ತಿರುಮಲೇಶರು ತಮಗೆ ಇರುವ ಅಪಾರ ಓದನ್ನು ಪ್ರತಿಪಾದನೆಯ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಅಪಾರ ಓದು ಅವರಿಗೆ ಎಲ್ಲಿಯೂ ಪ್ರದರ್ಶನದ ಸಂಗತಿ ಆಗಿಲ್ಲ. ಅಗತ್ಯವಿಲ್ಲದ ಸೈದ್ಧಾಂತಿಕ ನೆಲೆಗಳಲ್ಲಿ ಅವರು ಪ್ರತಿಪಾದನೆಯನ್ನು ಸಿಕ್ಕಿ ಹಾಕಿಸುವುದೂ ಇಲ್ಲ. ಯಾವುದರ ಅಗತ್ಯ ಎಷ್ಟು ಎಂದು ಅರಿತು ಬಳಸುತ್ತಾರೆ. ಎಂ.ಎನ್.ಶ್ರೀರಾಮ್ ಅವರ ಕುರಿತು ಬರೆಯುವಾಗ ‘ಮ್ಯಾಜಿಕ್ ರಿಯಲಿಸಂ’ ಬಳಸುವುದು ಅವರಿಗೆ ಅಗತ್ಯ ಎನ್ನಿಸಿದೆ. ಹೀಗಾಗಿ ಅದರ ಪರಂಪರೆ ಹೇಳುವ ಮೂಲಕ ಶ್ರೀರಾಮ್ ಅವರ ಕಥೆಗೆ ಪ್ರವೇಶ ಒದಗಿಸುತ್ತಾರೆ.
ಇಂದು ಕೆ.ವಿ.ತಿರುಮಲೇಶರಿಗೆ ಎಂಭತ್ತರ ಹುಟ್ಟುಹಬ್ಬದ ಸಂಭ್ರಮ. ಅದರ ಪ್ರಯುಕ್ತ ಎನ್.ಎಸ್.ಶ್ರೀಧರಮೂರ್ತಿ ಬರೆದ ಲೇಖನ ನಿಮ್ಮ ಓದಿಗೆ

 

-1-

ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ ‘ನಮಸ್ಕಾರ’ ಕೃತಿಯ ‘ತಿರುಮಲೇಶರ ಲೋಕದೃಷ್ಟಿ-ಕೆಲವು ಅನಿಸಿಕೆಗಳು ಲೇಖನದಲ್ಲಿ ‘ಅವರದು ತನ್ನ ಸಂಸ್ಕೃತಿಯಲ್ಲಿ ಬೇರೂರಿ ಬೇರೆ ಕಡೆ ಸಂಚಾರಿಯಾದ ಮನೋಧರ್ಮ. ತಿರುಮಲೇಶರಿಗೆ ಹಾಗೆ ತವರು ಮನೆಯಿಲ್ಲ. ಹಾಗೊಮ್ಮೆ ಇದ್ದರೆ ಅದು ಕನ್ನಡ ಭಾಷೆಯ ಅಂತರಿಕ ಸಾಧ್ಯತೆಗಳು ಮಾತ್ರ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಬಹು ಮಟ್ಟಿಗೆ ಒಪ್ಪಿ ಕೊಳ್ಳುವ ಎಸ್.ಆರ್.ವಿಜಯಶಂಕರ್ ‘ತವರು ಮನೆ ಇಲ್ಲ ಎನ್ನುವುದು ಸಾಂಸ್ಕೃತಿಕ ಹೇಳಿಕೆ’ ಎನ್ನುತ್ತಾರೆ.

ಲೇಖನದ ಆರಂಭದಲ್ಲಿಯೇ ನಾನು ಈ ಪ್ರಸ್ತಾಪವನ್ನು ಮಾಡುವುದಕ್ಕೆ ಕಾರಣವಿದೆ. ತಿರುಮಲೇಶರು ಕನ್ನಡ ಪರಂಪರೆಯಲ್ಲಿ ಎಲ್ಲಿ ನಿಲ್ಲುತ್ತಾರೆ? ಎಂಬ ಪ್ರಶ್ನೆ ಬಂದರೆ ಅವರು ಪರಂಪರೆಗಿಂತ ಬೇರೆ ಇದ್ದಾರೆಯೋ ಅಥವಾ ಅದರ ಭಿನ್ನ ಶಾಖೆಯಾಗಿದ್ದರೋ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಸರಳವಾದ ಉತ್ತರವಿಲ್ಲ. ವಸ್ತು-ಭಾಷೆ-ವ್ಯಕ್ತಿ ಇವುಗಳ ನಡುವೆ ಇರುವ ಸಂಬಂಧವನ್ನು ಹೇಗೆ ಗ್ರಹಿಸಬೇಕು ಎನ್ನುವುದು ತಿರುಮಲೇಶರ ಒಟ್ಟು ಬರವಣಿಗೆಯಲ್ಲಿ ಮತ್ತೆ ಮತ್ತೆ ಕೇಳಿ ಬರುವ ಪ್ರಶ್ನೆ.

ವ್ಯಕ್ತಿಯ ಚಿಂತನೆಗಳು ಅಂದರೆ ಅದು ಸಮುದಾಯದ ಚಿಂತನೆಗಳಿಗಿಂತ ಭಿನ್ನವೇ? ಹಾಗೆ ಭಿನ್ನವಾದರೆ ಸಮುದಾಯದಿಂದ ಪ್ರಭಾವಿತವಾಗಿಲ್ಲವೆ? ಹಾಗೆ ವ್ಯಕ್ತಿ-ಸಮುದಾಯದಿಂದ ಮೂಡಿದ ಭಾವವನ್ನು ಭಾಷೆ ಹೇಗೆ ಹಿಡಿದಿಡುತ್ತದೆ? ಸಮುದಾಯದ ಭಾಷೆ ವ್ಯಕ್ತಿಯ ಅಂತರಂಗದ ತುಮುಲವನ್ನು ಹೇಳಬಲ್ಲದೆ? ಹೀಗೆ ವ್ಯಕ್ತಿ-ಭಾಷೆಯ ಸಮೀಕರಣದಲ್ಲಿ ಸಲ್ಲುವ ವಸ್ತು ವ್ಯಕ್ತಿಯದೋ ಅಥವಾ ಸಮುದಾಯದೋ? ಇದು ಅವರ ಬರಹಗಳಲ್ಲಿ ಮತ್ತೆ ಮತ್ತೆ ಕೇಳಿ ಬರುವ ಪ್ರಶ್ನೆ. ‘ಎಲ್ಲಾ ವಸ್ತುಗಳೂ ಮೂಲದಲ್ಲಿ ಒಂದೇ, ವ್ಯತ್ಯಾಸವೆಂದರೆ ಶಬ್ಧ’ ಎಂದು ಕೂಡ ತಿರುಮಲೇಶ್ ಹೇಳುತ್ತಾರೆ.

ಸಮುದ್ರದ ದಡದಲ್ಲಿ ಮರಳ ಕಣ ಕಂಡಂತೆ, ಮರಳ ಕಣದಲ್ಲಿಯೂ ಸಮುದ್ರ ಕಾಣುವ ಚಿಂತನಾ ಕ್ರಮ ತಿರುಮಲೇಶರದು. ಅವರಿಗೆ ಹೀಗಾಗಿ ಸಾಮಾನ್ಯತೆಯಲ್ಲಿಯೇ ಅಸಾಮಾನ್ಯತೆ ಕಾಣುತ್ತದೆ. ಮನುಷ್ಯನ ಪ್ರಜ್ಞೆಯಲ್ಲಿ ಸಾಮಾನ್ಯ ಎನ್ನುವುದು ಅಸಾಮಾನ್ಯವಾಗಿ ಬಿಡುತ್ತದೆ. ಅಸಾಮಾನ್ಯವಾದದ್ದು ಸಾಮಾನ್ಯವಾಗಿ ಬಿಡುತ್ತದೆ. ಅದು ಸಾಪೇಕ್ಷ ಕೂಡ ಆಗುತ್ತದೆ. ‘ಕೆಲವು ರೀತಿಗಳು ಹಳತಾಗಿದ್ದರೇ ಒಳ್ಳೇದು ಆಕಾಶದ ಹಾಗೆ’ಎನ್ನುತ್ತಾರೆ ತಿರುಮಲೇಶ್. ಅವರದು ಹಲವನ್ನು ಏಕ ಕಾಲದಲ್ಲಿ ಹಿಡಿಯುವ ಪ್ರಯತ್ನ. ಸಿಕ್ಕಿದ್ದು ಎನ್ನುವುದೂ ಸಾಪೇಕ್ಷ ಎನ್ನುವ ಚಿಂತನೆ ‘ಗದ್ಯದಲ್ಲಿಯೂ ಪದ್ಯದಲ್ಲಿಯೂ ಸಲ್ಲಬಲ್ಲ ಉಭಯ ಸಮಾನ ಶೈಲಿಯ ತಿರುಮಲೇಶ್ ಹಲವನ್ನು ಒಂದೇ ಸಲ ಹಿಡಿದು ಹಾಕಲು ಬಯಸಿ ಒಂದೂ ಸರಿಯಾಗಿ ಸಿಕ್ಕದ ಚೇತನ’ ಎನ್ನುತ್ತಾರೆ ಓ.ಎಲ್.ನಾಗಭೂಷಣ ಸ್ವಾಮಿ. ಇದರಲ್ಲಿನ ಮೊದಲ ವಿಶ್ಲೇಷಣೆ ಒಪ್ಪಬಹುದಾದರೂ ಎರಡನೆಯದರ ಕುರಿತು ತಕರಾರು ಎತ್ತಬಹುದು. ಏಕೆಂದರೆ ತಿರುಮಲೇಶರ ಪ್ರಕಾರ ‘ಸಿಕ್ಕುವುದು’ಎನ್ನುವುದೇ ಸಾಪೇಕ್ಷ. ಸಿಕ್ಕದ ಎನ್ನುವ ಮಾತಿನಲ್ಲಿಯೇ ನಮಗೆ ಬೇಕಾದ್ದು ಎನ್ನುವ ಧೋರಣೆ ಇದೆ. ಯಾವ ಸಾಹಿತ್ಯವಾದರೂ ನಮಗೆ ಬೇಕಾದ್ದನ್ನು ಹಿಡಿಯದೆ ಹೋದರೆ ವ್ಯರ್ಥವಾಗುವುದಿಲ್ಲ. ನಮ್ಮ ಗ್ರಹಿಕೆ ವಿಸ್ತಾರವಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನನಗೆ ತಿರುಮಲೇಶ್ ಕನ್ನಡ ಪರಂಪರೆಯ ನೆಲೆಯಲ್ಲಿ ‘ಅನ್ಯ’ರಾಗಿ ಕಾಣುತ್ತಾರೆ ಹಾಗೆ ‘ಅನನ್ಯ’ರಾಗಿಯೂ ಕಾಣುತ್ತಾರೆ.

ತಿರುಮಲೇಶ್ ಅವರ ಕುರಿತ ಎರಡು ನೆನಪುಗಳು ಈ ಸಂದರ್ಭದಲ್ಲಿ ನನ್ನನ್ನು ಕಾಡುತ್ತಿವೆ. ಒಂದು, ಆಕಾಶವಾಣಿಯಲ್ಲಿ ಆರ್ಕೇವ್ಸ್ ಎಂಬ ಒಂದು ವಿಭಾಗವಿದೆ. ಅಲ್ಲಿ ಸಾಧಕರ ಕುರಿತು ನಾಲ್ಕು ಗಂಟೆಗಳ ಸಂದರ್ಶನ ಸ್ವರೂಪದ ಧ್ವನಿ ದಾಖಲಾತಿಯನ್ನು ರೂಪಿಸಲಾಗುತ್ತದೆ. ಇದಕ್ಕಾಗಿ ಕಳೆದ ಹತ್ತು ವರ್ಷಗಳಿಂದಲೂ ನಾನೂ ಸೇರಿದಂತೆ ಹಲವರು ಪ್ರಯತ್ನಿಸಿದರೂ ಅವರು ಒಪ್ಪುತ್ತಿಲ್ಲ. ಸ್ವತಃ ಕವಿಯೂ ಆಗಿದ್ದ ಜಿ.ಕೆ.ರವಿಂದ್ರ ಕುಮಾರ್ ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕರಾಗಿದ್ದಾಗಲೂ ತಿರುಮಲೇಶರನ್ನು ಒಪ್ಪಿಸಲು ಆಗಿರಲಿಲ್ಲ. ಅವರಿಗೆ ದಾಖಲಾತಿಯ ಕುರಿತೇ ಹಿಂಜೆರಿಕೆ ಇದ್ದ ಹಾಗೆ ಅನ್ನಿಸಿತು. ಇನ್ನೊಂದು ಕಳೆದ ವರ್ಷ ಅವರಿಗೆ ಮಾಸ್ತಿ ಪ್ರಶಸ್ತಿ ನೀಡಲಾಯಿತು. ನಮ್ಮ ಭಾರತೀಯ ವಿದ್ಯಾಭವನದಲ್ಲಿಯೇ ಕಾರ್ಯಕ್ರಮ. ತಿರುಮಲೇಶ್ ಯಾರ ಜೊತೆಗೋ ಬಂದಿದ್ದರು. ತಿಂಡಿಗೆ ಒಟ್ಟಿಗೆ ಹೋದೆವು. ಹಲವು ಮಾತುಗಳ ನಡುವೆ ಅವರನ್ನು ಕರೆ ತಂದವರು ಎಲ್ಲೊ ಮಾಯವಾದರು. ಕೂಡಲೇ ತಿರುಮಲೇಶ್ ನನ್ನ ಕೈಯನ್ನು ಗಟ್ಟಿಯಾಗಿ ಅದುಮಿ ‘ನೀವು ನನ್ನ ಜೊತೆಗೇ ಇರಿ, ನನಗೆ ಅಪರಿಚಿತರ ಜೊತೆ ಅನಗತ್ಯವಾಗಿ ಮಾತನಾಡುವುದು ಇಷ್ಟವಿಲ್ಲ’ ಎಂದರು. ನನಗೆ ಈ ಎರಡೂ ಸಂದರ್ಭಗಳು ಒಂದು ರೀತಿಯಲ್ಲಿ ಅವರ ತಾತ್ವಿಕತೆಗೆ ಪ್ರವೇಶ ಎನ್ನಿಸುತ್ತದೆ.

