“ಮೊದಮೊದಲು ಹೀಗೆ ನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು. ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ. ನೀನು ನೋಡದಾಗ ಒಮ್ಮೊಮ್ಮೆ ಅವನು ನನ್ನ ಬಳಿ ಬಂದು ತಲೆ ನೇವರಿಸುವನು. ಹಣೆಗೆ ಮುತ್ತಿಕ್ಕುವನು. ಕಿಬ್ಬೊಟ್ಟೆ ವಿಪರೀತ ಮುರಿದು ನನ್ನ ಕಣ್ಣಲ್ಲಿ ನೀರಾಡಿದಾಗ ಹತ್ತಿರ ಬಂದು ಕಣ್ಣೀರೊರೆಸುವನು. ‘ಸಾರಿ ಕಣೇ, ನಿನ್ನ ಒಳಗೆ ಕರೆದೊಯ್ಯಲಾರೆ. ಇದು ಮನೆಯ ಪದ್ಧತಿ, ಕ್ಷಮಿಸು ಕಂದಾ’ ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುವನು. ಇನ್ನು ಹೆಣ್ಣಾದ ನಾನು ಪ್ರಪಂಚವನ್ನು ಹೇಗೆಲ್ಲಾ ಎದುರಿಸಬೇಕಾಗಬಹುದೆಂಬುದನ್ನು ಸಾವಕಾಶವಾಗಿ ವಿವರಿಸುವನು“
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಆರನೆಯ ಕಂತು.

 

‘ಕರ್ಮಕ್ಕೆ ಹುಟ್ಟಿದ ಗಂಡುಬೀರಿಯೇ..’ ಎಂದು ಅಮ್ಮ ನನ್ನನ್ನು ಮೂದಲಿಸಿದ ದಿನ… ಧೋ ಮಳೆಯು ಎದೆಯಿಳೆಗೆ ಬಿತ್ತಿದ ನೆನಪುಗಳ ಬೀಜ ಮೊಳೆತು ಹೂವಾದಂಥಾ ಹಿತ. ಮಳೆ ಎಷ್ಟು ಜೋರಾದರೆ ನೆನಪು ಅಷ್ಟು ಹಿತ. ಹೀಗೊಂದು ಮಳೆದಿನದಲ್ಲಿ ನನ್ನ ಪ್ರೀತಿಯ ಸಂಜೆಮಲ್ಲಿಗೆ ಗಿಡದಿಂದ ಮೆಣಸಿನಂತಹ ಕಪ್ಪು ಬೀಜಗಳನ್ನು ಲಂಗದ ಹಿಡಿಮಡಿಕೆಯಲ್ಲಿ ಅಡಗಿಸಿಟ್ಟುಕೊಂಡು ತಂದಿದ್ದೆ. ಸ್ನೇಹಿತೆಯೊಬ್ಬಳು ದೂರದ ಮಹಾನಗರವೊಂದರಿಂದ ಬಂದು ನಮ್ಮ ಶಾಲೆ ಸೇರಿದ್ದಳು. ಹೂವಿನ ತಳಿಗಳ ಹೆಸರೇ ತಿಳಿಯದ ಅವಳು ಸಂಜೆಮಲ್ಲಿಗೆಯ ಹೆಸರಿಗೆ ಮರುಳಾಗಿ ‚ ನಾನೂ ಆ ಗಿಡ ಬೆಳೆಸಬೇಕು ಕಣೇ, ಬೀಜ ತಂದುಕೊಡು ಪ್ಲೀಸ್. ಬೇಕಾದ್ರೆ ಒಂದಕ್ಕೆ ಐದು ಪೈಸೆ ಕೊಡ್ತೀನಿ ಕಣೇ..’ ಅಂದುಬಿಟ್ಟಳು! ಶಾಲೆಯ ಹಿಂದಿನ ಬಯಲುದಾರಿಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದುಕೊಂಡಿದ್ದ ಬಣ್ಣಬಣ್ಣದ ಸಂಜೆಮಲ್ಲಿಗೆ ನೆನೆದು ನನ್ನ ತಲೆಯಲ್ಲಿ ಅದೇ ಮೊದಲ ಬಾರಿಗೆ ಒಂದು ವ್ಯಾಪಾರೀಬುದ್ಧಿ ಹುಟ್ಟಿಕೊಂಡಿತು.

