ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ ಬದುಕೂ ಸುಂದರವಾಗಿರುತ್ತಿತ್ತು’ ಎಂದು ತನ್ನ ಮನಸ್ಸಿನ ಮೂಲೆಯಲ್ಲೆಲ್ಲೋ ಯಾರೋ ಪಿಸುನುಡಿಯುತ್ತಿದ್ದಂಗಿತ್ತು.
ಎಚ್.ಆರ್. ರಮೇಶ ಬರೆದ ಕತೆ ಈ ಭಾನುವಾರದ ನಿಮ್ಮ ಓದಿಗೆ

 

ಸರೀ ಮಳೆ ಸುರಿದಿತ್ತು. ಹೈಕಳು ಮಳೆಯಲ್ಲಿ ಸಂಭ್ರಮಿಸಿ ತಮ್ಮನ್ನು ತಾವೇ ಮರೆತು ಆಟ ಆಡುತ್ತಿದ್ದರು. ಮಳೆಯ ಗುಳ್ಳೆಗಳ ಹಿಡಿಯುತ್ತಾ ಅವುಗಳ ಹಿಡಿಯುವಾಗ ಅವು ಒಡೆದು ಹೋಗುತ್ತಿದ್ದುದನ್ನು ಕಂಡು ಪೆಚ್ಚುಮೋರೆ ಹಾಕಿಕೊಳ್ಳುತ್ತಿದ್ದವು. ಆ ಹೈಕ್ಳ ತಾಯಿ ರುಕ್ಮಣಮ್ಮ ತನ್ನ ಗಂಡ ಮೂಡ್ಲಗಿರಿಯನನ್ನು ಶಪಿಸಿಕೊಳ್ಳುತ್ತ ಗೋಡೆಯಿಂದ ಇಳಿದು ಮನೆಯನ್ನೆಲ್ಲಾ ತುಂಬಿರುವ ಮಳೆನೀರನ್ನು ತುಂಬಿ ಹೊರ ಹಾಕುತ್ತಿದ್ದಳು. ‘ಇಲ್ಲ ಕಣಮ್ಮಿ ಗ್ಯಾರಂಟಿ ಈ ಸಲ ಬೇಸಿಗೆಗೆ ದೊಡ್ಡ ಚೆಲ್ಲೂರಿಂದ ಕರ್ಲು ತರಿಸಿ ಮಾಳಿಗೆಗೆ ಹಾಕಿ ಸರಿಮಾಡ್ತೀನಿ’ ಎಂದು ಅವಳ ಗಂಡ ಸಾವಿರ ಸಲ ಹೇಳಿದ್ದು ಮನಸ್ಸಿಗೆ ಬಂದು ಹೋಗಿ ಬಂದು ಹೋಗಿ ಮಾಡುತ್ತಿತ್ತು. ಇದನ್ನು ನೆನೆದು ಮಳೆಯ ತಂಪಿನಲ್ಲೂ ಕೆಂಡಮಂಡಲವಾಗಿದ್ದಳು.

ಗೋಡೆಗೆ ಆನಿಸಿ ಇಟ್ಟಿದ್ದ ಸೊಸೈಟಿಯಿಂದ ತಂದ ರೇಷನ್ನ್ ಚೀಲ ಒಡೆದು ಮನೆಯೆಲ್ಲಾ ತುಂಬಿದ್ದ ನೀರಲ್ಲಿ ಅಕ್ಕಿಯ ಹುಳುಗಳು ತೇಲುತ್ತಾ ಇದ್ದವು. ಅಕ್ಕಿಯೆಲ್ಲಾ ನೆಂದು ಪುಡಿ ಪುಡಿಯಾಗಿ ಅವಳ ಪಾದಗಳ ಒತ್ತುತ್ತಿದ್ದವು. ಗೋಡೆಗುಂಟ ಇಳಿದ ಮಳೆನೀರ ಜೊತೆ ಅಕ್ಕಿಯೂ ಬೆರೆತು, ಅವಳು ಬೇಸನ್ನಿನಲ್ಲಿ ಎತ್ತಿಹೊರಗೆ ಹಾಕುವಾಗ ಬೆಳ್ಳಗೆ ಹರಿದು ಹೋಗುತ್ತಿತ್ತು ನೀರು. ಹೈಕ್ಳು ಇದ್ಯಾವುದರ ಪರಿವಿಲ್ಲದೆ ಮಳೆನೀರಗುಳ್ಳೆಯಲಿ ಆಟವಾಡುತ್ತಿದ್ದವು.

