ಲಾಪ್ಲಾಸ್, ತನ್ನ ಪುಸ್ತಕವನ್ನು ಅಂದಿನ ಫ್ರೆಂಚ್ ಸಾಮ್ರಾಟ ನೆಪೊಲಿಯನ್‌ ಗೆ ನೀಡಿ, ಸೌರ ಮಂಡಲದ ಸೃಷ್ಟಿ ಮತ್ತು ಚಲನ-ವಲನದ ಬಗೆಗೆ ವಿವರಣೆ ನೀಡಿದನಂತೆ. ಅದನ್ನು ಕೇಳಿದ ನೆಪೊಲಿಯನ್, ಲಾಪ್ಲಾಸ್‌ ನನ್ನು “ನಿನ್ನ ಥಿಯರಿಯಲ್ಲಿ ದೇವರಿಗೆ ಜಾಗವಿಲ್ಲವಂತೆ, ಹೌದೇ?” ಎಂದು ಪ್ರಶ್ನಿಸಿದನಂತೆ. ಅದಕ್ಕೆ ಲಾಪ್ಲಾಸ್ “ಸ್ವಾಮಿ, ನನಗೆ ಆ ಕಲ್ಪಿತ ಸಿದ್ಧಾಂತದ ಅವಶ್ಯಕತೆ ಇಲ್ಲ” ಎಂದನಂತೆ. ಆದರೆ, ನಾವು ಲಾಪ್ಲಾಸ್‌ ನನ್ನು ಒಪ್ಪಿ ನ್ಯೂಟನ್‌ ನನ್ನು ಪಕ್ಕಕ್ಕೆ ತಳ್ಳಬೇಕಿಲ್ಲ. ನೆಪೊಲಿಯನ್, ಲಾಪ್ಲಾಸ್‌ ನನ್ನು “ಸೌರ ಮಂಡಲವನ್ನು ಸೃಷ್ಟಿಸಿದ ಆ ಅನಿಲದ ಮೋಡಗಳು ಎಲ್ಲಿಂದ ಬಂದವು?” ಎಂದು ಪ್ರಶ್ನಿಸಿದ್ದರೆ, ಅವನೇನು ಉತ್ತರ ಕೊಡಬಲ್ಲವನಿದ್ದ?!
ಶೇಷಾದ್ರಿ ಗಂಜೂರು ಅಂಕಣ

 

ಗುರುತ್ವಾಕರ್ಷಣೆ, ಕ್ಯಾಲ್ಕುಲಸ್ ಅವಿಷ್ಕಾರವೂ ಸೇರಿದಂತೆ ಹಲವೊಂದು ವಿಷಯಗಳಲ್ಲಿ ತಾನೇ ಮೊದಲಿಗನೆಂಬಂತೆ ಬಿಂಬಿಸಿಕೊಳ್ಳಲು, ಐಸಾಕ್ ನ್ಯೂಟನ್, ಶತಾಯ-ಗತಾಯ ಪ್ರಯತ್ನ ಪಟ್ಟಿದ್ದು ನಿಜವಾದರೂ, ಕೆಲವೊಮ್ಮೆ ಅವನು ವಿನಯವನ್ನೂ ತೋರುತ್ತಾನೆ. “ಪ್ರಿಂಕಿಪಿಯಾ ಮ್ಯಾಥಮಾಟಿಕಾ” ದಂತಹ ಕ್ರಾಂತಿಕಾರಕ ಮತ್ತು ಆಧುನಿಕರಿಗೂ ಓದಿ ಅರ್ಥೈಸಿಕೊಳ್ಳಲು ಕಷ್ಟವೆನ್ನಿಸಬಹುದಾದಂತಹ ಗಣಿತ-ವಿಜ್ಞಾನಗಳ ಮಹಾ ಗ್ರಂಥವನ್ನೇ ಬರೆದ ನ್ಯೂಟನ್, ಇನ್ನೊಂದೆಡೆ, ತನ್ನ ಬಗೆಗೆ ಈ ಸರಳ-ಸುಂದರ ಸಾಲನ್ನೂ ಬರೆದಿದ್ದಾನೆ.

