ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಅವನನ್ನು ಕೂಗಿ ಕರೆಯಬೇಕೋ ಬಾರದೋ ಗೊತ್ತಾಗಲಿಲ್ಲ. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಆರು: ಐದನೆಯ ಅಧ್ಯಾಯ

ಅವನ ಹಿಂದೆಯೇ ಹೆಜ್ಜೆ ಹಾಕಿದ ರಾಸ್ಕೋಲ್ನಿಕೋವ್.
‘ಏನಿದು!’ ಹಿಂದಕ್ಕೆ ತಿರುಗಿ ಸ್ವಿದ್ರಿಗೈಲೋವ್ ಕೇಳಿದ. ‘ನಾನು ಹೇಳಿರಲಿಲ್ಲವಾ…’

‘ಏನು ಅಂದರೆ ಈಗ ನಾನು ನಿನ್ನ ಬಿಟ್ಟು ಹೋಗಲ್ಲ ಅಂತ, ಅಷ್ಟೇ!’

‘ಏನೂ?’

ಇಬ್ಬರೂ ನಿಂತಲ್ಲೆ ನಿಂತು ಒಬ್ಬರ ಮುಖ ಒಬ್ಬರು ನೋಡಿಕೊಂಡರು-ಪರಸ್ಪರ ತಾಕತ್ತು ಅಂದಾಜು ಮಾಡುವವರ ಹಾಗೆ.

‘ನಿನ್ನ ಅರೆ ಕುಡುಕ ಕತೆಗಳನ್ನ ಕೇಳಿದಮೇಲೆ, ನನ್ನ ತಂಗಿಯ ಬಗ್ಗೆ ನಿನ್ನ ಪ್ಲಾನು ಯಾವುದೂ ಕೈ ಬಿಟ್ಟಿಲ್ಲ, ಮೊದಲಿಗಿಂತ ಜಾಸ್ತಿ ಅವಳ ವಿಚಾರ ತಲೆಗೆ ಹಚ್ಚಿಕೊಂಡಿದೀಯ ಅನ್ನುವುದು ತಿಳಿಯಿತು. ಇವತ್ತು ಬೆಳಿಗ್ಗೆ ನೀನು ಅವಳಿಗೆ ಎಂಥಾದ್ದೋ ಕಾಗದ ಕಳಿಸಿದೀಯ ಅನ್ನುವುದು ತಿಳಿಯಿತು. ಸುಮ್ಮನೆ ಕೂರುವುದಕ್ಕಾಗದೆ ಚಡಪಡಿಸತಾ ಇದ್ದೆ… ದಾರಿಯಲ್ಲಿ ಹೋಗತಾ ನೀನು ಒಬ್ಬ ಹೆಂಡತಿಯನ್ನ ಸೃಷ್ಟಿ ಮಾಡಿಕೊಂಡರೂ ಅದರಿಂದೇನೂ ಬದಲಾಗಲ್ಲ. ನಾನು ಸ್ವತಃ ಗ್ಯಾರಂಟಿ ಮಾಡಿಕೊಳ್ಳಬೇಕು…’
ಏನು ಗ್ಯಾರಂಟಿ ಮಾಡಿಕೊಳ್ಳಬೇಕಾಗಿತ್ತು ಅನ್ನುವುದು ಸ್ವತಃ ರಾಸ್ಕೋಲ್ನಿಕೋವ್‌ಗೇ ತಿಳಿದಿರಲಿಲ್ಲ.

‘ಹೌದಾ! ಹಾಗಾದರೆ ಈಗ ಪೋಲೀಸರನ್ನ ಕರೆಯಲಾ?’

‘ಓಹೋ, ಕರಿ!’

ಮತ್ತೆ ಇನ್ನೊಂದು ನಿಮಿಷದಷ್ಟು ಹೊತ್ತು ಮುಖ-ಮುಖ ನೋಡಿಕೊಂಡರು. ಕೊನೆಗೆ ಸ್ವಿದ್ರಿಗೈಲೋವ್‌ನ ಮುಖದ ಭಾವ ಬದಲಾಯಿತು. ತನ್ನ ಬೆದರಿಕೆಗೆ ರಾಸ್ಕೋಲ್ನಿಕೋವ್ ಬೆದರಲಿಲ್ಲ ಅನ್ನುವುದು ಗೊತ್ತಾಗಿ ಖುಷಿಯಾಗಿರುವ ಗೆಳೆಯನ ಭಾವ ತಂದುಕೊಂಡ ಮುಖದಲ್ಲಿ.

‘ಎಂಥಾ ಮನುಷ್ಯನಯ್ಯಾ ನೀನು! ನಿನ್ನ ವಿಚಾರ ಬೇಕು ಅಂತಲೇ ಮಾತಾಡಲಿಲ್ಲ ನಾನು. ನನಗೆ ಸಿಕ್ಕಾಪಟ್ಟೆ ಕುತೂಹಲ ಇದೆ. ಅದ್ಭುತವಾದ ಕೆಲಸ ಮಾಡಿದೀಯ. ಇದನ್ನ ಮುಂದಿನ ಸಾರಿ ಸಿಗೋವರೆಗೆ ಮಾತಾಡೋದು ಬೇಡ ಅಂತಿದ್ದೆ. ನೀನೋ, ಸತ್ತ ಮನುಷ್ಯನ್ನೂ ಬಡಿದು ಎಬ್ಬಿಸುವಂಥವನು…ಸರಿ, ಬಾ. ಮೊದಲೇ ಹೇಳಿರತೇನೆ, ನಾನು ಮನೆಗೆ ಹೋಗತಾ ಇರೋದು ದುಡ್ಡು ತಗೊಳ್ಳಕ್ಕೆ, ಒಂದು ಐದು ನಿಮಿಷದ ಮಟ್ಟಿಗೆ ಮಾತ್ರ. ಆಮೇಲೆ ಬಾಡಿಗೆ ಗಾಡಿ ಹಿಡಿದು ದ್ವೀಪಕ್ಕೆ ಹೋಗಿ, ಸಾಯಂಕಾಲದ ತನಕ ಅಲ್ಲೇ ಇರತೇನೆ. ಹಿಂಬಾಲಿಸತೀಯಾ ನನ್ನ?’

‘ಸದ್ಯಕ್ಕೆ ಅಪಾರ್ಟ್‌ಮೆಂಟಿಗೆ ಬರತೇನೆ, ನಿಮ್ಮ ಮನೆಗಲ್ಲ, ಸೋಫ್ಯಾ ಸೆಮ್ಯೊನೋವ್ನಾ ಮನೆಗೆ. ಅವರ ತಂದೆಯ ಅಂತ್ರಸಂಸ್ಕಾರಕ್ಕೆ ಹೋಗಲು ಆಗಲಿಲ್ಲವಲ್ಲ, ಕ್ಷಮೆ ಕೇಳಬೇಕು.’

‘ನಿನ್ನಿಷ್ಟ ಬಂದ ಹಾಗೆ ಮಾಡು. ಸೋಫ್ಯಾ ಮನೇಲ್ಲಿಲ್ಲ. ಮಕ್ಕಳನ್ನೆಲ್ಲ ಕರಕೊಂಡು, ಯಾರೋ ಹೆಂಗಸಿನ ಹತ್ತಿರ ಹೋದಳು. ಶ್ರೀಮಂತ ಮುದುಕಿ, ನನ್ನ ಹಳೆಯ ಪರಿಚಯ, ಆಕೆ ಯಾವುದೋ ಅನಾಥಾಲಯದ ದಾನಿ. ಕ್ಯಾತರೀನಳ ಮಕ್ಕಳ ಫೀಸೆಲ್ಲ ಕೊಟ್ಟು ಅವಳ ಮನಸ್ಸು ಒಲಿಸಿಕೊಂಡೆ. ಸ್ವಲ್ಪ ದಾನ ಕೂಡ ಕೊಟ್ಟೆ. ಸೋಫ್ಯಾ ಕತೆ ಪೂರಾ ಹೇಳಿದೆ, ಮರ್ಯಾದೆಯಿಂದ ಹೇಳಿದೆ. ಏನೂ ಬಚ್ಚಿಡಲಿಲ್ಲ. ಅದರಿಂದ ನಂಬಕ್ಕಾಗದಂಥ ಪರಿಣಾಮ ಆಯಿತು. ಹಾಗಾಗಿ ಆ ಶ್ರೀಮಂತೆಯನ್ನು ನೋಡುವುದಕ್ಕೆ ಅವಳು ಇಳಿದುಕೊಂಡಿರುವ ಹೋಟೆಲಿಗೆ ಹೋಗಿದ್ದಾಳೆ ಸೋಫ್ಯಾ.’

‘ಪರವಾಗಿಲ್ಲ, ನಾನು ಬರತೇನೆ.’

‘ನಿನ್ನಿಷ್ಟ. ನನಗೇನೂ ಆಗಬೇಕಾಗಿಲ್ಲ.. ಇಗೋ ಮನೆ ಬಂತು! ನಿನಗೆ ಯಾವುದೂ ಪ್ರಶ್ನೆ ಕೇಳಿ ತೊಂದರೆ ಕೊಡಲಿಲ್ಲ, ನಾನು ಸೂಕ್ಷ್ಮವಾಗಿದ್ದೆ ಅಂತ ನಿನಗೆ ನನ್ನ ಮೇಲೆ ಅನುಮಾನ ಅಲ್ಲವಾ? ನಾನು ಏನೂ ಕೇಳದೆ ಇದ್ದದ್ದು ನಿನಗೆ ವಿಚಿತ್ರ ಅನಿಸಿರಬೇಕು. ಬೇಕಾದರೆ ಬೆಟ್ ಕಟ್ಟತೇನೆ.’

‘ಸೂಕ್ಷ್ಮ ಅಂದರೆ ಬಾಗಿಲಿಗೆ ಕಿವಿ ಇಟ್ಟು ಕದ್ದು ಕೇಳಿಸಿಕೊಳ್ಳೋದಾ?’

‘ಓ! ಅದಾ ನಿನ್ನ ಮನಸಿನಲ್ಲಿರೋದು!’ ಸ್ವಿದ್ರಿಗೈಲೋವ್ ನಕ್ಕ. ‘ಅದನ್ನ ನೀನು ಗಮನಿಸದೆ ಇದ್ದಿದ್ದರೆ ಆಶ್ಚರ್ಯ ಆಗತಿತ್ತು. ಹ್ಹ, ಹ್ಹಾ! ನೀನು ಏನೋ ಮಾಡಿದೆ ಅಂತ ಸೋಫ್ಯಾಗೆ ವಿವರಿಸತಾ ಇದ್ದದ್ದು ಸ್ವಲ್ಪ ಕಿವಿಗೆ ಬಿತ್ತು, ಪೂರಾ ಅಲ್ಲ. ಅದೇನದು ನೀನು ಹೇಳತಾ ಇದ್ದಿದ್ದು? ನಾನು ಪೆದ್ದ. ನನಗೆ ಅರ್ಥ ಆಗಲ್ಲ. ಪ್ಲೀಸ್, ದಮ್ಮಯ್ಯಾ ಅನ್ನತೇನೆ, ವಿವರಿಸಿ ಹೇಳು, ಇತ್ತೀಚಿನ ತತ್ವಗಳ ಜ್ಞಾನದ ಬೆಳಕು ನೀಡು!’

‘ನಿನಗೆ ಏನೂ ಕೇಳಿಸಿಯೇ ಇಲ್ಲ, ಸುಳ್ಳು ಹೇಳತಾ ಇದೀಯ.’

‘ಹಾಗಲ್ಲ, ಹಾಗಲ್ಲ. (ಒಂದೆರಡು ವಿಚಾರ ಕಿವಿಗೆ ಬಿತ್ತು), ನಾನು ಹೇಳೋದೇನೂ ಅಂದರೆ ನೀನು ಅಲ್ಲಿದ್ದಷ್ಟೂ ಹೊತ್ತು ನರಳತಾ ಗೋಳಾಡತಾ ಇದ್ದೆ! ನಿನ್ನ ನೋಡಿದರೆ ಶ್ಖಿಲರ್ ಸಿಕ್ಕಾಪಟ್ಟೆ ಮುಜುಗರ ಪಡುತ್ತಾನೆ. ಬಾಗಿಲಿಗೆ ಕಿವಿ ಕೊಟ್ಟು ಕೇಳಬಾರದು ಅನ್ನತಾ ಇದೀಯ.. ಸರಿ, ಹೋಗು, ಹೋಗಿ ಪೋಲೀಸರಿಗೆ ನೀನೇ ಹೇಳು: ಹೀಗೀಗಾಯಿತು, ಅಕಸ್ಮಾತ್ ಆದ ಅನಾಹುತ. ನನ್ನ ಥಿಯರಿ ತಪ್ಪಾಗಿತ್ತು ಅನ್ನು. ಬಾಗಿಲಿಗೆ ಕಿವಿ ಇಟ್ಟು ಕೇಳೋದು ತಪ್ಪು ಅನ್ನೋದಾದರೆ ನೀನು ಮುದುಕೀರನ್ನ ಹುಡುಕಿ, ಕೈಗೆ ಸಿಕ್ಕಿದ್ದರಿಂದ ಚಚ್ಚಿ ಕೊಲ್ಲತಾ ಇರೋದೂ ಸರಿ ಅಲ್ಲ, ತಕ್ಷಣ ಅಮೆರಿಕಕ್ಕೋ ಇನ್ನೆಲ್ಲಿಗೋ ಓಡಿ ಹೋಗು! ಈಗಲೇ! ಇನ್ನೂ ಟೈಮು ಇರೋವಾಗಲೇ! ಸೀರಿಯಸ್ಸಾಗಿ ಹೇಳತಾ ಇದೀನಿ. ದುಡ್ಡು ಇಲ್ಲವಾ? ಪ್ರಯಾಣಕ್ಕೆ ಎಷ್ಟು ಬೇಕೋ ಅಷ್ಟು ನಾನು ಕೊಡತೇನೆ.’

‘ನಾನು ಯೋಚನೆ ಮಾಡತಿದ್ದದ್ದು ಅದಲ್ಲ,’ ರಾಸ್ಕೋಲ್ನಿಕೋವ್ ಅಸಹ್ಯಪಡುತ್ತ ಅವನ ಮಾತನ್ನು ತಡೆದ.

