ಒಂದು ಮೊಬೈಲೋ ಲ್ಯಾಪ್ ಟಾಪೋ ಆದರೆ ರೀಬೂಟ್ ಮಾಡಿ ಸರಿಮಾಡಿಕೊಳ್ಳುವುದು ಸುಲಭ. ಅದೇ ಒಂದು ಸೈನ್ಯದ, ಸ್ಪೇಸ್ ಸ್ಟೇಷನ್ನಿನ, ಅಥವಾ ಪೇಮೆಂಟ್ ಕಂಪನಿಯ ಸಿಸ್ಟಂಗಳನ್ನು ರೀಬೂಟ್ ಮಾಡಬೇಕೆಂದರೆ ತೆರಬೇಕಾದ ಬೆಲೆ ದುಬಾರಿ! ಆ ಕ್ಷಣವನ್ನೆ ಹೊಂಚು ಹಾಕಿ ವೈರಿ ಕ್ಷಿಪಣಿ ಹಾರಿಸಬಹುದು, ಬಹುಮುಖ್ಯ ಆಸ್ಟರಾಯ್ಡ್ ಕಣ್ತಪ್ಪಿಸಿಕೊಳ್ಳಬಹುದು, ಕೋಟ್ಯಾಂತರ ವ್ಯವಹಾರ ಕೈತಪ್ಪಿ ಇನ್ನೊಂದು ಪೇಮೆಂಟ್ ಚಾನೆಲ್ಲಿನ ಪಾಲಾಗಬಹುದು. ಸಮಾಜದ ರೀಬೂಟ್ ಇದಕ್ಕಿಂತ ಸಾವಿರ ಸಾವಿರ ಪಟ್ಟು ದುಬಾರಿ. ಮನುಷ್ಯ ಕುಲ ಅಪಾರ ಜೀವ, ಜ್ಞಾನ, ಸಂಪತ್ತಿನ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸುಲಭದ ಮಾತಲ್ಲ.
ಮಧುಸೂದನ್ ವೈ.ಎನ್ ಅಂಕಣ

 

ಹಿಂದಿನ ಅಂಕಣದಲ್ಲಿ ಲಿನಕ್ಸ್ ಜನಕನ ಬಗ್ಗೆ ಮಾತಾಡಿದ್ದೆ. ಈ ಅಂಕಣದಲ್ಲಿ ಒಟ್ಟಾರೆ ಆಪರೇಟಿಂಗ್ ಸಿಸ್ಟಂ ಬಗ್ಗೆ ಎರಡು ಮಾತು. ತಲೆ ಮೇಲೆ ಹಾರಿಹೋಗುವಂತದೇನು ಟೆಕ್ನಿಕಲ್ ಇರಲ್ಲ, ಹೇಗೆ ಈ ಆಪರೇಟಿಂಗ್ ಸಿಸ್ಟಂ ಎನ್ನುವುದು ನಮ್ಮ ವ್ಯವಸ್ಥೆ, ಸರ್ಕಾರ ಅಥವಾ ಸಮಾಜದ ಪ್ರತಿರೂಪ ಮತ್ತು ಇದರಿಂದ ನಾವೇನು ಕಲಿಯಬಹುದೆಂಬ ಸಣ್ಣ ಚರ್ಚೆ. ಹೊಸಬರಿಗೆಂದು ಎರಡು ಸಾಲು; ಕಂಪ್ಯೂಟರ್ಸ್ ನಲ್ಲಿರುವ ಎರಡೇ ಎರಡು ಸಂಪನ್ಮೂಲಗಳು CPU ಮತ್ತು memory. ಒಂದು ದುಡಿಯುವ ಯಂತ್ರ ಇನ್ನೊಂದು ದುಡಿಯಲು ಅನುವು ಮಾಡಿಕೊಡುವ ಗೋದಾಮು/ಕೈಚೀಲ/ಜೇಬು, ಏನಂತಲಾದರೂ ಕರೆಯಿರಿ ಅದನ್ನ, ಲೆಕ್ಕ ಬರೆದಿಡುವ ನೋಟ್ ಬುಕ್ ಅಂದರೂ ಸರಿನೆ.

