ಕಳೆದ ಶತಮಾನದ ೬೦ರ ದಶಕದಲ್ಲಿ ನಾನು ಇಂಗ್ಲಿಷ್ ಎಂ.ಎ. ಮಾಡುತ್ತಿರುವಾಗ ನಮ್ಮ ಪ್ರೊಫೆಸರರೊಬ್ಬರು ಒಮ್ಮೆ ಹೇಳಿದ್ದರು: ನೀವು ಪುಸ್ತಕಗಳನ್ನು ಓದದಿದ್ದರೂ ಪರವಾಯಿಲ್ಲ, ಅವುಗಳನ್ನು ಒಮ್ಮೆ ಕೈಯಲ್ಲಿ ಎತ್ತಿಯಾದರೂ ನೋಡಿ. ಅಷ್ಟು ಸಾಕು! ಅವರು ನಗು ನಗುತ್ತಲೇ ಈ ಮಾತು ಹೇಳಿದ್ದರು. ವಿದ್ಯಾರ್ಥಿಗಳಾದ ನಾವು ಸಾಕಷ್ಟು ಪುಸ್ತಕಗಳನ್ನು ಓದುತ್ತಿಲ್ಲ ಎನ್ನುವುದು ಅವರ ಮಾತಿನ ಅರ್ಥವಾಗಿರಬಹುದು. ಅಥವಾ ಓದಲೇ ಬೇಕಾದ ಎಲ್ಲಾ ಪುಸ್ತಕಗಳನ್ನು ಕೂಡಾ ಓದುವುದು ನಮ್ಮ ಶಿಕ್ಷಣದ ಅವಧಿಯಲ್ಲಿ ಸಾಧ್ಯವಿಲ್ಲ ಎನ್ನುವುದು ಇರಬಹುದು. ಇಂಗ್ಲಿಷ್ ಸಾಹಿತ್ಯ (ಇದು ಬಹುಶಃ ಎಲ್ಲಾ ಭಾಷೆಯ ಸಾಹಿತ್ಯಕ್ಕೂ ಸಂಬಂಧಿಸಿ ಹೇಳಬಹುದಾದ ಮಾತು) ಹಲವು ಶತಮಾನಗಳಿಂದ ಹಲವು ಪ್ರಕಾರಗಳಲ್ಲಿ ಬೆಳೆದು ಬಂದಿದೆ. ಪ್ರತಿಯೊಂದು ಮುಖ್ಯ ಕಾಲಘಟ್ಟದ ಪ್ರಧಾನ ಕೃತಿಗಳಲ್ಲಿ ಕೆಲವನ್ನಾದರೂ ನಾವು ಅಭ್ಯಾಸ ಮಾಡಬೇಕಿತ್ತು. ಇವುಗಳ ಪಾಠ ಪಟ್ಟಿ ವರ್ಷ ವರ್ಷವೂ ನವೀಕರಣಗೊಳ್ಳುತ್ತ ಹೋಗುತ್ತದೆ. ಪಠ್ಯಗಳಲ್ಲಿ ಮುಖ್ಯ ಮತ್ತು ಉಪ ಪಠ್ಯಗಳೆಂದು ಇರುತ್ತವೆ; ಮುಖ್ಯ ಪಠ್ಯಗಳಲ್ಲಿ ಕೆಲವನ್ನು ತರಗತಿಯಲ್ಲಿ ಪ್ರಾಧ್ಯಾಪಕರು ಪಾಠ ಮಾಡುತ್ತಾರೆ, ಉಳಿದವನ್ನು ವಿದ್ಯಾರ್ಥಿಗಳು ತಾವೇ ಕಲಿತುಕೊಳ್ಳಬೇಕಾಗುತ್ತದೆ. ಎಂ.ಎ. ಮಟ್ಟದಲ್ಲಿ ಕಲಿಯುವುದೆಂದರೆ ಗ್ರಂಥಾಲಯಗಳಿಗೆ ಹೋಗಿ ಪಠ್ಯಗಳ ಅಧ್ಯಯನಕ್ಕೆ ಸಹಾಯಕವಾದ ಜೀವನ ಚರಿತ್ರೆಗಳನ್ನು, ವಿಮರ್ಶಾ ಗ್ರಂಥಗಳನ್ನು, ಮತ್ತು ವಿಶಿಷ್ಟ ಪತ್ರಿಕಾ ಲೇಖನಗಳನ್ನು ಓದಿ ಅವುಗಳ ಸಹಾಯದಿಂದ ಜ್ಞಾನವನ್ನು ವಿಸ್ತರಿಸಿಕೊಳ್ಳುವುದು.

ಇದೆಲ್ಲ ಉನ್ನತ ಶಿಕ್ಷಣದಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಮಾಡುವಂಥದೇ. ಹೊಸತೇನಿಲ್ಲ. ಆದರೆ ನಾನು ವಿದ್ಯಾರ್ಥಿಯಾಗಿದ್ದಾಗಿನ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ನನ್ನ ಕಾಲದಲ್ಲಿ ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಎಂ.ಎ. ಎರಡು ವರ್ಷ: ಮೊದಲ ವರ್ಷದ ಕೊನೆಯಲ್ಲಿ ಆ ವರ್ಷದ ಪೇಪರುಗಳ ಮೇಲೆ ಒಂದು ಪಬ್ಲಿಕ್ ಪರೀಕ್ಷೆ; ಅದರಲ್ಲಿ ಪಾಸಾದರೆ ಎರಡನೇ ವರ್ಷಕ್ಕೆ ಭಡ್ತಿ, ಮತ್ತು ಎರಡನೇ ವರ್ಷದ ಕೊನೆಯಲ್ಲಿ ಎರಡನೇ ವರ್ಷದ ಪೇಪರುಗಳ ಮೇಲೆ ಇನ್ನೊಂದು ಪಬ್ಲಿಕ್ ಪರೀಕ್ಷೆ. ಅದು ಪಾಸಾದರೆ ಅಲ್ಲಿಗೆ ಮುಗಿಯಿತು ಎಂ.ಎ. ಒಂದೊಂದೂ ಮೂರು ಗಂಟೆಗಳಲ್ಲಿ ಉತ್ತರಿಸ ಬೇಕಾದ ಲಿಖಿತ ಪರೀಕ್ಷೆ. ಆದ್ದರಿಂದ ಸಾಧಾರಣವಾಗಿ ವಿದ್ಯಾರ್ಥಿಗಳು ಕೆಲವೊಂದು ಪ್ರಮುಖ ಪಠ್ಯಗಳನ್ನಷ್ಟೇ ಅಭ್ಯಾಸ ಮಾಡುತ್ತಾರೆ.

ಈ ಸೆಮಿಸ್ಟರ್ ಪದ್ಧತಿಯಾದರೆ ತೀರ ಈಚಿನ ಬೆಳವಣಿಗೆ ಎಂದಿಟ್ಟುಕೊಳ್ಳೋಣ. ಈ ಕಾಲಘಟ್ಟಗಳ ಮುಖ್ಯ ವ್ಯತ್ಯಾಸವಿರುವುದು ಅಧ್ಯಾಪಕರು ಪಾಠ ಹೇಳುವ ಕ್ರಮದಲ್ಲಿ. ನಮ್ಮ ಗರುಗಳು ಬಳಸುತ್ತಿದ್ದುದು ಭಾಷಣ ವಿಧಾನ (ಲೆಕ್ಚರ್ ಮೆಥಡ್). ಒಂದು ಗಂಟೆಯ ಕ್ಲಾಸಿನ ಅವಧಿಯಲ್ಲಿ ಅವರು ತಪ್ಪಿಯೂ ಒಬ್ಬ ವಿದ್ಯಾರ್ಥಿಯನ್ನು ಕೂಡಾ ಮಾತಾಡಿಸುತ್ತಿರಲಿಲ್ಲ. ತಾವು ಕಲಿಸಬೇಕೆಂದಿರುವುದನ್ನು ಕಲಿಸಿ, ಎಂದರೆ ಅದರ ಬಗ್ಗೆ ಮಾತಾಡಿ, ಹೋಗುತ್ತಿದ್ದರು. ಕೆಲವರು ನಿಂತು ಪಾಠ ಮಾಡಿದರೆ ಇನ್ನು ಕೆಲವರು ಕುಳಿತು ಪಾಠ ಮಾಡುತ್ತಿದ್ದರು. ಕಪ್ಪು ಹಲಗೆ ಎನ್ನುವುದೊಂದು ಇದ್ದರೂ ಅದನ್ನು ಬಳಸುತ್ತಿದ್ದುದು ಅಪರೂಪ. ಕೆಲವು ಅಧ್ಯಾಪಕರು ವಿದ್ಯಾರ್ಥಿಗಳ ಮುಖವನ್ನಾದರೂ ನೋಡುತ್ತಿದ್ದರು. ಮತ್ತೆ ಕೆಲವರು ಅದನ್ನೂ ಮಾಡುತ್ತಿರಲಿಲ್ಲ. ಕೆಲವರ ಮಾತಿನಲ್ಲಿ ಸ್ವಾರಸ್ಯವಿರುತ್ತಿತ್ತು; ಇನ್ನು ಕೆಲವರು ಯಾವುದೋ ಜನ್ಮದ ಪಾಪ ನೀಗಿಸುವಂತೆ ಅನಿಸುತ್ತಿತ್ತು. ಎಲ್ಲ ಅಧ್ಯಾಪಕರಿಗೂ ಪಾಠ ಮಾಡುವ ವೃತ್ತಿಯೊಂದು ದುಡಿಮೆಯಾಗಿತ್ತು.

ಇಷ್ಟು ವರ್ಷಗಳ ನಂತರ ನನಗೆ ಇವೆಲ್ಲ ಮಸಕು ಮಸಕಾಗಿ ಕಾಣಿಸುತ್ತಿವೆ.

