‘ದೀಪವಿರದ ದಾರಿಯಲ್ಲಿ’ ಕಾರ್ಕಳದ ಸುಶಾಂತ್ ಕೋಟ್ಯಾನ್ ಬರೆದ ವಿಭಿನ್ನ ಕಾದಂಬರಿ. ಯಕ್ಷಗಾನ ಕಲಾವಿದನೊಬ್ಬ ಸಲಿಂಗಪ್ರೇಮಿಯಾಗಿ  ಬದುಕನ್ನು ಎದುರಿಸುವ ಕತೆಯೇ ಈ ಕಾದಂಬರಿಯ ಹೂರಣ. ಸಲಿಂಗ ಪ್ರೇಮದ ಬಗ್ಗೆ ಬಹಿರಂಗ ಚರ್ಚೆಗಳು ಅಪರೂಪವಾಗಿರುವ ನಮ್ಮ ಸಮಾಜದಲ್ಲಿ ಈ ಕೃತಿಯ ಕುರಿತು ಓದುಗರಲ್ಲಿ ಕುತೂಹಲವೂ ಹೆಚ್ಚು. ಹಾಗಾಗಿ ಕಾದಂಬರಿಯು ಓದುಗನಿಗೆ ಕೊಡುವ ಒಳನೋಟಗಳೇನು ಎಂಬುದನ್ನು ಹಿರಿಯ ಲೇಖಕ ಪ್ರೊ. ಪುರುಷೋತ್ತಮ ಬಿಳಿಮಲೆ, ಕಾದಂಬರಿಗೆ ಬರೆದ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಕೆಂಡಸಂಪಿಗೆ ಓದುಗರಿಗಾಗಿ ಆ ಮುನ್ನುಡಿ ಇಲ್ಲಿದೆ :

 

ಅರಿವಿನ ಗಡಿರೇಖೆಗಳನ್ನು ವಿಸ್ತರಿಸುವ ಕಾದಂಬರಿ

ನಮ್ಮ ಸಮಾಜದಲ್ಲಿ ಸಲಿಂಗರತಿ ಮತ್ತು ಅದಕ್ಕೆ ಸಂಬಂಧಿಸಿದಂತಿರುವ ಅನೇಕ ಸಂಗತಿಗಳು ಜನಪ್ರಿಯವಾಗಿದ್ದರೂ, ಅದರ ಬಗ್ಗೆ ಬಹಿರಂಗವಾದ ಚರ್ಚೆಗಳು ನಡೆದದ್ದು ಕಡಿಮೆ. ಈ ಕುರಿತು ನಮ್ಮ ತಿಳಿವಳಿಕೆಗಳನ್ನು ಹೆಚ್ಚಿಸುವ ಪುಸ್ತಕಗಳಾಗಲೀ, ಲೇಖನಗಳಾಗಲೀ ಪ್ರಕಟವಾದದ್ದು ಕೂಡಾ ಕಡಿಮೆಯೆ. ಗಂಡು – ಗಂಡುಗಳ ನಡುವಣ ರತಿ ಅಥವಾ ಒಂದು ಗಂಡಿಗೆ ಇನ್ನೊಂದು ಗಂಡಿನ ಮೇಲಿನ ಮೋಹ ಹುಟ್ಟುವುದು ಅಸಹಜವೇನಲ್ಲವಾದರೂ ಅದರ ಬಗ್ಗೆ ಅಮೆರಿಕಾದಲ್ಲೋ, ಮೆಕ್ಸಿಕೋದಲ್ಲೋ ಮಾತಾಡುವಷ್ಟು ಸಹಜವಾಗಿ ನಾವು ಮಾತಾಡಲಾರೆವು. ಸಲಿಂಗ ಪ್ರೇಮಿಗಳನ್ನು ನಮ್ಮ ಸಮಾಜವು ಆದರಿಸುವ ಉದಾರತೆಯನ್ನೂ ತೋರಿಸಿಲ್ಲ.

ಮಹಾಭಾರತದ ಆದಿಪರ್ವದಲ್ಲಿ ಪಾಂಚಾಲ ರಾಜನ ಹಿರಿಯ ಮಗನು ಶಿಖಂಡಿಯಾಗಿದ್ದ ಎಂದು ಹೇಳಲಾಗಿದೆ. ಕುತೂಹಲದ ಸಂಗತಿಯೆಂದರೆ, ಆತ ಹೆಂಗಸಾಗಿ ಜನಿಸಿ ಗಂಡಸಾದವನು. ಯಕ್ಷನೊಬ್ಬನು ಅವಳೊಡನೆ ರತಿಸುಖವನ್ನೂ ಅನುಭವಿಸುತ್ತಾನೆ. ಅಜ್ಞಾತವಾಸದ ಸಂದರ್ಭ ವಿರಾಟ ನಗರದಲ್ಲಿದ್ದ ಅರ್ಜುನನು ನಾಟ್ಯ ಕಲಿಸುವ ಶಿಖಂಡಿ (ಬೃಹನ್ನಳೆ)ಯಾಗಿದ್ದ. ಭೀಷ್ಮಾಚಾರ್ಯರು ಶರಶಯ್ಯೆಗೊರಗುವಂತೆ ಮಾಡಿದವನೂ ಶಿಖಂಡಿಯೇ. ಮೌಸಲ ಪರ್ವದಲ್ಲಿ ಯಾದವರು ಸಾಂಬನಿಗೆ ಹೆಣ್ಣಿನ ವೇಷ ತೊಡಿಸುತ್ತಾರೆ.

