“ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು. ಶಂಖ ಊದಲು, ಜಾಗಟೆ ಬಾರಿಸಲು ಜನವಿರಲಿಲ್ಲ. ‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು. ಶಂಖ, ಜಾಗಟೆ ಅವರ ಕೈಗೆ ಕೊಟ್ಟರು. ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದು ಜಾಗಟೇ ಅವನ ಕೈಗೆ ಕೊಟ್ಟು ಶಂಖ ಊದಲು ಪ್ರಾರಂಭಿಸಿದರು. ಕಲ್ಯಾಣಪ್ಪ ಜಾಗಟೆ ಬಾರಿಸಿದ. ಒಂಬತ್ತು ಬಗೆಯ ದೀಪಾರಾಧನೆ ಆಗಿ ಮಂಗಳಾರತಿ ತಟ್ಟೆ ಹಿಡಿದುಕೊಂಡು ಸುಬ್ರಹ್ಮಣ್ಯ ಭಟ್ಟರು ಹೊರಗೆ ಬರುವಾಗ ಕಲ್ಯಾಣಪ್ಪ ಜಾಗಟೆ ಬಾರಿಸುತ್ತಲೇ ಇದ್ದ.ಒಳಗಿಂದ ರುಕ್ಮಿಣಿಯಮ್ಮ ಕಂಚಿನ ಲೋಟ, ಬಾಳೆ ಎಳೆ ಹಿಡಿದುಕೊಂಡು ಹೊರಗೆ ಬಂದು ರಾಮನವಮಿಯ ಪಾನಕ, ಕೋಸಂಬರಿ ಕೊಟ್ಟಾಗ ಸೈನಿಕರು ಸುಮ್ಮನೆ ನಿಂತುಕೊಂಡರು. ಒಬ್ಬರೂ ಪಾನಕವನ್ನಾಗಲೀ, ಕೋಸಂಬರಿಯನ್ನಾಗಲೀ ಮುಟ್ಟಲಿಲ್ಲ.”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹತ್ತನೆಯ ಕಥಾನಕ ಈ ಭಾನುವಾರದ ನಿಮ್ಮ ಓದಿಗಾಗಿ. ಮೂಲ ತುಳು ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು ಮುಹಮ್ಮದ್ ಕುಳಾಯಿ.

ಮಂಜಣಾಳ್ವರಿಗೆ ರಾಜಸಭೆಗೆ ಬರಬೇಕೆಂಬ ಅಪ್ಪಣೆ ಬಂದ ಕಾಲ. ಕುಂಬಳೆ, ಕಾಸರಗೋಡು, ಮಂಜೇಶ್ವರ ಮುಂತಾದ ತುಳು ತೆಂಕಣದ ರಾಜ್ಯದಲ್ಲೊಂದು ಪರ್ವ ಕಾಲ.
ಮೈಸೂರಿನ ಸುಲ್ತಾನರ ದಂಡು ಬಂದು ಮಂಗಳೂರಿನಿಂದ ತಲಚೇರಿವರೆಗೆ ಸಣ್ಣ ಪುಟ್ಟ ರಾಜರ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡು, ಅವರನ್ನು ಓಡಿಸಿ ಊರನ್ನೂ, ಊರಲ್ಲಿದ್ದ ದೇವಸ್ಥಾನಗಳ ಭಂಡಾರ, ಚಿನ್ನವನ್ನು ಲೂಟಿ ಮಾಡಿ, ಕೆಲವು ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿತ್ತು. ಊರಿಡೀ ಸಿಡಿಲು ಬಡಿದಂತೆ ಭೀತಿಯ ವಾತಾವರಣ ತುಂಬಿ ಹೋಗಿತ್ತು. ಅನಂತರ ಬಂದ ಕಂಪನಿ ಸರಕಾರವೂ ಅವರ ಕೆಂಪು ಮೂತಿಯ ಫರೆಂಗಿಗಳೂ ಪೇಟೆಯನ್ನು ಮತ್ತೊಮ್ಮೆ ಲೂಟಿ ಮಾಡಿದರು. ಜನರಿಗೆ ಊರು, ವ್ಯಾಪಾರ, ಬೇಸಾಯ ಸಾಕಾಗಿದ್ದ ಕಾಲವದು.

ಕುಂಬಳೆಯ ಅರಸು ಕೃಷ್ಣ ವರ್ಮರ ಅಳಿಯಂದಿರನ್ನು ಟಿಪ್ಪು ಸುಲ್ತಾನನು ಮಂಗಳೂರಿನ ಪೇಟೆಯಲ್ಲಿ ಮೆರವಣಿಗೆ ಮಾಡಿಸಿ, ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿ, ಶವಗಳನ್ನು ಕೆಲವು ದಿನ ಹದ್ದು – ಕಾಗೆಗಳಿಗೆ ತಿನ್ನಲು ಬಿಟ್ಟು ಊರವರು ಹಾಗೂ ಮಂಗಳೂರು ಪೇಟೆಯವರು ಸುಲ್ತಾನನ ಹೆಸರು ಕೇಳುವಾಗ ಕ್ಯಾಕರಿಸಿ ಉಗುಳುತ್ತಿದ್ದ ಕಾಲ ಕಳೆದು ಐದಾರು ವರ್ಷ ಸಂದಿತ್ತು. ರಾಮಂತರಸರು ತಲಚೇರಿಗೆ ಓಡಿ, ಬ್ರಿಟಿಷರ ಆಶ್ರಯ ಪಡೆದು ಹಿಂದಿರುಗಿದ್ದರು. ಇಂಗ್ಲಿಷರು ಯುದ್ಧದಲ್ಲಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನನನ್ನು ಶ್ರೀರಂಗಪಟ್ಟಣದಲ್ಲಿ ಕೊಂದು ರಾಜ್ಯದ ಕೆಲವು ಸೀಮೆಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಕುಂಬಳೆ, ಕಾಸರಗೋಡು, ಮಂಜೇಶ್ವರ ಸೀಮೆಗಳನ್ನು ರಾಮಂತರಸರಿಗೆ ಬಿಟ್ಟು ಕೊಟ್ಟಿದ್ದರು. ಆ ಕಾಲದಲ್ಲಿ ರಾಮಂತರಸರು ಯುವಕರನ್ನು ಸೇರಿಸಿ ದಂಡು ಕಟ್ಟಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಸಹಾಯ ಮಾಡಿದವರು ಇಚ್ಲಂಪಾಡಿಯ ಕೋಚಣ್ಣಾಳ್ವರು ಮತ್ತು ಪಾಡಿ ಸುಬ್ರಾಯ ಶಾನುಭೋಗರು. ಇಬ್ಬರೂ ಅವರ ನೆಚ್ಚಿನ ನಾಯಕರು.

ಮುಜಂಗಾವು ಪಾರ್ಥಸಾರಥಿ ದೇವಾಲಯದ ನ್ಯಾಯಮಂಟಪದಲ್ಲಿ ಮಾಯಿಪ್ಪಾಡಿಯ ಅರಸರ ರಾಜಸಭೆ ಸೇರಿತು. ಎಂಟು ಮನೆಗಳ ರಾಯರು, ಬಾರಿಕ್ಕಾಡಿಯ ಕಾಮಡರು, ಕೂಡೇಲಿನ ಕೋಟೆ ಕುಂಜಿತ್ತಾಯರು, ಮೊಗ್ರಾಲ್ನ ಇರ್ನಿರಾಯರು, ಆಗಲ್ಪಾಡಿಯ ಕುಣಿಕುಳ್ಳಾಯರು, ಬೇವಿಂಜೆಯ ಕಕ್ಕಿಲ್ಲಾಯರು, ಕುದ್ರೆಪ್ಪಾಡಿಯ ಪೆಜತ್ತಾಯರು ಹೀಗೆ ಎಂಟು ಜನ ಮಂತ್ರಿಗಳ ಸಭೆ ಸೇರಿತು. ಬೇಳ – ಇಚ್ಲಂಪಾಡಿ, ಮುಕ್ಕೂರು, ಕೋಟೆಕುಂಜಿ ಮತ್ತು ಕೋಡಿಂಜಿ – ಮಜಲೋಡಿಗಳೆಂಬ ನಾಲ್ಕು ಮನೆಗಳ ಗುತ್ತಿನ ಬಂಟರ ಸೇನಾಧಿಪತಿಗಳು, ರಾಜ ಪುರೋಹಿತರಾದ ಬಡಾಜೆ ತಂತ್ರಿಗಳು ಕಟ್ಟೆಯಲ್ಲಿ ಕುಳಿತರು. ಇಷ್ಟು ಜನರಲ್ಲದೆ ಬಂಟರ ಗುತ್ತಿನ ಯಜಮಾನರು, ಬಂಬ್ರಾಣ, ಮಂಗಲ್ಪಾಡಿ, ಕೋಡಿಂಗಾರು, ಕೋಡಿಬೈಲು, ಪೇರೂರು, ಪಾವೂರು, ಪಾದೆ, ಮಲಾರು, ಕುಳ, ಕುಂಡಡ್ಕಗಳ ಬಂಟರಿಗೂ ಅರಸರ ಅಪ್ಪಣೆಯಾಗಿತ್ತು.

ಮಂಜೇಶ್ವರದ ಜೈನ ಸೆಟ್ಟಿಗಳು, ಕೊಂಕಣಿ ಸಮಾಜದ ಹಿರಿಯರಾದ ಭಂಡಾರ ಮಠದ ಭಂಡಾರಿ, ಶಾನುಭೋಗರು, ಭಕ್ತರ ಮಠದ ಭಕ್ತರು, ಮಣಿಯಾಣಿ ಸಮಾಜ, ಬೋವಿ ಸಮುದಾಯ, ಪೂಜಾರಿಗಳು, ಬ್ಯಾರಿಗಳ ಮುಕ್ರಿ, ಮೊಯ್ಲಾರುಗಳು, ಮುಸಲ್ಮಾನ ವರ್ತಕ ಸಂಘದ ನಾಯಕರು, ಬೆಲ್ಚಡರ ಅಚ್ಚಮ್ಮಾರರು ಹೀಗೆ ಎಲ್ಲ ಸಮಾಜ, ಸಮುದಾಯಗಳ ಯಜಮಾನರು, ಬಾಕುಡರು, ಮುಗೇರರ ಹಿರಿಯರು, ನಲಿಕೆಯವರು, ಕೊರಗರು, ದೊಂಬರು, ಪಾಣಾರರು ಎನ್ನುವ ಪರಿಶಿಷ್ಟ ಸಮಾಜಗಳ ಹಿರಿಯರು ಎಲ್ಲರೂ ಮಜಂಗಾವಿನಲ್ಲಿ ಸೇರಿದ್ದರು. ಪಾರ್ಥಸಾರಥಿ ದೇವಸ್ಥಾನದ ಬೆಳಗ್ಗಿನ ಪೂಜೆ ಮಾಡಿಸಿ ಗಂಧ ಪ್ರಸಾದ ತೆಗೆದುಕೊಂಡು ರಾಮಂತರಸರು ಆಸನದಲ್ಲಿ ಕುಳಿತು ಸಭೆ ಪ್ರಾರಂಭಿಸಿದರು.

“ಕುಂಬಳೆ ರಾಜ್ಯದ ಅಷ್ಟ ಪ್ರಧಾನರೇ, ಸೇನೆಯ ಮುಂದಾಳುಗಳೇ, ಗುತ್ತಿನ ಗುರಿಕಾರರೇ, ಎಲ್ಲ ಸಮಾಜಗಳ ಹಿರಿಯರೇ, ಕದಂಬ ವಂಶ ಈ ಕುಂಬಳೆ ರಾಜ್ಯವನ್ನು ನಿಮ್ಮೆಲ್ಲರ ಸಹಾಯ ಸಹಕಾರದಿಂದ, ಆಶೀರ್ವಾದದಿಂದ ಈ ತನಕ ಆಳುತ್ತಾ ಬಂದಿದೆ. ಭೂಮಿ ನುಂಗುವ ಕಡಲ್ಗಾಳಿಯಾಗಲಿ, ನೆರೆ ಹಾವಳಿಯಾಗಲಿ ಇಲ್ಲದೆ ಕಾಲಕಾಲಕ್ಕೆ ಮಳೆ ಬಂದು, ಊರು ಸುಭಿಕ್ಷೆಯಲ್ಲಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾತ್ರ ರಾಜ್ಯಕ್ಕೆ ಕೆಲವು ಆಪತ್ತುಗಳು ಬಂದಿವೆ. ಸುಲ್ತಾನನ ದಂಡು, ಇಕ್ಕೇರಿಯವರ ಯುದ್ಧ, ಫರೆಂಗಿ ಪೋರ್ಚುಗೀಸರ ದಾಳಿ ಮುಂತಾದ ಆಪತ್ತುಗಳೆಲ್ಲ ಕಳೆದು, ನಮ್ಮ ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಂಪನಿ ಸರಕಾರದವರ ಸಹಾಯದಿಂದ ಶಾಂತಿ ನೆಲೆ ನಿಂತಿದೆ. ಕುಂಬಳೆ ಸೀಮೆಯಲ್ಲಿ ಅವರು ಹಾಳುಗೈದುದನ್ನೆಲ್ಲ ಸರಿ ಮಾಡಿದ್ದೇವೆ, ಒಡೆದು ಹಾಕಿದ್ದುದನ್ನು ಮತ್ತೆ ಕಟ್ಟಿದ್ದೇವೆ. ದೇವಸ್ಥಾನ, ಭೂತಸ್ಥಾನಗಳಿಗೆ ಕಾಲಕಾಲಕ್ಕೆ ಉಂಬಳಿ ಕೊಟ್ಟು ಆಯನ, ಅಂಕ, ಹಬ್ಬಗಳು ನಡೆಯುವಂತೆ ನೋಡಿಕೊಂಡೆವು. ಕೆಲವು ವರ್ಷಗಳಿಂದ ದೇವಸ್ಥಾನ, ಭೂತಸ್ಥಾನ, ಮಸೀದಿಗಳಿಗೆ ಯಾವುದೇ ತೊಂದರೆ ಇಲ್ಲದೆ, ಜಾತಿ, ಧರ್ಮಗಳ ಜಗಳ ಇಲ್ಲದೆ, ನಾವು ಆಳುತ್ತಾ ಬಂದಿದ್ದೇವೆ. ಆದರೆ ಈಗ ಮೂಡಣದ ಗಟ್ಟದಿಂದ, ಕೊಡಗು ನಾಡಿನಿಂದ, ತೆಂಕಣದ ತಲಚೇರಿಯಿಂದ, ಬಡಗಿನ ಮಂಗಳೂರಿನಿಂದ ದಿನಕ್ಕೊಂದು ಸುದ್ದಿ ಬರುತ್ತಿದೆ. ಲಿಂಗಾಯತರಲ್ಲಿದ್ದ ಕೊಡಗಿನ ಆಳ್ವಿಕೆಯನ್ನು ಕಂಪನಿ ಸರಕಾರ ವಹಿಸಿಕೊಂಡ ಮೇಲೆ ಅದೇ ಪಂಗಡದ ಕೊಡಗಿನ ಸ್ವಾಮಿಯೊಬ್ಬ ತಾನೇ ಮಡಿಕೇರಿಯ ಅರಸೊತ್ತಿಗೆಗೆ ವಾರಸುದಾರ ಎನ್ನುತ್ತಾ ಸೇನೆಯನ್ನೂ ಮದ್ದುಗುಂಡುಗಳನ್ನೂ ಒಟ್ಟು ಮಾಡಿ ಮಂಗಳೂರಿಗೆ ಮುತ್ತಿಗೆ ಹಾಕಲು ತಯಾರಿ ನಡೆಸುತ್ತಿದ್ದಾನಂತೆ. ಈ ತನಕ ವಿಟ್ಲ, ಪುತ್ತೂರು, ಸುಳ್ಯ, ಬೆಳ್ಳಾರೆಗಳ ಬಂಟರು, ಗೌಡರ ನಾಯಕರು ಕುಂಬಳೆಯ ಅರಸೊತ್ತಿಗೆಯನ್ನು ಒಪ್ಪಿಕೊಂಡು ನಮ್ಮೊಂದಿಗೆ ಇದ್ದರು. ಈಗ ಅವರು ಕಲ್ಯಾಣ ಸ್ವಾಮಿ ಎನ್ನುವ ಈ ಲಿಂಗಾಯತ ನಾಯಕನೊಂದಿಗೆ ಸೇರಿದ್ದಾರಂತೆ.”

ಅರಸರು ಇಷ್ಟು ಹೇಳುವಾಗ ಬೇವಿಂಜೆಯ ಕಕ್ಕಿಲ್ಲಾಯರು ಎದ್ದು ನಿಂತು,
“ಮಹಾಪ್ರಭು! ಪುಣಿಚತ್ತಬೈಲು, ಬೆಳ್ಳಿಪ್ಪಾಡಿ, ಬೆಳ್ಳಾರೆಗಳ ಬಂಟರು, ಸ್ವರ್ಗ, ಪಡ್ರೆಗಳ ಮೂಲ್ಯರು, ಮುಳಿಯಾರು, ಆದೂರುಗಳ ನಾಯಕರು ಎಲ್ಲರೂ ಇಂದೂ ನಮ್ಮ ಜೊತೆ ಇದ್ದಾರೆ. ಈ ನಮ್ಮ ಸೀಮೆಯವರಿಗೆ ರಕ್ಷಣೆ ಕೊಟ್ಟು ಮನವರಿಕೆ ಮಾಡಿದರೆ, ಅವರ ಸಹಾಯದಿಂದ ಈ ದರೋಡೆಕೋರರ ದಂಡು ಇನ್ನು ಮೇಲೂ ನಮ್ಮ ಸೀಮೆಗೆ ಬಾರದಂತೆ ನೋಡಿಕೊಳ್ಳಬಹುದು.’’
“ಹೌದು ಮಂತ್ರಿಗಳೇ, ಅದಕ್ಕೆ ಬೇಕಾಗಿಯೇ ಇಂದು ಈ ಮಹಾಸಭೆಗೆ ನೀವು ಹಿರಿಯರನ್ನೆಲ್ಲ ಕರೆಸಿರುವುದು. ನಮ್ಮ ತೊಂದರೆ ಇಲ್ಲಿಗೇ ಮುಗಿಯಲಿಲ್ಲ, ಸುಬ್ರಾಯ ಶಾನುಭೋಗರೇ, ಉಳಿದುದನ್ನು ವಿವರಿಸಿ.’’
ರಾಮಂತರಸರು ಇಷ್ಟು ಹೇಳಿ ಬಲ ಬದಿಗೆ ನೋಡಿದರು.

