ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ನೀವು ಬರೆದ, ಅನುವಾದಿಸಿದ ಕವಿತೆಗಳನ್ನು ನಮಗೆ ಕಳುಹಿಸಿ ಕೊಡಬಹುದು. ದಿನದ ಕವಿತೆ ಬರೆದವರು ಜ್ಯೋತಿ ಗುರುಪ್ರಸಾದ್.

ದೀಪ ಬೆಳಗುವ ಹೊತ್ತು

ದೀಪ ಬೆಳಗುವ ಹೊತ್ತು
ಒಡಲೇ ಸೊಡರಾಗಿ
ತುಟಿ ನಗುವೇ ಕುಡಿ ಬತ್ತಿಯಾಗಿ
ಕಣ್ಣ ಕಾಂತಿ ಎಣ್ಣೆಯಾಗಿ
ಉರಿವ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಕತ್ತಲೆಯ ಕುಡಿ ಕುಡಿದು
ಮತ್ತಾದ ಬೆಳಕಿನಲಿ
ಮುತ್ತಾದ ಮಾತು ಹುಟ್ಟಿ
ಬೆಸೆವ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಅಂಗಳದ ಹಕ್ಕಿ ಗೂಡೇ
ಗೂಡು ದೀಪ ವಿಸ್ಮಯ!
ಗುಟುಕು ಕೊಡುವ ತಾಯಿಹಕ್ಕಿ
ಕಲರವ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಕತ್ತಲೆ ಕೋಣೆ ನೆನಪು
ನಲ್ಲ-ನಲ್ಲೆ ಮುದ್ದುಗರೆದು
ದೀಪ ಹಚ್ಚದೆಯೇ
ಬೆಳಗಿದ ನಂದಾದೀಪ ಒಲವು

ದೀಪ ಬೆಳಗುವ ಹೊತ್ತು
ಹೂ ಅರಳುವ ಹೊತ್ತು
ಮನಸ ಮಗುವಿನ ಹುಟ್ಟು
ನಾವೆ ನಂದಾದೀಪ
ನಾವೆ ಒಲವು…..