”ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ. ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ. ಬೇರೆಯದೇ ಲಾಕಪ್ಪಿನಲ್ಲಿರುವ ನಾಲಕ್ಕು ಜನರು ರಾಜಕೀಯದವರು ಎಂದು ಟೈಗರ್ ಗೌರವಿಸುವುದೇನೂ ಇಲ್ಲ. ಕಾರಣ, ಎಲ್ಲ ಲಾಕಪ್ಪುಗಳ ಸ್ಥಿತಿಯೂ ಒಂದೇ.ಗಾಳಿಬೆಳಕು ಅದರೊಳಗಡೆ ಸುಳಿಯುವಂತಿಲ್ಲ.”
ಮಲಯಾಳಂನಿಂದ ಸುನೈಫ್ ಕನ್ನಡಕ್ಕೆ ಅನುವಾದಿಸಿದ ವೈಕಂ ಮುಹಮ್ಮದ್ ಬಷೀರ್ ಕಥೆ.

ಟೈಗರ್ ಒಬ್ಬ ಅದೃಷ್ಟವಂತ ನಾಯಿ. ಊರಿಡೀ ಬರದಿಂದ ತತ್ತರಿಸಿ ಜನರು ಎಲುಬಿಗೆ ಮೆತ್ತಿದ ಚರ್ಮ ಮಾತ್ರ ಉಳಿಸಿಕೊಂಡಿದ್ದರೂ ಟೈಗರ್ ಮಾತ್ರ ದಷ್ಟ ಪುಷ್ಟನಾಗಿದ್ದ. ಕೂತರೆ ಕಪ್ಪುಕಂಬಳಿ ಗುಡ್ಡೆಹಾಕಿದಂತೆ ಕಾಣುತ್ತಿದ್ದ. ಅವನ ಬಾಲ ಮತ್ತು ಕಾಲುಗಳು ಬಿಳಿ. ಪೋಲೀಸರ ಅದೇ ಕೋಪ ತಾಪ ಅವನ ಕಂದು ಮಿಶ್ರಿತ ಕೆಂಪು ಕಂಗಳಲ್ಲೂ ಇತ್ತು.

ಟೈಗರ್ ಯಾವುದೋ ಒಂದು ಬೀದಿಬೊಗ್ಗಿಯ ಮಗ. ಹುಟ್ಟಿದ್ದು ನಗರದ ಮೋರಿಯೊಂದರಲ್ಲಿ. ಈ ಸಂಗತಿಗಳೊಂದೂ ಅವನಿಗೆ ತಿಳಿದಿಲ್ಲ. ಅವನ ನೆನಪು ಶುರುವಾಗುವುದೇ ಪೋಲೀಸ್ ಸ್ಟೇಷನ್ನಿನಿಂದ. ಕತ್ತೆತ್ತಿ ಮೇಲೆ ನೋಡಿದರೆ ಚೌಕಾಕಾರದಲ್ಲಿ ಆಕಾಶ ಕಾಣುವ ನಾಲ್ಕು ಮೂಲೆಯ ಅವನ ಲೋಕವದು. ಖೈದಿಗಳು ಮತ್ತು ಪೋಲೀಸರು ಅವನ ಸಂಗಾತಿಗಳು. ಅವನು ಪ್ರತಿಯೊಬ್ಬರನ್ನೂ ಗುರುತಿಸಬಲ್ಲ. ಇನ್ಸ್‍ ಪೆಕ್ಟರ್ ಮತ್ತು ಟೈಗರ್ ನದ್ದು ಒಂದೇ ರೀತಿಯ ಕಣ್ಣುಗಳು ಎಂದು ಖೈದಿಗಳು ಹೇಳುವುದಿದೆ.

ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ-ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ. ಬೇರೆಯದೇ ಲಾಕಪ್ಪಿನಲ್ಲಿರುವ ನಾಲಕ್ಕು ಜನರು ರಾಜಕೀಯದವರು ಎಂದು ಟೈಗರ್ ಗೌರವಿಸುವುದೇನೂ ಇಲ್ಲ. ಕಾರಣ, ಎಲ್ಲ ಲಾಕಪ್ಪುಗಳ ಸ್ಥಿತಿಯೂ ಒಂದೇ. ಗಾಳಿಬೆಳಕು ಅದರೊಳಗಡೆ ಸುಳಿಯುವಂತಿಲ್ಲ. ಮಲಮೂತ್ರಗಳ ವಾಸನೆಯಲ್ಲಿ, ತಿಗಣೆಗಳಿಂದ ಕಚ್ಚಿಸಿಕೊಂಡು, ಚಿಂದಿ ಬಟ್ಟೆ ಸುತ್ತಿಕೊಂಡು, ಗಡ್ಡಮೀಸೆ ಬಿಟ್ಟುಕೊಂಡ ಮನುಷ್ಯಾಕೃತಿಗಳು ಕತ್ತಲು ಬೆಳಕೆಂದರಿಯದೆ ಅಲ್ಲಿದ್ದಾರೆ. ಇಂತಹ ಅದೆಷ್ಟು ಪೋಲೀಸ್ ಲಾಕಪ್ಪುಗಳು ಊರಾದ ಊರಲ್ಲೆಲ್ಲ ಹಬ್ಬಿಕೊಂಡಿಲ್ಲವೇ? ಅಂತಹ ಲಾಕಪ್ಪುಗಳಿಂದ ಹೊರಬರುವ ಗಬ್ಬು ಮಾನವ ಹೃದಯವನ್ನುಬತ್ತಿಸಿ ಹೊತ್ತಿಸಿ ಬಿಡುತ್ತದೆ. ಆದರೆ, ಖೈದಿಗಳ ಚಿಂತೆ ಇದೊಂದೂ ಅಲ್ಲ. ಊಟದ್ದೊಂದೇ ಅವರ ಚಿಂತೆ. ಅವರೆಲ್ಲ ರಾತ್ರಿ ನಿದ್ದೆ ಮಾಡುವುದು ಬೆಳಗ್ಗಿನ ಗಂಜಿಗಾಗಿ. ಗಂಜಿ ಕುಡಿದಾದರೆ ಮಧ್ಯಾಹ್ನದ ಊಟದ ಯೋಚನೆ. ಅದು ಮುಗಿದರೆ ರಾತ್ರಿಯ ಊಟದ ಚಿಂತೆ. ಒಟ್ಟಿನಲ್ಲಿ ಒಂಥರಾ ತಳಮಳ ಸ್ಥಿತಿ.

ಅಲ್ಲಿ ಯಾರಿಗೂ ಒಂದು ದಿನವೂ ಹೊಟ್ಟೆ ತುಂಬಿದ್ದಿಲ್ಲ; ಹಸಿವು ತಣಿದದ್ದಿಲ್ಲ. ಅವರೆಲ್ಲರ ಬಯಕೆಯೂ ಒಂದೇ. ಬೇಗ ಶಿಕ್ಷೆ ವಿಧಿಸಲ್ಪಟ್ಟು ಜೈಲು ಸೇರಬೇಕು. ಪೋಲೀಸರು ಹಾಕಿದ ಕೇಸುಗಳಿಂದ ಮುಕ್ತಿ ದೊರೆಯುವುದು ಅಸಾಧ್ಯ ಎಂದು ಅವರಿಗೂ ಗೊತ್ತು. ಶಿಕ್ಷೆಯಾದರೆ ಹೆಚ್ಚು ದಿನ ಲಾಕಪ್ಪಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ಬೇಗನೇ ಜೈಲಿಗೆ ಹಾಕುತ್ತಾರೆ. ಜೈಲೆಂದರೆ ಖೈದಿಗಳ ಸ್ವರ್ಗ. ಅವರಿಗೆ ನರಕವೆಂದರೆ ಲಾಕಪ್ಪು. ಪ್ರತಿಯೊಬ್ಬ ಖೈದಿಯ ಕಣ್ಣಲ್ಲೂ ಭಯಂಕರ ಕ್ರೋಧವಿದೆ. ಕಣ್ಣುಗಳ ಮೂಲಕ ಅದನ್ನು ಟೈಗರ್ ಮೇಲೆ ಸುರಿಯುತ್ತಾರೆ. ಅವನಿಗದು ದೊಡ್ಡ ಸಂಗತಿಯಲ್ಲ. ಗಂಭೀರವದನನಾಗಿ ಅವನು ಲಾಕಪ್ಪಿನ ಮುಂದೆ ನಡೆಯುತ್ತಾನೆ. ಅಥವಾ ಯಾವುದಾದರೊಂದು ಲಾಕಪ್ಪಿನ ಮುಂದೆ ಹೋಗಿ ಮಲಗುತ್ತಾನೆ. ಊಟದ ಸಮಯದಲ್ಲಿ ಇನ್ಸ್ ಪೆಕ್ಟರ್ ಸಾಹೇಬರ ಕೋಣೆಯ ಬಾಗಿಲ ಬಳಿ ಕಾವಲು ಕೂರುತ್ತಾನೆ. ಇನ್ಸ್ ಪೆಕ್ಟರ್ ಊಟ ಮುಗಿಸಿ ತೇಗುತ್ತಾ ಎಂಜಲೆಲೆ ಎತ್ತಿ ನಾಯಿಯ ಮುಂದೆ ಇಡುತ್ತಾನೆ. ಒಬ್ಬ ಮನುಷ್ಯ ಉಂಡು ತೇಗಬಹುದಾದಷ್ಟು ಊಟವನ್ನು ಟೈಗರ್ ಒಬ್ಬನೇ ಮುಕ್ಕುತ್ತಾನೆ. ಅದು ಕಂಡ ಖೈದಿಗಳ ಬಾಯಲ್ಲಿ ನೀರೂರುತ್ತದೆ.

