ಬಣವಿ ಹಾಕಿ ಕೈ ಸೋತಂಗಾದವು, ಬಿಸಲು ನೆತ್ತಿಗೆ ಬಂದು ನೆರಳೆಲ್ಲ ನೆಟ್ಟಗಾಗಿದ್ವು. ಹೊಲದ ಬದಿಗಿದ್ದ ಒಂದೆರಡು ಸೂರೆಪಾನ ಹೂವ್ವುಗಳಿಗೆ ದಿಕ್ಕು ತಪ್ಪಿದಂಗಾಗಿ ಮ್ಯಾಗ ಮೊಕ ಮಾಡಿಕ್ಯಂದು ನಿಂತಿದ್ವು. ಹುಲ್ಲು ಬಣವಿ ಹಾಕಿ ಸುರುಳಿ ಸುತ್ತಿ ಅವುಗಳ ನಡುವಿಗೆ ಉರಿಕೆನ್ನಿ ಬಿಗುತ್ತನಂಗ ಬಿಗುದು, ಒಂದರ ಮ್ಯಾಗೊಂದು ಹುಲ್ಲಿನ ದಂಡು ಸೇರಿಸಿ ದೊಡ್ಡ ಬಣವಿಗೆ ಕಮಾನಿನ ಆಕಾರ ಕೊಟ್ಟು, ನೆತ್ತಿ ಮ್ಯಾಗಳ ಬೆವರನ್ನ ಬೆರಳಿಂದ ಸವರಿ ಒರೆಸಿಗ್ಯಂದು ಜಾಡಿಸಿ, ಅಲ್ಲೆ ನೆಲದ ಮ್ಯಾಗ ಕುಂತೆ ನಾ.
ಸುವರ್ಣ ಚೆಳ್ಳೂರು ಬರೆದ ಈ ಭಾನುವಾರದ ಕಥೆ ‘ಗುರುತುʼ ಈ ಭಾನುವಾರದ ನಿಮ್ಮ ಓದಿಗೆ

 

ಮೋಡ ಎಂದಿನಂಗ ಹತ್ತಿ ಮೂಟೆ ಆಗಿ ಆಕಾರ ಬದಲಾಯಿಸಿಕೊಳ್ತಾ ಎಲ್ಲಿಗೊ ಗುಳೆ ಹೊಂಟಂಗ ಸಾಲಾಗಿ ನಿಂತಿದ್ವು. ಹಕ್ಕಿಗಳು ಹಾರ್ಯಾರಿ ಎಳ್ಳುಕಾಳುಗಳು ಕಂಡಂಗ ಕಾಣ್ತಿದ್ವು. ಬಣವಿ ಹಾಕಿ ಕೈ ಸೋತಂಗಾದವು, ಬಿಸಲು ನೆತ್ತಿಗೆ ಬಂದು ನೆರಳೆಲ್ಲ ನೆಟ್ಟಗಾಗಿದ್ವು. ಹೊಲದ ಬದಿಗಿದ್ದ ಒಂದೆರಡು ಸೂರೆಪಾನ ಹೂವ್ವುಗಳಿಗೆ ದಿಕ್ಕು ತಪ್ಪಿದಂಗಾಗಿ ಮ್ಯಾಗ ಮೊಕ ಮಾಡಿಕ್ಯಂದು ನಿಂತಿದ್ವು. ಹುಲ್ಲು ಬಣವಿ ಹಾಕಿ ಸುರುಳಿ ಸುತ್ತಿ ಅವುಗಳ ನಡುವಿಗೆ ಉರಿಕೆನ್ನಿ ಬಿಗುತ್ತನಂಗ ಬಿಗುದು, ಒಂದರ ಮ್ಯಾಗೊಂದು ಹುಲ್ಲಿನ ದಂಡು ಸೇರಿಸಿ ದೊಡ್ಡ ಬಣವಿಗೆ ಕಮಾನಿನ ಆಕಾರ ಕೊಟ್ಟು, ನೆತ್ತಿ ಮ್ಯಾಗಳ ಬೆವರನ್ನ ಬೆರಳಿಂದ ಸವರಿ ಒರೆಸಿಗ್ಯಂದು ಜಾಡಿಸಿ, ಅಲ್ಲೆ ನೆಲದ ಮ್ಯಾಗ ಕುಂತೆ ನಾ.

