ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ ಏನೇನು ಅನುಕೂಲ, ಅನಾನುಕೂಲಗಳಿವೆ ಎಂದು ನೋಡಲು ಕೂಡ ಹೋಗದೆ ಮನೆ ಹೊರಗಿನಿಂದ ಕಿಟಕಿಯ ಸಂದಿಯ ಮೂಲಕ ಕಂಡಷ್ಟನ್ನು ನೋಡಿಕೊಂಡು ನಮ್ಮ ತಂದೆ ಮನೆಯನ್ನು ಒಪ್ಪಿಕೊಂಡು ಬಂದಿದ್ದರು. ಆ ಮನೆಯಲ್ಲಿ ನಾವು ನಾನಾ ರೀತಿಯ ಅನಾನುಕೂಲಗಳನ್ನು ಎದುರಿಸಬೇಕಾಯಿತು. ಇದರ ಬಗ್ಗೆ ನಮ್ಮ ತಾಯಿ ಯಾವಾಗಲೂ ಗೊಣಗುತ್ತಿದ್ದರು. ಅದಕ್ಕೆ ನಮ್ಮ ತಂದೆ ಸೊಪ್ಪು ಹಾಕುತ್ತಿರಲಿಲ್ಲ.
ಕೆ. ಸತ್ಯನಾರಾಯಣ ಅವರ ಹೊಸ ಪುಸ್ತಕ ‘ಬಾಡಿಗೆ ಮನೆಗಳ ರಾಜಚರಿತ್ರೆ’ ಯಿಂದ ಲೇಖನ ನಿಮ್ಮ ಓದಿಗೆ

 

ಸ್ವಂತ ಆಸ್ತಿ ಬೇಡವೆಂದ ತಂದೆ

ಬಾಡಿಗೆ ಮನೆಗಳ ಈ ರಾಜಚರಿತ್ರೆಯ ಮೊದಲ ಅಧ್ಯಾಯವನ್ನು ನಮ್ಮ ತಂದೆಗೆ ಆಸ್ತಿ ಮತ್ತು ಮನೆಯನ್ನು ಕುರಿತು ಇದ್ದ ನಿಲುವುಗಳನ್ನು ಚರ್ಚಿಸುತ್ತಾ ಪ್ರಾರಂಭಿಸುವುದೇ ಸರಿಯಾದದ್ದು ಮತ್ತು ಅನಿವಾರ್ಯವಾದದ್ದು ಕೂಡ.

ನಮ್ಮ ತಂದೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹಿಂದೆಯೇ ಹೇಳಿದ್ದೇನೆ. ನಿವೃತ್ತಿಯಾಗುವ ಹೊತ್ತಿಗೆ ಗೆಜೆಟಡ್ ಅಲ್ಲದ ಕ್ಲಾಸ್ ಟು ಹಂತವನ್ನು ತಲುಪಿ ಜಿಲ್ಲಾ ಕೇಂದ್ರಗಳಲ್ಲಿ, ಆರೋಗ್ಯ ನಿರೀಕ್ಷಕರು ಮತ್ತು ಪ್ರಾಥಮಿಕ ಆರೋಗ್ಯ ಕಾರ್ಯಕರ್ತರ ಕೆಲಸಗಳನ್ನು ಮೇಲುಸ್ತುವಾರಿ ಮಾಡುವ ಕೆಲಸದಲ್ಲಿದ್ದರು.

ಅವರು ಒಂದು ಸ್ವಂತ ಮನೆ ಮಾಡಲಿಲ್ಲ. ಸೈಟು ಕೂಡ ಮಾಡಲಿಲ್ಲ. ಅದೊಂದು ಅವಶ್ಯಕತೆ ಎಂದು ಅವರಿಗೆ ಯಾವತ್ತೂ ಅನಿಸಲೇ ಇಲ್ಲ. ಹಾಗೆಂದು ಮಕ್ಕಳಾದ ನಮಗೆ ಕೂಡ ಅನಿಸದಂತೆ ನೋಡಿಕೊಂಡರು. ಆಸ್ತಿವಂತರ ಮನೆತನದ ಹಿನ್ನೆಲೆಯಿಂದ ಬಂದ ನನ್ನ ಹೆಂಡತಿಗೆ ವೈವಾಹಿಕ ಜೀವನದ ಪ್ರಾರಂಭದಲ್ಲಿ ನನಗೆ ಮನೆ, ಸೈಟು ಮಾಡುವುದರ ಬಗ್ಗೆ ಇದ್ದ ಉದಾಸೀನ, ನಿರ್ಲಕ್ಷ್ಯ ಕುರಿತಂತೆ ಮೊದಲು ಆಶ್ಚರ್ಯವೂ, ನಂತರ ಬೇಸರವೂ ಆಗಿತ್ತು. ನಾನು ಮೂವತ್ತೈದನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿದಾಗಲೂ ನಮ್ಮ ತಂದೆಗೆ ಅದರ ಬಗ್ಗೆ ವಿಶೇಷವಾದ ಉತ್ಸಾಹವಾಗಲೀ, ಹೆಮ್ಮೆಯಾಗಲೀ ಇರಲಿಲ್ಲ. ಜಮೀನ್ದಾರಿ ಹಿನ್ನೆಲೆಯಿಂದ ಬಂದ ನನ್ನ ತಾಯಿಗೇ ಇದೆಲ್ಲದರ ಬಗ್ಗೆ ಹೆಚ್ಚು ಆಸಕ್ತಿ, ಕುತೂಹಲಗಳಿದ್ದವು.

ನಮ್ಮ ತಂದೆಗೆ ಮನೆ ಕಟ್ಟಲು, ಸೈಟು ಕೊಳ್ಳಲು ಬೇಕಾದ ಆರ್ಥಿಕ ಸಂಪನ್ಮೂಲಗಳಿರಲಿಲ್ಲ. ಸರಕಾರಿ ನೌಕರಿಯಲ್ಲಿದ್ದರೂ ಬರುವ ಸಂಬಳ ಬೆಳೆಯುತ್ತಿದ್ದ, ಓದುತ್ತಿದ್ದ ನಾಲ್ಕು ಮಕ್ಕಳನ್ನು ನಿರ್ವಹಿಸಲು, ಪ್ರೋತ್ಸಾಹಿಸಲು ಸಾಕಾಗುತ್ತಿರಲಿಲ್ಲ. ಈ ಜವಾಬ್ದಾರಿಯೇ ಅವರಿಗೆ ವಿಪರೀತವೆನಿಸಿತ್ತು ಮತ್ತು ಇಷ್ಟಕ್ಕೇ ಅವರು ಪ್ರಾಮಾಣಿಕವಾಗಿ ಕಂಗಾಲಾಗಿದ್ದರು. ಆದರೆ ಸಂಪನ್ಮೂಲದ ಕೊರತೆಯ ಕಾರಣವನ್ನು ನಮ್ಮ ತಂದೆ ಮುಂದೆ ಮಾಡುತ್ತಿರಲಿಲ್ಲ. ಆಸ್ತಿ, ಭೂಮಿ, ಕಾಣಿ, ಇದೆಲ್ಲ ಇದ್ದರೆ ಮುಂದೆ ಮಕ್ಕಳಲ್ಲಿ ಒಡಕು-ಮನಃಸ್ತಾಪ ಬಂದೇ ಬರುತ್ತದೆ; ಅದೆಲ್ಲ ಬೇಡವೆಂದೇ ನಾನು ಇದಕ್ಕೆಲ್ಲ ಕೈ ಹಾಕಲಿಲ್ಲ ಎಂದು ನನಗೆ ಒಮ್ಮೆ ಗಂಭೀರವಾಗಿಯೇ ಹೇಳಿದ್ದರು. ಈ ಕಾರಣಕ್ಕಾಗಿ ಅವರಿಗೆ ಯಾವ ರೀತಿಯ ಕೀಳರಿಮೆಯಿಲ್ಲದೆ ಹೋದರೂ ಬಂಧುಗಳ ನಡುವೆ ನಡೆಯುತ್ತಿದ್ದ ಆಸ್ತಿಪಾಸ್ತಿ ಜಗಳಗಳು, ಕ್ಯಾತೆಗಳು ಮತ್ತು ಪಾಲುದಾರಿಕೆಯ ವಿವಾದಗಳ ಬಗ್ಗೆ ಮಾತ್ರ ತುಂಬಾ ಆಸಕ್ತಿಯಿತ್ತು. ಕೆಲವೊಮ್ಮೆ ಇಂತಹ ವಿವಾದಗಳನ್ನು ಅವರೇ ಚಿತಾವಣೆ ಮಾಡಿ ಎಬ್ಬಿಸುತ್ತಿದ್ದರು.

