ಈಗ ಕಂಪ್ಯೂಟರ್ ಯುಗ ಬಂದು, ಎಲ್ಲಾ ದಾಖಲು ಡಿಜಿಟಲೀಕರಣ ಆಗಿ, ಪ್ರತಿ ರೋಗಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೊಡುವುದರಿಂದ, ಹಿಂದಿನ ದಿನಗಳಂತೆ ಸರ್ಟಿಫಿಕೇಟ್ ಕೊಡುವುದು ಸ್ಪಲ್ಪ ಕಷ್ಟ. ಹಾಗೆಯೇ ಈಗ, ಕೆ. ಪಿ. ಎಂ. ಇ. ಕಾನೂನಿನಲ್ಲಿ ಪ್ರತಿ ವೈದ್ಯರೂ, ತಾವು ಚಿಕಿತ್ಸೆ ನೀಡುವ ಎಲ್ಲಾ ರೋಗಿಗಳ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದು ಇಡಬೇಕು ಎಂದಿದೆ. ಹಾಗಾಗಿ ಈ ಮೊದಲಿನಂತೆ ಸರ್ಟಿಫಿಕೇಟ್ ಕೊಡಲು, ಈಗ ಬಹಳ ಪ್ರಯಾಸ ಪಡಬೇಕು.
ಡಾ. ಕೆ.ಬಿ. ಸೂರ್ಯಕುಮಾರ್‌ ಬರೆಯುವ ನೆನಪುಗಳ ಮೆರವಣಿಗೆ ಸರಣಿಯ ಕಂತು ನಿಮ್ಮ ಓದಿಗೆ

 

ವೈದ್ಯನಾದವನಿಗೆ ಸಾಧಾರಣವಾಗಿ ತನ್ನ ಕೆಲಸ, ರೋಗಿಗಳ ಚಿಕಿತ್ಸೆ ಮಾಡುವುದರ ಮಧ್ಯೆ ಕೆಲವೊಮ್ಮೆ ಕಂಡು ಬರುವ ಕಿರಿ ಕಿರಿಯ ವಿಷಯವೆಂದರೆ, ಕೆಲವರು ಬಂದು ಕೇಳುವ ಮೆಡಿಕಲ್ ಸರ್ಟಿಫಿಕೇಟ್ ಅಥವಾ ವೈದ್ಯಕೀಯ ದೃಢೀಕರಣ ಪತ್ರ . ಸಾಧಾರಣವಾಗಿ ಶಾಲೆಗೆ ಚಕ್ಕರ್ ಹಾಕಿದ ಮಕ್ಕಳು, ಮನೆಯಲ್ಲಿ ಯಾವುದೋ ಸಮಾರಂಭ ಇದ್ದಾಗ ಆಫೀಸಿಗೆ ಹೋಗದೆ ಇರಲು ಮಾಡುವ ಒಂದು ಯತ್ನ, ವಿಮಾ ಕಂಪನಿಯ ಪಾಲಿಸಿ ಮತ್ತು ಕೆಲವೊಮ್ಮೆ ಕೋರ್ಟಿನಲ್ಲಿ ಹಾಕಿರುವ ಕೇಸಿನ ವಿಷಯದಲ್ಲಿ ತಪ್ಪಿಸಿಕೊಳ್ಳಲು ಮಾಡುವ ಪ್ರಯತ್ನ ಇರುವಾಗ ಬೇಕಾಗುವುದು ಒಂದು ಮೆಡಿಕಲ್ ಸರ್ಟಿಫಿಕೇಟ್.

