ಸುತ್ತಮುತ್ತಲ ಕಾರ್ಮಿಕ ಮಕ್ಕಳ ಬಗ್ಗೆ ನಮ್ಮ ಧೋರಣೆ ಹೀಗಿರಲು ಬೀದಿ ಬದಿಯಲ್ಲಿ ಅನಾಥ ಬಿದ್ದಿರುವ ಮಕ್ಕಳನ್ನಂತೂ ಕಂಡೂ ಕಾಣದಂತೆ ಒಂದು ಬಗೆಯಲ್ಲಿ ತಪ್ಪಿಸಿಕೊಂಡು ಓಡಿಬಿಡುತ್ತೇವೆ. ಅಲ್ಲಿ ಕನಿಕರವೂ ಇರುವುದಿಲ್ಲ, ಬದಲಾಗಿ ಎಷ್ಟೋ ಜನಕ್ಕೆ ಅವರು ಕಿರಿಕಿರಿ ಅನಿಸುತ್ತಾರೆ. ಮಕ್ಕಳ ಸಮಸ್ಯೆಗೆ ನಮಗೆ ತಕ್ಷಣಕ್ಕೆ ದೂರಲು ಸಿಗುವುದು ಹೆತ್ತವರು. ಸರ್ಕಾರಗಳೂ ಮೈಕೊಡವಿಕೊಳ್ಳುವುದರಿಂದ ಈ ಕಾರಣವನ್ನು ಎದುರಿಗಿಟ್ಟಿದ್ದೇನೆ. ಸಾಕಲಾಗದವರು ಯಾಕೆ ಹೆರಬೇಕಿತ್ತು ಎಂದುಬಿಡುತ್ತೇವೆ. ನಾವು ಒಂದು ಹೆಜ್ಜೆ ಮುಂದೆ ಸಾಗಿ ಯೋಚಿಸಬೇಕಿದೆ. ಹಾಗಿದ್ದಲ್ಲಿ ಅಶಕ್ತರು ಮಕ್ಕಳನ್ನು ಹೆರಲೇಬಾರದೇನು?
ಮಧುಸೂದನ್ ವೈ.ಎನ್. ಅಂಕಣ

 

ಹಕ್ಕುಗಳು ಯಾವುದೇ ಜೀವಿಯ ಸ್ವಂತಿಕೆ ಸ್ವತಂತ್ರದ ಪ್ರತೀಕ. ಮನುಷ್ಯನ ವಿಷಯದಲ್ಲಿ ಹಕ್ಕುಗಳು ಕೇವಲ ರಕ್ಷಣಾತ್ಮಕ ಕೋಟೆಯಾಗಿರದೆ ರಚನಾತ್ಮಕ ರೆಕ್ಕೆಗಳೂ ಆಗಿರುವವು. ಒಂದರ್ಥದಲ್ಲಿ ಇವು ಮನುಷ್ಯನ ಆತ್ಮವಿಮರ್ಶೆಯ ಸೃಜನಶೀಲತೆಯ ಪ್ರತಿಫಲ. ಮನುಷ್ಯನೇ ಇರದಿದ್ದಲ್ಲಿ ಪ್ರಾಣಿಗಳ ಹಕ್ಕುಗಳಿರುತ್ತಿದ್ದವೇ? ಮನುಷ್ಯ ಕಾಡುಮನುಷ್ಯನೇ ಆಗಿ ಉಳಿದಿದ್ದಲ್ಲಿ ಮಾನವಹಕ್ಕುಗಳು ಇರುತ್ತಿದ್ದವೇ? ಇರಲಿಕ್ಕಿಲ್ಲವೆನಿಸುತ್ತದೆ. ಪೀಟರ್ ಪಾರ್ಕರ್ ನ ಸಿದ್ಧಾಂತ, ಅಗಾಧ ಶಕ್ತಿಯೊಂದಿಗೆ ಅಗಾಧ ಜವಾಬ್ದಾರಿಯೂ ಬರುತ್ತದೆ ಎಂಬುದನ್ನು ಮನುಷ್ಯ ಎಂದು ಮರೆತನೋ ಅಂದಿನಿಂದ ಹಕ್ಕುಗಳ ಅಗತ್ಯ ಹುಟ್ಟಿಕೊಂಡಿತು. ಅರ್ಥಾತ್, ಮೂಲಭೂತವಾಗಿ ಹಕ್ಕುಗಳ ಪರಿಕಲ್ಪನೆ ಮೂಡಿದ್ದು ರಕ್ಷಣಾತ್ಮಕ ದೃಷ್ಟಿಯಿಂದ. ಮಾನವನ ಮೋಜಿನ ತಿಕ್ಕಲುತನದಿಂದ ಪ್ರಾಣಿಗಳನ್ನು ರಕ್ಷಿಸಲು, ಅಧಿಕಾರ ಬಲ ತೋಳ್ಬಲಗಳ ಮದದಿಂದ ಸಹಜೀವಿಗಳ ಮೇಲಿನ ಸವಾರಿ ತಪ್ಪಿಸಲು. ಅಂತೆಯೆ ಹಕ್ಕುಗಳು ಪ್ರಜಾಪ್ರಭುತ್ವ ಸಮಾಜದ ಶ್ರಮವೆಂದರೆ ತಪ್ಪೇನಿಲ್ಲ. ಕಾರಣ, ನಮ್ಮಲ್ಲಿರುವ ಈಗಿನ ಎಲ್ಲ ಹಕ್ಕುಗಳು ಕಳೆದ ನೂರು ವರ್ಷಗಳಿಂದೀಚೆಗೆ ರೂಪುಗೊಂಡಿರುವವು. ಹಿಂದೆ ಇರಲಿಲ್ಲವೆಂದಲ್ಲ, ಆಗೆಲ್ಲ ಹಕ್ಕುಗಳು ನಾಗರೀಕತೆಯ ನಡುವಳಿಕೆಗಳಾಗಿದ್ದವು. ಯಾವುದೇ ನಾಗರೀಕತೆ, ಧರ್ಮ, ದೇಶ, ರಾಜಕೀಯ ಪಕ್ಷ ಕಾಲಕ್ರಮೇಣ ಕೊಳೆಯಲಾರಂಭಿಸುತ್ತವೆ. ಅಂತೆಯೆ ನಾಗರೀಕತೆಯೂ(ಧರ್ಮ, ಆಡಳಿತ, ಸಮಾಜ) ಸಹ ಕೊಳೆಯುತ್ತ ಬಂದು ಸಾಮಾನ್ಯ ಮನುಷ್ಯನ ಹಕ್ಕು ಕಾಪಾಡುವ ಬದಲಿಗೆ ಕಸಿಯುವ ಹಂತಕ್ಕೆ ತಲುಪಿರುವುದು. ಈಗಲೂ ನಾವು ವಿವಿಧ ರಾಜಕೀಯ ಸಾಮಾಜಿಕ ವ್ಯವಸ್ಥೆಗಳ ನಡುವಿನ ಹಕ್ಕುಗಳಲ್ಲಿನ ವ್ಯತ್ಯಾಸ ಕಾಣಬಹುದು.