 

“ಪ್ರಪಂಚಕ್ಕೆ ನಾನು ಹೇಗೆ ಕಾಣುತ್ತೇನೋ ನನಗೆ ತಿಳಿಯದು; ಆದರೆ, ನನಗೆ, ನಾವಿನ್ನೂ ಅರಿಯದ ಸತ್ಯಗಳ ಸಾಗರದ ದಂಡೆಯಲ್ಲಿ ಆಟವಾಡುತ್ತಾ ಆಗಾಗ್ಗೆ ಸಿಗುವ ಸುಂದರ ಕಪ್ಪೆ-ಚಿಪ್ಪಿನೊಂದಿಗೆ ಮೈ ಮರೆಯುವ ಸಣ್ಣ ಹುಡುಗನಂತೆ ನಾನು ತೋರುತ್ತೇನೆ.”

ಗುರುತ್ವಾಕರ್ಷಣೆಯನ್ನು ಅವನು ತನ್ನ ಗಣಿತದ ಮೂಲಕ ಕಟ್ಟಿ ಹಾಕಿದರೂ, ಅದೇ ಅವನನ್ನು ಮತ್ತಷ್ಟು ಚಿಂತನೆ, ಪ್ರಶ್ನೆ ಮತ್ತು ಸಂದೇಹಗಳಿಗೆ ದೂಡುತ್ತವೆ. ಅವುಗಳಲ್ಲಿ ಇಲ್ಲಿ ಮುಖ್ಯವೆನ್ನಿಸುವುವು ಎಂದರೆ:

೧. ಸೌರ ಮಂಡಲದ ಗ್ರಹಗಳು ಸೂರ್ಯನ ಸುತ್ತ ಸುತ್ತುವಾಗ ಗುರುತ್ವಾಕರ್ಷಣೆಯ ನಿಯಮಗಳನ್ನು ಪಾಲಿಸುವುದೇನೋ ಸರಿಯೇ. ಈ ನಿಯಮಗಳ ಲೆಕ್ಕಾಚಾರದ ಮೇಲೆ, ಯಾವ ಗ್ರಹ ಯಾವ ದಿನ ಎಲ್ಲಿರುತ್ತದೆ ಎಂಬುದನ್ನೂ ಮೊದಲೇ ನಿರ್ಧರಿಸಬಹುದು. ಆದರೆ, ಈ ಸೌರ ಮಂಡಲದ ಸೃಷ್ಟಿಯಾದದ್ದರೂ ಹೇಗೆ?

(ರಿಚರ್ಡ್ ಬೆಂಟ್ಲಿ)

೨. ಗುರುತ್ವಾಕರ್ಷಣೆಯ ಬಲದಿಂದ ವಸ್ತುಗಳು ಒಂದಕ್ಕೊಂದು ಹತ್ತಿರವಾಗುತ್ತಾ ಹೋಗಿ, ಕೊನೆಗೆ ಎಲ್ಲವೂ ಅನಂತ ಸಾಂದ್ರತೆಯುಳ್ಳ ಬಿಂದುವೊಂದರಲ್ಲಿ (Inifinitely Dense Point) ಕೊನೆಗೊಳ್ಳಬೇಕಲ್ಲವೇ? ಆದರೆ, ಶತ-ಶತಮಾನಗಳಾದರೂ, ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತಿವೆಯೇ ಹೊರತು, ಅವನಲ್ಲಿ ಲೀನವಾಗಿಲ್ಲವೇಕೆ?

