ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ. ಅವಳಿಗೆ ಗಂಡ, ಮಕ್ಕಳಿಗೆ ಮಾತ್ರ ಅಲ್ಲ ತೋಟದ ಕೆಲಸಕ್ಕೆ ಬರುವ ಕಾರ್ಮಿಕರಿಗೂ ಅಡುಗೆ ಮಾಡಬೇಕಾದ ಪರಿಸ್ಥಿತಿ. ನಾನು ನಾಳೆ ಹೊರಗೆ ಹೋಗಲು ಇದೆಯೆಂದಾದರೆ ಇಂದೇ ರಾತ್ರಿ ಉಗಿಯಲ್ಲಿ ಬೇಯಿಸಿ ಮಾಡುವ ಪುಂಡಿ, ಕಡುಬು, ಪತ್ರೊಡೆಯಂತಹ ತಿಂಡಿಯನ್ನು ಮಾಡಿ ಇಡುತ್ತೇನೆ. ಯಾಕೆ ಹೀಗೆ? ಒಂದು ದಿನದ ಮಟ್ಟಿಗಾದರೂ ಅಡುಗೆ ಮನೆ ಹೊಣೆಯನ್ನು ಗಂಡಿಗೆ ಹೊತ್ತುಕೊಳ್ಳಲು ಆಗುವುದಿಲ್ಲವಾ?
ಸಹನಾ ಕಾಂತಬೈಲು ಅವರು ಬರೆದ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ.

ಡಾಕ್ಟರ್ ಆಗಬೇಕೆಂಬುದು ನನ್ನ ಕನಸಾಗಿತ್ತು. ಅದಕ್ಕಾಗಿ ಪಿಯುಸಿ.ಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡಿದ್ದೆ. ಪ್ರಥಮ ಶ್ರೇಣಿಯಲ್ಲಿ ಪಾಸಾದರೂ ಪಿಯುಸಿ ಮುಗಿದ ತಕ್ಷಣ ತಂದೆ ನನಗೆ ಮದುವೆ ಮಾಡಿಸಿದರು. ಆ ಸಮಯದಲ್ಲಿ ಮುಂದೆ ಓದಲಾಗುತ್ತಿಲ್ಲ ಎಂಬ ಕಾರಣದಿಂದ ಅತ್ತದ್ದಕ್ಕೆ ನನ್ನ ಅಜ್ಜಿ ನನಗೆ ಹೀಗೆ ಹೇಳಿ ಸಮಾಧಾನ ಪಡಿಸಿದ್ದರು- `ಹೆಣ್ಣು ಎಷ್ಟು ಕಲಿತರೇನು? ಒಲೆಯಿಂದ ಬೂದಿ ತೆಗೆಯುವ ಕೆಲಸ ಮಾತ್ರ ತಪ್ಪುವುದಿಲ್ಲ’. ಅವರ ಪ್ರಕಾರ ಹೆಣ್ಣು ಎಷ್ಟೇ ಕಲಿತರೂ ಕೊನೆಗೂ ಮಾಡಬೇಕಾದದ್ದು ಅಡುಗೆ ಕೆಲಸ. ಇದರಿಂದ ಅವಳಿಗೆ ಬಿಡುಗಡೆ ಇಲ್ಲ. ಅಜ್ಜಿಯ ಹಳೆಕಾಲದ ಈ ಮಾತು ನಾಲ್ಕು ಗೋಡೆಯ ಬಂಧನದಿಂದ ಹೊರಗೆ ಬಂದ ಇಂದಿನ ಆಧುನಿಕ ಮಹಿಳೆಯರಿಗೂ ಅನ್ವಯಿಸುತ್ತದೆ.

ಮೊನ್ನೆ ಉನ್ನತ ಹುದ್ದೆಯಲ್ಲಿರುವ ನನ್ನ ಗೆಳತಿ ಒಬ್ಬಳು ಹೇಳಿದಳು, `ಈಚೆಗೆ ಕೆಲಸದ ನಿಮಿತ್ತ ನಾನು ನಾಲ್ಕೈದು ದಿನ ದೂರ ಹೋಗಬೇಕಾಯಿತು. ಅಷ್ಟೂ ದಿನಕ್ಕಿರುವ ಅಡುಗೆಯ ಬಹು ಪಾಲು ಮಾಡಿ ಫ್ರಿಡ್ಜಿನಲ್ಲಿ ಇರಿಸಿದೆ’.

`ಅದನ್ನು ವಿವರಿಸು’ ಎಂದೆ.