ಭಾರೀ ದೇಹದ, ಗಲ್ಲ ಮೀಸೆಯ, ವಿಸ್ತಾರವಾದ ಎದೆಯ ಬ್ರಾಹ್ಮಣರ ಗುರಿಕಾರ ಸುಬ್ರಾಯ ಶಾನುಭೋಗರು ಎದ್ದು ನಿಂತರು. ಉಟ್ಟ ಪಟ್ಟೆ, ಜನಿವಾರ, ತಲೆಯ ಜುಟ್ಟಿನಲ್ಲಿದ್ದ ತುಳಸೀದಳ ಬಿಟ್ಟರೆ ಸುಬ್ರಾಯ ಶಾನುಭೋಗರನ್ನು ಬ್ರಾಹ್ಮಣ ಎಂದು ಯಾರೂ ಎಣಿಸಲಾರರು. ಎದ್ದು ನಿಂತು ಸಭೆಯನ್ನು ನೋಡಿದ ಗತ್ತು ನೋಡಿದರೆ ಅವರನ್ನು ಯಾರೋ ಬಂಟರ ಗುರಿಕಾರನೆಂದೇ ಎಣಿಸಬೇಕು. ಅದೇ ದರ್ಪ, ಅದೇ ಗಾಂಭೀರ್ಯ. ಸುಬ್ರಾಯ ಶಾನುಭೋಗರು ದೇವರ ಕೋಣೆಗೆ ಹೋಗದೆ ವರ್ಷ ಎಷ್ಟಾಯಿತೋ ಏನೋ. ಆದರೆ ಇಂದಿಗೂ ಮುಂಜಾನೆ ಎದ್ದು ವ್ಯಾಯಾಮ ಶಾಲೆಗೆ ಹೋಗಿ ಕಸರತ್ತು ಮಾಡಿಯೇ ಹೊರಡುವುದು. ಕುಂಬಳೆ, ಮುಲ್ಕಿ, ಗರಡಿಯವರನ್ನು ತರಿಸಿ ಕತ್ತಿಯ ಯುದ್ಧ, ಫರೆಂಗಿಯವರಲ್ಲಿ ತುಪಾಕಿಯ ಗುರಿ, ಬೆಳ್ಚಡರಿಂದ ಬಿಲ್ಲುಬಾಣದ ವಿದ್ಯೆ ಕಲಿತವರು ಶಾನುಭೋಗರು. ಅವರ ಮನೆಯಲ್ಲಿಯೇ ತುಪಾಕಿ, ಬರ್ಚಿ, ಕಠಾರಿ ತಯಾರಿಸುವ ಆಚಾರಿಗಳ ಕೊಟ್ಟಿಗೆ, ಅದರಲ್ಲಿ ದುಡಿಯುವ ಹತ್ತೈವತ್ತು ಆಚಾರಿಗಳಿದ್ದರಂತೆ. ಆ ಕಾಲದ ಯಾವುದೇ ದಂಡಿಗೂ ಕಮ್ಮಿಯಿಲ್ಲದಂತಹ ಸಾವಿರ ಆಳಿನ ದಂಡು ಅವರ ನೇತೃತ್ವದಲ್ಲಿತ್ತು. ಗಲ್ಲ ಮೀಸೆಯ ಪಾಡಿ ಸುಬ್ರಾಯ ಶಾನುಭೋಗರು ದೊಡ್ಡ ಜಮೀನ್ದಾರ. ಸಾವಿರ ಮುಡಿ ಗೇಣಿ ಬರುವ ಆಸ್ತಿ ಅವರದು.
ಸುಬ್ರಾಯ ಶಾನುಭೋಗರು ಎದ್ದು ನಿಂತು ಸಭೆಯನ್ನು ನೋಡಿದರು. ಸಭೆ ಗಪ್ ಚುಪ್ ಆಗಿ ಅವರನ್ನೇ ದಿಟ್ಟಿಸಿತು.

“ಕುಂಬಳೆ ರಾಜ್ಯದ ಅರಸರಾದ ರಾಮಂತರಸರೇ, ಹತ್ತು ಮಾಗಣೆಗಳ ರಾಯರೇ, ಬೀಡಿನ ಬಲ್ಲಾಳರೇ, ಗುತ್ತಿನ ಗುರಿಕಾರರೇ, ಸಭೆಯ ಸರ್ವರೇ, ಇಂದು ರಾಮಂತರಸರು ನಿಮ್ಮನ್ನೆಲ್ಲ ಇಲ್ಲಿ ಸೇರಿಸಿ, ರಾಜ್ಯಕ್ಕೆ ಬಂದಿರುವ ಗಂಡಾಂತರಗಳನ್ನು ನಿಮ್ಮಲ್ಲಿ ಚರ್ಚೆ ಮಾಡಿ ನಮ್ಮ ಸೇನೆಯ ಮುಖ್ಯಸ್ಥರು ಹೇಳಿರುವುದನ್ನು ನಿಮ್ಮ ಮುಂದೆ ಇಡಲು ಅಪ್ಪಣೆ ಕೊಟ್ಟಿದ್ದಾರೆ……
“ಈಗ ಕೊಡಗಿನ ಕಲ್ಯಾಣಪ್ಪ ಬ್ರಿಟಿಷರ ವಿರುದ್ಧ ಹೋರಾಡಲು ದಂಡು ಕಟ್ಟುತ್ತಿದ್ದಾನಂತೆ. ಅವನ ಜನರು ಊರು ಕೊಳ್ಳೆ ಹೊಡೆಯಲು ಪ್ರಾರಂಭಿಸಿದ್ದಾರಂತೆ. ದಂಗೆ, ಚಾಡಿ, ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ ನಮ್ಮ ಸೀಮೆಯ ಗಡಿಯ ಆಚೆಗೆ ನಿತ್ಯದ ಗೋಳು.’’
“ಇದುವೇ ಸಮಯವೆಂದು ನಮ್ಮ ರಾಜ್ಯದ ಕೆಲವು ಪುಂಡು ಪೋಕರಿಗಳು ತೆಂಕುಂಬಳೆಯಲ್ಲಿ ಗಲಭೆ ಮಾಡುವುದರಲ್ಲಿದ್ದಾರಂತೆ. ಕುಂಬಳೆಯ ಹಮ್ಜದರನ್ನು ಮಂಜೇಶ್ವರದ ಸೆಟ್ಟಿಗಳನ್ನು, ಭಂಡಸಾಲೆಯ ಕೊಂಕಣಿಗಳನ್ನು ದೋಚಲು ತಯಾರಿ ನಡೆಯುತ್ತಿದೆಯಂತೆ. ತೆಂಕುಂಬಳೆಯ ಗಲಭೆಯನ್ನು ನಿಲ್ಲಿಸಬೇಕು. ಅವರ ಜೊತೆ ಯುವಕರು ಸೇರದಂತೆ ಮಾಡಲು ನಿಮ್ಮ ಸಹಾಯ ಬೇಕು. ನೀವು ಕೇಳಿರಬಹುದು. ಬಾರಬೈಲಿನ ಬೀರಣ್ಣ ಬಂಟ ಹಾಗೂ ಕಲ್ಲೂರಿನ ಮಾಯಿಲ, ಕಲ್ಯಾಣಪ್ಪನ ದಂಡಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿಸಿದ್ದಾರಂತೆ. ತೆಂಕುಂಬಳೆಯಲ್ಲಿ ಸುಬ್ರಾಯ ಎನ್ನುವ ನನ್ನದೇ ಶಿಷ್ಯ ಜನ ಒಟ್ಟುಗೂಡಿಸುತ್ತಿದ್ದಾನಂತೆ. ನಾವೇನು ಮಾಡಿದ್ದೇವೆಂದು ನೀವು ಈಗ ಕೇಳಬಹುದು. ನಾವು ಇಚ್ಲಂಪಾಡಿಯ ಕೋಚಣ್ಣಾಳ್ವರ ಕೈಕೆಳಗೆ ಐದು ಸಾವಿರ ಆಳಿನ ದಂಡನ್ನು ತೆಂಕು, ಬಡಗು ದಿಕ್ಕುಗಳಲ್ಲಿ ಸೀಮೆಯ ಕಾವಲಿಗೆ ನಿಲ್ಲಿಸಿದ್ದೇವೆ. ಕೋಚಣ್ಣಾಳ್ವರಿಗೆ ಇಬ್ಬರು ದಂಡನಾಯಕರು ಸಹಾಯಕ್ಕಿದ್ದಾರೆ. ಕುಂಬಳೆ ಸೀಮೆಯಲ್ಲಿ ನನ್ನ ಆಧಿಪತ್ಯದಲ್ಲಿ ಕಾಸರಗೋಡಿನವರೆಗೆ ಐದು ಸಾವಿರ ಆಳಿನ ದಂಡು ಕಾವಲಿಗಿದೆ. ಚಂದ್ರಗಿರಿ ನದಿಯಿಂದ ಸೀರೆ ನದಿಯವರೆಗೆ ಸಮುದ್ರದ ಬದಿಯಲ್ಲಿ ನನ್ನ ಪಡೆ, ಕುಂಬಳೆಯ ಪೇಟೆಯಲ್ಲಿ ದೊಡ್ಡ ರಾಯಪ್ಪನ ಪಡೆ ಕಾವಲು ಕಾಯುತ್ತಿವೆ. ಸುಬ್ರಾಯನನ್ನು ಸ್ವತಃ ನಾನೇ ನೋಡಿಕೊಳ್ಳುತ್ತೇನೆ.’’

“ಕುಂಬಳೆ ರಾಜ್ಯದ ಅಷ್ಟ ಪ್ರಧಾನರೇ, ಸೇನೆಯ ಮುಂದಾಳುಗಳೇ, ಗುತ್ತಿನ ಗುರಿಕಾರರೇ, ಎಲ್ಲ ಸಮಾಜಗಳ ಹಿರಿಯರೇ, ಕದಂಬ ವಂಶ ಈ ಕುಂಬಳೆ ರಾಜ್ಯವನ್ನು ನಿಮ್ಮೆಲ್ಲರ ಸಹಾಯ ಸಹಕಾರದಿಂದ, ಆಶೀರ್ವಾದದಿಂದ ಈ ತನಕ ಆಳುತ್ತಾ ಬಂದಿದೆ. ಭೂಮಿ ನುಂಗುವ ಕಡಲ್ಗಾಳಿಯಾಗಲಿ, ನೆರೆ ಹಾವಳಿಯಾಗಲಿ ಇಲ್ಲದೆ ಕಾಲಕಾಲಕ್ಕೆ ಮಳೆ ಬಂದು, ಊರು ಸುಭಿಕ್ಷೆಯಲ್ಲಿತ್ತು.”

“ಇಷ್ಟಲ್ಲದೆ ಇಂದು ನಿಮ್ಮ ಮುಂದೆ ಖಾವಂದರ ಒಪ್ಪಿಗೆ ಪಡೆದು ಒಬ್ಬ ಯುವಕನ ಪರಿಚಯ ಮಾಡಿಕೊಡಬೇಕೆಂದಿದ್ದೇನೆ. ರಾಮಂತರಸರ ಸೇನೆಗೆ ಇತ್ತೀಚೆಗೆ ಸೇರಿ, ಕಳೆದ ಕೆಲವು ತಿಂಗಳಲ್ಲಿ ಸೀರೆ ಹೊಳೆಯಿಂದ ಉಳ್ಳಾಲ ಕಡವಿನವರೆಗಿನ ಜನರಿಗೆ, ದೇವಸ್ಥಾನ, ಭೂತಸ್ಥಾನ, ಮಸೀದಿ, ಬಸದಿಗಳಿಗೆ ರಕ್ಷಣೆ ನೀಡುತ್ತಾ, ಗಲಭೆ ಗಲಾಟೆಗಳಿಗೆ ಆಸ್ಪದ ಕೊಡದೆ ಇರುವ ದಂಡನಾಯಕ ಮಜಲೋಡಿ ಸುಬ್ಬಣ್ಣಾಳ್ವರ ಅಳಿಯ ಮಿತ್ತಬೈಲು ಮಂಜಣಾಳ್ವ ಎಂಬ ಯುವಕ ನನ್ನ ಶಿಷ್ಯ.’’
ಪಾಡಿ ಸುಬ್ರಾಯ ಶಾನುಭೋಗರು ಇಷ್ಟು ಹೇಳುವಾಗ ಬಡಾಜೆಯ ತಂತ್ರಿಗಳು ಯುವಕನನ್ನು ಸಭೆಯ ಮುಂದೆ ಕರೆಸಿದರು. ಇನ್ನೂ ಮೂವತ್ತು ದಾಟದ, ಆರಡಿ ಎತ್ತರದ, ಸುಂದರವಾದ ಕಂಬಳದ ಕೋಣನಂತಿರುವ ಯುವಕನನ್ನು ತಂತ್ರಿಗಳು ಸಭೆಯ ಮುಂದೆ ನಿಲ್ಲಿಸಿದಾಗ ಆತ ತಂತ್ರಿಗಳ ಕಾಲು ಮುಟ್ಟಿ ಸಭೆಗೆ ಕೈಮುಗಿದು ನಿಂತ.

“ಮಂಜಣ ಈ ತನಕ ಸಾವಿರ ಆಳಿನ ದಂಡನಾಯಕ. ಇಂದು ಅವನಿಗೆ, ನೀವೆಲ್ಲ ಒಪ್ಪಿಗೆ ನೀಡಿದರೆ ಐದು ಸಾವಿರ ಆಳಿನ ಸೇನಾ ನಾಯಕನ ಪಟ್ಟ ಕಟ್ಟಿ ಮಂಜೇಶ್ವರ, ವರ್ಕಾಡಿ, ಕನ್ಯಾನ, ಬಾಯಾರು, ಪೈವಳಿಕೆ, ಮಂಗಲ್ಪಾಡಿ ಮಾಗಣೆಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಬೇಕೆಂದು ಸಭೆ ಸರ್ವರಲ್ಲಿಯೂ, ರಾಜ್ಯದ ಅರಸರಲ್ಲಿಯೂ ನನ್ನ ಬಿನ್ನಹ.’’
ಮಂಜಣನಿಗೆ ಬೀರಣ್ಣನ ಭಯ. ಆ ವಿಷಸರ್ಪ ಮಿತ್ತಬೈಲಿಗೆ ನುಗ್ಗಿದರೆ ತನ್ನ ಮಿತ್ತಬೈಲಿನ ಮನೆ ಲೂಟಿ, ತನ್ನ ತಂಗಿಯರ ಅತ್ಯಾಚಾರ ಮಾಡದೆ ಬಿಡಲಿಕ್ಕಿಲ್ಲ. ಅವನಿಗೆ ಮಿತ್ತಬೈಲಿನಿಂದ ತನ್ನ ಕುಟುಂಬವನ್ನು ಓಡಿಸಬೇಕೆಂಬ ಹಟ ಇದೆ. ಅದಕ್ಕೆ ಬೇಕಾಗಿಯೇ ಅವನು ಕಲ್ಯಾಣಪ್ಪನ ದಂಡಿಗೆ ಸೇರಿರುವುದು. ಬೀರಣ್ಣ ಬಂಟ ಊರೆಲ್ಲ ಲೂಟಿ ಮಾಡಿ ತಂದ ಸೊತ್ತನ್ನು ಬಾರಬೈಲಿನ ಪೆಠಾರಿಯಲ್ಲಿಟ್ಟಿದ್ದ. ಬೀರಣ್ಣನಿಗೆ ಕಳೆದೊಂದು ವರ್ಷದಿಂದ ಡಕಾಯಿತಿ, ಲೂಟಿ, ಹೆಣ್ಣುಮಕ್ಕಳ ಅತ್ಯಾಚಾರ ಸಾಮಾನ್ಯ ಸಂಗತಿಯಾಗಿತ್ತು. ಅವನ ಜೊತೆ ಇದ್ದ ಕೆಲವು ಬಾಕುಡರು, ಬೆಳ್ಚಡರು ಹಾಗೂ ಗೌಡರ ಮಕ್ಕಳಿಗೂ ಇದುವೇ ಕಸುಬಾಗಿತ್ತು. ಸ್ವಾತಂತ್ರ್ಯ ಎಂದರೆ ಏನೆಂದೇ ಅವರಿಗೆ ಗೊತ್ತಿರಲಿಲ್ಲ. ದೋಚುವುದು, ಗಲಭೆ ಎಬ್ಬಿಸುವುದು, ಹೆಣ್ಣುಮಕ್ಕಳ ಅತ್ಯಾಚಾರ ಮಾಡುವುದೇ ಅವರ ಸ್ವಾತಂತ್ರ್ಯ ಸಮರ. ಹೀಗಾಗಿ ಮೂಡಣ ಸೀಮೆಯಲ್ಲಿ ಬೀರಣ್ಣ ಬಂಟನ ದಂಡು ಬರುತ್ತದೆಂಬ ಸುದ್ದಿ ಸಿಕ್ಕಿದರೆ ಊರಿಗೆ ಊರೇ ಖಾಲಿಯಾಗುತ್ತಿತ್ತು.

ಮಂಜಣನ ಬೇಹುಗಾರರು ಎರಡು ದಿನಗಳಿಗೊಮ್ಮೆ ಮೂಡಣ ಸೀಮೆಯ ಸುದ್ದಿ ಮುಟ್ಟಿಸುತ್ತಿದ್ದರು. ಅವರ ಸುದ್ದಿಯ ಪ್ರಕಾರ ಕಲ್ಯಾಣಪ್ಪ ದಂಡು ಹಿಡಿದುಕೊಂಡು ಬದಿಯಡ್ಕದಿಂದ ಕುಂಬಳೆಗೆ ಬರುತ್ತಾನೆಂದೂ ಆಗ ದಾರಿಯಲ್ಲಿ ಸಿಗುವ ಎಡನಾಡು, ಇಚ್ಲಂಪಾಡಿಗಳ ಮನೆಗಳನ್ನು ದೋಚುವ ತಯಾರಿ ಮಾಡಿದ್ದಾನೆಂದೂ ಸುದ್ದಿ ಬಂತು. ಬೀರಣ್ಣನ ದಂಡು ಆನೆಕಲ್ಲಿನ ಮೂಲಕವೇ ವರ್ಕಾಡಿಗೆ ನುಗ್ಗಿ, ಮಂಜೇಶ್ವರಕ್ಕೆ ಬಂದು ದೇವಸ್ಥಾನ, ಮಸೀದಿ, ಬಸದಿಗಳನ್ನು ಕೊಳ್ಳೆ ಹೊಡೆಯಲು ತಯಾರಿ ಮಾಡುತ್ತಿತ್ತು. ಅವನು ದೇವಸ್ಥಾನ, ಮಸೀದಿ, ಬಸದಿಗಳಲ್ಲಿ ಲೂಟಿ ಮಾಡಿದ ಸೊತ್ತುಗಳನ್ನು ಕಲ್ಯಾಣಪ್ಪನಿಗೆ ಒಪ್ಪಿಸಬೇಕು. ಮನೆ, ಜನಗಳಿಂದ ದೋಚಿದ ಸಂಪತ್ತನ್ನು ಅವನೂ, ಅವನ ದಂಡಿನವರೂ ಹಂಚಿಕೊಳ್ಳಬೇಕು ಎಂಬುದು ಕಲ್ಯಾಣಪ್ಪನ ಅಪ್ಪಣೆ. ಆದುದರಿಂದ ಕಲ್ಯಾಣಪ್ಪನಿಗೂ ಬೀರಣ್ಣನಿಗೂ ಊರು ಸೂರೆ ಮಾಡುವುದರಲ್ಲೇ ಹೆಚ್ಚು ಆಸಕ್ತಿ.
ಹಾಗಾಗಿ ಮಂಜಣಾಳ್ವನಿಗೆ ಊರು ಸೂರೆಗೈಯಲು ಹೊರಟಿರುವ ಬೀರಣ್ಣ ಮಿತ್ತಬೈಲಿಗೆ ನುಗ್ಗಿ ತನ್ನ ತಂಗಿಯರನ್ನು – ಮನೆಯಲ್ಲಿದ್ದ ಕೊಂಕಣಿಗರ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ, ಮನೆಯಲ್ಲಿದ್ದ ಭಂಡಾರಿಗಳ ಸೊತ್ತನ್ನು ದೋಚಲು ತಯಾರಿ ಮಾಡುತ್ತಿರಬಹುದೆಂಬ ಭಯ. ಬೀರಣ್ಣ ಎಲ್ಲಿಯಾದರೂ ಮಿತ್ತಬೈಲಿಗೆ ದಾಳಿ ಇಟ್ಟರೆ ಅಲ್ಲಿಯೂ ದೊಡ್ಡ ಯುದ್ಧ ಆಗಬಹುದು. ಮಂಜಣಾಳ್ವನಿಗೆ ಇದು ಗೌರವದ ಪ್ರಶ್ನೆ. ಅನಂತರ ದೇವಯ ಭಂಡಾರಿ, ದುರ್ಗಮ್ಮನವರಿಗೆ ಮಾತ್ರವಲ್ಲ, ಇಡೀ ಮಂಜೇಶ್ವರ ಪೇಟೆಗೇ ಮುಖ ತೋರಿಸಲು ಸಾಧ್ಯವಿಲ್ಲ. ಅವರೆಲ್ಲ ಅವನ ಮೇಲೆ ಭರವಸೆ ಇಟ್ಟವರು. ಬೇರೆ ಯಾವುದಲ್ಲದಿದ್ದರೂ ಈ ಸಾವು, ಅತ್ಯಾಚಾರಗಳನ್ನು ನಿಲ್ಲಿಸಲೇಬೇಕು.