ಈಗೊಬ್ಬರು ಪ್ರೊಫೆಸರರು ಬರುತ್ತಿದ್ದಾರೆ ನೋಡಿ: ಅವರು ಕ್ಲಾಸಿಗೆ ಪ್ರವೇಶಿಸುತ್ತಿರುವಂತೆ ನಾವು ಎದ್ದು ನಿಂತುಕೊಳ್ಳುತ್ತೇವೆ. ಅವರು ಒಳಬಂದ ನಂತರ ನಾವು ಕೂತುಕೊಳ್ಳುತ್ತೇವೆ. ವಯಸ್ಸಾದವರು ಈ ಪ್ರೊಫೆಸರ್, ಮುಂದಿನ ವರ್ಷ ನಿವೃತ್ತರಾಗುತ್ತಾರೆಂದು ಸುದ್ದಿ. ಅವರು ನಮಗೆ ಮಧ್ಯಕಾಲೀನ ಇಂಗ್ಲಿಷ್ ಹೇಳಿಕೊಡುವವರು. ಈ ಪ್ರೊಫೆಸರ್ ಏನು ಹೇಳುತ್ತಾರೋ ನಮಗೆ ಅರ್ಥವಾಗುತ್ತಿಲ್ಲ. ಅಂತೂ ಒಂದು ಗಂಟೆ ಮುಗಿಸಿ ಅವರು ಹೊರಟು ಹೋಗುತ್ತಾರೆ. ಅವರೇ ಕಲಿಸುವ ಚಾಸರನ ಕತೆಗಳು ಹೆಚ್ಚು ಸ್ವಾರಸ್ಯಕರ; ಅದಕ್ಕೆ ಪ್ರೊಫೆಸರರು ಕಾರಣರಲ್ಲ. ಚಾಸರನ ಕತೆಗಳೇ ಹಾಗೆ. ಅವುಗಳನ್ನು ಇನ್ನಷ್ಟು ಚೆನ್ನಾಗಿ ಪಾಠ ಮಾಡುವುದು ಸಾಧ್ಯವಿತ್ತು ಎನಿಸುತ್ತದೆ. ನಂತರ ಇನ್ನೊಂದು ಪೀರಿಯಡ್. ಈಗ ಬರುವವರು ಒಬ್ಬರು ಮಹಿಳಾಮಣಿ; ಇವರು ಕಲಿಸುವುದು ವರ್ಡ್ಸ್‌ವರ್ತ್‌ನ ಕವಿತೆಗಳನ್ನು. ಮಾತು ಕೇಳಿದರೆ ಅದೇನೋ ಕಣ್ಣೆದುರಿನ ವಿದ್ಯಾರ್ಥಿಗಳಾದ ನಮ್ಮನ್ನು ಮರೆತು ಕಣ್ಣಿಗೆ ಕಾಣಿಸದ ಇನ್ನು ಯಾರನ್ನೋ ಉದ್ದೇಶಿಸಿ ಪಾಠ ಮಾಡುವಂತೆ ನಮಗೆ ಅನಿಸುತ್ತದೆ! ಈ ಪ್ರಾಧ್ಯಾಪಕಿ ತಾವು ಮಲೆಯಾಳದಲ್ಲಿ ಸ್ವತಃ ಒಬ್ಬ ಕವಿ ಎಂದು ಪ್ರಸಿದ್ಧಿಯಿತ್ತು. ಅವರು ಕಲಿಸಿದ ಯಾವ ಕವಿತೆಯ ವಿವರವೂ ನನಗೀಗ ಮನಸ್ಸಿನಲ್ಲಿ ಇಲ್ಲ.

ಇನ್ನೊಬ್ಬರು ಬರುತ್ತಾರೆ. ಇವರು ಎಡಿಸನ್, ಹ್ಯಾಝ್ಲಿಟ್, ಲ್ಯಾಂಬ್ ಮುಂತಾದವರ ಎಸ್ಸೆಗಳನ್ನು (ಪ್ರಬಂಧಗಳನ್ನು) ಪಾಠ ಮಾಡುತ್ತಾರೆ. ಮಾತುಗಳು ನಿಧಾನ, ಅದೇನೋ ಹಿಂಸೆಯಿಂದ ಪದಗಳು ಹೊರಬಂದ ಹಾಗೆ, ಏಕತಾನದಲ್ಲಿ, ಆದರೆ ಗಮನವಿರಿಸಿ ಕೇಳಿದರೆ ಸ್ವಲ್ಪ ಸ್ವಾರಸ್ಯವಿದೆ ಅನಿಸುವುದು. ಹೆಚ್ಚಿನ ಅಧ್ಯಾಪಕರೂ ವೇದಿಕೆಯ ಮೇಲೆ ನಿಂತುಕೊಂಡೋ ಕುಳಿತುಕೊಂಡೋ ಪಾಠ ಮಾಡುತ್ತಿದ್ದರೆ ಇವರಂಥ ಕೆಲವರು ವೇದಿಕೆಯ ಕೆಳಗೆ ವಿದ್ಯಾರ್ಥಿಗಳ ಹತ್ತಿರ ನಿಂತು ಪಾಠ ಮಾಡುತ್ತಾರೆ. ಅದೊಂದು ಹಿತದ ಸಂಗತಿ.

