ಕೈಲಾಸಂ ನಾಟಕಗಳದ್ದು ಈ ಕಥೆಯಾದರೆ ಸಂಸರದು ಮತ್ತೊಂದು ಬಗೆ. ಅವರದೆಲ್ಲ ಚಾರಿತ್ರಿಕ ನಾಟಕಗಳು. ರಂಗಶಾಲೆಗಳು ಮತ್ತು ರಂಗಸಂಸ್ಥೆಗಳು ಮಾತ್ರ ಕಟ್ಟಿ ನಿಲ್ಲಿಸಬಹುದಾದ ಪ್ರಯೋಗಗಳು. ಅಮೇಚೂರ್ ಗಳಿಗೆ ಸಂಸರು ನಿಲುಕುವುದು ಕಷ್ಟ. ಕೈಲಾಸಂ ಮತ್ತು ಸಂಸರು ಒಂದೇ ಕಾಲಮಾನದವರಾದರೂ ಇವರ ಭಾಷಾ ಪ್ರಯೋಗದ ಅನನ್ಯತೆ ದೊಡ್ಡದು. ಕೈಲಾಸಂ ಕಟ್ಟಿರುವ ಭಾಷೆ- ಅದನ್ನು ಒಡೆದು ಓದುವ ಕ್ರಮ ತಿಳಿಯದಿದ್ದರೆ ಅವರ ನಾಟಕಗಳು ದಕ್ಕುವುದಿಲ್ಲ. ಸಂಸರನ್ನು ಓದಬೇಕಾದರೆ ಹಳಗನ್ನಡದ ಅಥವಾ ನಡುಗನ್ನಡದ ಟಚ್ ಇರಿಸಿಕೊಂಡಿರಬೇಕು. ಶಾಸ್ತ್ರೀಯವಾಗಿ ಅಭ್ಯಸಿಸಬೇಕು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ವರ್ತಮಾನದ ಸದ್ಯದ ಸ್ಥಿತಿ ನನಗೆ ಹಗ್ಗ ಜಗ್ಗುವ ಆಟದಂತೆ ಕಾಣಿಸುತ್ತಿದೆ. ಒಂದು ಬದಿಯಲ್ಲಿ ಕೊರೋನ ಹಗ್ಗದ ತುದಿ ಹಿಡಿದುಕೊಂಡಿದೆ. ಮತ್ತೊಂದು ಕಡೆ ರಂಗಕರ್ಮಿಗಳು ಹಗ್ಗ ಹಿಡಿದುಕೊಂಡಿದ್ದಾರೆ. ಕೊರೋನ ಒಮ್ಮೆ ಹಗ್ಗ ಸಡಿಲಬಿಟ್ಟಂತೆ ಮಾಡಿದಾಗ ರಂಗಕರ್ಮಿಗಳು ಸಕ್ರಿಯ. ಮತ್ತೆ ಕೆಲಸ ಆರಂಭಿಸಿದ ನಿರಾಳತೆ. ಕೊರೋನ ನಗುತ್ತ ಸಡಿಲ ಬಿಟ್ಟ ಹಗ್ಗವನ್ನ ಬಿಗಿ ಮಾಡಿದಾಗ ಮತ್ತೆ ಧಾವಂತ. ಎಲ್ಲ ಕೆಲಸ ಸ್ತಬ್ಧ.

ಇಂಥದ್ದೊಂದು ಆಟದ ನಡುವೆಯೇ ರಂಗಕಲಾವಿದರ ವಿವಿದ್ದೋದ್ಧೇಶ ಸಹಕಾರ ಸಂಘ ಹಾಗೂ ನಾಟಕ ಬೆಂಗಳೂರು ಸೇರಿ ಈಚೆಗೆ ಒಂದು ರಂಗ ಕಾರ್ಯಕ್ರಮ ಹಮ್ಮಿಕೊಂಡಿತು. ಅದು ಆಧುನಿಕ ನಾಟಕ ಪ್ರವರ್ತಕರು ಎಂದು ಕರೆಸಿಕೊಂಡ ಕೈಲಾಸಂ ಹಾಗೂ ಸಂಸರ ಕುರಿತ ಕಾರ್ಯಕ್ರಮ. ಇದಕ್ಕೊಂದು ಹಿನ್ನೆಲೆ ಇದೆ. 1919 ರಲ್ಲಿ ಎಡಿಎ ರಂಗಮಂದಿರ ನಾಟಕ ರಚನಾ ಸ್ಪರ್ಧೆಯೊಂದನ್ನು ನಡೆಸುತ್ತದೆ. ಆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುವ ನಾಟಕ, ‘ಟೊಳ್ಳುಗಟ್ಟಿ’. ಇದರ ಕರ್ತೃ ಟಿ.ಪಿ.ಕೈಲಾಸಂ. ಎರಡನೆಯ ಬಹುಮಾನ ‘ಸುಗುಣ ಗಂಭೀರ’ ಕ್ಕೆ ಸಲ್ಲುತ್ತದೆ. ಸಂಸರು ಬರೆದ ನಾಟಕ ಇದು. ಈ ಎಲ್ಲ ಆಗಿ ಒಂದು ಶತಮಾನ ಕಳೆದರೂ ಈ ಇಬ್ಬರು ಮಹತ್ವದ ನಾಟಕಕಾರರು ಮುಂದೆ ತಾವು ಬರೆದ ನಾಟಕಗಳಿಂದ ಮನ್ನಣೆ, ಆದರ ಮತ್ತು ಅಭಿಮಾನಗಳನ್ನು ಗಳಿಸಿದರು. ಸತ್ವವಿಲ್ಲದವರ ಹೆಸರುಗಳನ್ನು ಮುಲಾಜಿಲ್ಲದೆ ತೊಡೆದುಬಿಡುವ ಕಾಲದ ಕೈ ಹಿಡಿದು ನಿಲ್ಲಿಸಿದಂತೆ ಕೈಲಾಸಂ ಹಾಗೂ ಸಂಸ ತಮ್ಮ ಪ್ರಸ್ತುತತೆ ಕಾಣಿಸುತ್ತ ಉಳಿಯುತ್ತ ಬಂದಿದ್ದಾರೆ.

