ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ. ಇಡೀ ಆರೋಗ್ಯ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸುವ ತಾಕತ್ತಿರುತ್ತದೆ. ಮಾಡಬೇಕಿರುವುದೇ ಇಷ್ಟೆ; ಮೆಡಿಕಲ್ ಶಿಕ್ಷಣವನ್ನು ತಳವರ್ಗದವರೂ ಓದುವಂತಾಗಬೇಕು.
ಡಾ.ಲಕ್ಷ್ಮಣ ವಿ.ಎ. ಅಂಕಣ

 

ಭಾರತದಲ್ಲಿ ಪ್ರತಿ ಹನ್ನೆರಡು ನಿಮಿಷಕ್ಕೊಬ್ಬ ಗರ್ಭಿಣಿ ಪ್ರಸವ ಸಂದರ್ಭಗಳಲ್ಲಿ ಮರಣಹೊಂದುತ್ತಾಳೆ. ಪ್ರತಿ ವರುಷ ಮೂರು ಲಕ್ಷ ಹಸುಗೂಸುಗಳು ಈ ಜಗತ್ತನ್ನು ನೋಡುವ ಮುಂಚೆಯೇ ಕಣ್ಣುಮುಚ್ಚುತ್ತವೆ. ಲಕ್ಷಾಂತರ ಮಕ್ಕಳು ತಮ್ಮ ಮೊದಲ ಜನ್ಮ ದಿನ ಆಚರಿಸುವ ಮುನ್ನವೇ ಮರಣಹೊಂದುತ್ತವೆ. ಪ್ರತಿ ವರ್ಷ 5.2 ಮಿಲಿಯನ್ ಗರ್ಭಿಣಿಯರ ಪೈಕಿ 15 ಪ್ರತಿಶತ ಗರ್ಭಿಣಿಯರಿಗೆ ಸಿಜೇರಿಯನ್ ಸೆಕ್ಷನ್ ಅನಿವಾರ್ಯವಿರುತ್ತದೆ. ಇದಕ್ಕಾಗಿ ಕನಿಷ್ಠ ಎರಡು ಲಕ್ಷ ಗೈನಾಕಾಲಾಜಿಷ್ಟ್ ಗಳು ಬೇಕಾಗುತ್ತಾರೆ. ಆದರೆ ಲಭ್ಯವಿರುವರುವುದು ಮಾತ್ರ ಕೇವಲ ಐವತ್ತು ಸಾವಿರ ಹೆರಿಗೆ ತಜ್ಞರು! ಈ ಐವತ್ತುಸಾವಿರ ಜನರಲ್ಲಿ ಅರ್ಧದಷ್ಟು ಜನ ಪ್ರಾಕ್ಟೀಸ್ ಮಾಡುವುದಿಲ್ಲ, ಉಳಿದ ಇಪ್ಪತ್ತೈದು ಸಾವಿರ ತಜ್ಞರು ನಗರಗಳಲ್ಲೇ ವಾಸಿಸುವುದರಿಂದ 5.2 ಮಿಲಿಯನ್ ಗಳಲ್ಲಿ ಶೇಕಡಾ ಅರವತ್ತು ಹೆರಿಗೆಗಳು ಗ್ರಾಮೀಣ ಪ್ರದೇಶಗಳಲ್ಲಾಗುವುದರಿಂದ ಪ್ರಸವ ಸಂದರ್ಭಗಳಲ್ಲಿ ಸಾವಿನ ಪ್ರಮಾಣ ಕಡಿಮೆಮಾಡಲು ಆಗುತ್ತಿಲ್ಲ.
ಇದಕ್ಕೆಲ್ಲಾ ಕಾರಣಗಳೇನು?