ಇವಳಿಗೆ ಒಂದಷ್ಟು ಬೀಜಗಳನ್ನು ತಂದುಕೊಟ್ಟು ಎಂಟಾಣೆಯಷ್ಟನ್ನು ನನ್ನ ‘ತುರ್ತು ನಿಧಿ’ಯೆಂದು ಸಂಪಾದಿಸಿ ಆರ್ಥಿಕವಾಗಿ ಸಬಲಳಾಗಬೇಕೆಂಬ ಕೆಚ್ಚು ಹುಟ್ಟಿಬಿಟ್ಟಿತು. ಅಂತೆಯೇ ಅಂದು ಸಂಜೆ ಶಾಲೆಯ ನಂತರ ಗಡಿಬಿಡಿಯಲ್ಲಿ ಈ ಬೀಜಗಳನ್ನು ಆಯುವಾಗ ಇದ್ದಕ್ಕಿದ್ದಂತೆ ಧಬೋರೆಂಬ ರಣಮಳೆ ಶುರುವಾಗಿಬಿಟ್ಟಿತು. ತೋಯ್ದು ನೆಗಡಿಯಾದರೆ ಇನ್ನು ಅಮ್ಮ ಬೈಯುವಳೆಂದು ಹೆದರಿ ಶಾಲೆಯ ಪಕ್ಕವೇ ಇದ್ದ ರಮಾ ಮಾಮಿ ಮನೆಯ ಕಾಂಪೌಂಡ್ ಹೊಕ್ಕು ಕಿಟಕಿಯ ಸಜ್ಜೆಯ ನೆರಳಲ್ಲಿ ನಿಂತಿದ್ದೆ. ಇರುಚಲು ತಾಳಲಾರದೇ ಬಾಗಿಲು ಮುಚ್ಚಲು ತಲಬಾಗಿಲಿಗೆ ಬಂದವರು ನನ್ನ ನೋಡಿ ‚ ಏನೇ ವಾಣೀ ಮಗಳೇ.. ಇನ್ನೂ ಮನೆಗೆ ಹೋಗಲಿಲ್ಲವಾ? ಬಾ ಒಳಗೆ.’ ಅಂದರು. ರಜೆಯಲ್ಲಿ ನಮ್ಮ ಶಾಲೆಯಲ್ಲಿ ಜರುಗುವ ಯೋಗಶಿಬಿರದಲ್ಲಿ ಅಮ್ಮನೂ ಮಾಮಿಯೂ ಸ್ನೇಹಿತೆಯರು. ಅಂದು ಆ ಮಳೆಯಲ್ಲಿ ಅವರ ಆಹ್ವಾನ ತಿರಸ್ಕರಿಸುವ ಸ್ಥಿತಿ ನನ್ನದಾಗಿರಲಿಲ್ಲ. ಮೊದಲು ಲಂಗದ ಮಡಿಕೆಗಳ ಮಧ್ಯೆ ಗಟ್ಟಿ ಹಿಡಿದಿದ್ದ ಮೆಣಸುಕಾಳಿನಂಥಾ ಬೀಜಗಳನ್ನು ಬ್ಯಾಗಿಗೆ ಏರಿಸಿಕೊಳ್ಳಬೇಕಿತ್ತು. ಮರು ಮಾತಾಡಾದೇ ಶೂ ಬಿಚ್ಚಿಟ್ಟು ಒಳಗೆ ಹೋದೆ. ಹಾಲಿನಲ್ಲಿ ಸೋಫಾದ ಮೇಲೆ ಕೂತೊಡನೇ ಅಷ್ಟು ಹೊತ್ತೂ ಹಿಂಡಿ ಹಿಂಸಿಸುತ್ತಿದ್ದ ಕಿಬ್ಬೊಟ್ಟೆ ಹಾಗೂ ತೊಡೆಯ ಮಾಂಸಖಂಡಗಳು ನಿರಾಳವಾಗಿ ಹಿತವಾಗಿ ಮೈಮುರಿದವು. ಎಷ್ಟೋ ಹೊತ್ತು ಹಾಗೇ ಕೂತಿದ್ದವಳಿಗೆ ಎದ್ದು ಹೊರಡುವ ಮನಸೇ ಇರಲಿಲ್ಲ. ಕಾಲುಗಳು ಎಂದೂ ಇಲ್ಲದಂತೆ ಅಂದು ಸೋತುಬಿಟ್ಟಿದ್ದವು. ತೊಡೆಗಳ ಸಂದಿನಲ್ಲಿ ಏನೋ ಕಸಿವಿಸಿಯಾಗಿ ಗಾಬರಿಯಾಗತೊಡಗಿತು. ಅಷ್ಟರಲ್ಲಿ ಮಳೆಯ ಆರ್ಭಟ ಸ್ವಲ್ಪ ತಗ್ಗಿ ನಾನು ಮಾಮಿಗೆ ಹೇಳಿ ಹೊರಗೆ ಬಂದು ಹೊರಡಲನುವಾದೆ. ಹಿಂದೆಯೇ ಗಾಬರಿಯಿಂದ ಓಡಿಬಂದ ರಮಾಮಾಮಿ ‘ಪುಟ್ಟೀ.. ಸ್ವಲ್ಪ ನಿಲ್ಲು ನಿಲ್ಲು…’ ಎಂದವರೇ ನನ್ನ ಭುಜ ಹಿಡಿದು ಹಿಂದುಮುಂದು ತಿರುಗಾಡಿಸಿ ಕೂಲಂಕುಷವಾಗಿ ಏನನ್ನೋ ನೋಡತೊಡಗಿದರು. ಗಾಬರಿಯಾಯಿತು. ಬೆನ್ನ ಬಳಿ ಏನು ಕಂಡರೋ.. ‘ಅಯ್ಯೋ ಭಗವಂತಾ.. ಇರು ಕೂಸೇ ನಿನ್ನೊಟ್ಟಿಗೆ ನಾನೂ ಬರುತ್ತೇನೆ ನಿಲ್ಲು.’ ಒಂದು ವಸ್ತ್ರದಲ್ಲಿ ಸೋಫಾದಲ್ಲಿ ನಾನು ಕೂತ ಜಾಗವನ್ನು ಒರೆಸಿ ಅದೇ ವಸ್ತ್ರವನ್ನು ತಂದು ನನ್ನ ಯೂನಿಫಾರಮ್ ಮೇಲೆಯೇ ಟೊಂಕಕ್ಕೆ ಸುತ್ತಿ ಕಟ್ಟಿದರು. ಛತ್ರಿ ಬಿಡಿಸಿ ತಲೆಗೆ ಆಸರೆಯಾಗಿಸಿ ನನ್ನ ಕೈಹಿಡಿದು ನಡೆಯತೊಡಗಿದರು.