ಆಮೇಲೆ ಇನ್ನೊಬ್ಬರು. ಮಗದೊಬ್ಬರು…. ಹೀಗೆ ನಮ್ಮ ದಿನಗಳು ಸಾಗುತ್ತವೆ.

ನಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿರುತ್ತಿದ್ದರೂ ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳಬಹುದು ಎನ್ನುವ ಸಾಧ್ಯತೆಯೇ ನಮಗೆ ಹೊಳೆಯುತ್ತಿರಲಿಲ್ಲ. ತರಗತಿ ಮುಗಿದ ಮೇಲಂತೂ ಅಧ್ಯಾಪಕರಿಗೂ ನಮಗೂ ಅದಕಿಂತಲೂ ದೊಡ್ಡ ಅಂತರ ತೆರೆದುಕೊಳ್ಳುತ್ತಿತ್ತು. ಅರ್ಥಾತ್ ವಿದ್ಯಾರ್ಥಿಗಳ ಗುರುತೇ ಇಲ್ಲದಂತೆ ಹೆಚ್ಚಿನ ಅಧ್ಯಾಪಕರೂ ನಡೆದುಕೊಳ್ಳುತ್ತಿದ್ದರು. ಈ ರೀತಿ ಮಾತಾಡುತ್ತ ನಾನು ನನ್ನ ವಿದ್ಯಾಗುರುಗಳನ್ನು ಟೀಕಿಸುತ್ತಿದ್ದೇನೆಯೇ? ಟೀಕಿಸುವುದು ನನ್ನ ಉದ್ದೇಶವಲ್ಲ. ಅಂದಿನ ಕಾಲವನ್ನು ಇಂದಿನ ದೃಷ್ಟಿಕೋನದಿಂದ ವಿವರಿಸುವುದಷ್ಟೇ ನನ್ನ ಉದ್ದೇಶ. ಆ ಕಾಲದ ಅಧ್ಯಾಪಕರನ್ನೂ ದೂರಿ ಉಪಯೋಗವಿಲ್ಲ; ಯಾಕೆಂದರೆ ಅವರು ಸ್ವತಃ ಶಿಕ್ಷಣ ಪಡೆದುದು ಬಹುಶಃ ಅದೇ ರೀತಿ ಇದ್ದಿರಬಹುದು. ಬೇರೆ ಸಾಧ್ಯತೆಗಳು ಅವರಿಗೂ ಹೊಳೆದಿರಲಾರವು. ಮನುಷ್ಯ ತಾನು ಪಡೆದ ಶಿಕ್ಷಣ ಕ್ರಮಕ್ಕೆ ಒಗ್ಗಿಕೊಳ್ಳುತ್ತಾನೆ. ಪರಂಪರೆಯೆಂದರೆ ಇದೇ. ಇಂಥ ವಾತಾವರಣದಲ್ಲಿ ಯಾರಾದರೂ ಅಧ್ಯಾಪಕರು ಒಂದು ಮುಗುಳುನಗೆ ನಕ್ಕರೂ ವಿದ್ಯಾರ್ಥಿಗಳಿಗೆ ಅದು ಇಷ್ಟವಾಗುತ್ತದೆ; ಅಂಥ ಅಧ್ಯಾಪಕರೂ ಕೆಲವರಿದ್ದರು. ಅವರಲ್ಲೇ ಒಬ್ಬರು ನಮಗೆ ಅಂದುದು: ಪುಸ್ತಕಗಳನ್ನು ಓದದಿದ್ದರು ಪರವಾಯಿಲ್ಲ, ಕೈಯಲ್ಲಿ ಎತ್ತಿ ನೋಡಿಕೊಳ್ಳಿ ಎಂದು.

