ಪಾಕ ಹದಕ್ಕೆ ಬಂದಂತೆನಿಸಿತು. ಅಷ್ಟೂ ಸಾಮಾಗ್ರಿ ಸುರುವಿ ಗೊಟ.. ಗೊಟ.. ಗೊಟಾಯಿಸಿ ಪರಾತಕ್ಕೆ ಸುರುವಿದೆ. ಈಗಲೆ ಕಟ್ಟುವದೋ.. ಆರಿದ ನಂತರವೋ..? ಮತ್ತೆ ಓವರ್ ಟು ಅವ್ವಾ.. ತಲೆ ಇದ್ದಲ್ಲಿಂದಲೆ ಓಡಿತು. ಆರಿದ ಮೇಲೆ ಉಂಡೆಯಾಗುವದಿಲ್ಲವೋ ಮಂಕೆ. ಉಂಡೆ ಬಂಡೆಯಾಗುತ್ತದೆ.. ಅವ್ವ ತಿಳಿ ಹೇಳಿದಂತಾಯಿತು. ಅಂಗೈಗೆ ಎಣ್ಣೆ ನೀರು ಸವರಿಕೊಂಡು ಸುಡು ಸುಡುವದನ್ನೆ ಎಳೆದುಕೊಂಡೆ. ಬರೆ ಕೊಟ್ಟಂತಾಯಿತು. ಹಾ.. ಎಂದಿತು ಜೀವ. ಅದು ನೋವೋ ಸುಖವೋ ಅಂತೂ ಉಂಡೆಗಳೆಂಬ ಗುಂಡುಗಳು ತಯಾರಾದವು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ

ನಾಗರ ಪಂಚಮಿ ಎಂಬುದು ಉಂಡೆ ಪಂಚಮಿಯೋ ಉಂಡೆ ತಿನ್ನಲಿಕ್ಕಾಗಿ ಸೃಷ್ಠಿಗೊಂಡ ಹಬ್ಬವೊ? ಈ ಉಂಡೆಗಳು ಎಲ್ಲ ಕಾಲಕ್ಕೂ ಎಲ್ಲ ಕಡೆಗೂ ಸಿಗುತ್ತವೆಯಾದರೂ ಈ ಉಂಡೆ ಹಬ್ಬ ಮಾತ್ರ ಹಾಗೇ ಉಳಿದುಕೊಂಡಿದೆ.

ಹಲವರು ಕಲ್ಲು ನಾಗರಕ್ಕೆ ಹಾಲೆರೆದರೆ ಇನ್ನು ಕೆಲವರು ಅಲ್ಲಲ್ಲಿ ನಿಜ ನಾಗರಕ್ಕೆ ಹಾಲೆರೆದು ಸುದ್ದಿಯಾಗುತ್ತಾರೆ. ಮದುವೆಯಾದ ಹೊಸ ಜೋಡಿಗಳು ಕೂಡಿ ಜೋಡಿಯಾಗಿ ಜೋಕಾಲಿ ಜೀಕುತ್ತಾರೆ. ಎಷ್ಟು ಜೋಡಾಗುತ್ತಾರೋ ಅಷ್ಟು ಜೀಕು. ಜೀವನ ಜೋಕಾಲಿಯೆ ಹಾಗಲ್ಲವೆ? ಜೋಕಾಲಿ ಜೂಜು ಮೋಜು ಜಿಟಿ ಜಿಟಿ ಮಳೆ ಈ ಹಬ್ಬದ ವಿಶೇಷಗಳಾದರೂ ಈ ಉಂಡೆ ಮಾತ್ರ ಪಂಚಮಿಯ ಮುಖಕ್ಕೆ ಹೇಗೊ ಅಂಟಿಕೊಂಡುಬಿಟ್ಟಿದೆ.