ಅವರ ಮುಖವನ್ನೊಮ್ಮೆ ನೋಡಿದೆ, ಹಾಗೂ ಆ ಹಿಡಿದ ಕೈಯೊಳಗಿನ ಬಿಸುಪಲ್ಲಿ ಗೆಳತಿಯೊಬ್ಬಳು ಅಡಗಿರುವಂತೆನಿಸಿ ನೆಮ್ಮದಿಯಿಂದ ಹೆಜ್ಜೆ ಹಾಕಿದೆ. ಮತ್ತೆ ತಲೆತುಂಬಾ ನಾಳೆ ಸಂಪಾದಿಸಬಹುದಾದ ಐವತ್ತು ಪೈಸೆಗಳ ದೊಡ್ಡ ಮೊತ್ತವೂ ಅದರಿಂದ ದೊರಕಬಹುದಾದ ಆರ್ಥಿಕ ಸುಭದ್ರತೆ ಹಾಗೂ ನೆಮ್ಮದಿಯೂ ಕಣ್ಣ ಪರದೆಯ ಮುಂದೆ ತೇಲುತ್ತಾ ಮುಗುಳುನಗೆಯೊಂದು ಎಳೆಯ ತುಟಿಗಳನ್ನು ತಾಗಿ ಮಾಯವಾಯಿತು. ಆ ತೋಯ್ದ ನಿರ್ಜನ ರಸ್ತೆಯಲ್ಲಿ ತಂಗಾಳಿಗೆ ನರ್ತಿಸುತ್ತಿದ್ದ ಮುಂಗುರುಳು ಮೂಗಿಗೆ ಕಚಗುಳಿಯಿಡುತ್ತಾ ನಗುತ್ತಿತ್ತು. ಹಾದಿ ಬದಿಯ ಕಾಡು ಹೂಗಳು ಮೊದಲ ಮಳೆಯಲ್ಲಿ ಅಭ್ಯಂಜನ ಮುಗಿಸಿ ಮಡಿಯುಟ್ಟು ಮೈಬಿರಿದುಕೊಂಡಿದ್ದವು. ಅಲ್ಲಿಂದ ಸರಿಯಾಗಿ ಒಂದು ತಿಂಗಳು ನಾನು ಶಾಲೆಗೆ ಹೋಗಲೇ ಇಲ್ಲ. ಬ್ಯಾಗಿನಲ್ಲೇ ಉಳಿದ ಮೆಣಸು ಬೀಜದಂಥಾ ಹೂಬೀಜಗಳು ಅಲ್ಲಿಂದಲೇ ನನ್ನನ್ನು ಅಣಕಿಸುವಂತೆ ತೋರುತ್ತಿತ್ತು.