(ಸುಶಾಂತ್ ಕೋಟ್ಯಾನ್)

ಹರಿಯ ಮೋಹಿನಿ ರೂಪವನ್ನು ಕಂಡು ಮೋಹಿತನಾದ ಹರನ ಬಗ್ಗೆ ನಾಲ್ಕನೇ ಶತಮಾನದಷ್ಟು ಹಿಂದಿನದ್ದು ಎನ್ನಲಾದ ಬ್ರಹ್ಮಾಂಡ ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ವಿವರಗಳಿದ್ದರೂ ನಾವದನ್ನು ಆಧ್ಯಾತ್ಮಿಕವಾಗಿಯೇ ಗ್ರಹಿಸಿದ್ದು ಹೆಚ್ಚು. 20ನೇ ಶತಮಾನದಲ್ಲಿ ಬಹಳ ಜನಪ್ರಿಯವಾದ ಅಯ್ಯಪ್ಪನ ಆರಾಧನೆಯ ಭಾಗವಾಗಿ, ಯಕ್ಷಗಾನ ಕಲಾವಿದರು ಭಸ್ಮಾಸುರ-ಮೋಹಿನಿ ಅಥವಾ ಶಬರಿಮಲೆ ಅಯ್ಯಪ್ಪ ಪ್ರಸಂಗವನ್ನು ಪ್ರದರ್ಶಿಸುವಾಗಲೂ ಶಿವನು ಮೋಹಿನಿಯಿಂದ ಆಕರ್ಷಿತನಾಗುವ ರೀತಿಯನ್ನು ರಂಗದ ಮೇಲೆ ಅದ್ಭುತವಾಗಿ ತೋರಿಸುತ್ತಿದ್ದರು. ಆಶ್ಚರ್ಯವೆಂದರೆ, ತಿಂಗಳುಗಳ ಕಾಲ ಮಾಂಸ – ಮೈಥುನಗಳಿಂದ ದೂರವಿದ್ದು, ಕಪ್ಪು ಬಟ್ಟೆ ಧರಿಸಿರುವ ಅಯ್ಯಪ್ಪನ ಭಕ್ತರೇ ಈ ಪ್ರದರ್ಶನಗಳ ಪ್ರಮುಖ ಪ್ರೇಕ್ಷಕರು.

ಇದೆಲ್ಲದರ ಅರ್ಥವಿಷ್ಟೆ, ಕಾಮಸೂತ್ರದ ನಾಡಲ್ಲಿ ಜನರು ತಮ್ಮ ಅಂತರಂಗಕ್ಕೆ ತಿಳಿದುದನ್ನು ಬಹಿರಂಗವಾಗಿ ಮಾತಾಡಲಾರರು. ಶಿಖಂಡಿಯ ಬಗ್ಗೆ ಓದುವ ನಾವು ಮನೆ ಅಂಗಳದಲ್ಲಿ ಅವರನ್ನು ಕಂಡರೆ ತಮಾಷೆ ಮಾಡುತ್ತೇವೆ, ಇಲ್ಲವೇ ಸಿಡಿಮಿಡಿಗೊಳ್ಳುತ್ತೇವೆ. ಬಹಳ ಜನರು ಒಪ್ಪಿಕೊಂಡು ಪರಿಪಾಲಿಸುತ್ತಿರುವ ಒಂದು ಸಾಮಾಜಿಕ ಕ್ರಮವಿದು. ಈ ನಡುವೆ ಒಂದು ಮಾತಂತೂ ನಿಜ, ಯಾವ ಬಗೆಯ ಬರವಣಿಗೆಗಳನ್ನು ಇಂದು ಮೂಲಭೂತವಾದಿಗಳು ವಿರೋಧಿಸಿಕೊಂಡು ಬರುತ್ತಿದ್ದಾರೆಯೋ ಅಂಥವನ್ನು ನಮ್ಮ ಸನಾತನ ಪಠ್ಯಗಳು ರಚಿಸಿಕೊಂಡು, ಕಾಪಾಡಿಕೊಂಡು ಬಂದಿವೆ ಎಂಬುದು.

ಸಲಿಂಗರತಿ, ಮುಷ್ಟಿ ಮೈಥುನ ಮತ್ತಿತರ ಚಟುವಟಿಕೆಗಳನ್ನು ಮಾನಸಿಕ ರೋಗ ಎಂದು ಇವತ್ತೂ ಅನೇಕರು ವಾದಿಸುತ್ತಾರೆ. ‘ಬ್ರಹ್ಮ ಚರ್ಯವೇ ಜೀವನ, ವೀರ‍್ಯನಾಶವೇ ಮೃತ್ಯು’ ಎಂಬುದು ನಮ್ಮ ನಡುವೆ ಜನಪ್ರಿಯವಾಗಿರುವ ಗಾದೆಯಂಥಾ ಮಾತು. ಗಮನಿಸಬೇಕಾದ ಅಂಶವೆಂದರೆ, ಈ ಬಗೆಯ ನಂಬುಗೆಗಳು ಸಾರ್ವತ್ರಿಕವೇನಲ್ಲ. ಸಂಸ್ಕೃತಿಯಿಂದ ಸಂಸ್ಕೃತಿಗೆ ಅವು ಬದಲಾಗುತ್ತವೆ.