‘ನನಗೆ ಅರ್ಥ ಆಗತ್ತೆ (ನಿನಗೆ ಇಷ್ಟ ಇರದಿದ್ದರೆ ನೀನೇನೂ ಹೇಳೋದು ಬೇಡ)’ ನಿನ್ನ ಮನಸಿನಲ್ಲಿ ಎಂಥಾ ಪ್ರಶ್ನೆಗಳಿವೆ ಅನ್ನೋದು ಅರ್ಥವಾಯಿತು. ನೈತಿಕ ಪ್ರಶ್ನೆಗಳು ಅಲ್ಲವಾ? ನಾಗರಿಕ ಮನುಷ್ಯನಿಗೆ ಬರುವಂಥ ಪ್ರಶ್ನೆಗಳು, ಅಲ್ಲವಾ? ಬಿಡು, ಅವನ್ನ ತಗೊಂಡು ಏನು ಮಾಡತೀಯ ಈಗ? ಹೆಹ್ಹೇ! ನೀನಿನ್ನೂ ನಾಗರಿಕ ಮನುಷ್ಯ ಅಂತಲಾ? ಹಾಗಾದರೆ ಈ ವಿಚಾರಕ್ಕೆ ತಲೇನೇ ಹಾಕಬಾರದಾಗಿತ್ತು. ನಿನ್ನದಲ್ಲದ ವ್ಯವಹಾರದಲ್ಲಿ ಮೂಗು ತೂರಿಸೋದು ಯಾಕೆ? ಹೋಗಿ ಶೂಟ್ ಮಾಡಿಕೋ, ಯಾಕೆ, ಇಷ್ಟ ಇಲ್ಲವಾ?’

‘ನಾನು ಈಗ ನಿನ್ನ ಬಿಟ್ಟು ಹೋಗಲಿ ಅಂತಲೇ ಹೀಗೆ ರೇಗಿಸತಾ ಇದೀಯ, ಗೊತ್ತು.’

‘ಎಂಥಾ ವಿಚಿತ್ರ ಮನುಷ್ಯಾ! ಆಗಲೇ ಮನೆ ಹತ್ತಿರ ಬಂದಿದೇವೆ. ಸುಸ್ವಾಗತ. ಇದು ಮೆಟ್ಟಿಲು. ಇದು ಸೋಫ್ಯಾ ಮನೆಯ ಬಾಗಿಲು. ನೋಡು, ಮನೇಲ್ಲಿ ಯಾರೂ ಇಲ್ಲ. ನಂಬಲ್ಲವಾ? ಕಪೆರನೌಮೋವ್‌ನ ಕೇಳು. ಮನೆಯ ಬೀಗದ ಕೈ ಅವರ ಹತ್ತಿರ ಕೊಟ್ಟು ಹೋಗತಾಳೆ. ಇಗೋ, ಕಪೆರನೌಮೋವ್‌ನ ಹೆಂಡತಿ ಬಂದಳು. ಹ್ಞಾ? ಏನು? (ಅವಳಿಗೆ ಸ್ವಲ್ಪ ಕಿವುಡು) ಹೊರಗೆ ಹೋದಳಾ? ಎಲ್ಲಿಗೆ? ಸರಿ, ಕೇಳಿಸಿತಾ? ಅವಳು ಮನೇಲ್ಲಿಲ್ಲ, ಸಾಯಂಕಾಲ ತಡವಾಗಿ ಬರತಾಳಂತೆ. ಈಗ ನಮ್ಮನೇಗೆ ಹೋಗಣ. ಅಲ್ಲಿಗೂ ಬರಕ್ಕೆ ಇಷ್ಟ ಇಲ್ಲವಾ? ಇದು ನಮ್ಮನೆ. ರೆಸ್ಸ್ಲಿಶ್ ಮೇಡಂ ಮನೇಲ್ಲಿಲ್ಲ. ಯಾವಾಗಲೂ ಎಲ್ಲೆಲ್ಲಾದರೂ ಹೋಗತಾನೇ ಇರತಾಳೆ. ತುಂಬ ಒಳ್ಳೆಯ ಹೆಂಗಸು. ಹೇಳತೇನೆ ಕೇಳು, ನೀನು ಸ್ವಲ್ಪ ವಿಚಾರ ಮಾಡಿ ನೋಡಿದರೆ ಅವಳಿಂದ ನಿನಗೆ ಉಪಯೋಗ ಆಗಬಹುದು. ನೋಡು ಬೇಕಾದರೆ, ಇಗೋ ಈ ಐದು ಪರ್ಸೆಂಟ್ ನೋಟು ಬೀರುವಿನಿಂದ ತಗೊಳ್ಳತೇನೆ. (ಇನ್ನೂ ಎಷ್ಟು ಮಿಕ್ಕಿದೆ, ನೋಡು!) ಇದು ಸೀದಾ ಮನಿ ಚೇಂಚರ್‍ ಹತ್ತಿರ ಹೋಗತ್ತೆ ಇವತ್ತು. ಸರಿ, ನೋಡಿದೆಯಾ? ಇನ್ನು ಕಾಲ ಕಳೆದು ಉಪಯೋಗ ಇಲ್ಲ. ಬೀರುಗೆ ಬೀಗ ಹಾಕಿದೆ, ನೋಡು. ಮನೇಗೂ ಬೀಗ ಹಾಕಿದೆ. ಈಗ ಮತ್ತೆ ಬೀದಿಗೆ ಬಂದೆವು. ಈಗ ಗಾಡಿನ ಬಾಡಿಗೆಗೆ ತಗೋತೀಯ? ಯಾಕೆಂದರೆ ನಾನು ದ್ವೀಪಕ್ಕೆ ಹೊರಟೆ. ಸವಾರಿ ಬರತೀಯಾ. ನೋಡು, ಈ ಗಾಡಿ ಹಿಡಿದು ಯೆಲ್ಗಿನ್ ದ್ವೀಪಕ್ಕೆ ಹೋಗತೇನೆ. ಏನು? ಬರಲ್ಲವಾ? ಬೇಡ ಬಿಡು. ಸವಾರಿ ಹೋಗಿ ಬರಣ. ಮಳೆ ಬರೋ ಹಾಗಿದೆ. ಪರವಾಗಿಲ್ಲ, ಗಾಡಿಗೆ ಮೇಲೆ ಮುಚ್ಚಿಗೆ ಇದೆ… ಏರಿಸಣ’

ಸ್ವಿದ್ರಿಗೈಲೋವ್ ಆಗಲೇ ಗಾಡಿಯಲ್ಲಿ ಕೂತಿದ್ದ. ಕೊನೆಯ ಪಕ್ಷ ಈ ಬಾರಿ ನಾನು ತಿಳಿದದ್ದು ತಪ್ಪು ಅನ್ನುವ ತೀರ್ಮಾನಕ್ಕೆ ಬಂದಿದ್ದ ರಾಸ್ಕೋಲ್ನಿಕೋವ್. ಒಂದೂ ಮಾತಾಡದೆ, ಬೆನ್ನು ತಿರುಗಿಸಿ ಹೇಮಾರ್ಕೆಟ್ಟಿನತ್ತ ಹೆಜ್ಜೆ ಹಾಕಿದ. ಅವನೊಮ್ಮೆ ತಿರುಗಿ ನೋಡಿದ್ದಿದ್ದರೆ ಸ್ವಿದ್ರಿಗೈಲೋವ್ ನೂರು ಹೆಜ್ಜೆ ದೂರ ಹೋಗಿ, ಗಾಡಿ ನಿಲ್ಲಿಸಿ, ಬಾಡಿಗೆ ಕೊಟ್ಟು, ತನ್ನ ಪಾಡಿಗೆ ತಾನು ಫುಟ್‌ಪಾತಿನ ಮೇಲೆ ನಡೆದದ್ದು ಕಾಣುತ್ತಿತ್ತು. ರಾಸ್ಕೋಲ್ನಿಕೋವ್ ಆಗಲೇ ತಿರುವು ದಾಟಿದ್ದ, ಏನೂ ಕಾಣುತ್ತಿರಲಿಲ್ಲ. ‘ಇಂಥ ದುಷ್ಟನಿಂದ, ಲಂಪಟ ಸ್ಕೌಂಡ್ರಲ್‌ನಿಂದ ಏನಾದರೂ ತಿಳಿಯತ್ತೆ ಅಂತ ಯಾಕಂದುಕೊಂಡೆ ನಾನು?’ ರಾಸ್ಕೋಲ್ನಿಕೋವ್ ತೀವ್ರವಾಗಿ ಅಸಹ್ಯಪಡುತ್ತ ತನಗೇ ಹೇಳಿಕೊಂಡ. ನಿಜ, ರಾಸ್ಕೋಲ್ನಿಕೋವ್ ತೀರ ಆತುರದಲ್ಲಿ, ಲಘುವಾಗಿ ತೀರ್ಮಾನಕ್ಕೆ ಮುಟ್ಟಿದ್ದ. ಸ್ವಿದ್ರಿಗೈಲೋವ್‌ನಲ್ಲಿ ನಿಗೂಢವಾದದ್ದೇನೂ ಇರದಿದ್ದರೂ ಅಸಾಮಾನ್ಯವಾದದ್ದು ಏನೋ ಒಂದಷ್ಟಿತ್ತು. ಅವನ ತಂಗಿಯನ್ನು ಸುಮ್ಮನೆ ಇರುವುದಕ್ಕೆ ಸ್ವಿದ್ರಿಗೈಲೋವ್ ಬಿಡುವುದಿಲ್ಲ ಅನ್ನುವುದಂತೂ ಸ್ಪಷ್ಟವಾಗಿತ್ತು. ಮತ್ತೆ ಮತ್ತೆ ಅದನ್ನೇ ಯೋಚನೆ ಮಾಡುವುದು ಕಷ್ಟವಾಗುತ್ತಿತ್ತು.

ರಾಸ್ಕೋಲ್ನಿಕೋವ್ ಒಬ್ಬನೇ ಆಗಿ, ಇಪ್ಪತ್ತು ಹೆಜ್ಜೆನಡೆದ ತಕ್ಷಣ, ಪ್ರತಿ ದಿನದ ಹಾಗೆ ಗಹನವಾದ ಯೋಚನೆಯಲ್ಲಿ ಮುಳುಗಿದ. ಸೇತುವೆಯವರೆಗೆ ಬಂದವನು ಕಂಬಿಗೆ ಒರಗಿ ನೀರು ನೋಡುತ್ತ ನಿಂತ. ಅದೇ ಹೊತ್ತಿಗೆ ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಅವನನ್ನು ಕೂಗಿ ಕರೆಯಬೇಕೋ ಬಾರದೋ ಗೊತ್ತಾಗಲಿಲ್ಲ. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.

ಯಾರಿಗೂ ಗೊತ್ತಾಗಬಾರದು ಅನ್ನುವ ಹಾಗೆ ಹುಷಾರಾಗಿ ಬರುತ್ತಿದ್ದ. ಅವನು ಸೇತುವೆಯ ಮೇಲೆ ನಡೆಯದೆ ಸೈಡ್ ವಾಕಿನ ಮೇಲೆ ಒಂದು ಪಕ್ಕದಲ್ಲಿ ನಿಂತ. ರಾಸ್ಕೋಲ್ನಿಕೋವ್‌ನ ಕಣ್ಣಿಗೆ ಬೀಳದೆ ಇರಲು ಹೆಣಗುತ್ತಿದ್ದ. ದುನ್ಯಾಳನ್ನ ಅವನು ನೋಡಿ ಬಹಳ ಹೊತ್ತಾಗಿತ್ತು. ಸನ್ನೆ ಮಾಡಿ ಅವಳ ಗಮನ ಸೆಳೆದು, ‘ಅಣ್ಣನನ್ನು ಕರೆಯಬೇಡ, ಅವನ ಪಾಡಿಗೆ ಬಿಟ್ಟು ತನ್ನ ಹತ್ತಿರ ಬಾ,’ ಎಂದು ಬೇಡಿಕೊಳ್ಳುತಿದ್ದ ಹಾಗಿತ್ತು. ದುನ್ಯಾ ಹಾಗೇ ಮಾಡಿದಳು.

ಸ್ವಿದ್ರಿಗೈಲೋವ್ ಪಿಸುಗುಟ್ಟಿದ: ‘ಬಾ, ಬೇಗ. ನಾವು ಭೇಟಿಯಾಗಿದ್ದು ರಾಸ್ಕೋಲ್ನಿಕೋವ್‍ಗೆ ತಿಳಿಯಬಾರದು. ಇಲ್ಲೇ ಹತ್ತಿರದ ಹೆಂಡದಂಗಡಿಯಲ್ಲಿ ಸ್ವಲ್ಪ ಹೊತ್ತಿಗೆ ಮೊದಲು ಅವನ ಜೊತೆ ಕೂತಿದ್ದೆ. ಅವನೇ ಹುಡುಕಿಕೊಂಡು ಬಂದಿದ್ದ. ಅವನಿಂದ ಬಿಡಿಸಿಕೊಂಡು ಬರುವುದಕ್ಕೆ ಕಷ್ಟ ಆಯಿತು. ನಾನು ನಿನಗೆ ಕಾಗದ ಕಳಿಸಿದ ವಿಷಯ ಅವನಿಗೆ ಹೇಗೋ ಗೊತ್ತಾಗಿದೆ, ಅನುಮಾನ ಬಂದಿದೆ. ಅವನಿಗೆ ನೀನಲ್ಲ ತಾನೇ ಹೇಳಿದ್ದು? ಮತ್ತೆ ಇನ್ಯಾರು ಹೇಳಿರಬೇಕು?’

‘ಇಗೋ, ರಸ್ತೆ ತಿರುವು ಬಂತು. ಅಣ್ಣನಿಗೆ ನಾವು ಕಾಣಲ್ಲ. ನಾನು ಇನ್ನು ಮುಂದಕ್ಕೆ ಬರಲ್ಲ. ಏನು ಹೇಳಬೇಕೋ ಎಲ್ಲಾ ಇಲ್ಲೇ ಹೇಳು…’ ಅಂದಳು ದುನ್ಯಾ.

