ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು.
ಕಥೆಗಾರ ಎಸ್.‌ ದಿವಾಕರ್‌ ಅವರ ಹೊಸ ಪುಸ್ತಕ, “ಸರ್ವ ಜನಾಂಗದ ಶಾಂತಿಯ ಭಾಷೆ” ಪ್ರಬಂಧಗಳ ಸಂಕಲನದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

 

ಕ್ಲೀಷೆಯ ಭಾಷೆ, ಭಾಷೆಯ ಕ್ಲೀಷೆ

ಈಚೆಗೆ ಪತ್ರಿಕೆಗಳಲ್ಲೂ ಪುಸ್ತಕಗಳಲ್ಲೂ ನಾನು ಓದಿದ ಕೆಲವು ವಾಕ್ಯಗಳು ಇಲ್ಲಿವೆ. ಇವುಗಳಲ್ಲಿ ದಪ್ಪ ಅಕ್ಷರಗಳಲ್ಲಿರುವ ಶಬ್ದಗಳನ್ನು ತುಸು ಗಮನಿಸಿ: “ಆಕೆ ಅರಳು ಹುರಿದಂತೆ ಮಾತಾಡುತ್ತಿದ್ದಳು”; “ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದರು ಸಿದ್ಧಪ್ಪ”; “ಅಂದು ಶುಚಿರುಚಿಯಾದ, ಹಿತಮಿತವಾದ ಉಪಾಹಾರವಿತ್ತು”; “ಅವನು ಹೋಗುವುದೋ ಬೇಡವೋ ಎಂದು ಮೀನಮೇಷ ಎಣಿಸಿದ”; “ಶ್ರೀಯುತರು ಸೊಗಸಾದ ಬರವಣಿಗೆಯಲ್ಲಿ ಸಿದ್ಧಹಸ್ತರಾಗಿದ್ದರು”; “ಮಾಸ್ತಿ, ಕನ್ನಡದ ಆಸ್ತಿ”, “ಕಾದಂಬರಿ ಸಾರ್ವಭೌಮ ಅ.ನ.ಕೃ.”, “ಸಂಗೀತವನ್ನು ಕೇಳಿದ ಶ್ರೋತೃಗಳು ಆನಂದಸಾಗರದಲ್ಲಿ ಮುಳುಗಿಹೋದರು”; “ನಾಡುನುಡಿಯ ಏಳಿಗೆಗೆಂದೇ ಶ್ರೀಯುತರು ಅವಿಶ್ರಾಂತವಾಗಿ ದುಡಿದರು”…. ನಾವು ಲಾಗಾಯತಿನಿಂದ ಕೇಳುತ್ತಿರುವ, ಓದುತ್ತಿರುವ ಇಂಥಿಂಥ ವಾಕ್ಯಗಳ ಇಂಥಿಂಥ ಶಬ್ದಗಳು ಹಿಂದೊಂದು ಕಾಲದಲ್ಲಿ ಒಂದು ಸಂದರ್ಭವನ್ನೋ ಒಬ್ಬ ವ್ಯಕ್ತಿಯ ವಿಶೇಷತೆಯನ್ನೋ ಅರ್ಥಪೂರ್ಣವಾಗಿ ವರ್ಣಿಸುತ್ತಿದ್ದಿರಬೇಕು. ಆದರೆ ಈಗ ಅವುಗಳೆಲ್ಲವೂ ತಮ್ಮ ತಮ್ಮ ಧ್ವನ್ಯರ್ಥಗಳನ್ನು ಕಳೆದುಕೊಂಡು ಬಡಕಲಾಗಿವೆ ಅಥವಾ ಕ್ಲೀಷೆಗಳಾಗಿಬಿಟ್ಟಿವೆ.

ಮೇಲೆ ಉಲ್ಲೇಖಿಸಿದ ಶಬ್ದಗಳ ಪಟ್ಟಿಗೆ ಈ ಮುಂದಿನ ನುಡಿಗಟ್ಟುಗಳನ್ನೂ ಸೇರಿಸಿಕೊಳ್ಳಿ: ‘ಎಳ್ಳು ನೀರು ಬಿಡು’, ‘ನಭೂತೋ ನಭವಿಷ್ಯತಿ’, ‘ಕರತಲಾಮಲಕ’, ‘ಕಳಸವಿಟ್ಟ ಹಾಗೆ’, ‘ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ’, ‘ಬಡವರ ಬಾದಾಮಿ ಕಡಲೆಕಾಯಿ’, ‘ಕನ್ನಡ ಗರಡಿಯಾಳು’, ‘ಸಿರಿಗನ್ನಡ ಡಿಂಗರಿಗ’, ‘ಖ್ಯಾತ ಲೇಖಕ’, ‘ಕಿಕ್ಕಿರಿದ ಸಭಾಂಗಣ’, ‘ಓತಪ್ರೋತವಾಗಿ’, ‘ಸುಶ್ರಾವ್ಯವಾದ ಕಂಠ’, ‘ಗೋಮುಖವ್ಯಾಘ್ರ’. ನಾವು ಮತ್ತೆ ಮತ್ತೆ ಕೇಳಿರುವ ಅಥವಾ ಓದಿರುವ ಈ ಶಬ್ದಗಳು ಅಥವಾ ಶಬ್ದಸಮುಚ್ಚಯಗಳು ಅತಿಯಾದ ಬಳಕೆಯಿಂದಾಗಿ ಜೀವಂತ ಶವಗಳಂತಿವೆಯಲ್ಲವೆ? ಈ ಶಬ್ದಗಳಷ್ಟೇ ಅಲ್ಲ, ಕೆಲವು ಗಾದೆಗಳು (ಉದಾ: “ದೇವನೊಬ್ಬ ನಾಮ ಹಲವು”), ಕೆಲವು ಕವನಗಳ ಸಾಲುಗಳು (ಉದಾ: “ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು”, “ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ”) ಕೂಡ ಈಗ ತಮ್ಮ ಮೂಲಧ್ವನಿಯನ್ನು ಉಳಿಸಿಕೊಂಡಂತಿಲ್ಲ.