ಚರಿತ್ರೆಯ ವಿವಿಧ ಘಟ್ಟಗಳಲ್ಲಿ ಅವುಗಳ ವ್ಯಾಖ್ಯಾನಗಳೂ ಬದಲಾಗುತ್ತಾ ಹೋಗಿವೆ. ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ಸಲಿಂಗರತಿಯು ಸರಿಯೋ ತಪ್ಪೋ ಎಂಬ ಮಾಮೂಲೀ ನ್ಯಾಯ ತೀರ್ಮಾನಗಳಿಗಿಂತ ಹೆಚ್ಚಾಗಿ ಸಲಿಂಗರತಿಯಲ್ಲಿ ತೊಡಗಿಸಿಕೊಂಡವನ ಲೋಕದೃಷ್ಟಿ ಹೇಗಿರುತ್ತದೆ ಎಂಬುದನ್ನು ಅರಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಅವನ ಸಂವೇದನಾಶೀಲತೆ, ಭಾವಲೋಕ, ಜಗತ್ತನ್ನು ಅವನು ನೋಡಿ, ಗ್ರಹಿಸಿ, ಮಂಡಿಸುವ ವಿಧಾನ, ಕಲೆ, ಸಾಹಿತ್ಯ, ಸಂಗೀತಗಳಿಗೆ ಅವನ ವ್ಯಾಖ್ಯಾನಗಳನ್ನು ನಾವು ಒಳಗೊಳ್ಳುವಂತಾದಾಗ ಸಲಿಂಗ ರತಿಯೂ ಸಂಸ್ಕೃತಿಯ ಭಾಗವಾಗುತ್ತದೆ. ಹಾಗೆ ಆಗಬೇಕಾದ್ದೂ ಅಗತ್ಯ. ಇಂಥ ಪ್ರಯತ್ನಗಳು ಇವತ್ತು ವಿಶ್ವದಾದ್ಯಂತ ನಡೆಯುತ್ತಿವೆ. ಸ್ತ್ರೀವಾದದ ಜೊತೆ ಜೊತೆಗೇ ಸಲಿಂಗವಾದವೂ ಓದುಗರ ಗಮನ ಸೆಳೆಯುತ್ತಿದೆ. ಡೇವಿಡ್ ಫೈನ್ ಫರ್ಗ್, ಟೋನಿ ಕುಶ್ನರ್, ಡೇವಿಡ್ ಲೆವಿಟ್, ಎಡ್ಮಂಡ್ ವೈಟ್, ಪೌಲ್ ಮೊನೆಟ್, ಡೇನಿಸ್ ಕೂಪರ್, ಜೇಮ್ಸ್ ಬಾಲ್ಡ್ವಿನ್ , ಪೌಲ್ ರಸೆಲ್, ಓಷಿಯನ್ ವೋಂಗ್, ಚಿನೆಲೋ ಒಕ್ಪರಾಂಟ, ಆಂಡ್ರೂ ಸಿಯಾನ್, ಹನ್ಯಾ ಯನಗಿಹರ – ಮೊದಲಾದವರು ತಮ್ಮ ಬರೆಹಗಳಿಂದ ಸಲಿಂಗವಾದಕ್ಕೆ ಘನತೆ ಗೌರವ ತಂದುಕೊಟ್ಟಿದ್ದಾರೆ. ಇವರಲ್ಲಿ ಕೆಲವರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯೂ ದೊರೆತಿದೆ.

2018ರ ಸೆಪ್ಟಂಬರ್ ತಿಂಗಳಲ್ಲಿ ಭಾರತದ ಉಚ್ಚ ನ್ಯಾಯಾಲಯವು LGBTQ (Lesbian, Gay, Bisexual, Transgender and Queer) ಚಳವಳಿಯನ್ನು ಕಾನೂನುಬದ್ಧಗೊಳಿಸಿದ ಆನಂತರ, ಈ ಕುರಿತು ನಮ್ಮಲ್ಲಿಯೂ ಒಂದಷ್ಟು ಚರ್ಚೆಗಳು ಆರಂಭವಾದುವು. ಪ್ರಕಾಶಕರೂ ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬಂದರು. ವಿವೇಕ ತನುಜಾ, ಅಮೃತಾ ಪಾಟೀಲ್, ಅಭಾ ದವೇಸರ್ ಮೊದಲಾದವರು ಇವತ್ತು ಸಲಿಂಗರತಿ ಸಂಬಂಧಿತವಾಗಿ ಬರೆದೇ ಪ್ರಸಿದ್ಧರಾಗಿದ್ದಾರೆ. ಇಂಥ ಬೆಳವಣಿಗೆಗಳಿಗೆ ಪೂರಕವಾಗಿ ಇದೀಗ ಕನ್ನಡದಲ್ಲಿ ‘ದೀಪವಿರದ ದಾರಿಯಲ್ಲಿ’ ಹೆಸರಿನ ಪ್ರಸ್ತುತ ಕಾದಂಬರಿ ಪ್ರಕಟವಾಗುತ್ತಿದೆ. ಇದನ್ನು ಬರೆದವರು ಕಾರ್ಕಳದ ಸುಶಾಂತ್ ಕೋಟ್ಯಾನ್. ಒಂದು ಕಲಾಕೃತಿಯಾಗಿ ಈ ಕಾದಂಬರಿಯನ್ನು ಗಮನಿಸುವುದಕ್ಕೂ ಹೆಚ್ಚಾಗಿ, ಎರಡು ಕಾರಣಗಳಿಗೆ ನನಗಿದು ಮುಖ್ಯವಾಗಿ ತೋರುತ್ತದೆ. ಮೊದಲನೆಯದು, ಇದರ ವಸ್ತು ಕರಾವಳಿ ಕರ್ನಾಟಕದ ಸುಪ್ರಸಿದ್ಧ ಕಲೆಯಾದ ಯಕ್ಷಗಾನದ ಒಳಗಿನ ಪ್ರಪಂಚವೊಂದನ್ನು ನವಿರಾಗಿ ತೆರೆದಿಡುತ್ತದೆ. ಎರಡನೆಯದು ಸಲಿಂಗರತಿಯಂಥ ವಸ್ತುವನ್ನು ಆಯ್ದುಕೊಂಡ ಕಾದಂಬರಿಯು ಓದುಗರನ್ನು ಬೌದ್ಧಿಕವಾಗಿ ಬೆಳೆಸುತ್ತದೆ.