(ಕೆ. ಸತ್ಯನಾರಾಯಣ)

ನಾನು ಬಿ.ಎ. ಓದುತ್ತಿದ್ದಾಗ, ಸರ್ಕಾರಿ ನೌಕರರಿಗೆ ನಗರದ ಹೊರಗೆ ಒಂದು ಬಡಾವಣೆಯಲ್ಲಿ ನಿವೇಶನಗಳನ್ನು ಆದ್ಯತೆಯ ಮೇಲೆ ಕೊಡುವುದಾಗಿ ಒಂದು ಗೃಹನಿರ್ಮಾಣ ಸೊಸೈಟಿಯವರು ಘೋಷಿಸಿದಾಗ, ನನ್ನ ಸಹಪಾಠಿಗಳನೇಕರು ಇದರ ಬಗ್ಗೆ ಕಾಲೇಜಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದರಿಂದ ಪ್ರೇರಣೆ ಪಡೆದ ನಾನು ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದೆ. ಸರಿ, ದಿನನಿತ್ಯದ ಜೀವನ ನಡೆಸುವುದೇ ಕಷ್ಟ. ಇನ್ನು ಸೈಟು ಕೊಳ್ಳುವುದೆಲ್ಲಿ ಬಂತು ಎಂದು ಹತಾಶೆಯ ಮಾತುಗಳನ್ನಾಡಿದ್ದರು. ಮಂಡ್ಯದಲ್ಲಿ ಓದುತ್ತಿದ್ದಾಗ ನನ್ನ ಬಹುಪಾಲು ಗೆಳೆಯರು, ಸಹಪಾಠಿಗಳು ಅನುಕೂಲಸ್ಥ ಒಕ್ಕಲಿಗರ ಕುಟುಂಬಕ್ಕೆ ಸೇರಿರುತ್ತಿದ್ದುದರಿಂದ, ನಾನು ಕೂಡ ಬದುಕುತ್ತಿದ್ದ ಕೆಳ ಮಧ್ಯಮ ವರ್ಗದ ಜೀವನ ಮತ್ತು ಕಲ್ಪಿತ ಬಡತನ ಇವೆರಡರಿಂದಾಗಿ ಮೂಡಿದ ಕೀಳರಿಮೆಯ ಭಾವನೆಗಳನ್ನು ಅನುಭವಿಸುತ್ತಿದ್ದೆ. ಇದೊಂದೇ ಸಲ ಎಂದು ಕಾಣುತ್ತದೆ ನಾನು ತಂದೆಯ ಹತ್ತಿರ ಸೈಟು-ಮನೆ ಕೊಳ್ಳುವುದನ್ನು ಚರ್ಚಿಸಿದ್ದು. ಅವರ ಮಾತಿನಲ್ಲಿದ್ದ ಹತಾಶೆಯಿಂದಾಗಿ ನನ್ನ ಕೀಳರಿಮೆಯ ಭಾವನೆ ಇನ್ನೂ ಹೆಚ್ಚಾಗಿತ್ತು.

ಬಾಡಿಗೆ ಮನೆಗಳು ಕೂಡ ಇಂತಹದೇ ಇರಬೇಕು. ಇಷ್ಟೇ ಅನುಕೂಲಗಳಿರಬೇಕು ಎಂದು ಕೂಡ ನಮ್ಮ ತಂದೆ ನಂಬಿರಲಿಲ್ಲವೆಂದು ಕಾಣುತ್ತದೆ. ಇದು ನಾವು ವಾಸಿಸಿದ ಬಾಡಿಗೆ ಮನೆಗಳ ಸಂಖ್ಯೆ ಮತ್ತು ಸ್ವರೂಪದಿಂದ ಗೊತ್ತಾಗುತ್ತದೆ. ಮಂಡ್ಯ ಮತ್ತು ಗುತ್ತಲಿನಲ್ಲಿ ನಾವು ಸುಮಾರು ಆರು ಮನೆಗಳಲ್ಲಿ ಇದ್ದೆವು; ಎರಡು-ಮೂರು ಮೈಲಿ ಅಂತರದಲ್ಲಿದ್ದವು. ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಕಾಮಗೆರೆಯಂತಹ ಗ್ರಾಮದಲ್ಲಿ ಕೂಡ ನಾವು ಮೂರು ಸಲ ಮನೆ ಬದಲಾಯಿಸಿದ್ದೆವು. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ ಏನೇನು ಅನುಕೂಲ, ಅನಾನುಕೂಲಗಳಿವೆ ಎಂದು ನೋಡಲು ಕೂಡ ಹೋಗದೆ ಮನೆ ಹೊರಗಿನಿಂದ ಕಿಟಕಿಯ ಸಂದಿಯ ಮೂಲಕ ಕಂಡಷ್ಟನ್ನು ನೋಡಿಕೊಂಡು ನಮ್ಮ ತಂದೆ ಮನೆಯನ್ನು ಒಪ್ಪಿಕೊಂಡು ಬಂದಿದ್ದರು. ಆ ಮನೆಯಲ್ಲಿ ನಾವು ನಾನಾ ರೀತಿಯ ಅನಾನುಕೂಲಗಳನ್ನು ಎದುರಿಸಬೇಕಾಯಿತು. ಇದರ ಬಗ್ಗೆ ನಮ್ಮ ತಾಯಿ ಯಾವಾಗಲೂ ಗೊಣಗುತ್ತಿದ್ದರು. ಅದಕ್ಕೆ ನಮ್ಮ ತಂದೆ ಸೊಪ್ಪು ಹಾಕುತ್ತಿರಲಿಲ್ಲ.

ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋಗುವುದರಲ್ಲಿ ಒಂದು ರೀತಿಯ ಸಲೀಸುತನವಿತ್ತು. ಈಗ ನಾನು ಹಾಗೆಂದುಕೊಳ್ಳುತ್ತಿರಬಹುದು. ಆ ಸಲೀಸುತನದ ಹಿಂದೆ ಒಂದು ರೀತಿಯ ಒತ್ತಡವೂ ಇದ್ದಿರಬಹುದೇನೋ? ಜೊತೆಗೆ ಅಭದ್ರತೆಯ ಭಾವನೆಯೂ ಕೂಡ. ಕುಟುಂಬದ ಸದಸ್ಯರಿಗೆ ಯಾವ ರೀತಿಯ ಅನುಕೂಲಗಳು, ಅನಾನುಕೂಲಗಳು ಆಗಬಹುದೆಂದು ನಮ್ಮ ತಂದೆ ಯಾಕೆ ಯೋಚಿಸುವುದಿಲ್ಲ ಎಂದು ಎಷ್ಟೋ ಮನೆಗಳನ್ನು ಬದಲಾಯಿಸಿದ ನಂತರ ನನಗೆ ಅನಿಸಿದರೂ ಅಥವಾ ಈಗ ಬರೆಯುವಾಗ ಅನಿಸುತ್ತಿದ್ದರೂ, ಕುಟುಂಬದ ಮುಖ್ಯಸ್ಥರಾಗಿ ಅವರ ಆದ್ಯತೆಗಳೇ ಬೇರೆ ಇದ್ದಿರಬೇಕು. ನಮ್ಮ ಜೊತೆ ಕೂಡ ಕೆಲವು ವರ್ಷ ಇದ್ದರು, ಬೆಂಗಳೂರು-ಮದ್ರಾಸುಗಳಲ್ಲಿ. ನಮ್ಮ ವಿಶಾಲವಾದ ಕ್ವಾರ್ಟರ್ಸ್‍ ಗಳನ್ನು ಕೂಡ ನೋಡಿದರು, ನಮ್ಮೊಡನೆ ಬಂದು ಇದ್ದರೂ ಕೂಡ. ಇದೆಲ್ಲದರಲ್ಲಿ ಅವರಿಗೆ ಏನಾದರೂ ವಿಶೇಷವಿದೆಯೆಂದು ಅನಿಸಲೇ ಇಲ್ಲವೆಂದು ಕಾಣುತ್ತದೆ.

ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋದಾಗ, ಮೊಳೆ ಹೊಡೆಯುವುದರಿಂದ ಹಿಡಿದು, ತಂತಿ ಕಟ್ಟುವತನಕ ನಾನಾ ರೀತಿಯ ಕೆಲಸಗಳು ಇರುತ್ತವೆ. ಮತ್ತೆ ಮತ್ತೆ ಇದನ್ನೆಲ್ಲ ಮಾಡುತ್ತಲೇ ಇರಬೇಕಾಗುತ್ತದೆ. ಇದು ತುಂಬಾ ರೇಜಿಗೆಯ ಕೆಲಸ. ಆದರೆ ಈ ರೇಜಿಗೆಗಾಗಿ ನಮ್ಮ ತಂದೆ ಎಂದೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ನಾನು ಏಳುವ ಹೊತ್ತಿಗೆ ರೇಡಿಯೋದಲ್ಲಿ ಗೀತಾರಾಧನೆ, ರೈತರಿಗೆ ಸಲಹೆ, ಪ್ರದೇಶ ಸಮಾಚಾರ ಕೇಳಿಬರುತ್ತಿತ್ತು. ನಮ್ಮ ತಂದೆ ಅಷ್ಟು ಹೊತ್ತಿಗೇ ಎದ್ದು ಯಾವುದಾದರೂ ಜಾಯಿಕಾಯಿ ಪೆಟ್ಟಿಗೆಯ ರಿಪೇರಿ ಮಾಡುತ್ತಿರುತ್ತಿದ್ದರು. ಇಲ್ಲ ಗೋಡೆಗೆ ಮೊಳೆ ಹೊಡೆಯುತ್ತಿರುತ್ತಿದ್ದರು. ಅದರ ಮಧ್ಯೆಯೂ ಆಗತಾನೇ ಏಳುತ್ತಿದ್ದ ಎಲ್ಲ ಮಕ್ಕಳನ್ನು ಅಡ್ಡ ಹೆಸರಿನಿಂದ ಕರೆದು ಪ್ರೀತಿಯಿಂದ ಏಳಿಸುತ್ತಿದ್ದರು. ಒಳಗಡೆ ಅಡುಗೆ ಮನೆಯಲ್ಲಿ, ಏಳುತ್ತಿರುವ ಮಕ್ಕಳಿಗೆ ಕೊಡಬೇಕಾದ ಕಾಫಿ, ತಿಂಡಿಯನ್ನು ನಮ್ಮ ತಾಯಿ ತಯಾರು ಮಾಡುತ್ತಿದ್ದರು. ಹೊಸ ದಿನವೊಂದಕ್ಕೆ ಪ್ರವೇಶಿಸಲು ನಮ್ಮ ಕುಟುಂಬ ತನ್ನೆಲ್ಲ ಸಾಧಾರಣತೆಯ ದಿವ್ಯ ಕ್ಷಣಗಳಲ್ಲಿ ಗರಿಗೆದರಿಕೊಳ್ಳುತ್ತಿದ್ದ ಸಮಯವದಿರಬೇಕು. ನಿಜವಾಗಿಯೂ ನಮಗೆ ದಕ್ಕಿದ ಆ ಕ್ಷಣಗಳೇ, ಆಗ ಗೊತ್ತಾಗದೇಹೋದ, ಆದರೂ ಸುಪ್ತಪ್ರಜ್ಞೆಯ ಭಾಗವಾಗಿರುವ ನಮ್ಮ ಕುಟುಂಬದ Spiritual Movements ಇರಬೇಕು.

ಬೆಳೆಯುವ ಮಕ್ಕಳಿಗೆ ಆ ವಯಸ್ಸಿನಲ್ಲಿ ಬೇಕಾದ ಏಕಾಂತ, ಅಧ್ಯಯನಕ್ಕಾಗಿ ಪ್ರತ್ಯೇಕ ಕೋಣೆ-ಅನುಕೂಲಗಳ ಬಗ್ಗೆ ನಮ್ಮ ತಂದೆ ಯೋಚಿಸಬೇಕಿತ್ತು, ಅನುಕೂಲ ಮಾಡಿಕೊಡಬೇಕಿತ್ತು ಎಂದು ಈಗ ನಾನು ವಾದಿಸುವುದು ಸರಿಯಲ್ಲ. ಅವರ ಬಾಲ್ಯವೇ ಆ ರೀತಿ ಇದ್ದಿರಲಿಲ್ಲ. ಹಾಗಾಗಿ, ಇದೆಲ್ಲ ಬೆಳೆಯುವ ಮಕ್ಕಳಿಗೆ ಅವಶ್ಯ ಎಂದು ಅವರಿಗೆ ಅನಿಸದೆ ಇರಲೂಬಹುದು. ಇದೆಲ್ಲ ತೀರಾ ಅವಶ್ಯಕತೆಯೇ ಅಲ್ಲವೇನೋ ಎಂಬ ಮನೋಧರ್ಮ ನನ್ನಲ್ಲು ಕೂಡ ಮೂಡಲು ಈ ಹಿನ್ನೆಲೆಯಲ್ಲೇ ರೂಪುಗೊಂಡಿರಬೇಕು. ಇವತ್ತು ಕೂಡ ನಮ್ಮ ಮನೆ ಅಥವಾ ನನ್ನ ಕೋಣೆ ಅಸ್ತವ್ಯಸ್ತಗೊಂಡಿದ್ದಾಗ, ಮನೆಯೊಳಗೆ ಸಣ್ಣಪುಟ್ಟ ಗಲಾಟೆ, ಮಾತುಕತೆ ನಡೆಯುತ್ತಿರುವಾಗ, ಮನೆಗೆ ನಿರಂತರವಾಗಿ ಯಾರಾದರೂ ಬಂದು ಹೋಗುತ್ತಲೇ ಇರುವಾಗಲೂ ನನಗೆ ಓದಲು ಬರೆಯಲು ಅಷ್ಟೊಂದು ಕಷ್ಟವಾಗುವುದಿಲ್ಲ. ನನ್ನ ಏಕಾಗ್ರತೆಗೆ ಕೊಂಚವೂ ಭಂಗ ಬರುವುದಿಲ್ಲ. `ಸಂತೆಯೊಳಗೊಂದು ಮನೆಯ ಮಾಡಿ’ ವಚನದ ಸಾಲುಗಳು ನನಗೆ ಅನ್ವಯಿಸುವುದಿಲ್ಲ. ಇದೆಲ್ಲ ವಾತಾವರಣದಲ್ಲಿ ಇಲ್ಲದೇ ಹೋದಾಗ ಜೀವಂತಿಕೆಯ ಕೊರತೆ ಮನಸ್ಸಿಗೆ ರಾಚುತ್ತಿರುತ್ತದೆ. ಒಂದು ರೀತಿಯ ಮಂಕು ಮೂಡುತ್ತದೆ.