‘ಆ ವಿಷಯ ರಸ್ತೆಯ ಮೇಲೆ ಹೇಳಕ್ಕಾಗಲ್ಲ. ಎರಡನೆಯದಾಗಿ ಸೋಫ್ಯಾ ಸೆಮ್ಯೊನೋವ್ನ ಹೇಳುವುದನ್ನ ನೀನು ಕೂಡ ಕೇಳಬೇಕು. ಮೂರನೆಯದಾಗಿ, ನಿನಗೆ ಕೆಲವು ದಾಖಲೆ ತೋರಿಸಬೇಕು…ಮತ್ತೆ, ಕೊನೆಯದಾಗಿ, ದಯವಿಟ್ಟು ನಮ್ಮ ಮನೆಗೆ ಬಾ. ಎಲ್ಲ ವಿವರವಾಗಿ ಹೇಳೇನೆ, ಆಮೇಲೆ ಹೊರಟು ಹೋಗು. ಹಾಗೇ ದಯವಿಟ್ಟು ಮರೀಬೇಡ, ನಿನ್ನ ಅಣ್ಣನಿಗೆ ಸಂಬಂಧಪಟ್ಟ ದೊಡ್ಡ ಗುಟ್ಟು ಪೂರಾ ನನ್ನ ಕೈಯಲ್ಲಿದೆ.’

ಸೋನ್ಯಾ ಹಿಂಜರಿಯುತ್ತ ಸ್ವಿದ್ರಿಗೈಲೋವ್‍ನನ್ನು ಇರಿಯುವ ಹಾಗೆ ನೋಡಿದಳು.

‘ಭಯ ಯಾಕೆ?’ ಶಾಂತವಾಗಿ ಕೇಳಿದ. ‘ಇದು ಹಳ್ಳಿಯಲ್ಲ. ಹಳ್ಳಿಯಲ್ಲಿ ನಾನು ನಿನಗೆ ಮಾಡಿದ್ದಕ್ಕಿಂತ ಹೆಚ್ಚಿನ ತೊಂದರೆ ನೀನು ನನಗೆ ಮಾಡಿದೆ. ಆದರೆ, ಇಲ್ಲಿ…’

‘ಸೋಫ್ಯಾಗೆ ಹೇಳಿದ್ದೀಯಾ?’

‘ಇಲ್ಲ. ಒಂದು ಮಾತೂ ಹೇಳಿಲ್ಲ, ನಾನು. ಅವಳು ಈಗ ಮನೆಯಲ್ಲಿದ್ದಾಳೋ ಅದೂ ಗೊತ್ತಿಲ್ಲ. ಇದ್ದರೂ ಇರಬಹುದು. ಅವಳ ಹತ್ತಿರದ ಬಂಧು ಒಬ್ಬರನ್ನ ಮಣ್ಣು ಮಾಡುವುದಕ್ಕೆ ಹೋಗಿದ್ದಳು. ಇಂಥಾ ಹೊತ್ತಲ್ಲಿ ಹೊರಗೆಲ್ಲೂ ಹೋಗಲ್ಲ. ಸದ್ಯಕ್ಕೆ ಯಾರಿಗೂ ಈ ವಿಚಾರ ಹೇಳಕೆ ಇಷ್ಟ ಇಲ್ಲ ನನಗೆ. ನಿಮಗೆ ಹೇಳಿ ತಪ್ಪು ಮಾಡಿದೆನಾ ಅನಿಸತಾ ಇದೆ. ಇಂಥ ವಿಚಾರದಲ್ಲಿ ಸ್ವಲ್ಪ ಅವಿವೇಕವೂ ವಂಚನೆ ಅನಿಸಿಕೊಳ್ಳತ್ತೆ. ನಾನು ಇರುವುದು ಇಲ್ಲೇ, ಈ ಮನೆಯಲ್ಲಿ. ನಾವು ಹೋಗತಾ ಇದೀವಲ್ಲ, ಅಲ್ಲೆ. ಇದು ವಾಚ್‍ಮ್ಯಾನ್. ಅವನಿಗೆ ನನ್ನ ಪರಿಚಯ ಚೆನ್ನಾಗಿದೆ. ನೋಡಿ, ನಮಸ್ಕಾರ ಮಾಡತಿದಾನೆ. ನಾನು ಮಹಿಳೆಯ ಜೊತೆ ಬರುತ್ತಾ ಇರುವುದು ನೋಡಿ ಆಗಲೇ ನಿಮ್ಮ ಮುಖ ಜ್ಞಾಪಕ ಇಟ್ಟುಕೊಂಡಿದಾನೆ. ನನ್ನ ಮೇಲೆ ನಿನಗೆ ಸಂಶಯ ಇದ್ದರೆ, ಭಯ ಇದ್ದರೆ ಇದರಿಂದ ಅನುಕೂಲವಾಗತ್ತೆ. ಇಷ್ಟು ಒರಟಾಗಿ ಮಾತಾಡಿದ್ದಕ್ಕೆ ಕ್ಷಮಿಸಬೇಕು. ಇಲ್ಲಿ ಬಾಡಿಗೆಗೆ ಇರುವವರಿಂದ ಈ ಕೋಣೆಯನ್ನ ಒಳಬಾಡಿಗೆಗೆ ತಗೊಂಡಿದೇನೆ. ಸೋಫ್ಯಾ ಕೂಡಾ ನನ್ನ ರೂಮಿನ ಗೋಡೆಯ ಆಚೆಗೆ ಇರುವ ಕೋಣೆಯಲ್ಲಿರತಾಳೆ. ಅವಳೂ ಒಳಬಾಡಿಗೆಗೆ ಇದ್ದಾಳೆ. ಇಡೀ ಈ ಮಹಡಿ ಪೂರಾ ಬಾಡಿಗೆದಾರರಿದ್ದಾರೆ. ಮಕ್ಕಳ ಹಾಗೆ ಭಯ ಯಾಕೆ? ಅಥವಾ ನಾನು ಅಷ್ಟೊಂದು ಭಯಂಕರವಾಗಿದೇನಾ?
ದೊಡ್ಡಸ್ತಿಕೆ ತೋರಿಸುವವನ ಹಾಗೆ ಸ್ವಿದ್ರಿಗೈಲೋವ್‍ನ ಮುಖದಲ್ಲಿ ನಗು ಹುಟ್ಟಿತು. ಅವನಿಗೀಗ ನಗುಗಿಗು ಬೇಕಾಗಿರಲಿಲ್ಲ. ಅವನೆದೆ ಜೋರಾಗಿ ಬಡಿದುಕೊಳ್ಳತಿತ್ತು. ಉಸಿರು ನಿಂತಿದೆ ಅನಿಸುತ್ತಿತ್ತು. ತನ್ನ ಉದ್ವೇಗ ಬಚ್ಚಿಟ್ಟುಕೊಳ್ಳುವುದಕ್ಕೇ ದನಿ ಎತ್ತರಿಸಿ ಮಾತಾಡುತ್ತಿದ್ದ. ಅವನ ಈ ವಿಶೇಷವಾದ ಉದ್ವಿಗ್ನತೆಯನ್ನು ದುನ್ಯಾ ಗಮನಿಸಲಿಲ್ಲ. ‘ಮಕ್ಕಳ ಹಾಗೆ ಹೆದರಿದ್ದೀಯ; ಅನ್ನುವ ಅವನ ಮಾತಿಗೆ ರೇಗಿದ್ದಳು. ಅವಳಿಗೆ ನಿಜವಾಗಿ ಭಯವಾಗಿತ್ತು. ‘ನೀನು ಮರ್ಯಾದೆ ಇಲ್ಲದ ಮನುಷ್ಯ ಅಂತ ಗೊತ್ತಿದ್ದರೂ ನಿನ್ನ ಬಗ್ಗೆ ಭಯ ಇಲ್ಲ ನನಗೆ, ನಡಿ,’ ಅಂದಳು. ಶಾಂತವಾಗಿ ಮಾತಾಡಿದರೂ ಅವಳ ಮುಖ ಬಿಳಿಚಿತ್ತು.
ಸ್ವಿದ್ರಿಗೈಲೋವ್ ಸೋನ್ಯಾಳ ಮನೆಯ ಮುಂದೆ ನಿಂತ.

‘ಮನೆಯಲ್ಲಿದಾಳೋ, ನೋಡತೀನಿ. ಇಲ್ಲ. ಲಕ್ ಇಲ್ಲ! ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು ಅವಳು. ಅವಳು ಹೋಗಿದ್ದರೆ ಅನಾಥಾಲಯದ ಮಹಿಳೆಯನ್ನ ನೋಡಕ್ಕೆ ಹೋಗಿರತಾಳೆ, ತಬ್ಬಲಿ ಮಕ್ಕಳ ವಿಚಾರವಾಗಿ. ಆ ಮಕ್ಕಳ ತಾಯಿ ತೀರಿಕೊಂಡಳು. ನಾನೂ ಇದಕ್ಕೆ ಸಿಕ್ಕಿಕೊಂಡಿದೇನೆ, ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೇನೆ. ಇನ್ನು ಹತ್ತು ನಿಮಿಷದಲ್ಲಿ ಸೋನ್ಯಾ ಬರದೆ ಇದ್ದರೆ ನಾನೇ ಅವಳನ್ನ ನಿನ್ನ ಹತ್ತಿರ ಕಳಿಸತೇನೆ. ಇವತ್ತೇ, ನೀನು ಹೂಂ ಅಂದರೆ. ಇಗೋ ಇದು ನನ್ನ ಮನೆ. ಈ ಎರಡು ರೂಮು ನನ್ನವು. ಈ ಮನೆಯ ಓನರು ಶ್ರೀಮತಿ ರೆಸ್ಸ್ಲಿಚ್ ಆ ಬಾಗಿಲ ಹಿಂದೆ ಅವಳ ಮನೆ. ಈಗ ಇಲ್ಲಿ ನೋಡು. ನನ್ನ ಮುಖ್ಯ ದಾಖಲೆಗಳನ್ನ ತೋರಿಸತೇನೆ: ನನ್ನ ಮಲಗುವ ಮನೆಯ ಈ ಬಾಗಿಲಿನಿಂದ ಹೋದರೆ ಎರಡು ಪೂರಾ ಹೊಸ ರೂಮು, ಖಾಲಿ, ಬಾಡಿಗೆಗೆ ಇವೆ. ಇಗೋ, ಇವೇ…ಸ್ವಲ್ಪ ಗಮನ ಕೊಟ್ಟು ನೋಡು…’

ತಕ್ಕಮಟ್ಟಿಗೆ ವಿಶಾಲವಾಗಿದ್ದ, ಫರ್ನಿಶ್ ಆಗಿದ್ದ, ಎರಡು ಕೋಣೆಗಳನ್ನು ಸ್ವಿದ್ರಿಗೈಲೋವ್ ಬಾಡಿಗೆಗೆ ಹಿಡಿದಿದ್ದ. ಅನುಮಾನಪಡುತ್ತ ಸುತ್ತಲೂ ನೋಡುತಿತದ್ದ ದುನ್ಯಾಳಿಗೆ ರೂಮಿನಲ್ಲಾಗಲೀ, ರೂಮಿನ ಅಲಂಕಾರದಲ್ಲಾಗಲೀ, ಆಕಾರ, ವಿನ್ಯಾಸದಲ್ಲಾಗಲೀ ಏನೂ ವಿಶೇಷ ಕಾಣಲಿಲ್ಲ. ಆದರೂ, ಗಮನಿಸಬೇಕಾದ ಸಂಗತಿಗಳಿದ್ದವು ಅಲ್ಲಿ—ಉದಾಹರಣೆಗೆ, ಸ್ವಿದ್ರಿಗೈಲೋವ್‍ನ ಬಾಡಿಗೆ ಮನೆ ಎರಡು ಖಾಲಿ, ನಿರ್ಜನ ರೂಮುಗಳ ನಡುವೆ ಇತ್ತು. ಕಾರಿಡಾರಿನಿಂದ ನೇರವಾದ ಪ್ರವೇಶವಿಲ್ಲದೆ ಮನೆಯ ಓನರಳ ಎರಡು ಕೋಣೆ ಹಾಯ್ದು ಬರಬೇಕಾಗಿತ್ತು. ಅವೂ ಬಲುಮಟ್ಟಿಗೆ ಖಾಲಿ ಇದ್ದವು. ಬೆಡ್‍ ರೂಮಿನ ಬೀಗ ಹಾಕಿದ್ದ ಬಾಗಿಲು ತೆರೆದು ಸ್ವಿದ್ರಿಗೈಲೋವ್ ಇನ್ನೊಂದು ಖಾಲಿ ಅಪಾರ್ಟ್‍ಮೆಂಟು ತೋರಿಸಿದ. ಅದೂ ಬಾಡಿಗೆಗೆ ಇತ್ತು. ದುನ್ಯಾ ಹೊಸ್ತಿಲಲ್ಲೇ ನಿಂತಳು. ಇವನ್ನೆಲ್ಲ ನೋಡಲು ಯಾಕೆ ಹೇಳುತ್ತಿದ್ದಾನೆ ಅನ್ನುವುದು ಅರ್ಥವಾಗಲಿಲ್ಲ. ಸ್ವಿದ್ರಿಗೈಲೋವ್ ಆತುರದಿಂದ ವಿವರಿಸಿದ.

ನಾನು ಹೇಳೋದೇನೂ ಅಂದರೆ ನೀನು ಅಲ್ಲಿದ್ದಷ್ಟೂ ಹೊತ್ತು ನರಳತಾ ಗೋಳಾಡತಾ ಇದ್ದೆ! ನಿನ್ನ ನೋಡಿದರೆ ಶ್ಖಿಲರ್ ಸಿಕ್ಕಾಪಟ್ಟೆ ಮುಜುಗರ ಪಡುತ್ತಾನೆ. ಬಾಗಿಲಿಗೆ ಕಿವಿ ಕೊಟ್ಟು ಕೇಳಬಾರದು ಅನ್ನತಾ ಇದೀಯ.. ಸರಿ, ಹೋಗು, ಹೋಗಿ ಪೋಲೀಸರಿಗೆ ನೀನೇ ಹೇಳು:

‘ಈಗ, ಈ ಎರಡನೆಯ ದೊಡ್ಡ ರೂಮು ನೋಡು. ಈ ಬಾಗಿಲು ನೋಡು. ಇದಕ್ಕೆ ಬೀಗ ಹಾಕಿದೆ. ಬಾಗಿಲ ಪಕ್ಕದಲ್ಲಿ ಕುರ್ಚಿ ಇದೆ. ಈ ಎರಡು ರೂಮುಗಳಲ್ಲಿ ಇರುವುದು ಇದೊಂದೇ ಕುರ್ಚಿ. ನಮ್ಮ ಮನೆಯಿಂದ ತಂದು ಇಲ್ಲಿ ಹಾಕಿದೆ. ಆರಾಮವಾಗಿ ಕೇಳಿಸಿಕೊಳ್ಳೋಣ ಅಂತ. ಈ ಬೀಗ ಹಾಕಿದ ಬಾಗಿಲ ಅತ್ತಕಡೆಯಲ್ಲಿ ಸೋಫ್ಯಾಳ ಮೇಜು ಇದು. ಅವಳು ಅಲ್ಲಿ ಕೂತು ರೋಡಿಯಾನ್ ರೊಮಾನ್ಯಿಚ್‍ ಜೊತೆಯಲ್ಲಿ ಮಾತಾಡುತ್ತಿದ್ದಳು. ನಾನು ಇಲ್ಲಿ ಕುರ್ಚಿಯ ಮೇಲೆ ಕೂತು ಅವರ ಮಾತು ಕದ್ದು ಕೇಳುತ್ತಿದ್ದೆ. ಎರಡು ದಿನ, ದಿನವೂ ಎರಡೆರಡು ಗಂಟೆ ಹೊತ್ತು ಅವರ ಮಾತು ಕೇಳಿಸಿಕೊಂಡರೆ ನನಗೆ ಏನಾದರೂ ವಿಷಯ ತಿಳಿಯದೆ ಇರತ್ತೆ ಅನ್ನೀಯಾ?’

‘ಕದ್ದು ಕೇಳಿದ್ದು?’

‘ಹೌದು, ಕದ್ದು ಕೇಳಿಸಿಕೊಂಡೆ: ಈಗ ನನ್ನ ರೂಮಿಗೆ ಹೋಗಣ. ಇಲ್ಲಿ ಕೂರುವುದಕ್ಕೂ ವ್ಯವಸ್ಥೆ ಇಲ್ಲ.’
ದುನ್ಯಾಳನ್ನು ತನ್ನ ಮೊದಲ ಕೋಣೆಗೆ ಕರಕೊಂಡು ಹೋದ. ಅದು ಅವನ ಮನೆಯ ಹಾಲ್‍. ಅವಳಿಗೆ ಕುರ್ಚಿ ತೋರಿಸಿದ. ಅವನು ಟೇಬಲ್ಲಿನ ಇನ್ನೊಂದು ತುದಿಯಲ್ಲಿ ಕೂತ. ಕೊನೆಯ ಪಕ್ಷ ಅವಳಿಂದ ಏಳು ಅಡಿ ದೂರದಲ್ಲಿದ್ದ. ಅವನ ಕಣ್ಣಲ್ಲಿ ಆಗಲೇ ಬೆಂಕಿ ಉರಿಯುತ್ತಿತ್ತು. ದುನ್ಯಾಳನ್ನು ಮೊದಲೇ ಹೆದರಿಸಿದ್ದ ಬೆಂಕಿ. ದುನ್ಯಾ ಮೆಟ್ಟಿಬಿದ್ದಳು. ಮತ್ತೊಮ್ಮೆ ಅನುಮಾನಪಡುತ್ತ ಸುತ್ತಲೂ ನೋಡಿದಳು. ಅದು ಸಹಜವಾದ ಪ್ರತಿಕ್ರಿಯೆ. ತನ್ನ ಮನಸಿನಲ್ಲಿರುವ ಅನುಮಾನ ಅವನಿಗೆ ತಿಳಿಯಬಾರದು ಸ್ವಿದ್ರಿಗೈಲೋವ್‍ನ ಮನೆ ಒಂದು ಥರಾ ಅಲಾಯಿದಾ ಇರುವ ಹಾಗಿದೆ ಅನ್ನುವುದು ಕೊನೆಗೂ ಅವಳಿಗೆ ಹೊಳೆಯಿತು. ಮನೆಯ ಓನರು ಇದಾಳಾ ಅಂತಾದರೂ ಕೇಳಬಹುದಾಗಿತ್ತು, ದುನ್ಯಾ ಕೇಳಲಿಲ್ಲ…ಹೆಮ್ಮೆ ಅವಳಿಗೆ. ತನ್ನ ಬಗ್ಗೆ ಚಿಂತೆ ಮಾಡುವುದಕ್ಕಿಂತ ದೊಡ್ಡದಾದ, ಸಹಿಸಲಾಗದ ಹಿಂಸೆ ಮನಸನ್ನು ಕಾಡುತ್ತಿತ್ತು.

‘ಇಗೋ, ಇದು ನಿನ್ನ ಕಾಗದ,’ ಕಾಗದವನ್ನು ಟೇಬಲ್ಲಿನ ಮೇಲಿಡುತ್ತ ಹೇಳಿದಳು, ‘ಹೇಗೆ ಬರೆದೆ ಇಂಥ ಕಾಗದ? ನನ್ನ ಅಣ್ಣ ಅಪರಾಧ ಮಾಡಿರಬಹುದು ಅನ್ನತೀಯಲ್ಲಾ? ಅದನ್ನ ಸ್ಪಷ್ಟವಾಗೂ ಹೇಳಲ್ಲ. ಈಗ ಪೂರಾ ಹೇಳದೆ ತಪ್ಪಿಸಿಕೊಳ್ಳುವ ಹಾಗಿಲ್ಲ. ತಿಳಕೋ, ಈ ಪೆದ್ದು ಕಥೆಯನ್ನ ನೀನು ಹೇಳುವುದಕ್ಕೂ ಮೊದಲೇ ನಾನು ಕೇಳಿದ್ದೇನೆ. ಆ ಕಥೆಯ ಒಂದು ಮಾತೂ ನಂಬಲ್ಲ. ದುಷ್ಟ ಕತೆ, ಹಾಸ್ಯಾಸ್ಪದ ಕತೆ, ಸಂಶಯದ ಕತೆ. ನನಗೆ ಗೊತ್ತು, ಯಾಕೆ ಅದು ಹುಟ್ಟಿತು ಅಂತಲೂ ಗೊತ್ತು. ನಿನ್ನ ಹತ್ತಿರ ಪುರಾವೆ ಏನೂ ಇಲ್ಲ. ಸಾಬೀತು ಮಾಡತೇನೆ ಅಂದಿದೀಯ. ಹೇಳು! ಮೊದಲೇ ಹೇಳಿರತೇನೆ, ನಿನ್ನ ಮಾತು ನಂಬಲ್ಲ! ನಂಬಲ್ಲ ನಾನು!…’

ದುನ್ಯಾ ದಡಬಡ ಮಾತಾಡಿದಳು. ಒಂದು ಕ್ಷಣ ಅವಳ ಮುಖ ಕೆಂಪಾಗಿತ್ತು.

‘ನಂಬಲ್ಲ ಅನ್ನುವವಳು ನನ್ನ ಜೊತೆ ಒಂಟಿಯಾಗಿ ನಮ್ಮ ಮನೆಗೆ ಬರುವ ರಿಸ್ಕು ಯಾಕೆ ತಗೊಂಡೆ? ಯಾಕೆ ಬಂದೆ? ಬರೀ ಕುತೂಹಲಾನಾ?’

‘ಸುಮ್ಮನೆ ಹಿಂಸೆ ಕೊಡಬೇಡ—ಹೇಳು, ಹೇಳು!’

‘ಧೈರ್ಯವಂತೆ ನೀನು. ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ದೇವರೇ, ರಝುಮಿಖಿನ್‍ನ ನಮ್ಮ ಜೊತೆಗೆ ಕರೆಯಬೇಕು ಅನ್ನುತೀಯ ಅಂದುಕೊಂಡಿದ್ದೆ. ರಝುಮಿಖಿನ್ ನಿನ್ನ ಜೊತೆ ಇರಲಿಲ್ಲ, ಹತ್ತಿರದಲ್ಲಿ ಎಲ್ಲೂ ಇರಲಿಲ್ಲ—ಚೆಕ್ ಮಾಡಿದೆ. ಧೈರ್ಯ ನಿನಗೆ. ಅಂದರೆ, ನಿನ್ನ ಅಣ್ಣನ ಸಂಗತಿ ಬೇರೆಯವರಿಗೆ ತಿಳಿಯಬಾರದು ಅಂತ ನಿನ್ನ ಮನಸಿನಲ್ಲಿದೆ. ದೇವತೆ, ದೇವತೆ ನೀನು…ನಿನ್ನಣ್ಣ, ನಾನೇನು ಹೇಳಲಿ? ನೀನೇ ನೋಡಿದೆಯಲ್ಲ, ಹೇಗಿದಾನೆ.’

‘ಅಷ್ಟೇನಾ ನಿನ್ನ ಮಾತಿಗೆ ಆಧಾರ?’

‘ಇಲ್ಲ, ಇಲ್ಲ. ಅವನೇ ಮಾತಾಡಿದ್ದು ಕೇಳಿದೇನೆ. ಎರಡು ಸಂಜೆ, ಇಲ್ಲಿಗೆ ಬಂದಿದ್ದ, ಸೋನ್ಯಾನ ನೋಡುವುದಕ್ಕೆ. ಅವರು ಎಲ್ಲಿ ಕೂತಿದ್ದರು, ತೋರಿಸಿದೇನೆ ನಿನಗೆ. ಅವಳಿಗೆ ಎಲ್ಲಾನೂ ಹೇಳಿ ತಪ್ಪೊಪ್ಪಿಗೆ ಮಾಡಿಕೊಂಡ. ಕೊಲೆಗಾರ ಅವನು. ಗಿರವಿ ಇಟ್ಟುಕೊಂಡು ಸಾಲ ಕೊಡುವ ಮುದುಕಿಯನ್ನ ಕೊಂದ. ಅವಳ ಗಂಡ, ಆಫೀಸರು, ಬದುಕಿಲ್ಲ. ನಿಮ್ಮಣ್ಣ ಅವಳ ಹತ್ತಿರ ಏನೇನೋ ಗಿರವಿ ಇಟ್ಟಿದ್ದ. ಅವಳ ತಂಗಿ, ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಲಿಝಾವೆಟಾಳನ್ನ ಕೂಡ ಕೊಂದ. ಅಕ್ಕನ ಕೊಲೆಯನ್ನು ಅವಳು ಅಕಸ್ಮಾತ್ ನೋಡಿದ್ದಳು. ಇಬ್ಬರನ್ನೂ ಕೊಡಲಿಯಲ್ಲಿ ಹೊಡೆದು ಕೊಂದ. ದರೋಡೆ ಮಾಡಬೇಕು ಅಂತ ಕೊಂದ. ದರೋಡೆ ಮಾಡಿದ, ದುಡ್ಡಿನ ಜೊತೆ ಕೆಲವು ವಸ್ತುಗಳನ್ನೂ ಎತ್ತಿಕೊಂಡ. ಎಲ್ಲಾ ವಿವರವನ್ನು ಸೋಫ್ಯಾಗೆ ಹೇಳಿದ, ಸ್ವತಃ ಹೇಳಿದ. ಈ ಗುಟ್ಟು ಗೊತ್ತಿರುವುದು ಅವಳೊಬ್ಬಳಿಗೆ ಮಾತ್ರ. ಅವಳಿಗೂ ಕೊಲೆಗೂ ಯಾವ ಸಂಬಂಧವೂ ಇಲ್ಲ. ಈಗ ನಿನಗಾಗಿರುವಷ್ಟೇ ಭಯ ಅವಳಿಗೂ ಆಗಿತ್ತು. ಚಿಂತೆ ಮಾಡಬೇಡ. ನಿನ್ನಣ್ಣನ ಗುಟ್ಟು ಬಯಲು ಮಾಡಲ್ಲ ಅವಳು.’

ದುನ್ಯಾಳ ಮುಖ ಬಣ್ಣಗೆಟ್ಟಿತ್ತು. ಉಸಿರಾಡುವುದು ಕಷ್ಟವಾಗಿತ್ತು. ತುಟಿ ಹೆಣದ ತುಟಿಯ ಹಾಗಿತ್ತು. ‘ಉಹ್ಞೂ, ಸಾಧ್ಯ ಇಲ್ಲ, ಕೊಲೆ ಮಾಡಕ್ಕೆ ಚಿಕ್ಕ ಕಾರಣ ಕೂಡ ಇಲ್ಲ…ಸುಳ್ಳು!…ಸುಳ್ಳು!’ ಗೊಣಗಿದಳು.

‘ಅವಳ ದುಡ್ಡು ದೋಚಿದ. ದರೋಡೇನೇ ಕೊಲೆಗೆ ಕಾರಣ. ನಿಜ, ಅವನೇ ಹೇಳಿದ ಹಾಗೆ ದುಡ್ಡನ್ನಾಗಲೀ ವಡವೆಗಳನ್ನಾಗಲೀ ಬಳಸಿಕೊಳ್ಳಲಲಿಲ್ಲ. ತಗೊಂಡು ಹೋಗಿ ಎಲ್ಲೋ ಯಾವುದೋ ಕಲ್ಲಿನ ಕೆಳಗೆ ಬಚ್ಚಿಟ್ಟ. ಇನ್ನೂ ಅಲ್ಲೇ ಇವೆ ಅವು. ಯಾಕೆ ಅಂದರೆ ಅವನ್ನ ಬಳಸುವುದಕ್ಕೆ ಧೈರ್ಯ ಬರಲಿಲ್ಲ ಅವನಿಗೆ.’

‘ಕಳ್ಳತನ ಮಾಡತಾನೆ, ದರೋಡೆ ಮಾಡತಾನೆ ಅಂತ ನಂಬಕ್ಕಾಗತ್ತಾ? ಯೋಚನೇನಾದರೂ ಮಾಡಕ್ಕಾಗತ್ತಾ?’ ದುನ್ಯಾ ಚೀರಿದಳು. ತಟ್ಟನೆ ಎದ್ದಳು. ‘ನಿನಗೆ ಅವನು ಗೊತ್ತು, ನೋಡಿದ್ದೀಯ! ಕಳ್ಳತನ ಮಾಡತಾನಾ ಅವನು?’

