ಒಮ್ಮೆ ಆಡುತ್ತಿರಬೇಕಾದರೆ ಯಾರೋ ಹುಡುಗ ಚೆಂಡು ದೂರ ಬಾರಿಸಿ ಹೊಡೆದ. ಚೆಂಡು ತೇಲಿಕೊಂಡು ಸಿಕ್ಸರ್ ಸೀಮೆ ದಾಟಿ ಮುಂದೆ ಹೋಯಿತು. ಹಾಗೇ ಬೌಂಡರಿ ಲೈನಿನಲ್ಲಿ ಫಿಲ್ಡಿಂಗ್ ನಲ್ಲಿ ನಿಂತಿದ್ದ ನಾನು ಚೆಂಡು ಹುಡುಕಲು ಹೊರಟೆ. ಚೆಂಡು ಕಂಡು ಇನ್ನೇನು ಕೈ ಹಾಕಿ ಹೆರಕಬೇಕೆನ್ನುವಷ್ಟರಲ್ಲಿ ಬುಸ್ಸೆಂದು ಕೇರೆ ಹಾವುಗಳೆರಡು ಸಿಡಿದೆದ್ದವು. ಅವುಗಳೆರಡೂ ಒಂದಕ್ಕೊಂದು ಅಪ್ಪಿಕೊಂಡು ಪಲ್ಟಿ ಹೊಡೆಯುತ್ತಿದ್ದವು. ಕೈ ಹಾಕಿರುತ್ತಿದ್ದರೆ ಹಾವು ಕಡಿಯುತ್ತಿತ್ತೇನೋ ಎಂದು ನೆನೆದು ಅಳುವೇ ಬಂದಿತ್ತು.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

 

“ಏಯ್ ಆ ಕೇರೆ ಹಾವು ಹೋಯ್ತು ಕಣೋ, ಶಾಲೆಗೆ ಲೇಟಾಯ್ತು” ಇದು ನಮ್ಮ ಶಾಲಾದಿನಗಳಲ್ಲಿ ಅಕ್ಕನ ನಿತ್ಯದ ಅಲರಾಂ. ಅವಳು ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನಾನು ಮೂರನೇ ಕ್ಲಾಸು ಹುಡುಗ. ನಮ್ಮ ಮನೆ ಮುಖ್ಯ ರಸ್ತೆಯಿಂದ ಸ್ವಲ್ಪ ತಗ್ಗಿನಲ್ಲಿರುವುದರಿಂದ, ಇಳಿಜಾರಾಗಿ ಮಣ್ಣಿನ ರಸ್ತೆ ಇದೆ. ನಮ್ಮ ಜಾಗದ ಸುತ್ತಲೂ ಹಾಕಿದ್ದ ತಂತಿ ಬೇಲಿಯ ಬದಿಗೆ ಒತ್ತೊತ್ತಾಗಿ ಮರ ಗಿಡಗಳು ಬೆಳೆದು ಕಂಪೌಂಡಿನಷ್ಟು ಬಲಿಷ್ಟವಾಗಿದ್ದವು. ಅದೇ ಪರಿಸರದಲ್ಲೇ ಆ ಕೇರೆ ಹಾವು ವಾಸ ಹೂಡಿರಬೇಕು.

ಕಾಕತಾಳಿಯವೆಂದರೆ ದಿನವೂ ನಾವು ಶಾಲೆಗೆ ಹೊರಡುವ ಹೊತ್ತಿಗೆ ಅದೂ ಬೇಟೆಗೆಂದು ಅದೇ ದಾರಿಯಿಂದ ಹೋಗುತ್ತಿತ್ತು. ಸಂಜೆ ಅದೇ ದಾರಿಯಿಂದ ತಿರುಗಿ ಬರುತ್ತಲೂ ಇತ್ತು. ಅದೂ ಕೂಡಾ ಶಾಲೆಗೆ ಹೋಗುತ್ತಿರಬಹುದೆಂದು ನಮ್ಮೊಳಗೆ ನಾವೇ ಕಲ್ಪಿಸಿಕೊಂಡಿದ್ದೆವು. ನಮಗೆ ಹಾವುಗಳ ಬಗ್ಗೆ ಮೂಢನಂಬಿಕೆಗಳು ಜಾಸ್ತಿ. ದಿನವೂ ಕೆಲವೊಂದು ಸುಳ್ಳುಗಳನ್ನು ಸೇರಿಸಿ ಕೇರೆಯನ್ನು ಕಾಳಿಂಗ ಮಾಡುವುದು, ಕಾಳಿಂಗವನ್ನು ಆನಕೊಂಡ ಮಾಡುವುದು ಹಿರಿಯ -ಕಿರಿಯ ಬೇಧವಿಲ್ಲದೆ ನಡೆಯುತ್ತಲೇ ಇತ್ತು.