ಕ್ಲೀಷೆಯ ಬಗ್ಗೆ ಡಿ.ವಿ.ಜಿ.ಯವರು ಒಂದೆಡೆ ಬರೆದಿರುವುದು ಹೀಗೆ: “ಉಪನ್ಯಾಸದ ಅವಸರದಲ್ಲಿ ಸ್ಪಷ್ಟವಾದ ಅಭಿಪ್ರಾಯವೂ ಸ್ಪಷ್ಟಾರ್ಥವೂ ಉಳ್ಳ ಪದವೊಂದು ತೋರಿ ಬಾರದೆ ಹೋದಾಗ ಉಪನ್ಯಾಸಕನು ‘ಸಂಸ್ಕೃತಿ’ಯನ್ನು ಮುಂದಕ್ಕೆ ತಂದರೆ, ಸಭಿಕರು (ವಾಚಕರು) ಏನೋ ಒಂದು ಮಹಾ ಗಂಭೀರವಾದ ಸಂಗತಿ ಬಂತೆಂದು ಕುತುಕಪಡುತ್ತಾರೆ. ‘ಸಂಸ್ಕೃತಿ’ ಎಂಬ ಅಕ್ಷರಗಳಿಂದಲೇ ಕಿವಿಗೆ ಏನೋ ಮಹತ್ವದ ಪ್ರಸಕ್ತಿ ಭಾಸವಾಗುತ್ತದೆ. ಸಂಸ್ಕೃತಿ, ಸ್ವಾತಂತ್ರ್ಯ, ಸಮತ್ವ, ಸೋದರತ್ವ, ಧರ್ಮ – ಮೊದಲಾದವು ಮಯಣದ ಮೆರುಗು ಮಾತುಗಳು. ಅವುಗಳ ಅರ್ಥವನ್ನು ಬೇಕುಬೇಕಾದಂತೆ ಹಿಗ್ಗಿಸಬಹುದು, ತಗ್ಗಿಸಬಹುದು; ಮತ್ತು ವಿವರಿಸಲಾಗದ ಅರ್ಥಗಳನ್ನು ಅವುಗಳಿಂದ ಆಗಿಸಬಹುದು. ಇಂಥ ಎರಕದಚ್ಚಿನ (ಕ್ಲೀಷೆ) ಮೆರುಗು ಮಾತುಗಳು ಭಾಷಣಕರ್ತನಿಗೆ ಕಷ್ಟಕಾಲದ ಸ್ನೇಹಿತರು. ಇನ್ನಾರೂ ಸಮಯಕ್ಕೊದಗದಾದಾಗ ಅವರು ಒದಗಿಬರುತ್ತಾರೆ”.

(ಎಸ್.‌ ದಿವಾಕರ್)

ಕ್ಲೀಷೆ ಎನ್ನುವುದು ಒಂದು ಫ್ರೆಂಚ್ ಪದ. ಫ್ರೆಂಚಿನಲ್ಲಿ ಕ್ಲೀಷೆ ಎಂಬ ಶಬ್ದ ‘ಕ್ಲೀಷರ್’ ಎಂಬ ಕ್ರಿಯಾಪದದಿಂದ ಹುಟ್ಟಿದ್ದು. ‘ಕ್ಲೀಷರ್’ ಎಂದರೆ ಚಲಿಸುವ ಮೊಳೆಗಳನ್ನು ಒಂದು ಪ್ಲೇಟಿಗೆ ಸುರಿ ಎಂದರ್ಥ. ಹಿಂದಿನ ಕಾಲದಲ್ಲಿ ಮುದ್ರಣದ ಪ್ಲೇಟನ್ನು ಎರಕ ಹೊಯ್ದಾಗ ಚಲಿಸುತ್ತಿದ್ದ ಮೊಳೆಗಳು (ಅಕ್ಷರಗಳು) ‘ಕ್ಲೀಷೆ’ ಎಂದು ಸದ್ದುಮಾಡುತ್ತಿದ್ದವಂತೆ. ಮುದ್ರಣ ಪ್ಲೇಟನ್ನು ‘ಸ್ಟೀರಿಯೋಟೈಪ್’ ಎಂದೂ ಕರೆಯಲಾಗುತ್ತದೆಯಷ್ಟೆ. ಆಧುನಿಕ ಕಾಲದಲ್ಲಿ ಇದೇ ಕ್ಲೀಷೆ ಹಿಂದೆ ನಡೆದ ಯಾವುದೋ ಘಟನೆಯ ಆಧಾರದಿಂದ ನಿರೀಕ್ಷಿಸಬಹುದಾದ ಒಂದು ಕ್ರಿಯೆಗೋ ವಿಚಾರಕ್ಕೋ ಬಳಸಲ್ಪಡತೊಡಗಿತು.

ಭಾಷೆಗೆ ಸಂಬಂಧಿಸಿದಂತೆ ಹೇಳುವುದಾದರೆ ಒಂದು ಸಾಹಿತ್ಯ ಕೃತಿಯೊಳಗಿನ ಅಭಿವ್ಯಕ್ತಿವಿಧಾನ, ವಿಚಾರ. ಅಥವಾ ಧಾತು – ಇವು ತಮ್ಮ ಮೂಲ ಅರ್ಥ ಅಥವಾ ಪರಿಣಾಮವನ್ನು ಕಳೆದುಕೊಳ್ಳುವಷ್ಟು ಮತ್ತೆ ಮತ್ತೆ ಬಳಕೆಯಾಗಿ ಆಗಿ ಕ್ಲೀಷೆಗಳಾಗುತ್ತವೆ ಎನ್ನಬೇಕು. ಹಾಗೆ ನೋಡಿದರೆ, ನಮ್ಮ ಭಾಷೆಯ ಸಾಕಷ್ಟು ನುಡಿಗಟ್ಟುಗಳು ಕ್ಲೀಷೆಗಳೇ ಆಗಿಬಿಟ್ಟಿವೆಯೆನ್ನುವುದಕ್ಕೆ ಎಷ್ಟು ಬೇಕಾದರೂ ಉದಾಹರಣೆಗಳನ್ನು ಕೊಡಬಹುದು.

ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ ಕೆಲವರಿಗೆ “ಮೊನ್ನೆ ಯಾವುದೋ ಕೆಲಸದಲ್ಲಿದ್ದಾಗ ಅದೇಕೋ ಈ ಪ್ರಸಂಗ ನೆನಪಾಯಿತು” ಎಂದೋ “ಅಡಿಗರ ಈ ಸಾಲುಗಳು ಯಾಕೋ ಸದಾ ನನ್ನನ್ನು ಕಾಡುತ್ತವೆ” ಎಂದೋ ಶುರುಹಚ್ಚಿಕೊಂಡಾಗಲೇ ಮುಂದೆ ಏನು ಬರೆಯುಬೇಕೆಂದು ಹೊಳೆಯುವುದು (ಅಡಿಗರ ಜಾಗದಲ್ಲಿ ಬೇಂದ್ರೆ, ಕುವೆಂಪು, ಕೆ.ಎಸ್.ನ., ಎಕ್ಕುಂಡಿ, ಹೀಗೆ ಯಾರ ಹೆಸರಿದ್ದರೂ ನಡೆಯುತ್ತದೆ). ಹಾಗೆ ನೋಡಿದರೆ ಯಾವುದಾದರೂ ಒಂದು ಪ್ರಸಂಗವಾಗಲೀ ಯಾವುದೋ ಒಂದು ಕವನದ ಸಾಲುಗಳಾಗಲೀ ಸುಮ್ಮಸುಮ್ಮನೆ ಯಾಕೋ ನೆನಪಾಗುವುದಿಲ್ಲ, ಯಾಕೋ ಕಾಡುವುದಿಲ್ಲ. ಅದಕ್ಕೆ ಕಾರ್ಯಕಾರಣಸಂಬಂಧ ಇದ್ದೇ ಇರುತ್ತದೆ. ಅದನ್ನು ಪತ್ತೆಹಚ್ಚಲಾಗದವರು ಸುಮ್ಮನೆ ಯಾಕೋ ಯಾಕೋ ಎಂದು ಬರೆದರೆ ಅದು ಕ್ಲೀಷೆಯಾಗದೆ (ಚರ್ವಿತಚರ್ವಣವಾಗದೆ) ಬೇರೇನಾದೀತು?

ಕಳೆದ ಶತಮಾನದ ಐವತ್ತು-ಅರವತ್ತರ ದಶಕಗಳಲ್ಲಿ ಬಂಡವಾಳಶಾಹಿಯನ್ನು, ಅದರ ಪ್ರತಿನಿಧಿಯಾದ ಅಮೆರಿಕವನ್ನು ಖಂಡಿಸುತ್ತ ಮಾತಾಡುವಾಗ ಅಥವಾ ಬರೆಯುವಾಗ ನಮ್ಮ ಕಮ್ಯೂನಿಷ್ಟರು ಬಳಸುತ್ತಿದ್ದ ಭಾಷೆ ತುಂಬ ಮೊನಚಾಗಿರುತ್ತಿತ್ತು. ಆದರೆ ಈಗಲೂ ಅದೇ ಭಾಷೆಯನ್ನು ಬಳಸುತ್ತಿರುವ ಕೆಲವು ಕಮ್ಯೂನಿಸ್ಟರ ಮಾತುಗಳನ್ನು ಕೇಳಿದರೆ ಏನೂ ಅನ್ನಿಸುವುದಿಲ್ಲ. ಅದೇ ರೀತಿ ಈಗ ಹೆಚ್ಚು ಹೆಚ್ಚು ಉಪಯೋಗಿಸಲಾಗುತ್ತಿರುವ ಎಡ, ಬಲ ನಿಲುವುಗಳು/ಸಿದ್ಧಾಂತಗಳು ಕೂಡ ಹಳತಾಗಿವೆ ಅಥವಾ ಹಳತಾಗುತ್ತಿವೆ. ಸದ್ಯಕ್ಕೆ ಇವೆರಡಕ್ಕೂ ನಡುವೆ ಇಲ್ಲದಿರುವ ಮಧ್ಯಮಮಾರ್ಗವೊಂದೇ ಇನ್ನೂ ಹೊಸದಾಗಿರಲಿಕ್ಕೆ ಸಾಕು!

