“ರಶೀದ್ ಬರಹಗಳನ್ನು ಮೊದಲಲ್ಲಿ ಓದುವಾಗ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು ‘ಅದು ಹೇಗೆ ಇವರ ಬದುಕಿನಲ್ಲಿ ನನಗೆ ಅಸಾಧ್ಯವಾದ ಏನೆಲ್ಲ ಆಗುತ್ತದಲ್ಲ’ ಎಂದು. ಅದು ಕೇವಲ ನನ್ನ ಪ್ರಶ್ನೆಯಲ್ಲದೇ ಬೆರಗು ಕೂಡಾ ಆಗಿತ್ತು! ಬದುಕನ್ನು ತುಂಬ ಕಠೋರವಾಗಿ… ಅಂದರೆ ಅಗತ್ಯಕ್ಕಿಂತ ಹೆಚ್ಚು ಕಠೋರವಾಗಿ ಬದುಕುವ ಅಗತ್ಯವಿಲ್ಲ ಮತ್ತು ಸಣ್ಣದೊಂದು ಕಾರುಣ್ಯದ ಹನಿ ಜಗತ್ತಿಗೆ ಚುಮುಕಿಸಲು ಹೆಚ್ಚೇನೂ ಶ್ರಮ ವಹಿಸಬೇಕಿಲ್ಲ ಎಂದು ಅರ್ಥವಾದ ನಂತರ, ಅವರ ಕಷ್ಟಸುಖ ಕೇಳುತ್ತಲೇ ಎದೆಯಲ್ಲಿ ಕಾರುಣ್ಯ ಮೂಡಿ, ತುಸು ‘ಹೆಚ್ಚು ಮನುಷ್ಯಳಾಗುತ್ತಾ’ ಹೋದೆ ಅನ್ನಬಹುದು”
ಕತೆಗಾರ ಅಬ್ದುಲ್ ರಶೀದ್ ಅವರ ‘ಮೈಸೂರು ಪೋಸ್ಟ್’ ಕೃತಿಗೆ  ಭಾರತಿ ಬಿ.ವಿ. ಬರೆದ ಮುನ್ನುಡಿ

 

ಮೈಸೂರು ನನ್ನ ಬಾಲ್ಯವನ್ನು ಕಳೆದ ಸ್ಥಳ. ಅಜ್ಜನ ಮನೆ ಅಲ್ಲಿ ಇದ್ದಿದ್ದರಿಂದ ಆಗಾಗ ಹೋಗುತ್ತಲೇ ಇರುತ್ತಿದ್ದೆ. ಹೋದಾಗೆಲ್ಲ ಅದೇ ಬಲ್ಲಾಳ್ ಹೋಟೆಲ್, ಇಂದ್ರ ಭವನ್, ಒಂಟಿ ಕೊಪ್ಪಲ್, ಕೃಷ್ಣಮೂರ್ತಿ ಪುರಂ ಅಂತ ನಮ್ಮ ಮಾಮೂಲಿ ಸ್ಥಳಗಳ ಭೇಟಿ… ಅದು ಬಿಟ್ಟರೆ ದಸರಾ ಬಂದಾಗ ಅರಮನೆ, ಸಾಲು ದೀಪ, ಝಗಮಗ, ವಸ್ತು ಪ್ರದರ್ಶನ, ಡೆಲ್ಲಿ ಹಪ್ಪಳ, ರಿಬ್ಬನ್ನು, ಲೋಲಾಕು ಅಷ್ಟೇ. ಆಗೇನೋ ಚಿಕ್ಕವಳು ಸರಿ, ಆದರೆ ದೊಡ್ಡವಳಾದ ನಂತರವೂ ಅದರಾಚೆಗೆ ಬದುಕನ್ನು ನೋಡುವ ಪ್ರಯತ್ನ ನಾನು ಮಾಡಲೇ ಇಲ್ಲ. ಸಿದ್ಧ ಮಾದರಿಯ ರಸ್ತೆಗಳಲ್ಲಿ ಓಡಾಡುವವರ ಹಣೆಬರಹವೇ ಇಷ್ಟು. ಅದದೇ ದಾರಿಯಲ್ಲಿ ನಡೆಯುತ್ತಿರುತ್ತೇವೆ ಆಚೀಚೆ ನೋಡದೇ. ಯಾಕೆಂದರೆ ರಸ್ತೆ ಅದೇ ಆದ್ದರಿಂದ, ಆಚೀಚೆ ಏನಿದೆ ಎಂಬುದು ಅದಾಗಲೇ ಗೊತ್ತಿರುವುದರಿಂದ ಪ್ರತಿಬಾರಿ ನೋಡಿದಾಗಲೂ ಅದಲ್ಲದೇ ಮತ್ತೇನೂ ಇರುವುದಿಲ್ಲ. ಕೆಲವು ಸಲ ದಾರಿ ತಪ್ಪಿ ಹೋಗಿ ಅಲೆಯುವಾಗಲೇ ಅದರಾಚೆಗಿನ ಬದುಕನ್ನು ನೋಡಲು ಸಾಧ್ಯವಾಗುವುದು. ರಶೀದರ ಥರದ ಅಲೆಮಾರಿಗಲ್ಲದೇ ಮತ್ತೆ ಯಾರಿಗೆ ಹೀಗೆ ದಾರಿ ತಪ್ಪಿ ಹೋಗುವ ಸುಖ ಸಿದ್ಧಿಸಲು ಸಾಧ್ಯ! ಹೀಗೆ ಸಿದ್ಧ ಹಾದಿ ಬಿಟ್ಟು ಎಲ್ಲೆಲ್ಲಿಯೋ ಅಲೆಯುವಾಗ ಎದುರಾದ ವ್ಯಕ್ತಿಗಳ ಚಿತ್ರಣಗಳೇ ‘ಮೈಸೂರ್ ಪೋಸ್ಟ್’. ಈ ಪುಸ್ತಕಕ್ಕೆ ಟ್ಯಾಗ್ ಲೈನ್ ಕೂಡಾ ‘ಅರಮನೆ ನಗರಿಯ ಉಳಿದ ಚಿತ್ರಗಳು’ ಎಂದೇ ಇದೆ!

(ಅಬ್ದುಲ್ ರಶೀದ್)

ರಶೀದ್ ಬರಹಗಳನ್ನು ಮೊದಲಲ್ಲಿ ಓದುವಾಗ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು ‘ಅದು ಹೇಗೆ ಇವರ ಬದುಕಿನಲ್ಲಿ ನನಗೆ ಅಸಾಧ್ಯವಾದ ಏನೆಲ್ಲ ಆಗುತ್ತದಲ್ಲ’ ಎಂದು. ಅದು ಕೇವಲ ನನ್ನ ಪ್ರಶ್ನೆಯಲ್ಲದೇ ಬೆರಗು ಕೂಡಾ ಆಗಿತ್ತು! ಬದುಕಿನ ಒಂದು ಹಂತದಲ್ಲಿ ನನಗೆ ಅರ್ಥವಾಗಿತ್ತು ರಶೀದ್ ಬದುಕಿನಲ್ಲಿ ಯಾಕೆ ಅವೆಲ್ಲ ಆಗುತ್ತಿತ್ತು ಎಂಬುದಕ್ಕೆ ಕಾರಣ. ಅವರು ಅಲೆಮಾರಿಯಂತೆ ಅಡ್ಡಾಡುವಾಗ ಹಾದಿಯುದ್ದಕ್ಕೂ ಸಿಗುವವರನ್ನೆಲ್ಲ ಮಾತನಾಡಿಸುವುದರಿಂದ, ಅವರ ಕಥೆಗಳಿಗೆ ಕಿವಿಯಾಗುವುದರಿಂದಲೇ ಅವರ ಬದುಕಿನಲ್ಲಿ ನನಗೆ ಎದುರಾಗದ್ದೆಲ್ಲವೂ ಎದುರಾಗುತ್ತಿತ್ತು ಎಂಬ ಸರಳ ಸತ್ಯ ಅರ್ಥವಾಯಿತು. ಆ ನಂತರ, ಅಪರಿಚಿತರನ್ನು ಕಂಡರೆ ಮಾರು ದೂರದಲ್ಲಿ ನಿಲ್ಲುತ್ತಿದ್ದ ನಾನು, ಚಿಪ್ಪಿನಲ್ಲಿ ಅಡಗುತ್ತಿದ್ದ ನಾನು, ರಸ್ತೆಯಲ್ಲಿ ಎದುರಾಗುವ ಎಲ್ಲರೊಡನೆಯೂ ಸಂವಹನ ಶುರು ಮಾಡಿದೆ. ಹಣ್ಣು-ತರಕಾರಿ ವ್ಯಾಪಾರಿಗಳು, ಆಟೋ ಚಾಲಕರು, ಮನೆ ಸಹಾಯಕರು ಎಲ್ಲರೊಡನೆಯೂ ಮಾತನಾಡುವುದರಿಂದ ನನಗೆ ನನ್ನದಲ್ಲದ ಲೋಕದ ಅನೇಕ ಅನೂಹ್ಯ ಬದುಕುಗಳು ಎದುರಾಗುತ್ತವೆ. ಬದುಕನ್ನು ತುಂಬ ಕಠೋರವಾಗಿ… ಅಂದರೆ ಅಗತ್ಯಕ್ಕಿಂತ ಹೆಚ್ಚು ಕಠೋರವಾಗಿ ಬದುಕುವ ಅಗತ್ಯವಿಲ್ಲ ಮತ್ತು ಸಣ್ಣದೊಂದು ಕಾರುಣ್ಯದ ಹನಿ ಜಗತ್ತಿಗೆ ಚುಮುಕಿಸಲು ಹೆಚ್ಚೇನೂ ಶ್ರಮ ವಹಿಸಬೇಕಿಲ್ಲ ಎಂದು ಅರ್ಥವಾದ ನಂತರ, ಅವರ ಕಷ್ಟಸುಖ ಕೇಳುತ್ತಲೇ ಎದೆಯಲ್ಲಿ ಕಾರುಣ್ಯ ಮೂಡಿ, ತುಸು ‘ಹೆಚ್ಚು ಮನುಷ್ಯಳಾಗುತ್ತಾ’ ಹೋದೆ ಅನ್ನಬಹುದು. ಹಾಗೆ ಮನುಷ್ಯಳಾಗಲು ಪರೋಕ್ಷವಾದ ಕಾರಣ ಅಬ್ದುಲ್ ರಶೀದ್ ಬರಹಗಳು!

ರಶೀದ್ ‘ಮೈಸೂರ್ ಪೋಸ್ಟ್’ನ ಲೇಖಕನ ಮಾತಿನಲ್ಲಿ ಬರೆಯುತ್ತಾರೆ ‘ಬರೆದು ಎಷ್ಟೋ ಕಾಲವಾದ ಬಳಿಕ ನಾನೇ ಓದಿದಾಗ ವಿಷಣ್ಣತೆಯಂಥದ್ದು ಗಂಟಲಿಗೆ ಸಿಕ್ಕಿಹಾಕಿಕೊಂಡಂತಾಗುತ್ತಿದೆ. ನಾನು ಬರೆಯಲೋಸುಗ ಇವರೆಲ್ಲ ನೆಪದಂತೆ ಆಗಿಬಿಟ್ಟರಲ್ಲಾ ಎಂದು’ ಎಂದು. ಪ್ರವಾಸಿ ತಾಣಗಳ ಬಗ್ಗೆ ಬರೆಯುವಾಗಲೂ ಎಷ್ಟೋ ಬಾರಿ ಹೀಗೆ ಅನ್ನಿಸುತ್ತಿರುತ್ತದೆ. ಬರೆದರೆ ಆ ಸ್ಥಳ ಪ್ರಾಮುಖ್ಯತೆ ಪಡೆದು, ಆ ಸ್ಥಳಕ್ಕೆ ಒಂದಿಷ್ಟು ಜನರು ಬಂದು ಹೋಗಿ ಸ್ಥಳೀಯರಿಗೊಂದಿಷ್ಟು ಉದ್ಯೋಗಾವಕಾಶಗಳು ದೊರೆಯಬಹುದೇನೋ ಎಂದೂ, ಬರೆದ ನಂತರ ಪ್ರವಾಸಿಗಳು ಆ ಸ್ಥಳದಲ್ಲಿ ಸ್ವೇಚ್ಛೆಯಾಗಿ ವರ್ತಿಸುವುದನ್ನು ಕಂಡಾಗ ಯಾಕಾದರೂ ಬರೆದೆವೋ, ಅವರ ಪಾಡಿಗವರು ಸುಖವಾಗಿದ್ದರು ಎಂದೂ ಅನ್ನಿಸುತ್ತಿರುತ್ತದೆ. ಬದುಕಿನ ಅಸ್ಪಷ್ಟ ಗೆರೆಗಳ cut off point ಎಲ್ಲಿರುತ್ತದೆ ಎನ್ನುವುದೇ ನಮಗೆ ಸರಿಯಾಗಿ ಕಾಣಿಸುವುದಿಲ್ಲ. ಬರೆದರೆ ಇನ್‌ಸೆನ್ಸಿಟಿವ್ ಆದೆವೇನೋ ಎನ್ನಿಸುತ್ತದೆ, ಬರೆಯದಿದ್ದರೆ ಇದನ್ನೆಲ್ಲ ಲೋಕದೆದುರು ತೆರೆದಿಡಲು ಶಕ್ತರಾಗಿದ್ದೂ, ತೆರೆದಿಡದೆ ತಪ್ಪು ಮಾಡಿದೆವೇನೋ ಅನ್ನಿಸುತ್ತದೆ… ಒಟ್ಟಿನಲ್ಲಿ ಅರ್ಥವಾಗುವುದಿಲ್ಲ ಯಾವುದು, ಎಲ್ಲಿಂದ, ಎಲ್ಲಿಯವರೆಗೆ ಎನ್ನುವ ಮನಸ್ಸಿನ ತಾಕಲಾಟಗಳು. ಆದರೆ ರಶೀದ್ ಇಂಥ ಬರಹಗಳನ್ನು ನನ್ನೆದುರು ಇಡುವುದರಿಂದ ನಾನು ಹೆಚ್ಚು ಮನುಷ್ಯಳಾಗುತ್ತ ಹೋದೆ ಅನ್ನುವುದು ಈ ರೀತಿಯ ಚಿತ್ರಣಗಳನ್ನು ಬರೆಯುವುದರ ಸಾರ್ಥಕತೆ ಅನ್ನಬಹುದಲ್ಲವಾ? ನನ್ನಂತೆ ಎಷ್ಟು ಜನರು ಹೀಗೆ ಕಥೆಗಳಿಗೆ ಕಿವಿಯಾಗುತ್ತಾ, ಹೆಚ್ಚು ಮನುಷ್ಯರಾಗುತ್ತಾ ಇದ್ದಾರೋ! ಅಸಲಿಗೆ ಗೊಂದಲಗಳಿಂದ, ನೋವಿನಿಂದ ತುಂಬಿದ ಜಗತ್ತಿನಲ್ಲಿ ಇರುವವರಿಗೆ ಹಲವಾರು ಬಾರಿ ಕೇಳಲೊಂದು ಕಿವಿ ಬೇಕಿರುತ್ತದೆ. ಕಷ್ಟಗಳೆಂದರೆ ಕೇವಲ ಹಣದ್ದಲ್ಲ, ಊಟ-ಬಟ್ಟೆಯದ್ದಲ್ಲ… ಎಷ್ಟೋ ಸಾವಿರ ಕಷ್ಟಗಳಿರುತ್ತವೆ ಜಗತ್ತಿನಲ್ಲಿ. ಈ ‘ಅರಮನೆಯ ನಗರಿಯ ಉಳಿದ ಚಿತ್ರಗಳಲ್ಲಿ’ ಅಂಥ ಅನೇಕ ಕಥೆಗಳಿವೆ.

ಒಟ್ಟಿನಲ್ಲಿ ಅರ್ಥವಾಗುವುದಿಲ್ಲ ಯಾವುದು, ಎಲ್ಲಿಂದ, ಎಲ್ಲಿಯವರೆಗೆ ಎನ್ನುವ ಮನಸ್ಸಿನ ತಾಕಲಾಟಗಳು. ಆದರೆ ರಶೀದ್ ಇಂಥ ಬರಹಗಳನ್ನು ನನ್ನೆದುರು ಇಡುವುದರಿಂದ ನಾನು ಹೆಚ್ಚು ಮನುಷ್ಯಳಾಗುತ್ತ ಹೋದೆ ಅನ್ನುವುದು ಈ ರೀತಿಯ ಚಿತ್ರಣಗಳನ್ನು ಬರೆಯುವುದರ ಸಾರ್ಥಕತೆ ಅನ್ನಬಹುದಲ್ಲವಾ?