ಈಗ ನೀವು ನಿಮ್ಮ ಲ್ಯಾಪ್ ಟಾಪಿನಲ್ಲಿ ಹಿನ್ನೆಲೆಯಲ್ಲಿ ಹಾಡು ಕೇಳುತ್ತ, ಇನ್ನೊಂದು ಕಡೆ ಪೆನ್ ಡ್ರೈವ್ ನಿಂದ ಹಾರ್ಡ್ ಡಿಸ್ಕಿಗೆ ಸಿನಿಮಾ ಕಾಪಿ ಕೊಟ್ಟು ಫೇಸ್ ಬುಕ್ಕು ನೋಡುತ್ತ ಕುಳಿತಿರುತ್ತೀರಿ. ಇವು ಕಂಪ್ಯೂಟರಿಗೆ ಮೂರು ಮೂರು ಕೆಲಸಗಳು, ನಿಮ್ಮ ಪರವಾಗಿ ಮೂರು ಜಾಬ್ ಗಳು ಆಪರೇಟಿಂಗ್ ಸಿಸ್ಟಂನೊಂದಿಗೆ ಸಂಪನ್ಮೂಲಕ್ಕಾಗಿ ಹೋರಾಡಿ ನಿಮ್ಮ ಕೆಲಸವನ್ನು ಹೇಳಿದ ಸಮಯದಲ್ಲಿ ಮಾಡಿಕೊಡುತ್ತವೆ. ನ್ಯಾಯಬದ್ಧವಾಗಿ ಇರುವ ಸಂಪನ್ಮೂಲಗಳನ್ನು ಹಂಚಿ ಆ ಮೂಲಕ ನಿಮಗೆ ಉತ್ತಮ ಅನುಭವ ನೀಡುವ ಜವಾಬ್ದಾರಿ ಆಪರೇಟಿಂಗ್ ಸಿಸ್ಟಂನದು. ಅದನ್ನು ಬಿಟ್ಟರೆ ಆಪರೇಟಿಂಗ್ ಸಿಸ್ಟಂ ಕಂಪ್ಯೂಟರಿನ ಒಳಾಂಗಣವನ್ನು ಮ್ಯಾನೇಜ್ ಮಾಡುತ್ತದೆ. ಇಷ್ಟು ಮಾಹಿತಿಯಿಂದ ನಿಮಗೆ ಸಾಮ್ಯತೆ ಹೊಳೆದಿರಬಹುದಲ್ಲವೆ?

ಇರುವ ನೆಲ, ನೀರು, (ಗಾಳಿಯಿನ್ನು ನಮ್ಮ ಸುಪರ್ಧಿಗೆ ಸಿಕ್ಕಿಲ್ಲ), ಖನಿಜ, ಉದ್ಯೋಗ ಇವೇ ಮೊದಲಾದ ಸಂಪನ್ಮೂಲಗಳನ್ನು ಜನರಿಗೆ ನ್ಯಾಯಬದ್ಧವಾಗಿ ಹಂಚುವುದು, ಮಿಕ್ಕಂತೆ ಆಡಳಿತ ನೋಡಿಕೊಳ್ಳುವುದು. ಯಾವುದೇ ಸರ್ಕಾರಕ್ಕಿರಬೇಕಾದ ಕನಿಷ್ಠ ಹಾಗೂ ಗರಿಷ್ಠ ಕ್ಯಾಮೆಗಳು ಇಷ್ಟೇ ತಾನೆ? ದುರಂತವೆಂದರೆ ನಮ್ಮಲ್ಲಿನ ಸರ್ಕಾರಗಳು ಇವೆರಡನ್ನು ಕಡೆಗಣಿಸಿ ಮಿಕ್ಕಿದ್ದಲ್ಲೆಲ್ಲ ಕೈಯಾಡಿಸುತ್ತವೆ.

ಈ ಸಂಪನ್ಮೂಲ ಹಂಚಿಕೆಯಲ್ಲಿ ಸ್ವಲ್ಪ ಏರುಪೇರಾದರೂ ಸಿಸ್ಟಂ ಹ್ಯಾಂಗ್ (ಉಸಿರುಗಟ್ಟಿ) ಆಗಿ, ಕ್ರಾಷ್(ಸತ್ತು) ಆಗಿಬಿಡುತ್ತದೆ. ನೀವೆಲ್ಲ ಅನುಭವಿಸಿರುತ್ತೀರಿ, ಯಾಕೋ ಸಿಸ್ಟಂ ನಿಂತೋಯ್ತೆಂದು ರೀಬೂಟ್ ಮಾಡಿರುತ್ತೀರಿ. ಸಮಾಜದಲ್ಲೂ ಅದೆ ಆಗುತ್ತದೆಂದು ಬಿಡಿಸಿ ಹೇಳಬೇಕಿಲ್ಲ. ಒಂದು ಮೊಬೈಲೋ ಲ್ಯಾಪ್ ಟಾಪೋ ಆದರೆ ರೀಬೂಟ್ ಮಾಡಿ ಸರಿಮಾಡಿಕೊಳ್ಳುವುದು ಸುಲಭ. ಅದೇ ಒಂದು ಸೈನ್ಯದ, ಸ್ಪೇಸ್ ಸ್ಟೇಷನ್ನಿನ, ಅಥವಾ ಪೇಮೆಂಟ್ ಕಂಪನಿಯ ಸಿಸ್ಟಂಗಳನ್ನು ರೀಬೂಟ್ ಮಾಡಬೇಕೆಂದರೆ ತೆರಬೇಕಾದ ಬೆಲೆ ದುಬಾರಿ! ಆ ಕ್ಷಣವನ್ನೆ ಹೊಂಚು ಹಾಕಿ ವೈರಿ ಕ್ಷಿಪಣಿ ಹಾರಿಸಬಹುದು, ಬಹುಮುಖ್ಯ ಆಸ್ಟರಾಯ್ಡ್ ಕಣ್ತಪ್ಪಿಸಿಕೊಳ್ಳಬಹುದು, ಕೋಟ್ಯಾಂತರ ವ್ಯವಹಾರ ಕೈತಪ್ಪಿ ಇನ್ನೊಂದು ಪೇಮೆಂಟ್ ಚಾನೆಲ್ಲಿನ ಪಾಲಾಗಬಹುದು. ಸಮಾಜದ ರೀಬೂಟ್ ಇದಕ್ಕಿಂತ ಸಾವಿರ ಸಾವಿರ ಪಟ್ಟು ದುಬಾರಿ. ಮನುಷ್ಯ ಕುಲ ಅಪಾರ ಜೀವ, ಜ್ಞಾನ, ಸಂಪತ್ತಿನ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸುಲಭದ ಮಾತಲ್ಲ.

