ಒಂದು ಪ್ರವಾಸಕ್ಕೆ ಹೋಗಿ ಬಂದರೆ ನನಗೆ ಅಲ್ಲಿನ ಚೆಂದವಾಗಿರೋ ಎಲ್ಲ ಅನುಭವಗಳಿಗಿಂತ ಅಲ್ಲಿ ಆಗಿರುವ ಬೇರೆ ರೀತಿಯ ಅನುಭವಗಳೇ ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ ! ಇದು ಬದುಕನ್ನ ನಾನು ನೋಡೋ ದೃಷ್ಟಿಕೋನವೋ, ನನಗೆ ಇಂಥ ಅನುಭವವೇ ಆಗುತ್ತವೋ ಅಥವಾ ನನಗೆ ಇಂಥ ಅನುಭವಗಳೇ ಹೆಚ್ಚು ಪ್ರಿಯವಾಗುತ್ತವೋ ಗೊತ್ತಿಲ್ಲ. ಸುಮ್ಮನೆ ನೋಡ್ತಾ ಹೋದ ಸ್ಥಳಗಳಲ್ಲಿ ಅದರ ನೆನಪುಗಳು ಎಲ್ಲ ಮಾಸಿವೆಯಾದರೂ ಅಲ್ಲಿ ಆದ ಒಂದಿಷ್ಟು ಅನುಭವಗಳು ಮಾತ್ರ ಈಗಲೂ ಮನಸ್ಸಿನಲ್ಲಿ ಉಳಿದಿವೆ.

ನನ್ನ ತಂದೆ ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಕೆಲಸ ಮಾಡ್ತಿದ್ದಾಗ ಅಲ್ಲಿನ ಸುಮಾರು ಸ್ಥಳಗಳಿಗೆ ಭೇಟಿ ಕೊಟ್ಟೆವು. ಆಗೆಲ್ಲ ಇನ್ನೂ ಶಾಲೆಯಲ್ಲಿ ಓದ್ತಿದ್ದ ಕಾಲ. ಯಾವುದನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳೋದಿಕ್ಕೆ ಬಾರದು ಆಗ. ಎಲ್ಲ ಕಡೆ ಕರೆದುಕೊಂಡು ಹೋಗ್ತಿದ್ರು ಅಪ್ಪ, ಅಮ್ಮ … ನಾವು ಹೋಗ್ತಿದ್ವಿ ಅಷ್ಟೇ ! ಮನಸ್ಸು ಮಾಗಿರಲಿಲ್ಲವಂತ ಕಾಣತ್ತೆ. ಬೀದರ್ ಜಿಲ್ಲೆಯ ಪ್ರವಾಸ ನೆನಪಿಸಿ ಕೊಂಡರೆ ಮೊದಲು ನೆನಪಾಗೋದೇ ಅಲ್ಲಿನ ನರಸಿಂಹ ಝರಣಿಗೆ ಹೋದದ್ದು. ಆ ಸ್ಥಳ ನಿಜಕ್ಕೂ ತುಂಬಾ ಚೆನ್ನಾಗಿದೆ. ಗುಹೆಯ ಒಳಗೆ ನೀರಿನಲ್ಲಿ ಒಂದಿಷ್ಟು ದೂರ ನಡೀತಾ ಹೋದರೆ ಅಲ್ಲಿ ದೇವರು ಇರೋದು ಅನ್ನೋದನ್ನ ಕೇಳಿದಾಗ ಥ್ರಿಲ್ ಆಗಿಹೋಗಿದ್ದೆ. ಈ ಅನುಭವ ಇನ್ನೆಲ್ಲೂ ಆಗಿರಲಿಲ್ಲ ನನಗೆ. ಖುಷಿಯೋ ಖುಷಿ ! ಅಲ್ಲಿ ಹೋಗಿದ್ದೂ ಆಯ್ತು .. ಜಾಗ ನೋಡಿ ಸಂಭ್ರಮ ನನಗೆ. ನೀರಲ್ಲಿ ಇಳಿದಿದ್ದೂ ಆಯ್ತು … ಸುಮಾರು ಎದೆಯ ಮಟ್ಟಕ್ಕಿಂತ ಹೆಚ್ಚು ನೀರು. ಹತ್ತಿಪ್ಪತ್ತು ಅಡಿ ಸಾಗಿದ್ದೂ ಆಯ್ತು. ಆಗ ಕಣ್ಣು ಪಕ್ಕದಲ್ಲಿ ಹಾಯಿಸಿದರೆ ಕಂಡಿದ್ದು ಒಂದು ಜಿರಳೆ .. ಜಿ..ರ..ಳೆ! ನಾನು ಹುಲಿಯ ಜೊತೆ ಬೇಕಿದ್ರೂ ಹೋರಾಡಿ ಸತ್ತೇನು .. ಆದರೆ ಜಿರಳೆಯೆಂದರೆ ಭಯಂಕರ ಅಸಹ್ಯ. ಮನೆಯಲ್ಲಿ ಕೂತಾಗ ಒಂದು ಹಾರಾಡೋ ಜಿರಳೆ ಏನಾದರೂ ರೆಕ್ಕೆ ಬಡಿದ ಸದ್ದು ನನ್ನ ಸೂಕ್ಷ್ಮ ಕಿವಿಗೆ ಬಿದ್ದರೆ ಮುಗಿದೇ ಹೋಯ್ತು. ನಾನು ಅಂದು ಆ ರೂಮಿನಲ್ಲೇ ಮಲಗುತ್ತಿರಲಿಲ್ಲ. ಹಾಲಿನಲ್ಲಿ ಅಂದು ನನ್ನ ಶಯನೋತ್ಸವ ! ಅಂಥಾ ಭಯ,ಅಸಹ್ಯ ಇರುವವಳಿಗೆ ಪಕ್ಕದಲ್ಲಿ ಜಿರಳೆ ತೇಲಿ ಹೋದರೆ ಏನಾಗಿರಬೇಡ? ಹಿಂತಿರುಗಿ ಹೋಗಿ ಬಿಡೋಣ ಅಂದರೆ ಪಾಪ, ಪುಣ್ಯದ ಭಯ! ದೇವರನ್ನ ನೋಡಲು ಹೊರಟವಳು ಹಿಂತಿರುಗಿದರೆ ಅದೇ ಸಿಟ್ಟಿಗೆ ದೇವರು ನನಗೆ ಶಾಪ ಕೊಟ್ಟರೆ ಎನ್ನುವ ಭಯ. ಅಯ್ಯೋ ನನ್ನ ಸ್ಥಿತಿ ಊಹಿಸಲೂ ಆಗದು. ಆ ಜಿರಳೆ ತೇಲುವ ನೀರು ಎದೆ ಮಟ್ಟದಲ್ಲಿ .. ಅಂದರೆ ಸ್ವಲ್ಪವೇ ನೀರು ಹಾರಿದರೂ ಬಾಯಿಗೆ ಆ ತೀರ್ಥ ! ಅಂಥಾ ಅಸಹ್ಯ ನನ್ನ ಜೀವನದಲ್ಲೇ ನಾನು ಅನುಭವಿಸಿರಲಿಲ್ಲ. ಮತ್ತೂ ಮುಂದೆ ನಡೆಯುತ್ತಾ ಹೋದರೆ ನಂಬಿದರೆ ನಂಬಿ, ಬಿಟ್ಟರೆ ಬಿಡಿ .. ಸುತ್ತಲೂ ತೇಲಾಡುವ ಜಿರಳೆಗಳು. ಅವು ಜಿರಳೆಯ ಹೆಣಗಳೋ ಅಥವಾ ಬದುಕಿದ್ದವೋ ಅನ್ನೋದು ಈಗ ನೆನಪಿಲ್ಲ. ಇಷ್ಟು ಸಾಲದು ಅನ್ನುವಂತೆ ಮೇಲೆಲ್ಲ ತೂಗು ಬಿದ್ದ ಬಾವಲಿಗಳು. ಒಳಗೆ ನಡೆಯುತ್ತಾ ಹೋದಂತೆ ಆ ಕಮಟು ವಾಸನೆ ಹೆಚ್ಚಾಗುತ್ತಾ ಹೋಯ್ತು. ನನಗೆ ಯಾವ ಪರಿಯ ಜಿಗುಪ್ಸೆ ಬಂತೆಂದರೆ ದೇವರ ಶಾಪವೇ ವಾಸಿ ಅಂದುಕೊಂಡು ವಾಪಸ್ ಓಡಿ ಬಂದಿದ್ದೆ. ದೇವರು ಶಾಪ ಕೊಡಲಿಲ್ಲ ಅನ್ನೋದಕ್ಕೆ ನಾನು ಇಲ್ಲಿಯವರೆಗೆ ಆರೋಗ್ಯದಿಂದ ಬದುಕಿರೋದೇ ಸಾಕ್ಷಿ!!

ಮತ್ತೊಮ್ಮೆ ನಾವು ಮದರಾಸಿಗೆ ಹೋಗಿದ್ವಿ. ಆಗ ನನಗೆ ೮ ವರ್ಷ. ಅಲ್ಲಿಗೆ ಹೋದ ಮೇಲೆ ಬೀಚ್ ನೋಡದೆ ಬರುವವರು ಉಂಟೇ? ನಮ್ಮ ಸಂಬಂಧಿಕರೆಲ್ಲ ಒಂದಿಷ್ಟು ಜನ ಹೊರಟೆವು. ಅಲ್ಲಿ ಅದೆಂಥದ್ದೋ ಬಟಾಣಿ ಉಸಲಿಯಂತದ್ದು ಒಂದಿಷ್ಟು ಹುಳಿ, ಖಾರದ ಜೊತೆ ಸೇರಿಸಿ ಒಟ್ಟಿನಲ್ಲಿ ಬಾಯಿಗೆ ರುಚಿಯಾಗಿರೋ ಅಂತದ್ದು ಏನೋ ಮಾಡಿ ಕೊಡ್ತಿದ್ರು .. ’ತೇಂಗಾಯ್ ಮಾಂಗಾಯ್ ಪಟ್ಟಾಣಿ ಸುಂಡಲ್’ ಅಂತ ಕೂಗ್ತಿದ್ರು ಎಲ್ಲರೂ. ಒಬ್ಬ ಹುಡುಗನನ್ನ ಕರೆದು ನಿಲ್ಲಿಸಿ ಕೊಂಡ್ವಿ. ಅವನು ಒಂದಾದ ಮೇಲೆ ಒಂದು ಪೊಟ್ಟಣ ಕೊಡುತ್ತಾ ಹೋದ. ನನ್ನ ತಂದೆಗೆ ತಮಿಳು ಭಾಷೆಯೆಂದರೆ, ತಮಿಳು ಜನರೆಂದರೆ ಸ್ವಲ್ಪ ಅಷ್ಟಕ್ಕಷ್ಟೇ. ಅವರ ಭಾಷಾ ದುರಭಿಮಾನದ ಬಗ್ಗೆ ಗೇಲಿ ಕೂಡಾ. ಅಲ್ಲಿದ್ದ ಹುಡುಗನನ್ನು ’ಲೋ ಗೂಬೆ ಇನ್ನೆರಡು ಕೊಡೋ’ ಅನ್ನೋದು … ’ಮಂಗ ನನ್ಮಗನೇ ಇದೇನೋ ಹುಳಿ ಕಡಿಮೆ ಹಾಕಿದೀಯ’ ಅನ್ನೋದು … ಹೀಗೆ ಮಾತಾಡ್ತಾ, ನಗ್ತಾ, ತಿನ್ನುತ್ತಾ ಕೂತಿದ್ದೆವು. ಅಂತೂ ಸಮಾರಾಧನೆ ಮುಗೀತು. ಕೊನೆಗೆ ’ಎವಳ’ ಅಂದ್ರು ನನ್ನ ತಂದೆ. ಅವನು ’೫೫ ರೂಪಾಯಿ ಕೊಡಿ ಸಾರ್’ ಅಂದ ಅಚ್ಚ ಕನ್ನಡದಲ್ಲಿ ! ಅಯ್ಯೋ ಅಲ್ಲಿಯವರೆಗೆ ಬಾಯಿಗೆ ಬಂದಿದ್ದೇ ಮಾತಾಡಿದ ಎಲ್ಲರಿಗೂ ಒಂಥರಾ ಅವಮಾನ, ಹಳಹಳಿ .. ಜೊತೆಗಿಷ್ಟು ಪಶ್ಚಾತ್ತಾಪ. ನಮ್ಮ ತಂದೆ ’ಅಲ್ಲಪ್ಪಾ ಅಷ್ಟೆಲ್ಲ ಅನ್ನುತ್ತಾ ಇದ್ರೂ ಯಾಕೆ ಆಗಲೇ ಹೇಳಲಿಲ್ಲ ನಿನಗೆ ಕನ್ನಡ ಅರ್ಥ ಆಗತ್ತೆ ಅಂತ?’ ಅಂದರು. ಅವನು ಸರಳವಾಗಿ ’ಸಾರ್ ಅದನ್ನ ಹೇಳಿದ್ದಿದ್ರೆ ನೀವು ಆ ಥರ ಮಾತಾಡೋದು ನಿಲ್ಸೋ ಬದಲು ನನ್ನ ಹತ್ರ ವ್ಯಾಪಾರ ಮಾಡೋದನ್ನೇ ನಿಲ್ಲಿಸ್ತಿದ್ರೋ ಏನೋ. ವ್ಯಾಪಾರ ಹೋಗಿ ಬಿಡ್ತಾ ಇತ್ತು ಅಲ್ವಾ ಸಾರ್? ಈಗೇನಾಯ್ತು ಬಿಡಿ ಸಾರ್ .. ನಾನು ಚಿಕ್ಕೋನು ನೀವು ಹಾಗೆಲ್ಲ ಅಂದ್ರೆ ನನ್ಗೆ ಬೇಜಾರಾಗ್ಲೇ ಇಲ್ಲ’ ಅಂದ. ಭಾಷೆ, ಗಡಿ, ಧರ್ಮ ಅಂತ ವೀರಾವೇಶದಿಂದ ಜನ ಗಂಟಲು ಹರಿಯುವಂತೆ ಅರಚಿಕೊಳ್ಳುವಾಗ ನನಗೆ ಅವನ ಮಾತು ಇಂದಿಗೂ ನೆನಪಾಗತ್ತೆ ….