ಅವಳು ಇಂತಹ ಏಳು ಮಳೆಗಾಲಗಳನ್ನು ಅದೇ ಮನೆಯಲ್ಲಿಯೇ ಕಳೆದಿದ್ದಾಳೆ. ಮೂಡ್ಲಿಗಿರಿಯನೂ ಸಹ ಏಳು ಬೇಸಿಗೆಯಲ್ಲಿ ಏಳುನೂರರಷ್ಟು ಮಿರುಗುವ ಬಿಸಿಲಗುದುರೆಗಳ ತೋರಿಸಿದ್ದಾನೆ. ತನ್ನ ಪಾಡಿಗೆ ತಾನು ಗೊಣಗುತ್ತ ಶಪಿಸುತ್ತಾ ನೀರನ್ನು ಹೊರಗೆ ಹಾಕುವಾಗ ಚಂದ್ರಾಚಾರಿ ಕೆತ್ತುತ್ತಿದ್ದಂತಹ ಮರದ ಗೊಂಬೆಗಳು ಅವಳ ಮನಸಿನೊಳಗೆ ಇಣುಕಿ ಇಣುಕಿ ಹೋಗುತ್ತಿದ್ದವು.

ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ ಬದುಕೂ ಸುಂದರವಾಗಿರುತ್ತಿತ್ತು’ ಎಂದು ತನ್ನ ಮನಸ್ಸಿನ ಮೂಲೆಯಲ್ಲೆಲ್ಲೋ ಯಾರೋ ಪಿಸುನುಡಿಯುತ್ತಿದ್ದಂಗಿತ್ತು.

ಮೂಡ್ಲಗಿರಿಯನನ್ನು ಮದುವೆಯಾಗಿ ಏಳುವರ್ಷಗಳನ್ನು ಕಳೆದಿರುವ ಆ ನಾಲ್ಕು ಹೆಣ್ಣು ಹೈಕ್ಳ ತಾಯಿ ರುಕ್ಮಣಮ್ಮ ಬೆಳ್ಳಗೆ ಸಪೂರಾಗಿ ಇದ್ದಳು. ಕುಕ್ಕರಗಾಲಲ್ಲಿ ಕೂತು ನೀರನ್ನು ಹೊರಗೆ ಮೊಗೆದು ಹಾಕುವಾಗ ಅವಳ ಮೀನು ಖಂಡಗಳು ತೊಡೆಗೆ ಒತ್ತಿಕೊಂಡು ಚಪ್ಪಟೆಯಾಗಿ ಕಾಣುತ್ತಿದ್ದವು. ಸೀರೆಯೆಲ್ಲಾ ಒದ್ದೆಯಾಗಿದ್ದರೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಮಳೆನೀರ ಮೊಗೆದು ಮೊಗೆದು ಹಾಕುತ್ತಿದ್ದಳು. ಅವಳ ಮೈಕಟ್ಟು ಇನ್ನೂ ಮದುವೆಯಾಗಿಲ್ಲದ ಹೆಂಗಸಿನ ಮೈಕಟ್ಟಿನಹಾಗೆಯೇ ಇತ್ತು. ಅದನ್ನು ಅವಳು ಕನ್ನಡಿ ಮುಂದೆ ನಿಂತು ಹಣೆಗೆ ಕುಂಕುಮ ಇಟ್ಟುಕೊಳ್ಳುವಾಗ ನೋಡಿಕೊಂಡು ಒಳಗೊಳಗೇ ಸುಮಾರು ಸಲ ನಾಚಿಕೆಯಿಂದ ನಕ್ಕು, ನಗುವಾಗ ಬಲದ ಕೆನ್ನೆಯ ಮೇಲೆ ಬೀಳುವ ಗುಳಿಯ ಕಂಡು ಖುಷಿ ಪಡುತ್ತಿದ್ದಳು. ‘ನಿನ್ನ ಗಂಡನಿಗಂತೂ ಮಾನ ಮರ್ಯಾದೆ ಎಲ್ಲ ಅಂದರೆ ನಿನಗೂ ಇಲ್ಲವೇನೇ? ಮೊದಲು ಧರ್ಮಪುರದ ಹಾಸ್ಪೆಟ್ಲಿಗೋಗಿ ಆಪರೇಷನ್ಮಾಡಿಸಿಕೊಂಡು ಬರಬಾರದೆ’ ಎಂದು ನೆರೆಹೊರೆಯ ಹೆಂಗಸರು ಬೈದರೂ, ಆ ಮಾತುಗಳನ್ನು ತಲೆಒಳಗೆ ಹಾಕಿಕೊಳ್ಳದೆ ಇದ್ದಳು.

