ನಾವು ಹೆಂಗಸರು…

ಯಾರು ಮನೆಯಲ್ಲಿ?

ರಾತ್ರಿಯುಡುಪಿನ ಮೇಲೆ
ಮನೆಯಲ್ಲಿ ಹಾಕುವ ಕೋಟಿನ ಗುಂಡಿ ಚಕ್ಕನೆ ಬಿತ್ತು
ತಿರುಗಿ ಹೇಳಲು ದನಿಯೆ ಹೊರಡದಾಯ್ತು

ಯಾರಿದ್ದೀರಿ ಮನೆಯಲ್ಲಿ?

ಅವರಂತೂ ಯಾವುದೋ ಮಾಡಲೇಬೇಕಾದ ಕೆಲಸಕ್ಕೆ ಬಂದಂತಿದೆ
ಇನ್ನೂ ಅರ್ಧ ನಿದ್ದೆ
ಉತ್ತರಿಸಲು ಪದಗಳಿಗೆ ತಡಕಾಡುತ್ತಿರುವ ಅಮ್ಮ
ಹಿಮದಂತೆ ಮರಗಟ್ಟುತ್ತಿರುವ ಅವಳ ಮುಖ, ದೇಹ
ನಾನು ರೂಮಿನಿಂದ ರೂಮಿಗೆ ಹಾರಿ
ದೀಪ ಹತ್ತಿಸಿದೆ

ಊರಿನ ಸುರಕ್ಷತೆಗೆ
ಯಾರೂ ಅತಿಥಿಗಳೇ ಉಳಿದಿರದ
ನಾಯಿಯೂ ಕೂಡ ಇರದ
ಮನೆಗಳ ಹುಡುಕುತ್ತಾ ಅವರು

ಎಲ್ಲಿದ್ದಾರೆ ಈ ಮನೆಯ ಗಂಡಸರು?

ಒಂದು ಸಾಮಾನ್ಯ ಇರುವೆಗೂ ಹಾನಿ ಮಾಡದ
ನಮ್ಮನ್ನು, ನಮ್ಮ ಮೆದುಳನ್ನು ಮೂಸುತ್ತ
ಅನುಮಾನದ ನೋಟ ನೋಡಿದರು ಸುತ್ತ

ನೀವಿಬ್ಬರೇನಾ?

ಬೇರೆ ದಿನಗಳಾಗಿದ್ದರೆ ಅಮ್ಮ ಚುರುಕಾಗಿ ಸುಳ್ಳು ಹೇಳುತಿದ್ದಳು
ಗಂಡ ಇನ್ನೇನು ಬಂದೇಬಿಡಬಹುದು
ಮತ್ತು ಮಗ ಕೆಲಸಕ್ಕೆ ಹೋಗಿದ್ದಾನೆಂದು
ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳದಲ್ಲಿ, ಸರಿಯಾದ ಪದಗಳನ್ನು ಬಳಸುವ ಅವಳೂ ಇವತ್ತು ಕಕ್ಕಾಬಿಕ್ಕಿ

ನಕ್ಷತ್ರವಿರುವ ಸಮವಸ್ತ್ರ ಧರಿಸಿದ
ಕೈಯಲ್ಲಿ ಬಂದೂಕು ಹಿಡಿದ
ಅಷ್ಟೂ ಜನರ ಮೆಲೆ
ನಾನು ಚೀರಿದೆ

ಹೂಂ, ಇನ್ಯಾರು?
ನಾವೇ ಗಂಡಸರು
ಈ ಮನೆಯಲ್ಲಿ ಬದುಕುಳಿದವರು.