ಹೈಟಿ – ವೆಸ್ಟ್ ಇಂಡೀಸ್ ಅಥವಾ ಕೆರೀಬಿಯನ್ ದ್ವೀಪ ಸಮೂಹದ ಬಲು ಸುಂದರ ಪುಟ್ಟ ರಾಷ್ಟ್ರ. ಇದರ ರಾಜಧಾನಿಯಾದ ಪೋರ್ಟರ್ ಪ್ರಿಸ್ ನಲ್ಲಿ ಸವಿನಿದ್ದೆಯಲ್ಲಿದ್ದ ಲಕ್ಷಾಂತರ ಮಂದಿಗೆ ಮೊನ್ನೆ ಮಂಗಳವಾರ (12.1.2010) ಸೂರ್ಯ ಉದಯವಾಗಲೇ ಇಲ್ಲ.  ಅಲ್ಲಿ ಗಡಗಡನೆ ಭೂಮಿ ಕಂಪಿಸಿತು.  ನೆಲದಾಳದಿಂದ ಮೇಲೆದ್ದು ಬಂದ  ಕಂಪನದಲೆಗಳಿಗೆ  ಪ್ರಖ್ಯಾತ ಅರಮನೆಯೂ ಸೇರಿದಂತೆ ನಗರದ ಕಟ್ಟಡಗಳು ತರಗೆಲೆಗಳಂತೆ  ದರದರನೆ ಉದುರಿದುವು; ಅಂದಾಜಿಸಿದ ಹಾಗೆ ಲಕ್ಷಕ್ಕೂ ಮಿಕ್ಕಿ ಜನರು ಮರಣ ಹೊಂದಿದರೆ, ಮೂವತ್ತು ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಬಿಬಿಸಿಯ ವರದಿಗಾರ ಮ್ಯಾಥ್ಯೂ ಪ್ರೈಸ್ ನಗರದ ಆಸ್ಪತ್ರೆಯ ದಾರುಣ ಚಿತ್ರವನ್ನು ವರದಿ ಮಾಡುತ್ತ ಹೇಳಿದರು  “ಅದೊಂದು ಸಾಮೂಹಿಕ ಕಗ್ಗೊಲೆಯನ್ನು ಹೋಲುವಂತಿದೆ. ಎಲ್ಲೆಡೆ ಹೆಣಗಳ ರಾಶಿ. ಕೊಳೆಯಾದ ರಕ್ತ ಸಿಕ್ತ ಬಟ್ಟೆ ಹೊದ್ದ ಹೆಣಗಳು ಕೆಲವು, ಇನ್ನು ಹೊರಗಡೆ ಒಂದರ ಕಾಲು ಇನ್ನೊಂದರ ಮೇಲೆ ಬಿದ್ದುಕೊಂಡಿದ್ದ ಹಲವು. ಹೆಚ್ಚಿನವು ಪ್ರಾಯಸ್ಥರದ್ದು. ಆದರೆ ಇಲ್ಲಿಯೇ ಬಲಗಡೆ ಮಗುವೊಂದು ತೊಟ್ಟಿಲ ಬಳಿ ಅನಾಥವಾಗಿ ಬಿದ್ದಿದೆ. ಹೊಳೆವ ನೀಲಿ ಬಣ್ಣದ ಅಂಗಿ ತೊಟ್ಟ ಮಗುವಿನ ಹೊಟ್ಟೆ ಬಗಿದು ಹೊರ ಬಂದಿದೆ.  ಈ ಹೆಣಗಳ ರಾಶಿಯ ನಡುವೆ ಕೆಲವರು ಮಲಗಿದ್ದಾರೆ. ರಕ್ತ ಮಾಂಸಗಳ ವಾಸನೆ ಎಲ್ಲೆಲ್ಲೂ.”

ನಮ್ಮನ್ನು ಹೊತ್ತಿರುವ ಭೂಮಿ ಅಥವಾ ವಸುಂಧರೆ ಆಗಾಗ ಹೀಗೆ ಖುಷಿ ಬಂದ ಹಾಗೆ ಮೈಕೊಡಹಿಕೊಳ್ಳುವುದುಂಟು- ಮುನಿಸೋ ಎಂಬಂತೆ. ವಾಸ್ತವವಾಗಿ ಅವಳ ಮೈ ಸದಾ ಕಂಪಿಸುತ್ತಿರುತ್ತದೆ  ನಮ್ಮರಿವಿಗೆ  ಬಾರದಷ್ಟೂ ಮೃದುವಾಗಿ.  ಅತ್ಯಂತ ಕ್ಷೀಣ ಕಂಪನದಿಂದ ಪ್ರಬಲ ಕಂಪನದವರೇಗೆ ಎಲ್ಲ ಕಂಪನಗಳನ್ನು ದಾಖಲಿಸಿದ್ದಾದರೆ ದಿನವೊಂದಕ್ಕೆ ಸುಮಾರು 2000ದಂತೆ ವರ್ಷದಲ್ಲಿ ಲಕ್ಷದ ಹತ್ತಿರ ಭೂಕಂಪಗಳಾಗುತ್ತಿವೆಯಂತೆ. ಆದರೆ ವಸುಂಧರೆ ಕರುಣೆ ತೋರಿದ್ದಾಳೆ ನಮ್ಮ ಮೇಲೆ. ಇವುಗಳಲ್ಲಿ ಕೆಲವು ಮಾತ್ರ ಪ್ರಬಲ ಕಂಪನಗಳು – ನಮ್ಮರಿವಿಗೆ ಬರುವಂಥವು; ವಿನಾಶ ತರುವಂಥವು. ಐದು ವರ್ಷಗಳ ಹಿಂದೆ (ಡಿಸೆಂಬರ್ 26, 2004) ಸಾಗರದಲ್ಲಿ ವಿನಾಶಕಾರೀ ಅಲೆಯ ಸುನಾಮಿಯನ್ನು ಸೃಷ್ಟಿಸಿದಂಥವು. ಮನುಕುಲದ ಇತಿಹಾಸದುದ್ದಕ್ಕೂ ಭೂಕಂಪಗಳು ಆಗಾಗ ಅಲ್ಲಲ್ಲಿ ಸಂಭವಿಸಿದ್ದು, ಅಪಾರ ಪ್ರಮಾಣದ ಸಾವು-ನೋವು ತಂದದ್ದನ್ನು ಕಾಣುತ್ತೇವೆ.

ಅಲ್ಲ, ಭೂಮಿ ಹೀಗೆ ನಡುಗುವುದಾದರೂ ಏಕೆ? ಸುಮ್ಮನಿರಬಾರದೇ? ಇಂಥ ಪ್ರಶ್ನೆಗೆ ಉತ್ತರಿಸಲು ಯತ್ನಿಸಿದ ಹಿರಿಮೆ ಆಲ್ಫ್ರೆಡ್ ವೆಗ್ನರ್ (1880-1930) ಎಂಬ ಜರ್ಮನಿಯ ಭೂ ವಿಜ್ಞಾನಿಯದು.

ಅಲೆಮಾರಿ ಖಂಡಗಳು

ಆಲ್ಫ್ರೆಡ್ ವೆಗ್ನರ್ ಹುಟ್ಟಿದ್ದು ಜರ್ಮನಿಯ ಬಲರ್ಿನ್ನಿನಲ್ಲಿ, 1880 ನವೆಂಬರ್1ರಂದು. ಬಾಲ್ಯದಿಂದಲೂ ಖಗೋಳ ಮತ್ತು ಭೂ ವಿಜ್ಞಾನದಲ್ಲಿ ಇವನಿಗೆ ಆಸಕ್ತಿ. ಬರ್ಲಿನ್ ವಿಶ್ವವಿದ್ಯಾಲಯದಿಂದ ಖಗೋಳ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದ (1904) ವೆಗ್ನರ್ ಬರ್ಲಿನ್ನಿನ ರಾಯಲ್ ಪ್ರಷ್ಯನ್ ಖಗೋಳಾಲಯವನ್ನು ಸೇರಿದ. ಅಲ್ಲಿ ಅವನಿಗೆ ಭೂ ಹವಾಮಾನದ ಬಗ್ಗೆ ಆಸಕ್ತಿ ಕುದುರಿತು. ಬೆಲೂನುಗಳನ್ನು ಹಾರಿಸಿ ವಾಯುಮಂಡಲವನ್ನು ಸಾಕಷ್ಟು ಅದ್ಯಯನಿಸಿದ. ಸ್ವಯಂ ಬೆಲೂನಿನಲ್ಲಿ ಗಗನಕ್ಕೇರಿ ಪ್ರಯೋಗ ನಡೆಸಿದ.

ಗ್ರೀನ್ ಲ್ಯಾಂಡ್ ಮತ್ತು ಉತ್ತರ ಧ್ರುವ ಪ್ರದೇಶಗಳ ವಾತಾವರಣದ ಅಧ್ಯಯನಕ್ಕಾಗಿ ಡೆನ್ಮಾರ್ಕ್ ದೇಶ ಆ ದಿನಗಳಲ್ಲಿ ಒಂದು ತಂಡವನ್ನು ಕಳುಹಿಸುವ ಯೋಜನೆಯನ್ನು ಸಿದ್ಧಪಡಿಸಿತು. ಸಹಾಸೀ ಮನೋಭಾವದ ವೆಗ್ನರ್ ಅರ್ಜಿ ಹಾಕಿದ ಮತ್ತು ತಂಡಕ್ಕೆ ಆಯ್ಕೆಯಾದ. ಅಲ್ಲಿ ಆತ ನಡೆಸಿದ ಪ್ರಯೋಗಗಳು ಧ್ರುವ ಪ್ರದೇಶಗಳಲ್ಲಿ ಹುಟ್ಟುವ ಶೀತ ಮಾರುತದ ಬಗ್ಗೆ ಹಲವು  ಹೊಸ ಮಾಹಿತಿ ತೆರೆದುವು. ಹವಾಮಾನದ ಬಗ್ಗೆ ಪ್ರಕಟಿಸಿದ ಸಂಶೋಧನ ಲೇಖನಗಳು ಮತ್ತು ಪುಸ್ತಕಗಳು ವೆಗ್ನರನಿಗೆ ಖ್ಯಾತಿ ತಂದುವು. ಜರ್ಮನಿಯ ಮಾರ್ಬೆರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಸೇರಿದ (1909).

ಅದೊಂದು ದಿನ ಗ್ರಂಥಾಲಯದಲ್ಲಿ ಭೂಪಳೆಯುಳಿಕೆಗಳ ಬಗ್ಗೆ ಮಾಹಿತಿ ಇರುವ ಪುಸ್ತಕವೊಂದು ವೆಗ್ನರನಿಗೆ ದೊರೆಯಿತು. ಭೂಮಿಯ ಬೇರೆ ಬೇರೆ ಖಂಡಗಳಲ್ಲಿ ಸಾಕಷ್ಟು ಸಾಮ್ಯತೆ ಇರುವ ಪಳೆಯುಳಿಕೆಗಳು ದೊರೆತಿರುವ ಬಗ್ಗೆ ಆ ಪುಸ್ತಕದಲ್ಲಿದ್ದ ವಿವರಗಳು ವೆಗ್ನರನಲ್ಲಿ ಹೊಸ ಚಿಂತನೆಗೆ ಪ್ರೇರಣೆ ನೀಡಿದುವು. ಒಂದು ಕಾಲದಲ್ಲಿ ಎಲ್ಲ ಖಂಡಗಳು ಒಂದೆಡೆ ಕಲೆತಿದ್ದಿರಬಹುದೇ? ಕಾಲಾಂತರದಲ್ಲಿ ಇವು ದೂರ ದೂರಕ್ಕೆ ಚಲಿಸಿರಬಹುದೇ? ಮೂರು ವರ್ಷಗಳ ಚಿಂತನೆ ಮಂಥನದ ನಂತರ ವೆಗ್ನರ್ ಖಂಡಗಳ ಅಲೆತ ಎಂಬ ತನ್ನ ಸಿದ್ಧಾಂತವನ್ನು ಮಂಡಿಸಿದ (1912).

