂ ಕೂಡ ತೀರಾ ಕಡಿಮೆಯೇ. ಅವರೆಲ್ಲ ತಂತಮ್ಮ ದೇಶದಲ್ಲಿಯೇ ತೃಪ್ತರು. ಗಡಿಯಾಚೆಗಿನ ನೆಲದ ಕನಸು ತೀರಾ ಭಿನ್ನವಾಗೇನೂ ಎನಿಸುವುದಿಲ್ಲ.

ಒಂದು ಕತೆಯಿದೆ, ಒಬ್ಬ ರೈತ ತನ್ನ ಹೊಲದಲ್ಲಿ ಉತ್ಕೃಷ್ಟ ಜಾತಿಯ ಆರೋಗ್ಯವಂತ ಜೋಳದ ಕಾಳು ಗಳನ್ನು ಬಿತ್ತಿದನಂತೆ. ಆದ್ರೆ ಕಟಾವಿಗೆ ಬಂದ ಫಸಲಿನಲ್ಲಿ ಅರ್ಧದಷ್ಟು ಜೋಳಗಳೆಲ್ಲ ಆ ಗುಣಮಟ್ಟ ಕಾಯ್ದುಕೊಳ್ಳದೆ ಹಲವು ಜೊಳ್ಳಾಗಿ ಕೂಡ ಇದ್ದುವಂತೆ. ಪ್ರತಿಬಾರಿಯೂ ಈ ಪ್ರಯೋಗ ಅದೇ ಬಗೆಯ ಫಲಿತಾಂಶದಲ್ಲಿ ಮುಗಿಯತೊಡಗಿತಂತೆ. ಆಗ ಆತನಿಗೊಂದು ಉಪಾಯ ಹೊಳೆದು, ಆ ವರ್ಷ ಅವನು, ತಾನು ಬಿತ್ತುತ್ತಿರುವ ಉತ್ಕೃಷ್ಟ ಜಾತಿಯ ಜೋಳದ ಕಾಳುಗಳನ್ನು ತನ್ನ ಅಕ್ಕ ಪಕ್ಕದ ಹೊಲಗಳ ರೈತರಿಗೂ ಹಂಚಿದನಂತೆ. ಆ ವರ್ಷ ಅವನ ಹೊಲದಲ್ಲಿ ಬಂಪರ್ ಬೆಳೆ ಅದೂ ಎಲ್ಲ ಸಮೃದ್ಧ ಕಾಳು. ಇಷ್ಟು ವರ್ಷ ವ್ಯಯಿಸಿದ ಹಣದ ಜೊತೆಗೆ ಪುಕ್ಕಟೆಯಾಗಿ ಹಂಚಿದ ಕಾಳಿನ ಹಣವೂ ಹುಟ್ಟಿತಂತೆ. ಅಷ್ಟೇ ಅಲ್ಲ, ಅವನ ಆ ಸುತ್ತಲಿನ ಹೊಲಗಳಲ್ಲೂ ಅದೇ ರೀತಿಯ ಬೆಳೆ. ಅವರಿಗೂ ಸಮೃದ್ಧ ಫಸಲು! ಜೋಳ ಬೆಳೆಯುವುದು ಒಂದು ಹೊಲದಲ್ಲಾದರೂ, ಪರಾಗಸ್ಪರ್ಶ ನಡೆಸುವ ಹಕ್ಕಿ, ದುಂಬಿ ಪಾತರಗಿತ್ತಿಗಳಿಗೇನು ಗಡಿಯ ಹಂಗೆ? ಹಾಗೆಯೇ ಅಲ್ಲವೇ, ನಮ್ಮ ಸುತ್ತಲಿನ ಪರಿಸರ ಕಳಪೆಯಾಗಿದ್ದಲ್ಲಿ ನಮ್ಮ ಬೆಳವಣಿಗೆಯೂ ಕಳಪೆಯೇ.