ಈ ಹಿಂದೆ ಅಂದರೆ ಬಹು ಹಿಂದೆ ಉಂಡೆ ಕಟ್ಟುವ ಹೆಂಗಸರಿಗೆ ಬಲು ಮನ್ನಣೆ ಇದ್ದಿತು. ಸಕ್ಕರೆ ಅಥವಾ ಬೆಲ್ಲದ ಪಾಕದ (ಆಣ) ಹದ ಹಿಡಿಯುವದೆ ಇಲ್ಲಿ ಮುಖ್ಯ. ಪಾಕ ಪದಾರ್ಥಗಳ ಬೆರಕೆಯ ಅನುಪಾತದಂತಹ ಪ್ರಾವೀಣ್ಯತೆ ಕೇರಿಯ ಒಬ್ಬಿಬ್ಬರಿಗೆ ಮಾತ್ರ ಸಿದ್ಧಿಸಿದ್ದ ಬ್ರಹ್ಮವಿದ್ಯೆಯಾಗಿತ್ತು. ಅಂಥವರ ಮುಂದೆ ತಮ್ಮ ತಮ್ಮ ಉಂಡೆಗಳಿಗೆ.. ಆಣದ ಹದ ಹಿಡಿದು ಕೊಡಿ ಎಂದು ಅನೇಕ ಹೆಂಗಳೆಯರು ಅರ್ಜಿ ಹಿಡಿದು ನಿಂತವರಂತೆ ತಮ್ಮ ತಮ್ಮ ಬುಟ್ಟಿ ಹಿಡಿದುಕೊಂಡು ನಿಂತಿರುತ್ತಿದ್ದರು. ಆ ಆಣದಾಕೆ ಉಂಡೆ ತಯಾರಿಕೆ ಕುರಿತು ಉನ್ನತ ವ್ಯಾಸಂಗ ಮಾಡಿ ಪಾರೀನ್ ರಿಟರ್ನ್‌ ಥರ ಧಿಕಾವು ತೋರುತಿದ್ದುದ್ದುಂಟು. ಪಾಕದ ಹದ ಹಿಡಿಯುವ ಕುರಿತು ಅರ್ಧರ್ದ ಗಂಟೆ ಪ್ರವಚನ ಅವಳದು. ಪಾಕ ಹಿಡಿಯುದೆಂದರೇನು ಸಾಮಾನ್ಯ ಸಂಗತಿಯೆ?

ಈಗೇನಿದೆ? ಅಯ್ಯಂಗಾರಿ ಬೇಕರಿಯ ಬೂಂದಿ ಬೇಸನ್ನುಗಳೆ ಪಂಚಮಿಯ ಪ್ರಸಾದ ಮತ್ತು ನೈವೇದ್ಯಗಳು. ಕಲ್ಲು ನಾಗರಕೂ ಅವೇ ಪ್ರೀತಿ. ನುಚ್ಚುಂಡೆ ಹೆಸರುಂಡೆ ತಂಬಿಟ್ಟು ಉಂಡೆ ಅರಳಿಟ್ಟು ಉಂಡೆ ಎಲ್ಲಾದರೂ ಕಂಡಿದ್ದೀರಾ? ಅವೆಲ್ಲ ಈಗ ಪಳೆಯುಳಿಕೆಗಳಷ್ಟೇ.