ಧರ್ಮ ಪ್ರಧಾನ ಸಮಾಜದ ದೇಶಗಳಲ್ಲಿನ ಮಹಿಳೆಯ ಹಕ್ಕುಗಳಿಗೂ ಧರ್ಮ ನಿರಪೇಕ್ಷ ಸಮಾಜದ ಮಹಿಳೆಯ ಹಕ್ಕುಗಳಿಗೂ ಅಜಗಜಾಂತರ. ಪ್ರಜಾಪ್ರಭುತ್ವ ದೇಶಗಳಲ್ಲಿನ ಮಾನವಹಕ್ಕುಗಳಿಗೂ ರಾಜಾಡಳಿತ/ಸೈನ್ಯಾಡಳಿತ ದೇಶಗಳಲ್ಲಿನ ಮಾನವಹಕ್ಕುಗಳಿಗೂ ಇರುವ ಅಂತರ ಅಪಾರ. ಆದರೆ ಆಶ್ಚರ್ಯಕರ ರೀತಿಯಲ್ಲಿ ಮಕ್ಕಳ ಹಕ್ಕುಗಳು ಮಾತ್ರ ಸಾರ್ವತ್ರಿಕವಾಗಿ ಒಪ್ಪಿಗೆಯಾಗಿವೆ. ಯಾಕಿರಬಹುದು? ಉತ್ತರ ಬಹಳ ಸರಳ. ಗಂಡಾಗಲೀ ಹೆಣ್ಣಾಗಲೀ ರಾಜನಾಗಲೀ ಕೂಲಿಯಾಗಲಿ ಪ್ರತಿಯೊಬ್ಬ ಮಾನವ ಜೀವಿಯೂ ಬಾಲ್ಯಾವಸ್ಥೆಯನ್ನು ದಾಟಿಬಂದಿರುವವರೆ. ಬಾಲ್ಯದಲ್ಲಿ ಒಂದಲ್ಲ ಒಂದು ರೀತಿ, ತಿಳಿದೋ ತಿಳಿಯದೆಯೋ ದೊಡ್ಡವರಿಂದ ಶೋಷಣೆಗೊಳಗಾಗಿರುವವರೆ. ಹಾಗಾಗಿ ಮಕ್ಕಳ ಹಕ್ಕುಗಳೊಂದಿಗೆ ಯಾರು ಬೇಕಾದರೂ ಸಹ ತಕ್ಷಣಕ್ಕೆ ಗುರುತಿಸಿಕೊಳ್ಳಬಹುದು. ತಮ್ಮ ಬಾಲ್ಯಕಾಲದಲ್ಲಿ ಯಾವ ಹಕ್ಕಿಂದ ವಂಚಿತರಾಗಿದ್ದೆವೆಂದು ಸುಲಭವಾಗಿ ಗೊತ್ತುಮಾಡಿಕೊಳ್ಳಬಹುದು. ಮನುಷ್ಯನಲ್ಲಿರುವ ಸಹಜ ಕಾಳಜಿಯೆಂದರೆ ತನಗೆ ಹುಟ್ಟುವ ಮಗುವಿಗೆ ತನ್ನ ಕಷ್ಟ ಬರದಿರಲಿ ಎಂಬುದು. ಯಾರು ತಾನೆ ತನಗೆ ದಕ್ಕದ ಹಕ್ಕು ತನ್ನ ಮಗುವಿಗೂ ದಕ್ಕದಿರಲಿ ಎಂದು ಭಾವಿಸುತ್ತಾರೆ?

ವಿಶ್ವಸಂಸ್ಥೆಯು ಕೂಲಂಕುಷವಾಗಿ ಪರಾಮರ್ಶಿಸಿ ಪಟ್ಟಿಮಾಡಿರುವ ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಇರುವ 197 ದೇಶಗಳಲ್ಲಿ ಬರೋಬ್ಬರಿ ನೂರತೊಂಭತ್ತಾರು ದೇಶಗಳು ಸಹಿ ಹಾಕಿವೆ. ಅಂದರೆ ತಾವೆಲ್ಲರೂ ಈ ಹಕ್ಕುಗಳನ್ನು ಕಾನೂನಾತ್ಮಕವಾಗಿ ಸ್ಥಾಪಿಸಿ ಸಂರಕ್ಷಿಸುತ್ತೇವೆಂಬ ಒಪ್ಪಂದ. ಸಹಿ ಹಾಕಿಯೂ ಸಹ ತನ್ನ ದೇಶದಲ್ಲಿನ್ನೂ ಒಪ್ಪಿಸಿಕೊಳ್ಳಲು ಸಾಧ್ಯವಾಗದಿರುವ ಏಕೈಕ ದೇಶ ಯೂ.ಎಸ್.ಎ. ಪಟ್ಟಿಯಲ್ಲಿನ ಕೆಲವು ಹಕ್ಕುಗಳು ದೇಶದ ಸಾರ್ವಭೌಮತ್ವಕ್ಕೆ ಆತಂಕಗಳನ್ನೊಡ್ಡುತ್ತವೆ ಎಂಬುದು ಅಲ್ಲಿನ ರಿಪಬ್ಲಿಕನ್ಸ್ ನ ವಾದ.

