ತನ್ನ ತಂದೆ ಹೀಗೆ ಸಾಹುಕಾರು ಹೇಳಿದ ಕೆಲಸ ಮಾಡುತ್ತಾರೆ ಎಂದು ಮಗ ಯೋಚಿಸಿಯೂ ಇರಲಿಲ್ಲ. ಮನೆಯಲ್ಲಿ ಅವರ ಗತ್ತು ಗಾಂಭೀರ್ಯ ನೋಡಿದ್ದ ಮಗನಿಗೆ ಅಪ್ಪನ ಮಾತುಗಳು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆಷ್ಟರೊಳಗೆ ಸಾಹುಕಾರರ ಮನೆ ಬಂದಿತು. ಸಾಹುಕಾರನ ಹೆಂಡತಿಯ ಎದುರಿಗೆ ಅಪ್ಪ ಕೈ ಕಟ್ಟಿ ಸಾಹುಕಾರರ ಬಗ್ಗೆ ಕೇಳಿದ್ದು ನೋಡಿ ಮಗನಿಗೆ ಕರುಳು ಹಿಂಡಿದಂತಾಗಿತ್ತು. ತನ್ನ ಅಪ್ಪನಿಗಿಂತ ಚಿಕ್ಕವಯಸ್ಸಿನ ಆ ಸಾಹುಕಾರ ಬಂದಾಗ ಅಪ್ಪ ಕೈ ಮುಗಿದು ಬಗೆ ಬಗೆಯಾಗಿ ಕೇಳಿಕೊಂಡಿದ್ದು ನೋಡಿ ಎದೆಯಲ್ಲಿ ಕೆಂಡ ಸುರಿದಂತಾಗಿತ್ತು.
ಪ್ರಶಾಂತ್‌ ಬೀಚಿ ಅಂಕಣ

 

ಕೆಲವು ಬಾರಿ ಇದ್ದಕ್ಕಿದ್ದಂತೆ ನನ್ನ ಮೇಲೆ ನನಗೆ ಜಿಗುಪ್ಸೆ ಬಂದು ಬಿಡುತ್ತದೆ. ನಾನು ಎಷ್ಟು ಅಸಹಾಯಕ ಅಥವ ಎಷ್ಟು ಕನಿಷ್ಟ ಎನ್ನುವಷ್ಟು ಅಸಹ್ಯ ಮೂಡುತ್ತದೆ. ಅದಕ್ಕೆ ಕಾರಣ ಗೊತ್ತಿರಬಹುದು ಕೆಲವು ಸಲ ಗೊತ್ತಿರದೆಯೂ ಇರಬಹುದು. ಇದೆಲ್ಲ ನಮ್ಮನ್ನು ನಾವೆ ನಿಷ್ಕಲ್ಮಷವಾಗಿ ಅವಲೋಕಿಸಿಕೊಂಡಾಗ ಆಗುವಂತಹ ಅನುಭವ. ಎಲ್ಲರಿಗೂ ಆಗಲೇಬೇಕೆಂದೇನಿಲ್ಲ, ಅವರವರ ಭಾವಕ್ಕೆ ಅವರವರ ಭಕುತಿಗೆ.

ಅನೇಕ ಬಾರಿ ಆತ್ಮೀಯರೊಡನೆ ವಿಚಾರಿಸಿದಾಗ, ತಮ್ಮ ಪಾಪ ಪ್ರಜ್ಞೆ ಕಾಡುವ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಅನೇಕರಿಗೆ ಸ್ವಗತಗಳಲ್ಲಿ ಕಂಡುಬರುತ್ತವೆ. ಸರಿ – ತಪ್ಪುಗಳು, ನ್ಯಾಯ – ಅನ್ಯಾಯಗಳು ಅವರವರ ಮೂಗಿನ ನೇರಕ್ಕೆ, ಸಮಯ ಸಂದರ್ಭಕ್ಕೆ ಬದಲಾಗಿರುತ್ತವೆ.