ಒಂದು ಆದರ್ಶ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಉಚಿತ ಸಿಗಬೇಕಾಗಿರುವುದು ಅವಶ್ಯಕವಾಗಿರುತ್ತದೆ. ಆದರೆ ಈಗ ಆಗುತ್ತಿರುವುದೇನು? ವೈದ್ಯಕೀಯ ಶಿಕ್ಷಣವೆಂಬುದು ಕೇವಲ ಉಳ್ಳವರ ಪಾಲಿನ ಆಡೊಂಬಲದಂತಾಗಿರುವುದು. ಇತ್ತೀಚಿಗೆ ನನ್ನ ಪರಿಚಿತ ಶ್ರೀಮಂತ ರೋಗಿಯೊಬ್ಬರು ತಮ್ಮ ಮಗಳನ್ನು ಒಂದೂವರೆ ಕೋಟಿ ರೂಪಾಯಿ ಕೊಟ್ಟು ಪ್ಯಾಕೇಜಿನಲ್ಲಿ ಎಮ್ ಬಿ ಬಿ ಎಸ್ ಅಡ್ಮಿಷನ್ ಮಾಡಿದೆನೆಂದು ಹೆಮ್ಮೆಯಿಂದ ಹೇಳಿಕೊಂಡಾಗ ನಿಜಕ್ಕೂ ಗಾಬರಿಯಾಗಿದ್ದೆ. ಐದೂವರೆ ವರ್ಷಗಳ ಈ ಮೆಡಿಕಲ್ ಡಿಗ್ರಿ ಮುಗಿಸುವ ಹೊತ್ತಿಗೆ ಕನಿಷ್ಠವೆಂದರೂ ಫೀಜು, ಖರ್ಚು, ವೆಚ್ಚ ಸೇರಿ ಮತ್ತೆ ಒಂದೂವರೆ ಕೋಟಿ ರೂಪಾಯಿಯಾಗುತ್ತದೆ. ಮತ್ತೆ ಪಿ ಜಿ specialisation ಎಂದು ಡೊನೇಷನ್ ಕೂಡ ಕೋಟಿ ಲೆಕ್ಕದಲ್ಲೇ ನಡೆಯುತ್ತದೆ. ಹೀಗೆ ಕೋಟಿಯಾಟದ ಕಾಂಚಾಣದ ಕುಣಿತ ಮುಗಿಸಿ ಕಾಲೇಜಿನಿಂದ ಹೊರಗೆ ಬಂದ ಪದವೀಧರರು ಸಹಜವಾಗಿ ನಗರಗಳಲ್ಲೇ ತಮ್ಮ ಠಿಕಾಣಿ ಹೂಡುವುದು. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿ ಈ ಮೆಡಿಕಲ್ ಓದುವ ಕನಸನ್ನು ಕಾಣಲು ಸಾಧ್ಯವೇ?

ನಾರಾಯಣ ಹೃದಯಾಲಯದ ವೈದ್ಯರಾದ ದೇವಿಶೆಟ್ಟಿಯವರ ಪ್ರಕಾರ ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ. ಇಡೀ ಆರೋಗ್ಯ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸುವ ತಾಕತ್ತಿರುತ್ತದೆ. ಮಾಡಬೇಕಿರುವುದೇ ಇಷ್ಟೆ; ಮೆಡಿಕಲ್ ಶಿಕ್ಷಣವನ್ನು ತಳವರ್ಗದವರೂ ಓದುವಂತಾಗಬೇಕು.

ಈ ಮಾತನ್ನು ಏಕೆ ಹೇಳಬೇಕಾಯಿತೆಂದರೆ ಭಾರತ ಗ್ರಾಮೀಣ ಯುವಕ ಯುವಕರಲ್ಲೊಂದು ಸದಾ ಏನಾದರೊಂದು ಸಾಧನೆ ಮಾಡಬೇಕೆನ್ನುವ ಅದಮ್ಯ ತುಡಿತವಿರುತ್ತದೆ. ಬತ್ತಲಾರದ ಉತ್ಸಾಹದ ಸೆಲೆ ಇರುತ್ತದೆ. ಇಂತಹ ಬಡತನದಿಂದಲೇ ಬಂದ ಅನೇಕ ವೈದ್ಯರು ನಮ್ಮ ಕಣ್ಣೆದಿರು ಮಾದರಿಯಾಗಿ ಪ್ರಾತಃ ಸ್ಮರಣೀಯರಾಗಿದ್ದಾರೆ.

ಕೋಟಿಯಾಟದ ಕಾಂಚಾಣದ ಕುಣಿತ ಮುಗಿಸಿ ಕಾಲೇಜಿನಿಂದ ಹೊರಗೆ ಬಂದ ಪದವೀಧರರು ಸಹಜವಾಗಿ ನಗರಗಳಲ್ಲೇ ತಮ್ಮ ಠಿಕಾಣಿ ಹೂಡುವುದು. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿ ಈ ಮೆಡಿಕಲ್ ಓದುವ ಕನಸನ್ನು ಕಾಣಲು ಸಾಧ್ಯವೇ?