ಯಾವ ದೇಶವೇ ಆಗಲೀ, ಎಷ್ಟೆಂದು ಗಡಿ ಭದ್ರಪಡಿಸಲು ಸಾಧ್ಯ? ನಮ್ಮ ನೆರೆಹೊರೆ ನಮ್ಮಷ್ಟೇ ಸಬಲರಾಗಿದ್ದಲ್ಲಿ ಮಾತ್ರ ನಮಗೂ ನೆಮ್ಮದಿ. ಗಡಿ ಭದ್ರತೆಯ ಎಷ್ಟೊಂದು ಹಣದ ಉಳಿತಾಯ! ನೆಮ್ಮದಿಯ ಜೀವನ ತನ್ನ ಮನೆಯಲ್ಲೇ ಸಿಗುವಾಗ ಯಾರೂ ಬೇಲಿ ಹಾರಲು ಹೋಗುವುದಿಲ್ಲ. ಇಂದು ಅಮೇರಿಕ ಹಲವು ದಕ್ಷಿಣ ಅಮೆರಿಕ ದೇಶಗಳಿಂದ ಬರುವ ಅಕ್ರಮ ವಲಸಿಗರು, ನಿರಾಶ್ರಿತರ ಸಮಸ್ಯೆಯನ್ನು ಎದುರಿಸುತ್ತಿದೆ. ಅಲ್ಲಿನ ಹದಗೆಟ್ಟ ಆಂತರಿಕ ವ್ಯವಸ್ಥೆ, ರಾಜಕೀಯ, ಮಾಡಕ್ ದ್ರವ್ಯಗಳ ಮಾಫಿಯಾ, ಜರ್ಜರಿತ ಆರ್ಥಿಕ ವ್ಯವಸ್ಥೆಗಳಿಂದ ಮುಕ್ತಿ ಪಡೆಯಲು ಎಲ್ಲ ಗುಳೆ ಎದ್ದು ಬರುತ್ತಿದ್ದಾರೆ. ಎಷ್ಟೆಂದು ಎಲ್ಲರನ್ನು ದಬ್ಬುತ್ತೀರಿ? ಗಡಿ ಭದ್ರತೆ, ಸುರಕ್ಷೆ ಎಂದೆಲ್ಲ ವಿನಿಯೋಗಿಸುವ ಹಣವನ್ನು ಆಯಾ ದೇಶಗಳನ್ನು ಗಟ್ಟಿಗೊಳಿಸುವಲ್ಲಿ ವಿಯೋಗಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೇನೋ. ಸುಲಭವಲ್ಲ ನಿಜ, ಆದರೆ ಮುಂದುವರಿದ ದೇಶಗಳೆಲ್ಲ ತೆರಿಗೆ ಹಣ ಉಳಿಸಲು ದಾನ ಧರ್ಮ ಮಾಡುತ್ತವೆ, ಎಲ್ಲೆಲ್ಲೋ ರಗಳೆ ಹುಟ್ಟುಹಾಕಲು ಆಯುಧ ಮಾರುತ್ತವೆ. ಅದರ ಬದಲು ಒಂದು ಬಡ ದೇಶವನ್ನು ಅಮೂಲಾಗ್ರವಾಗಿ ಬದಲಿಸಿದರೆ ಮಾತ್ರ ಅಲ್ಲಿಂದ ಗುಳೆ ಹೊರಡುವವರನ್ನು ನಿಯಂತ್ರಿಸಲು ಸಾಧ್ಯ.

ಬಹಳಷ್ಟು ದೇಶಗಳಲ್ಲಿ ತಾವು ಎಲ್ಲರಿಗಿಂತ ಸಬಲರಾಗಿದ್ದರೆ ಚೆನ್ನ ಎಂಬ ವಿಚಿತ್ರ ಮನೋಭಾವವೇಕೋ! ತಮ್ಮಂತೆ ಉಳಿದವರನ್ನೂ ಎತ್ತಿ ನಿಲ್ಲಿಸಿದಲ್ಲಿ ತಾವೂ ನೆಮ್ಮದಿಯಿಂದ ಗಟ್ಟಿ ನಿಲ್ಲಲು ಸಾಧ್ಯ ಎಂಬುದನ್ನು ಇಂದು ಮುಂದುವರಿದ ರಾಷ್ಟ್ರಗಳೆಲ್ಲ ಕಂಡುಕೊಳ್ಳಬೇಕಿದೆ. ಆಗಷ್ಟೇ ನಮ್ಮ ನೆಲವೂ ಗಡಿಯೂ ನಮ್ಮದೆಂದು ಪ್ರತಿಯೊಬ್ಬರೂ ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯ.