ಒಂದು ಸಲ ಮಳೆಗಾಲದಲ್ಲಿ ರಾತ್ರಿ ಹೀಗೆ ಸಿಕ್ಕಿಹಾಕಿಕೊಂಡು ನಾವು ಮಕ್ಕಳು ಮತ್ತು ಹಿರಿಯರೆಲ್ಲ ಬಹಳ ಹಸಿದು ಆ ಹಾಸ್ಟೆಲ್ ಕೋಣೆಯಲ್ಲಿ ಕುಳಿತಿದ್ದೆವು. ಅಷ್ಟೊತ್ತಿಗೆ ಜಂಬಗಿಯವರು ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಯಾವುದೋ ಖಾನಾವಳಿಯಿಂದ ನಮಗೆಲ್ಲ ಸಾಕಾಗುವಷ್ಟು ಬಿಸಿ ಅನ್ನ ಮತ್ತು ಸಾರು ತೆಗೆದುಕೊಂಡು ಬಂದರು. ಅವೆರಡೂ ರುಚಿ ಶುಚಿಯಾಗಿದ್ದವು. ಆ ಚಳಿ, ಆ ಹಸಿವು, ಆ ಬಿಸಿ ಬಿಸಿ ಅನ್ನ ಮತ್ತು ಸಾರಿನ ರುಚಿ ಎಂದೂ ಮರೆಯಲು ಸಾಧ್ಯವಿಲ್ಲ. ನಾನು ದೊಡ್ಡವನಾದ ಮೇಲೆ ಜಂಬಗಿಯವರನ್ನು ಹುಡುಕಲು ಯತ್ನಿಸಿ ವಿಫಲನಾದೆ. ಆ ಹಾಸ್ಟೆಲ್ ಕಟ್ಟಡ ಇಂದಿಗೂ ನನಗೆ ‘ತಾಯಿ’ಯಂತೆ ಕಾಣುತ್ತದೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹತ್ತನೆಯ ಕಂತು.

ವಿಜಾಪುರ ಮಂದಿ ಬೇಕಾದಷ್ಟು ಬಿಸಿಲನ್ನು ತಡೆದುಕೊಳ್ಳುತ್ತಾರೆ. ಆದರೆ ಅವರಿಗೆ ವಿಪರೀತ ಚಳಿ ಮತ್ತು ಎಡೆಬಿಡದ ಮಳೆ ಅಂದರೆ ಆಗುವುದಿಲ್ಲ.

ಚಳಿಗಾಲದಲ್ಲಿ ನಮ್ಮ ಮೈ ಬಿರುಕು ಬಿಟ್ಟಂತೆ ಬಿರುಸಾಗುತ್ತಿದ್ದವು. ತುಟಿಗಳು ಒಡೆದು ಕಟಿರೊಟ್ಟಿ ತಿನ್ನಲು ಕೂಡ ಬರದಷ್ಟು ನೋವಾಗುತ್ತಿದ್ದವು. ಅಂಥ ಪ್ರಸಂಗದಲ್ಲಿ ಮಕ್ಕಳಿಗೆ ಬಿಸಿರೊಟ್ಟಿ ಮತ್ತು ಸಪ್ಪಾನ ಬ್ಯಾಳಿ ಕೊಡುತ್ತಿದ್ದರು.. ಆ ಕೆಟ್ಟ ಚಳಿಯಲ್ಲಿ ಕೂಡ ನಾವು ಬೆಳಿಗ್ಗೆ 6 ಗಂಟೆಗೆ ಏಳಲೇಬೇಕಾಗುತ್ತಿತ್ತು. ತಾಯಿ ತಂದೆ ಮತ್ತು ಅಜ್ಜಿ ನಸುಕಿನಲ್ಲೇ ಏಳುತ್ತಿದ್ದರು. ಆ ಒಂದು ಕೋಣೆ ಅದಕೂ ಇದಕೂ ಎಲ್ಲದಕ್ಕೂ ಬಳಕೆಯಾಗಬೇಕಾಗಿದ್ದರಿಂದ ನಾವು ಏಳುವುದು ಅನಿವಾರ್ಯವಾಗಿತ್ತು.

ಮನೆಯವರು ಸ್ವಚ್ಛತೆಗೆ ಬಹಳ ಆದ್ಯತೆ ಕೊಡುತ್ತಿದ್ದರು. ನಾನು ಎದ್ದಕೂಡಲೆ ಬೀದಿಗೆ ಬರುತ್ತಿದ್ದೆ. ಅಷ್ಟೊತ್ತಿಗಾಗಲೇ ಅನೇಕ ಗೆಳೆಯರು ಒಣಗಿದ ಕಸ ತಂದು ಬೆಂಕಿ ಹಚ್ಚಿರುತ್ತಿದ್ದರು. ನಾನು ಅವರ ಜೊತೆ ಸೇರಿ ಚಳಿ ಕಾಯಿಸುತ್ತಿದ್ದೆ. ಮಧ್ಯಾಹ್ನದ ವೇಳೆ ವಾರಕ್ಕೆ ಒಂದು ಸಲವಾದರೂ ಮನೆಯೊಳಗಿನ ಮಣ್ಣಿನ ನೆಲವನ್ನು ಅವ್ವ ಹೆಂಡಿ (ಸೆಗಣಿ)ಯಿಂದ ಸಾರಿಸುತ್ತಿದ್ದಳು. ಅಂಗಳಕ್ಕೆ ಸೆಗಣಿ ನೀರಿನ ಚಳಿ ಹೊಡೆಯುತ್ತಿದ್ದಳು. (ಹಾಗೆ ಸಿಂಪಡಿಸುವುದಕ್ಕೆ ‘ಚಳಿ ಹೊಡೆಯುವುದು’ ಎನ್ನುತ್ತಾರೆ.)

(ಮೇಲ್ಮುದ್ದಿ ಮನೆ)

ನಮ್ಮ ಬಾಡಿಗೆ ಮನೆ ಮೇಲ್ಮುದ್ದೆ ಮನೆಯಾಗಿತ್ತು. ನೆಲವೂ ಮಣ್ಣು, ಗೋಡೆಗಳು ಕಲ್ಲು ಮಣ್ಣಿನವು. ಮಾಳಿಗೆ (ಛಾವಣಿ) ಕೂಡ ಮಣ್ಣಿನದೇ ಆಗಿತ್ತು.

ನಾಲ್ಕು ತೊಲೆ (ಛಾವಣಿಗೆ ಆಧಾರವಾಗಿ ಗೋಡೆಗಳ ಮೇಲೆ ಅಡ್ಡಲಾಗಿ ಹಾಕುವ ಮರದ ದಿಮ್ಮಿ) ಗಳ ಮೇಲೆ ಮೂರಂಕಣದ ಕೋಣೆ ಇರುತ್ತಿತ್ತು. ಆ ತೊಲೆಗಳ ಮೇಲೆ ರೆಂಬೆ ಕೊಂಬೆಗಳಿಂದ ತಯಾರಾದ ಕಟ್ಟಿಗೆಗಳನ್ನು ಜೋಡಿಸುತ್ತಿದ್ದರು. ಅದಕ್ಕೆ ಜಂತಿ ಎನ್ನುತ್ತಾರೆ. ಜಂತಿಯ ಮೇಲೆ ಈಚಲು ಗರಿಗಳಿಂದ ತಯಾರಿಸಿದ ಚಾಪೆಗಳನ್ನು ಹಾಸಿ ಅವುಗಳ ಮೇಲೆ ಗೊನವಾರಿ ತಪ್ಪಲು ಇಲ್ಲವೆ ಹಳ್ಳಕೊಳ್ಳ ಮತ್ತು ಕೆರೆ ದಂಡೆಗಳಲ್ಲಿ ಬೆಳೆಯುವ ಆಪಿನ ಗರಿಗಳನ್ನು ಹರಡುತ್ತಿದ್ದರು. ಈ ವ್ಯವಸ್ಥೆ ಆದಮೇಲೆ ಮೇಲ್ಮುದ್ದಿ ಹಾಕುತ್ತಿದ್ದರು. ಆಗ ಮಾಳಿಗೆ ತಯಾರಾಗುತ್ತಿತ್ತು.

ಸೋಸಿದ ಹಾಳು ಮಣ್ಣಿನಲ್ಲಿ ಸಣ್ಣಗೆ ಕತ್ತರಿಸಿದ ಜವೆಗೋಧಿಯ ಒಣ ಹುಲ್ಲು ಮತ್ತು ಸವುಳು ಭೂಮಿಯ ಕರ್ಲನ್ನು ಕಲಿಸಿ ಕೊಳೆಸಿದ ನಂತರ ಮೇಲ್ಮುದ್ದಿ ರೆಡಿ ಆಗುತ್ತಿತ್ತು. ಮೇಲ್ಮುದ್ದಿ ಹಾಕಿದ ನಂತರ ಎರಡು ಮೂರು ದಿನ ಬಿಟ್ಟು ಸೋಸಿದ ಒಣ ಹಾಳುಮಣ್ಣು ಹರಡುತ್ತಿದ್ದರು. ಆ ಮೇಲೆ ನೀರು ಹೊಡೆದು ತುಳಿಯುತ್ತಿದ್ದರು. ಇಂಥ ಮಣ್ಣಿನ ಮನೆಗಳಿಗೆ ಮೇಲ್ಮುದ್ದಿ ಮನೆ ಎನ್ನುತ್ತಾರೆ. ಇವು ಬಿಸಿಲು ಪ್ರದೇಶಗಳ ವಾತಾವರಣಕ್ಕೆ ತಕ್ಕಂತೆ ಇದ್ದು ತಂಪಾಗಿ ಇರುತ್ತಿದ್ದವು. ಈಗ ಅವು ಇತಿಹಾಸದ ಪುಟ ಸೇರಿವೆ.

ಮಳೆಗಾಲದಲ್ಲಿ ಮಾಳಿಗೆಯ ಮೇಲೆ ಎರಡು ಅಡಿಗಳಿಗಿಂತಲೂ ಉದ್ದನೆಯ ಹುಲ್ಲು ಬೆಳೆಯುತ್ತಿತ್ತು. ಮಳೆಗಾಲ ಮುಗಿದ ಮೇಲೆ ಖಡಕ್ ಬಿಸಿಲು ಬಿದ್ದನಂತರವೇ ಆ ಹುಲ್ಲು ಒಣಗುತ್ತಿತ್ತು. ಆವಾಗ ಮಾತ್ರ ಮಾಳಿಗೆ ಹತ್ತಿ ಹುಲ್ಲು ತೆಗೆಯಲು ಸಾಧ್ಯವಾಗುತ್ತಿತ್ತು.

ಮಳೆಗಾಲದಲ್ಲೇ ಮಾಳಿಗೆ ಹತ್ತಿ ಹುಲ್ಲು ತೆಗೆದರೆ ಇನ್ನೂ ಹೆಚ್ಚಿಗೆ ಸೋರುತ್ತಿತ್ತು. ವಿಜಾಪುರದಂಥ ಬಿಸಿಲೂರುಗಳಲ್ಲಿ ಮಾತ್ರ ಆ ಕಾಲದಲ್ಲಿ ಇಂಥ ಮನೆಗಳನ್ನು ನೋಡಲು ಸಾಧ್ಯವಿತ್ತು. ಮಳೆಯ ನಾಡಿನಲ್ಲಿ ಇಂಥ ಮನೆಗಳು ತಾಳುವುದಿಲ್ಲ. ನಮ್ಮ ಬಾಡಿಗೆ ಮನೆ ಇಂಥ ಮೇಲ್ಮುದ್ದಿ ಮನೆಯಾಗಿತ್ತು.

ಒಂದೊಂದು ಸಲ ವಿಜಾಪುರದಲ್ಲೂ ರಾತ್ರಿಯಿಡೀ ಭಾರೀ ಮಳೆಯಾದಾಗ ನಮ್ಮ ಏರಿಯಾದಲ್ಲಿ ಕನಿಷ್ಠ ನಾಲ್ಕು ಮನೆಗಳಾದರೂ ಬೀಳುತ್ತಿದ್ದವು. ಮರಗಳು ಉರುಳುತ್ತಿದ್ದವು. ವಿದ್ಯುತ್ತ ತಂತಿಗಳು ಹರಿದು ಬೀಳುತ್ತಿದ್ದವು.

(ಮನೆಯ ಜಂತಿ)

65 ವರ್ಷಗಳಷ್ಟು ಹಿಂದೆ ವಿಜಾಪುರದಲ್ಲಿ ಎ.ಸಿ. ಕರೆಂಟ್ ಇದ್ದಿದ್ದಿಲ್ಲ. ಡಿ.ಸಿ. ಕರೆಂಟ್ ಇತ್ತು. ಈಗಿನ ಬಸ್ ಸ್ಟ್ಯಾಂಡಿಗೆ ಸಮೀಪದಲ್ಲಿ ಖಾಸಗಿಯವರ ಭಾರಿ ಜನರೇಟರ್ ಮೂಲಕ ಇಡೀ ನಗರಕ್ಕೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಊರ ತುಂಬ ಲೈಟ್ ಕಂಬಗಳು ಕಬ್ಬಿಣದವು ಆಗಿರುತ್ತಿದ್ದವು. ಒಂದೊಂದು ಸಲ ವಿದ್ಯುತ್ ತಂತಿಗಳಲ್ಲಿ ಏರುಪೇರಾದಾಗ ಆ ಕಂಬಗಳಲ್ಲಿ ವಿದ್ಯುತ್ ಹರಿಯುತ್ತಿತ್ತು. ಆದರೆ ಎ.ಸಿ. ಕರೆಂಟ್ ಹಾಗೆ ಜೀವಹಾನಿಯ ಭಯ ಇರುತ್ತಿರಲಿಲ್ಲ. ಹೀಗಾಗಿ ಅಂಥ ಏರುಪೇರು ಆದಾಗ ಆ ಕಬ್ಬಿಣದ ಕಂಬಗಳನ್ನು ಮುಟ್ಟುವುದೇ ಒಂದು ಆಟವಾಗುತ್ತಿತ್ತು. ಹಾಗೆ ಮುಟ್ಟಿದಾಗ ಶಾಕ್ ಹೊಡೆದ ಅನುಭವ ಹಿಮ್ಮಡದಲ್ಲಿ ಆಗುತ್ತಿತ್ತು. ಆದರೆ ಅದು ಮಾರಣಾಂತಿಕ ಶಾಕ್ ಆಗಿದ್ದಿಲ್ಲವಾದ್ದರಿಂದ ಜೀವಭಯ ಇರಲಿಲ್ಲ.

ಈ ವಿದ್ಯುತ್ ವ್ಯವಸ್ಥೆ ಸಾಧಾರಣವಾಗಿತ್ತು. ಬೀದಿದೀಪಗಳ ಬೆಳಕು ಅಷ್ಟಕಷ್ಟೇ. ಹೀಗಾಗಿ ನನಗಿಂತಲೂ ದೊಡ್ಡ ಹುಡುಗರು “ಕಡ್ಡಿ ಕೊರ್ದು ನೋಡ್ರಿ. ದೀಪ ಹತ್ಯದೋ ಇಲ್ಲೋ ಎಂಬುದು ಗೊತ್ತಾಗತೈತಿ” ಎಂದು ತಮಾಷೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಂತೂ ಚಿಮಣಿ ಬುಡ್ಡಿಯೆ ಗತಿ.

ಕೆಲವೊಂದು ಸಲ ರಾತ್ರಿ ಬಹಳ ಹೊತ್ತಿನವರೆಗೆ ಮಳೆ ಭೀಕರವಾಗಿ ಬಂದ ಸಂದರ್ಭದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿತ್ತು. ಬೆಳಗಾಗುವುದೇ ತಡ ಜನ ಗುಂಪು ಸೇರುತ್ತಿದ್ದರು. ಯಾರ ಮನೆಗಳು ಬಿದ್ದವು? ಯಾರಿಗಾದರೂ ದವಾಖಾನೆಗೆ ಒಯ್ದರಾ? ಯಾರಾದರೂ ಸತ್ತರಾ? ಮುಂತಾದ ಪ್ರಶ್ನೆಗಳು ಏಳುತ್ತಿದ್ದವು.

ನಾವಿದ್ದ ಮನೆ ಮಳೆಗಾಲದಲ್ಲಿ ಸೋರುತ್ತಿತ್ತು. ಅಪರೂಪಕ್ಕೊಮ್ಮೆ ಭಯಂಕರ ಜೋರು ಮಳೆ ಬಂದರೆ ಆ ಮೂರಂಕಣದ ಮನೆಯೊಳಗೆ ನೀರು ತುಂಬುತ್ತಿತ್ತು. ಆಗ ನಮ್ಮ ಬದುಕು ಅಯೋಮಯವಾಗುತ್ತಿತ್ತು. ಯಾವಾಗ ಬೀಳುವುದೋ ಎಂಬ ಭಯವೂ ಕಾಡುತ್ತಿತ್ತು. ಅಂಥ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಹಾಸ್ಟೆಲ್ ಕೋಣೆಯಲ್ಲಿ ರಾತ್ರಿ ಕಳೆಯುತ್ತಿದ್ದೆವು.

(ಮಳೆಯ ರಾತ್ರಿ ನಾವು ಉಳಿದುಕೊಳ್ಳುತ್ತಿದ್ದ ಹಾಸ್ಟೆಲ್)

ಹಾಸ್ಟೆಲಿನ ಒಬ್ಬ ವಿದ್ಯಾರ್ಥಿ ನಮ್ಮಲ್ಲಿ ಹಾಲು ಕೊಳ್ಳುತ್ತಿದ್ದರು. ಅವರು ಭಾವನಾತ್ಮಕ ವ್ಯಕ್ತಿಯಾಗಿದ್ದರು. ನನ್ನ ತಾಯಿ ತಂದೆಯ ಬಗ್ಗೆ ಅವರಿಗೆ ಬಹಳ ಗೌರವವಿತ್ತು. ಅವರು ಶಿಕ್ಷಣ ಮುಗಿಸಿ ಹೋಗುವಾಗ, ಹಾಲಿಗಾಗಿ ಬಳಸುತ್ತಿದ್ದ ದೊಡ್ಡ ಚರಿಗೆಯನ್ನು ಕಾಣಿಕೆಯಾಗಿ ಕೊಟ್ಟು ಹೋದರು. ಅದು ಒಂದು ಲೀಟರ್‌ಗಿಂತ ಹೆಚ್ಚಿಗೆ ಹಾಲು ಹಿಡಿಯುವಷ್ಟು ದೊಡ್ಡದಾಗಿತ್ತು. ಅದರ ಮೇಲೆ ಅವರ ಹೆಸರು ಮತ್ತು ಅಡ್ಡಹೆಸರು ಬರೆದಿತ್ತು. ಹೆಸರು ಮರೆತಿರುವೆ. ಅಡ್ಡಹೆಸರು ‘ಜಂಬಗಿ’ ಎಂದು ಇತ್ತು.

ಅಂಥ ಭಾರಿ ಮಳೆಯ ಅನಾಹುತದ ಪ್ರಸಂಗದಲ್ಲಿ ಜಂಬಗಿ ತಮ್ಮ ರೂಮ್ ಮೇಟ್‌ಗಳ ಜೊತೆ ಪಕ್ಕದ ಗೆಳೆಯರ ರೂಮಿಗೆ ಹೋಗುತ್ತಿದ್ದರು. ನಾನು ಮತ್ತು ತಮ್ಮಂದಿರು ಆ ರೂಮಿನಲ್ಲಿ ಕೌದಿ ಹೊಚ್ಚಿಕೊಂಡು ಕೂಡುತ್ತಿದ್ದೆವು. ಮನೆ ಸೋರಿಕೆಯಿಂದಾಗಿ ಕೌದಿಗಳು ಅರ್ಧಮರ್ಧ ತೊಯ್ದಿರುತ್ತಿದ್ದವು. ಆ ರೂಮಿನ ನೆಲವನ್ನು ಪರ್ಸಿಕಲ್ಲಿನಿಂದ ತಯಾರಿಸಿದ್ದರು. (ಚೌಕಾಕಾರದ ಆ ಕಲ್ಲುಗಳಿಗೆ ‘ಶಾಬಾದಿ ಕಲ್ಲು’ ಎಂದು ಹೇಳುತ್ತಾರೆ.) ಅವು ಚಳಿ ಮಳೆಯಲ್ಲಿ ಇನ್ನೂ ತಂಪಾಗಿರುತ್ತಿದ್ದವು.

ಒಂದು ಸಲ ಮಳೆಗಾಲದಲ್ಲಿ ರಾತ್ರಿ ಹೀಗೆ ಸಿಕ್ಕಿಹಾಕಿಕೊಂಡು ನಾವು ಮಕ್ಕಳು ಮತ್ತು ಹಿರಿಯರೆಲ್ಲ ಬಹಳ ಹಸಿದು ಆ ಹಾಸ್ಟೆಲ್ ಕೋಣೆಯಲ್ಲಿ ಕುಳಿತಿದ್ದೆವು. ಅಷ್ಟೊತ್ತಿಗೆ ಜಂಬಗಿಯವರು ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಯಾವುದೋ ಖಾನಾವಳಿಯಿಂದ ನಮಗೆಲ್ಲ ಸಾಕಾಗುವಷ್ಟು ಬಿಸಿ ಅನ್ನ ಮತ್ತು ಸಾರು ತೆಗೆದುಕೊಂಡು ಬಂದರು. ಅವೆರಡೂ ರುಚಿ ಶುಚಿಯಾಗಿದ್ದವು.

ಆ ಚಳಿ, ಆ ಹಸಿವು, ಆ ಬಿಸಿ ಬಿಸಿ ಅನ್ನ ಮತ್ತು ಸಾರಿನ ರುಚಿ ಎಂದೂ ಮರೆಯಲು ಸಾಧ್ಯವಿಲ್ಲ. ನಾನು ದೊಡ್ಡವನಾದ ಮೇಲೆ ಜಂಬಗಿಯವರನ್ನು ಹುಡುಕಲು ಯತ್ನಿಸಿ ವಿಫಲನಾದೆ. ಆ ಹಾಸ್ಟೆಲ್ ಕಟ್ಟಡ ಇಂದಿಗೂ ನನಗೆ ‘ತಾಯಿ’ಯಂತೆ ಕಾಣುತ್ತದೆ.

ಮುಂಬೈ ಕಾಮಾಟಿಪುರದಿಂದ ಬಂದು ಸನ್ಯಾಸಿನಿಯಂತಿದ್ದ ಆ ಹೆಣ್ಣುಮಗಳ ಮಹಡಿ ಮನೆ ಮೇಲ್ಮುದ್ದಿಯದಾಗಿರದೆ ಶ್ರೀಮಂತರ ಮನೆಯಂತೆ ಅಚ್ಚುಕಟ್ಟಾಗಿತ್ತು. ಅವಳು ಆ ಕಾಲದ ಜನಪ್ರಿಯ ಹಿಂದಿ ಹಾಡುಗಳನ್ನು ಗ್ರಾಮೋಫೋನ್‍ನಲ್ಲಿ ಕೇಳುತ್ತಿದ್ದಳು. ಆ ಕಾಲದಲ್ಲಿ ರೇಡಿಯೊ ಮತ್ತು ಗ್ರಾಮೋಫೋನ್‌ಗಳು ಶ್ರೀಮಂತಿಕೆಯ ಸಂಕೇತಗಳಾಗಿದ್ದವು. ಅಲ್ಲಿಯೆ ಮೊದಲ ಬಾರಿಗೆ ರೇಡಿಯೊ ಮತ್ತು ಗ್ರಾಮೋಫೋನ್ ನೋಡಿದೆ. ಆಗ ಇದ್ದ ಗ್ರಾಮೋಫೋನ್ ರೆಕಾರ್ಡ್ ಮಣ್ಣಿನವು ಆಗಿದ್ದರಿಂದ ಭಾರವಾಗಿದ್ದವು.

ಗ್ರಾಮೋಫೋನ್‌ಗೆ ಹ್ಯಾಂಡಲ್ ಮೂಲಕ ಕೀ ಕೊಡಬೇಕಾಗುತ್ತಿತ್ತು. ತಿರುಗುವಾಗ ಅದರ ಆರಂಭದ ಗೆರೆಯ ಮೇಲೆ ಗ್ರಾಮೋಫೋನ್ ಮುಳ್ಳನ್ನು ನಾಜೂಕಾಗಿ ಇಡುತ್ತಿದ್ದರು. ಮೂರು ಮೂರೂವರೆ ನಿಮಿಷದ ರೆಕಾರ್ಡ್ ತಿರುಗಿ ತಿರುಗಿ ಕೀ ಮಾಡಿದ್ದು ದುರ್ಬಲವಾದಾಗ ಅದು ಗೊಗ್ಗರು ಧ್ವನಿಯಲ್ಲಿ ಸಾವಕಾಶವಾಗಿ ಹಾಡುತ್ತಿತ್ತು. ಆಗ ಅದನ್ನು ನಿಲ್ಲಿಸಿ ಮತ್ತೆ ಹ್ಯಾಂಡಲ್ ತಿರುವಿ ಕೀ ಮಾಡುತ್ತಿದ್ದರು.

ನಾವಿದ್ದ ಮನೆಯ ಸಾಲಿನಲ್ಲಿ ಇಂಡಿ ಮತ್ತು ಕಡೇಚೂರ ಅಡ್ಡಹೆಸರಿನ ಮನೆತನದವರ ದೊಡ್ಡ ಮನೆಗಳಿದ್ದವು. ಮಧ್ಯಮವರ್ಗದ ಅವರು ಸಹೃದಯರಾಗಿದ್ದರು. ನಮ್ಮನ್ನು ಅವರು ಗೌರವಾದರಗಳಿಂದ ಕಾಣುತ್ತಿದ್ದರು. ತಾಯಿ ತಂದೆಗಳ ಸಾತ್ವಿಕ ಜೀವನವಿಧಾನವೇ ನಮ್ಮ ಬಹುದೊಡ್ಡ ಆಸ್ತಿಯಾಗಿತ್ತು.

(ಆಪು)

ಆ ಕಾಲದಲ್ಲಿ ರೇಡಿಯೊ ಮತ್ತು ಗ್ರಾಮೋಫೋನ್‌ಗಳು ಶ್ರೀಮಂತಿಕೆಯ ಸಂಕೇತಗಳಾಗಿದ್ದವು. ಅಲ್ಲಿಯೆ ಮೊದಲ ಬಾರಿಗೆ ರೇಡಿಯೊ ಮತ್ತು ಗ್ರಾಮೋಫೋನ್ ನೋಡಿದೆ. ಆಗ ಇದ್ದ ಗ್ರಾಮೋಫೋನ್ ರೆಕಾರ್ಡ್ ಮಣ್ಣಿನವು ಆಗಿದ್ದರಿಂದ ಭಾರವಾಗಿದ್ದವು.

ಮೊದಲ ಬಾರಿಗೆ ಕಡೇಚೂರ ಅವರ ಮನೆಯಲ್ಲಿ ದೋಸೆ ತಿಂದೆ. ಆ ದೋಸೆ ಈಗ ನಾವು ತಿನ್ನುವ ಹೊಟೇಲ್ ದೋಸೆಯ ಹಾಗೆ ಗರಿಗರಿಯಾಗಿ ಇರಲಿಲ್ಲ. ಸ್ವಲ್ಪ ಕಂದುಬಣ್ಣದ್ದಾಗಿದ್ದು ಮೆತ್ತದೆ ಇತ್ತು. ಅದರ ಮೈತುಂಬ ತೂತುಗಳಿದ್ದು ರುಚಿಕಟ್ಟಾಗಿದ್ದವು. ಅಂಥ ಪ್ರೀತಿಯ ಜನರು ಈಗ ಎಲ್ಲಿದ್ದಾರೋ?

ಅಲ್ಲೀಬಾದಿಯ ಒಬ್ಬ ಹೆಣ್ಣುಮಗಳು ಲೈಂಗಿಕ ಕಾರ್ಯಕರ್ತೆಯಾಗಿ ಮುಂಬೈ ಸೇರಿದ್ದಳು. ಅವಳ ತಮ್ಮ ಮಿಲಿಟರಿ ಸೇರಿದ್ದ. ಒಂದು ಸಲ ಅವಳು ಅಜ್ಜಿಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದಳು. ಆ ಸುಂದರ ಹೆಣ್ಣುಮಗಳು ಘನತೆಯೆ ಮೈವೆತ್ತಿದಂತಿದ್ದಳು. ಅವಳ ಸೌಮ್ಯ ಸ್ವಭಾವದಲ್ಲಿ ಸಾತ್ವಿಕತೆ ಮನೆ ಮಾಡಿತ್ತು. ಇಡೀ ಜಗತ್ತಿನ ಮೇಲೆ ಕರುಣೆ ಸೂಸುವ ಹಾಗೆ ನೋಡುತ್ತಿದ್ದಳು. ಅವಳ ಒಂದೇ ಆಶೆ ಎಂದರೆ ತಮ್ಮನಿಗೊಂದು ಮನೆ ಕೊಡಿಸಿ ಮದುವೆ ಮಾಡುವುದು. ಅದನ್ನು ಅವಳು ವ್ಯಕ್ತಪಡಿಸಿದಳು. ನನ್ನ ಅಜ್ಜಿ ಮತ್ತು ತಾಯಿ ಆಕೆಯನ್ನು ಬಹಳ ಚೆನ್ನಾಗಿ ನೋಡಿಕೊಂಡರು. ನಾಲ್ಕಾರು ಗಂಟೆಗಳ ನಂತರ ಅವಳು ಹೋದ ಮೇಲೆ ಮತ್ತೆ ಎಂದೂ ನೋಡುವ ಪ್ರಸಂಗ ಬರಲಿಲ್ಲ.

