ಮನೆಯವರೊಂದಿಗೆ ಹೋರಾಡಿ ತಾರಾ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲಂಡಿನ ಕೇಂಬ್ರಿಡ್ಜಿನಲ್ಲಿರುವ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಪಿಎಚ್‌.ಡಿ ಪದವಿಯನ್ನೂ ಪಡೆಯುತ್ತಾಳೆ. ಈ ಪಯಣದಲ್ಲಿ ತಂದೆ ತಾಯಿಯರಿಂದ ಯಾವುದೇ ಭಾವನಾತ್ಮಕ ಆಶ್ರಯವೂ, ಸ್ಪಂದನೆಯೂ ಅವಳಿಗೆ ದಕ್ಕುವುದಿಲ್ಲ. ಹಿಂತಿರುಗಿ ನೋಡಿದಾಗ ತನ್ನ ತಂದೆ ಯಾವುದೋ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರಬಹುದೇ ಎಂದು ಅವಳಿಗೆ ಸಂದೇಹವಾಗುತ್ತದೆ. ಎಲ್ಲರಂತೆ ತನಗೂ ಒಂದು ಸಹಜ ಬಾಲ್ಯವಿರಬೇಕಿತ್ತು ಎಂದು ಆಶಿಸುವುದು ಅಷ್ಟು ದೊಡ್ಡ ತಪ್ಪಾಗಿತ್ತೇ ಎಂದು ಪರಿತಪಿಸುತ್ತಾಳೆ.
‘ಕಾವ್ಯಾ ಓದಿದ ಹೊತ್ತಿಗೆ’ಯಲ್ಲಿ ತಾರಾ ವೆಸ್ಟೋವರ್ ಆತ್ಮಕಥಾನಕ ‘ಎಜುಕೇಟೆಡ್’ ಪುಸ್ತಕದ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ತಾರಾ ವೆಸ್ಟೋವರ್ ಬರೆದ ಆತ್ಮಕಥಾನಕ ಪುಸ್ತಕ ‘ಎಜುಕೇಟೆಡ್,’ ಮೂರು ವರ್ಷಗಳ ಹಿಂದೆ 2018ರಲ್ಲಿ ಪ್ರಕಟವಾದಾಗ ಇಡೀ ಅಮೆರಿಕವನ್ನೇ ದಂಗು ಬಡಿಸಿತ್ತು. ಇದು ಈ ದೇಶದಲ್ಲಿ ನಡೆಯಲಾದರೂ ಸಾಧ್ಯವೇ ಎಂಬ ಗುಮಾನಿ ಎಲ್ಲೆಡೆ ಹರಿದಿತ್ತು. ಪುಸ್ತಕ ಪ್ರೇಮಿಗಳ ವಲಯದಲ್ಲಿ ಎಲ್ಲ ಕಡೆ ಈ ಪುಸ್ತಕದ್ದೇ ಮಾತು. ಹಲವು ವಾರಗಳ ಕಾಲ ಈ ಪುಸ್ತಕ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಬೆಸ್ಟ್‌ಸೆಲ್ಲರ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಮಾಜಿ ಅಧ್ಯಕ್ಷ ಒಬಾಮಾ ಸೇರಿದಂತೆ ಹೆಸರಾಂತ ಗಣ್ಯರು ತಮ್ಮ ರೀಡಿಂಗ್ ಲಿಸ್ಟಿನಲ್ಲಿ ಈ ಕೃತಿಯ ಹೆಸರು ಸೂಚಿಸಿದ್ದರು.

ಎಜುಕೇಟೆಡ್ ಪುಸ್ತಕದಲ್ಲಿ ಮೂವತ್ತೊಂದು ವರ್ಷದ ತಾರಾ, ಅಮೆರಿಕದ ಐಡಹೋ ರಾಜ್ಯದ ಕ್ಲಿಫ್ಟನ್ ಎಂಬ ಊರಿನಲ್ಲಿ ಅವರು ಕಳೆದ ಬಾಲ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲ್ಯದಲ್ಲಿ ಅವರು ಕಂಡ ಹಿಮಾವೃತ ಪರ್ವತಗಳು, ವನ್ಯರಾಶಿ ಅವರನ್ನು ಇಂದಿಗೂ ಕಾಡುತ್ತಿವೆ. ಪಾಲಕರಲ್ಲಿ ಮೂಲಭೂತವಾದ, ಹುಚ್ಚುತನ, ಅಕಾರಣ ಭಯ- ಸಂಶಯಗಳು ತುಂಬಿದಾಗ ಮಕ್ಕಳ ಮೇಲಾಗುವ ಪರಿಣಾಮವನ್ನು ಈ ಕೃತಿ ಸಶಕ್ತವಾಗಿ ಕಟ್ಟಿಕೊಡುತ್ತದೆ. ಅಮೆರಿಕವೆಂದರೆ ನ್ಯೂಯಾರ್ಕು, ಲಾಸ್ ಆಂಜಲಿಸ್, ಹಾಲಿವುಡ್, ಗಗನಚುಂಬಿ ಕಟ್ಟಡಗಳು, ವಲಸಿಗರು, ಥಳುಕು ಬಳುಕಿನ ಸಿಟಿಗಳು ಅಂತಷ್ಟೇ ಮೇಲ್ನೋಟಕ್ಕೆ ಅಂದುಕೊಂಡವರಿಗೆ ಈ ಹೊತ್ತಿಗೆ ಹೊಸ ಕಣ್ಗಳಿಂದ ಈ ದೇಶವನ್ನೂ, ಇಲ್ಲಿನ ಜನರನ್ನೂ ಕಾಣಲು ಸಹಾಯ ಮಾಡಬಹುದು.

(ತಾರಾ ವೆಸ್ಟೋವರ್)

ಕ್ರಿಶ್ಚಿಯನ್ ಧರ್ಮದ ಮಾರ್ಮನ್ ಪಂಥಕ್ಕೆ ಸೇರಿದ ತಂದೆ- ತಾಯಂದಿರಿಗೆ ಏಳು ಮಕ್ಕಳಲ್ಲಿ ಕೊನೆಯವಳಾಗಿ 1986ರಲ್ಲಿ ಹುಟ್ಟಿದ ತಾರಾ ಶಾಲೆ ಕಂಡವಳಲ್ಲ. ಶಾಲೆಗಳನ್ನು ಸ್ಥಾಪಿಸಿರುವುದು ಜನರನ್ನು ದಿಕ್ಕು ತಪ್ಪಿಸಲೆಂದು, ಸರ್ಕಾರ ಜನರನ್ನು ತನ್ನ ಅಡಿಯಾಳಾಗಿ ಮಾಡಿಕೊಳ್ಳಲು ನಿರ್ಮಿಸಿದ ಮೊದಲ ಹುನ್ನಾರವೇ ಈ ಶಾಲಾ ವ್ಯವಸ್ಥೆ ಎಂದು ದೃಢವಾಗಿ ನಂಬಿದ ತಂದೆಯ ಭದ್ರ ಹಿಡಿತದಲ್ಲೇ ಬಾಲ್ಯ ಕಳೆದ ತಾರಾಳಿಗೆ ಒಂಬತ್ತನೆಯ ವಯಸ್ಸಿನವರೆಗೆ ಜನ್ಮ ಪ್ರಮಾಣಪತ್ರವೂ ಇರಲಿಲ್ಲ. ಆಕೆಯೂ ಆಕೆಯ ಅಕ್ಕ- ಅಣ್ಣಂದಿರಲ್ಲಿ ಅನೇಕರೂ ಹುಟ್ಟಿದ್ದು ಮನೆಯಲ್ಲೇ. ಬೆಳೆದಿದ್ದು ತಾಯಿಯ ಆರೈಕೆಯಲ್ಲಿ. ಭಾನುವಾರಕ್ಕೊಮ್ಮೆ ಸಿಟಿಯ ಚರ್ಚಿಗೆ ಹೋದಾಗ ಮಾತ್ರ ಮಿಕ್ಕ ಜನರನ್ನು ಕಾಣಬೇಕು. ಅಲ್ಲಿಯೂ ತಂದೆ- ತಾಯಿಯರ ಕಣ್ಣಳತೆಯ ಸುಪರ್ದಿಯಲ್ಲೇ ಇರಬೇಕು. ಮನೆಯಲ್ಲಿ ತಾಯಿ ಹೇಳಿಕೊಟ್ಟಿದ್ದಷ್ಟೇ ಕಲಿಕೆ. ಓದುವುದಾದರೆ ಮಾರ್ಮನ್ ಧರ್ಮಗ್ರಂಥವನ್ನೇ ಓದಬೇಕು. ಪುಟ್ಟ ವಯಸ್ಸಿನಲ್ಲೇ ಆ ದೀರ್ಘ ಧರ್ಮಗ್ರಂಥ ತಾರಾಳಿಗೆ ಮನೋಗತವಾಗಿಬಿಟ್ಟಿದೆ.

ತಾರಾ ಬೆಳೆದ ಕ್ಲಿಫ್ಟನ್ ಊರಿನಲ್ಲಿ ಇಂದಿಗೂ ಜನಸಂಖ್ಯೆ ಇನ್ನೂರರ ಒಳಗೇ. ಎಪ್ಪತ್ತಕ್ಕಂಥ ಕಡಿಮೆ ಕುಟುಂಬಗಳು ವಾಸವಾಗಿರುವ ಈ ಊರಿನಲ್ಲಿ ಎಲ್ಲರಿಗೂ ಎಲ್ಲರೂ ಪರಿಚಿತರೇ. ತಾರಾಳ ತಂದೆ ಜೀನ್ (ಪುಸ್ತಕದಲ್ಲಿ ಎಲ್ಲ ನಿಜವಾದ ಹೆಸರುಗಳನ್ನೂ ಬದಲಿಸಲಾಗಿದೆ) ತನ್ನ ಮಕ್ಕಳನ್ನು ಶಾಲೆಗೆ ಕಳಿಸದಿರುವುದು, ಜನ್ಮ ಪತ್ರವನ್ನೂ ಮಾಡಿಸದಿರುವುದು, ಒಮ್ಮೆಯೂ ವೈದ್ಯರ ಬಳಿ ಹೋಗದ ಕಾರಣ ಯಾವ ವೈದ್ಯಕೀಯ ದಾಖಲೆಗಳೂ ಅವರಿಗೆ ಇಲ್ಲದಿರುವುದು ಊರಿನ ಎಲ್ಲರಿಗೂ ಗೊತ್ತಿದೆ. ಕ್ಲಿಫ್ಟನ್‌ನ ಹೊರವಲಯದ ಗುಡ್ಡಗಾಡು ಪ್ರದೇಶ ‘ಬಕ್ಸ್ ಪೀಕ್’ನಲ್ಲಿ ಈ ಕುಟುಂಬ ವಾಸಿಸುತ್ತಿದೆ.

ಜೀವನೋಪಾಯಕ್ಕಾಗಿ ಜಂಕ್ ಕಾರುಗಳನ್ನು ಮತ್ತು ಇತರೆ ವಸ್ತುಗಳನ್ನು ಜಖಂಗೊಳಿಸುವ ಸ್ಕ್ರ್ಯಾಪ್ ಯಾರ್ಡ್ ಒಂದನ್ನು ಜೀನ್ ನಿರ್ವಹಿಸುತ್ತಾನೆ. ತನ್ನ ಮಕ್ಕಳನ್ನೆಲ್ಲ ಇಲ್ಲಿ ಕೆಲಸಕ್ಕಿಟ್ಟುಕೊಂಡು ಅವರಿಗೆ ಕೂಲಿ ಕೊಡುತ್ತಾನೆ. ಇದೊಂಥರಾ ಇನ್ನೂರು ವರ್ಷಗಳ ಹಿಂದೆ ನಡೆದಿರಬಹುದಾದ ಕತೆಯಂತೆ ಇದೆ. ಸಣ್ಣ ಮಕ್ಕಳಿಗೆಲ್ಲ ಹೊರ ಜಗತ್ತಿನ ಸಂಪರ್ಕವೂ ಇಲ್ಲ, ವ್ಯವಹಾರ ಜ್ಞಾನವೂ ಇಲ್ಲ. ತಂದೆ ಹೇಳಿದ ಮಾತುಗಳೇ ಅವರಿಗೆ ವೇದವಾಕ್ಯ. ಶಾಲೆಗಳು ನಮ್ಮನ್ನು ನಿರ್ಣಾಮ ಮಾಡಲೇ ಇರುವುದು ಎಂದರೆ ಅದು ಸರಿಯೇ. “ಮುಂದೊಮ್ಮೆ ಇಡೀ ಜಗತ್ತು ಮುಳುಗಿ ಹೋಗಲಿದೆ. ಎಲ್ಲರೂ ನಶಿಸಿ ಹೋಗಲಿದ್ದಾರೆ. ಆಗ ನಮ್ಮನ್ನು ನಾವು ಕಾಪಾಡಿಕೊಳ್ಳಲು ಈಗಿನಿಂದಲೇ ಸನ್ನದ್ಧರಾಗಬೇಕು” ಎಂದು ತಂದೆ ಹೇಳಿದರೆ ಮಕ್ಕಳೆಲ್ಲ ಶಿಸ್ತಿನ ಸಿಪಾಯಿಗಳಂತೆ ಆ ಮಾತುಗಳನ್ನು ಶಿರಸಾ ವಹಿಸಿ ಪಾಲಿಸುವವರೇ. ಜೀನ್‌ನ ಹೆಂಡತಿ ಫಾಯೆ ಗುಡ್ಡದಲ್ಲಿ ಸಿಗುವ ಸಸ್ಯಗಳಿಂದ ವಿವಿಧ ಔಷಧಿಗಳನ್ನು ತಯಾರಿಸಿ ಇಟ್ಟುಕೊಳ್ಳುತ್ತಾಳೆ. ಆ ಕಾರಣವಾಗಿ ಇಡೀ ಮನೆಯಲ್ಲಿ ಔಷಧೀಯ ಸಸ್ಯಗಳ ತೆಳು ಮೋಡವೊಂದು ಖಾಯಂ ಆಗಿ ನೆಲೆಸಿ ಬಿಟ್ಟಿದೆ.

ಜೀನ್ ತನ್ನ ಹೆಂಡತಿ ಫಾಯೆಯನ್ನು ಊರಿನ ಸೂಲಗಿತ್ತಿಯ ಜೊತೆಗೆ ಸಹಾಯಕಿಯಾಗಿ ಕಳಿಸುತ್ತಿದ್ದಾನೆ. ಅದಕ್ಕೆ ಕಾರಣ ಮುಂದೊಮ್ಮೆ ಜಗತ್ತು ಮುಳುಗಿಹೋದಾಗ ಮೊಮ್ಮಕ್ಕಳು ಹುಟ್ಟುವ ಪ್ರಸಂಗ ಬಂದರೆ ಮನೆಯಲ್ಲಿ ಒಬ್ಬರಾದರೂ ಸೂಲಗಿತ್ತಿಯ ವಿದ್ಯೆ ಕಲಿತವರಿರಲಿ ಎಂಬ ದೂರದ ನಿರೀಕ್ಷೆ ಆತನದು. ಹೀಗೆ ಕಟ್ಟು ಕತೆಗಳನ್ನು ಸೃಷ್ಟಿಸುವುದಲ್ಲದೇ ಅದನ್ನು ಚಾಚೂ ತಪ್ಪದೇ ಪಾಲಿಸುವ ಜೀನ್ ಮನುಷ್ಯನ ಮನಸ್ಸಿನ ವೈಚಿತ್ರ್ಯಕ್ಕೊಂದು ನಿದರ್ಶನದಂತಿದ್ದಾನೆ.

ಜೀನ್‌ನ ತಾಯಿ ಅಂದರೆ ತಾರಾಳ ಅಜ್ಜಿಗೂ ಜೀನ್‌ನಿಗೂ ನಡುವೆ ಎಂದಿನಿಂದಲೂ ತಕರಾರುಗಳು ಇದ್ದೇ ಇವೆ. ಮಕ್ಕಳನ್ನು ಹೀಗೆ ಯಾರ್ಡಿನಲ್ಲಿ ದುಡಿಮೆಗೆ ಹಚ್ಚಬೇಡ, ಎಲ್ಲರಂತೆ ಅವರೂ ಶಾಲೆಗೆ ಹೋಗಲಿ, ಹೊರ ಜಗತ್ತಿನ ಜೊತೆ ಸಂಪರ್ಕ ಸಾಧಿಸಲಿ, ಅವರ ಭವಿಷ್ಯದ ಬಗೆಗೂ ಯೋಚಿಸು ಅಂತ ಹೇಳುತ್ತಲೇ ಇದ್ದರೂ ಜೀನ್‌ನಿಗೆ ತಾಯಿಯ ಮಾತಿನ ಕುರಿತು ಲಕ್ಷ್ಯವೇ ಇಲ್ಲ. ಮಾರ್ಮನ್ ಧರ್ಮಗ್ರಂಥದ ಯಾವುದೋ ವಾಕ್ಯಕ್ಕೆ ವಿಪರೀತ ಅರ್ಥಕೊಟ್ಟು “ಇನ್ಮೇಲೆ ನಾವು ಹಾಲು ಕುಡಿಯಬಾರದು, ಬದಲಿಗೆ ಜೇನುತುಪ್ಪವನ್ನು ತಿನ್ನಬಹುದು” ಅಂತ ಜೀನ್ ಒಮ್ಮೆ ಮನೆಯಲ್ಲಿ ಘೋಷಿಸುತ್ತಾನೆ. ಅಂದೇ ಪೇಟೆಗೆ ಹೋಗಿ ಹತ್ತಾರು ಗ್ಯಾಲನ್ ಜೇನನ್ನು ಖರೀದಿಸಿ ನೆಲಮಾಳಿಗೆಯಲ್ಲಿಡುತ್ತಾನೆ.

ಜೀನ್ ಮನೆಯಲ್ಲಿ ಹಾಲನ್ನು ನಿಷೇಧಿಸಿದಂತೆ ಅವನ ತಾಯಿ (ಪುಸ್ತಕದಲ್ಲಿ ಆಕೆಯ ಹೆಸರಿಲ್ಲ, ಗ್ರಾಂಡ್‌ಮಾ ಅಂತಷ್ಟೇ ಇದೆ) ಫ್ರಿಡ್ಜಿನ ತುಂಬ ಮೊಮ್ಮಕ್ಕಳಿಗಾಗಿ ಹಾಲನ್ನು ಶೇಖರಿಸಿಡಲು ತೊಡಗುತ್ತಾಳೆ. ಜೀನ್‌ನ ಕುಟುಂಬವಿದ್ದ ಬಕ್ಸ್ ಪೀಕ್‌ನ ಗುಡ್ಡದಡಿಯಲ್ಲೇ ಇರುವ ಈ ಗ್ರಾಂಡ್‌ಮಾಳ ಮನೆಗೆ ತಾರಾ ಖಾಯಂ ಅತಿಥಿ. ಮುಂಜಾವಿನ ಸೀರಿಯಲ್ ಜೊತೆ ಹಾಲು ಬೇಕಾದಾಗ ಪುಟ್ಟ ತಾರಾ ಗುಡ್ಡವಿಳಿದು ಅಜ್ಜಿಯ ಮನೆಯನ್ನು ಹಿತ್ತಿಲ ಬಾಗಿಲಿನಿಂದ ಪ್ರವೇಶಿಸುತ್ತಾಳೆ. ಫ್ರಿಡ್ಜಿನಲ್ಲಿದ್ದ ಹಾಲನ್ನೂ, ತನ್ನ ಮನೆಯಲ್ಲಿ ನಿಷೇಧಿತವಾಗಿದ್ದ ಇತರೆ ತಿನಿಸುಗಳನ್ನೂ ಯಥೇಚ್ಛವಾಗಿ ತೆಗೆದುಕೊಂಡು ತಿನ್ನುತ್ತಾಳೆ.

ಒಮ್ಮೆ ಹೀಗೇ ಅಜ್ಜಿಯ ಮನೆಯ ಅಡುಗೆ ಮನೆಯಲ್ಲಿ ಕುಳಿತಾಗ ಅಜ್ಜಿ “ತಾರಾ, ನಾಳೆ ನಸುಕಿಗೇ ಎದ್ದು ನಾವು ಆರಿಜೋನಾ ರಾಜ್ಯಕ್ಕೆ ತೆರೆಳಲಿದ್ದೇವೆ. ನಾನು ಮತ್ತು ನಿನ್ನ ಅಜ್ಜ ಅಲ್ಲಿಯೇ ಶಿಫ್ಟ್ ಆಗಲಿದ್ದೇವೆ. ನೀನೂ ನಮ್ಮೊಡನೆ ಬರುತ್ತೀಯಾ? ನಿನ್ನನ್ನು ಅಲ್ಲಿಯೇ ಶಾಲೆಗೆ ಹಾಕುತ್ತೇವೆ” ಎಂದು ಕೇಳುತ್ತಾರೆ.

ಬಾಲ್ಯದಲ್ಲಿ ಅವರು ಕಂಡ ಹಿಮಾವೃತ ಪರ್ವತಗಳು, ವನ್ಯರಾಶಿ ಅವರನ್ನು ಇಂದಿಗೂ ಕಾಡುತ್ತಿವೆ. ಪಾಲಕರಲ್ಲಿ ಮೂಲಭೂತವಾದ, ಹುಚ್ಚುತನ, ಅಕಾರಣ ಭಯ- ಸಂಶಯಗಳು ತುಂಬಿದಾಗ ಮಕ್ಕಳ ಮೇಲಾಗುವ ಪರಿಣಾಮವನ್ನು ಈ ಕೃತಿ ಸಶಕ್ತವಾಗಿ ಕಟ್ಟಿಕೊಡುತ್ತದೆ.

“ಅಪ್ಪನಿಗೆ ಈ ವಿಷಯ ಗೊತ್ತೇ?”

“ಇಲ್ಲ. ಆದರೆ ನೀನು ಮನೆಯಲ್ಲಿಲ್ಲ ಅಂತ ಅವರಿಗೆಲ್ಲ ಗೊತ್ತಾಗುವ ಒಳಗೆ ನಾವು ಐಡಹೋ ರಾಜ್ಯದ ಗಡಿ ದಾಟಿ ಬಿಟ್ಟಿರುತ್ತೇವೆ. ನಾಳೆ ಸೂರ್ಯ ಏಳುವ ಮೊದಲೇ ಇಲ್ಲಿರು. ನಿಮ್ಮ ಅಪ್ಪನಿಗೆ ಆ ನಂತರ ನಾನೇನಾದರೂ ಹೇಳಿಕೊಳ್ಳುತ್ತೇನೆ.”

ಪುಟ್ಟ ತಾರಾ ಯೋಚಿಸುತ್ತಾಳೆ. ತಾನು ಹೊರಟು ಹೋದ ಮೇಲೆ ಮನೆಯಲ್ಲಿ ನಡೆಯಬಹುದಾದ ಘಟನೆಗಳು ಅವಳ ಕಣ್ಮುಂದೆ ಬರುತ್ತವೆ. ಒಂದು ಕಡೆ ತಂದೆ, ತಾಯಿ, ಅಣ್ಣಂದಿರು, ಅಕ್ಕನ ವಾತ್ಸಲ್ಯವಿದ್ದರೆ ಇನ್ನೊಂದು ಕಡೆ ಭವಿಷ್ಯ ಮತ್ತು ಹೊಸತನದ ಕನಸು ಇವೆ. ತಾರಾ ವಾತ್ಸಲ್ಯವನ್ನೇ ಆಯ್ದುಕೊಂಡು ಮನೆಯಲ್ಲುಳಿಯುತ್ತಾಳೆ.

ಮನೆಯಲ್ಲಿ ಟೆಲಿಫೋನ್ ಇಟ್ಟುಕೊಳ್ಳಲು ಕೂಡ ಜೀನ್‌ನ ಅಡ್ಡಿಯಿರುತ್ತದೆ. ಫಾಯೆ ಸೂಲಗಿತ್ತಿಯಾಗಿ ಹೋಗಲು ಶುರು ಮಾಡಿದಾಗ ಮೊದಲ ಬಾರಿ ಆಕೆಗೂ ಸ್ವಂತ ದುಡಿಮೆಯ ಹಣದ ಮಹತ್ವದ ಅರಿವಾಗುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ನಾಲ್ವರು ಲೈನ್‌ಮೈನ್‌ಗಳು ಟೆಲಿಫೋನು ಆಫೀಸಿನಿಂದ ಬಂದು ಮನೆಗೆ ಫೋನ್ ಕನೆಕ್ಷನ್ ಕೊಡುವ ಕೆಲಸ ಶುರು ಮಾಡುತ್ತಾರೆ. ಹಿತ್ತಿಲಿನ ಜಂಕ್ ಯಾರ್ಡಿನಿಂದ ಬಂದ ಜೀನ್ “ಏನು ನಡೆಯುತ್ತಿದೆ ಇಲ್ಲಿ?” ಅಂತ ಹುಕುಂ ಹೊರಡಿಸುತ್ತಾನೆ. ಅದಕ್ಕೆ ಫಾಯೆ “ಅರೇ, ನನ್ನ ಬುದ್ಧಿ ನೋಡಿ. ಫೋನು ಸೂಲಗಿತ್ತಿಯ ವೃತ್ತಿಗೆ ಅವಶ್ಯಕ ಅಂತ ತಿಳಿದು ಅವರಿಗೆ ಬಾ ಎಂದು ಹೇಳಿ ಬಿಟ್ಟಿದ್ದೆ. ಯಾರಿಗೋ ಹೆರಿಗೆ ಬೇನೆ ಶುರುವಾದಾಗ ತಕ್ಷಣಕ್ಕೆ ಸೂಲಗಿತ್ತಿಯ ನೆರವು ಸಿಗಲು ಸಾಧ್ಯವಾಗಬೇಕಲ್ಲ ಅಂದುಕೊಂಡಿದ್ದೆ. ನನ್ನದೇ ತಪ್ಪು” ಎನ್ನುತ್ತ ಅತ್ತಿಂದಿತ್ತ ಓಡಾಡುತ್ತಾಳೆ. ಅಂದಿನಿಂದ ಅವರ ಮನೆಗೆ ದೂರವಾಣಿ ಸಂಪರ್ಕ ಸಿಗುತ್ತದೆ. ತಾಯಿಯ ಮಾತು-ಕತೆ, ಚಲನವಲನ ವರ್ಣಿಸುತ್ತಲೇ ತಾರಾ ತಂದೆ- ತಾಯಿಯರ ನಡುವಿನ ದಾಂಪತ್ಯದ ಒಳಸುಳಿಗಳನ್ನು ತೆರೆದಿಡುತ್ತಾರೆ.