ರಶೀದ್‌ನ ಬರಹಗಳಲ್ಲಿನ ಒಂದು ಸ್ಪೆಷಾಲಿಟಿ ಅಂದರೆ ವಿಷಾದದ, ದುಃಖದ ಕಥೆಗಳನ್ನು ದುಃಖದ ಕಡಾಯಿಯಲ್ಲಿ ಅದ್ದಿ ತೆಗೆಯದೆ, ಹಗುರವಾಗಿ ಹೇಳಿದರು ಕೂಡಾ ಆ exact ಭಾವವನ್ನು ನಮಗೆ ತಲುಪಿಸಲು ಶಕ್ತರಾಗುವುದು. ಅವರು ಭೇಟಿಯಾದವರೆಲ್ಲ ನೋವಿದ್ದರೂ, ನೋವಿನಲ್ಲಿ ಎದೆ ಎದೆ ಬಡಿದುಕೊಂಡು ಅಳುತ್ತಾ ಕೂರುವುದಿಲ್ಲ. ಬದಲಿಗೆ ಸ್ವಲ್ಪ ನಗುತ್ತಾ, ಸ್ವಲ್ಪ ಅಳುತ್ತಾ, ಸ್ವಲ್ಪ ವಿಷಾದಿಸುತ್ತಾ ಬದುಕು ಸಾಗಿಸುತ್ತಿರುತ್ತಾರೆ.

‘ಬುಟ್ಟಿ ಕೊರಚರ ಮದುವೆ ಹಾಡು’ವಿನಲ್ಲಿ ‘ಸಾರ್ ವಾರಕ್ಕೊಮ್ಮೆ ಹಸಿವು ಆಗುವಂತಿದ್ದರೆ ಎಷ್ಟು ಚೆನ್ನಾಗಿತ್ತು. ದಿನಕ್ಕೊಂದು ಸಲ ಹಸಿವೆಯಾಗುವ ಹಾಗೆ ಮಾಡಿ ಆ ಭಗವಂತ ಏನು ಅನ್ಯಾಯ ಮಾಡಿಬಿಟ್ಟ ಸಾರ್’ ಎಂದು ನಗೆಯಾಡುವ ಮುನಿಯಮ್ಮ,
‘ದೇವರು ನಮಗೆ ಮೋಸ ಮಾಡಿದರು. ಯಾರೋ ನಮ್ಮ ತಲೆಯಲ್ಲಿ ಸಿಂಹಾಸನ ಭಾಗ್ಯ ಅಂತ ಹಣೆಬರಹ ಬರೆದಿದ್ರು ಸಾರ್. ಹಣೆಯಲ್ಲಿ ಬರೆದಿದೆ ಅಂತ ತಲೆ ಕಡಿದು ಸಿಂಹಾಸನದ ಮೇಲಿಡಬಹುದಾ’ ಎಂದು ಗೊಣಗುವ ಕಟ್ಟ ಪೋಲಯ್ಯ,
ಬಿ.ಎಂ.ಶ್ರೀ ಅವರ ಕರುಣಾಳು ಬಾ ಬೆಳಕೆ, ಕುವೆಂಪುರವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಎಲ್ಲವನ್ನೂ ಪೂರ್ತಿಯಾಗಿ ಹೇಳುವವರಿಗೆ ಹೆಂಡತಿ ಹಾರ್ಮೋನಿಯಂ ನುಡಿಸುತ್ತಿದ್ದರು ಎನ್ನುವುದೊಂದನ್ನು ಬಿಟ್ಟು ಅವರ ಬಗ್ಗೆ ಮತ್ತೇನೂ ನೆನಪಿಲ್ಲದಂತಾಗಿ ‘ಮೆಮೊರಿಗಳು ಎಲ್ಲ ಕ್ಲಾಷ್ ಆಗುತ್ತಿವೆ’ ಎಂದು ಸುಸ್ತಾಗಿ ಕೈ ಚೆಲ್ಲುವ ಅಠಾಣಾ ರಾಮಣ್ಣ,