ಆದರೆ ಸಾಧಾರಣವಾಗಿ ಇದರ ಬಗ್ಗೆ ಮೇಲಾಧಿಕಾರಿಗಳು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ವೈದ್ಯರು ನಿಯತ್ತಿನಲ್ಲಿ ಇರುತ್ತಾರೆ, ನಿಜವನ್ನು ಬರೆದುಕೊಡಬಹುದು ಎಂಬ ಭಾವನೆಯೊಂದಿಗೆ ಅವರು ಯಾವತ್ತು ವೈದ್ಯರನ್ನು ಸಂಶಯದ ದೃಷ್ಟಿಯಿಂದ ನೋಡುವುದಿಲ್ಲ. ಕೋರ್ಟಿನಲ್ಲಿ ಹೆಚ್ಚಿನ ಆರೋಪಿಗಳು, ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಷ್ಯ ಎಂದು ಕೇಳುವುದು ಈ ಸರ್ಟಿಫಿಕೇಟ್. ವಕೀಲರು ಕೂಡಾ ಕೆಲವೊಮ್ಮೆ ಆರೋಪಿಯು ಕೋರ್ಟಿಗೆ ಬರಲು ಆಗುವುದಿಲ್ಲ ಎಂದರೆ ಸುಲಭವಾಗಿ
“ಹೋಗಿ ಡಾಕ್ಟರ್ ಸರ್ಟಿಫಿಕೇಟ್ ತೆಗೆದುಕೊಂಡು ಬನ್ನಿ” ಎಂದು ಹೇಳುತ್ತಿರುತ್ತಾರೆ.

ಆಸ್ಪತ್ರೆಗೆ ಬಂದ ಕೆಲವು ವ್ಯಕ್ತಿಗಳು ಮಾತನಾಡುವ ಮೊದಲು ಒಂದು ಸರ್ಟಿಫಿಕೇಟ್ ಬೇಕು ಎಂದು ಕೇಳುವುದು ಇದೆ. ಸಾಮಾನ್ಯವಾಗಿ ಆ ವ್ಯಕ್ತಿ, ಈ ವೈದ್ಯರನ್ನು ಹಿಂದೆ ಯಾವತ್ತೂ ನೋಡಿರುವುದಿಲ್ಲ. ಆದರೂ ಅದೇನೋ ಒಂದು ಹುಚ್ಚು ಧೈರ್ಯ.

ಆದರೆ ಈಗ ಕಂಪ್ಯೂಟರ್ ಯುಗ ಬಂದು, ಎಲ್ಲಾ ದಾಖಲು ಡಿಜಿಟಲಿಕರಣ ಆಗಿ, ಪ್ರತಿ ರೋಗಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೊಡುವುದರಿಂದ, ಹಿಂದಿನ ದಿನಗಳಂತೆ ಸರ್ಟಿಫಿಕೇಟ್ ಕೊಡುವುದು ಸ್ಪಲ್ಪ ಕಷ್ಟ. ಹಾಗೆಯೇ ಈಗ, ಕೆ. ಪಿ. ಎಂ. ಇ. ಕಾನೂನಿನಲ್ಲಿ ಪ್ರತಿ ವೈದ್ಯರೂ, ತಾವು ಚಿಕಿತ್ಸೆ ನೀಡುವ ಎಲ್ಲಾ ರೋಗಿಗಳ ವಿವರಗಳನ್ನು ಒಂದು ಪುಸ್ತಕದಲ್ಲಿ ಬರೆದು ಇಡಬೇಕು ಎಂದಿದೆ. ಹಾಗಾಗಿ ಈ ಮೊದಲಿನಂತೆ ಸರ್ಟಿಫಿಕೇಟ್ ಕೊಡಲು, ಈಗ ಬಹಳ ಪ್ರಯಾಸ ಪಡಬೇಕು.

ಸುಳ್ಳು ಪ್ರಮಾಣ ಪತ್ರವನ್ನು ಕೊಡುವುದು ಅಪರಾಧ. ಇದನ್ನು ತಿಳಿದಿದ್ದರೂ ಸರ್ಟಿಫಿಕೇಟ್ ಕೇಳುವವರ ಸಂಖ್ಯೆ ಏನು ಕಮ್ಮಿ ಇಲ್ಲ.. ಇಷ್ಟೆಲ್ಲಾ ಹೇಳಿದಾಗ ನನ್ನ ಸಹೃದಯ ಓದುಗರು ಒಂದು ಪ್ರಶ್ನೆ ಕೇಳಿದರೆ ತಪ್ಪಿಲ್ಲ. ನೀವು ಎಂದಿಗೂ ಈ ರೀತಿ ಸರ್ಟಿಫಿಕೇಟ್ ಕೊಟ್ಟೇ ಇಲ್ಲವೇ ಎಂದು…. ಹೌದು ಕೊಟ್ಟಿದ್ದೇನೆ!

