ದೇವಾಲಯದೊಳಗೆ ಕಾಲಿರಿಸುತ್ತಿದ್ದಂತೆ ಕಟ್ಟಡದ ತುಂಬೆಲ್ಲ ನಿಂತ ಭವ್ಯವಾದ ಕಂಬಗಳು ಬೆರಗುಗೊಳಿಸುತ್ತವೆ. ಇಂಥ ಅರವತ್ನಾಲ್ಕು ಕಂಬಗಳನ್ನುಳ್ಳ ಮುಖಮಂಟಪವು ದೇಗುಲದ ಪ್ರಮುಖ ಆಕರ್ಷಣೆ. ಮಂಟಪದ ಸುತ್ತಲಿನ ಪ್ರತಿಯೊಂದು ಕಂಬದಲ್ಲೂ ನಿಂತ ಭಂಗಿಯಲ್ಲಿರುವ ಸಿಂಹವೊಂದನ್ನು ಕೆತ್ತಲಾಗಿದ್ದು ಇವೆಲ್ಲ ಸಿಂಹಗಳು ಕೂಡಿ ಇಡಿಯ ಮಂಟಪವನ್ನು ಹೊತ್ತಂತೆ ಭಾಸವಾಗುತ್ತದೆ. ಪ್ರತಿ ಕಂಬದ ಮೇಲೂ ಚಿತ್ರವಿಚಿತ್ರವಾದ ಪ್ರಾಣಿಪಕ್ಷಿಗಳು, ಋಷಿಮುನಿಗಳು, ದೇವತೆಯರು, ಮಿಥುನಶಿಲ್ಪ, ನರ್ತಕಿಯರು ಮೊದಲಾದ ಉಬ್ಬುಶಿಲ್ಪಗಳನ್ನು ನೋಡಬಹುದು. ಗರ್ಭಗುಡಿಯತ್ತ ದೃಷ್ಟಿನೆಟ್ಟ ನಂದಿಯ ಕಪ್ಪುಶಿಲಾವಿಗ್ರಹ ಚಿಕ್ಕದಾಗಿದ್ದರೂ ಸುಂದರವಾಗಿದೆ. ಒಳಗುಡಿಯಲ್ಲಿ ಗಣೇಶ, ವೀರಭದ್ರ, ಸುಬ್ರಹ್ಮಣ್ಯರ ವಿಗ್ರಹಗಳಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತೆರಡನೆಯ ಕಂತು

ಇಂದಿನ ಕೋಲಾರವು ಕೋಲಾಹಲಪುರ, ಕುವಲಾಲ, ಕೋಲಾಲ ಮೊದಲಾದ ಹೆಸರುಗಳಿಂದ ಇತಿಹಾಸದಲ್ಲಿ ಗುರುತಿಸಲ್ಪಟ್ಟಿರುವ ನಗರ. ಗಂಗರಾಜರ ರಾಜಧಾನಿಯೂ ಆಗಿದ್ದ ಈ ಪಟ್ಟಣವನ್ನು ಬಾಣವಂಶದ ಅರಸರಿಂದ ಮೊದಲುಗೊಂಡು ರಾಷ್ಟ್ರಕೂಟರ ಸಾಮಂತರೂ, ಗಂಗರೂ ಚೋಳರೂ ಆಳಿದರು. ಹೊಯ್ಸಳ, ವಿಜಯನಗರದ ಅರಸರ ಆಳ್ವಿಕೆಗೂ ಈ ಪ್ರಾಂತ್ಯ ಒಳಪಟ್ಟಿತ್ತು. ಕೋಲಾರ ಬ್ರಿಟಿಷರಿಗೆ ಹಸ್ತಾಂತರವಾಗುವ ಮುನ್ನ ಹೈದರಾಲಿ, ಟಿಪ್ಪು ಸುಲ್ತಾನರ ಅಧೀನದಲ್ಲೂ ಇದ್ದಿತು. ಇಲ್ಲಿನ ಇತಿಹಾಸದ ವೈಭವಕ್ಕೆ ಸಾಕ್ಷಿಯಾಗಿ ಸೋಮೇಶ್ವರ ಹಾಗೂ ಕೋಲಾರಮ್ಮನ ದೇವಾಲಯಗಳು ಉಳಿದು ಬಂದಿವೆ.