ಸ್ನೇಹಿತನೊಬ್ಬನ ಕಥೆ, ಅವನ ನೆನಪು ಹೀಗೆ ಸಾಗಿತ್ತು:

ಸಣ್ಣ ಊರಿನಲ್ಲಿ ಸಾಧಾರಣ ಕುಟುಂಬ, ಹಣದ ಹೊಳೆಯಿಲ್ಲದಿದ್ದರೂ ಗುಣದ ಬೆಟ್ಟ ದೊಡ್ಡದಾಗಿತ್ತು. ಕಷ್ಟಜೀವಿಗಳಾಗಿದ್ದರಿಂದ ಮನೆಯಲ್ಲಿ ಎಲ್ಲರಿಗೂ ನಯ, ವಿನಯ, ಗೌರವದ ಬಗ್ಗೆ ಬಹಳ ಅರಿವಿತ್ತು. ಹತ್ತು ಹನ್ನೆರಡು ವರ್ಷದ ಬಾಲಕ ತನ್ನ ತಂದೆಯನ್ನು ಬಹಳ ಗೌರವದಿಂದ ಕಾಣುತ್ತಿದ್ದ. ಅವನ ಕಣ್ಣಿಗೆ ತಂದೆಯೇ ದೇವರು, ತನ್ನ ತಂದೆಗಿಂತ ತಿಳಿದವರಿಲ್ಲ ಎಂದು ತಿಳಿದಿದ್ದ. ಹಾಗಾಗಿ ಅವರು ಹೇಳಿದ ಮಾತಿಗೆ ತಿರುಗಿ ಮಾತನಾಡುತ್ತಿರಲಿಲ್ಲ. ಅವರ ತಂದೆ ಕೆಲಸಕ್ಕೆ ಹೋಗುವ ಸಾಹುಕಾರ ಮಂಡಿಯ ಬಗ್ಗೆ ಕೇಳಿದ್ದನೆ ಹೊರತು ಅಲ್ಲಿಗೆ ಹೋಗಿ ತಮ್ಮ ತಂದೆಯ ಕೆಲಸ ಏನೆಂದು ನೋಡಿರಲಿಲ್ಲ. ಮನೆಯಲ್ಲಿ ತಂದೆಯ ಮಾತುಗಳೆ ಲಕ್ಷ್ಮಣ ರೇಖೆ. ಹಾಗಾಗಿ ತನ್ನ ತಂದೆ ಬಹಳ ಗೌರವವಾದ ಮತ್ತು ಬಹಳ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆಂದು ತಿಳಿದಿದ್ದ. ಆ ತಿಂಗಳ ಸಂಬಳ ಬಂದರೆ ಮುಂದಿನ ತಿಂಗಳ ಜೀವನ ನಡೆಯುತ್ತಿದ್ದಂತ ಕಾಲ.

ಆರೋಗ್ಯದ ಸಮಸ್ಯೆಯಿಂದ ತಂದೆಯ ಓಡಾಟ ಕುಂಟಿತವಾಯಿತು, ಮಗ ಹದಿನಾಲ್ಕು ವರುಷದವನಾಗಿದ್ದರಿಂದ ಕೆಲವು ತಿಂಗಳು ತಂದೆಯ ಕೆಲಸವನ್ನು ಮಗ ಮಾಡಬಹುದೆ ಎಂದು ಕೇಳಲು ಮಂಡಿಯ ಮಾಲೀಕನ ಮನೆಗೆ ಕರೆದುಕೊಂಡು ಹೋದರು. ಹೋಗುವ ದಾರಿಯಲ್ಲಿ ತಂದೆ ತನ್ನ ಮಗನಿಗೆ ಕೆಲಸವನ್ನು ವಿವರಿಸಿದ. “ನೋಡು ಮಗ, ನಾನು ಸಾಹುಕಾರರ ಮಂಡಿಯಲ್ಲಿ ಹದಿನೆಂಟು ವರುಷದಿಂದ ಕೆಲಸ ಮಾಡುತ್ತಿದ್ದೇನೆ. ನೀನು ಮನೆಯಲ್ಲಿ ಮಾಡುವ ಕೆಲಸವನ್ನೆ ನಾನು ಮಂಡಿಯಲ್ಲಿ ಮಾಡುತ್ತೇನೆ. ಮನೆಯಲ್ಲಿ ನಾನು ನಿನಗೆ ಕೆಲಸ ಹೇಳಿದ ಹಾಗೆ, ಮಂಡಿಯಲ್ಲಿ ಸಾಹುಕಾರರು ನನಗೆ ಕೆಲಸ ಹೇಳುತ್ತಾರೆ. ಅದು ಕಸ ಗುಡಿಸುವಂತಹ ಸಣ್ಣ ಕೆಲಸವಾಗಿರಬಹುದು ಅಥವ ಬ್ಯಾಂಕಿನಿಂದ ಹಣ ತರುವಂತಹ ಜವಾಬ್ದಾರಿ ಕೆಲಸವಾಗಿರಲೂಬಹುದು. ಆದರೆ ನಿನಗೆ ಮಾಡಲಾಗದ ಕೆಲಸವೇನಲ್ಲ. ಹಾಗಾಗಿ ಇನ್ನೆರಡು ತಿಂಗಳು ನೀನು ಕೆಲಸ ಮಾಡು, ನಾನು ಅಷ್ಟರೊಳಗೆ ಹುಷಾರಾಗಿ ಮತ್ತೆ ಕೆಲಸಕ್ಕೆ ಬರುತ್ತೇನೆ. ನೀನು ಮತ್ತೆ ಶಾಲೆಗೆ ಹೋಗುವೆಯಂತೆ.”