ಮಂಜಣಾಳ್ವ ಕುಂಬಳೆಯಿಂದ ನೇರ ಕನ್ಯಾನವಾಗಿ ಆನೆಕಲ್ಲು ತಲುಪಿದಾಗ ಹೊಳೆ ಬದಿಯ ಹಾದಿಯಲ್ಲಿ ಹೆಣಗಳು, ಅರೆಜೀವದಲ್ಲಿ ಹೊರಳಾಡುತ್ತಿದ್ದವರು. ಕಲ್ಯಾಣಪ್ಪನ ದಂಡಿನ ರಕ್ತದ ದಾಹ, ಸಂಪತ್ತಿನ ಮೋಹವನ್ನು ಸಾರಿ ಹೇಳುತ್ತಿತ್ತು. ದಾರಿಯ ಒಂದು ಮನೆಯಲ್ಲಿಯೂ ಮನುಷ್ಯರ ಸುಳಿವಿರಲಿಲ್ಲ. ಹೆಚ್ಚಿನವರು ಓಡಿಹೋಗಿದ್ದರು. ಉಳಿದವರು ಸತ್ತು ಬಿದ್ದಿದ್ದರು. ಅರೆಜೀವದಲ್ಲಿದ್ದ ಅವನ ಸೈನ್ಯದ ಒಬ್ಬ ಸೈನಿಕ ಸುದ್ದಿಯನ್ನು ತಿಳಿಸಿದ.

“ನೂರಾಳು ಸೈನ್ಯದ ದಂಡೊಂದು ಬಂದು ಮನೆಗಳನ್ನು ಲೂಟಿ ಮಾಡುತ್ತಾ, ಕೊಳ್ಳಿ ಇಡುತ್ತಾ, ಓಡಲು ಸಾಧ್ಯವಾಗದವರನ್ನು, ಮಕ್ಕಳನ್ನು ಬಾಳೆದಂಡು ಕೊಚ್ಚಿದಂತೆ ಕೊಚ್ಚಿ ಹಾಕಿದರು. ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮಾನ ಮುಚ್ಚಲು ಬಟ್ಟೆ ಕೂಡಾ ಕೊಡದೆ ಅಲ್ಲೇ ಎಸೆದುಹೋದರು.’’ ಅರೆಜೀವದಲ್ಲಿದ್ದ ಕುಂಬಳೆ ದಂಡಿನ ಆಳು ಆ ಭೀಕರ ಹತ್ಯಾಕಾಂಡವನ್ನು ವಿವರಿಸಿದ. ಈ ನೂರಾಳು ಸೈನ್ಯದಲ್ಲಿ ಒಬ್ಬ ಬಾಕುಡನೂ, ಇಬ್ಬರು ಬೆಳ್ಚಡರೂ ಇದ್ದರು. ಮಿಕ್ಕವರು ಕನ್ನಡ ಮಾತನಾಡುವ ಗೌಡರು. ಕೆಲವರು ಮಲಯಾಳ ಮಾತನಾಡುವವರೂ ಇದ್ದರು. ಸೈನಿಕನಿಗೆ ಗುರುತು ಸಿಕ್ಕಿದ್ದು ನಾಯಕ ಬೀರಣ್ಣ ಬಂಟ ಹಾಗೂ ಅಚ್ಚಮ್ಮಾರ್ ಮಾಯಿಲ ಬೆಳ್ಚಡರದ್ದು ಮಾತ್ರ. ಅವರು ಹೊಳೆಗೆ ಇಳಿದು ಹೋದರು ಎಂದಾಗ ಮಂಜಣನಿಗೆ ಅರ್ಥವಾಯಿತು. ಅವರು ಹೋದುದು ತಮ್ಮ ಮಿತ್ತಬೈಲು ಲೂಟಿ ಮಾಡಲು ಎಂಬುದು ಅವನಿಗೆ ತಿಳಿದುಹೋಯಿತು. ಮಂಜಣನ ಸೇನೆ ಮಂಜೇಶ್ವರದಲ್ಲಿರಬೇಕು ಎಂಬುದು ಬೀರಣ್ಣ ಬಂಟನ ಲೆಕ್ಕಾಚಾರ. ಹಾಗಾಗಿಯೇ ಮಿತ್ತಬೈಲು ಮನೆ ದೋಚುವ ಯೋಜನೆ ಹಾಕಿದ್ದನು.

ಮಂಜಣನ ಭಯ ನಿಜವಾಯಿತು. ಅವನು ನೂರು ಸೈನಿಕರನ್ನು ಹೊಳೆಗೆ ಇಳಿಸಿ, ನೇರ ಮಿತ್ತಬೈಲಿಗೆ ಧಾವಿಸುವಂತೆ ಹೇಳಿದ. ಅವನ ಲೆಕ್ಕದಲ್ಲಿ ಬೀರಣ್ಣ ದಾರಿಯಲ್ಲಿರುವ ಮನೆಗಳನ್ನು, ಮುನ್ನಿಪ್ಪಾಡಿಯ ಮಸೀದಿಯನ್ನು ದೋಚುತ್ತಿರಬೇಕು. ಮಿತ್ತಬೈಲಿಗೆ ತಲುಪುವುದಕ್ಕೆ ಮೊದಲೇ ಅವರನ್ನು ಎದುರಿಸಬೇಕೆಂದು ಆತ ತನ್ನ ತುಪಾಕಿ ಹಿಡಿದು, ತನ್ನ ಐವತ್ತು ಜನ ಕುದುರೆ ಸವಾರರನ್ನು ಮೇಲಿನ ಗುಡ್ಡಕ್ಕೆ ಓಡಿಸಿದ. ಅಲ್ಲಿಗೆ ತಲುಪುವಾಗ ‘ಅಯ್ಯೋ ಅಯ್ಯೋ’ ಎಂಬ ಕಿರುಚಾಟ ಕೇಳುತ್ತಿತ್ತು. ಗುಡ್ಡೆಯಿಂದ ಅಂಗಳಕ್ಕೆ ಪಂಜು ಹಿಡಿದುಕೊಂಡು, ತುಪಾಕಿಯ ಶಬ್ದದ ಜೊತೆ ನುಗ್ಗುವ ಮಾಯಿಪ್ಪಾಡಿಯ ಸೇನೆಯನ್ನು ನೋಡಿ ಬೀರಣ್ಣನ ಪುಂಡರ ಪಡೆ ಓಡಲು ಪ್ರಾರಂಭಿಸಿತ್ತು. ಅಷ್ಟರಲ್ಲಿ ಬೆಟ್ಟುಗದ್ದೆಯಲ್ಲಿ ಒಂದೆರಡು ಹೆಣಗಳು ಬಿದ್ದಿದ್ದವು.

“ಜೈ ದುರ್ಗೆ, ಹಿಡಿಯಿರಿ, ಒಬ್ಬನನ್ನೂ ಓಡಲು ಬಿಡಬೇಡಿ” ಎಂದು ಬೊಬ್ಬಿರಿಯುತ್ತಿದ್ದ ಮಂಜಣನ ಸ್ವರ ಕೇಳಿದಾಗ ಅಂಗಳದ ಬದಿಯಲ್ಲಿ ಕಿನ್ಯನನ ಜೊತೆ ಕತ್ತಿ ಯುದ್ಧ ನಡೆಸುತ್ತಿದ್ದ ಬೀರಣ್ಣ ಬಂಟ ‘ಹರ ಹರ ಮಹಾದೇವ, ಓಡಿ’ ಎನ್ನುತ್ತಾ ಎದುರಿನ ಬಾಕಿಮಾರು ಗದ್ದೆಗೆ ಹಾರಿ ಫಸಲಿನ ನಡುವೆ ಓಡಿದ. ಬೈಲಿನತ್ತ ನೋಡುವಾಗ ಮಂಜಣಾಳ್ವನ ನೂರಾಳಿನ ಸೈನ್ಯ ಪಂಜು ಹಿಡಿದುಕೊಂಡು ಐತನ ನಾಯಕತ್ವದಲ್ಲಿ ಮನೆಯತ್ತ ಬರುತ್ತಿತ್ತು. ಬೀರಣ್ಣನ ದಂಡು ಅಡಕತ್ತರಿಯಲ್ಲಿ ಸಿಲುಕಿತು. ಚೆಲ್ಲಾಪಿಲ್ಲಿಯಾಗಿ ಓಡಹತ್ತಿದ ದರೋಡೆಕೋರರ ಗುಂಪನ್ನು ಎದುರಿಗೆ ಸಿಕ್ಕಿದ ಐತನ ಸೇನೆ ಕೊಚ್ಚಿಹಾಕಲು ಪ್ರಾರಂಭಿಸಿದಾಗ ಗದ್ದೆಯ ಕೆಸರಿನಲ್ಲಿ ಬಿದ್ದು ಓಡಲು ಸಾಧ್ಯವಾಗದೆ ‘ದಮ್ಮಯ್ಯ ಕೊಲ್ಲಬೇಡಿ’ ಎನ್ನುವ ಸ್ವರವೇ ದೊಡ್ಡದಾಗಿ ಕೇಳಿಬಂತು. ಬೀರಣ್ಣ ಬಂಟ ಮಾತ್ರ ಹೇಗೋ ತಪ್ಪಿಸಿಕೊಂಡು ಓಡಿಬಿಟ್ಟ. ಅವನು ಹಗಲಲ್ಲಿ ನೋಡಿದ ಹಾದಿಯಲ್ಲವೇ ಮಿತ್ತಬೈಲು!

ಬೈಲುಗದ್ದೆಯಲ್ಲಿ ಬಿದ್ದಿದ್ದ ದರೋಡೆಕೋರರನ್ನು ಬೆಟ್ಟುಗದ್ದೆಗೆ ಎಳೆದು ತಂದ ಮಂಜಣ ಒಬ್ಬೊಬ್ಬನ ಮುಖವನ್ನೇ ಪಂಜಿನ ಬೆಳಕಿನಲ್ಲಿ ನೋಡಿದ. ಬೀರಣ್ಣ ಓಡಿದ್ದಾನೆ ಎಂಬುದು ಸ್ಪಷ್ಟವಾಯಿತು.
“ನಿಮ್ಮ ಮಧ್ಯದಲ್ಲಿ ಮಾಯಿಲ ಬೆಳ್ಚಡ ಇದ್ದಾನೆಯೇ?’’ ಎಂದು ಕೇಳಿದಾಗ
ಯಾರೂ ಉತ್ತರಿಸಲಿಲ್ಲ. ಕೊನೆಗೂ ಕತ್ತಿ ತೋರಿಸಿ, ಜುಟ್ಟು ಹಿಡಿದು ಎತ್ತಿ ಗದರಿಸಿದಾಗ “ನಾನಲ್ಲ ಒಡೆಯಾ ಅವನು” ಎಂದು ಆತ ಬೊಬ್ಬೆ ಹಾಕಿದ. ಅಷ್ಟು ಹೇಳುವಾಗ ಕಂಬಳಿ ಹೊದ್ದು ಕುಳಿತಿದ್ದ ಮಾಯಿಲ, ಗಾಯಗೊಂಡ ಹುಲಿಯಂತೆ ಸೊಂಟದಲ್ಲಿದ್ದ ಕತ್ತಿಯನ್ನು ತೆಗೆದು ಮಂಜಣನ ಮೇಲೆ ಎರಗಲು ಯತ್ನಿಸಿದ. ಮಂಜಣನ ಕತ್ತಿ ಅವನ ಕತ್ತನ್ನು ತುಂಡರಿಸಿ ರುಂಡ – ಮುಂಡಗಳನ್ನು ಬೇರೆ ಮಾಡಿತು. ಕಾಲಡಿಗೆ ಬಿದ್ದ ರುಂಡವನ್ನು ‘ಜೈ ದುರ್ಗೆ’ ಎನ್ನುತ್ತಾ ಚೆಂಡಿನಂತೆ ಒದ್ದಾಗ ಹತ್ತಿರದ ತೆಂಗಿನ ಬುಡ್ಡೆಗೆ ತಾಗಿ ಕೆಳಗಿನ ಗದ್ದೆಗೆ ಬಿತ್ತು. ಮಂಜಣನಿಗೆ ಬೀರಣ್ಣ ತಪ್ಪಿಸಿಕೊಂಡದ್ದು ನಿರಾಶೆ ತಂದಿತ್ತು. ಎಲ್ಲರನ್ನೂ ಕಟ್ಟಿಹಾಕಿ ಪೈವಳಿಕೆಯ ಸೆರೆಮನೆಗೆ ಹಾಕುವಂತೆ ತಮ್ಮಂದಿರಲ್ಲಿ ಹೇಳಿ ಪದವಿಗೆ ಕುದುರೆಯನ್ನು ಓಡಿಸಿದ. ಮನೆಯಂಗಳದಲ್ಲಿ ಕುಳಿತು ನೀರು ಕುಡಿಯುವಷ್ಟೂ ಸಮಯವಿಲ್ಲ. ಓಡಿಹೋದ ಬೀರಣ್ಣನನ್ನು ಹಿಡಿಯದಿದ್ದರೆ ಅವನು ಗಾಯಗೊಂಡ ಹುಲಿಯಂತೆ ಸಿಕ್ಕಿದಲ್ಲೆಲ್ಲಾ ಬಾಯಿ ಹಾಕಬಹುದು. ಕೋಳ್ಯೂರು, ವರ್ಕಾಡಿ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯಲೂ ಬಹುದೆಂದೂ ಮಂಜಣ ತನ್ನ ದಂಡನ್ನು ವರ್ಕಾಡಿಯುತ್ತ ಓಡಿಸಿದ. ಮಿತ್ತಬೈಲಿನಿಂದ ಓಡಿದ ಬೀರಣ್ಣ, ಕನ್ಯಾನಕ್ಕೆ ಬಂದು ದಂಡನ್ನು ಮಂಗಳೂರಿನ ಕಡೆಗೆ ತಿರುಗಿಸಿದ. ಮುನ್ನೂರು ಸೈನಿಕರು ಮಂಗಳೂರಿಗೆ ಹೊರಟರು.

ಮಂಜಣಾಳ್ವ ಕುಂಬಳೆಯಿಂದ ನೇರ ಕನ್ಯಾನವಾಗಿ ಆನೆಕಲ್ಲು ತಲುಪಿದಾಗ ಹೊಳೆ ಬದಿಯ ಹಾದಿಯಲ್ಲಿ ಹೆಣಗಳು, ಅರೆಜೀವದಲ್ಲಿ ಹೊರಳಾಡುತ್ತಿದ್ದವರು. ಕಲ್ಯಾಣಪ್ಪನ ದಂಡಿನ ರಕ್ತದ ದಾಹ, ಸಂಪತ್ತಿನ ಮೋಹವನ್ನು ಸಾರಿ ಹೇಳುತ್ತಿತ್ತು. ದಾರಿಯ ಒಂದು ಮನೆಯಲ್ಲಿಯೂ ಮನುಷ್ಯರ ಸುಳಿವಿರಲಿಲ್ಲ. ಹೆಚ್ಚಿನವರು ಓಡಿಹೋಗಿದ್ದರು.

ಬೀರಣ್ಣ ಬಂಟ ಕಲ್ಯಾಣಪ್ಪನಿಗೆ ಸುಬ್ರಾಯ ಶಾನುಭೋಗರನ್ನು ಹಿಡಿದುಕೊಡುತ್ತೇನೆ ಎಂದು ಹೇಳಿ ಹೊರಟವ, ಅದನ್ನು ಬಿಟ್ಟು ಮಿತ್ತಬೈಲಿಗೆ ಹೋಗಿ ಕೆಲವು ಸೈನಿಕರನ್ನು ಕಳೆದುಕೊಂಡ. ಅದಕ್ಕಿಂತಲೂ, ಹೇಡಿಯಂತೆ ಓಡಿಬಂದದ್ದು ಅವಮಾನವಾಗಿತ್ತು. ಅವನಿಗೆ ಕಲ್ಯಾಣಪ್ಪನ ಭಯವೂ ಪ್ರಾರಂಭವಾಯಿತು. ಅವನ ಅಪ್ಪಣೆಗೆ ತಪ್ಪಿದರೆ ತಲೆ ತೆಗೆಯುವ ಜಾತಿ ಅವನು.

ಬೀರಣ್ಣನ ಸೈನಿಕರು ಕನ್ಯಾನದಿಂದ ಉಳಿಯತ್ತಡ್ಕ ತಲುಪಿ ಒಟ್ಟಾದರು. ಅವರು ಸುಬ್ರಾಯ ಶಾನುಭೋಗರ ಮನೆಗೆ ದಾಳಿ ಮಾಡಲು ತಯಾರಿ ಮಾಡುತ್ತಿರುವುದನ್ನು ಶಾನುಭೋಗರ ಬೇಹುಗಾರರು ಬಂದು ತಿಳಿಸಿದರು. ಸೈನ್ಯವನ್ನು ಕುಂಬಳೆಯಲ್ಲಿ ಬಿಟ್ಟು ಬಂದ ಶಾನುಭೋಗರು, ಬೆಳ್ಚಡರ ಬಿಲ್ಲಾಳುಗಳ ದಂಡಿಗೆ ಜನ ಕಳುಹಿಸಿದರು. ಜೊತೆಗಿದ್ದ ಹತ್ತು ಮಂದಿ ಸೈನಿಕರನ್ನೂ, ಹತ್ತು ಮಂದಿ ಒಕ್ಕಲಿನ ಯುವಕರನ್ನೂ ಸೇರಿಸಿಕೊಂಡು ಉಳಿಯತ್ತಡ್ಕ ಪದವಿನಲ್ಲಿ ಬೀರಣ್ಣನ ಸೇನೆಯನ್ನು ಎದುರಿಸಲು ತಯಾರಾದರು.
ಇಡೀ ಪದವಿನಲ್ಲಿ ಹುಲ್ಲಿನ ಮತ್ತು ಮುಳಿಹುಲ್ಲಿನ ಕಟ್ಟುಗಳನ್ನು ರಾಶಿ ಹಾಕಿ, ಮಧ್ಯೆ ಸಿಡಿಮದ್ದು ಇಟ್ಟು ಬೆಂಕಿ ಕೊಡಲು ತಯಾರಿ ನಡೆಸಿದರು. ಬೀರಣ್ಣ ಬಂಟನ ಸೇನೆ ಉಳಿಯತ್ತಡ್ಕ ಪದವಿನ ಕೊನೆಯಿಂದ ಶಾನುಭೋಗರ ಮುಳಿಹುಲ್ಲಿನ ಗುಡ್ಡೆಗೆ ತಲುಪುವಾಗ ಒಕ್ಕಲಿನ ಯುವಕರು ಮುಳಿಹುಲ್ಲಿನ ರಾಶಿಗೆ ಬೆಂಕಿ ಕೊಟ್ಟರು. ಬೀರಣ್ಣನ ಸೇನೆ ಮುಳಿಹುಲ್ಲಿನ ರಾಶಿಯಲ್ಲಿದ್ದ ಸಿಡಿಮದ್ದಿನ ಶಬ್ದಕ್ಕೆ ಚಲ್ಲಾಪಿಲ್ಲಿಯಾಯಿತು. ಉಳಿಯತ್ತಡ್ಕ ಪದವು ಇಡೀ ಹೊತ್ತಿಕೊಂಡು, ಪುಂಡರ ಸೇನೆ ಓಡುತ್ತಿರುವಾಗ ಒಕ್ಕಲಿನವರು ಹಾಗೂ ದಂಡಿನವರು ಕಾಯಿಸಿಟ್ಟ ಕೊಬ್ಬರಿ ಎಣ್ಣೆಯನ್ನು ಪುಂಡರ ಮೇಲೆ ಎರಚಿದರು. ಬೀರಣ್ಣ ಬಂಟನ ಪುಂಡು ಸೇನೆಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸುಬ್ರಾಯ ಶಾನುಭೋಗರ ಕುದುರೆ ಪದವು ಇಡೀ ತಿರುಗಲು ಪ್ರಾರಂಭಿಸಿತ್ತು. ಅವರ ಖಡ್ಗ ಮೃತ್ಯುವಿನ ನಾಲಗೆಯಂತೆ ಎದುರು ಸಿಕ್ಕವರನ್ನೆಲ್ಲಾ ಬಲಿ ತೆಗೆದುಕೊಂಡಿತು. ಅಷ್ಟಾಗುವಾಗ ಕುಂಬಳೆಯ ಗರಡಿಯ ಬಿಲ್ಲುಗಾರರ ಸೇನೆ ಬಂದು ತಲುಪಿತು.

ಸುಬ್ರಾಯ ಶಾನುಭೋಗರ ಅಂದು ರಾತ್ರಿಯ ಯುದ್ಧ ದಂತಕತೆಯಾಗಿ ಹೋಯಿತು. ಅವರ ಕತ್ತಿ ಇಪ್ಪತ್ತು, ಮೂವತ್ತು ಜನರನ್ನು ಬಲಿ ತೆಗೆದುಕೊಂಡಿರಬಹುದು. ಮುನ್ನಾರಾಳು ಸೈನ್ಯ ಬಿಟ್ಟು ಓಡಿದವರು ಬದುಕುಳಿದರು. ಮಿಕ್ಕವರು ಶಾನುಭೋಗರ ಕತ್ತಿಗೂ, ಗರಡಿಯ ಯುವಕರ ಬಾಣಗಳಿಗೂ ಬಲಿಯಾದರು. ಯುದ್ಧ ಮುಗಿಯುವಾಗ ಬೀರಣ್ಣ ಬಂಟ ಓಡಿಹೋಗಿದ್ದಾನೆಂದು ತಿಳಿಯಿತು. ಬೆಳಗ್ಗೆ ಬಂದ ಬೇಹುಗಾರರು ಬೀರಣ್ಣ ಮಂಜೇಶ್ವರ ಕಡವಿನ ಬಳಿ ಕಾಣಸಿಕ್ಕಿದುದನ್ನು ತಿಳಿಸಿದರು. ಮಧ್ಯಾಹ್ನವಾಗುವಾಗ ಬಂದ ಬೇಹುಗಾರರು ಆತ ಮಂಜೇಶ್ವರದ ಕಡಲ ಬದಿಯಲ್ಲಿ ಬೊಬ್ಬರ್ಯ ಕಲ್ಲಿನ ಬಳಿ ಅಡಗಿ ಕುಳಿತ ಸುದ್ದಿಕೊಟ್ಟರು. ಬೀರಣ್ಣ ಕುಂಬಳೆಗೆ ಹೋಗಿ ಸುಬ್ರಾಯ ಹೆಗ್ಡೆಯನ್ನು ಹುಡುಕಿ ಅವನೊಂದಿಗೇ ಸೇರಲು ಪ್ರಯತ್ನಿಸಬಹುದೆಂದು ನೆನೆದು ಶಾನುಭೋಗರಿಗೆ ನಿರಾಶೆಯಾಯಿತು. ಇಬ್ಬರನ್ನೂ ಒಂದೇ ದಿಕ್ಕಿನಲ್ಲಿ ಹಿಡಿಯಬೇಕೆಂದು ತಯಾರಿ ಮಾಡಿದವರು ಸುದ್ದಿಯನ್ನು ಮಂಜಣಾಳ್ವನಿಗೆ ತಲುಪಿಸಿದರು. ಅಲ್ಲಿ ಸುಬ್ರಾಯ ಹೆಗ್ಡೆಯ ಕತೆ ಬೇರೆಯೇ ಇತ್ತು.
ಎಡನಾಡಿನಲ್ಲೊಂದು ವಿಶೇಷ ನಡೆದು ಹೋಯಿತು. ಎಡನಾಡು ಸುಬ್ರಹ್ಮಣ್ಯ ಭಟ್ಟರ ಮನೆ ಲೂಟಿ ಮಾಡಿ ಇಚ್ಲಂಪಾಡಿಯ ಮನೆ ದೋಚಲೆಂದು ಹೊರಟ ಕಲ್ಯಾಣಪ್ಪನ ದಂಡಿನ ಕತೆಯೇ ಬದಲಾಯಿತು.

ಸುಬ್ರಹ್ಮಣ್ಯ ಭಟ್ಟರ ಮನೆ ತಲುಪುವಾಗ ಅಂದು ಅವರ ಮನೆಯಲ್ಲಿ ವರ್ಷಂಪ್ರತಿ ನಡೆಯುವ ರಾಮನವಮಿ ಪೂಜೆ, ಊಟಕ್ಕೆ ತಯಾರಿ ನಡೆಯುತ್ತಿತ್ತು. ಆ ಮನೆಯಲ್ಲಿ ರಾಮನವಮಿಯ ಪೂಜೆ ಯಾವಾಗಲೂ ಭಾರಿ ಸಡಗರ ಸಂಭ್ರಮದಿಂದ ನಡೆಯುತ್ತದೆ. ಕಲ್ಯಾಣಪ್ಪನ ದಂಡು ಬೈಲು ಇಳಿದು ಅಂಗಳಕ್ಕೆ ತಲುಪುವಾಗ ಪಾನಕ, ಕೋಸಂಬರಿ ತಯಾರಾಗಿತ್ತು. ಒಳಗೆ ಸುಮಾರು ಇನ್ನೂರು ಜನರಿಗೆ ಪಾಯಸದೂಟ ಸಿದ್ಧವಾಗಿತ್ತು. ನೆಂಟರಿಷ್ಟರು ಚಪ್ಪರದಲ್ಲಿದ್ದರು. ಮಂಗಳಾರತಿಗೆ ಕಾಯುತ್ತಿದ್ದರು. ಬೈಲಿನಿಂದಲೇ ಅಂಗಳಕ್ಕೆ ನುಗ್ಗಿದ ಸೈನಿಕರನ್ನು ನೋಡಿದ ನೆಂಟರೆಲ್ಲಾ ಗುಡ್ಡೆಗೆ ಓಡಿದರು. ಚಪ್ಪರ ಖಾಲಿಯಾಯಿತು. ಮನೆಯಲ್ಲಿ ಸುಬ್ರಹ್ಮಣ್ಯ ಭಟ್ಟರೂ ಎರಡು ಮೂರು ಹೆಂಗಸರು ಮಾತ್ರ ಉಳಿದರು. ಬೆಲ್ಲ, ಏಲಕ್ಕಿ, ಶುಂಠಿ, ಕರಿಮೆಣಸು, ಹಾಕಿ ತಯಾರಿಸಿದ ಪಾನಕವೂ, ಹತ್ತಿರವೇ ಇಟ್ಟಿದ್ದ ಸೌತೆಕಾಯಿ, ಬೇಳೆ, ತೆಂಗಿನಕಾಯಿ ಹಾಕಿ ಕಲಸಿದ್ದ ಕೋಸಂಬರಿಯೂ ದೊಡ್ಡ ಪಾತ್ರೆಯಲ್ಲಿತ್ತು. ಪೂಜೆಗೆ ಕುಳಿತಿದ್ದ ಸುಬ್ರಹ್ಮಣ್ಯ ಭಟ್ಟರು ಏಳಲಿಲ್ಲ. ಹೇಗೂ ಸಾಯುವವ ಯಾಕೆ ರಾಮನ ಪೂಜೆ ಮಾಡುತ್ತಲೇ ಸಾಯಬಾರದೆಂದು ಕಣ್ಣು ಮುಚ್ಚಿಕೊಂಡು ರಾಮ ಮಂತ್ರ ಹೇಳಲು ಪ್ರಾರಂಭಿಸಿದರು. ತನ್ನ ಸರ್ವಸ್ವವನ್ನೂ ಜೀವಮಾನ ಇಡೀ ನಂಬಿದ ಆರಾಧ್ಯ ದೈವ ರಾಮನ ಕೈಗೆ ಕೊಟ್ಟರು. ಹೆಂಡತಿ ರುಕ್ಮಿಣಿಯಮ್ಮನಿಗೆ ಗೊತ್ತಿತ್ತು. ತನ್ನ ಗಂಡ ಪ್ರಾಣ ಹೋದರೂ ಏಳುವುದಿಲ್ಲವೆಂದು.

ರುಕ್ಮಿಣಿಯಮ್ಮ ಚಪ್ಪರದಡಿಯಲ್ಲಿ ಚಾಪೆ ಹಾಕಿ “ಕುಳಿತುಕೊಳ್ಳಿ ಮಗಾ, ಕುಳಿತುಕೊಳ್ಳಿ” ಎಂದು ಸ್ವಾಗತಿಸಿದಾಗ, ಕಲ್ಯಾಣಪ್ಪನ ದಂಡಿನವರು ಈ ಮುದುಕಿಯನ್ನು ಏನು ಮಾಡುವುದೆಂದು ತಿಳಿಯದೆ, ನಿಂತು ಪೂಜೆ ನೋಡಲು ಪ್ರಾರಂಭಿಸಿದರು. ಕಲ್ಯಾಣಪ್ಪನೂ ತಲೆಯ ಮುಂಡಾಸು, ಕೈಲ್ಲಿದ್ದ ತುಪಾಕಿ, ಕತ್ತಿಗಳನ್ನು ಸೈನಿಕನೊಬ್ಬನ ಕೈಗೆ ಕೊಟ್ಟು ದೇವರ ಕೋಣೆಯ ಎದುರು ಅಂಗಳದಲ್ಲಿ ಕಣ್ಣು ಮುಚ್ಚಿ ನಿಂತುಕೊಂಡ.

ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು. ಶಂಖ ಊದಲು, ಜಾಗಟೆ ಬಾರಿಸಲು ಜನವಿರಲಿಲ್ಲ. ‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು. ಶಂಖ, ಜಾಗಟೆ ಅವರ ಕೈಗೆ ಕೊಟ್ಟರು. ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದು ಜಾಗಟೇ ಅವನ ಕೈಗೆ ಕೊಟ್ಟು ಶಂಖ ಊದಲು ಪ್ರಾರಂಭಿಸಿದರು. ಕಲ್ಯಾಣಪ್ಪ ಜಾಗಟೆ ಬಾರಿಸಿದ. ಒಂಬತ್ತು ಬಗೆಯ ದೀಪಾರಾಧನೆ ಆಗಿ ಮಂಗಳಾರತಿ ತಟ್ಟೆ ಹಿಡಿದುಕೊಂಡು ಸುಬ್ರಹ್ಮಣ್ಯ ಭಟ್ಟರು ಹೊರಗೆ ಬರುವಾಗ ಕಲ್ಯಾಣಪ್ಪ ಜಾಗಟೆ ಬಾರಿಸುತ್ತಲೇ ಇದ್ದ. ಭಟ್ಟರು ‘ಸ್ವಾಮಿ’ ಎಂದು ಆರತಿ ತೋರಿಸಿದರು. ಆರತಿ ತೆಗೆದುಕೊಂಡು ಚಪ್ಪರಕ್ಕೆ ಬಂದ ಭಟ್ಟರು ಎಲ್ಲರಿಗೂ ಆರತಿ ತೋರಿಸಿದರು.

ಒಳಗಿಂದ ರುಕ್ಮಿಣಿಯಮ್ಮ ಕಂಚಿನ ಲೋಟ, ಬಾಳೆ ಎಳೆ ಹಿಡಿದುಕೊಂಡು ಹೊರಗೆ ಬಂದು ರಾಮನವಮಿಯ ಪಾನಕ, ಕೋಸಂಬರಿ ಕೊಟ್ಟಾಗ ಸೈನಿಕರು ಸುಮ್ಮನೆ ನಿಂತುಕೊಂಡರು. ಒಬ್ಬರೂ ಪಾನಕವನ್ನಾಗಲೀ, ಕೋಸಂಬರಿಯನ್ನಾಗಲೀ ಮುಟ್ಟಲಿಲ್ಲ. ರುಕ್ಮಿಣಿಯಮ್ಮ ಒಂದು ಲೋಟ ಪಾನಕವನ್ನು ಗಂಡನಿಗೆ ಕೊಟ್ಟು ತಾನೂ ಕುಡಿದು ಕೋಸಂಬರಿ ತಿಂದು ಕೇಳಿದರು,
“ಇನ್ನು ತಿನ್ನಬಹುದಾ ಮಗಾ?’’
“ಅದ್ಯಾಕೆ ಹಾಗೆ ಕೇಳಿದಿರಿ?” ಕಲ್ಯಾಣಪ್ಪ ಕೇಳಿದ.
“ಏನಿಲ್ಲ ನಾವು ಪಾನಕಕ್ಕಾಗಲೀ, ಕೋಸಂಬರಿಗಾಗಲೀ ವಿಷ ಹಾಕಲಿಲ್ಲ. ಮದ್ದು ಹಾಕಲಿಲ್ಲವೆಂದು ನಿಮಗೆ ತೋರಿಸಲು ಹಾಗೆ ಮಾಡಿದೆ ಮಗಾ.’’
“ಓಹೋ, ಹಾಗೇಯೋ” ಕಲ್ಯಾಣಪ್ಪ ಜೋರಾಗಿ ನಕ್ಕು ಹೇಳಿದ.
“ನೀವು ತಾಯಿ, ಅಂತಹದೇನೂ ಮಾಡಲಿಕ್ಕಿಲ್ಲವೆಂದು ನಮಗೆ ಗೊತ್ತಿದೆ.’’
“ಅದ್ಹೇಗೆ ಮಗಾ?’’
“ಮಗಾ ಎಂದು ಕರೆದ ತಾಯಿ ಮಕ್ಕಳಿಗೆ ಮದ್ದು ಹಾಕುವುದಿಲ್ಲವೆಂದು ನನಗೆ ಗೊತ್ತಿದೆ. ನಮ್ಮ ಸಮಸ್ಯೆ ಅದಲ್ಲ.’’
“ಮತ್ತೇನು?’’
“ಪಾನಕ ಕುಡಿದು, ಕೋಸಂಬರಿ ತಿಂದಾದ ಮೇಲೆ ಈ ಮನೆಯನ್ನು ಹೇಗೆ ದೋಚುವುದು? ಚಿನ್ನ, ಹಣ ಹೇಗೆ ಕೊಂಡು ಹೋಗುವುದು? ಎಂಬುದೇ ನಮ್ಮ ಸಮಸ್ಯೆ.’’
“ಅಯ್ಯೋ! ಅಷ್ಟೇನಾ ಮಗಾ. ನಮ್ಮ ಮನೆಯಲ್ಲಿದ್ದ ಚಿನ್ನ, ಹಣ ಎಲ್ಲವನ್ನೂ ನಮ್ಮ ಕೈಯಾರೆ ನಿಮಗೆ ಕೊಡುತ್ತೇವೆ. ಪಾನಕ ಕುಡಿದು ಕೋಸಂಬರಿ ತಿನ್ನಿ. ಶ್ರೀರಾಮನ ಆಶೀರ್ವಾದ ಅದು, ಸುಸ್ತಾಗಿ ಹಸಿವಿನಿಂದ ಬಂದಿದ್ದೀರಿ, ಬನ್ನಿ ತಿನ್ನಿ’’
ರುಕ್ಮಿಣಿಯಮ್ಮ ಪಾನಕವನ್ನೂ ಕೋಸಂಬರಿಯನ್ನೂ ಕಲ್ಯಾಣಪ್ಪನ ಕೈಗೆ ಕೊಟ್ಟಾಗ ಆತ ಅದನ್ನು ಕುಡಿದು, ತಿಂದ. ಸುಬ್ರಹ್ಮಣ್ಯ ಭಟ್ಟರು ಸೈನಿಕರಿಗೆಲ್ಲ ಹಂಚಿದರು. ಸೈನಿಕರೆಲ್ಲ ಪಾನಕ ಕುಡಿದು ಕೋಸಂಬರಿ ತಿಂದರು.