ಹೀಗಿರಲು ಒಂದು ದಿನ, ಶಾಲೆಗೆ ರಜೆ ಇತ್ತು. ಇನ್ನೇನು ಬ್ಯಾಟ್ ಬಾಲ್ ಹಿಡಿದುಕೊಂಡು ಅಂಗಳದ ಆಟಕ್ಕಿಳಿಯೋಣ ಅನ್ನುವಷ್ಟರಲ್ಲೇ, ಅಲ್ಲೇ ಬಟ್ಟೆ ಒಣಗಲು ಹರವುತ್ತಿದ್ದ ಅಮ್ಮ ಕಿಟಾರನೆ ಕಿರುಚಿದರು. “ಕೇರೆ ಸಿಕ್ಕಿ ಹಾಕಿಕೊಂಡಿದೆ, ಬೇಗ ಅಪ್ಪನನ್ನು ಕರಿ” ಅಂದರು. ಗಂಜಿ ಕುಡಿಯುತ್ತಿದ್ದ ಅಪ್ಪ ಅರ್ಧದಲ್ಲೇ ಎದ್ದು ಓಡಿ ಬಂದರು. ಕಸ ಬೀಳದಿರಲು ಮನೆಯ ಬಾವಿಗೆ ಹರವಿದ್ದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡ ಕೇರೆ ಹಾವು ಒದ್ದಾಡುತ್ತಿತ್ತು. ಅನಿರೀಕ್ಷಿತ ಆಘಾತದ ಗೊಂದಲದಿಂದಲೋ ನೋವಿನಿಂದಲೋ ವಿಚಿತ್ರ ಶಬ್ಧವನ್ನೂ ಹೊರಡಿಸುತ್ತಿತ್ತು. ಬಲೆಗೆ ಸಿಕ್ಕು ಇನ್ನಷ್ಟು ಗಾಬರಿಗೊಂಡು ಕೊಸರಾಡಿ, ಪ್ಲಾಸ್ಟಿಕ್ ಬಳ್ಳಿಯೊಳಗೆ ಮತ್ತಷ್ಟು ಸಿಕ್ಕಿ ಹಾಕಿ, ಹಂದಾಡದಷ್ಟು ಉರುಳುಗಳಾಗಿ ಜಟಿಲವಾಗಿದ್ದವು. ಅಬ್ಬನಿಗೆ ಹಾವುಗಳೆಂದರೆ ಸ್ವಲ್ಪ ಹೆದರಿಕೆ ಜಾಸ್ತಿ, ಉಮ್ಮ ಹಾಗಲ್ಲ. ಹಾವುಗಳು, ಹಕ್ಕಿಗಳು ಪರಿಸರದ ಯಾವುದೇ ವಿಶೇಷ ಪ್ರಾಣಿಗಳಿದ್ದರೂ ಕುತೂಹಲದಿಂದ ನೋಡುವುದು, ನಮಗೂ ತೋರಿಸುವುದೂ ಉಂಟು.

“ಹೋಗಿ ಕತ್ತರಿ ತೆಗೆದುಕೊಂಡು ಬಾ” ಉಮ್ಮ ಹೇಳಿದರು. ನಾನು ಕತ್ತರಿ ಕೊಟ್ಟು ದೂರದಿಂದ ನೋಡುತ್ತಾ ನಿಂತೆ, ಉಮ್ಮ ಅಬ್ಬನಲ್ಲಿ ಬಲೆ ಹಿಡಿಯಲು ಹೇಳಿ ಹಾವು ಸಿಕ್ಕಿ ಹಾಕಿಕೊಂಡ ಒಂದೊಂದು ಉರುಳನ್ನು ಕತ್ತರಿಸತೊಡಗಿದರು. ಹಾವು ಇನ್ನಷ್ಟು ಗಾಬರಿಗೊಂಡು ಸಿಕ್ಕುಗಳಲ್ಲಿ ನುಸುಳುತ್ತ, ಮತ್ತೆ ಸಿಕ್ಕಾಗಲು ನೋಡುತ್ತಿದ್ದಂತೆ ಅದಕ್ಕೆ ಬೈಯ್ಯುತ್ತಾ ಉಮ್ಮ ನಿರ್ಭೀತಿಯಿಂದ ಎಲ್ಲ ಉರುಳುಗಳನ್ನು ಕತ್ತರಿಸಿ ಮುಗಿಸಿದರು. ಬಂಧನ ಮುಕ್ತಗೊಂಡ ಕೇರೆ ಹಾವು ಅಲ್ಲಿಂದ ಎದ್ದೆನೋ ಬಿದ್ದೆನೋ ಎಂದು ಪರಾರಿಯಾಗಿತ್ತು.