ಭೂಮಿ ಹುಟ್ಟಿದ್ದು ಸುಮಾರು 4.5 ಬಿಲಿಯ ಅಥವಾ 450 ಕೋಟಿ ವರ್ಷಗಳ ಹಿಂದೆ. ಉರಿಯುತ್ತಿದ್ದ  ಸೂರ್ಯನಿಂದ ಅಂದು ಸಿಡಿದ ತುಣುಕುಗಳು ಸೂರ್ಯನ ಸುತ್ತ ಬೇರೆ ಬೇರೆ ದೂರಗಳಲ್ಲಿ ಪರಿಭ್ರಮಿಸುತ್ತ ಕಾಲಾಂತರದಲ್ಲಿ ತಣಿದು ಭೂಮಿ ಸೇರಿದಂತೆ ಗ್ರಹ ಪರಿವಾರ ಸೃಷ್ಟಿಯಾದುವು. ಭೂಮಿಯ ಹೊರಮೈ ಇಂದು ತಣಿದಿದೆಯಾದರೂ, ಆಂತರಿಕ ಗರ್ಭದಲ್ಲಿನ್ನೂ  ಶಾಖವಿದೆ; ಅಗಾಧ ಒತ್ತಡವಿದೆ. ಭೂ ಕೇಂದ್ರದ ಉಷ್ಣತೆ 10000 ಡಿಗ್ರಿ ಸೆಲ್ಸಿಯಸ್. ಅಂದರೆ ಕುದಿವ ನೀರಿನ ಉಷ್ಣತೆಗಿಂತ ನೂರು ಪಟ್ಟು ಜಾಸ್ತಿ. ಒತ್ತಡವಾದರೋ ಭೂ ಮೇಲ್ಮೈ ಮೇಲಿರುವ ವಾಯುಮಂಡಲದ ಒತ್ತಡಕ್ಕಿಂತ ಲಕ್ಷ ಪಟ್ಟು ಹೆಚ್ಚು. ಅಂದರೆ ಶಾಂತ ಮೇಲ್ಮೈ ಇರುವ ಭೂಮಿಯ ಆಳದಲ್ಲಿನ್ನೂ ಅಶಾಂತ ಸ್ಥಿತಿ ಇದೆ.

ಸುಮಾರು 6300ಕಿ.ಮೀ ತ್ರಿಜ್ಯದ  ಭೂಮಿಯ ಮೇಲ್ಮೈಯನ್ನು ತೊಗಟೆ ಅಥವಾ ಚಿಪ್ಪು (crust) ಎನ್ನುತ್ತೇವೆ — ಆಮೆಗೆ ಚಿಪ್ಪಿನ ಕವಚ ಇರುವಂತೆ. ನಾವು ನಡೆದಾಡುವ ನೆಲ, ಪರ್ವತ ಪಂಕ್ತಿಗಳು, ಆಳ ಕಮರಿಗಳು,  ಹೊಳೆ ಹಳ್ಳಗಳು, ಭೋರ್ಗರೆವ ಸಾಗರಗಳೆಲ್ಲ  ಇರುವುದು ಈ ಚಿಪ್ಪಿನ ಮೇಲೆ. ನೆಲವಿರುವ ಪ್ರದೇಶದಲ್ಲಿ ಚಿಪ್ಪಿನ ದಪ್ಪ 40-70ಕಿ.ಮೀಗಳಷ್ಟಿದ್ದರೆ, ಸಾಗರದಡಿಯಲ್ಲಿ 5-10 ಕಿ.ಮಿಗಳಷ್ಟಿದೆ. ನಮಗೇನೋ ಈ ದಪ್ಪ ಮಹಾ ಎಂದೆನಿಸಿದರೂ, ವಾಸ್ತವವಾಗಿ ಭೂ ಗಾತ್ರದ ಮುಂದೆ ನಗಣ್ಯ.

ಭೂ ಖಂಡಗಳೇ ಇರಲಿ, ಸಾಗರವೇ ಇರಲಿ – ಅವುಗಳನ್ನು ಹೊತ್ತಿರುವುದು ನೂರು ಕಿ.ಮೀ ದಪ್ಪದ ಶಿಲಾಪದರಗಳು. ಶಿಲಾಪದರಗಳ ಒಟ್ಟು ಜೋಡಣೆಯೇ ಶಿಲಾಗೋಳ. ಭೂಮಿಯ ತಿರುಳು ಮತ್ತು ಶಿಲಾಗೋಳದ ನಡುವೆ ಶಿಲಾರಸ ಪಸರಿಸಿದೆ. ಶಿಲಾರಸವಾದರೋ ಘನ ಮತ್ತು ದ್ರವರೂಪದ ಶಿಲೆಗಳ ಸಮ್ಮಿಶ್ರ – ಮಂದವಾದ ಎಣ್ಣೆಯಂತಿದೆ. ಭೂಮಿಯ ಮೇಲ್ಮೈ ಸೃಷ್ಟಿಯಾಗಿರುವುದು ಶಿಲಾಪದರಗಳ ಜೋಡಣೆಯಿಂದ. ವಿವಿಧ ಆಕಾರಗಳಲ್ಲಿ ಕತ್ತರಿಸಿದ ರಟ್ಟಿನ ಬಿಲ್ಲೆಗಳನ್ನು ಜೋಡಿಸಿದಾಗ ನಿರ್ದಿಷ್ಟ ಆಕೃತಿಯೊಂದು ಮೂಡುವಂತೆ.