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಸಂಕ್ಷಿಪ್ತ, ಆದರೆ ಸಮಗ್ರವೂ ಆದ, ಶಿಕ್ಷಣದ ಉದ್ದೇಶವಿರಿಸಿದ್ದ ನಮ್ಮ ಎಂ.ಎ. ಕೋರ್ಸಿನಲ್ಲಿ ನಾವು ಎಲ್ಲವನ್ನೂ ಓದಿಕೊಳ್ಳುವುದು ಭೌತಿಕವಾಗಿ ಸಾಧ್ಯವಿರಲಿಲ್ಲ. ಅದೆಷ್ಟು ನಾಟಕಗಳು, ಕಾದಂಬರಿಗಳು, ಕವಿತೆಗಳು, ಕತೆಗಳು, ಪ್ರಬಂಧಗಳು! ಎಷ್ಟು ಲೇಖಕರು! ಇಂಗ್ಲಿಷ್ ಸಾಹಿತ್ಯದ ಹೊರಗಿನವರಿಗೆ ಶೇಕ್ಸ್‌ಪಿಯರ್ ಕೇಳಿ ಗೊತ್ತು. ಆದರೆ ಮಾರ್ಲೋ, ಕಿಡ್, ಗ್ರೀನ್, ನಾಶ್? ಡಿಕೆನ್ಸ್ ಕೇಳಿ ಗೊತ್ತು, ಬಹುಶಃ ಹಾರ್ಡಿ, ಲಾರೆನ್ಸ್. ಆದರೆ ಸ್ವಿಫ್ಟ್, ಸ್ಟರ್ನ್, ಸ್ಕಾಟ್, ರಿಚರ್ಡ್ಸನ್, ಜಾರ್ಜ್ ಎಲಿಯಟ್? ವರ್ಡ್ಸ್‌ವರ್ತ್, ಕೀಟ್ಸ್ ಕೇಳಿ ಗೊತ್ತು. ಆದರೆ ಬ್ಲೇಕ್, ಬರ್ನ್ಸ್, ಬೈರನ್, ಶೆಲ್ಲಿ, ಬ್ರೌನಿಂಗ್ ಮತ್ತು ಇತರ ನೂರಾರು ಕವಿಗಳು? ಈ ಕೆಲವು ಕಾದಂಬರಿಗಳೋ ಬೃಹತ್ತಾದವು. ಮಿಡ್ಲ್ ಮಾರ್ಚ್, ಬ್ಲೀಕ್ ಹೌಸ್, ಮೋಬಿ ಡಿಕ್, ಯೂಲಿಸಿಸ್. ಇಂಥವುಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೆ ಒಂದು ಜನ್ಮ ಸಾಲದು. ಇನ್ನು ಪುಟ ಸಂಖ್ಯೆಯಲ್ಲಿ ಚಿಕ್ಕದಾದರೂ ಸಾಂದ್ರವಾದ ಕೃತಿಗಳಿರುತ್ತವೆ. ಜಾಸೆಫ್ ಕಾನ್ರಾಡನ ಕಾದಂಬರಿಗಳು ಅಂಥವು. ಅಂತೆಯೇ ಎಲಿಯೆಟ್‌ನ ವೇಸ್ಟ್ ಲ್ಯಾಂಡ್ ಎಂಬ ಸುದೀರ್ಘ ಕವಿತೆಯೊಳಗಿನ ಉಲ್ಲೇಖಗಳೇ ಅತ್ಯಂತ ಕುತೂಹಲದಾಯಕ; ಸ್ವತಃ ಕವಿಯೇ ಎಪ್ಪತ್ತಕ್ಕೂ ಹೆಚ್ಚು ಟಿಪ್ಪಣಿಗಳನ್ನು ನೀಡಿದ್ದಾನೆ. ನಂತರದ ವಿಮರ್ಶಕರು, ವಿದ್ವಾಂಸರು ಮತ್ತಷ್ಟು ಕೂಡಿಸುತ್ತಲೇ ಬಂದಿದ್ದಾರೆ. 

ನಮ್ಮ ಕ್ಲಾಸುಗಳು ಮುಂಜಾನೆ ಹತ್ತು ಗಂಟೆಗೆ ಸುರುವಾಗಿ ಮಧ್ಯಾಹ್ನ ಒಂದು ಗಂಟೆ ತನಕ; ನಂತರ ಒಂದು ಗಂಟೆಯಿಂದ ಎರಡರ ತನಕ ಊಟದ ವಿರಾಮ; ಆಮೇಲೆ ಎರಡು ಗಂಟೆಯಿಂದ ನಾಲ್ಕು ಗಂಟೆ ತನಕ ಮತ್ತೆ ಕ್ಲಾಸು. ಮಧ್ಯಾಹ್ನದ ಊಟಕ್ಕೆ ಹಾಸ್ಟೆಲಿಗೆ ಧಾವಿಸಬೇಕಾಗುತ್ತಿತ್ತು. ನಾನಾಗ ಯುನಿವರ್ಸಿಟಿ ಹಾಸ್ಟಲಿನಲ್ಲಿ ವಾಸಿಸುತ್ತಿದ್ದೆ; ಊಟ ಕಬಳಿಸಿ, ಹೋದ ರೀತಿಯಲ್ಲೇ ಧಾವಿಸಿ ವಾಪಸು ಬರಬೇಕಾಗುತ್ತಿತ್ತು. ಹೀಗೆ ಇಡೀ ದಿನ ಹಾಸ್ಟಲಿನಿಂದ ಕ್ಲಾಸಿಗೆ, ಕ್ಲಾಸಿನಿಂದ ಹಾಸ್ಟೆಲಿಗೆ ಓಡಾಡುತ್ತ, ತರಗತಿಯಲ್ಲಿ ಪಾಠ ಕೇಳುತ್ತ (ಹೌದು, ಅಕ್ಷರಶಃ ಕೇಳುತ್ತ) ಕುಳಿತುಕೊಂಡ ವಿದ್ಯಾರ್ಥಿಗೆ ಸಂಜೆಯಾಗುವ ವೇಳೆಗೆ ಅರ್ಧ ಜೀವ ಹೊರಟು ಹೋಗಿದ್ದರೆ ಆಶ್ಚರ್ಯವಿಲ್ಲ. ಇನ್ನೆಲ್ಲಿಯ ಸ್ವಂತ ಓದು?