ಮತ್ತೊಂದು ಅನುಭವವೆಂದರೆ ಬಿಜಾಪುರದ ಮಸೀದಿಯೊಂದರ ಬಳಿ ಆದ ಅನುಭವ. ಯಾವ ಮಸೀದಿ ಅಂತೆಲ್ಲ ಈಗ ನೆನಪಿಲ್ಲ.ಬಾಗಿಲಲ್ಲೇ ಒಂದು ನಾಯಿ ಕೂತಿತ್ತು. ಅದು ನಮಾಜ಼ಿನ ಸಮಯ. ನಮಾಜ಼್ ಶುರುವಾದ ಕೂಡಲೇ ಅದೂ ರಾಗವಾಗಿ ಅದೇ ರೀತಿಯಲ್ಲಿ ಕೂಗಲು ಶುರು ಮಾಡಿತು. ನಾನು ಅದು ಆಕಸ್ಮಿಕವಿರಬಹುದೇನೋ ಅಂದುಕೊಂಡೆ. ಮಧ್ಯದಲ್ಲಿ ಸ್ವಲ್ಪ ನಿಲ್ಲಿಸಿ ಮತ್ತೆ ಶುರುವಾದ ಕೂಡಲೇ ಅದೂ ಮತ್ತೆ ಶುರು ಮಾಡಿ ಸರಿಯಾಗಿ ನಿಲ್ಲಿಸಿತು! ನನಗೆ ಅದೆಷ್ಟು ಆಶ್ಚರ್ಯ ಆಗೋಯ್ತು ಅಂದರೆ ಅದನ್ನೇ ಗಮನಿಸಲು ಶುರು ಮಾಡಿದೆ. ಪೂರ್ತಿ ಪ್ರಾರ್ಥನೆ ಮುಗಿಯುವವರೆಗೂ ಅದು ಕೂಡಾ ಹಾಗೆಯೇ ರಾಗವಾಗಿ ಕೂಗಿ ನಂತರ ಕರ್ತವ್ಯ ಮುಗಿಸಿದ ರೀತಿ ಎದ್ದು ಹೋಯ್ತು. ಎಂತಹ ಅದ್ಭುತ ! ಅಲ್ಲೇ ತುಂಬ ವರ್ಷದಿಂದ ಜೀವಿಸಿ ಅದಕ್ಕೆ ಪ್ರಾರ್ಥನೆ ಬಾಯಿಪಾಠವಾಗಿ ಹೋಗಿತ್ತಾ? ಏನೋ ಗೊತ್ತಿಲ್ಲ … ಅದೊಂದು ನೆನಪು ಈಗಲೂ ನಿಚ್ಛಳ ….

ದಸರಾ ಬಂತೆಂದರೆ ಮೈಸೂರಿಗೆ ಓಡಿ ಬರೋದು ಅಭ್ಯಾಸವೇ ಆಗಿ ಹೋಗಿತ್ತು. ಹಾಗೆ ಬಂದಾಗ ಜಟಕಾ ಗಾಡಿಯಲ್ಲಿ ಕೂತು ಊರು ಸುತ್ತೋದು ಕೂಡಾ ನಮ್ಮ ಪ್ರೀತಿಯ ಅಭ್ಯಾಸ. ಒಂದು ಸಲ ಹಾಗೆ ಸುತ್ತಾಟಕ್ಕೆ ಹೊರಟಾಗ ದಸರಾ ಸಮಯವಾದ್ದರಿಂದ ತುಂಬ ಜನಜಂಗುಳಿ. ರಸ್ತೆಗಳೆಲ್ಲ ಗಿಜಿಗುಟ್ಟುತ್ತಿದ್ದವು. ಜಟಕಾ ಸವಾರ ದಾರಿಗಾಗಿ ’ಬಾಜೂ … ಹೇ ಬಾಜೂ …’ ಅಂತ ಕೂಗ್ತಿದ್ದ. ನನ್ನ ಅಪ್ಪ ನನ್ನನ್ನ ಮುದ್ದಿನಿಂದ ’ಬಾಜು’ ಅಂತಲೇ ಕರೆಯೋದು ! ಅವನ ಬಾಜು ಪದ ಕಿವಿಗೆ ಬಿದ್ದ ಕೂಡಲೇ ೨ ವರ್ಷದವಳಾದ ನಾನು ಜೋರಾಗಿ ’ನಾನು ಇಲ್ಲೇ ಇದೀನ್ರೀ …’ ಅಂದುಬಿಟ್ಟೆನಂತೆ ! ಅಬ್ಬಾ .. ಎಲ್ಲರೂ ಅದೆಷ್ಟು ರೇಗಿಸಿಬಿಟ್ಟಿದ್ದರು ಅಂದರೆ ಈಗಲೂ ಅದರ ನೆನಪಾದರೆ ದೇಹ ಹಿಡಿಯಾಗುತ್ತೆ ….

