“ಲೀವಿಸ್ ಎಂದರೆ ತುಂಬ ಹಟಮಾರಿಯೂ ಹೌದು, ತನ್ನ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಇದರಿಂದಾಗಿ ಲೀವಿಸ್‍ ನ ಬೆಂಬಲಿಗರೇ ಅವನ ಕೈಬಿಟ್ಟದ್ದುಂಟು. ತನ್ನ ‘ಮೌಲ್ಯ’ಗಳಿಗಾಗಿ ಲೀವಿಸ್ ಹೋರಾಡಿದ್ದಾನೆ. ಲೀವಿಸ್ ತಾನೊಂದು ಸರ್ವಸಾಮಾನ್ಯ ನಿಲುಮೆ ತಳೆಯಲು ನಿರಾಕರಿಸುವುದೇ ಇದಕ್ಕೆ ಕಾರಣ. ಇದು ಲೀವಿಸ್‍ ನ ಸಾಧನೆಯ ಕೇಂದ್ರ ವಿರೋಧಾಭಾಸ. ವಿಮರ್ಶೆಯ ಪರಮತತ್ವಗಳ ಕುರಿತಾಗಿ ಎಂದಾದರೂ ಮಾತಾಡುವುದಕ್ಕೆ ಲೀವಿಸ್ ಯಾಕೆ ಒಪ್ಪುವುದಿಲ್ಲ? ಎಲ್ಲಾ ತತ್ವದವರಿಗೂ ವಿಮರ್ಶಕ ದಾರ್ಶನಿಕನಾಗಿರಬೇಕು, ವಿಮರ್ಶೆ ಎಲ್ಲಾ ತತ್ವಗಳಿಗೂ ಮೀರಿರಬೇಕು – ಎನ್ನುವುದು ಲೀವಿಸ್‍ ನ ಇಂಗಿತವಿರಬಹುದು”

 

1930ರ ಹೊತ್ತಿಗೆ ಇಂಗ್ಲಿಷ್ ವಿಮರ್ಶಾ ಕ್ಷೇತ್ರದಲ್ಲಿ ಹೊಸ ಗುಂಪೊಂದು ಉದಿಸಿತು. ಐ. ಎ. ರಿಚರ್ಡ್ಸ್, ವಿಲಿಯಂ ಎಂಪ್ಸನ್ ಮತ್ತು ಎಫ್. ಆರ್. ಲೀವಿಸ್ ಈ ಗುಂಪಿನ ಚುಕ್ಕಾಣಿ ಹಿಡಿದವರಾಗಿದ್ದರು. ಇಂದು ಈ ಗುಂಪು ಸಾಹಿತ್ಯ ವಿಮರ್ಶಕರಿಗೆ ‘ಹೊಸ ಕೇಂಬ್ರಿಜ್ ಪಂಥ’ (ನ್ಯೂ ಕೇಂಬ್ರಿಜ್ ಸ್ಕೂಲ್) ಎಂಬ ಹೆಸರಿನಿಂದ ಪರಿಚಿತವಾಗಿದೆ. ಎಫ್. ಆರ್. ಲೀವಿಸ್ ಇದರ ಕೇಂದ್ರ ಪ್ರಜ್ಞೆಯಾದರೂ, ಹಲವಾರು ವಿಷಯಗಳ ಮೇಲಿಂದ ಇವನು ವಿಮರ್ಶಾ ಕ್ಷೇತ್ರದಲ್ಲಿ ಏಕೈಕನಾಗಿ ಉಳಿದುಕೊಂಡಿದ್ದಾನೆ. ಕಾರಣ, ಮೊದಲನೆಯದಾಗಿ ಲೀವಿಸ್ ತನ್ನ ವಿಮರ್ಶಾ ರೀತಿಯನ್ನು ಒಂದು ಪಂಥವಾಗಿ ರೂಪಾಂತರಿಸಲು ಒಪ್ಪುವುದಿಲ್ಲ. ತನ್ನ ವಿಮರ್ಶಾ ಲೇಖನಗಳಲ್ಲಿ ಮತ್ತು ತಾನೇ ಸ್ಥಾಪಿಸಿದ “ಸ್ಕ್ರೂಟಿನಿ” (Scrutiny) ಪತ್ರಿಕೆಯ ಬರಹಗಳಲ್ಲಿ ಎಲ್ಲಾ ತರದ ಸರ್ವಸಮಾನ ತತ್ವಗಳನ್ನು ದೂರೀಕರಿಸಿ ಅವನು ಕಾವ್ಯದ ಸಮೀಪಗತ ಪರೀಕ್ಷಣದ (ಕ್ಲೋಸ್ ರೀಡಿಂಗ್) ಮೇಲೆ ದೃಷ್ಟಿ ಕೇಂದ್ರೀಕರಿಸುತ್ತಾನೆ.