ಟೈಗರ್ ಊಟ ಮುಗಿಸಿ ತೋಟದ ಗಿಡಗಳ ನೆರಳಲ್ಲಿ ಮಲಗುತ್ತಾನೆ. ಸಣ್ಣದೊಂದು ನಿದ್ದೆ ಮುಗಿಸಿ ಪುನಹ ಲಾಕಪ್ಪುಗಳ ಮುಂದೆ ಹಾಜರಾಗುತ್ತಾನೆ. ಆಗವನ ಕಣ್ಣುಗಳಲ್ಲಿ ತಿಳಿನಗು ಅರಳಿರುವುದನ್ನು ಗುರುತಿಸಬಹುದು. ಇಲ್ಲಿರುವ ಹಲವರದ್ದು ಕಳ್ಳಕೇಸುಗಳು! ಕೆಲವರು ಜೀವನದಲ್ಲಿ ಒಮ್ಮೆ ಮಾತ್ರ ಕಳ್ಳತನ ಮಾಡಿದವರು. ನಂತರ ಊರಲ್ಲಿ ನಡೆಯುವ ಎಲ್ಲ ಕಳ್ಳತನಗಳಿಗೂ ಅವರೇ ಹೊಣೆಗಾರರು. ಮಾಡದ ತಪ್ಪುಗಳನ್ನೆಲ್ಲ ಅವರು ಲಾಕಪ್ಪಿನೊಳಗಡೆ ಒಪ್ಪಿಕೊಳ್ಳುತ್ತಾರೆ. ಪೋಲೀಸರು ಜೊತೆಗೇ ಇರುವುದರಿಂದ ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟರ ಮುಂದೆಯೂ ಒಪ್ಪಿಕೊಳ್ಳದೆ ಬೇರೆ ದಾರಿಯಿರುವುದಿಲ್ಲ. ಸರಕಾರ ಖೈದಿಗಳ ಊಟಕ್ಕೆಂದು ಪ್ರತಿಯೊಬ್ಬನಿಗೂ ನಿಶ್ಚಿತ ಮೊತ್ತವೊಂದನ್ನು ನಿರ್ಧರಿಸಿದೆ. ಬಹುಷ ಅದರ ಮೂವತ್ತು ಪಟ್ಟು ಒಬ್ಬ ಪೋಲೀಸನ ತಿಂಗಳ ಸಂಬಳವಾಗಬಹುದು. ಪೋಲೀಸರಿಗಾದರೋ ಊಟದ ಖರ್ಚು; ಬಟ್ಟೆಬರೆ; ಹೆಂಡತಿ ಮಕ್ಕಳು; ಬೇರೆ ಅಂತಹ ಅಗತ್ಯಗಳೇನೂ ಇಲ್ಲವೆನ್ನಿ. ಈ ತುಚ್ಛ ಸುಂಬಳದಿಂದ ಅವರಾದರೂ ಹೇಗೆ ದಿನ ದೂಡುತ್ತಾರೆ? ಖೈದಿಗಳು ಸರಳುಗಳೆಡೆಯಿಂದ ಕೈ ಹಾಕಿ ತಮ್ಮ ಕೋಪವನ್ನೆಲ್ಲ ಒಟ್ಟುಗೂಡಿಸಿ ಟೈಗರ್’ನ ಮೈದಡವುತ್ತಾರೆ.

‘ನಮ್ಮ ಅನ್ನ!’ ಅವರು ಹೇಳುತ್ತಾರೆ.
ಟೈಗರ್ ಬಾಲ ಅಲ್ಲಾಡಿಸುತ್ತಾನೆ.

‘ಹೌದು, ಇದುವೇ ಬದುಕು. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.’ ಎಂಬಂತೆ ಆ ಮೂಕ ಪ್ರಾಣಿ ನೋಡುತ್ತದೆ. ನಿಜಕ್ಕೂ ಸಾಧ್ಯವಿದೆಯೇ? ಮೊದಮೊದಲು ಕೆಲವರು ಹೇಳುತ್ತಿದ್ದರು:
‘ನಮ್ಮ ಹಸಿವು ತಣಿದಿಲ್ಲ. ಸರಕಾರದಿಂದ ನಮಗೆ ಸಿಗಬೇಕಾದದ್ದು ನಮಗೆ ಸಿಗಲೇಬೇಕು.’
ಆದರೆ ಸಿಕ್ಕಿದ್ದು ಮಾತ್ರ ಪೋಲೀಸರ ಏಟು ಮತ್ತು ಇನ್ಸ್ ಪೆಕ್ಟರ್ ನ ಬೂಟುಕಾಲಿನ ಒದೆ. ಅದರ ಜೊತೆಗೆ ಇನ್ಸ್ ಪೆಕ್ಟರ್ ನ ಬೈಗುಳ:
‘ಸರಕಾರ ನಿಶ್ಚಯಿಸಿದ್ದಂತೆ. ಸರಕಾರ ಏನು ನಿಮ್ಮಪ್ಪನಾ?’
‘ಸರಕಾರವೆಂದರೆ ಟೈಗರ್!’ಅದೊಂದು ಸರಿಯಾದ ರೂಪಕವಾಗುತ್ತದೆಯೇ?

ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ-ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ. ಬೇರೆಯದೇ ಲಾಕಪ್ಪಿನಲ್ಲಿರುವ ನಾಲಕ್ಕು ಜನರು ರಾಜಕೀಯದವರು ಎಂದು ಟೈಗರ್ ಗೌರವಿಸುವುದೇನೂ ಇಲ್ಲ.

ಪ್ರತಿಯೊಬ್ಬ ಖೈದಿಗೂ ಸರಕಾರ ನಿಶ್ಚಯಿಸಿದ್ದ ಹಣಕ್ಕೆ ಊಟ ಕೊಡುವುದಾಗಿ ಒಬ್ಬ ಹೋಟೆಲಿನವ ಒಪ್ಪಿದ್ದ. ಆತ ಪುಟ್ಟದಾಗಿ ಶುರು ಮಾಡಿದ್ದ ಹೋಟೆಲ್ ಈಗ ಖೈದಿಗಳ ದೆಸೆಯಿಂದಾಗಿ ತಕ್ಕಮಟ್ಟಿಗೆ ವ್ಯಾಪಾರ ನಡೀತಾ ಇದೆ. ಅವನು ದೊಡ್ಡ ಮೀಸೆಯ, ಡೊಳ್ಳು ಹೊಟ್ಟೆಯ, ಧಡೂತಿ ದೇಹದ ಮನುಷ್ಯ. ಆತನಿಗೂ ಪೋಲೀಸ್ ಇನ್ಸ್ ಪೆಕ್ಟರಿಗೂ ಒಳ್ಳೆಯ ಗೆಳೆತನ ಇತ್ತು. ಆತನ ಹೋಟೇಲಿನಲ್ಲಿಯೇ ಇನ್ಸ್ ಪೆಕ್ಟರ್ ಮತ್ತು ಸ್ಟೇಷನ್ ರೈಟರ್ ಊಟ ಮಾಡುವುದು. ಅವರು ಊಟಕ್ಕಾಗಲೀ, ಕಾಫಿಗಾಗಲೀ ದುಡ್ಡು ಕೊಡುವುದಿಲ್ಲ. ಬದಲಾಗಿ ಪ್ರತಿ ತಿಂಗಳು ಒಂದು ಮೊತ್ತ ಹೋಟೆಲಿನಿಂದ ಅವರಿಬ್ಬರಿಗೂ ಬಂದು ಸೇರುತ್ತಿತ್ತು. ಆತ ಆ ನಷ್ಟವನ್ನು ಖೈದಿಗಳಿಂದ ವಸೂಲು ಮಾಡುತ್ತಿದ್ದ. ಐವತ್ತರಿಂದ ಅರವತ್ತರಷ್ಟು ಖೈದಿಗಳು ಪ್ರತಿದಿನ ಆ ಸ್ಟೇಷನ್ನಿನ ಲಾಕಪ್ಪಿನಲ್ಲಿರುತ್ತಾರೆ. ಅವರಿಗೆ ಊಟ ಕೊಟ್ಟರೂ ಕೊಡದಿದ್ದರೂ ಕೇಳುವವರಾರು? ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದಾಗ ಹೇಳೋಣವೆಂದರೆ ಅಲ್ಲಿಂದ ಪುನಹ ಇದೇ ಲಾಕಪ್ಪಿಗೆ ತಾನೆಬರೋದು? ಇನ್ಸ್ ಪೆಕ್ಟರ್ ನಗುತ್ತಲೇ ಕೇಳುತ್ತಾನೆ, ಆದರೆ ಆ ನಗು ಮಾತ್ರ…!