ಮತ್ತೊಂದು ಅದ್ಭುತ ಅನುಭವ ನನ್ನ ಹಂಪಿ ಪ್ರವಾಸದ್ದು. ಆ ಸ್ಥಳ ನನ್ನನ್ನು ಆವರಿಸಿದಷ್ಟು ಬಹುಶಃ ಇನ್ಯಾವುದೂ ಇಲ್ಲ ಎನಿಸುತ್ತದೆ. ಅಲ್ಲಿ ನಾವು ಭರ್ತಿ ೫ ದಿನ ಇದ್ದಿದ್ದು ಅಲ್ಲಿ. ಎಲ್ಲ ಸ್ಥಳಗಳನ್ನೂ ಕಂಠಮಟ್ಟ ಸವಿದುಬಿಟ್ಟೆ. ಅಲ್ಲಿ ಓಡಾಡುತ್ತಿದ್ದರೆ ನನಗೆ ಅರಿವಿಲ್ಲದ ಹಾಗೆ ರೋಮಾಂಚನ ! ಕಲ್ಲು ಕಲ್ಲನ್ನ ನೇವರಿಸಿದೆ … ಇಡೀ ಊರಿನ ತುಂಬಾ ಹರಿದಾಡಿಬಿಟ್ಟೆ. ಅಲ್ಲಿನ ’ಮಹಾನವಮಿ ದಿಬ್ಬ’ದ ಮೇಲೆ ಕುಳಿತ ನನ್ನ ಭಾವನೆಗಳನ್ನು ವರ್ಣಿಸಲು ಸಾಧ್ಯವೇ ಇಲ್ಲ. ನಾನು ಹಿಂದೆಂದೋ ಇದ್ದೆ, ಓಡಾಡಿದ್ದೆ, ಇದೇ ದಿಬ್ಬದ ಮೇಲೆ ಕುಳಿತು ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದೆ .. ಹೀಗೆ ಹುಚ್ಚು ಆಲೋಚನೆಗಳು! ಊರಿಗೆ ಮರಳುವ ದಿನ ಈ ದಿಬ್ಬದ ನೆನಪು ಅದೆಷ್ಟು ಕಾಡಿತು ಅಂದರೆ ಮತ್ತೆ ಹೋಗಿ ಅಲ್ಲಿ ೨ ಘಂಟೆ ಕೂತ ನಂತರವೇ ಊರಿಗೆ ಬಂದಿದ್ದು.

ಅದಾಗಿ ಎಷ್ಟೋ ವರ್ಷಗಳ ನಂತರೆ ನಮ್ಮ ತಂದೆಯ ಕಡೆ ಹರಿದು ಹಂಚಿ ಹೋಗಿ ಮುಖ ಪರಿಚಯವೂ ಇಲ್ಲದ ಸಂಬಂಧಿಕರನ್ನೆಲ್ಲ ಮತ್ತೆ ಸೇರಿಸುವ ಒಂದು ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ನಾನು. ನನ್ನಿಂದ ಮೂರು ತಲೆಮಾರುಗಳನ್ನು ಬಿಟ್ಟರೆ ಅದಕ್ಕೂ ಹಿಂದಿನವರ ಯಾವ ಮಾಹಿತಿಯೂ ನನಗೆ ಇರಲಿಲ್ಲ. ಎಲ್ಲರೂ ಸಿಕ್ಕಿದ್ದಾಯಿತು, ಪರಿಚಯವಾಯ್ತು. ನಮ್ಮದೇ ಕಸಿನ್‌ಗಳ ಪರಿಚಯ ಮಾಡಿಕೊಳ್ಳಬೇಕಾದ ದುಸ್ಥಿತಿ! ಆ ನಂತರ ನಮ್ಮ ’ಫ಼್ಯಾಮಿಲಿ ಟ್ರೀ’ ಅಂದರೆ ನಮ್ಮ ಪೂರ್ವಜರ ಬಗ್ಗೆ ಮಾಹಿತಿ ಇರೋ ಒಂದು ಜ಼ೆರಾಕ್ಸ್ ಪ್ರತಿಯನ್ನ ನಮ್ಮೆಲ್ಲರಿಗೂ ಹಂಚಿದರು. ಮೊತ್ತಮೊದಲಿಗೇ ಮೇಲಿನ ಸಾಲಿನಲ್ಲಿ ಹೀಗೆ ಬರೆದಿತ್ತು ….

Family Tree of Sri. K.L.N.Iya and Smt. Venkamma
ancestors from Bhaskaram Village, Guntur District,Andhra Pradesh
period Vijayanagar 1370 A.D
1565 Vijayanagar Empire collapses and they migrated to
Bindiganavale, Nagamangala District,
Karnataka erstwhile Mysore State

ನನಗೆ ಅದನ್ನು ಓದಿ ಆದ ಖುಷಿ ವರ್ಣಿಸಲು ಸಾಧ್ಯವೇ ಇಲ್ಲ. ಅಂದರೆ ನನ್ನ ಪೂರ್ವಜರು ಈ ನೆಲದಲ್ಲಿ ಓಡಾಡಿದ್ದರು ! ಎಷ್ಟೋ ತಲೆಮಾರುಗಳ ಹಿಂದಿನವರಾದರೂ ಒಟ್ಟಿನಲ್ಲಿ ಅಲ್ಲಿದ್ದರು ಅನ್ನೋದು ತಿಳಿದಾಗ ಏನೋ ವಿಚಿತ್ರ ಸಂಭ್ರಮ. ಪುನರ್ಜನ್ಮ ಅನ್ನೋದು ಇದೆಯಾ? ನಾನು ಕೂಡಾ ಹಿಂದೆ ಎಲ್ಲಾದರೂ ಅಲ್ಲಿ ಕೊನೆಪಕ್ಷ ದಾಸಿಯಾಗಿಯಾದರೂ ಬದುಕಿದ್ದಿರಬಹುದಾ? ಹಾಗಾಗಿಯೇ ಅಲ್ಲಿನ ನೆಲ ಅಷ್ಟು ರೋಮಾಂಚನ ತರಿಸಿತಾ? ಉತ್ತರಿಸಲಾಗದ ಪ್ರಶ್ನೆಗಳು ! (ಆದರೆ ಆ ನಂತರ ಎಷ್ಟೋ ಲೇಖಕರು ವಿಜಯನಗರದ ಬಗ್ಗೆ ಬರೆಯುವಾಗ ಇದೇ ರೀತಿ ಬರೆದಿದ್ದನ್ನು ನಾನು ಓದಿದ್ದೀನಿ! ಭಾವನಾತ್ಮಕವಾಗಿ ಯೋಚಿಸುವ ನಾವು ವಿಜಯನಗರ ಸಾಮ್ರಾಜ್ಯದ ಬಗ್ಗೆ ಸ್ವಲ್ಪ ಹೆಚ್ಚೇ ಅನ್ನಿಸಬಹುದಾದಷ್ಟು ಭಾವುಕರು. ಹಾಗಾಗಿ ನನಗೆ ಅನ್ನಿಸಿದ್ದು ಬಹು ಜನರ ಅನುಭವವೂ ಆಗಿತ್ತು. ಇದು ನನ್ನ ವಿವೇಕ ಹೇಳುವ ಮಾತು. ನನ್ನ ಹೃದಯ ಮಾತ್ರ ನಾನು ಅಲ್ಲಿ ಹಿಂದೆ ಎಂದೋ ಬದುಕಿದ್ದೆ ಅಂತಲೇ ನಂಬುತ್ತದೆ …!)