ಇಷ್ಟೊಂದು ಊರುಗಳು, ಇಷ್ಟೊಂದು ಬಾಡಿಗೆ ಮನೆಗಳಲ್ಲಿ ವಾಸಿಸಿದ ನಮ್ಮ ತಂದೆಗೆ, ಸಹಜವಾಗಿಯೇ ಆಜೀವ ಗೆಳೆಯರು, ಒಡನಾಡಿಗಳು ಎನ್ನುವವರು ರೂಪುಗೊಳ್ಳಲೇ ಇಲ್ಲ. ಪ್ರತಿ ಊರಿನಲ್ಲೂ, ಹೊಸ ಬಾಡಿಗೆ ಮನೆಯಲ್ಲೂ ಇದ್ದಾಗ, ಯಾರು ಯಾರು ಅವರಿಗೆ ಆ ತತ್ಕಾಲಕ್ಕೆ ಆಪ್ತರಾಗಿದ್ದರು, ಯಾವ ಯಾವ ದಿನಸಿ ಅಂಗಡಿಯ ಶೆಟ್ಟರೊಡನೆ ಯಾವ ರೀತಿಯ ಒಡನಾಟವಿತ್ತು ಎಂಬುದೆಲ್ಲ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಆದರೆ ಯಾವ ಸಂಬಂಧಗಳೂ ದೀರ್ಘಕಾಲ ಉಳಿಯುತ್ತಿರಲಿಲ್ಲ. ಕಾಲಕ್ರಮೇಣ ಕರಗಿಹೋಗುತ್ತಿತ್ತು. ಇದೇ ಸಂಬಂಧಗಳು ಇದೇ ಮಾದರಿ ಮಕ್ಕಳಾದ ನಮ್ಮ ಜೀವನದಲ್ಲೂ ಬೇರೆ ಬೇರೆ ರೀತಿಯಲ್ಲಿ ಮುಂದುವರಿದಿದೆ.

ಒಂದು ಮನೆಯಿತ್ತು. ನಮ್ಮ ತಂದೆಗೆ ಕೂಡ ಪೂರ್ವಜರಿಂದ ಬಂದ ಒಂದು ಮನೆಯಿತ್ತು. ಮದ್ದೂರು ತಾಲ್ಲೂಕು ಕೊಪ್ಪ ಗ್ರಾಮದಲ್ಲಿ. ಜಗುಲಿ, ಮನೆ, ಹಿತ್ತಲು ಎಲ್ಲವೂ ಸೇರಿದರೆ ಸುಮಾರು ಅರ್ಧ ಎಕರೆಗೆ ಹತ್ತಿರವಾಗುವಷ್ಟು ವಿಸ್ತೀರ್ಣ. ನಮ್ಮ ತಂದೆ ಇಡೀ ಬಾಲ್ಯವನ್ನು ಕಳೆದದ್ದು ಇಲ್ಲಿ. ನನ್ನ ಬಾಲ್ಯದ ಸಾಕಷ್ಟು ಭಾಗವು ಕೂಡ ಇಲ್ಲೇ ಕಳೆಯಿತು. ಆದರೆ ನಮ್ಮ ತಂದೆಗೆ ಈ ಮನೆಯ ಬಗ್ಗೆ ಯಾವ ವಿಶೇಷವಾದ ಭಾವನೆಗಳೂ ಇರಲಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಬಡತನದಲ್ಲಿ ಜಗಳಗಂಟ ಮತ್ತು ಅನುಕೂಲಸ್ಥ ದಾಯಾದಿಗಳ ಮಧ್ಯೆಯೇ ಬದುಕಿದ್ದರಿಂದ ನಮ್ಮ ತಂದೆಗೆ ಆ ದಿನಗಳು, ಆ ಮನೆ, ಆ ಕಾಲವೆಲ್ಲ ಮರೆಯಬೇಕಾದ, ಮೀರಬೇಕಾದ ನೆನಪುಗಳು ಕೂಡ ಆಗಿರಬಹುದು. ಈ ಮನೆಯನ್ನು ಮಾರಬೇಕಾಗಿ ಬಂದಾಗ, ನಮ್ಮ ತಂದೆಗೆ ಯಾವ ರೀತಿಯ ಭಾವನೆಗಳ ಒತ್ತಡವೂ ಕಿಂಚಿತ್ತೂ ಇರಲಿಲ್ಲ. ಅಷ್ಟು ಹೊತ್ತಿಗೆ, ನಮ್ಮ ಕುಟುಂಬ ಬೆಂಗಳೂರಿಗೆ ಸೇರಿಯಾಗಿತ್ತು. ಅಣ್ಣ-ತಮ್ಮಂದಿರೆಲ್ಲ ನಮ್ಮ ನಮ್ಮ ನೆಲೆಗಳನ್ನು ಕಂಡುಕೊಳ್ಳುತ್ತಿದ್ದೆವು. ಊರಲ್ಲಿರುವ ಆ ಗತಕಾಲದ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ? ಅದರಿಂದ ಏನಾಗಬೇಕು? ಎಂಬುದು ನಮ್ಮ ತಂದೆಯ ನಿಲುವಾಗಿತ್ತು. ಒಬ್ಬ ದಾಯಾದಿ ಬಂಧುವಿನ ಮೂಲಕ ಆ ಮನೆ ಬಿಕರಿಯಾಯಿತು. ಒಂದು ದಿನ ನಮ್ಮ ತಂದೆ ಮದ್ದೂರಿಗೆ ಹೋಗಿ ಮಾರಾಟದ ಒಪ್ಪಂದಕ್ಕೆ ಸಹಿ ಮಾಡಿ ಬಂದರು. ಮುಂದೆ ಯಾವತ್ತೂ ಅವರು ಆ ಮನೆಯ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಹಾಗೆ ನೋಡಿದರೆ, ಅವರು ಬಾಲ್ಯಕಾಲದ ನೆನಪು, ಬದುಕಿನ ವಿವರಗಳ ಬಗ್ಗೆ ಹೆಚ್ಚು ಮಾತನಾಡಿದವರೇ ಅಲ್ಲ.

ನಮ್ಮ ತಂದೆಯೇನೋ ಪೂರ್ವಜರ ಆ ಮನೆಯನ್ನು ಸುಲಭವಾಗಿ ಮಾರಿಬಿಟ್ಟರು. ನನಗೆ ಮಾತ್ರ ಇನ್ನೂ ಆ ಮನೆ, ಆ ಮನೆಯಲ್ಲಿ ವಾಸಿಸಿದ ದಿನಗಳ ನೆನಪಿನಿಂದ ಬಿಡುಗಡೆಯೇ ಆಗಿಲ್ಲ. ಸಾವಿರಾರು ಮೈಲಿ ದೂರವಿರುವ ಪರ್ವತದ ತಪ್ಪಲಿನಲ್ಲಿ, ಖಂಡಾಂತರ ದಾಟಿ ಸ್ಟೇಡಿಯಂಗಳಲ್ಲಿ ಕುಳಿತು ಪಂದ್ಯಗಳನ್ನು ನೋಡುವಾಗ ಇದ್ದಕ್ಕಿದ್ದಂತೆ, ನಿನ್ನೆ-ಮೊನ್ನೆ ಕೂಡ ನೀರವ ರಾತ್ರಿಯಲ್ಲಿ, ಜೀವನದಿಂದ ಕಂಗೆಟ್ಟು ಭಯದಿಂದ ಎಚ್ಚರವಾದಾಗ, ಆ ಮನೆಯ ಆಕಾರ, ಸಂದಿ-ಗೊಂದಿಗಳು, ಅಲ್ಲಿಯ ನೆನಪುಗಳು `ಇಗೋ ನಾವು’ ಎಂದು ಎದುರಾಗುತ್ತವೆ, ಕಾಡುತ್ತವೆ. ಪಕ್ಕದ ಹಳ್ಳಿಯ ರೈತ ಕುಟುಂಬವೊಂದಕ್ಕೆ ಮಾರಾಟವಾಗಿ, ಈಗ ಅವರು ಕೂಡ ಉಪಯೋಗಿಸದೆ, ಪಾಳು ಬಿದ್ದಿರುವ, ಆ ಮನೆಯ ಜಾಗವನ್ನು ನಾನು ಬೇರೆ ಬೇರೆ ಕಾರಣಗಳಿಗಾಗಿ, ಬೇರೆ ಬೇರೆ ಸಂದರ್ಭದಲ್ಲಿ ಒಂಟಿಯಾಗಿ, ಮಕ್ಕಳು-ಕುಟುಂಬದ ಸಮೇತ ಆಗಾಗ್ಗೆ ಹೋಗಿ ನೋಡಿ ಬರುವುದುಂಟು. ಸ್ವಲ್ಪ ಮನಸ್ಸು ಮಾಡಿದ್ದಿದ್ದರೆ, ಆ ಮನೆಯನ್ನು ನಾನು ಉಳಿಸಿಕೊಳ್ಳಬಹುದಿತ್ತು ಅಥವಾ ಮತ್ತೆ ಕೊಂಡು ರೂಢಿಸಬಹುದಿತ್ತು. ಹಾಗೆ ಮಾಡಲಿಲ್ಲ. ಇನ್ನು ಮುಂದೆಯೂ ಅದು ಸಾಧ್ಯವಿಲ್ಲವೆಂದು ಕಾಣುತ್ತದೆ; ನನ್ನ ಜೀವನದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲಿ ಜೀವನಾವಕಾಶಗಳನ್ನು ಹುಡುಕಿಕೊಳ್ಳುತ್ತಿರುವ ಮಕ್ಕಳುಗಳ ತಲೆಮಾರಿನಲ್ಲಿ ಕೂಡ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಬಡತನದಲ್ಲಿ ಜಗಳಗಂಟ ಮತ್ತು ಅನುಕೂಲಸ್ಥ ದಾಯಾದಿಗಳ ಮಧ್ಯೆಯೇ ಬದುಕಿದ್ದರಿಂದ ನಮ್ಮ ತಂದೆಗೆ ಆ ದಿನಗಳು, ಆ ಮನೆ, ಆ ಕಾಲವೆಲ್ಲ ಮರೆಯಬೇಕಾದ, ಮೀರಬೇಕಾದ ನೆನಪುಗಳು ಕೂಡ ಆಗಿರಬಹುದು. ಈ ಮನೆಯನ್ನು ಮಾರಬೇಕಾಗಿ ಬಂದಾಗ, ನಮ್ಮ ತಂದೆಗೆ ಯಾವ ರೀತಿಯ ಭಾವನೆಗಳ ಒತ್ತಡವೂ ಕಿಂಚಿತ್ತೂ ಇರಲಿಲ್ಲ.

ಆಸ್ತಿ-ಪಾಸ್ತಿ, ಮನೆ, ಸೈಟುಗಳ ಬಗ್ಗೆ ನಮ್ಮ ತಂದೆಗಿದ್ದ ನಿಲುವು ನನ್ನ ಮೇಲೂ, ಉಳಿದ ತಮ್ಮಂದಿರ ಮೇಲೂ ಪ್ರಭಾವ ಬೀರಿದೆ. ನಮಗೆಲ್ಲರಿಗೂ ಈಗ ಸ್ವಂತ ಮನೆಗಳಿವೆ, ನಿವೇಶನಗಳಿವೆ. ಆದರೆ ಅದರ ಬಗ್ಗೆ ವಿಶೇಷ ಆಸ್ಥೆಯಿಲ್ಲ. ಮನೆ-ನಿವೇಶನಗಳನ್ನು ಕೊಳ್ಳುವಾಗಲೂ ಅದೆಲ್ಲ ಆಗಲೇಬೇಕೆಂಬ ಹಠವೂ ಇರಲಿಲ್ಲ. ಹಾಗೆ ಹಠ ಮಾಡದೆ ಕೂಡ ಸಹಜವಾಗಿ ಈ ಅನುಕೂಲಗಳನ್ನೆಲ್ಲ ಮಾಡಿಕೊಳ್ಳುವಷ್ಟು ನಾವು ಕೊಂಚ ಆರ್ಥಿಕವಾಗಿ ಸಂಪನ್ನರಾಗಿದ್ದುದು ಕೂಡ ಇದಕ್ಕೆ ಕಾರಣವಿರಬೇಕು. ನನ್ನ ಹೆಂಡತಿಯ ಪ್ರಕಾರ ಈ ನಿಲುವು ಆಳವಾದದ್ದಲ್ಲ, ಮೇಲುಸ್ತರದ್ದು. ಏಕೆಂದರೆ, ಏನೇ ಆದರೂ ನನ್ನ ಉದಾಸೀನವಿರುವುದು ಇದನ್ನೆಲ್ಲ ಮಾಡಿಕೊಳ್ಳಲು ಬೇಕಾದ ಪರಿಶ್ರಮದ ಬಗ್ಗೆ. ಆದರೆ ಅದರ ಫಲಾನುಭವವನ್ನು ಅನುಭವಿಸುವಾಗಲೆಲ್ಲ ನಾನೂ ಕೂಡ ಮಧ್ಯಮವರ್ಗದ ದುರಾಸೆಯ ಮನುಷ್ಯನೇ! ಈ ಕಾರಣವನ್ನು ಮೀರಿ ಕೂಡ ನನಗೆ ಇವುಗಳೆಲ್ಲದರ ನಿರ್ವಹಣೆಯ ಬಗ್ಗೆ, ಇದನ್ನು ಆಧಾರ ಮಾಡಿಕೊಂಡು ಮುಂದುವರೆಸುವ ಬಗ್ಗೆ ಅಂತಹ ವಿಶೇಷ ಕಾಳಜಿಯೂ ಇಲ್ಲ.

ಬಂಧು-ಮಿತ್ರರಲ್ಲಿ, ಪರಿಚಯಸ್ಥರಲ್ಲಿ ಯಾರಿಗಾದರೂ ತುಂಬಾ ಆಸ್ತಿ, ಮನೆ, ನಿವೇಶನಗಳಿದೆಯೆಂದು ತಿಳಿದಾಗ ನನಗೆ ಸ್ಪರ್ಧೆ-ಅಸೂಯೆಯ ಭಾವನೆಗಳೂ ಬರುವುದಿಲ್ಲ. ಆಸ್ತಿ-ಪಾಸ್ತಿಯೆಲ್ಲ ಪೊಗದಸ್ತಾಗಿ ಇರುವ ಜನರ ಬಗ್ಗೆ ಅದೊಂದೇ ಕಾರಣಕ್ಕೆ ಅಸೂಯೆಯೂ ಇಲ್ಲ. ಇನ್ನೊಬ್ಬರೊಡನೆ ಸಂಬಂಧ ಬೆಳೆಸುವಾಗ, ಅವರ ವ್ಯಕ್ತಿತ್ವದ ಬೆಲೆ ಕಟ್ಟುವಾಗ, ಅದೆಲ್ಲ ಒಂದು ಮಾನದಂಡವೂ ಅಲ್ಲ. ಇದೆಲ್ಲದಕ್ಕೂ ನಾವು ನಮ್ಮ ತಂದೆಗೆ, ಅವರ ನಿಲುವು, ಒಲುಮೆಗಳಿಗೆ ಕೃತಜ್ಞರಾಗಿರಬೇಕೆಂದೆನಿಸುತ್ತದೆ.

