ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ.
ಡಾ. ಕೆ.ಎನ್. ಗಣೇಶಯ್ಯ ಬರೆದ “ಹಾತೆ-ಜತೆ-ಕತೆ” ಕೃತಿಯ ಕುರಿತು ವಿಶ್ವ ದೊಡ್ಡಬಳ್ಳಾಪುರ ಬರಹ

“…ವಾಸ್ತವದಲ್ಲಿ, ಕಲ್ಪನೆ ಎಂಬುದೇ ಬಹುದೊಡ್ಡ ಉಲ್ಲಂಘನೆ ಅಲ್ಲವೇ? ವಾಸ್ತವ, ವರ್ತಮಾನ ಎಂಬುದನ್ನೆಲ್ಲ ಉಲ್ಲಂಘಿಸದೆ ಕಲ್ಪನೆ ಬೆಳೆಯುವುದಿಲ್ಲ. ಕಲ್ಪನೆ ಬೆಳೆಯದೆ ಮಕ್ಕಳ ಮನಸ್ಸು ಬೆಳೆಯುವುದಿಲ್ಲ”. ಇವು ಒಂದೆಡೆ ಹಿರಿಯ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದ ಮಾತುಗಳು. ಈ ಮಾತುಗಳನ್ನು ನೆನಪಿಸಿದ್ದು ಇಂತಹ ಹಲವು ಉಲ್ಲಂಘನೆಗಳನ್ನು ‘ಉಡಿ’ಯಲ್ಲಿ ತುಂಬಿಕೊಂಡಿರುವ ಗಣೇಶಯ್ಯನವರ ಇತ್ತೀಚಿನ ಪುಸ್ತಕ ಹಾತೆ-ಜತೆ-ಕತೆ.

ನಮ್ಮೆಲ್ಲರ ನಡುವೆ ಕಾಣಿಸುವ ಇರುವೆ, ಮಿಡತೆ, ಚಿಟ್ಟೆ ಮುಂತಾದ ಕೀಟಗಳೆಂದರೆ ನಮಗೆ ಕಿರಿ ಕಿರಿ ಅಥವಾ ತಿರಸ್ಕಾರ ಭಾವ. ಆದರೆ ಅವುಗಳ ಪ್ರಪಂಚದಲ್ಲಿ ವಿಸ್ಮಯಗಳ ಭಂಡಾರವೇ ಇದೆ ಎಂಬುದು ನಾವು ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಅವಜ್ಞೆ ತೋರುವ ಸಂಗತಿ! ನಮ್ಮ ಕುತೂಹಲದ ಕಣ್ಣಿಗೆ ನಾವೇ ಕಟ್ಟಿಕೊಂಡ ‘ಬಟ್ಟೆ’ಯೇ ಅದಕ್ಕೆ ಕಾರಣವಿರಬಹುದು. ಅಂಥ ಕೀಟ ಜಗತ್ತಿನ ಭಂಡಾರದಿಂದ ‘ಹೆಕ್ಕಿ’ ತಂದ ಹಲವು ಕುತೂಹಲಕಾರಿ ಅಂಶಗಳಿಗೆ ಒಂದಿಷ್ಟು ‘ಕೀಟಲೆ’ಗಳನ್ನು ಪೂರಕವಾಗಿ ಸೇರಿಸಿ, ಅಚ್ಚರಿಯ (ಹುಟ್ಟು ಹಾಕುವ ಮೂಲಕ) ನಮ್ಮನ್ನು ಜಾಗೃತಗೊಳಿಸಿ, ಕತೆ ಹೇಳುತ್ತಾ ನಮ್ಮ ಕಣ್ಣ ‘ಬಟ್ಟೆಯ ಕಳಚುವ’ ಪುಸ್ತಕವಿದು.

(ಡಾ. ಕೆ.ಎನ್. ಗಣೇಶಯ್ಯ)

ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ಘಟನೆಗಳ ಹಿಂದಿನ ವೈಜ್ಞಾನಿಕ ವಿವರಣೆ, ವಿಧಾನವನ್ನು (‘ಏಕೆ? ಏನು? ಹೇಗೆ? ಎಲ್ಲಿ? ಯಾವಾಗ?’) ಸ್ವಾರಸ್ಯಕರವಾಗಿ ತಿಳಿಸಲು ಈ ‘ಉಲ್ಲಂಘನೆ’ (ಕಲ್ಪನೆ) ಯ ತಂತ್ರವನ್ನೇ ಬಳಸಿಕೊಳ್ಳುತ್ತಾರೆ. ಬಹುಶಃ ಕತೆ ಹೇಳುವಲ್ಲಿನ ಈ ‘ದ್ವಂದ್ವ’ (‘ಕಲ್ಪನೆ-ವಾಸ್ತವ’ದ ಪರಿಣಾಮಕಾರಿ ಮಿಳಿತ) ಎಲ್ಲಾ ವಯೋಮಾನದವರಿಗೂ ರುಚಿಸುವುದರಿಂದ, ಎಲ್ಲರನ್ನ ತಲುಪುವುದರಲ್ಲಿ ಪುಸ್ತಕ ಯಶಸ್ವಿ ಕೂಡ ಆಗುತ್ತದೆ ಎನ್ನಬಹುದು. ಅದೇ ಕಾರಣಕ್ಕೆ ಉಪಶೀರ್ಷಿಕೆ “ಹಿರಿಯರಿಗೆ ಕಿರಿಯರಿಗೆ” ಪುಸ್ತಕಕ್ಕೆ ಒಪ್ಪುತ್ತದೆ ಕೂಡ.

“ಹಿರಿಯರಿಗಾಗಿ ಬರೆಯುವುದು ಸುಲಭ, ದಾಕ್ಷಿಣ್ಯಕ್ಕಾದರೂ, ಶಿಷ್ಟಾಚಾರಕ್ಕಾದರೂ ಅವರು ಒಪ್ಪಿಕೊಂಡಾರು ಆದರೆ ಮಕ್ಕಳು ಹಾಗಲ್ಲ, ಇಷ್ಟವಿಲ್ಲವೆಂದರೆ ಆಕಳಿಸಲು ಹಿಂಜರಿಯುವುದಿಲ್ಲ!”… ಇದು ಸಾಹಿತ್ಯ ರಚನೆಯಲ್ಲಿ ಎದುರಾಗುವ ಸವಾಲಿನ ಕುರಿತ ಪ್ರಶ್ನೆಯೊಂದಕ್ಕೆ ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಐಸಾಕ್ ಸಿಂಗರ್, ನೀಡಿದ್ದ ಅವರ ಅನುಭವದ ಉತ್ತರ. ಬಹುಶಃ ಹಾತೆ-ಜತೆ-ಕತೆ ಪುಸ್ತಕ ಈ ಅಭಿಪ್ರಾಯಕ್ಕೆ ‘ಅಪವಾದ’ ಹಾಗೆಯೇ ಗಣೇಶಯ್ಯನವರರಿಗೆ ಸಿಂಗರ್ ರವರ ಈ ಅನುಭವ ‘ಅನ್ವಯಿಸುವುದಿಲ್ಲ’ ಎಂದೆನಿಸುತ್ತದೆ! ಏಕೆಂದರೆ ಇಲ್ಲಿ ಕತೆ ಕಟ್ಟಿಕೊಡುವ ಪ್ರಯತ್ನದಲ್ಲಿನ ಬರಹಗಾರನ ‘ಖುಷಿ’ಯ ಅನುಭಾವವನ್ನು ನಾವು ಕಾಣಬಹುದು. ಆ ಕಾರ್ಯದಲ್ಲಿನ ಸರಳತೆಯನ್ನೂ ನೋಡಬಹುದು. ಹಾಗೆಯೇ ಹಲವು ವಿಸ್ಮಯ ವಿಚಾರಗಳ ಹೂರಣವನ್ನು ಕಥಾ ಹಂದರದಲ್ಲಿ ಜಾಣ್ಮೆಯಿಂದ ತುಂಬಿ, ಹದವಾಗಿ ಬೆರೆಸಿ, ಮಕ್ಕಳಷ್ಟೇ ಅಲ್ಲದೆ ಹಿರಿಯರೂ ತಲೆದೂಗುವಂತೆ ಮಾಡುವ ಕಲೆಯನ್ನೂ ಆಸ್ವಾದಿಸಬಹುದು… ಹೀಗಿರುವಾಗ ಮತ್ತಿನ್ನೆಲ್ಲಿಯ ಕೃತಿಕಾರನ ಕಷ್ಟ?… ಓದುಗನ ತೂಕಡಿಕೆಯ ಪ್ರಶ್ನೆ?

