ಹಂಪೆಯಲ್ಲಿ ಸುತ್ತಾಡಿ ಬಳಲಿದವನಿಗೆ ಕಾಲಿನ ಬೆಲೆ ಸಂಜೆಯ ಹೊತ್ತಿಗಾದರೂ ತಿಳಿದೇ ತಿಳಿಯುತ್ತದೆ. ಇನ್ನು ಕಣ್ಣಿದ್ದು ಕನಕಗಿರಿ ನೋಡಬೇಕಲ್ಲ! ಆ ಸ್ಥಳ ಎಲ್ಲಿದೆ ಎಂದು ವಿಚಾರಿಸುವಾಗ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಎಂಬ ಉತ್ತರ ದೊರಕಿತು. ಕನಕನೆಂಬ ಮುನಿ ದೀರ್ಘತಪಸ್ಸು ಮಾಡಿದ ಸ್ಥಳವಾದುದರಿಂದ ಕನಕಗಿರಿ ಎಂಬ ಹೆಸರು ಬಂದಿತಂತೆ. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೇ ಪುಣ್ಯಕ್ಷೇತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಪ್ರಾಂತ್ಯದಲ್ಲಿ ಈಗಲೂ ಅನೇಕ ಗುಡಿಗಳೂ ಕೊಳಗಳೂ ಇದ್ದು ಪುರಾತನ ವೈಭವವನ್ನು ನೆನಪಿಸುವಂತಿವೆ. ಇವೆಲ್ಲ ಗುಡಿಗಳಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖ ಸ್ಥಾನ ಪಡೆಯುತ್ತದೆ.
ಟಿ.ಎಸ್.ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹತ್ತೊಂಭತ್ತನೆಯ ಕಂತು

 

‘ಕಾಲಿದ್ದವನು ಹಂಪೆ ನೋಡು, ಕಣ್ಣಿದ್ದವನು ಕನಕಗಿರಿ ನೋಡು’ ಎಂಬ ಗಾದೆಯನ್ನು ನಾನು ಕೇಳಿದ್ದು ಇತ್ತೀಚೆಗೆ. ಅದೂ ಹಂಪೆಗೆ ಹೋಗಿದ್ದಾಗ. ಹಂಪೆಯಲ್ಲಿ ಸುತ್ತಾಡಿ ಬಳಲಿದವನಿಗೆ ಕಾಲಿನ ಬೆಲೆ ಸಂಜೆಯ ಹೊತ್ತಿಗಾದರೂ ತಿಳಿದೇ ತಿಳಿಯುತ್ತದೆ. ಇನ್ನು ಕಣ್ಣಿದ್ದು ಕನಕಗಿರಿ ನೋಡಬೇಕಲ್ಲ! ಆ ಸ್ಥಳ ಎಲ್ಲಿದೆ ಎಂದು ವಿಚಾರಿಸುವಾಗ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಎಂಬ ಉತ್ತರ ದೊರಕಿತು. ಕನಕನೆಂಬ ಮುನಿ ದೀರ್ಘತಪಸ್ಸು ಮಾಡಿದ ಸ್ಥಳವಾದುದರಿಂದ ಕನಕಗಿರಿ ಎಂಬ ಹೆಸರು ಬಂದಿತಂತೆ. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೇ ಪುಣ್ಯಕ್ಷೇತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಪ್ರಾಂತ್ಯದಲ್ಲಿ ಈಗಲೂ ಅನೇಕ ಗುಡಿಗಳೂ ಕೊಳಗಳೂ ಇದ್ದು ಪುರಾತನ ವೈಭವವನ್ನು ನೆನಪಿಸುವಂತಿವೆ. ಇವೆಲ್ಲ ಗುಡಿಗಳಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖ ಸ್ಥಾನ ಪಡೆಯುತ್ತದೆ.

ವಿಜಯನಗರ ಸಾಮ್ರಾಜ್ಯದ ಅಧೀನರಾಗಿ ಕನಕಗಿರಿ ಪ್ರಾಂತ್ಯವನ್ನು ಆಳಿದ ನಾಯಕಪಾಳೇಗಾರರ ಮೊದಲ ದೊರೆ ಪರಸಪ್ಪ ನಾಯಕ. ಪರಸಪ್ಪನು 1450ರಲ್ಲಿ ಕಟ್ಟಿಸಿದ ಕನಕಾಚಲ ಲಕ್ಷ್ಮೀನರಸಿಂಹ ದೇಗುಲವನ್ನು ಮುಂದೆ ಈತನ ಮಗ ಉಡಿಚನಾಯಕನು ಅಭಿವೃದ್ಧಿಪಡಿಸಿದನು. ಲಕ್ಷ್ಮೀನರಸಿಂಹ ದೇವಾಲಯ ಮೂರು ದಿಕ್ಕುಗಳಲ್ಲಿ ಗೋಪುರಗಳನ್ನೂ ವಿಶಾಲವಾದ ಆವರಣವನ್ನೂ ಹೊಂದಿದೆ. ಈ ಗೋಪುರಗಳು ತಲಾ ಮೂರು ಸ್ತರಗಳಿಂದ ಕೂಡಿದ್ದು ಪ್ರತಿಸ್ತರದ ನಡುಭಾಗದಲ್ಲಿ ಒಂದು ಗೂಡು ಹಾಗೂ ಅದರ ಅಕ್ಕಪಕ್ಕಗಳಲ್ಲಿ ದ್ವಾರಪಾಲಕರ ಗಾರೆ ಪ್ರತಿಮೆಗಳಿವೆ.


