ನನಗೊಮ್ಮೆ ಆಕಸ್ಮಿಕವಾಗಿ ರಮಾನಂದರ ‘ವೈದ್ಯನ ಶಿಕಾರಿ’ ಎಂಬ ಪುಸ್ತಕ ಓದಲು ಸಿಕ್ಕಿತು. ಈ ಲೇಖಕರ ಹೆಸರನ್ನು ಹಿಂದೆ ನಾನು ಕೇಳಿರಲಿಲ್ಲ. ಆದರೆ ಪುಸ್ತಕ ಓದಲು ಆರಂಭಿಸುತ್ತಿದ್ದಂತೆ ಕನ್ನಡದ ಅತ್ಯುತ್ತಮ ಗದ್ಯಬರೆಹವನ್ನು ಓದುತ್ತಿದ್ದೇನೆ ಎಂದು ಅನಿಸತೊಡಗಿತು. ಪುಸ್ತಕ ಒಂದೇ ಬೈಠಕ್ಕಿನಲ್ಲಿ ಮುಗಿಯಿತು. ಬರೆಹವೂ ಅದರೊಳಗಿನ ಜೀವನದೃಷ್ಟಿಯೂ ನನ್ನ ಮನಸ್ಸಿಗೆ ಹತ್ತಿರವಾದುದು ಎಂದು ಕೂಡ ಅನಿಸಿತು. ಕೂಡಲೇ ಪುಸ್ತಕದ ಪ್ರಕಾಶಕರಿಂದ ಲೇಖಕರ ವಿಳಾಸ ಪಡೆದು, ಪುಸ್ತಕದ ಓದಿನಿಂದ ನನಗಾಗಿರುವ ಸಂತೋಷವನ್ನು ಬರೆದು ಲೇಖಕರಿಗೆ ತಿಳಿಸಿದೆ. ಡಾ. ರಮಾನಂದ ಅವರು ನನಗೆ ಆಪ್ತ ಮಿತ್ರರಾದರು. ಅಂದಿನಿಂದ ಅವರು ಏನನ್ನಾದರೂ ಬರೆದರೆ ನನಗೆ ಕಳಿಸಿಕೊಡುವುದು, ನಾನದನ್ನು ಓದಿ ಪ್ರತಿಕ್ರಿಯೆ ಕೊಡುವುದು ನಡೆಯುತ್ತ ಬಂದಿದೆ. ಎಷ್ಟೊ ಸಲ ನಾವು ಪರಸ್ಪರ ಭೇಟಿಯಾಗಿದ್ದೇವೆ. ಕರ್ನಾಟಕದ ನಾನಾ ಭಾಗದಲ್ಲಿ ಪಶುವೈದ್ಯರಾಗಿ ಕೆಲಸ ಮಾಡುತ್ತ ಅವರು ಪಡೆದಿರುವ ಅನುಭವವನ್ನು ನನ್ನೊಡನೆ ಹಂಚಿಕೊಂಡಿದ್ದಾರೆ. ಈಚೆಗೆ ಅವರು ಕರ್ನಾಟಕದ ಮಠ ಮತ್ತು ಗುಡಿಗಳಲ್ಲಿರುವ ಆನೆಗಳ ಆರೋಗ್ಯವನ್ನು ತಪಾಸಣೆ ಮಾಡುತ್ತ ಹೊಸಪೇಟೆಯ ನನ್ನ ಮನೆಗೂ ಬಂದರು. ಅವರು ಮಾಡಿರುವ ತಿರುಗಾಟ ಕಂಡು ಅಸೂಯೆ ಆಗುತ್ತದೆ. ಈ ವಯಸ್ಸಿನಲ್ಲೂ ಅವರು ಮಾಡುತ್ತಿರುವ ತಿರುಗಾಟ ಕಂಡು ವಿಸ್ಮಯ ಆಗುತ್ತದೆ. ಅಂತೂ ಅವರ ಬರೆಹದ ಅಭಿಮಾನಿ ನಾನು, ಈಗ ಅವರ ಅಪ್ಪಣೆಯ ಮೇರೆಗೆ ಮುನ್ನುಡಿ ಬರೆಯುವ ಸಂತೋಷಕರ ಕಷ್ಟಕ್ಕೆ ಒಳಗಾಗಿದ್ದೇನೆ.