ಇನ್ನು ನಮ್ಮ ಕಾರಾಪುರದ ಅವಿಸ್ಮರಣೀಯ ಘಟನೆ ! ಅಲ್ಲಿ ಆಗ jungle lodges ಇರಲಿಲ್ಲ. ದಿನಕ್ಕೆ ೫೦೦೦ ರೂಪಾಯಿನ ರೂಮು ಕೂಡಾ ಇರಲಿಲ್ಲ. ಮಾಮೂಲಿ ಸ್ಥಳ. ಅಲ್ಲಿ ಹೋಗಿ ಒಂದು ಕಾಫ಼ಿ ಕುಡಿದು ತಿರುಗಾಡಿ ಬರ್ತಿದ್ವಿ. ಅಮ್ಮನ ಸ್ನೇಹಿತೆಯರಿಗೆಲ್ಲ ಇದು ತುಂಬಾ ಪ್ರಿಯವಾದ ಸ್ಥಳ. ಎಂದಿನಂತೆ ಅಲ್ಲಿ ಹೋದಾಗ ಆಶ್ಚರ್ಯ ಕಾದಿತ್ತು .. ಅಲ್ಲಿ ಶೂಟಿಂಗ್! ಒಂದು ಮನೆ ಇತ್ತು .. ಅದೂ ಸುಂದರವಾದ್ದು! ನಮಗೆಲ್ಲ ಪರಮಾಶ್ಚರ್ಯ! ನಮ್ಮ ಗುಂಪಿನಲ್ಲಿದ್ದ ಸುನಂದ ಆಂಟಿ ಸಂಭ್ರಮದಿಂದ ಒಳ ನುಗ್ಗ ಹೊರಟರು. ಅಲ್ಲಿದ್ದ ಒಬ್ಬ ಹುಡುಗ ಓಡಿ ಬಂದು ತಡೆದ. ಅವರಿಗೆ ಸಿಟ್ಟು ಬಂದು ಕೂಗಾಡ ಹತ್ತಿದರು. ಇದು ರಟ್ಟು, ಹಲಗೆಗಳಿಂದ ಮಾಡಿದ ಮನೆ ಅಂತ ಅವನು ತಿಳಿಸಿ ಹೇಳಿದಾಗ ನಾವೆಲ್ಲ ಸುಸ್ತೋ ಸುಸ್ತು! ವಾಪಸ್ ಹೋಗೋಣವೆಂದು ನಾಲ್ಕು ಹೆಜ್ಜೆ ಹಾಕಿದ್ದೆವೋ, ಇಲ್ಲವೋ … ಎದುರಾದ ವ್ಯಕ್ತಿಯನ್ನು ನೋಡಿ ದಂಗು ಬಡಿದು ನಿಂತೆವು .. ಅಣ್ಣಾವ್ರು !!! ಗಂಧದಗುಡಿ ಸಿನಿಮಾದ ಶೂಟಿಂಗ್ ಅದು. ಅದೇನು ಸಂಭ್ರಮವೋ ನಮಗೆ ಅವರನ್ನು ನೋಡಿ! ಆಗಿನ ಕಾಲದಲ್ಲಿ ಕ್ಯಾಮೆರಾ ಕೈಲಿ ಇರ್ತಿರ್ಲಿಲ್ಲ. ಇದ್ದಿದ್ದರೆ ಅದೆಷ್ಟು ಫ಼ೋಟೋ ತೆಗೆದಿರ್ತಿದ್ವೋ ಏನೋ. ರಾಜ್ ಎಂದಿನಂತೆ ಸರಳ, ಮುಗ್ಧ. ಶೂಟಿಂಗ್‌ಗೆ ಹೊರಟು ನಿಂತಿದ್ದ ಅವರ ಜೊತೆ ನಾವೆಲ್ಲ ನಿಂತೆವು. ಯಾರೋ ಒಂದು ಫ಼ೋಟೋ ಕೂಡಾ ತೆಗೆದ ನೆನಪು. ಈಗ ಅದೆಲ್ಲಿದೆಯೋ ನನಗೆ ಗೊತ್ತಿಲ್ಲ. ಆಗೆಲ್ಲ ರಾಜ್‌ಕುಮಾರ್ – ಭಾರತಿ ಜೋಡಿ ತುಂಬಾ ಜನಪ್ರಿಯವಾಗಿತ್ತು. ಅವರು ನನ್ನ ಹೆಸರು ಕೇಳಿದಾಗ ನಾನು ನಾಚಿಕೆಯಿಂದ ತಲೆತಗ್ಗಿಸಿ ’ಭಾರತಿ’ ಅಂದಿದ್ದೆ.. ಆ ಹೀರೋಯಿನ್ ಭಾರತಿ ನಾನೇ ಏನೋ ಅನ್ನುವ ಹಾಗೆ! ಅವರು ನನ್ನನ್ನು ನೋಡಿ ನಕ್ಕಿದ್ದು ಈಗಲೂ ನೆನಪಿದೆ ….