೩. ಒಂದು ವಸ್ತು ಮತ್ತು ಇನ್ನೊಂದರ ನಡುವಿನ ಸೆಳೆತ ಗುರುತ್ವಾಕರ್ಷಣೆಯ ನಿಯಮಗಳನ್ನು ಪಾಲಿಸುವುದನ್ನು ಪ್ರಯೋಗಗಳ ಮೂಲಕ ಮತ್ತು ಗ್ರಹಗಳ ಚಲನ-ವಲನಗಳನ್ನು ನಿಖರವಾಗಿ ಗಮನಿಸುವ ಮೂಲಕ ಗ್ರಹಿಸಬಹುದು. ಆದರೆ, ಗುರುತ್ವಾಕರ್ಷಣೆಯ ಈ ಸೆಳೆತ ಒಂದು ವಸ್ತುವಿನಿಂದ ಇನ್ನೊಂದಕ್ಕೆ ಸಂವಹಿಸುವುದಾದರೂ ಹೇಗೆ? ಗ್ರಹ-ಗ್ರಹಗಳ ನಡುವಿನ ವಿಶಾಲವಾದ ಶೂನ್ಯತೆಯಲ್ಲೂ ಈ ಸೆಳೆತ ಹೇಗೆ ಸಂಚರಿಸುತ್ತದೆ?

ಇಂತಹ ಪ್ರಶ್ನೆಗಳು ಎದುರಾದಾಗ, ನ್ಯೂಟನ್ ಅವನ್ನು ಪತ್ರಗಳ ಮೂಲಕ ತನ್ನ ಮಿತ್ರ ರಿಚರ್ಡ್ ಬೆಂಟ್ಲಿಯ ಮುಂದಿಡುತ್ತಾನೆ.

ನ್ಯೂಟನ್‌ ನ ನಿಯಮಗಳು, ಸೌರ ಮಂಡಲದ ಮಹಾ ಕಾಯಗಳ ಚಲನೆಯ ದೈವೀಕತೆಯ ಗುಹ್ಯತೆಯನ್ನೂ (Divine Mystery) ಕೇವಲ ಗಣಿತದ ಲೆಕ್ಕಾಚಾರ ಮಾಡಿಸಿದ ನಂತರ, ಇದು, ನಾಸ್ತಿಕರಿಗೆ ಪುಷ್ಟಿಯನ್ನೊದಗಿಸಬಹುದೇ ಎಂಬ ಸಂದೇಹವೂ ಹಲವರಲ್ಲಿ ಮೂಡಿಸಿತು. ಭೂಮಿ ಸೂರ್ಯನ ಸುತ್ತ ಸುತ್ತುವುದನ್ನು ನ್ಯೂಟನ್‌ ನ ಗುರುತ್ವಾಕರ್ಷಣೆಯಷ್ಟೇ ನಿಯಂತ್ರಿಸುವುದಾದರೆ, ದೇವರಿಗೆ ಒಂದು ಕೆಲಸ ಕಡಿಮೆಯಾಯಿತಲ್ಲವೇ?!

ರಿಚರ್ಡ್ ಬೆಂಟ್ಲಿ, ನ್ಯೂಟನ್‌ ಗಿಂತ ವಯಸ್ಸಿನಲ್ಲಿ ಕಿರಿಯನಾದರೂ, ಕ್ರೈಸ್ತಧರ್ಮದ ವಿಚಾರಗಳಲ್ಲಿ ಪಾಂಡಿತ್ಯ ಪಡೆದಿದ್ದವನು ಮತ್ತು ನಾಸ್ತಿಕತೆಯ ಪ್ರಬಲ ವಿರೋಧಿಯಾಗಿದ್ದವನೂ ಸಹ. ನ್ಯೂಟನ್‌ ನ ಉತ್ತಮ ಮಿತ್ರನಾಗಿದ್ದ ಬೆಂಟ್ಲಿ, ನ್ಯೂಟನ್‌ ನ ವಿಚಾರಗಳನ್ನು ಕ್ರೈಸ್ತ ಧರ್ಮದ ಚೌಕಟ್ಟಿನೊಳಗೇ ವಿವರಿಸಿ, ನ್ಯೂಟನ್‌ ನನ್ನು ನಾಸ್ತಿಕತ್ವ ಅಥವಾ Deism (ತಾರ್ಕಿಕ-ದೈವವಾದ ?) ನ ಅಪವಾದದಿಂದ ರಕ್ಷಿಸಲೆತ್ನಿಸಿದವನು.