(ಟಿ.ಪಿ. ಕೈಲಾಸಂ)

ಇಂಥದ್ದೊಂದು ಕಾರ್ಯಕ್ರಮದ ವಿವರ ಕೇಳಿದಾಗ ನನಗೆ ಕೊಂಚ ಅಚ್ಚರಿ ಆಯಿತು. ಹಾಗೇ ಒಂಚೂರು ಆಪ್ಟಿಮಿಸ್ಟಿಕ್ ಕೂಡ ಆದೆ. ನನ್ನ ಲೆಕ್ಕಾಚಾರವೇ ತಪ್ಪಿರಬಹುದೇ ಎಂದೂ ಯೋಚಿಸಿದೆ. ಯಾಕೆಂದರೆ ಕಳೆದ ಒಂದು ದಶಕದಿಂದೀಚೆಗೆ ಬೆಂಗಳೂರಿನ ರಂಗವಲಯದಲ್ಲಿ- ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಒಂದು ಮುಖ್ಯ ರಂಗಮಂದಿರಲ್ಲಿ ಕೈಲಾಸಂ ನಾಟಕ ಪ್ರದರ್ಶನಗಳಿಗೆ ಸ್ಲಾಟ್ ಸಿಗದ ಪರಿಸ್ಥಿತಿ ಇತ್ತು. ಬಹುಶಃ ಈಗಲೂ ಆ ಪದ್ಧತಿಯನ್ನ ಆ ರಂಗಮಂದಿರದವರು ಮುಂದುವರೆಸಿಕೊಂಡು ಹೋಗುತ್ತಿರಬಹುದು. ನಾನು ಬಹಳ ಕಾಲ ಈ ಸಂಗತಿಯನ್ನ ಅನಲೈಸ್ ಮಾಡಿ ನೋಡಿದ್ದೆ. ಆ ರಂಗಮಂದಿರದವರು ತಾವು ಇಂಟಲೆಚ್ಯುವಲ್ಸ್ ಅಂತ ಹಣೆಪಟ್ಟಿ ಅಂಟಿಸಿಕೊಂಡಿರುವವರು. ಅವರಿಗೆ ಪಾಶ್ಚಾತ್ಯ ಶಂಖದಿಂದ ಬಿದ್ದದ್ದು ನಾಟಕದ ಹನಿಯಾಗಿ ಬಳ್ಳವಾಗುತ್ತದೆ. ಆಮೇಲೆ ನಮ್ಮ ಒಂದು ಕಾಲದ ಜನಜೀವನ, ಭಾಷೆಯಲ್ಲಿ ಪನ್ ಬಳಕೆ ಇವೆಲ್ಲ ಮುಖ್ಯವಲ್ಲ. ಅವರಿಗೆ ನಾಟಕಕಾರ ತನ್ನ ಮನೋರಂಗಭೂಮಿಯಲ್ಲಿ ನಡೆಯುವ ನಾಟಕದ ಕ್ರಮ ಹೀಗಿರುತ್ತದೆ ಎನ್ನುವುದು ಮುಖ್ಯವಾಗುವುದಿಲ್ಲ. ಅದು ಎಂಥದ್ದೇ ನಾಟಕವಾಗಿರಲಿ, ಅದಕ್ಕೆ ‘ವಿನ್ಯಾಸ’ ಎನ್ನುವುದು ಇವರುಗಳು ನೋಡಿರುವ ಸ್ಟೈಲೈಸ್ಡ್ ನಾಟಕಗಳ ರೀತಿಯಲ್ಲೇ ಇರಬೇಕು. ರಂಗದ ಮೇಲೆ ಬೆಳಕು ಹೋಳಿ ಹಬ್ಬ ಆಡಿದಂತೆ ಇರಬೇಕು. ಪಾತ್ರಗಳು ಕಚ್ಚೆ, ಕೋಟು ತೊಟ್ಟು ಎಲ್ಲ ಸಾಧಾರಣವಾಗಿ ಬರಬಾರದು. ಹಾಗೆ ಬಂದು ಭಾಷೆಯಲ್ಲಿ ಪನ್ ಮಾಡಿ ನಗಿಸುತ್ತಿದ್ದರೆ, ಅದು ಕೈಲಾಸಂ ಬರೆದರೂ ಅಷ್ಟೇ ಬೇರೆಯವರಯ ಬರೆದರೂ ಅಷ್ಟೇ ರಂಗ ಮಂದಿರದ ಸ್ಲಾಟ್ ಸಿಗುವುದಿಲ್ಲ. ಆದರೆ ಇದೇ ಕೈಲಾಸಂ ನಾಟಕವನ್ನ ಸ್ಟೈಲೈಸ್ಡ್ ಆಗಿ ನಾಟಕ ಮಾಡಿಸುವ ನಿರ್ದೇಶಕರು ಮಾಡಿಸಿದರೆ ಆಗ ಅದಕ್ಕೆ ಸ್ಲಾಟ್ ಸಿಗುತ್ತದೆ. ಅಂದರೆ ಇವರಿಗೆ ವಿನ್ಯಾಸ ಮುಖ್ಯ.

ಕೈಲಾಸಂ ನಾಟಕಗಳದ್ದು ಈ ಕಥೆಯಾದರೆ ಸಂಸರದು ಮತ್ತೊಂದು ಬಗೆ. ಅವರದೆಲ್ಲ ಚಾರಿತ್ರಿಕ ನಾಟಕಗಳು. ರಂಗಶಾಲೆಗಳು ಮತ್ತು ರಂಗಸಂಸ್ಥೆಗಳು ಮಾತ್ರ ಕಟ್ಟಿ ನಿಲ್ಲಿಸಬಹುದಾದ ಪ್ರಯೋಗಗಳು. ಅಮೇಚೂರ್ ಗಳಿಗೆ ಸಂಸರು ನಿಲುಕುವುದು ಕಷ್ಟ. ಕೈಲಾಸಂ ಮತ್ತು ಸಂಸರು ಒಂದೇ ಕಾಲಮಾನದವರಾದರೂ ಇವರ ಭಾಷಾ ಪ್ರಯೋಗದ ಅನನ್ಯತೆ ದೊಡ್ಡದು. ಕೈಲಾಸಂ ಕಟ್ಟಿರುವ ಭಾಷೆ- ಅದನ್ನು ಒಡೆದು ಓದುವ ಕ್ರಮ ತಿಳಿಯದಿದ್ದರೆ ಅವರ ನಾಟಕಗಳು ದಕ್ಕುವುದಿಲ್ಲ. ಸಂಸರನ್ನು ಓದಬೇಕಾದರೆ ಹಳಗನ್ನಡದ ಅಥವಾ ನಡುಗನ್ನಡದ ಟಚ್ ಇರಿಸಿಕೊಂಡಿರಬೇಕು. ಶಾಸ್ತ್ರೀಯವಾಗಿ ಅಭ್ಯಸಿಸಬೇಕು. ಆಗ ಮಾತ್ರ ದಕ್ಕುವ ನಾಟಕಗಳು ಅವು. ಈ ಇಬ್ಬರು ನಾಟಕಕಾರರು ತಮ್ಮ ನಾಟಕಗಳ ಜೊತೆಜೊತೆಗೆ ತಮ್ಮ ಬದುಕಿನ ಶೈಲಿಯಿಂದ ಕೂಡ ವಾದಗಳಿಗೆ ಗುರಿಯಾದವರು.