ನಿಜವಾದ ತೊಂದರೆ ಇದ್ದು, ಜಾಸ್ತಿ ರಜೆ ಬೇಕಾದಾಗ, ಇಲ್ಲಾ ಯಾವುದಾದರು ನಿಜವಾದ ಕಾರಣ ಇದ್ದು, ಶಾಲೆಗೆ, ಇಲ್ಲಾ ಆಫೀಸ್ ಗೆ ಹೋಗಲಾಗದಿದ್ದರೆ, ಮಾನವೀಯತೆಯ ದೃಷ್ಟಿಯಿಂದ ಕೊಟ್ಟಿದ್ದೇನೆ. ಶುದ್ಧ ಕಾನೂನಿನಲ್ಲಿ, ನಾನು ತಪ್ಪಿತಸ್ಥ. ಆದರೂ ನಾನೂ ಒಬ್ಬ ಯಕಶ್ಚಿತ ಹುಲು ಮಾನವ. ಕೆಲವೊಮ್ಮೆ ಮಾನವೀಯತೆ ನನ್ನನ್ನು ತಪ್ಪು ದಾರಿಗೆ ತಳ್ಳಿದೆ. ಆದರೆ ಒಂದಂತೂ ಸ್ವಷ್ಟ. ನಾನು ಕೊಟ್ಟ ಸರ್ಟಿಫಿಕೇಟ್ ನಿಂದ, ಯಾರಿಗೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿದ್ದೇನೆ.

ಹೀಗೆಯೇ ಜೀವ ವಿಮೆಯ, ವಿಮಾ ಪಾಲಿಸಿಯಲ್ಲಿ ಅದರ ಏಜೆಂಟ್ ಆ ದೃಢೀಕರಣ ಪತ್ರ ಕೊಡಲು, ಸ್ವಾಮ್ಯದಿಂದಲೇ ಗುರುತಿಸಲ್ಪಟ್ಟ ವೈದ್ಯರಲ್ಲಿಗೆ ಬಂದು ತೂಕ ಎತ್ತರ, ಎಲ್ಲಾ ವಿವರ ತಾವೇ ಹೇಳಿ ಪ್ರಮಾಣ ಪತ್ರ ಬರೆಸಿಕೊಂಡು ಹೋಗುವುದು ಹಿಂದೆ ಸಾಮಾನ್ಯವಾಗಿತ್ತು. (ಈಗ ಹೇಗಿದೆ ಎಂದು ನನಗೆ ಸರಿಯಾಗಿ ತಿಳಿದಿಲ್ಲ) ನಿಜ ಹೇಳ ಬೇಕೆಂದರೆ ಯಾವುದೇ ಪಾಲಿಸಿಯ ದೃಢೀಕರಣ ಪತ್ರವನ್ನು ಕೊಡುವ ಮೊದಲು, ವೈದ್ಯರು ಬಂದ ವ್ಯಕ್ತಿಯನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಿ ಅವನಿಗೆ ಯಾವುದೇ ಕಾಯಿಲೆ ಇಲ್ಲ ಎಂಬುದನ್ನು ದೃಢೀಕರಿಸಿಕೊಂಡ ಮೇಲೆ ಮಾತ್ರ ತಾವು ಸರ್ಟಿಫಿಕೇಟನ್ನು ಕೊಡಬೇಕು. ಆದರೆ ಕೆಲವೊಂದು ಕಡೆ ಇದು ನಡೆಯುತ್ತಿರುವುದಿಲ್ಲ. ಯಾರೋ ಬಂದು, ಯಾರದೋ ಹೆಸರಿನಲ್ಲಿ ಇನ್ಯಾರಿಗೋ ಸರ್ಟಿಫಿಕೇಟ್ ತೆಗೆದುಕೊಂಡು ಹೋಗುವುದು ಅಪರೂಪಕ್ಕೊಮ್ಮೆ ನಡೆದುಕೊಂಡು ಹೋಗುತ್ತಿರುತ್ತದೆ.

