ಹೊಲದ ಹತ್ತಿರ ಅನ್ನುವ ಕಾರಣಕ್ಕೆ ನನಗೆ ಮನೆ ಇಷ್ಟವಾಯ್ತು. ಮನೆಯನ್ನು ಕೂಲಂಕುಷವಾಗಿ ನೋಡಿದ ಮೇಲೆ ಗೌಡರ ಜೊತೆಗೆ ಮಾತಾಡಲು ಅಲ್ಲೇ ಹತ್ತಿರವೇ ಇದ್ದ ಅವರ ಮನೆಗೆ ಹೋದೆ. ಹೆಸರು ಕೇಳಿದವರೆ ಯಾವ ಜಾತಿ ನಿಮ್ಮದು ಅಂದರು. ನನಗೆ ತುಂಬಾ ಇರುಸು ಮುರುಸು ಆಯ್ತು. ನಾನು ಯಾರಿಗೂ ಜಾತಿ ಕೇಳೋದಿಲ್ಲ, ನನಗೆ ಯಾರಾದರೂ ಕೇಳಿದರೂ ನನಗೆ ಆಗೋಲ್ಲ. ಆದರೆ ಹಳ್ಳಿಯಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗಿಯೇ ಇದೆ. ನನ್ನ ಜಾತಿ ಯಾಕೆ ಬೇಕು ಅಂತ ಕೇಳಿದಾಗ “ಒಳ್ಳೆಯವರಿಗೆ ಕೊಡಬೇಕಲ್ರಿ ಮನಿ ಅದಕ್ಕ ಕೇಳತೀವಿ” ಅಂದರು.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

ಭತ್ತ ಬಿತ್ತಿ ಆದ ಮೇಲೆ ಒಂದೆರಡು ದಿನ ಹೊಲಕ್ಕೆ ಹೋಗಲಿಲ್ಲ. ಒಂದಿಷ್ಟು ಬೇರೆ ಕೆಲಸಗಳನ್ನು ಪೂರೈಸಿದೆ. ಹೊಲಕ್ಕೆ ಹೋಗಿ ನಾವು ಮಾಡುವುದು ಕೂಡ ಏನೂ ಇರಲಿಲ್ಲ. ಶಾಮನಿಗೂ ಕೂಡ ಒಂದೆರಡು ದಿನಗಳ ಮಟ್ಟಿಗೆ ಬರಬೇಡ ಅಂತ ಹೇಳಿದ್ದೆ. ಒಂದು ವಾರದೊಳಗೆ ಮಳೆ ಬಂದರೆ ಸಾಕು ಅಂತ ದೇವರಲ್ಲಿ ಕೇಳಿಕೊಂಡೆ. ಅಡಿಕೆ ಸಸಿಗಳನ್ನು ನೆಟ್ಟಿದ್ದು, ಅದಕ್ಕೆ ಕೂಡ ನೀರು ಬೇಕಿತ್ತು.

ನಮ್ಮ ಹೊಲ ಇದ್ದ ಪ್ರದೇಶ ಇತ್ತ ಮಲೆನಾಡು ಅಲ್ಲ ಅತ್ತ ಬಯಲು ಸೀಮೆಯೂ ಅಲ್ಲ. ಅದೊಂಥರಾ ಅರೆ ಮಲೆನಾಡು. ಒಂದೊಮ್ಮೆ ಮಳೆ ಹಿಡಿದರೆ ಬಿಡುತ್ತಲೂ ಇರಲಿಲ್ಲ. ಅದೇ ಬೇಸಿಗೆಯಲ್ಲಿ ಮಣ್ಣು, ಕಲ್ಲಿನ ತರಹ ಗಟ್ಟಿಯಾಗಿ ಬಿಡುತ್ತಿತ್ತು. ಹೀಗಾಗಿ ಇಲ್ಲಿ ಮುಚ್ಚಿಗೆ ತುಂಬಾ ಮುಖ್ಯವಾಗಿತ್ತು. ನಾವು ಬೇಸಿಗೆಯಲ್ಲಿ ಈ ರೀತಿಯಾಗಿ ಮಣ್ಣಿನ ಸಂರಕ್ಷಣೆ ಮಾಡಬಹುದಾಗಿತ್ತು.