ಮತ್ತೊಂದು ಘಟನೆ ನಾವು ಶಿವಮೊಗ್ಗೆಗೆ ಹೋದಾಗಿನದ್ದು. ನಾವೆಲ್ಲ ಸಂಬಂಧಿಕರು ೧೦, ೧೨ ಜನ ಹೊರಟಿದ್ದೆವು.ಆಗ ನನ್ನ ಮಗನಿಗೆ ೩,೪ ವರ್ಷವಷ್ಟೇ. ಮಧ್ಯರಾತ್ರಿಯಲ್ಲಿ ನನಗೆ ಅಸಾಧ್ಯ ನಿದ್ದೆ. ಅದೆಲ್ಲೋ ಕಾಫ಼ಿಗೆ ಅಂತ ಬಸ್ಸು ನಿಲ್ಲಿಸಿದಾಗ ಎಲ್ಲರೂ ಇಳಿದಿದ್ದಾರೆ. ನಾನು ಮಾತ್ರ ನಿದ್ದೆ ಹೊಡೆಯುತ್ತಲೇ ಇದ್ದೆ. ಈ ಮಕ್ಕಳಿಗೆ ಅದೇನು ರಾಜಕಾರಣವಿರುತ್ತೋ ಗೊತ್ತಿಲ್ಲ .. ಮಧ್ಯರಾತ್ರಿಯಲ್ಲಿ ಇವನಿಗೂ ಎಲ್ಲರ ಜೊತೆ ಕೆಳಗಿಳಿಯುವ ಸಂಭ್ರಮ (ಈಗ ಇಂಜಿನಿಯರಿಂಗ್ ಓದುತ್ತಿರುವ ಅವನನ್ನ ದಿನಾ ಬೆಳಿಗ್ಗೆ ಅರ್ಧ ಘಂಟೆ ಒದ್ದು ಎಬ್ಬಿಸಬೇಕು!). ಎಲ್ಲರೂ ಮಾತಾಡೋ ಸಂಭ್ರಮದಲ್ಲಿ ಮುಳುಗಿದಾಗ ಇವನು ಅದ್ಯಾವ ಮಾಯದಲ್ಲೋ ಅಪ್ಪನ ಕೈ ಬಿಡಿಸಿಕೊಂಡು ಯಾತ್ರೆ ಹೊರಟಿದ್ದಾನೆ .. ಒಬ್ಬನೇ! ಆ ಬಸ್‌ಸ್ಟ್ಯಾಂಡ್ಿನಲ್ಲಿ ಎಷ್ಟೊಂದು ಬಸ್‌ಗಳು. ದೊಡ್ಡವರಿಗೇ ಗೊಂದಲವಾಗೋ ಅಷ್ಟು. ಅಂತಾದ್ದರಲ್ಲಿ ಒಬ್ಬನೇ ಅದು ಹೇಗೆ ಹುಡುಕ್ತಾನೆ ನನ್ನ? ಗಾಬರಿಯಾಗಿ ಅಲ್ಲೇ ಇದ್ದ ಯಾವುದೋ ಬಸ್ ಹತ್ತಿ ಕೂತಿದ್ದಾನೆ! ಅದೂ ಡ್ರೈವರ್ ಹಿಂದೆ ಜಾಗ ಇರುತ್ತಲ್ಲ ಅಲ್ಲಿ ಸೆಟಲ್ ಆಗಿದಾನೆ ಕಪಿರಾಯ. ನನಗೋ ಗಾಢ ನಿದ್ರೆ. ಮಧ್ಯೆ ಮಧ್ಯೆ ಅರೆಬರೆ ಎಚ್ಚರ. ಹಾಗೇ ಅರೆಬರೆ ನಿದ್ರೆಯಲ್ಲೆ ನನ್ನ ಮಗನ ಅಳುವಿನ ಧ್ವನಿ ನನ್ನ ಕಿವಿಗೆ ಬಿದ್ದಿದ್ದು. ನಿಜವೋ? ಭ್ರಮೆಯೊ?ಕನಸೋ? … ನಿದ್ರೆ ಹಾರಿಹೋಯ್ತು. ಎದ್ದು ಆ ಧ್ವನಿಯನ್ನ ಹುಡುಕ್ತಾ ಹೊರಟರೆ ನಮ್ಮ ಬಸ್ಸಿನಲ್ಲೆ ಕೂತಿದ್ದಾನೆ .. ಗುಬ್ಬಿಮರಿಯ ಥರ ಮುದುಡಿಕೊಂಡು, ಗಾಬರಿಯಲ್ಲಿ ಅಳ್ತಾ …. ನನಗೆ ಎದೆ ಒಡೆದುಹೋಯ್ತು. ಅಯ್ಯೋ ಅದೆಷ್ಟು ಗಾಬರಿಯಾಗಿತ್ತು ಆ ಪುಟ್ಟ ಜೀವಕ್ಕೆ. ಬಾಚಿ ತಬ್ಬಿ ಅತ್ತೇಬಿಟ್ಟೆ. ತಡವಾಗಿ ಮಾತು ಬಂದಿದ್ದು ಅವನಿಗೆ. ಆಗ ಮಾತು ಕೂಡಾ ಆಡ್ತಿರಲಿಲ್ಲ. ಬೇರೆ ಇನ್ಯಾವುದೋ ಬಸ್ಸಿನಲ್ಲಿ ಕೂತು ಹೋಗಿಯೇ ಬಿಟ್ಟಿದ್ರೆ? ನಾವು ಯಾರು ಅಂತ ಹೇಳಲು ಮಾತಿಲ್ಲ.ಅಂದು ಅವನನ್ನ ಕಳೆದುಕೊಂಡಿದ್ರೆ ಬಹುಶಃ ನನ್ನನ್ನು ನಾನು ಇಡೀ ಜೀವಮಾನದಲ್ಲೇ ಕ್ಷಮಿಸುತ್ತಿರ್ಲಿಲ್ಲ. ನಿದ್ರೆಯಲ್ಲಿ ಮುಳುಗಿ ಅವನನ್ನ ಕಳೆದುಕೊಂಡೆ ಅನ್ನೋ ನೋವು ನನ್ನ ತಿಂದುಬಿಡ್ತಿತ್ತು .. ಇದು ಖಂಡಿತ. ಆಮೇಲೆ ಬಂದ ಅವನ ಅಪ್ಪ ನಾನೇ ಬಂದು ಬಸ್ಸಿನಲ್ಲಿ ಬಿಟ್ಟುಹೋದೆ ಅಂದ. ನಾನು ಅದನ್ನ ಎಂದಿಗೂ ನಂಬೋದಿಲ್ಲ. ಆ ಥರ ಬಿಟ್ಟು ಹೋಗಿದ್ರೆ ನನ್ನ ಎಬ್ಬಿಸಿ ಹೇಳದೇ ಹೋಗ್ತಿರಲಿಲ್ಲ. ಹಾಗೆ ಬಿಟ್ಟೇ ಹೋಗಿದ್ರೆ ಅವನ್ಯಾಕೆ ಅಲ್ಲಿ ಹೋಗಿ ಕೂತು ಅಳುತ್ತಿದ್ದ? ತುಂಬಾ ದುಃಖದಲ್ಲಿದ್ದ ನಾನು ಕೂಗಾಡ್ತೀನಿ ಅಂತ ಸುಮ್ಮನೆ ನಾನೇ ಬಿಟ್ಟು ಹೋದೆ ಅಂದಿರಬೇಕು …