ಅವಳ ಗಂಡ ಮೂಡ್ಲಗಿರಿ ಮೂರುದಿನ ಮನೆಯಲ್ಲಿದ್ದರೆ ನಾಲ್ಕುದಿನ ಹೊರಗಿರುತ್ತಿದ್ದ. ಕಾಸೀಂ ಸಾಬಿ ಜೊತೆ ಸೇರಿ ಚರ್ಮದ ವ್ಯಾಪಾರ ಮಾಡುತ್ತಿದ್ದ. ಅದು ಅವನ ಏಳನೇ ಕಸುಬಾಗಿದ್ದೂ, ‘ಯಾವ ಕೆಲಸಾನೂ ನೆಟ್ಟಗೆ ಮಾಡದೆ ವರ್ಷಕ್ಕೊಂದು ಕಸುಬು ಬದಲಿಸಿದರೆ ಕೈ ಹತ್ತದೆಯಾ’ ಎಂದು ಸುಮಾರು ಸಲ ರುಕ್ಮಣಮ್ಮ ಗಂಡನಿಗೆ ಬೈದಿದ್ದಿದೆ. ಅದ್ಯಾವುದಕ್ಕೂ ಕೇರ್ ಮಾಡದೆ ಮೂಡ್ಲಗಿರಿ ಇದ್ದ. ಒಂದೊಂದು ಸಲ ತಿಂಗಳುಗಟ್ಟಲೆ ಊರು ಬಿಟ್ಟರೂ ಸಂಸಾರದ ಖರ್ಚಿಗೆ ಎಂದೂ ಕಡಿಮೆ ಮಾಡಿರಲಿಲ್ಲ. ಅವನನ್ನು ನೆನೆಸಿಕೊಂಡು ಒಳಗೊಳಗೇ ಅಳುತ್ತಿದ್ದಳು. ಆದರೆ ಈ ಸಲ ಆದಹಾಗೆ ಈ ಹಿಂದೆಂದೂ ಇಷ್ಟೊಂದು ಜಿಗುಪ್ಸೆಗೊಂಡಿರಲಿಲ್ಲ. ಯಾಕಂದರೆ ಅವಳ ಗಂಡ ಈ ಆರುತಿಂಗಳಿಂದ ಮನೆಗೆ ಬಂದಿರಲೇಯಿಲ್ಲ.

ಹೀಗೆ ತನ್ನ ಪಾಡಿಗೆ ತಾನು ದುಃಖದಿಂದ ನೀರನ್ನು ಹೊರಗೆ ಹಾಕುತ್ತಿರುವಾಗ, ಭಜನೆ ರಾಮಣ್ಣ, ‘ಶಿವ ಶಿವ ಎಂಥ ಮಳೆ! ಮಣ್ಣಿನ ಒಡಲು ಬಿರಿಯೂವಾ ಮಳೆಯೂ.. ಮಣ್ಣಿನ ಒಡಲು ಅರಳೂವಾ ಮಳೆಯೂ’ ಎಂದು ಗುನುಗಿಕೊಂಡು ಬಂದ. ಅಷ್ಟು ಹೊತ್ತಿಗೆ ರುಕ್ಮಣಮ್ಮ ನೀರೆಲ್ಲಾ ಮೊಗೆದು ಕಾಫಿ ಮಾಡಲೆಂದು ಸೀಮೆಎಣ್ಣೆ ಸ್ಟವ್ ಹೊತ್ತಿಸುತ್ತಿದ್ದಳು. ಬಂದವನೆ ತನ್ನ ಫೆವರೇಟ್ ಭಜನೆ ಪದವ ಅರ್ಧಕ್ಕೆ ನಿಲ್ಲಿಸಿ ‘ಅವನಿಗೆ ಇದು ಬೇಕಿತ್ತಾ? ನೋಡು ಎಂಥಾ ಹೊತ್ತು ಬಂತು? ಎಲ್ಲಾ ವಿಧಿಯಾಟ!’ ಎಂದ. ‘ಅದೇನು ರಾಮಣ್ಣ ಭಜನೆ ಪದದಂಗೆ ಒಗಟು ಒಗಟು ಮಾತಾಡ್ತೀಯಾ. ಅಂಥದ್ದೇನಾಯ್ತು? ಆಗಬಾರದ್ದು? ಅಂದಹಾಗೆ, ನನ್ನ ಗಂಡುಂದ ವರ್ತಮಾನ ಏನಾರ ಸಿಕ್ತಾ ವಸಿ’ ಎಂದು ಕೇಳಿದಳು. ‘ಅಗ ನೋಡು! ಅದೇ ವಿಷ್ಯ ಮಾತಾಡನಾ ಅಂಥ ಬಂದೆ. ಏನೇ ಅಂದರೂ ನಿನ್ನ ಗಂಡುಂಗೆ ನೂರು ವರ್ಷ ಬಿಡು. ಯಾಕಂದರೆ ನಿನ್ನ ಗಂಡ ಬದುಕಿದ್ದಾನಂತೆ’ ಅಂದ. ‘ಏನಂಥ ಸತ್ಪುರುಷ, ನೂರು ವರ್ಷ ಬದುಕೋಕೆ! ಹೆಂಡ್ರು ಅನ್ನಂಗೆ ಇಲ್ಲ. ಮಕ್ಕಳು ಅನ್ನಂಗೆ ಇಲ್ಲ. ಸುಮ್ಮನೆ ತಿರುಗುತ್ತೆ. ಅಲ್ಲಾ ತಿಂಗಳಾನುಗಟ್ಟಲೇನೆ ಮನೆ ಬಿಟ್ಟು ಹೋಗೋದು?’ ಎಂದು ಸಿಟ್ಟಾಗಿ, ‘ಇಂಥ ಗಂಡಸಿಗೆ ಸಂಸಾರ ಯಾಕೆ? ಸುಮ್ಮನೆ ಯಾವುದಾದರೂ ಮಠಕ್ಕೆ ಸೇರಬಾರದೆ ಕಾವಿ ತೊಟ್ಟು?’ ಅಂದಳು. ‘ನೀನೊಳ್ಳೆ ತಂದೆ! ಸನ್ಯಾಸಿ ಆಗುವಂಗಿದ್ದರೆ ನಾಲ್ಕು ಮಕ್ಳ ತಂದೆ ಆಗುತ್ತಿದ್ದನಾ? ಯಾರ್ಯಾರೋ ಕರಕಂಡು ಹೋಗ್ತಾರೆ. ಅದೆಲ್ಲಿಗೆ ಹೋಗ್ತಾನೋ, ಏನೋ ಶಿವಾ! ಪಾಪ ಅವನು ತಾನೆ ಏನು ಮಾಡ್ತಾನೆ! ವಿಧಿ. ವಿಧಿಕಣವ್ವಾ ವಿಧಿ! ವಿಧಿ ಅವನ ಕೈ ಕಾಲುಗಳಲ್ಲಿ ಚಕ್ರಗಳನ್ನು ಬರೆದಿರುವಾಗ’ ಎಂದ. ‘ಸುಮ್ಮನಿರು ರಾಮಣ್ಣ ಅಂಥ ಪುಣ್ಯಾತ್ಮನ ಪರ ಏನು ವಹಿಸಿಕೊಂಡ ಮಾತಾಡ್ತೀಯಾ, ನೆನೆಸಿಕೊಂಡರೆ ಒಡಲಲ್ಲಿ ಬೆಂಕಿ ಹತ್ತಿದಂಗೆ ಆಗುತ್ತೆ’ ಅಂದು, ತನ್ನ ಎರಡು ಕೈಗಳನ್ನು ಅವನತ್ತ ಚಾಚಿ ‘ಇಗ ನೋಡು ನನ್ನ ಕೈಯಲ್ಲೂನೂವಿ ಚಕ್ರಗಳು ಹೆಂಗವೆ’ ಅಂತ ತೋರಿಸಿದಳು. ‘ಅಂಥವರನ್ನು ಕಟ್ಟಿಕೊಂಡು ಏಗಿ ಏಗಿ ಸಾಕಾಗದೆ. ಅಲ್ಲಾ ರಾಮಣ್ಣ ನೀನೆ ನೋಡು ಹೆಂಗೆ ಸೋರಿದೆ ಮನೆ. ಯೋಗ್ತಿಗೆ ಒಂದು ಮನೆ ಸ್ಯಾಂಕ್ಷನ್ನ್ ಮಾಡಿಸಿಕೊಳ್ಳುವುದಕ್ಕೆ ಆಗಿಲಿಲ್ಲವೆ ಪಂಚಾತಿಯಿಂದ. ಗಂಡಸಂತೆ ಗಂಡ್ಸು. ಥೂ!’ ಎಂದು ಶಪಿಸುತ್ತಾ ಕಾಫಿಯನ್ನು ಸೋಸಿ ಅವನಿಗೆ ಕೊಟ್ಟಳು.