ಮೈನೆರೆದ ಮೇಲೆ ನೀನು ನನ್ನೊಂದಿಗೆ ವ್ಯವಹರಿಸುವ ರೀತಿ ಸಂಪೂರ್ಣ ಬದಲಾಗಿಹೋಯಿತು. ನನ್ನನ್ನು ತಾತನ ಮನೆಯ ಕೆಲಸದ ನಿಂಗನ ಹೆಂಡತಿ ದ್ಯಾಮವ್ವನಿಗಿಂತಲೂ ಕೀಳಾಗಿ ನೋಡಹತ್ತಿದೆ. ಆ ಮೂರೆಂದರೆ ಮೂರೂ ಹಗಲು ಹಾಗೂ ರಾತ್ರಿ ಅಗಾಧವಾದ ಒಂಟಿತನದೊಂದಿಗೆ ಹೊಡೆದಾಡಿಕೊಳ್ಳಲು ನಿರ್ದಯವಾಗಿ ನನ್ನ ಬಿಟ್ಟುಬಿಡುತ್ತಿದ್ದೆ. ಎರಡು ಜಮಖಾನೆ, ಒಂದು ಸೆಟ್ ತಟ್ಟೆ ಲೋಟ, ಮತ್ತೆ ನನ್ನ ಸ್ಕೂಲ್ ಬ್ಯಾಗು ಇವಿಷ್ಟನ್ನೂ ನನ್ನೆಡೆಗೆ ಎಸೆದುಬಿಟ್ಟರೆ ಮತ್ತೆ ಮೂರು ನೀರಾದ ಮೇಲೆಯೇ ನಿನ್ನ ಸ್ಪರ್ಶ..! ಚಾಚಿದ ತಟ್ಟೆಗೂ ಮೇಲಿಂದ ಅನ್ನ ಸಾರೋ, ಉಪ್ಪಿಟ್ಟೋ ಅವಲಕ್ಕಿಯೋ ಸುರಿಯುತ್ತಿದ್ದೆ. ನನಗೆ ಅಳು ಬರುವುದು. ತುಟಿ ಸುರುಳಿಸಿ ಅಮ್ಮಾ.. ಎಂದರೂ ‘ತೆಪ್ಪಗೆ ಮಲಗೇ..’ ಎಂದು ಒಳಮನೆಗೆ ಹೋಗಿಬಿಡುತ್ತಿದ್ದೆ. ಮೊದಲ ತಿಂಗಳೇ ಇನ್ನು ಮುಂದೆ ಆ ಮೂರು ದಿನಗಳಲ್ಲಿ ಹೀಗೆಯೇ ಇರಬೇಕೆಂದು ನೀನು ತಾಕೀತು ಮಾಡಿದ್ದರಿಂದ ಮತ್ತೆ ಎರಡನೇ ಮಾತಿಗೆ ಅವಕಾಶವೇ ಇರಲಿಲ್ಲ. ಬರಬರುತ್ತಾ ನಿನ್ನ ಮೇಲೆ ಕೋಪ ಹೆಚ್ಚಾಗಿ ‘ಮೋಸಗಾತೀ.. ನಯವಂಚಕೀ.. ಡೌಯಿರಾಣೀ.. ರಾಕ್ಷಸೀ..’ ಹೀಗೆ ನಾನಾ ನಾಮಗಳಿಂದ ನಿನ್ನ ನಿಂದಿಸಿದರೂ ಏನನ್ನೂ ಕಿವಿಗೆ ಹಾಕಿಕೊಳ್ಳದೇ ನಿರ್ಲಿಪ್ತಳಾಗಿ ನಾನೆಂಬುದು ಒಂದು ವಸ್ತುವೇನೋ ಎಂಬಂತೆ ನನ್ನ ನೋಡಿಕೊಳ್ಳುತ್ತಿದ್ದೆ. ಅಪ್ಪಿತಪ್ಪಿ ನಾನೇನಾದರೂ ಒಳಮನೆಗೆ ಒಂದು ಹೆಜ್ಜೆ ಹಾಕುವುದಿರಲಿ, ನೆರಳು ಸೋಕಿಸಿದರೂ ವಾಚಾಮಗೋಚರ ಬೈಸಿಕೊಳ್ಳಬೇಕಾಗುತ್ತಿತ್ತು. ನನ್ನ ಒಂದೇ ಒಂದು ಪ್ರೀತಿಯ ಸೆಲೆಯಾಗಿದ್ದ ನೀನು ಏಕಾಏಕಿ ಹೀಗಾದ ಮೇಲೆ ನನಗೆ ಮನೆಯಲ್ಲಿ ಎಲ್ಲದರ ಮೇಲೂ ಜಿಗುಪ್ಸೆ ಹುಟ್ಟಿಬಿಟ್ಟಿತು. ಬೇಕಂತಲೇ ಊಟ ಬಡಿಸಲು ಬಂದಾಗ ನಿನ್ನ ಕೈ ಸೋಕಿಸುವುದು, ಬೇಕಾಗಿಯೇ ಒಳಮನೆಗೆ ನೆರಳು ಬೀಳುವಂತೆ ಓಡಾಡುವುದು ಗೊತ್ತಿದ್ದರೂ ದೇವರ ಪೂಜೆಯ ಹೂವಿನಗಿಡವನ್ನು ಕೈಲಿ ಹಿಡಿದು ಮುದ್ದಾಡುವುದು ನಿನ್ನ ಮೇಲಿನ ಹಗೆ ತೀರಿಸಿಕೊಳ್ಳುವ ಸಾಧನಗಳಾಗಿ ಬಳಕೆಯಾಗಹತ್ತಿದವು. ನೀನಾಗ ಬೈಯುತ್ತಿದ್ದರೆ ನನಗೆ ಒಳಗೊಳಗೇ ಏನೋ ಖುಷಿ!