ಕಂಪ್ಯೂಟರ್ ನಲ್ಲಿರುವ ನಿಮ್ಮ ಆಳುಗಳೆನಿಸಿಕೊಂಡ ಜಾಬ್ ಗಳು ಒಂದಕ್ಕೊಂದು ಕಿತ್ತಾಡದೆ ಆ ಮೂಲಕ ಕಂಪ್ಯೂಟರ್ ಕ್ರಾಷ್ ಆಗದೆ ನಿರಂತರ ಸೇವೆ ಒದಗಿಸಲು ಆಪರೇಟಿಂಗ್ ಸಿಸ್ಟಂ ತನ್ನ ಸಂವಿಧಾನದ ಪ್ರಕಾರ ಕೆಲವು ಅಲ್ಗೋರಿತಮ್(ಸೂತ್ರ)ಗಳನ್ನು ಪರಿಪಾಲಿಸುತ್ತದೆ. ಈ ಸೂತ್ರಗಳನ್ನು scheduling policies ಎಂದು ಕರೆಯಲಾಗುತ್ತದೆ. ಏನಿವು ಪಾಲಿಸಿಗಳು, ಅತ್ಯಂತ ಸರಳವಾಗಿ ವಿವರಿಸಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ First come First Serve (FCFS) policy ತಗೊಳ್ಳೋಣ. ಇದರರ್ಥ ಮೊದಲು ಬಂದವನೇ ಮಹಾಶೂರ.. ಹೌದು ಅವನು ಮೊದಲು ಬಂದಿದಾನೆ ಹಾಗಾಗಿ ಅವನಿಗೇನೆ ಮೊದಲ ಅವಕಾಶ. ಬ್ಯಾಂಕಿನಲ್ಲಿ ಟೋಕನ್ ತಗೊಂಡು ಕೂತಂತೆ. ಮನುಷ್ಯನಿಗೆ ಅತ್ಯಂತ ಸಹಜವಾಗಿ ಹೊಳೆವ, ಪಾಲಿಸುವ ಸೂತ್ರ. ಬಹುತೇಕ ನಮ್ಮ ದೈನಂದಿನ ಜೀವನದಲ್ಲಿ ನಾವೆಲ್ಲ ಇದೇ ಸೂತ್ರವನ್ನು ಬಳಸುತ್ತೇವೆ. ಇದೆಷ್ಟು ಸರಳ ಹಾಗು ನ್ಯಾಯಬದ್ಧ ಅನಿಸುತ್ತದಲ್ಲವೇ. ಆದರೆ ಇಲ್ಲೊಂದು ಸಮಸ್ಯೆಯಿದೆ. ಯಾವನೋ ಒಬ್ಬ ತನ್ನ ಸರತಿ ಬಂದಾಗ ಅಧಿಕಾರಿ ಮುಂದೆ ಗಂಟೆಗಟ್ಟಲೆ ಕೂತುಬಿಟ್ಟರೆ? ಮಿಕ್ಕಿದೋರು ಬರಿಗೈಲಿ ಮನೆಗೆ ಹೋಗಬೇಕಾಗುತ್ತದೆ. ಈ ಸೂತ್ರದಿಂದ ನಿಮ್ಮ ಕಂಪ್ಯೂಟರ್ ಎರಡು ನಿಮಿಷವೂ ಓಡಲಾರದು. ಕ್ರಾಷ್ ಆಗಿಬಿಡುತ್ತದೆ.

ಈ ಮಿತಿಯನ್ನು ಹೋಗಲಾಡಿಸಲು ಯೋಚಿಸಿದಾಗ ಹೊಳೆವ ಇನ್ನೊಂದು ಸೂತ್ರ Shortest job first(SJF) ಅಂತ. ಸಣ್ಣ ಬಿಂದಿಗೆಯವಳನ್ನು ಮುಂದೆ ನಿಲ್ಲಿಸಿ ದೊಡ್ಡ ಬಿಂದಿಗೆಯವಳನ್ನ ಸರತಿಯ ಕೊನೇಗೆ ತಳ್ಳಿದಂತೆ. ಇದು FCFS ನಲ್ಲಿನ ಅನ್ಯಾಯವನ್ನು ಸರಿದೂಗಿಸುತ್ತದೆ. ಡೆಪಾಸಿಟ್ ಮಾಡುವವನದು ಐದು ನಿಮಿಷದ ಕೆಲಸ. ಲೋನ್ ವಿಚಾರಿಸಬೇಕಿರುವವನದ್ದು ಗಂಟೆ ಕೆಲಸ. ಹಾಗಾಗಿ ಡೆಪಾಸಿಟ್ ಮಾಡುವವನು ತಡವಾಗಿ ಬಂದರೂ ಅವನನ್ನೆ ಮುಂದೆ ಕಳಿಸುವುದು ಸರಿ. (ಈ ಕಾಲ್ಪನಿಕ ಬ್ಯಾಂಕಿನಲ್ಲಿ ಒಬ್ಬನೇ ಒಬ್ಬ ಅಧಿಕಾರಿ ಎಂದು ಊಹಿಸಿಕೊಳ್ಳಿ). ಅಲ್ಲಿಗೆ ಎಲ್ಲರೂ ಕ್ಷೇಮ ಎಂದು ಭಾವಿಸಬಹುದೇ? ಇಲ್ಲ, ಇದು ಯಾಕೋ ಎಡವಟ್ಟಿನದು ಎಂದು ನಿಮಗಾಗಲೆ ಅನಿಸಿರಬೇಕು, ಒಂದೇ ಸಮನೆ ಮಂದಿ ಮಿಳ್ಳೆ ಚೊಂಬು ಗಡಿಗೆ ಅಂತ ಹಿಡಕೊಂಡು ಬರ್ತಿದ್ದರೆ ಪಾಪ ದೊಡ್ಡ ಬಿಂದಿಗೆಯವಳು ಎಲ್ಲಿ ಹೋಗಬೇಕು? ಈ ಸೂತ್ರವನ್ನೆ ನೆಚ್ಚಿಕೊಂಡರೆ ಅವಳು ಅವತ್ತು ಹಿಟ್ಟು ಬೇಯಿಸಿ ಹಾಕಿದಂಗೇನೆ.