ಮಂತ್ರಾಲಯಕ್ಕೆ ಹೋದಾಗ ನನಗೆ ೫,೬ ವರ್ಷ. ತುಂಗೆಯಲ್ಲಿ ಬೆಳಿಗ್ಗೆಯೇ ಸ್ನಾನ ಮಾಡೋ ಸಂಭ್ರಮ. ಆಗೆಲ್ಲ ಗುಂಪಿನಲ್ಲೇ ಎಲ್ಲ ಪ್ರವಾಸಗಳು. ಎಷ್ಟೊಂದು ಜನ ಇರ್ತಿದ್ವಿ ಅಂದ್ರೆ ಯಾರಿದ್ದಾರೆ, ಯಾರಿಲ್ಲ ಅಂತ ಯಾರಿಗೂ ಅರ್ಥವೇ ಆಗದಷ್ಟು. ನಾನು ಅಲ್ಲೆಲ್ಲೋ ಬಂಡೆಯ ಮೇಲೆ ಕೂತಿದ್ದೆ ಅಷ್ಟು ನೆನಪಿದೆ. ಅದೇನು ತರಲೆ ಮಾಡೋದಿಕ್ಕೆ ಹೋದೆನೋ ಗೊತ್ತಿಲ್ಲ … ನೀರಿಗೆ ಜಾರಿ ಬಿಟ್ಟೆ! ಈಜು ಬಾರದ ನಾನು ಹಾಗೆ ನೀರಿನ ರಭಸಕ್ಕೆ ಒಂದಷ್ಟು ದೂರ ಹೋಗಿ ಬಿಟ್ಟೆ. ಒಂದಿಷ್ಟು ದೂರ ಹೋದಾಗ ಯಾರೋ ಕೇಳಿದರಂತೆ ’ಆ ಮಗು ನೀರಲ್ಲಿ ಹೋಗ್ತಿದ್ಯಲ್ಲಾ ಅದಕ್ಕೆ ಈಜು ಬರತ್ತಾ?’ ಅಂತ! ಆಗ ಎಲ್ಲರಿಗೂ ನನ್ನ ನೆನಪು. ನಾನು ಬಿದ್ದೆ ಅಂತ ರಕ್ಷಿಸೋದಿಕ್ಕೆ ನೀರಿಗೆ ಬಿದ್ದವಳು ಈಜು ಬಾರದ ನನ್ನಕ್ಕ. ಇಬ್ಬರೂ ಮಕ್ಕಳು ನೀರಿಗೆ ಬಿದ್ದಿದ್ದು ಕಂಡು ನೀರಿಗೆ ಹಾರಿದ್ದು ಈಜು ಬಾರದ ನನ್ನ ಅಪ್ಪ! ನಮ್ಮ ಗುಂಪಿನಲ್ಲಿ ಪುಣ್ಯಕ್ಕೆ ಒಬ್ಬರು ಒಳ್ಳೆಯ ಈಜುಗಾರರಿದ್ರು. ಹೇಗೂ ತೇಲಿ ದೂರ ಹೋದ ನನ್ನದು doubt case ಅಂತ ತೀರ್ಮಾನಿಸಿ ಮೊದಲು ಅಪ್ಪನನ್ನ ಎಳೆದು ದಡಕ್ಕೆ ಹಾಕಿ, ನಂತರ ಅಕ್ಕನನ್ನ ದಡಕ್ಕೆ ಹಾಕಿ ಆಮೇಲೆ ನನ್ನನ್ನ ಎಳೆದು ತಂದರು. ಸಾಕಷ್ಟು ನೀರು ಕುಡಿದಿದ್ದ ನಾನು ಮೊದಲೆ ಗಾಬರಿ ಗಿರಾಕಿ .. ಈಗಂತೂ ಉದ್ದೋ ಉದ್ದ ಮಲಗೇ ಬಿಟ್ಟೆ ಪ್ರಜ್ಞೆ ತಪ್ಪಿದವಳಂತೆ. ಅಯ್ಯೋ ಎಲ್ರೂ ನಾನು ಗೊಟಕ್ ಅಂದೇ ಬಿಟ್ಟೆ ಅನ್ನೋ ತರ ಅತ್ತೂ ಕರೆದೂ …. ಕೊನೆಗೊಮ್ಮೆ ನಾನು ಕಣ್ಣು ತೆರೆದೆ. ಅಲ್ಲಿಯವರೆಗೆ ಅಳ್ತಿದ್ದ ಎಲ್ಲರೂ ’ತಲೆಹರಟೆ ನಿಂಗೇನಾಗಿತ್ತೇ ಒಬ್ಬಳೇ ಅಲ್ಲಿ ಹೋಗೋದಿಕ್ಕೆ? ತೆಪ್ಪಗೆ ಎಲ್ಲರ ಜೊತೆ ಕುಕ್ಕರಿಸಕ್ಕೆ ಏನಾಗಿತ್ತು ರೋಗ?’ ಅಂತ ಬಯ್ಯೋದಿಕ್ಕೆ ಶುರು ಮಾಡಿದ್ರು! ಆ ಅನುಭವ ಮನಸ್ಸಿಗೆ ಎಂತ ಗಾಯ ಮಾಡಿತು ಅಂದರೆ ಈಗಲೂ ಕೂಡಾ ನೀರಿನಲ್ಲಿ ಇಳಿಯಬೇಕಾದ ಸಂದರ್ಭ ಎದುರಾದರೆ ಬೆವರುತ್ತೇನೆ .. ನನಗೇ ಅರಿವಿಲ್ಲದಂತೆ.