ನಮಗೆ ಕೇರೆ ಹಾವಿನ ಬಗ್ಗೆ ವಿಪರೀತ ಸುಳ್ಳು ನಂಬಿಕೆಗಳಿದ್ದವು. ‘ಅವುಗಳು ಸಾಧುವೆಂದು ಕೊಲ್ಲುವುದಿಲ್ಲವಾದರೂ, ಅದು ಕೋಪ ಬಂದರೆ ಬಾಲದಿಂದ ಹೊಡೆಯುವುದೆಂದೂ’ ಪ್ರಚಾರವಿತ್ತು. ಹಾಗೇನಾದರೂ ಹೊಡೆದರೆ ಮನುಷ್ಯನ ಬೆನ್ನು ಮೂಳೆ ಮುರಿದೇ ಹೋಗುತ್ತದೆಯೆಂಬ ಮತ್ತೊಂದು ನಂಬಿಕೆಯೂ ಪ್ರಚಾರದಲ್ಲಿತ್ತು. ಬಹುಶಃ ಹಿರಿಯರು ಪಾಪದ ಹಾವಿಗೆ ಕೀಟಲೆ ಕೊಡಲು ಹೋಗದಿರಲೆಂದು ಈ ಕಥೆ ಹಣೆದಿದ್ದರೋ ಏನೋ. ಒಮ್ಮೆ ಶಾಲೆಯಲ್ಲಿದ್ದಾಗ ಯಾರೋ ಒಬ್ಬ ದೊಡ್ಡ ಕ್ಲಾಸಿನ ಹುಡುಗ ಸುದ್ದಿಯೊಂದನ್ನು ತಂದಿದ್ದ. ನಮ್ಮೂರಿಗೆ ಆವಾಗ ಇದ್ದಿದ್ದು ಎರಡೇ ಬಸ್ಸು. ಒಂದು ಕ್ರಿಸ್ತೋಫರ್, ಮತ್ತೊಂದು ಕೆನರಾ. ‘ಉಪ್ಪಿನಂಗಡಿ ಪೇಟೆಯಲ್ಲಿ ಕ್ರಿಸ್ತೋಪರ್ ಬಸ್ ಗೆ ಕೇರೆ ಹಾವು ಬಾಲದಿಂದ ಬಡಿದದ್ದಲ್ಲದೆ, ಬಸ್ಸಿನ ಹಿಂಬಾಗ ಜಖಂ ಕೂಡಾ ಆಗಿದೆಯಂತೆ’ ಎಂದು ಆ ಹುಡುಗ ಕಣ್ಣಾರೆ ಕಂಡವನಂತೆ ಎಲ್ಲರಲ್ಲೂ ಹೇಳತೊಡಗಿದ. ನನಗೆ ಆಶ್ಚರ್ಯದ ಜೊತೆ ಕುತೂಹಲ, ಶಾಲೆ ಬಿಡುವುದನ್ನೇ ಕಾದು ಕುಳಿತೆ. ಶಾಲೆ ಬಿಟ್ಟ ಸಮಯಕ್ಕೆ ಸರಿಯಾಗಿ ಕ್ರಿಸ್ಟೋಪರ್ ಬಸ್ಸು ನಮ್ಮೂರ ಶಾಲೆಯ ದಾರಿಯಿಂದ ಹಾದು ಹೋಗುತ್ತಿತ್ತು. ಹಿಂಬದಿ ಜಖಂ ಆದ ಬಸ್ಸು ನೋಡುವ ಕುತೂಹಲದಲ್ಲಿ ನಾನು ರಾಷ್ಟ್ರ ಗೀತೆ ಮುಗಿಯುವ ಮುಂಚೆ ಶಾಲೆಯ ಗೇಟು ದಾಟಿ ರಸ್ತೆಗೆ ತಲುಪಿದ್ದೆ.

ಕ್ರಿಸ್ತೋಪರ್ ಬಸ್ಸು ಬಂತು. ಕಂಡಕ್ಟರ್ ಸೀಟಿ ಊದಿದ. ಯಾರೋ ಇಳಿಯಲಿರುವುದರಿಂದ ಸ್ವಲ್ಪ ಹೊತ್ತು ಬಸ್ಸು ನಿಂತಿತು. ನಾನೂ ಎವೆ ಮುಚ್ಚದೆ ಬಸ್ಸಿಡೀ ನೋಡಿದೆ. ಹಿಂಬಾಗಿಲ ಬಳಿ ಸಣ್ಣದಾಗಿ ಬೆಂಡಾಗಿದ್ದು ನೋಡಿದೆ. ನಾನು ಅದು ಕೇರೆ ಹಾವಿನ ಹೊಡೆತದ ಪರಿಣಾಮವೆಂದು ನಂಬಿ ಬಿಟ್ಟೆ. ಆದರೆ ಅಲ್ಲಿ ನಡೆದದ್ದು ಬೇರೆಯೇ ಆಗಿತ್ತು. ಚಕ್ರದಡಿಗೆ ಸಿಲುಕಿದ ಕೇರೆ ಹಾವು ಜೀವನ್ಮರಣ ಹೋರಾಟದಲ್ಲಿ ಬಾಲ ಕೊಡವಿತ್ತೇನೋ. ಅದನ್ನೇ ಜನರು ತಮ್ಮ ನಂಬಿಕೆಗೆ ಸರಿಯಾಗಿ ಸಮರ್ಥಿಸಿಕೊಂಡಿದ್ದರು. ಹಿಂದೆ ಸ್ವಲ್ಪ ತಗ್ಗಿದ್ದ ಭಾಗ ಹಾವಿನ ಹೊಡೆತದಿಂದಲೇ ಆಗಿದ್ದೆಂದೂ ಅವರು ಮಾತಾನಾಡಿಕೊಂಡಿದ್ದರು.

ಕೇರೆ ಹಾವು ಯಾರಿಗೂ ಬಾಲದಲ್ಲಿ ಹೊಡೆಯುವುದೇ ಇಲ್ಲ. ಅವುಗಳಿಗೆ ಕಾಳಿಂಗ ಸರ್ಪದಂತೆ ಬಾಲದಲ್ಲಿ ಶಕ್ತಿ ಅಧಿಕ, ತನ್ನ ಬೇಟೆಗಾಗಿ ಬಾಲದಲ್ಲಿ ನಿಲ್ಲುವಷ್ಟು ಶಕ್ತಿ ಇರುವುದರಿಂದ ಈ ನಂಬಿಕೆ ಉದ್ಭವವಾಗಿರಲೂ ಸಾಕು. ಚಕ್ರದಡಿ ಸಿಲುಕಿದಾಗಲೂ ಅದು ಹಾಗೇ ಬಾಲ ಬೀಸಿದ್ದು ತಾಗಿದರೂ ಕೂಡಾ ಬಸ್ಸಿನ ತಗಡು ಮೇಲ್ಮೈ ನಜ್ಜು ಗುಜ್ಜಾಗುವುದರಲ್ಲಿ ವಿಶೇಷವೇನೂ ಇರಲಿಲ್ಲ. ಮೆಲ್ಲನೆ ಕೈಯಿಂದ ಬಾರಿಸಿದರೂ ಜಗ್ಗಿ ಹೋಗಲು ಸಾಕಾಗುತ್ತಿತ್ತು.

ಎಲ್ಲಾ ಊರಲ್ಲಿರುವಂತೆ ನಮ್ಮೂರಲ್ಲೂ ಯುವಕರ ಸಂಘವೊಂದಿತ್ತು. ಮೊದಲು “ಯುವಕ ಮಂಡಲ” ಎಂಬ ಹೆಸರು ಭಾರೀ ಜೋಶಿನಲ್ಲಿ ಸುದ್ದಿ ಮಾಡಿತ್ತು. ಅದು ಕಳೆದು, ಸುಮಾರು ದಿನಗಳ ತರುವಾಯ, ಎನ್.ಎಫ್.ಸಿಯೋ, ಜೆ.ಎಫ್.ಸಿಯೋ ಆಗಿ ಬದಲಾಗಿತ್ತು ಅದು. ಆ ಸಂಘದಲ್ಲಿದ್ದ ಯುವಕರೆಲ್ಲಾ ಸೇರಿ ಮಸೀದಿಯ ರಸ್ತೆಯ ಎಡ ಭಾಗಕ್ಕಿದ್ದ ಒಂದು ಪಾಲು ಸ್ಥಳವನ್ನು ವಾಲಿವಾಲ್ ಆಟದ ಅಂಕಣವಾಗಿ ಮಾಡಿದ್ದರು. ಸಂಜೆಯಾದರೆ ಸಾಕು, ಯುವಕರೆಲ್ಲಾ ಸೇರಿ ಆಟವಾಡುತ್ತಿದ್ದರು. ನಮಗಂತೂ ಹಬ್ಬ, ರಸ್ತೆ ಬದಿಯ ಮೋರಿಯ ಮೇಲೆ ನಿಂತು ಮಕ್ಕಳು, ವಯಸ್ಕರೆಲ್ಲಾ ಆಟ ನೋಡುತ್ತಿದ್ದೆವು. ಜಿದ್ದಾ ಜಿದ್ದಿನ ಆಟದಲ್ಲಿ ಬಾಜಿ ಕಟ್ಟುವುದು ಸಾಮಾನ್ಯವಾಗಿತ್ತು. ನಾನು ಆಟ ನೋಡುವವನೆ, ಆದರೆ ಮಳೆಗಾಲದ ದಿನಗಳಲ್ಲಿ ಮಾತ್ರ ನಾನು ಮೋರಿಯ ಇನ್ನೊಂದು ಬದಿಯಲ್ಲಿ ಹರಿಯುವ ನೀರನ್ನೇ ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ. ಹರಿವ ನೀರಿನಲ್ಲಿ ಮೀನುಗಳನ್ನೆಲ್ಲಾ ನೋಡುತ್ತಾ ಸಮಯ ಕೊಲ್ಲುತ್ತಿದ್ದೆ.

