ಈ ಸಲ ತಲೆಗೆ ಜೋಡಿಸಿಕಟ್ಟಿದ್ದ ಜಡೆಕುಚ್ಚು ಬಿಚ್ಚಿಕೊಳ್ಳುವ ಸಂಭವವೆ ಜಾಸ್ತಿ ಇತ್ತು. ಹೇಗೊ ನೃತ್ಯವಂತೂ ಮುಗಿದಿತ್ತು. ಆದರೆ ನಂತರದ್ದು ಇನ್ನೊಂದು ಸಂಕಟ ದೃಶ್ಯ ಮುಂದುವರಿದಿತ್ತು. ಜಡೆ ಬೀಳಬಾರದು ಬಿದ್ದರೆ ಅಸಹ್ಯವಾಗಿ ಕಾಣುತ್ತದೆ ಎಂಬ ಭಯದಿಂದಲೆ ನಿಂತ ಸ್ಥಳದಲ್ಲಿಯೇ ನಿಂತು ಸಂಭಾಷಣೆ ಹೇಳುವುದಕ್ಕೆ ಪ್ರಾರಂಭಿಸಿದೆ. ನನ್ನ ಎದುರಿನ ಪಾತ್ರಧಾರಿ ಈ ಕಡೆಯಿಂದ ಆ ಕಡೆಯಿಂದ ಓಡಾಡುತ್ತ ಸಂಭಾಷಿಸುತ್ತಿದ್ದಾನೆ. ಆತ ನೀನು ಓಡಾಡುತ್ತ ಸಂಭಾಷಿಸು ಎಂಬ ಕಣ್ಸನ್ನೆ ನೀಡುತ್ತಿದ್ದಾನೆ. ಆದರೆ ನನ್ನ ಕಷ್ಟ ಅವನಿಗೆ ಅರ್ಥವಾಗುತ್ತಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

ನಾಟಕ ಪ್ರೇಕ್ಷಕನಿಗೆ ನೇರವಾಗಿ ಮುಟ್ಟುವಂಥದ್ದು ಅಲ್ಲಿನ ಭಾವನೆಗಳು ಪ್ರೇಕ್ಷಕರ ಭಾವನೆಗಳೊಂದಿಗೆ ಮಿಳಿತಗೊಂಡು ನಾಟಕಕ್ಕೊಂದು ಭಾವಾಭಿನಯದ ಮೆರುಗನ್ನು ತಂದುಕೊಡುತ್ತದೆ. ಬಹಳ ಹಿಂದೆ ಜನರ ಮನರಂಜನೆಗೆ ನಾಟಕಗಳೆ ವೇದಿಕೆಯೂ, ನೋಡುವಿಕೆಯೂ ಆಗಿದ್ದು ಹಳ್ಳಿಗಳಲ್ಲಿ ಸುಗ್ಗಿ ಕಾಲದ ಸಂಭ್ರಮವೆಲ್ಲಾ ಮುಗಿದ ಮೇಲೆ ನಾಟಕಗಳನ್ನು ಆಡುತ್ತಿದ್ದರು. ಯಾವ ಭೇದಭಾವವಿಲ್ಲದೆ ಒಂದೆಡೆ ಸೇರಿ ಸಾಂಸ್ಕೃತಿಕ ಐಕ್ಯತೆಯನ್ನು ಮೂಡಿಸುತ್ತಿದ್ದದ್ದು ಅದರ ವಿಶೇಷತೆ. ಬಹಳ ಚಿಕ್ಕ ವಯಸ್ಸಿನಲ್ಲಿ ನಾಟಕಗಳನ್ನು ನೋಡುವ ಸಲುವಾಗಿ ನಮ್ಮ ನಮ್ಮ ಜಾಗಗಳನ್ನು ಮುಂದಣ ಕಾಪಿಟ್ಟುಕೊಂಡು ಮನೆಯವರೆಲ್ಲಾ ಸೇರಿ ನಮ್ಮೊಳು ನಾಟಕವೊ ನಾಟಕವೆ ನಮ್ಮೊಳು ಎಂಬಂತೆ ತದೇಕಚಿತ್ತದಿಂದ ನೋಡುತ್ತ ಹಾಸ್ಯದ ಸನ್ನಿವೇಶಗಳಲ್ಲಿ ಬಾಯಿತುಂಬ ನಗುತ್ತ ಮನುಷ್ಯ ಸಂಬಂಧಗಳ ಬಂಧಳೊಂದಿಗೆ ನಗುತ್ತ ಜೀವಿಸುತ್ತಿದ್ದ ಆ ಕಾಲದ ಬದುಕೆ ಬೇರೆ ಎಂದು ಈಗ ಅನಿಸುತ್ತದೆ. ಹಾಗಾಗಿ ನನ್ನ ಬಾಲ್ಯದ ನಾಟಕದ ಅನುಭವವನ್ನು ನಿಮ್ಮ ಮುಂದೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ನನ್ನದು.

ನಮ್ಮ ಶಾಲೆಗೆ ಹೊಸದಾಗಿ ಬಂದಿದ್ದ ಗಂಗಣ್ಣ ಮೇಷ್ಟ್ರು ಪಠ್ಯೇತರ ಚಟುವಟಿಕೆಗೂ ಹೆಚ್ಚು ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಬಹುಶಃ ನಮ್ಮ ಬಾಲ್ಯದಲ್ಲಿ ಅಂಕಗಳ ಬಗ್ಗೆ ಯಾರೂ ಅಷ್ಟೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಮಗೆ ಅಂಕಗಳು ಮುಖ್ಯ ಎಂದು ಅನ್ನಿಸಿಯೆ ಇರಲಿಲ್ಲ. ಓದುತ್ತಿದ್ದೆವು ಅಷ್ಟೇ; ಪಾಠ ನಮಗೆಂದೂ ಕಷ್ಟಕರವಾದ ವಿಷಯವೆ ಆಗಿರಲಿಲ್ಲ. ಇವತ್ತಿನ ಮಕ್ಕಳನ್ನು ನೋಡಿದರೆ ಆತಂಕ ಮತ್ತು ಕನಿಕರ ಎರಡೂ ಒಟ್ಟೊಟ್ಟಿಗೆ ಆಗುತ್ತವೆ. ಒಂದನೆ ತರಗತಿಗೆ ಹೊರಬಾರದಷ್ಟು ಪುಸ್ತಕಗಳನ್ನು ಹೊತ್ತೊಯ್ಯುವ ಮಕ್ಕಳನ್ನು ನೋಡಿದಾಗೆಲ್ಲ ನಮ್ಮ ಬಾಲ್ಯದ ತರಗತಿಗಳು ಎಷ್ಟು ಚಂದವಿದ್ದವು ಅನಿಸುತ್ತವೆ. ಮಾಸಿದ ಚೀಲದೊಳಗೆ ಒಂದೆರಡು ಪುಸ್ತಕ ಕೆಲವೊಮ್ಮೆ ನೋಟ್ಬುಕ್ ರಫ್ ನೋಟ್ ಎರಡೂ ಆಗುತ್ತಿದ್ದ ಒಂದೆರಡು ಲೇಖಿಕ್ ನೋಟ್ ಬುಕ್‌ಗಳಷ್ಟೆ ಇರುತ್ತಿದ್ದವು. ಪಾಠವೆ ಆಟವು ಆಟವೆ ಪಾಠವೂ ಆಗಿತ್ತು. ಹಾಗಾಗಿ ಇನ್ನಿತರ ಚಟುವಟಿಕೆಗಳಲ್ಲಿ ನಾನು ಸದಾ ಮುಂದು. ಹೊಸಮೇಷ್ಟ್ರು ಬಂದಮೇಲೆ ಪಠ್ಯೇತರ ಭಾಗವಾಗಿ ನಾಟಕಗಳನ್ನು ಆಡಿಸಬೇಕೆಂದು ಹೊಸದಾಗಿ ಹೆಣ್ಣು ಮಕ್ಕಳಿಗೆ ಒಂದು ನಾಟಕ ಗಂಡು ಮಕ್ಕಳಿಗೆ ಒಂದು ನಾಟಕವನ್ನು ಆಡಿಸಬೇಕೆಂದು ಅದುವರೆಗೂ ನೋಡಿರದ ಹಾರ್ಮೋನಿಯಂ ನುಡಿಸುವ ಮೇಷ್ಟ್ರನ್ನು ಕರೆತಂದಿದ್ದರು. ನಮಗೂ ಕುತೂಹಲ. ಹೆಣ್ಣು ಮಕ್ಕಳಿಗೆ ಮೂರ್ನಾಲ್ಕು ಗಂಟೆಯ ನಾಟಕವನ್ನು ಗಂಡುಮಕ್ಕಳಿಗೆ ಒಂದೆರಡು ಗಂಟೆಯ ನಾಟಕವನ್ನು ಗೊತ್ತು ಮಾಡಿದ್ದರು. ಈ ಹೊಸತನದ ಚಟುವಟಿಕೆಗೆ ಊರಿನ ಜನರು ಸಹಕಾರ ನೀಡಿದ್ದರು.