`ಉಪ್ಪಿಟ್ಟು ಮಾಡಲು ಬೇಕಾದ ರವೆ ಹುರಿದು ಒಗ್ಗರಣೆ ಕೊಟ್ಟು ಇಟ್ಟೆ. ಆಗ ಗಂಡನಿಗೆ ಹೆಚ್ಚು ಕೆಲಸ ಇರುವುದಿಲ್ಲ. ನೀರು ಕುದಿಸಿ ಅದಕ್ಕೆ ಸೇರಿಸಿದರೆ ಮುಗಿಯಿತು. ದೋಸೆ ಮಾಡಲು ಅಕ್ಕಿ ರುಬ್ಬಿ ಫ್ರಿಡ್ಜಿನಲ್ಲಿ ಇಟ್ಟಿದ್ದೆ. ತಿನ್ನಬೇಕಾದಾಗ ತೆಗೆದು ಕಾವಲಿಯಲ್ಲಿ ಹೊಯ್ದರಾಯಿತು. ಅವಲಕ್ಕಿ ಮಸಾಲೆಯನ್ನೂ ಮಾಡಿ ಇರಿಸಿದ್ದೆ. ಅವಲಕ್ಕಿ ಬೆರಸಿ ತಿಂದರಾಯಿತು. ಸಾಂಬಾರು, ಸಾರು ಮಾಡಿದ್ದೆ. ಬೇಕಾದಾಗ ತೆಗೆದು ಬಿಸಿ ಮಾಡಿ ಬಳಸುತ್ತಾರೆ…’ ಹೇಳುತ್ತ ಹೋದಳು.

ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ. ಅವಳಿಗೆ ಗಂಡ, ಮಕ್ಕಳಿಗೆ ಮಾತ್ರ ಅಲ್ಲ ತೋಟದ ಕೆಲಸಕ್ಕೆ ಬರುವ ಕಾರ್ಮಿಕರಿಗೂ ಅಡುಗೆ ಮಾಡಬೇಕಾದ ಪರಿಸ್ಥಿತಿ. ನಾನು ನಾಳೆ ಹೊರಗೆ ಹೋಗಲು ಇದೆಯೆಂದಾದರೆ ಇಂದೇ ರಾತ್ರಿ ಉಗಿಯಲ್ಲಿ ಬೇಯಿಸಿ ಮಾಡುವ ಪುಂಡಿ, ಕಡುಬು, ಪತ್ರೊಡೆಯಂತಹ ತಿಂಡಿಯನ್ನು ಮಾಡಿ ಇಡುತ್ತೇನೆ. ಯಾಕೆ ಹೀಗೆ? ಒಂದು ದಿನದ ಮಟ್ಟಿಗಾದರೂ ಅಡುಗೆ ಮನೆ ಹೊಣೆಯನ್ನು ಗಂಡಿಗೆ ಹೊತ್ತುಕೊಳ್ಳಲು ಆಗುವುದಿಲ್ಲವಾ? ಅದೂ ಅಲ್ಲದೆ ಹೊರಗೆ ದುಡಿಯುವ ಹೆಣ್ಣಿಗೆ ಸಾಮಾನ್ಯ ಗೃಹಿಣಿಯರಿಗಿಂತ ಹೆಚ್ಚು ಕೆಲಸ ಇರುತ್ತದೆ. ಗಂಡನಾದವನು `ನೀನು ಏನೂ ಮಾಡಿ ಇಡಬೇಡ. ಒಂದೆರಡು ದಿನ ಅಲ್ವಾ, ನಾನೇ ಮಾಡುತ್ತೇನೆ’ ಎಂದು ಏಕೆ ಹೇಳುವುದಿಲ್ಲ? ಒಂದು ವೇಳೆ ಹೇಳಿದರೆ ಅವಳೆಷ್ಟು ಖುಷಿ ಪಡುತ್ತಾಳೆ ಎಂದು ಅವನಿಗೆ ಗೊತ್ತಾಗುವುದು ಯಾವಾಗ?

ಅಡುಗೆ ಎಂದಾಗ ಇನ್ನೊಂದು ವಿಷಯ ನೆನಪಿಗೆ ಬರುತ್ತಿದೆ. ಈಚೆಗೆ ನನ್ನ ಗೆಳತಿಯೊಬ್ಬಳಿಗೆ ಪ್ರಸಿದ್ಧ ದಿನಪತ್ರಿಕೆಯೊಂದು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಬಂತು. ಅವಳು ಬರೆದ ಪ್ರಬಂಧದ ಹೆಸರು `ಉರಿವ ಒಲೆಯ ಮುಂದೆ’. ಅದೇ ಸಮಯದಲ್ಲಿ ಇದನ್ನು ಪತ್ರಿಕೆಯಲ್ಲಿ ನೋಡಿದ, ನನಗೂ ಅವಳಿಗೂ ಪರಿಚಯವಿರುವ ಖ್ಯಾತ ಲೇಖಕ ಮಿತ್ರರೊಬ್ಬರು ಯಾವುದೋ ಕಾರ್ಯಕ್ರಮದಲ್ಲಿ ನನಗೆ ಸಿಕ್ಕಿ ಹೇಳಿದರು, `ನಿಮ್ಮ ಗೆಳತಿಗೆ ಬಹುಮಾನ ಬಂದ ವಿಷಯ ತಿಳಿಯಿತು. ಅವಳಿಗೆ ನನ್ನ ಅಭಿನಂದನೆ ತಿಳಿಸಿ’.