ರಾಯಪ್ಪ ನನ್ನ ಕಡಿಗೆ ಕಣ್ಣು ಹಾಯಿಸಿ ತಲಿ ಮ್ಯಾಲೆ ಸುತ್ತಿದ್ದ ಒಲ್ಲಿ ಸಡಿಲಿಸಿ, ಹೆಗಲ ಮ್ಯಾಲ ಹಾಕ್ಕೊಂದು, ಕೈಗೆ ಕಾಲಿಗೆ ಹತ್ತಿದ್ದ ಹುಲ್ಲಿನ ಸುಂಕ ತೂರಿಸಿಗ್ಯಂತ ಮಾತಿಗಿಳಿಯುತ್ತ ಬಂದ.

‘ಅಲಬೇ ಯಕ್ಕಾ,

ಹುಲ್ಲು ಸುರುಳಿ ಸುತ್ತಿ ಬಣವಿ ಮಾಡಾದು ಎಲ್ಲಾರಿಗ್ಯ ಒಗ್ಗ ದಗದ ಅಲ್ಲ, ಗಾವನ ಮಂದಿ ಆಗಬೇಕು ಇದಕ, ಆದರಾಗ ನಿ ಹೆಣಮಗಳದಿ, ಮೊದ್ಲಾ ಬಸುದು ಹೋಗಿ, ಎದುಕ ಇಂತಾ ಬಿರುಸನ ದಗದ ಮಾಡಾಕ್ ಬರ್ತಿಬೆ ಸುಮ್ನ… ಮನ್ಯಾಗಿರಾದಲ್ಲನು, ಘನ ದಗದಾ ಮಾಡಬೊಕಂಬಾಕಿ ನೋಡಂಗೆ ನೀನು. ಆರ್ ತಾಸಿನ ಹೊಲದ್ ದಗದ ಮಾಡಿ, ಮತ್ಯ ಈ ಬಣವಿ ಹಾಕಾಕತ್ತಿ, ಇರಾದು ಮೂರು ಹೊಟ್ಟಿಗೆ ಇಷ್ಟ ಯಾಕ ಹೈರಾಣಾಕ್ಕಿ ಬೇ ಯವ್ವಾ’ ಅಂದ.

ಅಲ್ಲೆ ಕುಂತಿದ್ದ ನನಿಗ್ಯ ಇತನ ಮಾತ್ ಕೇಳಿ ಸಟಕ್ಕನೆ ಎದ್ದು ಹುಲ್ಲು ಸುರುಳಿ ಸುತ್ತಿ ಬಣವ್ಯಾಕ ಒಗಿಲ್ಯನು ಅನ್ನಂಗಾತು. ಆದ್ರ ಮನಸಿಗೆ ರಾಯಪ್ಪನ ಮಾತು ನಿಜ ಅನ್ನಾದು ಗೊತ್ತಿತ್ತು, ಇರಾವು ಯಾಲ್ಡ ಉಡ್ರದಾವ, ನಾ ಅದೂ ಇದೂ ದಗದ ಮಾಡಿ ರಕ್ಕಾ ಕೂಡಿಟ್ರ ಮುಂದಕ ಎದುಕನ ಬದುಕಿಗಾತೈತಿ ಅನ್ನಾದು ನನ್ನ ಮನಸು, ಅದಕಾ ಸುಮ್ನ ಮಾತಿನ್ಯಾಗ ಅಂದೆ.

‘ಏನ್ ಮಾಡಾದು ರಾಯಣ್ಣ…. ಹೊಟ್ಟಿ ಅನದೊಂದು ಐತ್ಯಲ ಅದು ಯಾರ್ ಮಾತು ಕೇಳಲ್ಲಪೊ, ಮೈ ಬಸದಾದ್ರೂ ಉಣಬೊಕು ಅಂತೈತಿ, ಮನ್ಯಾಗ ಎರಡು ಸಣ್ಣವದಾವ ಯಾವಾಗ್ ನೋಡಿದ್ರು ಯವ್ವಂಗೆ ಸಾಲಿಗೋತ್ನು ಸಾಲಿಗೋತ್ನು ಅಂತ ಸೆರಗೆಳದಾಡ್ತಾವ, ನನಿಗ್ಯರ ಅಕ್ಷರದ್ದು ಗಂಧೆವದ ಗಾಳ್ಯೆವದ ಅನ್ನಾದ ಕೂನಿಲ್ಲ, ಅವು ಸಾಲಿಂದ ಬಂದು ಹಾಡಾಡಿಕ್ಯಂತನ ಸಾಲ್ಯಾಗ ಕಲಿಸಿದ್ದ ಪಾಠ ಓದ್ತಿರ್ತಾವ, ಒಂದೊಂದು ಸತಿ ದೊಡ್ಡ ಹುಡುಗೀನ ದನಕ್ಕ ಬಡದಂಗ ಬಡದು ಹೊಲದ್ ದಗದಕ್ಕ ಎಳಕಂಬಾರಕ ನೋಡಿದ್ಯ, ಆದ್ರ ಆಕೀ