ಸುಬ್ರಾಯ ಶಾನುಭೋಗರ ಅಂದು ರಾತ್ರಿಯ ಯುದ್ಧ ದಂತಕತೆಯಾಗಿ ಹೋಯಿತು. ಅವರ ಕತ್ತಿ ಇಪ್ಪತ್ತು. ಮೂವತ್ತು ಜನರನ್ನು ಬಲಿ ತೆಗೆದುಕೊಂಡಿರಬಹುದು. ಮುನ್ನಾರಾಳು ಸೈನ್ಯ ಬಿಟ್ಟು ಓಡಿದವರು ಬದುಕುಳಿದರು. ಮಿಕ್ಕವರು ಶಾನುಭೋಗರ ಕತ್ತಿಗೂ, ಗರಡಿಯ ಯುವಕರ ಬಾಣಗಳಿಗೂ ಬಲಿಯಾದರು. ಯುದ್ಧ ಮುಗಿಯುವಾಗ ಬೀರಣ್ಣ ಬಂಟ ಓಡಿಹೋಗಿದ್ದಾನೆಂದು ತಿಳಿಯಿತು.

ರುಕ್ಮಿಣಿಯಮ್ಮ ಗಂಡನನ್ನು ಕರೆದು ಬೀಗದ ಕೈಗೊಂಚಲನ್ನು ಕೊಟ್ಟರು. ಭಟ್ಟರು ಹಣದ ಪೆಟ್ಟಿಗೆಯನ್ನು ಪೆಠಾರಿಯಿಂದ ತೆಗೆದು ಚಾವಡಿಯಲ್ಲಿಡುವಾಗ, ರುಕ್ಮಿಣಿಯಮ್ಮ ಚಿನ್ನಾಭರಣಗಳ ಪೆಟ್ಟಿಗೆಯನ್ನು ತಂದಿಟ್ಟವರೇ ಒಂದು ಮಾತು ಹೇಳಿದರು.
“ಮಗಾ, ಈ ಚಿನ್ನ, ಹಣ, ಒಡವೆಯ ಪೆಟ್ಟಿಗೆ ತೆಗೆದುಕೊಳ್ಳುವುದಕ್ಕಿಂತ ಮೊದಲು ನನ್ನ ಒಂದು ಕೇಳಿಕೆಯಿದೆ. ಬೇಡವೆಂದು ಹೇಳಬಾರದು. ಕೇಳಬಹುದಾ ನಾನು?’’
“ಕೇಳಿ, ಏನು ಕೇಳಿತ್ತೀರಿ?’’
“ನಾನು ಕೇಳಿದ ಮೇಲೆ ಇಲ್ಲವೆಂದು ಹೇಳಬಾರದು. ನೀವು ಸುಸ್ತಾಗಿ ಬಂದಿದ್ದೀರಿ. ನನ್ನ ಎಣಿಕೆಯಂತೆ ನೀವು ಸರಿಯಾಗಿ ಊಟ ಮಾಡದೆ ಕೆಲವು ದಿನಗಳಾದರೂ ಆಗಿರಬಹುದು. ರಾಮನವಮಿಯ ಊಟ ತಯಾರಾಗಿದೆ. ನೀವೆಲ್ಲರೂ ಊಟ ಮಾಡಿ ಹೋಗಬೇಕು. ಯಾರಿಗಾಗಿ ಅಡುಗೆ ಮಾಡಿದ್ದೋ ಅವರ ಹಣೆಯಲ್ಲಿ ಅದು ಬರೆಯಲಿಲ್ಲ. ನೀವಾದರೂ ಉಂಡು ಹೋದಿರಾದರೆ ಆ ಸೀತಾರಾಮರಿಗೆ ತೃಪ್ತಿಯಾಗಬಹುದು. ನಮಗೆ ಪುಣ್ಯ ಸಿಗಬಹುದು. ಏನು ಹೇಳ್ತಿ?’’
“ಅಮ್ಮನ ಅಪ್ಪಣೆಯಾದರೆ ಬೇಡವೆಂದು ಹೇಳುವ ಮಗ ಯಾರಿದ್ದಾನೆ? ಬನ್ನಿ ತಾಯಿ, ನಾನು ಎಲೆ ಹಾಕಬೇಕು. ನೀವು ಬಡಿಸಬೇಕು. ನಾವು ಅದನ್ನು ಉಣ್ಣಬೇಕು. ಅದುವೇ ದೇವರ ಪ್ರಸಾದ ನನಗೆ.’’
ಗಳಿಗೆ ಕಳೆದಾಗ ಸುಸ್ತಾಗಿ ಹಸಿದು ಬಂದ ಸೈನಿಕರು ಪಾಯಸದ ಊಟ ಮಾಡಿ “ಹರಹರ ಮಹಾದೇವ’’ ಎಂದು ಹೇಳಿ ಎದ್ದರು. ಹೊರಡುವಾಗ ಚಾವಡಿಯಲ್ಲಿ ನಿಂತಿದ್ದ ರುಕ್ಮಿಣಿಯ್ಮನ ಕಾಲಿಗೆ ಬಿದ್ದ ಕಲ್ಯಾಣಪ್ಪನಿಗೆ ಭಟ್ಟರು ಹೇಳಿದರು.
“ಚಿನ್ನ, ಹಣ ತೆಗೆದುಕೊಂಡು ಹೋಗಿ.’’
“ಭಟ್ರೆ, ಉಂಡ ಮನೆಗೆ ಕನ್ನ ಹಾಕಿ ದೋಚುವ ಫಟಿಂಗರಲ್ಲ ನಾವು. ನಾವು ಪರದೇಶದಿಂದ, ತುಳುವಮ್ಮನನ್ನು ದೋಚಲು ಬಂದ ಕೆಂಪು ಮೂತಿಯವರನ್ನು ಓಡಿಸಲು ಬಂದ ಸ್ವಾತಂತ್ರ್ಯ ಹೋರಾಟಗಾರರು.’’
ಕಾಲಿಗೆ ಬಿದ್ದವನ ತಲೆ ಸವರಿದ ರುಕ್ಮಿಣಿಯಮ್ಮನ ಕಣ್ಣಲ್ಲಿ ನೀರಾಡಿತು. ತಲೆ ಸವರಿ ನಿಂತಿದ್ದ ಅನ್ನಪೂರ್ಣೇಶ್ವರಿಯ ಮುಖ ನೋಡಿದ ಕಲ್ಯಾಣಪ್ಪನ ಕಣ್ಣಲ್ಲೂ ನೀರು ತುಂಬಿ ರುಕ್ಮಿಣಿಯಮ್ಮ ಕೇಳಿದರು,
“ನನಗೊಂದು ಭಿಕ್ಷೆ ಕೊಡಲಾರೆಯಾ ಮಗಾ?’’
“ಬೇಡುತ್ತಾ, ದೋಚುತ್ತಾ ಹೋಗುವ ಸೈನಿಕನಲ್ಲಿ ಏನು ಕೇಳುತ್ತೀರಮ್ಮಾ? ಕೇಳಿ. ನನ್ನಿಂದ ಸಾಧ್ಯವಾದರೆ ಕೊಡುತ್ತೇನೆ. ಆದರೆ ಇನ್ನೊಂದು ಊಟಕ್ಕೆ ನಿಲ್ಲಲು ಹೇಳಬೇಡಿ. ಸಮಯವಿಲ್ಲ ನನಗೆ.’’
“ಮಗಾ, ಈ ಮಾಗಣೆ ಬಡವರ, ದುಡಿಯುವವರ ಊರು. ಇಲ್ಲಿ ಮನೆಗಳನ್ನು ದೋಚಿ, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವುದನ್ನೆಲ್ಲಾ ಬಿಟ್ಟು ನೇರ ಮಂಗಳೂರಿಗೆ ಹೋಗಿ ಆ ಕೆಂಪು ಮೂತಿಯವರ ಭಂಡಾರ ಲೂಟಿ ಮಾಡು. ಬಡವರನ್ನು ದೋಚಿದೆ ಎಂದಾದರೇ ಅವರು ಕೊಡುವ ಶಾಪವಲ್ಲದೆ ಬೇರೇನು ಸಿಗುತ್ತದೆ ಹೇಳು ನಿನಗೆ?’’
ಕಲ್ಯಾಣಪ್ಪ ಹಾಗೂ ದಂಡಿನವರು ಮುದುಕಿಯ ಮಾತನ್ನು ಕೇಳಿದರು. ಒಂದು ನಿಮಿಷ ಯಾರೂ ಏನೂ ಮಾತನಾಡಲಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದರು. ಎಲ್ಲರೂ ಕಲ್ಯಾಣಪ್ಪನ ಮುಖ ನೋಡಿದಾಗ ಕಲ್ಯಾಣಪ್ಪ ಹೇಳಿದ,
“ಹರಹರ ಮಹಾದೇವಾ! ಬನ್ನಿ, ನಾವು ನಮ್ಮ ಈ ತಾಯಿ ಹೇಳಿದ ಮಾತಿಗೆ ಬೆಲೆ ಕೊಟ್ಟು, ಅವರ ಇಂಗಿತವನ್ನು ನಡೆಸಿಕೊಡುತ್ತೇವೆಂದು ಮಾತು ಕೊಡೋಣ. ಈ ಅನ್ನಪೂರ್ಣೇಶ್ವರಿ ಅಮ್ಮನ ಅನ್ನದ ಋಣವನ್ನು ತೀರಿಸಿಕೊಳ್ಳೋಣ. ಬನ್ನಿ, ನಾವು ಉಕ್ಕುಡದಿಂದಲೇ ಕನ್ಯಾನ, ವಿಟ್ಲಕ್ಕೆ ಹೋಗಿ ವಿಟ್ಲದ ಕಂಪನಿ ಸರಕಾರದ ಖಜಾನೆಯನ್ನು ಎತ್ತಿಕೊಂಡು ಮಂಜೇಶ್ವರಕ್ಕೆ ಹೋಗೋಣ. ಇನ್ನು ಮಂಗಳೂರಿನ ಪೇಟೆಗೆ ಮುಟ್ಟುವವರೆಗೆ ಮನೆ ದೋಚುವ ಅಥವಾ ಕೊಳ್ಳಿಯಿಡುವ ಸುದ್ದಿ ನನ್ನ ಕಿವಿಗೆ ಬೀಳಬಾರದು. ಯಾರಾದರೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದ ಸುದ್ದಿ ನನ್ನ ಕಿವಿಗೆ ಬಿದ್ದರೆ ಸ್ವತಃ ನಾನೇ ಶಿಕ್ಷೆ ಕೊಡುತ್ತೇನೆ. ನೆನಪಿರಲಿ.’’
ತಿರುಗಿ ನೋಡದೆ ಕಲ್ಯಾಣಸ್ವಾಮಿ ‘ಉಂಡ ಮನೆಯ’ ಅಂಗಳದಿಂದ ಮರಳಿದನಂತೆ.
ಸುಬ್ರಾಯ ಶಾನುಭೋಗರು ಈ ಕತೆ ಹೇಳುವಾಗ ಮಂಜಣಾಳ್ವನಿಗೆ ಒಂದು ಪವಾಡವೇ ನಡೆದಂತಾಯಿತು.

“ಇನ್ನು….?’’
“ಅವರು ಈಗ ಮಂಜೇಶ್ವರಕ್ಕೆ ಬಂದು ಮಂಗಳೂರಿಗೆ ಹೋಗುವುದೆಂದು ತೀರ್ಮಾನವಾಗಿದೆ. ಮಂಜೇಶ್ವರದಲ್ಲಿ ಸುಬ್ರಾಯ ಹೆಗ್ಡೆಯ ದಂಡು ಅವರನ್ನು ಸೇರಿಕೊಂಡು ಇಲ್ಲಿಂದ ಎಲ್ಲಿಗೆ – ಏನು ಎಂದು ಯೋಚಿಸುತ್ತಾರಂತೆ. ಕಲ್ಯಾಣ ಸ್ವಾಮಿಯ ದಂಡು ಸುಮಾರು ಎರಡು ಸಾವಿರ ಇರಬಹುದು. ನಾವು ನಮ್ಮ ಜಾಗ್ರತೆಯಲ್ಲಿರಬೇಕು.’’
“ದೋಚಲೆಂದೇ ಬಂದ ಕಲ್ಯಾಣಪ್ಪನ ದಂಡಿನಲ್ಲಿರುವ ಯುವಕರು ದೋಚದೆ ಇರಲು ಸಾಧ್ಯವೇ ಶಾನುಭೋಗರೇ?’’
“ಕಲ್ಯಾಣಪ್ಪನ ಭಯದಿಂದ ಹಾಗೂ ನಮ್ಮ ದಂಡಿನ ತಯಾರಿಯನ್ನು ನೋಡಿ ದರೋಡೆಕೋರರು ಹೆಚ್ಚಿನ ಗಲಾಟೆ ಮಾಡದೆ ಮಂಗಳೂರಿಗೆ ಹೋಗಲೂಬಹುದು. ನಾಳೆ ಇಚ್ಲಂಪಾಡಿಯ ಸೇನೆಯೂ ನಮ್ಮ ಪಾಡಿ ಕುಂಬಳೆಯ ಸೇನೆಯೂ ನಿನ್ನೊಂದಿಗೆ ಸೇರಿದರೆ ಮಂಜೇಶ್ವರ ಮಾಗಣೆಯಲ್ಲಿ ಯಾವುದೇ ಗಡಿಬಿಡಿ ಇಲ್ಲದೆ ಹೋಗಲೂಬಹುದು. ನಾನು ಈಗ ಬಂದುದು ಅದನ್ನು ಹೇಳಲು ಅಲ್ಲ. ನಾಳೆ ಸುಬ್ರಾಯ ಹೆಗ್ಡೆ ಹಾಗೂ ಕಲ್ಯಾಣಪ್ಪನ ಸೇನೆ ಮಂಜೇಶ್ವರದಲ್ಲಿ ಒಟ್ಟಾಗುವಾಗ ಅವರಿಗೊಂದು ಊಟ ಹಾಕುವ ವ್ಯವಸ್ಥೆ ಮಾಡಬೇಕು. ಮಂಜೇಶ್ವರದ ವ್ಯಾಪಾರಿಗಳು ಸ್ವಲ್ಪ ಹಣ, ಚಿನ್ನ ಒಟ್ಟು ಮಾಡಿ ಕಲ್ಯಾಣಪ್ಪನಿಗೆ ಕೊಟ್ಟರಾದರೆ ಕಲ್ಯಾಣಪ್ಪ ದಾಂಧಲೆ ಮಾಡದೆ ಊರು ಬಿಡಲೂಬಹುದು.’’
“ಅಲ್ಲ ಸ್ವಾಮಿ, ಕಲ್ಯಾಣಪ್ಪನ ಸೇನೆಯ ವಿರುದ್ಧ ನಾವು ಹೋರಾಡಿ ಅವರ ಡಕಾಯಿತಿಯನ್ನು ಅಲ್ಲೇ ಮುಗಿಸುವುದು ಒಳ್ಳೆಯದಲ್ಲವೇ ಸ್ವಾಮಿ?’’
“ಮಂಜಣಾಳ್ವ, ನೀನು ಯುವಕ. ನಿನ್ನ ಬಿಸಿ ರಕ್ತಕ್ಕೆ ಯುದ್ಧವೇ ಇಷ್ಟವೆಂದು ನನಗೆ ಗೊತ್ತು. ಆದರೆ ಯೋಚನೆ ಮಾಡು. ಸೋಲು – ಗೆಲುವು ಯಾರದೇ ಆಗಿರಲಿ. ಕಡಿಮೆಯೆಂದರೂ ಎರಡು ಮೂರು ಸಾವಿರ ಸೈನಿಕರು ಸಾಯಬಹುದು. ಎಷ್ಟೋ ಜನ ಕೈಕಾಲು ಕಳೆದುಕೊಳ್ಳಬಹುದು. ಯುದ್ಧದ ಪರಿಣಾಮ ಒಂದು ದಿನ ಅಲ್ಲ, ಎಷ್ಟೋ ವರ್ಷ ಅನುಭವಿಸಬೇಕಾದೀತು. ಎಷ್ಟೋ ಕುಟುಂಬಗಳು, ಎಷ್ಟೋ ಮನೆಗಳು ಈ ಯುದ್ಧದಿಂದಾಗಿ ಹಾಳಾಗುತ್ತವೆ ಗೊತ್ತಾ? ಬೇಸಾಯ ಮಾಡಿಕೊಂಡು ಸುಖದಿಂದ ಗಂಜಿಯೋ, ಅಂಬಲಿಯೋ ಕುಡಿಯುತ್ತಿರುವ ರೈತ, ಲೋಕಕ್ಕೆ ಒಳ್ಳೆಯದಾಗಲೆಂದು ಪೂಜೆ ಮಾಡಿಕೊಂಡು ದೇವರಲ್ಲಿ ಬೇಡುತ್ತಿರುವ ಭಟ್ಟರು, ವ್ಯಾಪಾರ ಮಾಡುತ್ತಿರುವ ಸೆಟ್ಟಿ, ಬ್ಯಾರಿ, ಕೊಂಕಣಿ ಬಂಟ ಬಾರಗೆಯವರು ಎಷ್ಟು ವರ್ಷಗಳವರೆಗೆ ಈ ಯುದ್ಧದ ನೋವನ್ನು ಅನುಭವಿಸಬೇಕಾಗುತ್ತದೆ ಗೊತ್ತಾ?’’
“ನಮ್ಮ ರಾಜ್ಯದಲ್ಲಿ ಇಕ್ಕೇರಿಯ ನಾಯಕರು, ಅಬ್ಬಕ್ಕ, ಪೋರ್ಚುಗೀಸರ ಯುದ್ಧ, ಮೈಸೂರು ಸುಲ್ತಾನರ ಕಾಳಗದ ಪರಿಣಾಮ ಈಗಲೂ ನಾವು ಅನುಭವಿಸುತ್ತಿದ್ದೇವೆ.  ಆ ಪುಸಲರನ್ನು ನೋಡು. ಮೈಸೂರು ಸುಲ್ತಾನನ ಸುಬೇದಾರನ ಅಹಂಕಾರದ ಮತಾಂಧತೆಯ ಫಲ ಅವರು. ಹಾಳಾಗಿ ಬಿದ್ದಿರುವ ನಮ್ಮ ಬಸದಿಗಳನ್ನು, ದೈವ, ದೇವರ ಗುಡಿಗಳನ್ನು ನೋಡು. ಅದೆಲ್ಲಾ ಯುದ್ಧದ ಫಲ. ಈ ದಂಡು ಹಿಡಿದುಕೊಂಡು ಬಂದವರು ನಮ್ಮ ದೇವಸ್ಥಾನ, ದೈವಸ್ಥಾನಗಳ ಭಂಡಾರಗಳನ್ನು ದೋಚಿ, ಮೂರ್ತಿಗಳನ್ನು ಪುಡಿಗೈದು ಹೋದರು. ಅಂತಹ ಯುದ್ಧ ನಮ್ಮ ಊರಿಗೆ ಬೇಕೇ ಮಂಜಣಾ? ದಾರಿಯಲ್ಲಿ ಹೋಗುವ ಮಾರಿ ದಾರಿಯಲ್ಲೇ ಹೋಗುವುದು ಒಳಿತಲ್ಲವೇ? ಅದನ್ನು ಮನೆಗೆ ಕರೆಯಬೇಕಾ? ಊರಿಗೆ ಹೋಗಿ ಇನ್ನು ನಾಲ್ಕು ಬೆಟ್ಟು ಗದ್ದೆ ಅಗೆದು ತೆಂಗು, ಬಾಳೆ ನೆಟ್ಟು ಬೆಳೆಸುವುದು ಒಳ್ಳೆಯದಲ್ಲವಾ? ಗುಡ್ಡ ಅಗೆದು ಹೊಳೆಯ ನೀರು, ನೆರೆ, ಮಳೆಗಳ ಜೊತೆ ಹೋರಾಟ ಮಾಡುವುದು ಈ ಕತ್ತಿ, ತುಪಾಕಿಗಳ ಜೊತೆ ಹೋರಾಟ ಮಾಡುವುದಕ್ಕಿಂತ ಎಷ್ಟೋ ಸುಖ. ಅಲ್ಲವೇ ಹೇಳು?’’
ಕೇಳುತ್ತಿದ್ದ ಮಂಜಣನಿಗೆ ತಾನು ಅಗೆದು ಮಾಡಿದ ಗದ್ದೆ, ತೋಟಗಳು, ಬಾವಿ, ಕೋಳ, ಏತಗಳೆಲ್ಲಾ ತನ್ನ ಕಣ್ಣೆದುರು ತೇಲಿ ಬಂದವು.