ತನ್ನ ಹೈಕ್ಳು ಅಂಗಳದಲ್ಲಿದ್ದಾರ ಅಂತ ಆ ಕಡೆ ನೋಡಿ ಇಲ್ಲದುದು ಕಂಡು ಸುಮ್ಮನಾಗಿ ಕಾಫಿ ಲೋಟದ ಕಪ್ಪಿಗೆ ಬಾಯಿಟ್ಟಳು. ‘ಸುಮ್ಮನೆ ಮುಂದಿನ ಪಂಚಾಯ್ತಿ ಎಲೆಕ್ಷನ್ನನಲ್ಲಿ ನೀನೇ ನೀಂತ್ಕೊ ಬಾರ್ದೆ. ಹೆಂಗಿದ್ರು ಹೆಂಗಸರಿಗೆ ಜಾಸ್ತಿ ಸೀಟು ಕೊಡ್ತಾರಂತೆ ಈ ಸಲ’ ಎಂದ. ಅದಕ್ಕೆ ರುಕ್ಮಣಮ್ಮ ‘ನಮಗೆ ರಾಜಕೀಯ ಎಲ್ಲಾ ಯಾಕೆ? ಸುಮ್ಮನೆ ಅಚ್ಚುಕಟ್ಟಾಗಿ ಮರ್ಯಾದೆಯಿಂದ ಬದುಕಿಹೋಗೋದು ಬಿಟ್ಟು’ ಎಂದಳು. ಬಂದ ವಿಷಯಾನೇ ಮರೆತೆನೋಡು ಅಂತ ಅಂದುಕೊಂಡು ರಾಮಣ್ಣ, ‘ನಿನ್ನೆ ದಿನ ಕೋಡಿಮನೆ ಕರಿಯಜ್ಜನ ಮನೆಯಾಗೆ ಭಜನೆ ಇತ್ತು. ಅಲ್ಲಿ ಮಾತಾಡಿಕೊಳ್ಳುತ್ತಿದ್ದರು. ನಿನ್ನ ಗಂಡ ಮೂಡ್ಲಗಿರಿಯನ್ನ ಬಳ್ಳಾರಿ ಜೈಲಲ್ಲಿ ಇಟ್ಟವರಂತೆ. ಆದರೆ ಕಾಸೀಂ ಸಾಬಿ ತಪ್ಪಿಸಿಕೊಂಡು ಹೋದನಂತೆ. ಅವನನ್ನು ಈಗ ಪೊಲೀಸಿನವರು ಹುಡುಕುತ್ತಿದ್ದಾರಂತೆ. ಮೊನ್ನೆ ಸಾಬರ ಕೇರಿಗೆ ಪೊಲೀಸ್ ಜೀಪ್ ಬಂದಿತ್ತಲ್ಲ ಇದೇ ವಿಷಯಕ್ಕೆ ಅಂತೆ’ ಎಂದು ಹೇಳಿದನು.