ತನ್ನ ತಂದೆ ಹೀಗೆ ಸಾಹುಕಾರು ಹೇಳಿದ ಕೆಲಸ ಮಾಡುತ್ತಾರೆ ಎಂದು ಮಗ ಯೋಚಿಸಿಯೂ ಇರಲಿಲ್ಲ. ಮನೆಯಲ್ಲಿ ಅವರ ಗತ್ತು ಗಾಂಭೀರ್ಯ ನೋಡಿದ್ದ ಮಗನಿಗೆ ಅಪ್ಪನ ಮಾತುಗಳು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆಷ್ಟರೊಳಗೆ ಸಾಹುಕಾರರ ಮನೆ ಬಂದಿತು. ಸಾಹುಕಾರನ ಹೆಂಡತಿಯ ಎದುರಿಗೆ ಅಪ್ಪ ಕೈ ಕಟ್ಟಿ ಸಾಹುಕಾರರ ಬಗ್ಗೆ ಕೇಳಿದ್ದು ನೋಡಿ ಮಗನಿಗೆ ಕರುಳು ಹಿಂಡಿದಂತಾಗಿತ್ತು. ತನ್ನ ಅಪ್ಪನಿಗಿಂತ ಚಿಕ್ಕವಯಸ್ಸಿನ ಆ ಸಾಹುಕಾರ ಬಂದಾಗ ಅಪ್ಪ ಕೈ ಮುಗಿದು ಬಗೆ ಬಗೆಯಾಗಿ ಕೇಳಿಕೊಂಡಿದ್ದು ನೋಡಿ ಎದೆಯಲ್ಲಿ ಕೆಂಡ ಸುರಿದಂತಾಗಿತ್ತು. ಸಾಹುಕಾರನ ದರ್ಪ ಅವನ ಮಾತಿನಲ್ಲಿ ಕಂಡಿತು, “ನಿನಗೆ ಸಂಬಳ ಕೊಡುತ್ತಿರುವುದೆ ದಂಡ, ಇನ್ನು ನಿನ್ನ ಮಗ ಬಂದು ಆ ಸಂಬಳಕ್ಕೆ ಸುಮ್ಮನೆ ನಮ್ಮ ಮಂಡಿಯಲ್ಲಿ ಕುಳಿತುಕೊಂಡಿರುವುದು ಬೇಡ. ನಿನ್ನ ಮಗ ಬಂದು ಮಾಡುವ ಕೆಲಸವಾದರೂ ಏನಿದೆ. ನೀನೂ ಬರಬೇಡ, ನಿನ್ನ ಮಗನೂ ಬರುವುದು ಬೇಡ” ಎಂದು ಹೇಳುತ್ತಾ ಪಂಚೆ ಕಟ್ಟಿಕೊಂಡು ಹೋದ. ಕಣ್ಣೀರು ತುಂಬಿಕೊಂಡಿದ್ದ ಅಪ್ಪನ ಕೈಗೆ ಒಳಗಿನಿಂದ ಬಂದ ಸಾಹುಕಾರನ ಹೆಂಡತಿ ನೂರು ರೂಪಾಯಿ ಮತ್ತು ವಿಳ್ಯೆದೆಲೆ ತುರುಕಿದಳು.