‘ಯವಂಗೆ ನಾ ಹೊಗೊ ಸಾಲಿಗೇನು ರೊಕ್ಕಿಲ್ಲ ಏನಿಲ್ಲ, ಮತ್ತೆ ಸಾಲ್ಯಾರ ಬಟ್ಟಿ ಕೊಡ್ತಾರ ಊಟ ಕೊಡ್ತಾರ, ನೀ ಹಿಂಗ ನನ್ನ ದಗದಕ್ಕ ಕರಕಂಬಂದರ ನಾನು ಅಪ್ಪ ಹೋದಂಗ ಎಲ್ಲಿಗ್ಯರ ಹೊಗಿಬುಡುತ್ನು ನೋಡು’ ಅಂತ ನನ್ನ ಬಾಯಿ ಮುಚ್ಚಸ್ತೈತಿ ಖೋಡಿ, ಹೊಟ್ಟಿ ತುಂಬುಸಾಕನ ಬದುಕು ಮಾಡಬೇಕಲಪಾ ರಾಯಣ್ಣ ಅಂದೆ.

ಕೆಲ್ಸ ಮಾಡ್ತಿದ್ದ ರಾಯಣ್ಣ ಕಣ್ಣುಬ್ಬು ಏರಿಸಿ

‘ಯೆಯ್ಯವ್ವೊ ಹಂಗಂತಾಳನು ಆಕಿ! ಯಂಕಮ್ಮಕ್ಕಾ, ಘನ ಗಟ್ಟಿಗಿತ್ತಿ ಅದಾಳಬುಡು ಮಗಳು, ಹಿಂಗ ಹರಿ ಬುಡುಬ್ಯಾಡವೊ ಯವ್ವಾ.. ವರ್ಷಾತಂದ್ರ ಮೂಲ್ಯಾಗ ಕುಂದ್ರಂಗ ಆಗ್ಯಾಳ ಆಗಲೇ’ ಅಂತ ಅಂದ.

ನೆಲದ ಮ್ಯಾಗ ಕುಂತಿದ್ದ ಯಂಕಮ್ಮಗ ರಾಯಪ್ಪನ ಮಾತು ವಿಚಿತ್ರ ಮತ್ತೆ ಭಯ ಅನ್ನಿಸಿ

‘ಹೌದಪಾ ಮಕ್ಕಳು ಹಂಗ ಇನ್ನೂ ಸೆರಗಿಡದು ಆಡ್ತಾವ ಅನ್ನದ್ರಾಗ ಭುಜಕ್ಕ ಬಂದು ನಿಂತಿರ್ತಾವ, ಹಿಂಗ ಬದುಕು ಎಲ್ಲ ಹಂಗಂಗ ನಡದು ಹೊಕ್ಕೈತಿ, ಹುಟ್ಟಿದ ಬದುಕು ಹೊಟ್ಟಿ ದಾರಿಗೆ ಎಲ್ಲ ಕಲುಸ್ತೈತಿ’ ಅಂತ ಹೇಳ್ತಾ ಯಂಕಮ್ಮ ನೆಲಕ್ಕ ಕೈ ಸವರಿ ಎದ್ದು, ಮಡಪು ಹಾಕಿ ನಡುವಿಗೆ ಸಿಕ್ಕಿಸಿ ಕೊಂಡಿದ್ದ ಕಚ್ಚಿ ಬಿಚ್ಚಿ ಗೌಡನ ಮನಿ ಕಡಿಗೆ ಕಾಲ್ಕಿತ್ತಿದರು.