ಜೀನ್‌ನ ದೊಡ್ಡ ಮಗ ಟೋನಿ ಮಾತ್ರ ಡ್ರೈವರ್ ಆಗಿ ಸಿಟಿಯಲ್ಲಿ ಮನೆ ಮಾಡಿಕೊಂಡಿದ್ದಾನೆ. ತಾರಾಳ ಇಬ್ಬರು ಅಣ್ಣಂದಿರು ವರ್ಷಗಳು ಕಳೆದಂತೆ ಹಠತೊಟ್ಟು ಕಾಲೇಜಿಗೆ ಸೇರಿ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ. ಇನ್ನಿಬ್ಬರು ಅಣ್ಣಂದಿರು ಮತ್ತು ಅಕ್ಕ ಶಾಲೆ- ಕಾಲೇಜಿನ ಮುಖವನ್ನೇ ಕಾಣದೇ ಸಾಂಪ್ರದಾಯಿಕ ಶೈಲಿಯಲ್ಲಿ ದುಡಿಮೆಯನ್ನೂ, ಹತ್ತಾರು ಮಕ್ಕಳನ್ನೂ ಮಾಡಿಕೊಂಡಿದ್ದಾರೆ. ತಾರಾ ತಾನೂ ಕಾಲೇಜು ಸೇರಬೇಕೆಂದು ಹೇಳಿದಾಗ ಮನೆಯಲ್ಲಿ ಯುದ್ಧವೇ ನಡೆದುಹೋಗಿದೆ.

ಆದರೂ ಮನೆಯವರೊಂದಿಗೆ ಹೋರಾಡಿ ತಾರಾ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲಂಡಿನ ಕೇಂಬ್ರಿಡ್ಜಿನಲ್ಲಿರುವ ಪ್ರತಿಷ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆಯುತ್ತಾಳೆ. ಈ ಪಯಣದಲ್ಲಿ ತಂದೆ ತಾಯಿಯರಿಂದ ಯಾವುದೇ ಭಾವನಾತ್ಮಕ ಆಶ್ರಯವೂ, ಸ್ಪಂದನೆಯೂ ಅವಳಿಗೆ ದಕ್ಕುವುದಿಲ್ಲ. ಹಿಂತಿರುಗಿ ನೋಡಿದಾಗ ತನ್ನ ತಂದೆ ಯಾವುದೋ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರಬಹುದೇ ಎಂದು ಅವಳಿಗೆ ಸಂದೇಹವಾಗುತ್ತದೆ. ಎಲ್ಲರಂತೆ ತನಗೂ ಒಂದು ಸಹಜ ಬಾಲ್ಯವಿರಬೇಕಿತ್ತು ಎಂದು ಆಶಿಸುವುದು ಅಷ್ಟು ದೊಡ್ಡ ತಪ್ಪಾಗಿತ್ತೇ ಎಂದು ಪರಿತಪಿಸುತ್ತಾಳೆ.

ತಂದೆಯ ಹಿಡಿತದಿಂದ ತಪ್ಪಿಸಿಕೊಂಡು ಬಂದರೂ ತಾರಾಳ ಬದುಕು ಮೊದಮೊದಲು ಸಹ್ಯವಾಗೇನೂ ಇರುವುದಿಲ್ಲ. ಇಡೀ ರಾತ್ರಿ ಕೆಟ್ಟ ಕನಸುಗಳಿಂದ ಎಚ್ಚರವಾಗುತ್ತದೆ. ಅಣ್ಣ ಶಾನ್ ಒಮ್ಮೊಮ್ಮೆ ಈಕೆಯನ್ನೂ, ಅಕ್ಕ ಆಡರಿಯನ್ನೂ ಕ್ರೂರ ಶಿಕ್ಷೆಗಳಿಗೆ ಗುರಿ ಮಾಡುವ ನೆನಪುಗಳು ಅವಳ ನಿದ್ದೆಗೆಡಸುತ್ತವೆ.