ಆಫ್ರಿಕಾ ಖಂಡವನ್ನು ಬೃಹತ್ ಶಿಲಾಪದರವೊಂದು ಹೊತ್ತಿದೆ. ಉತ್ತರ ಅಮೇರಿಕಾ ಬೇರೊಂದು ಶಿಲಾಪದರದ ಮೇಲಿದೆ. ದಕ್ಷಿಣ ಅಮೇರಿಕಾ ಇನ್ನೊಂದು ಶಿಲಾಪದರದಲ್ಲಿದೆ. ಹಿಂದೂ ಮಹಾಸಾಗರವನ್ನು ಹೊತ್ತ ಶಿಲಾಪದರದ ಒಂದು ತುದಿಯಲ್ಲಿ ಭಾರತವಿದ್ದರೆ, ಮತ್ತೊಂದು ತುದಿಯಲ್ಲಿ ಆಸ್ತ್ರೇಲಿಯಾ ಇದೆ. ಇದಕ್ಕೆ ಇಂಡಿಯನ್ ಶಿಲಾಪದರ (ಪ್ಲೇಟ್) ಎನ್ನುತ್ತೇವೆ. ಅಂದರೆ ನಾವು ಮತ್ತು ಆಸ್ಟ್ರೇಲಿಯಾದವರು ಒಂದೇ ಹಡಗಿನಲ್ಲಿ — ಇಂಡಿಯನ್ ಪ್ಲೇಟಿನಲ್ಲಿ – ಪಯಣಸುತ್ತಿದ್ದೇವೆ. ಯುರೋಪ್ ಮತ್ತು ಏಷ್ಯಾ ಖಂಡಗಳು ನೆಲದಾಳದಲ್ಲಿ ನೆಲೆಸಿರುವುದು ಯುರೇಷಿಯಾ ಎಂಬ ಬೃಹತ್ತಾದ ಒಂದು ಶಿಲಾಪದರದಲ್ಲಿ. ಮಹಾಗಾತ್ರದ ಶಿಲಾಪದರಗಳ ನಡುವೆ ಅಲ್ಲಲ್ಲಿ ಬೇರೆ ಬೇರೆ ಚಿಕ್ಕ ಪುಟ್ಟ ಶಿಲಾಪದರಗಳುಂಟು. ಪಿಲಿಪ್ಪೈನ್ಸ್, ಅರೇಬಿಯನ್, ವೆಸ್ಟಿಂಡೀಸ್ ಇಂಥವು.

ಈ ಎಲ್ಲ ಶಿಲಾಪದರಗಳು ಅಧಿಕ ಸಾಂದ್ರತೆಯ ಶಿಲಾರಸದಲ್ಲಿ ತೇಲುತ್ತ ಚಲಿಸುತ್ತವೆ – ಮಜ್ಜಿಗೆಯಲ್ಲಿನ ಬೆಣ್ಣೆಯಂತೆ.  ವರ್ಷಕ್ಕೆ ಕೆಲವು ಸೆಂಟಿಮೀಟರ್ಗಳಷ್ಟೇ ದೂರ ಕ್ರಮಿಸುವ ಮಹಾಗಾತ್ರದ ಶಿಲಾಪದರಗಳು ಪರಸ್ಪರ ಢಿಕ್ಕಿ ಹೊಡೆದಾಗ , ಉಜ್ಜಿಕೊಂಡಾಗ ಅಗಾಧ ಶಕ್ತಿ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಶಕ್ತಿ ಭೂಮಿಯ ಮೇಲ್ಮೈಗೆ ಬಂದರೆ ಅಲೆಗಳ ರೂಪದಲ್ಲಿ ಪ್ರವಹಿಸುತ್ತದೆ ಮತ್ತು ಇದರಿಂದ ಕಂಪನ ಹುಟ್ಟುತ್ತದೆ.

ವೆಗ್ನರ್ ಹೇಳುವಂತೆ ಸುಮಾರು 200 ಮಿಲಿಯ ವರ್ಷಗಳ ಹಿಂದೆ ಪ್ರಪಂಚದ ಭೂಪಟ ಇಂದಿನಂತಿರಲಿಲ್ಲ. ಅಂದು ಇಂದು ಇದ್ದಂತೆ ಏಳು ಖಂಡಗಳು ಭೂಮಿಯಲ್ಲಿರಲಿಲ್ಲ. ಅವೆಲ್ಲವೂ ಒಟ್ಟಾಗಿ ಪ್ಯಾಂಜಿಯಾ ಎಂಬ ಬೃಹದಾಕಾರದ ಒಂದೇ ಖಂಡವಿತ್ತು. ನಂತರದ ವರ್ಷಗಳಲ್ಲಿ ಪ್ಯಾಂಜಿಯಾದಿಂದ ಬೇರೆ ಬೇರೆ ಖಂಡಗಳು ಬೇರ್ಪಟ್ಟು ಸುಮಾರು 65ಮಿಲಿಯ ವರ್ಷಗಳ ಹಿಂದೆ ವರ್ತಮಾನದ ರೂಪ ತಳೆಯಿತು.

ವಾಸ್ತವವಾಗಿ ಬೃಹತ್ ಪರ್ವತ ಶ್ರೇಣಿಗಳು ಹುಟ್ಟುವುದಕ್ಕೂ ಶಿಲಾಪದರಗಳ ಮುಖಾಮುಖಿಯೇ ಕಾರಣ. ಸುಮಾರು ನಾಲ್ಕು ಕೋಟಿ ವರ್ಷಗಳ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾವನ್ನು ಹೊತ್ತ ಶಿಲಾಪದರವು ಆಫ್ರಿಕಾ ಖಂಡದ ಶಿಲಾಪದರದೊಂದಿಗೆ ಜೋಡಿಕೊಂಡಿತ್ತು. ಅದ್ಯಾವುದೋ ಕಾರಣದಿಂದ ಈ ಶಿಲಾಪದರ ಅಲ್ಲಿಂದ ಬೇರ್ಪಟ್ಟು ನಿಧಾನವಾಗಿ ಉತ್ತರ ದಿಕ್ಕಿನಲ್ಲಿ ಚಲಿಸುತ್ತ ಯುರೇಷಿಯಾ ಶಿಲಾಪದರದೊಡನೆ ಢಿಕ್ಕಿ ಹೊಡೆಯಿತು. ಹೀಗೆ ಸಂಭವಿಸಿದ ಢಿಕ್ಕಿಯ ಪರಿಣಾಮವಾಗಿ ಹಿಮಾಲಯ ಪರ್ವತಗಳು ಸೃಷ್ಟಿಯಾಗಿರಬೇಕೆಂದು ಭೂ ವಿಜ್ಞಾನಿಗಳ ಅಭಿಮತ. ಒರಸಾಟ ಇನ್ನೂ ಮುಗಿದಿಲ್ಲ – ಎಂದೇ ಹಿಮಾಲಯ ಪರ್ವತಶ್ರೇಣಿಗಳು ಇನ್ನೂ ಮೇಲಕ್ಕೆ ಬೆಳೆಯುತ್ತಲೇ ಇವೆ – – ಗಗನಮುಖಿಯಾಗಿ.