ಬಣವಿ ಹಾಕಿದ ಕೆಲಸ ಮುಗಿಯುವಷ್ಟರಲ್ಲಿ ಮರದ ನೆರಳು ತೊಂಬತ್ತು ಡಿಗ್ರಿಗೆ ಬಂದಿತ್ತು, ಸೂರೆಪಾನ ಹೂಗಳು ನೆಲ ನೊಡುತ್ತಿದ್ವು, ಆಕಾಶದಾಗಿದ್ದ ಮೊಡಗಳೆಲ್ಲ ಗುಳೆವು ಮುಗಿಸಿ ಅದಾಗಲೆ ಮನೆ ತಲುಪಿದ್ವು, ತಿಳಿ ಆಕಾಶದಂಗಳದಾಗ ಚುಕ್ಕಿಗಳು ಅಲ್ಲಲ್ಲಿ ಕಣ್ಣು ತೆರೆಯುತ್ತಿದ್ವು.

ರಾಯಣ್ಣ ಮತ್ತು ಯಂಕಮ್ಮ ಗೌಡ್ರು ಮನೆ ಕೆಲಸಗಳಿಗೆ ಆಗಾಗ ಹೋಗೊ ಕೆಲಸದಾಳುಗಳಾಗಿದ್ರು, ಎಂದಿನಂತೆ ಇವತ್ತೂ ಬಣವಿ ಕೆಲಸ ಮುಗಿಸಿ ದಿನಗೂಲಿಗೆ ಅಂತ ಗೌಡ್ರ ಮನೆಯ ಅಂಗಳದ ಮೂಲೆಯಲ್ಲಿ ನಿಂತಿದ್ರು, ಮುಂದೆ ಗೌಡ ಬರುತ್ತಿರೋದನ್ನ ನೋಡಿ ಯಂಕಮ್ಮ ತಾನು ನಿಂತ ಜಾಗದಿಂದ ತುಸು ಹಿಂದಕ್ಕೆ ಸರಿದು ಸೀರೆಯ ಸೆರಗನ್ನ ತಲೆ ಮೇಲೆ ಹಾಕಿಕೊಂಡು ನಿಂತವಳು ಮನಸ್ಸಿನಲ್ಲೇ ‘ನಾಳಿಗ್ಯೆನರ ದಗದಕ್ಕ ಕರದ್ರ ಬೆಸಿರತ್ತೈತಿ’ ಅಂದುಕೊಳ್ತಾ ಕಣ್ಣರಳಿಸಿ ಕೊಂಡು ನಿಂತಳು.

ಬಂದ ಗೌಡ,

‘ಏನಪಾ ರಾಯಣ್ಣ, ಬಣವಿ ಬೆಸಾಗೈತಿ, ನಾಳಿಗೆ ಹೊಲಕ್ಕ ನೀರು ಹರಸಬೊಕು ಬಂದುಬುಡು ಬಡಾನ’ ಎಂದವನೇ ಕೂಲಿ ಕೊಟ್ಟು ಅಲ್ಲಿಂದ ಹೊರಟ. ರಾಯಪ್ಪ ಯಂಕಮ್ಮನ ಮುಖ ನೋಡಿ ‘ನಡಿ ನಡಿಬೇ ಯಂಕಮ್ಮಕ್ಕ ಮುಳುಚಂಜಲೆ ಆಗೈತಿ’ ಅಂತ ಹೇಳಿ ತನ್ನ ಮನೆ ದಾರಿ ಹಿಡಿದ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮನಸಿಗೆ ರಾಯಪ್ಪನ ಮಾತು ನಿಜ ಅನ್ನಾದು ಗೊತ್ತಿತ್ತು, ಇರಾವು ಯಾಲ್ಡ ಉಡ್ರದಾವ, ನಾ ಅದೂ ಇದೂ ದಗದ ಮಾಡಿ ರಕ್ಕಾ ಕೂಡಿಟ್ರ ಮುಂದಕ ಎದುಕನ ಬದುಕಿಗಾತೈತಿ ಅನ್ನಾದು ನನ್ನ ಮನಸು, ಅದಕಾ ಸುಮ್ನ ಮಾತಿನ್ಯಾಗ ಅಂದೆ.