(ಜಾತ್ರೆಯಲ್ಲಿನ ತಾತ್ಕಾಲಿಕ ಮಿಠಾಯಿ ಅಂಗಡಿ)

ಈ ಭೇಟಿಯಾದ ಮೇಲೆ ಕೆಲ ತಿಂಗಳುಗಳ ನಂತರ ಅಜ್ಜಿ ಯಾವುದೋ ಜಾತ್ರೆಗೆ ಕರೆದುಕೊಂಡು ಹೋಗಿದ್ದಳು. ರಾತ್ರಿ ಅಲ್ಲಿ ಕೇಂದ್ರ ಸರ್ಕಾರದ ವಾರ್ತಾ ಇಲಾಖೆಯ ವಾಹನದ ಮೇಲೆ ‘ಇಂಡಿಯಾ ನ್ಯೂಸ್ʼತೋರಿಸುತ್ತಿದ್ದರು. ಅಂದಿನ ಕಾಲದಲ್ಲಿ ಆ ವಾಹನ ಬಹಳ ಆಧುನಿಕವಾಗಿತ್ತು. ಡ್ರೈವರ್ ಕ್ಯಾಬಿನ್ ಮೇಲೆ ದೊಡ್ಡ ಟಿ.ವಿ. ಸೆಟ್ ಹಾಗೆ ಸ್ಕ್ರೀನ್ ಇತ್ತು. ಅದು ವಾಹನದ ಭಾಗವೇ ಆಗಿತ್ತು. ಜನ ಅದನ್ನು ನೋಡಲು ಕಿಕ್ಕಿರಿದು ತುಂಬಿದ್ದರು. ವಾಹನದ ಹಿಂದೆ ಜನರೇಟರ್ ಮೂಲಕ ಪವರ್ ಸಪ್ಲೈ ವ್ಯವಸ್ಥೆ ಇತ್ತು. ಅಲ್ಲಿಯವರೆಗೆ ಒಂದು ಸಿನಿಮಾ ಕೂಡ ನೋಡದ ನಾನು, ಆ ರಾತ್ರಿ ಅಂಥ ಒಂದು ಆಶ್ಚರ್ಯಕರವಾದುದನ್ನು ಮೊದಲ ಬಾರಿಗೆ ನೋಡಿದೆ. ಶಿಸ್ತಿನಿಂದ ಸೈನಿಕರು ಬಿರುಸಿನ ಪರೇಡ್ ಮಾಡುವ ದೃಶ್ಯ ಇನ್ನೂ ನೆನಪಿನಲ್ಲಿ ಉಳಿದಿದೆ. ಆಗ ಆ ಹೆಣ್ಣುಮಗಳು ಮತ್ತು ನಾನು ನೋಡಿರದ ಆಕೆಯ ತಮ್ಮ ನೆನಪಾದರು.

ಮುಂದೆ ಸ್ವಲ್ಪ ದಿನಗಳ ನಂತರ ಅಜ್ಜಿ ನನ್ನನ್ನು ಯಮನೂರ ಜಾತ್ರೆಗೆ ಕರೆದುಕೊಂಡು ಹೋದಳು. ವಿಜಾಪುರದಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಬಂದು ರೋಣ ತಾಲ್ಲೂಕಿನ ಮಲ್ಲಾಪುರ ನಿಲ್ದಾಣದಲ್ಲಿ ಇಳಿದ ನೆನಪು.

ಮೊದಲ ಬಾರಿಗೆ ರೈಲು ಹತ್ತಿದ ಅನುಭವ ಮರೆಯುವಂತಿಲ್ಲ. ಬೋಗಿ ಜನಜಂಗುಳಿಯಿಂದ ತುಂಬಿತುಳುಕುತ್ತಿತ್ತು. ಅಜ್ಜಿ ಕಷ್ಟಪಟ್ಟು ನನಗೆ ಕಿಟಕಿಯ ಪಕ್ಕದಲ್ಲಿ ಜಾಗ ಮಾಡಿಕೊಟ್ಟಿದ್ದಳು. ತಿರುವಿನಲ್ಲಿ ಜೋರಾಗಿ ಓಡುವ ರೈಲಿನ ಗಾಲಿ ಮತ್ತು ಹಳಿ ನೋಡಿ ಆಶ್ಚರ್ಯಚಕಿತನಾಗುತ್ತಿದ್ದೆ. ‘ಗಾಲಿ ಸರಿದು ಬಿದ್ದರೆ ಹೇಗೆ?’ ಎಂದು ಗಾಬರಿಗೊಳ್ಳುತ್ತಿದ್ದೆ.

ಮಲ್ಲಾಪುರದಿಂದ ಯಾವುದೋ ವಾಹನ ಹತ್ತಿ ಯಮನೂರಿಗೆ ಬಂದೆವು. ಅಲ್ಲಿ ರಾಜಾ ಬಾಗ್‌ ಸವಾರನ ತೋರುಗದ್ದುಗೆ ಇದೆ. ಆ ಸೂಫಿ/ಅವಧೂತ ಸಂತನಿಗೆ ಯಮನೂರಪ್ಪ ಎಂದೂ ಕರೆಯುತ್ತಾರೆ. ಈ ಯಮನೂರು ಗ್ರಾಮ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನಲ್ಲಿದೆ. ಎಲ್ಲ ಜಾತಿ ಧರ್ಮದವರು ಇಲ್ಲಿನ ಭಾವೈಕ್ಯದ ರಾಜಾ ಬಾಗ್‌ ಸವಾರ ತೋರುಗದ್ದುಗೆಗೆ ನಡೆದುಕೊಳ್ಳುತ್ತಾರೆ. ಪಕ್ಕದಲ್ಲೇ ಹರಿಯುವ ಬೆಣ್ಣಿಹಳ್ಳದ ಉಪ್ಪುನೀರಿನಲ್ಲಿ ಸ್ನಾನ ಮಾಡಿ ಒಂದು ಬಾಟಲಿ ನೀರನ್ನು ತೀರ್ಥದಂತೆ ತುಂಬಿಕೊಂಡೆವು. ಭಾರಿ ಗದ್ದಲಲ್ಲೇ ತೋರುಗದ್ದುಗೆಗೆ ಹೂ ಹಣ್ಣು ಮತ್ತು ತೆಂಗಿನಕಾಯಿ ಅರ್ಪಿಸಿದೆವು. ಊರಿನಲ್ಲಿ ಪ್ರಸಾದದಂತೆ ಹಂಚಲು ಮಗದುಮ್ ಸಕ್ಕರಿ ಖರೀದಿಸಿದ ನಂತರ ಬಸ್ ಹತ್ತಿ ಹುಬ್ಬಳ್ಳಿಗೆ ಬಂದೆವು. ಅಲ್ಲಿರುವ ಸಿದ್ಧಾರೂಢರ ಮೂಲ ಮಠಕ್ಕೆ ಹೋದೆವು. ವಿಶಾಲವಾದ ಪ್ರದೇಶದಲ್ಲಿ ಕೈಲಾಸ ಮಂಟಪ, ಸಿದ್ಧಾರೂಢರ ಗದ್ದುಗೆ ಮುಂತಾದ ಕಟ್ಟಡಗಳು ಆಕರ್ಷಕವಾಗಿವೆ. ನಮ್ಮ ಜೊತೆಗೆ ವಿಜಾಪುರದ ಕೆಲ ಹೆಣ್ಣುಮಕ್ಕಳು ಕೂಡ ಇದ್ದ ನೆನಪು.