ಕೈಲಾಸಂ ಜೀನಿಯಸ್; ಅವರ ನಾಟಕಗಳಷ್ಟೇ ಅವರ ಖಾಸಗಿ ಬದುಕೂ ಅನಾವರಣವಾಗುತ್ತ ಹುಬ್ಬೇರಿಸುವಂತೆ ಮಾಡಿದೆ. ಅವರ ಖಾಸಗಿ ಬದುಕು ಹಾಗಿದಿದ್ದರಿಂದಲೇ ಅವರಿಗೆ ಹಾಗೆ ಬರೆಯಲು ಸಾಧ್ಯವಾಯಿತು ಎನ್ನುವ ಮಾತೂ ಇದೆ. ಆದರೆ ಸಂಸರದು ಮತ್ತೊಂದು ಬಗೆ. ಆ ಪರಿ ಮೇಧಾವಿಯಾಗಿದ್ದರೂ ಸಲ್ಲದ ಭಯಕ್ಕೆ ಗುರಿಯಾಗುತ್ತ ಕಡೆಗೆ ಸಾವಿಗೆ ತಮ್ಮನ್ನು ತೆತ್ತುಕೊಂಡವರು. ಅಥವಾ ಕಿರಂ ಮೇಷ್ಟ್ರು ಹೇಳಿದಂತೆ ‘ನೀಗಿ’ಕೊಂಡವರು.

(ಸಂಸ)

ಈ ಇಬ್ಬರು ನಾಟಕಕಾರರ ವೈಯಕ್ತಿಕ ಬದುಕೂ ನಾಟಕಗಳಿಗೆ ವಸ್ತುವಾಗಿ ಪ್ರಯೋಗಗಳಾಗಿವೆ. ಸಿ.ಆರ್. ಸಿಂಹ ಅವರು ಕೈಲಾಸಂ ಪಾತ್ರವೇ ತಾನಾಗಿ ನಿರ್ಗಮಿಸಿದರು. ಆದರೆ ಸಂಸರು ರಂಗದ ಮೇಲೆ ಪಾತ್ರವಾಗಿ ನಿಚ್ಚಳವಾಗಿ ಕಾಣಲಿಲ್ಲ ಎಂದು ನನಗೆ ಅನಿಸುತ್ತಲೇ ಇತ್ತು. ಕಿರಂ ಮೇಷ್ಟ್ರು ಬರೆದಿದ್ದ ‘ನೀಗಿಕೊಂಡ ಸಂಸ’ ನಾಟಕ ಓದಿದ್ದೆ. ಆದರೆ ಅದರ ಪ್ರಯೋಗ ನೋಡಿರಲಿಲ್ಲ. ಲಂಕೇಶರ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಕೂಡ ಸಂಸರ ಬದುಕಿನ ಕುರಿತದ್ದೇ. ಅವರ ಬದುಕಿನ ಒಂದು ಸೆಗ್ಮೆಂಟ್ ಬಗ್ಗೆ ವಿವೇಚನೆಗೆ ಈ ನಾಟಕ ಗುರಿಪಡಿಸುತ್ತದೆ. ಹಾಗೇ ಅದೇ ವೇಳೆ ಸಂಸರ ಬದುಕಿನ ಬಗ್ಗೆ ವಿಸ್ತೃತವಾಗಿ ಕೆದಕಲು ಅನುವು ಮಾಡಿಕೊಡುತ್ತದೆ.

‘ನೀಗಿಕೊಂಡ ಸಂಸ’ ರಂಗದ ಮೇಲಿನ ನಾಟಕೀಯ ಪರಿಭಾಷೆಯಲ್ಲಿ ಪಾತ್ರಗಳಾಗಿ ಹಂಚಿಹೋಗುತ್ತ ಸಂಸರ ಬದುಕಿನ ವಿಕ್ಷಿಪ್ತತೆಗೆ ಸಮಜಾಯಿಷಿಗಳನ್ನ ಕೊಡುತ್ತಾ ಸಾಗುತ್ತದೆ. ಇದರಲ್ಲಿ ಕಿರಂ ಮೇಷ್ಟ್ರು ಸಂಸರ ಕುರಿತಂತೆ ಗ್ರಹಿಸಿರುವ ಚಿಂತನೆಯ ಕ್ರಮಗಳನ್ನ ಗುರುತಿಸಬಹುದು. ಹಾಗಾಗಿ ಮೇಷ್ಟ್ರ ನಾಟಕ ಸಂಸರನ್ನ ನೋಡಬೇಕಾದ ಕ್ರಮಕ್ಕೆ ನಮ್ಮನ್ನು ಅಣಿಮಾಡುವಂತೆ ಇದೆ ಅನಿಸಿತ್ತು. ಆದರೆ ಇವುಗಳಿಂದ ಬಿಡಿಸಿಕೊಂಡು ಕೇವಲ ಸಂಸರ ತಳಮಳ, ಬೇಗುದಿ, ಅವರ ವಿಕ್ಷಿಪ್ತತೆ, ಅವರನ್ನು ಕಾಡುತ್ತಿದ್ದ ಭಯ ಇವೆಲ್ಲ ಒಟ್ಟಾಗಿ ಮತ್ತು ಢಾಳಾಗಿ ಕಂಡಿರಲಿಲ್ಲ.

‘ಬಿಂಬ’ ಚಿತ್ರದ ಬಗ್ಗೆ ಕೇಳಿದ್ದೆ. ಶ್ರೀನಿವಾಸ ಪ್ರಭು ಸರ್ ಅವರ ಮಹತ್ವಾಕಾಂಕ್ಷೆಯ ನಟನೆಯ ಸಿನಿಮಾ ಎಂದು ತಿಳಿದಿತ್ತು. ಈ ಸಿನಿಮಾ ಕೂಡ ಸಂಸರ ಬದುಕು ಮತ್ತು ಅವರಲ್ಲಿದ್ದ ಭಯದ ಹಸಿತನದ ಕುರಿತಾದದ್ದು. ಜೊತೆಗೆ ಹಲವು ಅನನ್ಯತೆಗಳನ್ನ ಒಳಗೊಂಡಿರುವ ಸಿನಿಮಾ. ಪ್ರಯೋಗಶೀಲತೆ ಇದರ ಮೊದಲ ಲಕ್ಷಣ. ಇಡೀ ಚಿತ್ರದ ಅವಧಿ ತೊಂಬತ್ತು ನಿಮಿಷಗಳು. ಇಡೀ ಚಿತ್ರ ಏಕವ್ಯಕ್ತಿ ಪ್ರಸ್ತುತಿ. ಇಡೀ ಚಿತ್ರವನ್ನ ಒಂದೇ ಶಾಟ್ ನಲ್ಲಿ ತೆಗೆಯಲಾಗಿದೆ. ಚಿತ್ರದಲ್ಲಿ ಒಂದೇ ವಾದ್ಯದ ಬಳಕೆ. ಇದು ಸವಾಲಿನ ಕೆಲಸ ಹೌದು. ಜೊತೆಗೆ ಶ್ರೀನಿವಾಸ ಪ್ರಭು ಸರ್ ‘ಸಂಸ’ ಪಾತ್ರವಾಗಿ ಮೈದಾಳಿರುವ ಬಗೆ ಕೇಳಿದ್ದೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಬಿಂಬ’ ಚಿತ್ರ ನೋಡುವ ಅವಕಾಶ ಸಿಕ್ಕಿತು. ಈ ಚಿತ್ರ ದಕ್ಕಿಸಿಕೊಟ್ಟ ಅನುಭವವೇ ಅನನ್ಯವಾದದ್ದು.