ಪಟ್ಟಿ ಶುರುವಾಗುವುದು ಈ ಭೂಮಿ ಮೇಲೆ ಜೀವಿಸಲು ಉಸಿರಾಡಲು ನನಗೂ ಹಕ್ಕಿದೆ ಎಂಬ ಮಗುವಿನ (ಹೆಣ್ಣು ಮಗುವಿನ ಎಂದರೂ ಸರಿಯೆ) ಹಕ್ಕೊತ್ತಾಯದೊಂದಿಗೆ. ಇಂತಹದ್ದೊಂದು ಅಂಶ ಹಕ್ಕಾಗಿ ಸೇರಿಕೊಂಡಿದೆ ಎಂದರೆ ಎಂತಹ ಧಾರುಣ ಸ್ಥಿತಿ ತಲುಪಿದ್ದೇವೆ ನಾವು! ಆದರೆ ಇದು ವಾಸ್ತವ. ಸಾಂಪ್ರದಾಯಿಕ ದೇಶಗಳಲ್ಲಿ ಹೆಣ್ಣುಮಗು ಸಾಮಾಜಿಕ ಹೊರೆಯೆಂಬ ಕಾರಣಕ್ಕೆ ಜೀವನದುದ್ದಕ್ಕೂ ನಿಧನಿಧಾನವಾಗಿ ಕೊಲ್ಲಲ್ಪಡುತ್ತಾಳೆ, ಅಂದರೆ ಶಿಕ್ಷಣ ವಂಚಿತಳಾಗಿ, ಉದ್ಯೋಗ ವಂಚಿತಳಾಗಿ, ಸ್ವಾತಂತ್ರ್ಯ ವಂಚಿತಳಾಗಿ. ಇದೆಲ್ಲ ಅಪ್ಪಿತಪ್ಪಿ ಆಕೆ ಹುಟ್ಟಿಬಿಟ್ಟರೆ. ಹುಟ್ಟುವ ಮೊದಲೇ ಹೆಣ್ಣೆಂದು ಗೊತ್ತಾದರೆ ಭ್ರೂಣಾವಸ್ಥೆಯಲ್ಲೆ ಹತ್ಯೆಯಾಗುತ್ತದೆ, ಗರ್ಭಪಾತದ ಮೂಲಕ! ಕರ್ನಾಟಕದ ಒಂದು ಮೂಲೆಯಲ್ಲಿ ಜನ ಹೆಜ್ಜೆ ಮುಂದೆ ಹೋಗಿದ್ದಾರೆಂಬ ಸುದ್ದಿಯಿದೆ. ಅಲ್ಲಿ ಕೆಲವು ಸಾವಿರ ರುಪಾಯಿಗಳಿಗೆ ನಾಟಿ ಔಷಧಿ ಕೊಡಲಾಗುತ್ತದಂತೆ, ಗಂಡು ಬೀಜ ಮೊಳೆಯಲು! ಹಾಗೆ ನೋಡಿದರೆ ಈ ಕಡೆಯ ಪ್ರಕರಣ ತಕ್ಷಣಕ್ಕೆ ಅರಿವಿಗೆ ನಿಲುಕದ ಆದರೆ ಮೂರರಲ್ಲೇ ಅತ್ಯಂತ ಘನಘೋರ ಕೃತ್ಯ. ಈ ತರಹದ ಔಷಧಿ ಕೊಡುವವರಿಗೆ ರೇಟಿಂಗ್ ಬೇರೆ ಇರುತ್ತದಂತೆ, ಸಕ್ಸೆಸ್ ರೇಟು. ಅಂತರ್ಜಾಲದ ಪಾಯಿಂಟು ಮಾಡುವವರಿಗೂ ಹೀಗೆ ಸಕ್ಸೆಸ್ ರೇಟುಂಟು. ಗಮನಿಸಿಬೇಕಾದ್ದೆಂದರೆ ಇತರ ಹಕ್ಕುಗಳಂತೆ ಮಕ್ಕಳ ಹಕ್ಕುಗಳನ್ನು ಸ್ವತಃ ಮಕ್ಕಳೇ ಹೋರಾಡಿ ಉಳಿಸಿಕೊಳ್ಳಲಾಗದು. ಹೆಣ್ಣು ಭ್ರೂಣವು ಏನು ತಾನೆ ಹೇಳೀತು, ಕೇಳೀತು ಲೋಕಕ್ಕೆ? ಯಾವ ಮಗು ತಾನೆ ಯಾವ ಕೋರ್ಟಿನ ಮೆಟ್ಟಿಲು ಹತ್ತೀತು, ತನಗೆ ಹಿಂಸೆ ಅನ್ಯಾಯವಾಗುತ್ತಿದೆಯೆಂದು?

ಸಾಮಾನ್ಯವಾಗಿ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯಬೇಕಾದ್ದು ಅವರ ಪೋಷಕರು. ಆದರೆ ಮಕ್ಕಳ ವಿಷಯದಲ್ಲಿ ಗೊತ್ತೋ ಗೊತ್ತಿಲ್ಲದೆಯೊ ಪೋಷಕರೇ ಮೊದಲ ಶೋಷಕರಾಗಿರುತ್ತಾರೆ. ದಾರಿಯಲ್ಲಿ ಹೋಗುವ ಒಬ್ಬ ಮಹಿಳೆಗೆ ಏನಾದರೂ ತೊಂದರೆಯಾದರೆ ಅದು ನೋಡುಗರಿಗೆ ತಕ್ಷಣಕ್ಕೆ ತಪ್ಪು ಎಂದು ಕಂಡು ಬರುತ್ತದೆ, ಆ ಮಹಿಳೆಯನ್ನು ರಕ್ಷಿಸಿಲು ಸ್ಪಷ್ಟ ಕಾನೂನುಗಳಿವೆ. ಬಂದು ಕಾಪಾಡಲು ಪೋಲೀಸು ವ್ಯವಸ್ಥೆಯಿದೆ. ಮಕ್ಕಳ ವಿಷಯದಲ್ಲಿ ಹಾಗಿಲ್ಲ. ಅಲ್ಲಿ ಎಷ್ಟೋ ಬಗೆಯ ಶೋಷಣೆಗಳು ಸಾಮಾಜಿಕವಾಗಿ ಒಪ್ಪಿತ ನಡತೆಗಳು. ಮಕ್ಕಳನ್ನು ತಿದ್ದಿ ತೀಡಿ ಬೆಳೆಸುವ ಜವಾಬ್ಧಾರಿ ಸ್ವಾಭಾವಿಕವಾಗಿ ಪೋಷಕರ ಪಾಲಾಗುವುದರಿಂದ ಶೋಷಿಸುವ ಸಾಮಾಜಿಕ ಒಪ್ಪಿತ ಹಕ್ಕನ್ನೂ ಅವರೆ ಪಡೆದಿರುತ್ತಾರೆ. ಆದ್ದರಿಂದಲೆ ಪೋಷಕರಿಂದ ಜರುಗುವ ಶೋಷಣೆಗಳು ಹೆಚ್ಚಾಗಿ ಮನೆಯ ಒಳಗೆ ನಾಲ್ಕು ಗೋಡೆಗಳ ನಡುವೆ ಜರುಗುತ್ತವೆ. ಬೀದಿಯಲ್ಲಿ ಜರುಗಿದರೂ ಸ್ವತಃ ಪೋಷಕರಿಂದಲೆ ಆಗುವುದರಿಂದ ಸಮಾಜದ ದೃಷ್ಟಿಯಲ್ಲಿ ಅದು ಒಪ್ಪಿತ. ಆದ್ದರಿಂದ ಮಕ್ಕಳ ಶೋಷಣೆಗೆ ಹೊಣೆ ಹೊರುವವರೇ ಇಲ್ಲದಂತಾಗಿದೆ!