ಎಫ್. ಆರ್. ಲೀವಿಸ್ (1896-1978) ಅತ್ಯಂತ ಪ್ರಭಾವಶಾಲಿಯಾದ ಆಧುನಿಕ ಬ್ರಿಟಿಷ್ ವಿಮರ್ಶಕ. ವಿಮರ್ಶೆಯಲ್ಲಿ ಹೊಸ ಆಳ-ಅಗಲಗಳನ್ನು ಕಂಡುಹುಡುಕಿದ ಈ ಕೇಂಬ್ರಿಜ್ ಅಧ್ಯಾಪಕ ಇಂಗ್ಲಿಷ್ ಕ್ಲಾಸ್ ರೂಮುಗಳಲ್ಲಿ ಹೊಸ ಚಿಂತನೆಯ ಅಲೆಗಳನ್ನು ಎಬ್ಬಿಸಿದವ. ವಿಶ್ವವಿದ್ಯಾಲಯಗಳ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ದಶಕಗಳ ಕಾಲ ಅತ್ಯಂತ ಚರ್ಚೆಗೊಳಗಾದ ವ್ಯಕ್ತಿ ಈ ಫ್ರ್ಯಾಂಕ್ ರೇಮಂಡ್ ಲೀವಿಸ್.

ಟಿ. ಎಸ್. ಎಲಿಯಟ್‍ ನ ಶಿಷ್ಯನಾಗಿ ಬೆಳಕಿಗೆ ಬಂದ ಲೀವಿಸ್ ಎಲಿಯಟ್‍ ನ ದಾರಿಯಲ್ಲಿ ಬಹು ಕಾಲ ಮುನ್ನಡೆಯಲಿಲ್ಲ; ಅಥವಾ ಹಾಗೆ ಹೇಳುವುದಕ್ಕಿಂತ, ಎಲಿಯಟ್ ತನ್ನ ಮೂಲ ದಾರಿಯನ್ನು ಬಿಟ್ಟು ಮುಂದೆ ಅಡಿಯಿಟ್ಟಾಗ ಲೀವಿಸ್ ಅದೇ ಮೂಲದ ದಾರಿಯಲ್ಲಿ ಮುನ್ನಡೆದ ಎನ್ನುವುದು ಒಳ್ಳೆಯದು. 1920ರಲ್ಲಿ ಲೀವಿಸ್ ಎಲಿಯಟ್‍ ನ ಪ್ರಭಾವದಲ್ಲಿ ಪೂರ್ತಿ ಮುಳುಗಿದ್ದ. 1920ರ ಅನಂತರ ಅವರ ದಾರಿಗಳು ಬೇರೆ ಬೇರೆಯಾದುವು. ಲೀವಿಸ್‍ ನ ಪ್ರತ್ಯೇಕ ಬೆಳವಣಿಗೆಗೆ ಇದೂ ಒಂದು ಕಾರಣವಾಯಿತು. ವಿಮರ್ಶೆಯಲ್ಲಿ ಎಲಿಯಟ್ ಎಂದೂ ಸಮೀಪಗತ ಪರೀಕ್ಷಣ ನಡೆಸಿದ್ದಿಲ್ಲ. 1930ರ ‘ಹೊಸ ಕೇಂಬ್ರಿಜ್ ಪಂಥ’ ಇಂತಹ ಪರೀಕ್ಷಣವನ್ನೇ ತನ್ನ ಮುಖ್ಯ ಹಾದಿಯನ್ನಾಗಿ ಮಾಡಿಕೊಂಡಿತು.