ಯಾವುದೇ ವಿಮೆಯಲ್ಲಿ ಅದನ್ನು ಮುಂದುವರಿಸಿಕೊಂಡು ಬರಲು ಒಂದು ನಿಶ್ಚಿತವಾದ ದಿನಾಂಕದ ಒಳಗೆ ನೀವು ಪುನಃ ಹಣವನ್ನು ಕಟ್ಟಬೇಕೆಂದು ಕಾನೂನು ಇರುತ್ತದೆ. ಆ ದಿನದಂದು ನೀವು ಹಣವನ್ನು ಕಟ್ಟದೇ ಹೋದರೆ ಅದರ ವಾಯಿದೆ ಮುಗಿದು ಹೋಗಿ, ವಿಮೆಯು ಲ್ಯಾಪ್ಸ್ ಅಥವಾ ಮುಕ್ತಾಯಗೊಳ್ಳುತ್ತದೆ. ಆ ದಿನದ ನಂತರ ಮನುಷ್ಯನಿಗೆ ಅಥವಾ ವಾಹನಕ್ಕೆ ಯಾವುದೇ ತೊಂದರೆಯಾದರೆ, ಆ ಜೀವಕ್ಕೆ ಅಥವಾ ವಾಹನದ ದುರಸ್ತಿಗೆ ಆ ಪಾಲಿಸಿಯನ್ನು ಕೊಟ್ಟ ವಿಮೆಯ ವಿಭಾಗದವರು ಜವಾಬ್ದಾರರಲ್ಲ.

ಸಾಧಾರಣವಾಗಿ ಶಾಲೆಗೆ ಚಕ್ಕರ್ ಹಾಕಿದ ಮಕ್ಕಳು, ಮನೆಯಲ್ಲಿ ಯಾವುದೋ ಸಮಾರಂಭ ಇದ್ದಾಗ ಆಫೀಸಿಗೆ ಹೋಗದೆ ಇರಲು ಮಾಡುವ ಒಂದು ಯತ್ನ, ವಿಮಾ ಕಂಪನಿಯ ಪಾಲಿಸಿ ಮತ್ತು ಕೆಲವೊಮ್ಮೆ ಕೋರ್ಟಿನಲ್ಲಿ ಹಾಕಿರುವ ಕೇಸಿನ ವಿಷಯದಲ್ಲಿ ತಪ್ಪಿಸಿಕೊಳ್ಳಲು ಮಾಡುವ ಪ್ರಯತ್ನ ಇರುವಾಗ ಬೇಕಾಗುವುದು ಒಂದು ಮೆಡಿಕಲ್ ಸರ್ಟಿಫಿಕೇಟ್.

ಇದು ಕೆಲವೊಮ್ಮೆ ವಿಚಿತ್ರ ಪ್ರಸಂಗಗಳಿಗೆ ಕೂಡಾ ದಾರಿ ಮಾಡಿ ಕೊಡುತ್ತದೆ. ಅವಧಿ ಮುಗಿದ ವಾಹನಕ್ಕೆ ದೃಢೀಕರಣ ಪತ್ರ ಅಪರೂಪಕ್ಕೆ ಕೊಡುವಂತೆ, ವಿದೇಶದಲ್ಲಿ, ಜೈಲಿನಲ್ಲಿ ಇದ್ದಂತಹ ವ್ಯಕ್ತಿಗೆ ಸರ್ಟಿಫಿಕೇಟ್ ಕೊಟ್ಟ ಘಟನೆಗಳೂ ಕೂಡಾ ನನಗೆ ಗೊತ್ತಿದೆ.