(ಅತ್ತ ರಿಚರ್ಡ್ ಬೆಂಟ್ಲಿ, ನ್ಯೂಟನ್‌ ನ ಮಿತ್ರನಾಗಿದ್ದರೆ, ಕ್ಯಾಲ್ಕುಲಸ್ ಸೇರಿದಂತೆ ನ್ಯೂಟನ್‌ ನ ವಿಚಾರಗಳನ್ನು ಪ್ರಬಲವಾಗಿ ತಿರಸ್ಕರಿಸಿದವನು ಆಂಗ್ಲಿಕನ್ ಚರ್ಚ್‌ ನಲ್ಲಿ ಬಿಷಪ್ ಆಗಿದ್ದ, ಜಾರ್ಜ್ ಬರ್ಕ್ಲಿ. ಕ್ರಿಶ್ಚಿಯನ್ ದೈವೀಕತೆಯ ನೆಲೆಗಟ್ಟಿನಲ್ಲಿ ನ್ಯೂಟನ್‌ ನ ವಾದಗಳನ್ನು ನಿರಾಕರಿಸಿಲೆತ್ನಿಸಿದ ಬರ್ಕ್ಲಿಯ ಬರಹಗಳಲ್ಲಿ, ಶತಮಾನಗಳ ನಂತರ ಐನ್‌ಸ್ಟೈನ್ ತೋರಿಸಿಕೊಟ್ಟ ರಿಲೆಟಿವಿಟಿಯ ಕೆಲ ಅಂಶಗಳೂ ಇವೆ. ವೈಜ್ಞಾನಿಕ ಕ್ಷೇತ್ರದಲ್ಲಿ, ವಿಶ್ವದಲ್ಲಿಯೇ ಅತ್ಯುತ್ತಮ ಯೂನಿವರ್ಸಿಟಿಗಳಲ್ಲಿ ಒಂದಾದ, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ-ಬರ್ಕ್ಲಿ, ಕ್ಯಾಲ್ಕುಲಸ್‌ ನ ಕಟ್ಟಾ ವಿರೋಧಿಯ ಹೆಸರಿನಲ್ಲಿರುವುದು ಒಂದು ಐತಿಹಾಸಿಕ ವ್ಯಂಗ್ಯ)

ಬೈಬಲ್ ಮತ್ತು ಕ್ರೈಸ್ತ ಧರ್ಮದಲ್ಲಿ ಅಪಾರ ನಂಬಿಕೆಯುಳ್ಳ ನ್ಯೂಟನ್, ತನ್ನ ಪ್ರಶ್ನೆಗಳನ್ನು ಬೆಂಟ್ಲಿಯ ಮುಂದಿಡುವುದಷ್ಟೇ ಅಲ್ಲದೆ, ಅವುಗಳಿಗೆ ತನ್ನದೇ ಆದ ಉತ್ತರವನ್ನೂ ಒದಗಿಸುತ್ತಾನೆ. ಈ ಎಲ್ಲಾ ಪ್ರಶ್ನೆಗಳಿಗೂ ಅವನ ಒಂದೇ ಉತ್ತರ: “ದೇವರು”.

(ಜಾರ್ಜ್ ಬರ್ಕ್ಲಿ)

ಸೌರ ಮಂಡಲವನ್ನು ಸೃಷ್ಟಿಸಿದವನೂ ದೇವನೇ. ಗುರುತ್ವಾಕರ್ಷಣೆಯ ಸೆಳೆತಕ್ಕೆ ಒಳಗಾಗಿ ವಸ್ತುಗಳೆಲ್ಲಾ ಒಂದರೊಳಗೊಂದು ಲೀನವಾಗಿ, ಕೊನೆಗೆ ಅದು ತನ್ನೊಳಗೇ ಕುಸಿಯದಂತೆ ತಡೆಗಟ್ಟುವವನೂ ದೇವನೇ. ಗುರುತ್ವಾಕರ್ಷಣೆಯ ಸೆಳೆತ, ಕಣ್ಣಿಗೆ ಕಾಣದ ಯಾವುದೇ ಮಾಧ್ಯಮ ಇಲ್ಲದಿದ್ದರೂ ಸಂವಹನವಾಗುವುದೂ ಆ ದೇವನಿಂದಲೇ. ಇದು, ನ್ಯೂಟನ್‌ ನ ವಾದ.