ಡಾ.ಎಸ್ ಜೆ. ನಾಗಲೋಟಿ ಮಠ ತಮ್ಮ “ಬಿಚ್ಚಿದ ಜೋಳಿಗೆ” ಎಂಬ ಆತ್ಮಕಥನದಲ್ಲಿ ತಾವು ನಡೆದ ಬಂದ ದಾರಿಯ ಬಗ್ಗೆ ಓದುವಾಗ ಎಂತಹವರ ಕರಳೂ ಕ್ಷಣ ಕರಗುತ್ತದೆ. ಕಣ್ಣು ತೇವವಾಗುತ್ತವೆ. ಮುಂದೆ ಇದೇ ವ್ಯಕ್ತಿ ಇಡೀ ವಿಶ್ವವೇ ನಿಬ್ಬೆರಗಾಗುವಂತಹ ಸಾಧನೆ ಮಾಡುತ್ತಾರೆ. ಬೆಳಗಾವಿ ಕೆ.ಎಲ್.ಇ ಮೆಡಿಕಲ್ ಕಾಲೇಜಿನ ಮೆಡಿಕಲ್ ಮ್ಯೂಜಿಯಮ್ ವಿಶ್ವದ ಗಮನಸೆಳೆಯುತ್ತದೆ.

ಮೊನ್ನೆ ಚಂದ್ರಯಾನ ವಿಫಲವಾದಾಗ ಡಾ.ಕೆ ಶಿವನ್ ಎಂಬ ಕುಳ್ಳಗಿನ ಕಪ್ಪಗಿನ ವಿಜ್ಞಾನಿಯೊಬ್ಬರು ದಿನ ಬೆಳಗಾಗುವಷ್ಟರಲ್ಲಿ ವಿಶ್ವದ ಜನರ ಪಾಲಿನ ಹೀರೋ ಆದರು.. ಚಂದ್ರಯಾನ ವಿಫಲವಾಗಿರಬಹುದು, ಆದರೆ ಒಂದು ವಿಫಲಯೋಜನೆಗೂ ಒಂದು ಸಂಸ್ಥೆಯ ಬೆನ್ನು ತಟ್ಟಿ ಒಬ್ಬ ವ್ಯಕ್ತಿ ಗೆ ಸ್ವತಃ ದೇಶದ ಪ್ರಧಾನಿಗಳು ತಮ್ಮ ಎಲ್ಲ ಪ್ರೋಟೋಕಾಲ್ ಮುರಿದು ಸಂತೈಸುವಿಕೆಯಿದೆಯಲ್ಲ ಅದನ್ನು ನೋಡಿದ ಪ್ರತೀ ಭಾರತೀಯನ ಕಣ್ಣಾಲಿಗಳು ತೇವವಾಗಿದ್ದು ಬದಲಾದ ಭಾರತಕ್ಕೆ ಸಾಕ್ಷಿಯಾಗಿದೆ. ಮತ್ತು ಈ ಶಿವನ್ ಎಂಬ ಸ್ಪೇಸ್ ಮಾಂತ್ರಿಕ once again ಒಬ್ಬ ಬಡ ರೈತನ ಮಗ, ಡಿಗ್ರೀಗೆ ಬರುವ ತನಕ ಇವರ ಕಾಲುಗಳಲ್ಲಿ ಚಪ್ಪಲೀ ಇರಲಿಲ್ಲ. ಪಿ ಜಿ ಮಾಡುವಾಗ ಮಾತ್ರ ತಮ್ಮ ಸಾಂಪ್ರದಾಯಿಕ ಧೋತಿ ಬದಲಿಗೆ ಮೊಟ್ಟ ಮೊದಲ ಬಾರಿಗೆ ಪ್ಯಾಂಟು ತೊಟ್ಟವರು. ಅಪ್ಪ ಬೆಳೆಯುವ ಮಾವಿನ ತೋಟದಲ್ಲಿ ಮಾವಿನ ಕಟಾವಿಗೆ ಸಹಾಯವಾಗಲೆಂದೇ ಊರ ಹತ್ತಿರದ ಕಾಲೇಜು ಸೇರಿಕೊಂಡವರು. ಕಾಲೇಜಿನ ಫೀಜು ಕಟ್ಟಲು ಮಾವಿನ ಫಸಲು ಬರುವ ತನಕ ಕಾಯಬೇಕೆಂದು ಕಾಲೇಜಿನಲ್ಲಿ ವಿನಂತಿಸಿಕೊಂಡವರು.