“ಹೌದು ಸ್ವಾಮಿ, ಮಲಗುವಾಗ ಅದನ್ನೇ ನೆನೆದು ನಿದ್ದೆ ಬರುವುದಿಲ್ಲ. ನಮ್ಮ ಮನೆಯಲ್ಲಿ ಮದುವೆಗೆ ತಯಾರಾಗಿ ಕುಳಿತ ತಂಗಿಯರ ನೆನಪಾಗುತ್ತದೆ. ಕಂಬಳದ ಗದ್ದೆಯನ್ನು ಯಾವಾಗ ಹದಗೊಳಿಸಲಿಲ್ಲವೆಂದಾಗುತ್ತದೆ. ಬಿಟ್ಟರೆ ಈಗಲೇ ಬೈಲಿಗೆ ಓಡಿ, ಹೊಳೆಗೆ ಹಾರಿ ಆ ಬದಿ ಈ ಬದಿ ಈಜೋಣವೆನಿಸುತ್ತಿದೆ.’’
“ಏಳು, ಪೇಟೆಗೆ ಹೋಗಿ ಕೊಂಕಣಿಗರ ಸಮಾಜವನ್ನು ವ್ಯಾಪಾರದ ಬ್ಯಾರಿಗಳನ್ನು ಭಂಡಸಾಲೆಯ ಸೆಟ್ಟಿಗಳನ್ನು ಒಟ್ಟು ಮಾಡಿ ನಾಳೆಯ ದಿನವನ್ನು ಹೇಗೆ ಸುಧಾರಿಸುವುದೆಂದು ಯೋಚಿಸೋಣ.’’
ಶಾನುಭೋಗರೂ, ಮಂಜಣಾಳ್ವರೂ ಎಲ್ಲರಿಗೂ ಆಳು ಕಳುಹಿಸಿ, ರಥಬೀದಿಯ  ಭಕ್ತರ ಮಠದಲ್ಲಿ ಸೇರಿಸಿ ತಮ್ಮ ಯೋಜನೆಯನ್ನು ಅವರ ಮುಂದಿಟ್ಟರು. ಮಾತುಕತೆ ಮುಗಿದಾಗುವಾಗ ಕಲ್ಯಾಣಪ್ಪನ ದಂಡಿಗೆ ದೇವಸ್ಥಾನದಲ್ಲೂ, ಸುಬ್ರಾಯ ಹೆಗ್ಡೆಯ ಸೇನೆಗೆ ಬಸದಿಯಲ್ಲೂ ಊಟದ ವ್ಯವಸ್ಥೆಯ ಏರ್ಪಾಡಾಯಿತು. ಕುಂಬಳೆ ಸೇನೆಯವರಿಗೆ ಬಡಾಜೆ ತಂತ್ರಿಗಳ ದೇವಸ್ಥಾನದಲ್ಲಿ ಊಟದ ಏರ್ಪಾಡಾಯಿತು. ಕೋಚಣ್ಣಾಳ್ವರ ಸೇನೆಗೆ ತಲಪಾಡಿ ಗುತ್ತಿನಲ್ಲೂ, ಮಂಜಣಾಳ್ವರ ದಂಡಿಗೆ ಭಂಡಾರಿ ಮಠದ ಭಂಡಾರಿಗಳ ಮನೆಯಲ್ಲೂ ಊಟದ ವ್ಯವಸ್ಥೆ ಮಾಡುವುದೆಂದು ತೀರ್ಮಾನವಾಗುವಾಗ ಮಧ್ಯರಾತ್ರಿ ಕಳೆಯಿತು. ಮಂಜಣಾಳ್ವರ ಭಾವ ಕಾಂತಣ್ಣನನ್ನು ಮಿತ್ತಬೈಲು, ಕೋಳ್ಯೂರು, ಸುಂಕದಕಟ್ಟೆಗಳ ಕಾವಲಿಗೆ ಕಳುಹಿಸಿ, ಶಾನುಭೋಗರನ್ನು ಬಡಾಜೆಗೆ ಕಳುಹಿಸಿ ಹೊರಡುವಾಗ ಬೊಬ್ಬರ್ಯ ಕಲ್ಲಿನ ಬಳಿಯಿಂದ ಬೊಬ್ಬೆ ಕೇಳಿಸಿತು. ಹೊಳೆಬದಿಯಲ್ಲಿದ್ದ ಸೇನೆಯವರಲ್ಲಿ ಬೋವಿಗಳ ಮತ್ತು ಪುಸಲರ ಜನ ಬಂದು ದೂರು ಕೊಟ್ಟು ಬೊಬ್ಬೆ ಹೊಡೆಯುತ್ತಿದ್ದರು.

“ನಾಳೆ ಸುಬ್ರಾಯ ಹೆಗ್ಡೆ ಹಾಗೂ ಕಲ್ಯಾಣಪ್ಪನ ಸೇನೆ ಮಂಜೇಶ್ವರದಲ್ಲಿ ಒಟ್ಟಾಗುವಾಗ ಅವರಿಗೊಂದು ಊಟ ಹಾಕುವ ವ್ಯವಸ್ಥೆ ಮಾಡಬೇಕು. ಮಂಜೇಶ್ವರದ ವ್ಯಾಪಾರಿಗಳು ಸ್ವಲ್ಪ ಹಣ, ಚಿನ್ನ ಒಟ್ಟು ಮಾಡಿ ಕಲ್ಯಾಣಪ್ಪನಿಗೆ ಕೊಟ್ಟರಾದರೆ ಕಲ್ಯಾಣಪ್ಪ ದಾಂಧಲೆ ಮಾಡದೆ ಊರು ಬಿಡಲೂಬಹುದು.’’

ವಿಚಾರಿಸುವಾಗ ಬೆಂಗ್ರೆಯಲ್ಲಿ ಎರಡು ಮನೆಗಳಿಗೆ ನುಗ್ಗಿದ ಪುಂಡರು ಇಬ್ಬರು ಹರೆಯದ ಯುವತಿಯರನ್ನು ಎತ್ತಿಕೊಂಡು ಹೋಗಿದ್ದಾರೆಂದು ತಿಳಿದುಬಂತು. ವಿಚಾರಣೆಯಲ್ಲಿ ಮಂಜಣಾಳ್ವರ ಬೇಹುಗಾರರು ಅದು ಬೀರಣ್ಣ ಬಂಟನ ಸೇನೆಯವರು ಮಾಡಿದÀ ಕೃತ್ಯ ಎಂಬ ಸುದ್ದಿಯನ್ನು ತಿಳಿಸಿದರು. ಮಂಜಣ, ಶಾನುಭೋಗರನ್ನು ಬಡಾಜೆಗೆ ಕಳುಹಿಸಿ ಐವತ್ತು ಜನ ಕುದುರೆ ಸವಾರ ಸೈನಿಕರನ್ನು ಕೂಡಿಸಿಕೊಂಡು ಬೊಬ್ಬರ್ಯ ಕಲ್ಲಿನ ಬಳಿಹೋದ. ಊರಿನ ಪುಸಲರನ್ನೂ, ಬೋವಿಗಳನ್ನೂ ಒಟ್ಟು ಸೇರಿಸಿ, ಪಂಜು, ದೀವಟಿಗೆ ಹಿಡಿದು, ಕಡಲ ತೀರದ ಕೇರಿಗಳಲ್ಲಿ ಬೀರಣ್ಣ ಬಂಟನ ಸೈನಿಕರನ್ನು ಹುಡುಕಲು ಹೇಳಿದ.

ಅಷ್ಟಾಗುವಾಗ ಮಂಜೇಶ್ವರದ ಹೊಳೆ ಬದಿಯಿಂದ ದೇವಯ ಭಂಡಾರಿಗಳ ಹಿತ್ತಲಲ್ಲಿ ಬೊಬ್ಬೆ ಕೇಳಿ ಬಂತು. ಮಂಜಣ ಕೆಲವೇ ಸೈನಿಕರನ್ನು ಕರೆದುಕೊಂಡು ಕುದುರೆಯನ್ನು ಭಂಡಾರ ಮಠದ ಹಿತ್ತಲಿಗೆ ಓಡಿಸಿದ. ಭಂಡಾರಿಗಳ ಹಿತ್ತಲಲ್ಲಿ ಮಲಗಿಕೊಂಡಿದ್ದ ಕುಂಬಳೆ ಸೇನೆಯನ್ನು ಬೀರಣ್ಣನ ಪುಂಡರು ಕೊಚ್ಚಿ ಹಾಕಲು ಪ್ರಾರಂಭಿಸಿದ್ದರು. ಕೈ ಕೈ ಕತ್ತಿಯ ಕಾಳಗ ಭಾರಿ ಜೋರಾಗಿ ನಡೆಯುತ್ತಿತ್ತು. ಮಂಜಣನ ಕುದುರೆ ಅಂಗಳಕ್ಕೆ ನುಗ್ಗಿ ‘ಜೈ ದುರ್ಗೆ’ ಎಂದು ಎರಗಿದಾಗ ಪುಸಲರ ಪುಂಡ ಹುಡುಗರು ಓಡಲು ಪ್ರಾರಂಭಿಸಿದರು. ಮಂಜಣನ ‘ಜೈ ದುರ್ಗೆ’ – ಜಯಕಾರ ಅವನ ಸೇನೆಗೆ ಆನೆಯ ಬಲ ಕೊಟ್ಟಿತು. ಬೀರಣ್ಣನ ಸೇನೆ ಓಡಲೂ ಸಾಧ್ಯವಿಲ್ಲ ನಿಲ್ಲಲ್ಲೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ಬಿತ್ತು. ಮಂಜಣಾಳ್ವನ ಕತ್ತಿ ಮೂರ್ನಾಲ್ಕು ಮಂದಿಯನ್ನು ಬಲಿ ತೆಗೆದುಕೆಂಡಿತು. ಆ ಹೊತ್ತಿಗೆ ಭಂಡಾರ ಮಠದ ಚಾವಡಿಯಿಂದ “ಕಾಪಾಡೀ, ಕಾಪಾಡೀ ಆಳ್ವರೇ” ಎಂಬ ದುರ್ಗಮ್ಮನ ಆಕ್ರಂದನ ಕೇಳಿ ಕುದುರೆಯಿಂದ ಹಾರಿ ಚಾವಡಿ ಹತ್ತುವಾಗ ಬೀರಣ್ಣನ ಸೈನಿಕರು ಮಂಜಣಾಳ್ವರ ಕತ್ತಿಯ ಪೆಟ್ಟಿಗೆ ಸಿಕ್ಕಿದರು. ಒಳಗಿಂದ ದುರ್ಗಮ್ಮನ ಸಿರಿಮುಡಿ ಹಿಡಿದು ಎಳೆದುಕೊಂಡು ಬರುತ್ತಿದ್ದ ಬೀರಣ್ಣನನ್ನು ನೋಡಿದ ಮಂಜಣ ಕೈಯಲ್ಲಿದ್ದ ತಲವಾರಿನಿಂದ ಅವನ ಕೈಗೆ ಕಡಿದ. ದುರ್ಗಮ್ಮನ ಕೂದಲು ಬಿಟ್ಟು ತಿರುಗಿದ ಬೀರಣ್ಣ ಇನ್ನೊಂದು ಕೈಯಿಂದ ಬೆತ್ತ ಬೀಸಿದಾಗ ಮಂಜಣ ಆ ಕೈಯನ್ನು ಕಡಿದಾಗ ಬೆತ್ತ, ಕೈ ಎರಡೂ ಉದುರಿದವು. ಬೀರಣ್ಣ ಅಲ್ಲೇ ಚಾವಡಿಯಲ್ಲಿ ಉರುಳಿದ. ಮಂಜಣನ ‘ಜೈ ದುರ್ಗೆ’ ಎಂಬ ಆರ್ಭಟವೂ, ಬೀರಣ್ಣನ ‘ಅಯ್ಯೋ ಅಪ್ಪಾ’ ಎಂಬ ಕೂಗೂ ಒಂದಾದವು. ಚಾವಡಿಯಿಂದ ಬೀರಣ್ಣನನ್ನು ಒದ್ದು ಅಂಗಳಕ್ಕೆ ಹಾಕಿದಾಗ, ರಥಬೀದಿಯಿಂದ ಓಡುತ್ತಾ ಬಂದ ಸೇನೆಯವರು ಬೀರಣ್ಣನ ಸೈನಿಕರನ್ನು ಹಾಗೂ ಕೆಲವು ಓಡದೆ ಇದ್ದ ಪುಸಲರ ಹುಡುಗರನ್ನು ಹಿಡಿದರು. ‘ಹರಹರ ಮಹಾದೇವ’ ಎನ್ನುತ್ತಾ ಓಡಲು ನೋಡಿದ ಬೀರಣ್ಣ ಬಂಟನನ್ನು ಸೈನಿಕರು ಹಿಡಿದು ಕಟ್ಟಿ ಕೊಟ್ಟಿಗೆಗೆ ಹಾಕಿದರು. ಹೆಣಗಳನ್ನು ಚಾವಡಿಯಿಂದ ತೆಗೆಸುವಾಗ ಸೈನಿಕರು ಕಡಲ ಬದಿಯ ಸುದ್ದಿ ತಂದರು. ಅಪಹರಿಸಿದ ಬೋವಿಗಳ ಹೆಣ್ಣುಗಳನ್ನು ಬೊಬ್ಬರ್ಯ ಕಲ್ಲಿನ ಬಳಿ ಹಾಕಿದ್ದರಂತೆ. ಪುಸಲರ ಹೆಣ್ಣೊಂದು ಹೊಯ್ಗೆಯಲ್ಲಿ ಅರೆ ಜೀವದಿಂದ ಬಿದ್ದಿತ್ತು.

ರಾತ್ರಿ ಬೀರಣ್ಣ ಬಂಟನ ಪುಂಡ ಹುಡುಗರು ಅತ್ಯಾಚಾರ ಮಾಡಿ ಗಾಯಗೊಳಿಸಿದ್ದ ಬೋವಿಗಳ ಹೆಣ್ಣು ಮುಂಜಾನೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿತ್ತು. ಬೋವಿಗಳೆಲ್ಲಾ ಒಟ್ಟಾಗಿ ಕಲ್ಯಾಣಪ್ಪನ ದಂಡನ್ನು ಎದುರಿಸಿ ಕಾದಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ಜೊತೆ ಬೆಂಗರೆಯ ಪುಸಲರೂ ಸೇರಿಕೊಂಡಿದ್ದಾರಂತೆ. ಅವರು ಯುದ್ಧ ಪ್ರಾರಂಭಿಸಿದರೆಂದಾದರೆ ಅನರ್ಥವಾಗಬಹುದು. ನಿನ್ನೆಯಿಂದ ಮಾಡಿದ ಎಲ್ಲಾ ಕೆಲಸಗಳೂ ವ್ಯರ್ಥವಾಗಬಹುದು. ಈ ಬೋವಿಗಳೂ, ಪುಸಲರೂ ಯಾರ ಮಾತನ್ನೂ ಕೇಳುವವರಲ್ಲ. ಕೇಳಿದರೆ ಮಂಜಣಾಳ್ವ ಒಬ್ಬನದೇ. ಅದನ್ನು ಹೇಳಲು ಶಾನುಭೋಗರು ಮಂಜಣಾಳ್ವನನ್ನು ಕಾಯುತ್ತಿದ್ದುದು.

ಶಾನುಭೋಗರಲ್ಲಿ ಮಾತನಾಡಿ ಬೋವಿಗಳು ಹಾಗೂ ಪುಸಲರೊಂದಿಗೇ ಬೆಂಗರೆಗೆ ಬಂದ ಮಂಜಣ, ಅವರ ಮನೆಗೆ ಹೋದಾಗ ಬೋವಿಗಳ ಗುಂಪೇ ಅಲ್ಲಿ ನೆರೆಯಿತು. ಮಂಜಣಾಳ್ವ ಹೆಣ್ಣಿನ ಶವದ ಮುಂದೆ ಮಂಡಿಯೂರಿ ಕೈಮುಗಿದು ಎದ್ದು, ವೃದ್ಧ ತಂದೆ-ತಾಯಿಗಳ ಕಾಲಿಗೆ ಬೀಳಲು ಬಗ್ಗುವಾಗ ನೆರೆದಿದ್ದ ಪುಸಲರ ಯುವಕರು ಹಾಗೂ ಬೋವಿಗಳು “ಜೈ ದುರ್ಗೆ” “ಜೈ ಮಂಜಣಾಳ್ವ’’ ಎಂದು ಜಯಕಾರ ಹಾಕಿದರು. ಮಂಜಣಾಳ್ವ ಬೋವಿಗಳ ಮತ್ತು ಪುಸಲರ ಹಿರಿಯರನ್ನು ಕರೆದು ಸಮಾಧಾನ ಹೇಳಿ, ಬೀರಣ್ಣ ಬಂಟನನ್ನೂ, ಅವನ ಸೈನಿಕರನ್ನೂ ಅವರ ಕೈಗಳಿಂದಲೇ ಗಲ್ಲಿಗೇರಿಸುವುದಾಗಿ ಮಾತು ಕೊಟ್ಟು ಇಬ್ಬರು ಹೆಣ್ಣು ಮಕ್ಕಳ ಶವಗಳನ್ನೂ ಮಂಜೇಶ್ವರ ಗುಡ್ಡಕ್ಕೆ ಒಯ್ದು ಸಂಸ್ಕಾರ ಮಾಡುವಂತೆ ಒಪ್ಪಿಸಿದ. ಶಾಂತಿಯಿಂದ ಈ ಕೆಲಸವನ್ನು ಮಾಡುವುದಾಗಿ ಎರಡೂ ಸಮಾಜಗಳ ಹಿರಿಯರು ಮಾತು ಕೊಟ್ಟರು. ಯುವಕರೇನಾದರೂ ಗಲಾಟೆ ಮಾಡಿದರೆ ತನ್ನದೇ ಸೇನೆ ದಂಗೆಯನ್ನು ನಿಲ್ಲಿಸಬೇಕಾದೀತು ಎಂದು ಭಯ ಹುಟ್ಟಿಸಿ ಮಂಜಣಾಳ್ವ ಪೇಟೆಗೆ ಬಂದ.