1960ರ ದಶಕದಿಂದಲೂ ಯಕ್ಷಗಾನ ನೋಡುತ್ತಾ ಬಂದಿರುವ ನಾನು ಅದರ ಒಳಗಿನ ಅನೇಕ ಕತೆಗಳಿಗೆ ಕಿವಿಗೊಟ್ಟಿದ್ದೇನೆ. ಅವುಗಳಲ್ಲಿ ಕಲಾವಿದರ ಕಾಮ ಸಂಬಂಧೀ ಕತೆಗಳಿಗೆ ಪ್ರಧಾನವಾದ ಸ್ಥಾನವೊಂದಿದೆ. ಆರು ತಿಂಗಳುಗಳ ಕಾಲ ನಿರಂತರವಾಗಿ ಮೇಳದೊಂದಿಗೆ ಸಂಚರಿಸಬೇಕಾಗಿದ್ದ ಕಲಾವಿದರು ಅಷ್ಟೂ ಕಾಲ ಬ್ರಹ್ಮಚರ‍್ಯವನ್ನು ಕಾಪಾಡಿಕೊಳ್ಳುತ್ತಿದ್ದರೆ? ಸಹಕಲಾವಿದರೊಡನೆಯ ಅವರ ಸಂಬಂಧದ ಸ್ವರೂಪ ಏನು? ರಂಗದ ಮೇಲೆ ಸುಂದರವಾಗಿ ಕಾಣಿಸುವ ಮತ್ತು ಕುಣಿಯುವ ಸ್ತ್ರೀ ವೇಷಧಾರಿಗಳನ್ನು ರಾತ್ರಿಯಿಡೀ ನಿದ್ದೆಗೆಟ್ಟು ಆಟ ನೋಡುವ ಪುರುಷ ಪ್ರೇಕ್ಷಕರು ಯಾವ ಕಣ್ಣುಗಳಿಂದ ನೋಡುತ್ತಿದ್ದರು? ಮೊಹಕ ಕುಣಿತ ಮತ್ತು ಮಾತುಗಳ ಮೂಲಕ ಮನಸೆಳೆಯುವ ತರುಣ ವೇಷಧಾರಿಗಳಿಗೆ ಮಹಿಳಾ ಪ್ರೇಕ್ಷಕರು ಮನಸೋಲದಿರುವುದುಂಟೆ? ಇಂಥ ಪ್ರಶ್ನೆಗಳು ಸಮಾಜದ ಒಪ್ಪಿತ ಮೌಲ್ಯಗಳಿಗೆ ವಿರುದ್ಧವಾಗಿರುವುದರಿಂದ ಇವುಗಳ ಕುರಿತು ಬಹಿರಂಗ ಚರ್ಚೆಗಳೇನೂ ನಡೆಯುವುದಿಲ್ಲ. ಕಲಾವಿದರೂ ತಮ್ಮ ಆತ್ಮಚರಿತ್ರೆಗಳಲ್ಲಿ (ಉದಾಹರಣೆಗೆ ಪ್ರಸಿದ್ಧ ಕಲಾವಿದ ಶ್ರೀ ಕುಂಬಳೆ ಸುಂದರರಾಯರ ಸುಂದರ ಕಾಂಡ) ಈ ಕುರಿತು ಕೆಲವು ಸೂಚನೆಗಳನ್ನು ನೀಡುತ್ತಾರಾದರೂ ವಿವರವಾಗಿ ಬರೆಯುವುದೇ ಇಲ್ಲ.

ಬರೆಯಲಿಲ್ಲ ಅಂದರೆ ಅಂಥದ್ದೇನೂ ಇರಲಿಲ್ಲ ಎಂದೇನೂ ತಿಳಿಯಬೇಕಾಗಿಲ್ಲ. ಘಟನೆಗಳು ಹೇಗೆ ಹೇಗೋ ತೆರೆಮರೆಯಲ್ಲಿ ನಡೆಯುತ್ತಲೇ ಇರುತ್ತವೆ. ಕೆಲವು ವರ್ಷಗಳ ಹಿಂದೆ ಕರಾವಳಿಯಲ್ಲಿ ನಡೆದ ಬೃಹತ್ ಸಮಾವೇಶವೊಂದರಲ್ಲಿ ನಾನು ಈ ಕುರಿತು ಪ್ರಸ್ತಾಪಿಸಿದ್ದೆ. ಭಾಷಣ ಮುಗಿದು ಕೆಳಗಿಳಿದು ಬಂದಾಗ ಪ್ರಖ್ಯಾತ ಸ್ತ್ರೀ ವೇಷಧಾರಿಯೊಬ್ಬರು ಭಾಗವತರು ತನಗೆ ಕೊಡುತ್ತಿದ್ದ ಉಪಟಳದ ಬಗ್ಗೆ ಹೇಳಿದ್ದರು. ಸಹಕರಿಸದೇ ಇದ್ದರೆ ಭಾಗವತರು ಆ ಕಲಾವಿದನಿಗೆ ಕೊಡಬೇಕಾದಷ್ಟು ಪದ್ಯಗಳನ್ನು ರಂಗದಲ್ಲಿ ಕೊಡುತ್ತಲೇ ಇರುತ್ತಿರಲಿಲ್ಲವಂತೆ.

ಪ್ರಸ್ತುತ ಕಾದಂಬರಿಯ ನಾಯಕನಾದ ಸುಕೇಶನೂ ಒಬ್ಬ ಸ್ತ್ರೀ ವೇಷಧಾರಿ. ಇಡೀ ಕಾದಂಬರಿಯನ್ನು ಅವನ ಸುತ್ತಲೇ ಕಟ್ಟಿ ಬೆಳೆಸಲಾಗಿದೆ. ಹಾಗೆ ಕಟ್ಟುವಾಗ, ಸುಕೇಶನೊಳಗಿನ ಹೆಣ್ತನದ ಸೂಕ್ಷ್ಮಗಳಿಗೆ ಗೌರವ ತಂದುಕೊಡಲಾಗಿದೆ ಮತ್ತು ಅವನನ್ನು ಲೈಂಗಿಕವಾಗಿ ಶೋಷಿಸುವವರನ್ನು ಬಯಲುಗೊಳಿಸಲಾಗಿದೆ. ಇವುಗಳ ನಡುವೆ LGBTQ ನ ಹಲವು ಸಂಕೀರ್ಣ ಮುಖಗಳು ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತಾ ಓದುಗರನ್ನು ಶೈಕ್ಷಣಿಕವಾಗಿಯೂ ಬೆಳೆಸುತ್ತದೆ.