‘ಈಸ್ಟ್ ಇಂಡಿಯಾ ಕಂಪನಿಗೆ ತನ್ನ ಮುತ್ತಜ್ಜಿ ಆ ಕಾಲಕ್ಕೆ ಅರವತ್ತೈದು ಸಾವಿರ ರೂಪಾಯಿ ಶೇಕಡಾ ಆರರ ಬಡ್ಡಿಯ ಮೇರೆಗೆ ಸಾಲ ಕೊಟ್ಟಿದ್ದರು. ಈಗ ನಮಗೆ ಒಂದು ಲಕ್ಷದ ಐವತ್ತೈದು ಸಾವಿರ ಕೋಟಿ ಬರಬೇಕಿದೆ. ಅದು ಬರದಿದ್ದಲ್ಲಿ ಹೋಗಲಿ ಕೊಡಗಿನ ರಾಜಾಸೀಟು, ಗದ್ದುಗೆ, ಕೋಟೆ, ಅರಮನೆ, ಕಾಫಿತೋಟ ಇವೆಲ್ಲವೂ ನನಗೆ ಬರಬೇಕಿದೆ’ ಎನ್ನುವ ವಿಲಕ್ಷಣ ಮಾತುಗಳ ಹಿಟ್ಟಿನ ಗಿರಣಿಯ ನಾಗರಾಜ ಒಡೆಯರು,
ಹಿಡಿದ ಕಳ್ಳ ಹೇಗಿದ್ದ ಅಂದರೆ ‘ನಿಮ್ಮ ಹಾಗೇ ಇದ್ದ’ ಎನ್ನುವ ಮುಗ್ಧ ಮನೋರಮಾ,
‘ನಿಜವಾಗಿ ನಾವು ಕುರುಡರಾದದ್ದು ಅಪ್ಪ ಸತ್ತ ಮೇಲೇ’ ಎನ್ನುವ ನಾಲ್ವರು ಅಂಧ ಸಹೋದರಿಯರು,
ಸಮುದ್ರದಲ್ಲಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳಲು ಹೋದವರು, ಸ್ವಲ್ಪ ಧೈರ್ಯ ಬರಲಿ ಎಂದು ಒಂದು ಲೋಟಾದಲ್ಲಿ ಮದ್ಯಕ್ಕೆ ವಿಷವನ್ನು ಬೆರೆಸಿ ಎದುರಿಗಿಟ್ಟುಕೊಂಡು, ಇನ್ನೊಂದರಲ್ಲಿ ಏನೂ ಬೆರೆಸದ ಮದ್ಯವನ್ನು ಕುಡಿದ ನಂತರ ಮದ್ಯದ ನಶೆ ತಲೆಗೇರಿ, ಹಾಗೆಯೇ ನಿದ್ದೆ ಬಂದು, ನಿದ್ದೆಯಲ್ಲಿ ಕಾಲು ತಾಗಿ ವಿಷದ ಲೋಟ ಸಮುದ್ರದ ಮರಳು ಸೇರಿ, ಮರುದಿನ ಮುಂಜಾನೆ ಜುಹು ಬೀಚಿನಲ್ಲಿಯೇ ನಿದ್ರೆಯಿಂದೆದ್ದ ಸೂರ್ಯನಾರಾಯಣ ಪಾಂಡೆ…

ವಿಚಿತ್ರ ಬದುಕುಗಳು, ವಿಲಕ್ಷಣ ಅಳಲುಗಳ ಬದುಕುಗಳ ಬಗ್ಗೆ ಓದುವಾಗ ಎದೆ ಮತ್ತು ಕಣ್ಣು ಎರಡೂ ಒದ್ದೆಯಾಗುತ್ತದೆ.

( ಭಾರತಿ ಬಿ.ವಿ.)