ಅವಳು ಇಂತಹ ಏಳು ಮಳೆಗಾಲಗಳನ್ನು ಅದೇ ಮನೆಯಲ್ಲಿಯೇ ಕಳೆದಿದ್ದಾಳೆ. ಮೂಡ್ಲಿಗಿರಿಯನೂ ಸಹ ಏಳು ಬೇಸಿಗೆಯಲ್ಲಿ ಏಳುನೂರರಷ್ಟು ಮಿರುಗುವ ಬಿಸಿಲಗುದುರೆಗಳ ತೋರಿಸಿದ್ದಾನೆ. ತನ್ನ ಪಾಡಿಗೆ ತಾನು ಗೊಣಗುತ್ತ ಶಪಿಸುತ್ತಾ ನೀರನ್ನು ಹೊರಗೆ ಹಾಕುವಾಗ ಚಂದ್ರಾಚಾರಿ ಕೆತ್ತುತ್ತಿದ್ದಂತಹ ಮರದ ಗೊಂಬೆಗಳು ಅವಳ ಮನಸಿನೊಳಗೆ ಇಣುಕಿ ಇಣುಕಿ ಹೋಗುತ್ತಿದ್ದವು.

ಇಷ್ಟು ಹೊತ್ತು ತನ್ನ ಗಂಡನನ್ನು ಬೈಯುತ್ತಿದ್ದ ರುಕ್ಮಣಮ್ಮ ಪೊಲೀಸ್ನವರನ್ನು ಬೈಯಲು ಪ್ರಾರಂಭಿಸಿದಳು: ‘ಆ ಪಾಪಿ ಮುಂಡೇವುಕೆ ನನ್ನ ಗಂಡನೇ ಬೇಕಿತ್ತೇ ಹಿಡಿದುಕೊಂಡು ಹೋಗೋಕೆ? ಮಟ್ಕಾ ಆಡಿಸಿ ಆಡಿಸಿ ಮನೆ ಹಾಳು ಮಾಡ್ತಿರೋ ಆ ಸಿದ್ದಪ್ಪುನ್ನ ಹಿಡಿದುಕೊಂಡು ಹೋಗೋಕೆ ಆಗಲಿಲ್ಲವೆ? ಪಂಚಾತಿ ಅಧ್ಯಕ್ಷ ಕೊಲೆ ಮಾಡೀನೂ ರಾಜಾರೋಷವಾಗಿ ಅಡ್ಡಾಡ್ತ ಅವ್ನಲ್ಲ ಅವುನಾದರೂ ಸಿಗಲಿಲ್ವೆ ಇವರ ಕೈಗೆ? ಇವರ ಕೈ ಸೇದು ಹೋಗಾ. ಮದುವೆಯಾಗಿ ಮಕ್ಕಳಿರೋ ಆ ವಡ್ಡರ ಪೆದ್ದಿನ ಹೊತ್ತುಕೊಂಡು ಹೋದನಲ್ಲ ಆ ನನ್ನ ಮೈದ್ನ ಶಿವುಲಿಂಗುನಾದರೂ ಹಿಡಿದಕೊಂಡು ಹೋಗೋಕೆ ಆಗಲಿಲ್ಲವೆ?… ಅಯ್ಯೋ.. ಚರ್ಮದ ವ್ಯಾಪಾರದಿಂದ ಊರೂರು ತಿರುಗುವುದು ಬಿಟ್ಟು , ಬೀಳು ಬಿದ್ದಿರೋ ಹೊಲದಾಗೆ ಬೋರು ಹಾಕಿಸಿ ಬೇಸಾಯನಾದರೂ ಮಾಡಬಾರದೆ ಅಂಥ ಸಾವಿರ ಸತಿ ಬಡಕಂಡೆ. ಗಿಣಿಗೇಳಿದಂಗೆ ಹೇಳಿದೆ. ನನ್ನ ಮಾತೆಲ್ಲಿ ಕೇಳ ಗಂಡ್ಸೆ’ ಎಂದು ಒಂದೇ ಸಮ ಎದೆ ಹೊಡೆದುಕೊಳ್ಳುತ್ತಾ ಅಳಲು ಆರಂಭಿಸಿದಳು.