ನಂತರ ಮೂರುಸಾವಿರ ಮಠಕ್ಕೆ ಬಂದೆವು. ಈ ಮಠ ಕೂಡ ಬಹಳ ಸುಂದರವಾದುದು. ಮಠದ ಮುಂಭಾಗದಲ್ಲಿನ ಭಾರಿ ಎತ್ತರದ ಕಟ್ಟಿಗೆ ಕಂಬಗಳ ಮೇಲೆ ದೊಡ್ಡ ಗಾತ್ರದ ಜೇನುಗೂಡುಗಳು ತುಂಬಿಕೊಂಡಿದ್ದವು. ‘ಇವು ಕಿತ್ತೂರು ಚೆನ್ನಮ್ಮನ ಅರಮನೆಯ ಕಂಬಗಳುʼ ಎಂದು ಅಲ್ಲಿದ್ದ ಯಾರೋ ಒಬ್ಬರು ಅಜ್ಜಿಗೆ ಹೇಳಿದ ನೆನಪು.

ವಿಜಾಪುರದಲ್ಲಿ ಮದ್ದಿನ ಖಣಿ ಓಣಿ ಈ ಕಡೆ ಇದ್ದರೆ ಖಣಿಯ ಆ ಕಡೆ ಇನಾಮದಾರ ತೋಟವಿದೆ. ತೋಟದ ಆಚೆ ದಂಡೆಯಿಂದ ಬಲಕ್ಕೆ ಹೊರಳಿ ಹೋದರೆ ವಡ್ಡರ ಓಣಿ ಇದೆ. ಅದರ ಹತ್ತಿರವೇ ಮೇದಾರ ಓಣಿ ಉಂಟು. ಒಂದು ದಿನ ಮಟ ಮಟ ಮಧ್ಯಾಹ್ನದ ವೇಳೆ ನಾವು ಹುಡುಗರು ಭಜಂತ್ರಿ ಓಣಿ ಆರಂಭವಾಗುವ ಸ್ಥಳದಲ್ಲೇ ಇದ್ದ ಮರದ ಕೆಳಗೆ ಆಟವಾಡುತ್ತಿದ್ದೆವು. ಆ ಸಂದರ್ಭದಲ್ಲಿ, ಸಕತ್ತಾಗಿ ಕುಡಿದಿದ್ದ ಒಬ್ಬ ವ್ಯಕ್ತಿ ಜೋಲಿ ಹೊಡೆಯುತ್ತ ವಡ್ಡರ ಓಣಿಯ ಕಡೆಗೆ ಹೋಗುತ್ತಿದ್ದ. ಆತನ ಅವತಾರ ನೋಡಲು ಹೆಣ್ಣು ಗಂಡೆನ್ನದೆ ನೂರಾರು ಜನ ಸೇರಿದರು. ಆತ ಯಾರ ಕಡೆಗೂ ನೋಡದೆ ತನ್ನದೇ ಗುಂಗಿನಲ್ಲಿ ಮೌನವಾಗಿ ಹಾಗೇ ಜೋಲಿ ಹೊಡೆಯುತ್ತ ಸಾವಕಾಶವಾಗಿ ಹೋಗುತ್ತಿದ್ದ.

ಜನರು ಗುಂಪು ಗುಂಪಾಗಿ ನೋಡುತ್ತಲೇ ಇದ್ದರು. ಆತ ಜೋಲಾಡುತ್ತ ಮುಂದೆ ಸಾಗಿ ನಮ್ಮ ಮನೆಯ ಎದುರಿಗೆ ಇರುವ ಮದ್ದಿನ ಖಣಿಯ ಗೇಟಿನ ಒಳಗೆ ಇಳಿದು, ಎದುರಿಗೆ ದೂರದಲ್ಲಿರುವ ಖಣಿಯ ಇನ್ನೊಂದು ದಂಡೆಗೆ ಹೋಗಿ ಒಡ್ಡರ ಓಣಿ ಸೇರುವವರೆಗೂ ಜನ ನೋಡುತ್ತಲೇ ಇದ್ದರು.

(ಭಜಂತ್ರಿಗಲ್ಲಿಯ ಪಕ್ಕದಲ್ಲಿ ಹಾದು ಹೋಗುವ ಬಿ.ಎಲ್.ಡಿ.ಇ. ರಸ್ತೆ)