‘ಉಪ್ಪಿನಂಗಡಿ ಪೇಟೆಯಲ್ಲಿ ಕ್ರಿಸ್ತೋಪರ್ ಬಸ್ ಗೆ ಕೇರೆ ಹಾವು ಬಾಲದಿಂದ ಬಡಿದದ್ದಲ್ಲದೆ, ಬಸ್ಸಿನ ಹಿಂಬಾಗ ಜಖಂ ಕೂಡಾ ಆಗಿದೆಯಂತೆ’ ಎಂದು ಆ ಹುಡುಗ ಕಣ್ಣಾರೆ ಕಂಡವನಂತೆ ಎಲ್ಲರಲ್ಲೂ ಹೇಳತೊಡಗಿದ. ನನಗೆ ಆಶ್ಚರ್ಯದ ಜೊತೆ ಕುತೂಹಲ, ಶಾಲೆ ಬಿಡುವುದನ್ನೇ ಕಾದು ಕುಳಿತೆ.

ಒಮ್ಮೆ ನಾನು ಮೀನುಗಳನ್ನು ನೋಡುತ್ತಾ ಕುಳಿತಿರಬೇಕಾದರೆ ಝರಿಯ ಬದಿಯಲ್ಲಿರುವ ಲಂಟಾನ ಗಿಡಗಳು ಲಟ ಲಟನೆ ಮುರಿವ ಸದ್ದು ಕೇಳತೊಡಗಿತು. ನನಗೆ ಆಶ್ಚರ್ಯ, ಸೂಕ್ಷ್ಮವಾಗಿ ಸದ್ದು ಬಂದ ಕಡೆ ದೃಷ್ಟಿ ಹಾಯಿಸಿದೆ. ನೋಡಬೇಕಾದರೆ, ಎರಡು ಕೇರೆ ಹಾವುಗಳು ಯುದ್ಧ ಮಾಡುತ್ತಿರುವಂತೆ ಸುತ್ತಿಕೊಂಡು ಪರಿಸರದ ಪರಿವೆ ಇಲ್ಲದೆ ಮೈಮರೆತಿದ್ದವು. ಒಂದನ್ನೊಂದು ಬಳ್ಳಿಯಂತೆ ಅಪ್ಪಿಕೊಂಡು ಕೊಸರಾಡಿ ದೊಪ್ಪನೆ ಬೀಳುತ್ತಿದ್ದವು. ನನಗೆ ದಿಗಿಲು, ನನಗೆ ನನ್ನ ಜೀವಮಾನದಲ್ಲೇ ಇಂತಹ ಅನುಭವ ಅದೇ ಮೊದಲನೇ ಬಾರಿ. ಬೇಗನೆ ಕೆಳಗಿಳಿದು ಹೋಗಿ ಅಪೂರ್ವ ದೃಶ್ಯವೊಂದನ್ನು ನೋಡುತ್ತಾ ಕಣ್ತುಂಬಿಕೊಂಡೆ. ಇನ್ನಷ್ಟು ಹತ್ತಿರ ಹೋಗಲು ಧೈರ್ಯ ಸಾಕಾಗಲಿಲ್ಲ. ತಡವಾಯಿತೆಂದು ಅದೇ ದೃಶ್ಯವನ್ನು ಮತ್ತೆ ಕಣ್ಣಲ್ಲೇ ಕಲ್ಪಿಸಿಕೊಳ್ಳುತ್ತಾ ಮನೆಗೆ ಓಡಿ ಬಂದೆ. ಏದುಸಿರು ಬಿಡುತ್ತಾ , ತಡವಾಗಿ ಬಂದಿದ್ದಕ್ಕೆ ಬೀಳುವ ಪೆಟ್ಟು ತಪ್ಪಿಸಲು ಉಮ್ಮನ ಬಳಿ ಹೇಳಿಕೊಂಡೆ. “ಅವು ಮೂಲದ ಕೇರೆ, ಅದರಲ್ಲಿ ಒಂದು ಸರ್ಪವಾಗಿರುತ್ತದೆ. ಅವಕ್ಕೆ ಆ ಸಮಯದಲ್ಲಿ ಅಡ್ಡಿ ಪಡಿಸಿದರೆ ಕಚ್ಚುತ್ತದೆ. ಹಾಗೆ ಕಚ್ಚಿದರೆ ಅವುಗಳಲ್ಲಿ ವಿಷ ಜಾಸ್ತಿ ಇರುತ್ತದೆ” ಎಂಬ ಮೂಢ ನಂಬಿಕೆಯನ್ನು ನನ್ನೊಳಗೆ ತುಂಬಿಸಿ ಬಿಟ್ಟರು. ‘ನಾನು ಹತ್ತಿರ ಹೋಗದ್ದು ಒಳ್ಳೆಯದಾಯಿತೆಂದು’ ಒಳಗೊಳಗೆ ಖುಷಿ ಪಟ್ಟೆ.