ಆಗ ಏನೂ ಮಾಡಲಾಗದ ಹುಡುಗ ತಂದೆಯೊಡನೆ ಮನೆಗೆ ವಾಪಸ್ ಬಂದ. ಜೀವನ ಹೇಗೇಗೋ ನೆಡೆಯಿತು. ಮುವತ್ತು ವರ್ಷಗಳ ನಂತರ ಆ ಹುಡುಗ ಈಗ ವಿದೇಶದಲ್ಲಿದ್ದಾನೆ, ತಾಯಿ ಎಲ್ಲಾ ಸೌಕರ್ಯದಿಂದ ಸಮೃದ್ಧಿಯಾಗಿದ್ದಾರೆ, ತಂದೆ ತೀರಿಹೋಗಿದ್ದಾರೆ. ಆದರೆ ಆ ದಿನದ ಅಸಹಾಯಕತೆ ಇಂದಿಗೂ ಅ ಮಗನ ಹೃದಯವನ್ನು ಆಗಾಗ ಕಿವುಚುತ್ತಿರುತ್ತದೆ.

ಸರ್ಕಾರ ನೋಡಿಕೊಳ್ಳಲಿಲ್ಲ, ಸಮಾಜ ಸಹಾಯಕ್ಕೆ ಬರಲಿಲ್ಲ, ದೇಶ ಬಿಟ್ಟು ಹೊರದೇಶಕ್ಕೆ ಹೋಗುವ ತನಕ ಹುಟ್ಟಿ ಬೆಳೆದ ದೇಶ ಅವನಿಗೆ ಗೌರವ ಕೊಟ್ಟಿರಲಿಲ್ಲ.

ಅವರ ತಂದೆ ಕೆಲಸಕ್ಕೆ ಹೋಗುವ ಸಾಹುಕಾರ ಮಂಡಿಯ ಬಗ್ಗೆ ಕೇಳಿದ್ದನೆ ಹೊರತು ಅಲ್ಲಿಗೆ ಹೋಗಿ ತಮ್ಮ ತಂದೆಯ ಕೆಲಸ ಏನೆಂದು ನೋಡಿರಲಿಲ್ಲ. ಮನೆಯಲ್ಲಿ ತಂದೆಯ ಮಾತುಗಳೆ ಲಕ್ಷ್ಮಣ ರೇಖೆ. ಹಾಗಾಗಿ ತನ್ನ ತಂದೆ ಬಹಳ ಗೌರವವಾದ ಮತ್ತು ಬಹಳ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆಂದು ತಿಳಿದಿದ್ದ.

ಇನ್ನೊಬ್ಬ ಸ್ನೇಹಿತನ ಕಥೆ:

ಸುಂದರ ಸಂಸಾರದಲ್ಲಿ ಇಬ್ಬರು ಮಕ್ಕಳು. ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಉತ್ತಮ ನಾಗರೀಕರನ್ನಾಗಿ ಮಾಡಿದ ಕೀರ್ತಿ ತಂದೆ-ತಾಯಿಗೆ ಸಲ್ಲುತ್ತದೆ. ಹಿರಿಯ ಮಗ ಚಾರ್ಟೆಡ್ ಅಕೌಂಟೆಟ್ ಆಗಲು ಓದುತ್ತಿದ್ದ. ಎರಡನೆ ಮಗ ಹನ್ನೆರಡನೆ ತರಗತಿ. ಎಲ್ಲವೂ ಸರಿ ಇದ್ದ ಸಂಸಾರದಲ್ಲಿ ಸರಿ ಇಲ್ಲದಿದ್ದು ಅವರ ಗ್ರಹಗತಿ.