ಈ ಎಲ್ಲ ವಿವರಗಳನ್ನು The Origin of Continents and Oceans ಎಂಬ ತನ್ನ ಗ್ರಂಥದಲ್ಲಿ ವೆಗ್ನರ್ ಪ್ರಕಟಿಸಿದಾಗ, ವಿಜ್ಞಾನ ಪ್ರಪಂಚ ಈ ನೂತನ ಪರಿಕಲ್ಪನೆಯನ್ನು ಉಪೇಕ್ಷಿಸಿತು. ಕೆಲವರು ವೆಗ್ನರನಿಗೆ ತಲೆ ಸರಿ ಇಲ್ಲ ಎಂದದ್ದೂ ಉಂಟು. ನಿಜ, ಕ್ರಾಂತಿಕಾರೀ ಪರಿಕಲ್ಪನೆಗಳಿಗೆ ಹಲವು ಬಾರಿ ಪ್ರಪಂಚ ನೀಡುವ ಸ್ವಾಗತದ ಪರಿಯೇ ಹೀಗೆ. ಆದರೆ  ಭೂ ಪಳೆಯುಳಿಕೆಗಳ ಮತ್ತು ಭೂಕಂಪಗಳ ವಿಸ್ತ್ರತ ಅಧ್ಯಯನ, ವಿಸ್ತರಣೆಗೊಳ್ಳುತ್ತಿರುವ ಸಾಗರತಲಗಳ ಆವಿಷ್ಕಾರಗಳು ವೆಗ್ನರ್  ಸಿದ್ಧಾಂತಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಪುರಾವೆ ಒದಗಿಸಿದುವು;   ವೆಗ್ನರ್ ಸಿದ್ಧಾಂತಕ್ಕೆ ಸಂಪೂರ್ಣ ಮನ್ನಣೆ ಸಂದಿತು.

ಶಿಲಾಪದರಗಳ ರಚನೆ ಮತ್ತು ಅವು  ಚಲಿಸುತ್ತಿರುವ ದಿಕ್ಕನ್ನು ಅಧ್ಯಯನಿಸಿ ಸಂಭಾವ್ಯ ಭೂಕಂಪ ಪ್ರದೇಶಗಳನ್ನು ಭೂ ವಿಜ್ಞಾನಿಗಳು ಗುರುತಿಸುತ್ತಾರೆ. ಈ ಎಲ್ಲ ಪ್ರದೇಶಗಳು ಶಿಲಾಪದರಗಳ ಅಂಚಿನಲ್ಲಿವೆ. ಉದಾಹರಣೆಗೆ ಹಿಮಾಲಯ ಪರ್ವತ ಶ್ರೇಣಿಗಳು, ಅಫಘಾನಿಸ್ಥಾನ, ಇರಾನ್, ಇರಾಕ್, ರಷ್ಯಾ, ಇಂಡೊನೇಶಿಯಾ, ಪಿಲಿಪ್ಪೈನ್ಸ್, ಮೆಕ್ಸಿಕೋ, ಚೀಲಿ ಕೆರಿಬೀಯನ್ ಧ್ವೀಪಗಳು ಭೂಕಂಪಕ್ಕೆ ತುತ್ತಾಗುವ ಸಂಭಾವ್ಯತೆ ಅಧಿಕ.

ಎಲ್ಲ ಭೂ ಕಂಪಗಳು ಶಿಲಾಪದರಗಳ ಘರ್ಷಣೆಯಿಂದಲೇ ಆಗಬೇಕೆಂದಿಲ್ಲ. ಭೂಮಿಯ ತೊಗಟೆಯ ಶಿಲೆಗಳು ಭೂ ಮೇಲ್ಮೈ ಒತ್ತಡಕ್ಕೆ ಸಿಲುಕಿ ಅತ್ಯಂತ ಬಿಗುವಾದ ಸ್ಥಿತಿಯಲ್ಲಿರುತ್ತವೆ – ಹೆದೆ ಏರಿಸಿದ ಬಿಲ್ಲಿನಂತೆ. ನಿರ್ದಿಷ್ಟ ಮಿತಿಯವರೇಗೆ ಒತ್ತಡವನ್ನು ತಾಳಿಕೊಳ್ಳಬಲ್ಲ ಈ ಶಿಲೆಗಳು ಮಿತಿಯನ್ನು ಮೀರಿದೊಡನೆ ಬಿರುಕು ಬಿಡುತ್ತವೆ; ಇಬ್ಬಾಗವಾಗಿ ಜಾರುತ್ತವೆ. ಹೀಗೆ ಬಿಡುಗಡೆಯಾಗುವ ಶಕ್ತಿಯಿಂದ ಭೂಕಂಪ ಸಂಭವಿಸಬಹುದು. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಇಂಥ ಪ್ರಕ್ರಿಯೆ ತೀರ ಸಾಮಾನ್ಯ. ಅಂತೆಯೇ ಭೂಕಂಪಗಳು ಕೂಡ.

