ಶತಮಾನದ ಹಿಂದೆ ಆರಂಭಗೊಂಡ ಬೇಸಿಗೆಯ ಆರಂಭಕ್ಕೆ ಸಮಯ ಮುಂದಿಡುವ, ಚಳಿಗಾಲದ ಆರಂಭಕ್ಕೆ ಸಮಯ ಹಿಂದಿಡುವ  ಪದ್ಧತಿ ಇಂದಿಗೂ ಮುಂದುವರಿದು, ಮಾರ್ಚ್ ಕೊನೆಯಲ್ಲಿ ನಾವು  ಸಮಯವನ್ನು ಒಂದು ತಾಸು ಮುಂದಿಟ್ಟಿದ್ದು ಈ ವರ್ಷಕ್ಕೆ ಆಗಿ ಹೋಗಿದೆ. ಈ ಕ್ರಮ ಶುರು ಆದಾಗಿನಿಂದ ಇಲ್ಲಿಯವರೆಗೂ ಏಕಪಕ್ಷೀಯವಾಗಿ ಜನಸಾಮನ್ಯರ, ವಿಜ್ಞಾನಿಗಳ, ಪಂಡಿತರ ಪೂರ್ತಿ ಅನುಮೋದನೆಯಿಂದಲೇ ನಡೆಯುತ್ತಿದೆ ಎಂದಲ್ಲ. ಹಗಲು ಬೆಳಕಿನ ಉಳಿತಾಯ ನಿಜವಾಗಿಯೂ ಉಳಿತಾಯವೇ ಹೌದೋ ಅಲ್ಲವೋ ಎಂಬ ಬಗ್ಗೆ ಜಿಜ್ಞಾಸೆ ಇದೆ, ಸಂದೇಹ ಇದೆ.
ಯೋಗೀಂದ್ರ ಮರವಂತೆ ಅಂಕಣ

 

ಜಗತ್ತಿನ ಯಾವ ಮೂಲೆಗೆ ಹೋದರೂ ಹಗಲೆಂದರೆ ಹಗಲು, ರಾತ್ರಿ ಎಂದರೆ ರಾತ್ರಿ. ಆದರೆ ಹಗಲು ಯಾವಾಗ ರಾತ್ರಿ ಯಾವಾಗ, ಹಗಲು ಎಷ್ಟೊತ್ತು ಇರುಳು ಎಷ್ಟೊತ್ತು ಎನ್ನುವುದು ಮಾತ್ರ ಎಲ್ಲ ದಿನ ಎಲ್ಲ ಕಡೆಗಳಲ್ಲಿ ಒಂದೇ ಅಲ್ಲ. ಹಗಲು ಉದ್ದವಾಗುವ ಊರುಗಳೂ ಮಾಸಗಳೂ ಇವೆ, ಹಾಗೆಯೇ ರಾತ್ರಿ ದೀರ್ಘವಾಗುವ ಪ್ರದೇಶಗಳೂ ತಿಂಗಳುಗಳೂ ಇವೆ. ಈಗಿನ ಬೇಸಿಗೆಯ ಬ್ರಿಟನ್ನಿನಲ್ಲಿ ರಾತ್ರಿಗಿಂತ ಹಗಲೇ ಹೆಚ್ಚು. ಇಲ್ಲಿಯ ತನಕ ಯಾವ ಚಕ್ರವರ್ತಿಗಳೂ ಜಾದೂಗಾರರೂ ರಾಜಕಾರಣಿಗಳೂ ಪವಾಡಪುರುಷರೂ ಈ ಹಗಲು ರಾತ್ರಿಗಳ ನಿಯಮಗಳನ್ನು ಬದಲು ಮಾಡಲು ಆಗಿಲ್ಲ. ಹಗಲು ಹಗಲಾಗಿಯೇ ರಾತ್ರಿ ರಾತ್ರಿಯಾಗಿಯೇ ಇರುವ ಜಗನ್ನಿಯಮದ ನಡುವೆಯೇ ಮಾರ್ಚ್ ಕೊನೆಯ ಆದಿತ್ಯವಾರದಂದು ಇಲ್ಲಿನ ಸಮಯ ಒಂದು ತಾಸು ಮುಂದೆ ಹೋಗಿದೆ. ಇನ್ನು ಮನೆಯೊಳಗಿರುವ ಸಮಯಪಾಲಕ, ತಮ್ಮಷ್ಟಕ್ಕೆ ಮುಂದೆ ಹೋಗದ ಮತ್ತು ಸ್ವಯಂಚಾಲಿತವಲ್ಲದ ಕೈಗಡಿಯಾರಗಳನ್ನು ನಾವೇ ಕೈಯಲ್ಲಿ ತಿರುಪಿ, ಹಿಂಡಿ ಮುಂದೆ ಮಾಡಿದ್ದೇವೆ.