******

ನಮ್ಮ ವಿಶ್ವದ ಎಷ್ಟೋ “ರಹಸ್ಯ”ಗಳಿಗೆ ವಿಜ್ಞಾನ ತನ್ನ ವಿವರಣೆ ನೀಡುತ್ತಲೇ ಬಂದಿದೆ. ಆದರೆ, ಈ ವಿವರಣೆಗಳಲ್ಲಿ ನಾವಿನ್ನೂ ತುಂಬಲಾಗದ ಎಷ್ಟೋ “ಗ್ಯಾಪ್”ಗಳೂ ಇವೆ. ಇಂತಹ ಖಾಲಿ ಜಾಗಗಳನ್ನು ಅತ್ಯಂತ ಸುಲಭವಾಗಿ ತುಂಬುವ ವಿಧಾನವೆಂದರೆ, “ದೇವರು”.

ಗುರುತ್ವಾಕರ್ಷಣೆಯನ್ನು ಅವನು ತನ್ನ ಗಣಿತದ ಮೂಲಕ ಕಟ್ಟಿ ಹಾಕಿದರೂ, ಅದೇ ಅವನನ್ನು ಮತ್ತಷ್ಟು ಚಿಂತನೆ, ಪ್ರಶ್ನೆ ಮತ್ತು ಸಂದೇಹಗಳಿಗೆ ದೂಡುತ್ತವೆ.

ಆದರೆ, ನ್ಯೂಟನ್‌ ನನ್ನು “ಖಾಲಿ-ಜಾಗಗಳ-ದೇವನನ್ನು” (God of the Gaps) ಹುಡುಕಲೆತ್ನಿಸಿದವನು ಎನ್ನಲಾಗುವುದಿಲ್ಲ. ವಿಜ್ಞಾನದಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಅವನು ದೈವದ ಕುರಿತು ಚಿಂತನೆ ಮಾಡಿದ್ದಾನೆ. ತನ್ನ ಪತ್ರಗಳಲ್ಲಿ ಮಾತ್ರವಲ್ಲ, ಗಣಿತ-ವಿಜ್ಞಾನದ ಪುಸ್ತಕಗಳಲ್ಲೂ, ಅವನು ದೇವರನ್ನು ಪ್ರಸ್ತಾಪಿಸುತ್ತಾನೆ. ಉದಾಹರಣೆಗೆ, ತನ್ನ ಮ್ಯಾಥಮಾಟಿಕಲ್ ಪ್ರಿನ್ಸಿಪಲ್ಸ್ ಆಫ್ ಮ್ಯಾಥಮಾಟಿಕಲ್ ಫಿಲಾಸಫಿ ಕೃತಿಯ ಆದಿಯಲ್ಲೇ, “ಧೂಮಕೇತುಗಳು, ಗ್ರಹಗಳು, ಸೂರ್ಯನಿರುವ ನಮ್ಮ ಈ ಸೊಬಗಿನ ಸೂರ್ಯಮಂಡಲದ ಸೃಷ್ಟಿ” ಮಹಾಮಹಿಮನಾದ ದೇವರಿಂದಲೇ ಆಗಿರಬೇಕೆನ್ನುತ್ತಾನೆ.