******

ಜಮೀನ್ದಾರಿಕೆ, ಶ್ಯಾನುಭೋಗಿಕೆ ಎರಡರ ಹಿನ್ನೆಲೆಯಿಂದಲೂ ಬಂದಿದ್ದ ನಮ್ಮ ತಾಯಿಗೆ ಇದ್ದ ನಿಲುವುಗಳು ಕೊಂಚ ಭಿನ್ನವಾಗಿದ್ದವು. ನಮ್ಮ ತಂದೆ ವಿದ್ಯಾವಂತರು ಮತ್ತು ಸರಕಾರಿ ನೌಕರಿಯಲ್ಲಿದ್ದವರು ಎಂಬ ಹಿನ್ನೆಲೆಯಲ್ಲಿ ಅವರನ್ನು `ತಂದುಕೊಂಡಿರುವುದಾಗಿ’ ತಾಯಿ ಮನೆಯ ಕಡೆಯವರು ಮಾತನಾಡಿಕೊಳ್ಳುತ್ತಿದ್ದನ್ನು ಬಾಲ್ಯದಲ್ಲಿ ಕೇಳಿಸಿಕೊಂಡಿದ್ದೇನೆ. ದಾಂಪತ್ಯದ ಒಂದು ಮುಖ್ಯ ಆಯಾಮವೆಂದರೆ, ದಂಪತಿಗಳಿಗೆ ವಯಸ್ಸಾಗುತ್ತಾ ಆಗುತ್ತಾ, ಗಂಡ-ಹೆಂಡತಿ ಇಬ್ಬರೂ ಎಲ್ಲ ಸಂಗತಿ-ವಿದ್ಯಮಾನಗಳನ್ನು ಕುರಿತಂತೆ ಒಂದೇ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ. ಕೆಲವು ಮನಃಶಾಸ್ತ್ರಜ್ಞರು ಮುಂದುವರಿದು ಹೇಳುವ ಹಾಗೆ, ಇಬ್ಬರೂ ಒಂದೇ ರೀತಿ ಕಾಣಲು ಪ್ರಾರಂಭಿಸುತ್ತಾರೆ. ಅವರ ಆಂಗಿಕ ಭಾಷೆ, ಮಾತನಾಡುವ ಶೈಲಿಯಲ್ಲಿ ಕೂಡ `ತದ್ರೂಪಿ’ ಆಯಾಮವೇ ಮುಂದೆ ಬರುತ್ತವಂತೆ. ಮಕ್ಕಳಾದ ನಾವೆಲ್ಲ ವಿದ್ಯಾವಂತರಾದಂತೆ, ಸರ್ಕಾರಿ ಕೆಲಸಗಳನ್ನು ಹಿಡಿದಂತೆ, ನಮ್ಮ ತಾಯಿಗೂ ಕೂಡ ಆಸ್ತಿ, ಭೂಮಿ, ಕಾಣಿಗಳಿಗಿಂತ, ಉದ್ಯೋಗ, ಶಿಕ್ಷಣ, ಪಟ್ಟಣದ ವಾಸವೇ ಮುಖ್ಯವೆನಿಸಿತು. ಈ ಸಾಧನೆಯನ್ನೇ ಮುಂದೆ ಮಾಡಿ ಅವರು ಇತರರೊಡನೆ ಹೋಲಿಸಿಕೊಂಡು ಹೆಮ್ಮೆಪಡುತ್ತಿದ್ದರು. ಹೀಗಿದ್ದರೂ ಅವರಿಗೆ ಆಸ್ತಿವಂತರು, ಸ್ಥಿತಿವಂತರುಗಳ ಬಗ್ಗೆ ಕುತೂಹಲ-ಗೌರವಗಳಿದ್ದವು. ವಿಶೇಷವಾಗಿ ಅವರ ಒಬ್ಬನೇ ಅಣ್ಣ ಸಾಕಷ್ಟು ಸ್ಥಿತಿವಂತರಾಗಿದ್ದು, ತರಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದ್ದುದು ಅವರಿಗೆ ಯಾವಾಗಲೂ ಹೆಮ್ಮೆಯ ವಿಷಯವಾಗಿತ್ತು. ಇದರಿಂದಲೇ ಒಂದು ರೀತಿಯ ಕರ್ಷಣವೂ ಮೂಡಿ ಬರುತ್ತಿತ್ತು.

ನಮ್ಮ ತಾಯಿಯ ಹತ್ತಿರವಿದ್ದುದು ಒಂದೇ ಒಂದು ಎರಡೆಳೆಯ ಚಿನ್ನದ ಸರ. ಕಷ್ಟ ಬಂದಾಗಲೆಲ್ಲ ಅದನ್ನೇ ಮತ್ತೆ ಮತ್ತೆ ಅಡವಿಟ್ಟು ಸಾಲ ಪಡೆಯುತ್ತಿದ್ದೆವು. ಮೊದಮೊದಲು ಸಾಹುಕಾರರಿಂದ, ನಂತರ ರಾಷ್ಟ್ರೀಕೃತ ಬ್ಯಾಂಕುಗಳಿಂದ. ಹೀಗೆ ಅಡವಿಡುವುದು ಅವರ ಅಣ್ಣನ ಮನೆಯವರಿಗೆ ಗೊತ್ತಾಗಬಾರದೆಂದು, ಸರವನ್ನು ಬಿಡಿಸಿಕೊಳ್ಳುವತನಕ ಯಾವ ಧಾರ್ಮಿಕ-ಸಾಮಾಜಿಕ ಸಮಾರಂಭಗಳು ತವರುಮನೆಯ ಕಡೆ ನಡೆಯಬಾರದೆಂದು ಯಾವಾಗಲೂ ಪರಿತಪಿಸುತ್ತಿದ್ದರು. ಒಂದು ಸಲ ಸರವನ್ನು ಸಾಹುಕಾರರ ಹತ್ತಿರ ಅಡವಿಡಲು ಹೋದಾಗ ನಮ್ಮ ಮಾವ ಕೂಡ ಸಾಹುಕಾರರ ಹತ್ತಿರ ಮತ್ತೆ ಯಾವುದೋ ವ್ಯವಹಾರಕ್ಕೆ ಬಂದಿದ್ದು, ಆವತ್ತು ಅಡವಿಟ್ಟು ಸಾಲ ಪಡೆಯಲಾಗದೆ ತುಂಬಾ ತೊಂದರೆಯಾಯಿತು. ನಮ್ಮ ಮನೆಯವರು ಅನುಕೂಲಸ್ಥರು. ಕಷ್ಟ ಬಂದಾಗ ಆಗಿ ಬರುತ್ತಾರೆ ಎಂಬ ಹೆಮ್ಮೆ; ಆದರೆ ಅವರನ್ನು ಏನೂ ಕೇಳಬಾರದೆಂಬ ಸ್ವಾಭಿಮಾನ, ಇವೆರಡನ್ನೂ ಸಮತೋಲನಗೊಳಿಸುವುದು ನಮ್ಮ ತಾಯಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೂ ಅಣ್ಣ, ತವರುಮನೆಯವರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಮತ್ತೆ ಮತ್ತೆ ಪರೀಕ್ಷಿಸುವ, ಸಕಾರಾತ್ಮಕ ಫಲಿತಾಂಶವನ್ನು ಸಾಬೀತುಪಡಿಸುವ ಪ್ರವೃತ್ತಿಯೂ ಇತ್ತು.

ಊರೊಳಗೆ ದೊಡ್ಡ ತೊಟ್ಟಿಯ ಹಲವಾರು ಕಂಭಗಳ ಮನೆಯಿದ್ದರೂ ನಮ್ಮ ಮಾವ ಊರ ಹೊರಗಿದ್ದ ನಿವೇಶನದಲ್ಲಿ ಎರಡು ಮನೆಗಳನ್ನು ಕಟ್ಟುತ್ತಿದ್ದರು. ನಾವು ಕೂಡ ಹತ್ತಿರದಲ್ಲೇ ವಿಶಾಲವಾದ ಒಂದು ಮನೆಯಲ್ಲಿ ಬಾಡಿಗೆಗಿದ್ದೆವು. ಆದರೂ ಅಣ್ಣ ಕಟ್ಟಿದ ಮನೆಯನ್ನು ಬಾಡಿಗೆಗೆ ಪಡೆಯಲೇಬೇಕು, ಬಾಡಿಗೆಗೆ ಕೊಡುತ್ತಾರೋ ಇಲ್ಲವೋ ಎಂದು ಪರೀಕ್ಷಿಸಬೇಕು ಎಂದು ನಮ್ಮ ತಾಯಿ ಪರೀಕ್ಷೆ ಮಾಡಿ, ಗೃಹಪ್ರವೇಶವಾದ ತಕ್ಷಣ ಮನೆಯನ್ನು ಬಾಡಿಗೆಗೆ ಪಡೆದು, ತುಂಬಾ ದೊಡ್ಡದಾಗಿದ್ದ ಮನೆಗೆ ಹೋಗಿಯೂ ಆಯಿತು.