ಕೆಲವು ಬಾರಿ ಅನೈಸರ್ಗಿಕವಾಗಿ – ಅಂದರೆ ಮಾನವಕೃತ ಭೂಕಂಪಗಳು ಸಂಭವಿಸುವುದುಂಟು. ಉದಾಹರಣೆಗೆ ನ್ಯೂಕ್ಲಿಯರ್ ಬಾಂಬಿನ ಪರೀಕ್ಷೆಗೆಂದು ಭೂಮಿಯ ಆಳದಲ್ಲಿ ನಡೆಸುವ ಆಸ್ಫೋಟನೆಯಲ್ಲಿ ಬಿಡುಗಡೆಯಾಗುವ ಶಕ್ತಿ ಭೂಮಿ ಮೇಲೆ ಕಂಪನವನ್ನು ಸೃಷ್ಟಿಸಬಹುದು.  1968ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ನೆವೆಡಾ ಮರುಭೂಮಿಯಲ್ಲಿ ನಡೆಸಿದ ನ್ಯೂಕ್ಲಿಯರ್ ಬಾಂಬಿನ ಭೂಮ್ಯಂತರ್ಗತ ಆಸ್ಫೋಟನೆಯಿಂದ ಸೃಷ್ಟಿಯಾದ ಭೂಕಂಪನ 50ಕಿಮೀ ದೂರದ ಲಾಸ್ ವೆಗಾಸ್ ನಗರವನ್ನು ಕೆಲವು ಸೆಕುಂಡುಗಳ ಕಾಲ ನಡುಗಿಸಿತಂತೆ.
ಬೃಹತ್ ಜಲಾಶಯಗಳು ಕೂಡ ಭೂಕಂಪವನ್ನು ಪ್ರೇರಿಸಬಹುದು, ಜಲಾಶಯದಲ್ಲಿ ಸಂಗ್ರಹಿತವಾದ ಅಗಾಧ ಪ್ರಮಾಣದ ನೀರಿನ ಒತ್ತಡವನ್ನು ಸಹಿಸಲಾಗದೇ ಜಲಾಶಯದ ಅಡಿಯಲ್ಲಿರುವ ಶಿಲಾಪದರದಲ್ಲಿ ಸ್ತರಭಂಗವಾಗಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಮುಂಬೈ ನಗರದಿಂದ 400 ಕಿಮೀ ದೂರದಲ್ಲಿರುವ ಕೊಯ್ನಾದಲ್ಲಿ ಭೂಕಂಪ ಸಂಭವಿಸಿದ್ದು ಈ ಕಾರಣದಿಂದ.

1962ರಲ್ಲಿ ಕೊಯ್ನಾ ಅಣೆಕಟ್ಟು ನಿರ್ಮಾಣವಾದ ಮೇಲೆ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರಿಗೆ ಲಘು ಭೂಕಂಪದ ಅನುಭವ ಸಾಮಾನ್ಯವಾಗತೊಡಗಿತು. 1967 ಡಿಸೆಂಬರ್ 11ರಂದು ತೀವ್ರ ಪ್ರಮಾಣದ ಭೂಕಂಪ ಸಂಭವಿಸಿತು. ಕೊಯ್ನಾ ಪಟ್ಟಣದಡಿಯಲ್ಲಿ ಇರುವುದನ್ನು ಭೂಕಂಪ ಮಾಪಕಗಳು ಪತ್ತೆ ಮಾಡಿದುವು.

ಸುನಾಮಿ ತಂದ ಅವಾಂತರ
ಸಮುದ್ರದ ಅಥವಾ ಸಾಗರದ ತಳದಲ್ಲಿ ಭೂಕಂಪದ ಕೇಂದ್ರವಿದ್ದರೆ ಸಾಗರದಲ್ಲಿ ಬೃಹದಾಕಾರದ ತೆರೆಗಳೇಳುತ್ತವೆ. ಇಂಥ ದೈತ್ಯ ಅಲೆಗಳಿಗೆ ಭೂಗರ್ಭಶಾಸ್ರ್ರಜ್ಞರು ಇಟ್ಟ ಹೆಸರು ಸುನಾಮಿ. ಜಪಾನೀ ಭಾಷೆಯಲ್ಲಿ ಸುನಾಮೀ ಎಂದರೆ ದೈತ್ಯ ಎಂದರ್ಥ. ಸಾಗರದಲ್ಲಿ ಗಂಟೆಗೆ 500-900 ಕಿ.ಮೀ ವೇಗದಲ್ಲಿ ಭೂಕಂಪದ ಅಲೆಗಳು ಧಾವಿಸುವಾಗ ಬೃಹದಾಕಾರದ ಅಲೆಗಳೇಳುತ್ತವೆ. ಮೂವತ್ತರಿಂದ ಅರುವತ್ತು ಮೀಟರ್, ಆಂದರೆ ಸುಮಾರು ತೆಂಗಿನ ಮರದೆತ್ತರಕ್ಕೆ ಏರುವ ಅಲೆಗಳ ರುದ್ರ ನರ್ತನದಿಂದ ಸಮುದ್ರತೀರದ ಒಳನಾಡಿನ ಪ್ರದೇಶಗಳಲ್ಲಿದ್ದ ಎಲ್ಲವೂ ಸರ್ವನಾಶವಾಗುತ್ತವೆ.

ಡಿಸೆಂಬರ್26, 2004. ಬೆಳಗ್ಗಿನ ಜಾವ. ಚೆನ್ನೈ ನಗರದ ಸುಂದರ ಮರಿನಾ ಬೀಚಿನಲ್ಲಿ ಸೂರ್ಯೋದಯವನ್ನು ವೀಕ್ಷಿಸಲು, ಬೆಳಗ್ಗಿನ ವಾಯು ಸೇವನೆಗೆ ಮತ್ತು ವ್ಯಾಯಾಮಕ್ಕೆ ಜನ ನೆರೆದಿದ್ದಾರೆ. ಅವರಿಗೆ ತಿಳಿದಿರಲಿಲ್ಲ ಅಂತಕನ ದೂತರು ಅಲೆಗಳ ರೂಪದಲ್ಲಿ ಬರುತ್ತಾರೆಂದು. ಸಮುದ್ರದಾಳದಿಂದ ರಾಕ್ಷಸಾಕಾರದ ಅಲೆಗಳು ಮೇಲೆದ್ದುವು – ದೈತ್ಯಾಕಾರದ ಮುಗಿಬಿದ್ದು ಬಂದ ಅಲೆಗಳಿಗೆ ಪ್ರಾಣ ತೆತ್ತವರು ಸಾವಿರಾರು ಮಂದಿ.