‘ಅಯ್ಯೋ ಸಮಾಧಾನ ತಾಳವ್ವ. ಜೈಲಲ್ಲಿ ಎಷ್ಟು ದಿನಾ ಅಂಥಾ ಇಟ್ಟುಕೊಳ್ಳುತ್ತಾರೆ. ಅವರಿಗೇನು ಕೂಳು ಹೆಚ್ಚಾಗಿದ್ದಾತೆ. ಇವತ್ತಲ್ಲ ನಾಳೆ ಬಿಡ್ತಾರೆ’ ಎಂದನು. ‘ಎಲ್ಲಾ ಈ ಗೋರ್ಮೆಂಟಿಂದಾನೆ. ಇಷ್ಟು ವರ್ಷ ಆದರೂ ಒಂದು ರೇಷನ್ ಕಾರ್ಡು ಸರಿಯಾಗಿ ಕೊಡುವ ಯೋಗ್ಯತೆಯಿಲ್ಲ. ಮಂದಿರ ಹೊಡಿದಿದ್ದು, ಸಾಬ್ರು ದರ್ಗ ಹೊಡಿದಿದ್ದು, ಯೇಸಪ್ಪನ ಚರ್ಚ್ ಕೆಡವಿದ್ದು. ಈಗ ನೋಡಿದರೆ ಆ ಪ್ರಾಣಿ ತಿನುವ ಹಾಗಿಲ್ಲ ಈ ಪ್ರಾಣಿ ತಿನ್ನುವ ಹಾಗಿಲ್ಲ. ಉಣ್ಣಕೂ ಕಾಯ್ದೆ. ಉಡಕು ಕಾಯ್ದೆ. ತಮಗೆ ಏನು ಒಗ್ಗುತ್ತೋ ಅದುನ್ನ ಮನೆಯಾಗೆ ಮಾಡಿಕೊಂಡು ತಿಂದರೆ ಈ ದೊಣ್ಣೆನಾಯಕರಿಗೇನೋ? ಹಸ ತಿನ್ನವ ಹಾಗಿಲ್ಲ. ಕುರಿ ಕೋಳಿ ತಿನ್ನುಬಹುದಂತೆ. ಅದೆಂತದೋ ಬಿ.ಟಿ. ಬದನೆ ತಿನ್ನಬಹುದಂತೆ. ದಿನಕ್ಕೊಂದು ಕಾನೂನು. ಘಳಿಗೆಗೊಂದು ರೂಲ್ಸು. ಅವನ್ಯಾವನೋ ಸುಲ್ತಾನ ಇದ್ದನಂತಲ್ಲ ಹಂಗಾತು ಇದು. ಇನ್ನೂ ಈ ಕಾಲದಾಗೆ ಏನೇನು ಆಗುತ್ತೊ ಶಿವಾ!’

‘ಅದೇನು ಲಾಯರ್ ಗಿರಿಯಜ್ಜ ಮಾತಡಿದಂಗೆ ಮಾತಾಡ್ತೀಯ ರಾಮಣ್ಣ. ಭಜನೆ ಪದ ಹೇಳೋದು ಬಿಟ್ಟು ರಾಜಕೀಯಕ್ಕೆ ಸೇರಿಕೊಂಡೇನು? ವಸಿ ಬಿಡಿಸಿ ಹೇಳಬಾರದೆ ಬಳ್ಳಾರಿಗೆ ಯಾಕೆ ಪೊಲೀಸಿನವರು ಹಿಡಿದುಕೊಂಡು ಹೋದರು ನನ್ನ ಗಂಡುನ್ನ’ ಎಂದು ಬೈಯುವ ದಾಟಿಯಲ್ಲಿ ಕೇಳಿದಳು. ‘ಈ ಸರ್ಕಾರಕ್ಕೆ ಮಾಡುವುದಕ್ಕೆ ಏನೂ ಕೇಮಿಲ್ಲವೆ. ನನ್ನ ಸಂಸಾರನೇ ಬೇಕೆತ್ತೇ ಹಾಳುಮಾಡುವುದಕ್ಕೆ’ ಎಂದು ಶಪಿಸಿದಳು.