1932ರಲ್ಲಿ ಲೀವಿಸ್‍ ನ ಮೊದಲ ವಿಮರ್ಶಾಕೃತಿ “ಇಂಗ್ಲಿಷ್ ಕಾವ್ಯದಲ್ಲಿ ಹೊಸ ಒತ್ತಾಸೆಗಳು” (New Bearings in English Poetry) ಹೊರಬಂತು, ಇದರಲ್ಲಿ ಲೀವಿಸ್ ಎಲಿಯಟ್‍ ನ ಋಣ ಒಪ್ಪಿಕೊಂಡದ್ದಲ್ಲದೆ ಅವನ (ಎಲಿಯಟ್‍ ನ) ಕವಿತೆಗಳ ವಿವರಣೆ ನೀಡಿ, ಅವುಗಳನ್ನು ಬೆಂಬಲಿಸಿದ. ಪೌಂಡ್ ಮತ್ತು ಹಾಪ್ಕಿನ್ಸ್ ಈ ಹೊಸ ಕಾವ್ಯದ ಸ್ಪೂರ್ತಿಯೆಂದು ಕಾಣಿಸಿದ. ಅದೇ ವೇಳೆ ಕೊನೇ ವಿಕ್ಟೋರಿಯನರೂ, ಜಾರ್ಜಿಯನರೂ ಅವನ ಟೀಕೆಗೆ ಗುರಿಯಾದರು.

(ಟಿ. ಎಸ್. ಎಲಿಯಟ್)

1936ರಲ್ಲಿ ಪ್ರಕಟವಾದ “ಮರುಮೌಲ್ಯೀಕರಣ” (Revaluattion) ಸಾಹಿತ್ಯಚರಿತ್ರೆಯ ಮೇಲೊಂದು ಹಿನ್ನೋಟ ನೀಡುತ್ತದೆ. ಇದು ಎಲಿಯಟ್, ಪೌಂಡ್, ಹಾಪ್ಕಿನ್ಸ್‍ ರಲ್ಲಿ ಕಂಡ ಕಾವ್ಯಗುಣಗಳ ಕುರಿತಾಗಿ ಸಾಹಿತ್ಯಚರಿತ್ರೆಯಲ್ಲಿ ಲೀವಿಸ್ ನಡೆಸಿದ ಪುನಃ ಪರಿಶೋಧನೆಯಾಗಿದೆ. ಈ ಗುಣಗಳನ್ನು ಆತ ಡಾಕ್ಟರ್ ಜಾನ್ಸನ್ ಹೇಳುವ ‘ಮೆಟಫಿಸಿಕಲ್’ ಕವಿಗಳಲ್ಲಿ (Metaphysical poets) ಮತ್ತು ಪೋಪ್‍ನಲ್ಲಿ (Pope) ಕೂಡಾ ಕಾಣುತ್ತಾನೆ. ಆದರೆ ರೊಮ್ಯಾಂಟಿಕ್ ಕವಿಗಳಲ್ಲಿ (Romantic poets) ಇಲ್ಲ. ಆಧುನಿಕ ಕವಿತೆಗಳನ್ನು ಓದುವುದಕ್ಕೆ ಲೀವಿಸ್ ಚೆಲ್ಲಿದ ಬೆಳಕು ಸಹಕಾರಿಯಾಯಿತು.

1940ರಲ್ಲಿ ಲೀವಿಸ್‍ಗೆ ಕಾದಂಬರಿ ಪ್ರಕಾರದಲ್ಲಿ ವಾಸ್ತವ ಆಸಕ್ತಿ ಅಂಕುರಿಸಿತು. 1948ರಲ್ಲಿ ಅವನ ಸುಪ್ರಸಿದ್ಧ “ಮಹಾ ಪರಂಪರೆ” (The Great Tradition) ಪ್ರಕಟವಾಯಿತು. ಏನೀ ಮಹಾ ಪರಂಪರೆ ಎಂದರೆ? ಲೀವಿಸ್‍ ನ ಪ್ರಕಾರ, ಇದು ಇಂಗ್ಲಿಷ್ ಸಾಹಿತ್ಯಲೋಕದಲ್ಲಿ ಎಂದಿನಿಂದಲೂ ಕಂಡುಬರುವ ಒಂದು ನೈತಿಕ ಆಸಕ್ತಿ. ಕಾದಂಬರಿಕಾರರು ಎರಡು ಮುಖ್ಯ ವಿಚಾರಗಳ ಮೇಲಿಂದ ಪ್ರಧಾನರು: ಒಂದು, ಜನತೆಯ ಕುರಿತಾದ ಅರಿವನ್ನು ಹೆಚ್ಚಿಸುವುದು; ಇನ್ನೊಂದು, ಜೀವನದ ಸಾಧ್ಯತೆಗಳ ಕುರಿತಾದ ಅರಿವನ್ನು ಹೆಚ್ಚಿಸುವುದು. ಜೇನ್ ಆಸ್ಟಿನ್, ಜಾರ್ಜ್ ಎಲಿಯಟ್, ಹೆನ್ರಿ ಜೇಮ್ಸ್, ಜೋಸೆಫ್ ಕಾನ್ರಾಡ್ ಇಂತಹ ನೈತಿಕ ಆಸಕ್ತಿಗೆ ಮಾದರಿಯಾಗಿದ್ದಾರೆ.