-2-

ತಿರುಮಲೇಶರ ಸಾಹಿತ್ಯದ ಕುರಿತ ಚರ್ಚೆಯನ್ನು ಅವರ ಕಾವ್ಯದಿಂದಲೇ ಆರಂಭಿಸಬಹುದು. ಅವರ ಬರವಣಿಗೆಯ ಪ್ರಮುಖ ಸ್ಥಾನದಲ್ಲಿ ನಿಲ್ಲುವುದೇ ಕಾವ್ಯ. ತನ್ನ ಅನುಭವ ತನ್ನದೇ ಎನ್ನುವುದು ಅವರ ಮೊದಲ ಸಂಕಲನದಿಂದಲೂ ಕಾಣುವ ಪ್ರಶ್ನೆ. ಕಲ್ಲಾಗಿ ಬೀಳುವ ಸ್ಥಿತಿಯಲ್ಲೇ ಬೆಳಕಿನ ಮುಖ, ಮಣ್ಣಿನ ಮುಖಗಳ ನಡುವೆ ದಾರಿ ಹುಡುಕುವ ಮಾತು ಇಲ್ಲಿ ಬರುತ್ತದೆ. ಪರಂಪರೆಯಿಂದ ಬಿಡಿಸಿಕೊಳ್ಳಬೇಕು ಎನ್ನುವುದು ಅವರಿಗೆ ಉದ್ವಿಗ್ನತೆ ಅಲ್ಲ, ಬದಲಾಗಿ ಅನಿವಾರ್ಯತೆ. ‘ಶ್ರೀ ಕೂಮಂ ಭಟ್ಟರ ಕಾವ್ಯವಿಳಾಸ’ ಈ ಹಿನ್ನೆಲೆಯಲ್ಲಿ ಕುತೂಹಲಕರ ಪ್ರಯೋಗ. ‘ಮಹಾ ಪ್ರಸ್ತಾನ’ ಕವಿತೆ ಪರಂಪರೆಯನ್ನು ತಾತ್ವಿಕವಾಗಿ ನೋಡುತ್ತಲೇ ಅದರಿಂದ ಬಿಡಿಸಿಕೊಳ್ಳಲು ಹೆಣಗುತ್ತದೆ. ಎಲ್ಲವನ್ನೂ ಅನ್ವೇಷಿಸಿಯೇ ಪಡೆಯಬೇಕು ಎನ್ನುವ ಧ್ವನಿ ಇಲ್ಲಿ ಎದ್ದು ಕಾಣುತ್ತದೆ. ಇದು ಒಂದು ರೀತಿಯಲ್ಲಿ ತಾತ್ವಿಕತೆಯನ್ನು ಸಂಗ್ರಹಿಸುವ ಪ್ರಯೋಗ ಕೂಡ ಹೌದು. ‘ಅನುಭವಗಳು ಕಾವ್ಯಕ್ಕೆ ಅಗತ್ಯವಾದರೂ ಅನುಭವಗಳೇ ಕಾವ್ಯವಲ್ಲ’ ಎನ್ನುವ ವಿಚಾರವನ್ನೂ ತಿರುಮಲೇಶ್ ಈ ಸಂದರ್ಭದಲ್ಲಿ ಮಂಡಿಸುತ್ತಾರೆ. ಅನುಭವ ಯಾವುದೇ ರೂಪಕದ ಮಾದರಿಯಲ್ಲಿ ಬೆಳೆದರೂ ಅದು ವೈಯಕ್ತಿಕ ಗ್ರಹಿಕೆಯಿಂದ ಎಷ್ಟರ ಮಟ್ಟಿಗೆ ಬಿಡಿಸಿ ಕೊಳ್ಳುತ್ತದೆ. ಸಾರ್ವತ್ರಿಕ ಗ್ರಹಿಕೆಗಳನ್ನು ಹೇಗೆ ಪಡೆಯುತ್ತದೆ? ಸಾರ್ವತ್ರಿಕ ಎನ್ನುವುದೂ ಕೂಡ ಯಾವ ಅರ್ಥದಲ್ಲಿ ಸಾರ್ವತ್ರಿಕ ಇದು ನನಗೆ ಇಲ್ಲಿ ಕಾಣುತ್ತಿರುವ ಪ್ರಶ್ನೆ. ಅವರ ಮುಂದಿನ ಕಾವ್ಯದ ಪ್ರಯೋಗಶೀಲತೆಗೆ ಇಲ್ಲಿಯೇ ಮೂಲ ಸೆಲೆಗಳು ಕಾಣುತ್ತವೆ. ಅಡಿಗರ ಕಾವ್ಯಕ್ಕೆ ಅವರು ‘ಮುಖಾಮುಖಿ’ಯ ನಂತರವೇ ಪ್ರತಿಶೋಧಾತ್ಮಕ ನೆಲೆಯನ್ನು ಹುಡುಕಿದರು ಎನ್ನುವುದು ನಿಜವಾದರೂ ಮೊದಲ ಎರಡು ಸಂಕಲನಗಳಲ್ಲಿ ಸ್ಪಷ್ಟವಾಗಿ ಅನನ್ಯತೆಯ ಹಾದಿಯನ್ನು ಹುಡುಕುವ ಪ್ರಯತ್ನಗಳು ಕಾಣುತ್ತವೆ. ಅಡಿಗರ ಮಾರ್ಗದ ಮಿತಿಗಳ ಕುರಿತು ಸೃಜನಾತ್ಮಕವಾಗಿ ಚಿಂತಿಸಲು ಆರಂಭಿಸಿದವರಲ್ಲಿ ತಿರುಮಲೇಶರೇ ಮೊದಲಿಗರು ಎಂದು ಈ ಕಾರಣದಿಂದಲೇ ಹೇಳಬಹುದು.

‘ಮುಖಾಮುಖಿ’ಯಲ್ಲಿ ತಿರುಮಲೇಶರು ಬಹುಸ್ಪಷ್ಟವಾಗಿ ನವ್ಯರಿಗಿಂತ ಬೇರೆ ದಾರಿ ತುಳಿಯಲು ಪ್ರಜ್ಞಾಪೂರ್ವಕವಾಗಿ ತೊಡಗಿಕೊಂಡಿದ್ದನ್ನು ಗಮನಿಸಬಹುದು. ‘ಕನ್ನಡ ಕಾವ್ಯ ಕ್ಷೇತ್ರದಲ್ಲೀಗ ಹೊಸ ಸಾಧ್ಯತೆಗಳನ್ನು ಕಂಡು ಹಿಡಿಯುವುದು ಅಡಿಗೋತ್ತರರ ಕರ್ತವ್ಯ’ ಎಂದು ಸಾರಿದ್ದಾರೆ ಕೂಡ. ಎ.ಕೆ.ರಾಮಾನುಜನ್ ರಾಚನಿಕ ನೆಲೆಯಲ್ಲಿ ನವ್ಯರ ಪ್ರತಿಮಾ ವಿಧಾನವನ್ನು ದಾಟಲು ಪ್ರಯತ್ನಿಸಿದರು. ಆದರೆ ತಿರುಮಲೇಶ್ ಅದನ್ನು ತಾತ್ವಿಕ ನೆಲೆಯಲ್ಲಿ ಮಾಡಿದರು. ವೈಯಕ್ತಿಕತೆ, ಅನುಭವ, ಸಾಪೇಕ್ಷತೆ, ಭಾವನಾತ್ಮಕತೆ ಇವೆಲ್ಲದರ ನಡುವಿನ ಅಂತರವನ್ನು ಹಿಡಿಯಲು ತಿರುಮಲೇಶ್ ಅವರು ಮಾಡುವ ಪ್ರಯೋಗಗಳು ಕುತೂಹಲಕರವಾಗಿದೆ. ‘ಪೆಂಟಯ್ಯನ ಅಂಗಿ’ ಕವನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಇಲ್ಲಿ ಪೆಂಟಯ್ಯ, ಇದ್ದಿಲ ಅಂಗಡಿ, ಪೋಲೀಸ್ ಪಟೇಲ ಪ್ರತಿಮೆ ಆಗುವ ಹಾಗೆ ವಿವರಗಳೂ ಆಗುತ್ತವೆ. ಭಾವನಾತ್ಮಕ ನೆಲೆಗಳೂ ಆಗುತ್ತವೆ. ಹೀಗೆ ಈ ಕಾವ್ಯದ ಶಿಲ್ಪವೇ ಬಹಳ ಕೌತುಕಪೂರ್ಣವಾಗಿದೆ.‘ತಿರುವನಂತಪುರ’ ‘ನಗರ’ ‘ಒಂದು ಪೇಟೆ’ ‘ಒಂದು ಪಟ್ಟಣ’ ಮೊದಲಾದ ಕವಿತೆಗಳಲ್ಲಿ ಕೂಡ ಅದನ್ನು ಗಮನಿಸಬಹುದು. ‘ಒಂದು ಆಲದ ಮರ’ ಕವಿತೆಯನ್ನು ಅಡಿಗರ ‘ಅಜ್ಜ ನೆಟ್ಟಾಲ’ಕ್ಕೆ ಹೋಲಿಸಿ ಅನೇಕ ವಿಶ್ಲೇಷಣೆಗಳು ಈಗಾಗಲೇ ಬಂದಿವೆ. ನನಗೆ ಮುಖ್ಯವಾಗುವುದು ವಿವರಗಳಿಗಿಂತ ಅಡಿಗರ ಕಾವ್ಯದಲ್ಲಿ ಕಾಣುವ ಭಾವನಾತ್ಮಕ ನೆಲೆಗಳನ್ನು ಮೀರಿ ಸ್ಥಿತಪ್ರಜ್ಞೆಯನ್ನು ತಿರುಮಲೇಶರು ಸಾಧಿಸಿರುವ ಕ್ರಮ. ಇದರಿಂದ ಮೂರ್ತ ವಿವರಗಳ ಮೂಲಕವೇ ಅಮೂರ್ತತೆಯನ್ನು ಪಡೆಯುವುದು ಅವರಿಗೆ ಸಾಧ್ಯವಾಗಿದೆ. ಅವರಿಗೆ ಸ್ವಯಂಪೂರ್ಣ ಸಾಧ್ಯತೆಗಳನ್ನು ನೀಡುವುದು ಸಾವಯುವ ಸಮಗ್ರೀಕರಣಕ್ಕಿಂತ ಮುಖ್ಯವಾದದ್ದು.

ಅವರ ಪ್ರಸಿದ್ಧವಾದ ‘ಮುಖಾಮುಖಿ’ ಕವಿತೆಯಲ್ಲಿನ ನಿರೂಪಕ ಮತ್ತು ಬೆಕ್ಕಿನ ಮುಖಾಮುಖಿಯನ್ನು ವ್ಯಕ್ತಿ ಮತ್ತು ಸಮುದಾಯದ ಮುಖಾಮುಖಿಯನ್ನಾಗಿ ನೋಡಬಹುದು. ಅಷ್ಟೇ ಅಲ್ಲ ಸೂಕ್ಷ್ಮವಾಗಿ ಓದಿದರೆ ಬೆಕ್ಕನ್ನು ಕೂಡ ವ್ಯಕ್ತಿಯಾಗಿ ನೋಡಬಹುದು. ಇಲ್ಲಿ ಪ್ರತಿ ಹಂತದಲ್ಲಿ ಬೆಳವಣಿಗೆ ಕಾಣುವಂತೆ ಸ್ವಯಂಪೂರ್ಣತೆ ಕೂಡ ಕಾಣುತ್ತದೆ. ಮೂರು ಘಟಕಗಳೂ ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಚಿಂತನೆಗಳೂ ಕೂಡ ಹೌದು. ಇಲ್ಲಿನ ಪಂಥ ಅಥವಾ ಅಘೋಷಿತ ಯುದ್ಧ ಕೊನೆಗೊಳ್ಳುವುದು ‘ವಿಷಾದ’ದ ಜೊತೆಗೆ. ಇದನ್ನು ಸೋತು ಗೆದ್ದ ಬಾಹುಬಲಿ ವಿಷಾದಕ್ಕೆ ಹೋಲಿಸಬಹುದು. ಇಲ್ಲಿ ಇನ್ನೊಂದು ಕುತೂಹಲಕರ ಅಂಶವಿದೆ. ಬೆಕ್ಕು ಹೊರಟುಹೋದ ನಂತರ ಕೂಡ ನಿರೂಪಕನ ಕಣ್ಣಿನಲ್ಲಿ ಉಳಿದುಕೊಂಡಿದೆ. ಅಂದರೆ ಯುದ್ಧ ಮೂರ್ತವಾಗಿ ಮುಗಿದರೂ ಅಮೂರ್ತವಾಗಿ ಮುಂದುವರೆದಿದೆ. ನಾಯಕ ತಾತ್ವಿಕವಾಗಿ ಎಲ್ಲಿ ನಿಲ್ಲಬಹುದು ಎನ್ನುವುದು ಓದುಗರ ಮಿತಿಗೆ ಬಿಟ್ಟಿದೆ. ಅಂದರೆ ಯುದ್ಧ ಅವರ ಮಟ್ಟಿಗೆ ಮುಂದುವರೆದಿದೆ. ತಿರುಮಲೇಶ್ ಅಡಿಗರಿಗಿಂತ ಭಿನ್ನವಾಗಿ ತಮ್ಮ ಅನನ್ಯತೆಯನ್ನು ಕಂಡುಕೊಳ್ಳುವುದು ಇಂತಹ ನೆಲೆಗಳಲ್ಲೇ.