ಅಲ್ಲದೆ ನಾನಿದ್ದ ಹಾಸ್ಟೆಲಿನಲ್ಲಿ ಕೆಲವು ಕಠಿಣ ನಿಯಮಗಳಿದ್ದುವು: ರಾತ್ರಿ ಎಂಟರಿಂದ ಒಂಭತ್ತರ ತನಕ ಊಟ. ಒಂಭತ್ತರ ವೇಳೆಗೆ ಹಾಸ್ಟೆಲ್ ನಿವಾಸಿಗಳು ತಂತಮ್ಮ ರೂಮುಗಳನ್ನು ಸೇರಿಕೊಳ್ಳಬೇಕಿತ್ತು. ಹಾಸ್ಟೆಲ್ ವಾರ್ಡನ್ ತಮ್ಮ ಸಹಾಯಕನೊಂದಿಗೆ ಪ್ರತಿ ಕೋಣೆಗೂ ಇಣುಕಿ ಹಾಜರಿ ದಾಖಲಿಸುತ್ತಿದ್ದರು. ಆಗ ಕೋಣೆಯಲ್ಲಿಲ್ಲದಿದ್ದರೆ ಅದೊಂದು ವಿವರಣೆಗೆ ದಾರಿಮಾಡಿಕೊಡುವಂಥ ಅಪರಾಧ. ಅಷ್ಟು ಹೊತ್ತಿಗೆ ಹಾಸ್ಟೆಲಿನ ಹೊರ ಗೇಟು ಕೂಡಾ ಮುಚ್ಚಿ ಬೀಗ ಹಾಕಲಾಗುತ್ತಿತ್ತು. ಈಗ ಓದಲು ಕುಳಿತರೆ ನಿದ್ದೆ ತೂಗುವುದು ಖಂಡಿತ! ಹಾಸ್ಟೆಲಿನಲ್ಲಾಗಲಿ, ಹೊರಗಾಲಿ ಇತರ ಸಹಪಾಠಿಗಳ ಜತೆ ಸಹ-ಅಧ್ಯಯನ ನಡೆಸುವ, ಚರ್ಚಿಸುವ ಪದ್ಧತಿಯೇ ಇರಲಿಲ್ಲ.

೧೯೬೫ರಲ್ಲಿ ಟಿ.ಎಸ್. ಎಲಿಯೆಟ್ ತೀರಿಕೊಂಡ. ಆತನ ಕೃತಿಗಳಲ್ಲಿ ಕೆಲವನ್ನು ಪಠ್ಯವಾಗಿ ಕಲಿಯುತ್ತಿದ್ದ ನಮಗೆ ಅದರ ಅರಿವೇ ಇರಲಿಲ್ಲ. ಎಲಿಯೆಟ್‌ನ ಪಾಠ ಹೇಳುವ ಅಧ್ಯಾಪಕರೂ ಆ ಕುರಿತು ಮಾತಾಡಿದ್ದು ನನ್ನ ನೆನಪಿನಲ್ಲಿಲ್ಲ. ಬಹುಶಃ ಪತ್ರಿಕೆಗಳಲ್ಲಿ ಬಂದಿರಬಹುದು. ಆದರೆ ದಿನವೂ ಕುರಿಗಳಂತೆ ತರಗತಿಯಲ್ಲಿ ಕಾಲ ಕಳೆಯುತ್ತಿದ್ದ ನಮಗೆ ಪತ್ರಿಕೆ ಓದುವುದಕ್ಕಾದರೂ ಸಮಯವೆಲ್ಲಿತ್ತು? ಹಾಸ್ಟಲ್ ನಿವಾಸಿಗಳಲ್ಲದ, ಅದೇ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಅನುಕೂಲತೆ ಇದ್ದಿರಬಹುದು. ಐ.ಎಫ್.ಎಸ್, ಐ.ಎ.ಎಸ್. ಮುಂತಾದ ಕೇಂದ್ರೀಯ ಪರೀಕ್ಷೆಗಳಿಗೆ ತಯಾರಿ ನಡೆಸುವ ಶ್ರೀಮಂತರ ಮನೆ ಮಕ್ಕಳು ಕೆಲವರಿದ್ದರು; ಅವರಿಗಾದರೆ ವಿವರಗಳನ್ನು ತಲೆಯಲ್ಲಿ ತುಂಬಿಕೊಳ್ಳುವ ಏಕಾಗ್ರಚಿತ್ತ, ಚಿತ್ತಕ್ಕಿಂತಲೂ ಹೆಚ್ಚು ವಿತ್ತದ ಅನುಕೂಲತೆ. ನಮ್ಮ ಅಧ್ಯಾಪಕರೂ ಮನ್ನಣೆ ನೀಡುತ್ತಿದ್ದುದು ಅಂಥವರಿಗೇ. ನನಗೆ ಮತ್ತು ನನ್ನಂಥವರಿಗೆ ಪ್ರಾಥಮಿಕ ಮಟ್ಟದ ಬದುಕಿನ ನಿರಂತರ ಹೋರಾಟ.