ಅದರಲ್ಲಿ ಒಂದು ಇದು. ಜೀವವಿಮಾ ಕಾರ್ಪೊರೇಷನ್ ನಲ್ಲಿ ಒಬ್ಬ ವ್ಯಕ್ತಿಯ ಪಾಲಿಸಿಯ ನಿಗದಿತ ದಿನ ಮುಗಿದು ಹೋಗಿದ್ದು, ಅವರಿಗೆ ಅದು ಮರೆತು ಹೋಗಿತ್ತು. ಹಣ ಕಟ್ಟಿ, ನವೀಕರಣ ಮಾಡಿರಲಿಲ್ಲ. ಆದರೆ ಕೆಲವು ದಿನಗಳಲ್ಲಿ, ಆಷಾಢ ಮಾಸದ ಮೊದಲನೇ ದಿನ, ಆ ವ್ಯಕ್ತಿ ಮೃತನಾದ. ಮನೆಯವರು, ಬೀರುವಿನಲ್ಲಿ ಇದ್ದ ಎಲ್ಲಾ ದಾಖಲೆಗಳನ್ನು ತೆಗೆದು ನೋಡುವಾಗ, ವಾಯಿದೆ ಮುಗಿದ ಈ ಪಾಲಿಸಿ ಅವರ ಕಣ್ಣಿಗೆ ಬಿದ್ದಿದೆ. ಪಾಲಿಸಿಯನ್ನು ತೆಗೆದುಕೊಳ್ಳುವಾಗ ಅದರ ವಿವರಗಳನ್ನು ಹೆಚ್ಚಿನವರು ಮನೆಯವರಲ್ಲಿ ತಿಳಿಸದೇ ಇರುವುದರಿಂದ, ಉಳಿದವರಿಗೆ ಅದರ ಬಗ್ಗೆ ಗೊತ್ತಿರುವುದು ಅಷ್ಟಕ್ಕಷ್ಟೆ. ಏನೂ ಗೊತ್ತಿಲ್ಲದೆ ಇದ್ದುದರಿಂದ ಈಗ ಏನು ಮಾಡುವುದು ಎಂದು ಅದನ್ನು ಅಪ್ಪನಿಗೆ ಕೊಟ್ಟ ಏಜೆಂಟರಲ್ಲಿ ವಿಚಾರಿಸಲು ಅವರ ಮಗ ಹೋದಾಗ, ಏಜೆಂಟ್ ಒಂದು ಉಪಾಯ ಹೇಳಿದ್ದಾರೆ.

ಆ ವ್ಯಕ್ತಿ ಮೃತರಾಗಿ ಸ್ವಲ್ಪ ದಿನ ಮಾತ್ರ ಕಳೆದಿತ್ತು. ಕೂಡಲೇ ಆ ಏಜೆಂಟರು ಅವರ ಪರಿಚಯದ ಒಬ್ಬರು ವೈದ್ಯರಲ್ಲಿಗೆ ಹೋಗಿ ವ್ಯಕ್ತಿ ಮೃತನಾಗಿರುವುದನ್ನು, ಆ ವೈದ್ಯರಲ್ಲಿ ಹೇಳದೆ ಅವರು ಕೆಲಸದಲ್ಲಿ ಕಾರ್ಯ ಮಗ್ನನಾಗಿರುವ ಸಮಯದಲ್ಲಿ, ಆ ಫಾರ್ಮ್ ಅನ್ನು ಕೊಟ್ಟು, ವಿವರ ಹೇಳಿ, ದೃಢೀಕರಣ ಪತ್ರವನ್ನು ಬರೆಸಿಕೊಂಡು ಹೋಗಿದ್ದಾರೆ.

ಈ ವೈದ್ಯರೊ ಸ್ವಲ್ಪ ಗಡಿಬಿಡಿ ಮನುಷ್ಯ. ಏನು ಎತ್ತ ಅಂಥ ಕೂಡಾ ಯೋಚಿಸಲು ಹೋಗಲಿಲ್ಲ. ಫಾರ್ಮಿನಲ್ಲಿ ವ್ಯಕ್ತಿಯ ಸಹಿಯನ್ನು ಕೂಡ ಏಜೆಂಟ್ ತಾನೆ ಹಾಕಿಸುವುದಾಗಿ ಹೇಳಿ, ಪತ್ರ ತೆಗೆದುಕೊಂಡು ಹೋಗಿ ಬಿಟ್ಟಿದ್ದರು, ಮತ್ತು ವೈದ್ಯರಲ್ಲಿ ಇರುವ ಪುಸ್ತಕದಲ್ಲಿ ತಾನೇ ಒಂದು ಕಳ್ಳ ಸಹಿಯನ್ನು ಕೂಡ ಹಾಕಿದ್ದರು. ಅದನ್ನು ಪರಿಶೀಲಿಸದ ನನ್ನ ವೈದ್ಯ ಮಿತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.

ತುಂಬಿಸಿದ ಫಾರ್ಮ್ ಮತ್ತು ಅದರ ನವೀಕರಣಕ್ಕೆ ಇರುವ ಪತ್ರ ಎರಡೂ, ಆಫೀಸಿನಲ್ಲಿರುವ ಒಬ್ಬರು ಗುಮಾಸ್ತರ ಬಳಿ ಹೋಗಿದೆ. ಅವರು ಇದನ್ನೆಲ್ಲ ಪಡೆದು ವಿಷಯಗಳನ್ನು ನೋಡುತ್ತಾ ಕಣ್ಣನ್ನು ತನ್ನ ಮೇಜಿನ ಮೇಲೆ ಹಾಯಿಸಿದ್ದಾರೆ. ಆಗ ಅವರಿಗೆ ಅಲ್ಲಿ ಕಂಡದ್ದು ಒಂದು ತಿಥಿ ಕರ್ಮಾಂತರ ಆಮಂತ್ರಣ ಪತ್ರ. ಹಾಗೆಯೇ ಅದರ ಮೇಲೆ ಬೆರಳಾಡಿಸುತ್ತಾ, ಮಗುಚಿ ಹಾಕಿದ್ದಾರೆ. ಆಗ ಅವರಿಗೆ ಅಲ್ಲಿ ಒಂದು ಆಶ್ಚರ್ಯ ಕಾದಿತ್ತು. ಅಲ್ಲಿರುವ ವ್ಯಕ್ತಿಯ ಹೆಸರು ಮತ್ತು ಪಾಲಿಸಿಯಲ್ಲಿ ಇರುವ ವ್ಯಕ್ತಿಯ ಹೆಸರು ಎರಡೂ ಒಂದೇ! ಈ ಪ್ರಮಾಣ ಪತ್ರದಲ್ಲಿರುವ ದಿನಾಂಕಕ್ಕಿಂತ ಕೆಲವು ದಿವಸದ ಹಿಂದೆ ಸಾವು ಸಂಭವಿಸಿದ್ದು ಎಂಬುದು ಕಪ್ಪು ಬಿಳುಪಿನ ಆ ಪತ್ರದಲ್ಲಿ ರಾಜಾರೋಷವಾಗಿ ಅವರ ಕಣ್ಣಿಗೆ ಕಂಡಿದೆ. ಆಟಿ ಅಥವಾ ಆಷಾಡ ತಿಂಗಳು ಆದುದರಿಂದ ಸತ್ತು ಹನ್ನೊಂದು ಯಾ ಹದಿನಾರನೇ ದಿನವೇ ತಿಥಿ ಮಾಡಲಾಗುವುದಿಲ್ಲ. ಆದುದರಿಂದ ಕರ್ಮಾಂತರಕ್ಕೆ ಇನ್ನೂ ಕೆಲವು ದಿನಗಳು ಇದೆ.

ಅಲ್ಲಿಂದ ಎದ್ದು, ಓಡಿದ ಗುಮಾಸ್ತ, ನಿಂತದ್ದು ಮೆನೇಜರ್ ಟೇಬಲ್ ಮುಂದೆ. ಇಲ್ಲಿಗೆ ಎಲ್ಲರಿಗೂ ಬಂದಿದೆ, ಪೀಕಲಾಟ. ವಿಷಯ ಅರ್ಥ ಆದ ಮ್ಯಾನೇಜರು ಕೂಡಲೇ ಫೋನ್ ಮಾಡಿ ಡಾಕ್ಟರನ್ನ ಬರ ಹೇಳಿದ್ದಾರೆ. ವಿವರ ಏನೂ ತಿಳಿಯದ ಡಾಕ್ಟರ್, ತಮ್ಮಷ್ಟಕ್ಕೆ ತಾವೇ ನಿಧಾನವಾಗಿ ಅಲ್ಲಿಗೆ ಹೋಗಿದ್ದಾರೆ. ಮೆನೇಜರ್ ಗೆ ಡಾಕ್ಟರ್ ತುಂಬಾ ಪರಿಚಿತರು. ಅವರನ್ನು ಆಫೀಸಿನಲ್ಲಿ ಕುಳ್ಳಿರಿಸಿ ಕಾಫಿ ತರಿಸಿ ಲೋಕಾಭಿರಾಮವಾಗಿ ಮಾತನಾಡುತ್ತಾ, ಮೆಲ್ಲಗೆ ಡಾಕ್ಟರ್ ಕೊಟ್ಟಂತಹ ವರದಿಯನ್ನು ಟೇಬಲ್ ಮೇಲಿಟ್ಟು, ಅವರನ್ನು ಒಂದು ಪ್ರಶ್ನೆ ಕೇಳಿದ್ದಾರೆ.