ಮೊದಲ ನಾಲ್ಕು ಸಂಕಲನಗಳಲ್ಲೂ(ಮುಖವಾಡಗಳು, ವಠಾರ, ಮಹಾಪ್ರಸ್ಥಾನ, ಮುಖಾಮುಖಿ) ತಿರುಮಲೇಶರ ಕಾವ್ಯ ಬಿಡುಗಡೆಗೆ ಹಾತೊರೆಯುತ್ತಿರುವುದನ್ನು ನಾವು ಗಮನಿಸಬಹುದು. ಅವರಿಗೆ ಅಮೂರ್ತವನ್ನು ಮೂರ್ತದ ಹಂಗಿಲ್ಲದೆ ಹಿಡಿಯುವ ಹಂಬಲವಿದೆ. ಹೀಗಾಗಿ ಅವರು ವಿವರಗಳನ್ನು ಹಂತ ಹಂತವಾಗಿ ಬಿಡುತ್ತಾ ಹೋಗುತ್ತಾರೆ, ಕಥಾತ್ಮಕತೆಯನ್ನು ಕಳಚಿಕೊಳ್ಳುತ್ತಾ ಬರುತ್ತಾರೆ. ಅನುಭವವನ್ನು ಸಾಪೇಕ್ಷತೆಯ ತಾಜಾತನದಲ್ಲಿಯೇ ಸವಾಲಿಗೆ ಸಿದ್ಧಗೊಳಿಸುತ್ತಾರೆ. ಒಟ್ಟಾಗಿ ವ್ಯಕ್ತಿ ಮತ್ತು ಸಮುದಾಯಕ್ಕೆ ಇರುವ ಪ್ರತ್ಯೇಕ ಅಸ್ವಿತ್ವ ಅದರ ನಡುವೆ ಏರ್ಪಡುವ ಸಂಬಂಧ ಮತ್ತು ಸಂಘರ್ಷ ಇಲ್ಲಿಯೇ ತಾತ್ವಿಕತೆಯನ್ನು ಅವರು ಹುಡುಕುತ್ತಾರೆ. ಬಿರುಕುಗಳ ಕುರಿತು ಅವರಿಗೆ ಇದ್ದ ಆಸಕ್ತಿ ಮುಂದಿನ ಕಾವ್ಯ ಯಾನದಲ್ಲಿ ಸ್ಪಷ್ಟತೆಯನ್ನು ಪಡೆಯುತ್ತಾ ಹೋಗಿದ್ದನ್ನೂ ಮುಂದಿನ ಸಂಕಲಗಳಲ್ಲಿ ಗುರುತಿಸಬಹುದು.

‘ಎಲ್ಲ ವಿಷಯಗಳೂ ಮೂಲದಲ್ಲಿ ಒಂದೇ ವ್ಯತ್ಯಾಸವೆಂದರೆ ಶಬ್ದ’ ಎನ್ನುವ ತಿರುಮಲೇಶ್ ಅವರ ‘ಅವಧ’ ವ್ಯಕ್ತಿ, ಸಮುದಾಯ ಮತ್ತು ಅಭಿವ್ಯಕ್ತಿಯನ್ನೂ ಹುಡುಕಾಟದ ನೆಲೆಯ ಸಮೀಕರಣಕ್ಕೆ ಸೇರಿಸುತ್ತದೆ. ತಿರುಮಲೇಶರ ಕಾವ್ಯ ಭೂಮಿಕೆ ಭಾರತೀಯ ನೆಲೆ ದಾಟಿ ವಿಸ್ತಾರಗೊಂಡಿದ್ದೂ ಕೂಡ ಈ ಸಂಕಲನದಲ್ಲಿಯೇ. ಹೆರಕ್ಲಟಿಸ್ ಅವರ ಆಸಕ್ತಿಯನ್ನು ಕೆರಳಿಸಿದ್ದಾನೆ. ಅವನು ಚಲನೆ-ಕಾಲ-ಕ್ರಿಯೆ ಮೂರರ ಕುರಿತು ಹೊಸ ಸಮೀಕರಣ ಗುರುತಿಸಿದ್ದಾನೆ. ತಿರುಮಲೇಶರ ಕವಿತೆಗಳಲ್ಲಿ ನಿರಂತರವಾಗಿ ಬರುವ ಬೆಕ್ಕು, ಇಲಿ, ಇರುವೆ, ಕರಡಿ, ಚಲಿಸುವ ರೈಲು ಎಲ್ಲದರಲ್ಲೂ ಈ ಸಮೀಕರಣದ ಪ್ರಭಾವ ಇರುವುದನ್ನು ನಾವು ಗಮನಿಸಬಹುದು. ‘ರಾಜಮಾರ್ಗ, ಒಳ ಮಾರ್ಗ’ ‘ಹಳೆಯ ಮಾರ್ಗ’ ಕವಿತೆಗಳಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಿದೆ.

ತಿರುಮಲೇಶರಿಗೆ ಇದೊಂದು ಹುಡುಕಾಟದ ಹಾಗೆ ಕಾಣಿಸುತ್ತದೆ. ರಾಜಮಾರ್ಗವನ್ನು ಒಪ್ಪಿಕೊಂಡು ಒಳಮಾರ್ಗದ ನೆಲೆಗಳ ಬಗ್ಗೆ ಕುತೂಹಲ ಇಟ್ಟುಕೊಳ್ಳುವುದು ಒಂದು ರೀತಿಯಲ್ಲಿ ಮಾರ್ಗ ಮತ್ತು ದೇಸಿಗಳನ್ನು ಒಟ್ಟಿಗೆ ನೋಡಲು ಪ್ರಯತ್ನಿಸಿದ ಹಾಗೆ. ಎರಡರ ನಡುವೆ ವಿರೋಧಾತ್ಮಕ ಸಂಬಂಧ ಇಲ್ಲ ಎನ್ನುವುದನ್ನು ಅವರು ಅನೇಕ ಕಡೆ ಸೂಚಿಸುತ್ತಾರೆ. ‘ವಾನ್ ಗಾಫ್ ನ ಬೂಟುಗಳು’ ಕವಿತೆಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇಲ್ಲಿ ವಿಜೃಂಭಿಸಿರುವ ಸಾಮಾನ್ಯತೆ ಒಂದು ಸಾಧ್ಯತೆಯ ಅರಿವು ಕೂಡ ಹೌದು. ‘ಕೆಪ್ಲರ್’ನನ್ನು ಅವರು ಪ್ರಶ್ನಿಸುವುದು ‘ಕವಿಯೆ, ವಿಜ್ಞಾನಿಯೆ, ತತ್ವಜ್ಞಾನಿಯೇ, ಎಲ್ಲವನು ಕಂಡವನು ನೀನು ಕಾಣುವ ಬಗೆ ಹೇಳು’, ‘ಅವಧ’ದಲ್ಲಿ ಚರಿತ್ರೆಯೇ ವರ್ತಮಾನ ಆಗಿ ಬಿಡುವ ಕುತೂಹಲಕರ ಪ್ರಯತ್ನವಿದೆ. ಅವರಲ್ಲಿ ಹೊಸತು ಹಳತಾಗುವ, ಹಳತು ಹೊಸದಾಗುವ ಕ್ರಿಯಾತ್ಮಕತೆ ಕೂಡ ಒಂದು ಮಾದರಿ ಪಲ್ಲಟವನ್ನು ಮೂಡಿಸುತ್ತದೆ.

‘ವ್ಯಸನದ ಕೋಣೆ’ಯಲ್ಲಿ ಬೆಕ್ಕು ಮೂಡಿಸುವ ಅಮೂರ್ತತತೆ ಮೂಲಕ ಇದನ್ನು ಗಮನಿಸಬಹುದು. ಈ ಸಂಕಲನದಲ್ಲಿ ಅಹಲ್ಯೆಯ ಕುರಿತೂ ಕವಿತೆ ಇದೆ. ಇಲ್ಲಿ ಅಹಲ್ಯೆ, ಇಂದ್ರ, ಗೌತಮರ ಭಾವನೆಗಳಂತೆ ಕವಿಯ ವಿಶ್ಲೇಷಣೆ ಕೂಡ ಇದೆ. ‘ಪ್ರತಿಯೊಂದು ಶಬ್ದಕೂ ಅದೇ ಶಬ್ದ’ವಾಗುವುದು ಕವಿತೆಯ ವಿಶಿಷ್ಟತೆ.

‘ಪಾಪಿಯೂ’ ಸಂಕಲದಲ್ಲಿ ‘ಯಾಜ್ಞವಲ್ಕ್ಯನೂ ಮೈತ್ರೇಯಿಯೂ’ ಮಾತ್ರ ಭಾರತೀಯ ಪರಂಪರೆಯ ಹಿನ್ನೆಲೆಯ ಕವನ. ಇನ್ನು ಎರಡು ಕವಿತೆಗಳು ಜಾತಕ ಕಥೆಗಳನ್ನು ಅವಲಂಭಿಸಿವೆ. ಉಳಿದ ಕವಿತೆಗಳ ವಸ್ತು ನಮ್ಮ ನೆಲದಿಂದ ಹೊರಗಿನದು. ‘ಜುಲೇಖ’ ‘ರುದಾಕಿ’ ಮತ್ತು ‘ಫಿರ್ದೋಸಿ’ ಕವಿತೆಗಳ ಹಿಂದೆ ಅರೇಬಿಯನ್ ಮತ್ತು ಪರ್ಷಿಯನ್ ಸಾಹಿತ್ಯವಿದೆ. ಜುಲೇಖಳ ಸಂಭ್ರಮ, ಆತಂಕ ಎಲ್ಲವೂ ಹೊಸ ಭಾಷೆಯಲ್ಲಿ ರೂಪುಗೊಂಡರೆ, ಫಿರ್ದೋಸಿಯಲ್ಲಿ ಒಂದು ರೀತಿ ಚರಿತ್ರೆ ಮಗ್ಗಲು ಬದಲಾಯಿಸುತ್ತದೆ. ‘ಸುಲೇಮಾನ’ ಲೈಂಗಿಕತೆ, ರಾಜಕೀಯ, ವ್ಯವಸ್ಥೆಯ ನಿಷ್ಟೂರತೆ ಎಲ್ಲವನ್ನೂ ಸಂಕೀರ್ಣ ನೆಲೆಗೆ ತೆಗೆದುಕೊಂಡು ಹೋಗುತ್ತದೆ. ‘ಅಲ್ಲಾ ನಿದ್ರಿಸುತ್ತಾನೆ ಇಲ್ಲಾ’ ಬಿಡುಗಡೆಯ ಹಾದಿಯಲ್ಲಿ ಅಧ್ಯಾತ್ಮದ ವಿಸ್ತಾರವನ್ನು ಹುಡುಕುವಂತಹದು. ಇಡಿ ಸಂಕಲನ ಕಥನ ನಿರೂಪಣೆಗೆ ಒಂದು ಹೊಸ ಸಾಧ್ಯತೆಗಳನ್ನು ನೀಡಿದೆ. ವಿವರಗಳ ಹಂಗಿಲ್ಲದೆ ತಾತ್ವಿಕ ನೆಲೆಯಲ್ಲಿಯೇ ಕಥೆಗಳನ್ನು ಪರಿಶೀಲಿಸುವುದು ಪ್ರಯೋಗಶೀಲತೆ ಎನ್ನುವುದರ ಜೊತೆಗೆ ತಮ್ಮ ಕಾವ್ಯದ ಸ್ವರೂಪದ ಬಗ್ಗೆ ತಿರುಮಲೇಶರು ಸ್ಪಷ್ಟವಾಗುತ್ತಾ ಬಂದಿರುವ ಸೂಚನೆ ಕೂಡ ಹೌದು.

ಅವರಿಗೆ ಕೇಂದ್ರಪ್ರಜ್ಞೆ ಹಿಡಿಯುವ ಅದರ ಸುತ್ತಾ ವಿವರಗಳನ್ನೂ ಮೂಡಿಸುವ ಸಾಂಪ್ರದಾಯಿಕ ಶೈಲಿಯ ಕುರಿತು ಒಪ್ಪಿಗೆ ಇಲ್ಲ. ಪ್ರತಿ ವಿವರವೂ ಸ್ವಯಂ ಘಟಕವಾಗಿ ತನ್ನಲ್ಲಿಯೇ ವಿಸ್ತಾರ ಕಾಣುವಲ್ಲಿ ಹೆಚ್ಚಿನ ಆಸಕ್ತಿ. ಇಲ್ಲಿ ಮುರಿದು ಕಟ್ಟುವುದಕ್ಕಿಂತಲೂ ಮುರಿದದ್ದರಲ್ಲೇ ಕಟ್ಟಿದ್ದರ ಸೊಬಗು ನೋಡುವ ಬೆರಗು ಕಾಣುತ್ತದೆ. ಇದು ತಿರುಮಲೇಶರ ಕಾವ್ಯದ ಅನನ್ಯತೆ ಕೂಡ ಹೌದು.

‘ಅರಬ್ಬಿ’ ಇನ್ನಷ್ಟು ವಿಸ್ತಾರಗೊಂಡ ತಿರುಮಲೇಶರ ಕಾವ್ಯ ಜಗತ್ತನ್ನು ತೋರಿಸುತ್ತದೆ. ಇದು ಅವರ ಯಮನ್ ದೇಶದ ವಾಸ್ತವ್ಯದ ಅನುಭವಗಳನ್ನು ಹೊಂದಿದೆ ಎನ್ನುವುದು ನಿಜವಾದರೂ ಅದಕ್ಕೆ ಅಗತ್ಯವಾದ ತಾತ್ವಿಕತೆ ಹಿಂದಿನ ಸಂಕಲದಲ್ಲಿಯೇ ದಕ್ಕಿತ್ತು ಎನ್ನುವುದನ್ನು ನಾವು ಮರೆಯುವಂತಿಲ್ಲ. ‘ಗಾಲಿಯ ಕೆಳಗೆ ಕೈ ಸಿಲುಕಿ’ ಕವಿತೆಯಲ್ಲಿ ವಾಸ್ತವಿಕತೆ ಎನ್ನುವುದು ಹೊಸ ಸಾಧ್ಯತೆಗಳ ಮೂಲಕ ವಿಸ್ತಾಗೊಳ್ಳುತ್ತದೆ. ‘ಕಟ್ಟಿ ಹಾಕಿರಿ’ ಸಾಮಾಜಿಕ ಕಾಳಜಿಯಲ್ಲಿ ಈ ವಿಸ್ತಾರವನ್ನು ಸಾಧಿಸುತ್ತದೆ. ‘ತತ್ವಜ್ಞಾನ’ ಎನ್ನುವ ಕವಿತೆಯಲ್ಲಿ ಇದರ ಇನ್ನೊಂದು ಹಂತವನ್ನು ನೋಡಬಹುದು. ಒಟ್ಟಾಗಿ ಈ ಸಂಕಲನ ಬೇರೆ ಬೇರೆ ನೆಲೆಗಳಲ್ಲಿ ಸಮಗ್ರತೆಯ ಕುರಿತ ಕಾಣ್ಕೆಯ ಹುಡುಕಾಟ ನಡೆಸುತ್ತದೆ. ‘ಎಚ್ಚಹೋಮೋ: ಈ ಮನುಷ್ಯನನ್ನು ನೋಡಿ’ ನೀತ್ಸೆಯ ಕುರಿತ ವಿಶಿಷ್ಟ ಮುಖಾಮುಖಿ. ನೀತ್ಸೆ ತಿರುಮಲೇಶರನ್ನು ಕಾಡಿದ ದಾರ್ಶನಿಕ. ‘ದೇವರಿಲ್ಲ’ ಎನ್ನುವ ಮೂಲಕ ಅವನು ಅಸ್ವಿತ್ವವಾದದ ಮೂಲವನ್ನೇ ಅಲ್ಲಾಡಿಸಿದವನು. ಈ ಕವಿತೆ ಕೊನೆಯಾಗುವುದು ‘ಅವನ ಇನಾಮಿತ್ತ ಹರಳುಗಳೇ ಈಗ/ ನನ್ನ ಕಣ್ಣ ಹರಳುಗಳು’ ಎಂದು, ಇಲ್ಲಿ ಅಮೂರ್ತತೆ ಮೂರ್ತತೆ ಕಡೆ ತಿರುಗುವ ವಿಲೋಮ ಸಮೀಕರಣ ಇದೆ. ಇದು ಒಂದು ರೀತಿಯಲ್ಲಿ ತಿರುಮಲೇಶರ ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ ಕೂಡ ಆಗಿದೆ.