ನಾನು ಖುಷಿಯಿಂದ ಹೇಳಿದೆ, `ಆಯ್ತು. ಖಂಡಿತ ಹೇಳ್ತೇನೆ. ಆ ಪ್ರಬಂಧದ ಬಗ್ಗೆ ನಿಮ್ಮ ಅನಿಸಿಕೆ ಏನು?’

ಅದಕ್ಕೆ ಅವರು, `ಶೀರ್ಷಿಕೆ ನೋಡಿಯೇ ಬಿಟ್ಟುಬಿಟ್ಟೆ. ಮುಂದೆ ಓದಲಿಲ್ಲ. ನೀವು ಎಷ್ಟೂಂತ ಅಡುಗೆ ಮನೆಯ ಬಗ್ಗೆಯೇ ಬರೆಯುತ್ತೀರಿ? ಶತ ಶತಮಾನಗಳಿಂದಲೂ ನಿಮಗೆ ಅದೇ ವಿಷಯ. ಪ್ರಪಂಚ ಎಷ್ಟು ದೊಡ್ಡದಾಗಿದೆ! ಹೊರ ಜಗತ್ತಿನ ಬಗ್ಗೆ ಬರೆಯಿರಿ. ಹೊಸಹೊಸ ವಿಷಯಗಳ ಬಗ್ಗೆ ಬರೆಯಿರಿ. ಇನ್ನೂ ಅದೇ ಅಡುಗೆ ಮನೆ… ಒಲೆ…ಉರಿ… ನೀವು ಬದಲಾಗುವುದು ಯಾವಾಗ?’ ಎಂದರು.

ನಾನು ಉತ್ತರ ಕೊಡಲಿಲ್ಲ. ಆದರೆ, ಮನಸ್ಸು ಹೇಳಿತು `ಯಾವಾಗ ನೀವು ಅಡುಗೆ ಮನೆ ಜವಾಬ್ದಾರಿಯನ್ನು ಸಮಾನವಾಗಿ ಹೊತ್ತುಕೊಳ್ಳುತ್ತೀರೋ ಆಗ ನಾವು ಬದಲಾಗುತ್ತೇವೆ’. ಪ್ರಸಿದ್ಧ ಕವಯತ್ರಿ ಗೆಳತಿಯೊಬ್ಬಳ ಕವನದ ಸಾಲು ಹೀಗಿದೆ- `ಒಲೆ ಬದಲಾದರೂ ಉರಿ ಬದಲಾಗದು’. ಈ ಮಾತು ಎಷ್ಟು ನಿಜ! ಸೌದೆ ಒಲೆಯಿಂದ ಇಂದು ಗ್ಯಾಸ್, ವಿದ್ಯುತ್ ಒಲೆಗೆ ಬದಲಾದರೂ ಉರಿಸುವ ಕೈಗಳು ಮಾತ್ರ ಅವೇ!

ನನಗೆ ಒಂದು ಕನಸಿದೆ. ಅದೆಂದರೆ ಜೀವನದಲ್ಲಿ ಒಮ್ಮೆ ನಾನು ತಟ್ಟೆ ಮುಂದೆ ಕುಳಿತುಕೊಳ್ಳಬೇಕು. ಗಂಡ ಬಿಸಿಬಿಸಿ ದೋಸೆ ಹುಯ್ದು ತಟ್ಟೆಗೆ ಬಡಿಸಬೇಕು. ನಾನು ದೋಸೆ ಮುರಿದು ಒಂದೊಂದೇ ತುಂಡುಗಳನ್ನು ಚಟ್ನಿಗೆ ಅದ್ದಿ ಅದ್ದಿ ತಿನ್ನಬೇಕು.

ಇಂದು ದುಡಿಯುವ ಹೆಣ್ಣುಮಕ್ಕಳು ಹೆಚ್ಚಿದ್ದು ಅವರು ಹೊರ ಜಗತ್ತಿಗೆ ತೆರೆದುಕೊಂಡಿದ್ದಾರೆ. ಅವಳು ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದ್ದಾಳೆ. ಜಗತ್ತು ವೇಗವಾಗಿ ಮುಂದುವರಿಯುತ್ತಿದೆ. ಕಂಪ್ಯೂಟರ್ ಯುಗದಿಂದ ರೋಬೊಟ್ ಯುಗಕ್ಕೆ ಬಂದಿದ್ದೇವೆ. ಮಂಗಳನ ಅಂಗಳಕ್ಕೆ ಹಾರಿದ್ದೇವೆ. ಆದರೆ ಹೆಣ್ಣಿಗೆ ಅಡುಗೆ ಮನೆ ಅಂಗಳದಿಂದ ಮುಕ್ತಿ ದೊರಕಿಲ್ಲ.