ಅವರ ಮುಖವನ್ನೊಮ್ಮೆ ನೋಡಿದೆ, ಹಾಗೂ ಆ ಹಿಡಿದ ಕೈಯೊಳಗಿನ ಬಿಸುಪಲ್ಲಿ ಗೆಳತಿಯೊಬ್ಬಳು ಅಡಗಿರುವಂತೆನಿಸಿ ನೆಮ್ಮದಿಯಿಂದ ಹೆಜ್ಜೆ ಹಾಕಿದೆ. ಮತ್ತೆ ತಲೆತುಂಬಾ ನಾಳೆ ಸಂಪಾದಿಸಬಹುದಾದ ಐವತ್ತು ಪೈಸೆಗಳ ದೊಡ್ಡ ಮೊತ್ತವೂ ಅದರಿಂದ ದೊರಕಬಹುದಾದ ಆರ್ಥಿಕ ಸುಭದ್ರತೆ ಹಾಗೂ ನೆಮ್ಮದಿಯೂ ಕಣ್ಣ ಪರದೆಯ ಮುಂದೆ ತೇಲುತ್ತಾ ಮುಗುಳುನಗೆಯೊಂದು ಎಳೆಯ ತುಟಿಗಳನ್ನು ತಾಗಿ ಮಾಯವಾಯಿತು.

ಆಶ್ಚರ್ಯ ಹಾಗೂ ಒಳ್ಳೆಯದೆಂದರೆ ಈ ಸಮಯವೇ ನನಗೆ ಅಪ್ಪನೆಂಬೋ ಪ್ರಾಣಿಯ ನಿಜರೂಪ ದರ್ಶನವಾದದ್ದು. ದುರ್ಯೋಧನನೇನೋ ಎಂಬಂತಹ ಭಾವನೆಯನ್ನು ನಮ್ಮ ಮನದಲ್ಲಿ ಮೂಡಿಸಿದ್ದ ಈ ಪ್ರಾಣಿಯು ತಾತನ ಸಾವಿನ ನಂತರ ಬೇರೆಯದೇ ವ್ಯಕ್ತಿಯಾಗಿ ಬದಲಾಗಿಹೋದದ್ದು ಈಗ ಬೆಳಕಿಗೆ ಬರತೊಡಗಿತು. ಮೊದಮೊದಲು ಹೀಗೆ ನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು. ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ. ನೀನು ನೋಡದಾಗ ಒಮ್ಮೊಮ್ಮೆ ಅವನು ನನ್ನ ಬಳಿ ಬಂದು ತಲೆ ನೇವರಿಸುವನು. ಹಣೆಗೆ ಮುತ್ತಿಕ್ಕುವನು. ಕಿಬ್ಬೊಟ್ಟೆ ವಿಪರೀತ ಮುರಿದು ನನ್ನ ಕಣ್ಣಲ್ಲಿ ನೀರಾಡಿದಾಗ ಹತ್ತಿರ ಬಂದು ಕಣ್ಣೀರೊರೆಸುವನು. ‘ಸಾರಿ ಕಣೇ, ನಿನ್ನ ಒಳಗೆ ಕರೆದೊಯ್ಯಲಾರೆ. ಇದು ಮನೆಯ ಪದ್ಧತಿ, ಕ್ಷಮಿಸು ಕಂದಾ’ ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುವನು. ಇನ್ನು ಹೆಣ್ಣಾದ ನಾನು ಪ್ರಪಂಚವನ್ನು ಹೇಗೆಲ್ಲಾ ಎದುರಿಸಬೇಕಾಗಬಹುದೆಂಬುದನ್ನು ಸಾವಕಾಶವಾಗಿ ವಿವರಿಸುವನು. ಜೊತೆಗೆ ಅವನಿಗೂ ನಾನು ಪ್ರೀತಿಯ ಮಗಳೇ ಎಂದೂ, ನನ್ನ ಸಂಪೂರ್ಣ ಜವಾಬುದಾರಿ ಅವನದೇ ಎಂದೂ ಹೇಳಿಕೊಂಡು ಮಮತೆ ತುಂಬಿದ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸುವನು. ಆಗೆಲ್ಲಾ ಅವನೊಳಗೆ ಯಾರಾದರೂ ಹೊಕ್ಕು ಹೀಗೆ ಮಾತಾಡಿಸಿದ್ದಿರಬಹುದೇ? ಯಾವುದಾದರೂ ದೆವ್ವ ಪರಕಾಯ ಪ್ರವೇಶ ಮಾಡಿರಬಹುದೇ ಎನ್ನುವಂತಹ ಕ್ಷುದ್ರ ವಿಚಾರಗಳು ಮನಸಿಗೆ ಬರುತ್ತಿದ್ದವು. ಕ್ರಮೇಣ ಅವನೇ ಮೃದುವಾಗುತ್ತ ಹೆಚ್ಚು ಆಪ್ತವಾಗುತ್ತಾ ಹೋದಂತೆ ಇದು ಅವನದೇ ಇನ್ನೊಂದು ಮುಖವೆಂದು ಮನದಟ್ಟಾಯಿತು. ಹೀಗೆ ನನಗೆ ನನ್ನ ಅಪ್ಪನು ಮರಳಿ ದೊರೆತದ್ದೂ ಈ ಧೋ ಮಳೆಯ ಜಾದೂ ಅಲ್ಲದೇ ಮತ್ತೇನಿರಬಹುದು? ಹಾಗೂ ನೀನು ಮಾಮೂಲೀ ನಲುಮೆಯ ಅಮ್ಮನಾಗಿರದೇ ಅದರಾಚೆಗೆ ಒಬ್ಬ ಕರ್ಮಠ ಸ್ತ್ರೀಯಾಗಹೊರಟದ್ದೂ ಮಳೆಯೊಟ್ಟಿಗಿನ ಸಿಡಿಲಿನಂಹದ್ದೇ ಅಲ್ಲದೇ ಮತ್ತೇನಿದ್ದೀತು..?