ಸ್ವಿದ್ರಿಗೈಲೋವ್‍ನನ್ನು ಬೇಡಿಕೊಳ್ಳುತ್ತಿದ್ದಳು. ಭಯ ಮರೆತು ಹೋಗಿತ್ತು.

‘ಸಾವಿರ, ಲಕ್ಷ, ಸಾಧ್ಯತೆಗಳು ಇವೆ. ಕಳ್ಳನಾದವನು ಕಳ್ಳತನ ಮಾಡತಾನೆ. ಅವನಿಗೆ ತಾನು ಕಳ್ಳ ಅಂತ ಗೊತ್ತು. ಇನ್ನು ಯಾರೋ ಒಬ್ಬ ಮರ್ಯಾದಸ್ಥ ಅಂಚೆ ಗಾಡಿಯನ್ನು ದರೋಡೆ ಮಾಡಿದ್ದು ಕೇಳಿದೇನೆ. ನಾನೇನೋ ಒಳ್ಳೆಯ ಕೆಲಸ ಮಾಡತಿದೇನೆ ಅಂದುಕೊಂಡಿರಬಹುದು ಅವನು. ಬೇರೆ ಯಾರಿಂದಲಾದರೂ ಕೇಳಿದ್ದರೆ ನಿಮ್ಮಣ್ಣನ ಕಥೆಯನ್ನ ನಾನೂ ನಂಬತಾ ಇರಲಿಲ್ಲ. ನನಗೆ ನನ್ನ ಕಿವಿ ಮೇಲೆ ನಂಬಿಕೆ ಇದೆ. ಕೊಲೆಗೆ ಇರುವ ಕಾರಣಗಳನ್ನೆಲ್ಲ ಅವನು ಸೋನ್ಯಾಗೆ ವಿವರಿಸಿದ. ಮೊದಮೊದಲು ಅವಳೂ ತನ್ನ ಕಿವಿಗಳನ್ನ ನಂಬಲಿಲ್ಲ. ಕೊನೆಗೆ ಅವಳ ಕಣ್ಣನ್ನ ನಂಬಬೇಕಾಯಿತು. ಅವನೇ ಇದನ್ನೆಲ್ಲ ಸ್ವತಃ ಹೇಳತಿದ್ದನಲ್ಲ, ಅದಕ್ಕೆ.’

‘ಕಾರಣ…ಏನು!’

‘ಅದು ದೊಡ್ಡ ಕಥೆ, ಅವದೋತ್ಯ ರೊಮನೋವ್ನ. ಏನಂದರೆ, ಅದನ್ನ ಹೇಗೆ ಹೇಳಲಿ ಗೊತ್ತಾಗತಿಲ್ಲ. ಒಂಥರಾ ಥಿಯರಿ. ಉದಾಹರಣೆಗೆ, ಮುಖ್ಯವಾದ ಉದ್ದೇಶ ಒಳ್ಳೆಯದಾಗಿದ್ದರೆ ಸರಿ, ಒಂದು ಕೆಟ್ಟ ಕೆಲಸ ಮಾಡಿದರೂ ಪರವಾಗಿಲ್ಲ ಅನ್ನೋ ಥರ. ಒಂದು ಕೆಟ್ಟ ಕೆಲಸದಿಂದ ನೂರು ಒಳ್ಳೆಯ ಕೆಲಸ! ಅಲ್ಲದೆ ಯುವಕ, ವಿದ್ಯಾವಂತ, ಸಿಕ್ಕಾಪಟ್ಟೆ ಅಭಿಮಾನಿ, ಅಂಥವನು ಬರೀ ಮೂರು ಸಾವಿರ ರೂಬಲ್ ಇದ್ದರೆ ಸಾಕು, ನನ್ನ ಇಡೀ ಭವಿಷ್ಯ, ಭವಿಷ್ಯ, ಬದುಕು ಬೇರೆ ಥರ ಆಗಿಬಿಡತ್ತೆ ಅನ್ನಿಸಿ ಕೆರಳತಾನೆ. ಆದರೆ ಅವನ ಹತ್ತಿರ ಮೂರು ಸಾವಿರ ಇರಲ್ಲ. ಇದರ ಜೊತೆಗೆ ಹಸಿವಿನ ಸಂಕಟ, ಇಕ್ಕಟ್ಟು ಮನೆ, ಚಿಂದಿ ಬಟ್ಟೆ, ತನ್ನ ಪಾಡು, ಅಮ್ಮನ ಪಾಡು, ತಂಗಿಯ ಪಾಡು. ಎಲ್ಲಕ್ಕಿಂತ ಮುಖ್ಯವಾಗಿ, ಅಭಿಮಾನ, ಹೆಮ್ಮೆ, ಬಡಿವಾರ…ಅಲ್ಲಾ, ಒಳ್ಳೆಯ ಗುಣಗಳು ಇರಬಹುದು, ದೇವರಿಗೇ ಗೊತ್ತು…ನಾನು ನಿಮ್ಮಣ್ಣನ್ನ ಬೈಯುತ್ತಾ ಇಲ್ಲ. ಅವನದೇ ಒಂದು ಥಿಯರಿ ಇದೆ. ಒಂಥರಾ ಥಿಯರಿ. ಅದರ ಪ್ರಕಾರ ಜನ ಎರಡು ಥರದವರು, ಕಚ್ಚಾ ಸಾಮಗ್ರಿಗಳು ಇದ್ದ ಹಾಗೆ ಇರುವವರು ಒಂದು ಥರ, ವಿಶೇಷವಾಗಿ ಇರುವವರು ಇನ್ನೊಂದು ಥರ. ವಿಶೇಷವಾದ ಜನಕ್ಕೆ ಅವರ ಮಟ್ಟ, ಅಂತಸ್ತಿನ ಕಾರಣದಿಂದ ಕಾನೂನು ಅನ್ನುವುದು ಇರಲ್ಲ. ಸಾಮಾನ್ಯ ಜನಕ್ಕೆ, ಮಂದೆಯ ಹಾಗೆ ಇರುವವರಿಗೆ ಕಾನೂನು ಮಾಡಿ ಆಳುವವರು ಅವರು. ಎಲ್ಲಾ ಥಿಯರಿಗಳ ಹಾಗೆ ಇದೂ ಒಂಥರಾ ಚೆನ್ನಾಗಿದೆ. ನಿಮ್ಮಣ್ಣನಿಗೆ ನೆಪೋಲಿಯನ್‍ ಪ್ರಭಾವ ಜಾಸ್ತಿ. ಅದರಲ್ಲಿ ಕೊಚ್ಚಿ ಹೋಗಿದಾನೆ. ನೆಪೋಲಿಯನ್ನು, ಅವನಂಥ ಮಹಾ ಪುರುಷರು ತಮ್ಮ ಉದ್ದೇಶ ಈಡೇರಿಸುವುದಕ್ಕೆ ಒಂದು ಕೆಟ್ಟ ಕೆಲಸ ಮಾಡುವುದಕ್ಕೆ ಹಿಂಜರಿಯಲ್ಲ. ನಿಮ್ಮಣ್ಣ ತಾನೂ ಕೂಡ ಅಂಥ ಪ್ರತಿಬಾವಂಥ ಅಂತ ಕಲ್ಪನೆ ಮಾಡಿಕೊಂಡಿದಾನೆ. ಅಂದರೆ, ಸ್ವಲ್ಪ ಕಾಲ ಹಾಗಿದ್ದ. ತುಂಬ ನೋವುಪಟ್ಟ, ಪಡತಾ ಇದಾನೆ- ಸಿದ್ಧಾಂತ ಕಟ್ಟುವುದಕ್ಕೆ ಗೊತ್ತು, ಆದರೆ ಎದುರಾದ ಕಷ್ಟವನ್ನ ಪ್ರತಿಭಾವಂತನ ಹಾಗೆ ಎದುರಿಸೋದಕ್ಕೆ ಆಗಲಿಲ್ಲ, ಹಿಂಜರಿಯದೆ ಒಂದು ಕೆಟ್ಟ ಕೆಲಸ ಮಾಡಕ್ಕೆ ಆಗಲಿಲ್ಲ, ಪ್ರತಿಭಾವಂತ ಅಲ್ಲ ಅಂತ ದುಃಖಪಡತಿದ್ದಾನೆ. ಅಭಿಮಾನ ತುಂಬಿಕೊಂಡಿರುವ ಯುವಕನಿಗೆ ಇದು ಅವಮಾನ ಅನಿಸತ್ತೆ, ಅದರಲ್ಲೂ ನಮ್ಮ ಈ ಕಾಲದಲ್ಲಿ…’

‘ಮತ್ತೆ ಪಶ್ಚಾತ್ತಾಪ? ಆತ್ಮಸಾಕ್ಷಿ? ನಮ್ಮಣ್ಣನಿಗೆ ಇವು ಯಾವುದೂ ಇಲ್ಲ, ನೀತಿ ಇಲ್ಲ ಅನ್ನತೀಯಾ? ಹಾಗೇನಾ ಅವನಿರೋದು?’

‘ಅಯ್ಯೋ, ಅವದೋತ್ಯ, ಎಲ್ಲಾ ಗೊಂದಲ, ಗಜಿಬಿಜಿ ಈಗ ಹುಟ್ಟಿದೆ, ಮೊದಲು ಎಲ್ಲಾ ವ್ಯವಸ್ಥಿತವಾಗಿತ್ತು ಅಂತಲ್ಲ. ರಶ್ಯಾದ ಜನ ದೊಡ್ಡ ಮನಸಿನವರು. ಈ ದೇಶದಷ್ಟೇ ದೊಡ್ಡದು ಅವರ ಮನಸ್ಸು. ಅದ್ಭುತವಾದದ್ದೆಲ್ಲ ನಮ್ಮ ಜನಕ್ಕೆ ಇಷ್ಟ. ಜನದ್ದು ಅವ್ಯವಸ್ಥೆಯ ಮನಸ್ಸು. ವಿಶೇಷವಾದ ಪ್ರತಿಭೆ ಇರದಿದ್ದರೆ ವಿಶಾಲದ ಮನಸಿನಿಂದ ಅನಾಹುತ ಆಗತ್ತೆ. ಇದೇ ವಿಷಯದ ಬಗ್ಗೆ ನೀನೂ ನಾನೂ ಇದೇ ಥರ ನಮ್ಮಷ್ಟಕ್ಕೇ, ರಾತ್ರಿ ಊಟ ಆದಮೇಲೆ ಟೆರೇಸಿನ ಮೇಲೆ ಕೂತು ಎಷ್ಟು ಮಾತಾಡಿದೇವೆ, ನೆನಪಿದೆ ಅಲ್ಲವಾ? ನನ್ನ ವಿಶಾಲವಾದ ಮನಸನ್ನ ಟೀಕೆ ಮಾಡತಿದ್ದೆ. ಯಾರಿಗೆ ಗೊತ್ತು, ನಾವು ಮಾತಾಡತಾ ಇದ್ದ ಹೊತ್ತಿನಲ್ಲಿ ಅವನಿಗೂ ಅಂಥವೇ ಯೋಚನೆ ಬಂದಿರಬಹುದು. ನಮ್ಮ ಸುಶಿಕ್ಷಿತ ಸಮಾಜಕ್ಕೆ ಪವಿತ್ರವಾದ ಪರಂಪರೆ ಇಲ್ಲ, ಅವದೋತ್ಯ, ಇದ್ದರೂ ಪುಸ್ತಕ ಓದಿ, ತಿಳಕೊಂಡದ್ದನ್ನ ಹೇಗೆ ಹೇಗೋ ಹೊಂದಿಸಿಕೊಂಡಿರತಾರೆ ಅಷ್ಟೇ. ಇಲ್ಲಾ, ಹಳೆಯ ಕಥೆ ಕೇಳಿರತಾರೆ. ಅವರೆಲ್ಲ ವಿದ್ವಾಂಸರು, ಲೋಕದ ವ್ಯವಹಾರದಲ್ಲಿ ಮೂರ್ಖರು. ನನ್ನ ಅಭಿಪ್ರಾಯಗಳು ಬಹಳ ಮಟ್ಟಿಗೆ ನಿನಗೆ ಗೊತ್ತು. ನಾನು ಯಾರನ್ನೂ ಬೈಯುತ್ತ, ಟೀಕೆ ಮಾಡುತ್ತಾ ಇಲ್ಲ. ಸ್ವತಃ ನಾನೇ ಸೋಮಾರಿ. ಹಾಗೇ ಇರತೇನೆ. ಈ ವಿಷಯ ನಾವು ಬೇಕಾದಷ್ಟು ಸಲ ಮಾತಾಡಿದೇವೆ. ನನ್ನ ತೀರ್ಮಾನ ಕೇಳಿ ನೀನು ಕುತೂಹಲ ಕೂಡ ಪಟ್ಟಿದೀಯ…ಯಾಕೆ, ಅವದೋತ್ಯ, ಬಿಳಿಚಿಕೊಂಡೆ?’

‘ಅವನ ಈ ಸಿದ್ಧಾಂತ ಗೊತ್ತು. ಅದನ್ನ ಪೇಪರಲ್ಲಿ ಲೇಖನ ಬರೆದಿದ್ದ. ಕೆಲವು ಜನ ಏನು ಬೇಕಾದರೂ ಮಾಡುವುದಕ್ಕೆ ಅವಕಾಶ ಇದೆ ಅಂತ. ರಝುಮಿಖಿನ್ ತಂದು ತೋರಿಸಿದ್ದ.’

‘ರಝುಮಿಖಿನ್? ನಿಮ್ಮಣ್ಣನ ಸ್ನೇಹಿತ? ನಿಮ್ಮಣ್ಣನ ಲೇಖನ? ಪತ್ರಿಕೆಯಲ್ಲಿ? ಅಂಥ ಲೇಖನ ಬರೆದನಾ? ಗೊತ್ತಿರಲಿಲ್ಲ. ತುಂಬ ಕುತೂಹಲ ಹುಟ್ಟತಾ ಇದೆ! ಎಲ್ಲಿಗೆ ಹೊರಟೆ ಅವದೋತ್ಯ?’