ನಾನು ಸಣಕಲು ದೇಹದವನಾದ್ದರಿಂದ ಇವನಿಗೆ ಯಾವ ಪಾತ್ರ ಕೊಡಬೇಕು ಎಂದಾಗ ಹೆಣ್ಣಿನ ಪಾತ್ರಕ್ಕೆ ಒಪ್ಪುತ್ತಾನೆ ಎಂದು ನಾಟಕದಲ್ಲಿನ ‘ವಾಣಿ’ ಹೆಸರಿನ ಪಾತ್ರವನ್ನು ಕೊಟ್ಟರು. ಮೊದಲು ಅದನ್ನು ನಾನು ಒಪ್ಪಲಿಲ್ಲವಾದರೂ ನಾಟಕದಲ್ಲಿ ಪಾತ್ರ ಮಾಡುತ್ತಿರುವುದು ಇದೆ ಮೊದಲು ಅನ್ನೊ ಕಾರಣಕ್ಕೆ ಒಪ್ಪಬೇಕಾಯಿತು. ಎರಡ್ಮೂರು ದೃಶ್ಯದಲ್ಲಿ ಬಂದು ಹೋಗುವ ಪಾತ್ರವದು. ಬೇರೆ ವಿಧಿಯಿಲ್ಲದೆ ನಾಟಕದ ಪ್ರಾಕ್ಟೀಸ್ ಮಾಡಲು ಸಂಜೆ ಶಾಲೆಗೆ ಹೋಗುತ್ತಿದ್ದೆ. ಉಳಿದ ತರಗತಿಯ ಸಹಪಾಠಿಗಳು ಹೆಣ್ಣಿನ ಪಾತ್ರ ಮಾಡ್ತೀಯ ಅಂತ ಗೇಲಿ ಮಾಡುತ್ತಿದ್ದರು. ಆ ನಾಟಕದಲ್ಲಿ ನನ್ನಂತೆ ಮೂರ್ನಾಲ್ಕು ಹೆಣ್ಣಿನ ಪಾತ್ರಗಳಿದ್ದುದರಿಂದ ಅದನ್ನು ನನ್ನ ಓರಗೆಯ ಗೆಳೆಯರೆ ಮಾಡುತ್ತಿದ್ದರಿಂದ ನನಗೇನು ಅದು ಅಂತಹ ಅವಮಾನ ಅನಿಸಿರಲಿಲ್ಲ.

ಒಂದೆರಡು ದಿನಗಳಲ್ಲಿ ನಾಟಕದಲ್ಲಿನ ಮಾತುಗಳು ಬಾಯಿಪಾಠವಾಗಿದ್ದವು. ಬೆಳಿಗ್ಗೆ ಶಾಲೆಯಲ್ಲಿಯೂ ಲಾಸ್ಟ್ ಪೀರಿಯಡ್‌ನಲ್ಲಿ ರಿಹರ್ಸಲ್ ಮಾಡಿಸುತ್ತಿದ್ದರು. ಅದೊಂದು ಖುಷಿಯ ಸಂಗತಿಯೆ ಆಗಿತ್ತು. ಅದರ ಕಷ್ಟ ಏನು ಅಂತ ತಿಳಿದದ್ದೆ ನಾಟಕದ ದಿನ. ಯಾಕೆಂದರೆ ನಾನು ಸೀರೆ ಉಟ್ಟುಕೊಳ್ಳಬೇಕಿತ್ತು. ಮೊದಲೆ ಸೊಂಟವೆ ಕಾಣದಂತ ಒಣಕಲು ಕಡ್ಡಿಯಂತಹ ನನಗೆ ಜಾರದ ಹಾಗೆ ಸೀರೆಯುಡಿಸುವವರು ಯಾರು? ಮೇಷ್ಟ್ರು ಮೊದಲೇ ಹೇಳಿದ್ದರು. ನಾಟಕದ ದಿನ ಮನೆಯಲ್ಲಿಯೇ ಸೀರೆ ಹಾಕ್ಕೊಂಡು ಬರಬೇಕು ಎಂದು. ನಮ್ಮ ಅಕ್ಕಂದಿರು ಸೀರೆ ಉಡುವಷ್ಟು ದೊಡ್ಡವರೇನಲ್ಲ. ಅಮ್ಮನಿಗೆ ಸೀರೆಯುಡಿಸುವಷ್ಟು ಬುದ್ದಿವಂತಿಕೆಯೂ ಇರಲಿಲ್ಲ. ಕೊನೆಗೆ ನಮ್ಮ ಚಿಕ್ಕಪ್ಪ ಚಿಕ್ಕಮ್ಮ ಇಬ್ಬರೂ ಸೇರಿ ಸೀರೆಯನ್ನು ಉಡಿಸಿದರು. ಮೊದಲೆ ನಮ್ಮಪ್ಪ ನಮಗೆ ಮಾಡಿಸುತ್ತಿದ್ದದ್ದೆ ಪೋಲಿಸ್ ಕಟಿಂಗ್. ಅದಕ್ಕೆ ಜಡೆ ಹಾಕಬೇಕಲ್ಲ! ಹೇಗೆ ಹಾಕುವುದು…. ಒಂದು ಉದ್ದನೆಯ ಜಡೆಕುಚ್ಚನ್ನು ಊರಿನಲ್ಲಿ ಯಾರು ಹಾಕುತ್ತಾರೆ ಎಂದು ಯೋಚಿಸಿದಾಗ ನಮ್ಮಜ್ಜಿ ಈ ಹಿಂದೆ ಜಡೆಕುಚ್ಚನ್ನು ಹಾಕುತ್ತಿದ್ದದ್ದು ನೆನಪಾಯಿತು. ಅವರು ಹಾಕದೆ ಉಳಿದಿದ್ದ ಒಂದು ಹಳೆಯ ಜಡೆ ಕುಚ್ಚು ನೆನಪಾಗಿ ಅಜ್ಜಿಯ ಟ್ರಂಕ್ ಹುಡುಕಿದಾಗ ಸಿಕ್ಕಿತು. ಅದನ್ನೆ ಜಡೆಯಂತೆ ಹೆಣೆದು ಏಳೆಂಟು ರಬ್ಬರ್‌ಗಳಿಂದ ನನ್ನ ಕೂದಲಿಗೆ ಅಲ್ಲಲ್ಲಿ ಬಿಗಿಯಾಗಿ ಜೋಡಿಸಿ ಹಾಕಲಾಯಿತು. ಅಷ್ಟೊಂದು ರಬ್ಬರ್‌ಗಳಿಂದ ಎಳೆದು ಬಿಗಿಯಾಗಿ ಕಟ್ಟಿದ್ದರಿಂದ ನನ್ನ ತಲೆಯಲ್ಲಿನ ಕೂದಲು ಬಿಗಿಯತೊಡಗಿದ್ದವು. ಆದರೂ ನಾನು ನಾಟಕ ಆಡಲೆ ಬೇಕಾಗಿತ್ತು.

ಹೊಸಮೇಷ್ಟ್ರು ಬಂದಮೇಲೆ ಪಠ್ಯೇತರ ಭಾಗವಾಗಿ ನಾಟಕಗಳನ್ನು ಆಡಿಸಬೇಕೆಂದು ಹೊಸದಾಗಿ ಹೆಣ್ಣು ಮಕ್ಕಳಿಗೆ ಒಂದು ನಾಟಕ ಗಂಡು ಮಕ್ಕಳಿಗೆ ಒಂದು ನಾಟಕವನ್ನು ಆಡಿಸಬೇಕೆಂದು ಅದುವರೆಗೂ ನೋಡಿರದ ಹಾರ್ಮೋನಿಯಂ ನುಡಿಸುವ ಮೇಷ್ಟ್ರನ್ನು ಕರೆತಂದಿದ್ದರು. ನಮಗೂ ಕುತೂಹಲ. ಹೆಣ್ಣು ಮಕ್ಕಳಿಗೆ ಮೂರ್ನಾಲ್ಕು ಗಂಟೆಯ ನಾಟಕವನ್ನು ಗಂಡುಮಕ್ಕಳಿಗೆ ಒಂದೆರಡು ಗಂಟೆಯ ನಾಟಕವನ್ನು ಗೊತ್ತು ಮಾಡಿದ್ದರು.