ಮುಂದೊಂದು ವಾರದಲ್ಲಿ ಮಳೆ ಬಂತು. ತುಂಬಾ ಜೋರಾಗಿ ಇರಲಿಲ್ಲವಾದರೂ ನಮ್ಮ ಭತ್ತದ ಮೊಳಕೆ ಬರುವುದಕ್ಕೆ ಹದವಾಗಿತ್ತು. ಒಂದು ಹದಿನೈದು ದಿನಗಳಲ್ಲಿ ಮೊಳಕೆ ಬಂದೀತು ಎಂಬ ನಿರೀಕ್ಷೆ ಇತ್ತು. ಹಾಗಂತ ಈ ಭತ್ತ ಮೊಳಕೆ ಬಂದರೆ ನಿಮ್ಮ ಪುಣ್ಯ ಅಂತ ನಮಗೆ ಬೀಜ ಕೊಟ್ಟಿದ್ದ ರಾಯರು ಹೇಳಿದ್ದು ನೆನಪಾಗಿ ಮೊಳಕೆ ಬರದಿದ್ದರೆ ಹೇಗೆ ಎಂಬ ಚಿಂತೆಯೂ ಆಗಾಗ ಸುಳಿಯುತ್ತಿತ್ತು. ಇದನ್ನು ಅನುಭವಕ್ಕೆ ಅಂತ ಮಾಡುತ್ತಿದ್ದ ನಾವು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಸಿಕ್ಕಿದ್ದೆಲ್ಲ ಬೋನಸ್ ಅಂದುಕೊಂಡು ಮುಂದುವರೆದಿದ್ದೆವು.

ಚೂರು ಪಾರು ನೆಲ ಹಸಿ ಮಾಡಿದ ಮಳೆ ಒಂದೆರಡು ದಿನಗಳಲ್ಲಿ ನಿಂತಿತ್ತು. ಅಡಿಕೆ ಗಿಡಕ್ಕೆ ನೀರು ಸಾಕಾಗಲಿಲ್ಲ. ಉಪಯೋಗಿಸದೆ ಬಿಟ್ಟಿದ್ದ ನನ್ನ ಬೋರ್‌ನ ನೀರನ್ನು ಬಳಸಬೇಕು ಅಂತ ನಿರ್ಧರಿಸಿ ಬೋರ್ ಚಾಲು ಮಾಡಿದೆವು. ಆದಷ್ಟು ಮಳೆಯಾಶ್ರಿತ ಕೃಷಿ ಮಾಡುವ ಒಲವಿದ್ದ ಕಾರಣ ಅಂತರ್ಜಲವನ್ನು ಆದಷ್ಟು ಕಡಿಮೆ ಬಳಸುವ ವಿಚಾರ ಇತ್ತು. ಅದನ್ನು ಶುರು ಮಾಡಿ ಕೆಲವು ದಿನಗಳಾಗಿತ್ತು. ಬೋರಿನಿಂದ ನನ್ನ ಹೊಲದ ಉದ್ದಕ್ಕೂ ಒಂದು ಮುಖ್ಯ ಪೈಪ್ ಇದೆ. ಬೋರನ್ನು ಶುರು ಮಾಡಿದ ಕೂಡಲೇ ಅದರ ಎರಡು ಮೂರು ಕಡೆಯಲ್ಲಿ ನೀರು ಸೋರಲು ತೊಡಗಿತು. ಅಂದರೆ ನಮಗೆ ನೀರು ಬಿಡಲು ಸಾಧ್ಯವಾಗದಂತೆ ಅದು ಹಲವು ಕಡೆ ಒಡೆದು ಹೋಗಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಸರಿ ಇದ್ದ pipe ಅದ್ಹೇಗೆ ಸೋರುತ್ತಿದೆ ಅಂತ ನಾನು ಯೋಚಿಸತೊಡಗಿದೆ.