ಈ ಪುಸ್ತಕ ಸಂಚಲನ ಮೂಡಿಸಿದ ನಂತರ ತಾರಾಳ ತಾಯಿ ಲಾರಿ ವೆಸ್ಟೋವರ್ (ಇದು ಅವರ ನಿಜವಾದ ಹೆಸರು,) ‘ಎಜುಕೇಟಿಂಗ್’ ಹೆಸರಿನ ಪುಸ್ತಕವೊಂದನ್ನು ಹೊರ ತಂದಿದ್ದಾರೆ. ತಾರಾ ತನ್ನ ಪುಸ್ತಕದಲ್ಲಿ ಎತ್ತಿದ ದ್ವಂದ್ವಗಳಿಗೆ ತಮ್ಮ ಸಮರ್ಥನೆಗಳನ್ನು ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಆದರೆ ಬರಹದ ಸ್ವಂತಿಕೆಯಲ್ಲಿ, ಅನುಭವಗಳ ಜೀವಂತಿಕೆಯಲ್ಲಿ ತಾರಾಳನ್ನು ಮೀರಿಸಲು ಲಾರಿಗೆ ಸಾಧ್ಯವಾಗಿಲ್ಲ. ಎಜುಕೇಟಿಂಗ್ ಎಂಬ ಈ ಪುಸ್ತಕ ಮಗಳ ಪುಸ್ತಕಕ್ಕೆ ಮರುತ್ತರ ಬರೆದ ರೂಪದಲ್ಲಿದ್ದಂತೆನಿಸಿ ನೀರಸವೆನಿಸುತ್ತದೆ.

ಇಡೀ ಜಗತ್ತಿನಿಂದ ಜನ ಅಮೆರಿಕಕ್ಕೆ ಸ್ವಾತಂತ್ರ್ಯವನ್ನು ಅರಿಸಿಕೊಂಡು ಬರುತ್ತಾರೆ. ಆದರೆ ಶತಮಾನಗಳಿಂದ ಅಮೆರಿಕದಲ್ಲೇ ನೆಲೆಯೂರಿರುವವರಿಗೂ ಮೂಲಭೂತವಾದದ ಸರಪಳಿಯಿಂದ ತಪ್ಪಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ ಎಂಬುದನ್ನು ಎಜುಕೇಟೆಡ್ ಕೃತಿ ತೀಕ್ಷ್ಣವಾಗಿ ತಿಳಿಯಪಡಿಸುತ್ತದೆ. ಕರುಳ ಸಂಬಂಧಗಳಿಂದ ಬಿಡಿಸಿಕೊಳ್ಳಲು ತಂದೆ- ತಾಯಿಯರಿಗಷ್ಟೇ ಅಲ್ಲ, ಮಕ್ಕಳಿಗೂ ಕಷ್ಟವೇ ಎಂಬುದನ್ನು ತಾರಾ ತೀವ್ರ ವೈಯಕ್ತಿಕ ಅನುಭವಗಳ ಸಂವೇದನೆಯಿಂದ ಚಿತ್ರಿಸುತ್ತಾರೆ.

“ಅಪ್ಪ- ಅಮ್ಮನಿಂದ ಭಾವನಾತ್ಮಕವಾಗಿ ದೂರವಾಗಿದ್ದಕ್ಕೆ ಬೇಸರವಿದೆ. ಇಂದಿಗೂ ಅವರು ಮನೆಯೊಳಗೆ ತೆಗೆದುಕೊಂಡರೆ ನಾನು ಹಿಂತಿರುಗಲು ಸಿದ್ಧ” ಎನ್ನುವ ತಾರಾ ಈಗ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಫೆಲೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಬಗೆಗಿರುವ ಸಿದ್ಧಮಾದರಿಯ ನಂಬಿಕೆಗಳಿಗೆ ಸವಾಲೆಸೆಯುವ ಸಂಗತಿಗಳ ಬಗೆಗೆ ಅವರು ಬರೆದ ಈ ಪುಸ್ತಕ ತನ್ನ ಕಾವ್ಯಾತ್ಮಕ ಗುಣಗಳಿಂದ ಮತ್ತೆ ಮತ್ತೆ ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಲೇ ಇದೆ.