ಎ.ಎನ್. ಮೂರ್ತಿರಾಯರು ತಮ್ಮದೊಂದು ಪ್ರಬಂಧದಲ್ಲಿ ಬರೆದಿರುವುದನ್ನು ನೋಡಿ: “ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ – ಅದಕ್ಕೆ ಬಹಿಷ್ಕಾರ ಹಾಕಬೇಕೆನ್ನುವವರೂ ಕೂಡ – ಕ್ಲೀಷೆಯನ್ನು ಉಪಯೋಗಿಸದಿರಲಾಗುವುದಿಲ್ಲ. ಅದಿಲ್ಲದಿದ್ದರೆ ಅನೇಕ ವೃತ್ತಪತ್ರಿಕೆಗಳು ದಿವಾಳಿಯೆದ್ದು ಹೋಗಬಹುದು; ಭಾಷಣಕಾರರ ಸ್ವರ ಉಡುಗಿ ಹೋದೀತು; ವಿಮರ್ಶಕರ ಲೇಖನಿ ನಿಂತು ಹೋದೀತು. ಸ್ವತಃ ಯೋಚನೆ ಮಾಡುವ ಶಕ್ತಿಯಿಲ್ಲದವರಿಗೆ, ಶಕ್ತಿಯಿದ್ದರೂ ಆಲಸರಾದವರಿಗೆ, ಯೋಚನೆಗೆ ವ್ಯವಧಾನವಿಲ್ಲದಿದ್ದರೂ ಭಾಷಣ ಮಾಡುವ ಅಥವಾ ಬರೆಯುವ ಚಟವಿರುವವರಿಗೆ, ಇದು ನಿರಾಯಾಸವಾಗಿ ದೊರಕುವ ನಿಧಿ. ಎಂಥ ಉನ್ನತ ಮಟ್ಟದ ಕವಿಗಳ ಶಕ್ತಿಯುತ ವಾಕ್ಯಗಳನ್ನಾದರೂ ನಾವು ಬಳಸಿ ಬಳಸಿ ಕ್ಲೀಷೆಗೆ ಪರಿವರ್ತನೆ ಮಾಡಿಕೊಳ್ಳಬಹುದಾದ್ದರಿಂದ ಈ ನಿಧಿ ಕರಗುವಂತಿಲ್ಲ.”

ನಮ್ಮ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ನಮ್ಮ ಭಾಷೆ ವಿಕಾಸಗೊಳ್ಳುವ, ಬದಲಾಗುವ, ಬೆಳೆಯುವ ಹಾಗೂ ಹೊಂದಿಕೊಳ್ಳುವ ದಿಸೆಯಲ್ಲಿ ರೂಪಕಕ್ಕೆ ಬಹು ಮಹತ್ವದ ಸ್ಥಾನವಿದೆಯಷ್ಟೆ. ಆದರೆ ಕೆಲವೊಮ್ಮೆ ರೂಪಕಗಳೇ ಹೇಗೆ ಸವಕಲಾಗು ತ್ತವೆಯೆಂದರೆ (ಉದಾಹರಣೆಗೆ ‘ಅವನ ಕೂಗು ಮುಗಿಲನ್ನು ಮುಟ್ಟಿತು’, ‘ಅವಳದು ಅರಣ್ಯರೋದನವಾಯಿತು’, ‘ನಿನ್ನ ಕಣ್ಣ ಹೊನಲಿನಲ್ಲಿ ತೇಲುತಿರುವೆ ನಾನು’, ಇತ್ಯಾದಿ) ಕಡೆಗೆ ಅವು ‘ಭಾಷಿಕ ಶವ’ಗಳಾಗಿಬಿಡುವುದುಂಟು. ಆದರೆ ರೂಪಕಗಳು ಯಶಸ್ವಿಯಾದಾಗ ಹೇಗೆ ನಮ್ಮ ಭಾಷೆಯ ಅನನ್ಯ ಭಾಗವಾಗಿಬಿಡುತ್ತವೆಯೆಂದರೆ ಅವು ರೂಪಕಗಳೆಂದೇ ನಮಗೆ ಮರೆತುಹೋಗುವಷ್ಟು.

ಮನೋವಿಶ್ಲೇಷಣಾ ತಜ್ಞ ರಾಬರ್ಟ್ ಜೇ ಲಿಫ್ಟನ್ ಸರ್ವಾಧಿಕಾರವುಳ್ಳ ಹಾಗೂ ಕಮ್ಯೂನಿಸ್ಟ್ ನಿರಂಕುಶಾಡಳಿತವುಳ್ಳ ದೇಶಗಳ ಭಾಷೆಯ ಬಗ್ಗೆ ಬರೆದಿರುವ ಕೆಲವು ಮಾತುಗಳಿವು: “ಅಲ್ಲಿನ ಭಾಷೆ ಆಲೋಚನೆಯನ್ನು ಕೊನೆಗಾಣಿಸುವ (ಥಾಟ್-ಟರ್ಮಿನೇಟಿಂಗ್) ಕ್ಷೀಷೆಗಳಿಂದ ತುಂಬಿಕೊಂಡಿರುತ್ತದೆ. ದೂರವ್ಯಾಪಿಯೂ ಸಂಕೀರ್ಣವೂ ಆದ ಮಾನವ ಸಮಸ್ಯೆಗಳನ್ನು ತೀರ ಸಂಕ್ಷಿಪ್ತವಾದ, ನಿಜಕ್ಕೂ ದುರ್ಬಲವೆನ್ನಿಸುವ, ಆದರೆ ನಿರ್ಣಯಾತ್ಮಕ ಎಂದು ಭಾಸವಾಗುವ, ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ, ಅಷ್ಟೇ ಸುಲಭವಾಗಿ ಹೇಳಬಹುದಾದ ನುಡಿಗಟ್ಟುಗಳಿಗೆ ಇಳಿಸಲಾಗಿರುತ್ತದೆ. ಇಂಥ ನುಡಿಗಟ್ಟುಗಳು ಯಾವುದೇ ವೈಚಾರಿಕ ವಿಶ್ಲೇಷಣೆಯ ಆರಂಭ ಹೇಗೋ ಹಾಗೆ ಅಂತ್ಯವೂ ಆಗಿಬಿಟ್ಟಿರುತ್ತವೆ.”