ಅಷ್ಟರಲ್ಲಿ ಶ್ಯಾಮ ತಲೆ ಆಚೀಚೆ ಆಡಿಸುತ್ತಾ ಏನೋ ಹೊಳೆದ ಹಾಗೆ ಮುಖ ಮಾಡಿ, ಇದು ಅವಂದೆ ಕೆಲಸ ನೋಡ್ರಿ ಅಂತ ಪಕ್ಕದ ಹೊಲದ ಕಡೆಗೆ ಕೈ ಮಾಡಿ ತೋರಿಸಿದ. ನಾನು ಅವನಿಗೆ ನೀರು ಕೊಡುತ್ತಿಲ್ಲ ಅಂತ ಹುಸೇನಿ ಈ ತರಹ ನನಗೂ ನೀರಿಲ್ಲದಂತೆ ಮಾಡಿರಬಹುದು ಅನ್ನುವುದು ಅವನ ಮಾತಿನಿಂದ ನಾನು ಆಗ ಕಂಡುಕೊಂಡ ಸಂಗತಿಯಾಗಿತ್ತು. ಅದು ನಿಜವೇ ಎಂಬುದು ಇನ್ನೂ ನಾನು ಕಣ್ಣಾರೆ ನೋಡಿದ್ದಿಲ್ಲವಾದರೂ, ಹಾಗೆ ಆಗಿರುವ ಸಾಧ್ಯತೆ ಖಂಡಿತ ಇತ್ತು. ಪೈಪ್ ಒಡೆದಿದ್ದು ನೋಡಿದರೆ ಅದನ್ನು ಹಾರೆಯಿಂದ ಯಾರೋ ಬೇಕು ಅಂತಲೆ ಮಾಡಿದ್ದು ಅನಿಸಿತ್ತು. ನನ್ನ ನೀರನ್ನು ಅವನನ್ನು ಬಿಟ್ಟು ಬೇರೆ ಯಾರು ಮೊದಲು ಬಳಸುತ್ತಿರಲಿಲ್ಲ, ಅವನಿಗೆ ನೀರಿನ ಅವಶ್ಯಕತೆಯೂ ಇತ್ತು, ಆದ್ದರಿಂದ ಇದು ಅವನದೇ ಕೆಲಸ ಇರಬೇಕು ಅಂತ ಅಂದುಕೊಂಡೆನಾದರೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೊಡಬೇಕಲ್ಲ! ಮುಂದೆ ನೋಡಿದರಾಯ್ತು ಅಂತ ಸುಮ್ಮನಾದೆ.

ರಾಮಚಂದ್ರ ಮಾವನ ಬಳಿ ಈ ವಿಷಯ ಪ್ರಸ್ತಾಪಿಸಿದೆ. ನನ್ನ ನೀರಿನ ಪೈಪ್ ಅವನು ಒಡೆದಿರಬಹುದಾದ ಸುದ್ದಿ ಕೇಳಿ ಮಾವ ಸ್ವಲ್ಪವೂ ವಿಚಲಿತರಾದಂತೆ ತೋರಲಿಲ್ಲ.

“ಏನ್ ಮಾವ ಇವಾ ಹಿಂಗೆಲ್ಲಾ ಮಾಡ್ತಾನ..” ಅಂತ ನಾನು ನನ್ನ ಅಸಮಾಧಾನ ಹೊರಹಾಕಿದೆ. ಅದಕ್ಕವರು ನಕ್ಕು “ಎಂತ ಮಾಡಲು ಆಗ್ತಿಲ್ಲೇ.. gum ತಂದು ಪೈಪ್ ಜೋಡಿಸೋದು ಅಷ್ಟೆಯ..” ಅಂತ ತಮ್ಮ ಬೊಚ್ಚ ಬಾಯಲ್ಲಿ ನಕ್ಕುಬಿಟ್ಟರು! ಇವರು ನಮ್ಮವರು ಅಂದುಕೊಂಡಿದ್ದೆ. ಊರಿನ ಹಿರಿಯರಾಗಿ ಅವನಿಗೆ ಸರಿಯಾಗಿ ಬೈದು ಬುದ್ಧಿ ಹೇಳುತ್ತಾರೆ ಅಂದುಕೊಂಡಿದ್ದ ನನಗೆ ತುಂಬಾ ಒಳ್ಳೆಯ ಶಾಕ್ ಕೊಟ್ಟರು.