ನಾನು ಬೆಂಗಳೂರಿನಲ್ಲಿ ನಿವೇಶನವನ್ನು ಕೊಂಡಾಗ, ಮನೆ ಕಟ್ಟಿದಾಗ, ಹೆಚ್ಚು ಖುಷಿಪಟ್ಟವರು ನಮ್ಮ ತಾಯಿಯೇ. ಅವರಿಗೆ ಸ್ವಂತ ಮನೆಯಲ್ಲಿ ವಾಸಿಸುವ ಆಸೆಯೂ ಇತ್ತು. ಆದರೆ ನಾನು ಕಟ್ಟಿದ ಮನೆ ಬೆಂಗಳೂರು ನಗರದ ಹೊರವಲಯದಲ್ಲಿ ಇದ್ದುದರಿಂದ ಆ ಮನೆಗೆ ಹೋಗುವುದು ಸಾಧ್ಯವಾಗಲಿಲ್ಲ. ನನ್ನ ತಂಗಿ ಮದುವೆ ಆಗಿದ್ದುದು ಬೆಂಗಳೂರಿನಲ್ಲಿ ಎರಡು-ಮೂರು ತಲೆಮಾರುಗಳಿಂದ ವಾಸವಾಗಿದ್ದ ಒಂದು ಕುಟುಂಬಕ್ಕೆ. ಆ ಕುಟುಂಬಕ್ಕೆ ಬೆಂಗಳೂರಿನ ಹಳೆಯ ಮತ್ತು ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸಾಕಷ್ಟು ದೊಡ್ಡದಾದ ನಿವೇಶನವಿತ್ತು. ಆ ನಿವೇಶನದಲ್ಲಿ ನಮ್ಮ ತಂಗಿಯ ಪರವಾಗಿ ಪಾಲು ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ನಾನು, ನನ್ನ ಸೋದರರು, ನಮ್ಮ ತಂದೆ ಎಲ್ಲರೂ ಬೆಂಬಲವಾಗಿ ನಿಲ್ಲಲು ಕಾರಣರಾದವರು ಕೂಡ ನಮ್ಮ ತಾಯಿಯೇ.

ಒಂದು ಮನೆ ಕಟ್ಟಿದ ಮೇಲೆ, ಒಂದು ಆಸ್ತಿ ನಮ್ಮ ಒಡೆತನಕ್ಕೆ ಬಂದ ಮೇಲೆ, ಅದರ ಒಡೆತನ, ಯಜಮಾನಿಕೆಯ ಭಾವವನ್ನು ಮೊದಲು ಮತ್ತು ಹೆಚ್ಚಾಗಿ ಅನುಭವಿಸುವವರು ಗಂಡಸರೇ. ಅದರ ಹಿಂದೆ ಇರುವ ಹೆಂಗಸರ ಆಸೆ, ಪರಿಶ್ರಮ, ತ್ಯಾಗಗಳನ್ನು ಹಿನ್ನೆಲೆಗೆ ಸರಿಸಿ, ಬದಲಿಗೆ ಅವರಿಗೆ ಮಾತ್ರ ಆಸ್ತಿ, ಅಧಿಕಾರ, ಹಣದ ಬಗ್ಗೆ ಒಂದು ದೌರ್ಬಲ್ಯವಿದೆ ಎಂದು ಹೇಳುವುದು ಪುರುಷ ಸಮಾಜದ ಒಂದು ಚಟ ಎಂಬ ಸಮಾಜಶಾಸ್ತ್ರಜ್ಞರ ಅಭಿಪ್ರಾಯ ಇಲ್ಲಿ ನೆನಪಾಗುತ್ತದೆ.

ನಾನು ಬೆಂಗಳೂರಿನಲ್ಲಿ ಮೊದಲ ನಿವೇಶನವನ್ನು ಕೊಳ್ಳುವಾಗ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ರೂ. 5,000ಗಳನ್ನು ಠೇವಣಿಯಾಗಿ ಇಡಬೇಕಿತ್ತು. ಆಗ ನಮ್ಮ ಮುಂದೆ ಇನ್ನೂ ಒಂದು ಆಯ್ಕೆಯೂ ಇತ್ತು. ಹೊಸದೊಂದು ಮೋಟರ್ ಸೈಕಲ್ಲನ್ನು ಕೊಳ್ಳಲು ಅದೇ ಮೊಬಲಗನ್ನು ಉಪಯೋಗಿಸಕೊಳ್ಳಬಹುದಾಗಿತ್ತು. ಎರಡರ ನಡುವೆ ಒಂದನ್ನು ನೀನೇ ಆಯ್ಕೆ ಮಾಡಿಕೊ ಎಂದಾಗ, ನನ್ನ ಹೆಂಡತಿಯ ಆಯ್ಕೆ ಸೈಟ್ ಪರವಾಗೇ ಇತ್ತು. ಈ ಆಯ್ಕೆಯ ಹಿಂದೆ ಇದ್ದ ದೂರದೃಷ್ಟಿಯ ಬಗ್ಗೆ ಯಾವಾಗಲೂ ಅವಳಿಗೆ ಹೆಮ್ಮೆ. ಆಗ ಆ ಸೈಟಿನ ಬೆಲೆ ನಲವತ್ತು ಸಾವಿರ ರೂಪಾಯಿಗಳು. ಸರ್ಕಾರದ ಸಾಲದ ನೆರವಿನಿಂದ ಅಲ್ಲೇ ಮನೆ ಕಟ್ಟಿ ಬಾಡಿಗೆಗೆ ಕೂಡ ಕೊಟ್ಟೆವು. ಆ ಮನೆ ಅತ್ತುಕೊಂಡು, ಕರೆದುಕೊಂಡು ಸುಮಾರಾದ ಬಾಡಿಗೆ ದುಡಿಯುತ್ತಿತ್ತು. ಮುಂದೆ ಆ ಮನೆಯನ್ನು ಹದಿನೈದು ವರ್ಷಗಳ ನಂತರ ಇಪ್ಪತ್ತಮೂರು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ, ಆ ಮೊಬಲಗನ್ನೇ ಮುಂದೆ ಮಾಡಿಕೊಂಡು ಪದ್ಮನಾಭನಗರದಲ್ಲಿ ಈಗ ನಾವಿರುವ ಮನೆಯನ್ನು ಕೊಳ್ಳುವುದಕ್ಕೆ ಸಾಧ್ಯವಾಯಿತು.

ಅರ್ಥಶಾಸ್ತ್ರದಲ್ಲಿ ಒಂದು ಸೂತ್ರವಿದೆ. ಆಸ್ತಿಯಿರುವವರು ಮಾತ್ರವೇ ಶ್ರೀಮಂತರಾಗಲು ಸಾಧ್ಯ; ಸಂಬಳದಾರರು, ವೃತ್ತಿಪರರು ಶ್ರೀಮಂತರಾಗುವುದು ಕಷ್ಟವೇ ಎಂದು; ಭೂಮಿ, ಚಿನ್ನ, ಬೆಳ್ಳಿ, ಮನೆ, ಶೇರುಗಳು ಇವುಗಳ ಬೆಳವಣಿಗೆಯ ದರ ಸಾಮಾನ್ಯವಾಗಿ ಪ್ರತಿ ವರ್ಷವೂ ದೇಶದ ಆರ್ಥಿಕ ಅಭಿವೃದ್ಧಿಯ ದರಕ್ಕಿಂತ ಹೆಚ್ಚಾಗಿರುತ್ತದೆ ಎಂದು. ಈ ಕಾರಣಕ್ಕೆ ಜಗತ್ತಿನ ಎಲ್ಲ ಭಾಗಗಳಲ್ಲೂ, ಎಲ್ಲ ರೀತಿಯ ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳಲ್ಲೂ, ಆರ್ಥಿಕ, ಸಾಮಾಜಿಕ ವಿಕಾಸವಾದ ನಂತರ ಮಧ್ಯಮವರ್ಗದವರ ಸಂಖ್ಯೆಯಲ್ಲಿ ಹೆಚ್ಚಳವಾದರೂ, ಆರ್ಥಿಕ ಅಸಮಾನತೆಯ ಪ್ರಮಾಣವೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆಂದು. ಈ ಒಳನೋಟವನ್ನೇ ಈಚಿನ ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧವಾದ Thomas Piketty ಅವರ capital in 21st century ಕೃತಿ ಬೇರೆ ಬೇರೆ ದೇಶಗಳ ಆರ್ಥಿಕ-ಸಾಮಾಜಿಕ ಅಸಮಾನತೆಯನ್ನು, ಆಸ್ತಿವಂತರ ವರ್ಗದ ಬೆಳವಣಿಗೆಯನ್ನು ಕುರಿತು ಅಧ್ಯಯನ ಮಾಡಿ ಪ್ರಕಟಿಸಿತು.