ಬೇಸಿಗೆ ರಜೆಯಲ್ಲಿ ನಾವು ಆಟವಾಡಲು ಗದ್ದೆಗೆ ಹೋಗುತ್ತಿದ್ದೆವು. ಹಡಿಲು ಬಿದ್ದ ಗದ್ದೆಯಲ್ಲಿ ಹಸಿರು ತುಂಬಿದ್ದರೆ ನಮಗೆ ಕ್ರಿಕೆಟ್ ಆಡಲು ಹೊಸ ಉಮೇದು. ಟಿ.ವಿಯಲ್ಲಿ ಬರುವ ಅಂತರಾಷ್ಟ್ರೀಯ ಆಟಗಾರರಂತೆ ನಾವೂ ತಲೆಗೆ ಟೋಪಿ ಹಾಕಿ ಕಾಲಿಗೆ ಪ್ಯಾಡ್ ಕಟ್ಟುತ್ತಿದ್ದೆವು. ಪ್ಯಾಡ್ ಅಂದರೆ ಕಂಗಿನ ಸೋಗೆಯಿಂದ ಹಾಳೆಯನ್ನು ತುಂಡರಿಸಿ, ಅಕ್ಕಿ ಗೋಣಿಯ ಹಗ್ಗ ಸಿಕ್ಕಿಸಿ ಕಾಲಿಗೆ ಕಟ್ಟಿದರೆ ನಮಗೆ ತೆಂಡೂಲ್ಕರನ್ನೂ ಮೀರಿಸುವಂತಹ ಠೀವಿ. ಎಲ್ಬಿ ಡಬ್ಲೂ ಏನೆಂದು ಗೊತ್ತೇ ಇರದ ನಾವು ಕಾಲಿಗೆ ಚೆಂಡ್ ಬಿದ್ದರೆ ಸಾಕು, ಆಗಲೇ ಔಟ್ ಘೋಷಿಸಿ ಬಿಡುತ್ತಿದ್ದೆವು. ಸಾಲದ್ದಕ್ಕೆ ಹಸಿರು ತುಂಬಿದ್ದರಿಂದ ನಮಗೆ ಸಿಡ್ನಿಯಲ್ಲೋ, ಲಾರ್ಡ್ಸ್ ನಲ್ಲೋ ಆಡಿದಷ್ಟು ಖುಷಿ. ಒಮ್ಮೆ ಆಡುತ್ತಿರಬೇಕಾದರೆ ಯಾರೋ ಹುಡುಗ ಚೆಂಡು ದೂರ ಬಾರಿಸಿ ಹೊಡೆದ. ಚೆಂಡು ತೇಲಿಕೊಂಡು ಸಿಕ್ಸರ್ ಸೀಮೆ ದಾಟಿ ಮುಂದೆ ಹೋಯಿತು. ಹಾಗೇ ಬೌಂಡರಿ ಲೈನಿನಲ್ಲಿ ಫಿಲ್ಡಿಂಗ್ ನಲ್ಲಿ ನಿಂತಿದ್ದ ನಾನು ಚೆಂಡು ಹುಡುಕಲು ಹೊರಟೆ. ಚೆಂಡು ಕಂಡು ಇನ್ನೇನು ಕೈ ಹಾಕಿ ಹೆರಕಬೇಕೆನ್ನುವಷ್ಟರಲ್ಲಿ ಬುಸ್ಸೆಂದು ಕೇರೆ ಹಾವುಗಳೆರಡು ಸಿಡಿದೆದ್ದವು. ಅವುಗಳೆರಡೂ ಒಂದಕ್ಕೊಂದು ಅಪ್ಪಿಕೊಂಡು ಪಲ್ಟಿ ಹೊಡೆಯುತ್ತಿದ್ದವು. ಕೈ ಹಾಕಿರುತ್ತಿದ್ದರೆ ಹಾವು ಕಡಿಯುತ್ತಿತ್ತೇನೋ ಎಂದು ನೆನೆದು ಅಳುವೇ ಬಂದಿತ್ತು.