ನಾವು ಗಮನಿಸಬೇಕಾದ ಸಂಗತಿಯೆಂದರೆ, ಸಲಿಂಗರತಿಯು ಸರಿಯೋ ತಪ್ಪೋ ಎಂಬ ಮಾಮೂಲೀ ನ್ಯಾಯ ತೀರ್ಮಾನಗಳಿಗಿಂತ ಹೆಚ್ಚಾಗಿ ಸಲಿಂಗರತಿಯಲ್ಲಿ ತೊಡಗಿಸಿಕೊಂಡವನ ಲೋಕದೃಷ್ಟಿ ಹೇಗಿರುತ್ತದೆ ಎಂಬುದನ್ನು ಅರಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು.

ಕಾದಂಬರಿಯ ಮೊದಲ ಭಾಗದಲ್ಲಿ ಸುಕೇಶನೊಡನೆ ಸಂಬಂಧ ಬೆಳೆಸುವವ ಅವಿವಾಹಿತ ರವೀಂದ್ರ. ಆದರೆ ಆತ ಮದುವೆಯಾಗಲು ನಿರ್ಧರಿಸಿದಾಗ ಸುಕೇಶನಿಗೆ ‘ತನ್ನ ಪ್ರಿಯತಮ ತನ್ನನ್ನು ತೊರೆದು ಬೇರೊಬ್ಬಳನ್ನು ಮದುವೆಯಾಗುತ್ತಿದ್ದಾನೆಂಬ ನೋವು’ ಗಾಢವಾಗುತ್ತಾ ಹೋಗುತ್ತದೆ. ಸಂಜೀವ ಮತ್ತು ರಘುಪತಿಯರ ಪ್ರಕಾರ ‘ಸುಕೇಶ ಎದೆಯಲ್ಲಿ ರವೀಂದ್ರನ ಅಗಲಿಕೆಯ ನೋವನ್ನು ಹೊತ್ತುಕೊಂಡು ಕೊನೆಯ ಕ್ಷಣದಲ್ಲಿ ಅದನ್ನು ಸಹಿಸುವ ಶಕ್ತಿಯಿಲ್ಲವಾಗಿ ಸಾವಿಗೆ ಶರಣಾಗುವ ನಿರ್ಧಾರ’ವನ್ನೂ ಮಾಡುತ್ತಾನೆ. ಆದರೆ ಈ ಸತ್ಯವನ್ನು ತೆರೆದಿಡುವ ಸಮಾಜ ಅಲ್ಲಿರುವುದಿಲ್ಲ. ಎಲ್ಲರಿಗೂ ಅವರವರ ‘ಮರ‍್ಯಾದೆ’ ಮುಖ್ಯವಾದ್ದರಿಂದ ಸುಕೇಶನಿಗೆ ಸಿಗಬೇಕಾದ ನ್ಯಾಯ ದೊರೆಯದೇ ಹೋಗುತ್ತದೆ.

ಸಿಟಿ ಹಾಸ್ಟಿಟಲ್‌ನ ನರ್ಸ್ ನಿವೇದಿತಾ ಅವನನ್ನು `ಯಾಕಾಗಿ ಸಾಯೋ ಯೋಚ್ನೆ ಮಾಡಿದೆ?’ ಎಂದು ಕೇಳಿದಾಗ ಸುಕೇಶ ತಾಳುವ ಮೌನ ತುಂಬ ಸಾಂಕೇತಿಕವಾದುದು. ಈ ಹಂತದಲ್ಲಿ ಕಾದಂಬರಿಯು ಸ್ವಲ್ಪ ವಾಚ್ಯವಾಗುತ್ತದೆಯಾದರೂ ಓದುಗರಿಗೆ ತಿಳಿವಳಿಕೆ ಕೊಡುವ ದೃಷ್ಟಿಯಿಂದ ಉಪಯುಕ್ತವಾಗುತ್ತದೆ. ‘ಅವನ ಆಸೆ, ಬಯಕೆಗಳಿಗೆ ಹೆಣ್ಣಿನಂತೆ ಮೈಯೊಡ್ಡಲು ಅಂದು ನಾನು ಬೇಕಿತ್ತು. ನನ್ನ ಈ ದೇಹ ಬೇಕಿತ್ತು. ಆವಾಗ ಯಾವ ರೀತಿಯಿಂದಲೂ ಅಸಹ್ಯವಾಗಿ ಕಾಣದ ನಾನು ಅವನ ಮನೆಯವರು, ಈ ಸಮಾಜ, ಮುಂದಿನ ಭವಿಷ್ಯ ಎದುರಾದಾಗ ಅಸಹ್ಯವಾಗಿ ಕಾಣಲಾರಂಭಿಸುತ್ತೇನೆ. ಕತ್ತಲಾಗುತ್ತಿದ್ದಂತೆ ಸೀರೆಯುಟ್ಟ ಮಂಗಳಮುಖಿಯೊಬ್ಬಳ ಹಿಂದೆ ಹೋಗಿ ತನ್ನ ತೀಟೆ ತೀರಿಸಿಕೊಳ್ಳುವವ, ಅದೇ ಮಂಗಳಮುಖಿ ಹಗಲೆಲ್ಲಾದರು ರಸ್ತೆಯಲ್ಲಿ ಕಂಡಾಗ ಅಸಹ್ಯವಾಗಿ ಕಾಣುತ್ತಾನೆ. `ಇವರದ್ದೊಂದು ವೇಷ’, `ಏನು ಕರ್ಮವಯ್ಯ ಇದು’ ಎಂದು ಹಂಗಿಸಿ ಹೀಯಾಳಿಸಿ ಮಾತನಾಡುತ್ತಾನೆ. ರಸ್ತೆಯಲ್ಲಿ ಓಡಾಡುವ ಮಂಗಳಮುಖಿ ಯಾಕೆ? ಸ್ತ್ರೀ ವೇಷ ಮಾಡಿಕೊಂಡು ರಾತ್ರಿ ಮಾತ್ರ ಮುಖಕ್ಕೆ ಬಣ್ಣ ಹಚ್ಚುವ ನಾನೇ ಕಂಡಿಲ್ಲವೇ ಈ ಸಮಾಜವನ್ನು.