ಊರಿನ ಹಿರಿಯರೊಬ್ಬರು ನಾಟಕದ ಸೀನ್ಸ್ ತರಿಸಿದ್ದರು. ಮೊದಲ ಬಾರಿಗೆ ಮಕ್ಕಳು ನಾಟಕಾಭಿನಯ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಕುತೂಹಲ ಮತ್ತು ಖುಷಿಯ ಸಂಗತಿಯಾಗಿತ್ತು. ಊರಿನ ಹಳ್ಳಿಕಟ್ಟೆಯ ಆವರಣದಲ್ಲಿ ನಾಟಕ ಪ್ರಾರಂಭವಾಗಿತ್ತು. ನನ್ನದು ನಾಟಕದ ಒಂದು ದೃಶ್ಯದಲ್ಲಿ ರಾಜಕೀಯ ದುರೀಣನೊಬ್ಬನ ಮುಂದೆ ನೃತ್ಯ ಮಾಡಬೇಕಾಗಿತ್ತು. ನೃತ್ಯ ಮಾಡಬೇಕಾದರೆ ಜಡೆಕೂದಲು ಎಲ್ಲಿ ಉದುರತ್ತದೆಯೋ ಎಂಬ ಹುಷಾರಿನಿಂದಲೆ ನೃತ್ಯವನ್ನು ಮಾಡಿದೆ. ಹಳ್ಳಿಗಳಲ್ಲಿ ನೃತ್ಯ ಚೆನ್ನಾಗಿದ್ದರೆ ಮತ್ತೊಮ್ಮೆ ಕೂಗಿ ಕೂಗಿ ನೃತ್ಯ ಮಾಡಿಸುತ್ತಾರೆ. ಒನ್ಸ್ ಮೋರ್ ಎನ್ನುವುದು ವಲ್ಸ್ಮೋರ್ ಆಗುವುದು ಉಂಟು; ಅದು ಹಳ್ಳಿಗರ ಭಾಷೆ. ಹಾಗೆ ಅವತ್ತು ನನ್ನ ನೃತ್ಯಕ್ಕೆ ಬೇಡಿಕೆ ಬಂದು, ಸರಿ ಮತ್ತೊಮ್ಮೆ ನೃತ್ಯವನ್ನು ಮಾಡಿದೆ. ಆದರೆ ಈ ಸಲ ತಲೆಗೆ ಜೋಡಿಸಿಕಟ್ಟಿದ್ದ ಜಡೆಕುಚ್ಚು ಬಿಚ್ಚಿಕೊಳ್ಳುವ ಸಂಭವವೆ ಜಾಸ್ತಿ ಇತ್ತು. ಹೇಗೊ ನೃತ್ಯವಂತೂ ಮುಗಿದಿತ್ತು. ಆದರೆ ನಂತರದ್ದು ಇನ್ನೊಂದು ಸಂಕಟ ದೃಶ್ಯ ಮುಂದುವರಿದಿತ್ತು. ಜಡೆ ಬೀಳಬಾರದು ಬಿದ್ದರೆ ಅಸಹ್ಯವಾಗಿ ಕಾಣುತ್ತದೆ ಎಂಬ ಭಯದಿಂದಲೆ ನಿಂತ ಸ್ಥಳದಲ್ಲಿಯೇ ನಿಂತು ಸಂಭಾಷಣೆ ಹೇಳುವುದಕ್ಕೆ ಪ್ರಾರಂಭಿಸಿದೆ. ನನ್ನ ಎದುರಿನ ಪಾತ್ರಧಾರಿ ಈ ಕಡೆಯಿಂದ ಆ ಕಡೆಯಿಂದ ಓಡಾಡುತ್ತ ಸಂಭಾಷಿಸುತ್ತಿದ್ದಾನೆ. ಆತ ನೀನು ಓಡಾಡುತ್ತ ಸಂಭಾಷಿಸು ಎಂಬ ಕಣ್ಸನ್ನೆ ನೀಡುತ್ತಿದ್ದಾನೆ. ಆದರೆ ನನ್ನ ಕಷ್ಟ ಅವನಿಗೆ ಅರ್ಥವಾಗುತ್ತಿಲ್ಲ. ಮರೆಯಲ್ಲಿ ನಿಂತಿದ್ದ ಶಿಕ್ಷಕರು ದೊಡ್ಡದಾಗಿ ಕಣ್ಣು ಬಿಡುತ್ತಿದ್ದಾರೆ. ನಾನು ನಿಂತ ಜಾಗದಿಂದ ಕದಲುತ್ತಿಲ್ಲ. ಇನ್ನೇನು ದೃಶ್ಯ ಮುಗಿಯುವಾಗ ನನ್ನನ್ನು ತಳ್ಳುವುದು