ದೇಶದ ಇತಿಹಾಸದಲ್ಲಿ ಇಂತಹ ಅನೇಕ ವಿಜ್ಞಾನಿಗಳ ಹೆಸರು ಸೇರಿಸಬಹುದು. ದೇಶ ಕಂಡ ಅಗ್ನಿಯ ರೆಕ್ಕೆಯ ಅಬ್ದುಲ್ ಕಲಾಂ ಕೂಡ ರಾಮೇಶ್ವರದ ಬೀದಿಗಳಲ್ಲಿ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಮನೆ ಮನೆಗೆ ಪತ್ರಿಕೆ ಹಂಚಿದವರು.

ವಿಜ್ಞಾನ ಮಾತ್ರವಲ್ಲ ಕನ್ನಡ ಸಾಹಿತ್ಯದ ಮೇರು ಪ್ರತಿಭೆಗಳೂ ಕೂಡ ಇಂತಹ ಬಡತನದಲ್ಲಿ ಬೆಂದರೆ ಮಾತ್ರ ಬೇಂದ್ರೆಯವರಾಗುವ ದಂತಕಥೆಗಳೇ ಇವೆ. ಭೈರಪ್ಪನವರು, ದೇವನೂರು ಮಹಾದೇ,ವ ಸಿದ್ಧಲಿಂಗಯ್ಯ… ನೀವು ಹೆಸರಿಸುತ್ತ ಹೋಗಿ.

“ಕೊಂಡು ತಂದು ಹೊತ್ತು ಮಾರಿ ಲಾಭ ಗಳಿಸಲು ವಿದ್ಯೆಯೇನು ಬಳೆಯ ಮಲಾರವೇ” ಎಂಬ ಅಜಿತ್ ಸೇನಾಚಾರ್ಯರ ಕಿಡಿನುಡಿಯೊಂದು ಮುಂದೆ ರನ್ನನ ಗದಾಯುದ್ಧ ದಂತಹ ಕೃತಿ ರಚನೆಗೆ ಸಾಧ್ಯವಾಗಬಹುದೆಂದು ಯಾರು ಊಹಿಸಿದ್ದರು?

ಯಾರಿಗೆ ಗೊತ್ತು ಯಾರ ಎದೆಯಲ್ಲಿ ಎಷ್ಟು ಬೆಂಕಿಯಿದೆಯೆಂದು, ಎದೆಯ ಬೆಂಕಿಯನ್ನೇ ಬೆಳಕಾಗಿಸಿಕೊಂಡವರು ಎಸೆದ ಕಲ್ಲುಗಳನ್ನೇ ಮೆಟ್ಟಿಲುಗಳಾಗಿಸಿಕೊಂಡವರು, ಕತ್ತಲ ಗರ್ಭದಲ್ಲಿ ಅದೆಷ್ಟು ಬೆಳಕಿನ ಬೀಜಗಳಿವೆಯೆಂಬುದು? ಒಂದಿಲ್ಲೊಂದು ದಿನ ಈ ಅಗ್ನಿಯಿಂದ ಎದ್ದ ಬೆಳಕು ಜಗತ್ತನ್ನು ಬೆಳಗಲಿದೆ.

ಡಿಯರ್ ಶಿವನ್ ಸರ್ ಚಂದ್ರನ ತಲುಪಲು ಎರಡೂವರೆ ಸಾವಿರ ಕಿ.ಮಿ.ದೂರ ಕ್ರಮಸಿದ್ದೀರಿ. ಇನ್ನು ಎರಡು ಕಿ.ಮಿ ಯಾವ ಲೆಕ್ಕ? ಭಾರತ ನಿಮ್ಮೊಂದಿಗಿದೆ. ಇಂದು ಕತ್ತಲಾಗಿರಬಹುದು ನಾಳೆ ಬೆಳಕು ಬಂದೇ ಬರುತ್ತದೆ.