ನನಗೆ ರಮಾನಂದರ ಬರೆಹದಲ್ಲಿ ಇಷ್ಟವಾದ ನಾಲ್ಕು ಸಂಗತಿಗಳಿವು:
ಮೊದಲನೆಯದಾಗಿ- ಇಲ್ಲಿನ ವಿಶಿಷ್ಟ ಅನುಭವ ಲೋಕ. ಪ್ರಾಣಿವೈದ್ಯನಾಗಿ-ಗುಲಬರ್ಗ ಜನರ ಬಾಯಲ್ಲಿ ಹೈವಾನ್ ಡಾಕ್ಟರಾಗಿ- ಲೇಖಕರು ಕರ್ನಾಟಕದ ನಾನಾ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರಾದವರು ಸಹಜವಾಗಿ ಅಲ್ಲಿನ ಬದುಕಿನ ದುರಂತಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಅಂತಹ ಅಂತಃಕರಣವನ್ನು ಕಲಕುವಂತಹ ದುರಂತಾನುಭವಗಳು ‘ವೈದ್ಯನ ಶಿಕಾರಿ’ಯಲ್ಲೂ ಇದ್ದವು. ಇಲ್ಲಿಯೂ ಇವೆ. ಸಾವು ಬದುಕಿನ ನಡುವೆ ನಡೆಯುವ ತೀವ್ರತರವಾದ ಹೋರಾಟದ ಈ ಅನುಭವಲೋಕವನ್ನು ಪಶುವೈದ್ಯ ವೃತ್ತಿಯಲ್ಲಿದ್ದು ಲೇಖಕರೂ ಚಿಂತಕರೂ ಆಗಿರುವ ನನ್ನ ಗೆಳೆಯರಾದ ಡಾ. ಮಿರ್ಜಾ ಬಶೀರ್ ಹಾಗು ಡಾ. ರಘು ಅವರ ಜತೆಗಿನ ಮಾತುಕತೆಯಲ್ಲಿ ನಾನು ಖುದ್ದು ಕೇಳಿದ್ದೇನೆ. ಅಂತಹ ವಿಶಿಷ್ಟ ಅನುಭವಗಳ ಲೋಕವೊಂದು ಇಲ್ಲಿ ಕೂಡ ತೆರೆದುಕೊಳ್ಳುತ್ತದೆ. ‘ವೈದ್ಯನ ಶಿಕಾರಿ’ಯಲ್ಲಿ  ಅನುಭವಗಳು ಕಾಡು ಮತ್ತು ಕಾಡಿನ ಪ್ರಾಣಿಗಳ ಜತೆಗೆ ಹೆಚ್ಚಾಗಿ ಇದ್ದರೆ, ಇಲ್ಲಿ ಅವು ಊರು ಮತ್ತು ಊರಿನ ಪ್ರಾಣಿಗಳ ಸಹವಾಸದಲ್ಲಿ ಮೂಡಿ ಬಂದಿವೆ. ಊರಿನ ಪ್ರಾಣಿಗಳು ಎಂದರೆ ಸಾಕುಪ್ರಾಣಿಗಳು ಮಾತ್ರವಲ್ಲ, ಅವುಗಳ ಮಾಲಕರೂ ಹೌದು. ನಮ್ಮ ಸಮಾಜದಲ್ಲಿ ಊರೆಂದರೆ, ಜಾತಿ ಧರ್ಮ ರಾಜಕಾರಣ ಆಸ್ತಿ ಗಂಡು ಹೆಣ್ಣು ಮುಂತಾದ ಅನೇಕ ಅಧಿಕಾರಸ್ಥ ಉಪಾಧಿಗಳಿಂದ ಕೂಡಿದ ಸ್ವರ್ಗ-ನರಕಗಳ ಮಿಶ್ರಣ; ಎಂತಲೇ ಹಸಿವು ಹಾಗೂ ಆತ್ಮರಕ್ಷಣೆ, ಕಾಮದಂತಹ ಪ್ರವೃತ್ತಿಗಾಗಿ ಕ್ರಿಯಾಶೀಲವಾಗುವ ಕಾಡಿನ ಪ್ರಾಣಿಗಳ ಬದುಕಿಗಿಂತಲೂ ಅದು ಹೆಚ್ಚು ಅನೂಹ್ಯವಾದುದು, ಸಂಕೀರ್ಣವಾದುದು. ಇಂತಹ ಬದುಕನ್ನು ಪಶುವೈದ್ಯರೊಬ್ಬರು ತಮ್ಮ ವೃತ್ತಿಯಿಂದಲೇ ಸಿಕ್ಕಿರುವ ಪ್ರಾಣಿಮನೋವಿಶ್ಲೇಷಣೆ ದೃಷ್ಟಿಕೋನದಿಂದ ನೋಡಿರುವುದರಿಂದ, ಒಟ್ಟು ನೋಟಕ್ಕೇ ಒಂದು ದಾರ್ಶನಿಕತೆ ಬಂದು ಬಿಟ್ಟಿದೆ. ಹಾಗೆ ಕಂಡರೆ, ಪ್ರಾಣಿಲೋಕದ ಕೋಲಾಹಲಕ್ಕಿಂತ ಹೆಚ್ಚಿನದಾಗಿ ಇಲ್ಲಿರುವುದು ನರಪ್ರಾಣಿಯ ಕೋಲಾಹಲವೇ.

ಎರಡನೆಯದಾಗಿ- ಅನುಭವವನ್ನು ಮಂಡಿಸುವ ವಿಶಿಷ್ಟ ವರಸೆಗಳು. ರಮಾನಂದರು ಅನುಭವಗಳನ್ನು ಚೆಲ್ಲಾಡುವುದಿಲ್ಲ. ವೈಭವೀಕರಿಸುವುದಿಲ್ಲ. ಎಳೆದಾಡುವುದಿಲ್ಲ. ರೋಚಕತೆಗಾಗಿ ಬಣ್ಣಕಟ್ಟಿ ತೋರಿಸುವುದಿಲ್ಲ. ಬದಲಾಗಿ ಅವನ್ನು ತಣ್ಣನೆಯ ಧಾಟಿಯಲ್ಲಿ ಮಂಡಿಸುತ್ತಾರೆ. ಅವನ್ನು ಹಾಗೆ ಮಂಡಿಸುವ ಕ್ರಮದಲ್ಲಿಯೇ ಅವು ತಮ್ಮೊಳಗಿಂದ ಬಾಳಿನ ದರ್ಶನ ಹೊಮ್ಮಿಸುವಂತೆ ಮಾಡುತ್ತಾರೆ. ಅವರ ಅನುಭವ ಮಂಡನೆಯ ಕ್ರಮದಲ್ಲೇ ವಿನೋದದ ದೃಷ್ಟಿಯಿರುವ ಕಾರಣ, ಇಡೀ ಬರೆಹ ಲವಲವಿಕೆಯಿಂದ ಕೂಡಿ ಆಕರ್ಷಕವಾಗಿದೆ. ಈ ದೃಷ್ಟಿಕೋನವನ್ನು ಅವರು ಬಹುಶಃ ಅವರಿಗೆ ಪ್ರಿಯವಾದ ಪಶುವೈದ್ಯಲೇಖಕ ಇಂಗ್ಲೆಂಡಿನ ಜೇಮ್ಸ್ ಹೆರಿಯಟ್‌ನಿಂದಲೊ ತೇಜಸ್ವಿ ಬರೆಹದಿಂದಲೊ ಪಡೆದಿರುವಂತೆ ಕಾಣುತ್ತದೆ. ಕೆಲವೊಮ್ಮೆ ತೇಜಸ್ವಿ ಪ್ರಭಾವವು ಹೆಚ್ಚಾಗಿದೆ ಎಂದೂ ಕೂಡ ಅನಿಸುತ್ತದೆ.