ಇದೆಷ್ಟು ಸೂಕ್ಷ್ಮ ವಿಚಾರವೆಂದರೆ ಯಾವುದೇ ಮಗುವಿಗೆ ತನಗೆ ಅನ್ಯಾಯವಾಗುತ್ತಿದ್ದರೂ ಅದನ್ನು ಮಗು ಗುರುತಿಸಲು ಶಕ್ತವಿರುವುದಿಲ್ಲ. ಗುರುತಿಸಿದರೂ ಎಷ್ಟೋ ಸಲ ಆ ಮನೋನೋವು ಬಹಿರಂಗವಾಗಿ ವ್ಯಕ್ತವಾಗುವುದಿಲ್ಲ. ಹಾಗೆ ವ್ಯಕ್ತವಾಗದೆ ಇದ್ದಲ್ಲಿ ಇತರ ಜಾಗ್ರತ ಮಂದಿಯಾದರೂ ಅದನ್ನು ಸರಿಪಡಿಸುವುದು ಹೇಗೆ? ಇನ್ನು ವ್ಯಕ್ತವಾಯಿತು ಎಂದಿಟ್ಟುಕೊಳ್ಳಿ. ನಮ್ಮಲ್ಲಿ ಎಷ್ಟು ಜನ ಇನ್ಯಾರದೋ ಮಗುವಿನ ಅನ್ಯಾಯಕ್ಕೆ ಸ್ಪಂದಿಸಲು ತಯಾರಿದ್ದೇವೆ? ನಮಗೆ ನಮ್ಮ ಮಕ್ಕಳು ಮಾತ್ರ ನಮ್ಮವು. ಯಾವುದೋ ಬಾಲಕ ಹೋಟೆಲ್ಲಿನಲ್ಲಿ ಬಂದು ಟೇಬಲ್ ಸ್ವಚ್ಛ ಮಾಡಿದಾಗ ನಮ್ಮ ಮನ ಕರಗಬಹುದು, ಹೆಚ್ಚೆಂದರೆ, “ಯಾಕೋ ಶಾಲೆಗೆ ಹೋಗಬೇಕಲ್ವೇನೋ” ಎನ್ನುತ್ತ ಕೈತೊಳೆದುಕೊಳ್ಳುತ್ತೇವೆ. ಅದೊಂಥರ ಸಂತ್ರಸ್ತನಿಗೇನೆ ಧಮಕಿ ಹಾಕಿದಂತೆ. ನಾವು ಮಾಡಬೇಕಾದ್ದು ಆ ಹುಡುಗನಿಗೆ ಉದ್ಯೋಗ ಕೊಟ್ಟವನನ್ನು ಪ್ರಶ್ನಿಸುವುದು ಮತ್ತು ಆ ಕೂಡಲೆ ಹುಡುಗನನ್ನು ಸರ್ಕಾರದ ಮಕ್ಕಳ ವಿಕಾಸ ಕಲ್ಯಾಣಕ್ಕೆ ಒಪ್ಪಿಸುವುದು.

ಭಾರತ ಸರ್ಕಾರವು ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿದೆ ನಿಜ, ಆದರೆ ಕೆಲವು ವಿಷಯಗಳಿಗೆ ಅದು ಸಂಪೂರ್ಣ ಒಪ್ಪಿಲ್ಲ. ಅದರಲ್ಲಿ ಒಂದು ಬಾಲ ಕಾರ್ಮಿಕ ವಿರುದ್ಧದ ಹಕ್ಕು. ತಲತಲಾಂತರದಿಂದ ಭಾರತದಲ್ಲಿ ಮಕ್ಕಳು ಹೆತ್ತವರ ಉದ್ಯೋಗದಲ್ಲಿ ಸಹಕಾರಿಯಾಗುತ್ತ ಬಂದಿರುವುದು ಇದಕ್ಕೆ ಕಾರಣ. ಕುಂಬಾರ, ಕಮ್ಮಾರ, ಚಮ್ಮಾರ, ಅಕ್ಕಸಾಲಿಗ, ಒಕ್ಕಲಿಗ ಇತ್ಯಾದಿಯಾಗಿ ಭಾರತದ ಎಲ್ಲ ಕಡೆ ಇದು ಈಗಲೂ ಚಾಲ್ತಿಯಲ್ಲಿದೆ. ಏಕ್ದಂ ಪೋಷಕರನ್ನು ಕರೆದೊಯ್ದು ಸ್ಟೇಶನ್ನಿನಲ್ಲಿ ಕೂರಿಸಲು ಸಾಧ್ಯವಿಲ್ಲ. ಬಾಲ ಕಾರ್ಮಿಕ ಪದ್ದತಿಯ ಸಂಪೂರ್ಣ ನಿರ್ಮೂಲನೆಗೆ ಕಠಿಬದ್ಧವಾಗಿದ್ದರೂ ಕಾನೂನುಗಳನ್ನು ರೂಪಿಸಿದ್ದರೂ ಆಚರಣೆಯಲ್ಲಿ ಭಾರತ ಸರ್ಕಾರ ಸಡಿಲವಾಗಿದೆ.