ಯಂಕಮ್ಮನ ಮನಸ್ಸು ಇಳಿಮೊರೆ ಹಾಕಿತು. ನಾಳೆಯ ಕೆಲಸದ ಬಗೆಗಿನ ಚಿಂತೆ ಹೆಗಲಿಗೇರಿಸಿಕೊಂಡು ಕೇರಿ ಕಡೆ ನಡೆದಳು. ಯಂಕಮ್ಮ ಮನೆ ತಲುಪುವ ಹೊತ್ತಿಗೆ ಹೊತ್ತು ಮುಳುಗಿ ಸೂರ್ಯ ತಿಳಿಕೆಂಪಾಗಿ ಅರ್ಧ ಮುಳುಗಿದ್ದ, ಕೇರಿಯಲ್ಲಿನ ಅಂಗಳಗಳೆಲ್ಲ ಕಸಗೂಡಿಸಿಕೊಂಡು ನೀರು ಚಿಮುಕಿಸಿ ಕೊಂಡು ತಂಪಾಗುತ್ತಿದ್ದವು. ಮನಿ ಬಾಕಲಿಗಳೆಲ್ಲ ಪೂಜೆ ನೆರವೇರಿಸಿಕೊಂಡು ಊದಿನಕಡ್ಡಿ ಹೊಗೆಯಿಂದ ಘಮ್ಮೆನ್ನುತ್ತಿದ್ದವು, ಮ್ಯಾಗಡೆ ಓಣಿಯೊಳಗಿನ ಅಗಸಿ ಕಟ್ಟಿಯೊಳಗ ಶರೀಫಜ್ಜನ ಹಾಡುಗಳು ಚಲುವಾಗಿದ್ದವು. ಓಣ್ಯಾಗಿನ ಹುಡ್ರು ಆಡಿ ಆಡಿ ದಮ್ಮತ್ತಿ ‘ಅಟಂ ಪುಟಂ ಜೈ ಮಂಗಳಂ ಜೈ’ ಎಂದು ಕೂಗಿ ಕುಣಿಯುತ್ತ ಆ ದಿನದ ಆಟ ಮುಗಿಸಿ ಮನಿ ಕಡೆ ಮುಖ ಹಾಕಿಯಾಗಿತ್ತು.

ಮನೆ ದಾರಿ ತಲುಪುತ್ತಿದ್ದಂತೆ ತನ್ನಿಬ್ಬರು ಮಕ್ಕಳು ಸಣ್ಣ ಚಳ್ಳ ಕಟ್ಟಿಗೆಗೆ ಪೇಪರ್ ಸುತ್ತಿ ಅದಕ್ಕೆ ಗಾಳಿಪಟದ ಆಕಾರ ಕೊಟ್ಟು ಆಕಾಶಕ್ಕೆ ಹಾರಿ ಬಿಟ್ಟು ಇನ್ನೇನು ತಾವೇ ಆಕಾಶ ಮುಟ್ಟಿ ಬಿಡ್ತಾರೇನೊ ಅನ್ನುವ ಖುಷಿಯಲ್ಲಿ ಕುಣಿತಾ ಇದ್ರು.

ಬಣವಿ ಹಾಕಿ ದಣಿದು ಬಂದಿದ್ದ ಯಂಕಮ್ಮನಿಗೆ ತನ್ನ ಮಗಳು ಯಮುನಾ ಯಾವ ಕೆಲಸ ಮಾಡದೇ ಹೊರಗಡೆ ಗಾಳಿಪಟ ಹಾರಿಸಿ ಆಡ್ತಿದ್ದದ್ದು, ಮನೆಯ ಅಂಗಳದ ಮುಖಕ್ಕೆ ಬಾರಿಗೆಯ ಗೆರೆಗಳು ಮೂಡದೆ ಇದ್ದದ್ದು, ಮನಿಯೊಳಗೆ ಮುಸುರೆಗಳೆಲ್ಲ ಅವಳನ್ನ ಸ್ವಾಗತಿಸಿದ್ದನ್ನ ಕಂಡು ತಲೆಯೆಲ್ಲ ಕೆಂಡ ತುಂಬಿದಂತಾಯಿತು. ಬಿರುಗಾಳಿಯಂತೆ ಬಂದ ಯಂಕಮ್ಮ ‘ಅಲಲೇ ಅಡಾವುಡಿ ಯಮುನಿ, ಕೆಲ್ಸ, ದಗದ, ಬಗಸಿ, ಬದುಕು, ಬಾಳೆವು ಅಂಬಾದು ತಟಗರ ಖಬುರೈತ್ಯನು ನಿನಿಗ್ಯ.. ದಂಡೆರದ್ ದಾರಿಗ್ಯಾಕ್ಲ, ಮನಿಯೆಲ್ಲ ಅರಿವಿಕ್ಯಂದು ಹೊರಾಗ್ ಕುಣ್ಕಂತ ನಿಂತ್ಯಲ’ ಅಂತ ಬೈಯ್ಯುತ್ತಲೆ ಕೈಗೆ ಸಿಕ್ಕ ಕಸಬಾರಿಗೆಯನ್ನ ಯಮುನಾಳ ಕಡೆ ಬೀಸಿದಳು, ಬೀಸಿದ ರಭಸಕ್ಕೆ ಯಮುನಾಳ ಮೂಗು ಪೆಟ್ಟಾಗಿ ರಕ್ತ ಬಂತು. ಯಮುನಾ ತನ್ನ ಲಂಗದಿಂದ ಮೂಗನ್ನ ಗಟ್ಟಿಯಾಗಿ ಒತ್ತಿ ಹಿಡಿದು ಅಲ್ಲೇ ಇದ್ದ ಕಂಬಕ್ಕೆ ಆತುಕೊಂಡು ಕುಳಿತಳು, ಅಳೋದನ್ನ ಎಷ್ಟೆ ತಡೆದರೂ ಕಣ್ಣೀರು ಅವಳ ಪಾದ ಸೋಕಿ ಹರಿಯುತ್ತಿತ್ತು, ಬಟ್ಟೆಯನ್ನ ಬಾಯಿಗೆ ತುರುಕಿ ಅದೆಷ್ಟೆ ಒತ್ತಿದರೂ ಬಿಕ್ಕುತ್ತಿದ್ದ ಧ್ವನಿ ಮಾತ್ರ ಬಟ್ಟೆಯ ದಿಗ್ಬಂಧನ ತೊರೆದು ಹೊರಗೆ ಕೇಳಿಸುತ್ತಿತ್ತು.