‘ಅಕ್ಷಯ ಕಾವ್ಯ’ ತಿರುಮಲೇಶರ ದೃಷ್ಟಿಯಿಂದ ಮಾತ್ರವಲ್ಲ ಕನ್ನಡ ಕಾವ್ಯ ಪರಂಪರೆಯ ದೃಷ್ಟಿಯಿಂದ ಕೂಡ ಮಹತ್ವದ ಪ್ರಯೋಗ. ಮಹಾಕಾವ್ಯವನ್ನು ಅದರ ಪಾರಂಪರಿಕ ಲಕ್ಷಣಗಳಿಲ್ಲದೆ ಕಟ್ಟಲು ಮಾಡಿರುವ ಪ್ರಯೋಗ ಇದು. ಇದರಲ್ಲಿ ಹಾಗೆ ನೋಡಿದರೆ ಕಥಾ ಹಂದರ ಇಲ್ಲವೇ ಇಲ್ಲ. ಪರಸ್ಪರ ಪ್ರೇಮಿಸುವ ಗಂಡು, ಹೆಣ್ಣು ಅಣಬೆ ಹೆಕ್ಕಲು ಕಾಡಿಗೆ ಹೋಗಿದ್ದಾರೆ. ಅವರಿಗೆ ದೊರೆತ ಅಪರೂಪದ ಏಕಾಂತದಲ್ಲಿ ಪ್ರೇಮ ನಿವೇದನೆ ಬದಲು ಅಣಬೆಯ ಕುರಿತೇ ಮಾತನಾಡಿದ್ದಾರೆ ಎನ್ನುವುದು ಒಂದು ಸೂಚನೆ ಅಷ್ಟೇ. ಇಡೀ ಕಾವ್ಯ ಒಂದು ಅಮೂರ್ತ ಹುಡುಕಾಟದಲ್ಲಿ ಸಾಗುತ್ತದೆ. ಪ್ರೇಮ ಮತ್ತು ಕಾಮ, ಚರಿತ್ರೆ ಮತ್ತು ವರ್ತಮಾನ, ಕಾವ್ಯ ಮತ್ತು ಬದುಕು ಎಲ್ಲವೂ ಇಲ್ಲಿ ಮುಖಾಮುಖಿ ಆಗುತ್ತವೆ. ಅದರ ನಡುವೆ ಸಂಘರ್ಷವೂ ಇದೆ, ಸಂಕ್ರಮಣವೂ ಇದೆ. ಕಾರಣವಿಲ್ಲದೆ ಕಳೆದುಕೊಳ್ಳುವ ಮಾತೂ ಕೂಡ ಬರುತ್ತದೆ, ಇದು ಪ್ರೀತಿಯನ್ನೂ ಕೂಡ ಆಗಬಹುದು ಎನ್ನುವುದು ಹೊಸ ನೆಲೆಗೆ ಕಾವ್ಯವನ್ನು ತೆಗೆದುಕೊಂಡು ಹೋಗುತ್ತದೆ.

ಮಹಾಮೌನವೊಂದು ಇಲ್ಲಿ ಎದುರಿಗೆ ಕುಳಿತಿದೆ, ಅದು ಪ್ರತಿ ಶಬ್ದವನ್ನೂ ನುಂಗಿ ಹಾಕುತ್ತಿದೆ. ಈ ಹಸಿವನ್ನು ತೀರಿಸಲೆಂದೇ ಭಾಷೆ ಇದೆ. ‘ಭಾಷೆ ಮುಗಿದಾಗ ನಾವೂ ಮುಗಿಯುತ್ತೇವೆ’ ಹೀಗೆ ಅಣಬೆ ಹುಡುಕಲು ಹೋದವರು ಇನ್ನೂ ಮೂರ್ತತೆಯನ್ನು ತಲುಪದೆ ಹೋದವರು. ಅಮೂರ್ತ ಎನ್ನುವುದು ಭಾಷೆಯೊಳಗೆ ಬಂದ ಕೂಡಲೇ ಮೂರ್ತವಾಗಿ ಬಿಡುತ್ತದೆ. ಭಾಷೆ ಕೂಡ ವಜ್ರಲಿಪಿಯಲ್ಲಿ ಬರೆದಿಲ್ಲ. ಅದು ಆಡುವವರ ತುಟಿಯಲ್ಲಿ ಬರೆದಿದೆ, ಆಡುವಂತೆ ಮಾಡುವುದು ಯಾವುದು ಮನಸ್ಸು, ಬುದ್ಧಿ ಎಲ್ಲವನ್ನೂ ಮೀರಿದ ಕಾಲ, ಪರಂಪರೆಯ ಪ್ರಭಾವ ಅಥವಾ ಯಾವುದೂ ಅಲ್ಲ. ಏಕೆಂದರೆ ನಿನ್ನೆಯ ಸಂಜೆಯಂತೆ ಇಂದಿನ ಸಂಜೆ ಇಲ್ಲ. ಇವತ್ತಿನ ಪ್ರಣಯ ಕೂಡ ಹೊಸದೇ ಆಗಬೇಕು. ‘ಅಕ್ಷಯ ಕಾವ್ಯ’ದಲ್ಲಿ ಪರಂಪರೆಯ ಸಾಧಕರ ಹುಡುಕಾಟದ ಗುರುತುಗಳಿವೆ. ಮನುಷ್ಯನಾಗಲು ಏನು ಬೇಕು ಎನ್ನುವ ಹಂಬಲ ಇದೆ.

ದೇಹ ಸಿಕ್ಕಿತು ಮನಸ್ಸು ಸಿಕ್ಕಿತೆ
ಮಡಿಲು ಸಿಕ್ಕಿತು ಮನಸ್ಸು ಸಿಕ್ಕಿತೆ
ಕೈ ಸಿಕ್ಕಿತು ಸ್ಪರ್ಶ ಸಿಕ್ಕಿತೆ
ನೋಟ ಸಿಕ್ಕಿತು ದೃಷ್ಟಿ ಸಿಕ್ಕಿತೆ
ಮಾತು ಸಿಕ್ಕಿತು ಅರ್ಥ ಸಿಕ್ಕಿತೆ

ಹೀಗೆ ಅತ್ಯಂತಿಕ ಪ್ರಶ್ನೆಗಳ ಸರಣಿ ಮುಂದುವರೆಯುತ್ತದೆ. ಅನುಭವ-ಜ್ಞಾನ-ಸುಷಪ್ತಿ-ಅರಿವು-ಇರುವು ಎಲ್ಲವೂ ಇಲ್ಲಿ ಬೆಳೆಯುತ್ತಾ ಮೂರ್ತ ಮತ್ತು ಅಮೂರ್ತ ಎನ್ನುವ ಅಂತರವೇ ಮಾಯವಾಗಿ ಬಿಡುತ್ತದೆ. ಇಲ್ಲಿ ಛಿದ್ರ ಬದುಕಿನ ತುಂಡುಗಳಿವೆ, ಅದರ ಮೂಲಕವೇ ಸಮಗ್ರತೆ ಸಾಧಿತವಾಗಿದೆ. ಪ್ರತಿ ಓದಿಗೂ ಹೊಸ ನೆಲೆಗಳನ್ನು ನೀಡುವುದು ಈ ಕಾವ್ಯದ ವಿಶೇಷ. ‘ಅವ್ಯಕ್ತ ಕಾವ್ಯ’ ಒಂದು ರೀತಿಯಲ್ಲಿ ಇದರ ಮುಂದುವರಿಕೆಯಂತೆ ಬಂದಿದ್ದು ಅಲ್ಲಿ ವಿವರಗಳು ಇದ್ದರೂ ಅದನ್ನು ಪ್ರತಿ ಹಂತದಲ್ಲೂ ಮೀರಲಾಗಿದೆ. ವ್ಯಕ್ತಿ, ವಸ್ತು, ವಿಷಯ, ಸಂದರ್ಭ ಎಲ್ಲವೂ ಹೊಸ ನೆಲೆಯನ್ನು ತಲುಪಿವೆ. ಹುಡುಕಾಟ ಇನ್ನಷ್ಟು ಗಟ್ಟಿ ಎನ್ನಿಸಿದೆ. ಈ ಹುಡುಕಾಟ ಕೂಡ ಅವರೇ ಗುರುತಿಸಿದ ಹಾಗೆ
ವಿರಾಮ ಬೇಡಿದೆ ಯಾಚಿಸದೆ ಇಲ್ಲ
ಅದು ತಳವಿರದ ಬಾವಿಗೆ
ಕಲ್ಲೆಸದ ಹಾಗೆ
ಕುತೂಹಲಕರ ಸಂಗತಿ ಎಂದರೆ ತಮ್ಮ ಕಾವ್ಯದಲ್ಲಿ ತಾತ್ವಿಕ ನೆಲೆಯನ್ನೇ ಪ್ರಧಾನವಾಗಿರಿಸಿಕೊಂಡ ತಿರುಮಲೇಶರು ಭಾವಗೀತಾತ್ಮಕ ಕವಿತೆಗಳನ್ನೂ ಕೂಡ ಬರೆದಿದ್ದಾರೆ. ಅವರ ‘ಆಡು ಕನ್ನಡ ಹಾಡು ಕನ್ನಡ, ಮಾತಾಡು ಕನ್ನಡವೇ’ ಯಲ್ಲಿ 151 ಇಂತಹ ಕವಿತೆಗಳಿವೆ. ಇಲ್ಲಿ ಭಾಷೆ ಮತ್ತು ವಿನ್ಯಾಸಗಳೆರಡರಲ್ಲೂ ಭಾವಗೀತಾತ್ಮಕತೆ ಇರುವುದನ್ನು ಗಮನಿಸಬಹುದು. ಕೆಲವು ಅಣಕುವಾಡುಗಳ ಶೈಲಿಯಲ್ಲಿ ಇವೆ. ಇವುಗಳನ್ನು ಬರೆಯುವ ಕಾಲಕ್ಕೆ ತಿರುಮಲೇಶರು ಕನ್ನಡದ ಸಂಪರ್ಕವೇ ಇಲ್ಲದ ಹೊರ ದೇಶಗಳಲ್ಲಿ ವಾಸಿಸುತ್ತಿದ್ದರು. ಭೌತಿಕವಾಗಿ ದೂರವಿದ್ದದ್ದು ಮಾನಸಿಕವಾಗಿ ಕನ್ನಡಕ್ಕೆ ಹತ್ತಿರ ತಂದ ಕ್ರಮವನ್ನು ಅವರೇ ವಿವರಿಸಿದ್ದಾರೆ. ಈ ಭಾವಗೀತಾತ್ಮಕತೆ ತಿರುಮಲೇಶರಿಗೆ ಸಹಜವಾಗಿ ಹೊಂದುವಂತಹುದಲ್ಲ ಎನ್ನುವುದಕ್ಕೆ ಇಲ್ಲಿನ ಲವವಿಕತೆಯ ಕೊರತೆ, ಸಹಜ ನಾಟಕೀಯತೆಯ ಕೊರತೆಯನ್ನು ಆಧಾರವಾಗಿರಿಸಿ ಹೇಳಬಹದು. ಆದರೆ ಅಂತಹದೊಂದು ಮನಸ್ಥಿತಿಯನ್ನು ಅವಾಹಿಸಿಕೊಳ್ಳಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕು.

ಗೀತರೂಪದಲ್ಲಿ ಕವಿ ತನ್ನ ತಾತ್ವಿಕತೆಯನ್ನು ಸಡಿಲಗೊಳಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎನ್ನುವುದನ್ನು ಗಮನಿಸಬೇಕು. ‘ತಿಂಗಳ ಬೆಳಕಿಗೆ’ ಅಂತಹ ಕವಿತೆಯಲ್ಲಿ ಅದು ಸುಲಲಿತವಾಗಿ ಕೂಡ ಬಂದಿದೆ. ‘ಅಂಗುಲ ಹುಳವೊಂದು’ ಕವಿತೆ ಸಹಜವಾಗಿಯೇ ಎ.ಕೆ.ರಾಮಾನುಜನ್ ಬರೆದ ‘ಅಂಗುಲ ಹುಳುವಿನ ಪರಕಾಯ ಪ್ರವೇಶ’ವನ್ನು ನೆನಪಿಸುತ್ತದೆಯಾದರೂ ಇದು ಸಾಗುವ ಮಾರ್ಗದಲ್ಲಿನ ವ್ಯತ್ಯಾಸ ಇದನ್ನು ಗಂಭೀರವಾಗಿ ಗಮನಿಸುವಂತೆ ಮಾಡುತ್ತದೆ. ತಿರುಮಲೇಶರು ಬಹುಷಃ ಈ ದಾರಿಯಲ್ಲಿ ಇನ್ನಷ್ಟು ಸ್ಪಷ್ಟವಾಗಬೇಕಾದ ಅಗತ್ಯವನ್ನು ಇಲ್ಲಿನ ಹಲವು ಕವಿತೆಗಳು ತೋರಿಸಿ ಕೊಟ್ಟಿವೆ.
‘ಏನ್ ತುಂಬಿ’ ತಿರುಮಲೇಶರ ಮಕ್ಕಳ ಕವಿತೆಗಳ ಸಂಕಲನ. ಇಲ್ಲಿ ಮುಗ್ಧತೆಯ ಮನಸ್ಥಿತಿಯನ್ನು ಹಿಡಿಯುವ ಪ್ರಾಮಾಣಿಕ ಪ್ರಯತ್ನವಿದೆ. ಕನ್ನಡದಲ್ಲಿನ ಮಕ್ಕಳ ಕವಿತೆಗಳ ಪರಂಪರೆಯನ್ನು ಇಲ್ಲಿನ ಹಲವು ಕವಿತೆಗಳು ನೆನಪಿಸುತ್ತವೆಯಾದರೂ ಪ್ರತಿಪಾದಿಸುವ ಕ್ರಮದಲ್ಲಿ ತಿರುಮಲೇಶರ ಅಪಾರ ಓದು ಪರಿಣಾಮ ಉಂಟು ಮಾಡಿರುವುದನ್ನು ನಾವು ಗಮನಿಸಬಹುದು. ‘ದೆವ್ವಗಳ ಹೋರಾಟ’ ಕವಿತೆಯಲ್ಲಿನ ದೃಶ್ಯ ಸಾಧ್ಯತೆಯನ್ನು ಇಲ್ಲಿ ಗಮನಿಸಬಹುದು. ‘ಪುಚ್ಚೆ’ ಎಂಬ ಕವನದಲ್ಲಿ ಬೆಕ್ಕಿನ ಜೀವನದ ಪರಿಚಯ ಇದೆ. ತಿರುಮಲೇಶರ ಕವಿತೆಗಳ ಖಾಯಂ ಪಾತ್ರಧಾರಿ ಬೆಕ್ಕು ಆ ಭಾರವನ್ನು ಕಳಚಿಕೊಂಡು ಇಲ್ಲಿ ಹೊಸ ನೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ತಿರುಮಲೇಶರ ಮಕ್ಕಳ ಕವಿತೆಗಳ ಹಿರಿಮೆ ಎಂದರೆ ಬೇರೆ ಭಾಷೆಯಲ್ಲಿನ ಮಕ್ಕಳ ಸಾಹಿತ್ಯವನ್ನು ಅದರ ಮೂಲ ಸೆಲೆಯೊಂದಿಗೇ ಕನ್ನಡದ ಆವರಣದೊಳಗೆ ತಂದಿರುವುದು. ಈ ಮೂಲಕ ಅವರ ಒಟ್ಟು ಕಾವ್ಯ ಪರಂಪರೆ ಕೂಡ ಹೊಸ ನೆಲೆಯನ್ನು ಪಡೆದುಕೊಂಡಿದೆ ಎನ್ನುವುದು ಇಲ್ಲಿ ನಾವು ಗಮನಿಸಬೇಕಾದ ಸಂಗತಿ.

-3-

ಕಾವ್ಯವನ್ನು ತಮ್ಮ ಅಭಿವ್ಯಕ್ತಿಯ ಪ್ರಧಾನ ನೆಲೆಯಾಗಿಸಿಕೊಂಡರೂ ತಿರುಮಲೇಶ್ ಗದ್ಯ ಬರವಣೆಗೆಯಲ್ಲಿ ಕೂಡ ಗಮನ ಸೆಳೆಯುವ ಸಾಧನೆಯನ್ನು ಮಾಡಿದ್ದಾರೆ. ಒಂದು ರೀತಿಯಲ್ಲಿ ಬಹು ಮಾಧ್ಯಮ ಪ್ರಯೋಗ ಅವರ ಪ್ರತಿಭೆಗೆ ತೀರಾ ಸಹಜ ಎನ್ನುವಂತೆ ದಕ್ಕಿದೆ. ತಿರುಮಲೇಶ್ ಈವರೆಗೆ ಆರೋಪ(1982), ಅನೇಕ(1987), ತರಂಗಾಂತರ(1990) ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಮುಸುಗು’ ಕಾದಂಬರಿ 1999ರಲ್ಲಿ ಧಾರಾವಾಹಿಯಾಗಿ ವಾರ ಪತ್ರಿಕೆಯಲ್ಲಿ ಪ್ರಕಟವಾಯಿತಾದರೂ ಈವರೆಗೂ ಪುಸ್ತಕ ರೂಪವನ್ನು ಪಡೆದಿಲ್ಲ.

ತಿರುಮಲೇಶರ ಕಾದಂಬರಿಗಳಲ್ಲಿ ಎರಡು ಮುಖ್ಯ ಪ್ರಶ್ನೆಗಳು ಮತ್ತೆ ಮತ್ತೆ ಚರ್ಚಿತವಾಗಿದೆ. ಒಂದು ಗಂಡು ಮತ್ತು ಹೆಣ್ಣಿನ ಸಂಬಂಧದ ನೆಲೆಗಳು, ಇನ್ನೊಂದು ವ್ಯಕ್ತಿ ಮತ್ತು ಪ್ರಭುತ್ವದ ಸಂಬಂಧ ಮತ್ತು ಸಂಘರ್ಷ. ಮೊದಲನೆಯ ಅಂಶವನ್ನು ಗಮನಿಸುವುದಾದರೆ ಗಂಡು ಮತ್ತು ಹೆಣ್ಣಿನ ಸಂಬಂಧದಲ್ಲಿನ ಆಕರ್ಷಣೆ ಮತ್ತು ಅಧಿಕಾರದ ಪ್ರಶ್ನೆ ಅವರನ್ನು ಬಹುವಾಗಿ ಕಾಡಿದೆ. ‘ತರಂಗಾಂತರ’ದಲ್ಲಿ ಈ ಶೋಧನೆ ಹೆಚ್ಚು ತಾತ್ವಿಕವಾಗಿ ಸಾಗುತ್ತದೆ. ಅಲ್ಲಿ ವ್ಯಕ್ತಿಯ ಶೋಧನೆ ಕೂಡ ಇರುವುದರಿಂದ ಇದು ಅದರ ವಿಸ್ತೃತ ಭಾಗವಾಗಿ ಕೂಡ ಕಾಣಿಸಿಕೊಳ್ಳುತ್ತದೆ. ‘ಆರೋಪ’ ಕಾದಂಬರಿಯಲ್ಲಿ ನಾಯಕ ಅರವಿಂದನಿಗೆ ಮರೀನಾಳ ವೈಚಾರಿಕತೆ ಮತ್ತು ಹೋರಾಟದ ಕುರಿತು ಆಕರ್ಷಣೆ ಇದೆ. ಅವಳಿಗೆ ಸಹಾಯ ಮಾಡಲು ಹೋಗಿ ಅವನು ವಿಚಾರಣೆಯನ್ನು ಕೂಡ ಎದುರಿಸಬೇಕಾಗುತ್ತದೆ. ಇನ್ನೊಂದು ಕಡೆ ಹೋರಾಟಗಾರ್ತಿ ಬೀಡಿ ಕಟ್ಟು ಲಕ್ಷ್ಮಿಯ ಕುರಿತ ಆಕರ್ಷಣೆ ಇದೆ. ಒಂದು ಮೂರ್ತವಾಗಿ ಇನ್ನೊಂದು ಅಮೂರ್ತವಾಗಿ ಈ ಕಾದಂಬರಿಯಲ್ಲಿ ಪ್ರವಹಿತವಾಗುತ್ತದೆ.

‘ಮುಸುಗು’ ಕಾದಂಬರಿಯಲ್ಲಿ ನಿರಂಜನದಾಸ್ ಹೆಂಡತಿಯನ್ನು ದೂರವಿಟ್ಟು ಬೇರೊಬ್ಬಳೊಂದಿಗೆ ಸಂಬಂಧ ಬೆಳೆಸಿದ್ದಾನೆ, ಹೆಂಡತಿಯನ್ನು ಮತ್ತೆ ಕರೆತಂದು ಪ್ರೀತಿ ತೋರಿದರೂ ಅವನೊಳಗಿನ ಕ್ರೌರ್ಯ ಕರಗಿಲ್ಲ, ವಾಯುವಿಹಾರದ ನೆಪದಲ್ಲಿ ಅವಳನ್ನು ಕೊಂದುಬಿಡುತ್ತಾನೆ. ಈ ಕಥೆ ಹೇಳುವ ಸಂತೋಷ್ ಮಹಂತಿ ಕೂಡ ತನ್ನ ಹೆಂಡತಿ ಸಾವಿಗೆ ಕಾರಣವಾದವನೇ. ಹೆಂಡತಿಯ ಕ್ಷೇಮವನ್ನು ನೋಡಿಕೊಳ್ಳಬೇಕಾದ ಗಂಡನೇ ಸಾವಿಗೆ ಕಾರಣವಾಗುವುದು ಕ್ರೌರ್ಯದ ಪರಮಾವಧಿ. ಗಂಡು-ಹೆಣ್ಣಿನ ಸಂಬಂಧದಲ್ಲಿ ಪ್ರವೇಶವಾಗುವ ಅಧಿಕಾರದ ಪ್ರಶ್ನೆ ಕ್ರೌರ್ಯಕ್ಕೆ ತಿರುಗುತ್ತದೆ ಎನ್ನುವುದು ತಿರುಮಲೇಶರಿಗೆ ಆತಂಕ ತರುವ ಸಂಗತಿ. ಅವರು ನೈತಿಕತೆಯನ್ನು ಸಮುದಾಯದ ಪ್ರಶ್ನೆಯನ್ನಾಗಿ ನೋಡುವುದಿಲ್ಲ. ವ್ಯಕ್ತಿಯ ಪ್ರಶ್ನೆಯನ್ನಾಗಿ ನೋಡುತ್ತಾರೆ.

ತಿರುಮಲೇಶರ ಸಮಕಾಲೀನರಾದ ಬರಹಗಾರರ ಕಾದಂಬರಿಗಳಿಗೆ ಹೋಲಿಸಿದರೆ ಇಲ್ಲಿ ಇಂದ್ರಿಯ ಗಮ್ಯ ಚಿತ್ರಣಗಳಿಲ್ಲ, ವಿಷಯ ಲೋಲಪತೆ ಕೂಡ ಇಲ್ಲ. ಮುಖ್ಯವಾಗಿ ಓದಿಸಿಕೊಂಡು ಹೋಗುವ ಗುಣ ಕೂಡ ಇಲ್ಲ. ಇದು ಉದ್ದೇಶಪೂರ್ವಕ ಕೂಡ ಆಗಿರಬಹುದು. ಏಕೆಂದರೆ ಚಿಂತನೆ ಮತ್ತು ಸೃಜಶೀಲತೆಯ ನಡುವೆ ವ್ಯತ್ಯಾಸವೇ ಇಲ್ಲ ಎನ್ನುವಂತೆ ಬರೆಯಲು ಪ್ರಯತ್ನಿಸಿದ ಅಪರೂಪದ ಬರಹಗಾರರು ತಿರಮಲೇಶ್. ಇದು ಕಾದಂಬರಿಗಳ ವಿಷಯದಲ್ಲಿ ಹೆಚ್ಚು ಸ್ಪಷ್ಟವಾಗುತ್ತದೆ.

ತಿರುಮಲೇಶರ ಕಾದಂಬರಿಗಳಲ್ಲಿ ಚರ್ಚಿತವಾಗುವ ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ವ್ಯಕ್ತಿ ಮತ್ತು ಪ್ರಭುತ್ವದ ಪ್ರಶ್ನೆ. ‘ಆರೋಪ’ ಕಾದಂಬರಿಯಲ್ಲಿ ಮರೀನಾಳಿಗೆ ಸಹಾಯ ಮಾಡಿದ ಅರವಿಂದ ವಿಚಾರಣೆಯನ್ನು ಎದುರಿಸುತ್ತಾನೆ. ಅವನು ಎಡಪಂಥೀಯ ಹೋರಾಟಗಳಿಗೆ ಇಳಿದವನು, ನಕ್ಸಲರಿಗೆ ನೆರವಾದವನು, ಗುಪ್ತ ಕಾರಸ್ತಾನಗಳಿಗೆ ನೆರವಾಗುವಾಗಲೇ ಮರೀನಾಳನ್ನು ಮತ್ತೆ ಭೇಟಿಯಾಗುವುದು. ಹೀಗಿದ್ದರೂ ವಿಚಾರಣಾ ಅಧಿಕಾರಿ ‘ನೀವೆಂದೂ ಕ್ರಾಂತಿಕಾರಿ ಆಗಿರಲಿಲ್ಲ, ಅದು ನಿಮ್ಮ ಮನಸ್ಸಿನ ದ್ವಂದ್ವ ಮಾತ್ರ’ ಎಂದುಬಿಡುತ್ತಾನೆ. ಯಾವುದೇ ವಿಚಾರಣಾಧಿಕಾರಿ ಹೀಗೆ ಹೇಳುವುದು ಅಸಂಭವ. ವಾಸ್ತವ ಮಾರ್ಗದಲ್ಲಿಯೇ ಸಾಗುವ ಈ ಕಾದಂಬರಿ ಚಿಂತನಾತ್ಮಕ ನೆಲೆಯಿಂದ ಮರುಪರಿಶೀಲನೆಗೆ ಒಳಗಾಗುವುದೇ ಈ ಮಾತಿನಿಂದ. ಪ್ರಭುತ್ವಕ್ಕೆ ಕಾರಣಗಳು ಬೇಕಾಗಿಲ್ಲ, ಅದಕ್ಕೆ ಬೇಕಿರುವುದು ತನ್ನ ಅಧಿಕಾರ ತೋರುವ ನೆಲೆ ಮಾತ್ರ. ಆದರೆ ವ್ಯಕ್ತಿಗೆ ಹೋರಾಟಕ್ಕೆ ಕಾರಣಗಳು ಬೇಕು, ಅದು ಅವನ ಒಳಗಿಂದ ಬರಬೇಕು. ದ್ವಂದ್ವಗಳಿದ್ದರೆ ಅದರ ಕಾರಣ ಬೇರೆ ಇನ್ಯಾವುದೋ ಆಗಿರುತ್ತದೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ವ್ಯಕ್ತಿಗೆ ಪ್ರಭುತ್ವದ ಎದುರು ಇರುವ ಭಯ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು. ಇದನ್ನು ‘ತರಂಗಾಂತರ’ ಹಿಡಿದಿಡುತ್ತದೆ.