ಕರ್ನಾಟಕ ವಿದ್ಯುತ್ಚಕ್ತಿ ನಿಗಮದಲ್ಲಿ ಕಂಟ್ರಾಕ್ಟ್ ಮೇಲೆ ಕೆಲಸ ಮಾಡುತ್ತಿದ್ದ ಆ ಕುಟುಂಬದ ಹಿರಿಯನಿಗೆ ಮಳೆಯ ಸಮಯದಲ್ಲಿ ಕೆಲಸ ಮಾಡಲು ಹೋಗಿದ್ದಾಗ, ಮಳೆ ನಿಲ್ಲುವ ತನಕ ಮರದ ಕೆಳಗೆ ನಿಂತಿದ್ದರು. ಆಗಸದಲ್ಲಿ ಹೊಳೆದ ಮಿಂಚಿನಿಂದ ಹೊರಟ ಸಿಡಿಲು ಮರದಕೆಳಗೆ ನಿಂತಿದ್ದ ಈ ವ್ಯಕ್ತಿಯ ಮೇಲೆ ಬಿದ್ದು, ಅಲ್ಲೆ ಜೀವ ಬಿಟ್ಟರು. ಹೆಂಡತಿ ವಿಧವೆ, ಮಕ್ಕಳು ಅನಾಥ.
ಎರಡನೆ ಮಗ ಇಂಜಿನಿಯರಿಂಗ್ ಓದಿಸಬೇಕೆಂದು ಮೊದಲನೆ ಮಗ ತನ್ನ ಓದನ್ನು ಬಿಟ್ಟು ಕೆಲಸಕ್ಕೆ ಸೇರಿಕೊಂಡ. ಅಪ್ಪನ ಪ್ರಾಣ ಕೆಲಸದ ಸಮಯದಲ್ಲಿ ಹೋಗಿದೆ ಎಂದು ಪರಿಹಾರ ಕೇಳಿದರೆ, ಅವರು ಕಾಂಟ್ರಾಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಹಾಗಾಗಿ ಪರಿಹಾರ ಸಿಗುವುದಿಲ್ಲ, ಬೇಕೆಂದರೆ ಕೋರ್ಟಿಗೆ ಹೋಗಿ ಎಂದರು. ಅವರಿವರ ಸಹಾಯ ಪಡೆದು, ಅಲ್ಲೆ ಇದ್ದ ಜಿಲ್ಲಾ ಕೋರ್ಟಿಗೆ ಅಲೆಯಲು ಶುರುಮಾಡಿದರು, ಸುಮಾರು ಎರಡು ವರ್ಷಗಳ ನಂತರ ಪರಿಹಾರ ಕೊಡಬೇಕೆಂದು ಕೋರ್ಟ್ ಸೂಚಿಸಿತು. ಪರಿಹಾರದ ರೂಪದಲ್ಲಿ ಇಪ್ಪತ್ತು ಲಕ್ಷ ರೂಪಾಯಿ ಸಿಗುತ್ತದೆ ಎಂದು ಹೇಳಿ ಐವತ್ತು ಸಾವಿರ ಹಣವನ್ನು ಲಾಯರ್ ಪಡೆದುಕೊಂಡ.

ಪರಿಹಾರದ ಹಣ ಬರುವುದರೊಳಗೆ ವಿದ್ಯುತ್ಛಕ್ತಿ ನಿಗಮದವರು ಉನ್ನತ ನ್ಯಾಯಾಲಯದಲ್ಲಿ ಪರಿಹಾರ ಕೊಡಲಾಗುವುದಿಲ್ಲ ಎಂದು ಮತ್ತೊಂದು ಕೇಸ್ ಹಾಕಿದರು. ಜಿಲ್ಲಾ ನ್ಯಾಯಾಲಯದಲ್ಲಿ ವಾದಿಸಿದ್ದ ನ್ಯಾಯವಾದಿ, ನಾನು ಉನ್ನತ ನ್ಯಾಯಾಲಯಕ್ಕೆ ಬರಲು ಆಗುವುದಿಲ್ಲ, ಅಲ್ಲೆ ಬೇರೆ ನ್ಯಾಯವಾದಿಗಳನ್ನು ಸಂಪರ್ಕಿಸಿ ಎಂದು ಕೈ ತೊಳೆದುಕೊಂಡು, ಸುಮಾರು ಆರು ವರ್ಷಗಳ ನಂತರ ನ್ಯಾಯಾಲಯದಲ್ಲಿ ಪರಿಹಾರ ಕೊಡಲಾಗುವುದಿಲ್ಲ ಎಂದು ತೀರ್ಮಾನ ಬಂತು.