ಸ್ವಲ್ಪ ಹೊತ್ತು ಸರಿಯುತ್ತಲೇ ಒಲಿಯೊಳಗಿನ ಕೆಂಡ ಉರಿದು ತಣ್ಣಗಾಗಿತ್ತು. ಯಮುನಾ ಅಂಗಳದ ಕಟ್ಟಿಮೇಲೆ ಕುಳಿತಳು. ಅವಳ ಲಂಗದ ಮೇಲಿದ್ದ ಕಣ್ಣೀರಿನ ಗುರುತು ಇನ್ನೂ ಆರಿರಲಿಲ್ಲ. ಅಂಗಳದ ಹಾದಿಯನ್ನ ದಿಟ್ಟಿಸುತ್ತಾ ಕುಳಿತಳು, ಆ ಹಾದಿ ನೋಡುತ್ತಿದ್ದಾಗಲೆಲ್ಲ ಅವಳಿಗೇನೋ ಸೆಳೆದಂತಾಗುತ್ತಿತ್ತು, ನೋಡುತ್ತಾ ಕುಳಿತಂತೆಲ್ಲ ಹಾದಿ ತುಂಬ ಹೆಜ್ಜೆ ಚಿತ್ರಗಳು ಮೂಡುತ್ತಿದ್ದವು. ಅವು ಒಂದರ ಹಿಂದೆ ಒಂದು ಓಡಿದಂತೆ, ಓಡುತ್ತಿರುವ ಹೆಜ್ಜೆಗಳು ಮತ್ತೆ ಹಿಂತಿರುಗಿ ತನ್ನೆಡೆಗೆ ಓಡಿ ಬಂದಂತೆ ಭಾಸವಾಗುತ್ತಿತ್ತು, ಆ ದೊಡ್ಡ ಹೆಜ್ಜೆಗಳ ಪಕ್ಕದಲ್ಲೇ ಪುಟ್ಟ ಹೆಜ್ಜೆಗಳು ಸಾಗುತ್ತಿದ್ದವು. ಯಮುನಾ ಆ ಹೆಜ್ಜೆಗಳನ್ನ ಹಿಡಿದು ಕಟ್ಟಿಹಾಕಬೆಕೆಂದಾಗಲೆಲ್ಲ ದೊಡ್ಡ ಹೆಜ್ಜೆಗಳು ದೂರಕ್ಕೆ ಹಾದಿ ಹಿಡಿದು ಮಾಯವಾಗುತ್ತಿದ್ದವು, ಪುಟ್ಟ ಹೆಜ್ಜೆಗಳು ಮಾತ್ರ ಉಳಿಯುತ್ತಿದ್ದವು. ಅದಕ್ಕೆಂದೇ ಹಿಡಿಯುವುದನ್ನ ಬಿಟ್ಟು ದೂರದಿಂದಲೇ ಅವುಗಳ ಜೊತೆ ಮಾತಾಡುತ್ತಿದ್ದಳು.