ಬಂಗ್ರ ಮಂಜೇಶ್ವರಕ್ಕೆ ತಲುಪಿದಾಗ ಎಲ್ಲಾ ದಿಕ್ಕುಗಳಿಂದಲೂ ಸುದ್ದಿ ಬಂತು. ಕಲ್ಯಾಣಪ್ಪನ ದಂಡು ಕಡಂಬಾರಿನಿಂದ ಬರುತ್ತಿದೆ. ಸುಬ್ರಾಯ ಹೆಗ್ಡೆಯ ದಂಡು ಐಲದ ಪದವಿಗೆ ತಲುಪಿದೆಯೆಂದು ಸುದ್ದಿ ಬಂದು ಮುಟ್ಟಿತು. ಊರಿನ ಯುವಕರು, ಪುಸಲರು, ಬೋವಿಗಳು ಸುಬ್ರಾಯ ಹೆಗ್ಡೆಯ ದಂಡಿಗೆ ಸೇರುತ್ತಾರೆ ಎನ್ನುವ ಭಯ ಕಡಿಮೆಯಾಗಿತ್ತು. ರಾತ್ರಿ ಇಬ್ಬರು ಹೆಣ್ಣು ಮಕ್ಕಳನ್ನು ಬೀರಣ್ಣ ಬಂಟನ ಸೈನಿಕರು ಅತ್ಯಾಚಾರ ಮಾಡಿದ್ದಾರೆ ಎಂಬ ಸುದ್ದಿ ಬೆಂಕಿಯಂತೆ ಹರಡಿತ್ತು. ಹಾಗಾಗಿ ದಂಡಿಗೆ ಸೇರಲು ತಯಾರಾಗಿದ್ದ ಯುವಕರ ಸಂಖ್ಯೆ ಕಡಿಮೆಯಾಗಿತ್ತು.
ನಡುಮಧ್ಯಾಹ್ನ ಕಳೆದು ಗಳಿಗೆಯಾಗುವಾಗ ಕಲ್ಯಾಣಪ್ಪನ ದಂಡು ಮಂಜೇಶ್ವರ ಪೇಟೆಯ ಬಳಿಗೆ ಬಂದು ತಲುಪಿತು. ಕಾಡಿನ ಬಳಿಯ ಪದವಿನಲ್ಲಿ ಕೊಂಕಣಿಗಳ ಸಮಾಜದ ಹತ್ತು ಸಮಸ್ತರು, ಸೆಟ್ಟಿಗಳು ಹಾಗೂ ವ್ಯಾಪಾರದ ಬ್ಯಾರಿಗಳ ಹಮ್ಜದರು ಸೇನೆಯನ್ನು ಎದುರುಗೊಂಡು ಪಾನಕ, ಎಳನೀರು ಕೊಟ್ಟರು. ದಂಡಿಗೆಯಿಂದ ಇಳಿದ ಕಲ್ಯಾಣಸ್ವಾಮಿ ಕುದುರೆಯೇರಿ ಹತ್ತು ಸಮಸ್ತರನ್ನು ಭೇಟಿಯಾದ. ಅವರು ಮಧ್ಯಾಹ್ನದ ಊಟಕ್ಕೆ ಒತ್ತಾಯಿಸಿದಾಗ ಕಲ್ಯಾಣಪ್ಪ ನಕ್ಕ.
“ನೀವು ಊಟ ಕೊಡಬೇಕೆಂದಿಲ್ಲ. ನಾವು ಊರು ಸೂರೆ ಮಾಡುವುದನ್ನು ನಿಲ್ಲಿಸಿದ್ದೇವೆ. ಅನ್ನಪೂರ್ಣೇಶ್ವರಿ ದೇವಿಯಂತಿರುವ ರುಕ್ಮಿಣಿಯಮ್ಮನಿಗೆ ಊರು ದೋಚುವುದಿಲ್ಲವೆಂದು ಮಾತು ಕೊಟ್ಟಿದ್ದೇವೆ. ನಿಮಗೆ ಸಾಧ್ಯವಾದರೇ ನಮಗೆ ಸ್ವಲ್ಪ ಹಣ ಕಾಸು ಒಟ್ಟು ಮಾಡಿಕೊಡಿ.’’
ಹತ್ತು ಸಮಸ್ತರು ಊಟವಾದ ನಂತರ ತಮ್ಮಿಂದಾದಷ್ಟು ಸಹಾಯವನ್ನು ಒಟ್ಟು ಮಾಡಿಕೊಡುತ್ತೇವೆಂದು ಒಪ್ಪಿಕೊಂಡರು. ಅಷ್ಟಾಗುವಾಗ ಸುಬ್ರಾಯ ಹೆಗ್ಡೆಯ ಸೇನೆಯೂ ಬಂಗ್ರ ಮಂಜೇಶ್ವರಕ್ಕೆ ಬಂದು ಸೇರಿತು. ಹೆಗ್ಡೆ, ಕಲ್ಯಾಣಸ್ವಾಮಿಯನ್ನು ಸೇರಿಕೊಂಡು ಎಲ್ಲ ವಿಷಯ ತಿಳಿಸಿದ. ಇಬ್ಬರೂ ಮಂಜೇಶ್ವರದ ಹತ್ತು ಸಮಸ್ತರ ಸತ್ಕಾರಕ್ಕೆ ಒಪ್ಪಿ, ಸುಬ್ರಾಯ ಹೆಗ್ಡೆಯ ಸೇನೆಯವರು ಬಂಗ್ರ ಮಂಜೇಶ್ವರದ ಬಸದಿಗೂ, ಕಲ್ಯಾಣಪ್ಪನ ಸೇನೆಯವರು ಶ್ರೀಮದನಂತೇಶ್ವರ ದೇವಸ್ಥಾನದ ಅಂಗಣಕ್ಕೂ ಊಟಕ್ಕೆ ಹೊರಟರು. ಬ್ಯಾರಿಗಳ ಹಾಗೂ ಬಾಕುಡರ ಸೇನೆಗೆ ಉದ್ಯಾವರ ಮಾಡದ ಮೈದಾನದಲ್ಲಿ ಊಟದ ಏರ್ಪಾಡಾಯಿತು.

ಊಟ ಮುಗಿಸಿ ಎಲ್ಲ ಸೈನಿಕರೂ ರಥಬೀದಿಯಲ್ಲಿ ಸೇರುವಾಗ ಸಂಜೆಯಾಯಿತು. ದೇವಯ ಭಂಡಾರಿಗಳ ಜನ, ಆದಿ ಸೆಟ್ಟಿಯ ಕೆಲಸದವರು, ಕುಂಞಲಿ ಬ್ಯಾರಿಯ ಹಮ್ಜದರು ದೇವಸ್ಥಾನದ ಕಟ್ಟೆಗೆ ಹತ್ತು-ಹದಿನೈದು ಬೆತ್ತದ ಪೆಟ್ಟಿಗೆಗಳಲ್ಲಿ ಇಕ್ಕೇರಿಯ ಪಗೋಡ, ಸುಲ್ತಾನನ ರೂಪಾಯಿ, ವಿಜಯನಗರ ಕಾಲದ ರಾಮಟಂಕೆಗಳನ್ನು ತಂದು ಕಾಣಿಕೆ ಕೊಟ್ಟರು. ಕಲ್ಯಾಣಪ್ಪ ಸೇನೆಯ ಬೋವಿಯನ್ನು ಕರೆದು ಒಬ್ಬೊಬ್ಬ ಸೈನಿಕನಿಗೆ ಹತ್ತತ್ತು ಬೆಳ್ಳಿಯ ರೂಪಾಯಿ, ಚಿನ್ನದ ರಾಮಟಂಕೆಗಳನ್ನು ಕೊಡಲು ಹೇಳಿದನು. ಈ ಗೌಜಿಯಲ್ಲಿರುವಾಗ ಬೆಂಗರೆಯ ಹಾದಿಯಿಂದ “ಅಲ್ಲಾಹು ಅಕ್ಬರ್” ಎಂದು ಜಯಕಾರ ಹಾಕಿಕೊಂಡು ಶವಯಾತ್ರೆಯೊಂದು ಕುಂಬಳೆಯ ಸೇನೆಯ ಉಸ್ತುವಾರಿಯಲ್ಲಿ ರಥಬೀದಿಯಲ್ಲೇ ಬಂದು ದೇವಸ್ಥಾನದ ಹಿಂದಿನ ಗುಡ್ಡೆಕೇರಿಗೆ ಹೋಗುತ್ತಿತ್ತು.

ಕಲ್ಯಾಣಪ್ಪ ವಿಚಾರಿಸಿದಾಗ, ಹಿಂದಿನ ರಾತ್ರಿ ನಡೆದ ಅತ್ಯಾಚಾರದ ವಿಷಯ ತಿಳಿಯಿತು. ತಲೆ ತಗ್ಗಿಸಿದ ಕಲ್ಯಾಣಪ್ಪನಿಗೆ ತಾನು ಮಾಡದ ಇಂತಹ ಆದೆಷ್ಟೋ ಕೃತ್ಯಗಳಿಗೆ ತಾನು ಹೊಣೆಗಾರನಾಗಬೇಕಾಯಿತಲ್ಲಾ ಒಂದು ದುಃಖವಾಯಿತು. ಎದ್ದು ಬಂದವನು ಶವಗಳ ಬಳಿ ಬಂದನು. ಒಂದಕ್ಕೆ ತಾನು ಹೊದ್ದುಕೊಂಡಿದ್ದ ಶಾಲು, ಮತ್ತೊಂದು ತನ್ನ ಮುಂಡಾಸು ಬಟ್ಟೆಯನ್ನು ಹೊದೆಸಿ ಕೈ ಮುಗಿದನು. ಶವಗಳ ಮಂದಿದ್ದ ಸರದಾರನನ್ನು ಕರೆಯಿಸಿ ವಿವರ ಕೇಳಿದಾಗ, ಅಲ್ಲೇ ಇದ್ದ ಸುಬ್ರಾಯ ಹೆಗ್ಡೆ ಆ ಯುವಕನ ಪರಿಚಯ ಮಾಡಿಕೊಟ್ಟ. ಮಿತ್ತಬೈಲು ಮಂಜಣಾಳ್ವನನ್ನು ನೋಡಿ ಕಲ್ಯಾಣಪ್ಪನಿಗೆ ಖುಷಿಯಾಯಿತು.
“ಮಂಜಣಾಳ್ವರೇ, ಬಹಳ ಕೇಳಿದ್ದೇನೆ ನಿಮ್ಮ ಬಗ್ಗೆ. ಭೇಟಿಯಾಗಿ ಬಹಳ ಸಂತೋಷವಾಯಿತು. ನಿಮ್ಮಂತಹವರು ನಮ್ಮ ಜೊತೆ ಇರಬೇಕಾಗಿತ್ತು. ಆ ಸುದ್ದಿ ಬಿಡಿ, ಈಗ ಈ ಹೆಣ್ಣು ಮಕ್ಕಳ ಸಾವಿಗೆ ಕಾರಣರಾದ ಸೈನಿಕರನ್ನು ಹಿಡಿಯಲು ಆಗಲಿಲ್ಲವೇ ಆಳ್ವರೇ?’’
“ಹಿಡಿಯಲು ಆಗದೆ ಏನು ಸ್ವಾಮಿಗಳೇ. ಹಿಡಿದು ಕಟ್ಟಿ ಹಾಕಿದ್ದೇನೆ. ಇಂದಿನ ಕಾರ್ಯ ಶಾಂತಿಯಲ್ಲಿ ನಡೆಯಲಿ. ನಾಳೆ ಸೇನೆಯ ನ್ಯಾಯದಂತೆ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸಬೇಕೆಂದಿದ್ದೇನೆ.’’
“ಏನು? ಅವರ ತಪ್ಪಿನಲ್ಲಿ ಸಂಶಯ ಇದೆಯೇ ಆಳ್ವರೇ? ಪಾಪಿಗಳು ಭೂಮಿಯ ಮೇಲೆ ಇರುವಷ್ಟು ಹೊತ್ತು ಈ ಭೂ ತಾಯಿಗೆ ಭಾರ ಹೆಚ್ಚು. ಅನ್ಯಾಯದ ನೋವೂ ಹೆಚ್ಚು. ತಡ ಮಾಡಬೇಡಿ. ಯಾರವರು ಹೇಳಿ, ನನ್ನ ಸೇನೆಯವರಾದರೆ ನಾನೇ ನಿಂತು ಶಿಕ್ಷೆ ಕೊಡಿಸುವೆ.’’
“ನಿಮ್ಮ ಜನರೇ ಸ್ವಾಮಿ! ನೋಡುತ್ತಿರಾ?’’
ಮಂಜಣಾಳ್ವರು ಬೀರಣ್ಣ ಬಂಟನನ್ನೂ, ಬದುಕುಳಿದ ಅವನ ಸೈನಿಕರನ್ನೂ ದೇವಯ ಭಂಡಾರಿಗಳ ಹಿತ್ತಲಿನಿಂದ ತರಿಸಿ ಕಲ್ಯಾಣಸ್ವಾಮಿಯ ಮುಂದೆ ನಿಲ್ಲಿಸಿದಾಗ ಕಲ್ಯಾಣಸ್ವಾಮಿಗೆ ಆಶ್ಚರ್ಯವಾಯಿತು.
“ಬೀರಣ್ಣ ಬಂಟ! ನಿನ್ನ ಬಗ್ಗೆ ಕೆಲವು ದೂರುಗಳು ಬಂದಿದ್ದವು. ನಂಬಲಿಲ್ಲ ನಾನು. ಪಾಡಿ ಸುಬ್ರಾಯ ಶಾನುಬೋಗರ ತಲೆ ತಂದು ಕೊಡುತ್ತೇನೆ ಎಂದು ಹೊರಟವ ಇದನ್ನಾ ಮಾಡಿದ್ದು? ಇವನಿಗೆ, ಈ ನೀಚ ಕೆಲಸ ಮಾಡಲು ಹೇಗೆ ಕೈ ಬಂತು ಆಳ್ವರೇ? ಥೂ ನಾಯಿ, ಇನ್ನೂ ನೀನು ಬದುಕುಳಿದಿದ್ದಿಯಲ್ಲಾ!’’
“ಈ ನಾಯಿ ಒಂದು ಮರ್ಯಾದಸ್ಥ ಮನೆಯ ಹೆಣ್ಣಿನ ಸಿರಿಮುಡಿಗೆ ಕೈ ಹಾಕಿದಾಗ ಕೈಯನ್ನೇ ಕಡಿದು ಬಲಿ ಕೊಟ್ಟಿದ್ದೇನೆ ಸ್ವಾಮಿ. ಈ ಎರಡು ಪಾಪದ ಹೆಣ್ಣು ಮಕ್ಕಳ ಮಾನ ಲೂಟಿ ಮಾಡಿ ಅವರನ್ನು ತನ್ನ ನಾಯಿಗಳಿಗೆ ಹಾಕಿದವನು ಇದೇ ಪಾಪಿ.”
“ಅವನ ತಲೆ ತೆಗೆಯದೆ ಯಾಕೆ ಬಿಟ್ಟಿದ್ದೀರಿ ಆಳ್ವರೇ?’’
“ತಲೆ ತೆಗೆಯುವುದು ಬಹಳ ಸುಲಭ ಸ್ವಾಮಿ. ಈ ಪಾಪಿ ತಾನು ಮಾಡಿದ ಪಾಪವನ್ನು ನೆನೆಯುತ್ತಾ, ಆ ಹೆಣ್ಣು ಮಕ್ಕಳು ನರಳಿ ಆತ್ಮಹತ್ಯೆ ಮಾಡಿಕೊಂಡಂತೆ ನರಳಿ ಸಾಯಬೇಕು ಸ್ವಾಮಿ.’’
“ಆಳ್ವರೇ, ಬೀರಣ್ಣ ನನ್ನ ಹೆಸರು ಹೇಳಿಕೊಂಡು ಇಂತಹ ಎಷ್ಟು ಪಾಪ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾನೋ? ನಾನೇ ಇವನಿಗೆ ಶಿಕ್ಷೆ ಕೊಡುವುದು ನ್ಯಾಯ ಅಲ್ಲವೇ ಆಳ್ವರೇ? ಏನು ಹೇಳುತ್ತೀರಿ ನೀವು ಇದಕ್ಕೆ?’’
ಕಲ್ಯಾಣಪ್ಪ ಆರು ಸೈನಿಕರಿಗೂ ಬೀರಣ್ಣ ಬಂಟನಿಗೂ ಗಲ್ಲು ಶಿಕ್ಷೆ ವಿಧಿಸಿದ. ಗುಡ್ಡದ ಮೇಲಿನ ಆಲದ ಮರದಲ್ಲಿ ಊರಿಗೆ ಕಾಣುವಂತೆ ಮೂರು ದಿನ ಹೆಣಗಳನ್ನು ನೇತಾಡಿಸುವಂತೆ ಹೇಳಿದ.