‘ಸೋನ್ಯಾನ ನೋಡಬೇಕು,’ ದುನ್ಯಾ ದುರ್ಬಲವಾದ ದನಿಯಲ್ಲಿ ಅಂದಳು. ‘ಇಷ್ಟು ಹೊತ್ತಿಗೆ ಬಂದಿರಬಹುದು. ಈಗ ಅವಳನ್ನ ನೋಡಲೇಬೇಕು.…’

ದುನ್ಯಾ ಮಾತಾಡಲಿಲ್ಲ. ಉಸಿರಾಡುವುದು ಕಷ್ಟವಾಗಿತ್ತು.

‘ರಾತ್ರಿ ಬಹಳ ಹೊತ್ತಾಗುವವರೆಗೂ ಸೋಫ್ಯಾ ಬರಲ್ಲ. ಬಂದಿದ್ದರೆ ಬಹಳ ಬೇಗ ಬರಬೇಕಾಗಿತ್ತು, ಇಲ್ಲಾಂದರೆ ಬಹಳ ಲೇಟಾಗತ್ತೆ.’

‘ಸುಳ್ಳು, ಹೇಳತಾ ಇದೀಯ! ಗೊತ್ತು, ಸುಳ್ಳು…ಸುಳ್ಳು…ಎಲ್ಲಾನೂ ಸುಳ್ಳು! ನಂಬಲ್ಲ…ನಾನು ನಂಬಲ್ಲ!’ ಭಯವಾಗಿ, ಹುಚ್ಚಿಯಂತೆ ಕೂಗಿದಳು ದುನ್ಯಾ.

‘ಅವದೋತ್ಯಾ ರೊಮನೋವ್ನ, ಏನಾಯಿತು? ಎಚ್ಚರ ಮಾಡಿಕೋ!’ ತಗೋ, ಸ್ವಲ್ಪ ನೀರು ಕುಡಿ…’
ಅವಳ ಮೇಲೆ ನೀರು ಚಿಮುಕಿಸಿದ. ದುನ್ಯಾ ಎಚ್ಚರಗೊಂಡಳು.

‘ಸುದ್ದಿ ಕೇಳಿ ಮನಸು ಕೆಟ್ಟಿದೆ! ಸ್ವಿದ್ರಿಗೈಲೋವ್ ತನ್ನಷ್ಟಕ್ಕೇ ಗೊಣಗಿದ. ‘ಅವದೋತ್ಯ, ಸಮಾಧಾನ ಮಾಡಿಕೋ! ನಿಮ್ಮಣ್ಣನಿಗೆ ಸ್ನೇಹಿತರು ಇದಾರೆ. ನಾವೆಲ್ಲ ಸೇರಿ ಅವನನ್ನ ಕಾಪಾಡತೇವೆ. ಅಣ್ಣನ್ನ ವಿದೇಶಕ್ಕೆ ಕರಕೊಂಡು ಹೋಗಲಾ? ನನ್ನ ಹತ್ತಿರ ದುಡ್ಡಿದೆ. ಮೂರು ದಿನದಲ್ಲಿ ಟಿಕೆಟ್ಟು ಸಿಗತ್ತೆ. ಅವನಿನ್ನೂ ಬದುಕಿನಲ್ಲಿ ಬೇಕಾದಷ್ಟು ಒಳ್ಳೆಯ ಕೆಲಸ ಮಾಡುವುದಿದೆ. ಸಮಾಧಾನ ಮಾಡಿಕೋ. ಹೇಗಿದ್ದೀಯ ಈಗ? ಸ್ವಲ್ಪ ಪರವಾಗಿಲ್ಲವಾ?’

‘ದುಷ್ಣ! ಇನ್ನೂ ನನ್ನ ಅಣಕಿಸಿ ನಗತಾ ಇದಾನೆ! ಹೋಗಬೇಕು…’

‘ಎಲ್ಲಿಗೆ ಹೋಗತಿದ್ದೀಯ? ಎಲ್ಲಿಗೆ?’

‘ಅಣ್ಣನ ಹತ್ತಿರ. ಎಲ್ಲಿ ಅವನು? ಗೊತ್ತಾ? ಯಾಕೆ ಈ ಬಾಗಿಲಿಗೆ ಬೀಗ ಹಾಕಿದೆ? ಈ ಬಾಗಿಲಿಂದಾನೇ ಒಳಕ್ಕೆ ಬಂದೆವು, ಈಗ ಬೀಗ ಹಾಕಿದೆ. ಯಾವಾಗ ಹಾಕಿದೆ?’

‘ನಾವೀಗ ಮಾತಾಡತಿರೋ ವಿಷಯ ಮನೆಯಲ್ಲಿರೋರಿಗೆಲ್ಲ ಕೇಳಿಸಬಾರದು ಅಂತ. ನಿನ್ನ ಅಣಕಿಸತಾ ಇಲ್ಲ. ಈ ಥರ ಮಾತಾಡಿ ಆಡೀ ಸಾಕಾಗಿಹೋಗಿದೆ. ಇಂಥ ಹೊತ್ತಲ್ಲಿ ಎಲ್ಲಿಗೆ ಹೋಗತೀಯ, ಹೇಳು? ಅಥವ ನಿಮ್ಮಣ್ಣ ಸಿಕ್ಕಿಬೀಳುವುದು ನಿನಗಿಷ್ಟಾನಾ? ಅವನು ಸಿಟ್ಟಿಗೇಳುವ ಹಾಗೆ ಮಾಡಿ ಅವನು ತಾನಾಗೇ ಸಿಕ್ಕಿಬೀಳುವ ಹಾಗೆ ಮಾಡತೀಯ. ಅವನ ಮೇಲೆ ಕಣ್ಣಿಟ್ಟಿದಾರೆ, ತಿಳಕೋ. ಅವನನ್ನ ಹಿಂಬಾಲಿಸತಾ ಇದಾರೆ. ನೀನು ಹೋಗಿ ಅವನು ಸಿಕ್ಕಿಬೀಳುವ ಹಾಗೆ ಮಾಡತೀಯ. ತಾಳು. ಸ್ವಲ್ಪ ಹೊತ್ತಿಗೆ ಮುಂಚೆ ಅವನನ್ನ ನೋಡಿ ಮಾತಾಡಿಸಿದೆ. ಈಗಲೂ ಅವನನ್ನ ಉಳಿಸಬಹುದು. ತಾಳು. ಕೂತುಕೋ. ನಾವಿಬ್ಬರೂ ಸೇರಿ ಯೋಚನೆ ಮಾಡಿ ನೋಡಣ. ಅದಕ್ಕೇ ನಿನಗೆ ಹೇಳಿ ಕಳುಹಿಸಿದ್ದು. ಒಟ್ಟಿಗೆ ಕೂತು ಹುಷಾರಾಗಿ ಮಾತಾಡೋಣ ಅಂತ. ಕೂತುಕೋ!

‘ಹೇಗೆ ಉಳಿಸತೀಯ? ಆಗತ್ತಾ?’
ದುನ್ಯಾ ಕೂತಳು. ಅವಳ ಪಕ್ಕದಲ್ಲಿ ಸ್ವಿದ್ರಿಗೈಲೋವ್ ಕೂತ.

‘ಎಲ್ಲಾ ನಿನ್ನ ಕೈಯಲ್ಲಿದೆ, ನಿನ್ನ ಕೈಯಲ್ಲೇ,’ ಅವನ ಕಣ್ಣು ಹೊಳೆಯುತಿದ್ದವು, ದನಿ ಪಿಸುನುಡಿಯಾಗಿತ್ತು. ಗೊಂದಲಪಡುತ್ತಿದ್ದ, ಉದ್ವೇಗದಲ್ಲಿ ಮಾತು ಕಷ್ಟವಾಗುತ್ತಿತ್ತು.

ದುನ್ಯಾ ಭಯಪಟ್ಟು ಅವನಿಂದ ದೂರ ಸರಿದಳು. ಅವನೂ ನಡುಗುತ್ತಿದ್ದ.

‘ನೀನು…ಒಂದು ಮಾತು ಹೇಳು, ಕಾಪಾಡತೇನೆ! ನಾನು…ನಾನು ಕಾಪಾಡತೇನೆ. ದುಡ್ಡಿದೆ, ಸ್ನೇಹಿತರಿದ್ದಾರೆ. ಅವನನ್ನ ತಕ್ಷಣ ಇಲ್ಲಿಂದ ಸಾಗಿಸಿಬಿಡತೇನೆ. ಪಾಸ್‍ಪೋರ್ಟು ಮಾಡಿಸತೇನೆ. ಎರಡು, ಅವನಿಗೊಂದು, ನನಗೊಂದು. ಸ್ನೇಹಿತರಿದ್ದಾರೆ. ಸಹಾಯಮಾಡತಾರೆ. ಮಾಡಲಾ? ನಿನಗೂ ಒಂದು ಪಾಸ್‍ಪೋರ್ಟು ಮಾಡಿಸತೇನೆ…ನಿಮ್ಮ ಅಮ್ಮ…ರಝುಮಿಖಿನ್ ಯಾಕೆ ಸುಮ್ಮನೆ? ಐ ಲವ್‍ ಯೂ…ತುಂಬಾ ನಿನ್ನ ಲಂಗದ ಅಂಚಿಗೆ ಮುತ್ತಿಡತೇನೆ. ಪ್ಲೀಸ್, ಹ್ಞೂಂ ಅನ್ನು, ಅನ್ನು! ನಿನ್ನ ಬಟ್ಟೆಯ ಸರಬರ ಸದ್ದು ಕೇಳಿ ತಡೆಯಲಾರೆ! ಹೀಗೆ ಮಾಡು ಅನ್ನು, ಹಾಗೇ ಮಾಡತೇನೆ! ಏನು ಬೇಕಾದರೂ! ಅಸಾಧ್ಯವಾದದ್ದು ಕೂಡಾ! ನೀನು ಹೇಳಿದ್ದನ್ನ ನಂಬತೇನೆ. ನಂಬತೇನೆ. ಏನು ಬೇಕಾದರೂ ಮಾಡತೇನೆ! ಏನು ಬೇಕಾದರೂ! ಬೇಡ, ಹಾಗೆ ನೋಡ ಬೇಡ ನನ್ನ! ಹಾಗೆ ನೋಡಿ ಕೊಲ್ಲಬೇಡ..’

ಹುಚ್ಚು ಹುಚ್ಚಾಗಿ ಕೂಗಾಡುವುದಕ್ಕೆ ಶುರು ಮಾಡಿದ್ದ. ಇದ್ದಕಿದ್ದ ಹಾಗೆ ಅವನಿಗೇನೋ ಆಯಿತು. ತಟ್ಟನೆ ಏನೋ ಹೊಳೆದ ಹಾಗೆ. ದುನ್ಯಾ ಬಾಗಿಲ ಹತ್ತಿರಕ್ಕೆ ಓಡಿದ್ದಳು.

‘ತೆಗೀರಿ! ಬಾಗಿಲು! ಬಾಗಿಲೂ! ತೆಗೀರೀ!’ ಬಾಗಲಾಚೆ ಇರುವ ಯಾರನ್ನೋ ಕೂಗುತ್ತಾ ಬಾಗಿಲು ಹಿಡಿದು ಅಲ್ಲಾಡಿಸಿದಳು. ‘ಪ್ಲೀಸ್! ಯಾರಿದ್ದೀರೀ!’

ಸ್ವಿದ್ರಿಗೈಲೋವ್ ಎದ್ದು ನಿಂತ. ಸುದಾರಿಸಿಕೊಂಡ. ಇನ್ನೂ ಕಂಪಿಸುತ್ತಿದ್ದ ಅವನ ತುಟಿಯ ಮೇಲೆ ದ್ವೇಷದ, ಗೇಲಿಯ ನಗು ನಿಧಾನವಾಗಿ ಮೂಡುತ್ತಿತ್ತು,.

‘ಯಾರೂ ಇಲ್ಲ, ಅಲ್ಲಿ,’ ಮೆಲುವಾಗಿ, ಸಮಾಧಾನವಾಗಿ ಹೇಳಿದ. ‘ಓನರಮ್ಮ ಹೊರಗೆ ಹೋಗಿದಾಳೆ. ಹೀಗೆ ಕೂಗಿದರೆ ಏನೂ ಆಗಲ್ಲ. ಸುಮ್ಮನೆ ಒದ್ದಾಡತಾ ಇದ್ದೀಯ.’

‘ಬೀಗದ ಕೈ ಎಲ್ಲಿ? ತೆಗೀ ಬಾಗಿಲು, ಈಗಲೇ, ಈಗಲೇ. ಥೂ, ದುಷ್ಟಾ!’

‘ಕೀ ಕಳೆದು ಹೋಗಿದೆ, ಸಿಗತಾ ಇಲ್ಲ.’

‘ಆಹ್! ಬಲವಂತ ಮಾಡತೀಯಾ!’ ದುನ್ಯಾ ಚೀರಿದಳು. ಮುಖದಲ್ಲಿ ಜೀವ ಕಳೆ ಇರಲಿಲ್ಲ. ಮೂಲೆಗೆ ಓಡಿದಳು. ಅಲ್ಲಿದ್ದ ಪುಟ್ಟ ಟೇಬಲ್ಲಿನ ಹಿಂದೆ ನಿಂತಳು. ಕಿರುಚಲಿಲ್ಲ. ತನಗೆ ಹಿಂಸೆ ಕೊಡುತ್ತಿರುವವನ ಮೇಲೆ ದೃಷ್ಟಿ ನೆಟ್ಟು ಅವನ ಪ್ರತಿಯೊಂದೂ ಚಲನೆ ಗಮನಿಸುತ್ತಿದ್ದಳು. ಸ್ವಿದ್ರಿಗೈಲೋವ್ ತಾನು ನಿಂತಲ್ಲಿಂದ ಅಲುಗಾಡಲಿಲ್ಲ. ಕೋಣೆಯ ಇನ್ನೊಂದು ತುದಿಯಲ್ಲೇ ನಿಂತು ಅವಳನ್ನು ನೋಡುತ್ತಿದ್ದ. ಹೊರ ನೋಟಕ್ಕಾದರೂ ಅವನು ಮಾಮೂಲಾಗಿಯೇ ಇರುವ ಹಾಗೆ ಕಾಣುತಿದ್ದ. ಮುಖ ಮಾತ್ರ ಮೊದಲಿನ ಹಾಗೇ ಬಣ್ಣಗೆಟ್ಟಿತ್ತು. ತುಟಿಯ ಮೇಲಿದ್ದ ಗೇಲಿಯ ನಗು ಇನ್ನೂ ಹಾಗೇ ಇತ್ತು.