ಈ ವ್ಯಕ್ತಿಯನ್ನು ನೋಡಿ ಸರ್ಟಿಫಿಕೇಟ್ ಕೊಟ್ಟದ್ದನ್ನು ನೆನಪಿಸಿಕೊಳ್ಳಿ ಎಂದಿದ್ದಾರೆ. ಅಲ್ಲಿಗೆ ಡಾಕ್ಟರ್ ಗೆ ಏನೋ ಒಂದು ಸಂಶಯ ಬಂದು, ಯಾವ ಸರ್ಟಿಫಿಕೇಟ್ ಅಂದಿದ್ದಾರೆ. ನೋಡಿದರೆ ಯಾವುದೂ ಅವರ ನೆನಪಿಗೆ ಬರುತ್ತಿಲ್ಲ. ನೋಡಿದ್ದೇನೆ ಅನಿಸುತ್ತಿದೆ ಅಂದರು ನಮ್ಮ ಗಡಿಬಿಡಿ ವೈದ್ಯರು.

ನಗುತ್ತಾ ಹೇಳಿದರು ಮೆನೇಜರ್.

ಸಾರ್. ನೀವು ಯಾವಾಗ ಜನರ ಡಾಕ್ಟರ್ ಬಿಟ್ಟು, ದೆವ್ವಗಳ ಡಾಕ್ಟರ್ ಆಗಿದ್ದು ಅಥವಾ ಸತ್ತವನು ಏನಾದರೂ ಎದ್ದು ಬಂದ ಘಟನೆ ಕೂಡಾ ನಡೆಯುತ್ತಿದೆಯಾ?

ಮಡಿಕೇರಿಯ ಕೊರೆಯುವ ಚಳಿಯಲ್ಲಿಯೂ ಹೆದರಿ, ಬೆವರಿ ನೀರಾದರು ನಮ್ಮ ಡಾಕ್ಟರ್.

ಸಾರ್, ಸಾರ್, ಏನಾಯ್ತು ಎಂದು ಕೇಳುವಾಗ, ಮೇಜಿನ ಮೇಲಿದ್ದ ತಿಥಿ ಕರ್ಮಾಂತರದ ಪತ್ರವನ್ನು ಮ್ಯಾನೇಜರ್ ಅವರಿಗೆ ತೋರಿಸಿದ್ದಾರೆ.
ಅಲ್ಲಿಗೆ ನಿಜ ಸಂಗತಿ ಏನು ಅಂತ ಡಾಕ್ಟರ್‌ಗೆ ಗೊತ್ತಾಗಿ ಬಿಟ್ಟಿತ್ತು. ಏಜೆಂಟ್ ಮಾಡಿದ ಮೋಸ ಕೂಡಾ ಕಣ್ಣೆದುರು ಬಂದು ನಿಂತಿತ್ತು.

ಮೇನೇಜರ್ ಮತ್ತು ಡಾಕ್ಟರ್ ಇಬ್ಬರು ಸೇರಿ, ಪರಸ್ಪರ ಹೊಂದಾಣಿಕೆಯಿದ ಆ ಸರ್ಟಿಫಿಕೇಟ್ ಹರಿದು ಹಾಕಿ, ಏಜೆಂಟ್ ಅನ್ನು ಕರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಷಯ ಹೇಗೊ ಗೋಡೆಗಳು ಕೇಳಿಸಿಕೊಂಡು, ಅಲ್ಲಿ ಇಲ್ಲಿ ಹಬ್ಬಿ, ಆ ಡಾಕ್ಟರ್ ಹೆಸರು ಸದ್ಯಕ್ಕೆ ಆಯ್ತು “ದೆವ್ವದ ದರ್ಶನ ಮಾಡಿದ್ದ ಡಾಕ್ಟರ್”!!! ಈ ಕಥೆಯ ಶೀರ್ಷಿಕೆಯಂತೆ ಇಲ್ಲಿ ಸತ್ತವನು ಎದ್ದು ಬಂದಿರಲಿಲ್ಲ.!!