ಮುಂದೊಂದು ವಾರದಲ್ಲಿ ಮಳೆ ಬಂತು. ತುಂಬಾ ಜೋರಾಗಿ ಇರಲಿಲ್ಲವಾದರೂ ನಮ್ಮ ಭತ್ತದ ಮೊಳಕೆ ಬರುವುದಕ್ಕೆ ಹದವಾಗಿತ್ತು. ಒಂದು ಹದಿನೈದು ದಿನಗಳಲ್ಲಿ ಮೊಳಕೆ ಬಂದೀತು ಎಂಬ ನಿರೀಕ್ಷೆ ಇತ್ತು. ಹಾಗಂತ ಈ ಭತ್ತ ಮೊಳಕೆ ಬಂದರೆ ನಿಮ್ಮ ಪುಣ್ಯ ಅಂತ ನಮಗೆ ಬೀಜ ಕೊಟ್ಟಿದ್ದ ರಾಯರು ಹೇಳಿದ್ದು ನೆನಪಾಗಿ ಮೊಳಕೆ ಬರದಿದ್ದರೆ ಹೇಗೆ ಎಂಬ ಚಿಂತೆಯೂ ಆಗಾಗ ಸುಳಿಯುತ್ತಿತ್ತು.

ಅವರಿಗೂ ಈ ಊರಿನಲ್ಲಿ ಮೊದಲೆಲ್ಲ ಹೀಗೆ ಮಾಡಿದ್ದರು. ತಾನೂ ಇಂತಹ ಸನ್ನಿವೇಶಗಳನ್ನು ಎದುರಿಸಿ, ದಾಟಿ ಮುಂದೆ ಬಂದಿರುವೆ ಎಂಬುದು ಅವರ ಮಾತಿನ ಮರ್ಮವಾಗಿತ್ತಾದರೂ, ನನಗೆ ಅಲ್ಲಿನವರೆಲ್ಲರೂ ಒಂದೇ ಅಂತ ಅವತ್ತು ಮನವರಿಕೆ ಆಯಿತು. ಎಷ್ಟೇ ಆದರೂ ನಾನು ಅಲ್ಲಿನವರಿಗೆ ಹೊರಗಿನವನು. ಇನ್ನು ಮುಂದೆ ಅಲ್ಲಿಯ ಜನರ ಜೊತೆಗೆ ಹೆಚ್ಚು ಹೆಚ್ಚು ಬೆರೆಯಬೇಕು ಅನಿಸಿತು. ಸ್ನೇಹಕ್ಕೆ ಯೋಗ್ಯರು ಯಾರು ಅಂತ ತಿಳಿಯಲು ಇನ್ನೂ ತುಂಬಾ ಸಮಯ ಬೇಕಾಗಿತ್ತಾದರೂ ಆ ಗ್ರಾಮದಲ್ಲೇ ಹೆಚ್ಚು ಹೆಚ್ಚು ಸಮಯ ಕಳೆಯಬೇಕು ಅಂತ ನಿರ್ಧರಿಸಿದೆ. ಆದರೆ ಅದಕ್ಕೆ ಅಡಚಣೆಯಾಗಿದ್ದು ನಮ್ಮ ಮನೆ ಬಿಸಲಕೊಪ್ಪದಲ್ಲಿ ಇದ್ದದ್ದು. ನಮ್ಮ ಹೊಲದ ಹತ್ತಿರವೇ ಒಂದು ಮನೆ ಇದ್ದರೆ ನೋಡೋಣ ಅಂತ ಅಲ್ಲಿಲ್ಲಿ ವಿಚಾರಿಸಲು ಶುರು ಮಾಡಿದೆ. ಹತ್ತಿರದಲ್ಲೇ ಒಂದು ಮನೆ ಬಾಡಿಗೆಗೆ ಇದೆ ಅಂತ ಶ್ಯಾಮ ತಿಳಿಸಿದ. ಅದು ಹೊಸಕೊಪ್ಪ ಎಂಬ ಊರು. ಅಲ್ಲಿಂದ ನಮ್ಮ ಹೊಲಕ್ಕೆ ನಾಲ್ಕೇ ಕಿಲೋಮೀಟರು. ಆದರೆ ಅದೊಂದು ಹಳ್ಳಿ ಆಗಿದ್ದರಿಂದ ಏನಾದರೂ ಸಾಮಾನು ಬೇಕೆಂದರೆ ನಾವು ಹತ್ತಿರದ ದಾಸನಕೊಪ್ಪಕ್ಕೆ ಹೋಗಬೇಕಿತ್ತು. ಆದರೂ ನಮ್ಮ ಈಗಿನ ಮನೆಗಿಂತ ಹೊಲಕ್ಕೆ ಹತ್ತಿರ ಅನ್ನುವ ದೃಷ್ಟಿಯಿಂದ ಮನೆಯನ್ನು ನೋಡಲು ಹೊರಟೆವು.

