ಪೊಲೀಸರು ಊರಿನ ಎಲ್ಲರ ಜೊತೆಗೆ ಯನೀನಾಳನ್ನೂ ವಿಚಾರಣೆಗೆ ಒಳಪಡಿಸುತ್ತಾರೆ. ಯಾರ ಬಳಿಯೂ ಇರದ ಉತ್ತರಗಳು ಯನೀನಾಳ ಬಳಿ ದೊರೆಯುತ್ತವೆ. ಬಿಗ್ ಫೂಟ್ ಅಲ್ಲದೇ ಇತರರ ಕೊಲೆಯಾದ ಸ್ಥಳಗಳಲ್ಲಿಯೂ ಬೇರೆ ಬೇರೆ ತರಹದ ಪ್ರಾಣಿಗಳ ಹೆಜ್ಜೆ ಗುರುತುಗಳು ಕಂಡಿರುತ್ತವೆ. ನಾವೇ ಸಾಧು ಪ್ರಾಣಿಗಳ ಒಳಗಿನ ಕ್ರೌರ್ಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೇನೋ, ಈ ಎಲ್ಲ ಸಾಧು ಪ್ರಾಣಿಗಳೇ ಒಂದಾಗಿ ಊರಿನ ಜನರನ್ನು ಸಾಯಿಸುತ್ತಿರಬಹುದು ಎಂಬ ವಾದವನ್ನು ಒಪ್ಪಿಸುವ ಯನೀನಾ ಪೊಲೀಸರ ಕುಹಕಕ್ಕೆ ಗುರಿಯಾಗುತ್ತಾಳೆ.
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ ‘ಡ್ರೈವ್ ಯುವರ್ ಪ್ಲೋ ಓವರ್ ದ ಬೋನ್ಸ್ ಆಫ್ ದಿ ಡೆಡ್’ ಕಾದಂಬರಿಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ಜಿಂಕೆಗಳು ಕೊಲೆ ಮಾಡಬಲ್ಲವೇ? ಈ ಪ್ರಶ್ನೆಯನ್ನು ತಮ್ಮ ‘ಡ್ರೈವ್ ಯುವರ್ ಪ್ಲೋ ಓವರ್ ದ ಬೋನ್ಸ್ ಆಫ್ ದಿ ಡೆಡ್’ ಕಾದಂಬರಿಯಲ್ಲಿ ಎತ್ತಿದವರು ಪೊಲಿಷ್ ಭಾಷೆಯ ಕಾದಂಬರಿಗಾರ್ತಿ ಓಲ್ಗಾ ತೊಕಾರ್ಚುಕ್. ಕಾದಂಬರಿಯ ನಾಯಕಿ ಯನೀನಾ ಇಳಿವಯಸ್ಸಿನ ಹೆಂಗಸು. ಆಕೆಯ ವಯಸ್ಸಿನ ಕಾರಣವಾಗಿ ಕೆಲವರಿಗೆ ನಿರುಪಾಯಳಾಗಿಯೂ, ಹಲವರಿಗೆ ತಿರಸ್ಕೃತಳಾಗಿಯೂ ಯನೀನಾ ಕಾಣಿಸುತ್ತಾಳೆ. ಒಂದು ವಯಸ್ಸು ದಾಟಿದ ಮೇಲೆ ನಮ್ಮ ಸಮಾಜದಲ್ಲಿ ಹೆಣ್ಣು ಇದ್ದರೂ ಇಲ್ಲದಂತಿದ್ದು ಬಿಡಬಹುದಾದದ್ದು ಯನೀನಾಳಿಗೆ ವರವಾಗಿಯೇ ಪರಿಣಮಿಸಿದೆ. ಈಗವಳು ತನ್ನ ಉಗುರುಗಳ ಬಗ್ಗೆ, ಕೇಶ ವಿನ್ಯಾಸದ ಬಗ್ಗೆ, ನಕ್ಕರೆ ಹೇಗೆ ಕಾಣಿಸುತ್ತಾಳೆಂಬ ಬಗ್ಗೆ ಅಷ್ಟೇನೂ ಯೋಚಿಸಬೇಕಾದ ಅಗತ್ಯವೇ ಇಲ್ಲ.