ಹಾಗೆ ನೋಡಿದರೆ ಈ ಸಮಸ್ಯೆಯನ್ನು ಕಂಪ್ಯೂಟರ್ಸ್ ನಲ್ಲಿ starvation(ಹಸಿವೆಯಿಂದ ಬಳಲುವುದು) ಅಂತಲೇ ಕರೆಯುತ್ತಾರೆ. ಇದೂ ಸರಿ ಬರ್ತಿಲ್ಲ ಎಂದಾದ ಮೇಲೆ ಇದನ್ನು ಉತ್ತಮಪಡಿಸುವುದು ಹೇಗೆ? SJF ನ ಮುಂದುವರಿಕೆ priority scheduling ಅಂತ. ಇದರರ್ಥ ನೀವು ಅಥವ ನಿಮ್ಮ ಪರವಾಗಿ ಆಪರೇಟಿಂಗ್ ಸಿಸ್ಟಂ ನಿಮ್ಮ ಜಾಬ್ ಗಳ ಹಣೆಗೆ ನಂಬರ್ ಅಂಟಿಸುವ ಮೂಲಕ ಆದ್ಯತೆಯನ್ನು ನಿಗದಿ ಮಾಡುವುದು. ಅತ್ಯಂತ ತುರ್ತಾದ ಜಾಬಿಗೆ ಒಂದು, ಅತ್ಯಂತ ಸಾವಕಾಶದಿಂದ ಜರುಗಲಿ ಎಂಬುವ ಜಾಬಿಗೆ ನೂರು.. ಹೀಗೆ… ಆಪರೇಟಿಂಗ್ ಸಿಸ್ಟಂ ಈ ನಂಬರಿನ ಪ್ರಕಾರ ಕೆಲಸಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಕೆಲಸ ಸಿಪಿಯುನಿಂದ ಮಾಡಿಸಿಕೊಡುತ್ತದೆ. ಮೇಲಿನ ಉದಾಹರಣೆಯಲ್ಲಿ ನೀವು ಹಾಡು ಕೇಳುತ್ತ ಸಿನಿಮಾ ಫೈಲು ಕಾಪಿ ಮಾಡುತ್ತ ಫೇಸ್ ಬುಕ್ಕು ನೋಡುತ್ತಿದ್ದರೆ ಆಪರೇಟಿಂಗ್ ಸಿಸ್ಟಂ ನಿಮ್ಮ ಹಾಡಿನ ಜಾಬಿಗೆ ಒಂದು, ಫೇಸ್ ಬುಕ್ಕಿಗೆ ಎರಡು ಫೈಲಿನ ಕಾಪಿಗೆ ಮೂರು ನಂಬರ್ ಅಂಟಿಸುತ್ತದೆ. ಕಾರಣ ಹಾಡು ಮಧುರವಾಗಿ ಕೇಳಿಸಿಕೊಳ್ಳುವಂತಹ ಅನುಭವ ಪ್ರಾಶಸ್ತ್ಯವಾದಂತಹ ಕೆಲಸ. ನಿಂತು ನಿಂತು ಬರುವ ಹಾಡನ್ನು ಯಾವನು ತಾನೆ ಕೇಳಿಸಿಕೊಳ್ಳುತ್ತಾನೆ ಹೇಳಿ?