ಸುತ್ತಮುತ್ತಲ ಕಾರ್ಮಿಕ ಮಕ್ಕಳ ಬಗ್ಗೆ ನಮ್ಮ ಧೋರಣೆ ಹೀಗಿರಲು ಬೀದಿ ಬದಿಯಲ್ಲಿ ಅನಾಥ ಬಿದ್ದಿರುವ ಮಕ್ಕಳನ್ನಂತೂ ಕಂಡೂ ಕಾಣದಂತೆ ಒಂದು ಬಗೆಯಲ್ಲಿ ತಪ್ಪಿಸಿಕೊಂಡು ಓಡಿಬಿಡುತ್ತೇವೆ. ಅಲ್ಲಿ ಕನಿಕರವೂ ಇರುವುದಿಲ್ಲ, ಬದಲಾಗಿ ಎಷ್ಟೋ ಜನಕ್ಕೆ ಅವರು ಕಿರಿಕಿರಿ ಅನಿಸುತ್ತಾರೆ. ಮಕ್ಕಳ ಸಮಸ್ಯೆಗೆ ನಮಗೆ ತಕ್ಷಣಕ್ಕೆ ದೂರಲು ಸಿಗುವುದು ಹೆತ್ತವರು. ಸರ್ಕಾರಗಳೂ ಮೈಕೊಡವಿಕೊಳ್ಳುವುದರಿಂದ ಈ ಕಾರಣವನ್ನು ಎದುರಿಗಿಟ್ಟಿದ್ದೇನೆ. ಸಾಕಲಾಗದವರು ಯಾಕೆ ಹೆರಬೇಕಿತ್ತು ಎಂದುಬಿಡುತ್ತೇವೆ. ನಾವು ಒಂದು ಹೆಜ್ಜೆ ಮುಂದೆ ಸಾಗಿ ಯೋಚಿಸಬೇಕಿದೆ. ಹಾಗಿದ್ದಲ್ಲಿ ಅಶಕ್ತರು ಮಕ್ಕಳನ್ನು ಹೆರಲೇಬಾರದೇನು? ನನ್ನ ಪ್ರಕಾರ ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೂ ತನ್ನಂತದೇ ಆದ ಇನ್ನೊಂದು ಜೀವಿಗೆ ಜನ್ಮ ಕೊಡುವ ಹಕ್ಕಿದೆ, ಸಲಹುವ ಶಕ್ತಿಯಿದ್ದೋ ಇಲ್ಲದೆಯೋ.

ಸಾಂಪ್ರದಾಯಿಕ ದೇಶಗಳಲ್ಲಿ ಹೆಣ್ಣುಮಗು ಸಾಮಾಜಿಕ ಹೊರೆಯೆಂಬ ಕಾರಣಕ್ಕೆ ಜೀವನದುದ್ದಕ್ಕೂ ನಿಧನಿಧಾನವಾಗಿ ಕೊಲ್ಲಲ್ಪಡುತ್ತಾಳೆ, ಅಂದರೆ ಶಿಕ್ಷಣ ವಂಚಿತಳಾಗಿ, ಉದ್ಯೋಗ ವಂಚಿತಳಾಗಿ, ಸ್ವಾತಂತ್ರ್ಯ ವಂಚಿತಳಾಗಿ. ಇದೆಲ್ಲ ಅಪ್ಪಿತಪ್ಪಿ ಆಕೆ ಹುಟ್ಟಿಬಿಟ್ಟರೆ. ಹುಟ್ಟುವ ಮೊದಲೇ ಹೆಣ್ಣೆಂದು ಗೊತ್ತಾದರೆ ಭ್ರೂಣಾವಸ್ಥೆಯಲ್ಲೆ ಹತ್ಯೆಯಾಗುತ್ತದೆ, ಗರ್ಭಪಾತದ ಮೂಲಕ!

ನಾವು ಮಾತಾಡುತ್ತಿರುವ ಸಲಹುವ ಶಕ್ತಿಯೆಂಬುದು ಸಮಾಜ ಸೃಷ್ಟಿಸಿರುವ ಹೊರೆ. ಸೃಷ್ಟಿಯು ಪ್ರತಿಯೊಬ್ಬ ಜೀವಿಗೂ ಬದುಕಲು ಸಾಕಾಗುವಷ್ಟು ತನ್ನ ಸಂತಾನಕ್ಕೆ ಎದೆಹಾಲುಣಿಸಿ ಸ್ವಂತ ಕಾಲ ಮೇಲೆ ನಿಲ್ಲಿಸುವಷ್ಟು ಸಂಪನ್ಮೂಲಗಳನ್ನು ಒದಗಿಸಿದೆ. ಆದರೆ ನಾವಿಂದು ಆ ಕನಿಷ್ಠ ಅಗತ್ಯಗಳ ಬದುಕು ಮೀರಿದ ಸಮಾಜವನ್ನು ಕಟ್ಟಿಕೊಂಡಿದ್ದೇವೆ. ಇದನ್ನು ವ್ಯವಸ್ಥಿತ ಎಂತಲೂ ಕರೆಯುತ್ತೇವೆ. ಈ ವ್ಯವಸ್ಥೆ ನೈಸರ್ಗಿಕ ಕನಿಷ್ಠಗಳನ್ನು ಮೀರಿದ ಸಂಪನ್ಮೂಲಗಳನ್ನು ಬೇಡುತ್ತದೆ. ತಿಂಗಳಿಗಿಷ್ಟು ಬಿಲ್ಲುಗಳನ್ನು ಕಟ್ಟಲೇಬೇಕು ಎಂಬ ಹೊರೆಯಿದೆಯಲ್ಲವೇ ನಮ್ಮೆಲ್ಲರ ಮೇಲೆ, ಹಾಗೆ. ಕೆಲವರು ಈ ವ್ಯವಸ್ಥೆ ಬೇಡುವಷ್ಟು ಸಂಪನ್ಮೂಲ ಹೊಂದಿರುವುದಿಲ್ಲ, ಅಂಥವರಿಗೆ ತಮ್ಮ ಮಕ್ಕಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ. ಈಗ ಹೇಳಿ, ಇದು ಹೆರುವವರ ತಪ್ಪೇ?