* * * *

ಪಕ್ಕದ ಮನೆಯ ನಾಗೇಶಣ್ಣ ಆಸ್ಥೆಯಿಂದ ನೆಟ್ಟು ಬೆಳೆಸುತ್ತಿದ್ದ ಬಣ್ಣಬಣ್ಣದ ಸೇವಂತಿಗೆಯ ಮೇಲೆ ಪ್ರೀತಿ ಹುಟ್ಟಿ ಆ ಬಣ್ಣದೋಕುಳಿಯನ್ನು ನನ್ನ ಮನೆಗೂ ಬರಮಾಡಿಕೊಳ್ಳಬೇಕೆಂಬ ಆಸೆಯಲ್ಲಿ ಅವನನ್ನು ಕೇಳಿದ್ದಕ್ಕೆ ‘ಹೂ ಒಣಗಿ ಬೀಜವಾದ ಮೇಲೆ ತೊಗೊಂಡೋಗಿ ಸ್ವಲ್ಪ ಮಣ್ಣು ತೋಡಿ ಗುಳಿ ಮಾಡಿ ಹಾಕು ಚುಮ್ಮೀ. ಮೇಲೆ ಮಣ್ಣು ಮುಚ್ಚಿ ನೀರು ಹಾಕುತ್ತಿರು. ಗಿಡ ಬೆಳೆಯುತ್ತೆ. ಅಷ್ಟೇ.’ ಅಂದಿದ್ದನ್ನೇ ಕಾದಿದ್ದು ಬೀಜವಾಗಿದ್ದೇ ತಡ, ತಂದು ನನ್ನ ಮನೆಯ ಕೈತೋಟದ ಮೂಲೆಯೊಂದರಲ್ಲಿ ಯಾರಿಗೂ ತಿಳಿಯದಂತೆ ಗುಂಡಿ ಮಾಡಿ ಹಾಕಿದ್ದೆ. ಅವನು ಹೇಳಿದಂತೆಯೇ ಮಾಡಿ ನೀರುಣಿಸುತ್ತಾ ಬಂದರೂ ಮೂರು ನಾಲ್ಕು ದಿನಗಳಾದರೂ ಚಿಗುರಿನ ಸುದ್ದಿಯೇ ಇಲ್ಲದ್ದು ನನ್ನನ್ನು ಚಿಂತೆಗೀಡುಮಾಡಿತು. ಹಗಲು ರಾತ್ರಿ ಅಲ್ಲೇ ಗಮನ ನೆಟ್ಟುಬಿಟ್ಟಿತು. ಯಾಕೋ ಮನಸಿಗೆ ಇರುಸುಮುರುಸಾಗತೊಡಗಿತು. ಬೀಜ ಸತ್ತು ಹೋಯಿತೇ..? ಭಯ ಹಾಗೂ ನೋವು ಒಟ್ಟೊಟ್ಟಿಗೇ ಬೆಳೆಯತೊಡಗಿದವು. ಸುತ್ತಲೂ ಹಸಿರೇ ತುಂಬಿದ್ದ ಅರೆ-ಮಲೆನಾಡಂಚಿನ ಊರಿನವಳಿಗೆ ಯಕಃಶ್ವಿತ್ ಈ ಹೂವಿನ ಗಿಡದ ಮೊಳಕೆಯ ನಕಾರ ಯಾಕೆ ಅಷ್ಟೊಂದು ಬೇಗುದಿ ಬೆಳೆಸಿಬಿಟ್ಟಿತೋ ಕಾಣೆ.