ಹಾಗಾಗಿಬಿಟ್ಟರೆ ಲ್ಯಾಪ್ ಟಾಪನ್ನು ಎತ್ತಿ ಕುಕ್ಕುತ್ತಾನೆ. ಫೇಸ್ ಬುಕ್ಕನ್ನು ಯಾರೂ ಒಂದೇ ಸಮನೆ ಮೇಲೆ ಕೆಳಗೆ ಆಡಿಸುವುದಿಲ್ಲ, ಆಡಿಸುವುದಿದ್ದರೂ ನಮ್ಮ ಕೈನ ವೇಗದ ಅನುಸಾರ ಕಂಪ್ಯೂಟರಿಗೆ ನಡುನಡುವೆ ಸಾಕಷ್ಟು ಸಮಯ ಸಿಗುತ್ತದೆ. ಹಾಗಾಗಿ ಅದಕ್ಕೆ ಎರಡು. ಇನ್ನು ಫೈಲ್ ಕಾಪಿ. ಸಾಮಾನ್ಯವಾಗಿ ನೀವು ಇಂತಹ ಕಾಪಿ ಕೊಟ್ಟು ಅದನ್ನೇ ನೋಡುತ್ತ ಕೂರುವುದಿಲ್ಲ. ಬೇರೇನೋ ಕೆಲಸ ಮಾಡಿಕೊಳ್ತೀರಿ. ಇದು ಫಲಿತಾಂಶ ಪ್ರಾಶಸ್ತ್ಯ ಕೆಲಸ, ಅನುಭವ ಮುಖ್ಯವಲ್ಲ. ಹಾಗಾಗಿ ಇದಕ್ಕೆ ಕೊನೆಯ ಆದ್ಯತೆ. ಆದರೆ ಈ ಆದ್ಯತೆ ಅನ್ನೋದು ಪರಿಸರಕ್ಕೆ ತಕ್ಕಂತೆ ಬದಲಾವಣೆಯಾಗುತ್ತದೆ. ಉದಾಹರಣೆಗೆ ವಿಮಾನದ ಕಾಕ್ ಪಿಟ್ ನಲ್ಲಿ ಹಾಡಿನ ಅಥವಾ ಧ್ವನಿಯ ಪ್ರಸಾರಣ ಕೆಲಸಕ್ಕಿಂತ ಮುಖ್ಯ ಮುಂದಿನ ರೆಡಾರ್ ಡಾಟಾ ಓದುವುದ್ದಾಗಿರುತ್ತದೆ. ಸರಿ, ಆದ್ಯತೆ ಅಂತ ಒದಗಿಸಿದ ಮೇಲೆ ಮುಗೀತಲ್ಲ. ಇದೇ ಅಂತಿಮ ಹಾಗು ಶ್ರೇಷ್ಠ ಸೂತ್ರ ಆಗಿರಬೇಕು. ನಮಗೆ ಯಾವುದು ಮುಖ್ಯ ಅನಿಸುತ್ತೋ ಯಾರು ಮುಖ್ಯ ಅನಿಸುತ್ತಾರೋ ಅವರನ್ನು ಸರತಿ ಮುಂದೆ ನಿಲ್ಲಿಸಿದರಾಯಿತು ಅಲ್ಲವೇ. ಆದರೆ ಸಂಪನ್ಮೂಲಗಳ ಹಂಚಿಕೆ ಇಷ್ಟು ಸರಳವಿಲ್ಲ. ಕಂಪ್ಯೂಟರಿನಲ್ಲಾಗಲಿ ಸಮಾಜದಲ್ಲಾಗಲಿ… ನಿಮ್ಮ ಆದ್ಯತೆಗಳಲ್ಲಿ ಹಿಂದಿರುವವನು ಕಣ್ಣಿಗೆ ಬೀಳದೆ ಹೋಗಬಹುದು. ಅದರ ಪಾಡಿಗೆ ಅದು ಕಾಪಿ ಆಗಲಿ ಎಂದು ನೀವು ಒಂದೇ ಸಮನೆ ಕಂಪ್ಯೂಟರಿಗೆ ಬೇರೆ ಬೇರೆ ಕೆಲಸ ಕೊಡುತ್ತ ಹೋದರೆ ಏನಾಗುತ್ತದೆ? ರಾತ್ರಿಯಿಡೀ ಬಿಟ್ಟರೂ ಕಾಪಿ ಆಗಿರಲ್ಲ. ಇದು ಫೈಲ್ ಕಾಪಿ ಮಾಡುವ ಜಾಬ್ ಗೆ ಎಸಗುವ ಘನ ಘೋರ ಅನ್ಯಾಯ. ವ್ಯವಸ್ಥೆಯಲ್ಲಿ ಕಟ್ಟಕಡೆಯವನಿಗೂ ನ್ಯಾಯ ತಲುಪಿಸಬೇಕು ಎಂಬುದೇ ಕಂಪ್ಯೂಟರಿನ ಪರಮ ಧ್ಯೇಯ. ಹಾಗೆ ನೋಡಿದರೆ ಕಂಪ್ಯೂಟರಿನ ಮೂಲೋದ್ದೇಶ ನ್ಯಾಯಬದ್ಧವಾಗಿರುವುದು ಮತ್ತು ಆ ಮೂಲಕ ದಕ್ಷ ಆಡಳಿತ ಒದಗಿಸುವುದು.