“ನನ್ನ ಹೆಸರು ಹೇಳ್ರಿ… ಗೌಡ್ರು ನನಗ ಭ್ಹಾಳ ಚ್ಹೋಲೋ ಪರಿಚಯ ಅದಾರ” ಅಂತಲೂ ಶ್ಯಾಮ ಹೇಳಿದ್ದ.

ಗೌಡರ ಮನೆ ರೋಡಿಗೆ ಹತ್ತಿಕೊಂಡೆ ಇತ್ತು. ಅದೂ ಕೂಡ ಹಂಚಿನ ಮನೆಯೇ ಆಗಿತ್ತು. ಇಲಿಗಳು ಒಳಗೆ ಬರುವ ಸಾಧ್ಯತೆಗಳು ಇದ್ದೇ ಇತ್ತು. ಇಲಿಗಳು ಬಂದರೆ ಅದರ ಹಿಂದೆ ಹಾವುಗಳು ಕೂಡ ಬಂದೆ ಬರುತ್ತವೆ ಅಂತಲೂ ಗೊತ್ತಿತ್ತು! ಆದರೂ ಹೊಲದ ಹತ್ತಿರ ಅನ್ನುವ ಕಾರಣಕ್ಕೆ ನನಗೆ ಮನೆ ಇಷ್ಟವಾಯ್ತು. ಮನೆಯನ್ನು ಕೂಲಂಕುಷವಾಗಿ ನೋಡಿದ ಮೇಲೆ ಗೌಡರ ಜೊತೆಗೆ ಮಾತಾಡಲು ಅಲ್ಲೇ ಹತ್ತಿರವೇ ಇದ್ದ ಅವರ ಮನೆಗೆ ಹೋದೆ. ಹೆಸರು ಕೇಳಿದವರೆ ಯಾವ ಜಾತಿ ನಿಮ್ಮದು ಅಂದರು. ನನಗೆ ತುಂಬಾ ಇರುಸು ಮುರುಸು ಆಯ್ತು. ನಾನು ಯಾರಿಗೂ ಜಾತಿ ಕೇಳೋದಿಲ್ಲ, ನನಗೆ ಯಾರಾದರೂ ಕೇಳಿದರೂ ನನಗೆ ಆಗೋಲ್ಲ. ಆದರೆ ಹಳ್ಳಿಯಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗಿಯೇ ಇದೆ.