ಭಾಷೆ ಕೂಡ ವಜ್ರಲಿಪಿಯಲ್ಲಿ ಬರೆದಿಲ್ಲ. ಅದು ಆಡುವವರ ತುಟಿಯಲ್ಲಿ ಬರೆದಿದೆ, ಆಡುವಂತೆ ಮಾಡುವುದು ಯಾವುದು ಮನಸ್ಸು, ಬುದ್ಧಿ ಎಲ್ಲವನ್ನೂ ಮೀರಿದ ಕಾಲ, ಪರಂಪರೆಯ ಪ್ರಭಾವ ಅಥವಾ ಯಾವುದೂ ಅಲ್ಲ. ಏಕೆಂದರೆ ನಿನ್ನೆಯ ಸಂಜೆಯಂತೆ ಇಂದಿನ ಸಂಜೆ ಇಲ್ಲ. ಇವತ್ತಿನ ಪ್ರಣಯ ಕೂಡ ಹೊಸದೇ ಆಗಬೇಕು. ‘ಅಕ್ಷಯ ಕಾವ್ಯ’ದಲ್ಲಿ ಪರಂಪರೆಯ ಸಾಧಕರ ಹುಡುಕಾಟದ ಗುರುತುಗಳಿವೆ.

ಇಲ್ಲಿ ಕಾದಂಬರಿ ನಾಯಕ ವಿನಯಚಂದ್ರನನ್ನು ದೀಕ್ಷಿತನೆಂದು ತಪ್ಪು ತಿಳಿದು ಪೋಲೀಸರು ಬಂಧಿಸಿ ಕರೆದೊಯ್ದು ಗುಂಡಿಕ್ಕಿ ಸಾಯಿಸಿಬಿಡುತ್ತಾರೆ. ಈ ಸಾವಿನ ನಂತರ ಇಡೀ ಕಾದಂಬರಿಯಲ್ಲಿ ಅವನು ನಡೆಸಿದ ಶೋಧನೆ ಕೊನೆಗೊಂಡಿತೆ? ಎನ್ನುವುದು ಅತ್ಯಂತಿಕ ಪ್ರಶ್ನೆಯಾಗಿ ಕಾಡುತ್ತದೆ. ‘ಅನೇಕ’ ಕೇವಲ 48 ಪುಟಗಳ ಕಿರುಕಾದಂಬರಿ, ಇರಲಿ ಎಂದು ಹೆಸರು ಊಹಿಸಿಕೊಂಡ ಅನೇಕ ಕಾದಂಬರಿಯ ನಾಯಕ. ದ್ವೀಪದೊಳಗೆ ಇನ್ನೊಬ್ಬನು ಸೇರುವುದರಿಂದ ಕಾದಂಬರಿಯಲ್ಲಿ ಎರಡು ಪಾತ್ರಗಳಾಗುತ್ತದೆ. ಮನುಷ್ಯನ ಆದಿಮ ದಿನದ ಪ್ರಶ್ನೆಗಳನ್ನು ಕಾದಂಬರಿ ಇಲ್ಲಿ ಪರಿಶೀಲಿಸುತ್ತದೆ. ಕೊನೆಯಲ್ಲಿ ಇನ್ನೊಂದು ಪಾತ್ರ ವಿಶಾಲದ ಅಜಾಗರೂಕತೆಯಿಂದ ಬೆಂಕಿ ಹಬ್ಬಿ ‘ಅನೇಕ’ ಒಬ್ಬನೇ ಉಳಿದುಕೊಳ್ಳುತ್ತಾನೆ. ಅವನ ಹೆಸರೇ ಅನೇಕ ಆಗಿರುವುದರಿಂದ ಒಬ್ಬನೇ ಉಳಿದುಕೊಳ್ಳುತ್ತಾನೆ ಎನ್ನುವುದೇ ತಪ್ಪು! ಹಾಗಾದರೆ ಉಳಿದುಕೊಂಡವರು ಯಾರು? ಕೊನೆಗೂ ಹಾಗೆ ಉಳಿದುಕೊಳ್ಳುವುದು ಎಂದರೆ ಏನು? ಈ ಪ್ರಶ್ನೆಗಳು ಅಸ್ತಿತ್ವಕ್ಕೆ ಸಂಬಂಧಿಸಿದ್ದಾಗಿ ಕಾಡುತ್ತವೆ.

ಇವು ಒಟ್ಟಾಗಿ ತಿರುಮಲೇಶರ ಕಾದಂಬರಿಗಳಲ್ಲಿ ಮೂಡಿ ಬರುವ ಪ್ರಶ್ನೆ ಕೂಡ ಹೌದು. ತಿರುಮಲೇಶರು ತಮ್ಮ ಕಾದಂಬರಿಗಳಲ್ಲಿ ಬಳಸಿರುವ ಸಂವಿಧಾನ ಅಧ್ಯಯನಕ್ಕೆ ಯೋಗ್ಯವಾಗಿದೆ. ವಾಸ್ತವವಾದಿ ನೆಲೆಯನ್ನು ಮುರಿಯುತ್ತಲೇ ಅದನ್ನು ಅವರು ಮರುಕಟ್ಟಿರುವ ರೀತಿ ಕೂಡ ಕುತೂಹಲಕರವಾಗಿದೆ. ಬಹುಷಃ ಕಾದಂಬರಿಯನ್ನೇ ತಮ್ಮ ಪ್ರಧಾನ ಅಭಿವ್ಯಕ್ತಿ ಎಂದು ತಿರುಮಲೇಶರು ಗುರುತಿಸಿಕೊಂಡಿದ್ದರೆ ಈ ಪ್ರಶ್ನೆ ಇನ್ನಷ್ಟು ಸ್ಪಷ್ಟವಾಗಬಹುದಿತ್ತು ಎನ್ನಿಸುತ್ತದೆ.

ತಿರುಮಲೇಶ್ ಕಥೆಗಳ ವಿಷಯದಲ್ಲಿ ಹಾಗೆ ನೋಡಿದರೆ ಕಾದಂಬರಿಗಳಿಗಿಂತ ಹೆಚ್ಚು ಸ್ಪಷ್ಟವಾಗಿದ್ದಾರೆ. ‘ಕಳ್ಳಿಗಿಡದ ಹೂ’ ಎಂಬ ತಮ್ಮ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ‘ಈ ತಿದ್ದಿ ತೀಡುವ ಕೆಲಸ ಯಾವತ್ತಿಗೂ ಮುಗಿಯುವಂಥದ್ದಲ್ಲ, ಹೆಚ್ಚು ನಾಜೂಕುತನವನ್ನು ಬಯಸುವ ಲೇಖಕ ಅದು ಕೈಗೂಡಲಾಗದೆ ಬರೆಯುವುದನ್ನೇ ನಿಲ್ಲಿಸಿ ಬಡಿಬಾಕಾಗಿ ಬರುತ್ತದೆ.’ ಎಂದಿದ್ದಾರೆ. ಅವರ ಮಟ್ಟಿಗೆ ಸೃಜನಶೀಲತೆ ನಿರಂತರತೆಯನ್ನು ಬೇಡುವ ಕ್ರಿಯೆ. ಇಂತಹ ಅಪೂರ್ಣತೆಯನ್ನು ಕಥೆಗಾರ ಒಪ್ಪಿ ಕೊಳ್ಳಬೇಕು ಎನ್ನುವುದು ಅವರ ತಾತ್ವಿಕತೆ. ಅವರಲ್ಲಿ ಕಥನ ಎನ್ನುವುದು ಒಂದು ಪ್ರಕ್ರಿಯೆ ಆಗಿ ನಿರಂತರತೆಯನ್ನು ಕಾಪಾಡಿಕೊಳ್ಳುತ್ತದೆ. ಅವರ ‘ಜೀವಜಾಲ’ ಕತೆಯಲ್ಲಿ ಊರಕತೆಗಳೆಲ್ಲವೂ ಸೇರುವ ಪ್ರಸ್ತಾಪ ಬಂದಿದೆ. ಎಲ್ಲರೊಳಗೂ ಕತೆ ಇರುತ್ತದೆ, ಆದರೆ ವಿವರಿಸಲು ಹೋದಾಗ ಅದು ಸಡಿಲವಾಗುತ್ತದೆ ಎಂಬ ಮಾದರಿಯ ತಾತ್ವಿಕತೆ ಅವರಲ್ಲಿ ಬೆಳೆಯುವುದನ್ನು ಕೂಡ ನಾವು ಗಮನಿಸಬಹುದು.

(ದೇವನೂರ ಮಹಾದೇವ ಮತ್ತು ಸುಬ್ರಾಯ ಚೊಕ್ಕಾಡಿಯವರೊಂದಿಗೆ ಕೆ.ವಿ. ತಿರುಮಲೇಶರು)

‘ಸಮುದ್ರ ಮತ್ತು ಕಿನಾರೆ’ ಕಥೆಯಲ್ಲಿ ಹೆಜ್ಜೆಗುರುತುಗಳೇ ಅನುಭವದ ತೀವ್ರತೆಯನ್ನು ಕೊಟ್ಟುಬಿಡುತ್ತದೆ. ಅವರ ಕವಿತೆಗಳಲ್ಲಿ ಕಾಣುವ ‘ಬೆರ್ಚಪ್ಪ’ ‘ಬೆಚ್ಚು ಬೊಮ್ಮ’ಕಥೆಯಲ್ಲಿಯೂ ಇದೆ. ಇಲ್ಲಿ ಅದು ಬೆಚ್ಚಿಬೀಳಿಸುವುದು ಪ್ರಭುತ್ವದ ಆಕ್ರಮಣಕಾರಿ ಚಿತ್ರಣದ ಮೂಲಕ. ಅವರ ಕಾವ್ಯಗಳಲ್ಲಿ ಕಾಣುವ ಬೆಕ್ಕು ‘ಜಾಗುವಾ’ ಕಥೆಯಲ್ಲಿ ಕಾಣುತ್ತದೆ. ಇಲ್ಲಿ ಕೂಡ ಇರುವುದು ಬೆಕ್ಕಿನ ಕಣ್ಣುಗಳ ಮೂಲಕ ಮಾನವ ಲೋಕದ ಪರಿಶೀಲನೆ. ‘ಕಳ್ಳಿಗಿಡದ ಹೂ’ ಕಥೆ ರೂಪದರ್ಶಿ ಅದರ ಸೃಷ್ಟಿಕರ್ತ ಇವರ ಸಂಬಂಧವನ್ನು ಶೋಧಿಸುತ್ತದೆ. ಹೀಗೆ ಒಂದು ಕಡೆ ತಿರುಮಲೇಶರ ತಾತ್ವಿಕ ನೆಲೆಯ ಕಥೆಗಳನ್ನು ಗುರುತಿಸಿದರೆ ಇನ್ನೊಂದು ಕಡೆ ಅವರ ಭಾವನಾತ್ಮಕ ಕಥೆಗಳನ್ನು ಗುರುತಿಸಬಹುದು.

‘ಹಳದಿ ಕೋಟು’ ಈ ಮಾದರಿಯ ಅತ್ಯುತ್ತಮ ಕಥೆ ಎನ್ನಿಸಿಕೊಳ್ಳುತ್ತದೆ. ನಿಗೂಢವನ್ನು ಬಿಡಿಸುವ ಪ್ರಯತ್ನದಲ್ಲಿಯೇ ಬದುಕಿನ ಬೆರಗು ತೆರೆದುಕೊಳ್ಳುವ ಕ್ರಮ ಈ ಕಥೆಯ ಶಕ್ತಿ ಎನ್ನಿಸುತ್ತದೆ. ‘ಓಡಿ ಹೋದವರು’ ಬಾಲ್ಯದ ಮೂಲಕ ಬದುಕಿನ ಪ್ರಮುಖ ಪ್ರಶ್ನೆಗಳನ್ನು ಗುರುತಿಸಿಕೊಳ್ಳುವ ಪ್ರಯತ್ನ. ‘ಕೇಪಳ ಹಣ್ಣಿನ ನಾಡಿನಲ್ಲಿ’ ಮತ್ತು ‘ಮೈಸೂರಿನಿಂದ ಬಂದವರು’ ಎರಡೂ ಕಥೆಗಳಲ್ಲಿ ಕಾಲದ ಅಂತರದಲ್ಲಿ ನಡೆದ ಭೇಟಿಯ ನಂತರ ಬೆಳೆಯುವ ಸಂಬಂಧಗಳ ವಿವರಗಳಿವೆ. ‘ಕತೆಯ ವಿಲಾಸಗುಣದ ಬಗ್ಗೆ ತಿರುಮಲೇಶರು ಸದಾ ಕುತೂಹಲಿ. ಆದರೆ ಆಧುನಿಕ ಸಾಹಿತ್ಯ ತನ್ನ ಮುಗ್ಧತೆಯನ್ನು ಕಳೆದುಕೊಂಡುಬಿಟ್ಟಿದೆ. ತಾತ್ವಿಕ ದಟ್ಟ ಶೋಧನೆಯಲ್ಲೂ ಅವರಿಗೆ ಜೀವನ ವಿಲಾಸ ಕಳೆದುಹೋಗಬಾರದು’ ಎನ್ನುವ ಎಸ್.ಆರ್.ವಿಜಯಶಂಕರ್ ಅವರ ವಿಶ್ಲೇಷಣೆ ಸಮಂಜಸವಾದ ಗ್ರಹಿಕೆ ಎನ್ನಿಸುತ್ತದೆ. ಇದನ್ನು ವಿಸ್ತರಿಸಿ ಹೇಳುವುದಾದರೆ ತಿರುಮಲೇಶ್ ತಮ್ಮ ಒಟ್ಟು ಸಾಹಿತ್ಯದ ಮೂಲಕ ಹುಡುಕುತ್ತಿರುವುದು ಅದಮ್ಯ ಜೀವನ ಪ್ರೀತಿಯನ್ನು. ಅದು ಅವರ ಕಾದಂಬರಿಗಳಿಗಿಂತ ಹೆಚ್ಚು ಗಾಢವಾಗಿ ಕಥೆ ಮತ್ತು ಕವಿತೆಗಳಲ್ಲಿ ಮೂಡಿ ಬಂದಿದೆ.