ಇರುವ ನೆಲ, ನೀರು, (ಗಾಳಿಯಿನ್ನು ನಮ್ಮ ಸುಪರ್ಧಿಗೆ ಸಿಕ್ಕಿಲ್ಲ), ಖನಿಜ, ಉದ್ಯೋಗ ಇವೇ ಮೊದಲಾದ ಸಂಪನ್ಮೂಲಗಳನ್ನು ಜನರಿಗೆ ನ್ಯಾಯಬದ್ಧವಾಗಿ ಹಂಚುವುದು, ಮಿಕ್ಕಂತೆ ಆಡಳಿತ ನೋಡಿಕೊಳ್ಳುವುದು. ಯಾವುದೇ ಸರ್ಕಾರಕ್ಕಿರಬೇಕಾದ ಕನಿಷ್ಠ ಹಾಗೂ ಗರಿಷ್ಠ ಕ್ಯಾಮೆಗಳು ಇಷ್ಟೇ ತಾನೆ? ದುರಂತವೆಂದರೆ ನಮ್ಮಲ್ಲಿನ ಸರ್ಕಾರಗಳು ಇವೆರಡನ್ನು ಕಡೆಗಣಿಸಿ ಮಿಕ್ಕಿದ್ದಲ್ಲೆಲ್ಲ ಕೈಯಾಡಿಸುತ್ತವೆ.

ಲಿನಕ್ಸ್ ನ ಈಗಿನ scheduler ನ ಹೆಸರೇ Completely Fair Scheduler(CFS) ಅಂತ. ಹೆಸರಿನಲ್ಲಿಯೆ Fairness ಗೆ ಇರುವ ಮಹತ್ವ ನೀವು ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ ಇನ್ನೊಂದು ಪಾಲಿಸಿ ಇದೆ, ಇದನ್ನು Round Robin policy(RR) ಎಂದು ಕರೆಯುತ್ತಾರೆ. ಕಂಪ್ಯೂಟರ್ಸ್ ನಲ್ಲಿ ಅತ್ಯಂತ ಮಹತ್ವದ ಸೂತ್ರವಿದು. ಈ ಸೂತ್ರದ ಪ್ರಕಾರ ಎಲ್ಲರಿಗೂ ನಿರ್ದಿಷ್ಟ ಸಿಪಿಯು ಸಮಯ ಸಿಗುತ್ತದೆ. ಒಂದೊಂದು ಜಾಬ್ ಗೂ ಒಂದೊಂದು ಸೆಕೆಂಡು ಎಂದು ನಿರ್ಧಾರವಾದರೆ ಒಂದು ಸೆಕೆಂಡ್ ಮುಗಿದ ಕೂಡಲೆ ಆ ಜಾಬ್ ಅನ್ನು ಸಾಲಿನ ಕೊನೆಗೆ ತಳ್ಳಿ ಮುಂದಿನ ಜಾಗ್ ಗೆ ಸಿಪಿಯು ಒದಗಿಸಲಾಗುತ್ತದೆ. ಉಳಿಕೆ ಪಾಲಿಸಿಗಳಿಗೆ ಹೋಲಿಸಿದರೆ ಇದರ ವಿಶೇಷ ಗುಣವೇನೆಂದರೆ ಇದರಲ್ಲಿ Starvation ಎಂಬುದೇ ಇಲ್ಲ! ಎಲ್ಲರಿಗೂ ಒಂದೊಂದು ಸೀಪಿಯು ತುಣುಕು ಸಿಗುವುದು ಖಚಿತ.

ಆದರೆ ಕಂಪ್ಯೂಟರ್ಸ್ ನಲ್ಲಿ ಇದೊಂದೆ ಸೂತ್ರ ಪರಮ ಸತ್ಯವಲ್ಲ. ಉಳಿದೆಲ್ಲ ಸೂತ್ರಗಳಿಗೂ ಎಲ್ಲ ಬಗೆಯ ಕಂಪ್ಯೂಟರ್ ಗಳಿಗೂ ಈ ಸೂತ್ರ ತಳಹದಿ ಎನ್ನಬಹುದು. ಬ್ಯಾಂಕ್ ನ ಟೋಕನ್ ಸಿಸ್ಟಂ ನಂತಹ ಸರಳಾತಿಸರಳ ಕಂಪ್ಯೂಟರ್ ಮಾತ್ರ FCFS ನಂತಹ ಸರಳಾತಿಸರಳ ಸೂತ್ರ ಪಾಲಿಸಬಹುದು. ನಾವು ಬಳಸುವಂತಹ ಲ್ಯಾಪ್ ಟಾಪಿನಿಂದ ಹಿಡಿದು ದೊಡ್ಡ ದೊಡ್ಡ ಕಂಪ್ಯೂಟರ್ ವರೆಗೆ ಒಳಗಿನ ಆಪರೇಟಿಂಗ್ ಸಿಸ್ಟಂಗಳು ಬಹುಸೂತ್ರ ಮಿಶ್ರ ಸೂತ್ರಗಳನ್ನು ಬಳಸುತ್ತವೆ. ಅಂದರೆ ಒಂದೇ ಸಿಸ್ಟಂನಲ್ಲಿ ಎಲ್ಲ ಪಾಲಿಸಿಗಳು ಲಭ್ಯವಿರುತ್ತವೆ. ಯಾವಯಾವ ಜಾಬ್ ಗಳು ಯಾವ ಯಾವ ಸೂತ್ರ ಪಾಲಿಸಬೇಕು ಎಂಬ ಆಯ್ಕೆಯನ್ನು ಅತ್ಯಂತ ಡೆಮಾಕ್ರೆಟಿಕ್ಕಾಗಿ ನಿಮಗೆ ಕೊಡುತ್ತವೆ. ಅಗತ್ಯ ಅನುಕೂಲಕ್ಕೆ ತಕ್ಕಂತೆ ನಾವು ಸೂತ್ರಗಳನ್ನು ಬದಲಾಯಿಸಿಕೊಳ್ಳಬಹುದು.