ನಾಲ್ಕನೇ ದಿನದ ಸಂಜೆಯ ವೇಳೆಗೆ ನನ್ನ ಕಾಯುವಿಕೆಯ ತಹತಹ ಮುಗಿಲು ಮುಟ್ಟಿ ತಡೆಯಲಾರದೇ ಆ ಬೀಜದ ಗುಳಿಯನ್ನು ಅಗೆದೇ ನೋಡಿಬಿಟ್ಟೆ. ಪಾಪ, ನೆನೆದ ಬೀಜಗಳು ತಣ್ಣಗೆ ಒಳಗೆ ಮಲಗಿ ಮೊಳಕೆಯ ಮೂಲಕ ಹೊರಜಗತ್ತನ್ನು ಮತ್ತೊಮ್ಮೆ ನೋಡುವ ಸಿಹಿಗನಸಿನಲ್ಲಿ ನೆಮ್ಮದಿಯ ನಿದ್ದೆಗಿಳಿದಿದ್ದವು. ಕಾಯಿಸಿ ಕಾಯಿಸಿ ಬರದೇ ಬರದೇ ಬಂದ ಪ್ರಿಯತಮನನ್ನು ಮನಸೋ ಇಚ್ಛೆ ಬೈಯ್ಯುವಂತೆ ಸೇವಂತಿಯ ಮುದ್ದು ಬೀಜಗಳನ್ನು ವಾಚಾಮಗೋಚರ ಬೈದುಕೊಂಡೆ. ಎಷ್ಟು ಕಾದರೂ ಬರದ ಮೊಳಕೆಗಳನ್ನು ಸಿಕ್ಕಾಪಟ್ಟೆ ಶಪಿಸಿಬಿಟ್ಟೆ. ಆಮೇಲೆ ಏನಾಯಿತೋ… ಸತ್ತ ಮಗುವಿನ ತಾಯಿಯಂತೆ ಗಳಗಳ ಅತ್ತುಬಿಟ್ಟೆ. ಗುಂಡಿ ಮುಚ್ಚಿ ಬಂದು ಅಳಲೂ ಅವಕಾಶವಿಲ್ಲದ ಉಸಿರುಗಟ್ಟಿಸುವ ಮನೆಯ ವಾತಾವರಣ ಕುತ್ತಿಗೆ ಹಿಸುಕಿದಂತಾಗಿ ಹಾಗೇ ನಾಗೇಶಣ್ಣನ ಮನೆಗೆ ಓಡಿದೆ. ವಯಸ್ಸಿನಲ್ಲಿ ತುಸು ದೊಡ್ಡವನೇ ಇದ್ದ ಅವನು ನನ್ನ ಅಳು ನೋಡಿ ಗಾಬರಿಯಾಗಿ ಏನಾಯಿತೇ ಚುಮ್ಮೀ ಎಂದು ಪ್ರೀತಿಯಿಂದಲೇ ವಿಚಾರಿಸಿದ. ನನ್ನ ಭುಜ ಬಳಸಿ ಹಿಡಿದು ತಬ್ಬಿ ಕಣ್ಣೊರೆಸಿದ. ‘ನೋಡೋ ನಾಗಣ್ಣ, ಹೀಗಾಯಿತು..’ ಅಂತ ನಾನೂ ನನ್ನ ನೋವನ್ನು ಪರಿಪರಿಯಾಗಿ ಬಣ್ಣಿಸಿದೆ. ಅವನು ಅವನಿಂದಾದಷ್ಟೂ ಸಮಾಧಾನಿಸಿ ಮುದ್ದಿಸಿದ ಮೇಲೆ ಸಂಧ್ಯಾ ಮಾಮಿಯ ಬಳಿ ಕರೆದೊಯ್ದು ಎಲ್ಲವನ್ನೂ ಹೇಳಿ ‘ನೋಡಮ್ಮಾ ಈ ತಿಕಲೀನ, ಗಿಡ ಬರಲ್ಲಾ ಅಂತ ನೆಲಾ ಬಗ್ದು ನೋಡಿದಾಳೆ’ ಅಂತ ಹೇಳಿ ಗಹಗಹಿಸಿ ನಕ್ಕಾಗ ಮಾಮಿಯೂ ಅವನೊಡನೆ ಕೂಡಿ ಜೋರು ನಗತೊಡಗಿದಾಗ ಮೊದಲ ಬಾರಿಗೆ ಸಿಟ್ಟಿನ ಬದಲು ಮನಸಿಗೆ ಏನೋ ಹಾಯೆನಿಸಿತು. ಸಂಬಂಧವಿಲ್ಲದ ಮನೆಯವರೊಬ್ಬರು ನನ್ನನ್ನು ಅವರೊಳಗೆ ಒಂದಾಗಿ ಎಣಿಸಿ ನನ್ನನ್ನು ಹಾಗೆ ಮಮತೆಯಿಂದ ಪ್ರೀತಿಸಿದ ಪರಿಯಲ್ಲಿ ಏನೋ ಸಾರ್ಥಕ್ಯ ಕಂಡು, ಅಪ್ಪನ ಮನೆಯಲ್ಲಿ ಸಿಗದ ಆ ಮಮತೆ ಅಲ್ಲೆಲ್ಲೋ ಕರುಳೇ ಅಲ್ಲದ ಮನೆಯಲ್ಲಿ ದಕ್ಕಿ ನಾನು ನಾಚಿ ತಲೆತಗ್ಗಿಸಿ, ‘ಹೋಗಿ ಮಾಮೀ… ನೀವೂ ತಮಾಷೆನಾ.’ ಅಂತಂದು ಅಲ್ಲಿಂದ ಕೆಂಪುಕೆನ್ನೆಯ ಸಮೇತ ನನ್ನ ಮನೆಗೆ ಓಡಿಬಂದು ದಿಂಬಿನಲ್ಲಿ ಮುಖ ಹುದುಗಿಸಿ ಮುಸಿಮುಸಿ ನಕ್ಕುಬಿಟ್ಟಿದ್ದೆ.