ಕಾದಂಬರಿಗೆ, ಯಾವುದೇ ಸಾಹಿತ್ಯ ಕೃತಿಗೆ, ಕಲಾವಂತಿಕೆಯೂ ಬೇಕು. ಈ ನಿಟ್ಟಿನಿಂದ ಡಿಕೆನ್ಸ್, ಟ್ರೊಲೊಪಿ, ಮೆರಿಡಿತ್ ಮತ್ತು ಹಾರ್ಡಿ ಲೀವಿಸ್‍ ನ ಟೀಕೆಗೆ ಗುರಿಯಾಗುತ್ತಾರೆ. ಇವರ ಮೇಲೆ ಲೀವಿಸ್ ಹೊರಿಸುವ ಮುಖ್ಯ ಆಪಾದನೆಯೆಂದರೆ ಇವರು ರಚನೆಗೆ ಬೆಲೆ ಕೊಡುವುದಿಲ್ಲ, ಇವರಲ್ಲಿ ಕಲಾವಂತಿಕೆಯಿಲ್ಲ ಎನ್ನುವುದು. “ಮಹಾ ಪರಂಪರೆ”ಯ ಅನಂತರ ಲೀವಿಸ್‍ ನ ವಿಮರ್ಶೆಯಲ್ಲಿ ಹೇಳಿಕೊಳ್ಳುವಂತಹ ಬೆಳವಣಿಗೆ ಕಾಣಿಸುವುದಿಲ್ಲ. ಲೀವಿಸ್‍ ನ ಶ್ರದ್ಧೆ ಹೆಚ್ಚು ಹೆಚ್ಚಾಗಿ ಸಾಹಿತ್ಯದ ರಾಜಕೀಯದಲ್ಲಿ ಕೇಂದ್ರೀಕೃತವಾಗಿರುವುದು ಕಂಡುಬರುತ್ತದೆ.

ಸಾಧಾರಣ ವಿಚಾರವೆಂದರೆ ಲೀವಿಸ್‍ ನ ವಿಮರ್ಶೆ ಪದವಿಶ್ಲೇಷಣೆ ಎಂಬುದಾಗಿ, ಅಮೇರಿಕನ್ ಹೊಸ ವಿಮರ್ಶಾ ಪದ್ಧತಿಯ (ನ್ಯೂ ಕ್ರಿಟಿಸಿಸಂ) ವಿಚಿತ್ರ ಪ್ರತಿ ಎಂದು (Stanley E. Hyman, “The Armed Vision”). ಸ್ಕ್ರೂಟಿನಿ ಪತ್ರಿಕೆ ನಿಂತ ಮೇಲೆ ಅದರ ಹುಟ್ಟು ಸಾವಿನ ಕುರಿತು “ಲಂಡನ್ ಮ್ಯಾಗಝಿನ್”ನಲ್ಲಿ ಬರೆಯುತ್ತಾ ಲಾರೆನ್ಸ್ ಲರ್ನರ್ ಲೀವಿಸ್‍ ನನ್ನು ಐ. ಎ. ರಿಚರ್ಡ್ಸ್ಸನ್‌ ನ ಮಗು ಎಂದು ಕರೆಯುತ್ತಾನೆ. ಲೀವಿಸ್ ಒಬ್ಬ ಸೃಜನಾತ್ಮಕ ವಿಮರ್ಶಕ, ‘ಪ್ರ್ಯಾಕ್ಟಿಕಲ್ ಕ್ರಿಟಿಸಿಸಂ’ನ ವಿಶ್ಲೇಷಣಾ ತಂತ್ರವನ್ನು ಸಫಲವಾಗಿ ಪ್ರಯೋಗಿಸಿದವನು ಎನ್ನುವುದು ಲರ್ನರ್‍ ನ ಅಭಿಪ್ರಾಯ.