ವಿವಾಹವಾದವರು, ಆಗದವರು, ಹೆಂಡತಿ ತವರಿಗೆ ಹೋದಾಗ ಬಂದು ಕಾಡುವವರು, ಹೆಂಡತಿಗೆ ಹೆರಿಗೆಯಾದಾಗ ಬಂದು ನಮ್ಮನ್ನು ಕಾಣುವವರು, ಹೆಚ್ಚೇಕೆ ವಯಸ್ಸಾಗಿರೋ ಮುದುಕರು… ಎಲ್ಲರಿಗೂ ನಮ್ಮಂಥವರು ಬೇಕು. ಯಾಕೆ ಬೇಕೆಂದರೆ ಅವರ ದೇಹ ಬಯಕೆ ತೀರುವುದಕ್ಕೆ ಮಾತ್ರ… ಇಷ್ಟೆಲ್ಲ ಆಗಿಯೂ ಸಮಾಜ ನಮ್ಮನ್ನು ತಿರಸ್ಕಾರದಿಂದಲೇ ಕಾಣುವುದು. ಯಾಕೆ? ಎಲ್ಲರಂತೆಯೇ ಬದುಕಬೇಕೆಂಬ ಆಸೆ ನಮಗಿಲ್ಲವೇ? ಅದನ್ನೇಕೆ ಈ ಸಮಾಜ ಅರ್ಥಮಾಡಿಕೊಳ್ಳಬಾರದು?” ಎಂಬ ಮಾತುಗಳು ಮನೋಜ್ಞವಾಗಿವೆ. ಕಾದಂಬರಿಯ ಕೊನೆಯಲ್ಲಿ ಹೆಂಡತಿಯನ್ನು ಹೆರಿಗೆಗೆ ಕಳಿಸಿದ ರವೀಂದ್ರನು ಮತ್ತೆ ಸುಕೇಶನನ್ನು ಬಯಸಿದಾಗ, ಸುಕೇಶನು ಕಟುವಾಗಿಯೇ ನಡೆದುಕೊಳ್ಳುವುದು ಅತ್ಯಂತ ಸಹಜವಾಗಿದೆ.

ಸುಕೇಶನ ಎರಡನೆಯ ಸಂಬಂಧವು ಆಕಾಶನೊಡನೆ ಏರ್ಪಡುತ್ತದೆ. ಮಳೆಗಾಲದ ಚಿಕ್ಕಮೇಳದ ಸಂದರ್ಭದಲ್ಲಿ ಪರಿಚಯವಾದ ಆಕಾಶ್ ಹೆಂಡತಿಯನ್ನು ಕಳಕೊಂಡ ವಿಧುರ. ಅವನ ಮಾತಿನಲ್ಲಿ ಕಂಡು ಬಂದ ವಿಶ್ವಾಸಕ್ಕೆ ಚುಕ್ಕಿ ಅಥವಾ ಸುಕೇಶ್ ಮತ್ತೊಮ್ಮೆ ಬಲಿಬೀಳುತ್ತಾನೆ. ಆದರೆ ಈ ಸಲ ರವೀಂದ್ರನ ಕತೆ ಪುನರಾವರ್ತನೆ ಆಗಬಾರದೆಂದು ಬಯಸಿ, ಆಕಾಶನೊಡನೆಯ ಸಂಬಂಧವನ್ನು ಶಾಶ್ವತಗೊಳಿಸಿಕೊಳ್ಳಲು ‘ನಿರ್ವಾಣ’ ಮಾಡಿಸಿಕೊಳ್ಳಲು ಯೋಚಿಸುತ್ತಾನೆ. ನಿರ್ವಾಣ ಎಂದರೆ ಲಿಂಗ ಬದಲಿಸಿಕೊಳ್ಳುವುದು. ಅದಕ್ಕವನಿಗೆ ಪ್ರೇರಣೆ ನೀಡುವುದು ಮಂದಾಕಿನಿಯಾಗಿ ಪರಿವರ್ತನೆಗೊಂಡ ಮುಕುಂದ. ಆದರೆ ಮಂದಾಕಿನಿಯು ನಿರ್ವಾಣದ ಕಷ್ಟಗಳನ್ನು ಸುಕೇಶನ ಮುಂದಿಡುತ್ತಾಳೆ – ‘ಹೆಣ್ಣಾಗುವುದು ತಪ್ಪಲ್ಲ ಚುಕ್ಕಿ. ಆದ್ರೆ ಹೆಣ್ಣಾಗುವುದರಿಂದ ಯಾವ ಪ್ರಯೋಜನವೂ ಇಲ್ಲ!