ಇದಕ್ಕೆ ಪುಸ್ತಕದ ಬರಹ ‘ತಮಸೋಮಾ’ ಉತ್ತಮ ನಿದರ್ಶನ. ಇಲ್ಲಿನ ಕತೆ ಎರಡು ಭಿನ್ನ ಕಾಲಘಟ್ಟಗಳಲ್ಲಿ ನಡೆಯುತ್ತದೆ. ಘಟನೆಗಳ ಪಾತ್ರಗಳ ಕಾಲ, ಸ್ಥಳ ಹಾಗೂ ನಂಬಿಕೆಗಳು ಬೇರೆ ಬೇರೆ. ಒಂದೆಡೆ ಕ್ರಿ.ಪೂ.ದ ಸಮಯ, ಅಜಂತಾ ಗುಹೆಯಲ್ಲಿ ಬಿಕ್ಕುಗಳು. ಮತ್ತೊಂದೆಡೆ ಇತ್ತೀಚಿನ ದಿನಗಳು, ಪಶ್ಚಿಮ ಘಟ್ಟಗಳ ಕಾಡಿನಲ್ಲಿ ವಿಜ್ಞಾನಿಗಳು. ಆದರೆ ಇವರಿಬ್ಬರ ಯೋಚನಾಲಹರಿಯ ಹಿಂದಿನ ಉದ್ದೇಶ ಒಂದೇ, ‘ಮೂಲ’ವನ್ನು ಹುಡುಕುವುದು, ಅರ್ಥಮಾಡಿಕೊಳ್ಳುವುದು. ಹೀಗೆ ಕಾಲಮಾನಗಳ (ಕ್ರಿ.ಪೂ ಮತ್ತು ಕ್ರಿ.ಶ) ‘ನಡುವೆ’ ಗಣೇಶಯ್ಯನವರು ಸ್ವಾರಸ್ಯಕರವಾಗಿ ಚಿಟ್ಟೆಗಳ ವರ್ತನೆಯ ಬಗ್ಗೆ ಚರ್ಚೆ, ಚಿಂತನೆ ನಡೆಸುತ್ತಾ ಕತೆ ಹೇಳುತ್ತಾರೆ. ವಿಶೇಷವೆಂದರೆ ಇಲ್ಲಿ ಚಿಟ್ಟೆಗಳೂ ಅವುಗಳ ಮನೋಗತವನ್ನೂ ಹೇಳಿಕೊಳ್ಳುತ್ತವೆ. ಹೀಗೆ ಹಲವು ದೃಷ್ಟಿಕೋನಗಳ ಜೊತೆಗೆ ಧಾರ್ಮಿಕ ಚಿಂತನೆ, ತಾತ್ವಿಕವಾದ ಮತ್ತು ವಿಜ್ಞಾನ ಪ್ರಯೋಗಗಳ ವಿವರಗಳನ್ನೂ ಬೆರೆಸಿ ನಮ್ಮನ್ನು ಬೆರಗುಗೊಳಿಸುತ್ತಾರೆ. ಇಲ್ಲಿ ಸಾಹಿತ್ಯ ಇದೆ, ವಿಜ್ಞಾನ ಸಹ ಇದೆ, ಒಂದಕ್ಕೊಂದು ಪೂರಕವಾಗಿ… “ಸಾಹಿತ್ಯವಿಲ್ಲದೆ ವಿಜ್ಞಾನ ಕುಂಟು; ವಿಜ್ಞಾನವಿಲ್ಲದ ಸಾಹಿತ್ಯ ಕುರುಡು”… ಎಂಬ ಮಾತಿನಂತೆ (ಧರ್ಮ ಮತ್ತು ವಿಜ್ಞಾನ ಕುರಿತ ಐನ್‌ಸ್ಟೀನ್‌ರವರ ಜನಪ್ರಿಯ ಹೇಳಿಕೆಯನ್ನು ಸ್ವಲ್ಪ ಬದಲಿಸಿ, ನನ್ನ ಗುರುಗಳು ಹೇಳುತ್ತಿದ್ದ ಮಾತು).