ನಾನು ಎಂ.ಎ. ಮಾಡುತ್ತಿದ್ದ ಎರಡೂ ವರ್ಷಗಳಲ್ಲಿ ಒಂದೇ ಒಂದು ಸೆಮಿನಾರೂ ನಡೆಯಲಿಲ್ಲ. ಪಠ್ಯ ವಿಷಯಗಳ ಬಗ್ಗೆ ಮಾತಾಡಲು ವಿದ್ಯಾರ್ಥಿಗಳಿಗೆ ಒಂದೇ ಒಂದು ಅವಕಾಶವೂ ಇರಲಿಲ್ಲ. ಯಾವ ಸಾಹಿತ್ಯಿಕ ಸ್ಪರ್ಧೆಯೂ ನಡೆಯಲಿಲ್ಲ. ಯಾವ ಪ್ರಸಿದ್ಧ ವಿದ್ವಾಂಸರನ್ನೂ ನಮ್ಮ ವಿಭಾಗಕ್ಕೆ ಕರೆಸಲಿಲ್ಲ. ನಮ್ಮ ಅಧ್ಯಾಪಕರ ಜತೆಯೇ ಸಾಮಾಜಿಕವಾಗಿ ಬೆರೆತು ಮಾತಾಡುವ ಯಾವ ಕೂಟಗಳೂ (ಅರ್ಥಾತ್ ಪಾರ್ಟಿಗಳೂ) ಏರ್ಪಾಡಾಗಿರಲಿಲ್ಲ. ಆಗುವುದಾದರೂ ಹೇಗೆ? ನಮ್ಮ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಆಸಕ್ತಿ ವಹಿಸಿ ಮಾಡಬೇಕಾದ ಕಾರ್ಯಗಳಾಗಿದ್ದುವು ಇವೆಲ್ಲ. ಇಲ್ಲ, ಅವರಿಗೆ ಇದು ಯಾವುದೂ ಬೇಡವಾಗಿತ್ತು. ಬಹುಶಃ ಅವರಿಗಿದು ಹೊಳೆಯಲೇ ಇಲ್ಲ. ಅವರಿಗೆ ಅಧ್ಯಾಪನವೊಂದು ಸರಕಾರಿ ನೌಕರಿಯಾಗಿತ್ತು. ಹೀಗೆ ವಿದ್ಯಾರ್ಥಿಗಳಿಗೋಸ್ಕರ ಏನಾದರೂ ಏರ್ಪಡಿಸಬೇಕು ಎನ್ನುವುದು ಅವರ ನೌಕರಿಯ ನಿಯಮಾವಳಿಯಲ್ಲಿ ಸೇರಿರಲಿಲ್ಲ. ಅವರು ತಮ್ಮದೇ ರೀತಿಯಲ್ಲಿ ವಿದ್ವಾಂಸರಾಗಿದ್ದರು ನಿಜ, ಆದರೆ ಒಮ್ಮೆಯೂ ನಮ್ಮನ್ನು ತಮ್ಮ ಮನೆಗೆ ಕರೆಯಲಿಲ್ಲ. ಹೊರಗೆ ಕಂಡಾಗಲೂ ಅವರಾಗಿ ಮಾತಾಡಿಸಲಿಲ್ಲ. ಹೇಗಿದ್ದೀ, ಏನು ಇಷ್ಟಪಡುತ್ತೀ, ಮುಂದೇನು ಮಾಡಬೇಕೆಂದಿದ್ದೀ, ಏನಾದರೂ ಸಮಸ್ಯೆ ಇದೆಯೇ, ಎಂದು ವಿಚಾರಿಸಲಿಲ್ಲ. (ವಿದ್ಯಾರ್ಥಿಗಳ ಸಂಖ್ಯೆ ಎನ್ನುವಂತೆಯೂ ಇರಲಿಲ್ಲ; ನಮ್ಮ ಕ್ಲಾಸಿನಲ್ಲಿ ಇದ್ದುದು ಬರೇ ಹದಿನಾಲ್ಕು ಜನ ವಿದ್ಯಾರ್ಥಿಗಳು.) ಇತರ ಅಧ್ಯಾಪಕರೂ ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಅವರಲ್ಲಿ ಕೆಲವರು ಮಾತ್ರವೇ ನಮ್ಮನ್ನು ಮನುಷ್ಯರಂತೆ ಕಾಣುತ್ತಿದ್ದುದು. ಇನ್ನುಳಿದವರ ದೃಷ್ಟಿಯಲ್ಲಿ ನಾವೇನಾಗಿದ್ದೆವೋ ತಿಳಿಯದು. ಎರಡು ಅಮೂಲ್ಯ ವರ್ಷಗಳು ಹೀಗೆ ಕಳೆದುವು; ನಮ್ಮದೂ, ಅವರದೂ!