ಲಿಂಗ ಬದಲಾಯಿಸಿಕೊಂಡು ನಾವು ಹೆಣ್ಣಾದ ಮಾತ್ರಕ್ಕೆ ಈ ಸಮಾಜ ನಮ್ಮನ್ನು ಹೆಣ್ಣೆಂದು ಒಪ್ಪಲಾರದು. ಬದಲಿಗೆ ಭಿಕ್ಷೆ ಬೇಡುವ, ಸೆಕ್ಸ್ ವರ್ಕ್ ಮಾಡುವ ಹಿಜಿಡಾ, ಖೋಜಾಗಳೆಂದೇ ಜರಿಯುತ್ತದೆ. ಹೆಣ್ಣಾಗಿ ಬದಲಾದ ಲಿಂಗ ಬರಿಯ ಕಾಮುಕರ ತೀಟೆ ತೀರಿಸಿಕೊಳ್ಳಲು ಉಪಯೋಗವಾಗುವ ಒಂದು ಅಂಗವಾಗುವುದೇ ಹೊರತು ಅದರಿಂದ ಬೇರಾವ ಉಪಯೋಗವೂ ಇಲ್ಲ… ಹಾಗಿರುವಾಗ ನಿರ್ವಾಣ ಮಾಡಿಸ್ಕೊಂಡು ಆ ನೋವನ್ನನುಭವಿಸೋದಕ್ಕಿಂತ ಇದ್ದಂತೆಯೇ ಇದ್ದು ಬಿಡೋದು ಒಳ್ಳೆಯದಲ್ವಾ? ಏನಿಲ್ಲ ಅಂದ್ರು ಎಲ್ಲೋ ದೂರದೂರಲ್ಲಿ ನಿಂತು ಅಪರೂಪಕ್ಕೊಮ್ಮೆ ಗಂಡಿನಂತೆ ಮನೆಗಾದರು ಹೋಗಿ ಬಂದು ಮಾಡ್ಬಹುದು. ಈಗ ನಿರ್ವಾಣ ಮಾಡಿಸ್ಕೊಂಡು ನಾನು ಮನೆಯವರಿಂದ ಅನುಭವಿಸಿದ ಹಿಂಸೆಯೇ ಸಾಕಾಯ್ತು ನನಗೆ…’

ಆದರೆ ಸುಕೇಶನ ಪ್ರೀತಿ ಮಾತ್ರ ನಿಷ್ಕಳಂಕವಾದುದು. ‘ಬರೀ ದೇಹ ಬಯಕೆಯನ್ನು ಪೂರೈಸಿಕೊಳ್ಳುವವರ ಜೊತೆಗೆ ಮಲಗೋದು ನನಗಿಷ್ಟವಿಲ್ಲ. ನನಗೆ ನನ್ನನ್ನು ಪ್ರೀತಿಸಿ, ಆಧರಿಸುವ ಒಂದು ಜೀವ ಬೇಕು’ ಎಂಬುದು ಅವನಾಸೆಯಾಗಿತ್ತು. ಆ ಆಸೆಯನ್ನು ಪೂರೈಸುವ ಜೀವವಾಗಿ ಅವನಿಗೆ ಆಕಾಶ್ ಬೇಕಾಗಿತ್ತು. ಆಕಾಶ್ ಕೂಡಾ ಹೇಳುವುದು ಅಂಥದ್ದೇ ಮಾತುಗಳನ್ನು – ‘ನಾನು ನಿನ್ನ ತರಾನೇ ಪ್ರೀತಿಗಾಗಿ ಹಂಬಲಿಸುವವನು. ಮದುವೆಯಾಗಿ ನಾನು ನನ್ನ ಹೆಂಡ್ತಿನ ಕಳ್ಕೊಂಡಿದ್ರು ನನ್ನ ಮನೆಯವರು ನನ್ನ ಕರೆದು ಆದರಿಸಿದ್ದಿಲ್ಲ.

(ಪ್ರೊ. ಪುರುಷೋತ್ತಮ ಬಿಳಿಮಲೆ)

ಒಂಟಿಯಾಗಿರೋ ನನ್ನ ಬದುಕಿಗೆ ನೀನೇ ಆಸರೆಯಾದರೆ ತಪ್ಪೇನು? ಗಂಡಾಗಿದ್ರು ಮನಸ್ಸಿನ ಭಾವನೆ ಹೆಣ್ಣಾಗಿರುವ ನಿನ್ನನ್ನು, ನಿನ್ನ ಭಾವನೆಯನ್ನು ನಾನು ಗೌರವಿಸುತ್ತೇನೆ. ನಿನ್ನನ್ನು ಹೆಣ್ಣಾಗಿಯೇ ನೋಡ್ಕೋತೇನೆ. ಹೆಂಡ್ತಿಯಾಗಿ ಸ್ವೀಕರಿಸುತ್ತೇನೆ. ಬರಿಯ ನನ್ನ ಸುಖಕ್ಕಾಗಿ ಮಾತ್ರವಲ್ಲ. ಗಂಡಾಗಿದ್ದುಕೊಂಡು ನಿನ್ನನ್ನು ಹೆಣ್ಣೆಂದು ಪ್ರೀತಿಸುವ ಸಲುವಾಗಿಯೂ’ ಎಂಬುದು ಅವನ ಮಾತು. ಆಕಾಶನಿಗೂ ಸುಕೇಶ್ ಅಗತ್ಯವಾಗಿದ್ದ. ‘ಕಾಮ ಅನ್ನುವ ಬೆಂಕಿ ಅವರಿಬ್ಬರನ್ನು ಅಷ್ಟೊಂದು ಗಾಢವಾಗಿ ಆವರಿಸಿಕೊಂಡುಬಿಟ್ಟಿತ್ತು’. ಈ ನಡುವೆ ಆಕಾಶ್ ಸುಕೇಶನನ್ನು ನಿಜವಾದ ಹೆಣ್ಣಾಗಿ ನೋಡಬಯಸುತ್ತಾನೆ. ಅವನು ಸುಕೇಶನಿಗೆ ಹೀಗೆ ಹೇಳುತ್ತಾನೆ- ‘ನೀನು ಈವಾಗ ದೈಹಿಕವಾಗಿ ಗಂಡು. ಮಾನಸಿಕವಾಗಿ ಹೆಣ್ಣು. ನೀನು ಲಿಂಗ ಪರಿವರ್ತನೆ ಮಾಡಿಸಿಕೊಂಡು ದೈಹಿಕವಾಗಿಯೂ ಹೆಣ್ಣಾಗಬೇಕೆಂಬುದೆ ನನ್ನಾಸೆ. ಆಮೇಲೆ ನಾವಿಬ್ಬರು ಎಲ್ಲಾದರು ದೂರ ಹೋಗಿ ಗಂಡ ಹೆಂಡತಿಯರಾಗಿ ಬದುಕಿಬಿಡೋಣ.’

