ಮಳೆ ಸುರಿದ ಸಂಜೆ….

ಮಳೆ ಸುರಿದ ಸಂಜೆ ಕೈಗಳು ತನ್ನಗರಿವಿಲ್ಲದಂತೆ ಕಪಾಟಿನೆಡೆಗೆ ನಡೆಯುತ್ತವೆ ಒಂದು ಕೈಯಲ್ಲಿ
ಗುಟುಕು ಚಾ ಹೀರುತ್ತಾ
ಮತ್ತೊಂದು ಕೈ ಮೂಲೆಯಲ್ಲಿ ಉಸಿರು ಕಟ್ಟಿಕೊಂಡು ಧೂಳಿನಲ್ಲಿ ಬಿದ್ದ ಈಗಲೂ ಆಗಲೂ ಎನ್ನುವ ಅಕ್ಷರ ಮಾಸಿದ ಪತ್ರವನ್ನು ಹುಡುಕುತ್ತದೆ

ಹಾಗೆ
ಮತ್ತೊಮ್ಮೆ ಓದಿ
ಎದೆಗಾನಿಸಿಕೊಂಡು
ಕುರ್ಚಿಗೆ ಓರಗಿದಾಗ
ಎದೆಯ ಮೋಡ ಕವಿಯುತ್ತದೆ
ನೆನಪುಗಳ ಜೋರು ಗುಡುಗು ಸಿಡಿಲು ಮಿಂಚಿನ ಆರ್ಭಟದ
ಹಿಂದೆಯೇ
ಕಣ್ಣುಗಳಿಂದ ವಿರಹದ ಮಳೆ ಸುರಿಯುತ್ತದೆ
ಪ್ರೇಮಿಯೂ ಕೂಡ ಥೇಟ್ ಮಳೆಗಾಲದಂತೆ

ಅದೆಂಥ ಜೋರು ಮಳೆಯೆಂದರೆ ಅದೆಷ್ಟು ಬಾರಿ ತೊಯ್ದು ತೊಪ್ಪೆಯಾದೆನೊ
ತುಸು ಎದ್ದು ಮೈ ಕೊಡವಿ
ಮತ್ತೆ ಮಡಚಿಟ್ಟ ಪುಟದ ನಡುವೆ ಪತ್ರವನ್ನು
ಆಗ
ತಾನೇ ಹಡೆದ ಮಗುವಿನಂತೆ
ಜಾಗರೂಕತೆಯಿಂದ ಇಟ್ಟು
ಒಂದು ದೀರ್ಘವಾದ ಉಸಿರನ್ನು ಬಿಟ್ಟಾಗ
ಮತ್ತೆ
ಎದೆಯಲ್ಲಿ ತಣ್ಣನೆ ಬೇಸಿಗೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು