ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು. ಈ ವಿಚಾರ ಮುಖ್ಯ ಮಂತ್ರಿಗಳ ಕಿವಿಗೆ ಬಿದ್ದು, ಮುಂದಿನ ಆದೇಶ ಬರೋವರೆಗೂ ರಾಜ್ಯದ ಎಲ್ಲಾ ಕವಿಗೋಷ್ಠಿಗಳನ್ನ ನಿಷೇಧ ಮಾಡಬೇಕೂಂತ ಫರ್ಮಾನು ಹೊರಡಿಸಿದ್ರು.
ಡಾ.ಲಕ್ಷ್ಮಣ ವಿ.ಎ. ಅಂಕಣ

 

ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಸಿಕ್ಕಂಗ ನನ್ನ ಕವಿತಾ ಪ್ರಕಟ ಮಾಡ್ಲಿಕ್ಕ ಒಬ್ರು ಪ್ರಕಾಶಕರು ಮುಂದ ಬಂದ್ರು. ಅವರು ಯಾಕ ಮುಂದ ಬಂದ್ರು,ನನ್ನ ಕವಿತಾದಾಗ ಅಂತಾದ್ದೇನ ಮಾಯಾ ಐತಿ? ಅಂತ ಕೇಳಬೇಕು ಅನ್ನೋ ಮಾತು ಬಾಯಿತನಕಾ ಬಂದ್ರುನೂ ನನಗ್ಯಾಕ ಇಲ್ಲದ ಉಸಾಬರಿ ಬಿಡು ಅಂತ ಸುಮ್ಮನಾಗಿ ನನ್ನ ಮ್ಯಾಲೆ ನನಗ… ಹೆಮ್ಮೆ ಅನಿಸಿ ಇರೊ ಬರೋ ಎಲ್ಲಾ ಕವಿತಾ ಒಟ್ಟು ಮಾಡ್ಲಿಕ್ಕ ಶುರು ಮಾಡ್ಲಿಕ್ಕಹತ್ತಿದೆ….

ಈ ಅನುಮಾನ ಬರ್ಲಿಕ್ಕೆ ಕಾರಣಾನೂ ಐತ್ರಿ. ಈ ಫೇಸ್ ಬುಕ್, ವ್ಯಾಟ್ಸ್ಯಾಪು ಬಂದಮೇಲೆ ನಾಡಿನಲ್ಲಿ ಕವಿಗಳ ಸಂಖ್ಯಾ ಜಾಸ್ತಿ ಆಗೇದ. ಅದರಲ್ಲೇನ ವಿಶೇಷಯಿಲ್ಲಾ ಬಿಡ್ರಿ, ವಯಸ್ಸಿಗೆ ಬಂದಾಗ ಕತ್ತೆನೂ ಕವಿಯಾಗ್ತದಂತ ಎಲ್ಲೊ ಓದೇನಿ. ಈ ಕವಿಗಳ ಕಾಟ ಎಷ್ಟು ಜಾಸ್ತಿಯಾಗೇದ ಅಂದ್ರ ಈ ಆದರ್ಶ ರಾಜ್ಯದಿಂದ ಎಲ್ಲಾ ಕವಿಗಳನ್ನು ಹೊರಗೆ ಹಾಕಬೇಕು ಅಂತ ಪ್ಲುಟೊ ಹೇಳಿದ್ಹಂಗ ನಮ್ಮ ರಾಜ್ಯದಾಗ ಕಾನೂನು ಮಾಡಿದ್ರೂ ಮಾಡಬಹುದರಿ. ಓದವರಕಿಂತ ಬರೀವವರ ಜಾಸ್ತಿ ಆಗ್ಯಾರ ಅಂತ ಹಿರಿಸಾಹಿತಿಗಳ ದೂರು ಐತಿ.

ಸರ್ಕಾರಕ್ಕ ಈ ಅನುಮಾನ ಬರ್ಲಿಕ್ಕೆ ಕಾರಣಾನೂ ಐತಿ. ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಎಷ್ಟು ಕವಿಗಳ ಬಂದಿದ್ರರಂದ್ರ ಇಡೀ ಸಭಾಂಗಣದ ತುಂಬ ಕವಿಗಳೇ ತುಂಬಿ ತುಳುಕತಿದ್ದರು. ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು. ಈ ವಿಚಾರ ಮುಖ್ಯ ಮಂತ್ರಿಗಳ ಕಿವಿಗೆ ಬಿದ್ದು, ಮುಂದಿನ ಆದೇಶ ಬರೋವರೆಗೂ ರಾಜ್ಯದ ಎಲ್ಲಾ ಕವಿಗೋಷ್ಠಿಗಳನ್ನ ನಿಷೇಧ ಮಾಡಬೇಕೂಂತ ಫರ್ಮಾನು ಹೊರಡಿಸಿದ್ರು.

ಕವಿತೆಗೆ ಕಷ್ಟ ಕಾಲವೆ? ನಿಜ… ಕವಿತೆಗೆ ಎಲ್ಲ ಕಾಲದಲ್ಲೂ ಕಷ್ಟಕಾಲವಿದೆ..!! ಅಂತ ನಮ್ಮ ಕವಿ ತಿರುಮಲೇಶ ಗುರುಗಳು ಹೇಳಿದ್ದು ನೆನಪಾಯಿತು. ಜನರಿಗೆ ಯಾಕೆ ಕವಿತೆಯಂದ್ರೆ ಅಸಡ್ಡೆ ಎನ್ನುವ ಜಿಜ್ಞಾಸೆ ನನ್ನಲ್ಲಿ ಶುರು ಆತು. ದಿನಪತ್ರಿಕೆಗಳು ತಮ್ಮ ಸಾಪ್ತಾಹಿಕದೊಳಗ ಕವಿತಾ ಪ್ರಕಟಿಸೋದ ಕಮ್ಮಿ ಮಾಡ್ಯಾರ, ವಾರ ಪತ್ರಿಕೆ ಮಾಸ ಪತ್ರಿಕೆ ಅಲ್ಲಲ್ಲಿ ಪ್ರಕಟಿಸಿದ್ರೂ ಈಗ ಸಮಕಾಲೀನ ಬರೆಯುತ್ತಿರುವವರಿಗೂ ಮತ್ತು ಅವು ಪೇಪರಿನಲ್ಲಿ ಬರುವ ಕವಿತೆಗಳ ಸಂಖ್ಯೆಗಳ ಅನುಪಾತಕ್ಕೂ ಅಜಗಜಾಂತರವಿದೆ. ಇನ್ನು ಪ್ರಕಾಶಕರಂತೂ ಕವಿಗಳನ್ನು ನೋಡಿ ಅಷ್ಟು ದೂರ ಓಡಿ ಹೋಗ್ತಾರ. ನಮ್ಮಂತ ಕಿರಿ ಕವಿಗಳ ಬಿಡ್ರಿ ಹಿರಿ ಕವಿಗಳ ಕವಿತಾ ಪ್ರಕಟಿಸಲಿಕ್ಕೆ ಹಿಂಜರೀತಾರ. ಯಾಕಂತ ಕೇಳಿದ್ರ ಕವಿತಾ ಕೇಳಾವ್ರ ಇಲ್ಲ. ಓದವ್ರಂತೂ ಮೊದಲ ಇಲ್ಲ. ಪ್ರಕಟಿಸಿದ ಪುಸ್ತಕ ಮಾರಾಟವಾಗದ ಹಂಗ ಉಳದಾವ. ಅವುಗಳನ್ನು ಸಮ್ಮೇಳನಕ್ಕ ಹೊತ್ತಗೊಂಡ್ ಹೋಗಿ ಹೊತ್ತಗೊಂಡು ಬಂದು ನಮ್ಮ ಭುಜಾ ಬಿದ್ದ ಹೋಗ್ಯಾವ…. ಅಂತ ನೋವಿನಿಂದ ಹೇಳ್ತಿದ್ರು…

ನಮ್ಮ ಪನ್ ಕವಿ ಚಂಪಾ ಹೇಳಿದ್ದು ಖರೆ ಅನ್ನಿಸ್ತಿತ್ತು “ಕೊನೆಗೂ ಉಳಿಯುವುದು ಕಾವ್ಯವೆ”..!! ಅದ ಓದುಗರ ಮನಸ್ಸಿನ್ಯಾಗ ಉಳಿತೈತೊ ಅಥವಾ ಮಾರಾಟವಾಗದ ಮಾರ್ಕೇಟಿನ್ಯಾಗ ಹಂಗ ಉಳಿತೈತೋ ಶ್ಯಾನಾ ಓದುಗರಾದ ನಿಮ್ಮ ತರ್ಕಕ್ಕ ಬಿಟ್ಟೇನಿ. ಅಂತಾದ್ರಾಗ ನನ್ನಂತಾ ಕಿರಿ ಕವಿ ಕವಿತಾ ಪ್ರಕಟ ಮಾಡ್ಲಿಕ್ಕೆ ಮುಂದ ಬಂದಾರಂದ್ರ ಭಾಳ ಖುಷಿಯಾಗಿ ಕುಣಿದಾಡಿದ್ದೆ. ಆ ವಿಚಾರಾನಾ ಎಲ್ಲರ ಹತ್ರ ಸಾರಿಕೊಂಡ ಬಂದಿದ್ದೆ.

ಪರಿಚಯದ ಹಿರಿ ಕವಿಯನ್ನ ಭೇಟಿಯಾಗಿ ಮುನ್ನುಡಿ ಬರೆಸಿಕೊಂಡೆ. ಇನ್ನೊಬ್ಬರ ಹತ್ರ ಬೆನ್ನುಡಿ ಬರೆಸಿಕೊಂಡೆ.. ಅರ್ಪಣೆ, ಮೊದಲಮಾತು, ಪರಿಚಯದ ಮಾತು, ಯಾರು ಯಾರನ್ನ ಈ ಸಂದರ್ಭದೊಳಗ ನೆನಪಿಸಿಕೊಂಡು ಅದನ್ನೆಲ್ಲಾ ಚಂದಂಗ ನನ್ನ ಮೊಬೈಲನೊಳಗ ಟೈಪ್ ಮಾಡಿ ಆ ಕವಿತಾ ಎಲ್ಲಾ ಪಿ.ಡಿ.ಎಫ್ ಫೈಲ್ ಮಾಡಿ ಅದರ ಜೊತಿಗಿ ನಂದೊಂದ ಚಂದದ ಫೋಟೊ ಹಚ್ಚಿ, ಹುಡುಗ ಹುಡುಗಿಗೆ ಫರ್ಸ್ಟ್ ಲವ್ ಲೆಟರ್ ಕೊಟ್ಟಂಗ ಪ್ರಕಾಶಕರಿಗೆ ಮೇಲ್ ಮಾಡಿ…. ಉಸ್ಸಪ್ಪಾ ಅಂತ ನಿರಾಳನಾಗಿ ಒಂದು ದಿನಾನೂ ಕಳದಿರಲಿಲ್ಲ……

ಆ ಕಡೆಯಿಂದ ಪ್ರಕಾಶಕರ ಫೋನ್ ಮಾಡಿದ್ರು. ಸರ್ ನೀವ್ ಕಳಿಸಿದ್ದ ಕವಿತಾ ಫೈಲ್ ಪ್ರಿಂಟಿಂಗ್ ಪ್ರೆಸ್ ನವರಿಗೆ ಓಪನ್ ಆಗ್ತಾಯಿಲ್ಲ.. ಪಿ.ಡಿ.ಎಫ್ ನನ್ನ “ನುಡಿ” ತಂತ್ರಾಂಶ ಲಿಪಿಯೊಳಗ ಬದಲಾಯಿಸಿಕೊಡಬೇಕು ಅಂತ ಬಲು ದುಗುಡದಿಂದ ಕೇಳಿದಾಗ, ನಾನು ಎದ್ದು ಬಿದ್ದು ಅವಸರದೊಳಗ ಡಿ.ಟಿ.ಪಿ ಯವರ ಹತ್ರ ಹೋಗಿ… ಹಿಂಗೀಂಗ ಅಂತ ಹೇಳ್ದೆ. ನನಗ ಕಂಪ್ಯೂಟರ್ ಅಷ್ಟಾಗಿ ಗೊತ್ತಿಲ್ಲ, ಏನೋ ಫೇಸ್ ಬುಕ್ ವ್ಯಾಟ್ಸಾಪ್ ಬಂದ ಮ್ಯಾಲೆ ಚೂರು ಅಲ್ಲಿ ಇಲ್ಲಿ ಮನಸಿಗೆ ತೋಚಿದ್ದ ಬರೀತಿದ್ದೆ. ಅದು ಎಲ್ಲಾರಿಗೂ ಭಾಳ ಲೈಕಾಗಿ ನನಗ ಅನಾಯಾಸವಾಗಿ ಕವಿ ಅನ್ನೊ ಪಟ್ಟ ಕೊಟ್ಟಿದ್ರು.. ಈ ಕಂಪ್ಯೂಟರ್ ಅದರ ತಂತ್ರಾಂಶ ಗಿಂತ್ರಾಂಶದ ಬಗ್ಗೆ ನಾನು ಹೆಬ್ಬೆಟ್ಟು…

ಆ ಡಿ.ಟಿ.ಪಿ. ಹುಡುಗ ನನ್ನ ಮಕಾ ನೋಡಿ ಒಂದು ಪ್ಯಾಲಿ ನಗಿ ನಕ್ಕ….

ಸರ್…. ನೀವು ಮೊಬೈಲನ್ಯಾಗ ಬರದಿದ್ದ “ತುಂಗಾ” ಬರಹದಾಗರಿ… ಅದು ನುಡಿಬರಹಕ್ಕೆ ಬದಲೀ ಮಾಡ್ಲಿಕ್ಕೆ ಬರೋದಿಲ್ಲರಿ, ಅಂತ ಅಂದಾಗ ಆಕಾಶ ನೆತ್ತಿ ಮ್ಯಾಲೆ ಬಿದ್ದವರಂಗ ಕುಸಿದು ಹೋಗಿ ಒಂದು ಲೋಟಾ ನೀರ ಕುಡದೆ. ಗಂಗಾ ನೊ ತುಂಗಾ ನೊ ನನ್ನ ಕಣ್ಣಲಿ ಗಂಗಾ ಜಮುನಾ ಹರಿಯೋದೊಂದ ಬಾಕಿ ಇತ್ತು.

ಬೇರೆ ಏನ್ ಸಾಧ್ಯತೆ ಐತರಿ ಇದನ್ನ ನುಡಿಗೆ ಬದಲಾಯಿಸಲು ಅಂತ ಕೇಳಿದೆ. ಬೇರೆ ಏನೂ ಇಲ್ಲಾ ಕುತ್ಕೊಂಡು ನುಡಿ ಸಾಪ್ಟವೇರ್ ಹಾಕ್ಕೊಂಡು ಟೈಪ ಮಾಡಬೇಕ್ರಿ ಅಂದ.

ಹೇ ಭಗವಂತಾ!! ಪುಸ್ತಕ ಬಿಡುಗಡೆ ದಿನಾಂಕ ನಿಕ್ಕಿ ಆಗೇದ, ಅತಿಥಿಗೋಳ ಒಪ್ಪಕೊಂಡಾರ, ಹಾಲ್ ಬುಕ್ಕ ಆಗೇದ, ಅವರಿಗೆ ಹಾಕೊ ಹಾರ ತುರಾಯಿ ಸಿದ್ಧ ಆಗ್ಲಿಕತ್ತೆದ.. ಇಂತಾದ್ರಾಗ ಏನಪ್ಪಾ ಇದು?

ನನಗಂತೂ ಈ ಸಿಸ್ಟೆಮ್ ಮುಂದ ಕುಳಿತು ಟೈಪಿಂಗ್ ಮಾಡ್ಲಿಕ್ಕ ಬರೋದಿಲ್ಲ. ಒಂದ ಪುಟಾನ ಎರಡ ಪುಟಾನ ಮುನ್ನುಡಿ ಬೆನ್ನುಡಿ ಹಿಡಿದ್ರ ಒಟ್ಟ ನೂರಾ ಐವತ್ತ ಪುಟ. ಒಬ್ಬ ವೃತ್ತಿಪರ ಟೈಪಿಸ್ಟ ಕುಳಿತಕೊಂಡ್ರೂ ಮೂರು ದಿನ ಬೇಕ ಮತ್ತದಕ ವ್ಯಾಕರಣ ದೋಷ, ಕೊಂಬು ಕಹಳೆ, ಕರಡು ತಿದ್ದಬೇಕ.

ಆದದ್ದಾಗಲಿ ತಮ್ಮಾ ನೀನ ಟೈಪಿಂಗ್ ಮಾಡಿಬಿಡಪ್ಪ ನಾನೂ ಬೆಳಗಾವಿ ಕಡೆಯೋನು, ನೀನೂ ನಮ್ಮ ಕಡೆಯೋನು ಅಂತ ಅವನ ಜೊತಿ ಕರಳ ಸಂಬಂಧ ಜೋಡಸಿಲಿಕ್ಕೆ ನೋಡಿದೆ.

‘ಮಾಡಿ ಕೊಡ್ತೇನ್ರಿ ಸರ್ ಆದ್ರ ರೊಕ್ಕ ಭಾಳ ಆಗ್ತೈತಿ ನೋಡ್ರಿ…..’ ಅಂದ.

ಈ ಅನುಮಾನ ಬರ್ಲಿಕ್ಕೆ ಕಾರಣಾನೂ ಐತ್ರಿ. ಈ ಫೇಸ್ ಬುಕ್, ವ್ಯಾಟ್ಸ್ಯಾಪು ಬಂದಮೇಲೆ ನಾಡಿನಲ್ಲಿ ಕವಿಗಳ ಸಂಖ್ಯಾ ಜಾಸ್ತಿ ಆಗೇದ. ಅದರಲ್ಲೇನ ವಿಶೇಷಯಿಲ್ಲಾ ಬಿಡ್ರಿ, ವಯಸ್ಸಿಗೆ ಬಂದಾಗ ಕತ್ತೆನೂ ಕವಿಯಾಗ್ತದಂತ ಎಲ್ಲೊ ಓದೇನಿ. ಈ ಕವಿಗಳ ಕಾಟ ಎಷ್ಟು ಜಾಸ್ತಿಯಾಗೇದ ಅಂದ್ರ ಈ ಆದರ್ಶ ರಾಜ್ಯದಿಂದ ಎಲ್ಲಾ ಕವಿಗಳನ್ನು ಹೊರಗೆ ಹಾಕಬೇಕು ಅಂತ ಪ್ಲುಟೊ ಹೇಳಿದ್ಹಂಗ ನಮ್ಮ ರಾಜ್ಯದಾಗ ಕಾನೂನು ಮಾಡಿದ್ರೂ ಮಾಡಬಹುದರಿ.

‘ಏ ತಮ್ಮಾ ನಾ ಬಡ ಕವಿ ಇದ್ದೀನಿ.. ಸ್ವಲ್ಪ ಕಡಿಮಿಮಾಡಿ ನೋಡಿ ಕೊಡೂಣು. ನೀನ ಮೊದಲ ಆ ಕೆಲಸಾ ಶುರು ಮಾಡ ಅಂತ ಹೇಳಿ, ವ್ಯಾಕರಣ ದೋಷ, ತಪ್ಪ ಆಗದಂಗ, ಸಾಲು ತಪ್ಪದಂಗ ಆ ಸಾಲದೊಳಗಿನ ಪದಪದಗಳ ನಡುವಿನ ನಿಶ್ಯಬ್ಧದ ಲಯ ತಪ್ಪದಂಗ, ಒಟ್ಟಾರೆ ಆ ಕವಿತೆಯ ಅರ್ಥ ಅನರ್ಥ ಆಗದಂಗ ಟೈಪಿಸಪ್ಪ.. ನಿನಗ ಪುಣ್ಯ ದಕ್ಕತೈತಿ… ನಿನಗಿನ್ನೂ ಮದುವಿಯಾಗಿಲ್ಲ ಹೌದಿಲ್ಲೊ… ಚಿಂತಿ ಮಾಡಬ್ಯಾಡ, ಒಳ್ಳೆ ಹುಡುಗಿ ಸಿಕ್ತಾಳ.. ಲವ್ ಗಿವ್ ಮಾಡಿದ್ರ ಹೇಳ… ಅಕೀ ಮ್ಯಾಲೊಂದು ಹಾಡ ಬರದ ಕೊಡ್ತಿನಿ… ಆ ಹಾಡ ಓದಿ ನಿನ್ನ ಮ್ಯಾಲೆ ಫಿದಾ ಆಗಿ ಕವಿ ರತ್ನ ಕಾಳಿದಾಸ ಫಿಲ್ಮಿನೊಳಗ ರಾಜುಕುಮಾರನ್ನ ಹುಡುಕೊಂಡು ಹಿರೋಯಿನ್ನು ಓಡೋಡಿ ಬರತಾಳಲ್ಲಾ ಅಂತಾ ಹಾಡಾ ಬರದ ಕೊಡ್ತೀನಿ’ ಅಂದಾಗ ಹುಡುಗ ಒಪ್ಪಿಕೊಂಡ….

‘ಮತ್ತ ತಮ್ಮಾ ನಾ ಯಾವಾಗ ಬರ್ಲಿ?’ ಅಂತ ಕೇಳಿದ್ರ,

‘ಎರಡು ದಿನ ಬಿಟ್ಟ ಬರ್ರಿ….’ ಅಂದಾ. ಮತ್ತ ತಡಾ ಮಾಡಬ್ಯಾಡಾ ತಮ್ಮಾ. ದಿನಾ ಹತ್ರ ಬಂದೈತಿ ಕಾರ್ಯೇದು ಅಂತಂದು ಅಲ್ಲಿಂದ ಹೊಂಟೆ.

****

ಎರಡು ದಿನ ಆದ ಮೇಲೆ ಹೋದೆ. ಹುಡುಗ ಭಾಳ ಬೆರಿಕಿ. ಚುರುಕನೂ ಅದಾನು. ಎಲ್ಲಾ ಮುಗಿಸೆ ಬಿಟ್ಟಿರಬೇಕಂತ ನೋಡಿದ್ರ… ಒಟ್ಟು ಐವತ್ತೈದು ಕವಿತೆಯಲ್ಲಿ ಟೈಪಿಸಿದ್ದು ಐದೇ ಐದು……

‘ಹೀಂಗ್ಯಾಕ ಮಾಡಿಯೋ ತಮ್ಮಾ ನಮ್ಮ ಡೇಟ್ ಬ್ಯಾರೆ ಹತ್ರ ಬಂದೈತಿ ಚೂರು ಲಗು ಲಗೂನ ಮಾಡಬಾರದೇನಪ್ಪ’ ಅಂತ ಅತಿ ಪ್ರೀತಿಯಿಂದಾನೇ ಮಾತಾಡ್ಸಿದೆ.

‘ಸರ್ ಸೀಜನ್ರಿ ಇದು ಸೀಜನ್ನು… ಮೊನ್ನೆ ತಾನೆ ಸಂಕ್ರಾಂತಿ ಶೂನ್ಯ ಮಾಸ ಕಳೀತು. ಉತ್ತರಾಯಣ ಪುಣ್ಯ ಕಾಲ, ಮದುವೆ ಕಾರ್ಡು, ಎಂಗೇಜ್ಮೆಂಟ್ ಕಾರ್ಡು, ಗೃಹ ಪ್ರವೇಶ, ನಾಮಕರಣ, ಬ್ಯಾನರು, ಪ್ಲೇಕಾರ್ಡು, ವಿಜಿಟಿಂಗ್ ಕಾರ್ಡು ಎಲೆಕ್ಷನ್ ಬೇರೆ ಹತ್ರ ಬಂತು ಆರ್ಡರ್ ಭಾಳ ಅದಾವ್ರಿ…. ಅದರೊಳಗ ಟೈಂ ಮಾಡಕೊಂಡು ನಿಮ್ಮ ಕವಿತಾ ಟೈಪಿಸಬೇಕ್ರಿ….’

ಎಲಾ ಬೆರಕಿ!! ಎಂತಾ ಕಾಲ ಬಂತರ್ರಿ ಕವಿಗೋಳಿಗಿ ಈ ಕಲಿಯುಗದಾಗ, ಕವಿ ಮತ್ತು ಕವಿತಾ, ಅಡ್ಡ ಪಲ್ಲಕ್ಕಿಯೊಳಗ ಕುಳಿಸಿ ಮೆರವಣಿಗಿ ಮಾಡೋ ನಾಡಿನೊಳಗ, ಕಾಯುವುದಿಲ್ಲ ಕವಿತೆಗೆ; ಕವಿಯೊಬ್ಬನಲ್ಲದೆ ಅಂತ ತಿರುಮಲೇಶರ ಕವಿತೆ ನೆನಪಾಗಿ ಭಾಳ ದುಖಃ ಆಯ್ತು.

‘ಅಂದಂಗ ಈ ಕವಿತಾ ಎಲ್ಲಾ ನೀವ ಬರೆದೇರೇನ್ರಿ ಸರ್.. ಏನ ಬ್ಯಾರೆದವದರ ಕಡೆ ಬರಸೇರಿ? ಇದಕ್ಕೆಲ್ಲಾ ನಿಮಗ ಯಾವಾಗ ಟೈಮ್ ಸಿಗ್ತದರಿ?’ ಅಂದಾ…..

ನನಗ ಸಮಾಧಾನ ಮಾಡ್ಲಿಕ್ಕ ಮಾತ ತೇಲಿಸ್ತಿದ್ದ..

‘ಭಾಳ “ಅನಾಹುತ” ಕವಿತಾ ಅದಾವ ಬಿಡ್ರಿ’ ಅಂದ.

ಎಲ್ಲಿತ್ತೋ ನನ್ನ ಸಿಟ್ಟೋ, ಹೊಟ್ಟಿಯೊಳಗಿನ ಸಂಕಟೊ… ‘ಲೇ ತಮ್ಮಾ ಮೊದಲ ಕನ್ನಡ ಓದಾಕ ಕಲಿ, ಅದು “ಅನಾಹುತ” ಅಲ್ಲ ಮೊದಲ ತಿದ್ದ.. ಅದನ್ನ ಟೈಪಿಂಗ್ ಮಿಸ್ಟೇಕ್. ಎಂಥಾ ಅನಾಹುತ ಮಾಡಿಬಿಟ್ಟಿದ್ದಿ. ಅದು “ಅನಾಹತ” ಅಂದ್ರ ಯಾರಿಗೂ ಸೋಲದವ, ಯಾರಿಂದನೂ ಹತನಾಗದವ, ಎದಿಯೊಳಗಿರುವ ನಾಲ್ಕನೇ ನಾಡಿಚಕ್ರ. ಇದನ್ನ ಉದ್ದೀಪನ ಮಾಡಕೊಂಡಾಗಲೇ ಎಂತವರಿಗೂ ಜ್ಞಾನೋದಯ ಆಗ್ತದ. ಅನಾಹತ ಅನ್ನೋದು ಹನ್ನರೆಡು ದಳದ ಕಮಲದ ಮ್ಯಾಲೆ ಎದಿಯೊಳಗ ನೆಲಸಿರತೈತಿ.

ಶಾಂತಿ, ಸೌಹಾರ್ದತೆ, ಕಾರುಣ್ಯತೆ …….

ನಿನ್ನ ಬ್ಯಾನರು, ವಿಸಿಟಿಂಗ್ ಕಾರ್ಡು ಎಲೆಕ್ಷನ್ ಕರಪತ್ರಕ ರೊಕ್ಕೇನೊ ಬರತೈತಿ, ಆದ್ರ ಕವಿತಾ ಟೈಪ್ ಮಾಡಿದ್ರ ಆ ಕವಿತೆಯೊಳಗಿನ ನಾಜೂಕಿನ ಆತ್ಮ ನಿನ್ನ ತಟ್ಟತೈತಿ, ಅದರ ಹೂ ಘಮ ನಿನ್ನ ಬೆರಳಿಗಿ ಅಂಟತೈತಿ. ರಾಜಕಾರಣಿಗಳ ಹುಸಿ ಭರವಸೆಗಳ ಸುಳ್ಳು ಸರಮಾಲೆ ಬರೀಯೋದಕಿಂತ, ಈ ನನ್ನ ಕವಿತಾ ಟೈಪಿಸೋದು ಕೀಳಂದ್ರ.. ತ ತಾ ಇಲ್ಲಿ ಇನ್ನೂ ಏನೇನೊ ಹೇಳಬೇಕೆನಿಸಿ.. ‘ಬ್ಯಾಡ ಬಿಡು, ಕೊಡು ನನ್ನ ಪೆನ್ ಡ್ರೈವ ಇಲ್ಲಿ, ನನ್ನ ಕವಿತಾ ಯಾರ್ಯಾರ ಕೈಗೊ ಸಿಕ್ಕು ನರಳಿ ಅರ್ಥ ಅನರ್ಥ ಆಗಿ, ಒಂದಕ ಇನ್ನೊಂದಾಗಿ ಅನಾಹುತ ಆಗೋ ಮೊದಲ ಒಂದು ಹದಿನೈದು ದಿನ ತಡಾ ಆದ್ರೂ ಪರ್ವಾಗಿಲ್ಲಾ ನಾನೆ ಈ “ನುಡಿ” ಕಲಿತಕೊಂಡು ಬರದ ಕಳಸ್ತೀನಿ’ ಅಂತ ಹೇಳಿ ಅವನ ಕೈಯೊಳಗಿನ ಪೆನ್ ಡ್ರೈವ್ ಕಿತ್ತಕೊಂಡು ಮನಿ ಕಡೆ ನಡದೆ ಅಥವಾ ನಡಿಯುತ್ತ ಓಡಿದೆ……

ಬೀದಿ ಬದಿ ಮಂದಿ ನನ್ನ ಮಕಾ ಮಕಾ ನೋಡಿ ಮುಸಿ ಮುಸಿ ನಗಲಿಕ್ಕ ಹತ್ತಿದ್ರು. ಬಹುನಿರೀಕ್ಷಿತ ಬಿಡುಗಡೆ ಕಾರ್ಯಕ್ರಮ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಯ್ತು.