ಈಗ ಕಿರಂ ಮೇಷ್ಟ್ರ ನಾಟಕ ‘ನೀಗಿಕೊಂಡ ಸಂಸ’ದ ಮೂಲಕ ಶ್ರೀನಿವಾಸ ಪ್ರಭು ಸರ್ ಚಿತ್ರದ ನಟನೆಯ ಕಡೆಗೆ ನಿಮ್ಮನ್ನು ಕರೆದೊಯ್ಯುತ್ತೇನೆ. ಇದು ಅಗತ್ಯ. ಯಾಕೆಂದರೆ ಕಿರಂ ಮೇಷ್ಟ್ರು ಸಂಸರ ಬದುಕಿನಲ್ಲಿದ್ದ ಭಯಗಳಿಗೆ ಕೊಟ್ಟಿರುವ ತಾತ್ವಿಕ ಹೊಳಹುಗಳನ್ನು ಅರ್ಥೈಸಿಕೊಂಡರೆ ಶ್ರೀನಿವಾಸ ಪ್ರಭು ಸರ್ ಅವರ ನಟನೆಯನ್ನು ಅರ್ಥೈಸಿಕೊಳ್ಳುವ ಮತ್ತೊಂದು ಮಜಲು ಅಥವಾ ಬಗೆ ನಮಗೆ ಸಿಗುತ್ತದೆ. ಕಿರಂ ಮೇಷ್ಟ್ರ ತಾತ್ವಿಕತೆಯನ್ನು ಶ್ರೀನಿವಾಸ ಪ್ರಭು ಸರ್ ಅವರ ನಟನೆ ಹೆಚ್ಚು ಶಕ್ತಗೊಳಿಸುತ್ತದೆ. ಅವರ ನಟನೆ ‘ಬಿಂಬ’ ಚಿತ್ರದಲ್ಲಿ ಅಷ್ಟು ಪರಿಣಾಮಕಾರಿಯಾಗಿದೆ.

ಸಂಸರು ಯಾಕೆ ಅಷ್ಟು ನಿಗೂಢವಾಗಿದ್ದರು? ಕಿರಂ ಮೇಷ್ಟ್ರ ಬರೆದ ನಾಟಕದಲ್ಲಿ ‘ನಿಗೂಢತೆ, ನಿಗೂಢ ಪ್ರತಿಭೆ… ಇವೆಲ್ಲ ವಿವರಣೆಗೆ ಸಿಗೋದಿಲ್ಲ. ಅದೇ ಅದರ ಮುಖ್ಯ ಗುಣ. ದೈತ್ಯ ಪ್ರತಿಭೆ ಹಾಗೇ..’ ಎಂಬ ಸಾಲು ಬರುತ್ತದೆ. ಇದು ಸಂಸರ ಗುಣ ಮತ್ತು ಪ್ರತಿಭೆಗೆ ಅನ್ವಯವಾಗುವಂಥದ್ದು.

ಇಂಥ ಪ್ರತಿಭೆ ಭಯದಲ್ಲಿ ತತ್ತರಿಸುತ್ತಿದ್ದದ್ದು ಯಾಕೆ? ಕಿರಂ ಮೇಷ್ಟ್ರು ಸಂಸರಿಂದ ಹೇಳಿಸಿರುವ ಮಾತುಗಳು: “ನನ್ನ ದಾರಿ ನೇರವಾದದ್ದಲ್ಲ; ಅಂಕುಡೊಂಕಿನಿಂದ ಕೂಡಿದ್ದು. ನನಗೆ ಮೈಸೂರು ಅಂದರೆ ಅತಿಯಾದ ಪ್ರೀತಿ. ಆದರೆ ಮೈಸೂರಿನಲ್ಲಿ ಬೆಳೀತಾ ಇರೋ ಸೊಕ್ಕು, ಗದ್ದಲ, ಮುಖವಾಡ… ಇದರಿಂದ ತಪ್ಪಿಸಿಕೊಂಡು ನಾನು ನನ್ನನ್ನು ಕಂಡುಕೊಳ್ಳುವುದಕ್ಕೆ, ನನ್ನ ಸೃಷ್ಟಿಗೆ ಧಾತುಗಳನ್ನ ಹುಡುಕಿಕೊಳ್ಳುವುದಕ್ಕೆ ಹೊರಡುತ್ತೇನೆ…”

ಹಾಗಾದರೆ ಹೊರಟು ಏನು ಮಾಡುತ್ತಾರೆ ಎಂದು ಕೇಳಿಕೊಂಡರೆ ಮತ್ತೆ ಸಂಸರಿಂದ ಕಿರಂ ಮೇಷ್ಟ್ರು ಹೇಳಿಸಿರುವ ಮಾತುಗಳು ಹೀಗಿವೆ: “ಮತ್ತೆ ನಾಟಕ ರಚನೆಯಲ್ಲಿ ತೊಡಗಿಕೊಳ್ಳುತ್ತೇನೆ. ಪರಾಕ್ರಮ ಕಳೆದುಕೊಂಡಿರೊ ರಾಜರ ಖಡ್ಗದ ವ್ಯಂಗ್ಯ ಮಾಡುತ್ತೇನೆ. ಬ್ರಿಟಿಷರ ರೂಪಾಯಿಗಳ ಮಧ್ಯೆ ಹೂತು ಹೋಗಿರುವ ಈ ರಾಜರನ್ನ ಬೀದಿಗೆಳೀತೀನಿ..”