ಎಲಿಯಟ್ ತನ್ನ ಮೂಲ ದಾರಿಯನ್ನು ಬಿಟ್ಟು ಮುಂದೆ ಅಡಿಯಿಟ್ಟಾಗ ಲೀವಿಸ್ ಅದೇ ಮೂಲದ ದಾರಿಯಲ್ಲಿ ಮುನ್ನಡೆದ ಎನ್ನುವುದು ಒಳ್ಳೆಯದು.

ಲೀವಿಸ್‍ ನ ಕುರಿತಾಗಿರುವ ಈ ವಿಚಾರ ಎಷ್ಟರ ಮಟ್ಟಿಗೆ ಸರಿ? ಲೀವಿಸ್ ಒಬ್ಬ ಪದ ವಿಶ್ಲೇಷಣಾ ವಿಮರ್ಶಕನಾದರೆ ಅಂತಹ ವಿಮರ್ಶೆ ಸ್ಕ್ರೂಟಿನಿಯಲ್ಲಾಗಲಿ ಇತರ ಎಡೆಗಳಲ್ಲಾಗಲಿ ಕಾಣಿಸಬೇಕಲ್ಲ? ಈ ತಪ್ಪು ಗ್ರಹಿಕೆಗೆ ಜಾರ್ಜ್ ವಾಟ್ಸನ್ ಕೊಡುವ ಕಾರಣಗಳು ಇವು:
(1) ಲೀವಿಸ್‍ ನ ವಿಮರ್ಶೆಗಿರುವ ಸಮಕಾಲೀನ ಛಾಯೆ. ಹೊಸ ವಿಮರ್ಶೆ (New Criticism) ಹೇಗಿದ್ದರೂ ಹೊಸತೇ. ಆದ್ದರಿಂದ ಲೀವಿಸ್ ಹೊಸ ವಿಮರ್ಶಾ ಪಂಥಕ್ಕೆ ಸೇರಿದವನು ಎಂಬ ಒಂದು ವಾದ.

(2) 1932ರಲ್ಲಿ ಸ್ಕ್ರೂಟಿನಿಯನ್ನು ಸ್ಥಾಪಿಸಿದಾಗ ಅದಕ್ಕೆ “ಸ್ಕ್ರೂಟಿನಿ” ಎಂದು ಹೆಸರಿಟ್ಟದ್ದು. ಇದರಿಂದಾಗಿ ಲೀವಿಸ್ ಗುಂಪು ಕೃತಿಯ ಡಿಸೆಕ್ಸನ್ (ಶಸ್ತ್ರಚಿಕಿತ್ಸಕ) ವಿಮರ್ಶೆ ಮಾಡುತ್ತದೆ ಎಂಬ ಕಲ್ಪನೆ ಹುಟ್ಟುವುದಕ್ಕೆ ಕಾರಣವಾಯಿತು.

(3) ಕೆಲವೊಮ್ಮೆ ಲೀವಿಸ್ ತಾನೇ ಪದ ವಿಶ್ಲೇಷಣಾತ್ಮಕ ವಿಮರ್ಶೆಯಲ್ಲಿ ವಿಶ್ವಾಸವಿಟ್ಟಂತೆ ಮಾತಾಡಿದ್ದುಂಟು. ಆದರೆ ಎಂಪ್ಸನ್‌ ನ ವಿಮರ್ಶೆಯೊಂದಿಗೋ, ಅಥವಾ ಅಮೇರಿಕದ ‘ಹೊಸ ವಿಮರ್ಶೆಯ (ನ್ಯೂ ಕ್ರಿಟಿಸಿಸಂ) ಕರ್ತಾರರಾದ ಕ್ಲೆಯಾಂತ್ ಬ್ರೂಕ್ಸ್, ಜಾನ್ ಕ್ರೋ ರಾನ್ಸಮ್ ಮುಂತಾದವರ ವಿಮರ್ಶೆಯೊಂದಿಗೋ ಹೋಲಿಸಿದರೆ ಲೀವಿಸ್ ಎಂದಿಗೂ ಅದನ್ನು ಕಾರ್ಯಗತ ಮಾಡಿಲ್ಲ ಎನ್ನುವುದು ಅರಿವಾದೀತು. ಉದಾಹರಣೆಗೆ, ವಿಲಿಯಂ ಎಂಪ್ಸನ್‍ ನ ವಿಮರ್ಶಾ ಪದ್ಧತಿಗೂ ಲೀವಿಸ್‍ ನ ಪದ್ಧತಿಗೂ ಹಲವು ರೀತಿಯಲ್ಲಿ ಎಣ್ಣೆ ಸೀಗೆಯ ವೈರುಧ್ಯವಿದೆ. ಎಂಪ್ಸನ್‍ ನದು ಡಿಸೆಕ್ಶನ್ ಟೇಬಲ್ ಮಾದರಿಯದಾದರೆ, ಲೀವಿಸ್‍ನದು ಕಾರ್ಯಗತವಾದ ವಿಶ್ಲೇಷಣಾ ಮಾದರಿ.