ನನ್ನ ಜಾತಿ ಯಾಕೆ ಬೇಕು ಅಂತ ಕೇಳಿದಾಗ “ಒಳ್ಳೆಯವರಿಗೆ ಕೊಡಬೇಕಲ್ರಿ ಮನಿ ಅದಕ್ಕ ಕೇಳತೀವಿ” ಅಂದರು.

“ಒಳ್ಳೆಯವರು ಕೆಟ್ಟವರು ಎಲ್ಲಾ ಜಾತಿಯಲ್ಲೂ ಇರ್ತಾರ ಗೌಡ್ರ. ಅವೆರಡ ಜಾತಿ ಇರೋದು ಈ ಜಗತ್ತಿನ್ಯಾಗ” ಅಂದ ನನ್ನ ಮಾತು ಗೌಡರ ತಲೆಗೆ ಎಷ್ಟು ಹೊಕ್ಕಿತೋ ಗೊತ್ತಿಲ್ಲ. ಅವರ ಜೊತೆಗೆ ನಿಂತಿದ್ದ ಅವರ ಮಕ್ಕಳು ಅಪ್ಪನಿಗೆ ಹಾಗೆಲ್ಲ ಜಾತಿ ಬಗ್ಗೆ ವಿಚಾರಿಸಬೇಡ ಅಂತ ಸಣ್ಣಗೆ ತಮ್ಮ ಅಸಮಾಧಾನ ಹೊರ ಹಾಕಿದರು ಅಂತ ನನಗೆ ಅನಿಸಿತು. ಗೌಡರು ಎಷ್ಟೆಂದರೂ ಹಳಬರು, ಅವರಿಗೆ ಸುಮಾರು ಎಪ್ಪತ್ತು ವರ್ಷದ ಮೇಲೆ ವಯಸ್ಸಾಗಿತ್ತು. ಅವರು ಬೆಳೆದು ಬಂದ ವಾತಾವರಣ ಹಾಗಿತ್ತು. ಅವರ ಮುಂದಿನ ಪೀಳಿಗೆಯವರಾದರೂ ಹಾಗಿಲ್ಲವಲ್ಲ ಅಂತ ಸಮಾಧಾನ ಪಟ್ಟೆ. ಗೌಡರದೂ ತೋಟದ ಮನೆಯೇ. ಇವರ ಮನೆ ಬಿಟ್ಟು ಹತ್ತಿರ ಯಾವ ಮನೆಗಳೂ ಇರಲಿಲ್ಲ. ಸುತ್ತಲೂ ಅಡಿಕೆ ಮರಗಳು. ಆದರೂ ಈ ತೋಟ ಬಿಸಲಕೊಪ್ಪದ ಶಂಭು ಮಾವನ ತೋಟಕ್ಕಿಂತ ಭಿನ್ನವಾಗಿತ್ತು. ಬರೀ ಇಪ್ಪತ್ತೈದು ಕಿಲೋಮೀಟರುಗಳ ಅಂತರದಲ್ಲಿ ಅದು ಪಕ್ಕಾ ಮಲೆನಾಡಿನ ತೋಟವಾದರೆ ಇದು ಅರೆ ಮಲೆನಾಡಿನ ತೋಟ. ವಾತಾವರಣದಲ್ಲೂ ಎಷ್ಟೊಂದು ಬದಲಾವಣೆ. ಅಲ್ಲಿ ಧೋ ಧೋ ಮಳೆಯಾದರೆ ಇಲ್ಲಿ ಬಿಸಿಲು! ಮಾವನ ಭಾಷೆಯ ಸೊಗಡು ಬೇರೆ, ಇವರದು ಬೇರೆ. ಮಾವ ಮಾತಾಡುತ್ತಿದ್ದದು ಹವ್ಯಕ ಶೈಲಿಯಾದರೆ, ಗೌಡರದು ಬಯಲುಸೀಮೆಯ ಶೈಲಿ. ನಾನು ಬಯಲುಸೀಮೆಯ ಹುಡುಗ ನನ್ನ ಹೆಂಡತಿ ಮಲೆನಾಡಿನ ಹುಡುಗಿ! ಹೀಗಾಗಿ ಎರಡೂ ಭಾಷೆಗಳೂ ನನ್ನ ಹೃದಯಕ್ಕೆ ಹತ್ತಿರವೇ!