ಉದಾಹರಣೆಗೆ ಹತ್ತು ಕೆಲಸಗಳಿದ್ದರೆ ಮೊದಲು ಅವುಗಳನ್ನು FCFS ಪ್ರಕಾರ ಕ್ಯೂನಲ್ಲಿ ನಿಲ್ಲಿಸಿ, SJF ಪ್ರಕಾರ ಮರುವಿಂಗಡಣೆ ಮಾಡಿ ಅದರಲ್ಲೂ ಯಾವುದಾದರೂ ಜಾಬ್ ಹೆಚ್ಚು ಆದ್ಯತೆ ಹೊಂದಿದ್ದರೆ ಅವನ್ನು ಇನ್ನೂ ಮುಂದೆ ನಿಲ್ಲಿಸಿ ಒಂದೊಂದಾಗಿ ಅವುಗಳ ಕೆಲಸ ಮಾಡಿಕೊಡುತ್ತ ಅಕಸ್ಮಾತ್ ಈ ಹಾವಳಿಯಿಂದ ಯಾವ ಜಾಬ್ ಆದರೂ ಹೆಚ್ಚು ಸಮಯ ತಗೊಳ್ಳುವುದು ಅಥವ ಇನ್ಯಾವುದೋ ಜಾಬ್ ದುರ್ಬಲ ಇದೆ ಅಂತ ಅದಕ್ಕೆ ಕ್ಯೂನಲ್ಲಿ ಮುಂದೆ ಬರಲು ಸಾಧ್ಯವಾಗದೆ ಹೋದರೆ RR ಮೂಲಕ ಹಿಂದುಳಿದ ಜಾಬ್ ಗೆ ಅದರ ಸ್ಥಾನ ಮಾನ ಒದಗಿಸಿಕೊಡುವುದು, ಹೀಗೆ… ವಿಮಾನದಂತಹ ಗಂಭೀರ ಪರಿಸರಗಳಲ್ಲಿ priority scheduling, ಮತ್ತು round robin ಎರಡನ್ನೂ ಬಳಸಲಾಗುತ್ತದೆ ಹಾಗೂ ಅವುಗಳ ನಡುವೆ ಆಯ್ಕೆ ಅಂತ ಬಂದಾಗ priority scheduling ಮೂಲಕ ತನ್ನ ಹಕ್ಕು ಸ್ಥಾಪಿಸುತ್ತಿರುವ ಜಾಬ್ ಗೆ ಆದ್ಯತೆ ಕೊಡಲಾಗುತ್ತದೆ.

ಇನ್ನು ಸಮಾಜ/ಸರಕಾರವೆಂಬ ಸಿಸ್ಟಂ ಕಡೆ ಬರೋಣ. ಸಧ್ಯಕ್ಕೆ ನನಗನ್ನಿಸುತ್ತಿರುವುದು ನಾವೆಲ್ಲ FCFS ನಂತಹ ಸರಳ ಸೂತ್ರಗಳತ್ತ ವಾಲುತ್ತಿದ್ದೇವೆ. ಜಗತ್ತಿನ ಸಂಕೀರ್ಣತೆ ಅರ್ಥವಾಗದಿದ್ದಾಗ ನಮ್ಮ ಮೆದುಳಿನ ನೇರಕ್ಕೆ ಮೂಗಿನ ನೇರಕ್ಕೆ ಸರಿಯೆನಿಸುವ ಈ ಸೂತ್ರ ನಮ್ಮನ್ನು ಆಕರ್ಷಿಸುವುದು ನಿಜ. ಹಾಗೆ ನೋಡಿದರೆ ಪ್ರಪಂಚದ ಅತ್ಯಂತ ಸಂಕೀರ್ಣ ಕಂಪ್ಯೂಟರಿಗಿಂತ ಕಡು-ಸಂಕೀರ್ಣ ಸಮಾಜ ನಮ್ಮದು. ಇಲ್ಲಿ ಎಲ್ಲ ಬಗೆಯ ಜನ ಇದ್ದಾರೆ.