-4-

ತಿರುಮಲೇಶ್ ಅವರ ವೈಚಾರಿಕ ಬರಹಗಳೂ ಕೂಡ ವ್ಯಾಪಕವಾಗಿಯೇ ಇದೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಕೂಡ ಅವರು ಬರೆದಿದ್ದಾರೆ. ಅಂಕಣ ಬರಹಗಳ ಮೂಲಕವೂ ತಮ್ಮ ವೈಚಾರಿಕತೆಯನ್ನು ಸಮುದಾಯಕ್ಕೆ ತಲುಪಿಸುವ ಪ್ರಯತ್ನವನ್ನು ಮಾಡಿದ್ದಾರೆ. ಯಾವುದೇ ಬರಹ ಇರಲಿ ವಿಷಯದ ಅಮೂಲಾಗ್ರವಾದ ಮಂಡನೆ ಅವರ ರೀತಿ. ವಿಮರ್ಶೆ ಮತ್ತು ಸೃಜನಶೀಲತೆ ವಿಭಿನ್ನ ದಾರಿಗಳಲ್ಲಿ ಕೆಲಸ ಮಾಡುತ್ತದೆ ಎಂದು ಗುರುತಿಸುವ ಅವರು ಕಲಾಕೃತಿ ಹೊಂದಿರಬಹುದಾದ ಸಂಕೀರ್ಣತೆಯನ್ನು ವಿಮರ್ಶೆ ಗೌರವಿಸುತ್ತಲೇ ವಿವರಿಸಲು ತೊಡಗುತ್ತದೆ ಎನ್ನುವ ತಿರುಮಲೇಶರಿಗೆ ಮಖ್ಯವಾಗುವುದು ಓದುವ ಕ್ರಿಯೆ. ವಿಮರ್ಶೆ ಓದಿನ ಮೇಲೆ ಸವಾರಿ ಮಾಡಬಾರದು ಎನ್ನುವ ಎಚ್ಚರ ಅವರಿಗೆ ಇದೆ. ತಿರುಮಲೇಶರ ವಿಮರ್ಶೆಗಳಲ್ಲಿ ಕನ್ನಡ ಪರಂಪರೆಯ ಕುರಿತ ದಾರಿಗೂ ಮತ್ತು ಪಾಶ್ಚಾತ್ಯ ಸಾಹಿತ್ಯದ ಕುರಿತ ವಿಮರ್ಶೆಗೂ ಮುಖ್ಯವಾದ ವ್ಯತ್ಯಾಸವಿದೆ. ಬೇಂದ್ರೆಯವರ ಕುರಿತು ಬರೆಯುವಾಗ ಅವರು ಕನ್ನಡ ಕಾವ್ಯಲೋಕದ ಕೊಂಡಿಯನ್ನು ಬಳಸುತ್ತಾರೆ. ಕುರ್ತಕೋಟಿಯವರ ಮಾತನ್ನು ಒಪ್ಪತ್ತಲೇ ಅದರ ಮಿತಿಗಳ ಕಡೆಗೆ ಕೂಡ ಗಮನ ಹರಿಸಿ ‘ಕವಿಗೆ ಬಂಧವೂ ಬೇಕು, ಮುಕ್ತಿಯೂ ಬೇಕು’ ಎಂದು ಬೇಂದ್ರೆಯವರ ಸಂಬಂಧದಲ್ಲಿ ಅವರು ಹೇಳಿದರೂ ಅದು ಒಟ್ಟು ಕನ್ನಡ ಸಾಹಿತ್ಯ ಸಂದರ್ಭಕ್ಕೆ ಒಪ್ಪುವ ಮಾತೇ ಆಗಿದೆ.

ಇನ್ನೂ ವಿಸ್ತಾರವಾದ ನೆಲೆಗೆ ಬಂದರೆ ಭಾರತೀಯ ಕಾವ್ಯ ಮೀಮಾಂಸೆಯ ನೆಲೆಗಳನ್ನು ಖಚಿತವಾಗಿ ಹಿಡಿದು ಅದು ಎಂದಿಗೂ ವಿಮರ್ಶೆಯನ್ನು ಪ್ರೋತ್ಸಾಹಿಸುವುದಿಲ್ಲ ಎನ್ನುತ್ತಾರೆ. ಅಲ್ಲಿನ ರಸ-ಧ್ವನಿ ಮೊದಲಾದವು ವರ್ಗಿಕರಣದ ಪದಗಳೇ ಹೊರತು ವಿಮರ್ಶೆಯ ಪದಗಳಲ್ಲ ಎಂಬುದನ್ನು ಗುರುತಿಸುತ್ತಾರೆ. ಇಲ್ಲೆಲ್ಲಾ ಅವರಿಗೆ ಬೇರೆ ಭಾಷೆಯ ಕಾವ್ಯಮೀಮಾಂಸೆಯ ಅಗತ್ಯ ಬೀಳುವುದಿಲ್ಲ. ಆದರೆ ಜಿ.ಎಸ್.ಶಿವರುದ್ರಪ್ಪನವರ ಕಾವ್ಯದ ಕುರಿತು ಬರೆಯುವಾಗ ‘ರೆಟ್ಹರಿಕ್’ ಕುರಿತು ಚರ್ಚಿಸುವ ತಿರುಮಲೇಶ್ ಬೇಂದ್ರೆಯವರ ಕುರಿತು ಬರೆಯುವಾಗ ‘ಡಿಕ್ಷನ್’ ಕೂಡ ಚರ್ಚಿಸುತ್ತಾರೆ. ಇಲ್ಲಿ ಅವರಿಗೆ ಫ್ರೆಂಚ್ ಕವಿ ಪಾಲ್ ವೆಲರಿಯ ಅಗತ್ಯ ಬೀಳುತ್ತದೆ.

ಹೀಗೆ ತಿರುಮಲೇಶರು ತಮಗೆ ಇರುವ ಅಪಾರ ಓದನ್ನು ಪ್ರತಿಪಾದನೆಯ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಅಪಾರ ಓದು ಅವರಿಗೆ ಎಲ್ಲಿಯೂ ಪ್ರದರ್ಶನದ ಸಂಗತಿ ಆಗಿಲ್ಲ. ಅಗತ್ಯವಿಲ್ಲದ ಸೈದ್ಧಾಂತಿಕ ನೆಲೆಗಳಲ್ಲಿ ಅವರು ಪ್ರತಿಪಾದನೆಯನ್ನು ಸಿಕ್ಕಿ ಹಾಕಿಸುವುದೂ ಇಲ್ಲ. ಯಾವುದರ ಅಗತ್ಯ ಎಷ್ಟು ಎಂದು ಅರಿತು ಬಳಸುತ್ತಾರೆ. ಎಂ.ಎನ್.ಶ್ರೀರಾಮ್ ಅವರ ಕುರಿತು ಬರೆಯುವಾಗ ‘ಮ್ಯಾಜಿಕ್ ರಿಯಲಿಸಂ’ ಬಳಸುವುದು ಅವರಿಗೆ ಅಗತ್ಯ ಎನ್ನಿಸಿದೆ. ಹೀಗಾಗಿ ಅದರ ಪರಂಪರೆ ಹೇಳುವ ಮೂಲಕ ಶ್ರೀರಾಮ್ ಅವರ ಕಥೆಗೆ ಪ್ರವೇಶ ಒದಗಿಸುತ್ತಾರೆ.

ವ್ಯಾಪಕವಾಗಿ ಅಂಕಣ ಬರಹಗಳನ್ನು ಬರೆದರೂ ತಿರುಮಲೇಶ್ ಕನ್ನಡದಲ್ಲಿ ಈಗಾಗಲೇ ಬೆಳೆದಿರುವ ಅಂಕಣ ಬರಹದ ಸ್ವರೂಪವನ್ನು ಮೀರಲು ಯತ್ನಿಸಿದರು. ಮೊದಲಿಗೆ ಅವರು ಓದುಗರ ಓದಿನ ಕುರಿತು ಗೌರವ ಇರಿಸಿಕೊಂಡವರು. ಹೀಗಾಗಿ ವಿವರಿಸುವುದರ ಕುರಿತು ಅವರಿಗೆ ಆಸಕ್ತಿ ಇಲ್ಲ. ತಾವು ಚರ್ಚಿಸುವ ಕೃತಿಯನ್ನೂ ಚಿಂತನೆಯನ್ನೂ ಓದುಗ ಈಗಾಗಲೇ ಅರಿತಿದ್ದಾನೆ ಎನ್ನುವ ನೆಲೆಯಲ್ಲಿಯೇ ಸಂವಾದವನ್ನು ಬೆಳೆಸುತ್ತಾರೆ. ‘ವಿಮರ್ಶಕರಿದ್ದಾರೆ ಎಚ್ಚರಿಕೆ!’ ಎಂಬ ಲೇಖನದಲ್ಲಿ ಅವರು ಎತ್ತಿರುವ ಮಹತ್ವದ ಪ್ರಶ್ನೆಗಳು ಇದಕ್ಕೆ ನಿದರ್ಶನವಾಗಿದೆ. ‘ಕವಿತೆ: ಅರ್ಥ ಮತ್ತು ಅಭಿನಯ’ ಲೇಖನ ಅವರೊಳಗಿನ ಸ್ಪಷ್ಪತೆ ಮತ್ತು ಓದುಗರ ಗ್ರಹಿಕೆಯ ಕುರಿತು ಇರುವ ನಂಬಿಕೆಗೆ ನಿದರ್ಶನವಾಗಿದೆ. ಇನ್ನೊಂದು ಅಂಕಣ ಬರಹಕ್ಕೆ ಸಾಮಾನ್ಯವಾಗಿ ಇರುವುದು ಜನಪ್ರಿಯತೆಯ ಹಂಗು, ಪ್ರೇಕ್ಷಕರನ್ನು ರಂಜಿಸುವುದೇ ಈ ಬರಹಗಳ ಉದ್ದೇಶವಾಗಿರುವ ಉದಾಹರಣೆಗಳು ಕನ್ನಡದಲ್ಲಂತೂ ಸಾಕಷ್ಟಿದೆ. ರಂಜನೆಯ ಅಂಶ ಈ ಬರಹಗಳಲ್ಲಿ ಸಾಕಷ್ಟು ಬಂದು ಒಂದೋ ಬರಹ ಸೋಸಿ ಸೋಸಿ ತಿಳಿ ಮಜ್ಜಿಗೆಯಂತಾಗಿ ಬಿಡಬಹುದು, ಇಲ್ಲವೆ ಪಾಂಡಿತ್ಯ ಪ್ರದರ್ಶನದ ಆಕ್ರಮಣ ಕೂಡ ಆಗಿಬಿಡಬಹುದು.

ನಮ್ಮ ಬಹುತೇಕ ಪತ್ರಿಕಾ ಬರಹಗಳು ಹೂವಾಗಿ ಅರಳದೆ ಮೊಗ್ಗಿನ ರೂಪದಲ್ಲಿಯೇ ಇರುತ್ತವೆ. ತಮ್ಮ ಅಂಕಣ ಬರಹ ದೈನಂದಿನ ಮಿತಿಯನ್ನು ಮೀರಬೇಕು ಎಂಬ ಸ್ಪಷ್ಟತೆ ತಿರುಮಲೇಶರಿಗೆ ಇತ್ತು. ‘ಪತ್ರಿಕೆ ಮತ್ತು ಓದುಗರು ಪ್ರಾದೇಶಿಕವಾಗಿದ್ದರೂ ಇಂದಿನ ಮನುಷ್ಯನ ಅರಿವು ಅಂತರರಾಷ್ಟ್ರೀಯ ವ್ಯಾಪ್ತಿಯದೂ ಆಗ ಬೇಕಾಗುತ್ತದೆ’ ಎನ್ನುವ ಸ್ಪಷ್ಟತೆ ಅವರಿಗೆ ಇತ್ತು. ಈ ಹಿನ್ನೆಲೆಯಲ್ಲಿ ಅವರು ಕನ್ನಡ ಅಂಕಣ ಬರಹದ ಸ್ವರೂಪವನ್ನೇ ವಿಸ್ತರಿಸಿದರು ಎನ್ನಬಹುದು. ಜನಪ್ರಿಯ ಪತ್ರಿಕೆಗೆ ಬರೆಯುತ್ತಿದ್ದೇನೆ ಎನ್ನುವುದು ಅವರ ಬದ್ಧತೆಯನ್ನು ಬದಲಾಯಿಸಲಿಲ್ಲ ಎನ್ನುವುದು ನನಗೆ ಬಹಳ ಮುಖ್ಯವಾದ ಸಂಗತಿಯಾಗಿ ಕಾಣುತ್ತದೆ.

ತಿರುಮಲೇಶ್ ಬಹಳ ಒಳ್ಳೆಯ ಅನುವಾದಕರೂ ಕೂಡ ಹೌದು. ವೈಚಾರಿಕ ಕೃತಿಗಳು, ಕಥೆ-ಕಾದಂಬರಿ, ಪ್ರವಾಸ ಕಥನ ಹೀಗೆ ವೈವಿಧ್ಯಮಯವಾದ ಅನುವಾದಗಳನ್ನು ಮಾಡಿದ್ದಾರೆ. ಷೇಕ್ಸಪಿಯರ್ ನ ಹದಿಮೂರು ನಾಟಕಗಳನ್ನು ಕನ್ನಡಕ್ಕೆ ತರುವ ಸಾಹಸವನ್ನೂ ಕೂಡ ಅವರು ಮಾಡಿದ್ದಾರೆ. ಜ್ಞಾನ-ವಿಜ್ಞಾನ ಹದಿನೆಂಟು ಚಿಂತಕರ ವಿಚಾರಗಳನ್ನು ಕನ್ನಡಕ್ಕೆ ಪರಿಚಯಿಸುವ ಪ್ರಯತ್ನ. ಈ ಅನುವಾದದ ಹಿಂದೆ ಕನ್ನಡದಲ್ಲಿ ವೈಚಾರಿಕ ಕ್ರಮ ಬೆಳೆಸುವ ಪ್ರಯತ್ನ ಕೂಡ ಇದೆ. ಆಲ್ಫ್ರೆಡ್ ಕುಬಿನ್ ಅವರ ಕಾದಂಬರಿಯನ್ನು ‘ಆಚೆ ಬದಿ’ ಎಂದು ಅನುವಾದಿಸಿದ್ದಾರೆ. ಇದು ಯಾವುದೇ ಅನುವಾದಕನಿಗೆ ಸವಾಲು ಎನ್ನಿಸಬಲ್ಲ ವಾಕ್ಯ ರಚನೆಗಳ ಕಾದಂಬರಿ. ತಿರುಮಲೇಶ್ ಈ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಿಲ್ಕೆಯ ‘ಮಾಲ್ಟಿ ಲೌರಿಡ್ಸ್ ಬ್ರಿಗ್ಗ’ ಎಂಬ ಕಥಾನಾಯಕನ ಕುರಿತ ವಿಚಾರಗಳ ಅನುವಾದ ಹೆಚ್ಚಾಗಿ ತಾತ್ವಿಕ ನೆಲೆಗಟ್ಟಿನಲ್ಲಿ ಇದೆ. ಹರ್ಮನ್ ಮೇಲ್ವಿಲನ ನಾಲ್ಕು ಸಣ್ಣಕಥೆಗಳನ್ನು ತಿರುಮಲೇಶ್ ಅನುವಾದಿಸಿದ್ದಾರೆ. ಇಲ್ಲಿ ಕೂಡ ಮೂಲ ಕಥೆಗಳ ಸೊಬಗನ್ನು ಕನ್ನಡೀಕರಿಸಿರುವ ರೀತಿ ಗಮನ ಸೆಳೆಯುತ್ತದೆ. ಸ್ವತಃ ಸೃಜನಶೀಲ ಬರಹಗಾರರೂ ಆಗಿರುವ ತಿರುಮಲೇಶರು ಅನುವಾದಕ್ಕೆ ಬಂದಾಗ ಮೂಲದ ಘನತೆಯನ್ನು ಎತ್ತಿ ಹಿಡಿದಿರುವುದು ಗಮನ ಸೆಳೆಯುವ ಸಂಗತಿಯಾಗಿದೆ.