ಕಲ್ಪಾಕ್ಕಮ್‌ನಲ್ಲಿ ನನ್ನ ನೆಂಟರ ಮನೆಗೆ ಹೋದಾಗಿನ ಒಂದು ಅನುಭವ ಕೂಡಾ ಮರೆಯಲಾಗದ್ದು. ಅಲ್ಲಿ ಅವರ ಮನೆಯನ್ನ ದಾಟಿ ಬಂದರೆ ರಸ್ತೆ. ಅದನ್ನ ದಾಟಿದರೆ ಆ ಪಕ್ಕಕ್ಕೆ ಸಮುದ್ರ! ಮಾರನೆಯ ಮುಂಜಾವದಲ್ಲಿ ಎದ್ದ ನನಗೆ ಆ ಸಮುದ್ರ ಕಂಡು ಹುಚ್ಚು ಹಿಡಿದ ಹಾಗಾಯ್ತು. ಈಗ ಅಲ್ಲಿನ ಕಥೆ ನನಗೆ ಗೊತ್ತಿಲ್ಲ .. ಆಗಂತೂ ಅದು ಪ್ರವಾಸೀ ತಾಣವಾಗಿರಲಿಲ್ಲ. ಹಾಗಾಗಿ ಅದೆಷ್ಟು ಚೆಂದವಿತ್ತು, ಶುಭ್ರವಿತ್ತು! ಬೆಳಿಗ್ಗೆಯೇ ಸಮುದ್ರ ದಡಕ್ಕೆ ಓಡಿದೆ. ಅಲ್ಲಿ ಹೋಗಿ ನೋಡಿದರೆ ದಡದಗುಂಟ ತರತರದ ಕಪ್ಪೆಚಿಪ್ಪು, ಕವಡೆಗಳು! ಅದೆಷ್ಟು ಬಣ್ಣ ಬಣ್ಣದವು ! ನನಗೆ ಅಲ್ಲಿನ ಸಮುದ್ರ, ಸೂರ್ಯೋದಯ ಎಲ್ಲ ಮರೆತೇ ಹೋಯ್ತು. ಕಪ್ಪೆಚಿಪ್ಪು ಆರಿಸುವುದರಲ್ಲಿ ತಲ್ಲೀನಳಾಗಿ ಹೋದೆ.ಅಪ್ಪ ಅಲ್ಲೆಲ್ಲೋ ಬಿದ್ದಿದ್ದ ಒಂದು ಕವರ್ ತಂದು ಕೊಟ್ಟರು. ಚೀಲ ಹರಿದುಹೋಗುವಷ್ಟು ತುಂಬಿಸಿದೆ. ನನ್ನ ಆಗಿನ ಕೈಗಳ ಶಕ್ತಿಗೆ ಅದು ಅದೆಷ್ಟು ಭಾರ! ಆದರೂ ಅದನ್ನ ಅಪ್ಪನಿಗೆ ಕೊಡದೆ ನಾನೇ ಹೊತ್ತು ಆರಿಸುತ್ತಲೇ ನಡೆದೆ. ಅಮೂಲ್ಯನಿಧಿ ಸಂಪಾದಿಸಿದ ಹೆಮ್ಮೆ ನನಗೆ. ಆ ನಂತರ ನಾವು ಊರಿಗೆ ಹೊರಟೂ ಬಿಟ್ಟೆವು. ನನ್ನ ಅಮೂಲ್ಯ ನಿಧಿಯ ಕವರಿನಲ್ಲಿ ಜೊತೆಜೊತೆಗೆ ಸೇರಿದ್ದ ನೀರು ಮತ್ತು ಮರಳು ನನ್ನ ಬಟ್ಟೆಯನ್ನೆಲ್ಲ ಕೊಳಕೆಬ್ಬಿಸಲು ಶುರು ಮಾಡಿದವು. ಪಕ್ಕದಲ್ಲಿ ಕೂತಿದ್ದವರು ’ಅದನ್ನ ಸೀಟಿನ ಕೆಳಗೆ ಇಡು. ಹೋಗುವಾಗ ತಗೊಂಡು ಹೋಗು’ ಅನ್ನೋ ಅಮೂಲ್ಯ ಸಲಹೆ ಕೊಟ್ಟರು. ಹಾಗೆಯೇ ಇಟ್ಟೆ. ಮದರಾಸು ಬಂತು. ಇಳಿಯಬೇಕಾದ ಸ್ಥಳದಲ್ಲಿ ಇಳಿಯಬೇಕಾದ ಕ್ಷಣ ಬಂದಾಗ ತೂಕಡಿಸ್ತಿದ್ದ ನಾನು ಇಳಿದೇಬಿಟ್ಟೆ … ನನ್ನ ನಿಧಿಯನ್ನು ಮರೆತು! ಬಸ್ಸು ಹೊರಟೇ ಹೋಯ್ತು. ಕವರನ್ನು ಹಿಡಿದಿದ್ದ ಕೈ ಖಾಲಿ ಖಾಲಿ ಅನ್ನಿಸಲು ಶುರುವಾದಾಗ ಏನೋ ಮರೆತೆ ಅಂತ ನೆನಪಾಗಿದ್ದು. ನನ್ನ ಕಪ್ಪೆಚಿಪ್ಪು !!! ಜೋರಾಗಿ ಕಿರುಚಿ ನೆಲದ ಮೆಲೆ ಬಿದ್ದು ಅತ್ತು ಬಿಟ್ಟೆ. ಇಡೀ ದಿನ ತಿಂಡಿ ತಿನ್ನದೇ, ಊಟವಿಲ್ಲದೇ ಸಂಗ್ರಹಿಸಿದ್ದ ನಿಧಿ ಹೊರಟೇ ಹೋಗಿತ್ತು. ನಿಜಕ್ಕೂ ತುಂಬ ಸುಂದರವಾಗಿದ್ದವು ಅವು. ಹೆಚ್ಚು ಜನಸಂಚಾರವಿಲ್ಲದೇ ಇರೋ ಬೀಚ್ ಆದ್ದರಿಂದ ಎಲ್ಲವೂ ಮುದ್ದಾದವು ಸಿಕ್ಕಿದ್ದವು. ನನ್ನ ಕ್ಷಣದ ಅಜಾಗರೂಕತೆಯಿಂದ ಕಳೆದುಕೊಂಡಿದ್ದೆ. ಬದುಕಿನಲ್ಲಿ ಕಳೆದುಕೊಳ್ಳೋದರ ಮೊದಲ ಅನುಭವ ಅದು! ನಿರಾಸೆಯ, ಹತಾಶೆಯ ಮೊದಲ ಅನುಭವ ಅದು! ಈಗ ಅದು ಕ್ಷುಲ್ಲಕ ಅನ್ನಿಸಬಹುದು. ಬದುಕ ಪಯಣದಲ್ಲಿ ಅದೆಷ್ಟನ್ನೋ ನನ್ನ ತಪ್ಪಿನಿಂದ ಕಳೆದುಕೊಂಡೆ, ಮತ್ತೆ ಕೆಲವನ್ನ ನನ್ನ ತಪ್ಪು ಇಲ್ಲದೇ ಕೂಡಾ … ಆದರೆ ಇದು ಮೊದಲ ಅನುಭವವಾದ್ದರಿಂದ ಇಂದಿಗೂ ನೆನಪಿದೆ ….