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಲೇಖಕರು ಯಾವುದೇ ‘ವಿಸ್ಮಯದ’ ಬಗ್ಗೆ ಹೇಳುವಾಗ ನಿಖರತೆಗೆ ನೀಡುವ ಒತ್ತು, ಮಹತ್ವ. ಅದು ಕಲ್ಪನೆಯ ಛಾವಡಿಯಡಿಯ ಸಣ್ಣ ವಿಷಯದ ವಿವರಣೆಯೇ ಆದರೂ ಅಸಡ್ಡೆ ತೋರಿದಂತೆ ಕಾಣುವುದಿಲ್ಲ. ಉದಾಹರಣೆಗೆ ಅಮೃತ ಸರೋವರ ಕತೆಯ ಮೊದಲ ಭಾಗದ ಘಟನೆಯೊಂದರ ವಿವರಣೆ. ಅಲ್ಲಿ ಬರುವ ಕೆಲಸಗಾರರೆಲ್ಲರೂ ‘ಹೆಣ್ಣುಮಕ್ಕಳು’ ಅಥವಾ ‘ಮಹಿಳೆಯರು!’ ಇದು ವಾಸ್ತವ ಹಾಗೂ ಸತ್ಯ ಕೂಡ. ಇರುವೆಗಳ ಸಮುದಾಯದಲ್ಲಿ ಕೆಲಸದ ಹೊರೆ ಹೊರುವ ಜಾತಿ ಹೆಣ್ಣು!

ಹಾಗೆಯೇ ಅವುಗಳ ‘ಅಪಾರ್ಟ್‌ಮೆಂಟ್’ (ಮನೆ/ಗೂಡಿನ) ವಿವರಗಳ ನಿರೂಪಣೆ ಮತ್ತು ಅದಕ್ಕೆ ಪೂರಕವಾದ ಚಿತ್ರದ ಬಳಕೆ, ಎಲ್ಲವೂ ‘ನೈಜತೆಗೆ’, ಕತೆಯ ಓಘಕ್ಕೆ ಒಪ್ಪುತ್ತದೆ ಕೂಡ. ಇದೇ ರೀತಿ ಸೂಕ್ಷ್ಮ ಮತ್ತು ಸೂಕ್ತ ವಿವರಗಳನ್ನೂ ಅಚ್ಚುಕಟ್ಟಾಗಿ ಬಳಸಿಕೊಂಡಿರುವುದು ಉಳಿದ ಕತೆಗಳಲ್ಲೂ ಕಂಡು ಬರುತ್ತದೆ. ಅಲ್ಲದೆ ಕೆಲವೆಡೆ (‘ಆಹುತಿಯಾದ ಹತ್ಯೆ’) ಉದ್ದೇಶವನ್ನು ಉಪೇಕ್ಷಿಸದೇ, ಉತ್ಪ್ರೇಕ್ಷೆಯನ್ನು ಬಳಸಿಕೊಂಡಿರುವ ರೀತಿ ಕೂಡ ಮೆಚ್ಚತಕ್ಕದ್ದೇ!

ಆರಂಭದಲ್ಲಿ ಲೇಖಕರು ಹೇಳುವಂತೆ ‘ಕಲ್ಪನಾಲೋಕದ ಬೆರಗನ್ನು ಬಳಸಿಕೊಂಡು ನೈಜತೆಯನ್ನು ಬಿಂಬಿಸುವ ಮಕ್ಕಳ ಕತೆ ಹೆಣೆಯುವ ಪ್ರಯತ್ನ’ ಈ ಪುಸ್ತಕ. ಇದು ಇಲ್ಲಿನ ಎಲ್ಲಾ ಬರಹಗಳಲ್ಲೂ ನಮ್ಮ ಗಮನಕ್ಕೆ ಬರುತ್ತದೆ ಕೂಡ. ಆದರೆ ಇಲ್ಲಿ ವಾಸ್ತವದಿಂದ ‘ದೂರ’ವ (ಕಲ್ಪನೆ) ಸೃಷ್ಟಿಸುವ ಪ್ರಯತ್ನದಲ್ಲಿ ನೈಜತೆಗೆ ಸ್ವಲ್ಪ ಪ್ರಾಧಾನ್ಯತೆ ಕಡಿಮೆಯಾಯಿತೇನೋ ಎನ್ನಿಸುತ್ತದೆ! ಒಂದು ವೇಳೆ ಇನ್ನಷ್ಟು ಸ್ವಾರಸ್ಯಕರ ಸತ್ಯ ಸಂಗತಿಗಳ ಸರಕನ್ನು ಇಲ್ಲಿನ ‘ಉಲ್ಲಂಘನೆಗಳ’ ಮಧ್ಯದಲ್ಲಿ ಸೇರಿಸಿದ್ದರೆ, ಓದಿನ ಆನಂದದ ಜೊತೆಗೆ ಜ್ಞಾನದ ವೃದ್ಧಿಗೂ ಮತ್ತಷ್ಟು ಉಪಯುಕ್ತವಾಗುತ್ತಿತ್ತು ಎಂದೆನಿಸುತ್ತದೆ. ಹಾಗೆಯೇ ಇಲ್ಲಿನ ಚಿತ್ರಗಳಲ್ಲೂ ಈ ಕೊರತೆ ಎದ್ದು ಕಾಣುತ್ತದೆ. ಉಳಿದಂತೆ ಚಿತ್ರಗಳು ವಿಭಿನ್ನ ಮತ್ತು ಆಕರ್ಷಕವಾಗಿವೆಯಾದರೂ ಮಾಹಿತಿಯನ್ನು ‘ಬಿಂಬಿಸುವುದಿಲ್ಲ’. ಇರುವೆ ಗೂಡಿನ ಚಿತ್ರ ಹಾಗೂ ‘ಗಣಕ ಸೌಂದರ್ಯ’ ಬರಹದಲ್ಲಿ ಬರುವ ಕೆಲವು ರೇಖಾ ಚಿತ್ರಗಳು ಇದಕ್ಕೆ ಅಪವಾದ.