ದಿನಾಲೂ ಅಂಗಳದ ಹಾದಿಗೆ ಅಪ್ಪ ಮತ್ತೆ ಹಿಂತಿರುಗಿ ಬರಬಹುದೆನೋ ಎಂದು ಕಾಯುತ್ತಿದ್ದವಳಿಗೆ, ಈ ಹೆಜ್ಜೆ ಗುರುತುಗಳು ಅಪ್ಪನದ್ದೇನೊ ಅಂತ ಅನ್ನಿಸುತ್ತಿತ್ತು. ಯಮುನಾ ಯಾವಾಗಲೂ ಆ ಗುರುತುಗಳ ನೆನಪಲ್ಲೆ ಸಾಗುತ್ತಾ ರಾತ್ರಿಯಾಗುವುದನ್ನೆ ಎದುರು ನೋಡುತ್ತಿದ್ದಳು., ಒಮ್ಮೊಮ್ಮೆ ತಲೆಯ ತುಂಬಾ ಹೆಜ್ಜೆಗಳು ಹರಿದಾಡಿದಂತಾಗಿ ಅಂಗಳದಲ್ಲಿ ಕೂರುತ್ತಿದ್ದಳು, ಪುಸ್ತಕದ ತುಂಬೆಲ್ಲಾ ಹೆಜ್ಜೆಗಳ ಚಿತ್ರಗಳನ್ನೆ ಗೀಚುತ್ತಿದ್ದಳು, ಅವಳು ಉಟ್ಟ ನೀಲಿ ಸಾಲಿ ಅಂಗಿ, ಅಲ್ಲಲ್ಲಿ ತೂತಾಗಿದ್ದ ಕರಿ ಸಾಕ್ಸ್, ಬಲೂನಿನ ಚಿತ್ರ ಇದ್ದ ಸಾಲಿ ಬ್ಯಾಗ್, ಕಂಪಾಸ್ ಬಾಕ್ಸ್ ಎಲ್ಲದರ ಮೇಲೂ ಹೆಜ್ಜೆಗಳ ಗುರುತೆ ಇರುತ್ತಿದ್ದವು. ಆದ್ದರಿಂದಲೇ ಯಮುನಾ ನೀಲಿ ಅಂಗಿ ಉಟ್ಟಾಗಲೆಲ್ಲ ಅವ್ವ ಬೈಯ್ಯುತ್ತಿದ್ದಳು ‘ಊರ್ ದರಿದ್ರಗೇಡಿ ಮನ್ಯಾಗೆನು ಬಟ್ಟಿಬರಿ ಇಲ್ಲನು, ಮಸಿಬಟ್ಟಿ ಅಕ್ಯಂಡು ನಿಂತು ಬುಡುತಿಯಲ’ ಎನ್ನುತ್ತಿದ್ದಳು, ಆದರೆ ಯಂಕಮ್ಮನ ಮನಸ್ಸಿನಾಳಕ್ಕೂ ಈ ಹೆಜ್ಜೆ ಹೊಕ್ಕು ನಿಂತಾಗ ಮೂಲೆಯಲ್ಲಿ ತಣ್ಣಗೆ ಕೂತು ‘ಬಂದಂಗ ಹೋದ್ರ ಬಂದಾನಿಲ್ಲವ’ ಎಂದು ಕೆಲಸದಲ್ಲಿ ತೊಡಗಿ ಬಿಡುತ್ತಿದ್ದಳು.