ಆಕಾಶಕಾಯಗಳು ನಭೋಮಂಡಲದ ಸದಸ್ಯರು ಎಲ್ಲವೂ ಆಯಾ ಕಾಲಕ್ಕೆ ಹೇಗೆ ತಿರುಗಬೇಕೋ ಹಾಗೆ ತಿರುಗುತ್ತವೆ ಎಲ್ಲಿ ಇರಬೇಕೋ ಅಲ್ಲಲ್ಲೇ ಇರುತ್ತವೆ, ಆದರೆ, ಇಲ್ಲಿ ಗಂಟೆ ತೋರಿಸುವ ಗಡಿಯಾರಗಳು ಎಲ್ಲೆಲ್ಲಿ ಇವೆಯೋ ಅಲ್ಲಲ್ಲಿ ಅವವನ್ನು ಹುಡುಕಿ ಗಂಟೆ ಬದಲಿಸಲಾಗಿದೆ. ಬ್ರಿಟನ್ ನಲ್ಲಿ ಮಾರಲ್ಪಡುವ ನವೀನ ಯುಗದ ಸಮಯ ತೋರಿಸುವ ಸ್ಮಾರ್ಟ್ ಟಿವಿಗಳು, ಕಂಪ್ಯೂಟರ್ ಗಳು, ಮೊಬೈಲ್ ಗಳು ಯಾರೂ ಹೇಳಿದರೂ ಹೇಳದಿದ್ದರೂ ಅತಿ ಜಾಣ ಮತ್ತು ಜವಾಬ್ದಾರಿಯುತರಂತೆ ತಮ್ಮಷ್ಟಕ್ಕೆ ಅಂದು ಗಂಟೆ ಮುಂದಿಟ್ಟುಕೊಳ್ಳುವ ಕೆಲಸ ಮಾಡಿವೆ.

ಈ ಬೇಸಿಗೆಯ ಶುರು ಶುರುವಿನ ತಿಂಗಳಾದ ಮಾರ್ಚ್ ನ ಕೊನೆಯ ಆದಿತ್ಯವಾರ, ಸಮಯವನ್ನು ಒಂದು ಗಂಟೆ ಮುಂದಿಟ್ಟಿದ್ದರಿಂದ ಚಳಿಗಾಲದ ಆರಂಭದ ಅಕ್ಟೋಬರ ತಿಂಗಳ ಕೊನೆಯ ಆದಿತ್ಯವಾರ ಸಮಯವನ್ನು ಹಿಂದೆಯೂ ಇಡುತ್ತಾರೆ. ಮುಂದೆ ಹೋದಷ್ಟೇ ಹಿಂದೆ ಬಂದರೆ ಒಂದು ಸಮತೋಲನ ಎನ್ನುವ ಚಿಂತನೆಯೋ ಹೇಗೆ? ವರ್ಷದಲ್ಲಿ ಹೀಗೆ ಎರಡು ಬಾರಿ, ಗಂಟೆಯನ್ನು ಮೊದಲು ಮುಂದಿಡುವುದು ಮತ್ತೆ ಹಿಂದಿಡುವುದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡ ಒಂದು ಸಿದ್ಧಾಂತ ಪದ್ಧತಿ. ಕರಾರುವಕ್ಕಾಗಿ ಹೇಳುವುದಾದರೆ 1916ರಿಂದ ಬ್ರಿಟನ್ ನಲ್ಲಿ ನಡೆದು ಬಂದ ಪದ್ಧತಿ. ಮುಂದಿಟ್ಟದ್ದಕ್ಕೆ ಹಿಂದಿಡುವುದೋ ಅಥವಾ ಹಿಂದಿಟ್ಟದ್ದಕ್ಕೆ ಮುಂದಿಡುವುದೋ ಎನ್ನುವುದನ್ನು ತಿಳಿಯುವುದು ಮೊಟ್ಟೆಯಿಂದ ಮರಿಯೋ ಮರಿಯಿಂದ ಮೊಟ್ಟೆಯೋ ಎನ್ನುವಷ್ಟು ಕಷ್ಟ ಅಲ್ಲ. ಸಮಯವನ್ನು ಮುಂದೆ ಹಿಂದೆ ಇಡುವುದರ ಹಿಂದಿನ ಕತೆ ಏನು ಎಂದು ಹುಡುಕಿದರಾಯಿತು. ಈ ದೇಶದಲ್ಲಿ ಯಾವುದಕ್ಕೆ ಇತಿಹಾಸ ಇಲ್ಲ ಹೇಳಿ?