‘ಬಲವಂತ—ಅಂದೆಯಲ್ಲ ಅವದೋತ್ಯ, ಇದು ಬಲವಂತವೇ ಆಗಿದ್ದರೆ ನಾನು ಸಾಕಷ್ಟು ಎಚ್ಚರಿಕೆ ತೆಗೆದುಕೊಂಡಿದ್ದೇನೋ ಇಲ್ಲವೋ ನೀನೇ ತೀರ್ಮಾನ ಮಾಡು. ಸೋಫ್ಯಾ ಮನೆಯಲ್ಲಿಲ್ಲ. ಕಪೆರ್ನೌಮೋವ್‍ ಮನೆ ಇಲ್ಲಿಗೆ ದೂರ. ಬೀಗ ಹಾಕಿರುವ ಐದು ಬಾಗಿಲು ದಾಟಬೇಕು. ಕೊನೆಯದಾಗಿ, ನಾನು ನಿನಗಿಂತ ಎರಡರಷ್ಟು ಬಲಶಾಲಿ. ಅಲ್ಲದೆ ನನಗೆ ಭಯ ಇಲ್ಲ. ನೀನು ಆಮೇಲೆ ದೂರು ಕೊಡಕ್ಕೆ ಆಗಲ್ಲ. ಯಾಕೆ ಅಂದರೆ ದೂರು ಕೊಟ್ಟರೆ ನಿನ್ನಣ್ಣನ್ನ ಸಿಕ್ಕಿಸಿದ ಹಾಗಾಗತ್ತೆ, ಅಲ್ಲವಾ? ಮತ್ತೆ, ನಿನ್ನ ಮಾತು ಯಾರೂ ನಂಬಲ್ಲ. ಒಂಟಿ ಗಂಡಸು ಇರುವ ಮನೆಯಲ್ಲಿ ನಿನ್ನಂಥ ಹುಡುಗಿಗೆ ಏನು ಕೆಲಸ ಅಂತ ಕೇಳತಾರೆ. ನಿಮ್ಮ ಅಣ್ಣನನ್ನ ತ್ಯಾಗ ಮಾಡಿದರೂ ನೀನು ಏನನ್ನೂ ಸಾಬೀತು ಮಾಡಕ್ಕಾಗಲ್ಲ. ನಾನು ಬಲವಂತ ಮಾಡಿದೆ ಅಂತ ಸಾಬೀತು ಮಾಡುವುದು ಬಹಳ ಕಷ್ಟ, ಅವದೋತ್ಯ.’

‘ಸ್ಕೌಂಡ್ರಲ್!’ ದುನ್ಯಾ ಸಿಟ್ಟಿನಲ್ಲಿ ಅಂದಳು.

‘ಏನು ಬೇಕಾದರೂ ಅನ್ನು. ನಾನು ಬರಿಯ ಸೂಚನೆ ಕೊಡುತಿದ್ದೆ ಅಷ್ಟೆ. ನೀನು ಹೇಳಿದ್ದು ನಿಜ. ಬಲವಂತ ಮಾಡುವುದು ಅಸಹ್ಯ. ನಾನು ಹೇಳಿದ ರೀತಿಯಲ್ಲಿ ನಡೆದುಕೊಂಡು ಅಣ್ಣನನ್ನು ಉಳಿಸಿಕೊಳ್ಳತೀಯಾ- ಅಂತ ಕೇಳಿದೆ. ಅಂದರೆ, ನನ್ನ ಮಾತು ಒಪ್ಪಿದರೆ ಸಂದರ್ಭಕ್ಕೆ, ‘ಬಲವಂತಕ್ಕೆ’ ಶರಣಾದ ಹಾಗೆ, ಅಷ್ಟೆ. ಬಲವಂತ ಅನ್ನುವ ಮಾತು ಬಳಸದೆ ಇರಕ್ಕೆ ಆಗುವುದೇ ಇಲ್ಲ. ಯೋಚನೆ ಮಾಡಿ ನೋಡು, ನಿನ್ನಣ್ಣನ ಭವಿಷ್ಯ, ನಿಮ್ಮಮ್ಮನ ಭವಿಷ್ಯ ನಿನ್ನ ಕೈಯಲ್ಲಿದೆ. ನಿನ್ನ ಗುಲಾಮ ಆಗುತ್ತೇನೆ….ಜೀವನ ಪೂರ್ತಿ…ಇಲ್ಲೇ ಕಾಯತೇನೆ….’

ಸ್ವಿದ್ರಿಗೈಲೋವ್ ಅವಳಿಂದ ಹತ್ತು ಹೆಜ್ಜೆ ದೂರದಲ್ಲಿದ್ದ ಸೋಫಾದ ಮೇಲೆ ಕೂತ ಅವನ ದೃಢ ನಿರ್ಧಾರದ ಬಗ್ಗೆ ಅವಳಿಗಂತೂ ಯಾವ ಸಂಶಯವೂ ಉಳಿಯಲಿಲ್ಲ. ಅಲ್ಲದೆ ಅವನನ್ನು ಬಲ್ಲವಳು ಅವಳು…

ಇದ್ದಕಿದ್ದ ಹಾಗೆ ಜೇಬಿನಿಂದ ರಿವಾಲ್ವರ್ ತೆಗೆದಳು, ಕುದುರೆಯೇರಿಸಿ ರಿವಾಲ್ವರ್ ಹಿಡಿದ ಕೈಯನ್ನು ಮೇಜಿನ ಮೇಲೆ ಇರಿಸಿದಳು. ಸ್ವಿದ್ರಿಗೈಲೋವ್ ತಟ್ಟನೆದ್ದು ನಿಂತ.

‘ಹೀಗೋ ಸಮಾಚಾರ!’ ಆಶ್ಚರ್ಯದಿಂದ ಅಂದು, ತಿರಸ್ಕಾರದ ನಗು ಬೀರಿದ. ‘ಈಗ ಎಲ್ಲ ಬದಲಾಗಿ ಹೋಯಿತು. ನನ್ನ ಕೆಲಸವನ್ನು ನೀನೇ ಸುಲಭ ಮಾಡಿದೆ, ಅವದೋತ್ಯ! ಬಂದೂಕು ಎಲ್ಲಿ ಸಿಕ್ಕಿತು ನಿನಗೆ? ರಝುಮಿಖಿನ್‍ನದಾ? ಹ್ಞಾ! ಇದು ನನ್ನದೇ ರಿವಾಲ್ವರ್! ನನ್ನ ಹಳೆಯ ಗೆಳೆಯ! ಎಲ್ಲಿ ಹೋಯಿತೋ ಅಂತ ಹುಡುಕಿದ್ದೆ!…ಹಳ್ಳಿಯಲ್ಲಿ ನಿನಗೆ ಬಂದೂಕು ಹಾರಿಸುವ ಪಾಠ ಹೇಳಿಕೊಟ್ಟದ್ದು ವ್ಯರ್ಥವಾಗಲಿಲ್ಲ ಹಾಗಾದರೆ!’

‘ನಿನ್ನದಲ್ಲ, ಮಾರ್ಫಾ ಪೆಟ್ರೋವಾದ್ದು. ನೀನು ಅವಳನ್ನ ಕೊಂದೆ, ದುಷ್ಟ ನೀನು! ಅವಳ ಮನೆಯಲ್ಲಿದ್ದ ಯಾವುದೂ ನಿನ್ನದಲ್ಲ. ನೀನೆಂಥ ದುಷ್ಟ ಅನ್ನುವುದು ಗೊತ್ತಾದ ತಕ್ಷಣ ಇದನ್ನ ಎತ್ತಿಕೊಂಡೆ. ಇನ್ನೊಂದು ಹಜ್ಜೆ ಮುಂದಿಟ್ಟರೆ ದೇವರಾಣೆ, ನಿನ್ನ ಕೊಲ್ಲತೇನೆ!’
ದುನ್ಯಾ ಹುಚ್ಚಿಯ ಹಾಗೆ ಆಗಿದ್ದಳು. ರಿವಾಲ್ವರನ್ನು ಗಟ್ಟಿಯಾಗಿ ಹಿಡಿದಿದ್ದಳು.

‘ಸುಮ್ಮನೆ ಕೇಳತೇನೆ—ನಿಮ್ಮಣ್ಣನ ಗತಿ?’ ಸ್ವಿದ್ರಿಗೈಲೋವ್ ಇನ್ನೂ ಅಲ್ಲೇ ನಿಂತು ಕೇಳಿದ.

‘ಹಿಡಿದು ಕೊಡು ಅವನನ್ನ ಬೇಕಾದರೆ! ಅಲ್ಲಾಡಬೇಡ! ಅಲ್ಲಾಡಿದರೆ ಸುಟ್ಟು ಬಿಡತೇನೆ! ಹೆಂಡತೀಗೇ ವಿಷ ಹಾಕಿದವನು! ಗೊತ್ತು. ನೀನೇ ಕೊಲೆಗಾರ!’

‘ಮಾರ್ಫಾಗೆ ನಾನೇ ವಿಷ ಹಾಕಿದೆ ಅಂತ ಗ್ಯಾರಂಟಿ ಗೊತ್ತಾ?’

‘ನೀನೇ! ಅಂಥ ಮಾತು ನೀನೇ ಆಡಿದ್ದೆ ನನ್ನ ಹತ್ತಿರ, ವಿಷ ಹಾಕತೇನೆ ಅಂತ…ವಿಷ ತರೋದಕ್ಕೆ ನೀನು ಹೋಗಿದ್ದು ಗೊತ್ತು, ರೆಡಿ ಮಾಡಿಟ್ಟುಕೊಂಡಿದ್ದೆ, ನೀನೇ ಮಾಡಿದ್ದು, ಗೊತ್ತು.’

‘ಅಕಸ್ಮಾತ್ ನೀನು ಹೇಳಿದ್ದು ನಿಜ ಆಗಿದ್ದರೂ…ಅದಕ್ಕೆ ಕಾರಣ ನೀನೇ.’

‘ಸುಳ್ಳು! ನಿನ್ನ ದ್ವೇಷ ಮಾಡತಿದ್ದೆ, ಯಾವಾಗಲೂ!’

‘ಅಯ್ಯೋ ಅವದೋತ್ಯಾ, ಮರೆತುಬಿಟ್ಟಿದೀಯ. ನೀನು ನನಗೆ ಎಷ್ಟೇ ನೀತಿಯ ಭಾಷಣ ಬಿಗಿಯುತ್ತಿದ್ದರೂ ನನ್ನ ಬಗ್ಗೆ ನಿನ್ನ ಮನಸು ಕರಗಿ ಮೆದುವಾಗುತಿತ್ತು. ನಿನ್ನ ಕಣ್ಣು ನೋಡಿ ತಿಳಿದುಕೊಂಡೆ. ಜ್ಞಾಪಕ ಇದೆಯಾ—ಹುಣ್ಣಿಮೆಯ ರಾತ್ರಿ, ಬೆಳುದಿಂಗಳು, ಕೋಗಿಲೆ ಹಾಡು/’

‘ಸುಳ್ಳು!’ ಅವದೋತ್ಯ ಕಣ್ಣಲ್ಲಿ ಸಿಟ್ಟಿನ ಬೆಂಕಿ ಇತ್ತು.

‘ಸುಳ್ಳಾ? ಸುಳ್ಳ ಇರಬಹುದು ನಾನು. ಸುಳ್ಳು ಹೇಳಿದೆ. ಹೆಂಗಸರಿಗೆ ಸಣ್ಣಪುಟ್ಟ ಸಂಗತಿ ನೆನಪಿಸಬಾರದು,’ ಹಲ್ಲು ಕಿರಿದು ನಕ್ಕ.
‘ಕಾಡು ಮೃಗದಂಥವಳು, ನೀನು. ಸರಿ, ಶೂಟ್ ಮಾಡು.’
ದುನ್ಯಾ ರಿವಾಲ್ವರ್ ಮೇಲೆತ್ತಿದಳು. ಮುಖ ಬಿಳಿಚಿತ್ತು. ತುಟಿ ಕಂಪಿಸುತಿತ್ತು. ಕಪ್ಪು ಕಣ್ಣಿನಲ್ಲಿ ಬೆಂಕಿಯ ಉರಿ ಇತ್ತು. ಅವನನ್ನು ದಿಟ್ಟಿಸಿದಳು. ಗಟ್ಟಿ ಮನಸು ಮಾಡಿದ್ದಳು. ಎಷ್ಟು ದೂರದಲ್ಲಿದ್ದಾನೆ ಲೆಕ್ಕ ಹಾಕುತ್ತ ಅವನು ಅಲ್ಲಾಡಲಿ ನೋಡೋಣ ಅನ್ನುವ ಹಾಗೆ ಕಾಯುತ್ತಿದ್ದಳು. ಅವನ ಕಣ್ಣಿಗೆ ಅವಳು ಎಂದೂ ಅಷ್ಟು ಅದ್ಭುತವಾಗಿ ಕಂಡಿರಲಿಲ್ಲ. ರಿವಾಲ್ವರು ಎತ್ತಿದಾಗ ಅವಳ ಕಣ್ಣಿನಲ್ಲಿದ್ದ ಬೆಂಕಿ ಅವನೆದೆಯನ್ನು ಸುಡುತ್ತಿತ್ತು. ಎದೆ ಹಿಂಡಿದ ಹಾಗೆ ಅನಿಸುತ್ತಿತ್ತು. ಒಂದು ಹೆಜ್ಜೆ ಮುಂದಿಟ್ಟ. ಗುಂಡು ಹಾರಿತು. ಅವನ ತಲೆಯ ಪಕ್ಕದಲ್ಲೆ ಸವರಿಕೊಂಡು ಹೋಗಿ ಹಿಂದಿನ ಗೋಡೆಗೆ ಬಡಿಯಿತು. ನಿಂತ. ಮೆಲುವಾಗಿ ನಕ್ಕ.