ಅವಳು ವಾಸವಾಗಿರುವುದು ಪೊಲ್ಯಾಂಡ್ ಮತ್ತು ಝೆಕ್ ದೇಶಗಳ ನಡುವಿನ ಗಡಿ ಊರೊಂದರಲ್ಲಿ. ಪೋಲ್ಯಾಂಡಿನ ರಾಜಧಾನಿ ವಾರ್‍ಸಾ ಪಟ್ಟಣದಲ್ಲಿ ವಾಸವಾಗಿರುವ ಹಣವಂತರು ಬೇಸಿಗೆಯಲ್ಲಿ ಎರಡು ತಿಂಗಳು ಮಾತ್ರ ರಜೆ ಕಳೆಯಲು ಈ ಊರಿನಲ್ಲಿ ತಮ್ಮ ಸೆಕೆಂಡ್ ಹೋಮ್‌ಗಳನ್ನು ಇಟ್ಟುಕೊಂಡಿದ್ದಾರೆ. ಮುಂದಿನ ವರ್ಷ ಯನೀನಾಳೂ ವಾರ್‍ಸಾ ಪಟ್ಟಣದ ತನ್ನ ಪುಟ್ಟ ಅಪಾರ್ಟ್‌ಮೆಂಟಿಗೆ ಶಿಫ್ಟ್ ಆಗುವವಳಿದ್ದಾಳೆ. ಆದರೆ ಇಷ್ಟು ಬೇಗ ಅಲ್ಲ. ಈ ವರ್ಷ ಈ ಊರಿನಲ್ಲಿ ಏನೇನೋ ಆಗುವುದಿದೆ, ಎಷ್ಟೆಷ್ಟೋ ಹೆಣಗಳು ಉರುಳಬೇಕಿದೆ. ಯನೀನಾ ಈ ಪುಟ್ಟ ಊರಿನ ತನ್ನ ಮನೆಯಲ್ಲಿದ್ದುಕೊಂಡೇ ಪಟ್ಟಣದಲ್ಲಿರುವ ಹಣವಂತರ ಮನೆಗಳನ್ನೆಲ್ಲ ವರ್ಷ ಪೂರ್ತಿ ನೋಡಿಕೊಳ್ಳುತ್ತಾಳೆ. ಚಳಿಗಾಲದಲ್ಲಿ ಏನಾದರೊಂದು ರಿಪೇರಿ ಕೆಲಸ ಬಂದೇ ಬರುತ್ತದಾದುದರಿಂದ ಯನೀನಾಳ ಮೇಲೆ ದೂರದ ಪಟ್ಟಣದಲ್ಲಿರುವ ಅವಳ ನೆರೆಹೊರೆಯವರೆಲ್ಲ ಅವಲಂಬಿಸಿದ್ದಾರೆ.

ಹೀಗಿರುವಾಗ ಈ ಪುಟ್ಟ ಊರಿನಲ್ಲಿ ಒಬ್ಬೊಬ್ಬರದೇ ಕೊಲೆಯಾಗುತ್ತದೆ. ಈ ಎಲ್ಲ ಕೊಲೆಗಳ ಹಿಂದೆ ಇರುವ ಸಮರೇಖೆಯೆಂದರೆ ಇವರೆಲ್ಲ ವಿಲಾಸಕ್ಕಾಗಿ ಭೇಟೆಯಾಡುವವರು ಎಂಬುದು. ಯನೀನಾಳ ಪಕ್ಕದ ಮನೆಯವನಾದ ‘ಬಿಗ್ ಫೂಟ್’ ಕಾದಂಬರಿಯ ಶುರುವಿನಲ್ಲಿ ಗಂಟಲಲ್ಲಿ ಎಲುಬಿನ ಚೂರು ಸಿಕ್ಕಿ ಉಸಿರುಗಟ್ಟಿ ಸತ್ತು ಬಿದ್ದಾಗ ಯನೀನಾಳಿಗೆ ಆತನ ಮನೆಯ ಮುಂದೆ ಒಂದಿಷ್ಟು ಜಿಂಕೆಗಳು ಗುಂಪು ಗೂಡಿ ನಿಂತಿದ್ದು ಕಂಡು ಬರುತ್ತದೆ. ತಮ್ಮ ತಂಗಿಯನ್ನು ಭೇಟೆಯಾಡಿ ಕೊಂದ ಬಿಗ್ ಫೂಟ್ ತಿನ್ನುತ್ತಿರುವುದನ್ನು ನೋಡಲಾರದೇ ಈ ಜಿಂಕೆಗಳೆಲ್ಲ ಅವನನ್ನು ಸಾಯಿಸಿರಬಹುದೇ ಎಂದು ಅಂದುಕೊಳ್ಳುತ್ತಾಳೆ ಯನೀನಾ.

ಮುಂದಿನ ವರ್ಷ ಯನೀನಾಳೂ ವಾರ್‍ಸಾ ಪಟ್ಟಣದ ತನ್ನ ಪುಟ್ಟ ಅಪಾರ್ಟ್‌ಮೆಂಟಿಗೆ ಶಿಫ್ಟ್ ಆಗುವವಳಿದ್ದಾಳೆ. ಆದರೆ ಇಷ್ಟು ಬೇಗ ಅಲ್ಲ. ಈ ವರ್ಷ ಈ ಊರಿನಲ್ಲಿ ಏನೇನೋ ಆಗುವುದಿದೆ, ಎಷ್ಟೆಷ್ಟೋ ಹೆಣಗಳು ಉರುಳಬೇಕಿದೆ.