ತಿರುಮಲೇಶರು ಸ್ವತಃ ಭಾಷಾಶಾಸ್ತ್ರಜ್ಞರು ಕೂಡ ಹೌದು. ಕಾಲಕಾಲಕ್ಕೆ ಈ ಕುರಿತು ಸಾಕಷ್ಟು ಬರವಣಿಗೆಯನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಕನ್ನಡ(2006), ಇನ್ನಷ್ಟು ಕನ್ನಡ(2011) ಹಾಗೂ ಸಮೃದ್ಧ ಕನ್ನಡ(2013) ಕೃತಿಗಳಲ್ಲಿ ಅವರ ಚಿಂತನೆಗಳು ಸಂಗ್ರಹಗೊಂಡಿವೆ. ಅಲ್ಪಪ್ರಾಣ ಮತ್ತು ಮಹಾಪ್ರಾಣದ ಸಂದರ್ಭದಲ್ಲಿ ಅವರು ಸ್ಪಷ್ಟ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ‘ಋ’ ಅಕ್ಷರವನ್ನು ವರ್ಣಮಾಲೆಯಿಂದ ಬಿಟ್ಟಾಗ ಬಳಕೆಯ ಸ್ವಾತಂತ್ರ್ಯದ ಕುರಿತು ಖಚಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದ ಬಹುತ್ವವನ್ನು ಸ್ವೀಕರಿಸಬೇಕು ಎಂದು ಹೇಳುವ ಅವರು ಇಲ್ಲಿ ಆದರ್ಶ ಸ್ಥಿತಿ ಏಕೆ ಸಾಧ್ಯವಿಲ್ಲ ಎನ್ನುವುದನ್ನೂ ನಿಖರವಾದ ಉದಾಹರಣೆಗಳ ಮೂಲಕ ಹೇಳಿದ್ದಾರೆ. ಭಾಷೆ, ಭಾಷಾಂತರ, ಶೈಲಿ ಶಾಸ್ತ್ರದ ಕುರಿತೂ ಅವರ ನಿಲುವುಗಳು ಗಮನ ಸೆಳೆಯುವಂತಿವೆ. ಇಂತಹ ಚಿಂತನೆಗಳನ್ನು ನೀಡಿರುವ ಅವರು ಬಹುಕಾಲ ಕನ್ನಡ ನೆಲದಿಂದ ಹೊರಗೇ ಇದ್ದವರು ಎನ್ನುವುದನ್ನೂ ಗಮನಿಸಬೇಕು. ಚಳವಳಿಗಳ ಹೊರತಾದ ನೈಜ ಕಾಳಜಿಯಿಂದ ಕನ್ನಡವನ್ನು ಹೇಗೆ ಉಳಿಸಬಹುದು ಎನ್ನುವದಕ್ಕೆ ಅವರ ಚಿಂತನೆಗಳು ಜ್ವಲಂತ ನಿದರ್ಶನಗಳಾಗಿವೆ.

ಕನ್ನಡ ಭಾಷೆಯ ಬಳಕೆ ಕುರಿತು ಚಿಂತಿಸುವಾಗಲೂ ಅವರು ಜನರಿಗೆ ಹಿತವಾಗುವ ನೆಲೆಯ ಪರವಾಗಿ ಇದ್ದಾರೆ. ಲಿಪೀಕರಣ ಮತ್ತು ಉಚ್ಚಾರಣೆಯೇ ಸ್ವೀಕರಣದ ಮುಖ್ಯ ನೆಲೆ ಎನ್ನುವ ಅವರ ಚಿಂತನೆ ಗಮನ ಸೆಳೆಯುವಂತಿದೆ. ಇಲ್ಲಿ ಕೂಡ ಅವರ ಪ್ರತಿಪಾದನೆಯಲ್ಲಿ ಚಿಂತನೆಯ ಭಾರ ಇಲ್ಲ. ಅವರು ಸದಾ ಸಂವಾದದ ಪರವಾದ ನಿಲುವನ್ನೇ ಎತ್ತಿ ಹಿಡಿದಿದ್ದಾರೆ. ಭಾಷಾ ಶಾಸ್ತ್ರವನ್ನು ಯಾರ ಮೇಲೆಯೂ ಹೇರಬಾರದು ಎನ್ನುವ ಖಚಿತತೆ ಅವರಿಗೆ ಇದೆ. ಆದರೆ ಅವರು ಸರಳೀಕರಣದ ಪರವಾಗಿ ಇಲ್ಲ. ಭಾಷೆಯ ಸತ್ವವೇ ಹೋಗುವ ಸಾಧ್ಯತೆಗಳ ಕುರಿತೂ ಅವರು ಗಮನ ಸೆಳೆಯುತ್ತಾರೆ. ‘ದುಃಖ’ ಎನ್ನುವುದು ‘ದುಕ್ಕ’ ಆದರೆ ಭಾಷೆಯೇ ಜೀವಂತಿಕೆಯೇ ಹೊರಟು ಹೋಗುತ್ತದೆ ಎನ್ನುವುದನ್ನು ಅವರು ನಿಖರವಾಗಿಯೇ ಗುರುತಿಸುತ್ತಾರೆ.

-5-

ತಿರುಮಲೇಶರ ಒಟ್ಟು ಸಾಹಿತ್ಯವನ್ನು (ನನಗೆ ಅಷ್ಟಾಗಿ ಪ್ರವೇಶವಿಲ್ಲದ ನಾಟಕ ಸಾಹಿತ್ಯವನ್ನು ಹೊರತು ಪಡಿಸಿ) ನೋಡಿದರೆ ನನಗೆ ಮುಖ್ಯವಾಗಿ ಕಾಣುವುದು ಪ್ರಧಾನ ವಾಹಿನಿಯ ಕುರಿತು ಅವರಿಗೆ ಇರುವ ಅಸಹನೆ ಮತ್ತು ಒಳಮಾರ್ಗಗಳನ್ನು ಅದಕ್ಕೆ ಪ್ರತಿಯಾಗಿ ರೂಪಿಸಿಕೊಳ್ಳುವ ಪ್ರಯೋಗಶೀಲತೆ. ಅವರ ಚಿಂತನಾ ಕ್ರಮದಲ್ಲಿ ವೈಚಾರಿಕ ಮತ್ತು ಭಾವನಾತ್ಮಕ ಎಳೆಗಳನ್ನು ಪ್ರತ್ಯೇಕವಾಗಿರಿಸಿ ನೋಡುವುದು ಕಷ್ಟ. ಒಂದು ರೀತಿಯಲ್ಲಿ ಎರಡೂ ಬೆರೆತು ಹೋಗುತ್ತವೆ. ಎಲ್ಲಾ ಮಾಧ್ಯಮದಲ್ಲಿಯೂ ಅವರಿಗೆ ಪ್ರವೇಶವಿದ್ದರೂ ತತ್ವಶಾಸ್ತ್ರ ಅವರಿಗೆ ಪ್ರಿಯವಾದ ನೆಲೆ. ಎಲ್ಲಾ ಬರಹದಲ್ಲಿ ಕೂಡ ಅದರ ತಳಹದಿ ಇರುವುದನ್ನು ಗಮನಿಸಬಹುದು. ಅವರದು ಸಮಗ್ರೀಕರಣದ ಮಾರ್ಗ ಅಲ್ಲ. ಒಂದರ ಚಿಂತನೆ ಇನ್ನೊಂದು ಕಡೆ ಬರುವ ಅಥವಾ ಬೆಳೆಯುತ್ತಾ ಹೋಗುವ ಸಾಧ್ಯತೆ ಅವರಲ್ಲಿ ಕಾಣುವುದಿಲ್ಲ. ಗ್ರಹಿಕೆ ಮತ್ತು ಅಭಿವ್ಯಕ್ತಿಯ ನಡುವಿನ ಸಮೀಕರಣದಲ್ಲಿ ಅವರಿಗೆ ನಿರಂತರ ಕುತೂಹಲ. ಇವೆಲ್ಲವೂ ಒಟ್ಟಾಗಿ ಅವರನ್ನು ಕನ್ನಡ ಪರಂಪರೆಯ ಅನನ್ಯ ನೆಲೆಯಲ್ಲಿ ನಿಲ್ಲಿಸುತ್ತದೆ.

ಅವರು ಅಪಾರ ಓದಿನ ನೆಲೆಯಿಂದ ಜಗತ್ತಿನ ಕಾವ್ಯ ಪರಂಪರೆಯ ಪ್ರತಿಮೆಗಳನ್ನು ಸಹಜ ಎನ್ನುವಂತೆ ತಂದುಬಿಡುತ್ತಾರೆ. ಇದನ್ನು ಅಡಿಗರ ವಿರೋಧಿ ನೆಲೆ ಎಂದು ಓದುವುದು ಸರಿಯಾದ ಗ್ರಹಿಕೆ ಅಲ್ಲ. ಅಡಿಗರಂತೆ ತಿರುಮಲೇಶರ ಓದಿಗೂ ಸಾಕಷ್ಟು ಸಿದ್ಧತೆ ಬೇಕು. ಆದರೆ ಎರಡರ ಸ್ವರೂಪ ಕೂಡ ಭಿನ್ನವಾದದ್ದು. ತಮ್ಮ ಪ್ರಯೋಗಶೀಲತೆಯ ಮೂಲಕವೇ ತಿರುಮಲೇಶರಂತೆ ನಿರಂತರತೆಯನ್ನು ಕಂಡ ಇನ್ನೊಬ್ಬ ಕವಿಯನ್ನು ಕನ್ನಡದಲ್ಲಿ ನೋಡುವುದು ಕಷ್ಟ. ಅವರಿಗೆ ತನ್ನದೇ ಆದ ಓದುಗರನ್ನು ಸೃಷ್ಟಿಸುವ ಲೋಲುಪತೆ ಇಲ್ಲ. ಅವರ ಅಗತ್ಯಗಳನ್ನು ಪೂರೈಸುವ ವ್ಯಾಮೋಹ ಕೂಡ ಇಲ್ಲ. ಹೀಗಾಗಿ ನಿಶ್ಚಿತ ದಡಗಳನ್ನು ಸದಾ ಮರಿಯುತ್ತಾ ಹೋಗುವ ನದಿಯ ಹಾಗೆ ಅವರ ಬರಹ ಹೊಸ ಹಾದಿಗಳನ್ನು ಸೃಷ್ಟಿಸಿ ಕೊಳ್ಳುತ್ತಲೇ ಸಾಗಿದೆ. ಇದಕ್ಕಾಗಿ ಅವರು ತೆರೆದ ಮನಸ್ಸನ್ನು ಹೊಂದಿದವರೂ ಕೂಡ ಆಗಿದ್ದಾರೆ.

ತಿರುಮಲೇಶರ ‘ಸೌಂದರ್ಯ ಲಹರಿ’ ಎನ್ನುವ ಕವಿತೆ ಇದೆ. ಅದು ಬಿಡಿ ಬಿಡಿಗಳ ಮೂಲಕವೇ ಇಡಿಗೆ ಸಾಗುವ ಪ್ರಯತ್ನ. ಅವರನ್ನು ‘ಸಾಮಾನ್ಯತೆಯ ಆರಾಧಕ’ ಎನ್ನುವವರು ಗಮನಿಸಲೇ ಬೇಕಾದ ಸಂಗತಿ ಇದು. ತಿರುಮಲೇಶರ ಗುರಿ ಇಡಿಯೇ ಹೊರತು ಬಿಡಿ ಅಲ್ಲ. ಆದರೆ ಅವರು ಬಿಡಿಯ ಸ್ವಯಂಪೂರ್ಣತೆಯನ್ನೂ ಕೂಡ ಗಮನದಲ್ಲಿ ಇರಿಸಿಕೊಂಡವರು. ಇದು ಅವರ ಎಲ್ಲಾ ಬರಹಕ್ಕೂ ಸಲ್ಲುವ ಮಾತು. ಹೀಗಾಗಿ ತಿರುಮಲೇಶರನ್ನು ಕನ್ನಡದ ಸಹೃದಯ ಲೋಕ ಮತ್ತೆ ಸಮಗ್ರವಾಗಿ ಓದಬೇಕಾದ ಅಗತ್ಯವಿದೆ. ಅದು ಇಂದಿನ ತಾಟಸ್ಥ್ಯದ ಸ್ಥಿತಿಗೆ ಚಾಲನೆ ಕೂಡ ನೀಡಬಹುದು ಎನ್ನುವುದು ನನ್ನ ಒಟ್ಟು ಗ್ರಹಿಕೆ.

ಅವರಿಗೆ ಎಂಬತ್ತನೇ ವರ್ಷದ ಶುಭಾಶಯ ಕೋರುತ್ತಾ ಇಂತಹದೊಂದು ಗಟ್ಟಿ ಬರಹಗಳ ಗುಚ್ಚವನ್ನು ನೀಡಿದ್ದಕ್ಕೆ ವಂದನೆಗಳನ್ನು ಸಲ್ಲಿಸುತ್ತೇನೆ.