ಒಟ್ಟಿನಲ್ಲಿ ಆ ಮನೆಗೆ ನಾವು ಬರುವುದು ನಿರ್ಧಾರ ಆಯ್ತು. ಬಾಡಿಗೆ ಕೂಡ ಅಷ್ಟೇನೂ ವ್ಯತ್ಯಾಸವಿರಲಿಲ್ಲ. ಶ್ಯಾಮನ ಪರಿಚಯ ಹೇಳಿದರೂ ಗೌಡರು ಬಾಡಿಗೆಯನ್ನು ಕಡಿಮೆ ಮಾಡಲಿಲ್ಲ. ಶ್ಯಾಮ ಯಾರು ಗೊತ್ತಿಲ್ಲ ಅಂದುಬಿಟ್ಟರು!

ಆದರೆ ಎರಡೇ ತಿಂಗಳಲ್ಲಿ ಬಿಸಲಕೊಪ್ಪ ಮಾವನ ಮನೆ ಖಾಲಿ ಮಾಡುತ್ತೇವೆ ಎಂಬ ವಿಷಯ ಅವರಿಗೆ ಹೇಳುವುದು ಸ್ವಲ್ಪ ಕಷ್ಟಕರ ಆಗಿತ್ತು. ಅವರೂ ಕೂಡ ನಮ್ಮನ್ನು ತುಂಬಾ ಹಚ್ಚಿಕೊಂಡಿದ್ದರು. ನಾವು ಮನೆ ಬಿಡುವ ವಿಷಯ ತಿಳಿದಾಗ ಮಾವ ತುಂಬಾ ಬೇಜಾರು ಮಾಡಿಕೊಂಡರು. ತನ್ನಿಂದಲೇ ಏನಾದರೂ ವ್ಯತ್ಯಾಸವಾಗಿ ನೀವು ಮನೆ ಬಿಡುತ್ತಿದ್ದೀರ ಅಂತೆಲ್ಲ ಕೇಳಿದರು. ಹಾಗೇನೂ ಇಲ್ಲ ಹೊಲಕ್ಕೆ ಹತ್ತಿರ ಇರುವ ಕಾರಣ ಅಲ್ಲಿಗೆ ಹೋಗುತ್ತಿದ್ದೇವೆ ಅಂತ ಅವರಿಗೆ ನಾನು ಮನವರಿಕೆ ಮಾಡಿಕೊಟ್ಟೆ. ಅಲ್ಲಿಂದ ನಮ್ಮ ಸಂಸಾರವನ್ನು ಕಿತ್ತು ಕಾರಿನಲ್ಲಿ ಒಂದೆರಡು ದಿನಗಳಲ್ಲಿ ನಾನು ನಾಗಣ್ಣ ಸೇರಿ ಸಾಗಣೆ ಮಾಡಿದೆವು. ಅವತ್ತು ಹೊಸ ಮನೆಯಲ್ಲಿ ಮಲಗಿದ್ದಾಗಲೆ ಮನೆಯ ಮುಂದಿರುವ ರೋಡಿನ ಅಸ್ತಿತ್ವದ ಅರಿವಾಯ್ತು. ಬನವಾಸಿಗೆ ಹೋಗುವ ಬರುವ ವಾಹನಗಳೆಲ್ಲ ಭರ್ ಭುರ್ ಅಂತ ರಾತ್ರಿಯೆಲ್ಲಾ ಅಡ್ಡಾಡಿ ಕಣ್ಣಿಗೆ ನಿದ್ದೆಯಿಲ್ಲದಂತೆ ಮಾಡಿ ಕಂಗಾಲು ಮಾಡಿದವು. ಅದೂ ಕ್ರಮೇಣ ನಮ್ಮ ಕಿವಿಗೆ ರೂಡಿಯಾದೀತು ಎಂಬ ಭರವಸೆಯೊಂದಿಗೆ ಆ ಮನೆಯನ್ನು ಅಪ್ಪಿ ಮಲಗಿದೆವು!