“ಕಲ್ಯಾಣಪ್ಪನ ರಾಜ್ಯದಲ್ಲಿ ಅನ್ಯಾಯಕ್ಕೆ ದಾರಿಯಿಲ್ಲ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮಾಡಿದವರಿಗೆ ಇದುವೇ ಶಿಕ್ಷೆ. ಅದಕ್ಕೆ ಈ ಹೆಣಗಳು ಉದಾಹರಣೆಯಾಗಲಿ.’’
ಬೀರಣ್ಣ ಬಂಟ ಮತ್ತು ಆರು ಸೈನಿಕರ ಹೆಣಗಳು ಆಲದ ಮರದಲ್ಲಿ ನೇತಾಡಿದವು.
“ಆಳ್ವರೇ, ನಿಮ್ಮಂತಹ ವೀರ ಇಂದಲ್ಲ ನಾಳೆ ನನ್ನ ಜೊತೆಗೆ ಬರಬೇಕು. ನಾನು ಈ ಪರದೇಶಿಗಳನ್ನು ಓಡಿಸಿ ಜನ ಕಳುಹಿಸುವೆ. ಆಗ ಈ ರಾಜ್ಯವನ್ನು ಸುಭಿಕ್ಷೆಯಲ್ಲಿ ಆಳಲು ನನಗೆ ನಿಮ್ಮಂತಹ ಯುವಕರ ಸಹಾಯ ಬೇಕು. ಆಗ ಇಲ್ಲ ಎನ್ನಬೇಡಿ. ಸುಬ್ರಾಯ ಶಾನುಭೋಗರಿಗೂ, ಕೋಚಣ್ಣಾಳ್ವರಿಗೂ ನನ್ನ ನಮಸ್ಕಾರ ಹೇಳಿ. ಕಲ್ಯಾಣಪ್ಪ ಪರದೇಶಿಗಳನ್ನು ಈ ರಾಜ್ಯದಿಂದ ಓಡಿಸಲು ತನ್ನ ಜೀವ ಒತ್ತೆಯಿಟ್ಟು ಹೋರಾಡುತ್ತಾನೆ. ಸತ್ತರೂ ಸರಿ, ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು. ಪರದೇಶಿಗಳು ಇಲ್ಲಿಂದ ತೊಲಗಬೇಕು. ಆ ಇಬ್ಬರು ಹಿರಿಯರನ್ನು ಶಾಂತಿಯ ಕಾಲದಲ್ಲಿ ಭೇಟಿಯಾಗುತ್ತೇನೆಂದು ಹೇಳಿ. ನನಗೆ ಗೊತ್ತಿದೆ, ಅವರಿಬ್ಬರೂ ಎಲ್ಲೋ ನಿಂತು ನನ್ನನ್ನು ನೋಡುತ್ತಿದ್ದಾರೆಂದು. ಹರಹರ ಮಹಾದೇವಾ!’’
ಕಲ್ಯಾಣಸ್ವಾಮಿ ‘ಹರಹರ ಮಹಾದೇವ’ ಎಂದು ಹೇಳಿಕೊಂಡು ತನ್ನ ಸೈನ್ಯವನ್ನು ಬಂದ ದಾರಿಯಲ್ಲಿಯೇ ಪಾಣೆಮಂಗಳೂರಿಗೆ ಕಳುಹಿಸಿದ. ಸುಬ್ರಾಯ ಹೆಗ್ಡೆಯ ಸೇನೆಯನ್ನು ಉದ್ಯಾವರ – ತಲಪಾಡಿಯಾಗಿ ಉಳ್ಳಾಲದ ಕಡವಿಗೆ ಕಳುಹಿಸಿದ. ಪೇಟೆಯಲ್ಲಿ ನಿಂತಿದ್ದ ‘ಜೈ ದುರ್ಗೆ ಜೈ ಮಂಜಣಾಳ್ವ, ಹರಹರ ಮಹಾದೇವ, ಜೈ ಕಲ್ಯಾಣ ಸ್ವಾಮಿ’ ಎನ್ನುತ್ತಾ ಜಯಕಾರ ಹಾಕಿತು.


ಸುಬ್ರಾಯ ಹೆಗ್ಡೆಯ ದಂಡು ಉಳ್ಳಾಲ ಕಡವಿಗೆ ತಲುಪಿದಾಗ ಕಲ್ಯಾಣಪ್ಪನ ದಂಡು ಪಾಣೆಮಂಗಳೂರಿಗೆ ಬಂದು ನಂದಾವರದ ಲಕ್ಷ್ಮಪ್ಪ ಬಂಗರಸನನ್ನು ಸೇರಿಕೊಂಡಿತು. ಕಲ್ಯಾಣಪ್ಪನ ದಂಡು ನಂದಾವರ ಅರಮನೆಯ ಎದುರು ಬೀಡು ಬಿಟ್ಟು ಲಕ್ಷ್ಮಪ್ಪ ಬಂಗರಸನಲ್ಲಿ ಊಟ – ತಿಂಡಿ ಮುಗಿಸಿ ಮರುದಿನ ಬೆಳಗ್ಗೆ ಬಂಟ್ವಾಳಕ್ಕೆ ಬಂದು ತಾಲೂಕು ಕಚೇರಿಯನ್ನು ಲೂಟಿ ಮಾಡಿ, ಲಕ್ಷಣಮಪ್ಪ ಬಂಗರಸನ ಜೊತೆ ಮಂಗಳೂರಿನ ಪೇಟೆಗೆ ನಡೆಯಿತು. ಕಲ್ಯಾಣಪ್ಪ ಎಷ್ಟು ಪ್ರಯತ್ನಿಸಿದರೂ ಅವನಿಗೆ ಊರು ಲೂಟಿ ಮಾಡುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಒಂದೇ ಒಂದು ವಿಷಯ ಎಂದರೆ, ಹೆಣ್ಣು ಮಕ್ಕಳ ತಂಟೆಗೆ ಹೋಗಲು ಸೈನಿಕರು ಹೆದರುತ್ತಿದ್ದರು. ಬೀರಣ್ಣ ಬಂಟನನ್ನು ಗಲ್ಲಿಗೇರಿಸಿದ ಸುದ್ದಿ ಅವರಿಗೆ ತಿಳಿದಿತ್ತು.

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ
ಡಿ. ಕೆ. ಚೌಟರು ಖ್ಯಾತ ತುಳು ಸಾಹಿತಿ. ಕಾಸರಗೋಡಿನ ದರ್ಬೆಯ ಕೃಷ್ಣಾನಂದ ಚೌಟರು ‘ಆನಂದಕೃಷ್ಣ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಾರೆ. ವಿದೇಶಗಳಲ್ಲಿ ಉದ್ಯಮಿಯಾಗಿದ್ದು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ಮಿತ್ತಬೈಲ್ ಯಮುನಕ್ಕ’ ಕಾದಂಬರಿ ತುಳುವಿನಲ್ಲಿ ರಚಿತವಾಗಿ ಮುಹಮ್ಮದ್ ಕುಳಾಯಿ ಅವರಿಂದ ಕನ್ನಡಕ್ಕೆ ಅನುವಾದಗೊಂಡಿದೆ. ಈ ಅನುವಾದದ ಕೆಲವು ಪುಟಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಕಾದಂಬರಿ ಇಂಗ್ಲಿಷಿಗೂ ಅನುವಾದಗೊಂಡಿದೆ.
ಚೌಟರು ತುಳುವಿನ ಪ್ರಸಿದ್ಧ ನಾಟಕಕಾರರು. ಅವರ ನಾಟಕಗಳು : ಧರ್ಮೆತ್ತಿ ಮಾಯೆ, ಉರಿ ಉಷ್ಣದ ಮಾಯೆ, ಪಿಲಿ ಪತ್ತಿ ಗಡಸ್, ರಡ್ಡ್ ಮಾಯೊದ ನಾಟಕೊಲು, ಮೂಜಿಮುಟ್ಟು ಮೂಜಿ ಲೋಕ. ಕರಿಯವಜ್ಜೆರೆನ ಕತೆಕುಲು, ಪತ್ತ್ ಪಜ್ಜೆಲು ಎಂಬ ತುಳು ಕೃತಿಗಳನ್ನೂ ಅವರು ರಚಿಸಿದ್ದಾರೆ.
ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಮುಹಮ್ಮದ್ ಕುಳಾಯಿ ಖ್ಯಾತ ಕನ್ನಡ ಕತೆಗಾರ ಹಾಗೂ ಕಾದಂಬರಿಕಾರರು. ‘ಕುಚ್ಚಿಕಾಡಿನ ಕಪ್ಪು ಹುಡುಗ’ ಮುಂತಾದ ಮೂರು ಕಥಾಸಂಕಲನಗಳು, ‘ಕಾಡಂಕಲ್ಲ್ ಮನೆ’ ಎಂಬ ಪ್ರಶಸ್ತಿವಿಜೇತ ಕಾದಂಬರಿ ಸಹಿತ ಹಲವು ಕೃತಿಗಳನ್ನು ಪ್ರಕಟಿಸಿರುವ ಮುಹಮ್ಮದ್ ಕುಳಾಯಿ ಬ್ಯಾರಿ ಭಾಷೆಯಲ್ಲಿಯೂ ಬರೆಯುತ್ತಾರೆ. ಅವರು ಅನುವಾದದಲ್ಲೂ ಸಿದ್ಧಹಸ್ತರು. ವೃತ್ತಿಯಲ್ಲಿ ಪತ್ರಕರ್ತರು, ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದಾರೆ.
ಡಿ.ಕೆ.ಚೌಟರ ನಿರೂಪಣೆಯಲ್ಲಿ ಕಲ್ಯಾಣಪ್ಪನ ಕ್ರಾಂತಿ:
ಕಲ್ಯಾಣಸ್ವಾಮಿಯ ನೇತೃತ್ವದ ಕ್ರಾಂತಿಯನ್ನು ವಸ್ತುವಾಗಿ ಉಳ್ಳ ಕಾದಂಬರಿಗಳು ನಿರಂಜನರ ‘ಕಲ್ಯಾಣಸ್ವಾಮಿ’, ಪ್ರಭಾಕರ ನೀರ್ಮಾರ್ಗರ ‘ಮಂಗಳೂರ ಕ್ರಾಂತಿ’ ಮತ್ತು ಪ್ರಭಾಕರ ಶಿಶಿಲರ ‘ನದಿ ಎರಡರ ನಡುವೆ’. ಡಿ. ಕೆ. ಚೌಟರ ತುಳು ಕಾದಂಬರಿ ‘ಮಿತ್ತಬೈಲ್ ಯಮುನಕ್ಕ’ ಕೂಡಾ ಕಲ್ಯಾಣಪ್ಪನ ಕಾಲದಲ್ಲಿ ಕುಂಬಳೆ ಸೀಮೆಯಲ್ಲಿ ನಡೆದ ಸಂಚಲನಗಳನ್ನು ಪ್ರಧಾನವಾಗಿ ಚಿತ್ರಿಸುತ್ತದೆ.
ಡಾ. ಡಿ.ಕೆ.ಚೌಟರ ‘ಮಿತ್ತ ಬೈಲ್ ಯಮುನಕ್ಕ’ ಕಾದಂಬರಿಯಲ್ಲಿ ಕಲ್ಯಾಣಪ್ಪನ ಸೈನ್ಯ ಕಾಸರಗೋಡಿನ ಪ್ರದೇಶಗಳಲ್ಲಿ ಹಾದುಹೋಗುವಾಗ ಕೆಲವು ಪ್ರಮುಖ ಸಂಘರ್ಷಗಳು ನಡೆಯುತ್ತವೆ. ಕಾದಂಬರಿಯ ನಾಯಕ, ಕಾಲ್ಪನಿಕ ವ್ಯಕ್ತಿ ಮಂಜಣಾಳ್ವ ಈ ದಂಡನ್ನು ಎದುರಿಸುವ ಪ್ರಮುಖ ವೀರನಾಗುತ್ತಾನೆ. ನೈಜ ವ್ಯಕ್ತಿಗಳಾದ ಸುಬ್ಬಯ್ಯ ಶಾನುಭೋಗರು, ಕಲ್ಯಾಣಪ್ಪ, ಬೀರಣ್ಣ ಬಂಟ ಮುಂತಾದವರ ಜತೆಗೆ ಇವನು ವ್ಯವಹರಿಸುತ್ತಾನೆ. ಸುಬ್ರಾಯ ಶಾನುಭೋಗರ ಸಾಹಸದ ಕತೆ ಇಲ್ಲಿ ಗೌಣವಾಗಿ, ಕಾದಂಬರಿಯ ನಾಯಕ ವಿಜೃಂಭಿಸುತ್ತಾನೆ, ಮತ್ತು ಇದು ಸೃಜನಶೀಲ ಕೃತಿಯೊಂದರಲ್ಲಿ ಸಹಜವಾಗಿದೆ.
ಡಿ. ಕೆ. ಚೌಟರ ಕಾದಂಬರಿಯಲ್ಲಿಯೂ ಒಬ್ಬ ಪುಂಡನ ಹೆಸರು ಬೀರಣ್ಣ ಬಂಟ. ಇನ್ನೊಬ್ಬನ ಹೆಸರು ಚಿರಂಜೀವಿ ಸುಬ್ರಾಯ. ಹೀಗೆ ಅವರು ಐತಿಹ್ಯಕಾರರಲ್ಲಿದ್ದ ಗೊಂದಲವನ್ನು ಅವರು ಬೇರೆ ಬೇರೆ ವ್ಯಕ್ತಿಗಳೆಂಬಂತೆ ಚಿತ್ರಿಸಿ ಪರಿಹರಿಸಿಕೊಂಡಿದ್ದಾರೆ. ಆದರೆ ಅವರು ಚಿತ್ರಿಸಿರುವ ಘಟನೆಗಳು ಕಾದಂಬರಿಯ ಅಗತ್ಯಕ್ಕೆ ತಕ್ಕಹಾಗೆ ಕಾಲ್ಪನಿಕವಾಗಿವೆ. ಹಾಗಾಗಿ ಲೇಖಕರ ಆಶಯದ ದೃಷ್ಟಿಯಿಂದ ಚೌಟರು ಹಾಗೂ ಪ್ರಭಾಕರ್ ನೀರ್ ಮಾರ್ಗರ ಕಾದಂಬರಿಗಳನ್ನು ಗಮನಿಸಬೇಕಾಗುತ್ತದೆ. ಚೌಟರು ಮತ್ತು ಪ್ರಭಾಕರ ನೀರ್ ಮಾರ್ಗ ಈ ಕಾಲದಲ್ಲಿ ನಿಂತು ಹಿನ್ನೋಟದಿಂದ ಕಾದಂಬರಿ ರಚಿಸಿರುವ ಕಾರಣ ಅವರು ಘಟನೆಗಳನ್ನು ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ನಿರೂಪಿಸಿರುವುದು ಕುತೂಹಲಕರವಾಗಿದೆ.
ವಸಾಹತು ಕಾಲದ ಕತೆಗಳನ್ನು ಈಗ ಬರೆಯುವವರಿಗೆಲ್ಲ ಬ್ರಿಟಿಷರ ವಿರುದ್ಧ ಕತ್ತಿ ಎತ್ತಿದ್ದವರೆಲ್ಲ ಹುತಾತ್ಮರೆಂದು ಕಾಣುವ ಅಪಾಯವಿದೆ. ಅವರ ಹೋರಾಟದ ಉದ್ದೇಶ ಸ್ಪಷ್ಟವಾಗದೆ ಅಂತಹ ಹೋರಾಟಗಾರರ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲು ಸಾಧ್ಯವಾಗದು. ಡಿ. ಕೆ. ಚೌಟರು ತಮ್ಮ ಕಾದಂಬರಿಯಲ್ಲಿ ಈ ಸಂದಿಗ್ಧವನ್ನು ಪರಿಹರಿಸಲು ಬಹಳ ಶ್ರಮಪಟ್ಟಿದ್ದಾರೆ. ಬ್ರಿಟಿಷರನ್ನು ವಿರೋಧಿಸಬೇಕು ಅನ್ನುವುದು ಸರಿ, ಆದರೆ ತಕ್ಷಣ ಆಗಬೇಕಾದುದು ಊರೂರು ದೋಚುವ ಪುಂಡರನ್ನು ಸೋಲಿಸಬೇಕಾದುದು, ಅದಕ್ಕಾಗಿ ನಾವು ಬ್ರಿಟಿಷರ ಜತೆಗೆ ಕೈಜೋಡಿಸಲೇ ಬೇಕಾಗುತ್ತದೆ ಎಂದು ಕುಂಬಳೆಯ ರಾಮಂತರಸರು, ಕೂಡಲು ಸುಬ್ಬಯ್ಯ ಶಾನುಭೋಗರು (ಐತಿಹಾಸಿಕ ವ್ಯಕ್ತಿಗಳು), ಮಿತ್ತಬೈಲಿನ ಮಂಜಣ್ಣಾಳ್ವ ಎಂಬ (ಕಾಲ್ಪನಿಕ ಸೇನಾಧಿಪತಿ), ಮಂಜೇಶ್ವರದ ವರ್ತಕರು – ಮುಂತಾದವರೆಲ್ಲ ತೀರ್ಮಾನಿಸುತ್ತಾರೆ.
ಡಿ. ಕೆ. ಚೌಟರು ಕಲ್ಯಾಣಸ್ವಾಮಿಯ ಜತೆಗೆ ಹೋರಾಡಿ, ಬ್ರಿಟಿಷರಿಗೆ ಸೆರೆಸಿಕ್ಕಿ ಶಿಕ್ಷೆಗೊಳಗಾದ ಬೀರಣ್ಣ ಬಂಟ ಎಂಬ ಐತಿಹಾಸಿಕ ವ್ಯಕ್ತಿಯನ್ನು ಲಂಪಟನೆಂಬಂತೆ ಚಿತ್ರಿಸಿದ್ದಾರೆ. ಸ್ತ್ರೀಯರ ಮಾನಭಂಗ ಮಾಡಿದ ಕಾರಣಕ್ಕಾಗಿ ಬೀರಣ್ಣ ಬಂಟನನ್ನು ಮಂಜೇಶ್ವರದಲ್ಲಿಯೇ ಕಲ್ಯಾಣ ಸ್ವಾಮಿಯ ನಿರ್ದೇಶನದಂತೆಯೇ ಗಲ್ಲಿಗೇರಿಸಲಾಯಿತು ಎಂದು ಚೌಟರ ಕಾದಂಬರಿ ಹೇಳುತ್ತದೆ. ಅದಕ್ಕಿಂತ ಮುನ್ನವೇ ಅವನ ಕೈಗಳನ್ನು ಕುಂಬಳೆ ಅರಸರ ಸೇನಾಧಿಪತಿ ಮಂಜಣಾಳ್ವ ಕಡಿದುಹಾಕಿದ್ದನೆಂದು ಈ ಕಾದಂಬರಿಯಲ್ಲಿದೆ. ಆದರೆ ಬೀರಣ್ಣ ಬಂಟ ಮಂಗಳೂರಿನ ಸೆರೆಮನೆಯಲ್ಲಿದ್ದು ಬ್ರಿಟಿಷರ ವಿಚಾರಣೆ ಎದುರಿಸಿ ಶಿಕ್ಷೆ ಪಡೆದ ಬಗ್ಗೆ ದಾಖಲೆಗಳಿವೆ. ಶಿಕ್ಷೆ ಮಾತ್ರ ಆಮರಣ ಜೈಲು ಶಿಕ್ಷೆಯೋ ಮರಣದಂಡನೆಯೋ ಎನ್ನುವುದರಲ್ಲಷ್ಟೇ ಸಂಶಯವಿದೆ. ಚಿರಂಜೀವಿ ಸುಬ್ರಾಯನ ಬಗ್ಗೆಯೂ ಚೌಟರು ತಮ್ಮದೇ ಆದ ವಿವರಣೆಗಳನ್ನು ನೀಡಿದ್ದಾರೆ. ಡಿ. ಕೆ. ಚೌಟರ ಕಾದಂಬರಿಯ ಚಿರಂಜೀವಿ ಸುಬ್ರಾಯ ಬ್ರಿಟಿಷರ ವಿರೋಧಿ, ಆದರೆ ಕೆಟ್ಟವನೇನಲ್ಲ. ಬೇಕಲ ರಾಮನಾಯಕರು ಅವನನ್ನು ಪುಂಡನೆಂದೇ ಪರಿಗಣಿಸುವುದನ್ನು ಈಗಾಗಲೇ ನೋಡಿದ್ದೇವೆ.