ಈಗಿನವರಿಗೋ ಉಂಡೆಯ ಉಸಾಬರಿಯೇ ಬೇಡ. ಮಾಡಲು ಬರುವದಿಲ್ಲ ಎಂಬುದು ಒತ್ತಟ್ಟಿಗಾದರೆ.. ಎಲ್ಲರೂ ಒಂದೆಡೆ ಕಲೆತು ಕೂಡಿ ಮಾಡುವ ಉಮೇದರಿಯೂ ಇಲ್ಲವಾಗಿದೆ. ಕಾಲಾಯಾ ತಸ್ಮೈ ನಮಃ. ಉಂಡೆ ಕಟ್ಟಿಕೊಂಡು ಕಾಲಕ್ಕಾದರೂ ಏನು ಆಗಬೇಕಿದೆ? ಈ ತಾಪತ್ರಯವೇ ಬೇಡ ಎನ್ನುವವರಿಗಾಗಿಯೆ ಇಸ್‌ಸ್ಟಂಟ್ ಉಂಡೆ ಮಿಕ್ಷ್ಚರ್‌ಗಳನ್ನು ಕಂಪನಿ ಭಗವಂತ ಕರುಣಿಸಿದ್ದಾನೆ. ಮಿಕ್ಸ್ಚರನ್ನು ಇಂತಿಷ್ಟು ಕಾಲ ಇಂತಿಷ್ಟು ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಟ್ಟು ಕಾಯಿಸಿ ಕೆಳಗಿಳಿಸಿದರೆ ಮುಗಿಯಿತು. ಮಿಕ್ಷ್ಚರ್‌ಅನ್ನು ಆರಿಸುತ್ತ ಮುಟಿಗೆಯಲ್ಲಿ ಹಿಡಿದು ಅಮುಕಿದರೆ ಉಂಡೆ ತಯಾರಾದಂತೆಯೆ. ದುಂಡಗಾದರೆ ಉಂಡೆ ಚಪ್ಪಟೆಯಾದರೆ ಕೊಬ್ಬರಿ ಚಿನ್ನೀ! ಒಂದೆ ಪದಾರ್ಥ ಎಡವಟ್ಟಾದರೆ ಹೊಸ ಹೆಸರು? ಇದು ಮಿಕ್ಷ್ಚರ್ ಮಹಾತ್ಮೆ. ಪಾಕಕ್ಕೆ ಡಾಣೆ ಹಾಕಿದರೆ ಡಾಣೆ ಉಂಡೆ, ಚುರುಮುರಿ ಹಾಕಿದರೆ ಚುರುಮುರಿ ಉಂಡೆ. ಹೀಗೆ ನವನವೀನ ಪ್ರಯೋಗಗಳಿಗೆ ಉಂಡೆಯೂ ತನ್ನನ್ನೇ ತಾನು ಒಡ್ಡಿಕೊಳ್ಳುತ್ತ ದುಂಡಗಾಗುತ್ತಲೆ ಇದೆ.

ಅಕ್ಕಪಕ್ಕದ ಮನೆಯ ಮಕ್ಕಳು ತಮ್ಮ ಎರಡೂ ಕೈಗಳಲ್ಲಿ ಒಂದೊಂದು ಉಂಡೆ ಹಿಡಿದುಕೊಂಡು ತಿನ್ನುತ್ತ ಅತ್ತಿತ್ತ ನಡೆದಾಡುತಿದ್ದರು. ಆ ಉಂಡೆ ಯಾವ ಬಗೆಯದ್ದು ಅನ್ನುವ ಆಧಾರದಲ್ಲಿ ಆಯಾ ಮನೆಗಳ ಆಡಂಬರದ ಪ್ರದರ್ಶನವೂ ಅದಾಗಿರುತ್ತಿತ್ತು. ನನ್ನ ಮನೆಯಾಕೆ ಕರಾವಳಿಯವಳು. ನಮ್ಮ ಕಡೆ ಉಂಡೆಯೂ ಇಲ್ಲ ಎಂಥದ್ದು ಇಲ್ಲ ಮಣ್ಣು.. ಎಂದು ತುಟಿ ವಾರೆ ಮಾಡಿ ಉಂಡೆ ತಿನ್ನುವ ಆಸೆಯನ್ನು ಮಣ್ಣುಪಾಲು ಮಾಡಿದಳು. ನನ್ನ ಮಕ್ಕಳಿಗೆ ಚೀಪಲು ಲಾಲಿಪಪ್ಪಾದರೂ ಇದೆ. ನನಗೆ?