ಮೂರನೆಯದಾಗಿ- ಇಲ್ಲಿನ ಬರೆಹದಲ್ಲಿರುವ ಭಾಷೆಯ ಬಳಕೆ. ಕರ್ನಾಟಕದ ಬೇರೆಬೇರೆ ಪ್ರದೇಶಗಳ ಅನುಭವಗಳು ಇಲ್ಲಿದ್ದು, ಅವನ್ನು ಆಯಾ ಪ್ರಾದೇಶಿಕ ಭಾಷೆಯಲ್ಲೇ ಆಯಾ ಪಾತ್ರಗಳ ಮೂಲಕ ಮಾತಾಡಿಸುವ ನಾಟಕೀಯ ಕುಶಲತೆ ಇಲ್ಲಿನ ಬರೆಹಕ್ಕೆ ನೈಜತೆಯ ಆಯಾಮವನ್ನು ತಂದಿತ್ತಿದೆ. ಇದಕ್ಕೆ ಸನ್ನಿವೇಶವನ್ನು ಕಣ್ಣಿಗೆ ಕಟ್ಟಿದಂತೆ, ಹಸಿಗೋಡೆಗೆ ಹರಳು ಒಗೆದಂತೆ ಹೇಳುವ ವರ್ಣನ ಕುಶಲತೆಯೂ ತನ್ನ ಕೈಯನ್ನು ಜೋಡಿಸಿದೆ. ಇಲ್ಲಿ ಬರುವ ಅನೇಕ ಪಾತ್ರಗಳು ಕನ್ನಡದ ಶ್ರೇಷ್ಠ ಕತೆಗಾರರು ಕಡೆದಿರುವ ಪಾತ್ರಗಳಿಗೆ ಸಮನಾಗಿವೆ.

ನಾಲ್ಕನೆಯದಾಗಿ- ಇಲ್ಲಿನ ಬರೆಹದಲ್ಲಿರುವ ಅಪೂರ್ವ ಜೀವನದರ್ಶನ. ಘಟನೆಗಳನ್ನು ನಿರೂಪಿಸುತ್ತಲೇ ಅವುಗಳ ಹೊಟ್ಟೆಯಿಂದ ಮನುಷ್ಯ ಜೀವನದ ವಿಚಿತ್ರ ಸ್ವಭಾವಗಳನ್ನು ಕಾಣಿಸುವ ಪರಿಯಲ್ಲಿ ಈ ದಾರ್ಶನಿಕತೆ ಹೊಮ್ಮುತ್ತದೆ. ಯಾವಾಗಲೂ ಗಾಢ ವಿಷಾದದೊಳಗೆ ಹುಟ್ಟುವ ವ್ಯಂಗ್ಯಕ್ಕೆ ತಾತ್ವಿಕ ಆಳವೂ ದೊರಕಿಬಿಡುತ್ತದೆ. ಲೇಖಕರು ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತ, ಅಧಿಕಾರಶಾಹಿ ಮತ್ತು ರಾಜಕೀಯ ವ್ಯವಸ್ಥೆಯ ಒಳಗಿದ್ದ ಕ್ರೌರ್ಯ ಅಮಾನುಷತೆಯನ್ನು ಬರೆಹ ಕಾಣಿಸುವ ವ್ಯಂಗ್ಯದ ಧಾಟಿ ಇಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ; ಬಾಳ ಹೊಡೆತಕ್ಕೆ ಸಿಕ್ಕು ನುಗ್ಗಾದ ಜೀವಗಳ ಚಿತ್ರಗಳನ್ನು ಕೊಡುವ ವಿಧಾನ ಎಷ್ಟೊಂದು ಕಸುವುಳ್ಳದ್ದಾಗಿದೆ. ಇಲ್ಲಿನ ಬರೆಹದೊಳಗೆ ಒಳಜಲದಂತೆ ಮಾನವೀಯತೆಯು ಹರಿಯುತ್ತಿದ್ದು ಓದುವ ಎಲ್ಲರಿಗೂ ಅದು ಮುಟ್ಟುವಂತಿದೆ. ಈ ಕಾರಣದಿಂದ ಮಾತ್ರವಲ್ಲದೆ, ರಮಾನಂದರ ಜತೆ ಮಾತುಕತೆಯಾಡಿರುವ ಹಿನ್ನೆಲೆಯಲ್ಲಿ ಕೂಡ ಹೇಳುತ್ತಿದ್ದೇನೆ: ರಮಾನಂದರು ಅನುಭವಗಳ ಹಂದರದ ಮೇಲೆ ಬಾಳನ್ನು ಕುರಿತು ತಮ್ಮ ದಾರ್ಶನಿಕ ಚಿಂತನೆಯನ್ನು ಹೇಳುವ ಆತ್ಮಚರಿತ್ರಾತ್ಮಕವಾದ ಬೇರೊಂದು ಕೃತಿಯನ್ನೇ ಬರೆಯುವಂತಾಗಬೇಕು. ಆ ಕೃತಿ ಕೇವಲ  ನೀತಿಪ್ರಧಾನವಾಗಿ ಇರಲು ಸಾಧ್ಯವಿಲ್ಲ ಎಂಬುದನ್ನು, ಇಲ್ಲಿನ ಬರೆಹದಲ್ಲಿರುವ ಜನಪರತೆ ಮತ್ತು ರಾಜಕೀಯ ವಿಶ್ಲೇಷಣೆಯನ್ನು ಓದುವ ಯಾರೂ ಊಹಿಸಬಹುದು.