ನೋಡಲು ಬೆಳ್ಳಗಿದ್ದ ಸಪೂರ ದೇಹದ ಆಕರ್ಷಕ ನಗುವಿನ ಚಿಗುರು ಮೀಸೆಯ ನಾಗೇಶಣ್ಣ ನನಗೇನೂ ಹೊಸಬನಲ್ಲ. ಆದರೆ ಅಂದಿಗಿಂತ ಮೊದಲು ಅವನು ಹಾಗೆ ಚಂದ ಕಾಣುತ್ತಾನೆ ಎಂಬುದು ನನ್ನ ಮನಸಿಗೆ ಯಾಕೆ ತೋಚಿರಲಿಲ್ಲವೋ..? ಅಂದಿನ ಆ ಹೂಬಳ್ಳಿ ಪ್ರಸಂಗ ಅಲ್ಲಿಂದ ಮುಂದೆ ಅದೇಕೋ ಅವನೊಟ್ಟಿಗೆ ಮಾತಾಡುವಾಗಲೆಲ್ಲಾ ನೆನಪಾಗಿ ಮೊದಲಿನ ಸಲುಗೆಯ ಬಗ್ಗೆ ದಿಗಿಲು ಹುಟ್ಟುತ್ತಿತ್ತು. ಈಗ ಸರಾಸರಿ ಓಡಿಹೋಗಿ ಅವನ ಮಡಿಲಲ್ಲಿ ಕೂರುವಷ್ಟು ಚಿಕ್ಕವಳಲ್ಲವೆಂಬ ಅರಿವು ತಂತಾನೇ ಮೂಡಿತ್ತು. ಹಾಗೆ ಈಗ ಅಕ್ಕಪಕ್ಕದ ಅಣ್ಣಂದಿರ ಜೊತೆ ಬೆರೆಯುವಾಗ ಮೈಕೈ ಮುಟ್ಟಿಸಿಕೊಳ್ಳಬಾರದೆಂಬ ನಿನ್ನ ಕಿವಿಮಾತು ಇನ್ನೂ ಮೈಯೇ ಅರಳದ ನನಗೆ ಏನೋ ಒಂದು ಭಯಂಕರತೆಯ ಮುನ್ಸೂಚನೆಯೂ ಆಗಿ ಕಾಡತೊಡಗಿತ್ತು. ಶಾಲೆಯಲ್ಲಿ ಅಕಾರಣವಾಗಿ ಬಂದು ನಿಂತು ಬೆನ್ನು ಸವರುವ ಸಮಾಜದ ಮೇಷ್ಟ್ರಿಂದ ರಕ್ಷಣೆ ಪಡೆಯಲು ಗೋಡೆ ಬದಿಗೆ ಜಾಗ ಬದಲಾಯಿಸಿ ಸುಮ್ಮಗಾಗುತ್ತಿದ್ದೆ. ಎದುರುಬದುರೇ ‘ಯಾಕೆ ಸಾರ್, ಬೆನ್ನು ಮುಟ್ಟುತ್ತೀರಿ’ ಎಂದು ಕೇಳಿಯೇಬಿಡುವ ಎದೆಗಾರಿಕೆ ನನಗಿದ್ದರೂ ಅದೇಕೋ ಬಾಯಿ ಕಟ್ಟಿಹೋಗುತ್ತಿತ್ತು. ಭೂಮಿಯ ಮೇಲೆ ಹೂವನ್ನು ಕಾಪಾಡಲು ಮುಳ್ಳೂ ಹೆಣ್ಣನ್ನು ಕಾಪಾಡಲು ಗಂಡೂ ಒಟ್ಟಿಗೇ ಹುಟ್ಟಿದವರು ಎನ್ನುವ ಮಾತನ್ನು ಎಲ್ಲಾದರೂ ಕೇಳುವಾಗಲೆಲ್ಲಾ ಕುಹುಕದ ನಗೆಯೊಂದು ಮುಖಕ್ಕೆ ಅಡರುತ್ತಿತ್ತು. ಹೊರಗೆ ನಾನು ಅನುಭವಿಸುತ್ತಿದ್ದ ದೌರ್ಜನ್ಯಗಳನ್ನು ಯಾವುದೋ ಅವ್ಯಕ್ತ ಭಯದಿಂದಲೇ ಅದುಮಿಟ್ಟು ಅದನ್ನು ಹೊರಗೇ ಹೇಗೋ ಒಬ್ಬಂಟಿ ಹೋರಾಡಿ ಜಯಿಸುತ್ತಿದ್ದೆ. ನಾನು ಗಂಡುಬೀರಿಯಾಗದೇ ಮತ್ತೇನಾದೇನು?

(ಮುಂದುವರಿಯುವುದು)