ಕೋಲಾರಮ್ಮನ ಗುಡಿಯ ಸನಿಹದಲ್ಲೇ ಇರುವ ಸೋಮೇಶ್ವರ ದೇವಾಲಯವನ್ನು ‘ದ್ರಾವಿಡ ಶೈಲಿಯ ಅತ್ಯುತ್ತಮ ವಾಸ್ತುಶಿಲ್ಪದ ಮಾದರಿ’ ಎಂದು ಪುರಾತತ್ತ್ವ ಪರಿಣತರು ಬಣ್ಣಿಸಿದ್ದಾರೆ. ಕ್ರಿ.ಶ. ಹದಿನಾಲ್ಕನೆಯ ಶತಮಾನದ ಈ ದೇಗುಲವು ವಿಜಯನಗರ ಸಾಮ್ರಾಜ್ಯದ ಆಡಳಿತದ ಮೊದಲಭಾಗದಲ್ಲಿ ನಿರ್ಮಿತವಾಗಿದೆ. ದೇಗುಲವನ್ನು ಪ್ರವೇಶಿಸುವುದಕ್ಕೆ ಮುನ್ನವೇ ಮನಸೆಳೆಯುವ ಅಪೂರ್ವನಿರ್ಮಿತಿಯಿದು. ದೇವಾಲಯದ ಸಮೀಪಕ್ಕೆ ಬರುತ್ತಿರುವಂತೆಯೇ ಬೃಹತ್ತಾದ ರಾಜಗೋಪುರ, ಅದಕ್ಕೆ ತಕ್ಕ ಎತ್ತರವಾದ ಪ್ರವೇಶದ್ವಾರಗಳು ನಿಮ್ಮನ್ನು ಸ್ವಾಗತಿಸುತ್ತವೆ.

ದ್ವಾರದ ಅಕ್ಕಪಕ್ಕದ ಗೋಡೆಗಳ ಮೇಲಿನ ನಾಟ್ಯಶಿವ, ಭೈರವನ ಮೂರ್ತಿಗಳು ಹಾಗೂ ಗಣಪತಿಯೇ ಮೊದಲಾದ ಶಿವನ ಪರಿವಾರದವರ ಶಿಲ್ಪಗಳ ಕೆತ್ತನೆ ಅತ್ಯಾಕರ್ಷಕವಾಗಿದೆ. ದ್ವಾರದ ಅಂಚಿನ ಚೌಕಟ್ಟಿನುದ್ದಕ್ಕೂ ವಿವಿಧ ಭಂಗಿಗಳ ಯಕ್ಷರ ಮೂರ್ತಿಗಳಿವೆ. ದ್ವಾರದ ಒಳಬದಿಯ ಎರಡೂ ಕಡೆ ಕಂಬಗಳ ಮೇಲೆ ಸೂಕ್ಷ್ಮಕೆತ್ತನೆಯ ಬಳ್ಳಿಗಳನ್ನು ಆಧರಿಸಿ ನಿಂತ ಶಿಲಾಸುಂದರಿಯರು ಕಾಣಿಸುತ್ತಾರೆ. ಈ ಅಪೂರ್ವ ಉಬ್ಬುಶಿಲ್ಪಗಳೂ ಬಳ್ಳಿಯ ಚಿತ್ತಾರಗಳೂ ಒಂದಕ್ಕಿಂತ ಒಂದು ಮಿಗಿಲಾಗಿ ಕಣ್ಮನ ಸೂರೆಗೊಳ್ಳುತ್ತವೆ.

ದೇವಾಲಯದೊಳಗೆ ಕಾಲಿರಿಸುತ್ತಿದ್ದಂತೆ ಕಟ್ಟಡದ ತುಂಬೆಲ್ಲ ನಿಂತ ಭವ್ಯವಾದ ಕಂಬಗಳು ಬೆರಗುಗೊಳಿಸುತ್ತವೆ. ಇಂಥ ಅರವತ್ನಾಲ್ಕು ಕಂಬಗಳನ್ನುಳ್ಳ ಮುಖಮಂಟಪವು ದೇಗುಲದ ಪ್ರಮುಖ ಆಕರ್ಷಣೆ. ಮಂಟಪದ ಸುತ್ತಲಿನ ಪ್ರತಿಯೊಂದು ಕಂಬದಲ್ಲೂ ನಿಂತ ಭಂಗಿಯಲ್ಲಿರುವ ಸಿಂಹವೊಂದನ್ನು ಕೆತ್ತಲಾಗಿದ್ದು ಇವೆಲ್ಲ ಸಿಂಹಗಳು ಕೂಡಿ ಇಡಿಯ ಮಂಟಪವನ್ನು ಹೊತ್ತಂತೆ ಭಾಸವಾಗುತ್ತದೆ. ಪ್ರತಿ ಕಂಬದ ಮೇಲೂ ಚಿತ್ರವಿಚಿತ್ರವಾದ ಪ್ರಾಣಿಪಕ್ಷಿಗಳು, ಋಷಿಮುನಿಗಳು, ದೇವತೆಯರು, ಮಿಥುನಶಿಲ್ಪ, ನರ್ತಕಿಯರು ಮೊದಲಾದ ಉಬ್ಬುಶಿಲ್ಪಗಳನ್ನು ನೋಡಬಹುದು.

ಗರ್ಭಗುಡಿಯತ್ತ ದೃಷ್ಟಿನೆಟ್ಟ ನಂದಿಯ ಕಪ್ಪುಶಿಲಾವಿಗ್ರಹ ಚಿಕ್ಕದಾಗಿದ್ದರೂ ಸುಂದರವಾಗಿದೆ. ಒಳಗುಡಿಯಲ್ಲಿ ಗಣೇಶ, ವೀರಭದ್ರ, ಸುಬ್ರಹ್ಮಣ್ಯರ ವಿಗ್ರಹಗಳಿವೆ. ಆರು ಮುಖ, ಹನ್ನೆರಡು ಬಾಹುಗಳ ಸುಬ್ರಹ್ಮಣ್ಯ ನವಿಲಿನ ಮೇಲೆ ಕುಳಿತು ಹೊರಟ ಭಂಗಿ ಅಪೂರ್ವವಾಗಿದೆ. ಇನ್ನೊಂದು ಬದಿಯಲ್ಲಿ ಪಾರ್ವತಿಯ ದೇಗುಲವೂ ಇದೆ.