ಭೂಮಿಯ ಉತ್ತರಾರ್ಧ ಗೋಳದಲ್ಲಿರುವ ಬ್ರಿಟನ್ ಧ್ರುವ ಪ್ರದೇಶಕ್ಕೆ ಭಾರತಕ್ಕಿಂತ ಹೆಚ್ಚು ಹತ್ತಿರದಲ್ಲಿದೆ. ಭಾರತದಲ್ಲಿ ಬೇಸಿಗೆ ಮತ್ತು ಚಳಿಗಾಲಗಳಲ್ಲಿ ಹಗಲು ಹಾಗು ರಾತ್ರಿಯ ಅವಧಿಗಳ ನಡುವೆ ಹೆಚ್ಚು ವ್ಯತ್ಯಾಸ ಇರುವುದಿಲ್ಲ. ಆದರೆ ಬ್ರಿಟನ್ ನಲ್ಲಿ ಬೇಸಿಗೆಯಲ್ಲಿ ಉದ್ದದ ಹಗಲು ಅಥವಾ ಬೆಳಕಿರುವ ಹೊತ್ತು ;ಮತ್ತೆ ಚಳಿಗಾಲದಲ್ಲಿ ಉದ್ದದ ಕತ್ತಲಿನ ಹೊತ್ತು. 1907ರಲ್ಲಿ ವಿಲಿಯಂ ವಿಲ್ಲೆಟ್ ಎಂಬ ಕಟ್ಟಡ ಕಟ್ಟುವ ಕೆಲಸಗಾರ ಬೇಸಿಗೆಯ ಆರಂಭದ ತಿಂಗಳಲ್ಲಿ ಗಡಿಯಾರ ಮುಂದಿಡುವ ಸಲಹೆಯನ್ನು ಕಲ್ಪಿಸಿದ. ತನ್ನ ಸಿದ್ಧಾಂತವನ್ನು “ಹಗಲು ಬೆಳಕಿನ ಉಳಿತಾಯ” ಅಥವಾ “day light saving” ಎಂದು ಕರೆದ. ಈ ದೇಶದ ನಡು ಬೇಸಿಗೆಯ ತಿಂಗಳಲ್ಲಿ ಬೆಳಿಗ್ಗೆ 3 ಗಂಟೆಗೆ ಸೂರ್ಯೋದಯ, ರಾತ್ರಿ 9ಕ್ಕೆ ಸೂರ್ಯಾಸ್ತ. ಸೂರ್ಯ ಅಷ್ಟು ಬೇಗ ಮೂಡಿದರೂ, ಅದು ನಿದ್ರೆಯ ಹೊತ್ತಾದ್ದರಿಂದ ಇಲ್ಲಿನ ಜನರು ಸೂರ್ಯ ಹುಟ್ಟಿ ಎರಡು ಮೂರು ಗಂಟೆ ಹಾಸಿಗೆಯಲ್ಲೇ ಇರುತ್ತಿದ್ದರು. ಹೊರಗಡೆ ಸಮಯ ಕಳೆಯುವುದನ್ನು ಇಷ್ಟ ಪಡುತ್ತಿದ್ದ ವಿಲಿಯಂ ನಿಗೆ ಬೆಳ್ಳಂಬೆಳಕಿನಲ್ಲಿ ಹೀಗೆ ಜನ ಹಾಸಿಗೆಯಲ್ಲಿ ನಿದ್ರೆಗೈಯುವುದು ಆಯುಷ್ಯ ದಂಡ ಎನಿಸಿತು. ತನ್ನ ಅರಿವನ್ನು ಇತರರಿಗೂ ಹಂಚಲು ಒಂದು ಕರಪತ್ರವನ್ನು ಮುದ್ರಿಸಿದ. ತನ್ನ ಕರಪತ್ರಕ್ಕೆ “ಹಗಲುಬೆಳಕಿನ ನಷ್ಟ” ಎಂಬ ಶೀರ್ಷಿಕೆ ಕೊಟ್ಟ. ಬ್ರಿಟಿಷರು ಹೇಗೆ ಅಮೂಲ್ಯವಾದ ಬೆಳಗಿನ ಸಮಯವನ್ನು ನಿದ್ರಿಸುತ್ತ ಕಳೆಯುತ್ತಾರೆಂದು ವಿವರಿಸಿದ. ಅದರ ಬದಲಿಗೆ ಬೇಸಿಗೆ ಬರುತ್ತಿದ್ದಂತೆ ಗಂಟೆಯನ್ನು ಒಂದು ತಾಸು ಮುಂದಿಟ್ಟರೆ, ಬೆಳಕು ಹರಿದ ಸ್ವಲ್ಪ ಹೊತ್ತಿನಲ್ಲೇ ಜನರು ಎದ್ದು ತಮ್ಮ ದೈನಂದಿನ ಕೆಲಸ ಶುರು ಮಾಡುತ್ತಾರೆಂದು ವಿವರಿಸಿದ.

ಜನರ ಸಮಯದ ಸದುಪಯೋಗವಲ್ಲದೆ, ಬೇಸಿಗೆಯಲ್ಲಿ ಗಡಿಯಾರವನ್ನು ಮುಂದಿಡುವುದರಿಂದ ದೇಶಕ್ಕೆ 2.5 ಮಿಲಿಯನ್ ಪೌಂಡ್ ಗಳ (ಆ ಕಾಲಕ್ಕೆ) ಲಾಭ ಆಗುತ್ತದೆಂದ. ಈ ಪದ್ಧತಿಯ ಪರಿಣಾಮದಂತೆ ಪೂರ್ತಿ ಕತ್ತಲಾಗುವ ಮೊದಲೇ ಜನರು ಹಾಸಿಗೆಗೆ ಹೋಗುವುದರಿಂದ ವಿದ್ಯುತ್ ಬಳಕೆಯ ಶಕ್ತಿಮೂಲಗಳ ಉಳಿತಾಯ ಎಂದೂ ಸಾರಿದ. ಆ ಕಾಲಕ್ಕೆ ಬ್ರಿಟನ್ನಿನಲ್ಲಿ ಯಾರೂ ಕಂಡು ಕೇಳದ ಒಂದು ಸಲಹೆ ಇದಾದ್ದರಿಂದ ವಿಲಿಯಂ ನನ್ನ ಬಹಳ ಜನ ಆಕ್ಷೇಪಿಸಿದರು ತಮಾಷೆ ಮಾಡಿದರು. 1909ರಲ್ಲಿ ಈ ಸಲಹೆ ಸಂಸತ್ತನ್ನು ಕೂಡ ಪ್ರವೇಶಿಸಿತು. ಆದರೆ ಸಂಸತ್ತಿನಲ್ಲಿ ಒಂದು ಶಾಸನವಾಗಿ ಅಂಗೀಕಾರ ಆಗಲಿಲ್ಲ. ವಿಲಿಯಂ ವಿಲ್ಲೆಟ್ 1907ರ ನಂತರದ ತನ್ನ ಬದುಕಿನ ಭಾಗವನ್ನು ಹಗಲು ಬೆಳಕಿನ ಉಳಿತಾಯದ ಬಗ್ಗೆ ವಿವರಿಸುತ್ತಾ, ಒಪ್ಪಿಸುತ್ತಾ ಕಳೆದ;ಇದರ ಮಧ್ಯೆಯೇ 1915ರಲ್ಲಿ ಫ್ಲೂ ಜ್ವರ ಬಂದು ಮರಣ ಹೊಂದಿದ. ಈತ ಮಡಿದ ಮರುವರ್ಷ 1916ರಲ್ಲಿ ಜರ್ಮನಿ ಈತನ ಸಲಹೆಯನ್ನು ದೇಶದಾದ್ಯಂತ ಅಳವಡಿಸಿಕೊಂಡಿತು. ಇದಾದ ಒಂದು ತಿಂಗಳ ನಂತರ ಬ್ರಿಟನ್ ಕೂಡ “day light saving” ಅನ್ನು ಅನುಷ್ಠಾನಕ್ಕೆ ತಂದಿತು.

(ವಿಲಿಯಂ ವಿಲ್ಲೆಟ್)

ಮುಂದಿಟ್ಟದ್ದಕ್ಕೆ ಹಿಂದಿಡುವುದೋ ಅಥವಾ ಹಿಂದಿಟ್ಟದ್ದಕ್ಕೆ ಮುಂದಿಡುವುದೋ ಎನ್ನುವುದನ್ನು ತಿಳಿಯುವುದು ಮೊಟ್ಟೆಯಿಂದ ಮರಿಯೋ ಮರಿಯಿಂದ ಮೊಟ್ಟೆಯೋ ಎನ್ನುವಷ್ಟು ಕಷ್ಟ ಅಲ್ಲ. ಸಮಯವನ್ನು ಮುಂದೆ ಹಿಂದೆ ಇಡುವುದರ ಹಿಂದಿನ ಕತೆ ಏನು ಎಂದು ಹುಡುಕಿದರಾಯಿತು. ಈ ದೇಶದಲ್ಲಿ ಯಾವುದಕ್ಕೆ ಇತಿಹಾಸ ಇಲ್ಲ ಹೇಳಿ?

ಅದು ಮೊದಲ ಮಹಾಯುದ್ಧ ನಡೆಯುತ್ತಿದ್ದ ಕಾಲವೂ ಹೌದು. ಬ್ರಿಟನ್ ಮತ್ತು ಜರ್ಮನಿಗಳು ತೀವ್ರ ಯುದ್ಧದಲ್ಲಿ ನಿರತವಾಗಿದ್ದ ಸಮಯ. ಎರಡೂ ದೇಶಗಳಿಗೂ ವಿಲಿಯಮ್ ನ ಸಲಹೆಯಂತೆ ಬೇಸಿಗೆಯಲ್ಲಿ ಕೃತಕವಾಗಿ ಸಮಯ ಮುಂದಿಡುವ ಯೋಜನೆ ಇಂಧನ ಉಳಿತಾಯದ ನಿಟ್ಟಿನಲ್ಲಿ ಆಕರ್ಷಕ ಎನಿಸಿತು. ಸೂರ್ಯ ಮುಳುಗುವ ಹೊತ್ತಿಗೆ ಜನರು ಮಲಗುವ ಸಮಯ ಆದ್ದರಿಂದ ಕತ್ತಲಾದ ಮೇಲೆ ಬಳಸುವ ವಿದ್ಯುತ್ ಅಥವಾ ಇಂಧನ ಮೂಲದ ಬೆಳಕುಗಳನ್ನು ಬಳಸುವುದು ಕಡಿಮೆ ಆಯಿತು. ದೇಶದ ಸಚಿವಾಲಯಗಳು ಜನಸಾಮಾನ್ಯರಿಗೆ ಸಮಯವನ್ನು ಬೇಸಿಗೆಯಲ್ಲಿ ಯಾಕೆ ಮುಂದಿಡಬೇಕು ಎಂದು ತಿಳಿಸಿಹೇಳುವ ಕರಪತ್ರಗಳನ್ನು ಹಂಚಿದರು. “ಹಗಲು ಬೆಳಕಿನ ಉಳಿತಾಯ” ಕಾನೂನಾಯಿತು; ಬೇಸಿಗೆಯ ಆರಂಭಕ್ಕೆ ಗಂಟೆ ಮುಂದಿಡುವುದು, ಚಳಿಗಾಲದ ಆರಂಭಕ್ಕೆ ಒಂದು ತಾಸು ಹಿಂದಿಡುವುದು ಚಾಚೂತಪ್ಪದೆ ಪಾಲನೆಯಾಯಿತು.