*****

ಅಲ್ಲಿಗೆ ಬಂದು ಒಂದಿಷ್ಟು ದಿನಗಳ ಬಳಿಕ ಹೊಲಕ್ಕೆ ಹೋದಾಗ ನಮ್ಮ ಭತ್ತ ಮೊಳಕೆ ಬಂದಿದ್ದನ್ನು ನೋಡಿ ಸಂತಸ ಪಟ್ಟೆವು. ಮೊಳಕೆಯ ಪ್ರಮಾಣ ನಮ್ಮ ನಿರೀಕ್ಷೆಗೂ ಮೀರಿ ಆಗಿತ್ತು. ತುಂಬಾ ಕಡಿಮೆ ನಿರೀಕ್ಷೆ ಇದ್ದಾಗಲೇ ಒಮ್ಮೊಮ್ಮೆ ಒಳ್ಳೆಯ ಫಲಿತಾಂಶಗಳು ಬರುತ್ತವೇನೋ!

ಸಸಿಗಳು ದೊಡ್ಡದಾಗಿ ಭತ್ತದ ತೆನೆ ಮೂಡಲು ಎರಡು ತಿಂಗಳಾದರೂ ಬೇಕಿತ್ತು. ಅಲ್ಲಿಯವರೆಗೆ ನಮಗೆ ಮಾಡಲು ಬೇರೆ ಕೆಲಸಗಳು ಇದ್ದವು. ಅಡಿಕೆ ಗಿಡಗಳ ಸುತ್ತ ಬೆಳೆಯುತ್ತಿದ್ದ ಕಳೆಗಳನ್ನು ಕತ್ತರಿಸಿ ಅಲ್ಲೇ ಗಿಡದ ಬುಡಕ್ಕೆ ಮುಚ್ಚಿಗೆ ಹಾಕಬೇಕಿತ್ತು. ಅದನ್ನು ಶ್ಯಾಮನಿಗೆ ಹೇಳಿದೆ. “ಹುಲ್ಲು ಇನ್ನೊಂದಿಷ್ಟು ಎತ್ತರ ಆದ ಮ್ಯಾಲೆ ಸವರ್ತೀನಿ ಸರ್, ಈಗ ಕೈಯಾಗ ಹಿಡಿಯಾಕ ಸಜ್ಜ ಆಗುದಿಲ್ಲ” ಅಂದ.

ಒಂದು ರೀತಿಯಲ್ಲಿ ಅವನು ಹೇಳಿದ್ದು ಸರಿ ಇತ್ತಾದರೂ ಅದರ ಹಿಂದೆ ಬೇರೆ ಏನೋ ಉದ್ದೇಶ ಇದ್ದೀತೆ ಎಂಬ ಸಂಶಯ ನನ್ನನ್ನು ಕಾಡಿತ್ತು.

ಏನೇ ಆದರೂ ಮುಂದೆ ಕಳೆ ನಿಯಂತ್ರಣಕ್ಕೆ ಆಳುಗಳ ಮೇಲೆ ಅವಲಂಬಿತ ಆಗದೆ ನಾವೇ ಹೇಗೆ ಹುಲ್ಲನ್ನು ಕತ್ತರಿಸಬಹುದು ಅಂತಲೂ ವಿಚಾರ ಮಾಡತೊಡಗಿದೆ. ಆಗ ನನಗೆ ಸಿಕ್ಕಿದ್ದು brush cutter ಎಂಬ ಅದ್ಭುತ ಯಂತ್ರ….

(ಮುಂದುವರಿಯುವುದು…)