ಒಂದು ಹೊಸ ಜೀವ ಈ ಸಮಾಜವೆಂಬ ಈ ಗೂಡೊಳಗೆ ಕಾಲಿಡುತ್ತಿದೆಯೆಂದಾಗ, ಇಲ್ಲಿನ ಕನಿಷ್ಠ ಅಗತ್ಯಗಳು ಬೇರೆ ಇದ್ದಾವೆಂದಾಗ, ಆ ಅಗತ್ಯಗಳನ್ನು ಒದಗಿಸಿಕೊಡುವುದು ಸಮಾಜದ ಕರ್ತವ್ಯವಲ್ಲವೇ? ನಿನ್ನ ಅಥವಾ ನಿನ್ನ ಹೆತ್ತವರ ಬಳಿ ಇಂತಿಷ್ಟು ಗಂಟು ಇಲ್ಲವೆಂದರೆ ನಿನಗೆ ಇಲ್ಲಿ ಎಂಟ್ರಿ ಇಲ್ಲ ಎನ್ನುವುದು ಎಷ್ಟು ಸರಿ? ಇದು ಸೃಷ್ಟಿ ವಿರುದ್ಧದ ವ್ಯವಸ್ಥೆಯಲ್ಲವೇ? ವಿಶ್ವಸಂಸ್ಥೆಯ ಮಕ್ಕಳ ಹಕ್ಕುಪಟ್ಟಿ ಈ ನಿಟ್ಟಿನಲ್ಲಿ ಕೆಲವು ಹಕ್ಕುಗಳನ್ನು ದಾಖಲಿಸಿದೆ. ಭೂಮಿ ಮೇಲೆ ಕಾಲಿಡುವ ಯಾವುದೇ ಮಗುವಿಗೆ ಪೋಷಕರ ಕೈಲಾಗದಿದ್ದಲ್ಲಿ ಸಮಾಜದಿಂದ ರಕ್ಷಣೆ ಕಾಳಜಿ ಪ್ರೀತಿ ಶಿಕ್ಷಣ ಸಹಾಯ ಪಡೆವ ಹಕ್ಕಿದೆ! ಅದರ ಅರ್ಥ ಬೀದಿಮಕ್ಕಳ ಲಾಲನೆ ಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ! ಸರ್ಕಾರವು ಇಂತಹ ವ್ಯವಸ್ಥೆ ಕಲ್ಪಿಸಬೇಕೆಂದೂ ಅದು ಸರಿಯಾಗಿ ನಡೆಯುತ್ತಿದ್ದೆಯೋ ಇಲ್ಲವೋ ಎಂದು ಸದಾ ಪರಿಶೀಲಿಸುತ್ತಿರಬೇಕೆಂದೂ ಒತ್ತಾಯಿಸುವ ಹಕ್ಕು ಎಲ್ಲ ಮಕ್ಕಳಿಗಿದೆ. ಅರ್ಥಾತ್ ಮಕ್ಕಳ ಪರವಾಗಿ ನಾವು ಪ್ರಶ್ನಿಸಬೇಕಿದೆ.

ಇಲ್ಲಿ ಸಾಂದರ್ಭಿಕವಾಗಿ ಇನ್ನೊಂದು ವಿಷಯವನ್ನು ಹೇಳಬೇಕು. ಒಬ್ಬ ಅಕ್ರಮ ವಲಸಿಗನಿಗೆ ಈ ನೆಲದಲ್ಲಿ ಮಗುವೊಂದು ಹುಟ್ಟಿದರೆ ಆ ಮಗು ಅಕ್ರಮ ವಲಸಿಗನೋ? ಇಲ್ಲಿ ಮತ್ತೆ ನೈಸರ್ಗಿಕ ಸೃಷ್ಟಿ ನಿಯಮಗಳ ದೃಷ್ಟಿಯಿಂದ ಯೋಚಿಸೋಣ. ನಿಸರ್ಗದ ಪ್ರಕಾರ ಯಾವುದೇ ಜೀವಿ ಯಾವ ನೆಲದಲ್ಲಿ ಜನಿಸುತ್ತದೋ ಅದು ಆ ನೆಲಕ್ಕೆ ಸೇರಿರುತ್ತದೆ. ದೂರದ ಎಷ್ಟೋ ಭೂಭಾಗಗಳಿಂದ ಪಕ್ಷಿಗಳು ಭಾರತಕ್ಕೆ ಪ್ರತಿ ವರುಷ ವಲಸೆ ಬರುತ್ತವೆ. ಇವುಗಳಲ್ಲಿ ಕೆಲವು ಸಂತಾನಕ್ಕೆಂದೇ ಬರುತ್ತವೆ. ಕೆಲವು ಇಲ್ಲೇ ನೆಲೆಸುತ್ತವೆ. ಪ್ರಾಣಿಗಳಲ್ಲಿ ಕುದುರೆಯು ಇಲ್ಲಿಗೆ ವಲಸಿಗ. ಇದೆಲ್ಲ ಸಾವಿರಾರು ವರುಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಮನುಷ್ಯನು ನಕ್ಷೆ ತಯಾರಿಸುವುದಕ್ಕಿಂತಲೂ ಮುಂಚಿಂದ…. ನಾವೆಲ್ಲ ತೀರ ಇತ್ತೀಚೆಗೆ ದೇಶಗಳನ್ನು ಕಟ್ಟಿಕೊಂಡಿರುವುದು. ಕಾನೂನುಗಳನ್ನು ರೂಪಿಸಿಕೊಂಡಿರುವುದು. ಹೀಗಿರುವಾಗ ವಲಸೆ ಬರುವ ಪಕ್ಷಿಗಳನ್ನು ತಡೆಯೋಣವೇನು? ಇಲ್ಲಿ ಮೊಟ್ಟೆಯಿಡಬೇಡಿ ಅನ್ನೋಣವೇನು? ಮರಿಗಳನ್ನು ವಾಪಸ್ಸು ಕೊಂಡೊಯ್ಯಿರಿ ಎಂದು ಒತ್ತಾಯಿಸೋಣವೇನು?