ಅದಕ್ಕೆ ಭಜನೆ ರಾಮಣ್ಣ, ‘ಆದಿವಾಲದ ಮಾರಿ ಜಾತ್ರೆಯಲ್ಲಿ ನೂರು ಕೋಣ ಕಡಿದಿದ್ದರಂತೆ. ನಿನ್ನ ಗಂಡುನೂ ಕಾಸೀಂನೂ ಜಾತ್ರೆಗೆ ಹೋಗಿ ಚರ್ಮ ಖರೀದಿ ಮಾಡಿಕೊಂಡು ಮಾರಲು ದುರ್ಗಕ್ಕೆ ಹೋಗಬೇಕಾದರೆ ಲಾರಿಯಲ್ಲಿ, ಪೊಲೀಸಿನವರು, ಅವರು ಹೋಗುವ ಲಾರಿಯನ್ನು ಅಡ್ಡಗಟ್ಟಿ, ಒಂದು ಕಡೆಯಿಂದ ಜಪ್ತಿಮಾಡುವಾಗ ಕೋಣಗಳ ಚರ್ಮಜೊತೆಗೆ ಹಸುವಿನ ಚರ್ಮ ಸಿಕ್ಕು, ಒಬ್ಬೊಬ್ಬರನ್ನೇ ಲಾರಿಯಲ್ಲಿ ಎನ್ಕ್ವೆರಿ ಮಾಡುವಾಗ ಲಾರಿಯಿಂದ ಹಾರಿ ಕಾಸೀಂ ಸಾಬಿ ತಪ್ಪಿಸಿಕೊಂಡು ನಿನ್ನ ಗಂಡುನ್ನ ಹಿಡಿದುಕೊಂಡು ಹೋದರಂತೆ. ಅಷ್ಟುಕ್ಕೂ ಅವರು ಕೋಣಗಳ ಚರ್ಮ ಮಾತ್ರ ಖರೀದಿಮಾಡಿ, ಅವುನ್ನ ಮಾತ್ರ ದುರ್ಗಕ್ಕೆ ತಾಂಡು ಹೋಗುತ್ತಿದ್ದರಂತೆ. ಆದರೆ ಅದರೊಳಗೆ ಹಸುವಿನ ಚರ್ಮ ಹೇಗೆಬಂತು ಎಂಬುದು ಗೊತ್ತಿಲ್ಲ ಅಂತ ಎಷ್ಟು ಹೇಳಿದ್ರು ಕೇಳದೆ ಜೈಲಿಗೆ ಹಾಕಿದರೆ ಬಾಯಿ ಬಿಡುತ್ತೀಯಾ ಯಾವನು ಹಸ ಕೊಯ್ದವನು ಎಂದು ನಿನ್ನ ಗಂಡುನ್ನ ಧಮುಕಿ ಹಾಕಿ ಎಳೆದುಕೊಂಡು ಹೋದರಂತೆ’ ಎಂದು ಸವಿವರವಾಗಿ ಹೇಳಿದನು.

‘ಹಸ ಯಾವೋನು ತಂದನೋ? ಏನು ಸತ್ತಿತ್ತೋ? ಇಲ್ಲ ಮುದಿಯಾಗಿತ್ತೋ? ಅಷ್ಟುಕ್ಕೂ ತಿಂದರೇನಂತೆ. ಉಣ್ಣಕ್ಕೂ ದೊರೆ ಅಪ್ಪಣೆಯೇ! ಎಂದು ತನಗೆ ಗೊತ್ತಿದ್ದ ಲಾಜಿಕ್ಕ ಬೆರಿಸಿ ರೇಗಿದಳು.

‘ಗೋವು ತಿನ್ನುವುದನ್ನ’ ಅದೇನೋ ಹೇಳಿದರು ತಡಿ ತಡಿ ನೆನೆಸಿಕೊಂಡು ಹೇಳ್ತೀನಿ ಎಂದು ನೆನೆಸಿಕೊಂಡು ‘ಹ್ಞಾ ಬ್ಯಾನ್ ಬ್ಯಾನ್ ಆ ಬ್ಯಾನ್ ಮಾಡವ್ರಂತೆ ಸರ್ಕಾರದವರು’ ಎಂದ.

‘ಜಾತ್ರೆ ಆಗಿ ಆರು ತಿಂಗಳು ಆಯ್ತಲ್ಲೋ ಯಪ್ಪಾ! ಅಷ್ಟುಕ್ಕೂ ತಿಂದಿರೋದೇನು ಹಂಗೆ ಇದೆಯಾ ತಿಂದು ಹೇತಿಲ್ಲವಾ. ನನ್ನ ಗಂಡನೇನು ಕೊಯ್ಕೊಂಡು ತಿಂದನಾ. ಅದ್ಯಾವನು ಹಸುವಿನ ಚರ್ಮ ಕೋಣುನ್ನ ಚರ್ಮದಾಗೆ ಬಚ್ಚಿಟ್ಟನೋ ಶಿವನೇ’ ಎಂದು ಸಿಟ್ಟಾಗಿ ದುಃಖದಿಂದ ಕಣ್ಣೀರ ಹೊರೆಸಿಕೊಂಡಳು. ‘ಇಂಥಾ ಸರ್ಕಾರನ ಎಲ್ಲಾದ್ರೂ ಕಂಡಿದ್ದಾ ಕೇಳಿದ್ದಾ ಎಲ್ಲರಿಗೂ ಮಾಂಸ ತಿನ್ನಬೇಡಿ ಎಂದು ದೀಕ್ಸೆ ಕೊಡಿಸೋದು ಉಳಿದೈತೆ. ಕೋಣ ಕುರಿನಾದರೆ ತಿನ್ನಬಹುದಂತೆ. ಮಾಡಬಾರದ ಮಾಡಿ ಮಠಕ್ಕೆ ಸ್ವಾಮಿ ಆಗಿರೋರು. ಮರ್ಯಾದೆ ಇಲ್ಲದೆ ರಾಜಕೀಯಮಾಡೋ ನಮ್ಮ ನಾಯಕರುಗಳು. ಎಲ್ಲಾ ಸರಿಯಾಗೆ ಕಲೆತಿದೆ’ ಎಂದು ಬೈದುಕೊಳ್ಳುತ್ತಿರುವಾಗ, ಕಾಸೀಂ ಸಾಬಿ ತಾಯಿ ಜುಲಕಜ್ಜಿ ಕೆಮ್ಮುತ್ತಾ ಕೋಲೂ ಊರಿಕೊಂಡು ರುಕ್ಮಣಮ್ಮನ ಮನೆ ಅಂಗಳಕ್ಕೆ ಬಂದಳು.