‘ಕಣಜ ಕುಟುಕಿತು! ತಲೆಗೇ ನೇರ ಗುರಿ ಇಟ್ಟಳಲ್ಲ…ಏನಿದು? ರಕ್ತ!’ ಕರ್ಚೀಪು ತೆಗೆದು ರಕ್ತ ಒರೆಸಿಕೊಂಡ. ಬಲ ಕಣತಲೆಯಿಂದ ರಕ್ತ ಜಿನುಗಿತ್ತು. ಅವಳು ಹಾರಿಸಿದ ಗುಂಡು ಅವನ ತಲೆಯನ್ನು ಸವರಿಕೊಂಡು ಹೋಗಿತ್ತು. ದುನ್ಯಾ ಬಂದೂಕು ಹಿಡಿದ ಕೈ ತಗ್ಗಿಸಿ ಸ್ವಿದ್ರಿಗೈಲೋವ್‍ನನ್ನು ನೋಡಿದಳು. ಭಯದಿಂದಲ್ಲ, ವಿಚಿತ್ರವಾದ ಗೊಂದಲ ಹುಟ್ಟಿತ್ತು. ತಾನೇನು ಮಾಡಿದೆ, ಏನಾಗುತ್ತಿದೆ ಒಂದೂ ಅವಳಿಗೆ ಅರ್ಥವಾಗುತ್ತಿರಲಿಲ್ಲ.

‘ಗುರಿ ತಪ್ಪಿತು! ಮತ್ತೆ ಗುಂಡು ಹಾರಿಸು, ಕಾಯತಾ ಇದೇನೆ,’ ಸ್ವಿದ್ರಿಗೈಲೋವ್ ಮೆದುವಾಗಿ, ಇನ್ನೂ ಹಲ್ಲು ಕಿರಿಯುತ್ತಲೇ ಹೇಳಿದ. ದನಿಯಲ್ಲಿ ವಿಷಾದ ಇತ್ತು. ‘ಇಲ್ಲದೆ ಇದ್ದರೆ ನಿನ್ನ ಬಂದೂಕು ಕಿತ್ತುಕೊಳ್ಳುವುದಕ್ಕೆ ನನಗೆ ಟೈಮು ಸಿಗತ್ತೆ.’
ದುನ್ಯಾ ಮೆಟ್ಟಿಬಿದ್ದಳು. ತಟಕ್ಕನೆ ರಿವಾಲ್ವಾರು ಸಜ್ಜುಮಾಡಿಕೊಂಡು ಮತ್ತೆ ಗುರಿ ಇಟ್ಟಳು.

‘ಬಿಟ್ಟು ಬಿಡು ನನ್ನ! ಹೇಳತಾ ಇದೀನಿ, ಮತ್ತೆ ಶೂಟ್ ಮಾಡತೇನೆ, ದೇವರಾಣೆಗೂ…ಕೊಂದು ಬಿಡತೇನೆ!’ ಹತಾಶಳಾಗಿ ಅಂದಳು.

‘ಸರಿ…ಮೂರು ಹೆಜ್ಜೆ ದೂರದಿಂದ ಗುರಿ ತಪ್ಪಕ್ಕೆ ಸಾಧ್ಯ ಇಲ್ಲ. ಈಗ ನನ್ನ ಕೊಲ್ಲದೆ ಇದ್ದರೆ…’ ಅವನ ಕಣ್ಣು ಹೊಳೆದವು. ಇನ್ನೆರಡು ಹೆಜ್ಜೆ ಮುಂದಿಟ್ಟ.

ದುನ್ಯಾ ಕುದುರೆ ಒತ್ತಿದಳು. –ಮಿಸ್‍ಫೈರಾಯಿತು!

‘ಸರಿಯಾಗಿ ಲೋಡ್ ಮಾಡಲಿಲ್ಲ. ಇರಲಿ ಬಿಡು! ಇನ್ನೊಂದು ಗುಂಡಿದೆ. ಸರಿಯಾಗಿ ಹಾರಿಸು. ಕಾಯತೇನೆ.’
ಅವಳ ಮುಂದೆ ಎರಡು ಹೆಜ್ಜೆ ದೂರದಲ್ಲಿ ನಿಂತ. ಅವಳನ್ನೇ ನೋಡುತ್ತ, ದೃಢವಾಗಿ ನಿಂತ. ಕಣ್ಣಿನಲ್ಲಿ ಆವೇಶದ ಬೆಂಕಿ ಇತ್ತು. ಅವನು ಪ್ರಾಣ ಕೊಟ್ಟಾನೆಯೇ ಹೊರತು ತನ್ನನ್ನು ಹೋಗಲು ಬಿಡುವುದಿಲ್ಲ ಅನ್ನುವುದು ದುನ್ಯಾಗೆ ಅರ್ಥವಾಯಿತು. ಎರಡೇ ಹೆಜ್ಜೆ ಈ ಸಲ ಖಂಡಿತ ಕೊಲ್ಲತಾಳೆ!…

ಇದ್ದಕಿದ್ದ ಹಾಗೆ ರಿವಾಲ್ವರ್ ಎಸೆದಳು.

‘ರಿವಾಲ್ವರು ಬಿಸಾಕಿದಳು!’ ಸ್ವಿದ್ರಿಗೈಲೋವ್ ಆಶ್ಚರ್ಯಪಟ್ಟ. ಆಳವಾಗಿ ಉಸಿರೆಳೆದುಕೊಂಡ. ಮನಸಿನಲ್ಲಿದ್ದ ಯಾವುದೋ ಭಾರ ತಟ್ಟನೆ ಇಳಿಸಿದ ಹಾಗೆ. ಅದು ಕೇವಲ ಸಾವಿನ ಭಯದ ಭಾರ ಮಾತ್ರವಲ್ಲ—ಸಾವಿನ ಭಯವನ್ನು ಆ ಕ್ಷಣದಲ್ಲಿ ಅವನು ಅನುಭವಿಸಿಯೂ ಇರಲಿಲ್ಲ. ಹೆಚ್ಚು ವಿಷಾದದ, ಮತ್ತೂ ಹೆಚ್ಚಿನ ದುಃಖದ ಭಾವ, ಅವನಿಗೇ ಇನ್ನೂ ಅರಿವಾಗಿರದ ಪ್ರಬಲವಾದ ಶಕ್ತಿಯೊಂದರಿಂದ ಬಿಡುಗಡೆ ಸಿಕ್ಕಿದ ಹಾಗೆ ಅನಿಸಿತ್ತು.

ದುನ್ಯಾಳ ಹತ್ತಿರ ಹೋದ. ಮೆಲ್ಲನೆ ಅವಳ ಸೊಂಟ ಬಳಸಿದ. ಅವಳು ವಿರೋಧಿಸಲಿಲ್ಲ. ಮರದ ಎಲೆಯ ಹಾಗೆ ಕಂಪಿಸುತ್ತ ಯಾಚನೆಯ ನೋಟ ಬೀರಿದಳು. ಅವನು ಏನೋ ಹೇಳಬೇಕೆಂದುಕೊಂಡ. ತುಟಿ ಅಲುಗಿತು. ಮಾತು ಹೊರಡಲಿಲ್ಲ.

‘ಬಿಡು ನನ್ನ!’ ದುನ್ಯಾ ಬೇಡಿದಳು.

ಸ್ವಿದ್ರಿಗೈಲೋವ್ ಮೆಟ್ಟಿಬಿದ್ದ. ಬಿಡು ನನ್ನ ಅಂದ ಧ್ವನಿ ಈಗ ಬೇರೆಯ ಥರ ಕೇಳಿಸಿತು.

‘ಹಾಗಾದರೆ, ನೀನು ನನ್ನ ಪ್ರೀತಿ ಮಾಡಲ್ಲ?’ ಮೆಲುವಾಗಿ ಕೇಳಿದ.
ಇಲ್ಲ ಅನ್ನುವ ಹಾಗೆ ತಲೆ ಆಡಿಸಿದಳು ದುನ್ಯಾ.

‘ಯಾವತ್ತೂ ನನ್ನ ಪ್ರೀತಿ ಮಾಡಲ್ಲವಾ?’ ಹತಾಶನಾಗಿ ಪಿಸುನುಡಿದ.

‘ಯಾವತ್ತೂ ಇಲ್ಲ!’ ದುನ್ಯಾ ಪಿಸುನುಡಿದಳು.

ಕೆಲವು ಕ್ಷಣ ಸ್ವಿದ್ರಿಗೈಲೋವ್‍ನ ಮನಸಿನಲ್ಲಿ ಭಯಂಕರವಾದ ಮೌನ ಸಂಘರ್ಷ ನಡೆಯಿತು. ವಿವರಿಸಲು ಆಗದಂಥ ನೋಟವಿತ್ತು ಅವನ ಕಣ್ಣಿನಲ್ಲಿ. ತಟ್ಟನೆ ಕೈ ಹಿಂದೆಳೆದುಕೊಂಡ. ಮುಖ ತಿರುಗಿಸಿದ. ಕಿಟಕಿಯ ಹತ್ತಿರ ಹೋದ. ನಿಂತ.
ಇನ್ನೊಂದು ಕ್ಷಣ ಕಳೆಯಿತು.

‘ಬೀಗದ ಕೈ ಇಲ್ಲಿದೆ!’ (ಬೀಗದ ಕೈಯನ್ನು ಕೋಟಿನ ಎಡ ಜೇಬಿನಿಂದ ತೆಗೆದು ತನ್ನ ಹಿಂದೆ ಇದ್ದ ಮೇಜಿನ ಮೇಲಿಟ್ಟ. ದುನ್ಯಾಳತ್ತ ತಿರುಗಿಯೂ ನೋಡಲಿಲ್ಲ. ‘ತಗೊ, ಹೊರಟು ಹೋಗು!…’

ಇನ್ನೂ ಅವನ ದೃಷ್ಟಿ ಕಿಟಕಿಯಾಚೆಯೇ ಇತ್ತು.
ದುನ್ಯಾ ಟೇಬಲ್ಲಿನ ಹತ್ತಿರ ಬಂದು ಬೀಗದ ಕೈ ತೆಗೆದುಕೊಂಡಳು.

‘ಬೇಗ! ಬೇಗ!’ ಸ್ವಿದ್ರಿಗೈಲೋವ್ ಅಂದ. ಅವನು ಇನ್ನೂ ನಿಶ್ಚಲವಾಗಿದ್ದ, ಅವಳತ್ತ ತಿರುಗಿ ನೋಡಲಿಲ್ಲ. ಆದರೆ ;ಬೇಗ’ ಅನ್ನುವುದರಲ್ಲಿ ಯಾವುದೋ ಭಯಂಕರ ಸ್ವರದ ಪಲುಕು ಕೇಳಿಸಿರಬೇಕು. ದುನ್ಯಾಗೆ ಅರ್ಥವಾಯಿತು. ಬೀಗದ ಕೈ ಎತ್ತಿಕೊಂಡು, ಬಾಗಿಲ ಹತ್ತಿರ ಹೋದಳು. ಅವಸರವಾಗಿ ಬಾಗಿಲ ಬೀಗ ತೆಗೆದು, ರೂಮಿನಿಂದ ಓಡಿ ಹೋದಳು. ಒಂದೇ ಕ್ಷಣದಲ್ಲಿ ಕೆನಾಲಿನ ಸೇತುವೆಯತ್ತ ಹುಚ್ಚಿಯ ಹಾಗೆ ಓಡಿಹೋಗುತ್ತಿದ್ದಳು.

ಇನ್ನೂ ಮೂರು ನಿಮಿಷದಷ್ಟು ಹೊತ್ತು ಸ್ವಿದ್ರಿಗೈಲೋವ್ ಕಿಟಕಿಯ ಹತ್ತಿರವೇ ನಿಂತಿದ್ದ. ಕೊನೆಗೆ, ಮೌನವಾಗಿ ತಿರುಗಿದ, ಸುತ್ತಲೂ ನೋಡಿದ, ಹಣೆಯ ಮೇಲೆ ನಿಧಾನವಾಗಿ ಕೈಯಾಡಿಸಿಕೊಂಡ.. ಕನಿಕರ ಹುಟ್ಟಿಸುವಂಥ, ದುಃಖ ತುಂಬಿದ ವಿಚಿತ್ರವಾದ, ದುರ್ಬಲವಾದ ಹತಾಶ ನಗು ಮುಖದ ಮೇಲಿತ್ತು. ಒಣಗುತ್ತಿದ್ದ ರಕ್ತದ ಕಲೆ ಅಂಗೈಗೆ ಮೆತ್ತಿತು. ಅದನ್ನು ಸಿಟ್ಟಿನಿಂದ ನೋಡಿದ. ಟವಲನ್ನು ಒದ್ದೆ ಮಾಡಿ ಹಣೆ, ಕಣತಲೆ ಒರೆಸಿಕೊಂಡ. ಬಾಗಿಲ ಹತ್ತಿರ ದುನ್ಯಾ ಬಿಸಾಡಿದ್ದ ರಿವಾಲ್ವರ್ ತಟ್ಟನೆ ಕಣ್ಣಿಗೆ ಬಿತ್ತು. ಅದನ್ನೆತ್ತಿ ತಿರುಗಿಸಿ ನೋಡಿದ. ಜೇಬಿನಲ್ಲಿಟ್ಟುಕೊಳ್ಳುವಷ್ಟು ಪುಟ್ಟ ರಿವಾಲ್ವರ್. ಮೂರು ಶಾಟ್‍ಗಳ ಸಿಲಿಂಡರಿನದು. ಎರಡು ಲೋಡ್‍ ಇತ್ತು, ಒಂದು ಕ್ಯಾಪ್ ಹಾಗೇ ಉಳಿದಿತ್ತು. ಇನ್ನೊಂದು ಗುಂಡು ಹಾರಿಸುವ ಅವಕಾಶವಿತ್ತು. ಒಂದು ಕ್ಷಣ ಯೋಚನೆ ಮಾಡಿದ. ರಿವಾಲ್ವರನ್ನು ಜೇಬಿನಲ್ಲಿಟ್ಟುಕೊಂಡು, ಹ್ಯಾಟು ಹಾಕಿಕೊಂಡು ಹೊರಬಿದ್ದ.