ಈಗೇನಿದೆ? ಅಯ್ಯಂಗಾರಿ ಬೇಕರಿಯ ಬೂಂದಿ ಬೇಸನ್ನುಗಳೆ ಪಂಚಮಿಯ ಪ್ರಸಾದ ಮತ್ತು ನೈವೇದ್ಯಗಳು. ಕಲ್ಲು ನಾಗರಕೂ ಅವೇ ಪ್ರೀತಿ. ನುಚ್ಚುಂಡೆ ಹೆಸರುಂಡೆ ತಂಬಿಟ್ಟು ಉಂಡೆ ಅರಳಿಟ್ಟು ಉಂಡೆ ಎಲ್ಲಾದರೂ ಕಂಡಿದ್ದೀರಾ? ಅವೆಲ್ಲ ಈಗ ಪಳೆಯುಳಿಕೆಗಳಷ್ಟೇ.

ಚಿಕ್ಕವನಿದ್ದಾಗ ಅವ್ವ ಉಂಡೆ ಮಾಡುವದನ್ನು ಕಟ್ಟುವದನ್ನು ನೆನಪಿಸಿಕೊಂಡೆ. ಅಷ್ಟು ನೆನಪಾಯಿತು. ಎಷ್ಟೋ ಮರೆತುಹೋಗಿದೆ. ಉಂಡೆ ಮಾಡಿಯೇ ಬಿಡೋಣ ಎನಿಸಿತು. ಅರ್ಪಣಾ ಭಾವ ಇದ್ದರೆ ಏನನ್ನಾದರೂ ಎಂಥದ್ದನ್ನಾದರೂ ಸಾಧಿಸಬಹುದು.. ಯಾರೋ ಪುಣ್ಯಾತ್ಮರು ಅದ್ಯಾತರದ್ದೋ ಸಂದರ್ಭದಲ್ಲಿ ಅದ್ಯಾವುದೋ ಕಾರಣಕ್ಕೆ ಉದುರಿಸಿದ್ದ (ಉದ್ಧರಿಸಿದ್ದ) ಅಣಿಮುತ್ತನ್ನು ಅನಾಮತ್ತಾಗಿ ಉಂಡೆ ಕಟ್ಟುವ ಮಹಾ ಕೈಂಕರ್ಯಕ್ಕೆ ಆಧ್ಯಾರೋಪಿಸಿಕೊಂಡು ಉಂಡೆಗೆ ನನ್ನನ್ನೇ ನಾನು ಅರ್ಪಿಸಿಕೊಳ್ಳಲು ರೆಡಿಯಾದೆ.

ಸಾಮಾಗ್ರಿಗಳನ್ನೆಲ್ಲ ತಂದು ಸುರುವಿಕೊಂಡೆ. ಪಾಕ..?! ಈ ಪಾಕ ತಯಾರಿಕೆಯೆಂಬುದು ಉಂಡೆಯಲ್ಲಿ ಪ್ರಾಣಪ್ರತಿಷ್ಠಾಪನೆಯಂತಹ ಮಹಾ ಘನಂಧಾರಿ ಕ್ರಿಯೆ ಮತ್ತು ಕರ್ಮ. ಪಾಕಕ್ಕೆ ಸಕ್ಕರೆಯೋ ಬೆಲ್ಲವೊ.. ಗಂಡಹೆಂಡಿರ ಮದ್ಯೆ ಸಂಸದೀಯ ಚರ್ಚೆಯೆ ನಡೆಯಿತು. ಸಾವಯವ ಬೆಲ್ಲವನ್ನು ನಿರವಯವ ನೀರಿಗೆ ಸುರಿಯುವದೆಂದು ತೀರ್ಮಾನಕ್ಕೆ ಬರಲಾಯಿತು. ಹೆಂಡತಿ ನೆಲಕ್ಕೆ ಸೌಟು ಕುಟ್ಟಿ ತನ್ನ ಸಹಮತ ವ್ಯಕ್ತಪಡಿಸಿದಳು. ಅವಳು ಮಾಡುವದು ಇಷ್ಟು ಮಾತ್ರ ಅಂತ ಹೇಳಿದರೆ ತಪ್ಪಾಗಬಹುದೇನೊ. ಇಷ್ಟೂ ಮಾಡದಿದ್ದರೆ ಹೆಂಡತಿ ಹೇಗಾದಾಳು?