1906ರಲ್ಲಿ ಬ್ರಿಟನ್ ನ ವಿಲಿಯಂ ವಿಲ್ಲೆಟ್ ತನ್ನ ಕಲ್ಪನೆಯನ್ನು ಜನರಿಗೆ ತಿಳಿಸುವ ಮೊದಲೇ, 1784ರಲ್ಲಿ ಅಮೇರಿಕಾದ ಬೆಂಜಮಿನ್ ಫ್ರಾಂಕ್ಲಿನ್ ಬೇಸಿಗೆಯಲ್ಲಿ ಸಮಯ ಮುಂದಿಟ್ಟದ್ದರಿಂದ ಆಗುವ ಆರ್ಥಿಕ ಲಾಭದ ಕುರಿತು ಪ್ರಬಂಧ ಬರೆದಿದ್ದ. ಅಂದು ಜನಪ್ರಿಯವಾಗಿರದ ಫ್ರಾಂಕ್ಲಿನ್ ನ ಕಲ್ಪನೆ ಮುಂದೆ ಯುರೋಪ್ ನ ದೇಶಗಳು 1916ರಲ್ಲಿ ಹಗಲು ಬೆಳಕಿನ ಉಳಿತಾಯವನ್ನು ಕಾನೂನಾಗಿ ಅನುಸರಿಸಿದ ಮೇಲೆ ಅಮೇರಿಕಾದಲ್ಲಿ ಕೂಡ ಅನುಷ್ಠಾನಕ್ಕೆ ಬಂದಿತು.

ಶತಮಾನದ ಹಿಂದೆ ಆರಂಭಗೊಂಡ ಬೇಸಿಗೆಯ ಆರಂಭಕ್ಕೆ ಸಮಯ ಮುಂದಿಡುವ, ಚಳಿಗಾಲದ ಆರಂಭಕ್ಕೆ ಸಮಯ ಹಿಂದಿಡುವ ಪದ್ಧತಿ ಇಂದಿಗೂ ಮುಂದುವರಿದು, ಮಾರ್ಚ್ ಕೊನೆಯಲ್ಲಿ ನಾವು ಸಮಯವನ್ನು ಒಂದು ತಾಸು ಮುಂದಿಟ್ಟಿದ್ದು ಈ ವರ್ಷಕ್ಕೆ ಆಗಿ ಹೋಗಿದೆ. ಈ ಕ್ರಮ ಶುರು ಆದಾಗಿನಿಂದ ಇಲ್ಲಿಯವರೆಗೂ ಏಕಪಕ್ಷೀಯವಾಗಿ ಜನಸಾಮನ್ಯರ, ವಿಜ್ಞಾನಿಗಳ, ಪಂಡಿತರ ಪೂರ್ತಿ ಅನುಮೋದನೆಯಿಂದಲೇ ನಡೆಯುತ್ತಿದೆ ಎಂದಲ್ಲ. ಹಗಲು ಬೆಳಕಿನ ಉಳಿತಾಯ ನಿಜವಾಗಿಯೂ ಉಳಿತಾಯವೇ ಹೌದೋ ಅಲ್ಲವೋ ಎಂಬ ಬಗ್ಗೆ ಜಿಜ್ಞಾಸೆ ಇದೆ, ಸಂದೇಹ ಇದೆ. ಮತ್ತೆ ಇದೀಗ ಯುರೋಪಿಯನ್ ಒಕ್ಕೂಟದ ಸಂಸತ್ತಿನಲ್ಲಿ ಈ ಪದ್ಧತಿಯನ್ನು ನಿಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಕಲ್ಪನೆಯಿಂದ ನಿಜವಾಗಿ ಎಷ್ಟು ವಿದ್ಯುತ್ ಉಳಿಯಿತು ಎಷ್ಟು ಇಂಧನ ಉಳಿಯಿತು ಎಂದು ಸರಿಯಾಗಿ ಲೆಕ್ಕ ಇಟ್ಟವರಿಲ್ಲ ಎನ್ನುವವರಿದ್ದಾರೆ. ಇದು ಮೊದಲ ಮಹಾಯುದ್ಧದ ಕಾಲದಲ್ಲಿ ಬೆಳಕಿನ ಮೂಲಗಳ ಕೊರತೆ ಇದ್ದ ಕಾಲಕ್ಕೆ ಸೂರ್ಯನ ಬೆಳಕಿನಲ್ಲಿ ಆದಷ್ಟು ಕೆಲಸಗಳನ್ನು ಮುಗಿಸಿ ನಿದ್ದೆಗೆ ಜಾರಿ ಬೆಳಕು, ಇಂಧನಗಳ ಉಳಿತಾಯ ಮಾಡಲು ಸೂಕ್ತ ಇತ್ತು. ಈ ಕಾಲಕ್ಕೆ ಆಗುತ್ತಿರುವ ಬೆಳಕಿನ ಉಳಿತಾಯ ಬಹಳ ಕಡಿಮೆ ಎನ್ನುವವರಿದ್ದಾರೆ. ಹಾಗಂತ ಈ ಪದ್ಧತಿಯ ಕತೆಯನ್ನು ಬಿಡಿಸಿ ಓದಿದರೆ ವಿಲಿಯಂ ವಿಲ್ಲೆಟ್ ನಂತಹ ಒಬ್ಬ ಕಟ್ಟಡ ಕಟ್ಟುವ ಸಾಮಾನ್ಯನಿಂದ ಹಿಡಿದು ವಿನ್ಸ್ಟನ್ ಚರ್ಚಿಲ್ ನಂತಹ ಪ್ರಧಾನಿಯವರೆಗೆ “day light saving” ಅನ್ನು ಬೆಂಬಲಿಸಿದ್ದು ತಿಳಿಯುತ್ತದೆ. ಮತ್ತೆ ಬೆಂಬಲಿಸಿದವರಲ್ಲಿ ಹೆಚ್ಚು ಜನ ಪಟ್ಟಣದಲ್ಲಿರುವವರು, ಕ್ರೀಡಾಪಟುಗಳು ಅಥವಾ ಬೇಸಿಗೆಯಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಆಸಕ್ತರು.