ಕನ್ನಡ ಸಾಹಿತ್ಯವು ಅದರ ಪ್ರಧಾನಧಾರೆಯ ಬರೆಹಗಾರರಿಂದ ಮಾತ್ರವಲ್ಲ, ಇಂತಹ ಹಲವಾರು ಅನಾಮಿಕ ಲೇಖಕರಿಂದಲೂ ತನ್ನ  ಸಮೃದ್ಧಿಯನ್ನು ಪಡೆದಿದೆ. ಬೇರೆಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ರಮಾನಂದ ಅವರಂತಹ ಅನುಭವ ಸಂಪನ್ನರು, ವಿಶಿಷ್ಟ ಚಿಂತಕರು ಹೆಚ್ಚುಹೆಚ್ಚು ಬರೆಯುವಂತಾಗಬೇಕು. ನಾನು ಈಗಲೂ ಇಷ್ಟಪಟ್ಟು ಓದುವ ಬ್ರಿಟೀಶ್-ಮೈಸೂರು ರಾಜ್ಯದಲ್ಲಿ ರೆವಿನ್ಯೊ ಅಧಿಕಾರಿಯಾಗಿದ್ದ ನವರತ್ನರಾಮರಾಯರ ‘ಕೆಲವು ನೆನಪುಗಳು’ ಕೃತಿಯನ್ನು ನೆನಪಿಸಬಲ್ಲ ಕೃತಿಯಿದು. ಆದರೂ ನನ್ನ ಪ್ರಿಯವಾದ ಕೃತಿ ‘ವೈದ್ಯನ ಶಿಕಾರಿ’ಯೇ. ಆದರೂ ಇದು ಬೇರೊಂದು ಕಾರಣಕ್ಕೆ ನನಗೆ ಮುಖ್ಯವಾಗಿದೆ. ಜನರನ್ನು ಮಾತಾಡಿಸುವ, ಅವರ ಜತೆ ಒಡನಾಡುವ,  ಅವರಾಡುವ ಮಾತನ್ನು ಕಿವಿಯಾರೆ ಕೇಳುವ, ನಾಡನ್ನು ತಿರುಗಾಡುವ ಸೂಕ್ಷ್ಮಸಂವೇದನೆಯ ವ್ಯಕ್ತಿಗಳು ಬರೆವ ಬರೆಹಕ್ಕೆ, ನಮ್ಮ ಮನಸ್ಸನ್ನು ಉದ್ದೀಪ್ತಗೊಳಿಸುವ ಎಂತಹುದೊ ಶಕ್ತಿಯಿರುತ್ತದೆ. ಅಂತಹ ಶಕ್ತಿಯುಳ್ಳ ಇಲ್ಲಿನ ಬರೆಹಗಳನ್ನು ಕನ್ನಡದ ವಾಚಕರು ಓದಿ ಖಂಡಿತವಾಗಿಯೂ ಸಂತೋಷ ಪಡುವರು.