ಬೀದಿಗೆ ಬಿದ್ದ ಆ ಪರಿವಾರವನ್ನು ಕೇಳುವರು ಗತಿ ಇಲ್ಲವಾಯಿತು. ತೀರ್ಮಾನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಲು ಹಣವೂ ಇರಲಿಲ್ಲ, ಕುಟುಂಬದಲ್ಲಿ ಯಾರಿಗೂ ತ್ರಾಣವೂ ಇರಲಿಲ್ಲ.

ಸುಮಾರು ವರ್ಷಗಳ ನಂತರ ಆ ಹುಡುಗರು ತಮ್ಮ ಕಾಲ ಮೇಲೆ ನಿಂತಿದ್ದಾರೆ, ಶ್ರೀಮಂತರಲ್ಲದಿದ್ದರೂ ಬಡವರೇನಲ್ಲ. ಆದರೆ ಅವರುಗಳ ಪ್ರಶ್ನೆ:

ನ್ಯಾಯಾಲಯ ಎಂದರೆ ಪ್ರಶ್ನಿಸಲಾಗದಂತಹ ಒಂದು ವ್ಯವಸ್ಥೆ. ನ್ಯಾಯಾಲಯದ ತೀರ್ಪನ್ನು ಅಲ್ಲಗಳೆದರೆ ಅಥವ ನ್ಯಾಯಾಲಯಕ್ಕೆ ವಿರುದ್ಧವಾಗಿ ಮಾತನಾಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಶಿಕ್ಷೆಗೆ ಒಳಪಡಿಸುತ್ತಾರೆ. ಒಂದು ನ್ಯಾಯಾಲಯದಲ್ಲಿ ಕೊಟ್ಟ ತೀರ್ಪಿಗೆ ವಿರುದ್ಧವಾಗಿ ಇನ್ನೊಂದು ನ್ಯಾಯಾಲಯದಲ್ಲಿ ತೀರ್ಪು ಬಂದರೆ, ಸಣ್ಣ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವ ಅಲ್ಲಿ ವಾದಿಸಿದ ನ್ಯಾಯವಾದಿಗಳಿಗೆ ಶಿಕ್ಷೆ ಕೊಡುತ್ತಾರೆಯೆ?

ವಾದಿ ಮತ್ತು ಪ್ರತಿವಾದಿಗಳಿಗೆ ಅವರವರ ನ್ಯಾಯವಾದಿಗಳಿರುತ್ತಾರೆ, ಇಬ್ಬರಲ್ಲಿ ಒಬ್ಬರಿಗೆ ನ್ಯಾಯ ಸಿಗುತ್ತದೆ, ನ್ಯಾಯ ಸಿಗದವನ ವಕೀಲನನ್ನು ಅನ್ಯಾಯವಾದಿ ಎಂದು ಕರೆಯಬಹುದೆ?

ಕೆಲವು ವಿಚಾರಗಳಿಗೆ ಉತ್ತರವೆ ಇಲ್ಲ. ಹಣವಂತರು, ಶಕ್ತಿವಂತರು ತಮ್ಮ ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ಸರಿ ಮಾಡಿಕೊಂಡು ಹೋಗುತ್ತಾರೆ. ಸಾಮಾನ್ಯ ಜನರು ಅಸಾಮಾನ್ಯ ನೋವಿನೊಂದಿಗೆ ಸಮಾಜದಲ್ಲಿ ಇದ್ದೂ ಇಲ್ಲದಂತೆ ಕರಗಿಹೋಗುತ್ತಾರೆ.

(ಚಿತ್ರಗಳು ಸಾಂದರ್ಭಿಕ)