ಆದರೂ ಲೀವಿಸ್ ತಾತ್ವಿಕವಾಗಿ ಪಠ್ಯದಿಂದ ದೂರ ಸರಿಯದ ವಿಮರ್ಶಕ. “ಮರು ಮೌಲ್ಯೀಕರಣ”ದ ಪ್ರಸ್ತಾಪನೆಯಲ್ಲಿ – ವಸ್ತುನಿಷ್ಠವಲ್ಲದ ಕಾವ್ಯವಿಮರ್ಶೆ ವಿಮರ್ಶೆಯೇ ಅಲ್ಲ; ಬೇರೆ ಬೇರೆ ಕವಿಗಳ ವಿಮರ್ಶೆ ಮಾಡುವುದಾದರೆ ಒಂದೊಂದೇ ಕವಿತೆಗಳ ಅಥವಾ ಬಿಡಿಭಾಗಳ ನಿರ್ದಿಷ್ಟ ವಿಶ್ಲೇಷಣೆ ನಡೆಸುವ ನಿಯಮ ಕೈಗೊಳ್ಳಬೇಕು; ಮಾತ್ರ ನಾವು ಏನು ಹೇಳುತ್ತೇವೆಯೋ ಅದು ಪಠ್ಯದ ತೀರ್ಪಿನ ಜೊತೆ ಹೊಂದಬೇಕು; ಇಲ್ಲದಿದ್ದರೆ ಹೇಳಲೇ ಬಾರದು ಎಂದು ವಾದಿಸಿದ್ದಾನೆ. ಇದು ರಿಚರ್ಡ್ಸ್-ಎಂಪ್ಸನ್ ಶೈಲಿಯೇನೋ ಸರಿ.

(ಎಂಪ್ಸನ್)

ಹೊಸ ಪಂಥದ ವಿಮರ್ಶಕರು ಲೀವಿಸ್‍ ನ ಮೇಲೆ ಬೀರಿದ ಪ್ರಭಾವವೇನೂ ಕಡಿಮೆಯಲ್ಲ. ಆದರೆ ರಿಚರ್ಡ್ಸ್-ಎಂಪ್ಸನ್ ಗುರಿಗೂ ಲೀವಿಸ್ ಗುರಿಗೂ ವ್ಯತ್ಯಾಸವಿದೆ. ಲೀವಿಸ್ ಮಟ್ಟಿಗಾದರೆ – ನಾವು ಯಾಕೆ ಪಠ್ಯದ ತೀರ್ಪಿಗೆ ಹೊಂದಿಕೊಳ್ಳಬೇಕು? ಯಾಕೆಂದರೆ, ವಿಮರ್ಶಕಾಭಿಪ್ರಾಯಕ್ಕೆ ಆತಂಕ ಒಡ್ಡದೇನೇ ಅದು ಆ ಅಭಿಪ್ರಾಯಕ್ಕೆ ಒಂದು ಪ್ರಸ್ತುತತೆ (relevance), ಒಂದು ಅಂಚುಳ್ಳ ಮಿತವ್ಯಯ (edged economy) ತಂದುಕೊಡುತ್ತದೆ; ಇದು ಬೇರೆ ವಿಧದಿಂದ ಸಾಧ್ಯವಿಲ್ಲ.