ಶ್ರೀಲಂಕಾದ ಬೆಟ್ಟಿಕೊಲೊವಾ ಎಂಬಲ್ಲಿ ಸಮುದ್ರ ತೀರದ ಹಳಿಯಲ್ಲಿ ರೈಲೊಂದು ಧಾವಿಸುತ್ತಿತ್ತು ಎಂದಿನಂತೆ ತನ್ನ ಗಮ್ಯಸ್ಥಾನದೆಡೆಗೆ. ಆಗ ಬಂದೆರಗಿದ ಅಲೆಗಳಿಗೆ ಇಡೀ ರೈಲು ಕೊಚ್ಚಿಕೊಂಡು ಹೋಯಿತು. ರೈಲಿನಲ್ಲಿದ್ದ ಎಂಟು ನೂರಕ್ಕೂ ಹೆಚ್ಚು ಪ್ರಯಾಣಿಕರು ಇನ್ನೆಂದೂ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು.

ಸುಮಾತ್ರದ ಸಾಗರದಾಳದಲ್ಲಿ ಸಂಭವಿಸಿದ ಭೂಕಂಪದಿಂದ ಸೃಷ್ಟಿಯಾದ ಸುನಾಮೀ ಇಂಡೊನೇಶಿಯಾ, ಶ್ರೀಲಂಕಾ, ಭಾರತದ ಪೂರ್ವಕರಾವಳಿ, ಥೈಲಾಂಡ್ ಮೊದಲಾದೆಡೆ ಊಹೆಗೂ ಮೀರಿದ ನಾಶ ಉಂಟುಮಾಡಿತು; ಎರಡೂವರೆ ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. ಇಂಥದೇ ಸುನಾಮೀ 1703ರಲ್ಲಿ ಜಪಾನಿನಲ್ಲಿ ಸಂಭವಿಸಿತ್ತು. 1908 ಡಿಸೆಂಬರ್ 28ರಂದು ಇಟೆಲಿಯ ತೀರ ಪ್ರದೇಶದ ಮೆಸಿನಾ ಮತ್ತು ರೆಗ್ಗಿಯೋ ನಗರಗಳು ಸುನಾಮೀ ಅರ್ಭಟಕ್ಕೆ ಶೇಕಡಾ ತೊಬತ್ತರಷ್ಟು ನಾಶವಾಗಿ ಹೋದುವು. ಇಂಥ ಘಟನೆಗಳು ನಿಸರ್ಗದ ದೈತ್ಯ ಶಕ್ತಿಯನ್ನು ಪ್ರಕಟಿಸುತ್ತವೆ – ನಮಗಾಗಿ ಅಲ್ಲ!

ಭೂಕಂಪದ ತೀವ್ರತೆ 
ಭೂಕಂಪದಿಂದ ಉಂಟಾದ ವಿನಾಶದಿಂದಷ್ಟೆ ಅದರ ತೀವ್ರತೆಯನ್ನು ನಿರ್ಧರಿಸುವುದು ವೈಜ್ಞಾನಿಕವಾಗದು. ಏಕೆಂದರೆ ಭೂಕಂಪ ಉಂಟುಮಾಡುವ ನಾಶ ಅದರ ತೀವ್ರತೆಗಿಂತ ಹೆಚ್ಚಾಗಿ ಆ ಪ್ರದೆಶದ ಜನಸಂಖ್ಯೆ, ಜನಜೀವನದ ರೀತಿ, ಆರ್ಥಿಕ ಸ್ಥಿತಿ, ಮಣ್ಣಿನ ರಚನೆ, ಕಟ್ಟಡ ನಿರ್ಮಾಣದಲ್ಲಿ ಅನುಸರಿಸಿದ ಮುಂಜಾಗರೂಕತೆಯ ಕ್ರಮಗಳ ಮೇಲೆ ಅವಲಂಬಿಸಿದೆ. ಭೂಕಂಪವನ್ನು ಪತ್ತೆ ಮಾಡಲು ಮತ್ತು ಅದರ ತೀವ್ರತೆಯನ್ನು ಅಳೆಯಲು ಭೂಕಂಪ ಮಾಪಕಗಳನ್ನು ಬಳಸುತ್ತಾರೆ. ಇವು ಭೂಮಿಯ ಕಂಪನಕ್ಕೆ ಅನುಗುಣವಾಗಿ ಕಂಪನದಲೆಗಳನ್ನು ಕಾಗದದ ಹಾಳೆಯ ಮೇಲೆ ಮುದ್ರಿಸುತ್ತವೆ. ಈ ರೇಖಾ ಚಿತ್ರಗಳ ಅಧ್ಯಯನದಿಂದ ಕಂಪನದ ಕೇಂದ್ರ ಮತ್ತು ಬಿಡುಗಡೆಯಾದ ಶಕ್ತಿಯನ್ನು ನಿರ್ಧರಿಸುತ್ತಾರೆ.

ಭೂಕಂಪದಲ್ಲಿ ಬಿಡುಗಡೆಯಾಗುವ ಶಕ್ತಿಯನ್ನು ಅಳೆಯವ ಮೂಲಕ ಭೂಕಂಪದ ತೀವ್ರತೆಯನ್ನು ನಿರ್ಧರಿಸುವ ಪದ್ಧತಿಯನ್ನು ಬಳಕೆಗೆ ತಂದವನು ಅಮೇರಿಕದ ಭೂಗರ್ಭಶಾಸ್ತ್ರಜ್ಞ ಚಾರ್ಲಸ್ ರಿಕ್ಟರ್ (1900 – 1985). ರಿಕ್ಟರ್ ಮಾನಕದಲ್ಲಿ ಭೂಕಂಪದ ತೀವ್ರತೆಯನ್ನು ಅಂಕೆಗಳಿಂದ ಅಳೆಯುತ್ತಾರೆ. ಐದು ರಿಕ್ಟರ್ ಅಂಕೆಯ ಭೂಕಂಪವಾದಾಗ ಅಲ್ಲಿ ಬಿಡುಗಡೆಯಾಗುವ ಶಕ್ತಿ ಸುಮಾರು 1012 ಜೌಲುಗಳಷ್ಟಿರುತ್ತದೆ. ರಿಕ್ಟರ್ ಮಾನಕದಲ್ಲಿ ಪ್ರತಿಯೊಂದು ಅಂಕ ಹೆಚ್ಚಿದಂತೆ ಬಿಡುಗಡೆಯಾಗುವ ಶಕ್ತಿ 32 ಪಟ್ಟು ಹೆಚ್ಚುತ್ತದೆ. ಅಂದರೆ 6ರಿಕ್ಟರ್ ಅಂಕೆಯ ಭೂಕಂಪದಲ್ಲಿ ಬಿಡುಗಡೆಯಾಗುವ ಶಕ್ತಿ 5 ರಿಕ್ಟರ್ ಅಂಕೆಯ ಭೂಕಂಪಕ್ಕಿಂತ 32 ಪಟ್ಟು ಹೆಚ್ಚಿರುತ್ತದೆ. ಅದೇ ನಾಲ್ಕು ಅಂಕೆಯ ರಿಕ್ಟರ್ ಭೂಕಂಪಕ್ಕಿಂತ 1024 ಪಟ್ಟು ಇರುತ್ತದೆ.