‘ದೂರು ಹೇಳುತ್ತೀಯೇನೋ?’
ಅದರ ಬೆನ್ನಿಗೆ ಮೂರ್ಛೆ ಹೋಗುವ ತನಕ ಪೆಟ್ಟು ಬೀಳುತ್ತದೆ. ಇದು ಹಲವು ಸಲ ಪುನರಾವರ್ತನೆಯಾದಾಗ ಖೈದಿಗಳಿಗೆ ದೂರೇ ಇಲ್ಲವೆಂದಾಯಿತು. ಆ ಕೋಪವನ್ನು ಅವರು ಟೈಗರ್ ಮೇಲೆ ತೀರಿಸುತ್ತಾರೆ. ಖೈದಿಗಳಿಗೆ ಟೈಗರ್ ಕಂಡರೆ ಆಗದು ಎಂದು ಎಲ್ಲರಿಗೂ ಗೊತ್ತು. ಇನ್ಸ್ ಪೆಕ್ಟರ್ ಗೆ ಮಾತ್ರ ಆಶ್ಚರ್ಯ! ಆ ಮೂಕ ಪ್ರಾಣಿಯನ್ನು ಇವರೇಕೆ ಪ್ರೀತಿಸುತ್ತಿಲ್ಲ?
ಖೈದಿಗಳು ಮಾತ್ರ ನಾಯಿಯನ್ನು ಪ್ರೀತಿಸಲಿಲ್ಲ. ಸಮಯ ಸಿಕ್ಕಾಗ ಅದನ್ನು ನೋಯಿಸುವುದನ್ನೂ ಬಿಡಲಿಲ್ಲ. ಆಪತ್ತು ಇದೆ ಅಂತ ಗೊತ್ತಾದ ತಕ್ಷಣ ನಾಯಿ ಕುಂಯ್ ಗುಡುತ್ತದೆ.
‘ಯಾರದು ನಾಯಿಗೆ ಉಪದ್ರ ಮಾಡೋದು?’ ಇನ್ಸ್ ಪೆಕ್ಟರ್ ಲಾಠಿ ಹಿಡಿದು ಹೊರ ಬರುತ್ತಾನೆ.
‘ನಾಯಿಗಳಾ, ಟೈಗರ್ ನನ್ನು ಮುಟ್ಟಬಾರದು ಅಂತ ಹೇಳಿದ್ದೆ ತಾನೇ? ಮುಟ್ಟಿದವನು ಮರ್ಯಾದೆಯಿಂದ ಕೈ ಹೊರಕ್ಕೆ ಚಾಚಿದರೆ ಸರಿ.’
ಸರಳುಗಳೆಡೆಯಿಂದ ಒಂದು ಕೈ ಹೊರ ಬರುತ್ತದೆ. ಇನ್ಸ್ ಪೆಕ್ಟರ್ ಬೆರಳುಗಳನ್ನು ಹಿಡಿದು ಲಾಠಿಯಿಂದ ಚೆನ್ನಾಗಿ ಹೊಡೆಯುತ್ತಾನೆ. ಸುತ್ತಲ ವಾತಾವರಣದಲ್ಲಿ ಅಳು ಮಡುಗಟ್ಟಿ ನಿಲ್ಲುತ್ತದೆ. ಅಂಗೈ ಊದಿ ಒಡೆಯುತ್ತದೆ. ರಕ್ತ ತೊಟ್ಟಿಕ್ಕುತ್ತದೆ. ಟೈಗರ್ ನೆಲಕ್ಕೆ ಬಿದ್ದ ರಕ್ತವನ್ನು ನೆಕ್ಕುತ್ತಾನೆ.

(ಇಲ್ಲಸ್ಟ್ರೇಷನ್ ಕಲೆ:ರೂಪಶ್ರೀ ಕಲ್ಲಿಗನೂರ್)

ಖೈದಿಗಳು ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಾರೆ. ಅದರಿಂದ ಸಿಗುವ ಶಿಕ್ಷೆ ಅವರನ್ನು ಇನ್ನಷ್ಚು ಧೈರ್ಯಶಾಲಿಗಳಾಗಿಸುತ್ತದೆ. ಆ ನಾಯಿಯ ತಂಟೆಗೆ ಹೋದರೆಂದು ಅಲ್ಲಿನ ಬಹಳಷ್ಟು ಖೈದಿಗಳಿಗೆ ಈಗಾಗಲೇ ಶಿಕ್ಷೆಯಾಗಿದೆ. ನಾಯಿ ಮಾತ್ರ ಪಂಥಾಹ್ವಾನ ಕೊಡುತ್ತಲೇ ಇರುತ್ತದೆ.

ಟೈಗರ್ ಅಷ್ಚಾಗಿ ಹೊರಗಡೆ ಹೋಗುವವನಲ್ಲ. ಅವನೊಬ್ಬ ಮಹಾ ಪುಕ್ಕಲ. ಬೇರೆ ನಾಯಿಯೇನಾದರೂ ಆ ಕಡೆ ಬಂದರೆ ಜೋರಾಗಿ ಬೊಗಳುತ್ತಾನೆ. ಆಗವನ ಪರಾಕ್ರಮ ಕಂಡರೆ ಸಿಂಹದ ಮರಿ ಎಂದು ಭಾವಿಸಬೇಕು. ಆದರೆ, ಯಾವಾಗಾದರೂ ಸ್ಟೇಷನ್ನಿನಿಂದ ಹೊರಗೆ ಹೋದಾಗ ಬೀದಿಯ ಯಾವುದಾದರೊಂದು ಸಣಕಲು ನಾಯಿಯನ್ನು ಕಂಡರೂ ಸಾಕು, ಅವನ ಜಂಘಾಬಲವೇ ಉಡುಗಿ ಹೋಗುತ್ತದೆ. ಬಾಲವನ್ನು ತಗ್ಗಿಸಿ, ಕಾಲುಗಳೆಡೆಯಲ್ಲಿ ಸಿಕ್ಕಿಸಿಕೊಂಡು ಓಡಿ ಬಂದು ಸ್ಟೇಷನ್ ಸೇರುತ್ತಾನೆ. ಒಂದು ದಿನ ಹಾಗೇ ಅವ ಬರುತ್ತಿದ್ದಾಗ ರಾಜಕೀಯ ಖೈದಿಗಳಲ್ಲಿ ಒಬ್ಬಾತ ಹೇಳಿದ:
‘ನೋಡ್ರೋ, ನಮ್ಮ ಇನ್ಸ್ ಪೆಕ್ಟರ್ ಸಾಹೇಬರು ಬರುತ್ತಿದ್ದಾರೆ!’