ಕಾದಂಬರಿ ಕೊನೆಯಲ್ಲಿ ಈ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸುಕೇಶ್ ಬೆಂಗಳೂರಿನಲ್ಲಿ ನಿರ್ವಾಣಗೊಳ್ಳುತ್ತಾನೆ. ನಿರ್ವಾಣ ಆದವರಿಗೆ ನಿರ್ದಿಷ್ಟ ದಿನಗಳ ಆನಂತರ ನಡೆಯುವ ಜಲ್ಸಾ ಮುಗಿಸಿ ಊರಿಗೆ ಬಂದಾಗ ಆಕಾಶ್ ಸಮಾಜಕ್ಕೆ ಹೆದರಿ, ಬೇರೆ ದಾರಿ ಹಿಡಿದಿರುತ್ತಾನೆ. ಪ್ರೀತಿಗಾಗಿ ನಿರಂತರವಾದ ಹುಡುಕಾಟ ನಡೆಸಿದ ಸುಕೇಶ್ ಮತ್ತೊಮ್ಮೆ ಒಂಟಿಯಾಗುತ್ತಾನೆ.

ಕಾದಂಬರಿ ಹೀಗೆ ಕೊನೆಯಾಗುತ್ತದೆ- ‘ದೀಪವಿರದ ಕತ್ತಲ ದಾರಿಯಲ್ಲಿ ಒಂಟಿಯಾಗಿ ನಿಂತಿದ್ದನು ಸುಕೇಶ. ಅವನು ಇಷ್ಟರವರೆಗೆ ಬಯಸಿದ ಬದುಕು ಅವನಿಗೆ ದೊರೆಯಲೇ ಇಲ್ಲ. ಅಷ್ಟೊತ್ತಿಗೆ ಮೂಡಣದಲ್ಲಿ ಮೇಲೇರಿದ್ದ ರವಿ ತನ್ನ ಹೊಂಗಿರಣದ ಹೊಂಬೆಳಕನ್ನು ಭುವಿಯೆಡೆಗೆ ಚೆಲ್ಲಿದ್ದನು. ಟ್ಯಾಕ್ಸಿ ನಿಧಾನವಾಗಿ ಮುಂದಕ್ಕೆ ಚಲಿಸಿತ್ತು. ಸುಕೇಶ ಅಂಧಕಾರದ ಬದುಕಿನಲ್ಲಿ ಬೆಳಕಿಗಾಗಿ ಅರಸುತ್ತಿದ್ದನು. ಅಂತ್ಯವಿಲ್ಲದ ಕತೆಯ ಆರಂಭ ಅವನ ಬದುಕಿನಲ್ಲಿ ಇದೀಗ ಆಗಿತ್ತು’.

ಹೀಗೆ ಈ ಕಾದಂಬರಿಯು ಲೈಂಗಿಕತೆಯ ವಿಭಿನ್ನ ಮಜಲುಗಳನ್ನು ಧೈರ್ಯವಾಗಿ ಶೋಧಿಸುತ್ತದೆ. ರವೀಂದ್ರ, ಆಕಾಶ್ ಮತ್ತು ಸುಕೇಶರ ನಡುವಣ ತ್ರಿಕೋನ ಸಂಬಂಧಗಳ ಜೊತೆಗೆ ಗಂಡಸರ ಹಿಂದೆ ಹೋಗುವ ರಘುಪತಿಯ ಸಮಸ್ಯೆಗಳೂ ಬಿಚ್ಚಿಕೊಳ್ಳುತ್ತವೆ. ಗೇ ಸೆಕ್ಸ್ ವೀಡಿಯೋ ನೋಡುವ ಅವನನ್ನು ಬಿಟ್ಟು, ಅವನ ಹೆಂಡತಿ ಗುಜರಾತಿಯೊಬ್ಬನ ಸ್ನೇಹ ಮಾಡುತ್ತಾಳೆ. ಈ ಎಲ್ಲಾ ಘಟನೆಗಳನ್ನು ಸಮಾಜವು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಳ್ಳುತ್ತಾ ಹೋಗುತ್ತದೆ. ಇಂಥ ಸಂಕೀರ್ಣ ಸ್ಥಿತಿಯನ್ನು ಕಾದಂಬರಿ ತಣ್ಣಗೆ ಕಟ್ಟಿಕೊಡುತ್ತದೆ.

ಈ ಕಾದಂಬರಿಯ ವಸ್ತು ಮತ್ತು ಪಾತ್ರಗಳು ಕನ್ನಡಕ್ಕೆ ತೀರಾ ಹೊಸದು. ಕಾನೂನಿನ ತೊಡಕುಗಳು, ಸಂಪ್ರದಾಯಸ್ಥರ ಆಕ್ರಮಣ, ಮಡಿವಂತಿಕೆ, ನಿಷೇಧ, ಭಯ ಇತ್ಯಾದಿ ಕಾರಣಗಳಿಂದಾಗಿ LGBTQ ಸಾಹಿತ್ಯವು ಮುಖ್ಯಧಾರೆಗೆ ಬರಲೇ ಇಲ್ಲ. ಸುಶಾಂತ್ ಕೋಟ್ಯಾನ್ ತುಂಬ ಧೈರ್ಯವಹಿಸಿ ಈ ಕಾದಂಬರಿಯನ್ನು ಬರೆದು ನಮ್ಮ ಅರಿವಿನ ಗಡಿರೇಖೆಗಳನ್ನು ವಿಸ್ತರಿಸಿದ್ದಾರೆ.

(ಕೃತಿ: ದೀಪವಿರದ ದಾರಿಯಲ್ಲಿ, ಲೇಖಕರು : ಸುಶಾಂತ್‌ ಕೋಟ್ಯಾನ್, ಪ್ರಕಾಶಕರು: ಛಂದ ಪುಸ್ತಕ, ಬೆಲೆ160/)