ಹಾಗೆ ನೋಡಿದರೆ, ನಮ್ಮ ಭಾಷೆಯ ಸಾಕಷ್ಟು ನುಡಿಗಟ್ಟುಗಳು ಕ್ಲೀಷೆಗಳೇ ಆಗಿಬಿಟ್ಟಿವೆಯೆನ್ನುವುದಕ್ಕೆ ಎಷ್ಟು ಬೇಕಾದರೂ ಉದಾಹರಣೆಗಳನ್ನು ಕೊಡಬಹುದು.

ಜಾರ್ಜ್ ಆರ್ವೆಲ್ಲನ 1949ರ ಕಾದಂಬರಿ ‘ನೈನ್‍ಟೀನ್‍ಎಯ್ಟೀಫೋರ್’ನಲ್ಲಿ ಅಸಾಂಪ್ರದಾಯಿಕ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಬಲ್ಲ ಸಾಮರ್ಥ್ಯವನ್ನೇ ಇಲ್ಲವಾಗಿಸುವುದಕ್ಕಾಗಿ ‘ನ್ಯೂಸ್ಪೀಕ್’ ಎಂಬ ಕಾಲ್ಪನಿಕ ಭಾಷೆಯನ್ನು ಸೃಷ್ಟಿಸಲಾಗುತ್ತದೆಯಷ್ಟೆ. ಆರ್ವೆಲ್ಲನೇ ಬರೆದಿರುವ ‘ಪಾಲಿಟಿಕ್ಸ್ ಅಂಡ್ ದಿ ಇಂಗ್ಲಿಷ್ ಲಾಂಗ್ವೇಜ್’ ಎಂಬ ಪ್ರಬಂಧದಲ್ಲಿ ಗಮನಾರ್ಹವಾಗಿರುವ ಈ ವಾಕ್ಯಗಳನ್ನು ಓದಿ: “ನೀವು ಸಿದ್ಧ ನುಡಿಗಟ್ಟುಗಳನ್ನು (ಅಂದರೆ ಕ್ಲೀಷೆಗಳನ್ನು) ಉಪಯೋಗಿಸುವುದಾದರೆ ಶಬ್ದಗಳಿಗಾಗಿ ಹುಡುಕಾಡಬೇಕಿಲ್ಲ; ನಿಮ್ಮ ವಾಕ್ಯಗಳ ಲಯದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿಲ್ಲ. ಯಾಕೆಂದರೆ ಆ ಸಿದ್ಧ ನುಡಿಗಟ್ಟುಗಳೇ ನೀವು ಯೋಚಿಸಬೇಕಾದ್ದನ್ನು ಯೋಚಿಸಿರುತ್ತವೆ…. ಹಳಸಲಾದ ರೂಪಕಗಳನ್ನು, ಉಪಮೆಗಳನ್ನು, ನುಡಿಗಟ್ಟುಗಳನ್ನು ಬಳಸುವ ಮೂಲಕ ನೀವು ಎಷ್ಟುಮಟ್ಟಿಗೆ ಯೋಚಿಸುವುದಿಲ್ಲವೆಂದರೆ ನೀವು ಉದ್ದೇಶಿಸಿರುವ ಅರ್ಥ ನಿಮಗೇ ಅಸ್ಪಷ್ಟವಾಗುವಷ್ಟು”.

ಕತೆಗಾರ/ವಿಮರ್ಶಕ ನಟರಾಜ್ ಹುಳಿಯಾರ್ ಬರೆದಿರುವ ‘ಕ್ಲೀಷೆ ಕ್ಲೀಷೆ ಕ್ಲೀಷೆ ಮಥಿಸಿ!’ ಎಂಬ ಪ್ರಬಂಧದಲ್ಲಿ ವಿಮರ್ಶಕನೊಬ್ಬ ಕತೆಗಾರನೊಬ್ಬನ ಮಾತುಗಳನ್ನು ಕೇಳಿಸಿಕೊಳ್ಳುವ ಈ ಕಾಲ್ಪನಿಕ ಪ್ರಸಂಗ ತುಂಬ ಕುತೂಹಲಕರ: “ಈ ಕತೆಗಾರ ಯಾವ ಹಿನ್ನೆಲೆಯವನು? ಕಮ್ಯೂನಿಸ್ಟ್? ಸೋಷಲಿಸ್ಟ್? ದಲಿತ ಚಳವಳಿ? ಬಂಡಾಯ ಚಳವಳಿ?… ಮುಂತಾಗಿ ವಿಮರ್ಶಕ ಯೋಚಿಸಿ ನೋಡಿದರೆ ಈತ ಎಲ್ಲೂ ಹೊಂದಿಕೊಂಡಂತೆ ಕಾಣಲಿಲ್ಲ. ಈತ ತನ್ನ ಈ ಎರಡು ಖಾಯಂ ಪದಗಳನ್ನು ಬಳಸುತ್ತಿದ್ದ ಸನ್ನಿವೇಶಗಳು ಹೆಚ್ಚು ಕಡಿಮೆ ಹೀಗಿದ್ದವು: 1. ‘ಚಂದ್ರಶೇಖರ ಪಾಟೀಲರದು ಸ್ವಲ್ಪ ಫ್ಯೂಡಲ್ ಮೆಂಟಾಲಿಟಿ….’ 2. ‘ನಿಸಾರ್ ಅಹಮದ್ ಆಂಟಿ-ಡೆಮಾಕ್ರೆಸಿ….’ 3. ‘ಕಲಬುರ್ಗಿ ಸ್ವಲ್ಪ ಫ್ಯೂಡಲಿಸ್ಟಿಕ್….’ 4. ‘ಬೇಂದ್ರೆ ಅಷ್ಟು ಡೆಮಾಕ್ರೆಟಿಕ್ ಅಲ್ಲ….’ 5. ‘ನಾವು ಇದನ್ನು ಸ್ವಲ್ಪ ಡೆಮಾಕ್ರೆಟಿಕ್ ಆಗಿ ಯೋಚಿಸಬೇಕು.’ ಇನ್ನು ಆ ಕತೆಗಾರನ ಹೊಸ ಕಥಾಸಂಕಲನದ ಯಾವುದೋ ಪುಟ ತೆರೆದರೆ, ಅಲ್ಲಿ ಶೀಲಾ ಎಂಬ ಕಥಾನಾಯಕಿ ನಾಯಕನನ್ನು ಹೀಗೆ ಬಯ್ಯುತ್ತಿದ್ದಳು: “ನೀನು ನಿನ್ನ ಫ್ಯೂಡಲ್ ಮನೋಸ್ಥಿತಿಯಿಂದ ಬಿಡಿಸಿ ಕೊಳ್ಳದಿದ್ದರೆ….”

ಫ್ಯೂಡಲ್, ಆಂಟಿ-ಡೆಮಾಕ್ರೆಸಿ, ಡೆಮಾಕ್ರೆಟಿಕ್ – ಇವೆಲ್ಲ ಮೆರುಗು ಮಾತುಗಳಲ್ಲದೆ ಇನ್ನೇನು? ಈಗ ಇತ್ತೀಚಿನ ವರ್ಷಗಳಲ್ಲಿ ಧಾರಾಳವಾಗಿ ಉಪಯೋಗಿಸಲಾಗುತ್ತಿರುವ ‘ಚಿಂತಕ’ ಎಂಬ ಗುಣವಾಚಕವನ್ನು ಕುರಿತು ಸ್ವಲ್ಪ ಯೋಚಿಸೋಣ. ಆಹ್ವಾನ ಪತ್ರಿಕೆಗಳಲ್ಲೋ ಪತ್ರಿಕಾ ವರದಿಗಳಲ್ಲೋ ಬಹುಮಟ್ಟಿಗೆ ಲೇಖಕರ ಹೆಸರುಗಳ ಮುಂದೆಯೇ ಕಾಣಿಸಿಕೊಳ್ಳುವ ಈ ವಿಶೇಷಣಕ್ಕೆ ಏನು ಅರ್ಥ? ಚಿಂತಕರೆಂದರೆ ಯಾರು? ಲೇಖಕರೆಲ್ಲರೂ ಚಿಂತಕರೆ? ಬೇರೆ ಬೇರೆ ಜ್ಞಾನಕ್ಷೇತ್ರಗಳಲ್ಲಿ ಕೆಲಸಮಾಡುವವರು ಚಿಂತಕರಾಗಲಾರರೆ?

ಚಿಂತಕರೆಂದರೆ, ಧೀಮಂತರ ಹಾಗೆ, ಪ್ರಶ್ನೆಗಳನ್ನು ಕೇಳುವವರು; ಯಾವುದೇ ಸಿದ್ಧವಿಚಾರವನ್ನು ತಿರಸ್ಕರಿಸುವವರು; ತಮ್ಮ ವಿಚಾರವನ್ನು ತಮ್ಮದೇ ಅನುಭವದ ಬೆಳಕಿನಲ್ಲಿ ನಿಷ್ಠುರವಾಗಿ ಪರೀಕ್ಷಿಸುವವರು. ಅಂಥವರ ವಿಚಾರಗಳು ವಾಸ್ತವವನ್ನು ಕುರಿತು ಜನರಿಗಿರುವ ನಿಲುವುಗಳನ್ನೇ ಬದಲಾಯಿಸಿ, ಅವರನ್ನು ಹೊಸದೊಂದು ಸಮಾಜನಿರ್ಮಾಣಕ್ಕೆ ಅಣಿಗೊಳಿಸಬಲ್ಲ ವಿಚಾರಗಳು. ಇತಿಹಾಸದಲ್ಲಿ ಸಾಕ್ರಟೀಸನಿಂದ ಐನ್‍ಸ್ಟೈನನ ವರೆಗೆ ಮಹಾ ಚಿಂತಕರೆನಿಸಿದ್ದ ಎಲ್ಲರೂ ಒಂದು ವಿಷಯದಲ್ಲಿ ಸಮಾನರಾಗಿದ್ದರು: ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತ ಇದ್ದ ಬಹಳಷ್ಟು ಜನರಿಗಿಂತ ಭಿನ್ನವಾದ ವಿಚಾರಗಳನ್ನು ಹೊಂದಿದ್ದರು ಮತ್ತು ಆ ವಿಚಾರಗಳು ಮನುಷ್ಯನನ್ನು, ಅವನ ಸಮಾಜವನ್ನು ಆಮೂಲಾಗ್ರವಾಗಿ ಬದಲಾಯಿಸುವಷ್ಟು ಶಕ್ತವಾಗಿದ್ದವು. ಭಾರತದಲ್ಲಿ ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಜ್ಯೋತಿಬಾ ಫುಲೆ ಮುಂತಾದವರು ಅಂಥ ಚಿಂತಕರು.