ಸಸ್ಯಾಹಾರಿಗಳು-ಮಾಂಸಾಹಾರಿಗಳು, ಬಡವರು-ಶ್ರೀಮಂತರು, ಧರ್ಮಗಳು ಜಾತಿಗಳು, ಭಾಷೆಗಳು, ಆಚಾರ ವಿಚಾರ, ಬಟ್ಟೆ… ನಮ್ಮ ಕೈಲಿರದ ನಮ್ಮಿಂದ ನಿರ್ಧಾರವಾಗದ ನಮ್ಮ ಜೆನೆಟಿಕ್ಸ್ ಕೂಡ ಭಿನ್ನವಾಗಿರುವಂತಹ ಸಂಕೀರ್ಣತೆ ಇಲ್ಲಿದೆ. ಕಪ್ಪು, ಕಂದು ಬಿಳಿಯ ಚರ್ಮದವರಿದ್ದಾರೆ. ಉದ್ದ ಗಿಡ್ಡ ದಪ್ಪ ಸಣ್ಣ ಇದ್ದಾರೆ. ತೀಕ್ಷ್ಣ ಮತಿ ಮಂದ ಮತಿಗಳಿದ್ದಾರೆ. ಹೀಗಿದ್ದೂ ನಾವಿಂದು ಏಕ ನೀತಿ ಏಕ ಸಂಸ್ಕೃತಿಯತ್ತ ಒಲವು ತೋರುತ್ತಿದ್ದೇವೆ. ಅದಕ್ಕಾಗಿ ನಾವು ಕೊಡುತ್ತಿರುವ ಕಾರಣ ಆಡಳಿತದ ಸರಳೀಕರಣ. ಆದರೆ ನಮ್ಮೊಳಗೆ ಕೆಲಸ ಮಾಡುತ್ತಿರುವ ಆಲೋಚನೆಯಂದರೆ ನಮಗೆ ನಾವೇ ಸಬಲರೆಂದುಕೊಂಡು ನಮಗಿಂತ ದುರ್ಬಲರು ಅನರ್ಹರೆಂದು ಭಾವಿಸುವುದು. ನಿಜ ಏನೆಂದರೆ ಎಲ್ಲ ಬಗೆಯ ಮನುಷ್ಯರೂ ಕೆಲವು ವಿಷಯಗಳಲ್ಲಿ ಸಬಲರಿರುತ್ತಾರೆ, ಮತ್ತು ಇನ್ನು ಕೆಲವು ವಿಷಯಗಳಲ್ಲಿ ದುರ್ಬಲರಿರುತ್ತಾರೆ. ತಾನು ಸಬಲನಾಗಿರುವ ವಿಚಾರದಲ್ಲಿ FCFS ಇರಬೇಕೆಂದೂ ತಾನು ದುರ್ಬಲ ಇರುವ ವಿಚಾರಗಳಲ್ಲಿ RR ಬೇಕೆಂದು ಬಯಸುವ ಮನುಷ್ಯ ಹುಟ್ಟಾ ಅವಕಾಶವಾದಿ. ಅದೃಷ್ಟವಶಾತ್ ಕಂಪ್ಯೂಟರ್ಸ್ ನಲ್ಲಿ ಹೀಗೆ ಅವಕಾಶವಾದಿತನಕ್ಕೆ ಜಾಗವಿಲ್ಲ. ಹಾಗೇನಾದರೂ ರಾಜಕೀಯಕ್ಕೆ ಅವಕಾಶ ಮಾಡಿಕೊಟ್ಟರೆ ಏಕ್ದಂ ಸಿಸ್ಟಂ ಕ್ರಾಷ್ ಆಗುತ್ತದೆ.

ದುರದೃಷ್ಟವೆಂದರೆ ಸಮಾಜ ಹಾಗೆ ತತ್ ತಕ್ಷಣಕ್ಕೆ ಕ್ರಾಷ್ ಆಗುವುದಿಲ್ಲ. ಇಲ್ಲಿನ ಪ್ರಕ್ರಿಯೆ ನಿಧಾನ. ನಮ್ಮ ಅರಿವಿಗೆ ಕೂಡಲೆ ಬರುವುದಿಲ್ಲ. ಈ ವಿಘಟನಾ ಕ್ರಿಯೆ ದಶಕಗಳ ನಂತರ ಗೋಚರಿಸಲಾರಂಭಿಸುತ್ತದೆ. ಅಷ್ಟರಲ್ಲಿ ಆಗುವ ಪ್ರಮಾದವೆಲ್ಲ ಆಗಿ ಹೋಗಿ ಇನ್ನು ಸಿಸ್ಟಂ ಸಂಪೂರ್ಣ ಕ್ರಾಷ್ ಆಗಿ ರೀಬೂಟ್ ಆಗುವವರೆಗೆ ಕೈಕಟ್ಟಿ ಕಾಯದೆ ಬೇರೆ ವಿಧಿಯಿರುವುದಿಲ್ಲ.

ನಾವೆಲ್ಲ ಈಗ ಅಂತಹ ವಿಘಟನಾ ಹಂತದಲ್ಲಿದ್ದೇವೆ. ಇನ್ನು ಐದತ್ತು ವರ್ಷ ಹೀಗೇ ಒಡೆಯುತ್ತ ಹೋದರೆ ಅದಾದ ನಂತರ ಸಿಸ್ಟಂ ಸರಿಪಡಿಸುವ ಅವಕಾಶ ಕೈತಪ್ಪಿ ಸಂಪೂರ್ಣ ಕ್ರಾಷ್ ಗೆ ಕಾಯುತ್ತ ಕುಳಿತುಕೊಳ್ಳಬೇಕಾಗುತ್ತದೆ. ಹಾಗಾಗುವುದಕ್ಕು ಮುನ್ನ ಎಚ್ಚೆತ್ತು ಆರೋಗ್ಯಕರ, ಸ್ಥಿರ ಸಮಾಜ ಕಾಯ್ದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅದಿಲ್ಲದಿದ್ದರೆ ನಮ್ಮ ಮಕ್ಕಳ ಕಾಲಕ್ಕೆ ಕ್ರಾಷ್ ಆದ ಸಿಸ್ಟಂ ಅನ್ನು ಬಿಟ್ಟು ಹೋಗುವ ಅಪಾಯವಿದೆ.