ಜುಲಕಜ್ಜಿ ಬರುವುದೇ ತಡ ರುಕ್ಮಣಮ್ಮ,‘ನಿನ್ನ ಮಗ ನನ್ನ ಗಂಡುನ್ನ ಜೈಲಿಗೆ ಕಳುಹಿಸಿ ಆರಾಮಾಗಿ ದೇಶಾಂತರ ಹೋದನಂತಲ್ಲ’ ಎಂದು ವ್ಯಂಗ್ಯದಿಂದ ಹೇಳಿದಳು.

‘ನಿನ್ನ ಗಂಡ ನನಗೆ ಮಗ ಇದ್ದಂಗೆ. ಯಾಕೆ ಹಂಗೆ ಚುಚ್ಚುಮಾತಾಡ್ತೀಯಾ ತಾಯಿ. ಮೂಡ್ಲಗಿರಿ ಇವತ್ತಲ್ಲ ನಾಳೆ ಬರುತ್ತಾನೆ ಜೈಲಿಂದ. ಆದರೆ ನನ್ನ ಮಗ ಕಾಸೀಂ ಇನ್ನೆಲ್ಲಿ ಬರುತ್ತಾನೆ. ದೆಲ್ಲೆಗೆ ಮೊನ್ನೆ ಬಾಂಬು ಹಾಕಿದ್ರಂತಲ್ಲ. ನೂರೋ ನೂರೈವತ್ತೋ ಜನ ಸತ್ತು ಹೋದ್ರಂತಲ್ಲ…. ಅದರಾಗೆ ನಮ್ಮ ಕಾಸೀಂನೂ ಸತ್ತು ಹೋದನಂತೆ. ಪೇಪರ್ನಲ್ಲಿ ಅವನ ಫೋಟೋನೂ ಕೊಟ್ಟಿದ್ದರಂತೆ. ಏನೂ ಅರಿಯದ ನಮ್ಮ ಹೈದ ಹೋದ್ನಲ್ಲೇ’ ಎಂದು ಜುಲಕಜ್ಜಿ ಕಣ್ಣಿರಿಟ್ಟಳು.

ಮಳೆ ನಿಂತು ಭೂಮಿ ಒಂಥರ ತಣ್ಣಗೆ ಆಗ್ತಾ ಇತ್ತು. ಪಂಚಾಯ್ತಿ ಜವಾನ ನಿಂಗಣ್ಣ ‘ನಾಳೆ ಬಿತ್ತನೆ ಬೀಜ ಕೊಡ್ತಾರಂತೆ. ರೈತರೆಲ್ಲಾ ಬರಬೇಕಂತೆ’ ಎಂದು ಸಾರುತ್ತಿದ್ದುದು ಅಸ್ಪಷ್ಟವಾಗಿ ರುಕ್ಮಣಮ್ಮನ ಅಂಗಳಕ್ಕೆ ಬಡಿಯುತ್ತಿತ್ತು.

ಜುಲಕಜ್ಜಿಯ ಕಣ್ಣಂಚಲ್ಲಿ ನೀರು ನಿಧಾನ ಇಳಿಯುತ್ತಿತ್ತು.

ಕತ್ತಲು ನಿಧಾನ ಆವರಿಸಿಕೊಳ್ಳತೊಡಗಿತು.

ಇದ್ದಕ್ಕಿದ್ದಂತೆ ಜನಗಳ ದೊಂಬಿ ಪಂಚಾಯ್ತಿ ಆಫೀಸಿನ ಕಡೆಯಿಂದ ಕೇಳಿಬರುತ್ತಿತ್ತು. ಕೆಲವರು ‘ಬೀಜ ತುಂಬಿದ್ದ ಪಂಚಾಯ್ತಿ ಗೋಡನ್ನಿನೊಳಗೆ ಬೆಂಕಿ ಬಿದ್ದೈತಂತೆ’ ಎಂದು ಓಡತೊಡಗಿದರು.