ನಾನು ಅಲ್ಲಿಂದ ಹೊರಹೋಗಬೇಕಾದ ಸನ್ನಿವೇಶವಿತ್ತು. ನನ್ನ ಎದುರು ಪಾತ್ರಧಾರಿ ನನ್ನನ್ನು ಕತ್ತು ಹಿಡಿದು ತಳ್ಳುವುದಕ್ಕೂ, ಆಗಲೇ ಲೂಸಾಗಿದ್ದ ಜಡೆಕುಚ್ಚು ಉದುರುವುದಕ್ಕೂ ಸರಿಯಾಯಿತು. ಕತ್ತಲು ಬೆಳಕಿನ ಭೀಕರವಾದ ಶಬ್ದದೊಂದಿಗೆ ನನ್ನನ್ನು ತಳ್ಳಲಾಗಿತ್ತು. ಅಲ್ಲಿಂದ ಹೊರಬಂದಾಗಲೆ ಶಿಕ್ಷಕರಿಗೂ ನನ್ನ ಕಷ್ಟ ತಿಳಿದದ್ದು. ಅದೆ ಕೊನೆ ಮತ್ತೆಂದೂ ನಾನು ಹೆಣ್ಣಿನ ಪಾತ್ರವನ್ನು ಮಾಡಲಿಲ್ಲ.

ಅಂತೂ ನಾಟಕಕ್ಕೆ ನನ್ನ ಪಾದಾರ್ಪಣೆ ಆಗಿತ್ತು. ಆಗಿನಿಂದ ಶಾಲೆಯಲ್ಲಿ ನಡೆಯುವ ಪ್ರತಿನಾಟಕದಲ್ಲೂ ನನ್ನದೊಂದು ಪಾತ್ರವಿರುತಿತ್ತು. ನಾಟಕದ ಇನ್ನೊಂದು ಪ್ರಸಂಗವನ್ನು ಹೇಳಲೇಬೇಕು. ಶಾಲೆಯಲ್ಲಷ್ಟೆ ನಡೆಯುತ್ತಿದ್ದ ನಾಟಕದಲ್ಲಿ ಭಾಗವಹಿಸುತ್ತಿದ್ದ ನನಗೆ ಒಮ್ಮೆ ಊರಿನ ನಾಟಕದಲ್ಲಿ ಭಾಗವಹಿಸುವ ಅವಕಾಶವೂ ಒದಗಿಬಂದಿತು. ಅದೊಂದು ಬೇಸಿಗೆಯ ದಿನಗಳಲ್ಲಿ ನಮ್ಮಪ್ಪನ ಸ್ನೇಹಿತರು ನಾಟಕವೊಂದನ್ನು ಕಟ್ಟಿದ್ದರು. ಅದರ ಸಂಪೂರ್ಣ ಉಸ್ತುವಾರಿ ನಮ್ಮಪ್ಪನದೆ ಆಗಿತ್ತು. ಅದು ಯಕ್ಷಗಾನ ನಾಟಕ ‘ಐರಾವತ’ ನಾಟಕವಾಗಿತ್ತು. ಅದರಲ್ಲಿ ಬಾಲಕೃಷ್ಣನ ಪಾತ್ರವನ್ನು ಮೊದಲು ಮಾಡಬೇಕೆಂಬ ನಿಯಮವಿದೆ. ಆ ಕಾರಣಕ್ಕಾಗಿ ನನ್ನನ್ನು ಆ ಪಾತ್ರಕ್ಕಾಗಿ ಸೇರಿಸಿಕೊಂಡರು. ಯಕ್ಷಗಾನದ ನಾಟಕ ನನಗೆ ಹೊಸದು ಪಕ್ಕದ ಊರಿನಲ್ಲಿ ಭಾಗವತರನ್ನು ಕರೆಸಲಾಗಿತ್ತು. ಪ್ರತಿದಿನವೂ ಪ್ರಾಕ್ಟೀಸ್ ನಡೆಸಲಾಗುತ್ತಿತ್ತು. ದಿತ ತೈಯೋ ದಿತ ತೈಯೋ ದಿತ್ತೈಯೋ ಎಂಬ ತಾಳದ ಗತಿಗೆ ತಕ್ಕಂತೆ ಕುಣಿಯುವುದು ಅಭ್ಯಾಸವಾಯಿತು. ಹೋದಲ್ಲಿ ಬಂದಲ್ಲಿ ಅದರ ಕುಣಿತದ ಮಟ್ಟುಗಳನ್ನು ಹಾಕುತ್ತಲೆ ಓಡಾಡುತ್ತಿದ್ದೆ. ಅಂತೂ ನಾಟಕದ ದಿನ ಇವನು ಹೇಗೆ ಯಕ್ಷಗಾನ ನಾಟಕವನ್ನು ಆಡುತ್ತಾನೆ ಎಂಬ ಕುತೂಹಲ ಎಲ್ಲರಿಗೂ ಇತ್ತು.