ಇದು ಒಂದೇ ಪ್ರಕರಣವಾದರೆ ಅಡ್ಡಿಯಿಲ್ಲ, ಆದರೆ ಊರಿನಲ್ಲಿ ಸಾಲು ಸಾಲು ಕೊಲೆಗಳು ಕಾಣಿಸಿಕೊಳ್ಳುತ್ತವೆ. ಪೊಲೀಸರು ಊರಿನ ಎಲ್ಲರ ಜೊತೆಗೆ ಯನೀನಾಳನ್ನೂ ವಿಚಾರಣೆಗೆ ಒಳಪಡಿಸುತ್ತಾರೆ. ಯಾರ ಬಳಿಯೂ ಇರದ ಉತ್ತರಗಳು ಯನೀನಾಳ ಬಳಿ ದೊರೆಯುತ್ತವೆ. ಬಿಗ್ ಫೂಟ್ ಅಲ್ಲದೇ ಇತರರ ಕೊಲೆಯಾದ ಸ್ಥಳಗಳಲ್ಲಿಯೂ ಬೇರೆ ಬೇರೆ ತರಹದ ಪ್ರಾಣಿಗಳ ಹೆಜ್ಜೆ ಗುರುತುಗಳು ಕಂಡಿರುತ್ತವೆ. ನಾವೇ ಸಾಧು ಪ್ರಾಣಿಗಳ ಒಳಗಿನ ಕ್ರೌರ್ಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೇನೋ, ಈ ಎಲ್ಲ ಸಾಧು ಪ್ರಾಣಿಗಳೇ ಒಂದಾಗಿ ಊರಿನ ಜನರನ್ನು ಸಾಯಿಸುತ್ತಿರಬಹುದು ಎಂಬ ವಾದವನ್ನು ಒಪ್ಪಿಸುವ ಯನೀನಾ ಪೊಲೀಸರ ಕುಹಕಕ್ಕೆ ಗುರಿಯಾಗುತ್ತಾಳೆ.

ಯನೀನಾ ಊರಿನ ಸಣ್ಣ ಶಾಲೆಯೊಂದರಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಾಳೆ. ಯಾವುದೋ ಕಾಲದಲ್ಲಿ ತನ್ನ ವಿದ್ಯಾರ್ಥಿಯಾಗಿದ್ದ ಡಿಸ್ಸಿಯ ಜೊತೆಗೆ ಕವಿ ವಿಲಿಯಮ್ ಬ್ಲೇಕ್‌ರ ಕವನಗಳನ್ನು ಪೊಲಿಷ್ ಭಾಷೆಗೆ ಅನುವಾದ ಮಾಡುತ್ತಾಳೆ. ಈ ಪುಸ್ತಕದ ಶೀರ್ಷಿಕೆಯೂ ಅವರದೇ ಕವನವೊಂದರ ಸಾಲು. ಬ್ಲೇಕ್‌ರ ಕವನದ ಸಾಲುಗಳು ಈ ಪುಸ್ತಕದಲ್ಲಿ ಹೇರಳವಾಗಿ ಕೋಟ್ ಆಗಿವೆ. ಅವು ಕಥನದ ಸೌಷ್ಠವದೊಳಗೆ ನಾಜೂಕಾಗಿ ಸೇರಿಕೊಂಡು ಬಿಟ್ಟಿವೆ. ಕಾದಂಬರಿ ಓದಿಯಾದ ಮೇಲೆ ಬ್ಲೇಕ್‌ರ ಕವನಗಳನ್ನು ಹುಡುಕಿ ಹೊರಡಬೇಕಾದ ಜರೂರು ಕಂಡರೆ ಅನುಮಾನವಿಲ್ಲ.

ಯನೀನಾಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಬಲವಾದ ನಂಬಿಕೆ. ಯಾವ ಗ್ರಹ ಯಾವ ಮನೆಯಲ್ಲಿರುವುದರಿಂದ ಯಾರಿಗೆ ಕೆಡಕುಂಟಾಗುತ್ತದೆ, ಯಾರು ಬಚಾವಾಗುತ್ತಾರೆ ಎಂಬುದನ್ನು ಕರಾರುವಾಕ್ಕಾಗಿ ಹೇಳಿಬಿಡಬಲ್ಲಳು. ಅವಳ ಸಹಚರಿಗಳಾದ ಆಡ್ ಬಾಲ್, ಡಿಸ್ಸಿ, ಬೊರೋಸ್ ಎಲ್ಲರ ಶಾಸ್ತ್ರಗಳನ್ನೂ ಹೇಳಬಲ್ಲಳು ಆಕೆ. ಆದರೆ ಅವರ್ಯಾರೂ ಯನೀನಾಳ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಯನೀನಾಳಿಗೆ ಸತ್ತ ತನ್ನ ತಾಯಿ ಅಜ್ಜಿಯರು ಆಗಾಗ ಮನೆಯಲ್ಲಿ ಕಾಣಸಿಗುತ್ತಾರೆ. ಆಕೆ ತನ್ನದೇ ಮಕ್ಕಳು ಎಂಬಂತೆ ಪ್ರೀತಿಸುತ್ತಿದ್ದ ಎರಡು ನಾಯಿಗಳೂ ಈಗ ಇದ್ದದ್ದೇ ಸುಳ್ಳು ಎನ್ನುವ ಹಾಗೆ ಮಾಯವಾಗಿಬಿಟ್ಟಿವೆ. ಆ ನಾಯಿಗಳು ಮಾಯವಾದುದಕ್ಕೂ ಊರಿನಲ್ಲಿ ನಡೆಯುತ್ತಿರುವ ಕೊಲೆಗಳಿಗೂ ಏನಾದರೂ ಸಂಬಂಧವಿದೆಯೇ? ಅವು ಹೋಗಿದ್ದಾದರೂ ಎಲ್ಲಿ ಎಂಬುದು ಯನೀನಾಳ ಜೊತೆಗೆ ಓದುಗರ ಕುತೂಹಲವೂ ಆಗಿದೆ. ಕಡೆಯಲ್ಲಿ ಬರುವ ಚುರುಕಾದ ಕ್ಲೈಮ್ಯಾಕ್ಸಿಗೆ ಯನೀನಾ ನಮ್ಮನ್ನು ಮೊದಲಿನಿಂದಲೇ ತಯಾರು ಮಾಡುತ್ತಿದ್ದಳೇ ಎಂಬ ಸಂಶಯ ಮೂಡುತ್ತದೆ.
ಈ ಕಾದಂಬರಿಯ ಧಾಟಿ ಕೆಲವೊಮ್ಮೆ ಅಗಾಥಾ ಕ್ರಿಸ್ಟಿಯ ಮರ್ಡರ್ ಮಿಸ್ಟರಿಗಳನ್ನು ನೆನಪಿಗೆ ತಂದರೂ ಬರವಣಿಗೆಯ ತೀಕ್ಷ್ಣತೆಯಲ್ಲಿ ಆ ಪ್ರಕಾರವನ್ನು ಮೀರಿಸುತ್ತದೆ. ಒಂದು ಸಾಧಾರಣ ಪತ್ತೇದಾರಿ ಕಾದಂಬರಿಯಾಗಬಹುದಾದ ಕಥಾವಸ್ತುವನ್ನು ಓಲ್ಗಾ ತೊಕಾರ್ಚುಕ್ ತಮ್ಮ ಬೃಹತ್ ಪ್ರತಿಭೆಯಿಂದ ರಕ್ಷಿಸಿದ್ದಾರೆ. ಮಾಹಿತಿ, ವಿವಿಧತೆ, ಜ್ಞಾನ, ಉಪಕತೆಗಳಿಂದ ಕೂಡಿದ ಅವರ encyclopedic ಶೈಲಿಯ ಬರಹಗಳನ್ನು ಓದಲೇ ಆನಂದವಾಗುತ್ತದೆ.

ಮನುಷ್ಯರು ಭೂಮಿಯ ಎಲ್ಲ ಪ್ರಾಣಿ- ಪಕ್ಷಿ- ವೃಕ್ಷಗಳಿಗಿಂಥ ಯುಕ್ತಿವಂತರು ಎಂಬ ಸಾಧಾರಣವಾದ ವಾದದ ಬೇರಿಗೇ ಪೆಟ್ಟು ಕೊಡುವಂತಿದೆ ಈ ಕಾದಂಬರಿಯ ಗ್ರಾಸ. ಸಾಧುಗಳಂತೆ ಓಡಾಡಿಕೊಂಡಿರುವ ಜಿಂಕೆಗಳನ್ನೂ, ಮೆಟ್ಟಿ ಸಾಯಿಸುವ ಹುಳಗಳನ್ನೂ ಇನ್ನೊಂದು ಬೆಳಕಿನಲ್ಲಿ ಕಾಣುವುದಕ್ಕೆ ಈ ಕಾದಂಬರಿ ಸಾಧ್ಯವಾಗಿಸುತ್ತದೆ.