ಹಾವಿಗೆ ನೆರಳು ಬಿದ್ದರೆ ಬೆಂಬಿಡುವುದಿಲ್ಲವೆಂಬ ಮೂಢ ನಂಬಿಕೆಯೂ ನನ್ನ ತಲೆಯಲ್ಲಿದ್ದದ್ದರಿಂದ ನಾನು ಜೋರಾಗಿ ಅಳತೊಡಗಿದೆ. ನನ್ನ ಅವಸ್ಥೆ ನೋಡಿ ಇತರ ಹುಡುಗರು ನಕ್ಕು ಹಂಗಿಸಿದರೇ ವಿನಃ ಯಾರೂ ಧೈರ್ಯ ಹೇಳಲೇ ಇಲ್ಲ. ನನಗೆ ಅಸಾಧ್ಯ ಸಿಟ್ಟು ಬಂದಿತ್ತು. ಚೆಂಡು ಅಲ್ಲೇ ಬಿಟ್ಟು ಅಳುತ್ತಾ ಒಬ್ಬನೇ ಮನೆಗೆ ಬಂದೆ. ಅದು ಕಳೆದು ಮೂರು ದಿನ ನಾನು ಹಾವಿನ ದ್ವೇಷವನ್ನೆಲ್ಲಾ ನೆನೆದುಕೊಂಡು ಕನಸಿನಲ್ಲೆಲ್ಲಾ ಹಾವು ಕಂಡು ಬೆಚ್ಚಿ ಬೀಳುತ್ತಲೇ ಇದ್ದೆ.

ಹೀಗೆ ನಡೆದು ಸುಮಾರು ವರ್ಷಗಳಾಗಿದ್ದವು. ನಾನು ಎಲ್ಲೋ ಹೋಗಿ ಮನೆಗೆ ಬಂದಿದ್ದಾಗ ಮನೆಯಲ್ಲಿ ಉಮ್ಮ ಮತ್ತು ಅಕ್ಕ ಇಬ್ಬರೂ ಇರಲಿಲ್ಲ. ಯಾವಾಗಲೂ ಮನೆಯಲ್ಲಿ ಇರುವವರು ಇವತ್ತೆಲ್ಲಿ ಹೋದರೆಂದು, ನಾನು ತಂಗಿಯಲ್ಲಿ ವಿಚಾರಿಸಿದೆ. “ಅಕ್ಕನಿಗೆ ಹಾವು ಕಚ್ಚಿದೆ, ಅದಕ್ಕೆ ಹಾಸ್ಪಿಟಲ್ ಗೆ ಹೋಗಿದ್ದಾರೆ” ತುಂಬಾ ಅನಾಸಕ್ತಿಯಿಂದ ಹೇಳಿದಳು. ನನ್ನ ರೋಮವೆಲ್ಲಾ ಒಮ್ಮೆ ಸೆಟೆದು ನಿಂತಿತು. ‘ಏನು?, ಎಲ್ಲಿ ಹಾವು ಕಡಿದದ್ದು?’ ನಾನು ಗಾಬರಿಯಿಂದ ಕೇಳಿದೆ. ‘ಏನಿಲ್ಲ, ಅದು ಕೇರೆ ಹಾವು’ ಎನ್ನುತ್ತಾ ತನ್ನ ಕೆಲಸದಲ್ಲಿ ಮಗ್ನಳಾದಳು. ಅಷ್ಟರಲ್ಲೇ ರಿಕ್ಷಾ ಬಂದು ಮನೆ ಬಾಗಿಲಲ್ಲಿ ನಿಂತಿತು. ಹೆದರಿ ಅಳುತ್ತಿದ್ದ ಅಕ್ಕಾ ಅದರ ಹಿಂದೆ ಉಮ್ಮ ನಗುತ್ತಾ ಒಳ ಬಂದರು. ‘ಕೇರೆ ಹಾವು ಕಡಿದದ್ದಲ್ವಾ?, ಇವಳು ಒಳ್ಳೆಯ ಶ್ರೀಮಂತಳಾಗ್ತಾಳೆ’ ಎಂದು ಹಾಸ್ಯ ಮಾಡಿ “ಮದ್ದೇನು ಬೇಕಾಗಿಲ್ಲ” ಎಂದು ಡಾಕ್ಟರ್ ಹಿಂದೆ ಕಳಿಸಿದ್ದರಂತೆ. ನಾನು ಹತೋಟಿಗೆ ಬಂದೆ. ಮತ್ತೆ ನಡೆದದ್ದೆಲ್ಲಾ ಹೇಳಿದರು. ಆದದ್ದಿಷ್ಟೆ. ಅವಳು ಹಾಸಿಗೆಯಲ್ಲಿ ಮಲಗಿರಬೇಕಾದರೆ, ಅಟ್ಟದಲ್ಲಿ ಇಲಿ ಹಿಡಿಯುತ್ತಿದ್ದ ಕೇರೆ ಹಾವೊಂದು ನೇರ ಕೆಳಕ್ಕೆ ಬಿದ್ದಿತ್ತು. ಅದೇ ಹೊತ್ತಿಗೆ ನಿದ್ದೆಯ ಮಂಪರಿನಲ್ಲಿದ್ದ ಇವಳು ಕೈಕಾಲು ಆಡಿಸಿದ್ದರಿಂದ ಅದಕ್ಕೆ ನೋವಾಗಿ ಇವಳ ಕಾಲ್ಬೆರಳಿಗೆ ಅದು ಬಲವಾಗಿ ಕಚ್ಚಿತ್ತು. ಕೇರೆ ಹಾವು ತುಂಬಾ ಸಾಧು. ವಿಷರಹಿತ ಹಾವಾಗಿರುವುದರಿಂದ ಅದು ಕಚ್ಚಿದರೆ ಗಾಯವಾಗಬಹುದೇ ಹೊರತು ಜೀವಕ್ಕೆನೂ ಕುತ್ತು ಬಾರದು.

ಈಗ್ಗೆ ಪುಸ್ತಕ ತರುವಾಗ ಗುರುರಾಜ ಸನಿಲರ ಪುಸ್ತಕವಾದ ‘ಹಾವು ಮತ್ತು ನಾವು’ ಪುಸ್ತಕ ಕೊಂಡಿದ್ದೆ. ಎರಡನೇ ಕ್ಲಾಸು ಕಲಿತಿರುವ ಉಮ್ಮ ಅಕ್ಷರಕ್ಕಾಗಿ ಪರದಾಡುತ್ತಾ ಕನ್ನಡಿ ಇಟ್ಟು ಒಂದು ವಾರ ಸುಸ್ತಾಗಿ ಓದಿ ಮುಗಿಸಿದ್ದರು. ನಾನು ಓದಿದ್ದೆ, ಆ ಬಳಿಕ ನನ್ನಲ್ಲಿದ್ದ ಹಲವಷ್ಟು ಮೂಢ ನಂಬಿಕೆಗಳು ಬೆಟ್ಟ ಹತ್ತಿದ್ದವು. ಕೇರೆ ಹಾವುಗಳು ಸಂಸರ್ಗಕ್ಕಾಗಿ ಜೋಡಿಯಾಗಿ ಒಂದು ಸೇರುತ್ತವೆಂದೂ ಸ್ಫೋಟಕ ಮಾಹಿತಿಯೊಂದು ದೊರಕಿತು. ಅವುಗಳಲ್ಲಿ ಒಂದು ಸರ್ಪವಿರುತ್ತದೆಂಬ ಸುಳ್ಳನ್ನೂ ತಿದ್ದಿಕೊಂಡೆ. ಆ ಬಳಿಕ ಇರ್ತಲೆ ಹಾವಿಗೆ ಎರಡು ತಲೆ ಇದೆಯೆಂಬ ಸುಳ್ಳು, ಹಾವುಗಳು ಹಾಲು ಕುಡಿಯುತ್ತದೆಂಬ ಮೂಢ ನಂಬಿಕೆಗಳೆಲ್ಲಾ ವಿವರವಾಗಿ ಅರ್ಥೈಸಿಕೊಂಡೆ. ಈಗೀಗ ಸಂಬಂಧಿಕರು, ಹತ್ತಿರದವರೆಲ್ಲಾ ಹಾವು ಕಂಡ ಕೂಡಲೇ ಫೋಟೋವನ್ನೊಮ್ಮೆ ವಾಟ್ಸಾಪ್ ಮಾಡಿ ಯಾವ ಹಾವೆಂದು ಕೇಳುತ್ತಾರೆ. ಈಗ ಹಲವಷ್ಟು ನಮ್ಮದೇ ಪರಿಸರದ ವಿಷರಹಿತ ಹಾವುಗಳನ್ನು, ಬೀಳುವ ಹೊಡೆತದಿಂದ ತಪ್ಪಿಸಿ ಅವುಗಳಿಗೆ ಬದುಕು ಕೊಟ್ಟದ್ದಕ್ಕೆ ಸಮಾಧಾನವಿದೆ.