ಅವರ ನಡುವೆ ಇದ್ದ ದಾರ್ಶನಿಕ ಖೈದಿ ಹೇಳಿದ:
‘ನಾವು ಪ್ರತಿಯೊಬ್ಬರೂ ಅವನಂತೆ ಒಬ್ಬೊಬ್ಬ ಇನ್ಸ್ ಪೆಕ್ಟರ್ ಗಳಾಗಿದ್ದೇವೆ.’

ಅವನ ಆ ಪ್ರಸ್ತಾವನೆ ದೊಡ್ಡದೊಂದು ವಾದಕ್ಕೆಡೆ ಮಾಡಿತು. ಮೂವರ ಒಂದು ತಂಡಕ್ಕೆ ಒಬ್ಬನೇ ಎದುರಾಳಿಯಾದ. ಜಗಳ ತಾರಕಕ್ಕೇರುತ್ತಿದ್ದಾಗಲೇ ಒಂದು ಸಂತಸದ ಸುದ್ದಿಯೊಂದಿಗೆ ಇನ್ಸ್ ಪೆಕ್ಟರ್ ಬಂದ.
‘ಏನಿದು ಜಗಳ?’
ಯಾರೂ ಮಾತಾಡಲಿಲ್ಲ.
‘ಬಾಗಿಲು ತೆಗಿ.’ ಎಂದು ಕಾವಲುಗಾರನಿಗೆ ಆಜ್ಞೆಯಿತ್ತ.
ಇನ್ಸ್ ಪೆಕ್ಟರ್ ಹೇಳಿದ:
‘ನಿಮ್ಮನ್ನು ನೋಡೋದಕ್ಕೆ ಯಾರೋ ಬಂದಿದ್ದಾರೆ.’

ಹೋಗಿ ನೋಡಿದರೆ ಜಗಳಕ್ಕೆ ಕಾರಣನಾದವನ ಕೆಲವು ಗೆಳೆಯರು ಬಂದಿದ್ದಾರೆ. ಅವರು ಒಂದಷ್ಟು ತಿಂಡಿಗಳನ್ನು ಮತ್ತು ಕಿತ್ತಳೆ ಹಣ್ಣುಗಳನ್ನು ತಂದಿದ್ದರು. ಎರಡು ಹಣ್ಣುಗಳನ್ನು ಇನ್ಸ್ ಪೆಕ್ಟರ್ ತಿಂದ. ಉಳಿದ ತಿಂಡಿಗಳನ್ನು ಅವರೆಲ್ಲ ತಿಂದರು. ಊರ ಸುದ್ದಿಗಳು ಅಷ್ಟೊಂದು ಆಶ್ಚರ್ಯಕರವಾಗಿರಲಿಲ್ಲ. ಇದ್ದ ಬರಗಾಲ ಏರುತ್ತಿದೆ. ಹಸಿವಿನಿಂದ ಜನರು ಸಾಯುತ್ತಿದ್ದಾರೆ; ಜೊತೆಗೆ ಯುದ್ಧದ ಸುದ್ದಿಗಳು ಬರುತ್ತಿವೆ; ಸಾಮಾನುಗಳ ಬೆಲೆಯೇರಿಕೆ; ಒಟ್ಟಿನಲ್ಲಿ ಭೀಕರ ಕ್ಷಾಮ.

‘ನಮಗೂ ಅದರ ಅನುಭವವಾಗುತ್ತಿದೆ.’ ಜಗಳ ಶುರು ಹಚ್ಚಿದಾತ ಹೇಳಿದ.

ಅವರು ಒಂದಷ್ಟು ತಿಂಡಿಗಳನ್ನು ಮತ್ತು ಕಿತ್ತಳೆ ಹಣ್ಣುಗಳನ್ನು ತಂದಿದ್ದರು. ಎರಡು ಹಣ್ಣುಗಳನ್ನು ಇನ್ಸ್ ಪೆಕ್ಟರ್ ತಿಂದ. ಉಳಿದ ತಿಂಡಿಗಳನ್ನು ಅವರೆಲ್ಲ ತಿಂದರು. ಊರ ಸುದ್ದಿಗಳು ಅಷ್ಟೊಂದು ಆಶ್ಚರ್ಯಕರವಾಗಿರಲಿಲ್ಲ. ಇದ್ದ ಬರಗಾಲ ಏರುತ್ತಿದೆ. ಹಸಿವಿನಿಂದ ಜನರು ಸಾಯುತ್ತಿದ್ದಾರೆ; ಜೊತೆಗೆ ಯುದ್ಧದ ಸುದ್ದಿಗಳು ಬರುತ್ತಿವೆ; ಸಾಮಾನುಗಳ ಬೆಲೆಯೇರಿಕೆ; ಒಟ್ಟಿನಲ್ಲಿ ಭೀಕರ ಕ್ಷಾಮ.

‘ನಿಮಗೇನು, ಊಟಕ್ಕೆ ತೊಂದರೆಯಿಲ್ಲ. ಊರ ಸುದ್ದಿಗಳೊಂದೂ ನಿಮಗೆ ಬೇಡ. ಭಾಗ್ಯವಂತರು ನೀವು!’
ಆಗ ಬಾಗಿಲ ಬಳಿ ಬಂದ ಟೈಗರ್ ನನ್ನು ತೋರಿಸುತ್ತಾ ಜಗಳಾಡಿದವ ಹೇಳಿದ:
‘ಆ ಟೈಗರ್ ನಾಯಿಯಷ್ಟು ಭಾಗ್ಯ ನಮಗಿರುತ್ತಿದ್ದರೆ?’

ಅದು ಕೇಳಿ ಇನ್ಸ್ ಪೆಕ್ಟರ್ ನಕ್ಕ. ಖೈದಿಗಳೂ ನಕ್ಕರು. ಅವರು ಪುನಹ ಲಾಕಪ್ ಸೇರಿದರು. ನಾಲ್ವರಿಗೂ ತೃಪ್ತಿಯಾಗಿತ್ತು. ಹಾಗಾಗಿ ರಾತ್ರಿ ಊಟ ಮುಗಿಸಿದಾಗ ಎಲೆಯಲ್ಲಿ ಅನ್ನ ಬಾಕಿ ಉಳಿದಿತ್ತು. ಅದನ್ನು ಅವರಿಗಿಂತಲೂ ಹಿಂದೆ ಲಾಕಪ್ ಸೇರಿದ್ದವರ ಕಡೆಗೆ ತಳ್ಳಿದರು. ಆ ಲಾಕಪ್ಪಿನೊಳಗಿದ್ದ ಇಪ್ಪತ್ತೆರಡು ಜನರೂ ಆಸೆಯಿಂದ ಬಾಗಿಲ ಬಳಿ ಬಂದರು. ಒಬ್ಬಾತ ಕಂಬಿಗಳೆಡೆಯಿಂದ ಕೈ ಹಾಕಿ ಎಲೆಯನ್ನು ಎಳೆದುಕೊಂಡಾಗ ಸ್ವಲ್ಪ ಚೆಲ್ಲಿತು. ಟೈಗರ್ ನೆಕ್ಕಲು ತಯಾರಾಗಿ ನಿಂತಿದ್ದ. ಲಾಕಪ್ಪಿನ ಇಪ್ಪತ್ತೊಂದು ಜನರೂ ಸಾಲಾಗಿ ಕೂತರು. ಒಬ್ಬಾತ ಬಡಿಸಲು ನಿಂತ. ಇಪ್ಪತ್ತೆರಡು ತುತ್ತು ಅನ್ನವೂ ಅದರಲ್ಲಿರಲಿಲ್ಲ. ಆದರೂ ಹಂಚಿ ತಿನ್ನುವುದೆಂದೇ ತೀರ್ಮಾನಿಸಿದರು. ಬಡಿಸುವಾತ ಐದು ಜನರ ಕೈಗೆ ಚೂರು ಚೂರೇ ಹಾಕಿದ. ಟೈಗರ್ ನೆಲದಲ್ಲಿ ಬಿದ್ದಿದ್ದ ಪಲ್ಯ ನೆಕ್ಕಿತು. ನಂತರ ಕಂಬಿಗೆ ಮೆತ್ತಿದ್ದ ಪಲ್ಯವನ್ನೂ ನೆಕ್ಕತೊಡಗಿತು. ಅಷ್ಟರಲ್ಲಿ ಒಬ್ಬಾತ ಅದರ ಮುಸುಡಿಗೆ ಒದ್ದೇ ಬಿಟ್ಟ. ನಾಯಿ ಪ್ರಾಣ ಭಯದಿಂದ ಬೊಗಳಿತು. ಕಾವಲುಗಾರ ಓಡಿ ಬಂದ; ಉಳಿದ ಪೋಲೀಸರೂ ಬಂದರು. ಇನ್ಸ್ ಪೆಕ್ಟರ್ ಆ ಇಪ್ಪತ್ತೆರಡು ಜನರ ಹೃದಯವನ್ನೇ ಕಿತ್ತುಕೊಳ್ಳುವಂತೆ ಅವರ ಕೈಯಲ್ಲಿದ್ದ ಅನ್ನವನ್ನು ಪುನಹ ಎಲೆಗೆ ಹಾಕಿಸಿ ಹೊರಗೆ ತರಿಸಿ ನಾಯಿಗೆ ಇಟ್ಟ. ಸಾಲದ್ದಕ್ಕೆ ಲಾಕಪ್ಪು ತೆರೆದು ಒಳಗೆ ಹೋಗಿ ಒದೆಗಳ ಮಳೆಗರೆದ.