ಸರಿ, ಎಂದುಕೊಂಡೆ, ಎಂದುಕೊಳ್ಳುತ್ತೇನೆ. ಅಷ್ಟರ ಮಟ್ಟಿಗೆ ನನ್ನ ಮನಸ್ಸಾದರೂ ಮುಕ್ತವಾಯಿತು. ಈ ಎಂ.ಎ. ಎನ್ನುವುದೊಂದು ಅವಕಾಶ, ಒಂದು ಬಾಗಿಲು, ಅದೇ ಕೊನೆಯಲ್ಲ. ಇಂಥ ಅವಕಾಶವಾದರೂ ಎಷ್ಟು ಮಂದಿಗೆ ಸಿಗುತ್ತದೆ? ಮುಂದಿನ ದಾರಿ ನನಗೆ. ನಾನು ಎಂ.ಎ. ಓದುತ್ತಿದ್ದಾಗಲೇ ವಾರಾಂತ್ಯದಲ್ಲಿ ಸಾಧ್ಯವಾದಾಗ ಬ್ರಿಟಿಷ್ ಕೌನ್ಸಿಲ್ ಲೈಬ್ರರಿಗೆ ಹೋಗುತ್ತಿದ್ದೆ. ಅಲ್ಲಿ ಕೆಲವು ಬ್ರಿಟಿಷ್ ಪತ್ರಿಕೆಗಳು ಬರುತ್ತಿದ್ದುವು. ಇಂಗ್ಲಿಷ್ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳೂ ಕೆಲವಿದ್ದುವು. ಅಲ್ಲೇ ಕೂತು ಅವುಗಳನ್ನು ಓದುತ್ತಿದ್ದೆ, ಅಥವಾ ತಿರುವಿ ಹಾಕುತ್ತಿದ್ದೆ. ಓದಲು ಅನುಕೂಲವಾಗುವ ಒಳ್ಳೇ ವಾತಾವರಣ ಅಲ್ಲಿ ಇತ್ತು. ಯುನಿವರ್ಸಿಟಿ ಲೈಬ್ರರಿ ಕೂಡಾ ನಮ್ಮ ಕಾಲೇಜಿನ ಹತ್ತಿರವೇ ಇತ್ತು. ಅಲ್ಲಿಗೂ ಆಗಾಗ ಹೋಗುವ ಅಭ್ಯಾಸ ಮಾಡಿಕೊಂಡೆ. ಆಳವಾದ ಅಧ್ಯಯನ ಸಾಧ್ಯವಾಗದೆ ಇದ್ದರೂ ನನ್ನ ಮನಸ್ಸಿನ ಮ್ಯಾಪಿನಲ್ಲಿ ಕೆಲವೊಂದು ಗುರುತುಗಳು ಮೂಡಿದುವು. ಮುಂದೆಂದಾದರೂ ಆದಷ್ಟೂ ಓದಬೇಕು ಎನಿಸಿತು. ಬಹುಶಃ ಇದೇ ಉಮೇದು ನನ್ನನ್ನೊಬ್ಬ ಪುಸ್ತಕ ವ್ಯಸನಿಯನ್ನಾಗಿ ಮಾಡಿದುದು ಎನಿಸುತ್ತದೆ.

ನನ್ನ ಹಣಕಾಸಿನ ಮಿತಿಯಲ್ಲಿ ಕೆಲವೊಂದು ಪುಸ್ತಕಗಳನ್ನು ಕೊಂಡುಕೊಂಡೆ.

ಒಬ್ಬ ಓದುಗನಿಗೆ ತಾನು ಎಲ್ಲವನ್ನೂ ಓದಬೇಕು ಎನಿಸುತ್ತದೆ. ಆದರೆ ಎಲ್ಲವನ್ನೂ ಎಂದರೆ ಏನರ್ಥ? ಎಲ್ಲವೂ ಎಂದರೆ ಏನೆಂದೇ ನಮಗೆ ಗೊತ್ತಿರುವುದಿಲ್ಲ. ಇದ್ದರೂ ಎಲ್ಲವನ್ನೂ ಓದುವುದು ಯಾರಿಂದಲೂ ಸಾಧ್ಯವಿಲ್ಲ. ದೊಡ್ಡದೊಂದು ಲೈಬ್ರರಿಗೆ ಅಥವಾ ಪುಸ್ತಕದಂಗಡಿಗೆ ಹೋದಾಗ ಗೊತ್ತಾಗುತ್ತದೆ ಮನುಷ್ಯನ ಆಯುಸ್ಸಿನ ಮಿತಿ.

ಇದನ್ನೂ ನಾನು ಕಂಡುಕೊಂಡೆ.

ನನ್ನ ಮಿತಿಯೊಳಗೆ ಆದಷ್ಟೂ ಹೆಚ್ಚು ಪುಸ್ತಕಗಳನ್ನು ಓದತೊಡಗಿದೆಯಾವ ಪರೀಕ್ಷೆಗೋಸ್ಕರವೂ ಅಲ್ಲ, ಕೇವಲ ಅರಿವಿಗೋಸ್ಕರ. ಈ ಅರಿವು ಕೂಡ ಯಾವತ್ತೂ ಅರ್ಧಂಬರ್ಧವಾಗಿಯೇ ಇರುತ್ತದೆ. ಇರಲಿ. ಪರವಾಯಿಲ್ಲ.

ಆದರೆ ಈಗಲಾದರೆ ಎಷ್ಟು ದೂರ ಬಂದಿದ್ದೇವೆ!