ಗುಡಿಯ ಪ್ರಾಂಗಣದ ಸುತ್ತ ಎತ್ತರವಾದ ಗೋಡೆಯಿದ್ದು ಈ ಗೋಡೆಯ ಮೇಲುಭಾಗದಲ್ಲಿ ಉದ್ದಕ್ಕೂ ದೇವಕೋಷ್ಠಗಳನ್ನು ನಿರ್ಮಿಸಿ ಅವುಗಳಲ್ಲಿ ನೂರಾರು ಗಾರೆಯ ಶಿಲ್ಪಗಳನ್ನು ಅಳವಡಿಸಿದೆ. ಕೋಷ್ಠ ಎಂದರೆ ಗೂಡು. ನಿಜವಾಗಿ ಇವನ್ನು ಗೂಡುಗಳೆಂದು ಹೇಳುವಂತಿಲ್ಲ. ಪ್ರತಿಯೊಂದು ಕೋಷ್ಠವೂ ಒಂದೊಂದು ಕಿರುಗೋಪುರದ ಆಕಾರದಲ್ಲೇ ಇದೆ. ಇವುಗಳ ಒಳಗೂ ಹೊರಗೂ ಅನೇಕಾನೇಕ ಶಿಲ್ಪಗಳ ಪಳೆಯುಳಿಕೆಗಳಿವೆ.

ಗಾರೆಯ ಶಿಲ್ಪಗಳ ನಿರ್ಮಿತಿ ಶುರುವಾದದ್ದೇ ವಿಜಯನಗರ ಸಾಮ್ರಾಜ್ಯದ ಕಾಲದಿಂದ. ಅಂದರೆ, ಕನಕಾಚಲ ದೇಗುಲದ ಗೋಡೆಗಳ ಮೇಲ್ಗಡೆ ನೀವು ಕಾಣುವ ಗಾರೆಯ ಶಿಲ್ಪಗಳು ಈ ಮಾದರಿಯ ಮೊದಮೊದಲ ರೂಪಗಳು. ಆದರೆ, ನೂರಾರು ವರ್ಷಗಳ ಕಾಲ ಹವಾಮಾನದ ಏರುಪೇರನ್ನು ಸಹಿಸಿಕೊಳ್ಳಲಾಗದ ಈ ಶಿಲ್ಪಗಳ ಅವಶೇಷಗಳನ್ನು ಮಾತ್ರವೇ ಇಂದು ನೀವು ಕಾಣಲು ಸಾಧ್ಯ.

ಗರ್ಭಗೃಹದಲ್ಲಿರುವ ಲಕ್ಷ್ಮೀನರಸಿಂಹ ಸಾಲಿಗ್ರಾಮ ರೂಪದಲ್ಲಿದೆ. ಇದಕ್ಕೆ ಲೋಹದ ಮುಖವಾಡವನ್ನು ತೊಡಿಸಲಾಗಿದೆ. ಮುಖ್ಯದೇವಾಲಯಕ್ಕೆ ಹೊಂದಿಕೊಂಡಂತಿರುವ ಇನ್ನೊಂದು ಗರ್ಭಗುಡಿಯಲ್ಲಿ ಲಕ್ಷ್ಮೀದೇವಿಯ ವಿಗ್ರಹವಿದ್ದು ಈ ಗುಡಿಗೂ ವಿಮಾನಗೋಪುರವಿದೆ. ದೇಗುಲದ ಮುಖಮಂಟಪ ಅತ್ಯಂತ ಆಕರ್ಷಕವಾಗಿದೆ. ಇಲ್ಲಿ ವಿಜಯನಗರ ಶೈಲಿಯ ಕೆತ್ತನೆಯಿರುವ ನಲವತ್ತಕ್ಕೂ ಹೆಚ್ಚು ಕಂಬಗಳನ್ನು ನೋಡಬಹುದು. ಈ ಕಂಬಗಳ ಮೇಲೆಲ್ಲ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಬೆಣ್ಣೆ ಕೃಷ್ಣ, ಕಾಳಿಂಗ ಮರ್ದನ, ಬೇಡರ ಕಣ್ಣಪ್ಪ, ಸೂರ್ಯ, ನರಸಿಂಹ, ಹುಲಿ, ಬೇಟೆಗಾರ, ಗಣಪತಿ, ಆಂಜನೇಯ ಮೊದಲಾದ ಉಬ್ಬುಶಿಲ್ಪಗಳನ್ನು ಕಾಣಬಹುದು. ಕೆಲವು ಕಂಬಗಳ ಮೇಲೆ ದೊಡ್ಡ ಆಕಾರದ ಸಿಂಹವನ್ನೇರಿ ಸವಾರಿ ಮಾಡುತ್ತಿರುವ ಸವಾರರನ್ನು ಚಿತ್ರಿಸಲಾಗಿದೆ.