ಆ ಸಂಗತಿ ಹಾಗೆ ಮುಗಿಯಿತು. ಅಂದು ರಾತ್ರಿ ಸುಮಾರು ಹತ್ತು ಗಂಟೆ ಹೊತ್ತಿಗೆ ನಾಯಿ ಪುನಹ ಭಯಂಕರವಾಗಿ ಬೊಗಳ ತೊಡಗಿತು. ಆ ಸದ್ದಿಗೆ ಪೋಲೀಸ್ ಸ್ಟೇಷನ್ ನಡುಗಿತು. ಕಾವಲುಗಾರ ಓಡಿ ಬಂದು ನೋಡುವಾಗ ಇಬ್ಬರು ಸೇರಿ ನಾಯಿಯ ಮುಸುಡಿಯನ್ನು ಕಂಬಿಗಳೆಡೆಯಿಂದ ಒಳಕ್ಕೆ ಜಗ್ಗುತ್ತಿದ್ದಾರೆ. ಇಬ್ಬರಿದ್ದರು ಎಂಬುದು ಖಚಿತ. ಒಬ್ಬನ ಗುರುತು ಮಾತ್ರ ಕಾವಲುಗಾರನಿಗೆ ಸಿಕ್ಕಿತ್ತು.

ಇನ್ಸ್ ಪೆಕ್ಟರ್ ಅವನನ್ನು ಹೊರಗೆ ಕರೆಸಿದ. ಅವನು ಕಳ್ಳತನವೊಂದರಲ್ಲಿ ಆರೋಪಿಯಾಗಿದ್ದ. ನೋಡುತ್ತಿದ್ದಂತೆಯೇ ಇನ್ಸ್ ಪೆಕ್ಟರ್ ಅವನ ಮುಖಕ್ಕೆ ಗುದ್ದಿದ. ಜೊತೆಗೊಂದು ಒದೆಯೂ ಬಿತ್ತು. ಬೋರಲು ಬಿದ್ದವನ ಮೇಲೆ ಪೆಟ್ಟುಗಳ ಸುರಿಮಳೆ! ಕೊನೆಗೆ ಅವನನ್ನು ಎತ್ತಿದರು. ಬಾಯಲ್ಲಿ ರಕ್ತ! ನೆಲದಲ್ಲಿ ಒಂದು ಹಲ್ಲು! ಹಪ್ಪಳದಗಲ ರಕ್ತ!

ಆ ದೃಶ್ಯವನ್ನು ನಲವತ್ತೈದು ಖೈದಿಗಳೂ ಒಂಬತ್ತು ಪೋಲೀಸರೂ ಟೈಗರೂ ಕಂಡಿದ್ದರು. ನೆಲಕ್ಕೆ ಬಿದ್ದ ರಕ್ತವನ್ನು ಟೈಗರ್ ನೆಕ್ಕಿ ಒಣಗಿಸಿದ.
ಇನ್ಸ್ ಪೆಕ್ಟರ್ ಕೇಳಿದ:
‘ಇನ್ನೊಬ್ಬ ಯಾವನೋ ಅವನು?’


ಆದರೆ, ಆತ ಹೇಳಲಿಲ್ಲ. ಹೇಳದಿರುತ್ತಾನೆಯೇ?… ಅವನ ಎರಡೂ ಕಾಲುಗಳನ್ನು ಸರಳುಗಳ ಎಡೆಯಲ್ಲಿ ತೂರಿಸಿ ಕಟ್ಟಿದರು. ಅಂಗಾಲ ಮೇಲೆ ಲಾಠಿಯಿಂದ ಬೀಸಿ ಬೀಸಿ ಹೊಡೆಯುತ್ತಿದ್ದರೂ ಆತ ಹೇಳಲೇ ಇಲ್ಲ. ಅಂಗಾಲು ಒಡೆಯಿತು. ಒಡೆದು ರಕ್ತ ಚಿಮ್ಮಿದರೂ ಆತ ಬಾಯಿ ಬಿಡಲಿಲ್ಲ. ಅವನ ಪ್ರಜ್ಞೆ ತಪ್ಪಿತ್ತು. ಆದ್ದರಿಂದ ಟೈಗರ್ ತನ್ನ ಗೊರಸು ನಾಲಗೆಯಿಂದ ಅಂಗಾಲನ್ನು ನೆಕ್ಕುತ್ತಿದ್ದರೂ ಆತ ಅಲುಗಾಡದೇ ಬಿದ್ದಿದ್ದ.

ಟೈಗರ್ ಒಬ್ಬ ಅದೃಷ್ಟವಂತ ನಾಯಿ.