ಈ ಕೆಚ್ಚು ಸರಿ; ಆದರೆ ಇದೇ ಭಯವಾಗಿ ಸಂಸರನ್ನು ಕಾಡಲು ಆರಂಭಿಸಿತೆ ಹಾಗಾದರೆ? ಇದಕ್ಕೆ ಉತ್ತರ ನಾಟಕದಲ್ಲಿ ಸಿಗುತ್ತದೆ: “ನರಬಲಿಗಾಗಿ ಕತ್ತಿಹಿರಿದು ನಿಂತಿರುವ ಬ್ರಿಟಿಷರು ನನ್ನ ಮೇಲೆ ಹೊಂಚು ಹಾಕುತ್ತಿರುವ ರಾಕ್ಷಸರು. ಹಾಗೆಯೇ ಮನುಷ್ಯನಲ್ಲೇ ಮಿಂಚಿ ಮರೆಯಾಗುವ ರಾಕ್ಷಸರು.. ಕನಸಿನಲ್ಲಿ ನಿಶ್ಯಬ್ದವಾಗಿ ತೇಲಿಹೋಗುವ ರಾಕ್ಷಸರು..”

ಸತ್ವವಿಲ್ಲದವರ ಹೆಸರುಗಳನ್ನು ಮುಲಾಜಿಲ್ಲದೆ ತೊಡೆದುಬಿಡುವ ಕಾಲದ ಕೈ ಹಿಡಿದು ನಿಲ್ಲಿಸಿದಂತೆ ಕೈಲಾಸಂ ಹಾಗೂ ಸಂಸ ತಮ್ಮ ಪ್ರಸ್ತುತತೆ ಕಾಣಿಸುತ್ತ ಉಳಿಯುತ್ತ ಬಂದಿದ್ದಾರೆ.

ಸಂಸ ಹೀಗಂದುಕೊಂಡಿದ್ದರು. ಆದರೆ ನಿಜದ ಸಂಗತಿ ಅಂದರೆ ವಸ್ತುಸ್ಥಿತಿ ಹಾಗಿರಲಿಲ್ಲ. ಇದನ್ನ ದೂರಮಾಡಲು ಹಲವರು ಪ್ರಯತ್ನಿಸುತ್ತಾರೆ. ಆದರೆ ಸಂಸರ ವಾದವೇ ಬೇರೆ- “ರಾಕ್ಷಸರು… ಎಲ್ಲಿ ಅಂದರೆ ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ಮುಗ್ಧರ ಅಂತರಾಳಗಳಲ್ಲಿ, ಹೇಡಿಗಳ ಮುಖಗಳಲ್ಲಿ, ಪರಾಕ್ರಮಗಳ ಅಹಂಕಾರದಲ್ಲಿ…”

ಆದರೆ ಹೀಗೆಲ್ಲ ಏನೂ ಇಲ್ಲ ಎಂದರೂ ಸಂಸರು ನಾಟಕದಲ್ಲಿ ಅದಕ್ಕೂ ಸಮಜಾಯಿಷಿ ಕೊಡುತ್ತಾರೆ- “ನಿಜ, ಆದರೆ ಲೇಖಕನಾಗಿ ನನ್ನ ದೃಷ್ಟಿಯೇ ಬೇರೆ. ಜನರ ಮನಸ್ಸಿನ ಆಳದಲ್ಲಿ ಸೇರಿಹೋಗಿರುವ ಈ ಕಲ್ಪನೆಗಳು ನನ್ನನ್ನ ನಿರಂತರವಾಗಿ ಕಾಡಿವೆ. ಅವು ವಿವರಿಸುವುದಕ್ಕೆ ಆಗದೆ ಇರುವ ಚಹರೆಗಳನ್ನು ಭಾವಚಿತ್ರಗಳನ್ನ ಸೃಷ್ಟಿಸಿವೆ..”

ಆದರೆ ರಾಕ್ಷಸರು ಅವಾಸ್ತವಿಕ ಅಲ್ಲವೇನು ಅಂದರೆ ಕಿರಂ ಅವರ ಸಂಸರ ಪ್ರಕಾರ – “ಅಲ್ಲ ಅದು ನಿಜ. ನಮ್ಮ ಮನಸ್ಸಿನ ಮೂಲೆಯಲ್ಲಿ ಅಡಗಿರುವ ರಾಕ್ಷಸನಿಗೂ ಬಹಿರಂಗದಲ್ಲಿ ಸಂಧಿಸುವ ರಾಕ್ಷಸರಿಗೂ ನಡೆಯುವ ನಿರಂತರ ಘರ್ಷಣೆ ಮುಖ್ಯ…”

ಇದು ಸಂಸರನ್ನು ಎಲ್ಲಿಗೆ ಮುಟ್ಟಿಸಿತ್ತು ಅಂದರೆ – “ಮೊದಲು ಜೀವಭಯ ಇದ್ದದ್ದು ನಿಜ. ಆದರೆ ಆ ಭಯ ಜೀವಗಳ್ಳತನದಿಂದ ಬಂದದ್ದಲ್ಲ. ನನ್ನ ಕೃತಿಗಳ ಮೇಲೆ ಹಲ್ಲೆ ನಡೆದಾಗ ಉಂಟಾದ ಭಯ. ಈಗಿನ ವಿಕ್ರಮರಾಯರು- ಅಂದರೆ ಬ್ರಿಟಿಷರು, ಪೊಲೀಸರು, ಸಂಚುಗಾರರು..”

ಐತಿಹಾಸಿಕದ ಪಾತ್ರವೊಂದು ತನ್ನ ಕಾಲಮಾನದ ಪಾತ್ರವಾಗಿ ಅರಳಿಕೊಳ್ಳುವ ಬಗೆಯನ್ನು ಕಿರಂ ಮೇಷ್ಟ್ರು ಗುರುತಿಸಿ ತೋರಿಸುತ್ತಾರೆ. ಇದು ಚೆಂದದ ಅನುಭವ. ವಿಕ್ರಮರಾಯನ ಕುಟಿಲತೆಗಳು ಹೇಗಿದ್ದವು ಎನ್ನುವುದನ್ನು ಕಿರಂ ಮೇಷ್ಟ್ರು ನಾಟಕದಲ್ಲಿ ಕಟ್ಟಿಕೊಡುತ್ತಲೇ ಅದನ್ನು ಆಧುನಿಕ ಸಂವೇದನೆಗೆ ತಿರುಗಿಸಿ ಅರ್ಥ ಮಾಡಿಸುವ ಕೆಲಸವನ್ನ ನಾಟಕದಲ್ಲಿ ಮಾಡಿದ್ದಾರೆ. ನಾಟಕದಲ್ಲಿ ಸಹಜವಾಗಿ ರಂಗತಂತ್ರ ಇದೆ. ಒಂದೇ ಪಾತ್ರ ಹಲವು ಪಾತ್ರಗಳಾಗಿ ಒಡೆದು ಮಾತಾಡುತ್ತವೆ. ತಿರುವುಗಳು ಇವೆ. ನಾಟಕೀಯ ಸನ್ನಿವೇಶಗಳ ಬೆಸುಗೆ ಇದೆ.