ಇನ್ನು ಇಲ್ಲಿನ ಹೆಚ್ಚಿನ ರೈತರು, ಗಡಿಯಾರ ನೋಡದ, ಸೂರ್ಯೋದಯ ಸೂರ್ಯಾಸ್ತಕ್ಕೆ ಹೊಂದಿಕೊಂಡೇ ಬದುಕುವ ಪ್ರಾಣಿಗಳನ್ನು ಸಾಕಿಕೊಂಡ ಕೃಷಿಕರು ಮತ್ತು ಆರೋಗ್ಯ ಶಾಸ್ತ್ರಜ್ಞರು ಈ ಕಲ್ಪನೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ ; ವರ್ಷಕ್ಕೆರಡು ಬಾರಿ ನಮ್ಮ ದೇಹದ, ಮನಸ್ಸಿನ ಅಥವಾ ನಮ್ಮೊಳಗಿನ ಜೈವಿಕ ಗಂಟೆಯನ್ನು ಹೀಗೆ ಬದಲಿಸುವುದು ಸರಿಯಲ್ಲ ಎಂದೂ ವಾದಿಸುತ್ತಾರೆ. ಗಡಿಯಾರದ ಮುಳ್ಳನ್ನು ನಾವು ಸುಲಭವಾಗಿ ತಿರುಗಿಸಿದರೂ ದೇಹದೊಳಗಿನ ಜೈವಿಕ ಗಂಟೆ ಈ ಬದಲಾವಣೆಗೆ ಒಗ್ಗಿಕೊಳ್ಳಲು ಪರದಾಡುತ್ತದೆ. ಇನ್ನು ಇಂಗ್ಲೆಂಡ್ ನ ಮಹಾರಾಣಿಯ ಅರಮನೆಗಳಲ್ಲಿ ಇರುವ ಹಳೆ ಕಾಲದ ಒಂದು ಸಾವಿರ ಗಡಿಯಾರಗಳ ಮುಳ್ಳುಗಳನ್ನು ತಿರುಗಿಸಿ ಹಿಂದೋ ಮುಂದೋ ಇಡುವುದು ಪ್ರತಿ ಸಲ ಬರೋಬ್ಬರಿ ಐವತ್ತು ತಾಸುಗಳ ಕೆಲಸವಂತೆ! ಅರಮನೆಯಲ್ಲಿ ಈ ಕೆಲಸ ಮಾಡುವವರಿಗೆ ಇದು ಖುಷಿಯೋ ಹೆಮ್ಮೆಯೋ ರಗಳೆಯೋ ಗೊತ್ತಿಲ್ಲ, ಬಿಡಿ. “ಹಗಲು ಬೆಳಕಿನ ಉಳಿತಾಯ” ಒಳ್ಳೆಯದೋ ಕೆಟ್ಟದ್ದೋ ತಿಳಿಯುವುದು ಸುಲಭವಲ್ಲವಾದರೂ ಇಲ್ಲಿಯ ತನಕ ಪಾಲಿಸುತ್ತ ಬಂದ ಒಂದು ಕ್ರಮ, ಕಾನೂನಂತೂ ಹೌದು.

ಈ ಕ್ರಮದ ವಿರುದ್ಧ ಜನಸಾಮಾನ್ಯರ ಪಿಟಿಷನ್, ಸಹಿ ಸಂಗ್ರಹ, ಮತ್ತೆ ಯೂರೋಪಿನ ಆಯೋಗದ ವಿಮರ್ಶೆಗಳು ಜೊತೆಯಾಗಿ ಮುಂದೊಂದು ದಿನ ಈ ಪದ್ಧತಿಯನ್ನು ಕೊನೆಗೊಳಿಸಬಹುದು, ಹಗಲು ಬೆಳಕಿನ ಉಳಿತಾಯ ಎಂಬ ಕಲ್ಪನೆ ಇಲ್ಲದಾಗಿ ಇತಿಹಾಸದ ಪುಟಗಳನ್ನು ಸೇರಿ ಹೋಗಬಹುದು; ಆಗ ಇಲ್ಲಿನ ಎಲ್ಲ ಗಡಿಯಾರಗಳೂ ಹಿಂದೂ ಮುಂದಾಗುವ ಗೋಜು ತಪ್ಪಿದ್ದಕ್ಕೆ ನಿಟ್ಟುಸಿರು ಬಿಡಬಹುದು. ಇನ್ನು ಇವರ ಬೆಳಕಿನ ಉಳಿತಾಯ ಲಾಭವೋ ನಷ್ಟವೋ ಇಂತಹ ಪದ್ಧತಿ ಮುಂದುವರಿಯಬೇಕೋ ನಿಲ್ಲಬೇಕೋ ಎನ್ನುವ ಜಿಜ್ಞಾಸೆ, ಸಂದಿಗ್ಧತೆ ಇರುವವರು ವರ್ಷದಲ್ಲೊಮ್ಮೆ ಮುಂದೆ ಇನ್ನೊಮ್ಮೆ ಹಿಂದೆ ಹೋಗುತ್ತಿರುವ ಸಮಯವನ್ನೇ ಕೇಳಿ ಉತ್ತರ ಪಡೆದುಕೊಳ್ಳಬಹುದು.