ಲೀವಿಸ್ ಯಾಕೆ ಈ ಟೀಕೆಗಳಿಗೆ ಉತ್ತರಿಸಲಿಲ್ಲ ಎಂದು ನಾವು ಸಹಜವಾಗಿಯೇ ಕೇಳಬಹುದು. ಜಾರ್ಜ್ ವಾಟ್ಸನ್‍ ನ ಅಭಿಪ್ರಾಯದಂತೆ, ಇದು ‘ಹೊಸ ವಿಮರ್ಶಕ’ರನ್ನು ಸಮಾಧಾನಪಡಿಸಲಿಕ್ಕಿದ್ದೀತು. ಹೇಗಿದ್ದರೂ ಲೀವಿಸ್‍ ನ ಈ ಪದವಿಶ್ಲೇಷಣೆ ತೀರಾ ಬಾಹ್ಯದ್ದಲ್ಲದೆ ಬೇರಲ್ಲ.

ಈ ‘ಹೊಸ ವಿಮರ್ಶಕ’ರಿಗೂ ಲೀವಿಸ್‍ ಗೂ ಇರುವ ಭಿನ್ನತೆ ಇದು – ‘ಹೊಸ ವಿಮರ್ಶೆ’ಯ ಬಳಗ ಕೊನೆಯಲ್ಲಿ ಏನನ್ನೂ ನಿರ್ಧರಿಸಲು ಪ್ರಯತ್ನಿಸುವುದಿಲ್ಲ. ಅವರ ಶ್ರದ್ಧೆಯೆಲ್ಲ ಒಂದು ಪಂಥವನ್ನು ತಳ್ಳಿಹಾಕಿ ಇನ್ನೊಂದನ್ನು ಸ್ಥಾಪಿಸುವುದರಲ್ಲಿ ನೆಲೆಸಿರುವುದು. ಅವರ ತಿಳಿವಿನಲ್ಲಿ ಬೋಧವಿಲ್ಲ; ಲೀವಿಸ್ ಎಂದರೆ ತೀರಾ ಬೋಧವೇ (ಡೈಡ್ಯಾಕ್ಟಿಕ್) ಸರಿ!

ಲೀವಿಸ್ ಎಂದರೆ ತುಂಬ ಹಟಮಾರಿಯೂ ಹೌದು, ತನ್ನ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಇದರಿಂದಾಗಿ ಲೀವಿಸ್‍ ನ ಬೆಂಬಲಿಗರೇ ಅವನ ಕೈಬಿಟ್ಟದ್ದುಂಟು. ತನ್ನ ‘ಮೌಲ್ಯ’ಗಳಿಗಾಗಿ ಲೀವಿಸ್ ಹೋರಾಡಿದ್ದಾನೆ. ಲೀವಿಸ್ ತಾನೊಂದು ಸರ್ವಸಾಮಾನ್ಯ ನಿಲುಮೆ ತಳೆಯಲು ನಿರಾಕರಿಸುವುದೇ ಇದಕ್ಕೆ ಕಾರಣ. ಇದು ಲೀವಿಸ್‍ ನ ಸಾಧನೆಯ ಕೇಂದ್ರ ವಿರೋಧಾಭಾಸ. ವಿಮರ್ಶೆಯ ಪರಮತತ್ವಗಳ ಕುರಿತಾಗಿ ಎಂದಾದರೂ ಮಾತಾಡುವುದಕ್ಕೆ ಲೀವಿಸ್ ಯಾಕೆ ಒಪ್ಪುವುದಿಲ್ಲ? ಎಲ್ಲಾ ತತ್ವದವರಿಗೂ ವಿಮರ್ಶಕ ದಾರ್ಶನಿಕನಾಗಿರಬೇಕು, ವಿಮರ್ಶೆ ಎಲ್ಲಾ ತತ್ವಗಳಿಗೂ ಮೀರಿರಬೇಕು – ಎನ್ನುವುದು ಲೀವಿಸ್‍ ನ ಇಂಗಿತವಿರಬಹುದು. ಲೀವಿಸ್‍ ನ ಮೇಲೆ ಹಲವಾರು ಆಪಾದನೆಗಳಿವೆ. ಅವನು ತನ್ನ ಓದುಗರಿಗೆ ‘ಶಾಕ್’ ಕೊಡುತ್ತಾನೆ; ಅವನು ಬಹಳ ಸಂಕುಚಿತ ಪ್ರವೃತ್ತಿಯವ ಎಂದು ಮುಂತಾಗಿ. ಎರಡು ಮುಖ್ಯ ಆಪಾದನೆಗಳೆಂದರೆ, ಒಂದು, ಮೌಲ್ಯನಿರ್ಣಯ ಮಾಡುವ ಆತುರದಲ್ಲಿ ಲೀವಿಸ್ ಸಾಹಿತ್ಯಿಕ ಮೌಲ್ಯಗಳ ಲಾಲಿತ್ಯವನ್ನೂ, ಹಾಸುಹೊಕ್ಕುಗಳನ್ನೂ ಗಣನೆಗೆ ತರುವುದಿಲ್ಲ ಎನ್ನುವುದು; ಎರಡು, ಲೀವಿಸ್ ಯಾವುದನ್ನೂ ಅರಿತಿಲ್ಲ, ಅರಿಯುವುದಕ್ಕೆ ಹೋಗಿಲ್ಲ ಎನ್ನುವುದು!