ಆದರೆ ನಮ್ಮಲ್ಲಿ ಆ ಶಬ್ದದ ನಿಜವಾದ ಅರ್ಥ ಮರೆಯಾಗಿ ಅದೊಂದು ಕ್ಲೀಷೆಯಾಗಿಬಿಟ್ಟಿರುವುದರಿಂದಲೇ ಇರಬೇಕು, ಈಗ ಚಿಂತಿಸದವರು ಕೂಡ ಚಿಂತಕರಾಗುತ್ತಾರೆ! ಅಷ್ಟೇ ಸಾಕಾಗದ ಇನ್ನು ಕೆಲವರು ಸಂಸ್ಕೃತಿ ಚಿಂತಕರೋ ಪ್ರಗತಿಪರ ಚಿಂತಕರೋ ಬಹುಮುಖೀ ಚಿಂತಕರೋ ಆಗುವುದು ಅನಿವಾರ್ಯ.

ಈ ಬಗೆಯ ಕ್ಲೀಷೆಗಳಿಗೆ ನಮ್ಮ ಸಾಹಿತ್ಯ ವಿಮರ್ಶೆಯೂ ಹೊರತಲ್ಲ. ನವ್ಯರ ಕಾಲದಲ್ಲಿ ಬಹುಶಃ ಯು.ಆರ್.ಅನಂತಮೂರ್ತಿಯವರು ‘ಎಕ್ಸ್‍ಪ್ಲಾಯ್ಟಿಂಗ್ ದಿ ರಿಸೋರ್ಸಸ್ ಆಫ್ ದಿ ಲಾಂಗ್ವೇಜ್’ ಎಂಬುದಕ್ಕೆ ಸಂವಾದಿಯಾಗಿ ‘ಭಾಷೆಯನ್ನು ದುಡಿಸಿಕೊಳ್ಳುವುದು’ ಎಂದು ಉಪಯೋಗಿಸಿರಬೇಕು. ಮೊದಮೊದಲು ಅದು ತುಂಬ ಆಕರ್ಷಕವಾಗಿದ್ದಂತೂ ಹೌದು. ಆದರೆ ನಮ್ಮ ವಿಮರ್ಶಕರು ಈಗಲೂ ಬಳಸುತ್ತಿರುವ ಆ ಶಬ್ದಗಳನ್ನು ಓದುವವರಿಗೆ ಏನಾದರೂ ಅನ್ನಿಸುವುದುಂಟೆ?

ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು. ಇದೇ ಗುಂಪಿಗೆ ಸೇರಬಹುದಾದ ಇನ್ನೊಂದು ಶಬ್ದಸಮುಚ್ಚಯವೆಂದರೆ ‘ಅರೆದುಕುಡಿಯುವುದು’. ಕನ್ನಡದ ಪ್ರಖ್ಯಾತ ವಿಮರ್ಶಕರೊಬ್ಬರು ತಮ್ಮ ಪುತ್ರನ ಆಳವಾದ ಓದನ್ನು ಅಭಿಮಾನದಿಂದ ಹೇಳಿಕೊಳ್ಳುತ್ತ, “ಹೆಮಿಂಗ್ವೇ, ಸ್ಟೈನ್ ಬೆಕ್, ಜಾಕ್ ಲಂಡನ್, ಜೆ.ಎಂ.ಕಟ್ಸಿ ಮುಂತಾದ ಕಾದಂಬರಿಕಾರ-ಕತೆಗಾರರನ್ನು ಅರೆದುಕುಡಿದಿರುವ ಅವನಿಗೆ, ಇಷ್ಟವಾದ ಈ ಕವಿ ನನಗೂ ಆತ್ಮೀಯನಾದ” ಎಂದು ಬರೆದಿದ್ದಾರೆ.

ನೀವು ಅಡಾಲ್ಫ್ ಐಖ್‍ಮನ್ನನ ಬಗ್ಗೆ ಕೇಳಿರಬೇಕು. ಅವನು ‘ಯಹೂದ್ಯರ ಸಮಸ್ಯೆ’ಗೆ ‘ಅಂತಿಮ ಪರಿಹಾರ’ ಕಂಡುಹಿಡಿಯುವುದಕ್ಕಾಗಿ ವಾನ್ನೆಸ್ ಎಂಬಲ್ಲಿ ನಡೆದ ಸಮ್ಮೇಳನದಲ್ಲಿ ಯೂರೋಪಿನ ಎಲ್ಲ ಯಹೂದ್ಯರನ್ನೂ ನಾಶಮಾಡುವ ಕಾರ್ಯಕ್ರಮವನ್ನು ರೂಪಿಸಿದವನು; ಕೂಡುದೊಡ್ಡಿಗಳನ್ನು ನಿರ್ಮಿಸಿ 60 ಲಕ್ಷ ಯಹೂದ್ಯರ ಕಗ್ಗೊಲೆಗೆ ಕಾರಣನಾದವನು; ಯುದ್ಧಾನಂತರ 1950ರವರೆಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆಸ್ಟ್ರಿಯಾದಲ್ಲೇ ಅಡಗಿಕೊಂಡಿದ್ದು, ನಂತರ ರಿಕಾರ್ಡೊ ಕ್ಲೆಮೆಂಟ್ ಎಂಬ ಹೆಸರಿನಲ್ಲಿ ಅರ್ಜೆಂಟೀನಾಕ್ಕೆ ಓಡಿಹೋದವನು. 1960ರ ಮೇ 11ರಂದು ಬಂಧನಕ್ಕೊಳಗಾದ ಅವನನ್ನು ಎರಡು ವರ್ಷದ ನಂತರ ಗಲ್ಲಿಗೇರಿಸಲಾಯಿತು. ಹನ್ನಾ ಅರೆಂಟ್ ಬರೆದಿರುವ “ಐಖ್‍ಮನ್ ಇನ್ ಜೆರುಸಲೇಮ್” (1963) ಎಂಬ ಪುಸ್ತಕದಲ್ಲಿ ಅವನು ಯಹೂದ್ಯರ ಸಾಮೂಹಿಕ ಕಗ್ಗೊಲೆಯಲ್ಲಿ ತಾನು ವಹಿಸಿದ ಪಾತ್ರವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಹೇಗೆಲ್ಲ ಕ್ಲೀಷೆಗಳನ್ನು, ಕಂತೆ ಪುರಾಣಗಳನ್ನು ಬಳಸಿದನೆಂಬ ಉಲ್ಲೇಖವಿದೆ. ಆಕೆಯ ಪ್ರಕಾರ ಅವನು ಬಳಸಿದ ಮಾತುಗಳು ಆಲೋಚನೆಯ ಅಭಾವವನ್ನು ಸೂಚಿಸುತ್ತಿದ್ದವು. ದಿನನಿತ್ಯದ ಸರ್ವಸಾಮಾನ್ಯ ಪ್ರಸಂಗ ಗಳಿಗಿಂತ ಸಂಪೂರ್ಣ ಭಿನ್ನವಾದ ಸನ್ನಿವೇಶಗಳನ್ನು ವರ್ಣಿಸುವಾಗ ಅವನು ಅಸಹಾಯಕನಾಗುತ್ತಿದ್ದ. ಯಾವ ಅರ್ಥವನ್ನೂ ಸ್ಫುರಿಸದ ಕ್ಲೀಷೆಗಳಿಂದಲೇ ತುಂಬಿಹೋಗಿದ್ದ ಅವನ ಭಾಷೆ ವಾಸ್ತವದಿಂದ ಅವನನ್ನು ರಕ್ಷಿಸುವಂತಿತ್ತಷ್ಟೆ.

ಒಟ್ಟಿನಲ್ಲಿ ಕ್ಲೀಷೆಯೆನ್ನುವುದು ದಿನನಿತ್ಯದ ಅನುಭವದಿಂದಲೇ ಭಟ್ಟಿಯಿಳಿಸಲಾದ ಒಂದು ಅಮೂರ್ತ ವಿಚಾರವನ್ನು ವರ್ಣಿಸಬಯಸುವ ಶಬ್ದ. ಅದು ಪರಿಣಾಮ ಉಂಟುಮಾಡುವುದಕ್ಕಾಗಿ ಸಾದೃಶ್ಯವನ್ನೋ ಉತ್ಪ್ರೇಕ್ಷೆಯನ್ನೋ ಅವಲಂಬಿಸುವುದು ಸಹಜ. ಅಪರೂಪಕ್ಕೆ ಬಳಸಿದಾಗ ಅದು ಯಶಸ್ವಿಯಾಗಬಹುದು. ಆದರೆ ಬರವಣಿಗೆಯಲ್ಲೋ ಭಾಷಣದಲ್ಲೋ ಮತ್ತೆ ಮತ್ತೆ ಬಳಸಿದಾಗ ಅದು ಅನನುಭವದ ಅಥವಾ ಅಸಲುತನವಿಲ್ಲದ ಕುರುಹಾಗಿ ಎದ್ದು ಕಾಣುತ್ತದೆ. ಆದ್ದರಿಂದಲೇ ಫ್ರೆಂಚ್ ಲೇಖಕ ಜೆರಾರ್ದ್ ದ ನೆರ್‍ವಲ್ ಹೇಳಿದ್ದು:

“ಹೆಣ್ಣನ್ನು ಮೊಟ್ಟಮೊದಲು ಗುಲಾಬಿ ಹೂವಿಗೆ ಹೋಲಿಸಿದವನು ಕವಿ; ಅವಳನ್ನು ಅದೇ ರೀತಿ ಹೋಲಿಸಿದ ಎರಡನೆಯವನು ಮಹಾ ಮೂರ್ಖ”.

(ಕೃತಿ: ಸರ್ವ ಜನಾಂಗದ ಶಾಂತಿಯ ಭಾಷೆ (ಪ್ರಬಂಧಗಳು), ಲೇಖಕರು: ಎಸ್. ದಿವಾಕರ್, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 180)