ಹಂಡಿಯಲ್ಲಿ ನೀರು ಬೆಲ್ಲ ಹಾಕಿ ಕಾಯಿಸತೊಡಗಿದೆ. ಕಾಯ್ದಂತೆ ನೊರೆ ನೊರೆ.. ಗುಳ್ಳೆಗಳು.. ಅರೆ ನಿದ್ದೆಯ ಕಣ್ಣುಗಳಂತೆ ಪಿಳಿ ಪಿಳಿ ಬಿಟ್ಟು ಗುಳ್ಳೆಗಳು ಒಡೆಯುತ್ತಿವೆ.. ಏನಾಗುತ್ತಿದೆಯೋ ಬೆಲ್ಲ ಪಾಕವಾಗುತ್ತಿದೆಯಾ ಇಲ್ಲ ಆವಿಯಾಗುತ್ತಿದೆಯಾ..? ಏನೂ ಅರ್ಥವಾಗುತ್ತಿಲ್ಲ. ಮತ್ತೇ ಅವ್ವಾ.. ಎಂದು ನೆನೆಪಿಸಿಕೊಂಡೆ. ಅಲ್ಲಾದೀನನ ಭೂತ ಪ್ರತ್ಯಕ್ಷವಾದಂತೆ ನೆನಪು ತಲೆಯಲ್ಲಿ. ತಣ್ಣೀರಲ್ಲಿ ಪಾಕದ ಒಂದೊಂದೆ ಹನಿ ಬಿಟ್ಟು ಎರಡು ಬೆರಳಿಂದ ಹಿಸುಕಿ ಹದ ನೋಡುವದು. ಹಾಗೆ ಮಾಡುತ್ತಲೇ ಕೈಸುಟ್ಟುಕೊಂಡೆ. ನನ್ನಾಕೆ ಲೋಚಗುಟ್ಟಿದಳು ಅಷ್ಟೇ. ಅದುವೇ ನನ್ನ ಪಾಲಿನ ಮುಲಾಮು.

ಪಾಕ ಹದಕ್ಕೆ ಬಂದಂತೆನಿಸಿತು. ಅಷ್ಟೂ ಸಾಮಾಗ್ರಿ ಸುರುವಿ ಗೊಟ.. ಗೊಟ.. ಗೊಟಾಯಿಸಿ ಪರಾತಕ್ಕೆ ಸುರುವಿದೆ. ಈಗಲೆ ಕಟ್ಟುವದೋ.. ಆರಿದ ನಂತರವೋ..? ಮತ್ತೆ ಓವರ್ ಟು ಅವ್ವಾ.. ತಲೆ ಇದ್ದಲ್ಲಿಂದಲೆ ಓಡಿತು. ಆರಿದ ಮೇಲೆ ಉಂಡೆಯಾಗುವದಿಲ್ಲವೋ ಮಂಕೆ. ಉಂಡೆ ಬಂಡೆಯಾಗುತ್ತದೆ.. ಅವ್ವ ತಿಳಿ ಹೇಳಿದಂತಾಯಿತು. ಅಂಗೈಗೆ ಎಣ್ಣೆ ನೀರು ಸವರಿಕೊಂಡು ಸುಡು ಸುಡುವದನ್ನೆ ಎಳೆದುಕೊಂಡೆ. ಬರೆ ಕೊಟ್ಟಂತಾಯಿತು. ಹಾ.. ಎಂದಿತು ಜೀವ. ಅದು ನೋವೋ ಸುಖವೋ ಅಂತೂ ಉಂಡೆಗಳೆಂಬ ಗುಂಡುಗಳು ತಯಾರಾದವು.