ಇದನ್ನು ವಲಸೆ ನೀತಿಗಳ ವಿತಂಡ ಸಮರ್ಥನೆ ಎಂದು ಭಾವಿಸಬಾರದು. ಮತ್ತು ಒಂದು ದೇಶಕ್ಕೆ ಮಾತ್ರ ಅನ್ವಯಿಸಕೂಡದು. ನಾಗರೀಕ ಸಮಾಜದಲ್ಲಿ ಸ್ವ ಸುರಕ್ಷಾ ನೀತಿಗಳು ಅಗತ್ಯ. ಮತ್ತು ಎಲ್ಲ ದೇಶಗಳಿಗೂ ಇದು ಒಪ್ಪಿತ ವ್ಯವಸ್ಥೆಯಾಗಿರುವುದರಿಂದ ಪಾಲಿಸಲೇಬೇಕು. ಇದೆಲ್ಲವೂ ದೊಡ್ಡವರ ಹಗರಣ. ಮಕ್ಕಳು ಏನು ಮಾಡಬೇಕು? ವಲಸೆ ಬರುವ ಮಕ್ಕಳು ವಲಸಿಗನಿಗೆ ಹುಟ್ಟುವ ಮಕ್ಕಳು? ಇವರ್ಯಾರೂ ದೊಡ್ಡವರ ಹಗರಣಗಳಲ್ಲಿ ಭಾಗಿಯಾಗದವರು. ಪಾಪದವರು. ಅಕ್ರಮವೋ ಸಕ್ರಮವೋ ನಿರಾಶ್ರಿತ ಮಕ್ಕಳ ರಕ್ಷಣೆ ಮಾಡುವುದು ಅವರ ಬೆಳವಣಿಗೆಗೆ ಸಹಾಯ ಮಾಡುವುದು ಆಯಾ ದೇಶದ ಸರ್ಕಾರ ಸಮಾಜದ ಆದ್ಯ ಕರ್ತವ್ಯವೆಂದು ಮಕ್ಕಳ ಹಕ್ಕು ಸಾರುತ್ತದೆ. ಬಹುಶಃ ಅಮೆರಿಕಾದ ರಿಪಬ್ಲಿಕನ್ಸ್ ಬೊಟ್ಟು ಮಾಡುತ್ತಿರುವುದು ಇದರ ಬಗ್ಗೆಯೆ ಇರಬೇಕು. ನಮ್ಮ ಪೂರ್ವಿಕರ ಸಮಾಜದಲ್ಲಿ ಯಾವ ಅನಾಥ/ದಾರಿ ತಪ್ಪಿ ಬಂದ ಮಗುವನ್ನೂ ನೀನು ಇಲ್ಲಿಯವನಲ್ಲ ಎಂದು ತಳ್ಳಿರುವ ಉದಾಹರಣೆಗಳು ಇಲ್ಲ.

ಶುರುವಾತ್ ನಲ್ಲಿ ಹಕ್ಕುಗಳು ಕೇವಲ ರಕ್ಷಣೆಗಲ್ಲದೆ ರಚನಾತ್ಮಕ ಬೆಳವಣಿಗೆಗೂ ಸಹಾಯಕಾರಿ ಎಂದಿದ್ದೆ. ನಿಮಗೆ ತಿಳಿದಿರಬೇಕು, ಮಕ್ಕಳಿಗೆ ಆಟವಾಡುವ ಹಕ್ಕಿದೆ. ನಮ್ಮಲ್ಲಿ ಎಷ್ಟೋ ಜನ ಬಾಲ್ಯದಲ್ಲಿ ಆಡುವ ಅವಕಾಶ ಸಿಗದೆ ವಯಸ್ಕರಾಗಿ ಒಂಟಿತನ ಅನುಭವಿಸಿದ್ದೇವೆ. ಮಾನಸಿಕ ಖಿನ್ನತೆಯಿಂದ ಬಳಲಿದ್ದೇವೆ. ಕೆಲವು ಸಲ ನಾನೂ ಇದಕ್ಕೆ ಬಲಿ ಎನಿಸಿದ್ದಿದೆ. ಯಾರ ಬಾಲ್ಯವೂ ಕಾರ್ಮಿಕನಾಗಿ ಕಮರಿಹೋಗುತ್ತದೋ ಅವರ ಮಾನಸಿಕ ವಿಕಸನ ಕುಂಟಿತವಾಗಿರುತ್ತದೆ. ಅದು ಅವರ ಬದುಕಿನಲ್ಲಿ ಶಾಶ್ವತ ಘಾಸಿಯಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಪೋಷಕರಿಗೆ ಪಾಠ ಮಾಡುವ ಅಗತ್ಯವಿದೆ.