ಕಾಲಚಕ್ರ ಮುಂದುವರೆದಂತೆ, ವಿಜ್ಞಾನವೂ ಮುಂದುವರೆಯುತ್ತಿದೆ. ವಿಜ್ಞಾನದ ಮೂಲಕ ವಿವರಿಸಲಾಗದ “ಗ್ಯಾಪ್”ಗಳ ವಿಸ್ತಾರ ಕಿರಿದಾಗುತ್ತಿವೆ. ಹಿಂದೊಮ್ಮೆ, ದೇವನನ್ನು ಪ್ರಸ್ತಾಪಿಸದೇ ವಿವರಿಸಲಾಗದ ವಿಷಯಗಳಿಗೆ, ವಿಜ್ಞಾನದ ಸಹಾಯದಿಂದಲೇ ವಿವರಣೆ ಕೊಡಲು ಸಾಧ್ಯವಾಗುತ್ತಿದೆ. “God of the Gaps” ಆಗಿದ್ದವನು “God of the Tinier Gaps” ಆಗುತ್ತಿದ್ದಾನೆ.

ಉದಾಹರಣೆಗೆ, “ಫ್ರಾನ್ಸಿನ ನ್ಯೂಟನ್” ಎಂದೇ ಖ್ಯಾತನಾದ ಪಿಯೆರ್ ಸಿಮೋನ್ ಲಾಪ್ಲಾಸ್, ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ, ತನ್ನ “ಸೆಲೆಸ್ಟಿಯಲ್ ಮೆಕ್ಯಾನಿಕ್ಸ್” ಪುಸ್ತಕದಲ್ಲಿ, ಸೌರಮಂಡಲದ ಸೃಷ್ಟಿಯ ಕುರಿತಾದ ನ್ಯೂಟನ್‌ ನ ಪ್ರಶ್ನೆಗೆ (ನಮ್ಮ ಪ್ರಥಮ ಪ್ರಶ್ನೆ) ವೈಜ್ಞಾನಿಕ ಉತ್ತರವನ್ನು ಒದಗಿಸುತ್ತಾನೆ. ಅನಿಲದ ಮೋಡಗಳು, ಗುರುತ್ವಾಕರ್ಷಣೆಯ ಬಲದಿಂದಲೇ, ಸೂರ್ಯ–ಗ್ರಹಗಳು–ಉಪಗ್ರಹಗಳು-ಧೂಮಕೇತು ಇತ್ಯಾದಿಗಳಿರುವ ಸೌರಮಂಡಲವಾಗಿರುವುದನ್ನು ಅವನು ತನ್ನ ಗಣಿತದ ಸಹಾಯದಿಂದ ತೋರಿಸಿ ಕೊಡುತ್ತಾನೆ.

ಲಾಪ್ಲಾಸ್, ತನ್ನ ಪುಸ್ತಕವನ್ನು ಅಂದಿನ ಫ್ರೆಂಚ್ ಸಾಮ್ರಾಟ ನೆಪೊಲಿಯನ್‌ ಗೆ ನೀಡಿ, ಸೌರ ಮಂಡಲದ ಸೃಷ್ಟಿ ಮತ್ತು ಚಲನ-ವಲನದ ಬಗೆಗೆ ವಿವರಣೆ ನೀಡಿದನಂತೆ. ಅದನ್ನು ಕೇಳಿದ ನೆಪೊಲಿಯನ್, ಲಾಪ್ಲಾಸ್‌ ನನ್ನು “ನಿನ್ನ ಥಿಯರಿಯಲ್ಲಿ ದೇವರಿಗೆ ಜಾಗವಿಲ್ಲವಂತೆ, ಹೌದೇ?” ಎಂದು ಪ್ರಶ್ನಿಸಿದನಂತೆ. ಅದಕ್ಕೆ ಲಾಪ್ಲಾಸ್ “ಸ್ವಾಮಿ, ನನಗೆ ಆ ಕಲ್ಪಿತ ಸಿದ್ಧಾಂತದ ಅವಶ್ಯಕತೆ ಇಲ್ಲ” ಎಂದನಂತೆ.