ಅರಮನೆ ನಗರಿಯ ಉಳಿದ ಚಿತ್ರಗಳು ಎಂದು ಹೇಳಿದರೂ ಇಲ್ಲಿನ ಬರಹಗಳಲ್ಲಿನ ಸಾಕಷ್ಟು ಬದುಕುಗಳು ಅರಮನೆಗೆ ತಳುಕು ಹಾಕಿಕೊಂಡಿವೆ. ಅರಮನೆಯ ಆಭರಣಗಳನ್ನು ಪಾಲಿಷ್ ಮಾಡುತ್ತಿದ್ದ ಅಕ್ಕಸಾಲಿ, ಮಹಾರಾಜರ ಕೃಪೆಯಿಂದ ಗಡಿಯಾರದ ಅಂಗಡಿಯನ್ನಿಟ್ಟವರು, ಸ್ಥೂಲಕಾಯರಾಗಿದ್ದ ಮಹಾರಾಜರಿಗೆ ಸಿಂಹಾಸನ ಕೂರಲು ಸಾಲದಾದಾಗ ಅದರ ಮೂಲರೂಪಕ್ಕೆ ಕುಂದು ಬಾರದಂತೆ ಹಿಗ್ಗಿಸಿದ ಅರಮನೆಯ ಬಡಗಿ, ಲಲಿತ ಮಹಲ್ ಅರಮನೆಯ ಎದುರಿನ ಉದ್ಯಾನವನ ಮಾಡಿದವರು ಈ ರೀತಿಯವರೆಲ್ಲರ ಪರಿಚಯದ ಜೊತೆಗೆ, ದೇವನೂರು ಮಹಾದೇವ, ಬರಹಗಾರ ಚದುರಂಗ, ನಮ್ಮ ಪ್ರೀತಿಯ ತೇಜಸ್ವಿ ಅವರ ಕಥೆಯೂ ಸೇರಿದ ‘ಮೈಸೂರ್ ಪೋಸ್ಟ್’, ಅಲೆಮಾರಿಯಂತೆ ಬದುಕಬೇಕೆನ್ನುವ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ!

ನಿಜಕ್ಕೂ ಗುರುವಲ್ಲದ ಗುರುವಿನ ಪುಸ್ತಕದ ಬಗ್ಗೆ ನಾನು ಬರೆಯುತ್ತಿರುವುದು ರಶೀದರ ಬರಹಗಳಷ್ಟೇ ಅನೂಹ್ಯವಾದ, ಅನಿರೀಕ್ಷಿತವಾದ ಒಂದು ಸಂಗತಿ ಅನ್ನಿಸುತ್ತಿದೆ. ‘ಕೆಂಡಸಂಪಿಗೆ’ಗೆ ಬರೆಯಲು ಹೊರಟ ಕಾಲಕ್ಕೆ ‘ದುಃಖವನ್ನು ತೀರಾ ಅಳುಬುರುಕಿಯಂತೆ ಹೇಳದೆ, ತೆಳುವಾಗಿಸಿ ಅದರಲ್ಲಿನ ದುಃಖವನ್ನು, ವಿಷಾದವನ್ನು ಓದುಗರಿಗೆ ಮುಟ್ಟಿಸು’ ಎಂದು ಸಲಹೆ ಇತ್ತು ಬರೆಸಿದ ರಶೀದ್ ಪುಸ್ತಕದ ಬಗ್ಗೆ ನಾನು ಬರೆಯುವುದು ಒಂಥರಾ ಪುಳಕವೂ ಹೌದು, ಸಂಕೋಚವೂ ಹೌದು. ಒಂದು ರೀತಿಯಲ್ಲಿ ಬೆರಗುಗಣ್ಣಿನ ಶಿಷ್ಯೆಯ ಥರದ ಮಾತುಗಳು ಅನ್ನಬಹುದು. ಏನು ಹೇಳಲು ಹೊರಟು ಏನು ಹೇಳಿರುವೆನೋ ಗೊತ್ತಿಲ್ಲ. ತೀರಾ ಗಂಭೀರವಾಗಿಲ್ಲವಾದರೂ, ಎದೆಯಿಂದ ಹುಟ್ಟಿದ ಪ್ರಾಮಾಣಿಕ ಮಾತುಗಳು ಇವು ಅನ್ನುವುದು ಮಾತ್ರ ಸತ್ಯ.