ಇಂಥ ದೃಶ್ಯಗಳು ಆ ಕಾಲದಲ್ಲಿ ನೋಡಲು ಸಿಗುತ್ತಿರಲಿಲ್ಲ. ಆಗ ಅಬಕಾರಿ ಇಲಾಖೆಯೂ ಇರಲಿಲ್ಲ. ಒಂದಿಷ್ಟು ಜನರು ಗೌಪ್ಯವಾಗಿ ಕಳ್ಳಬಟ್ಟಿಗೆ ಮೊರೆಹೋಗುತ್ತಿದ್ದರು. ಹಳ್ಳಿಗಳ ಬಳಿಯ ನಿರ್ಜನ ಪ್ರದೇಶಗಳಲ್ಲಿ ಕೆಲವರು ಕಳ್ಳತನದಲ್ಲಿ ದಾರು (ಸಾರಾಯಿ) ತಯಾರಿಸುತ್ತಿದ್ದರು.
ಮಣ್ಣಿನ ಹರವಿಯಲ್ಲಿ ಒಂದು ಕೊಡ ನೀರು ಸುರಿದು ಅದರೊಳಗೆ ಕೊಳೆತ ಬೆಲ್ಲ, ನವಸಾಗರ ಮತ್ತು ಬ್ಯಾಲದ ಗಿಡದ ಅಥವಾ ಜಾಲಿಗಿಡದ ತೊಗಟೆ ಹಾಕುತ್ತಾರೆ. ನಂತರ ಆ ಹರವಿಯನ್ನು ಟೈಟಾಗಿ ಪ್ಯಾಕ್ ಮಾಡಿ ಮಣ್ಣಲ್ಲಿ ಮುಚ್ಚುತ್ತಾರೆ. ಮೂರು ದಿನಗಳ ನಂತರ ಹರವಿಯ ಬಾಯಿ ತೆರೆದು, ಕೋಲಿನಿಂದ ಅಲುಗಾಡಿಸಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಮತ್ತೆ ಯಥಾಪ್ರಕಾರ ಮುಚ್ಚುತ್ತಾರೆ. ಒಂದು ವಾರ ಕಳೆದ ನಂತರ ಹರವಿಯನ್ನು ಹೊರಗೆ ತೆಗೆದು ಅದರ ಮುಚ್ಚಳಕ್ಕೆ ತೂತು ಕೊರೆದು ಟೈಟಾಗಿ ಪೈಪು ಜೋಡಿಸುತ್ತಾರೆ. ತದನಂತರ ತಾತ್ಕಾಲಿಕವಾಗಿ ಸಿದ್ಧಪಡಿಸಿದ ಒಲೆಯ ಮೇಲೆ ಆ ಹರವಿಯನ್ನು ಇಟ್ಟು ಕುದಿಸುತ್ತಾರೆ. ಕುದಿಯುವಾಗ ಹೊರಡುವ ಉಗಿ ಕೊಳವೆಯ ಮೂಲಕ ಹನಿ ಹನಿಯಾಗಿ ಅದರ ಇನ್ನೊಂದು ಬಾಯಿಯಿಂದ ಕೆಳಗೆ ಇಟ್ಟ ಪಾತ್ರೆಯಲ್ಲಿ ಬೀಳುತ್ತದೆ. ಇಂಥ ಸಾರಾಯಿಯನ್ನು ಕದ್ದು ಮುಚ್ಚಿ ಮಾರಾಟ ಮಾಡುತ್ತಾರೆ. ಇದನ್ನು ಬಯಸುವ ಜನರು ಕದ್ದುಮುಚ್ಚಿ ಕುಡಿದು ನಶೆ ಇಳಿಯುವವರೆಗೆ ಹೊರಗೆ ಬೀಳುತ್ತಿರಲಿಲ್ಲ. ಇಂಥ ಕುಡಿತಕ್ಕೆ ಅಡಿಕ್ಟ್ ಆದವರು ನಿರುಪಯುಕ್ತ ಜೀವಿಗಳಂತೆ ಬದುಕಿ ಸಾಯುತ್ತಾರೆ.

ಬ್ರಿಟಿಷ್ ಸರ್ಕಾರವಿದ್ದಾಗ ಸೇಂದಿ, ಸಾರಾಯಿ ಮಾರಾಟ ಮುಕ್ತವಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ಮೇಲೆ ಗಾಂಧೀಜಿಯವರ ಇಚ್ಛೆಯ ಮೇರೆಗೆ ಸೇಂದಿ ಸಾರಾಯಿ ಬಂದ್ ಆದವು. ರಾಜ್ಯದಲ್ಲಿ ಮದ್ಯಸೇವನೆಯನ್ನು ಔಷಧಿಯ ಹಾಗೆ ಬಳಸಲು ಮಾತ್ರ ಅನುಮತಿ ಇತ್ತು. ಅದಕ್ಕಾಗಿ ವೈದ್ಯರ ಅನುಮತಿ ಚೀಟಿ (ಪ್ರಿಸ್ಕ್ರಿಪ್ಶನ್) ಅವಶ್ಯವಿತ್ತು. ಹೀಗಾಗಿ ಇಡೀ ವಿಜಾಪುರ ನಗರದಲ್ಲಿ ಒಂದೆರಡು ಬ್ರ್ಯಾಂಡಿ ಅಂಗಡಿಗಳು ಮಾತ್ರ ಇದ್ದವು.
ಸರ್ಕಾರದ ಬೊಕ್ಕಸಕ್ಕೆ ಹಣದ ಕೊರತೆ ಇದೆ ಎಂಬ ಮಾತು ಕೇಳಿ ಬರಲಾರಂಭಿಸಿದವು. ಅದಕ್ಕಾಗಿ ಇಪ್ಪತ್ತು ವರ್ಷಗಳ ನಂತರ, ಅಂದರೆ 1968 ರಲ್ಲಿ ಮತ್ತೆ ರಾಜ್ಯದಲ್ಲಿ ಅಬಕಾರಿ ಇಲಾಖೆಯನ್ನು ಪ್ರಾರಂಭಿಸಲಾಯಿತು. (ಮದ್ಯ ಮಾರಾಟವನ್ನು ನಿಷೇಧಿಸುವ ಅಥವಾ ಅನುಮತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ.) ತದನಂತರ ವಿಜಾಪುರದಲ್ಲಿ ಕೂಡ ಎಲ್ಲೆಂದರಲ್ಲಿ ಮದ್ಯದ ಅಂಗಡಿಗಳು ತಲೆ ಎತ್ತಿದವು. ಆ ವರ್ಷ ಬಸವಣ್ಣನವರ ಅಷ್ಟಶತಮಾನೋತ್ಸವದ ವರ್ಷವಾಗಿತ್ತು!

(ಚಿತ್ರಗಳು: ಸುನೀಲಕುಮಾರ ಸುಧಾಕರ)