ಇಂತಹದೊಂದು ಕೃತಿಯ ಬಗ್ಗೆ ಕನ್ನಡದಲ್ಲಿ ಸಮೀಕ್ಷೆ ಬರೆದರೆ ತುಂಬಾ ಪ್ರಸ್ತುತವಾಗಿರುತ್ತದೆ ಪ್ರಕಟಿಸುವಿರಾ? ಎಂದು ನನಗೆ ಪರಿಚಯವಿರುವ ಪತ್ರಕರ್ತರನ್ನೆಲ್ಲಾ ಕೇಳಿದೆ. ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ. ನಾನು ಈಗ ಇದನ್ನೆಲ್ಲ ಇಲ್ಲಿ ಏಕೆ ಹೇಳುತ್ತಿದ್ದೇನೆಂದರೆ, ಒಂದು ಆಸ್ತಿ, ನಿವೇಶನವನ್ನು ಕೊಂಡ ನಂತರ, ಇದರ ಬೆಂಬಲದ ಆಧಾರದ ಮೇಲೆಯೇ ಇನ್ನೂ ದೊಡ್ಡದಾದ ಆಸ್ತಿಯನ್ನು ಕೊಳ್ಳಲು ಸಾಧ್ಯವಾಗುತ್ತದೆ; ಅದರಿಂದಾಗಿಯೇ ನಮ್ಮ ಮತ್ತು ಕುಟುಂಬದ ಆತ್ಮವಿಶ್ವಾಸ, ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸಲು.

ನನ್ನ ಹೆಂಡತಿಗೆ ನಾಲ್ಕು ಜನ ಒಡಹುಟ್ಟಿದವರು, ಒಬ್ಬ ಸೋದರಿಯೂ ಸೇರಿದಂತೆ. ಅವರ ತಾಯಿ-ತಂದೆ ಲಿಂಗಭೇದ ಮಾಡದೆ ಆಸ್ತಿ, ಒಡವೆಗಳನ್ನು ಎಲ್ಲ ಮಕ್ಕಳಿಗೂ ಹಂಚಿದ್ದರು. ಆದರೂ ಎಲ್ಲ ಆಸ್ತಿ ವ್ಯವಹಾರಗಳಲ್ಲೂ ಆಗುವಂತೆ, ತಂದೆ-ತಾಯಿ ಗತಿಸಿದ ಮೇಲೆ ಮತ್ತು ಅವರ ಕೊನೆಯ ದಿನಗಳಲ್ಲಿ ಭಿನ್ನಾಭಿಪ್ರಾಯಗಳು, ಮನಃಸ್ತಾಪವೂ ಬಂತು. ನಾನು ಯಾರ ಪರ-ವಿರೋಧವೂ ನಿಲ್ಲದೆ ದೂರ ಉಳಿದೆ. ನನ್ನ ಹೆಂಡತಿ ಕೂಡ ನನ್ನ ಈ ನಿಲುವನ್ನು ಒಪ್ಪಿದಳು, ಮಾತ್ರವಲ್ಲ; ಆಕೆಯ ಸೋದರರು ಕೂಡ ನಾನು ಯಾವ ರೀತಿಯಲ್ಲೂ ಮಧ್ಯ ಪ್ರವೇಶ ಮಾಡದೆ ಹೋದದ್ದು ತುಂಬಾ ಗೌರವಪೂರ್ಣವಾಗಿತ್ತೆಂದು ಈಗಲೂ ಹೇಳುತ್ತಾರೆ. ಯಾವುದೇ ಆಸ್ತಿ ವ್ಯವಹಾರದಲ್ಲೂ ಕೆಲವರಿಗೆ ನಷ್ಟವಾಗುತ್ತದೆ, ಇನ್ನು ಕೆಲವರಿಗೆ ಲಾಭವಾಗುತ್ತದೆ, ತಾತ್ಕಾಲಿಕವಾಗಿ. ಆದರೆ ಆಗ ಸಿಗುವ ಸಣ್ಣಪುಟ್ಟ ಲಾಭಗಳಿಗೋಸ್ಕರ ಸಂಬಂಧಗಳನ್ನೇ ಬಿಗಡಾಯಿಸಿಕೊಳ್ಳಬಾರದು.

ಭೂಮಿ, ಒಡವೆ, ವಸ್ತುಗಳ ಮೂಲಕ ನಮ್ಮ ವರ್ಗವನ್ನು ನಾವು ಮೀರಬಹುದೇ? ಈ ಹಂಬಲ ಎಲ್ಲರಲ್ಲೂ ಇದೆ. ಹಾಗಾಗಿಯೇ ನಾವು ಶ್ರೀಮಂತರು ಮತ್ತು ಮೇಲುವರ್ಗದವರ ಬಗ್ಗೆ ಎಷ್ಟೇ ಅಸೂಯೆಪಟ್ಟರೂ ಅಂತರಂಗದಲ್ಲಿ ಅವರ ಸ್ಥಾನವನ್ನು ತಲುಪುವ, ಇಲ್ಲ, ಅವರನ್ನೂ ಮೀರಿಸುವ ಬಯಕೆಯಿರುತ್ತದೆ. ಒಂದಲ್ಲ ಒಂದು ದಿನ ಮುಂದೆ ಎಂದಾದರೂ ನಾವು ಆ ಸ್ಥಿತಿ ತಲುಪಬಹುದೆಂಬ ಆಸೆಯಲ್ಲಿ ಮೇಲು ವರ್ಗದವರ ಹಕ್ಕು, ಜೀವನಶೈಲಿ, ಆಯ್ಕೆಗಳನ್ನು ಸಮರ್ಥಿಸುತ್ತೇವೆ, ಅನುಕರಿಸುತ್ತೇವೆ. ಪ್ರತಿ ತಲೆಮಾರಿನಲ್ಲೂ ಪಯಣ ಈ ದಿಕ್ಕಿನಲ್ಲಿ ನಡೆದೂ ನಡೆಯುತ್ತದೆ. ಆದರೆ ಮೇಲುವರ್ಗಕ್ಕೆ ಸೇರಲು ಆಸ್ತಿ ಒಂದೇ ಸಾಲದು. ಅಲ್ಲದೆ ನಾಲ್ಕಾರು ತಲೆಮಾರುಗಳ ಕಾಲ ಆಸ್ತಿ-ಪಾಸ್ತಿ ಒಡೆತನವನ್ನು ಅನುಭವಿಸಿದ ಕುಟುಂಬಗಳಲ್ಲಿ ಕಂಡುಬರುವ ಸೊಗಸುಗಾರಿಕೆ, ಆತ್ಮಪ್ರತ್ಯಯ, ಯಾವಾಗಲೂ ಇನ್ನೊಬ್ಬರ ಅಭಿಪ್ರಾಯಕ್ಕಾಗಿ ಹಾತೊರೆಯುವ, ಕಾತರಿಸುವ ಪ್ರವೃತ್ತಿ ಮೊದಮೊದಲ ತಲೆಮಾರುಗಳಲ್ಲಿ ಇದ್ದಷ್ಟು ಇರುವುದಿಲ್ಲ. ಇನ್ನೂ ಅವರು victim modeನಲ್ಲೇ ಇರುತ್ತಾರೆ. ಆಸಕ್ತರು ಓದಬಹುದಾದ ಪುಸ್ತಕ Veblen ಎಂಬ ಸಮಾಜಶಾಸ್ತ್ರಜ್ಞನ the theory ofleisure class.

ನಮ್ಮ ತಂದೆ ಪ್ರಾಮಾಣಿಕವಾಗಿ, ಸ್ವಾಭಾವಿಕವಾಗಿ ಈ ಎಲ್ಲ ವಿಶ್ಲೇಷಣೆಗಳಿಂದ ಹೊರಗಿದ್ದರು.

 

(ಪುಸ್ತಕ: ಬಾಡಿಗೆ ಮನೆಗಳ ರಾಜಚರಿತ್ರೆ, ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ಅಭಿನವ ಪ್ರಕಾಶನ, ಪುಟಗಳು: 146, ಬೆಲೆ: 315)