1

ನಿಷಿದ್ಧ ಸಮಯದಲ್ಲಿ ನಿಶೇಕಕ್ಕೆ ತಯಾರಾದವನಂತೆ…..

ಇಷ್ಟಿಷ್ಟೇ ಕತ್ತಲನ್ನು ತಿನ್ನುತ್ತಾ
ದಾಪುಗಾಲಿಡುತ್ತಿರುವ ಬೆಳಗು
ಕಿರ್ರ್ ಎನ್ನುವ ಯಾವುದೋ ಹಕ್ಕಿಯ ರಾಗ
ದೂರದ ನಾಯಿ ಬೊಗಳುವಿಕೆ
ನೋಯುತ್ತಿರುವ ತೊಡೆಗಳ ಮೇಲ್ಭಾಗ
ತಡೆಯಲಾಗದ ಸ್ರಾವ
ಕಾಗೆಯೊಂದರ ಮೂದಲಿಕೆ
ಬೆಳಗಿನ ನೆಂಟನ ನಿರಂತರ ಕರೆ

ಅದೇ ಬೆಳಗು ಅದೇ ನಾನು…
ಮೊಟ್ಟೆಯೊಳಗೆ ಅವಿತುಕೊಂಡು
ಅಂಗಾಂಗ ಬೆಳೆದು ಪುಷ್ಟಿಯಾದಮೇಲೂ
ಹೊರಬರಲಾಗದಂತೆ ತಡೆಯುತ್ತಿರುವ ಶಕ್ತಿಗೆ
ನಾ ಹೆದರುತ್ತಿಲ್ಲ ಹೋರಾಡುತ್ತಿರುವುದು
ಯಾಕಾದರೂ ತಿಳಿಯುತ್ತಿಲ್ಲ

ಚಿವ ಚಿವ ಗುಬ್ಬಿ ಸಂತೆಯೊಳಗೆ
ಅನಾಥ ನರಳುವ ನೋವಿಗೆ
ಬೆಳಗಿನ ವೈವಿಧ್ಯತೆ ಇಲ್ಲವಷ್ಟೆ
ಆದರೂ ತಣ್ಣನೆಯ ಹೊತ್ತಲ್ಲೂ
ಕೊರೆದು ನೋಯಿಸಬಲ್ಲ ತೀವ್ರತೆ ಇದೆ
ಕಿಬ್ಬೊಟ್ಟೆಯ ಸಾಕ್ಷಿಯಾಗಿಯೂ

ಇದೇ ಹೊತ್ತಲ್ಲಿ ನೀನೂ ಆವರಿಸತೊಡಗಿದ್ದೀ
ಇಚ್ಛೆಯರಿಯದವನಂತೆ
ನಿಷಿದ್ಧ ಸಮಯದಲ್ಲಿ ನಿಶೇಕಕ್ಕೆ
ತಯಾರಾದವನಂತೆ
ಚಿವ ಚಿವ ಸದ್ದು ಜೋರಾಗುತ್ತಿದೆ
ಅಜ್ಞಾತ ಹಕ್ಕಿಯ ಕೂಗೂ…
ಮೇಲ್ತೊಡೆಯ ನೋವೂ…
ತಡೆಯಲಾಗದ ಸ್ರಾವವೂ…

ಕಾಲ ಕಿರುಬೆರಳಿಂದ
ನೆತ್ತಿಯವರೆಗೂ ಹಬ್ಬುತ್ತಿರುವ
ಕೆಂಡದ ಉರಿಯೊಳಗೆ ಮೊಟ್ಟೆ
ಮರಿ ಸಮೇತ ಬೇಯುತ್ತಿರುವಾಗ
ವಾಸನೆ ಸುತ್ತೆಲ್ಲಾ ಹರಡುತ್ತಾ
ಪ್ರತಿಭಟನೆಯದೊಂದು
ಭಾಗವಾಗುತ್ತಿದೆ….

2

ಸತ್ತ ಎಲೆಗಳ ಮೇಲೆ

ಅವನಂದ
ಇಲ್ಲಿ ಸತ್ತ ಎಲೆಯ
ಮೇಲೂ ಒಂದೊಂದು
ಹೆಸರಿದೆ ಎಂದು
ಸತ್ತ ಹೃದಯದ ಮೇಲೆ
ನಿನ್ನ ಹೆಸರಿದೆ ಎಂದು ಹೇಳಲು
ಹಿಂಜರಿದೆ…

ಬದಲಾಗಿ ಜೀವಂತ ಎಲೆಗಳ
ಹಸಿರು ಸಮೃದ್ಧಿಯಲಿ
ಉಸಿರಾಡುತ್ತಿರುವ
ಹೆಸರೊಂದಕ್ಕಾಗಿ
ಹೂಮಾರುವ ಹಸಿದ
ಹರಿದ ಬಟ್ಟೆ ತೊಟ್ಟ
ಆ ಅವನ
ತುಳುಕುವ ಕಿರಣದ
ಕಣ್ಣುಗಳನ್ನು
ಬಳಸಿಬಿಟ್ಟೆ…

ಮತ್ತೆ ಅವನ್ಯಾರೋ
ಮೂಲೋಕ ತಿಳಿದ ವಿರಾಗಿಯ
ಪುನರ್ಜನ್ಮದವನಿರಬೇಕು
ಅರೆ ಕ್ಷಣ ಎಲ್ಲವನ್ನೂ ಕಾಣಿಸಿ
ಮರು ಕ್ಷಣ ಎಲ್ಲವನ್ನೂ ಮರೆಸಿ
ಹೆಜ್ಜೆಗಳ ಗುರುತನ್ನು ಅಳಿಸುತ್ತಾ
ಇಲ್ಲವಾಗಿಬಿಟ್ಟ

ಈಗ ಸತ್ತ ಎಲೆಗಳ
ರಾಶಿ ಮಾಡಿ ಬೆಂಕಿ ಇಟ್ಟು
ಚರ್ಮದ ಮೇಲೆ ಸೆಟೆದು ನಿಂತ
ಚಳಿ ಗುಳ್ಳೆಗಳ ಮಲಗಿಸುತ್ತಾ
ಉಸಿರಾಡುವ ಹಸಿರೆಲೆಯ ಮೇಲೆ
ಹೆಸರೊಂದ ಬರೆದೆ