ದೇವಾಲಯದ ಸುತ್ತಲಿನ ಗೋಡೆಗಳ ಮೇಲೆ ದೇವತಾಮೂರ್ತಿಗಳೇನೂ ಹೆಚ್ಚಾಗಿಲ್ಲ. ಆದರೆ, ಕೆಳಭಾಗದ ಅಧಿಷ್ಠಾನದ ಮೇಲೆ ಆನೆ, ಸಿಂಹ, ಹಂಸಗಳೇ ಮೊದಲಾದವುಗಳನ್ನು ಕೆತ್ತಲಾಗಿದೆ. ಗೋಡೆಯುದ್ದಕ್ಕೂ ಚಿಕ್ಕ ಚಿಕ್ಕ ಕಂಬಗಳು ಅವುಗಳನ್ನು ಜೋಡಿಸಿದಂತೆ ಚಿಕ್ಕ ಗೋಪುರಗಳಿದ್ದು ದೇಗುಲದ ವಿನ್ಯಾಸಕ್ಕೆ ಮೆರುಗು ನೀಡಿವೆ. ಈ ಕಂಬಗಳ ಮೇಲೆ ವಿವಿಧ ಭಂಗಿಗಳಲ್ಲಿ ತಪಸ್ಸಿಗೆ ನಿಂತ ಮುನಿಗಳು ಹಾಗೂ ಭಕ್ತರ ಉಬ್ಬುಶಿಲ್ಪಗಳಿವೆ. ನಂತರದ ಕಾಲದಲ್ಲಿ ಗಾರೆಯಿಂದ ನಿರ್ಮಿತವಾದ ವಿಮಾನಗೋಪುರದ ನಾಲ್ಕು ಮೂಲೆಗಳಲ್ಲಿ ನಂದಿಯ ವಿಗ್ರಹಗಳಿವೆ.

ಸೋಮೇಶ್ವರ ದೇವಾಲಯದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಕಲ್ಯಾಣ ಮಂಟಪ. ದೇಗುಲದ ಹಿಂಭಾಗದಲ್ಲಿ ನೈಋತ್ಯ ಮೂಲೆಯಲ್ಲಿರುವ ಈ ಮಂಟಪದ ಶಿಲ್ಪವಿನ್ಯಾಸ ಹೊಯ್ಸಳಶೈಲಿಯನ್ನು ನೆನಪಿಸುತ್ತದೆ. ಮಂಟಪದ ಒಳಛಾವಣಿಯ ಭುವನೇಶ್ವರಿ, ಸುತ್ತಲಿನ ಕಂಬಗಳು ಎಲ್ಲವೂ ಸುಸ್ಥಿತಿಯಲ್ಲಿವೆ. ಇಡೀ ಮಂಟಪವನ್ನು ಒಂದಿಂಚೂ ಬಿಡದೆ ಸೂಕ್ಷ್ಮಕೆತ್ತನೆಗಳಿಂದ ಅಲಂಕರಿಸಲಾಗಿದೆ. ರಾಮ, ನರಸಿಂಹ, ಭೈರವ, ಗಣಪತಿ ಮೊದಲಾದ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಒಂದು ಸ್ತಂಭದ ಮೇಲೆ ಕೆತ್ತಲಾಗಿರುವ ವೇಣುಗೋಪಾಲನ ಬಿಂಬವು ಮನೋಹರವಾಗಿದೆ.

ಶಾಸನಗಳಲ್ಲಿ ಉಕ್ತವಾಗಿರುವಂತೆ ತಾವು ನಿರ್ಮಿಸಿದ ಈ ಭವ್ಯದೇಗುಲದ ನಿರ್ವಹಣೆಗಾಗಿ ವಿಜಯನಗರದ ಅರಸರೂ ಮುಂದಿನ ಆಡಳಿತಗಾರರೂ ದತ್ತಿಗಳನ್ನು ಒದಗಿಸಿ ಕಾಳಜಿ ತೋರಿದ್ದಾರೆ. ನೂರಾರು ವರ್ಷಗಳ ಪರಂಪರೆಯ ಹಿನ್ನೆಲೆಯುಳ್ಳ ಈ ಗುಡಿ ನಾಡಿನ ವೈಭವದ ಹೆಮ್ಮೆಯ ಪ್ರತೀಕವಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ಕೋಲಾರ ನಗರದ ಜನನಿಬಿಡ ರಸ್ತೆಗಳ ನಡುವೆಯೇ, ಇತಿಹಾಸದ ಸಾಕ್ಷಿಯಾಗಿ ನಿಂತ ಈ ದೇಗುಲವನ್ನು ವೀಕ್ಷಿಸಲು ಮರೆಯದಿರಿ.