ಎಂದಿನಂತೆ ಹೆಜ್ಜೆಗಳು ಬರೋದನ್ನ ಯಮುನಾಳ ಕಣ್ಣು ಕಾಯುತ್ತಾ ಕುಳಿತಿದ್ವು, ಹೆಜ್ಜೆಗಳ ಸುಳಿವು ಅವಳಿಗೆ ಅವತ್ತು ಸಿಗಲೇ ಇಲ್ಲ. ಮೌನವನ್ನ ಹೊದ್ದು ಮಲಗಿದ್ದ ಹಾದಿಗುಂಟ ಖಾಲಿತನ ಆವರಿಸಿದಂತಿತ್ತು, ಕತ್ತಲು ತುಸು ಗಾಢವಾಗಿ ಕಪ್ಪಾಗಿತ್ತು ಯಾವುದೋ ಕಾಯುವಿಕೆಗೆ ನಾಲಿಗೆ ಹಾಸಿ ಕುಳಿತಂತೆ. ಯಮುನಾ ಮನಸ್ಸಿನಲ್ಲೇ ‘ಹಿಂಗೆದಕಾಗೈತಿ ಇವತ್ತು’ ಅಂತ ಅಂದುಕೊಳ್ತಾ ಅಂಗಳದ ಎದೆಯಲ್ಲಿ ಸ್ವಲ್ಪ ಹೊತ್ತು ನಿಂತಳು, ಮತ್ತೆ ಏನೋ ನೆನಪಾದಂತೆ ಹಿಂತಿರುಗಿ ಮನೆ ಮುಂದಿನ ಚಪ್ಪರಕ್ಕೆ ನೇತು ಹಾಕಿದ ಕಂದೀಲು ಹಚ್ಚಿ ಮನೆಯೊಳಗೆ ನಡೆದು ಕೌದಿಯೊಳಗೆ ಮುದುರಿಕೊಂಡಳು. ಕೌದಿಯ ಇಂಚಿಂಚು ಹಳೆಯ ಹರಿದ ಬಟ್ಟೆಗಳ ತುಂಡು ಸೇರಿಸಿ ಒಂದರ ಹಿಂದೆ ಒಂದರಂತೆ ನಾಜೂಕಾಗಿ ಹೆಣೆದಿತ್ತು ಅಲ್ಲಿ ಬಣ್ಣಗಳೆಲ್ಲವೂ ಕಪ್ಪಾಗಿದ್ದವು, ಕೌದಿ ಹೊದ್ದು ಮಲಗಿದ್ದ ಯಮುನಾಳಿಗೆ ಈ ಕೌದಿಯ ಹೆಣಿಕೆಗಳು ಹೆಜ್ಜೆಗಳ ರೂಪ ಪಡೆದು ಸಾಲುಗಟ್ಟಿ ಓಡಿಬಂದಂತಾದವು, ಎಂದಿನಂತೆ ಹಿಡಿಯಲು ಪ್ರಯತ್ನಿಸದಿದ್ದರೂ ಹೆಜ್ಜೆಗಳು ತಾವಾಗೆ ಅಪ್ಪಿದಂತಾಯಿತು.

ಧಡ್ಡೆಂದು ಕೌದಿ ತೆಗೆದಾಗ ಕಣ್ಣಿನೆದುರಿದ್ದ ಗೋಡೆಮೇಲೆ ದೊಡ್ಡ ಹೆಜ್ಜೆಯ ಆಕಾರ ಮೂಡಿ ಕರೆದಂತಾಯಿತು. ಹಾಸಿಗೆಯಿಂದ ಎದ್ದವಳೆ ಹೊರಬಂದು ನಿಂತಳು ಕತ್ತಲಿನ ನಾಲಿಗೆ ಅಗಲವಾಗಿತ್ತು, ಖಾಲಿತನದಲ್ಲಿ ಕಾಯುತ್ತಾ ಕುಳಿತಿತ್ತು, ಕತ್ತಲು ಮಧ್ಯೆ ಹಾದಿಯಲ್ಲಿ ಕಾಣುತ್ತಿದ್ದ ಅದೇ ಹೆಜ್ಜೆಗಳನ್ನ ಹಿಂಬಾಲಿಸುತ್ತಾ ನಡೆದಳು. ಗಾಢ ಕಪ್ಪಿನೊಳಗೆ ಎಲ್ಲ ಬಣ್ಣಗಳನ್ನ ಕತ್ತಲು ನುಂಗಿ ಕಣ್ಣು ಬಡಿಯುತ್ತಿತ್ತು. ಪುಟ್ಟ ಹೆಜ್ಜೆಗಳು ಒಂದರ ಹಿಂದೆ ಒಂದು ಸಾಗಿ ಮಾಯವಾಗಿ ಹೋದವು, ಚಪ್ಪರದಲ್ಲಿದ್ದ ಚಿಮಣಿ ದೀಪ ಗಾಳಿಯ ಸೆಳೆತಕ್ಕೆ ಹಾರಿ ಹೋಗಿ ಅಂಗಳದೊಡಲಿಗೆ ಉರುಳಿತ್ತು. ಹಾದಿ ಆಕಳಿಸಿ ಕಣ್ಮುಚ್ಚಿ ನಿದ್ರೆಗೆ ಜಾರಿತು.