ಈ ಪ್ರಯೋಗ ಹೀಗೆ ಚದುರುತ್ತಲೇ ಒಟ್ಟಂದದ ಅನುಭವದ ಕಡೆಗೆ ತುಡಿದರೆ ಶ್ರೀನಿವಾಸ ಪ್ರಭು ಸರ್ ಅವರ ಸಂಸರ ಕುರಿತ ಅಧ್ಯಯನ ಕ್ರಮ ವ್ಯಕ್ತಿನೋಟವನ್ನ ಏಕತ್ರ ಮತ್ತು ಸಮಗ್ರವಾಗಿ ನೋಡಲು ಬಯಸಿದೆ. ‘ಬಿಂಬ’ ಚಿತ್ರವಾಗಿ ಮೈತಳೆಯುವುದಕ್ಕೂ ಮೊದಲು ಇದು ರಂಗದ ಮೇಲೆ ಏಕವ್ಯಕ್ತಿ ಪ್ರಸ್ತುತಿಯಾಗಿ ಮೈದಾಳಿದೆ ಎನ್ನುವುದು ಮುಖ್ಯವಾದ ಸಂಗತಿ. ರಂಗಸ್ಥಲದ ಚೌಕಟ್ಟಿಗೆ ಏನೇನು ಬೇಕೋ ಹಾಗೆ ಅಳವಡಿಸಿಕೊಂಡ ಪ್ರಯೋಗದ ಮೊದಲ ಹೆಸರು ‘ಬದುಕ ಮನ್ನಿಸು ಪ್ರಭುವೇ..’. ನಂತರ ಅದು ‘ಸಾಮಿಯ ಸ್ವಗತ’ ಆಯಿತು. ಸಂಸರ ಮೂಲ ಹೆಸರು ಸಾಮಿ ವೆಂಕಟಾದ್ರಿ ಅಯ್ಯರ್. ಕಿರಂ ಮೇಷ್ಟ್ರ ನಾಟಕದಲ್ಲಿ ಸಂಸರು ಲೋಕಾಂತವಾಗಿ ಮಾತಾಡಿದರೆ ಶ್ರೀನಿವಾಸ ಪ್ರಭು ಸರ್ ಅವರ ಪ್ರಯೋಗದಲ್ಲಿ ಸ್ವಗತಕ್ಕೆ ಒತ್ತು. ಸಂಸರ ಬದುಕಿನ ಕಡೆಯ ತೊಂಬತ್ತು ನಿಮಿಷಗಳಲ್ಲಿ ಅವರ ಮನಸ್ಸಿನಲ್ಲಿ ಏನೇನೆಲ್ಲಾ ಚಿತ್ರಗಳು ಹಾದುಹೋಗಿರಬಹುದು ಎನ್ನುವುದನ್ನು ‘ಬಿಂಬ’ ಚಿತ್ರ ಮಂಡಿಸುತ್ತದೆ.

ಇದು ಚಿತ್ರ ಹೌದಾದರೂ ನನಗೆ ನಾಟಕದಂತೆಯೇ ಕಂಡಿತು. ಲೈವ್ ಅಲ್ಲ ಅನ್ನುವುದು ಬಿಟ್ಟರೆ ಉಳಿದ ಎಲ್ಲ ಆಯಾಮದಲ್ಲೂ ಇದು ನಾಟಕವೇ. ಹೇಗೆಂದರೆ ನಾಟಕ ಒಮ್ಮೆ ಆರಂಭವಾದರೆ ಒಂದು ಸ್ಟ್ರೆಚ್ ನಲ್ಲಿ ಸಾಗುತ್ತದೆ. ಅದು ಒಂದು ದೃಶ್ಯವೋ ಹತ್ತು ದೃಶ್ಯವೋ ಅದು ಬೇರೆ ಮಾತು. ಇಲ್ಲಿ ಕಟ್ ಶಾಟ್ಸ್ ಗಳಿಲ್ಲದಿರುವುದರಿಂದ ಇದನ್ನು ನಾಟಕವಾಗಿಯೇ ಕಾಣುವ ಅವಕಾಶ ಇದೆ. ಕೆಮರಾ ಎನ್ನುವ ಸಾಧನದಿಂದ ಸೆರೆಹಿಡಿದಿರುವುದು ಅಂತನ್ನುವುದು ಬಿಟ್ಟರೆ ಉಳಿದ ಎಲ್ಲ ಬಗೆ ನಾಟಕದ ಅಂಶಗಳನ್ನೇ ಒಳಗೊಂಡಿದೆ. ಹೀಗೆ ಯೋಚಿಸುತ್ತಲೇ ಬಿಂಬ ನೋಡುತ್ತಾ ಕೂತೆ.

ಆದರೆ ಎಲ್ಲಕ್ಕಿಂತ ಮಹತ್ವದ್ದು ಅಂತ ನನಗೆ ಅನಿಸಿದ್ದು ಶ್ರೀನಿವಾಸ ಪ್ರಭು ಸರ್ ಅವರ ನಟನೆ ಮತ್ತು ತಲ್ಲೀನತೆ. ತೊಂಬತ್ತು ನಿಮಿಷಗಳು ಓತಪ್ರೋತವಾಗಿ ನಟಿಸುವುದು ಸಾಮಾನ್ಯದ ಸಂಗತಿಯಲ್ಲ. ಸಂಸರ ಬದುಕಿನ ತಲ್ಲಣಗಳು, ವಿಕ್ಷಿಪ್ತತೆ, ಭಯ, ಅವರಿಗೆ ಅವರೇ ಮಾಡಿಕೊಳ್ಳುವ ತಮಾಷೆಗಳು, ವಾಯ್ಸ್ ಮಾಡ್ಯುಲೇಷನ್, ಹಲವು ಭಾವ ಪ್ರಕಟಣೆ… ಎಲ್ಲವನ್ನೂ ಕಾಣಿಸಬೇಕು. ಪ್ರಭು ಸರ್ ಹಂತಹಂತವಾಗಿ ಆವರಿಸಿಕೊಳ್ಳುವ ಬಗೆಯನ್ನು ‘ಬಿಂಬ’ ಚಿತ್ರದಲ್ಲಿ ಕಾಣಬಹುದು.