ತಿನ್ನುವ ಆಸೆ ಮಾಡುವಷ್ಟರಲ್ಲಿ ತಣ್ಣಗಾಗಿ ಹೋಗಿತ್ತು. ತಿನ್ನೋಣವೆಂದು ಬಾಯಿಗಿಡುವಷ್ಟರಲ್ಲೇ ನನ್ನಾಕೆ ಅಡ್ಡ ಕೈ ಮಾಡಿ ತಡೆದಳು. ದೇವರಿಗೆ ನೈವೇದ್ಯ ಆಗಬೇಕಲ್ಲವೆ. ಅದೂ ಆಯಿತು. ಆಸೆಗಣ್ಣುಗಳಿಂದ ಉಂಡೆ ನೋಡಿದೆ. ಬಾಯಿಯಲ್ಲಿ ಲಾಲಾರಸ ಜಿನುಗಿ ಸೋರಿ ಇಳಿವಷ್ಟರಲ್ಲಿ ಸೋಡರ್ ಎನಿಸಿದೆ. ಒಂದು ಉಂಡೆ ತೆಗೆದು ಬಾಯಿಗಿಟ್ಟೆ ಕಚ್ಚಿದೆ. ಊಹೂಂ.. ಮಣಿಯುತ್ತಿಲ್ಲ. ಪಾಕದ ಹದ ಮೀರಿ ಉಂಡೆಯೆಂಬುದು ಬಂಡೆಯಾಗಿ ಹೋಗಿದೆ. ಉಂಡೆ ತಿನ್ನಲು ಹೋಗಿ ಹಲ್ಲು ಮುರಿದುಕೊಂಡ ಭೂಪ ಎಂಬ ಸುದ್ದಿಗೆ ಗ್ರಾಸವಾಗಬಾರದೆಂದು, ಉಂಡೆಯನ್ನು ಕೆಳಗಿಟ್ಟು ಅದರ ನೆತ್ತಿಯ ಮೇಲೆ ಗುಂಡುಕಲ್ಲಿನಿಂದ ಪ್ರಹಾರ ಮಾಡಿದೆ. ಟಣ್ಣನೆ ಜಿಗಿಯಿತದು. ನನ್ನಾಕೆ ಹುಡುಕಿ ತಂದಳು. ಆಕೆ ಮಾಡುವ ಕೆಲಸಗಳು ಇಂತವು ಮಾತ್ರ. ಮತ್ತೊಮ್ಮೆ ಉಂಡೆಯ ಗುರುತ್ವ ಗುರುತಿಸಿ ಗತ ಪ್ರಹಾರ್ ಎಂದು ಅಬ್ಬರಿಸಿ ನೆತ್ತಿಯ ಮೇಲೆ ಕುಟ್ಟಿದೆ. ಉಂಡೆ ವಿಭಜನೆಯಾಯಿತು. ಜರಾಸಂಧನನ್ನು ಎರಡು ಹೋಳಾಗಿಸಿದ ಸಾಹಸ ಭೀಮ ವಿಜಯ ನನ್ನದು.

ಉಂಡೆಯ ಹೋಳೊಂದನು ಬಾಯಿಗಿಟ್ಟೆ. ಥೂ… ಸಿಹಿಯೋ ಸಿಹಿ. ಬರೀ ಬೆಲ್ಲವೆ ತುಂಬಿ ಹೋಗಿದೆ. ಪದಾರ್ಥ ಮತ್ತು ಪಾಕದ ಅನುಪಾತ? ಮಾಡಿದ್ದುಣ್ಣೋ ಮಹರಾಯ ಎಂಬಂತೆ ಎಲ್ಲವನ್ನೂ ನಾನೇ ತಿನ್ನಬೇಕೆಂಬ ಫರ್ಮಾನು ನನ್ನಾಕೆಯಿಂದ ಹೊರಬಿತ್ತು. ಯಾಕೋ ಈ ಉಂಡೆ ತಯಾರಿಕೆ ಕುರಿತು ಆರು ತಿಂಗಳ ಸರ್ಟೀಫಿಕೇಟ್ ಕೋರ್ಸ್‌ ಬೇಕೆನಿಸಿತು.