ನಮ್ಮರಿವಿಗೆ ಬಾರದ ಆದರೆ ಭೂಕಂಪ ಮಾಪಕಗಳು ಪತ್ತೆ ಹಚ್ಚಬಲ್ಲ ಲಘು ಭೂಕಂಪಗಳ ತೀವ್ರತೆ ರಿಕ್ಟರ್ ಮಾನಕದಲ್ಲಿ ಎರಡು ಅಥವಾ ಅದಕ್ಕಿಂತ ಕಡಿಮೆ ಅಂಕೆಯವು. ಗಂಭೀರ ಮತ್ತು ಹಾನಿ ಉಂಟುಮಾಡಬಲ್ಲ ಭೂಕಂಪಗಳ ತೀವ್ರತೆ ಐದು ಅಥವಾ ಅದಕ್ಕಿಂತ ಹೆಚ್ಚು ಅಂಕೆಯವು. ಏಳಂಕಿಯ ಮೇಲಿನ ಭೂಕಂಪಗಳೆಲ್ಲವೂ ಅಪಾರ ವಿನಾಶ ತರುತ್ತವೆ. ಹೈಟಿಯಲ್ಲಿ ಸಂಭವಿಸಿದ ಭೂಕಂಪ 7.8 ರಿಕ್ಟರ್ ಅಂಕೆಯದು, ಎಂದೇ ಅದು ಊಹನೆಗೂ ಮೀರಿದ ಪ್ರಹಾರವನ್ನು ಕ್ಷಣ ಮಾತ್ರದಲ್ಲಿ ನೀಡಿದೆ. 2004ರಲ್ಲಿ ಸುನಾಮಿಯನ್ನು ಸೃಷ್ಟಿಸಿದ ಭೂಕಂಪ ತೀವ್ರತೆ 8.5 ರಿಕ್ಟರ್ ಇತ್ತು.

ಭೂಕಂಪ ಇಂಥ ಕಡೆ, ಈ ಹೊತ್ತಿನನಲ್ಲಿ ಸಂಭವಿಸುತ್ತದೆಂದು  ನಿಖರವಾಗಿ ಹೇಳಲು ನಮಗಿನ್ನೂ ಸಾಧ್ಯವಾಗಿಲ್ಲ. ಏಕೆಂದರೆ ಶಿಲಾ ಪದರಗಳಲ್ಲಿ ಒತ್ತಡ ಹೇರುತ್ತ ಯಾವಾಗ ಅದು ಮಿತಿಯನ್ನು ದಾಟಿ ಪದರ ಕುಸಿಯುತ್ತದೆಂದು ಹೇಳುವುದು ಬಲು ಕಷ್ಟವಾದದ್ದು. ಆದರೂ ಪ್ರಯತ್ನ ಸಾಗಿದೆ. ಪ್ರಬಲ ಭೂಕಂಪ ಸಂಭವಿಸುವ ಮೊದಲು ಹಲವು ಲಘು ಭೂಕಂಪ ಸಂಭವಿಸುವುದು, ಪ್ರಾಣಿಗಳು ಅಸಹಜವಾಗಿ ವರ್ತಿಸುವುದು,  ಶಿಲಾಪದರಗಳಲ್ಲಿ ವಿದ್ಯುದ್ವಾಹಕತೆಯಲ್ಲಿ ಏರಿಳಿತವಾಗುವುದು, ರೇಡಾನ್ ಎಂಬ ಅನಿಲದ ಸಾಂದ್ರತೆಯಲ್ಲಿ ಬದಲಾವಣೆ ಉಂಟಾಗುವುದು, ಭೂಮಿಯ ಅಯಾನ್ ಗೋಳದಲ್ಲಿ ಸಂಭವಿಸುವ ಪ್ರಕ್ಷುಬ್ದತೆ… ಹೀಗೆ ಹತ್ತು ಹಲವು ಮಾಹಿತಿಗಳನ್ನು ಒಟ್ಟೈಸಿ ಭೂಕಂಪದ ಮುನ್ಸೂಚನೆ ನೀಡುವ ಪ್ರಯತ್ನವನ್ನು ಮಾಡುತ್ತಾರೆ ಭೂವಿಜ್ಞಾನಿಗಳು.

ವಿಶ್ವದಂತರಾಳದ ವೈಚಿತ್ರ್ಯವನ್ನು ಅನಾವರಣ ಮಾಡುತ್ತಿರುವ ಹೊತ್ತಿನಲ್ಲಿಯೇ ನೆಲದಾಳದ ನಡುಕದ ವೈಚಿತ್ರ್ಯ ನಮಗಿನ್ನೂ ಸರಿಯಾಗಿ ಅರ್ಥವಾಗಿಲ್ಲ. ಒಂದಲ್ಲ ಒಂದು ದಿನ ಭೂ ಗರ್ಭದ ಈ ವಿದ್ಯಮಾನದ ಪರಿಪೂರ್ಣ ಚಿತ್ರ ಲಭ್ಯವಾಗುವ ಭರವಸೆ ತಾಳುತ್ತಾರೆ ಭೂ ವಿಜ್ಞಾನಿಗಳು. ಅಂದು ಪ್ರಾಯಶ: ವಸುಂಧರೆಯ ನಡುಕ ತರುವ ದಾರುಣ ರಾದ್ಧಾಂತಗಳಿಂದ  ಮನುಕುಲ ಒಂದಿಷ್ಟು ಮುಕ್ತವಾಗಬಹುದು.