ಈ ಚಿತ್ರವನ್ನ ಅಭ್ಯಾಸದ ದೃಷ್ಟಿಯಿಂದ ಮತ್ತೆ ಮತ್ತೆ ನೋಡಬೇಕು ಅನಿಸಿತು. ಟೋಟಲ್ ಕನ್ನಡದ ಸಂದರ್ಶನ ಸರಣಿಯಲ್ಲಿ ಪ್ರಭು ಸರ್ ಎನ್.ಎಸ್.ಡಿಯಲ್ಲಿನ ತನ್ನ ರಂಗ ಬದುಕು, ನಟನೆಯ ಸವಾಲುಗಳ ಬಗೆಗೆ ವಿವರಿಸಿದ್ದನ್ನ ಕೇಳಿದ್ದೆ. ಅಂದಿನ ಆ ಎಲ್ಲ ಸವಾಲುಗಳನ್ನು ಎದುರುಗೊಂಡದ್ದು ಒಟ್ಟಿಗೆ ‘ಬಿಂಬ’ ಚಿತ್ರದಲ್ಲಿ ಘನೀಭವಿಸಿದೆಯೇನೊ ಅನಿಸುತ್ತದೆ. ನಟನ ನಟನೆ ವೈಬ್ರಂಟ್ ಆಗಿ ಕಾಣುವ ಬಗೆ ಕಂಡುಕೊಳ್ಳಲು ‘ಬಿಂಬ’ ಚಿತ್ರದಲ್ಲಿ ಪ್ರಭು ಸರ್ ನಟನೆಗೆ ಕಣ್ಣು ತೆತ್ತು ಕೂರಬೇಕು. ಆ ನಟನೆ ನೋಡುವುದು ಹೆಮ್ಮೆ ಮತ್ತು ಖುಷಿ.

ಸಿನಿಮಾ ಮುಗಿದ ಮೇಲೆ ಚರ್ಚೆಗೆ ಒಳಗಾದ ವಿಚಾರವೇ ಬೇರೆ. ನಟ ಮತ್ತು ನಟನೆಯ ತಾಕತ್ತು ಎಂಥದ್ದು ಎಂದು ಸಾರಾಸಗಟಾಗಿ ಬಿಂಬಿಸುವ ‘ಬಿಂಬ’ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ. ಆದರೆ ನಮ್ಮ ನೆಲದಲ್ಲಿ ಪ್ರಭು ಸರ್ ಅವರಿಗೆ ಸಲ್ಲಬೇಕಾದ ಮನ್ನಣೆ ಸಂದಿಲ್ಲ. ಇದು ಪ್ರಭು ಸರ್ ಅವರ ಮಾತುಗಳಲ್ಲಿ ಸೂಚ್ಯವಾಗಿ ಕದಲುತ್ತಿದದ್ದು ವ್ಯಕ್ತವಾಗುತ್ತಿತ್ತು. ಜೋರು ಮತ್ತು ಗಟ್ಟಿ ದನಿಯಲ್ಲಿ ಈ ಬಗ್ಗೆ ಮಾತಾಡಲು ಮುಜುಗರ. ಒಂದು ಬಗೆಯಲ್ಲಿ ಸಂಕೋಚ. ಕೊಂಚ ನಿರಾಶೆಯಲ್ಲೇ ಸುಮ್ಮನಾಗುವ ಅಸಹಾಯತಕೆ ಎಲ್ಲವೂ ಪ್ರಭು ಸರ್ ಅವರಲ್ಲಿ ಕಾಣುತ್ತಿದ್ದವು.

ಅವರ ನಿರಾಶೆ ಸಕಾರಣವಾಗಿಯೇ ಇದೆ. ಒಂದು ಮಹತ್ತಿಗೆ ಸಲ್ಲಬೇಕಾದ ಮನ್ನಣೆ ಸಂದಾಯವಾಗದೇ ಹೋದಾಗ ಈ ಬಗೆಯ ನಿರಾಸೆ ಮೂಡುವುದು ಸಹಜ. ಯಾಕೆ ಈ ಬಗೆಯ ಅಸಡ್ಡೆ? ಏನು ಕೊರತೆ ಕಾಣಿಸುತ್ತಿದೆ? ಹೀಗೆ ಕೇಳಿದರೆ ಇಂಟಲೆಕ್ಚುವಲ್ಸ್ ಪಟ್ಟಿ ಕೊಡಬಲ್ಲರು. ಅದು ಸುಲಭ. ಆದರೆ ತಾದಾತ್ಮ್ಯದಿಂದ ನಟಿಸುವುದು ಅತ್ಯಂತ ಕಷ್ಟದ ಸಂಗತಿ. ನಮ್ಮ ವಿಮರ್ಶೆಗೆ ಈ ವಿನಯ ದಕ್ಕಬೇಕು ಅಂದರೆ ವಿಮರ್ಶಕರು ಮತ್ತೆ ಕೋಪಿಸಿಕೊಳ್ಳುತ್ತಾರೆ. ಇದು ದುರಂತ. ನಾವು ಕಂಡಿದ್ದರಲ್ಲಿ ಮತ್ತೇನೇನೋ ನಿರೀಕ್ಷಿಸುವುದಕ್ಕಿಂತ ಮತ್ತು ಆ ಬಗೆಗೆ ಪಟ್ಟಿಕೊಡುವುದಕ್ಕಿಂತ, ಘಟಿಸಿರುವುದರಲ್ಲಿನ ಮಹತ್ತಿನ ಬಗೆಗೆ ಮಾತಾಡುವ ಗುಣ ಇಲ್ಲವಾಗಿದೆ.

(ಶ್ರೀನಿವಾಸ ಪ್ರಭು)