(ಲಾಪ್ಲಾಸ್)

ಆದರೆ, ನಾವು ಲಾಪ್ಲಾಸ್‌ ನನ್ನು ಒಪ್ಪಿ ನ್ಯೂಟನ್‌ ನನ್ನು ಪಕ್ಕಕ್ಕೆ ತಳ್ಳಬೇಕಿಲ್ಲ. ನೆಪೊಲಿಯನ್, ಲಾಪ್ಲಾಸ್‌ ನನ್ನು “ಸೌರ ಮಂಡಲವನ್ನು ಸೃಷ್ಟಿಸಿದ ಆ ಅನಿಲದ ಮೋಡಗಳು ಎಲ್ಲಿಂದ ಬಂದವು?” ಎಂದು ಪ್ರಶ್ನಿಸಿದ್ದರೆ, ಅವನೇನು ಉತ್ತರ ಕೊಡಬಲ್ಲವನಿದ್ದ?! ನ್ಯೂಟನ್ ಹೇಳುವಂತೆ, ಸೃಷ್ಟಿಯ ಸತ್ಯಗಳ ಸಾಗರದ ದಂಡೆಯಲ್ಲಿ ಕಪ್ಪೆ-ಚಿಪ್ಪನ್ನು ಕುತೂಹಲದಿಂದ ನೋಡುವುದಲ್ಲವೇ ವಿಜ್ಞಾನವೆಂದರೆ?!

******

ಇನ್ನು ನ್ಯೂಟನ್‌ ನ ಎರಡನೆಯ ಪ್ರಶ್ನೆ: ಗುರುತ್ವಾಕರ್ಷಣೆಯ ಬಲದಿಂದ ಎಲ್ಲವೂ, ವಸ್ತುವಿನ ಕೇಂದ್ರದೆಡೆಗೇ ಸೆಳೆತಕ್ಕೊಳಗಾಗುತ್ತಿದ್ದರೆ, ಸೃಷ್ಟಿಯ ಆದಿಯಲ್ಲಿಯೇ ಎಲ್ಲವೂ ತಮ್ಮೊಳಗೇ ಕುಸಿದು “ಬ್ಲಾಕ್ ಹೋಲ್” ಅಷ್ಟೇ ಆಗಿರಬೇಕಿತ್ತಲ್ಲವೇ? ಬದಲಿಗೆ, ಅದು, ಪ್ರತಿ ಕ್ಷಣವೂ ವಿಸ್ತಾರವಾಗುತ್ತಿರುವ ಅನಂತವಾಗಿರುವುದಾದರೂ ಹೇಗೆ?

ಹಾಗೆಯೇ, ನ್ಯೂಟನ್‌ ನ ಮೂರನೆಯ ಪ್ರಶ್ನೆ: ಗುರುತ್ವಾಕರ್ಷಣೆಯ ಸೆಳೆತ, ಯಾವುದೇ ಮಾಧ್ಯಮದ ಸಹಾಯವಿಲ್ಲದೆ ಒಂದು ವಸ್ತುವಿನಿಂದ ಇನ್ನೊಂದಕ್ಕೆ ಸಂವಹಿಸುವುದಾದರೂ ಹೇಗೆ?

ಕಾಲದ ಬಗ್ಗುವಿಕೆಯನ್ನು ಅರಿಯುವ ಐತಿಹಾಸಿಕ ಯಾತ್ರೆಯಲ್ಲಿ, ಇವೆರಡೂ ಪ್ರಶ್ನೆಗಳು, (ಅದರಲ್ಲೂ ಮೂರನೆಯ ಪ್ರಶ್ನೆ) ನಮಗೆ ಮುಖ್ಯವಾಗುತ್ತವೆ.


ಐನ್‌ಸ್ಟೈನ್ -> ಮ್ಯಾಕ್ಸ್‌ವೆಲ್->ಫ್ಯಾರಡೆ-ನ್ಯೂಟನ್ ಹೀಗೆ, ಕಾಲ ಘಟ್ಟಗಳಲ್ಲಿ ಹಿಂದೆ ಸರಿದಿದ್ದ ನಾವು, ಈಗ ಮುಂದುವರೆಯುವ ಸಮಯ ಬಂದಿದೆ. ಫ್ಯಾರಡೆಯನ್ನು ಮತ್ತೊಮ್ಮೆ ಭೇಟಿ ಮಾಡುವ ಕಾಲ ಎದುರಾಗಿದೆ.

(ಮುಂದುವರೆಯುವುದು)