ಮೊದಲು ನೀಲಿಬಣ್ಣದ, ಕೃಷ್ಣನ ಪಾತ್ರಧಾರಿ ಯಕ್ಷಗಾನ ನಾಟಕವಾದ್ದರಿಂದ ನಾನೂ ಹೆದರಿದ್ದೆ. ನಾಟಕದ ದಿನ ಬಂದೆ ಬಿಟ್ಟಿತು. ಮೊದಲ ಅಂಕದ ಪರದೆ ತೆರೆಯಿತು. ನನ್ನ ತಲೆಯ ಮೇಲೊಂದು ಸಣ್ಣ ಕಿರೀಟ ನನಗೆ ಹಾಕಿದ್ದ ವೇಷ ಭೂಷಣ ಆಕರ್ಷಕವಾಗಿ ಕಾಣುವಂತೆ ಮಾಡಿದ್ದವು. ಬಾಲಕೃಷ್ಣನ ಕುಣಿತವು ಪ್ರಾರಂಭವಾಯಿತು. ಸುಮ್ಮನೆ ಸಮ್ಮೋಹಕ್ಕೆ ಒಳಗಾದವನಂತೆ ಕುಣಿಯುತ್ತಿದ್ದೆ. ಮೇಲಿನ ಪರದೆಯನ್ನು ಬಿಡುವಾಗ ಇನ್ನೇನು ತಲೆಯಮೇಲೆ ಬಿತ್ತು ಎನ್ನುವಾಗ ಮೇಲಕ್ಕೆ ನೋಡಿ ಸ್ವಲ್ಪದರಲ್ಲಿಯೇ ಮುಂದಕ್ಕೆ ಸಾಗಿ ತಪ್ಪಿಸಿಕೊಂಡು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೆ. ನನ್ನ ಕುಣಿತಕ್ಕೆ ಮಾರು ಹೋಗಿ ಮತ್ತೆ ಮತ್ತೆ ಕುಣಿಸಿದರು. ನಾಟಕವಾಗಿ ಕೆಲವು ವರ್ಷ ಕಳೆದರೂ ಅದರ ಬಗೆಗಿನ ಮಾತು ನನ್ನನ್ನು ಮತ್ತೆ ಮತ್ತೆ ಪುಳಕಿತನನ್ನಾಗಿ ಮಾಡುತ್ತಿತ್ತು. ಶ್ರೀ ಕೃಷ್ಣನ ಪಾತ್ರ ಮಾಡಿದ್ದು ನನಗೂ ಖುಷಿ ನೀಡಿತ್ತು. ನಾಟಕದ ಬಗೆಗಿನ ಆಸಕ್ತಿ ನನ್ನಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನು ಮೂಡಿಸಿದ್ದು ಸುಳ್ಳಲ್ಲ. ಮುಂದೆ ಹೈ ಸ್ಕೂಲಿನಲ್ಲಿ ಒಂದು ನಾಟಕವನ್ನು ಆಡಿದ್ದೆ. ಅದರದ್ದು ಇನ್ನೊಂದು ಕತೆ ಮುಂದೆ ಎಂದಾದರೂ ಅದರ ಬಗ್ಗೆ ಹೇಳುವೆನು.

(ಮುಂದುವರಿಯುವುದು)