ಕೈಲಾಸಂ ನಾಟಕಗಳು ಮಿಯರ್ ಕಾಮಿಡಿಗಳು. ಅದೂ ಆಲ್ಲದೆ ಅವು ಒಂದು ಕಾಲಘಟ್ಟದ ಬದುಕಿಗೆ ಸೀಮಿತವಾದವು ಎಂದು ಲೇಬಲ್ ಹಚ್ಚುವ ರಂಗಮಂದಿರವೊಂದರ ಹಿನ್ನೆಲೆಯಲ್ಲಿಯೇ ಶ್ರೀನಿವಾಸ ಪ್ರಭು ಸರ್ ಅವರ ಅಭಿನಯದ ಕುರಿತ ಅಸಡ್ಡೆಯನ್ನೂ ಅರ್ಥೈಸಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಿದ್ದೇನೆ. ಸಿ.ಆರ್. ಸಿಂಹ, ಶ್ರೀನಿವಾಸ ಪ್ರಭು ಸರ್ ಇವರುಗಳು ಪಾಶ್ಚಾತ್ಯರ ವಲಯದಲ್ಲಿ ಕದಲಿದ್ದರೆ ಅಲ್ಲಿನವರು ತಲೆಮೇಲೆ ಹೊತ್ತು ಮೆರೆಸುತ್ತಿದ್ದರು. ಆದರೆ ಇಲ್ಲಿ ನಟ ತಾನು ಸದಾ ಇರಿಸಿಕೊಳ್ಳಬೇಕಾದ ಆತ್ಮಾಭಿಮಾನ ಮತ್ತು ಸಂಯಮವನ್ನ ಮೀರಿ ತನಗೆ ದಕ್ಕಬೇಕಾದ ಮನ್ನಣೆ ತನಗೆ ದಕ್ಕದೆ ಹೋಯಿತು ಎಂದು ಮೇಲುನೋಟಕ್ಕೆ ತೋರುಗಾಣದಂತೆ ಮರುಗುವ ಸ್ಥಿತಿ ನಿರ್ಮಾಣವಾಗಿರುವುದು ದುರಂತದ ವಿಚಾರ. ಯಾವುದೋ ಸಾಮಾನ್ಯ ಪಾಶ್ಚಾತ್ಯ ನಾಟಕವೊಂದರ ಸಾಮಾನ್ಯ ಪಾತ್ರವನ್ನೂ ಕಣ್ಣರಳಿಸಿ ನೋಡುವ ಚಾಳಿ ಬೆಳೆಸಿಕೊಂಡಿರುವ ನಮಗೆ ನಮ್ಮವರ ಪ್ರತಿಭೆ ಮತ್ತು ಅನನ್ಯತೆ ನಿಲುಕುತ್ತಿಲ್ಲ. ಕೈಲಾಸಂ ನಾಟಕದಲ್ಲಿ ಕಚ್ಚೆ ಕೋಟು ತೊಟ್ಟು ಬಂದರೆ, ಕೇವಲ ಮನೆಯ ಸೆಟ್ ಇದ್ದರೆ, ಅದಕ್ಕೊಂದು ವಿನ್ಯಾಸ ಇಲ್ಲ ಎಂದು ತಳ್ಳಿಹಾಕಿಬಿಡುತ್ತಾರೆ. ಆದರೆ ಅದೇ ಇಂದಿನ ಬದುಕಿನ ಉಡುಪು, ಪಂಚೆ ಶರ್ಟು ಮರಾಠಿ ನಾಟಕದಲ್ಲಿ ಕಾಣಿಸಿಕೊಂಡರೆ ಅದು ಮಾನ್ಯ. ಆ ನಾಟಕದಲ್ಲಿ ಅಂಥದ್ದೊಂದು ಮಹತ್ವದ ಸ್ಫುರಣೆ ಇಲ್ಲದಿದ್ದರೂ ನಾವು ನಮ್ಮನ್ನು ಉದ್ದೀಪಿಸಿಕೊಂಡು ನಾಟಕ ನೋಡುತ್ತೇವೆ. ಆದರೆ ಪ್ರಭು ಸರ್ ಅವರು ನಟನೆಗೆ ಮೆರುಗು ತರುವ ಕೆಲಸ ಮಾಡಿದರೂ ಅದು ಕಣ್ಣಲ್ಲಿ ಚಿತ್ರವಾಗಿ ಕದಲುವುದಿಲ್ಲ. ಈ ಅನ್ಯದ ಅಂಟು ಜಾಡ್ಯ ಎಂದು ಮರೆಯಾಗುವುದೋ.

ಎಲ್ಲಕಿಂತ ನನಗೆ ಮೆಚ್ಚುಗೆ ಅನಿಸಿದ್ದು ಬೇರೆ ಸಂಗತಿ. ‘ಬಿಂಬ’ ಚಿತ್ರ ಪ್ರದರ್ಶನಕ್ಕೆ ಮೊದಲು ಖುದ್ದು ಶ್ರೀನಿವಾಸ ಪ್ರಭು ಸರ್ ಅದರ ಟೆಕ್ನಿಕಲ್ ಕಸರತ್ತುಗಳನ್ನು ಮುಗಿಸಿ, ಎಲ್ಲ ವ್ಯವಸ್ಥೆ ಸರಿ ಇದೆ ಅನಿಸಿದಾಗ ಊಟಕ್ಕೆ ತೆರಳಿದರು. ನಂತರ ಬಂದು ಚಿತ್ರದ ಕುರಿತು ಪ್ರಾಸ್ತಾವಿಕ ಮಾತನ್ನೂ ಆಡಿದರು. ಇನ್ನೇನು ಎಲ್ಲ ಮುಗಿದು ಈಗ ‘ಬಿಂಬ’ ಚಿತ್ರ ನೋಡುಗರ ಕಣ್ಣುಗಳಿಗೆ ನಿಲುಕಬೇಕು ಅನ್ನುವ ವೇಳೆ ತಾಂತ್ರಿಕ ಸಮಸ್ಯೆಗಳು ಶುರುವಾದವು. ಸೌಂಡ್ ಸಮಸ್ಯೆ ಇತ್ಯಾದಿ. ಆಗ ಪ್ರಭು ಸರ್ ನಿಜಕ್ಕೂ ಮಿಡುಕಿದರು. ಹಣೆಮೇಲೆ ಕೈ ಇರಿಸಿಕೊಂಡು ಹತಾಶೆ ವ್ಯಕ್ತಪಡಿಸಿದರು. ಚಿತ್ರ ತಾಂತ್ರಿಕ ತೊಂದರೆಗಳಿಂದ ಮುಂದೋಡುತ್ತಲೇ ಇತ್ತು. ಆದರೆ ಒಂದು ಘಟ್ಟದಲ್ಲಿ ತಾಂತ್ರಿಕ ದೋಷ ನಿವಾರಣೆ ಆಗಿ ಚಿತ್ರಕ್ಕೆ ಸರಾಗ ದೊರಕಿದಾಗ ಪ್ರಭು ಸರ್ ಮತ್ತೆ ಮೊದಲಿಂದ ಚಿತ್ರ ಆರಂಭಿಸಲು ಸೂಚಿಸಿದರು. ನಂತರ ಕೊಂಚ ನಿರಾಳವಾದಂತೆಯೂ ಕಂಡರು.

ನಟ ತನ್ನ ಪ್ರಸ್ತುತಿ ಸರಿಯಾದ ಕ್ರಮದಲ್ಲಿ ಬಿತ್ತರವಾಗುತ್ತಿಲ್ಲ ಎಂದು ತಿಳಿದಾಗ ಮಿಡುಕುವುದು ಕಲೆಯ ಬಗ್ಗೆ ಅವರಿಗಿರುವ ಶ್ರದ್ಧೆ ಮತ್ತು ಶ್ರಮವನ್ನು ಕಾಣಿಸುತ್ತದೆ. ಈ ಬಗೆಯ ಬದ್ಧತೆ ಇರಿಸಿಕೊಂಡಿರುವವರನ್ನೂ ವಿಮರ್ಶಾ ಲೋಕ ಕಡೆಗಣಿಸುತ್ತಿದೆ. ಈ ವಿಮರ್ಶಕರನ್ನು ವಿಮರ್ಶಿಸುವ ಕೆಲಸ ತುರ್ತಾಗಿ ಆಗಬೇಕಿದೆ.