ಬಳಸಿರುವ ಭಾಷೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಯಾದರೂ ಮಧ್ಯೆ ಮಧ್ಯೆ ‘ನಾನ್ಯಾಕಿಲ್ಲಾ’ ಎಂಬಂತೆ ಬರುವ ಹಲವು ಇಂಗ್ಲಿಷ್ ಪದಗಳು ಮೊಸರಿನಲ್ಲಿ ‘ಕಲ್ಲು’ ಸಿಕ್ಕ ಹಾಗೆನಿಸುತ್ತದೆ. ಒಂದೆಡೆ ಪೂರ್ಣ ಪರಿಚ್ಛೇದ (ಪ್ಯಾರಾಗ್ರಾಫ್) ಇಂಗ್ಲೀಷ್ ಭಾಷೆಯಲ್ಲಿದೆ, ಕನ್ನಡದ ತರ್ಜುಮೆ ‘ತಪ್ಪಿ’ಹೋದಂತೆ ಕಾಣುತ್ತದೆ. ಬಹುಶಃ ಕನ್ನಡದ ಪದಗಳನ್ನು ಅಥವಾ ಇಂಗ್ಲಿಷ್ ಪದಗಳನ್ನೇ ಕನ್ನಡದಲ್ಲಿ ಬರೆದಿದ್ದರೂ ಅಡ್ಡಿಯಿರಲಿಲ್ಲ. ಕನ್ನಡದಲ್ಲಿ ವಿಜ್ಞಾನದ ಪದಗಳ ಬೆಳವಣಿಗೆಗೆ ಹಾಗೂ ಜನಪ್ರಿಯಗೊಳಿಸಲು ಇದು ಮುಖ್ಯ, ಕೊಡುಗೆ ಕೂಡ ಆಗಬಲ್ಲದು.
‘ಮಕ್ಕಳಿಗಾಗಿ ಬರೆಯಬೇಕಾದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು’ ಎಂಬ ಮಾತಿದೆ. ಬಹುಶಃ ಆ ಮಾತಿಗನುಗುಣವಾಗಿಯೇ ಬರೆದಂತೆ ಕಾಣುವ ಇಲ್ಲಿನ ಬರಹಗಳು, ಬಹುತೇಕ ಚಿತ್ರಗಳು ಮಕ್ಕಳನ್ನಷ್ಟೇ ಅಲ್ಲದೆ ದೊಡ್ಡವರ ಮನವ ಕೂಡ ಅರಳಿಸಿ ಮುದ ನೀಡುತ್ತವೆ. ಆರು ವಿಸ್ಮಯ ವಿಚಾರಗಳ ಸಂಕಲನವಾಗಿರುವ ಈ ಪುಸ್ತಕದಲ್ಲಿ, ಹಿರಿಯರಿಯರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದಿರುವ ‘ಗಣಕ ಸೌಂದರ್ಯ’ ಕೃತಿಯ ಮೌಲ್ಯವನ್ನು ಕೂಡ ಹೆಚ್ಚಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೀಟ ಲೋಕದ ವಿಸ್ಮಯಗಳನ್ನು ರೋಚಕವಾಗಿ ಚಿತ್ರಿಸಿ ರಂಜಿಸುವ, ಕುತೂಹಲವ ಕೆರಳಿಸಿ ತಣಿಸುವ, ಮಕ್ಕಳು ಹಾಗೂ ದೊಡ್ಡವರಿಬ್ಬರೂ ಒಟ್ಟಿಗೆ ಓದಿಬಹುದಾದ ಅರಿವಿನ ಪುಸ್ತಕ ಹಾತೆ ಜತೆ ಕತೆ.