ಹೇಗಿದ್ದರೂ ಇಪ್ಪತ್ತನೇ ಶತಮಾನದ ಕಾವ್ಯ ರುಚಿಗೆ ಲೀವಿಸ್ ಸಾಕಷ್ಟು ಹೋರಾಡಿದ್ದಾನೆ. ಈ ಮಟ್ಟಿಗೆ (ಮತ್ತು ಈ ಮಟ್ಟಿಗೆ ಮಾತ್ರ) ಲೀವಿಸ್‍ ನನ್ನು ಐವರ್ ವಿಂಟರ್ಸ್‍ ಗೆ ಹೋಲಿಸಬಹುದಾಗಿದೆ. ಟಿ, ಎಸ್. ಎಲಿಯಟ್‍ ನಂತೆ ಇಬ್ಬರೂ ಮಡಿವಂತ ವಿಮರ್ಶಕರು. ಲೀವಿಸ್ ನಮಗೆ ತೋರಿದ ಮೌಲ್ಯಗಳೇನು? ಅವನ್ನು ನಾವು ಗುರುತಿಸದೆ ಹೋಗಬಹುದು. ಅವನು ಎಂದೂ ಕಾವ್ಯತತ್ವಗಳಿಗೆ, ವಿಮರ್ಶಾ ನಿಯಮಗಳಿಗೆ ಅಂಟಿಕೊಂಡವನಲ್ಲ. ಲೀವಿಸ್ ತೋರಿದ ಮೌಲ್ಯ ಕಾವ್ಯತತ್ವಗಳನ್ನು ರೂಪಿಸುವುದರಲ್ಲಿ ಇರುವುದಕ್ಕಿಂತ ಕಾವ್ಯವನ್ನು ಅರಿತುಕೊಳ್ಳುವುದರಲ್ಲಿ, ಆನಂದಿಸುವುದರಲ್ಲಿ ಇದೆ ಎನ್ನಬಹುದು. ಇಲ್ಲಿ ಹದಿನೇಳನೇ ಶತಮಾನದ ಡ್ರೈಡನ್‍ ನ – ಇಂಗ್ಲಿಷ್ ವಿಮರ್ಶೆಯ ಜನಕನ – ನೆರಳು ಬಿದ್ದಿದೆ. ಈ ನೆರಳಿನಲ್ಲಿ ಶತಮಾನಗಳಿಂದೀಚೆ ಇಂಗ್ಲಿಷ್ ವಿಮರ್ಶೆ ಬೆಳೆದುಬಂದಿದೆ. ಲೀವಿಸ್‍ ನ ಸ್ಥಾನವನ್ನು ಕಾಲವೇ ನಿರ್ಧರಿಸಬೇಕಷ್ಟೆ.

******

(`ಅಜಂತ’ ಪತ್ರಿಕೆಯ ಫೆಬ್ರವರಿ 1966 ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಜಂತ ಕನ್ನಡದ ಪ್ರಸಿದ್ಧ ಕತೆಗಾರ ಕಾಸರಗೋಡಿನ ಎಂ. ವ್ಯಾಸ 1966-67ರ ಅವಧಿಯಲ್ಲಿ ಒಂದು ವರ್ಷ ನಡೆಸಿಕೊಂಡು ಬಂದ ಮಾಸ ಪತ್ರಿಕೆ. ಆ ಕಾಲದಲ್ಲಿ ತಿರುಮಲೇಶ್ ತಿರುವನಂತಪುರದಲ್ಲಿ ಇಂಗ್ಲಿಷ್ ಎಂ.ಎ. ವಿದ್ಯಾರ್ಥಿ.)