ಬಹುತೇಕ ಪೋಷಕರು ಚನ್ನಾಗಿ ದುಡಿದು ಅಗತ್ಯ ವಸ್ತುಗಳನ್ನೆಲ್ಲ ಒದಗಿಸಿದರೆ ಉತ್ತಮ ಶಾಲೆಗೆ ಸೇರಿಸಿದರೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುತ್ತಾರೆ. ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದ ತಕ್ಷಣ ಮನೆಗೆಲಸಕ್ಕೆ ಹಚ್ಚುವುದೋ, ಇಲ್ಲ ಟ್ಯೂಶನ್ ಗಳಿಗೆ ತರುಮುವುದೋ ಇಲ್ಲವೇ ಸಂಗೀತ ನೃತ್ಯ ಇತ್ಯಾದಿ ತರಬೇತಿಗಳಿಗೆ ತಳ್ಳುವುದೋ ಮಾಡುತ್ತಾರೆ. ಮಕ್ಕಳಿಗೆ ದಿನಕ್ಕೆ ಕೆಲವು ತಾಸುಗಳಾದರೂ ಆಟವಾಡಲು ಬಿಡಬೇಕು. ಇನ್ನಷ್ಟು ಮಕ್ಕಳ ಸಾಂಗತ್ಯ ಒದಗಿಸಿಕೊಡಬೇಕು. ಇವತ್ತು ಎಷ್ಟೊಂದು ಮಕ್ಕಳ ಟೀವಿ ಶೋಗಳು ಬರುತ್ತಿವೆ, ಮತ್ತು ಎಲ್ಲರೂ ಅದನ್ನು ಮನರಂಜನೆಯಾಗಿ ವೀಕ್ಷಿಸುತ್ತ ಆನಂದಿಸುತ್ತಿದ್ದೇವೆ. ಈ ಶೋಗಳ ಹಿಂದೆ ಎಷ್ಟು ಮಕ್ಕಳ ಬಾಲ್ಯ ಕಮರಿರಬೇಕು, ಎಷ್ಟು ಮಕ್ಕಳು ಸೋತು ಮಾನಸಿಕ ಹಿಂಸೆ ಅನುಭವಿಸಿರಬೇಕು? ಯಾಕೆ ಯಾರೂ ಯೋಚಿಸುತ್ತಿಲ್ಲ!. ಸಾವಿರ ಮಕ್ಕಳು ಪಾಲ್ಗೊಂಡಿದ್ದರೆ ಮುಂದೆ ಅವುಗಳಲ್ಲಿ ಒಂದೋ ಎರಡೋ ಆ ಹಾಡುಗಾರಿಕೆ, ನೃತ್ಯ, ನಟನೆಗಳನ್ನು ಉದ್ಯೋಗವನ್ನಾಗಿಯೋ ಹವ್ಯಾಸವನ್ನಾಗಿಯೋ ಉಳಿಸಿ ಬೆಳೆಸಿಕೊಳ್ಳುತ್ತಾರೆ. ಮಿಕ್ಕಿದವರೆಲ್ಲರೂ ಬೇರೆ ಬೇರೆ ಹಾದಿ. ಅಂಥದರಲ್ಲಿ ಒಂದು ಮಗು ವರುಷಗಳ ಗಟ್ಟಲೆ ಒಂದೇ ವಿಷಯದಲ್ಲಿ ನಿರಂತರ ಕಠಿಣ ತರಬೇತಿಯಲ್ಲಿ ತೊಡಗುವುದು, ಸ್ಪರ್ಧೆಗೆ ತಯಾರಾಗುವುದು, ಸ್ಫರ್ಧೆಯಲ್ಲಿ ಗೆಲ್ಲುವ ಒತ್ತಡ, ಪೋಷಕರ, ಬಂಧು ಬಾಂಧವರ ಆಕಾಂಕ್ಷೆಯ ಒತ್ತಡ! ದೊಡ್ಡವರಾಗಿ ಉದ್ಯೋಗ ಉದ್ಯಮ ಕುಟುಂಬ ಒತ್ತಡಗಳನ್ನು ತಡಕೊಳ್ಳಲಿಕ್ಕಾಗೆ ಒದ್ದಾಡುವ ನಾವೆಲ್ಲ ಎಳೆಯ ಮಕ್ಕಳಿಗೆ ಏನೆಲ್ಲ ಮಾಡುತ್ತಿದ್ದೇವೆ!

ಒಟ್ಟಾರೆ ಯಾವುದು ಸ್ವಾಭಾವಿಕ ಕ್ರಿಯೆಯಾಗಿತ್ತೋ, ಆಗಿರಬೇಕಿತ್ತೋ ಅದನ್ನು ನಾವೆಲ್ಲ ಇಂದು ಜವಾಬ್ಧಾರಿ, ಕರ್ತವ್ಯ, ಹಕ್ಕಿನ ಮಟ್ಟಕ್ಕೆ ಏರಿಸಿದ್ದೇವೆ. ನಾಗರೀಕತೆ ಉಗಮಕಾಲದಲ್ಲಿ ಮಕ್ಕಳ ಲಾಲನೆ ಪಾಲನೆ ಸಾಮುದಾಯಿಕವಾಗಿತ್ತು. ಅಪ್ಪ ಅಮ್ಮ ಅಜ್ಜಿ ತಾತ, ಓಣಿ, ಊರು… ಎಲ್ಲರ ಅಕ್ಕರೆ ಸಿಗುತ್ತಿತ್ತು. ಈಗಿನಂತೆ ನಮ್ಮವಷ್ಟೆ ನಮ್ಮ ಮಕ್ಕಳು ಎಂಬ ಭಾವನೆಯೆ ಇದ್ದಿರದೆ ಎಲ್ಲರೂ ನಮ್ಮ ಮಕ್ಕಳೆ ಎಂಬ ವಿಶಾಲತ್ವ ಇರುತ್ತಿತ್ತು. ಇಂದು ವಿಭಕ್ತ ಕುಟುಂಬಗಳು, ಆಯಿಯನ್ನು ನೇಮಿಸಿ ತಂದೆತಾಯಿಗಳು ಕೆಲಸಕ್ಕೆ ಹೋಗುತ್ತಾರೆ. ಮಕ್ಕಳನ್ನು ನಿರಂತರವಾಗಿ ಯಾವುದಾದರೂ ತರಬೇತಿ ಸೆಂಟರಿಗೆ ಸೇರಿಸಿರುತ್ತಾರೆ. ತಂದೆಯಿಂದಲೇ ಮಗಳ ಬಲಾತ್ಕಾರದ ಸುದ್ದಿಗಳು ಬರುತ್ತಿವೆ. ನಿರ್ಗತಿಕ ಮಕ್ಕಳಿಗೆ ಮಾದಕ ವಸ್ತುಗಳು ಸಿಗುತ್ತಿವೆ. ಮಕ್ಕಳು ಮಾರಲ್ಪಡುತ್ತಿದ್ದಾರೆ.

ಕಾರಿನೊಳಗೆ ಐಸ್ ಕ್ಯಾಂಡಿ ತಿನ್ನುವ ಮಗು, ಹೊರಗೆ ಹಸಿವೆಯಿಂದ ಬಳಲುವ ಮಗು. ಅಹಂಗಾಗಿ ಪ್ರತಿಷ್ಠೆಗಾಗಿ ಧರ್ಮ ವಿಸ್ತರಣೆಗಾಗಿ ಧಾರ್ಮಿಕ ಗುರುಗಳು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸಿ ಎಂದು ಕರೆ ನೀಡುತ್ತಿದ್ದಾರೆ. ಯಾವ ಲೋಕದಲ್ಲಿ ಬದುಕುತ್ತಿದ್ದೇವೆ ನಾವೆಲ್ಲ? ಯಾವ ಲೋಕ ಸೃಷ್ಟಿಸಲು ಹೊರಟಿದ್ದೇವೆ ನಮ್ಮ ಮಕ್ಕಳಿಗಾಗಿ?