ಮುಖ್ಯಮಂಟಪದ ಎದುರಿಗೇ ದೊಡ್ಡ ಗರುಡಗಂಬ. ದೇವಸ್ಥಾನದ ಪ್ರಾಕಾರದಲ್ಲಿರುವ ಕಿರುಗುಡಿಗಳಲ್ಲಿ ಅನೇಕ ದೇವರುಗಳನ್ನೂ ಆಳ್ವಾರರ ಮೂರ್ತಿಗಳನ್ನೂ ಸ್ಥಾಪಿಸಲಾಗಿದೆ. ದೇಗುಲದ ಹೊರಗೆ ಎಡಭಾಗದಲ್ಲಿರುವ ಒಂದು ಗುಡಿಯಲ್ಲಿ ಹನ್ನೆರಡು ಅಡಿಯೆತ್ತರದ ಹನುಮಂತ ಕೈಮುಗಿದು ನಿಂತ ಸ್ಥಿತಿಯಲಿ ವಿಗ್ರಹರೂಪದಲ್ಲಿದ್ದಾನೆ. ಲಕ್ಷ್ಮೀನರಸಿಂಹ ದೇಗುಲದ ಇನ್ನೊಂದು ಬದಿಯ ಮಂಟಪದಲ್ಲಿ ಈ ಪ್ರಾಂತ್ಯವನ್ನಾಳಿದ ನಾಯಕರ ಪ್ರತಿಮೆಗಳಿವೆ.

ಕನಕಗಿರಿಗೆ ಬಂದಾಗ ನೀವು ನೋಡಬಹುದಾದ ಇನ್ನೂ ಹಲವು ದೇಗುಲಗಳಿವೆ. ಅಷ್ಟೇ ಮುಖ್ಯವಾಗಿ ನೀವು ನೋಡಲೇಬೇಕಾದ ಪುರಾತನ ನಿರ್ಮಾಣವೊಂದಿದೆ. ಅದೇ ವೆಂಕಟಪ್ಪನಾಯಕನ ಬಾವಿ. ಲಕ್ಷ್ಮೀನರಸಿಂಹಗುಡಿಯ ಸಮೀಪದಲ್ಲೇ ಇರುವ ಈ ಬಾವಿಯು ನಾಯಕಮನೆತನದ ವೆಂಕಟಪ್ಪನಾಯಕನಿಂದ 16ನೆಯ ಶತಮಾನದಲ್ಲಿ ನಿರ್ಮಾಣವಾಯಿತು. ನಾಲ್ಕು ಕಡೆಗಳಿಂದ ಕೆಳಗೆ ಕೊಳದತ್ತ ಇಳಿದು ಹೋಗಲು ಮೆಟ್ಟಲುಗಳಿವೆ. ಮೆಟ್ಟಲಿಳಿದು ನಡೆಯುವ ಒಳಹಾದಿಯಿಂದ ಕೊಳದ ಕಡೆಗೆ ತೆರೆದ ಕಮಾನುಕಿಟಕಿಗಳು, ಅಲ್ಲಲ್ಲಿ ದೇವಶಿಲ್ಪಗಳು, ಶಿವಲಿಂಗವಿರಿಸಿದ ಮಂಟಪ, ನಡುನಡುವೆ ತೆರೆದ ಮಂಟಪ, ಮೆಟ್ಟಲು ಎಲ್ಲದರ ವಿನ್ಯಾಸ ಆಕರ್ಷಕವಾಗಿ ರೂಪುಗೊಂಡಿದೆ.

ಮೇಲುಛಾವಣಿಗೆ ಆಧಾರವಾದ ಕಂಬಗಳ ಮೇಲೆ ಕಾಲುಮೇಲೆತ್ತಿ ನಿಂತ ಯಾಳಿ, ಕುದುರೆ ಮೊದಲಾದವನ್ನು ಕೆತ್ತಲಾಗಿದೆ. ಅಲ್ಲಲ್ಲಿ ಕಾಣುವ ಮಿಥುನಶಿಲ್ಪ, ಹಂಸ, ಗಜಾಸುರಸಂಹಾರಿ ಶಿವ ಮೊದಲಾದ ಉಬ್ಬುಶಿಲ್ಪಗಳೂ ಸೊಗಸಾಗಿವೆ. ಈ ಪ್ರಾಚೀನ ಸ್ಮಾರಕವನ್ನು ಇನ್ನಷ್ಟು ಮುತುವರ್ಜಿಯಿಂದ ಸಂರಕ್ಷಿಸಲು ಸ್ಥಳೀಯರೂ ಜನಪ್ರತಿನಿಧಿಗಳೂ ಆಸ್ಥೆವಹಿಸಬೇಕಾಗಿದೆ.